ನಿನ್ನ ಬಿಟ್ಟು…: ರಶ್ಮಿ ಕಬ್ಬಗಾರು


ಮಳೆ ಗಾಳಿ ಚಳಿ ಬಿಸಿಲ ಸಾರಾವಳಿಯಲ್ಲಿ ವರ್ಷ ಪೂರ ಬದುಕಿಯೇ ಇದ್ದೇನೆ… ಅದೂ ನಾನು ಮನಸಾರೆ ದ್ವೇಷಿಸುತ್ತಿದ್ದ ಬ್ರಿಟಿಷರ ನಾಡಲ್ಲಿ ಈ ಮುನ್ನೂರ ಅರವತ್ತೈದು ದಿನಗಳೂ ಒಂದಿಲ್ಲೊಂದು ರೀತಿಯಲ್ಲಿ ನನ್ನ ಐತಿಹಾಸಿಕ ದಾಸ್ಯದ ನೆನಪುಗಳ ಕಹಿಯನ್ನ ಒಂದಿಲ್ಲೊಂದು ರೀತಿಯಲ್ಲಿ ಕಮ್ಮಿ ಮಾಡುತ್ತಾ ಬಂದಿದ್ದವು ಖರೇ, ಅದರಲ್ಲಿ ಅಪೂರ್ವ ವಾದ ಒಂದು ವಾದವೆನ್ ದ್ರೆ, ಹೀತ್ರೂ ಲಂಡನ್ ಏರ್ ಪೋರ್ಟಿಂದ ನಮ್ಮನ್ನ ಗೆಳತಿ ನಿವೇದಿತ ಮನೆಗೆ ಕರೆದೊಯ್ಯುತ್ತಿದ್ದ ಬಿಳಿಯ ಟ್ಯಾಕ್ಸಿ ಡ್ರೈವರ್ ನ ಸಹಜ ಮಾತುಕತೆಯಲ್ಲಿ ಕಂಡಿದ್ದು. ಅಲ್ಲಿನ ಕಾರು ಗಳ ಬೆಲೆ ಕೇಳುತ್ತಲಿದ್ದ ನನ್ನ ಪತಿ ಗಿರಿಗೆ ಕೇಳಿದ ಡ್ರೈವರು ಇಂಡಿಯಾದಲಿ ಯಾಕೆ ಎಲ್ಲರತ್ರ ಕಾರುಗಳಿರಲ್ಲ ಎಂದು. ನಮ್ಮ ದೇಶಾನ ನೀವುಗಳು ಸಿಕ್ಕಾಪಟ್ಟೆ ವರ್ಷಗಳು ಆಳಿ ಬಡವರಾಗಿಸಿದ್ದಕ್ಕೆ ಎಂದು ಕಿಚಾಯಿಸಿದ ಗಿರಿ ಗೆ ಡ್ರೈವರ್ ಸ್ಟೀವ್ – ‘ ನಾನಾಗ ಹುಟ್ಟಿರಲೇ ಇಲ್ಲವಲ್ಲಾ ‘ ಎಂದು ತಲೆ ಮೇಲಿನ ಕ್ಯಾಪ್ ಸರಿ ಮಾಡ್ಕೊಂಡಿದ್ದು ಸಣ್ಣ ಎಲೆಕ್ಟ್ರಿಕ್ ಶಾಕ್ ಕೊಟ್ಟಂಗಾಯಿತು,ಅದಕ್ಕೇ ನೋಡು ಸೋಲು ಅನಾಥ _ ಯಶಸ್ಸಿಗೆ ಮಾತ್ರ ನೂರು ಅಪ್ಪಂದ್ರು ಅನ್ನುವ ಮಾತಿದೆ, ಎಂತ ತಿವಿದೆ ಗಿರಿ ತೋಳಿಗೆ.

ಇದಾಗಿ ವರುಷಗಳ ನಂತರ ಒಂದು ನವೆಂಬರ್ ಮೊದಲ ವಾರ ಇಲ್ಲಿನ ಹವಾಗುಣ ಕ್ಕೆ ಹೊಂದಿಕೊಳ್ಳಲು ನನ್ನ ಬಹುಪಾಲು ಎನರ್ಜಿ ಖರ್ಚಾಯ್ತೇ ಎಂದು ಸ್ವಂತಕೆ ಕೇಳಿಕೊಳ್ಳುತ್ತಿರುವಾಗಲೇ ಇಷ್ಟು ದಿನಗಳಲ್ಲಿ ಇಂಥದೊಂದು ದಿವ್ಯ ಏಕಾಂತ ತಾನೇ ತಾನಾಗಿ ಒ ದಗಿರಲೇ ಇಲ್ಲವಲ್ಲ ಎಲ್ಲಿದ್ಯೋ ಶಿವನೇ ಇಷ್ಟು ದಿನ ..? ಎಂದು ಗಟ್ಟಿಯಾಗಿ ಕೂಗಿಕೊಳ್ಳುವ ಮನಸ್ಸಾಯಿತು ಅಷ್ಟು ಮುದ್ದಾದ ಮಬ್ಬು ಬೆಳಕಿನ ಪಬ್ಬು ಅದು!

ಆದರೆ, ಒಂದಿನ ಗಟ್ಟಿಯಾಗಿ ನಿಂತು ಹಿಂತಿರುಗಿ ನೋಡಬೇಕು.. ಆಗೀಗ… ಎಷ್ಟು ಘಳಿಗೆಗಳು ಖಾಸಾ ಅನುಭವಕ್ಕೆ ನೆನಪಿನ ಜೋಳಿಗೆಗೆ ಸಹಜವಾಗಿ ದಕ್ಕಿದವೂಂತ…. ದಿನಗಳೇನು ಜಾದುಗಾರನ ಮಂತ್ರದಂಡವೇ, ಗಾಳಿಯಲ್ಲಿರುವ ಕನಸಿನ ಗರಿಗಳನ್ನು ನಿಜದ ಮೂರ್ತಿಗಳನ್ನಾಗಿಸಿ ಮಡಿಲಿಗೆ ಎಸೆಯಲಿಕ್ಕೆ… ಹೀಗೆಲ್ಲ ಯೋಚನೆಗಳ ಜೋಕಾಲಿಯ ಜೊತೆ ನನಗೆ ಅರಿವಿಲ್ಲದಂತೆ ಕಣ್ಣು ಮುಚ್ಚಿದ್ದೆ. ಕೆಲ ನಿಮಿಷಗಳು ನಡು ಮಧ್ಯಾಹ್ನದಲ್ಲೊಂದು ಅರೆ ಮಬ್ಬಿನ ಮಂದ ಬೆಳಕು ಮುದ್ದಾದ ತರಂಗಗಳ ಲೈಟ್ ಮ್ಯೂಸಿಕ್ ತಣ್ಣನೆ ಎಸಿಯ ಅಲೆಗಳು- ಆಹಾ ಇಂದ್ರನಗರಿಯಲ್ಲಿಂದ ಮೂರೇ ಮೂರು… ಒಂದು ದಿನ, ಮತ್ತೊಂದು, ಇನ್ನೊಂದು ಅಡ್ಡ ವಾಸನೆಗಳು ಬೆರೆತು ರೆಡ್ ಬ್ರಿಜ್/ಫ್ರೈಯರ್ಸ್ ಕ್ಲಾಸ್ ಎಂಬ ಊರು ನನಗೆ ಲಂಡನ್ ನ ಒಂದು ಮಿನಿ ಕಂಫರ್ಟ್ ಜಾಗವನ್ನು ಉಡುಗೊರೆ ನೀಡಿತ್ತು. ಪುಟ್ಟ ಮಗನ ಯುಕೆಜಿ ಶಾಲೆಯ ಬಾಲಕರ ಮೀಟಿಂಗ್ ಮುಗಿಸಿ ಉಳಿದ 45 ನಿಮಿಷಗಳನ್ನು ಕಳೆಯೋಸ್ಕರ ನಾವು ಮೂರು ಅಮ್ಮಂದಿರು ದಾರಿಯಲ್ಲಿ ಸಿಕ್ಕ ರೆಸ್ಟೋ-ಬಾರ್ ನುಗ್ಗಿದೆವು, ಒಳಗೋದ ಮೂರೇ ನಿಮಿಷಕ್ಕೆ ಹೊರ ಜಗತ್ತಿನ ಸಂಪರ್ಕ ಕಳೆದುಕೊಂಡು ಹಗುರಾದೆವು.! ಒಂದಿಷ್ಟು ಆಲೂಚಿಪ್ಸ್, ಕೋಕ್ ಜೊತೆ ಶುರುವಾದ ಮಾತುಕತೆ, ತೀರಾ ಕ್ಯಾಶುಯಲ್ ಆಗಿ ಇದ್ದರೂ ಆ ದಿನ ಆಯಾಚಿತವಾಗಿ ದೊರೆತ ಆವರಣವೊಂದನ್ನು ನನ್ನದೇ ಜೀವದ ಕಳಕೊಂಡ ಒಂದು ಭಾಗವನ್ನು ಬೆಸೆಗೊಂಡಷ್ಟು ಮುದ ನೀಡಿತು. ರೆಗ್ಯುಲರ್ ಆಗಿ ಬಾರ್ ಗೆ ನುಗ್ಗಿ ಮೂಲೆಯೊಂದರಲ್ಲಿ ತಾಸುಗಳು ಕಳೆದು ಬರುವ ಜನಗಳ ಆರ್ಥತೆ, ಪ್ರತಿ ಗುರುವಾರ ಆಶ್ರಮಕ್ಕೆ ಎರಡು ತೆಂಗಿನಕಾಯಿ, ಒಂದೂವರೆ ಸೇರು ಹಾಲಿನ ಉಗ್ಗ, ಐದು ದಾಸವಾಳ ಹೂಗಳ ಸಂಜೆಯೊಂದಿಗೆ ಪಾದುಕಾಶ್ರಮಕ್ಕೆ ಧಾವಿಸುತ್ತಿದ್ದ ಶಿರಸಿ -ಸಿದ್ದಾಪುರದ ಹೆಂಗಳೆಯರು ಒಂದೇ ಹಾದಿಯ ಏಕಾಂತ -ದಾಹಿಗಳೇ ಎನ್ನುವ ಅಲೆಯೊಂದು ತಲೆಯಲ್ಲಿ ಹಾದುಹೋಯಿತು.

ನನ್ನೆದುರಿಗೆ ಫೋರಂ ಮತ್ತು ಪಾವನಾ ಎಂಬಿಬ್ಬರರು. ಪಾವನಾ ಹೊಸ ಪರಿಚಯ. ಜಾಹೀರಾತು ಕಂಪನಿಯೊಂದರಲ್ಲಿ ಕೆಲಸ. ಒಬ್ಬ ಮಗ 5 ವರ್ಷದವ- ಪತಿ ಹೈದರಾಬಾದಿನ ಪರಮ ಆಸ್ತಿಕ. ನೀವು ಇಲ್ಲೇ ಹುಟ್ಟಿ ಬೆಳೆದಿದ್ದ? ಕಾಡು- ಪ್ರಶ್ನೆ ಎಸೆದೆ. ಅವಳ ಬಗ್ಗೆ ಚೂರೂ ಅಂದಾಜಿಲ್ಲದ ಕಾರಣ- ಏನೋ ಒಂದು ಟೈಂಪಾಸಿಗೆ, ಆದರೆ, ಅವಳ ಹುಟ್ಟು ಹರಿವಿನ ಕಥೆ ಬಹಳ ಚಂದಿತ್ತು.

ದಕ್ಷಿಣ ಆಫ್ರಿಕಾದ ಪೂರ್ವಕ್ಕೆ ಇರುವ ಬ್ರಿಟಿಷ್ ಹೊಸಾಹತು ಕೇಂದ್ರ ಒಂದಕ್ಕೆ ಬ್ರಿಟಿಷರ ಕಾಲದಲ್ಲಿ ಇವಳ ಅಜ್ಜ -ಅಜ್ಜಿ ನಾಲ್ಕಾರು ಮಕ್ಕಳೊಂದಿಗೆ ಹಡಗಿನಲ್ಲಿ ಚೆನ್ನೈನಿಂದ ರವಾನೆಯಾದರಂತೆ. ಅಜ್ಜ ಮೇಸ್ತ್ರಿಯಂತೆ. ಒಂದು 30 40 ಜನಗಳ ಅಂದರೆ ಕೂಲಿಗಳ ಗುಂಪಿನ ಮುಖ್ಯಸ್ಥನಂತೆ. ಆ ಕ್ಷಣ ತಲೆಯಲ್ಲಿ ಹಾದುಹೋದ ಸಮಜಾಯಿಸಿ- ಆ 40 ಜನರ ಮೊಮ್ಮಕ್ಕಳು ಹೀಗೆ- ದೋಸ್ತರತ್ತ ನಮ್ಮಜ್ಜ ಮೇಸ್ತ್ರಿ/ಲೀಡರಾಗಿದ್ದ ಅಂತಲೇ ಅಂದಿರಬಹುದಲ್ಲವೇ ಎಂದು- ಇದು ಬಿಡಿ, ಪಾವನ ಕಥೆ ಮುಖ್ಯ- ಅದನ್ನ ಕೇಳುವ.

ಪಾವನ ಅಜ್ಜಿಗೆ 13 ಮಕ್ಕಳಂತೆ ಒಟ್ಟು ಆಫ್ರಿಕಾದ ಬ್ರಿಟಿಷ್ ಅಧಿಕಾರಿಗಳ ಸರಕಾರೀ ಮನೆ/ಕ್ವಾಟ್ರಸ್ ಗಳ ನಿರ್ವಹಣೆ, ಅವರ ಹೆಂಡತಿ, ಮಕ್ಕಳ ಚಾಕರಿ ಇತ್ಯಾದಿ ಇತ್ಯಾದಿ ಮಾಡಿಕೊಂಡು ಡಜನ್ ಗಟ್ಟಲೆ ಮಕ್ಕಳು, ಮರಿ ಸಂಸಾರ ತೂಗಿಸಿಕೊಂಡು ಮದರಾಸಿನ ಇಡ್ಲಿ, ವಡೆ, ಸಾಂಬಾರ್ ಗಳ ಘಮವನ್ನು ಉಳಿಸಿಕೊಂಡು ಮಕ್ಕಳ ಮದುವೆ, ಬಾಣಂತನ, ಮೊಮ್ಮಕ್ಕಳ ಬದುಕು ನೋಡಿದ ಅಜ್ಜಿ ಇಲ್ಲಿಂದ ಒಯ್ದ ದೇವಾದಿದೇವತೆಗಳ ಪುರಾಣ ಕಥೆ ಫೋಟೋಗಳನ್ನು, ಪೂಜಾ ವಿಧಾನಗಳನ್ನು ಚಾಚು ತಪ್ಪದೇ ವರ್ಗಾಯಿಸಿದ್ದೊಂದು ವಿಸ್ಮಯ ಅನಿಸಿತು ನನಗೆ. ಪಾವನ ತಾಯಿ ಮದುವೆಯಾಗಿ ಪತಿ ಜೊತೆ ಸಂಸಾರ ಹೂಡಿದ್ದು ಮಲೇಶಿಯಾದ ಬ್ರಿಟಿಷ್ ಹೊಸಾಹತುವೊಂದರಲ್ಲಿ. ಈಗಲೂ ವರ್ಷಕ್ಕೊಮ್ಮೆ ಅಲ್ಲಿಗೆ ಬೇಸಿಗೆ ರಜಕ್ಕೆ ಭೇಟಿ ನೀಡುವ ಪಾವನಾಳಿಗೆ, ಮಲೇಶಿಯಾ ಅಷ್ಟಾಗಿ ಇಷ್ಟವಿಲ್ಲ. ಕಾರಣ ದೈನಂದಿನ ಜೀವನ ವೆಚ್ಚ ದುಬಾರಿಯಂತೆ ಅಲ್ಲಿ. ತಕ್ಷಣ ಬೆಂಗಳೂರಿನಲ್ಲಿ ನನ್ನ ಆರಂಭದ ದಿನಗಳು ನೆನಪಾಗಿ ತಿಂಗಳ ಕೊನೆಯೆಂದು ಕಂಟಕವಾದಂತೆ ಅಲ್ಲವಾ ಎಂದೆ. ರಿಯಲೀ ಎಂದು ಮುಂದರಿದವಳು. ಈಗಿವಳ ಸಂದಿಗ್ದವೆಂದರೆ, ತಮಿಳು ಮೂಲದ ಆಂಧ್ರದಲ್ಲಿ ನೆಲೆಗೊಂಡ ಕುಟುಂಬದಿಂದ ಲಂಡನ್ನಿಗೆ ಬಂದು ನೆಲೆಸಿದ ಷಣ್ಮುಗಂ ಎಂಬ ಪತಿಗೆ, ಲಂಡನ್ ಜೀವನ ಸಾಕಾಗಿ ಇಂಡಿಯಾಗೆ ವಾಪಸ್ ಆಗುವ ಕುರಿತು ಗುಂಗು ಹಿಡಿದದ್ದು. ಚಂದದ ಮನೆ, ಒಳ್ಳೆಯ ಸಂಬಳ ದುಡಿಯುವ ಹೆಂಡತಿಯ ಅತ್ಯಂತ ಘನತೆವೆತ್ತ ಬದುಕು ಸಾಕನ್ನಿಸ ತೊಡಗಿದ್ದು. ಯಾಕೇ ..? ಕೇಳಿದೆ ಉತ್ತರ ಬರಲಿಲ್ಲ. ತೀರ ಜಡ್ಜ್ ಮೆಂಟಲ್ ಆಗಕೂಡದು ಎನಿಸಿತು. ಯು ವಿಲ್ ಡೆಫಿನೆಟ್ಲಿ ಎಂಜಾಯ್ ಯುವರ್ ಲೈಫ್ ಯು ಗೋ ಟು ಹೈದರಾಬಾದ್ ಡೋಂಟ್ ವರಿ ಜಸ್ಟ್ ಗಿವ್ ಎ ಚಾನ್ಸ್ ಟು ಯುವರ್ ಸೆಲ್ಫ್ ಅಂದೆ ದಾದೀಮಾ (ಅಜ್ಜಿ) ತರ ಮಾತಾಡ್ತಾಳೆ ಅವಳು ಅಂತ. ಮುಂದೊಂದು ದಿನ ನಮ್ಮ ನಡುವಣದ ಕಾಮನ್ ಫ್ರೆಂಡ್ ಆಶಿಕ ಹತ್ತಿರ ಕಮೆಂಟ್ ಎಸೆದಳಂತೆ.

ಚೂರು ಇಷ್ಟವಾಗಲಿಲ್ಲ ನನಗೆ ಇನ್ ಫ್ಯಾಕ್ಟ್ ರಪ್ಪನೆ ಬಾರಿಸಿದಂತಾಗಿತ್ತು ಮುಖಕ್ಕೆ. ಅವಳ ಗೋಜಿಗೆ ಹೋಗುವುದನ್ನೇ ಬಿಟ್ಟು ಬಿಟ್ಟೆ. ಮುಖ ಇಂಡಿಯಾದ್ದೇ ಅದರೂ ಅವಳನ್ನು ಸೀದಾ ಸಾದಾ ದಕ್ಷಿಣ ಭಾರತೀಯಳನ್ನು ಗ್ರಹಿಸುವಂತೆ ಪರಿಗಣಿಸುವಂತಿರಲಿಲ್ಲ. ಬಹು ಸಂಸ್ಕೃತಿಯ ಮಿಶ್ರಣದ ವ್ಯಕ್ತಿತ್ವದ ಅಪರೂಪದ ಹೆಣ್ಣಾಗಿದ್ದಳು ನನ್ನ ಗೆಳೆತನದ ಡೈರಿಯಲ್ಲಿ.

ನಮ್ಮ ಕ್ಲೌಡ್ 9 ರೆಸ್ಟೋ-ಬಾರ್ ನ ಅನಿರೀಕ್ಷಿತ ಭೇಟಿಯ ನಂತರವೂ ಎರಡು ಮೂರು ಸಲ ಅವಳ ಮನೆಗೆ ಪಾವನಾ ನನ್ನ ಕರೆದು ಅತ್ಯಂತ ಆತ್ಮೀಯರಾಗಿ ನಡೆಸಿಕೊಂಡಿದ್ದು ಇದೆ (ಒಂದು ಸಲ ಆಶಿಕಾ ಸಹ ಇದ್ದ ನೆನಪು).

ಸುಖಾ ಸುಮ್ಮನೆ ಅವರಿವರ ಮನೆ-ಗೋಡೆ ಬಿರುಕುಗಳ ಇಣುಕಬಾರದೆಂದು ಎಷ್ಟೇ ಸ್ವಂತಕ್ಕೆ ಭಾಷೆ ಕೊಟ್ಟು ಕೊಂಡರೂ ಎದುರಾದದ್ದೆಲ್ಲ ವಿಚಿತ್ರ ಸನ್ನಿವೇಶಗಳೇ ಎನ್ನಿ. ಮೊದಲ ಸಲ ಪಾವನಳ ಹಕ್ಕೊತ್ತಾಯದ ಆಮಂತ್ರಣದ ಮೇರೆಗೆ ಅವಳ ಮನೆಗೆ ಹೋದಾಗಿನ ನನ್ನ ಇಂಪ್ರೆಷನ್ ಅಷ್ಟು ತಾಜಾ ಇತ್ತು. ಅವಳ ಮನೆಯ ಭವ್ಯ ಲಿವಿಂಗ್ ರೂಂಗೆ ಮರುಳಾಗಿ ವಿಶಾಲ ಫ್ರೆಂಚ್ ಕಿಟಕಿಗೆ ಒರಗಿ ಹೊರಗೆ ಅಚ್ಚ ಹಸಿರಿನ ಲಾನ್ ದಿಟ್ಟಿಸುತ್ತಿರುವಾಗ ಮನಸ್ಸಿಗೆ ಸೇತುವೆಯಾಗಿ ಮಿಂಚಿದ್ದು 2004-05ರ ಸಮಯದಲ್ಲಿ ಕರೆವೊಕ್ಕಲಿಗರ ಬುಡಕಟ್ಟು ಜನರ ಕೇರಿಗಳಲ್ಲಿ ಓಡಾಡಿ ಸಂಶೋಧನೆಯ ಸಾಮಗ್ರಿಗಳನ್ನು ಒಟ್ಟುಗೂಡಿಸುವಾಗಿನ ಒಂದು ಅಪೂರ್ವ ಸನ್ನಿವೇಶ. ಸಮುದಾಯದ ಸುಮಾರು ಎಪ್ಪತ್ತೈದರ ವಯಸ್ಸಿನ ಬೀರ ಅರೆಬರೆ ಕಣ್ಮುಚ್ಚಿ ವಿವರಿಸಿದ್ದ.. ಮೊದ್ಲೆಲ್ಲ ವರುಷ ಎಲ್ಡು ವರುಷಕ್ಕೆಲ್ಲ ಹೊಸ ಬಿಡಾರ ಹೂಡದು. ಹೋದಲೆಲ್ಲ ಬ್ಯಾಣ ಬೆಟ್ಟ ಕಡಿದು ಕಸನು ಮಾಡ್ಕೊಂಡು ಭತ್ತ-ಗದ್ದೆ ಮಾಡದು.. ಹೀಂಗೆ ಈಗೀಗ ಒಂದ್ಕೆಡೆ ನಿಂತಲ್ಲಿ ನಿಂದು ಮನೆ ಚೂರು ಪಾರು ಅಡಿಕೆ, ಭತ್ತ, ಇದ್ದಲ್ಲೇ ಮಾಡಿ ಮುಗಿಸದು ಕಲ್ತಿದ್ದೊ ನಮ್ಮ ಪೈಕಿ ಜನ ಎಂದು ಬಣ್ಣಿಸುತ್ತಿದ್ದ ಬೀರಗೌಡಂಗೆ ಪದೇ ಪದೇ ಬಿಡಾರ ಬದಲಾಯಿಸುತ್ತಿದ್ದ ಕಾರಣ ಕೇಳಲಾಗಿ ಒಂದು ಸತ್ಯ ದರ್ಶನವಾಯ್ತು. ಮಕ್ಕಳು ಮರಿ ಸತ್ರು ಅಂದ್ರೆ ಈ ಜಾಗ ಸಾರಾವಳಿಯಲ್ಲಿ ಅಂತೇಳಿ ತಿಳ್ದು ಜಾಗ ಖಾಲಿ ಮಾಡಿ ಹೊಳೆ, ಹಳ್ಳದ ನೀರಿನೆಡೆ ಇರುವ ಮತ್ತೊಂದು ಜಾಗ ನೋಡಿ ಊರು ಬಿಟ್ ಊರಿಗೆ ಹೋಗುತ್ತಿದ್ದೋ…

ಮತ್ತೆ ವರುಷಕ್ಕೊಮ್ಮೆ ಊರ ಅಮ್ಮನೋರ ಸಮಾರಾಧನೆಗೆ ದೊಡ್ಡಬ್ಬದ (ದೀಪಾವಳಿ) ಸಾಸ್ತ್ರ ಕಟ್ಟು ಹರಕೆ ಹ್ಯಾಂಗೆ ಮಾಡ್ತಿದ್ರೀ ಪದೇ ಪದೇ ಬಿಡಾರ ಬದಲಾವಣೆ ಮಾಡೋರು ಕೆದಕಿದೆ. (ದೈವ, ಭೂತ, ಕಟ್ಟು, ಹರಕೆ ಎಂದರೆ ಅತೀವ ಭಯ ಭಕ್ತಿಯಿರುವ ಕೃಷಿಕ ಬುಡಕಟ್ಟು ಇವರು ಹಾಗಾಗಿ) ಬೀರ ಅರೆ ಮುಚ್ಚಿದ ಕಣ್ ಗಳಲ್ಲಿ ಭೂಮಿಗೂ ಆಕಾಶಕ್ಕೂ ನಡುವಿನ ಅವಕಾಶದಲ್ಲಿ ಧ್ಯಾನಿಸುತ್ತ ಅಡ್ಡ ಮರ ಹಾಕಿ ಹೇಳಿದ. ಅದಕ್ಕೊಂದು ಸಾಸ್ತ್ರ ಉಂಟು. ಬಿಡಾರದ ಸಮೀಪ ಇರುವ ಹೊಳೆಗೆ ಎದುರಾಗಿ ನಿಂತು ಬಿಟ್ಟುಬಂದು ಹುಟ್ಟೂರ ದಿಕ್ಕಿಗೆ ಹರಕೆ ನೆನ್ಸ್ ಕಂಡ್ ತೆಂಗಿನಕಾಯಿ ಕಟ್ಟಿ , ಅಕ್ಕಿ ಮತ್ತೆಂತ ಇದ್ರು ಹರಿಯ ನೀರಿಗೆ ಕೊಟ್ಟು ಕೈಮುಗಿದರಾಯ್ತು ನಮ್ ಸೇನೆ ಅಲ್ಲಿಗೋಗಿ ಮುಟ್ತದೆ.

ಮನುಷ್ಯ ನಿಜಕ್ಕೂ ಯಾವುದನ್ನ ಗಳಿಸಲು ಶಕ್ತಿಮೀರಿದ ನಡಿಗೆ ಅಥವಾ ಓಟಗೈಯುತ್ತಾನೆ. ಯಾವುದನ್ನ ಮರೆಯಲು ಊರು ಬದಲಿಸುತ್ತಾನೆ ಭೂಮಿಯ ಬದುಕಿನ ದಿನ- ದಣಿವು ಸೋತು ಮರೆಯಲು ಸಂಜೆ ಸ್ನಾನ ಪೂಜೆ ಪ್ರಾರ್ಥನೆ ಹರಕೆ ಆಧ್ಯಾತ್ಮನೇ.. ಸಂಬಳ ಸಾಲದಾಗ ಪ್ರೇಮದಲ್ಲಿ ಬೀಳುತ್ತಾನೆ, ಪ್ರಮೋಶನ್ ಆದಾಗ ದೇಶ ಬದಲಿಸ್ತಾನೆ. ಪತ್ನಿಗೆ ಕೆಲಸ ಬಿಡು ಸಾಕು ದುಡಿದದ್ದು..! ಮಗು ಬೇಕೆನ್ನುತ್ತಾನೆ. ಅವಳೋ ಇತ್ತೀಚೆಗೆ ಕಲಿತಿದ್ದಾಳೆ. ಪ್ರತೀ ತಿಂಗಳು ಒಂದಿಷ್ಟು ಕಾಸು ಕೂಡಿಡುವುದನ್ನು. ಮೆನಿಕ್ಯೂರ್ ಪೆಡಿಕ್ಯೂರಿಗೆಲ್ಲ ನಿನ್ನತ್ರ ಕಾಸು ಕೇಳಕ್ಕೆ ನನಗಿಷ್ಟವಿಲ್ಲ. ಸಿಕ್ಕ ಉದ್ಯೋಗ ಬಿಡಲಾರೆ (ಅಂಗಲಾಚುತ್ತಿದ್ದಾಳೆ ಸ್ಪೇಸ್ ಗೆ_ ಅರ್ಥವಾಗದು ಇವಳಿಗೆ ದುಡ್ಡಿನ ಅಹಂಕಾರ ಅಂದುಕೊಳ್ಳುತ್ತಾನೆ)- ನಾನು ಊರು ಬಿಟ್ಟೆ- ನೀ ಬೇಕಾದ್ದು ಮಾಡಿಕೋ ಬೈಬೈ- ಬೆನ್ನುತಿರುಗಿಸುತ್ತಾನೆ ಬದುಕಿಗೆ. ಬದಲಿಗೆ ನಿನ್ನ ಬಿಟ್ಟಿರಲಾರೆ ಎಂತ ಆತ ಕೂಗಿದ್ದರೆ ಒಮ್ಮೆ- ಅದೇ ಸಂಬಳ ಕಮ್ಮಿಯಿದ್ದ ಕಾಲದಂತೇ ಮಳೆಗಾಲದ ಅಬ್ಬಿ ನೀರಂತೇ ಬದುಕು ಸುಂದರವಾಗುತ್ತಿತ್ತು. ಒಂದಿಷ್ಟು ವರುಷ – ತೀರಾ ಸಿನಿಮಾ ಥರ ಯೋಚನೆಗಳು ಥತ್ .. ಇವಳು ಯಾಕೆ ಎಷ್ಟು ತಡ ಮಾಡುತ್ತಿದ್ದಾಳೆ ಒಂದು ಕಾಫಿ ಮಾಡಕ್ಕೆ… ಅಂತ ಯೋಚಿಸುತ್ತಿಧ್ಧೆ- ಕೈಯಲ್ಲಿ ಅದ್ಭುತ ಕಾಫಿ ಕಲಕುತ್ತಾ ಬಂದಳು ಪಾವನ. ಬೆಳಗ್ಗೆ ಮನೆಯಲ್ಲಿ ಪಿಜ್ಜಾ ಮಾಡಿದ್ದು ಎಲ್ಲಾ ತಯಾರಿ ಇದೆ, ಒಳ್ಳೆ ಪಿಜ್ಜಾ ಮಾಡಿಕೊಡುತ್ತೇನೆ.

ಜಸ್ಟ್ 15 ನಿಮಿಷದಲ್ಲಿ !ಇದು ಸುಲಭ ಗೊತ್ತಾ? ಬೇಗ ನಾನು ಸ್ನಾನ ಮುಗಿಸಿ ಬರ್ತೀನಿ. ಜಸ್ಟ್ ಚಿಲ್ ಫಾರ್ ಸಂ ಟೈಮ್, ದಯಮಾಡಿ ಅಂತ ಹಳೆ ಕಾಲೇಜು ಗೆಳತಿ ಥರ ಸಂಭ್ರಮಿಸಿದಳು. ನಾನೂ ಅಂತದ್ದೆ ಖುಷಿ ಪಡೆದೆ. ನಿಮ್ಮ ಮನೆ ತುಂಬಾ ಚಂದಿದೆ.. ಎರಡಂತಸ್ತಿನ ರಾಬಿಟ್ ಹೋಂ, (ಮಗ ಶ್ರೀರಾಮನ ಐಡಿಯಾ ಎಂದಳು) ನನ್ನ ಅತ್ಯಂತ ಇಷ್ಟದ ವಸ್ತು ಇಲ್ಲಿದೆ ಎಂದೆ. ಶ್ರೀರಾಮ ಇದನ್ನು ಇಲ್ಲಿ ಬಿಟ್ಟು ಇಂಡಿಯಾಗೆ ಹೋಗಿ ಇರಲು ಹೇಗೆ ರೆಡಿ ಆದ ಎಂದು ಕೇಳಿದ್ದಕ್ಕೆ, ಬಾಲಾಜಿ ಟೆಂಪಲ್ ಗೆ ಇದನ್ನ ಕೊಟ್ಟು ಹೋಗುತ್ತಿದ್ದೇವೆ. ಈ ಮನೆಯ ಇಎಂಐ ಒಬ್ಬಳೇ ಕಟ್ಟಲಾಗದು. ನನ್ನ ಪತಿ, ಮಗ ಹೈದರಾಬಾದಿಗೆ 4- 5 ತಿಂಗಳು ಟ್ರಯಲ್ ಶಿಫ್ಟ್ ಮಾಡುತ್ತಿದ್ದಾರೆ. ನಾನು ಇಲ್ಲಿ ಸಣ್ಣ ಫ್ಲಾಟ್ ನೋಡಿದ್ದೇನೆ. ಅವರೆಲ್ಲ ಡಿಸೆಂಬರ್ ವರೆಗೂ ಅಲ್ಲಿದ್ದು, ನಂಗೆ ಫೀಡ್ಬ್ಯಾಕ್ ಕೊಡೋವರ್ಗೆ ಮ್ಯಾನೇಜ್ ಮಾಡ್ಬೇಕೆಂದಿದ್ದೇನೆ. ಮೊಲದ ಮರಿಗಳು ಮುದ್ದಾಗಿ ಆಡಿಕೊಂಡಿದ್ದ ಎರಡನೇ ಅಂತಸ್ತಿನ ಆ ಮನೆನ ನನ್ನ ಮಗನ್ಗು ಕರೆದು ತೋರಿಸಬೇಕೆನಿಸಿತು. ಮನೆ ನೋಡುತ್ತಿರು, ಸ್ನಾನ ಮುಗಿಸಿ ಈಗ ಬಂದೆ ಎಂದಳು. ಬಾಲ್ಕನಿ ಬಿಟ್ಟು ಬರಲು ಮನಸ್ಸಿರಲಿಲ್ಲ ನನಗೆ. ಎದುರು ಮನೆ ಬಾಲ್ಕನಿ ಎಷ್ಟೋ ಚೆಂದ ಅಲ್ಲವಾ ಯಾವಾಗ್ಲೂ… ಕೇಳಿದೆ. ಅರ್ಥವಾದಂತೆ ನಕ್ಕು ಹೋದಳು. ಮತ್ತೆ ಎಂಟು ನಿಮಿಷಕ್ಕೆ ಅವಳ ಪತಿ ಷಣ್ಮುಗಂ ಬಂದರು. ಪರಿಚಯಗಳಾದವು, ಅತ್ಯಂತ ಸಾಧು ಸಜ್ಜನ ಕಳೆ ಇರುವ ಭಾವದ ವ್ಯಕ್ತಿ. ಕೈಯಲ್ಲಿ ಬಿಳಿ ಲಿಲ್ಲಿ ಹೂಗಳ ಗುಚ್ಚ, ಪಾವನಾ ನಮ್ಮ ಪೂಜಾ ರೂಮ್ ನೋಡುವಂತೆ ಬಾ ಎಂದು ಕರೆದುಕೊಂಡು ಹೋದಳು.

ಮನೆಯ ಮೂರನೇ ಬೆಡ್ ರೂಮ್ ಅನ್ನು ಸಂಪೂರ್ಣ ಅಧ್ಯಾತ್ಮ ಸಾಧನೆಗೆಂದೆ ಮೀಸಲಿಟ್ಟಂತೆ ಕಂಗೊಳಿಸುತ್ತಿತ್ತು, ಮುಖ್ಯ ಗೋಡೆಯ ತುಂಬೆಲ್ಲ ದೊಡ್ಡ ಸಣ್ಣಪುಟ್ಟ ಮತ್ತು ದೊಡ್ಡ ಫೋಟೋಗಳು ಗಣೇಶ, ಶಿವನ ಪರಿವಾರ, ಬಾಲಾಜಿ, ಯೇಸು, ನಾನಕ್, ಸಾಯಿಬಾಬಾ, ಕೆಲವು ಮಂಡಲ, ವೃತ್ತ, ಚಿಹ್ನೆಗಳ ಫೋಟೋಗಳು ಆ ಫ್ರೇಮ್ ಗಳ ಅಂದ ಚಂದ ಎಲ್ಲಾ ಫ್ ಫ್ರೇಮ್ ಗೂ ಫ್ರೆಶ್ ಹೂಗಳ ಅಲಂಕಾರ, ಇಷ್ಟು ದೈವ ಭಕ್ತಿ !?

, ಈಗೊಂದೆಂಟು ತಿಂಗಳ ಹಿಂದೆ ರೆಡ್ ಬ್ರಿಜ್ ರೈಲ್ವೇ ಸ್ಟೇಷನ್ ಹತ್ತಿರ ಸಂಜೆ ಹೊತ್ತು ನಾಲ್ಕು ಕರಿಯರು, ಪರ್ಸ್ ಮೊಬೈಲ್ ಲ್ಯಾಪ್ ಟಾಪ್ ದೋಚಿದ ನಂತರವಿರಬಹುದೇ, ಮನಕ್ಕೆ ನುಗ್ಗಿದ ಕಾಡು ಪ್ರಶ್ನೇನ ಪಾವನ ಗೆ ಕೇಳಲು ಧೈರ್ಯ ಸಾಲಲಿಲ್ಲ, ಮನಸ್ಸಿಗೆ ಬಂದಿದ್ದೆಲ್ಲ ಕೇಳಿ ಹೇಳುವ ಹಾಗಿದ್ದಿದ್ದರೆ ಪ್ರಪಂಚ ಬೇರೆಯೇ ಇರ್ತಿತ್ತು. ಬಿಡಿ, ಅಕ್ಕ ಪಕ್ಕ ನಿಂತ ದಂಪತಿಗಳನ್ನ ನೋಡಿ, ಜೋಡಿ ಮಾತ್ರ ಸರಿ ಉಂಟು. ಇವರು ಜೊತೆಯಾಗಿರಬೇಕು ಅಲ್ಲಿದ್ದ ದೇವಾನುದೇವತೆಗಳಿಗೆ ಎಂದು ವಿನಂತಿಸಿದೆ.

ಅಚ್ಚ ಕಂದು ಬಣ್ಣದ, ಎತ್ತರ ದಪ್ಪ ಜಬರ್ ದಸ್ತಾಗಿ ಸರೀ ಅರಡಿಯ ಮೇಲೋ0ದರಡು ಇಂಚು ಇರುವ, ತೀರಾ ಸಾಮಾನ್ಯ ಮುಖ ಚಹರೆಯ ಈ ದಂಪತಿ, ತಂತಮ್ಮ ಆಯ್ಕೆಯ ಹಾದಿಗಳ ಮುಖಾಂತರವೇ ನನ್ನ ನೆನಪಿನ ಅಂಗಳದಲ್ಲಿ ಶಾಶ್ವತ ಮೂರ್ತಿಗಳಾಗಿ ನಿಲ್ಲಲಿದ್ದಾರೆ ಎನ್ನುವ ಅಂಶ ಆಗ್ಗೆ ಹೊಳೆಯದಿದ್ದರೂ ಒಂದು ಹೊಸ ಅಲೆ ತಾಕಿದ ಅನುಭವವಿತ್ತು. ಈ ಮನುಷ್ಯ ಮನೆಗೆ ಬರುವ ಮುಕ್ಕಾಲು ಗಂಟೆ ಮುಂಚೆ ಜೊತೆಗಿದ್ದ ಅನುಷಾ ನಾನು ಪಾವನ ನಡೆಸಿದ ಸಂವಾದದಲ್ಲಿ ಎರಡನೇ ಮಗುವಿಗೆ ಯಾರ್ಯಾರು ಪ್ಲಾನ್ ಮಾಡ್ತಿದ್ದೀರಿ ಎಂದು ಅನುಷಾ ಎಸೆದ ಪ್ರಶ್ನೆಗೆ, ಈ ಪಾವನ ಹಿ ಇಸ್ ಲೈಕ್ ಮೈ ಬ್ರದರ್ ಓನ್ಲಿ , ವಾಟ್ ಟು ಪ್ಲಾನ್ !? ಎಂದು ಎಸೆದ ಕಮೆಂಟ್ ಗೆ ಒಂದು ಕ್ಷಣ ಕಕ್ಕಾಬಿಕ್ಕಿ ಆದ್ರೂ, ಹೋ ಎಂತ ಎಲ್ಲರೂ ಒಟ್ಟಿಗೆ ಬೋರ್ಗರೆದು, ದಿನ- ದಣಿವು ಈಜಿದ್ದು ನೆನಪಾಯಿತು ನಗು ತಡೆಯಲಾಗದೆ ಬಾಲ್ಕನಿ ಹುಡುಕಿಕೊಂಡೋಡಿದೆ.

-ರಶ್ಮಿ ಕಬ್ಬಗಾರು


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x