ಮನೆ ಮಾರಾಟಕ್ಕಿದೆ: ಸೂರಿ ಹಾರ್ದಳ್ಳಿ

ನಾನು ದಿನಪತ್ರಿಕೆಗಳನ್ನು ಓದುವುದನ್ನು ನಿಲ್ಲಿಸಿ ತುಂಬಾ ಕಾಲವಾಯಿತು. ಏನಿವೆ ಅದರಲ್ಲಿ? ಕೊಲೆ, ಸುಲಿಗೆ, ದರೋಡೆ, ಭ್ರಷ್ಟಾಚಾರ, ಮಾನಭಂಗ, ಅಪಘಾತ, ಇವಿಷ್ಟೇ. ಅದೂ ಅಲ್ಲದೇ ಕೆಲ, ಅಷ್ಟೇ ಏಕೆ, ಬಹು ದರಿದ್ರದ ರಾಜಕಾರಣಿಗಳ ಚಿತ್ರಗಳೂ ಮುಖಪುಟದಲ್ಲಿಯೇ ಪ್ರಕಟವಾಗುತ್ತವೆ, ಅವನ್ನು ಶುಭ ಮುಂಜಾನೆ ನೋಡಬೇಕೇ? ಇದನ್ನು ಬೆಳ್ಳಂಬೆಳಗ್ಗೆ ಓದಿ ಯಾಕೆ ತಲೆಯನ್ನು ರಾಡಿ ಮಾಡಿಕೊಳ್ಳಬೇಕು ಎಂಬ ಅಭಿಪ್ರಾಯ ನನ್ನದು.
ಆದರೆ ನನ್ನ ಹೆಂಡತಿಗೆ ಒಂದು ತಲಬು ಇದೆ, ಹಾಗೆ ಹೇಳಿದರೆ ಅವಳು ಬೇಜಾರು ಮಾಡಿಕೊಳ್ಳುವುದಿಲ್ಲ ಬಿಡಿ, ಒಂದು ಕೈಲಿ ಕಾಫಿ ಲೋಟ ಹಿಡಿದು, ಇನ್ನೊಂದು ಕೈಲಿ ಪತ್ರಿಕೆಯನ್ನು ಹಿಡಿದುಕೊಂಡು, ಸೋಫಾದಲ್ಲಿ ಕಾಲ ಮೇಲೆ ಕಾಲು ಹಾಕಿಕೊಂಡು ಕುಳಿತುಕೊಂಡು, ಪತ್ರಿಕೆಯಲ್ಲಿ ಬರುವ ತಲೆ ಬರಹಗಳನ್ನು ಓದುವುದು, ಇವತ್ತು ವಿದ್ಯುತ್ ಕಡಿತವಿದೆಯೇ ಇಲ್ಲವೇ, ನೀರು ಬರುತ್ತದೆಯೇ ಇಲ್ಲವೇ, ಎಂಬ ಸುದ್ದಿಗಳನ್ಜು ಅರಸುವುದು, ವಧು ಬೇಕಾಗಿದ್ದಾಳೆ, ವರ ಬೇಕಾಗಿದ್ದಾನೆ ಎಂಬ ಜಾಹಿರಾತುಗಳನ್ನು ವೀಕ್ಷಿಸುವುದು, ಎಂದೂ ಸರಿಯಾಗದ ದಿನಭವಿಷ್ಯವನ್ನು ಓದುವುದು, ಇವು ಅವಳಿಗೆ ಖುಷಿ ಕೊಡುವ ವಿಚಾರವಾದ್ದರಿಂದ ನಮ್ಮ ಮನೆಗೂ ಕನ್ನಡ ಪತ್ರಿಕೆಯೊಂದು ಬರುತ್ತದೆ. ಓದಿದ ನಂತರ ಅದು ಕಸವೇ ಸರಿ.

ಮದುವೆಯ ವಯಸ್ಸಿಗೆ ಬಂದ ಮಗನಿದ್ದಾನೆ ನಮಗೆ, ಮಗಳಿಗೂ ಇನ್ನೇನು ವರನನ್ನು ಹುಡುಕುವ ಕಾಲ ಬರುತ್ತಿದೆ. ಅವರಿಗಾಗಿ ಬೆಂಗಳೂರಿನ ಎರಡು ಪ್ರತಿಷ್ಠಿತ ಬಡಾವಣೆಗಳಲ್ಲಿ ಎರಡು ಮನೆಗಳನ್ನು, ಮನೆ ಅನ್ನುವುದಕ್ಕಿಂತ ಅವನ್ನು ಬಂಗಲೆಗಳು ಎಂದೇ ಎಂದರೆ ಸರಿಯೇನೋ, ಮಾಡಿ ಇಟ್ಟಿದ್ದೇನೆ. ಈಗ ಯಾವ ಚಿಂತೆಗಳೂ ಇಲ್ಲದ ನಿವೃತ್ತ ಜೀವನ ನನ್ನದು. ನನಗೆಂದೇ ಇನ್ನೊಂದು ಮನೆಯಿದೆ, ಅದರಲ್ಲಿ ಸದ್ಯಕ್ಕೆ ನಾವು ನಾಲ್ವರೂ ವಾಸವಾಗಿದ್ದೇವೆ.
ದಿನಪತ್ರಿಕೆಯನ್ನು ನೋಡುತ್ತಿದ್ದ ನನ್ನ ಹೆಂಡತಿ ಹೇಳಿದಳು, ‘ರೀ, ಯಾವತ್ತು ನೀವು ಪತ್ರಿಕೆಯಲ್ಲಿ ಜಾಹಿರಾತು ಕೊಟ್ಟಿದ್ದು? ಅದೂ ಮನೆ ಮಾರ್ತೀನಿ ಅಂತ?’
ನನಗೆ ಈ ಅನಿರೀಕ್ಷಿತ ಪ್ರಶ್ನೆಯಿಂದ ಕಸಿವಿಸಿಯಾಯಿತು. ‘ಅಲ್ಲವೇ, ನಾನೆಲ್ಲಿ ಮನೆ ಮಾರ್ತೀನೆ ಅಂತಂದೆ?’

‘ಮತ್ತೆ, ಪೇಪರಿನಲ್ಲಿ ಬಂದಿದೆ,’ ಎಂದೆನ್ನುತ್ತಾ ದಿನಪತ್ರಿಕೆಯನ್ನು ನನ್ನ ಕೈಗೆ ಹಸ್ತಾಂತರಿಸಿದಳು. ಕ್ಲಾಸಿಫೈಡ್ ಆ್ಯಡ್ ವಿಭಾಗದಲ್ಲಿ ಪ್ರಕಟವಾಗಿತ್ತು. ಓದಿದೆ, ‘ರಾಘವೇಂದ್ರ ಬಡಾವಣೆಯಲ್ಲಿ, ಆಕ್ಸ್ಫರ್ಡ ಶಾಲೆಯ ಹಿಂಭಾಗದಲ್ಲಿ, ನಲವತ್ತು ಅರವತ್ತು ಅಡಿಗಳ ವಿಸ್ತೀರ್ಣದ, ಪೂರ್ವಾಭಿಮುಖವಾದ, ಆರು ಕೋಣೆಗಳಿರುವ, ಮೂರು ಕಾರು ಪಾರ್ಕಿಂಗ್ ವ್ಯವಸ್ಥೆ ಇರುವ ಬಿಡಿಎ ಮನೆ ಮಾರಾಟಕ್ಕಿದೆ. ಆಸಕ್ತರು ಸಂಪರ್ಕಿಸಿ.’ ಮುಂದೆ ದೂರವಾಣಿ ಸಂಖ್ಯೆ ಇತ್ತು. ವಿವರಗಳನ್ನು ನೋಡಿದರೆ ಅದು ನನ್ನದೇ ಮನೆ, ಮಗಳಿಗೆಂದು ಕಟ್ಟಿಸಿ ಇಟ್ಟಿದ್ದು, ಈಗ ಹಲವಾರು ವರ್ಷಗಳಿಂದ ಖಾಲಿಯೇ ಇದೆ.
‘ಸ್ಪೆಷಿಫಿಕೇಶನ್ ನೋಡಿದರೆ ನಮ್ಮದೇ ಮನೆ ಅಲ್ಲವೇನ್ರೀ?’ ಕೇಳಿದಳು ಹೆಂಡತಿ. ಸರಿಯೇ. ನಮ್ಮ ಮನೆಯನ್ನು ಯಾರೋ ಮಾರುತ್ತಿದ್ದಾನೆ ಎಂದರೆ ನನಗೆ ಅಚ್ಚರಿಯಾಗದೇ?
ತಕ್ಷಣವೇ ಫೋನ್ ತೆಗೆದುಕೊಂಡು ಅಲ್ಲಿ ಪ್ರಕಟವಾದ ಆ ಸಂಖ್ಯೆಗೆ ಫೋನಾಯಿಸಿದೆ, ಅತ್ತಲಿಂದ ಹಲೋ ಎಂಬ ಧ್ವನಿ ಬಂತು. ‘ರಫೀಕ್ ಬೋಲ್ ರಹಾಹೂಂ.’

ನಾನೂ ಹಿಂದಿಯಲ್ಲಿಯೇ ಮಾತು ಮುಂದುವರಿಸಿದೆ. ಪ್ರಾಪರ್ಟಿ ಮಾರಾಟಗಾರರಿಗೆ ಸ್ಥಳೀಯ ಖರೀದಿದಾರರೆಂದರೆ ಒಂದು ರೀತಿಯ ಅಲರ್ಜಿ. ಉತ್ತರ ಭಾರತದವರೋ, ವಿದೇಶೀಯರೋ ಆದರೆ ಅವರಿಂದ ಹೆಚ್ಚಿನ ಹಣ ಪೀಕಬಹುದು ಎಂಬುದು ಅವರ ಅಭಿಪ್ರಾಯವೆಂಬುದು ನನಗೆ ಗೊತ್ತು. ನಾನೂ ಉತ್ತರದ ರಾಜ್ಯದವನು ಎಂದು ತೋರಿಸಿಕೊಳ್ಳಲು ರಫೀಕನೊಂದಿಗೆ ಹಿಂದಿಯಲ್ಲಿಯೇ ಮಾತನಾಡತೊಡಗಿದೆ. ಕನ್ನಡವರಿಗೆ ಹಲವಾರು ಭಾಷೆಗಳು ತಿಳಿದಿರುತ್ತವೆ.
‘ನಾನು ಹಮ್ರೀತ್ ಅಗರವಾಲ್, ದೆಲ್ಲಿವಾಲಾಹೂಂ. ಅಲ್ಲಿ ನನ್ನದು ಒಂದು ಇಂಡಸ್ಟ್ರಿ ಇದೆ. ಸದ್ಯಕ್ಕೆ ಬೆಂಗಳೂರಿನಲ್ಲಿ ಒಂದು ಮನೆಯಲ್ಲಿ ಇದ್ದೇವೆ. ಯು ನೋ, ದೆಹಲಿ ಬಲು ಪೊಲ್ಯೂಟೆಡ್ ಸಿಟಿ. ನನ್ನ ಮಕ್ಕಳಂತೂ ಬೆಂಗಳೂರ್ನಲ್ಲಿಯೇ ಸ್ಟೇ ಮಾಡಬೇಕು ಅಂತ ಒತ್ತಾಯಿಸುತ್ತಿದ್ದಾರೆ. ಹಾಗಾಗಿ ನನ್ನ ದೆಲ್ಲಿ ಇಂಡಸ್ಟ್ರಿನ ನಡೆಸೊಕೆ ಇನ್ನೊಬ್ಬರಿಗೆ ಬಿಟ್ಟು, ಫ್ರಿಕ್ವೆಂಟ್ ಆಗಿ ಬ್ಯಾಂಗಲೋರ್ ವಿಸಿಟ್ ಮಾಡುತ್ತಾ ಇರಬೇಕಂತ ಅಂತ ಪ್ಲಾನ್ ಮಾಡಿದ್ದೇನೆ. ಅದಕ್ಕಾಗಿ ಬೆಂಗಳೂರಿನಲ್ಲಿ ಒಂದು ಮನೆ ಹುಡುಕುತ್ತಿದ್ದೇನೆ. ಪತ್ರಿಕೆಯೊಂದರಲ್ಲಿ ನಿಮ್ಮ ಜಾಹಿರಾತು ಬಂದಿದೆ ಅಂತ ಫ್ರೆಂಡ್ ಒಬ್ಬರು ಹೇಳಿದ್ದಾರೆ. ಡಿಟೈಲ್ಸ್ ಬೇಕಿತ್ತು, ಕರೆ ಮಾಡಿದೆ,’ ಎಂದೆ.

ದೊಡ್ಡ ಮಿಕವೇ ಸಿಕ್ಕಿದೆ ಎಂದೆನಿಸಿರಬೇಕು ರಫೀಕನಿಗೆ. ತುಂಬಾ ಉತ್ಸಾಹದಿಂದಲೇ ವಿವರಿಸತೊಡಗಿದ. ‘ಒಳ್ಳೆ ಇನ್ವೆಸ್ಟ್ಮೆಂಟ್ ಸರ್, ಅದೂ ಪ್ರೆöÊಮ್ ಲೊಕೇಶನ್. ಕೇವಲ ಒಂದು ಕಿಲೋಮೀಟರ್ ಹತ್ತಿರದಲ್ಲಿ ಮಾಲ್ ಇದೆ, ಎರಡು ಬೀದಿಯಾಚೆಗೆ ಮೆಟ್ರೋ ಸ್ಟೇಶನ್ ಇದೆ, ಏರ್ಪೋರ್ಟ್ಗೆ ಕೇವಲ ಹನ್ನೊಂದು ಕಿಲೋಮೀಟರ್, ಇವನಿಂಗ್ ಅನ್ನ ರಿಫ್ರೆಶ್ ಮಾಡೋಕೆ ಕೇವಲ ನೂರು ಮೀಟರ್ ಹತ್ತಿರದಲ್ಲಿ ಬಾರ್ ಇದೆ, ಸಿಟಿಯ ಪ್ರತಿಷ್ಠಿತ ಕ್ಲಬ್ ಕೂಡಾ ಇದೆ,’ ಎಂದ. ‘ಹೊಸ ಮನೆ ಸರ್, ಕೇವಲ ಮೂರು ವರ್ಷ ಹಳೆಯದು.’
ನನ್ನದೇ ಮನೆಯ ಬಗ್ಗೆ ನನಗೇ ಹೇಳಿದ. ನಗು ಬಂತು ಮಾತ್ರವಲ್ಲ ಎಷ್ಟು ವ್ಯವಸ್ಥಿತವಾಗಿ ಯಾರದೋ ಭೂಮಿಯನ್ನು ಯಾರಿಗೋ ಪರಭಾರೆ ಮಾಡುತ್ತಾರಲ್ಲ ಎಂದು ಅಚ್ಚರಿಯಾಯಿತು.

ನನ್ನ ಮಾತಿನಲ್ಲಿ ತುಸು ಬಿಡುವು ಅವನನ್ನು ಕಸಿವಿಸಿಗೊಳಿಸಿರಬೇಕು. ‘ಮೊದಲು ಲೊಕೇಶನ್ ಕಳಿಸ್ತೇನೆ ಸರ್, ಹೋಗಿ ಏರಿಯಾ ನೋಡಿಕೊಂಡು ಬನ್ನಿ. ಸರಿಯಾದರೆ ಮಾರಾಟದ ಬಗ್ಗೆ ಮಾತಾಡೋಣ. ಎಲ್ಲಾ ಡಾಕ್ಯಮುಂಟ್ ಪಕ್ಕಾ ಸರ್, ಪಕ್ಕಾ,’ ಎರಡು ಬಾರಿ ಪಕ್ಕಾ ಎಂದ. ‘ಸಮಯ ಮಾಡಿಕೊಂಡು ಬನ್ನಿ ಸರ್, ಮನೆ ತೋರಿಸುತ್ತೇನೆ. ಆ ಮನೆಗಾಗಿ ಬೆಳಗಿಂದ ನಾಲ್ಕು ಫೋನ್ಗಳು ಬಂದಿವೆ. ನಿಮ್ಮನ್ನು ನೋಡಿದರೆ ಒಳ್ಳೆಯವರ ಹಾಗೆ ಕಾಣಿಸ್ತೀರಿ, ಚೀಪಾಗಿ ಕೊಡಿಸ್ತೇನೆ ಸರ್,’ ಎಂದೂ ಬಾಲಂಗೋಚಿ ಸೇರಿಸಿದ.

‘ಸರಿಯಪ್ಪ, ಓನರ್ ಎಲ್ಲಿಯವರು?’ ಕೇಳಿದೆ.
‘ಅವರು ಇಲ್ಲಿಯವರೇ ಸರ್, ಆದರೆ ಈಗ ಅಮೆರಿಕಕ್ಕೆ ಹೋಗಿ ಸೆಟಲ್ ಆಗಿದ್ದಾರೆ. ನಾವು ಅವರ ಪರವಾಗಿ ಜಿ.ಪಿ.ಎ. ಪಡಕೊಂಡಿದ್ದೇವೆ. ರೆಕಾರ್ಡ್ ಎಲ್ಲಾ ಪಕ್ಕ ಸರ್,’ ಎಂದವನೇ ಅವಸರಿಸುವವನಂತೆ, ‘ಇವತ್ತು ಬರ್ತಿರಾ ಸರ್? ಮನೆ ತೋರಿಸ್ತೇನೆ,’ ಎಂದ.
ನಾನು ತುಸುವೇ ತಡೆದು ಎಂದೆ, ‘ಇವತ್ತು ನಾನು ದೆಹಲಿಗೆ ಹೋಗಬೇಕಿದೆ. ಮಿನಿಷ್ಟ್ರಿ ಆಫ್ ಇಂಡಸ್ಟ್ರಿಸ್ ಜೊತೆ ಮೀಟಿಂಗ್ ಇದೆ. ನನಗೆ ನನ್ನ ಇಂಡಸ್ಟ್ರಿಯನ್ನು ಎಕ್ಸ್ಪಾಂಡ್ ಮಾಡೋ ಪ್ಲಾನ್ಗೆ ಅಪ್ರೂವಲ್ ಬೇಕಿದೆ. ಹಾಗಾಗಿ ನನ್ನ ಅಸಿಸ್ಟೆಂಟ್ನ ಕಳುಹಿಸ್ತೇನೆ. ಮನೆ ತೋರಿಸಿಬಿಡಿ. ಎಷ್ಟಾಗುತ್ತೆ ಮನೆಯ ಬೆಲೆ?’

‘ಬನ್ನಿ ಸರ್, ಚೀಪಾಗಿಯೇ ಕೊಡಿಸ್ತೇನೆ. ಈ ಏರಿಯಾದಲ್ಲಿ ಚದರಡಿಗೆ ಮೂವತ್ತ ಐದು ಸಾವಿರ ರೂಪಾಯಿ ಇದೆ. ಎರಡೋ ಮೂರೋ ಸಾವಿರ ಕಡಿಮೆ ಮಾಡಿಕೊಳ್ಳಬಹುದು. ಪ್ರಾಪರ್ಟಿ ಮೇಲೆ ಇನ್ವೆಸ್ಟ್ಮೆಂಟ್ ಮಾಡಿದರೆ ಯಾವತ್ತೂ ಡಿ ವ್ಯಾಲ್ಯುಯೇಶನ್ ಆಗೋಲ್ಲ,’ ಎಂದು ನನಗೇ ಬುದ್ಧಿವಾದ ಹೇಳುವುದಕ್ಕೆ ಶುರುವಾಡಿದ. ‘ಸರ್, ಯಾವಾಗ ಕಳಿಸ್ತೀರಿ ನಿಮ್ಮ ಅಸಿಸ್ಟೆಂಟ್ನ?’
‘ಶುಭಸ್ಯ ಶೀಘ್ರಂ, ಎನ್ನುತ್ತಾರೆ. ಇವತ್ತು ಮಧ್ಯಾಹ್ನ?’ ಕೇಳಿದೆ.

‘ಇವತ್ತು? ಇವತ್ತು ಮಧ್ಯಾಹ್ನ ನನ್ನದೊಂದು ದೊಡ್ಡ ಡೀಲ್ ರಿಜಿಸ್ಟ್ರೇಶನ್ ಇದೆ. ಇವತ್ತು ನನ್ನ ಹುಡಗನ್ನ ಕಳಿಸ್ತೀನಿ. ಅವನ ಹತ್ತಿರ ವ್ಯವಹಾರದ ವಿಷಯ ಮಾತಾಡಬೇಡಿ. ಮನೆ ತೋರಿಸ್ತಾನೆ, ನೋಡಿಕೊಂಡು ಬನ್ನಿ,’ ಎಂದ. ಹೂಂ ಅಂದೆ. ‘ಹುಡುಗನ ಹತ್ತಿರ ಮನೆಯ ಡಾಕ್ಯಮೆಂಟ್ ಕಾಪಿ ಕಳುಹಿಸಿ,’ ಎಂದೆ.
‘ನಮ್ಮ ಬಾಯ್ಗೆ ಅದೆಲ್ಲ ಗೊತ್ತಾಗೋಲ್ಲ ಸರ್, ಇವತ್ತು ಮನೆ ನೋಡಿಕೊಂಡು ಬನ್ನಿ. ಇಷ್ಟವಾದರೆ ಕೊಡ್ತೀನಿ. ಎರಡು ಲಕ್ಷ ರೂಪಾಯಿ ಅಡ್ವಾನ್ಸನ್ನ ಕೊಡಿ. ವ್ಯವಹಾರ ಕುದುರಿದ್ರೆ ಕಮಿಷನ್ನಲ್ಲಿ ಅಡ್ಜಸ್ಟ್ ಮಾಡಿಕೊಳ್ತೀವಿ, ಇಲ್ಲವಾದರೆ ರಿಟರ್ನ್ ಮಾಡ್ತೀವಿ,’ ಎಂದ. ನನ್ನ ಮನೆ ನನಗೇ ಮಾರಲು, ಕಾಗದಪತ್ರಗಳನ್ನು ತೋರಿಸಲು ಎರಡು ಲಕ್ಷ ರೂಪಾಯಿಗಳನ್ನು ಕೊಡಬೇಕು. ಇದೊಂದು ವ್ಯವಸ್ಥಿತ ಮೋಸಮಾಡುವ ಜಾಲ.

‘ನಿಮ್ಮ ಕಮಿಷನ್ ಎಷ್ಟು?’ ಕೇಳಿದೆ. ‘ಮಾಮೂಲಿ ಸರ್, ಕೋಟಿ ರೂಪಾಯಿಯ ಬೆಲೆಯ ಮೇಲಾದರೆ ಒಂದು ಪರ್ಸೆಂಟ್,’ ಎಂದ. ಈ ಮನೆ ಮಾರಿದರೆ ಅವನಿಗೆ ಎಪ್ಪತ್ತು ಲಕ್ಷ ರುಪಾಯಿಗಳು, ಎರಡೂ ಕಡೆಯಿಂದ ಸಿಗುತ್ತದೆ, ಅದೂ ತೆರಿಗೆ ರಹಿತ ಹಾರ್ಡ್ ಕ್ಯಾಶ್!
ಮಧ್ಯಾಹ್ನ ನಾನೇ ಹೋದೆ. ಬೀಗದ ಕೈ ಹಿಡಿದುಕೊಂಡು ಒಬ್ಬ ಹುಡುಗ ಮನೆಯೆದುರು ನಿಂತಿದ್ದ. ಕುರುಚಲು ಗಡ್ಡ, ಕೆದರಿದ ಕೂದಲು, ತಲೆಯ ಮೇಲೊಂದು ಟೋಪಿ. ಈಗಷ್ಟೇ ಕಸಾಯಿಖಾನೆಯಿಂದ ಬಂದವನಂತಿದ್ದ.

ನನ್ನನ್ನು ಕಂಡವನೇ ಏನೂ ಮಾತನಾನಡೇ ಗೇಟಿನ ಬೀಗ ತೆರೆದ, ಮನೆಯ ಮುಖ್ಯ ದ್ವಾರದ ಬೀಗವನ್ನೂ ತೆರೆದ. ನನ್ನ ಮನೆಯ ಬೀಗದ ಕೈ ಅವನಿಗೆಲ್ಲಿ ಸಿಕ್ಕಿದೆ ಎಂಬುದು ನನಗೆ ತಿಳಿಯಲೇ ಇಲ್ಲ. ನಾನು ಹೊಸ ಮನೆಯನ್ನು ನೋಡುವವನಂತೆ ಎಲ್ಲಾ ಕಡೆ ಸುತ್ತಿದೆ. ಮನೆಯನ್ನು ಶುಚಿಗೊಳಿಸದೇ ತುಂಬಾ ಕಾಲವಾಯಿತು.
ಈ ಹುಡುಗನ ಹತ್ತಿರ ಮಾತನಾಡುವುದು ವ್ಯರ್ಥ ಎನಿಸಿ, ಹೊರಬಂದು ಕಾರಿನಲ್ಲಿ ಕುಳಿತೆ. ತನ್ನ ಮುಖದಲ್ಲಿ ಯಾವುದೇ ಪ್ರತಿಕ್ರಿಯೆ ತೋರಿಸದೇ ಆ ಹುಡುಗ ತನ್ನ ಸೈಕಲ್ ಏರಿದ.

ಎರಡು ದಿನಗಳ ನಂತರ ನಾನೇ ರಫೀಕನಿಗೆ ಕರೆ ಮಾಡಿದೆ. ‘ಮನೆ ಚೆನ್ನಾಗಿದೆ ಎಂದು ನನ್ನ ಅಸಿಸ್ಟೆಂಟ್ ಹೇಳಿದ್ದಾನೆ. ನಾನು ಮತ್ತೆ ನನ್ನ ಗೃಹ ಮಂತ್ರಿ, ಅರ್ಥಾತ್ ನನ್ನ ಬೀವಿ, ಒಮ್ಮೆ ನೋಡಿಬಿಟ್ಟು ನೆಗೋಶಿಯೇಶನ್ ಮಾಡ್ತೀನಿ. ಮನೆಯ ಓನರ್ ಹತ್ತಿರ ಮಾತನಾಡಬೇಕಲ್ಲ,’ ಎಂದೆ.
‘ಸರ್, ಅವರು ಅಮೆರಿಕದಲ್ಲಿ ಇರೋದು. ಯಾವುದಕ್ಕೂ ಬರೋಲ್ಲ. ನಾನೇ ವ್ಯವಹಾರದ ಎಲ್ಲಾ ಜವಾಬ್ದಾರಿ ತೆಗೆದುಕೊಂಡಿರೋದು. ನೀವೇನೂ ವರಿ ಮಾಡಿಕೊಳ್ಳಬೇಡಿ ಸರ್,’ ಎಂದ.
‘ನೀವು ಒಬ್ಬರೇ ಇದರೋದಾ? ಅಥವಾ ನಿಮ್ಮದೇ ಒಂದು ರಿಯಲ್ ಎಸ್ಟೇಟ್ ಕಂಪನಿ ಇದೆಯಾ?’ ಕೇಳಿದೆ. ಒಬ್ಬನೇ ವ್ಯಕ್ತಿ ಇಷ್ಟೊಂದು ದೊಡ್ಡ ದಗಾಬಾಜಿ ನಡೆಸೋದು ಸಾಧ್ಯವಿಲ್ಲ.

‘ನಮ್ಮದು ಸಾವಿರಾರು ಕೋಟಿ ಟರ್ನ್ಓವರ್ ಬಿಸನೆಸ್ ಇದೆ ಸರ್. ನಿಮಗೆ ನನ್ನ ಕಾರ್ಡ್ ಅನ್ನ ವ್ಯಾಟ್ಸ್ಆಪ್ನಲ್ಲಿ ಕಳಿಸ್ತೇನೆ ಸರ್. ಬೆಂಗಳೂರಿನಲ್ಲಿ ನಮ್ಮದು ಮೋಸ್ಟ್ ರಿಲೆಯೇಬಲ್ ಕಂಪನಿ ಸರ್. ಕಳೆದ ಹತ್ತು ವರ್ಷಗಳಲ್ಲಿ ಸಾವಿರಾರು ಡೀಲ್ ಮಾಡಿಸಿಕೊಟ್ಟಿದ್ದೇವೆ. ಡಾಕ್ಯುಮೆಂಟ್ ಅಥೆಂಟಿಸಿಟಿ ಚೆಕ್ ಮಾಡಲು ನಮ್ಮ ಹತ್ತಿರಾನೇ ಎಕ್ಸ್ಪೀರಿಯನ್ಸ್ಡ್ ಲಾಯರ್ಗಳಿದ್ದಾರೆ. ಬಿಬಿಎಂಪಿನಲ್ಲಿ, ಬಿಡಿಯೇನಲ್ಲಿ ನಮ್ಮವರು ಇದ್ದಾರೆ. ಏನಾದರೂ ವ್ಯತ್ಯಾಸವಾದರೂ ಅದನ್ನು ಸುಲಭವಾಗಿ ಸರಿಯಾಗಿಸುತ್ತಾರೆ ಸರ್, ಏನೂ ವರಿ ಮಾಡಿಕೊಳ್ಳಬೇಡಿ,’ ಎಂದ.
‘ಸರಿ, ನಾಳೆ ಡೊಕ್ಯುಮೆಂಟಿನೊಂದಿಗೆ ಬನ್ನಿ. ನಿಮಗೆ ಹೇಗೆ ಪೇ ಮಾಡೋದು? ಯುಪಿಐ? ನೆಟ್ ಬ್ಯಾಂಕಿಂಗ್? ಚೆಕ್?’ ಕೇಳಿದೆ.
‘ಅವೆಲ್ಲಾ ಇಲ್ಲ ಸರ್. ಹಾಗೆಲ್ಲಾ ಮಾಡಿದರೆ ಟ್ಯಾಕ್ಸ್ ಪ್ರಾಬ್ಲೆಮ್ಮು. ನಮ್ಮದು ಹಾರ್ಡ್ ಕ್ಯಾಷ್ ವ್ಯವಹಾರ,’ ಎಂದ.
ಮರುದಿನ ಮನೆಯನ್ನು ನಾನೇ ನೋಡುವ ಸಮಯ ಫಿಕ್ಸ್ ಆಯಿತು. ರಫೀಕನೇ ಬರುತ್ತಾನೆ. ಎಲ್ಲಾ ಓಕೆ ಅನಿಸಿದರೆ ಅಲ್ಲಿಯೇ ಎರಡು ಲಕ್ಷ ರೂಪಾಯಿ ಕೊಟ್ಟರೆ ಮನೆಯ ಡಾಕ್ಯುಮೆಂಟ್ಗಳ ಪ್ರತಿಗಳನ್ನು ಕೊಡುತ್ತಾನಂತೆ.

ಹೊರಡುವ ಮೊದಲು ಸ್ಥಳೀಯ ಪೊಲಿಸ್ ಸ್ಟೇಷನ್ಗೆ ಹೋಗಿ ಅಲ್ಲಿಯ ಇನ್ಸ್ಟೆಕ್ಟರ್ಗೆ ವಿಷಯ ತಿಳಿಸಿದೆ. ರಫೀಕ್ ಕಳುಹಿಸಿದ ವಿಸಿಟಿಂಗ್ ಕಾರ್ಡನ್ನು ತೋರಿಸಿದೆ. ‘ಇದು ಸರಿಯಾದ ಕಾರ್ಡು ಅಲ್ಲ, ವಿಳಾಸವೂ ಸರಿಯಿಲ್ಲ,’ ಎಂದ ಅವರು ‘ನೀವು ನಿಮ್ಮ ಮನೆಯಲ್ಲಿ ವಾಸವಾಗಿಲ್ಲವಾ?’ ಎಂದು ಕೇಳಿದ. ‘ಇಲ್ಲ, ಹಾಗೇ ಖಾಲಿ ಇದೆ,’ ಎಂದೆ.
‘ಮನೆ ಖಾಲಿ ಇದೆ ಎಂದು ಗೊತ್ತಾದರೆ ಹೀಗೆಲ್ಲಾ ಆಗುತ್ತದೆ. ಅಲ್ಲಿಗೆ ಆಗಾಗ ಹೋಗಿ ಉಳಿಯಬೇಕು ಅಥವಾ ಬಾಡಿಗೆಗೆ ಕೊಡಬೇಕು. ಇಲ್ಲವಾದರೆ ಮನೆಯಲ್ಲಿ ಯಾರೋ ಇದ್ದಾರೆ ಎಂಬ ಭಾವನೆ ಬರುವ ಹಾಗೆ ಕೆಲ ಬಟ್ಟೆಗಳನ್ನು ಕಾಣುವ ಹಾಗೆ ಒಣಹಾಕಬೇಕು,’ ಎಂದರು ಅವರು.
ಸಂಜೆ. ರಫೀಕ್ ಬರುವ ಹೊತ್ತಿಗೆ ನನ್ನ ಜಮೀನಿನ ಹತ್ತಿರ ಪೊಲಿಸರನ್ನು ಕಳುಹಿಸಲು ಹೇಳಿದೆ, ಮತ್ತು ತಕ್ಷಣ ಅರೆಸ್ಟ್ ಮಾಡುವಂತೆಯೂ ವಿನಂತಿಸಿದೆ. ಇವೆಲ್ಲಾ ಆಗೋಲ್ಲ, ಹೋಗೋಲ್ಲ ಎಂಬಂತೆ ಮುಖ ಮಾಡಿಕೊಂಡ ಅಧಿಕಾರಿ ಕಾಟಾಚಾರಕ್ಕೆಂಬಂತೆ ಸರಿ, ಸರಿ, ಎಂದ. ಅಲ್ಲಿಂದ ಹೊರಟು ಹೊರಬರುತ್ತಿದ್ದಂತೆಯೇ ನಮ್ಮ ಮಾತುಗಳನ್ನು ಕೇಳಿಕೊಂಡ ಕಾನ್ಸ್ಟೇಬಲ್ ಒಬ್ಬ ನನ್ನ ಹಿಂದೆಯೇ ಬಂದು, ಕಾರೇರುತ್ತಿದ್ದ ನನ್ನನ್ನು ನಿಲ್ಲಿಸಿ ಎಂದ, ‘ಸರ್?’
ನಾನು ಏನು ಎಂದು ಕೇಳಲಿಲ್ಲ.

‘ಇದೆಲ್ಲಾ ದೊಡ್ಡ ಮಾಫಿಯಾ ಸರ್. ಯಾವುದಾದರೂ ಮನೆಯೋ, ಸೈಟೋ ತುಂಬಾ ದಿನಗಳಿಂದ ಹಾಗೆಯೇ ಬಿದ್ದಿದ್ದರೆ ಫೇಕ್ ಡಾಕ್ಯುಮೆಂಟ್ ಮಾಡಿ ಮಾರಿಬಿಡ್ತಾರೆ. ಈ ಲೆವೆಲ್ನಲ್ಲಿ ಇರೋದರಿಂದ ನೀವು ಬಚಾವು. ಕೆಲವೊಮ್ಮೆ ಮನೆಯೊಳಗೇ ಸೇರಿಕೊಂಡು ಇರಲು ಶುರು ಮಾಡುತ್ತಾರೆ. ಆಗ ನಿಮ್ಮ ಆಸ್ತಿ ನಿಮ್ಮ ಕೈ ಬಿಟ್ಟಂತೆಯೇ,’ ಎಂದವನು, ‘ಇದು ಪೊಲೀಸರಿಗೂ ಗೊತ್ತು, ಇದನ್ನು ಸಪೋರ್ಟ್ ಮಾಡುವ ಸರಕಾರಿ ಅಧಿಕಾರಿಗಳಿಗೂ ಗೊತ್ತು, ಕಮಿಷನ್ ತೆಗೆದುಕೊಳ್ಳುವ ಮಿನಿಷ್ಟರಿಗೂ ಗೊತ್ತು. ಅಮ್ಮಮ್ಮಾ ಎಂದು ಅರೆಸ್ಟ್ ಮಾಡಿದರೆ ಮರುದಿವೇ ಜಾಮೀನು ಕೊಡಿಸುವ ರಾಜಕಾರಣಿಗಳಿದ್ದಾರೆ. ನಂತರ ನೀವು ವರ್ಷಗಟ್ಟಲೆ ಸುಮ್ಮನೆ ಕೋರ್ಟು, ಮನೆ ಅಂತ ಅಲೆಯಬೇಕು, ಏನೂ ಆಗೋಲ್ಲ,’ ಎಂದವನು ಯಾವುದೇ ಪ್ರತಿಕ್ರಿಯೆಗೂ ಕಾಯದೇ ಹೊರಟುಹೋದ.

ಅ ಮಧ್ಯಾಹ್ನ ನನ್ನದೇ ಮನೆಯೆದುರು ನನ್ನ ಪರವಾಗಿ ಜಿ.ಪಿ.ಎ. ಪಡೆದ ರಫೀಕನಿಗಾಗಿ ಕಾದೆ. ಬರಲಿಲ್ಲ. ಫೋನು ಮಾಡಿದೆ, ‘ನೀವು ಕರೆ ಮಾಡಿದ ಈ ವ್ಯಕ್ತಿ ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದಾರೆ,’ ಎಂಬ ಮುದ್ರಿತ ಧ್ವನಿ ಬಂತು. ಬಹುಶಃ ಸ್ವಿಚ್ ಆಫ್ ಮಾಡಿಕೊಂಡಿರಬೇಕು. ಅಂದರೆ ನಾನು ಪೊಲಿಸ್ ಸ್ಟೇಶನ್ಗೆ ಹೋದ ವಿಷಯ ಅವನಿಗೆ ತಿಳಿದುಬಿಟ್ಟಿದೆ.
ಮನೆಯ ಬೀಗಗಳನ್ನು ಬದಲಾಯಿಸಬೇಕು. ಆಗಾಗ ಬಂದು ಇಲ್ಲಿ ವಾಸಿಸಬೇಕು, ಎಂದು ತೀರ್ಮಾನಿಸಿದೆ.

-ಸೂರಿ ಹಾರ್ದಳ್ಳಿ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x