ಇತ್ತೀಚಿಗೆ ಸಣ್ಣ ಕತೆಗಳು ಕನ್ನಡ ಸಾಹಿತ್ಯದಲ್ಲಿ ವೈಶಾಲ್ಯತೆಯಿಂದ ಬೆಳೆಯುತ್ತಿರುವ ಪ್ರಕಾರವಾಗಿದೆ. ಸುತ್ತಲಿನ ಅನುಭವಗಳಿಗೆ ಸ್ಪಂದಿಸುವ ಮೂಲಕ ಸರಳವಾಗಿ ಲೇಖಕನಿಗೆ ದಕ್ಕುವ ವಸ್ತು ಸಣ್ಣ ಕತೆಯ ವೈಶಿಷ್ಟವಾಗಿದೆ. ಸೂಕ್ಷ್ಮ ಸಂವೇದನೆಯುಳ್ಳ ಕಥೆಗಾರ ಆಯ್ದುಕೊಳ್ಳುವ ಏಕೈಕ ಪ್ರಕಾರವೂ ಇದೆ ಆಗಿದೆ. ಕತೆಗಾರ ಮುಧುಕರ ಮಳವಳ್ಳಿ ಅವರ ಮೊದಲ ಜೋಡು ಕಥಾಸಂಕಲನವು ದಲಿತರ ಬದುಕಿನ ಅನಂತ ಸಾಧ್ಯತೆಗಳನ್ನು ಚಿಂತನೆಗೆ ಹಚ್ಚುವಂತೆ ಮಾಡುತ್ತವೆ. ಸಾಮಾಜಿಕ ಕಟ್ಟುಪಾಡುಗಳು ಎಂದು ತಿಳಿದ ಅದೆಷ್ಟೋ ಅಂಶಗಳನ್ನು ಬಹುತ್ವದ ನೆಲೆಯಲ್ಲಿ ಮರುಶೋಧಿಸಬೇಕು ಎಂಬ ಸಂದೇಶವನ್ನು ಕತೆಗಾರರು ನೀಡ ಬಯಸುತ್ತಾರೆ. ಪ್ರಾದೇಶಿಕ ನೆಲೆಯಲ್ಲಿ ವಿಕಾಸ ಪಡೆದಿರುವ ಇಲ್ಲಿನ ಕಥೆಗಳು ಬದುಕಿನ ಮನೋವ್ಯಾಪಾರಗಳ ಚಿತ್ರಣವನ್ನು ನೇರವಾಗಿ ತಿಳಿಸುತ್ತಾ, ಓದುಗನು ಪ್ರತಿಸ್ಪಂದಿಸಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸುತ್ತವೆ. ಹಾಗಾಗಿ ಇಲ್ಲಿನ ಹತ್ತು ಕತೆಗಳು ಹತ್ತು ವಿಧದ ವಸ್ತು ಮತ್ತು ತಂತ್ರವನ್ನು ಒಳಗೊಂಡಿದೆ.
ಮೊದಲ ಜೋಡು ಕತೆಯು ಧಾರ್ಮಿಕ ಕಟ್ಟುಪಾಡುಗಳನ್ನು ಸ್ವಾತಂತ್ರ್ಯದ ಬಂಧದಿಂದ ಬಿಡಿಸುವ ಸ್ವರೂಪ ಪಡೆದಿದೆ. ಕಡ್ಡಾಯ ಶಿಕ್ಷಣವು ಮೂಲಭೂತ ಹಕ್ಕು ಮತ್ತು ಕರ್ತವ್ಯ ಆದ ಮೇಲೆ ಶಿಕ್ಷಣ ಪಡೆದು ಮುನ್ನೆಲೆಗೆ ಬಂದ ದಲಿತರು ಚಪ್ಪಲಿ ಧರಿಸುವ ಅವಕಾಶ ಪಡೆಯುತ್ತಾರೆ. ಹಟ್ಟಿ ಮಾರಮ್ಮನ ಉತ್ಸವದಲ್ಲಿ ವೆಂಕಟ ಜೋಡು ಹಿಡಿದು ಕುಣಿಯುವುದು, ಅವರವ್ವ ತನ್ನ ಸೆರಗಿನಲ್ಲಿ ಚಪ್ಪಲಿ ಒರೆಸಿ ಕೊಡುವುದು, ಅದನ್ನು ಮೆಟ್ಟಿಕೊಂಡು ನಡೆಯುವುದು ಇವೆಲ್ಲವೂ ಒಂದು ಕಾಲಕ್ಕೆ ದಲಿತರಿಗೆ ಹೊಸ ಲೋಕವೇ ಆಗಿತ್ತು. ಇದನ್ನು ಅನುಭವಿಸದಂತೆ ಮಾಡಿದ ವರ್ಣವ್ಯವಸ್ಥೆಯ ಮುಖವಾಡವು ಇಲ್ಲಿ ಕಳಚಿದೆ.
ಗುಲಾಬಿ ಎಂಬ ಪುರುಷ ದೇಹವು ಕಥೆಯು ರಾಜಕೀಯ ಪ್ರಭಾವ ಬಳಸಿಕೊಂಡ ಹೋಟೆಲ್ ಮಾಲೀಕ ಹೆಸರು ಗಿಟ್ಟಿಸಿಕೊಳ್ಳುವ ಹಪಾಹಪಿಯಲ್ಲಿ ತಾನು ಮಾಡಿರುವ ಕೊಲೆಯನ್ನೇ ಮುಚ್ಚಿ ಹಾಕಲು ಪ್ರಯತ್ನಿಸುವ ದುಷ್ಕೃತ್ಯವನ್ನು ತೆರೆದಿಡುತ್ತದೆ. ಗುಲಾಬಿ ತಾನು ಕೂಡ ಎಲ್ಲರಂತೆ ಮದುವೆಯಾಗಬೇಕು ಎಂಬ ಆಸೆ ಪಟ್ಟವನು. ಅದಕ್ಕಾಗಿ ಮಾಲೀಕ ಸೊಪ್ಪು ಹಾಕದಿದ್ದಾಗ ಕಾಸು ಗಂಟು ಹಾಕಿ ಯೇನ್ ದೇಶ ಆಳ್ಬೇಕು ನೀನು? ಎಂದು ಅಬ್ಬರಿಸುತ್ತಾನೆ. ಹೆಣ್ಣಿನ ಬಗೆಗಿನ ಆಸೆ ಹೆಚ್ಚಾಗಿ ಹೆಂಗಸು ದೋಸೆ ಪಡೆಯಲು ಬಂದಾಗ ನೀನು ನನಗೆ ಜೊತೆಯಾಗಿ ಇದ್ದುಬಿಡು ದಿನ ನಿಂಗೆ ಬೇಕ್ ಬೇಕಾದಾಗ ದೋಸೆ ಹಾಕ್ಕೊಡ್ತೀನಿ……. ಎಂದು ಕೇಳಿಯೇ ಬಿಡುತ್ತಾನೆ. ಇದರ ಪರಿಣಾಮ ರಕ್ತ ತೊಟ್ಟಿಕ್ಕುವ ಹಾಗೆ ಹೊಡೆಸಿಕೊಂಡರು, ಮಾಲೀಕನಿಗೆ ನೀನು ಮಾತ್ರ ರಾತ್ರಿ ಹೊತ್ತು ಬೇಕ್ ಬೇಕಾದ ಕಡೆ ಹೋಗಬಹುದು….. ಎಂಬ ಆವೇಶದ ಪ್ರತಿಕಾರವೀಯುತ್ತಾನೆ. ಈ ಸಮಯದಲ್ಲಿ ನಡೆಯುವ ಆತನ ಕೊಲೆಯು ಅಧಿಕಾರದ ಬಲದಿಂದ ಮುಚ್ಚಿಹೋಗುತ್ತದೆ. ಪೌರಕಾರ್ಮಿಕರ, ಕೂಲಿ ಕಾರ್ಮಿಕರ, ಅಸಂಘಟಿತ ವಲಯದ ಕಾರ್ಮಿಕರ ಹೋರಾಟಗಳು ತಮಗೆ ಬೇಕಾದ ಹಕ್ಕುಗಳನ್ನು ಪಡೆಯುವಲ್ಲಿ ವಿಫಲವಾಗುತ್ತಿವೆ ಎಂಬುದನ್ನು ಕತೆಗಾರರು ಇಲ್ಲಿ ಚಿತ್ರಿಸಿದ್ದಾರೆ.
ಕೊರ್ಬಾಡು ಕತೆಯು ಆಹಾರದ ವೈವಿಧ್ಯತೆಯ ರೂಪಕವಾಗಿ ಕಂಡುಬಂದರೂ ಜಾತೀಯತೆಯ ಸಂಕೀರ್ಣತೆಗಳನ್ನು ಬಿಚ್ಚಿಡುತ್ತವೆ. ಗೌರಿಗಣೇಶ ಹಬ್ಬದಲ್ಲಿ ಬಾಡು ಹಂಚುವುದು ಸನಾತನವಾದಿಗಳ ನಂಬಿಕೆಗೆ ತದ್ವಿರುದ್ಧವಾಗಿದೆ. ಶಿವಮ್ಮ ಗುಡ್ಡೆ ಬಾಡನ್ನು ಮಾರಿದ ಹಣದೊಂದಿಗೆ ಹೊಸ ಬಡಾವಣೆಯ ಬಾಡಿಗೆ ಮನೆಗೆ ಹೋಗುವ ಉತ್ಸಾಹ ತೋರುತ್ತಾಳೆ. ಆದರೆ ಶಿವಮ್ಮಳ ಅವ್ವಾ ಹೋಗಿ ಬನ್ನಿ ತಾಯಿ, ಯಾವ ಬೀದಿಗೆ ಹೋದರೆ ಏನ್ ಬಂದದು, ನಮ್ಮ ಹೊಲಗೇರಿ ಜನ ಅನ್ನದೆ ಬೇರೆ ಅಂದರಾ, ದನ ತಿನ್ನದೆ ಬೇರ್ ಏನ್ ತಿನ್ನದೋ…. ಎಂದು ತನ್ನ ಜಾತಿಯ ಬಗೆಗಿನ ಸ್ವಾಭಿಮಾನವನ್ನು ತೆರೆದಿಡುತ್ತಾಳೆ. ಹಾಗಾಗಿ ಆಹಾರದ ಕ್ರಮವು ಜಾತಿನಿಂದನೆಯಾಗುತ್ತಿರುವ ಆತಂಕವನ್ನು ಕತೆಗಾರರು ಅಭಿವ್ಯಕ್ತಿಸಿದ್ದಾರೆ.
ದೇವರ ಕೋಣ ಕತೆಯು ಶ್ರಾವಣದ ಸಂಭ್ರಮದೊಂದಿಗೆ ಪ್ರಾರಂಭವಾಗುತ್ತದೆ. ದೇವರ ಹೆಸರಿನಲ್ಲಿ ಬಿಟ್ಟಿರುವ ಕೋಣವನ್ನು ಕದ್ದು ಬೇರೆ ಊರಿನವರಿಗೆ ಮಾರಿ, ಕೊನೆಗೆ ನಾನೆ ಮಾರಿದ್ದು ಎಂದು ತಪ್ಪು ಒಪ್ಪಿಕೊಳ್ಳುವ ಪ್ರಸಂಗವನ್ನು ಚಿತ್ರಿಸಲಾಗಿದೆ. ಇಲ್ಲಿ ಧಾರ್ಮಿಕ ಸಾಮರಸ್ಯವನ್ನು ಹಾಳುಮಾಡುತ್ತಿರುವ ವರ್ಗದ ವಿರುದ್ಧ ಧನಿ ಎತ್ತಲಾಗಿದೆ. ಯಾವುದೇ ಕುಲದ ಮುಖಂಡರು ಊರಿನ ಒಗ್ಗಟ್ಟು ಮತ್ತು ಏಳಿಗೆಗೆ ದುಡಿಯುವ ಮನಸ್ಸುಳ್ಳವರಾಗಿರಬೇಕು. ಇಂದು ಜಾತಿ ರಾಜಕಾರಣದ ಪಿತೂರಿಗಳು ಗ್ರಾಮೀಣ ಪರಿಸರಕ್ಕೂ ಒಕ್ಕರಿಸಿ ಹಾಳು ಮಾಡುತ್ತಿರುವ ವಿರುದ್ಧ ಮೌನ ಪ್ರತಿಭಟನೆ ಇಲ್ಲಿನ ವಸ್ತುವಾಗಿದೆ.
ಮೂಡಲದ ಬೆಳ್ಳಿ ಕತೆಯು ಕುಡುಕನಿಗೆ ಮದುವೆ ಮಾಡಿಕೊಟ್ಟ ಹೆಣ್ಣೊಬ್ಬಳ ಸಂಸಾರಿಕ ಜೀವನದ ವೇದನೆಯಾಗಿ ಹೊರಹೊಮ್ಮಿದೆ. ಈ ಮೈಗೆ ಏನ್ ಬೇಕು ಅಂತ ಗೊತ್ತಿಲ್ಲದ ವಯಸ್ಸು, ಆದರೂ ಮದುವೆ ಮಾಡಿದೆ. ಆ ಗಂಡ ಅನ್ನೋ ಪ್ರಾಣಿ ದಿನ ಕುಡಿದು ಬಂದು ಈ ದೇಹನಾ ಕಿವುಚಿ ನೋಡೋನು…… ಚಂದ್ರಿಯು ಅನುಭವಿಸಿದ ಇಂತಹ ಯಾನತೆಗಳು ಇಂದಿನ ಎಷ್ಟೋ ಕುಟುಂಬಗಳ ದೈನಂದಿನ ಸಂಗತಿಗಳೇ ಆಗಿವೆ. ಕೊಟ್ಟ ಹೆಣ್ಣು ಕುಲಕ್ಕೆ ಹೊರಗು ಎಂಬಂತೆ ಚಂದ್ರಿಯ ತಾಯಿ ಪುಟ್ಟಮ್ಮ ಮಾತ್ರ ಮೌನದಲ್ಲಿಯೇ ಕಣ್ಣೀರು ಸುರಿಸುತ್ತಾಳೆಯೇ ವಿನಃ ಪ್ರತಿಭಟಿಸುವುದಿಲ್ಲ. ಸ್ತ್ರೀವಾದಿ ಚಿಂತನೆಯ ಆಶೋತ್ತರಗಳು ಮುನ್ನೆಲೆಗೆ ಬರುತ್ತಿರುವ ಈ ಸಂದರ್ಭದಲ್ಲಿ ನನಗೆ ನಿನ್ನ ಗಂಡ ಅಂತ ಯಜಮಾನಿಕೆ ಮಾಡುವ ಗಂಡ ಬೇಡ ಎಂಬ ಚಂದ್ರಿಯ ಮಾತು ಪ್ರಸ್ತುತವೆನಿಸುತ್ತದೆ. ಪುರುಷ ಪ್ರಭಾವದ ದೌರ್ಜನ್ಯಗಳು ಮಿತಿಮೀರಿದಂತೆ ಹೆಣ್ಣನ್ನು ಕ್ಯಾಕರಿಸಿ ನೋಡುವ ಕಣ್ಣುಗಳೇ ಹೆಚ್ಚಾಗಿ ಬಿಟ್ಟಿವೆ. ತನ್ನ ಮನೋಭಿಲಾಷೆಯನ್ನು ಈಡೇರಿಸಿಕೊಂಡು ಬದುಕು ಕಟ್ಟಿಕೊಳ್ಳಲು ಹವಣಿಸುತ್ತಿರುವ ಹೆಣ್ಣಿನ ಇರುವಿಕೆ ಇಲ್ಲಿ ಸತ್ಯವೆನಿಸುತ್ತದೆ.
ಇಳಿ ಸಂಜೆಯ ಪ್ರೇಮ ಕತೆಯು ಹಿಂದೂ ಮುಸ್ಲಿಂ ಧಾರ್ಮಿಕ ಸಾಮರಸ್ಯದ ಕಥಾನಕವಾಗಿದೆ. ನಾಜೀರ್ ಮತ್ತು ವಹಿದಾ ಜೀವನದ ಅವಶ್ಯಕತೆಗಳನ್ನು ಅರಿತು ಬಾಳುವುದನ್ನು ಕಲಿತಿರುತ್ತಾರೆ. ದಿನ ಕಳೆದಂತೆ ವಹಿದಾ, ಕಿವುಡು ಮತ್ತು ಕಣ್ಣಿನ ತೊಂದರೆಗೆ ಒಳಗಾದ ನಾಜೀರ್ ನಿಂದ ಅಪ್ಪುಗೆಯ ಸುಖವನ್ನು ಕಾಣದೆ ಬರಿ ನೆನಪಲ್ಲೇ ಬವಣೆ ಪಡುತ್ತಿರುತ್ತಾಳೆ. ಕಣ್ಣಿನ ಪರೀಕ್ಷೆಯು ಯಶಸ್ವಿಯಾಗಿ ನಡೆದರೂ ಗುಣಮುಖನಾಗದ ನಾಜೀರ್ ನ ಹೃದಯ ಬಡಿತ ಹಠಾತ್ ನಿಲ್ಲುತ್ತದೆ. ಏಕಾಂಗಿಯಾದ ವಹಿದಾಳಿಗೆ ಆಸರೆಯಾಗುವವನೇ ಪಳನಿ ಸ್ವಾಮಿ. ಕಷ್ಟ ಸುಖ ಹಂಚಿಕೊಳ್ಳಲು ಯಾವ ವಯಸ್ಸು ಎಂಬ ವಹಿದಾಳ ಮಾತು ಪ್ರತಿಯೊಂದು ಹೆಣ್ಣು ತನ್ನ ನೋವು, ಹತಾಶೆ, ಬಯಕೆ ಹಂಚಿಕೊಳ್ಳಲು ಮತ್ತೊಂದು ಜೀವಿಯನ್ನು ಬಯಸುವುದು ಜಾತಿ ಧರ್ಮದ ಕಟ್ಟಳೆಗೆ ಸೀಮಿತವಾಗಬಾರದು ಎಂಬ ಸಮಾನತೆಯನ್ನು ಈ ಕತೆಯು ಅಭಿವ್ಯಕ್ತಿಸಿದೆ.
ಮೂಳೆ ಕಥೆಯು ಅರಿವಿಲ್ಲದೆ ವೇಶ್ಯಾವೃತ್ತಿಗೆ ಸೇರಿ ಅದರಲ್ಲಿಯೇ ತನ್ನನ್ನು ಬಲಿಪಶುವಾಗಿಸಿಕೊಳ್ಳುತ್ತಿರುವ ಹೆಣ್ಣಿನ ಚಿತ್ರಣವಾಗಿದೆ. ಬಡತನದಲ್ಲಿ ಮೂರು ಮಕ್ಕಳನ್ನು ಸಾಕುತ್ತಿದ್ದರೂ ಹಿರಿಯ ಮಗಳನ್ನು ಕಾರ್ಖಾನೆಗೆ ಕಳುಹಿಸುವ ತೀರ್ಮಾನ ಮಾಡುವ ತಂದೆ ಸಿದ್ದ, ನಾವು ಬಡವರು ಎಷ್ಟೇ ಸಂಪಾದನೆ ಮಾಡಿದರೂ ಜಮೀನು ತಕ್ಕಳಕ್ಕೆ ಆಗಲ್ಲ ಸರೀಕರ ಅಂಗೇ ಬಾಳಾಟ ಮಾಡಕ್ಕೆ ಆಗಲ್ಲ…. ಎಂಬ ಚಿಂತೆಯಲ್ಲಿಯೇ ಇರುತ್ತಾನೆ. ಮದುವೆಯಾಗದ ಹೆಣ್ಣನ್ನು ಹಣದ ಅಮಲಿನಲ್ಲಿ ಸುತ್ತಿ ವ್ಯವಹಾರ ಗಿಟ್ಟಿಸುವ ರಾಮಸ್ವಾಮಿಯಂತಹ ನೀಚರು ಯಾವ ಭಯವೂ ಇಲ್ಲದೆ ಕೃತ್ಯ ಎಸಗುತ್ತಿರುವುದು ಮುಗ್ಧ ತಂದೆ ತಾಯಿಯರಿಗೆ ತಿಳಿಯುವುದೇ ಇಲ್ಲ. ಮಗಳು ರಾಮಸ್ವಾಮಿಯಂತಹ ಕಸುಬುದಾರನ ದಾಳದಲ್ಲಿ ಸಿಲುಕಿ ಸಾವಿರಾರು ರೂಪಾಯಿ ಸಂಪಾದನೆಯ ಒಡತಿಯಾಗಿದ್ದು ,ಅಪ್ಪ ಸೈಟ್ ಯಾವುದಾದರೂ ನೋಡು ಹಣದ ಯೋಚನೆ ಮಾಡಬೇಡ… ಎಂದಾಗ ಆತ ಹಿರಿಹಿರಿ ಹಿಗ್ಗುತ್ತಾನೆ. ಆದರೆ ಇದಕ್ಕೆ ಹೊಂದಿಕೊಂಡಿರುವ ಮಂಗಳಳು ಮೂಳೆಗಾಗಿ ಆಸೆ ಪಡುತ್ತಾಳೆಯೇ ಹೊರತು ನಾಳಿನ ಬಾಳ್ವೆಯ ಬಗ್ಗೆ ಚಿಂತನೆ ಮಾಡುವುದೇ ಇಲ್ಲ. ಇದು ಇಂದಿನ ಸಮಾಜದ ವಿಪರ್ಯಾಸವೇ ಸರಿ.
ಕೊಂಡುಕೊಳ್ಳುವ ಆಟ ಕತೆಯು ಬಾಲ್ಯ ವಿವಾಹದ ಪರಿಣಾಮದ ಸೂಕ್ಷ್ಮತೆಯನ್ನು ಧ್ವನಿಸಿರುವ ಕಥಾನಕವಾಗಿದೆ. ಶಾಲೆಗೆ ಹೋಗುವ ಹುಡುಗೀನ ಪಾನಿಪುರಿ ರುಚಿ ತೋರಿಸಿ ಮರಳು ಮಾಡಿ ತನ್ನ ಬಲಕ್ಕೆ ಬೆಳೆಸಿಕೊಳ್ಳುವ ರಾಮು, ಹುಡುಗಿಗೆ ಬಾಳು ಕೊಡಲು ಮುಂದಾಗುತ್ತಾನೆ. ಇಂತಹ ಕೃತ್ಯಗಳಿಗೆ ಕುಲದವರು ತೀರ್ಮಾನಿಸುವ ನ್ಯಾಯ ಒಪ್ಪತಕ್ಕುದ್ದಲ್ಲ. ತಮಗೆ ಬೇಕಾದ ಹೆಣ್ಣನ್ನು ರಾತ್ರಿನಾಗಿ ಹಟ್ಟಿಯೊಳಗೆ ಕರೆದುಕೊಂಡು ಬೆಳಕು ಬಿದ್ದ ಮೇಲೆ ನ್ಯಾಯ ಸೇರಿಸಿ ಕೊಂಡುಕೊಳ್ಳುವ ಆಟ ಇದು ಎಂದು ಸ್ವಾರಸ್ಯಕರವಾಗಿ ಚಿತ್ರಿಸಿದ್ದಾರೆ. ಅಲ್ಲದೆ ಹದಿನಾರು ವರ್ಷದ ಹುಡುಗಿನ ಮೂವತ್ತು ವರ್ಷದವನಿಗೆ ಕೊಟ್ಟರೆ ಇಂತಹ ಕೊಂಡುಕೊಳ್ಳುವ ಆಟ ನಡಿತಾ ಇರುತ್ತದೆ. ಕೌಟುಂಬಿಕ ಜೀವನವು ಗಂಡು ಹೆಣ್ಣಿನ ಸಮಾನ ಮನಸ್ಸನ್ನು ಪ್ರಭಾವಿಸಿವೆ. ಇದರ ಹೊರತಾದ ಎಷ್ಟೋ ಸಂಬಂಧಗಳು ಗ್ರಾಮದ ನ್ಯಾಯ ತೀರ್ಮಾನದ ಕಟ್ಟಿಯನ್ನು ಬದಿಗೊತ್ತಿ, ನ್ಯಾಯಾಲಯದ ಸುತ್ತಲೂ ಗಿರಕಿ ಹೊಡೆಯಲು ಕಾರಣವಾಗಿದೆ ಎಂಬುದನ್ನು ಇಲ್ಲಿ ತಿಳಿಯಬಹುದು.
ತಮಟೆಯ ನುಡಿ : ಕಾರಂತರ ಚೋಮನನ್ನು ನೆನಪಿಸುವ ಇಲ್ಲಿನ ರಾಮಯ್ಯನು ದೌರ್ಜನ್ಯಕ್ಕೆ ಒಳಗಾದ ಮುಗ್ಧ ವ್ಯಕ್ತಿತ್ವ. ತಮಟೆ ಬಾರಿಸುವ ಕಲೆ ತಿಳಿದಿರುವುದೇ ಆತನ ಮೇಲಿನ ದೌರ್ಜನ್ಯಕ್ಕೆ ಕಾರಣವಾಗಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷನ ಮಗನು ಪರೀಕ್ಷೆಯಲ್ಲಿ ಪಾಸಾದ ಕಾರಣಕ್ಕೆ ದೇವರಿಗೆ ಹರಕೆ ಪೂರೈಸಲು ರಾಮಯ್ಯ ತಮಟೆ ಬಾರಿಸುವ ಕಾಯಕಕ್ಕೆ ಬಾರದಿರುವುದೇ ಈ ಘಟನೆಗೆ ಕಾರಣವಾಗಿದೆ. ಸ್ವಾಮಿ ಎದ್ದು ಬರೋಕು ಕಷ್ಟ ಇನ್ನು ಈ ಬೆರಳು ಹೇಗೆ ನುಡಿಸುತ್ತವೆ ಹೇಳಿ. ಎಲ್ಲಾ ದೇವರಿಗೆ ಸೇರಿದ್ದು, ಇವತ್ತು ಒಂದಿನ ಬಿಡಿ ಸ್ವಾಮಿ…. ಎಂದು ಗೋಗರೆದರು ಶಿಕ್ಷೆಗೆ ಒಳಗಾಗುತ್ತಾನೆ. ಅಧಿಕಾರ ಶಾಹಿಗಳು, ಪಟ್ಟಭದ್ರ ಹಿತಾಶಕ್ತಿಗಳು ನಡೆಸುತ್ತಿರುವ ನಿರಂತರ ದೌರ್ಜನ್ಯಗಳಿಗೆ ರಾಮಯನಂತಹ ಮುಗ್ಧಜನರು, ಮುಖ್ಯ ವಾಹಿನಿಗೆ ಬಾರದೆ ಕತ್ತಲೆಯಲ್ಲಿ ಗೋರಿಯಿಂದ ನನ್ನ ಜನ ಎದ್ದು ಬಂದರು… ಎಂಬ ಆಶಾವಾದದಿಂದಲೇ ನೋವನ್ನು ಅನುಭವಿಸುತ್ತಿದ್ದಾರೆ ಎಂಬ ಭಾವನೆ ಅಭಿವ್ಯಕ್ತಗೊಂಡಿದೆ.
ಕರೀಂ ಸಾಬಿಯ ಪ್ರೀತಿ ಕತೆಯು ಧಾರ್ಮಿಕ ಭೇದವನ್ನು ಮೀರಿ ಪ್ರೀತಿಯನ್ನು ಕಟ್ಟಿ ಕಳಿಸುವ ಪ್ರಯತ್ನವಾಗಿದೆ. ಕರಿಂಸಾಬಿಯನ್ನು ವಿವಾಹವಾಗಿ ಆತನ ಬದುಕನ್ನು ಸುಂದರಗೊಳಿಸಿದವಳು ಕೆಂಪಿ. ಈ ನಿಷ್ಕಲ್ಮಶ ಪ್ರೀತಿಯು ಜಾತಿ ಸಂಪ್ರದಾಯಗಳ ಗೋಡೆಗಳನ್ನು ಮೀರಿ ನಿಲ್ಲುತ್ತದೆ. ಆದರೆ ಆಕಸ್ಮಿಕವಾಗಿ ನಡೆಯುವ ಅಪಘಾತದಿಂದ ಕೆಂಪಿ ಸಾವನ್ನಪುತ್ತಾಳೆ. ಹೀಗೆ ಗೊತ್ತಿಲ್ಲದೆ ಜರಗುವ ಘಟನೆಗಳಿಗೆ ಬಲಿಯಾಗುವ ಮೂಲಕ ಕೆಲವೊಮ್ಮೆ ಪ್ರೀತಿಯು ಸಡಿಲವಾಗುತ್ತದೆ ಎಂಬ ಸಂದೇಶವನ್ನು ಕತೆಗಾರರು ನಿರೂಪಿಸಿದ್ದಾರೆ.
ಒಟ್ಟಿನಲ್ಲಿ ಮೊದಲ ಜೋಡು ಕತೆಯು ಜಾತಿ, ಧರ್ಮ, ಕೌಟುಂಬಿಕ ಚಿತ್ರಣಗಳ ಸುತ್ತಲೂ ಎಣೆದಿರುವ ಹಂದರವಾಗಿದೆ. ಗ್ರಾಮೀಣ ಪರಿಸರದ ನೈಜ ಅನುಭವಗಳು ಇಲ್ಲಿ ಮೇಳೈಸಿವೆ. ಕತೆಗಾರರ ಸೂಕ್ಷ್ಮತೆಗಳು ಅನುಭವದ ಅಭಿವ್ಯಕ್ತಿಯಲ್ಲಿ ರಚನಾತ್ಮಕವಾಗಿ ವಿಸ್ತೃತಗೊಂಡಿದೆ. ಪ್ರಸ್ತುತ ದಲಿತರ ಮೇಲೆ, ಮಹಿಳೆಯರ ಮೇಲೆ, ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳಂತಹ ಕೃತ್ಯಗಳನ್ನು ಪ್ರತಿಭಟನೆ ಇಲ್ಲದೆ ಧ್ವನಿಸಿದ್ದಾರೆ. ಶಿಕ್ಷಣ ಪಡೆದ ದಲಿತನು ಇನ್ನೂ ಮೌನವಾಗಿಯೇ ಇರುವುದು ಇಲ್ಲಿನ ದೌರ್ಬಲ್ಯ. ಬದುಕು ವಿಶಾಲವಾದಂತೆ, ಶೋಷಿತ ಅಶೋತ್ತರಗಳು, ಪ್ರತಿಭಟನೆ ನೆಲೆಯಲ್ಲಿ ರೂಪುಗೊಳ್ಳಬೇಕು ಎಂಬ ನಿಜ ಸಂಗತಿಯನ್ನು ಇಲ್ಲಿನ ಕತೆಗಳ ಮೂಲಕ ಓದುಗನು ಅರಿಯುವಂತಾಗಬೇಕು. ಈ ಹಿನ್ನೆಲೆಯಲ್ಲಿ ಮುಧುಕರ ಮಳವಳ್ಳಿ ಅವರು ಓದುಗರನ ಸೂಕ್ಷ್ಮಪ್ರಜ್ಞೆಯನ್ನು ಓರೆ ಹಚ್ಚುವ ಪ್ರಯತ್ನವನ್ನು ತಮ್ಮ ಕಥೆಗಳಲ್ಲಿ ಮಾಡಿದ್ದಾರೆ, ಯಶಸ್ವಿ ಕೂಡ ಆಗಿದ್ದಾರೆ.
ಶಿವಕುಮಾರ ಸರಗೂರು

