ಮಿಂಚು: ಶೇಖರಗೌಡ ವೀ ಸರನಾಡಗೌಡರ್

ಸದ್ಭವ್ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಅಧಿಕಾರಿಯಾಗಿ ಕೆಲಸಕ್ಕೆ ಸೇರಿ ನಾಲ್ಕು ವರ್ಷಗಳಾಗಿದ್ದವು. ಗ್ರಾಮೀಣ ಸೇವೆಗೆ ಅಂತ ತಾಲೂಕು ಕೇಂದ್ರಕ್ಕೆ ಹತ್ತು ಕಿಮೀ ದೂರದಲ್ಲಿದ್ದ ಹಳ್ಳಿ ಶಾಖೆಗೆ ಶಾಖಾ ವ್ಯವಸ್ಥಾಪಕನೆಂದು ವರ್ಗವಾಗಿತ್ತು. ಐದಾರು ಸಾವಿರ ಜನಸಂಖ್ಯೆಯ ಹೋಬಳಿ ಕೇಂದ್ರ ಅದಾಗಿತ್ತು. ಸದ್ಭವ್ ತಾಲೂಕು ಕೇಂದ್ರದಲ್ಲಿ ರೂಮೊಂದನ್ನು ಮಾಡಿಕೊಂಡು ಬೈಕಲ್ಲಿ ಓಡಾಡುತ್ತಿದ್ದ. ಆ ಶಾಖೆಗೆ ಹೋಗಿ ಐದಾರು ತಿಂಗಳುಗಳಾಗಿದ್ದವೇನೋ? ಅದೊಂದು ದಿನ ಉಳಿತಾಯ ಖಾತೆಯನ್ನು ತೆಗೆಯಲು ಅರ್ಜಿಯನ್ನು ತುಂಬಿಕೊಂಡು ತಂದಿದ್ದ ಸುಂದರ ತರುಣಿಯೊಬ್ಬಳು ಅವನ ಚೇಂಬರಿಗೆ ಬಂದಾಗ ಅವನೆದೆಯಲ್ಲಿ ಮಿಂಚೊಂದು ಸುಳಿದಂತಾಗಿತ್ತು. 
"ಸರ್, ನಾನು ಇದೇ ಊರಿನವಳು. ಧಾರವಾಡದಲ್ಲಿ ಬಿಎಸ್ಸಿ ಅಂತಿಮ ವರ್ಷದಲ್ಲಿ ಓದುತ್ತಿದ್ದೇನೆ. ಉಳಿತಾಯ ಖಾತೆ ಓಪನ್ ಮಾಡಬೇಕಿದೆ."
"ಹೌದಾ? ಕುಳಿತುಕೊಳ್ಳಿರಿ."
"ಥ್ಯಾಂಕ್ಸ್ ಸರ್" ಎಂದೆನ್ನುತ್ತಾ ಯುವತಿ ಕುಳಿತುಕೊಂಡಳು.
"ನಿಮ್ಮ ಹೆಸರು...?"
"ಮಿಂಚು." ಸದ್ಭವನೆದೆಯಲ್ಲಿ ಮಿಂಚಿನ ಸೆಳಕನ್ನು ಹರಿಸಿದವಳ ಹೆಸರು ಮಿಂಚು. ಮನದೊಳಗೇ ಬೀಗಿದ, ಖುಷಿಪಟ್ಟ. ಅವಳ ಸೌಂದರ್ಯ ಅವನೆದೆಯಲ್ಲಿ ಗಟ್ಟಿಯಾಗಿ ನಿಂತುಬಿಟ್ಟಿತು. 
"ಏನು, ಏನಂದಿರಿ...?"
"ಅದೇ ಸರ್, ಮಿಂಚು."
ಸದ್ಭವ್ ಅವಳ ಅರ್ಜಿಯನ್ನು ಪರಿಶೀಲಿಸಿದ. `ಮಿಂಚು ತಂದೆ ಚೆನ್ನಮಲ್ಲಪ್ಪ' ಎಂದಿತ್ತು. 
"ಅಂದರೆ ನೀವು ನಮ್ಮ ಬ್ಯಾಂಕಿನ ಕಟ್ಟಡದ ಮಾಲಕರಾದ ಸಾಹುಕಾರ್ ರಾಜಶೇಖರಪ್ಪ ಅವರ ಅಣ್ಣ ಚೆನ್ನಮಲ್ಲಪ್ಪನವರ ಮಗಳೇನ್ರಿ...?"
"ಹೌದು ಸರ್." 
"ನನಗೆ ನಿಮ್ಮ ತಂದೆಯವರು, ಚಿಕ್ಕಪ್ಪ ಇಬ್ಬರೂ ಪರಿಚಯ. ನಾನು ಸಾಕಷ್ಟು ಸಾರೆ ನಿಮ್ಮ, ನಿಮ್ಮ ಚಿಕ್ಕಪ್ಪನವರ ಮನೆಗೆ ಬಂದಿದ್ದೇನೆ. ಆದರೆ ಇದುವರೆಗೂ ನಿಮ್ಮ ಪರಿಚಯವೇ ಆಗಿಲ್ಲವಲ್ಲರೀ...?"
"ಬಹುಶಃ ನಾನು ಹುಬ್ಬಳ್ಳಿಯಲ್ಲಿದ್ದಾಗ ನೀವು ಬಂದು ಹೋಗಿರಬಹುದು..."
"ನಿಮ್ಮ ಹೆಸರು ಸೂಪರ್ ಕಣ್ರೀ...?" `ನಿಮ್ಮ ಹೆಸರಿನಷ್ಟೇ ನೀವೂ ಚೆಂದ, ನಿಮ್ಮ ಮಾತೂ ಚೆಂದ. ತುಂಬಾ ಮುದ್ದುಮುದ್ದಾಗಿರುವಿರಿ.' ತುದಿ ನಾಲಿಗೆಯವರೆಗೆ ಬಂದಿದ್ದ ಮಾತುಗಳನ್ನು ಹೇಗೋ ತಡೆದುಕೊಂಡ ಸದ್ಭವ್. 
"ನಿಮ್ಮ ಹೆಸರೂ ಹಾಗೇ ಬಿಡ್ರಿ. ತುಂಬಾ ಸೂಪರ್." `ಲೇಟೆಸ್ಟ್ ಟ್ರೆಂಡಿನ ನಿಮ್ಮ ಹೆಸರೂ ತುಂಬಾ ಇಷ್ಟವಾಯಿತು. ನೀವೂ ಸಕತ್ ಹ್ಯಾಂಡ್ಸಮ್. ನಿಮ್ಮ ಮಾತೂ ತುಂಬಾ ಆತ್ಮೀಯ, ಆಪ್ತ ಎಂದೆನಿಸುತ್ತಿವೆ. ಸಿಂಪ್ಲೀ ಸೂರ್ಬ್.' ಮಿಂಚು ಮನದೊಳಗೇ ಗುನುಗಿಕೊಂಡಳು. 
"ಏನೋ ಗುನುಗಿಕೊಂಡಂಗಾತಲ್ರೀ...?" 
"ಏನು, ಏನೂ ಇಲ್ಲ ಬಿಡ್ರಿ. ನೀವೂ ಆಗಲೇ ಏನೋ ಗುನುಗಿಕೊಂಡಂಗಾತಲ್ರೀ...?" 
"ನಾನೂ ಏನೂ ಗುನುಗಿಕೊಳ್ಳಲಿಲ್ಲ." 
ನಾಮಿನೇಶನ್ ವಿವರಗಳನ್ನು ತುಂಬಿಸಿಕೊಂಡು ಅರ್ಜಿ ಫಾರ್ಮನ್ನು ತೆಗೆದುಕೊಳ್ಳುವ ಧಾವಂತದಲ್ಲಿದ್ದಾಗ ಇಬ್ಬರ ಕೈ ಬೆರಳುಗಳು ಪರಸ್ಪರ ಸ್ಪರ್ಶಿಸಿದವು. ಮಿಂಚುವಿನ ಮೃದು ಬೆರಳುಗಳ ಸ್ಪರ್ಶ ಸದ್ಭವನೆದೆಯಲ್ಲಿ, ಸದ್ಭವನ ಬೆರಳುಗಳ ಸ್ಪರ್ಶ ಮಿಂಚುವಿನೆದೆಯಲ್ಲಿ ಕೋಲ್ಮಿಂಚಿನ ಸೆಳಕಿನ ಅನುಭವ ಸೃಷ್ಟಿಸಿತ್ತು. 
ಸದ್ಭವ್ ಪೀವನ್ ರಾಮೂನನ್ನು ಕರೆದು ಫಾರಂನ್ನು ಕ್ಯಾಶ್ ಕೌಂಟರಿನಲ್ಲಿ ಕೊಡಲು ಹೇಳಿದ. 
"ಮಿಂಚು ಅವರೇ, ನೀವು ಮನೆಗೆ ಹೋಗುವುದಾದರೆ ಹೋಗಿರಿ. ರಾಮೂನ ಜೊತೆಗೆ ಪಾಸ್ ಪುಸ್ತಕ ಕಳುಹಿಸಿ ಕೊಡುವೆ." 
"ನಾನೇ ಪಾಸ್ ಬುಕ್ ತೆಗೆದುಕೊಂಡು ಹೋಗಬೇಕೆಂದಿದ್ದೆ. ನಿಮ್ಮ ಆಕ್ಷೇಪಣೆ ಇಲ್ಲದಿದ್ದರೆ ನಾನು ಇಲ್ಲೇ ಕುಳಿತುಕೊಳ್ಳುವೆ. ನಾನಿಲ್ಲಿ ಕುಳಿತುಕೊಳ್ಳುವುದರಿಂದ ನಿಮ್ಮ ಕೆಲಸ ಕಾರ್ಯಗಳಿಗೆ ಅಡ್ಡಿಯಾಗುವಂತಿದ್ದರೆ ಹೊರಗಡೆ ಕುಳಿತುಕೊಳ್ಳುವೆ." ಮಿಂಚು ತಕ್ಷಣ ಪ್ರತಿಕ್ರಿಯಿಸಿದ್ದಳು. ಆಗ ಬ್ಯಾಂಕಿನಲ್ಲಿ ಅಂಥಹ ಗದ್ದಲವೇನಿರಲಿಲ್ಲ. ಸದ್ಭವನನ್ನು ಕಾಣಲು ಬೇರೆ ಗ್ರಾಹಕರೂ ಕ್ಯಾಬಿನ್ನ ಹೊರಗಡೆ ಕಾಯುತ್ತಿರಲೂ ಇರಲಿಲ್ಲ.
"ಅರೇರೇ! ನಾನು ಆ ಭಾವನೆಯಲ್ಲಿ ನಿಮಗೆ ಮನೆಗೆ ಹೋಗಲು ಹೇಳಲಿಲ್ಲ. ಬ್ಯಾಂಕಿನ ಪ್ರಮುಖ ಗ್ರಾಹಕರಿಗೆ ಕೊಡುವ ಮರ್ಯಾದೆಯನ್ನು ನಿಮಗೂ ಕೊಡುವ ದಿಶೆಯಲ್ಲಿ ಆ ರೀತಿ ಹೇಳಿದೆ. ನಿಮ್ಮ ಅತ್ಯಮೂಲ್ಯ ಸಮಯ ಸದ್ವಿನಿಯವಾಗಲಿ ಎಂದು ಆ ರೀತಿ ಹೇಳಿದೆ. ನನ್ನ ಮಾತನ್ನು ನೀವು ತಪ್ಪಾಗಿ ಭಾವಿಸಿಕೊಂಡಂತಿದೆ...?" ಸದ್ಭವ್ ಮಿಂಚುವಿನ ಮುಖವನ್ನು ತದೇಕ ಚಿತ್ತದಿಂದ ದಿಟ್ಟಿಸುತ್ತಾ ಹೇಳಿದ. 
"ಹಾಗೇನಿಲ್ಲ, ಸಾರಿ ಸರ್" ಎಂದ ಮಿಂಚುವಿಗೆ ಸದ್ಭವನ ದೃಷ್ಟಿ ಎದುರಿಸಲಾಗಲಿಲ್ಲ.
ಸದ್ಭವ್ ಮಿಂಚುವಿನ ಚೆಲುವನ್ನೇ ಕಣ್ಮನಗಳಲ್ಲಿ ತುಂಬಿಕೊಳ್ಳತೊಡಗಿದ್ದ. ಈಗ ಹಳ್ಳಿಗಳಲ್ಲೂ ಹರೆಯದ ಹುಡುಗಿಯರು ಮಾಡ್ ಮಾಡ್ ಡ್ರೆಸ್ಗಳಲ್ಲಿ ಮಿಂಚುತ್ತಿರುವುದನ್ನು ದಿನಾಲೂ ಗಮನಿಸುತ್ತಿದ್ದ. ಯಾವ ಹುಡುಗಿಯನ್ನು ನೋಡಿದರೂ ಲೆಗ್ಗಿನ್ಸ್, ಜೀನ್ಸ್, ಟೈಟ್ಸ್ಗಳಲ್ಲಿ ತಮ್ಮ ಸೌಯಂದರ್ಯವನ್ನು ಢಾಳಾಗಿ ಬಿಂಬಿಸಲು ಪ್ರಯತ್ನಿಸುತ್ತಿರುವುದು ಸಾಮಾನ್ಯವಾಗಿತ್ತು. ನಾಲ್ಕಾರು ವರ್ಷಗಳ ಹಿಂದೆ ಬರೀ ನಗರಗಳಿಗೆ ಸೀಮಿತವಾಗಿದ್ದ ಈ ತರಹದ ಡ್ರೆಸ್ಗಳು ಈಗ ಹಳ್ಳಿಗಳಿಗೂ ಲಗ್ಗೆ ಇಟ್ಟಿವೆ. ಹಸಿರು ಬಣ್ಣದ ಸೀರೆಯಲ್ಲಿ ವನದೇವತೆಯಂತೆ ಮುದ್ದುಮುದ್ದಾಗಿ ಮಿಂಚುತ್ತಿದ್ದ ಮಿಂಚು ವಿಶೇಷವೆನಿಸಿದಳು. ನಾರಿಗೆ ಸೀರೆಯ ಭೂಷಣ ಎಂಬ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಸೀರೆ ಎಂದರೆ ಅವನಿಗೆ ತುಂಬಾ ಇಷ್ಟದ ಉಡುಗೆ. 
"ಮಿಂಚು, ನಿಮಗೆ ಸೀರೆ ತುಂಬಾ ಇಷ್ಟವಾದ ಉಡುಗೆಯೇ...?" ಎಂದು ಥಟ್ಟಂತ ಕೇಳಿಬಿಟ್ಟ. ಆಮೇಲೆ ಅದೇಕೋ, `ಕೇಳಬಾರದಿತ್ತೇನೋ?' ಎಂದು ಮನದಲ್ಲಿ ಮಥಿಸಿಕೊಳ್ಳಲು ಮುಂದಾದ.
"ಸರ್, ಮೊದಲು ನಿಮ್ಮ ಅಭಿಪ್ರಾಯ ಹೇಳಿರಿ. ನಂತರ ನನ್ನ ಇಷ್ಟಾನಿಷ್ಟಗಳ ಬಗ್ಗೆ ಹೇಳುವೆ." ಮಿಂಚುವಿನ ಹೇಳಿಕೆ ತುಂಟತನದಿಂದ ಕೂಡಿತ್ತು.
"ನನಗಂತೂ ಸೀರೆ ಅಂದರೆ ತುಂಬಾ ಇಷ್ಟ ಕಣ್ರೀ" ಎಂದ ತುಟಿಯಲ್ಲಿ ನಗೆ ಹನಿ ಸೂಸುತ್ತಾ. ಮಿಂಚುವಿನ ಕಣ್ಣುಗಳಲ್ಲಿ ನಕ್ಷತ್ರಗಳ ಹೊಳಪು ಕಾಣತೊಡಗಿತ್ತು.
"ನಿಮ್ಮ ಇಷ್ಟಕ್ಕೆ ಮೊದಲು ಧನ್ಯವಾದಗಳು. ನನಗೂ ಸೀರೆ ಅಂದರೇನೇ ತುಂಬಾ ಇಷ್ಟ" ಎಂದಳು ಮಿಂಚು ನಗೆ ಮಲ್ಲಿಗೆಯಂಥಹ ತನ್ನ ದಂತಪಂಕ್ತಿಗಳನ್ನು ಪ್ರದರ್ಶಿಸುತ್ತಾ. ಹಾಗೇ ಕೆನ್ನೆಗಳನ್ನು ತುಂಟತನದಿಂದ ಮುತ್ತಿಕ್ಕುತ್ತಿದ್ದ ಮುಂಗುರುಳನ್ನು ಪಕ್ಕಕ್ಕೆ ಸರಿಸುವ ಹರಸಾಹಸ ನಡೆಸಿದ್ದಳು. 
"ಮತ್ತೆ ಕಾಲೇಜಿನಲ್ಲಿ ಸೀರೆಯೇ ನಿಮ್ಮ ದಿನನಿತ್ಯದ ಉಡುಗೆಯೇ...?"
"ಬಹಳಷ್ಟು ದಿನಗಳಲ್ಲಿ ಸೀರೆಯೇ. ಆದರೂ ಆಗೊಮ್ಮೆ, ಈಗೊಮ್ಮೆ ಲೆಗ್ಗಿನ್ಸ್, ಚೂಡಿ, ಜೀನ್ಸ್ ಕೂಡಾ ನನ್ನ ಮೈಯನ್ನು ಅಪ್ಪಿಕೊಳ್ಳುತ್ತಿರುತ್ತವೆ. ನಿಮಗೆ ಈ ಲೇಟೆಸ್ಟ್ ಟ್ರೆಂಡಿನ ಡ್ರೆಸ್ಗಳು ಇಷ್ಟವಾಗುತ್ತವೆಯೇ...?"
"ಹೂಂ, ಇಷ್ಟವೇ. ಆದರೆ ಅವೇ ಮುಖ್ಯವಾಗಬಾರದು ಅಷ್ಟೇ."
"ನಿಮ್ಮ ಮುಕ್ತ ಅಭಿಪ್ರಾಯ ಇಷ್ಟವಾಯಿತು." 
ಅಷ್ಟರಲ್ಲಿ ರಾಮು ಅವಳ ಪಾಸ್ ಬುಕ್ ತಂದು ಸದ್ಭವನ ಕೈಗೆ ಕೊಟ್ಟ. ಪಾಸ್ ಬುಕ್ಗೆ ಅಂಟಿಸಿದ್ದ ಪಾಸ್ ಪೋರ್ಟ್ ಸೈಜಿನ ಫೋಟೋದಲ್ಲಿ ಮಿಂಚು ಹಳದಿ ಸೀರೆಯಲ್ಲಿ ಮಿಂಚುತ್ತಿದ್ದಳು. ಪಾಸ್ ಬುಕ್ ಕೈಗೆತ್ತಿಕೊಂಡು ಧನ್ಯವಾದ ಹೇಳುತ್ತಾ ಮಿಂಚು ಅಲ್ಲಿಂದ ಹೊರಟಳು. ತನ್ನ ಕುರ್ಚಿಯಿಂದ ಎದ್ದು ಬಂದು ಸದ್ಭವ್ ಅವಳನ್ನು ಬೀಳ್ಕೊಟ್ಟ. ನಗೆ ಮಲ್ಲಿಗೆ ಚೆಲ್ಲುತ್ತಾ, ಸೀರೆಯ ನೆರಿಗೆಗಳನ್ನು ಲಯಬದ್ಧವಾಗಿ ಚಿಮ್ಮುತ್ತಾ, ಹಸಿರುಡಿಗೆಯ ವನದೇವತೆಯಂತೆ ಮಿಂಚು ನವಿಲಿನ ನಡಿಗೆಯಲ್ಲಿ ಮೆಲ್ಲಗೇ ಹೊರಟಳು. ಅವಳನ್ನೇ ದೃಷ್ಟಿಸತೊಡಗಿದ ಸದ್ಭವ್. ಅಲ್ಲಿಂದ ಮರೆಯಾಗುವಾಗ ಮಿಂಚು ಕೊನೆಗೊಮ್ಮೆ ಸದ್ಭವನೆಡೆಗೆ ಮಿಂಚಿನ ನಗೆ ಹರಿಸಿ ಕಣ್ಮರೆಯಾದಳು. ಮಿಂಚು ಅಂದು ಬ್ಯಾಂಕಲ್ಲಿ ಉಳಿತಾಯ ಖಾತೆ ತೆರೆದಂತೆ ಸದ್ಭವನ ಹೃದಯದಲ್ಲಿ ಪ್ರೀತಿಯ ಖಾತೆಯನ್ನೂ ತೆರೆದಳು. 
                    ****

ಆ ರಾತ್ರಿ ಮಿಂಚು ಸದ್ಭವನ ಮನಸ್ಸಿನಲ್ಲಿ ತೂರಿಕೊಂಡು ಒಂದಿಷ್ಟು ಕಾಡಿಸಿದಳು. ಇಪ್ಪತ್ತಾರು ವಸಂತಗಳನ್ನು ಕಂಡ ಏರು ಜವ್ವನದ ಸ್ಫುರದ್ರೂಪಿ ಹುಡುಗ ಸದ್ಭವ್. ಯೌವ್ವನ ಹಸಿರಾದ ಹೂಬನವಿದ್ದಂತೆ ಅಲ್ಲವೇ? ಹೂವುಗಳನ್ನು ಮುತ್ತಿಕ್ಕಲು ಬರುವ ದುಂಬಿಗಳು ಸೃಷ್ಟಿಸುವ ಮಧುರ ಗಾನದ ಝೇಂಕಾರ ಭಾವ ಅವನೆದೆಯೊಳಗೆ ಆಗಾಗ ಕೇಳಿ ಬರುತ್ತಿರುವುದೂ ಸಾಮಾನ್ಯವಾಗಿತ್ತು. ಅಂದೇಕೋ ಅವನೆದೆಯಲ್ಲಿ ಮಧುರ ಗಾನದ ಝೇಂಕಾರ ಭಾವ ಮತ್ತೊಮ್ಮೆ, ಮಗದೊಮ್ಮೆ ರಿಂಗಣಿಸತೊಡಗಿತು ಎಡಬಿಡದೇ. `ಇದು ಹೀಗೇಕೆ ಇಂದು...?' ಎಂದು ತನ್ನೊಳಗೇ ಸದ್ಭವ್ ಪ್ರಶ್ನಿಸಿಕೊಂಡಾಗ, `ಓಹೋ, ಇದು ಮಿಂಚಿನಂತೆ ಬಂದು ಮರೆಯಾದ ಸೌಂದರ್ಯ ದೇವತೆ ಮಿಂಚುವಿನ ಪ್ರಭಾವವಿರಬೇಕು' ಎಂದು ಮನದೊಳಗೇ ನಕ್ಕ ಸದ್ಭವ್. ಹಸಿರು ಸೀರೆಯಲ್ಲಿ ಮಿಂಚುತ್ತಿದ್ದ ಮಿಂಚುವಿನ ಚೆಲುವಿನ ಮುಖಾರವಿಂದ ಅವನ ಕಣ್ಮನಗಳ ಮುಂದೆ ಸುಳಿದಾಡಿತು. 
ಅವನ ಅಪ್ಪ-ಅಮ್ಮ ಆಗಲೇ ಸದ್ಭವನ ಮದುವೆಗಾಗಿ ದುಂಬಾಲು ಬೇರೆ ಬಿದ್ದಿದ್ದರು. ಇನ್ನೂ ಒಂದೆರಡು ವರ್ಷ ಸಂಸಾರ, ಹೆಂಡತಿ, ಮಕ್ಕಳು-ಮರಿಗಳ ಜಂಜಾಟದಿಂದ ದೂರ ಇರಬೇಕಿಂದಿದ್ದ ಸದ್ಭವ್ ತನ್ನ ಮನದಲ್ಲಿದ್ದುದನ್ನು ಹೆತ್ತವರಿಗೆ ತಿಳಿಸಿದ್ದನಾದರೂ ಹೆತ್ತವರಿಗೆ ಆದಷ್ಟು ಬೇಗ ಮದುವೆ ಮಾಡಿಬಿಡಬೇಕೆಂಬ ಹಂಬಲವಿದ್ದುದು ಸಹಜವೇ. ದಸರಾ ಹಬ್ಬಕ್ಕೆಂದು ನಾಲ್ಕು ದಿನಗಳ ರಜೆಯ ಮೇಲೆ ಊರಿಗೆ ಹೋಗಿದ್ದಾಗ ಅಪ್ಪ-ಅಪ್ಪನ ಒತ್ತಾಯಕ್ಕೆ ಮೂರು ಜನ ಕನ್ಯಾಮಣಿಗಳನ್ನು ನೋಡಿ ಬಂದಿದ್ದ. ಇಬ್ಬರು ಹುಡುಗಿಯರಂತೂ ರತಿ ವರ್ಚಸ್ಸಿನವರೇ ಇದ್ದರು. ಆದರೂ ಅದೇಕೋ ಅವರು ಇವನ ಮನಸ್ಸನ್ನು ತುಂಬಲಿಲ್ಲ. `ಇಂಥಾ ಚೆಂದದ ಹುಡುಗೇರೂ ನಿನ್ನ ಮನಸ್ಸಿಗೆ ಬರಲಿಲ್ಲವೆಂದರೆ ಅದೆಂಥ ಹುಡುಗೀನ ಮದುವೆಯಾಗಲು ಇಷ್ಟ ಪಡುವಿಯೋ ಏನೋ? ನಮಗೊಂದೂ ಅರ್ಥವಾಗುತ್ತಿಲ್ಲ? ಮದುವೆಯನ್ನು ಮುಂದೆ ಹಾಕುವ ಹುನ್ನಾರ ನಿನ್ನದು ಅಷ್ಟೇ' ಎಂದು ತುಸು ಕೋಪಿಸಿಕೊಂಡೇ ಹೇಳಿದ್ದಳು ಅವನ ತಾಯಿ. ತಾಯಿಯ ಮನದಲ್ಲಿದ್ದ ನೋವಿನ ಎಳೆಯನ್ನು ಸದ್ಭವ್ ಗುರುತಿಸದೇ ಇರಲಿಲ್ಲ. ಆದರೂ ಮಾತಿಗೆ ಮಾತು ಬೆಳಸದೇ ಅಷ್ಟಕ್ಕೇ ಮೌನವಾಗಿದ್ದ. 
ಇಂದು ಮಿಂಚು ಮೊದಲ ಭೇಟಿಯಲ್ಲೇ ಅವನ ಹೃದಯದೊಳಗೆ ಎಂಟ್ರಿ ಹೊಡೆದಿದ್ದಳು ಅವನಿಗರಿವಿಲ್ಲದಂತೆ. `ಅದೇನೋ ಗೊತ್ತಿಲ್ಲ, ಈ ಹುಡುಗಿ ಮೊದಲ ನೋಟದಲ್ಲೇ ನನ್ನೆದೆಯಲ್ಲಿ ಪ್ರೀತಿಯ ತಲ್ಲಣಗಳನ್ನು ಸೃಷ್ಟಿಸುತ್ತಿದ್ದಾಳಲ್ಲ...? ಹೃದಯದಲ್ಲಿ ಮಧುರ ಭಾವನೆಗಳನ್ನು ಬಿತ್ತುತ್ತಿದ್ದಾಳಲ್ಲ...? ಅದೇನೋ ಹೇಳ್ತಾರಲ್ಲ, ಲವ್ ಅಟ್ ಫಸ್ಟ್ ಸೈಟ್ ಅನ್ನೋದು ಇದಕ್ಕೇನಾ? ಪ್ರೀತಿ ಅಂದರೆ ಇದೇನಾ...? ಕಾಲೇಜಿನ ದಿನಗಳಲ್ಲಿ, ಉದ್ಯೋಗ ಪರ್ವದಲ್ಲಿ ನಾನೂ ಸಾಕಷ್ಟು ಚೆಲುವೆಯರನ್ನು ನೋಡಿದ್ದೇನೆ. ಯಾರೂ ಎದೆಯೊಳಗೆ ಇಳಿದು ಮನಸ್ಸನ್ನು ಕೆಣಕಲಿಲ್ಲ. ಕಾಲೇಜಿನಲ್ಲಿ ಶ್ರೀಮಂತ ಮನೆತನದ ಚೆಲುವೆಯೊಬ್ಬಳು ನನ್ನ ಮನಸ್ಸನ್ನು ಕದಿಯಲು ಶತಪ್ರಯತ್ನ ಮಾಡಿದರೂ ನಾನು ಅವಳ ಬೇಡಿಕೆಯನ್ನು ನಯನಾಜೂಕಿನಿಂದ ತಿರಸ್ಕರಿಸಿದೆನಲ್ಲವೇ...? `ಬಡವ, ನೀ ಮಡಗಿದಲ್ಲಿರು' ಎಂಬುದು ನನಗೆ ಚೆನ್ನಾಗೇ ಗೊತ್ತಿದೆ. ಬ್ಯಾಂಕಲ್ಲಿ ಅಧಿಕಾರಿಯಾಗಿ ಸೇರಿದ ನಂತರ ನನ್ನದೇ ಬ್ಯಾಚಿನಲ್ಲಿರುವ ಮೂವರು ಲಲನಾಮಣಿಯರು ನನ್ನನ್ನು ಬುಟ್ಟಿಗೆ ಹಾಕಿಕೊಳ್ಳಲು ಪ್ರಯತ್ನಿಸಿದ್ದರು. ನಾನು ನಯವಾಗಿ ಅವರ ಬೇಡಿಕೆಗಳನ್ನು ತಿರಸ್ಕರಿಸಿದ್ದೆ. 
ಆದರೆ ಈ ಮಿಂಚೂ...? ಅಬ್ಬಬ್ಬಾ! ಬಹಳ ದಿನಗಳಿಂದ ಪರಿಚಯವಿದೆ ಎಂಬಂತೆ ನನ್ನೊಂದಿಗೆ ಮುಕ್ತವಾಗಿ, ಆತ್ಮೀಯವಾಗಿ, ಅಪ್ಯಾಯಮಾನವಾಗಿ ಮಾತಾಡಿದಳಲ್ಲ? ಅವಳ ರೂಪ-ಲಾವಣ್ಯ, ಉಡುಗೆ-ತೊಡುಗೆ, ಹಾವ-ಭಾವ, ಮಾತುಕತೆ, ನೋಟ ಎಲ್ಲವೂ ಮೊದಲ ಮಳೆ ಧರೆಗಿಳಿದು ಭೂದೇವಿಯನ್ನು ತೃಪ್ತಿಪಡಿಸುವಂತೆ ನನ್ನೆದೆಗೆ ಇಳಿದು ನನ್ನ ನಿರೀಕ್ಷೆಯ ಭಾವನೆಗಳಿಗೆ ಇಂಬುಕೊಡುತ್ತಿರುವಳಲ್ಲ...?' ಹೀಗೆ ಏನೇನೋ ಹೊಸ ಭಾವನೆಗಳ ಪುಳಕ ಸದ್ಭವನೆದೆಯೊಳಗೆ ಪ್ರವಹಿಸತೊಡಗಿದ್ದವು. 
ಸದ್ಭವನಿಗೆ ಮಿಂಚು ಮೋಡಿಮಾಡಿದಂತೆ ಮಿಂಚುಗೆ ಸದ್ಭವನೂ ಮೋಡಿಮಾಡಿದ್ದ. `ಇಂದು ಹೀಗೇಕಾಗುತ್ತಿದೆ...? ಮನಸ್ಸು ನಿಂತಲ್ಲಿ ನಿಲ್ಲದೊಲ್ಲದಲ್ಲ? ಈ ಮನಸ್ಸು ಅದೇಕೆ ಇಷ್ಟು ಮೊಂಡ ಆಗುತ್ತಿದೆ...? ಬೇಡವೆಂದು ದೂರವಿಟ್ಟರೂ ಸದ್ಭವನ ಮುಖ ನೆನಪಿನ ಅಲೆಯೊಳಗೆ ಸುಳಿಯಾಗಿ ಸುತ್ತುತ್ತಲೇ ಇದೆಯಲ್ಲ...? ಬೀಸೋಗಾಳಿ ನನ್ನೊಳಗಿನ ಪ್ರೀತಿಗೆ ಉಸಿರು ನೀಡಿರುವ ಹಾಗಿದೆಯಲ್ಲ...? ಆ ಪ್ರೀತಿಯ ಪ್ರತಿ ಉಸಿರಲ್ಲಿ ಸದ್ಭವ್ ಕಾಣುತ್ತಿರುವರಲ್ಲ...?' ಹೀಗೆ ಒಂದಿಷ್ಟು ಯೋಚನೆಗಳು ಮಿಂಚುವಿನ ಮನದಲ್ಲಿ ಸುಳಿದಾಡಿ ಅವಳೆದೆಯಲ್ಲಿ ಕಚಗುಳಿ ಇಟ್ಟಿದ್ದೂ ನಿಜ. 
ಪ್ರತಿ ಸೋಮವಾರದಂತೆ ಅಂದೂ ಬ್ಯಾಂಕಿನಲ್ಲಿ ಗ್ರಾಹಕರ ಜನಸಂದಣಿ ಹೆಚ್ಚೇ ಇತ್ತು. ಮಧ್ಯಾಹ್ನ ಒಂದೂವರೆಯಾಗಿತ್ತು. ಅಷ್ಟರಲ್ಲಿ ಮಿಂಚು ಅವನ ಕ್ಯಾಬಿನ್ನಲ್ಲಿ ಪ್ರತ್ಯಕ್ಷಳಾದಳು. ಇಂದು ಅವನ ಫೇವರೈಟ್ ಹಳದಿ ಸೀರೆಯಲ್ಲಿ ತನ್ನ ಚೆಲುವನ್ನು ಇಮ್ಮಡಿಸಿಕೊಂಡು ಬಂದಿದ್ದಳು. ನಗುಮೊಗದಿಂದ ಸದ್ಭವ್ ಅವಳನ್ನು ಸ್ವಾಗತಿಸಿದ. ನಮಸ್ಕಾರ, ಪ್ರತಿ ನಮಸ್ಕಾರಗಳ ನಂತರ ಮಿಂಚು ಮಾತಿಗೆ ಮುಂದಾಗಿದ್ದಳು.
"ಸರ್, ನನ್ನ ಖಾತೆಗೆ ಒಂದಿಷ್ಟು ಹಣವನ್ನು ಜಮಾ ಮಾಡಬೇಕಿದೆ. ನಾಳೆ ಹುಬ್ಬಳ್ಳಿಗೆ ಹೊರಡುವವಳಿದ್ದೇನೆ. ಹುಬ್ಬಳ್ಳಿಗೆ ಹೋದ ನಂತರ ಬೇಕಿದ್ದಷ್ಟು ಹಣವನ್ನು ಏಟಿಎಮ್ನಿಂದ ಡ್ರಾಮಾಡಿಕೊಳ್ಳುವೆ. ಪ್ರತಿ ಸಾರೆಯಂತೆ ಹಣವನ್ನು ಪರ್ಸಲ್ಲೇ ಇಟ್ಟುಕೊಂಡು ಹೋಗುವ ಜಂಜಾಟವಿಲ್ಲ" ಎಂದಳು ಹಸನ್ಮುಖಿಯಾಗಿ. 
"ಹೌದೇ...? ಹಣ ಕೊಡಿ" ಎಂದೆನ್ನುತ್ತಾ ಹಣ ಜಮಾಮಾಡುವ ವೋಚರನ್ನು ಸದ್ಭವ್ ತಾನೇ ಬರೆದು ಅವಳಿಂದ ಸಹಿ ಪಡೆದು ರಾಮೂನನ್ನು ಕರೆದು ವೋಚರ್ ಮತ್ತು ಹಣ ಕೊಟ್ಟು ಕಳುಹಿಸಿದ. ನಂತರ ಪಾಸ್ ಬುಕ್ ಎಂಟ್ರಿ ಮಾಡಿಸಿಕೊಟ್ಟ.
"ಮಿಂಚು, ಮತ್ಯಾವಾಗ ಬರುವಿರಿ...?"
"ಪರೀಕ್ಷೆ ಮುಗಿಸಿಕೊಂಡೇ ಬರುವೆ. ಎರಡು ತಿಂಗಳು ಆಗಬಹುದು ಸರ್."
"ಹಾಗಾದರೆ ನಮ್ಮ ಭೆಟ್ಟಿಗೆ ಬಹಳ ದಿನಗಳನ್ನೇ ಕಾಯಬೇಕಾಗುತ್ತದೆ."
"ಹೌದು" ಎಂದು ಚುಟುಕಾಗಿ ಉತ್ತರಿಸಿ ಮಿಂಚು ಅವನ ಮುಖವನ್ನೇ ದಿಟ್ಟಿಸತೊಡಗಿದಳು. ಸದ್ಭವನ ಮುಖಭಾವದಲ್ಲಿ ಒಂಥರ ಡಲ್ನೆಸ್ ಕಂಡಿತು. 
"ಮೊಬೈಲ್ನಲ್ಲಿ ನಿಮ್ಮ ಜೊತೆಗೆ ಮಾತಾಡಬಹುದೇ...?" ಅನುಮಾನಿಸುತ್ತಾ ಪ್ರಶ್ನಿಸಿದ ಸದ್ಭವ್.
"ಮಾತಾಡಿ ಸರ್. ಅಭ್ಯಂತರವೇನಿಲ್ಲ." ಪರಸ್ಪರ ಮೊಬೈಲ್ ನಂಬರ್ ವಿನಿಮಯವೂ ಆಯಿತು.
"ಸರ್, ನಾನಿನ್ನು ಬರಲೇ...?" 
"ಸರಿ ಹೋಗಿ ಬನ್ನಿ" ಎಂದು ಭಾರವಾದ ಮನಸ್ಸಿನಿಂದ ಹೇಳಿದ ಸದ್ಭವ್. ಮಿಂಚಿನ ನಗೆ ಹರಿಸಿ ಮಿಂಚು ಒಲ್ಲದ ಮನಸ್ಸಿನಿಂದ ಅಲ್ಲಿಂದ ಹೊರಟಳು. ಇಬ್ಬರೆದೆಗಳೂ ಖಾಲಿಖಾಲಿ ಎಂದೆನಿಸತೊಡಗಿದವು. 
                    ****

ಅಂದು ಸಂಜೆ ಬ್ಯಾಂಕಲ್ಲಿ ಕೆಲಸ ಮುಗಿದಾಗ ಆಗಲೇ ಏಳುವರೆಯಾಗಿತ್ತು. ಗವ್ವೆಂದು ಕತ್ತಲೂ ಆವರಿಸಿತ್ತು. ಬ್ಯಾಂಕಿಗೆ ಬೀಗಹಾಕಿಸಿ ಸದ್ಭವ್ ತಾಲೂಕು ಕೇಂದ್ರದ ಕಡೆಗೆ ತನ್ನ ಬೈಕ್ ಓಡಿಸಲು ಮುಂದಾದರೆ ರಾಮೂ ತನ್ನ ಮನೆಯತ್ತ ಹೆಜ್ಜೆ ಹಾಕಿದ. ಬೈಕ್ ಊರಿನಿಂದ ಒಂದು ಕಿಮೀ ಅಷ್ಟೇ ಬಂದಿತ್ತು. ಗಾಡಿ ಟಕ್ಕಂತ ಆಫ್ ಆಯಿತು. ನಿನ್ನೆಯಷ್ಟೇ ಪೆಟ್ರೋಲ್ ಹಾಕಿಸಿದ್ದು ಅವನ ನೆನಪಿಗೆ ಬಂತು. ಸ್ಟಾö್ಯಂಡ್ ಹಾಕಿ ಬೈಕ್ ಚಾಲೂ ಮಾಡಲು ವಿಶ್ವ ಪ್ರಯತ್ನ ಮಾಡಿದ. ಅಟೋ ಸ್ಟಾರ್ಟ್ ಆಗಲೇ ಇಲ್ಲ. ಕಿಕ್ ಹೊಡೆದ. ಬೈಕ್ ಚಾಲು ಆಗಲೇ ಇಲ್ಲ. ಯಾರಾದರೂ ಬರುವರೇನೋ ಎಂದು ತುಸು ಹೊತ್ತು ಕಾದು ನೋಡಿದ. ಯಾವ ಗಾಡಿಯೂ ಬರಲಿಲ್ಲ. ಬೇರೆ ದಾರಿ ಕಾಣದೇ ಸದ್ಭವ್ ರಾಮೂಗೆ ಫೋನಾಯಿಸಿದ. ಬೈಕ್ ಕೈಕೊಟ್ಟಿರುವ ಬಗ್ಗೆ ಮಾಹಿತಿ ನೀಡಿದ. ರಾಮೂ ಸದ್ಭವನಿಗೆ ಅಲ್ಲೇ ಇರಲು ತಿಳಿಸಿ ತಾನು ತಕ್ಷಣ ಅಲ್ಲಿಗೆ ಬರುವುದಾಗಿ ಹೇಳಿದ. ಆಗ ರಾಮೂ ಸಾಹುಕಾರ್ ರಾಜಶೇಖರಪ್ಪನವರ ಮನೆಯಲ್ಲಿ ಇದ್ದ. ಸುದ್ದಿಯನ್ನು ಕೇಳಿಸಿಕೊಂಡ ಸಾಹುಕಾರರು ತಕ್ಷಣ ತಮ್ಮ ಕಾರಿನಲ್ಲಿ ರಾಮೂನನ್ನು ಕೂಡ್ರಿಸಿಕೊಂಡು ಹೊರಟರು. ದಾರಿಯಲ್ಲಿ ಆಗಷ್ಟೇ ತನ್ನ ಮೆಕ್ಯಾನಿಕ್ ಅಂಗಡಿಗೆ ಬೀಗ ಜಡಿಯುತ್ತಿದ್ದ ಮೆಕ್ಯಾನಿಕ್ ಮುಸ್ತಾಫಾನನ್ನೂ ತಮ್ಮ ಕಾರಿನಲ್ಲಿ ಕರೆದುಕೊಂಡು ಹೊರಟರು. 
ಮೆಕ್ಯಾನಿಕ್ ಮುಸ್ತಾಫಾ ಬೈಕ್ ಚಾಲೂ ಮಾಡಲು ಪ್ರಯತ್ನಿಸಿದ. ಆಗಲಿಲ್ಲ. ಅವನಿಗೆ ಬೈಕನ್ನು ಊರಿಗೆ ತೆಗೆದುಕೊಂಡು ಹೋಗಲು ತಿಳಿಸಿ ರಾಜಶೇಖರಪ್ಪನವರು ಸದ್ಭವನನ್ನು ತಮ್ಮ ಕಾರಿನಲ್ಲಿ ಕೂಡ್ರಿಸಿಕೊಂಡು ತಾಲೂಕು ಕೇಂದ್ರದ ಕಡೆಗೆ ಹೊರಟರು. 
"ಮ್ಯಾನೇಜರ್ ಸಾಹೇಬ್ರೇ, ಅವತ್ತು ಡ್ಯೂಟಿಗೆ ರಿಪೋರ್ಟ ಮಾಡಿದ ದಿನ ನಾನು ತಾಲೂಕು ಕೇಂದ್ರದಲ್ಲಿ ರೂಮೊಂದನ್ನು ಮಾಡಿಕೊಂಡು ನಮ್ಮೂರಿಗೆ ಓಡಾಡುವುದಕ್ಕಿಂತ ನಮ್ಮೂರಲ್ಲೇ ವಾಸ್ತವ್ಯ ಹೂಡಿದರೆ ಸರಿ ಎಂದು ನಿಮಗೆ ಹೇಳಿದ್ದು ನೆನಪಿರಬಹುದು. ನನ್ನದೇ ಸಿಂಗಲ್ ಬೆಡ್ ರೂಮಿನ ಚಿಕ್ಕ ಮನೆ ಇದೆ. ಅದರಲ್ಲೇ ನೀವು ಇರಬಹುದು ಎಂದಿದ್ದೆ. ಯಾಕೆಂದರೆ ನೀವು ದಿನಾಲೂ ವಾಪಾಸು ಹೋಗುವಾಗ ಆಗಲೇ ರಾತ್ರಿ ಎಂಟು ಗಂಟೆಯಾಗಿರುತ್ತದೆ. ಕತ್ತಲೂ ಅವರಿಸಿರುತ್ತದೆ. ವೇಳೆ ಯಾವಾಗಲೂ ಹೀಗೇ ಅಂತ ಹೇಳಲಿಕ್ಕೆ ಬರುವುದಿಲ್ಲ. ರಾತ್ರಿ ಹೊತ್ತಿನಲ್ಲಿ ಒಬ್ಬರೇ ಓಡಾಡುವುದು ಅಷ್ಟಾಗಿ ಸರಿ ಕಾಣುವುದಿಲ್ಲ. ಈ ರಸ್ತೇನೂ ಅಷ್ಟಕಷ್ಟೇ. ಮಳೆಗಾಲದಲ್ಲಂತೂ ರಸ್ತೆ ತುಂಬಾ ಹಾಳಾಗಿ ಹೋಗುತ್ತದೆ. ಈಗಲಾದರೂ ನೀವು ನಮ್ಮೂರಿಗೆ ಶಿಫ್ಟ್ ಆಗಿಬಿಡಿರಿ. ಈ ಸಾರೆ ನೀವು ಒಲ್ಲೆ ಅಂದರೆ ನಾನು ಕೇಳುವುದಿಲ್ಲ. ಈ ರವಿವಾರದ ದಿನ ನಿಮ್ಮ ಸಾಮಾನುಗಳನ್ನು ನಮ್ಮ ಟ್ರಾö್ಯಕ್ಟರ್ನಲ್ಲಿ ಹೇರಿಕೊಂಡು ಬರಲು ನಮ್ಮ ಕೆಲಸದಾಳುಗಳಿಗೆ ಹೇಳಿಬಿಡುವೆ. ನಮ್ಮೂರಿನ ಪಿಎಚ್ಸಿಯಲ್ಲಿ ಎಂಬಿಬಿಎಸ್ ಡಾಕ್ಟರ್ ಸಹ ಇದ್ದಾರೆ. ಮತ್ತೇನೂ ವಿಚಾರ ಮಾಡದೇ ಬಂದುಬಿಡಿರಿ." ಹೋಗುವಾಗ ದಾರಿಯಲ್ಲಿ ರಾಜಶೇಖರಪ್ಪನವರು ಬಹಳ ಕಳಕಳಿಯಿಂದ ಹೇಳಿದಾಗ ಸದ್ಭವ್ ಬೇರೆ ಮಾತಿಲ್ಲದೇ ಹೂಂ ಎಂದ. ಅವಿನಾಭಾವ ಬೆಸುಗೆ ಬೆಸೆಯಿತು ಸದ್ಭವ್ ಮತ್ತು ರಾಜಶೇಖರಪ್ಪನವರನ್ನು. ಅದರಂತೆ ಅವನ ಲಗೇಜ್ ಶಿಫ್ಟ್ ಆಯಿತು. ಮನೆ ಚಿಕ್ಕದಿದ್ದರೂ ತುಂಬಾ ಅಚ್ಚುಕಟ್ಟಾಗಿತ್ತು. ಒಂದು ಚಿಕ್ಕ ಹಾಲ್, ಅಡುಗೆ ಮನೆ, ಸಣ್ಣ ಮಲಗುವ ಕೋಣೆ, ಬಚ್ಚಲು ಮನೆ, ಟಾಯಿಲೆಟ್ ರೂಮು ಎಲ್ಲವೂ ಇದ್ದವು. ನೀರಿನ ಸೌಕರ್ಯವಿತ್ತು. ಕಸಮುಸುರೆಗೆ ತಮ್ಮ ಮನೆಯ ಕಸಮುಸುರೆ ಮಾಡುತ್ತಿದ್ದ ಹೆಣ್ಣು ಮಗಳಿಗೇ ಹೇಳಿದರು ಸಾಹುಕಾರರು. ಸದ್ಭವನಿಗೆ ದಿನಾಲೂ ಬ್ಯಾಂಕಿನಿಂದ ಮರುಳುವಾಗ ಕತ್ತಲೆಯಲ್ಲಿ ಬೈಕ್ ಓಡಿಸುವ ಟೆನ್ಶನ್ ತಪ್ಪಿತು. ಬ್ಯಾಂಕಿನ ಕೆಲಸದಲ್ಲಿ ಹೆಚ್ಚಿನ ಸಮಯ ತೊಡಗಿಸಲೂ ಸಾಧ್ಯವಾಯಿತು. ಊಟಕ್ಕೆ ಬಸವರಾಜ್ ಖಾನಾವಳಿ ಇದ್ದರೆ ನಾಷ್ಟಾಕ್ಕೆ ಉಡುಪಿ ಕೃಷ್ಣ ಭಟ್ಟರ ಹೊಟೇಲ್ ಇತ್ತು. ವಾರಕ್ಕೆ ಎರಡು ಮೂರು ಬಾರಿ ಸಾಹುಕಾರರ ಮನೆಯ ಊಟದ ರುಚಿಯನ್ನೂ ಸವಿಯತೊಡಗಿದ. ರವಿವಾರವಂತೂ ಬೆಳಿಗ್ಗೆ ನಾಷ್ಟಾದಿಂದ ಹಿಡಿದು ರಾತ್ರಿ ಊಟ ಅವರ ಮನೆಯಲ್ಲೇ ಆಗುತ್ತಿತ್ತು. ಚೆನ್ನಮಲ್ಲಪ್ಪನವರೂ ಆಗೊಮ್ಮೆ, ಈಗೊಮ್ಮೆ ಅಂತ ಸದ್ಭವನನ್ನು ತಮ್ಮ ಮನೆಗೂ ಕರೆದುಕೊಂಡು ಹೋಗಿ ಉಪಚಾರ ಮಾಡುತ್ತಿದ್ದರು. ಹಳ್ಳಿಯ ಜನರ ಭಾವನಾತ್ಮಕ ಆತ್ಮೀಯ ಸಂಬಂಧಗಳಿಗೆ ಸದ್ಭವ್ ಮೂಕವಿಸ್ಮಿತನಾಗಿದ್ದ.
                    ****
ಮಿಂಚೂನ ಬಿಎಸ್ಸಿ ಅಂತಿಮ ವರ್ಷದ ಅಂತಿಮ ಪರೀಕ್ಷೆಗಳು ಇನ್ನೇನು ಒಂದು ವಾರದಲ್ಲಿ ಮುಗಿಯುವುದರಲ್ಲಿದ್ದವು. ಪರೀಕ್ಷೆ ಮುಗಿಯುತ್ತಲೇ ಚೆನ್ನಮಲ್ಲಪ್ಪನಿಗೆ ಮಗಳನ್ನು ತನ್ನಕ್ಕನ ಮಗ ಪ್ರಶಾಂತನಿಗೆ ಕೊಟ್ಟು ಮದುವೆ ಮಾಡಬೇಕೆಂಬ ಹಂಬಲ. ಪ್ರಶಾಂತ್ ಬೆಂಗಳೂರಿನ ಪ್ರತಿಷ್ಠಿತ ಐಟಿ ಕಂಪನಿಯಲ್ಲಿ ಸಾಪ್ಟ್ವೇರ್ ಇಂಜಿನಿಯರ್. ಆ ದಿನ ಸಂಜೆ ಫೋನಲ್ಲಿ ಮಾತಾಡುವಾಗ ಚೆನ್ನಮ್ಮ ಮದುವೆಯ ಬಗ್ಗೆ ಪ್ರಸ್ತಾಪಿಸುತ್ತಾ ಮಿಂಚೂನ ತಂದೆಯ ಮನದಿಂಗಿತವನ್ನು ತಿಳಿಸಿದಳು. 
"ಅಮ್ಮಾ, ಪ್ರಶಾಂತ್ ಮಾಮಾ ನನಗಿಷ್ಟವಿಲ್ಲ."
"ಮಿಂಚೂ, ಅದ್ಯಾಕೆ ಪ್ರಶಾಂತ್ ನಿನಗೆ ಇಷ್ಟವಿಲ್ಲ...? ಹುಡುಗ ನೋಡಿದರೆ ಒಳ್ಳೇ ರಾಜಕುಮಾರ ಇದ್ದಂಗೆ ಇದಾನ. ಕೈತುಂಬಾ ಸಂಬಳ ಬರೋ ಉದ್ಯೋಗದಲ್ಲೂ ಇದ್ದಾನ. ಒಳ್ಳೇ ಅಸ್ತಿವಂತರೂ ಹೌದು. ಅವನಿಗೆ ನಿನ್ನ ಕೊಟ್ಟು ಮದುವೆ ಮಾಡಲು ನಿಮ್ಮಪ್ಪನಂತೂ ತುದಿಗಾಲಲ್ಲೇ ನಿಂತಿದ್ದಾರೆ."
"ಇರಬಹುದು. ಆದರೆ ಪ್ರಶಾಂತ್ ನನಗೆ ಬೇಡ. ಅವನ ಕ್ಯಾರೆಕ್ಟರ್ ಸರಿಯಿಲ್ಲ. ಅವನನ್ನು ನಾನು ಮದುವೆಯಾಗಲಾರೆ." 
"ಶಹಬ್ಬಾಸ್ ಮಗಳೇ. ಮಿಂಚೂ, ಆಗಲೇ ನಾ ಹೇಳಿದ್ದು ತಮಾಷೆಗೆ. ನನಗೂ ಮೊದಲಿನಿಂದಲೂ ಪ್ರಶಾಂತನ ಬಗ್ಗೆಯಾಗಲೀ, ಅವನ ತಂದೆ-ತಾಯಿಗಳ ಬಗ್ಗೆಯಾಗಲೀ ಅಂಥಹ ಆಸಕ್ತಿ ಇಲ್ಲ. ಅದೇನೋ ಗೊತ್ತಿಲ್ಲ, ಹುಡುಗ ನಿನಗೆ ತಕ್ಕವನಲ್ಲ ಎಂದು ನನ್ನ ಅಂತರಾತ್ಮ ಹೇಳುತ್ತಿದೆ. ಮಗಳೇ, ನಂದು ಒಂದು ಮಾತಿದೆ ಹೇಳಲಾ...?"
"ಅಮ್ಮಾ, ಹೇಳು." ತಾಯಿ ಏನು ಹೇಳಬಹುದು ಎಂಬ ಕುತೂಹಲ ಮಿಂಚೂನ ಎದೆಯಲ್ಲಿ ತಳಮಳಿಸತೊಡಗಿತು.
"ನಿನ್ನ ಚಿಕ್ಕಪ್ಪನ ಮನೆಯಲ್ಲಿ ಬಾಡಿಗೆಗೆ ಇದ್ದಾರಲ್ಲ, ಬ್ಯಾಂಕ್ ಮ್ಯಾನೇಜರ್ ನಿನಗೆ ಹೆಂಗೆ ಅನಸತಾರ...? ನಮ್ಮನೆಗೂ ಒಂದೆರಡು ಸಲ ಬಂದು ಹೋಗ್ಯಾರ. ನನಗೇನೋ ಅವರು ಬಾಳ ಮನಸಿಗೆ ಬಂದಾರ. ಮೇಲಾಗಿ ನಮಗೆ ಅವರು ದೂರದ ಸಂಬಂಧಿಗಳೂ ಆಗ್ತಾರಂತೆ. ನೋಡೋದಕ್ಕೂ ಒಳ್ಳೇ ಮನ್ಮಥ ಇದ್ದಂಗೆ ಇದ್ದಾರೆ. ಗುಣದಲ್ಲೂ ಅಪರಂಜಿ..." ಚೆನ್ನಮ್ಮ ರಾಗ ಎಳೆದಳು.
"ಅಮ್ಮಾ, ನೋಡೋಕೆ ಅವರು ಚೆನ್ನಾಗೇ ಇದ್ದಾರೆ. ಆದ್ರೆ ಅವರು ಅಂಥ ಆಸ್ತಿವಂತರು ಅಲ್ಲಂತ ಕೇಳಿದ್ದೇನೆ. ಅಪ್ಪ ಒಪ್ಪಬೇಕಲ್ಲ...?"
"ಅವರೇ ದೊಡ್ಡ ಆಸ್ತಿ ಇದ್ದಂಗೆ ಇದ್ದಾರೆ. ದೊಡ್ಡ ನೌಕರಿಯಲ್ಲಿದ್ದಾರೆ. ಬೇರೆ ಆಸ್ತಿ ತೊಗೊಂಡು ಮಾಡುವುದೇನಿದೆ? ನಿನ್ನಪ್ಪನ ಮಾತು ಇರಲಿ, ಮೊದಲು ನಿನ್ನ ಅಭಿಪ್ರಾಯ ತಿಳಿಸು. ನಿನ್ನಪ್ಪನನ್ನು ಒಪ್ಪಿಸುವ ಜವಾಬ್ದಾರಿ ನನ್ನದು."
"ಅಮ್ಮಾ, ನಿನ್ನ ಲೆಕ್ಕಾಚಾರ ಸೂಪರ್. ಅವರು ನನಗೆ ಒಪ್ಪಿಗೆಯಾಗಿದ್ದಾರೆ." `ರೋಗಿ ಬಯಸಿದ್ದು ಹಾಲು-ಅನ್ನ, ಡಾಕ್ಟರ್ ಹೇಳಿದ್ದೂ ಹಾಲು-ಅನ್ನ ಎಂಬಂತಾಗಿದೆ. ನನ್ನ ರೊಟ್ಟಿ ಜಾರಿ ತಾನಾಗಿಯೇ ತುಪ್ಪದಲ್ಲಿ ಬಿದ್ದಿದೆ. ತುಪ್ಪದ ರೊಟ್ಟಿ ಮೆಲ್ಲುವ ಅದೃಷ್ಟ ನನ್ನದಾಗಿದೆ.' ಮಿಂಚೂ ಮನದಲ್ಲೇ ಸಂಭ್ರಮಿಸಿದಳು. 

“ಮಿಂಚೂ, ಅವರು ನಿನಗೆ ತಕ್ಕ ಜೋಡಿ. ನಿಮ್ಮಿಬ್ಬರ ಜೋಡಿ ಶಿವ-ಪಾರ್ವತಿಯರಂಗೆ ಆಗುತ್ತೆ.”
ತಾಯಿ, ಮಗಳಿಬ್ಬರೂ ಖುಷಿಖುಷಿಯಿಂದ ಮಾತು ಮುಗಿಸಿದ್ದರು.
****
ಮಿಂಚುವಿನ ಮದುವೆ ಅವಳ ಸೋದರತ್ತೆಯ ಮಗ ಪ್ರಶಾಂತನ ಜೊತೆ ನಿಶ್ಚಯವಾಗುವ ಸುದ್ದಿ ಸದ್ಭವನ ಕಿವಿಗೆ ಬಿದ್ದಾಗಿನಿಂದ ಅವನ ಮನಸ್ಸು ಗೊಂದಲದ ಗೂಡಾಯಿತು. ಎದೆಯಲ್ಲಿ ತಳಮಳ, ಅಲ್ಲೋಲಕಲ್ಲೋಲ ಶುರುವಾಯಿತು. ನಿಂತ ಭೂಮಿ ಕಂಪಿಸಿದ ಅನುಭವ. `ಹಾಗಾದರೆ ನಾನು ಮಿಂಚುವಿನ ಬಗ್ಗೆ ಕನಸು ಕಟ್ಟುವುದನ್ನು ಬಿಡಬೇಕು. ನಾನು ಭಗ್ಮಪ್ರೇಮಿಯಾವೆನೇ…? ನನ್ನ ಮೊದಲ ಪ್ರೀತಿ ಹಳ್ಳ ಹಿಡಿಯುವುದೇ…? ಆ ನೋವನ್ನು ನಾನು ಜೀರ್ಣಿಸಿಕೊಳ್ಳಬಲ್ಲೆನೇ…? ಅಂಥಹ ಕಹಿ ಪ್ರಸಂಗ ಬಂದರೆ ಕಲ್ಲೆದೆ ಮಾಡಿಕೊಂಡು ಎದುರಿಸಬೇಕು. ಬೇರೆ ದಾರಿ ಇನ್ನೇನಿದೆ? ಮಿಂಚೂನ ಜೊತೆಗೆ ಮಾತಾಡಬೇಕು.’ ಮನಸ್ಸಿನಲ್ಲಿ ಕಳವಳ, ಕುತೂಹಲ ಮನೆಮಾಡಿದ್ದ ಸದ್ಭವನೆದೆಯಲ್ಲಿ ನೂರೆಂಟು ಯೋಚನೆಗಳು.
****
“ಏನ್ರೀ, ಮ್ಯಾನೇಜರ್ ಸಾಹೇಬ್ರೇ, ಅದೇನಂಥಹ ಗಾಢವಾದ ಯೋಚನೆ…? ಇತ್ತ ಕಡೆಗೆ ತಮ್ಮ ಚಿತ್ತವೇ ಇಲ್ಲವೆಂದಿಸುತ್ತಿದೆ…?” ಪರಂಜ್ಯೋತಿ ತೋಳಿಡಿದು ಅಲುಗಾಡಿಸಿದಾಗಲೇ ಸದ್ಭವ್ ವಾಸ್ತವ ಲೋಕಕ್ಕೆ ಮರಳಿದ. ಸದ್ಭವ್ ಮಾತಿಲ್ಲದೇ ಪತ್ನಿ ಪರಂಜ್ಯೋತಿಯ ಮುಖ ದಿಟ್ಟಿಸತೊಡಗಿದ. ಅವಳಿಗೆ ಗೊತ್ತು, ಅವನು ಆಗಾಗ ಇಂಥಹ ಯೋಚನೆಯಲ್ಲಿ ಸಿಲುಕಿಕೊಳ್ಳುವುದು.
“ಅದೇನಾ…? ನಿಮ್ಮ ಪ್ರೀತಿಯ ಹುಡುಗಿ ಮಿಂಚುವಿನ ನೆನಪಿನ ಧ್ಯಾನದಲ್ಲಿದ್ದಿರಾ…? ಸಮಾಧಾನ ಮಾಡಿಕೊಳ್ಳಿರಿ” ಎಂದೆನ್ನುತ್ತಾ ಸದ್ಭವನ ತೋಳು ಬಳಸಿ ಬಿಗಿದಪ್ಪಿಕೊಂಡು ಒಂದಿಷ್ಟು ಮುದ್ದು ಮಾಡಿದಳು.
“ಹಾಂ! ಏನಂದೀ ಪರಂಜ್ಯೋತಿ? ಹೌದು, ಹೌದು. ಮಿಂಚು ನೆನಪಿಗೆ ಬಂದಳು. ನಿನಗೆ ಹೇಳಿರುವೆನಲ್ಲ, ಮಿಂಚು ಊರಿಗೆ ಬರುವ ಹಿಂದಿನ ದಿನವಷ್ಟೇ ಅವಳ ಜೊತೆಗೆ ಫೋನಲ್ಲಿ ಮಾತಾಡಿದ್ದೇ ಕೊನೇ ಮಾತಾಯಿತು” ಎಂದೆನ್ನುಷ್ಟರಲ್ಲಿ ಸದ್ಭವ್ ನೆನಪಿನ ಅಂಗಳದಲ್ಲಿ ಅಲೆದಾಡತೊಡಗಿದ.
“ಮಿಂಚೂ, ಇಂದು ನಿಮ್ಮ ಪರೀಕ್ಷೆ ಮುಗಿದಿರಬೇಕಲ್ಲ…? ಊರಿಗೆ ಯಾವಾಗ ಬರುತ್ತಿರುವಿರಿ?”
ಫೋನಲ್ಲಿ ಮಿಂಚು ಮತ್ತು ಸದ್ಭವನ ಮಾತುಗಳು ಮೆಲ್ಲಡಿ ಇಡತೊಡಗಿದವು.
“ಸರ್, ಪರೀಕ್ಷೆಗಳು ಇಂದಷ್ಟೇ ಮುಗಿದವು. ನಾಳೆ ಬೆಳಗ್ಗೇನೇ ಇಲ್ಲಿಂದ ಹೊರಡುತ್ತಿರುವೆ.”
“ಪರೀಕ್ಷೆಯಲ್ಲಿ ಚೆನ್ನಾಗಿ ಬರೆದಿರುವಿರಾ…?”
“ಹೂಂ ಸರ್.”
“ಮತ್ತೆ ಇಲ್ಲಿ ನಿಮ್ಮ ಸೋದರತ್ತೆಯ ಮಗನ ಜೊತೆಗೆ ನಿಮ್ಮ ಮದುವೆಯ ಬಗ್ಗೆ ಸುದ್ದಿ ಕೇಳಿಬರುತ್ತಿದೆ. ನಿಜವೇ?”
“ಹೌದು. ಆದರೆ ಅವನು ನನಗಿಷ್ಟವಿಲ್ಲ ಸರ್. ನಾನು ಬೇರೊಬ್ಬ ಹುಡುಗನನ್ನು ಪ್ರೀತಿಸುತ್ತಿರುವೆ.”
“ಹಾಂ…! ಹೌದಾ? ಯಾರಾ ಅದೃಷ್ಟವಂತ…?”
“ಸರ್, ಬಿಚ್ಚು ಮನಸ್ಸಿನಿಂದ ಹೇಳುವೆ. ನಿಮ್ಮನ್ನೇ ನಾನು ಪ್ರೀತಿಸುತ್ತಿದ್ದೇನೆ. ನೀವೂ ನನ್ನನ್ನು ಪ್ರೀತಿಸುತ್ತಿರುವಿರಿ ಎಂದು ಬಲ್ಲೆ.”
ತುಸು ಹೊತ್ತಿನ ಮೌನ.
“ಯಾಕೆ ಸರ್, ನಾನು ನಿಮಗೆ ಇಷ್ಟವಾಗಿಲ್ಲವೇ…?”
“ಮಿಂಚೂ, ನಿಮ್ಮ ಮಾತಿನಿಂದ ಅಪರಿಮಿತ ಖುಷಿಯಾಗುತ್ತಿದೆ. ಸಂತಸದ ಸಂಭ್ರಮದಲ್ಲಿ ಮಾತೇ ಹೊರಡುತ್ತಿಲ್ಲ.”
“ಈ ಸಂತಸದ ಸುದ್ದಿಯನ್ನು ಬರೀ ಹೀಗೆ ಹೇಳಿದರೆ ಹೇಗೆ ಸರ್…?”
“ಮತ್ತೇಗೆ ಹೇಳಬೇಕೆನ್ನುವಿರಿ…?”
“ಬಿಗಿದಪ್ಪಿಕೊಂಡು ಹೇಳಿದರೆ ಆ ಸಂತಸಕ್ಕೊಂದು ಮೆರುಗು ಅಲ್ಲವೇ…?”
“ಹೇಗೂ ನಾಳೆ ಇಲ್ಲಿಗೆ ಬರುತ್ತಿರುವಿಯಲ್ಲ, ಮುಖಾಮುಖಿಯಾದಾಗ ಹಾಗೇ ಮಾಡುವಾ…?” ಇಬ್ಬರೂ ಬಾಯ್ತುಂಬಾ ನಕ್ಕರು.
“ಸರಿ ಸರ್. ನಾಳೆ ನಿಮ್ಮೊಂದಿಗೆ ಸಂತಸ ಹಂಚಿಕೊಳ್ಳುವೆ.”
ಮರು ದಿನ ಮಿಂಚು ತನ್ನೂರಿಗೆ ಬಸ್ಸಲ್ಲಿ ಬರುತ್ತಿದ್ದಳು. ಅವಳೂರು ಇನ್ನೇನು ಐವತ್ತು ಕಿಮೀ ದೂರದಲ್ಲಿದ್ದಾಗ ಬಸ್ಸು ಭೀಕರ ಅಪಘಾತಕ್ಕೀಡಾಗಿ ಹದಿನೈದು ಜನ ಪ್ರಯಾಣಿಕರು ದುರ್ಮರಣಕ್ಕೆ ಈಡಾಗಿದ್ದರು. ಆ ಹದಿನೈದು ಜನ ದುರ್ದೈವಿಗಳಲ್ಲಿ ಮಿಂಚೂ ಸಹ ಒಬ್ಬಳಾಗಿದ್ದಳು. ಸುದ್ದಿ ತಿಳಿದ ಊರಿನ ಜನರು ಶೋಕಸಾಗರದಲ್ಲಿ ಮುಳುಗಿದರು. ಸದ್ಭವನಿಗೆ ತೀವ್ರ ಆಘಾತವಾಯಿತು. ಕೆಲವು ದಿನಗಳವರೆಗೆ ಮೌನಿಯಾಗಿಬಿಟ್ಟ. ತನ್ನೆದೆಯೊಳಗೆ ಮಡುವುಗಟ್ಟಿದ್ದ ದುಃಖವನ್ನು ಯಾರೊಂದಿಗೂ ಹಂಚಿಕೊಳ್ಳದ ಅಸಹಾಯಕ ಸ್ಥಿತಿಯಲ್ಲಿದ್ದ ಸದ್ಭವ್. ತನಗೆ ಮದುವೆಯೇ ಬೇಡವೆಂದು ಹಟ ಹಿಡಿದು ಕುಳಿತಿದ್ದ ಅವನನ್ನು ಹೆತ್ತವರು ಹೇಗೋ ಸಮಾಧಾನಿಸಿ ಪರಂಜ್ಯೋತಿಯ ಜೊತೆಗೆ ಮದುವೆ ಮಾಡಿದರು. ಅವಳನ್ನು ನೋಡಲು ಹೋದ ದಿನವೇ ಸದ್ಭವ್ ಕಮರಿದ ತನ್ನ ಮೊದಲ ಪ್ರೀತಿಯ ಬಗ್ಗೆ ತಿಳಿಸಿದ್ದ ಮುಚ್ಚುಮರೆ ಇಲ್ಲದೇ.
ಪ್ರೇಮಿಗಳ ಸುಪ್ತ ಪ್ರೀತಿ ಮಿಂಚಿನಂತೆ ಮಿಂಚಿ ಮಾಯವಾಗಿತ್ತು.

ಶೇಖರಗೌಡ ವೀ ಸರನಾಡಗೌಡರ್


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x