ಬಾಲ್ತು ಬೆಳಗ್ಗೆ ಎದ್ದವನೇ ತೀರಾ ಕಂಗಾಲಾಗಿ ಬಿಟ್ಟಿದ್ದ. ಮಾತೇ ಮರೆತು ಹೋದವನಂತಾಗಿ ಆಕಾಶವೇ ಕಳಚಿ ತಲೆ ಮೇಲೆ ಬಿದ್ದವನಂತೆ ಪಿಳಿ ಪಿಳಿ ನೋಡುತ್ತಾ ಕುಳಿತುಬಿಟ್ಟಿದ್ದ. ಅಷ್ಟು ಮಾತ್ರ ಆಗಿದ್ದರೆ ಪರವಾಗಿಲ್ಲ ಅವನ ಅಮ್ಮ ಬಾಯಮ್ಮ, ಹೆಂಡತಿ ಪೊಮ್ಮಿ ಮತ್ತು ಇಬ್ಬರು ಮಕ್ಕಳು ತೀರಾ ತಲೆಕೆಡಿಸಿಕೊಳ್ಳಲು ಭಯಾನಕ ಕಾರಣವೊಂದಿತ್ತು. ಬಾಲ್ತು ಘಳಿಗೆಗೊಮ್ಮೆ ಅಲ್ತಾರಿನ ಬಳಿ ಬಂದು ಆ ಶಿಲುಬೆಯನ್ನೂ, ಆ ಬಾಲಯೇಸುವಿನ ಫೋಟೋವನ್ನೂ ಸಿಕ್ಕಾಪಟ್ಟೆ ಭಕ್ತಿಯಿಂದ ಮುಟ್ಟಿ ಮುಟ್ಟಿ ಚುಂಬಿಸುತ್ತಿದ್ದ. ಸಂಜೆಯ ಪ್ರಾರ್ಥನೆ ಸಮಯ ಹೊರತುಪಡಿಸಿ ನಿಗೂಢವಾಗಿ ಕಾಣೆಯಾಗುತ್ತಿದ್ದ ಅವನ ಜಪಸರ ಇಂದು ಬೆಳಗ್ಗೆಯೇ ಕೈಯನ್ನು ಸುತ್ತುಕೊಂಡಿತ್ತು. ಬಾಲ್ತು ಹೆದರಿ ಕಂಗಾಲಾಗಿ ಕರುಣೆಯ ಜಪಸರವನ್ನು ಭಕ್ತಿಯಿಂದ ಪಿಸುಗುಟ್ಟುತ್ತಿದ್ದ.
ಇವನ ಈ ಅವತಾರ ಕಂಡು ಬಾಯಮ್ಮನ ತಲೆಯಲ್ಲಿ ಎರಡು ವಿಚಾರಗಳು ಹೊಳೆದವು. ಮೊದಲನೆಯದು ನಿಜವಾಗಿಯೂ ಈ ಬಾಲ್ತುವಿಗೆ ಏನೋ ಆಗಿದೆ. ಏನು ಅಂದರೆ ಅದೇ.. ಯಾರೋ ಆಗದವರು ಮಾಟನೋ ಮಂತ್ರನೋ ಮಾಡಿಸಿ ಬಿಟ್ಟಿದ್ದಾರೆ. ಇಲ್ಲಾ ದೇವರ ಬಗ್ಗೆ ತಲೆಯೇ ಕೆಡಿಸಿಕೊಳ್ಳದ ಬಾಲ್ತುವಿಗೆ ದೇವ ದರ್ಶನವೋ, ಪವಿತ್ರಾತ್ಮರ ಅಭಿಷೇಕವೋ ಆಗಿಬಿಟ್ಟಿದೆ! ಹೀಗೆಂದುಕೊಂಡು ಏನಕ್ಕೂ ತಾನು ಜಗ್ಗಲೇ ಬಾರದು ಎಂದುಕೊಂಡು ಬಿಕರ್ನ ಕಟ್ಟೆಯ ಬಾಲ ಏಸುವಿನ ಮಂದಿರದ ತೀರ್ಥವನ್ನು ಕೈಯಲ್ಲಿ ಹಿಡಿದು ” ಸ್ವರ್ಗವನ್ನೂ ಭುವಿಯನ್ನೂ ಸೃಷ್ಟಿಸಿದ…. ” ಪ್ರಾರ್ಥನೆ ಗೊಣಗುತ್ತಾ ಬಾಲ್ತುವಿನ ಮುಖಕ್ಕೆ ತೀರ್ಥ ಚಿಮುಕಿಸಿ ಬಿಟ್ಟಳು. ಎದುರಿಗಿರುವವನ ಒಳಗೆ ಅದೆಂತಹ ಸೈತಾನ ಅಡಗಿದ್ದರೂ ಈ ತೀರ್ಥ ಒದ್ದು ಓಡಿಸಿ ಆ ನೀರಿನಂತೆ ಪರಿಶುದ್ಧಗೊಳಿಸುತ್ತದೆ ಎಂಬ ನಂಬಿಕೆ ಬಾಯಮ್ಮನದು. ಆದರೆ ಈ ಬಾಲ್ತು ಇದಾವುದರ ಪರಿವೇ ಇಲ್ಲದೆ ಕರುಣೆಯ ಜಪಮಾಲೆ ಪಿಸುಗುಟ್ಟುತ್ತಿರುವುದು ನೋಡಿ ಬಹುಶ ಆ ಲೂಸಿಫೇರನೇ ಇವನೊಳಗೆ ಹೊಕ್ಕಿರಬೇಕು ಎಂದು ಕೊಳ್ಳುವಷ್ಟರಲ್ಲಿ ಇವನ ಹೆಂಡತಿ ಪೊಮ್ಮಿ ದುಃಖ ತಡೆದುಕೊಳ್ಳಲಾಗದೆ ಬಿಕ್ಕಿ ಬಿಕ್ಕಿ ಅಳಲಾರಂಭಿಸಿದಳು. ಈ ಅನಿರೀಕ್ಷಿತ ಘಟನೆ ಯಿಂದ ಕಂಗಾಲದ ಇಬ್ಬರು ಮಕ್ಕಳು ಮುಖ ಮುಖ ನೋಡುತ್ತಾ ಏನು ಮಾಡುವುದೆಂದು ತಿಳಿಯದೆ ಚಟಪಡಿಸಲಾರಂಭಿಸಿದರು.
ಇಷ್ಟು ಹೊತ್ತು ಒಬ್ಬನೇ ಪ್ರಾರ್ಥಿಸುತ್ತಿದ್ದ ಬಾಲ್ತುವಿಗೆ ತನ್ನ ಮನೆಯ ಸದಸ್ಯರ ಬಗ್ಗೆ ತೀವ್ರ ಕನಿಕರ ಉಂಟಾಗಿ ಒಮ್ಮೆ ಎಲ್ಲರನ್ನು ಬಿಟ್ಟ ಕಣ್ಣು ಬಿಟ್ಟಂತೆ ದಿಟ್ಟಿಸಿ ನೋಡಿದ.
“ಏನಾಯ್ತು ಅಂತ ಹೇಳಕ್ಕಾಗಲ್ವಾ, ಯಾಕೆ ಹೀಗೆ ಹೆದರಿಸ್ತೀರಾ.. ಶಾಲೆಗೆ ಹೊರಡೋ ಟೈಮ್ ಆಯಿತು…” ಅಂತ ಹೆಂಡತಿ ಹೇಳಿದಳು. ಬಾಲ್ತು ಪಕ್ಕದಲ್ಲಿದ್ದ ನೀರಿನ ಪಾತ್ರೆ ಎತ್ತಿ ಗಟಗಟನೆ ನೀರು ಕುಡಿದ. ನೆಟ್ಟಿಗೆ ಕುಳಿತ ಅವನ ಕಣ್ಣುಗಳು ಆಲ್ತಾರಿನಲ್ಲಿದ್ದ ಯೇಸುವನ್ನು ದಿಟ್ಟಿಸುತ್ತಿದ್ದವು.
“ನನಗೆ ಕನಸಿನಲ್ಲಿ ದೈವ ದರ್ಶನವಾಯಿತು…!”ಎಂದು ಒದರಿದ.
“ಹೌದಾ,.. ಬೈಬಲ್ಲಿನ ಹಳೆ ಒಡಂಬಡಿಕೆಯಲ್ಲೂ, ಹೊಸ ಒಡಂಬಡಿಕೆಯಲ್ಲೂ ಸುಮಾರು ಜನರಿಗೆ ದೈವ ದರ್ಶನವಾದದ್ದಿದೆ. ನೀನೇನು ಈಗ ಕೆಲಸಕ್ಕೆ ಹೊರಡುವುದು ಬಿಟ್ಟು ಪ್ರವಾದಿ ಆಗುತ್ತಿಯೋ ಹೇಗೆ?!” ಬಾಯಮ್ಮ ಸಿಡುಕಿದರು.
“ನಾನು ಪ್ರವಾದಿಯಾಗುವುದು ಒತ್ತಟ್ಟಿಗಿರಲಿ ಮೊದಲು ಕನಸು ಏನೆಂದು ಸರಿಯಾಗಿ ಕೇಳಿಕೊಳ್ಳಿ” ಬಾಲ್ತು ಎಂದ.
ಸಂಕ್ರಾಂತಿಯ ರಾತ್ರಿ ಕತ್ತಲಲ್ಲಿ ನಾನು ನೀವು ಗದ್ದೆಯ ಏರಿ ಮೇಲೆ ನಡೆದು ಹೋಗುತ್ತಿದ್ದೆವು. ಬೆಳದಿಂಗಳು ಅದೆಷ್ಟು ಬೆಳ್ಳಗೆ ಚೆಲ್ಲಿತ್ತು ಎಂದರೆ, ನಾವೆಲ್ಲರೂ ಸಲೀಸಾಗಿ ಕತ್ತಲಲ್ಲಿ ಹೆಜ್ಜೆ ಇಡಬಹುದಾಗಿತ್ತು , ಅಷ್ಟರಲ್ಲಿ… ಎಲ್ಲಿಂದಲೋ ತುತ್ತೂರಿಯ ನಾದ ಕೇಳಿಸಿತು. ಮೊದಲಿಗೆ ನಮ್ಮ ಪಶುಪತಿ ಬಸ್ಸಿನ ಹಾರನ್ನೇ ಇರಬೇಕು ಅಂತ ಅಂದುಕೊಂಡೆ.. ಆದರೆ ಆ ನಾದ ಭೂಮಿಯ ಮೂಲೆ ಮೂಲೆಗೂ ತಲುಪಿದಂತಾಗಿ ಇದ್ದಕ್ಕಿದ್ದಂತೆ ಆಕಾಶ ತುಂಬಾ ದೇವದೂತರು ಬೆಳ್ಳಗೆ ರೆಕ್ಕೆ ಬಡಿಯುತ್ತಾ ಹಾರಾಡುವುದು, ಎಲ್ಲೆಲ್ಲೂ ಧೂಪದ ಹೊಗೆ ತುಂಬಿರುವುದು ಕಂಡು ನನಗೆ ಭಯವಾಯಿತು. ಆ ಯೋವಾನ್ನನ ಪ್ರಕಟಣಾ ಗ್ರಂಥದಲ್ಲಿರುವ ಯೇಸುವಿನ ಪುನರಾಗಮನದ ಉಲ್ಲೇಖ ನೆನಪಾಗಿ ಇನ್ನೇನು ಅಂತಿಮ ನ್ಯಾಯ ತೀರ್ಪು ಬಂದೇಬಿಡ್ತು…ಅಂದುಕೊಂಡೆ. ಒಂದು ವರ್ಷವಾಯಿತು ನಾನು ಪಾಪವಿಖ್ಯಾಪನೆ ಮಾಡೇ ಇಲ್ಲವಲ್ಲ ಎಂಬುದು ನೆನಪಾಗಿ ಕೈ ಕಾಲು ನಡುಗಲಾರಂಭಿಸಿತು.
“ಪರಿಶುದ್ಧರೂ ಪರಿಶುದ್ಧರೂ…” ಗೀತೆಯು ಮೋಡಗಳ ಒಳಗಿನಿಂದ ಘರ್ಜಿಸಲು ಆರಂಭವಾಗುತ್ತಿದ್ದಂತೆಯೇ ಯೇಸು ಸ್ವಾಮಿ ಶಿಲುಬೆಗೇರಿಸಿದ ಸ್ಥಿತಿಯಲ್ಲಿ ಬೃಹದಾಕಾರವಾಗಿ ಕಾಣಿಸಿಕೊಂಡರು. ಆಕಾಶವೂ ಭೂಮಿಯೂ ಒಂದೇ ಆದಂತಾಗಿ ಇಲ್ಲಿಗೆ ಇದು ಅಂತಿಮ ನ್ಯಾಯ ತೀರ್ಪಿನ ದಿನವೇ ಎಂಬುದು ಖಾತ್ರಿಯಾಗಿ ನಾನು ಆ ಕಲ್ವಾರಿ ಬೆಟ್ಟದಲ್ಲಿ ಯೇಸುವಿನೊಂದಿಗೆ ಶಿಲುಬೆಗೇರಿಸಲ್ಪಟ್ಟ ಒಳ್ಳೆಯ ಕಳ್ಳನಂತೆ ಬಡಬಡಿಸ ತೊಡಗಿದೆ.. “ಪ್ರಭುವೇ..ನೀನು ಶಿಲುಬೆಗೇರಿದ್ದು ಕಿಂಚಿತ್ತೂ ನ್ಯಾಯವಲ್ಲ.ನಾನು ಪಾಪಿ. ದಯವಿಟ್ಟು ನನ್ನನ್ನು ಕ್ಷಮಿಸು. ನನ್ನನ್ನು ತೀರ್ಪಿನ ಸಮಯದಲ್ಲಿ ನೆನಪಿಸಿಕೋ..” ನಾನು ಹೇಳಿದ್ದು ಯೇಸುವಿಗೆ ಕೇಳಿಸಿತೋ ಇಲ್ಲವೋ.. ಆಕಾಶದಲ್ಲಿ ಹಾರಾಡುತ್ತಿದ್ದ ದೇವದೂತರು ಇದ್ದಕ್ಕಿದ್ದಂತೆ ಗಾಬರಿಯಾದಂತೆ ಭಾಸವಾಯಿತು. ಹೋ ಇದು ಅಂತಿಮ ತೀರ್ಪಿನ ಕ್ಷಣಗಣನೆ ಲೂಸಿಫೇರನೊಂದಿಗೆ ಯೇಸುವಿನ ಮುಖಮುಖಿ ಇರಬಹುದೇನೋ ಅಂದುಕೊಳ್ಳುವಷ್ಟರಲ್ಲಿ ಆ ಕತ್ತಲಲ್ಲಿ ಪ್ರಜ್ವಲಿಸುವ ಬೆಳಕು ಉಳ್ಳ ಕೆಲವು ಗಗನಯಾತ್ರಿಗಳು ಆಗಸದಲ್ಲಿ ತೇಲುವುದು ಕಾಣಿಸಿತು. ಕೆಲವೇ ಕ್ಷಣಗಳಲ್ಲಿ ಆಕಾಶದಲ್ಲಿ ಭಾರಿ ಮಾರಾಮಾರಿಯಾದಂತಾಗಿ ಗುಡುಗು ಸಿಡಿಲು ಮಿಂಚು ಬಂದೆರಗಿ ಇನ್ನೇನು ಭಾರಿ ಮಳೆ ಶುರುವಾಗುವುದರಲ್ಲಿತ್ತು.
ಹೋ…ಇಂತಹ ಅಪರೂಪದ ದೃಶ್ಯ ನೋಡಿ ಸುಮ್ಮಗಾಗುವುದೇ ಅಂದುಕೊಂಡು ನನ್ನ ಮೊಬೈಲ್ ಅನ್ನು ಕಿಸೆಯಿಂದ ತೆಗೆದು ವಿಡಿಯೋ ಮಾಡಲು ಯತ್ನಿಸಿದೆ.. ಅಷ್ಟರಲ್ಲೇ ಮೊಬೈಲ್ ಮಾತ್ರವಲ್ಲ ಇಡೀ ಜಗತ್ತು ಕತ್ತಲ ಕೂಪಕ್ಕೆ ಮಗುಚಿದಂತಾಗಿ ಸಿಡಿಲು ಬಡಿದಂತಾಗಿ ಮೈ ಬೆವತು ಓಡಲೂ ಆಗದೆ ನಿಲ್ಲಲೂ ಆಗದೆ ಧಡಾರಾನೆ ಬಿದ್ದುಬಿಟ್ಟೆವು.
ಭೂಮಿಯ ಅಂತ್ಯ ಇಷ್ಟು ಬೇಗ ಆಗಲಿಕ್ಕಿದೆಯಾ ಎಂದು ಅಮ್ಮ ಹೇಳುವಷ್ಟರಲ್ಲಿ ಮಗಳು ಎದ್ದು ಟಿವಿ ಹಾಕಿದಳು. ಯಾವುದೇ ಟಿವಿ ಚಾನಲ್ ಗಳು ಬರುತ್ತಿರಲಿಲ್ಲ ಯಾವ ನಂಬರ್ ಒತ್ತಿದರೂ ಒಂದೇ ಚಾನಲ್ ಬಿತ್ತರವಾಗುತ್ತಿತ್ತು. ಅದರಲ್ಲಿ ಪ್ರಪಂಚದ ದೊಡ್ಡಣ್ಣನ ದೇಶದ ದೊಡ್ಡ ಸುದ್ದಿಯೇ ಪದೇ ಪದೇ ಬಿತ್ತರವಾಗುತ್ತಿತ್ತು. ಪ್ರಪಂಚದ ದೊಡ್ಡಣ್ಣ ದೇಶದ ಅಧ್ಯಕ್ಷ ತನ್ನ ವೀರಗಾಥೆಯನ್ನು ಬಣ್ಣಿಸುತ್ತಿದ್ದ. ಕೆಳಗೆ ಸುದ್ದಿಯ ಸಾಲು ಕೆಂಪು ಅಕ್ಷರಗಳಲ್ಲಿ ಹಾದು ಹೋಗುತ್ತಿದ್ದವು ಅವು ಹೀಗೆಂದು ಬರುತ್ತಿತ್ತು…
‘ದೇವರ ಪುನರಾಗಮನವನ್ನು ತಡೆಯುವುದರಲ್ಲಿ ಯಶಸ್ವಿಯಾದ ಜಗತ್ತಿನ ದೊಡ್ಡಣ್ಣ..! ದೇವರ ಅಂತಿಮ ನ್ಯಾಯ ತೀರ್ಪಿಗೇ ತಡೆಯೊಡ್ಡಿದ ಮಹಾನ್ ದೇಶ..!ಮಿಲಿಯನ್ ಗಟ್ಟಲೆ ಜನರು ಸತ್ತು ನರಕಕ್ಕೆ ಹೋಗುವುದನ್ನು ತಪ್ಪಿಸಿದ ವೀರ ದೇಶ..!? ದೇವಾದಿ ದೇವರ ದೇವಧೂತರಿಗೇ ಚಳ್ಳೆಹಣ್ಣು ತಿನ್ನಿಸಿದ ಡ್ರೋನ್ ಗಳು, ಕ್ಷಿಪಣಿಗಳು ಇನ್ನು ಏನೇನೋ…
ಬಾಲ್ತುವಿಗೆ ಆ ದೊಡ್ಡಣ್ಣ ಯೋವಾನ್ನನ ಪ್ರಕಟಣಾ ಗ್ರಂಥದ ಲೂಸಿಫೇರನೇ ಇರಬೇಕೆಂದು ಅನ್ನಿಸಲಾರಂಬಿಸಿತು.. ದೇವರು ಬಿಟ್ಟು ಹೋದ ಈ ಜಗತ್ತಿನಲ್ಲಿ ಪಾಪವು ದೊಡ್ಡಣ್ಣನ ರೂಪದಲ್ಲಿ ಆಳ್ವಿಕೆ ಆರಂಭಿಸಿತು…
–ಜಾನ್ ಸುಂಟಿಕೊಪ್ಪ
ಟಿಪ್ಪಣಿ :
- ಆಲ್ತಾರ್ – ಕ್ರೈಸ್ತ ರ ಮನೆಗಳಲ್ಲಿ ಇರುವ ಪವಿತ್ರವಾದ ಸ್ಥಳ.
- ಯೋವಾನ್ನ – ಯೇಸು ಸ್ವಾಮಿಯ ಪ್ರೀತಿಯ ಶಿಷ್ಯ, ಯೇಸುವಿನ ಪುನರಾಗಮನ,ನ್ಯಾಯತೀರ್ಪು ಕುರಿತ ಮಹತ್ವದ ಪ್ರಕಟಣಾ ಗ್ರಂಥದ ಕರ್ತೃ.
- ಕರುಣೆಯ ಜಪಸರ – ಲೋಕದ ರಕ್ಷಣೆಗಾಗಿ ಮಾಡುವ ಪ್ರಾರ್ಥನೆ.
- “ಸ್ವರ್ಗವನ್ನೂ ಭುವಿಯನ್ನೂ… ” – ಪ್ರೇಷಿತರ ವಿಶ್ವಾಸ ಸಂಗ್ರಹ ವೆಂಬ ಅತ್ಯಂತ ಪ್ರಮುಖ ಪ್ರಾರ್ಥನೆ.
- “ಪರಿಶುದ್ಧರು ಪರಿಶುದ್ಧರು.. ” ದೇವದೂತ ಗಣಗಳೊಂದಿಗೆ ಹಾಡುವ ಅತ್ಯಂತ ಪವಿತ್ರ ಗೀತೆ.
- ಲೂಸಿಫೇರ್ – ಸೈತಾನ
