ಶ್ರೀಯುತ ಸುನೀಲ್ ಹಳೆಯೂರು ಮೂಲತಃ ಸಾಹಿತ್ಯ ಸಹೃದಯಿ. ಬರೀ ಸಹೃದಯಿ ಮಾತ್ರವಲ್ಲ; ಸ್ವತಃ ಕವಿ, ವಿಮರ್ಶಕರು, ವ್ಯಾಖ್ಯಾನಕಾರರು, ಕನ್ನಡ ಪುಸ್ತಕಗಳನ್ನು ಓದಿಸುವ ಸದ್ದಿಲ್ಲದ ಸುದ್ದಿ ಬೇಡದ ಪ್ರಸಾರಕರು, ಬೆಂಗಳೂರಿನ ಕಾರ್ಪೊರೇಟ್ ಮತ್ತು ಕಾರ್ಪೊರೇಟ್ ಅಲ್ಲದ ಎರಡೂ ಕ್ಷೇತ್ರಗಳಲ್ಲೂ ತಮ್ಮದೇ ಆದ ಬರೆಹಗಾರತನದ ಛಾಪನ್ನೊತ್ತಿದವರು. ಆಕಾಶವಾಣಿ, ದೂರದರ್ಶನ, ಪತ್ರಿಕೆಗಳ ಆನ್‌ಲೈನ್ ವಾಹಿನಿಗಳಲ್ಲಿ ತಮ್ಮ ಕಗ್ಗದ ವ್ಯಾಖ್ಯಾನಗಳ ಮೂಲಕ ಮನೆ ಮಾತಾದವರು. ಗೀತ ರಚನಾಕಾರರು. ಮುಖ್ಯವಾಗಿ ತಮ್ಮ ಸಾಹಿತ್ಯ, ಸಂಸ್ಕೃತಿ ಮತ್ತು ಕನ್ನಡತನದ ಕೆಲಸಗಳಿಗೆ ಸಾಮಾಜಿಕ ಮತ್ತು ಸಾಮುದಾಯಿಕ ಆಯಾಮ ಕೊಟ್ಟವರು. ಕಾರ್ಪೊರೇಟ್ ಮಂದಿಯಲ್ಲಿ ಸಮಾಜಸೇವೆಯ ಸಸಿ ನೆಟ್ಟವರು. ತಮ್ಮ ಭಾನುವಾರದ ಬಿಡುವಿನ ಅವಧಿಯಲ್ಲಿ ಸಮಾಜಮುಖಿಯಾಗಿ ಊರೂರು ಸುತ್ತುವವರು; ಅಲ್ಲೆಲ್ಲೋ ಹೋಗಿ ಜನಜಾಗೃತಿಯಂಥ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಶಕ್ತ್ಯನುಸಾರ ನಿರ್ವಂಚನೆಯಿಂದ ಹತ್ತೂ ಜನರ ಜೊತೆ ಕೆಲಸ ಮಾಡಿ, ಸಾರ್ಥಕ್ಯ ಕಾಣುವವರು. ‘ಬಾಳು ಬಾಳದೇ ಬಿಡದು’ ಎಂಬುದಿವರ ಮೊದಲ ಕವನ ಸಂಕಲನ. ತದನಂತರ ತನಗಗಳತ್ತ ಆಕರ್ಷಿತರಾಗಿ, ಆ ಕಾವ್ಯಪ್ರಕಾರದಲ್ಲೇ ಕೃಷಿ ಮಾಡಿ, ‘ಮನದೊಳಮಿಡಿತ’ ಎಂಬ ಸ್ವತಂತ್ರ ಸಂಕಲನವನ್ನೇ ಹೊರ ತಂದಿದ್ದಾರೆ. ಬಾಳು ಬಾಳದೇ ಬಿಡದು ಎಂದವರು ‘ನವ್ಯಜೀವಿ’ ಎಂಬ ಇನ್ನೊಂದು ಕೃತಿಯನ್ನು ಪ್ರಕಟಿಸಿದರು.
ಪೂಜ್ಯ ಡಿವಿಜಿಯವರ ಮಂಕುತಿಮ್ಮನ ಕಗ್ಗದ ಪ್ರೇರಣೆಯಿಂದ ಸತ್ಯೇಶ್ ಎನ್ ಬೆಳ್ಳೂರ್ ಅವರು ಬರೆದ ಸಾವಿರಾರು ಚೌಪದಿಗಳಲ್ಲಿ ಆಯ್ದ ಹಲವಕ್ಕೆ ವ್ಯಾಖ್ಯಾನ ಬರೆದದ್ದು ಈ ಪುಸ್ತಕದ ಅತಿಶಯ. ಆನಂತರ ಅವರದೇನೂ ಸುಮ್ಮನಿರುವ ಜೀವವಲ್ಲ; ಸುಮ್ಮನಿರದ ಜೀವಿಯೂ ಅಲ್ಲ! ನೂರಾರು ಪುಸ್ತಕ ಪರಿಚಯಗಳನ್ನು ಮಾಡಿದರು, ಹಾಗೆಯೇ ನೂರಾರು ಪುಸ್ತಕಗಳನ್ನು ಪುಸ್ತಕ ತಾಂಬೂಲ ಎಂಬ ಹೆಸರಿನಲ್ಲಿ ಸಾಹಿತ್ಯಾಭಿಮಾನಿಗಳಿಗೆ ಕೊಟ್ಟು ಓದುಸಂಸ್ಕೃತಿಯನ್ನು ಉತ್ತೇಜಿಸಿದರು. ಬೆಂಗಳೂರನೂ ಕಾರ್ಪೊರೇಟನೂ ಸಾಹಿತ್ಯಮಯ ಮಾಡಿದವರಲ್ಲಿ, ಮಾಡುತ್ತಿರುವವರಲ್ಲಿ ಇವರದು ಸದಾ ಅಗ್ರಪಂಕ್ತಿ.
ಸುನೀಲರು ನನ್ನ ವಿದ್ಯಾರ್ಥಿಯಾಗಿದ್ದವರು. ಓದಿದ್ದು ಬಿಕಾಂ ಪದವಿ. ಆಯ್ಕೆ ಮಾಡಿಕೊಂಡಿದ್ದು ಬೆಂಗಳೂರು ನಗರದ ಕಾರ್ಪೊರೇಟ್ ವೃತ್ತಿ. ಅಲ್ಲಿನ ಸಂಸ್ಥೆಯೊಂದರ ಹಿರಿಯ ಮಾರಾಟ ವ್ಯವಸ್ಥಾಪಕ. ತಮ್ಮೆಲ್ಲ ಬಿಡುವಿನ ಹವ್ಯಾಸವನ್ನು ಸಾಹಿತ್ಯಕ್ಕೆ ಮೀಸಲಿಟ್ಟ ಅಪರೂಪದ ನೇಹಿಗನೀತ. ಓದುವ ದಿನಗಳಲ್ಲಿ ಕವಿತೆಗಳನ್ನು ರಚಿಸಿದ ಡೈರಿಯೊಂದನ್ನು ನನಗೆ ತಂದು ಕೊಟ್ಟು ಸಲಹಿಸಿ ಎಂದರು. ಆಗಲೇ ಈತನ ರಚನೆಗಳಲ್ಲಿ ನಾನು ಸೂಕ್ಷ್ಮ ಸಂವೇದನೆ ಮತ್ತು ಅಪೂರ್ವ ಗ್ರಹಿಕೆಗಳನ್ನು ಮನಗಂಡಿದ್ದೆ. ಜೊತೆಗೆ ಬೆನ್ನು ತಟ್ಟಿದ್ದೆ. ಎಡೆಬಿಡದೆ ಸಾಹಿತ್ಯವನ್ನು ಅಭ್ಯಾಸ ಮಾಡಿದ ಸುನೀಲರು ಜೀವನಜಂಜಾಟದಲ್ಲಿ ಮತ್ತು ವೃತ್ತಿಯೊತ್ತಡದಲ್ಲಿ ಕಳೆದು ಹೋಗದೇ ಬರೆಯುವ ಪ್ರವೃತ್ತಿಯನ್ನು ಮುಂದುವರಿಸಿದರು. ಇದು ಸಂತೋಷ ಮತ್ತು ಸೋಜಿಗದ ಸಂಗತಿ. ಇಂದು ಓದುವವರು ಮತ್ತು ಓದಿ ಬರೆಯುವವರು ಕಡಮೆಯಾಗುತ್ತಿದ್ದಾರೆ. ಪುಸ್ತಕ ಸಂಸ್ಕೃತಿ ನಾಪತ್ತೆಯಾಗುತ್ತಿದೆ. ಓದುವ ಮತ್ತು ಕೇಳುವ ಸದಭ್ಯಾಸಕಿಂತ ನೋಡುವ ಮತ್ತು ನೋಡಿಸುವ ಕ್ಷಣಿಕ ಸುಖದಲ್ಲೇ ತಲ್ಲೀನವಾಗಿರುವ ಹೊತ್ತಲ್ಲಿ ಸುನೀಲರು ಮಹಾನಗರದ ಮಾಯಾಜಾಲದಲ್ಲಿ ಸಿಲುಕಿ ನಲುಗಿ ಹೋಗದೆ, ಸಾಹಿತ್ಯವನ್ನು ಸಂತಸಕ್ಕೂ ಸಮಾಧಾನಕ್ಕೂ ಪರ್ಯಾಯವಾಗಿಸಿಕೊಂಡಿರುವುದು ಅನುಕರಣೀಯ ವಿಚಾರ.
ಹೀಗೆ ಬಹುಮುಖ ಪ್ರತಿಭೆಯ ಸುನೀಲರು ಹತ್ತು ಹಲವು ಕೈಂಕರ್ಯಗಳ ನಡುವೆಯೂ ತಮ್ಮ ಬರೆಹತನವನ್ನು ಕಾಪಾಡಿಕೊಂಡಿರುವುದು ಹೆಮ್ಮೆ ಮತ್ತು ಅಭಿಮಾನ. ನಮ್ಮ ಕೆ ಆರ್ ನಗರದ ಹಳೆಯೂರಿನವರಾದ ಸುನೀಲರ ಸುಸಂಸ್ಕೃತ ಮನೆತನದಲ್ಲೇ ಸಾಹಿತ್ಯವು ಸಹಜವೆಂಬಂತೆ ಉಸಿರಾಡಿದೆ. ವಿದ್ಯಾರ್ಥಿಯಾಗಿದ್ದಾಗಲೇ ಎಚ್ಚೆಸ್ಕೆ ಎಂದೇ ಖ್ಯಾತನಾಮರಾದ ಎಚ್ ಎಸ್ ಕೃಷ್ಣಸ್ವಾಮಿ ಅಯ್ಯಂಗಾರ್ ಅವರ ಅಂಕಣ ಬರೆಹಗಳನ್ನು ಕುರಿತಂತೆ, ಸಿಪಿಕೆ ಎಂದೇ ಖ್ಯಾತರಾದ ಸಿ ಪಿ ಕೃಷ್ಣಕುಮಾರ್ ಅವರ ವಿಪುಲ ಸಾಹಿತ್ಯ ನಿರ್ಮಿತಿಯನ್ನು ಕುರಿತಂತೆ, ವಿಚಾರ ಸಂಕಿರಣಗಳನ್ನು ಹಮ್ಮಿಕೊಂಡಿದ್ದವರು. ಹಾಗಾಗಿ ಇವರದು ಬೆಳೆಯುವ ಸಿರಿ ಮೊಳಕೆಯಲ್ಲೇ; ನಾನು ಅದನ್ನು ಕಣ್ಣಾರೆ ಕಂಡಿರುವೆ ಆಗಲೇ!
ಇದೀಗ ‘ತೆರೆದ ಮನಸಿನ ಮಿಂಚು ಬಳ್ಳಿಗಳು’ ಎಂಬ ಉಪಶೀರ್ಷಿಕೆಯೊಡನೆ ಇವರ ತನಗಗಳ ಸಂಕಲನ ‘ಮನದೊಳಮಿಡಿತ’ ಕೃತಿ ಪ್ರಕಟವಾಗಿದೆ. ತನಗದಲ್ಲಿ ರಚಿತವಾದ ಅದರಲ್ಲೂ ಯಮಳ ತನಗಗಳಲ್ಲಿ ಬರೆದ ಮೊದಲ ಕೃತಿಯಿದು ಎಂಬುದಿದರ ಹೆಗ್ಗಳಿಕೆ. ಫಿಲಿಫೈನ್ಸ್ ದೇಶದ ಬುಡಕಟ್ಟು ಜನಾಂಗವೊದರ ಆಡುಭಾಷೆಯ ಹೆಸರು ತಗಲಾಗ್. ಅವರ ನುಡಿಯಲ್ಲಿ ತಗ ಎಂದರೆ ನದಿಯ ತೀರ. ಒಟ್ಟು ಏಳು ಅಕ್ಷರಗಳಾಗುವಷ್ಟಿನ ಪದಗಳ ನಾಲ್ಕು ಸಾಲುಗಳನ್ನು ತನಗವೆಂದು ಅವರ ಪದ್ಯ ರಚಿಸುತ್ತಿದ್ದುದು ಜಾಗತೀಕರಣದ ಪರಿಣಾಮವಾಗಿ ನಮಗೂ ಪರಿಚಯವಾಯಿತು. ಕನ್ನಡದ ಮಟ್ಟಿಗೆ ಹುಬ್ಬಳ್ಳಿಯ ಡಾ. ಗೋವಿಂದ ಹೆಗಡೆಯವರು ತನಗದ ಹರಿಕಾರರು. ಇವರೇ ಈ ಕೃತಿಗೆ ಬೆನ್ನುಡಿ ಬರೆಯುತ್ತಾ, ಸುನೀಲರು ನಾಲ್ಕು ಸಾಲುಗಳ ಎರಡು ತನಗಗಳಲ್ಲಿ ಒಂದು ಭಾವಪುಷ್ಟಿ ಮತ್ತು ತುಷ್ಟಿ ನೀಡಿದ್ದು, ಯುಗಳ ತನಗಗಳ ರಚನಾಕಾರರಾಗಿದ್ದಾರೆಂದು ಖುಷಿಗೊಳ್ಳುತ್ತಾರೆ. ಅಷ್ಟೇ ಅಲ್ಲದೇ ಕಾವ್ಯವನ್ನು ರಮಣೀಯವಾಗಿಸುವುದು ಇವರ ಉದ್ದೇಶವಲ್ಲ; ಬದುಕಿನ ತಾತ್ತ್ವಿಕತೆಯತ್ತ, ಅದರ ಶೋಧನೆ ಮತ್ತು ಪರಿಶೀಲನೆಗೆ ಬಳಸಿಕೊಳ್ಳುವುದು ಇವರ ಆಶಯ ಎಂದಿದ್ದಾರೆ. ಇದೊಂದು ನೂತನ ಕಾವ್ಯ ಪ್ರಕಾರ. ಏಳು ಅಕ್ಷರಗಳಾಗುವಂಥ ಪದಗಳನ್ನು ಆಯ್ದು ಅದರ ನಾಲ್ಕು ಸಾಲುಗಳನ್ನು ರಚಿಸುವುದು; ಇಂಥದೇ ಇನ್ನೊಂದು ಪದ್ಯಭಾಗವನ್ನು ಪೂರಕವಾಗಿ ಕೊಟ್ಟು ಅರ್ಥ ಪೂರ್ಣ ಮಾಡುವುದು ಸಾಹಸದ ಸಂಗತಿ. ಅದು ಏನೇ ಇರಲಿ, ಸ್ವಚ್ಛಂದವಾಗಿ ಇಂಥ ಕಾವ್ಯ ಬರೆಯುವವರೇ ಕಡಮೆ; ಅದರಲ್ಲಿ ತನಗೆ ತಾನೇ ಇಂಥದೊಂದು ಛಂದೋನಿಯಮವನ್ನು ವಿಧಿಸಿಕೊಂಡು, ಬರೆಯುವುದಿದೆಯಲ್ಲ, ಅದು ಸಾಧನೆ. ಜೊತೆಗೆ ಕವಿತೆಯ ಧ್ವನಿಯನ್ನು ಹೊರಡಿಸುವುದು ಮತ್ತೊಂದು ಸಾಧನೆ. ಆ ಕಾವ್ಯವು ಬದುಕಿನ ತತ್ತ್ವಜ್ಞಾನಕ್ಕೆ ಮೀಸಲಾಗಿಸುವುದು ಬಹು ದೊಡ್ಡ ಸಾಧನೆ. ಇಂಥ ಸಾಧಕರಾಗಿ ಸುನೀಲರು ಸಫಲರಾಗಿದ್ದಾರೆ. ಏಕೆಂದರೆ ಈ ಹೊತ್ತಗೆಯಲ್ಲಿ ಅವರ ಮುನ್ನೂರಿಪ್ಪತ್ತು ತನಗಗಳು ಒಟ್ಟು ನೂರೆಪ್ಪತ್ತು ಪುಟಗಳಲ್ಲಿ ಅಡಕಗೊಂಡು ಆಹ್ಲಾದವಾಗಿವೆ.
ಮೊಸರು ಕಡೆಯಲು
ನವನೀತದ ಸೃಷ್ಟಿ
ಬದುಕ ರೂಪಿಸಲು
ಭಗವಂತನ ವೃಷ್ಟಿ
ಉಳಿಯೇಟು ಸಾಕಲ್ಲ
ವಿಗ್ರಹದ ರೂಪಕೆ
ಶಿಲೆಯಲಡಗಿದೆ
ಮೂರ್ತಿಯ ಮೂರ್ತರೂಪ
ಇದೊಂದು ತನಗ. ಇಂಥವು ಈ ಕೃತಿಯ ತುಂಬ. ಹುಣ್ಣಿಮೆ ಚಂದಿರನ ಜೊತೆಯಲ್ಲೇ ಅಲ್ಲಲ್ಲಿ ಹರಡಿಕೊಂಡ ಮೋಣದ ತುಣುಕುಗಳು ಬೆಳ್ಳಿಯ ಬೆಳಕನ್ನು ಪ್ರತಿಫಲಿಸುವಂತೆ ಇವು ಜೀವ ಜೀವನದ ತಾತ್ತ್ವಿಕತೆಯನ್ನು ಬೋಧಿಸುತ್ತವೆ; ಪರಿಶೀಲಿಸುತ್ತವೆ ಮತ್ತು ಶೋಧಿಸಿ ಕೊಡುತ್ತವೆ. ಕಗ್ಗದ ಅಪಾರ ಪ್ರೇರಣೆ ಮತ್ತು ಪ್ರಭಾವಕ್ಕೊಳಗಾದ ಇನ್ನೋರ್ವ ಹಿರಿಯ ಸಾಹಿತಿ ಶ್ರೀಯುತ ಸತ್ಯೇಶ್ ಎನ್ ಬೆಳ್ಳೂರ್ ಅವರು ಕೃತಿಗೆ ಮುನ್ನುಡಿಸಿದ್ದಾರೆ. ಸುನೀಲರನ್ನು ಬಲು ಸಮೀಪದಿಂದ ಕಂಡ ಇವರು ಕೃತಿಕಾರರ ಬದುಕು ಮತ್ತು ಬರೆಹದ ಚಹರೆಯನ್ನು ಓದುಗರಿಗೆ ಪರಿಚಯಿಸುತ್ತಾ, ಮೊದಲಿನ ಪ್ರೇಮಗೀತೆ, ಚುಟುಕುಗಳಿಂದ ಸಾಗಿದ ಇವರ ಕವಿತಾಯಾನವು ಅನುಭಾವದ ಹೊಸ ಚಿಂತನೆಯತ್ತ ಸರಿದಿದೆ, ಇಂಥವು ಇನ್ನಷ್ಟು ಹೊರ ಹೊಮ್ಮಲಿ ಎಂದು ಹಾರೈಸಿದ್ದಾರೆ.
‘ನೂರು ದೋಷವಿದ್ದರೂ ಜೀವವುಳ್ಳದ್ದು ಕವಿತೆ’ ಎಂದವರು ಬಿ ಎಂ ಶ್ರೀಯವರು. ‘ಇಟ್ಟಿಗೆಯ ಮೇಲೆ ಇಟ್ಟಿಗೆಯನಿಟ್ಟರೆ ಪೆಟ್ಟಿಗೆಯಾಗುವುದಿಲ್ಲ’ ಎನ್ನುತ್ತಾರೆ ಸಿಪಿಕೆಯವರು. ‘ನಿನದಲ್ಲ ಪದಪುಂಜ ಯಾರದೋ ಕರುಣೆ ಅದು ಬರಿ ನಿಮಿತ್ತವೋ ನೀನು’ ಎನ್ನುವರು ಕೆ ಸಿ ಶಿವಪ್ಪನವರು. ಅಂದರೆ ತಾತ್ತ್ವಿಕ ಕಾವ್ಯವೂ ಎಲ್ಲ ರಸಗಳನಾವರಿಸಿಕೊಂಡು, ಕಸಗಳನಾಯ್ದು ಪಕ್ಕಕಿಟ್ಟು, ಶಾಂತರಸದತ್ತ ಸಾಗುವ ನಿಶಾಂತ ಪಯಣವಾಗಲು ಸಾಧ್ಯ ಎಂಬುದನ್ನು ಈ ತನಗಗಳು ತೋರಿಸಿಕೊಟ್ಟಿವೆ. ಇಂಥಲ್ಲಿ ಪದಗಳ ಮಿತಿ ಎಂಬುದು ಕೇವಲ ಪದಗಳಿಗೆ ಸೀಮಿತವಲ್ಲ; ಅದು ನಮಗೆ ನಾವೇ ಹಾಕಿಕೊಳ್ಳುವ ಸ್ವನಿಯಂತ್ರಣ. ಎಲ್ಲವನೂ ಬದುಕಬೇಕಿಲ್ಲ. ‘ಕೆಲವಂ ಬಲ್ಲವರಿಂದ ಕಲ್ತು, ಕೆಲವಂ ಶಾಸ್ತ್ರಂಗಳಂ ಕೇಳುತಂ…….’ ಜೀವಿಪ ಪರಿಯೂ ಇದೆ. ನಿಗದಿಪಡಿಸಿಕೊಂಡ ಚೌಕಟ್ಟಿನಲ್ಲಿ ತತ್ತ್ವಶಾಸ್ತ್ರವನ್ನು ಆಕರ್ಷಕವಾಗಿ ಲೌಕಿಕ ಉಪಮೆ, ಪ್ರತೀಕ, ಪ್ರತಿಮೆಗಳ ಮೂಲಕ ಅಭಿವ್ಯಕ್ತಿಸುವಾಗ ಕಲಾತ್ಮಕಗೊಳಿಸಲು ಅವಕಾಶವಿದೆ ಎಂಬುದಕೆ ಸುನೀಲರ ರಚನೆಗಳು ಸ್ವಯಂದೀಪ್ತ; ಪ್ರಕಾಶಮಾನ ಸಂಪ್ರಾಪ್ತ. ಸಾಮಾನ್ಯವಾಗಿ ಇಂಥವು ರಸಹೀನಗೊಂಡು, ಅನಾಕರ್ಷಕವಾಗಿ ಶುಷ್ಕವೂ ಆಗಿ ಕಳೆಗುಂದುವುವು. ಲೋಕದ ರಾಗಭಾವಗಳನ್ನು ಪ್ರಚೋದಿಸುವ ಅವಕ್ಕೆ ತೈಲವನೆರೆದು ಇನ್ನಷ್ಟು ಪ್ರಜ್ವಲಿಸುವ ಉಮೇದು ಲೌಕಿಕ ಕಾವ್ಯದ್ದು. ಇದು ಹೇಳೀ ಕೇಳೀ ಲೋಕೋತ್ತರ ಸತ್ಯವನ್ನು ಪ್ರಕಾಶಿಸಲು ಹೊರಟ ಆತ್ಮಜ್ಯೋತಿ. ಹೀಗಾಗಿ ಈ ಪುಸ್ತಕದ ರಚನೆಗಳು ಮೊದಲಿಗೇ ಸಾವಧಾನದ ಮನವನ್ನು ಬೇಡುತ್ತವೆ. ಎಲ್ಲಿಂದ ಬೇಕಾದರೂ ಓದಕೊಳ್ಳಬಹುದಾದ ಸ್ವಾತಂತ್ರ‍್ಯವನ್ನು ಓದುಗರಿಗೆ ನೀಡುತ್ತವೆ. ನಮ್ಮ ಆ ಸಮಯದ ಮನಸ್ಥಿತಿಗನುಸಾರ ಬೇಕಾದುದನ್ನು ಆಯ್ದು ಓದಿಕೊಂಡು, ಮೆಲುಕು ಹಾಕುವ ಅವಕಾಶ ಸಹ ಇದೆ. ಇದೇ ಅರ್ಥವನ್ನೂ ಭಾವವನ್ನೂ ನೀಡುವ ಕನ್ನಡದ ಇನ್ನಿತರ ಮುಕ್ತಕಗಳನ್ನೂ ನೆನೆದು ಕಂಪೇರಿಸುವ ಸಾಧ್ಯತೆಯನ್ನೂ ಕೊಡುತ್ತವೆ. ಇಷ್ಟಕೂ ಹೊಸಗನ್ನಡದ ಇಂಥ ನೀತಿಕಾವ್ಯ ಪರಂಪರೆಯ ಬೆಳೆ ಹುಲುಸಾದುದು. ಎಲ್ಲಕೂ ಡಿವಿಜಿಯವರ ಮಂಕುತಿಮ್ಮನ ಕಗ್ಗ ಮತ್ತು ಮರುಳ ಮುನಿಯನ ಕಗ್ಗಗಳೇ ಪ್ರೇರಣ ಮತ್ತು ಧಾರಣ. ಅಲ್ಲಿಂದ ಸಾಗಿ ಬಂದರೆ ನಾವು ಬಂದು ನಿಲ್ಲುವುದು 2003 ರಲ್ಲಿ ಮೊದಲ ಬಾರಿಗೆ ಪ್ರಕಟಗೊಂಡ ಮಾನ್ಯ ಕೆ ಸಿ ಶಿವಪ್ಪನವರ ಮುದ್ದುರಾಮನ ಮನಸಿಗೆ. ಇದೀಗ ಶ್ರೀಯುತರು ಮೂವತ್ತು ಸಾವಿರಕ್ಕೂ ಅಧಿಕ ಚೌಪದಿಗಳನ್ನು ರಚಿಸಿ, ಎಲ್ಲವನೂ ಪುಸ್ತಕರೂಪದಲ್ಲಿ ಪ್ರಕಟಿಸಿ, ನಮ್ಮೆದೆಗೆ ಅಪರಿಮಿತ ಬೆಳಕನೂಡಿದ್ದಾರೆ. ಇವೆಲ್ಲದರ ಜೊತೆಗೆ ಕಗ್ಗದ ದಾರಿಯಲ್ಲೇ ನಡೆದು ನುಡಿದ ಗುರುಸಮಾನರಾದ ಶ್ರೀ ಸತ್ಯೇಶ್ ಬೆಳ್ಳೂರರ ಒಲುಮೆಯ ಹೊನಲು ಸಹ ಇವರನ್ನು ಪ್ರಭಾವಿಸಿದೆ. ಅಷ್ಟಲ್ಲದೇ ಸತ್ಯೇಶರ ಇಂಥ ರಚನೆಗಳನ್ನು ಕುರಿತು, ಸುದಿನಕ್ಕೊಂದು ಸುಂದರ ಚೌಪದಿ ಎಂಬ ಉಪಶೀರ್ಷಿಕೆಯಡಿಯಲ್ಲಿ ನವ್ಯಜೀವಿ ಎಂಬ ವ್ಯಾಖ್ಯಾನ ಗ್ರಂಥವನ್ನು ಸಹ ಸುನೀಲ್ ಬರೆದಿದ್ದಾರೆ. ಅಂತಿಮವಾಗಿ ಇವೆಲ್ಲವೂ ಇವರ ಈ ತನಗಗಳಿಗೆ ಸ್ವಯಂ ಸ್ಫೂರ್ತವಾಗಿವೆ. ಚೌಪದಿಯ ನಾಲ್ಕು ಸಾಲುಗಳನ್ನು ಅರ್ಧಕ್ಕೆ ಒಡೆದರೆ ತನಗ ಯುಗಳಗಳಾಗಿ ರೂಪುಗೊಳ್ಳುತ್ತವೆ. ಅಂತೆಯೇ ತನಗಗಳ ಎರಡು ಸಾಲುಗಳನ್ನು ಒಂದಾಗಿಸಿದರೆ ಚೌಪದಿಯ ಒಂದು ಸಾಲು ಆಗುತ್ತದೆ.
ಹೀಗಾಗಿ ಚೌಪದಿ ರಚಕರಿಗೆ ತನಗವೂ ತನಗದ ರಚಕರಿಗೆ ಚೌಪದಿಯೂ ತೀರಾ ಸುಲಭ ಮತ್ತು ಸುಭಗ. ಇವೆಲ್ಲವೂ ಅಭಿವ್ಯಕ್ತಿಯ ಶ್ರಮ ಮತ್ತು ಕ್ರಮಗಳಿಗೆ ಸಂಬಂಧಿಸಿದ್ದು. ಯಾಕೆ ಇಂಥ ತತ್ತ್ವಬೋಧೆ ಅಥವಾ ತತ್ತ್ವಪರಿಶೋಧವು ಹೀಗೆ ಮಿತಾಕ್ಷರಗಳಲ್ಲೇ ರಚನೆಗೊಳ್ಳುತ್ತವೆ? ಇದು ಸಹ ವಿಚಾರ ಮಾಡಬೇಕಾದ ಅಂಶ. ಜಗದ ಚಿತ್ರ ವೈಚಿತ್ರ‍್ಯಗಳನ್ನು ಕಂಡ ಅರಿವು ಮತ್ತು ವಿವೇಕಗಳು ವ್ಯಾಖ್ಯಾನಿಸುವ ಪರಿಗೆ ಈ ನಿಗದಿಪಡಿಸಿ ಚೌಕಟ್ಟು ಮತ್ತು ಮೈಕಟ್ಟು ಹೇಳಿ ಮಾಡಿಸಿದ್ದು. ಹೆಚ್ಚು ವಿಸ್ತರಿಸಲು ಇಲ್ಲಿ ಯಾವ ಕತೆಯಾಗಲೀ ಬದುಕಿನ ಹೆಜ್ಜೆ ಗುರುತಾಗಲೀ ಇಲ್ಲ. ಹೀಗಾಗಿ ಒಂದು ಪೂರ್ಣ ಅನಿಸಿಕೆಯ ಒಟ್ಟು ಮೊತ್ತವನ್ನು ಅನುಭವಿಸಿ, ಆಧರಿಸಿ, ಭಾಷೆಯ ರೂಪಕ್ಕೆ ಇಳಿಸಲು ಇಷ್ಟು ಕಡಮೆ ಸಾಲುಗಳು ಸಾಕು. ಒಂದೇನೆಂದರೆ ಕವಿಯ ಅನುಭವವು ಅಭಿವ್ಯಕ್ತಗೊಳ್ಳುವಾಗ ತನಗೆ ಬೇಕಾದ ರೂಪ, ಪ್ರಕಾರಗಳನ್ನು ಆಯ್ದುಕೊಳ್ಳುತ್ತದೆ. ಸಾಹಿತಿಯು ಇಂಥದೇ ಪ್ರಕಾರದಲ್ಲಿ ಬರೆಯಲು ತೊಡಗುವನೋ? ಅಥವಾ ಬರೆಯುವ ವಸ್ತುವು ತನಗೆ ಬೇಕಾದ ರೂಪವಿನ್ಯಾಸವನ್ನು ಆಯ್ದುಕೊಳ್ಳುತ್ತದೋ? ಇದು ಸೃಷ್ಟಿಕಾರ್ಯದ ಒಡಪು. ‘ಅಪಾರೇ ಕಾವ್ಯ ಸಂಸಾರೇ ಕವಿರೇವ ಪ್ರಜಾಪತಿಃ; ಯಥಾಸ್ಮೈ ರೋಚತೇ ವಿಶ್ವಂ ತಥೇದಂ ಪರಿವರ್ತತೇ’ ಎನ್ನುವಂತೆ ಕವಿಯ ಸೃಷ್ಟಿಯು ಬ್ರಹ್ಮನ ಸೃಷ್ಟಿಯಷ್ಟೇ ಮಹತ್ವದ್ದು ಮತ್ತು ನಿಗೂಢದ್ದು. ಅದಕಾಗಿಯೇ ಕವಿಯ ರಚನೆಯನ್ನು ಅನುಸೃಷ್ಟಿ ಎನ್ನುವುದು. ತನಗೆ ಹೇಗೆ ಬೇಕೋ ಹಾಗೆ ಪರಿವರ್ತಿಸಿಕೊಳ್ಳುವ ಸ್ವತಂತ್ರಿಯೂ ತಂತ್ರಿಯೂ ಆದವ. ಅದಕಾಗಿಯೇ ಈ ಪ್ಯಾರಾದ ಮೊದಲಲ್ಲಿ ಪ್ರಸ್ತಾಪಿಸಿದ್ದು: ಒಂದು ಪಕ್ಷ ದೋಷವಿದ್ದರೂ ಜೀವಂತಿಕೆಯುಳ್ಳದ್ದು ನಿಜಕಾವ್ಯ. ಜೊತೆಗೆ ಸುಮ್ಮನೆ ಛಂದೋಪ್ರಕಾರಕ್ಕಾಗಿ ಹೊಸೆದದ್ದೂ ಕಾವ್ಯವಲ್ಲ. ಇಟ್ಟಿಗೆಯ ಮೇಲಿಟ್ಟಿಗೆ ಜೋಡಿಸಿಟ್ಟಂತೆ; ಚಂದ ಕಾಣಬಹುದು; ಆದರೆ ಮನೆಯಾಗುವುದಿಲ್ಲ. ಮನೆಯಾಗಲು ಬರೀ ಇಟ್ಟಿಗೆ ಸಾಲುವುದಿಲ್ಲ! ಸುನೀಲರ ತನಗಗಳು ಇವನ್ನು ಮೀರಿವೆ. ಕವಿತೆಯೂ ಆಗಿವೆ; ಚಂದವೂ ಆಗಿವೆ. ಛಂದದಲ್ಲೂ ಮೊರೆದಿವೆ! ಇದೇ ಖುಷಿಯ ವಿಚಾರ. ಜೊತೆಗೆ ಕವಿಯು ಆಯ್ದುಕೊಂಡ ವಸ್ತುವು ಕೂಡ ವಯಸಿಗೆ ಮತ್ತು ಜೀವನಾನುಭವಕ್ಕೆ ಸವಾಲಾಗುವಂಥದು. ನಿನದಲ್ಲ ಪದಪುಂಜ, ಯಾರದೋ ಕರುಣೆ ಎಂದ ಶಿವಪ್ಪನವರ ಸತ್ಯಸೋಜಿಗವನ್ನು ಸ್ವಲ್ಪ ಬೇರೆ ರೀತಿಯಲ್ಲಿ ನೋಡುವುದಾದರೆ, ಕವಿಯು ತನ್ನರಿವಿಗೆ ಮೀರಿದ್ದನ್ನು ಬರೆಯುವಾಗಲೂ ಪ್ರತಿಭೆಯನ್ನೂ ಪ್ರತಿಭಾನವನ್ನೂ ನೆಚ್ಚಿದ್ದಾರೆ. ಈ ಸರತಿಯಲ್ಲಿ ಇದುವರೆಗೆ ಬಂದಿರುವ ಇಂಥ ಸ್ವರೂಪದ ಕಾವ್ಯಾಭ್ಯಾಸವನ್ನು ಶುದ್ಧಿ ಮತ್ತು ಶ್ರದ್ಧೆಯಿಂದ ಅಭ್ಯಾಸ ಮಾಡಿದ್ದಾರೆ. ಇದೇ ಸದಭಿಮಾನದ ಯಾನ.
ಹೀಗಾಗಿದ್ದರಿಂದ ಸುನೀಲರ ಈ ಕವಿತಾಕುತೂಹಲವು ಸುಮಾರ್ಗವನ್ನು ಆಯ್ದುಕೊಂಡಿದೆ ಎಂದೇ ನನ್ನ ಅಭಿಮತ. ಈ ವಿಚಾರದ್ರವ್ಯವನ್ನು ಇನ್ನಾವ ಪ್ರಕಾರದಲ್ಲೂ ಇಷ್ಟೊಂದು ಸಮರ್ಥವಾಗಿ ಮಂಡಿಸಲು ಸಾಧ್ಯವಾಗದು. ಸುನೀಲರ ಸಾಹಿತ್ಯಾಸಕ್ತಿ, ಸಾಹಿತಿಗಳ ಒಡನಾಟ ಮತ್ತಿತರ ಅವರ ಅನುಗಾಲದ ಚರ್ಯೆಯನ್ನು ಗಮನಿಸಿದಾಗ ಇವರ ಈ ಬಗೆಯ ರಚನೆಗಳಿಗೊಂದು ಅರ್ಥಪೂರ್ಣ ಆಲಂಬನ ದೊರಕಿದೆಯೆಂದೇ ಹೇಳಬೇಕು. ತಮ್ಮ ಆಸಕ್ತಿಯನ್ನೂ ಅಭಿರುಚಿಯನ್ನೂ ಬಹಳ ಹಿಂದೆಯೇ ಕಂಡುಕೊಂಡ ಇವರು ಆ ಮಾರ್ಗದಲ್ಲಿ ನಿಧಾನವಾದರೂ ನಿರ್ದಿಷ್ಟವಾಗಿ ಸಾಗುತ್ತಿರುವುದು ಅವರನ್ನು ಹತ್ತಿರದಿಂದ ಬಲ್ಲ ಎಲ್ಲ ಆಪ್ತೇಷ್ಟರಿಗೆ ಮನವರಿತ. ಒಂದು ಆಲೋಚನೆಯ ನಿರಂತರತೆಗೆ ಒಡ್ಡಿದ ಅಣೆಕಟ್ಟಂತೆ ನನಗೆ ಈ ತನಗಗಳು ಕಂಡವು. ಹರಿವ ನೀರಿನ್ನು ಹಿಡಿದಿಡುವ ಅಣೆಕಟ್ಟೆಯೋಪಾದಿಯಲ್ಲಿ ವಿಚಾರದ ನದಿಯೊಂದು ಭೋರ್ಗರೆದು ಹರಿಯುವಾಗ ಅಲ್ಲೆಲ್ಲೋ ದಡದಲ್ಲಿ ನಿಂತು ಬೊಗಸೆಯೊಳಗೆ ತುಂಬಿಕೊಂಡು ನದಿಯನ್ನು ಅನುಭವಿಸುವ ರೀತ್ಯ ಇಲ್ಲಿಯ ತನಗಗಳು. ಏಕಕಾಲಕ್ಕೆ ಇಲ್ಲಿ ಅದು ನದಿಯಾಗಿಯೂ ನಮ್ಮ ಬೊಗಸೆಯಾಗಿಯೂ ಸಂಪ್ರಾಪ್ತ. ಕೈಯಲಿರುವುದು ನದಿಯೂ ಹೌದು; ಬರಿ ನೀರೂ ಹೌದು! ಮೈಮನವೇ ಕಾವಲಾಗಿ, ಸುತ್ತೆಲ್ಲ ಘಟನೆ ಸಂಘಟನೆಗಳೇ ಕಣ್ಣು ಕಿವಿಯಾಗಿ, ಸಾಗಿ ಹೋದ ಮಾರ್ಗೋಪಾಯಗಳನ್ನೇ ನಡಿಗೆಯಾಗಿ ಪರಿಭಾವಿಸಿದ ಕ್ರಮವಿದು. ವಿಷಯ ವೈವಿಧ್ಯವಿದ್ದರೂ ಅನುಭೂತಿಯೊಂದೇ. ಪ್ರತಿ ಪದ್ಯದಲೂ ಅಭಿವ್ಯಕ್ತಿಯ ವಿಭಿನ್ನ ಬಗೆಯ ನೋಟಗಳಿದ್ದರೂ ಅಂತಿಮ ಸಾರಾಂಶ ಒಂದೇ. ಎಲ್ಲ ಬಣ್ಣಗಳೂ ಬೆರೆತಾಗ ಉದ್ಭವಿಸುವುದು ಬಿಳಿಯ ಬಣ್ಣವಾಗಿ. ಹಾಗೆಯೇ ಎಲ್ಲ ರಸಭಾವಗಳೂ ಜೊತೆಗೂಡಿದಾಗ ಸಂಭವಿಸುವ ಸತ್ಯಕ್ಕೆ ಶಾಂತವೇ ಸ್ಥಾಯಿಭಾವ. ಇದರಿಂದಾಗಿ ಇದು ತಂತಾನೇ ಶಮನಗೊಳಿಸುವ ಪರಮಾತ್ಮನ ಸನ್ನಿಧಾನದತ್ತ ದೃಷ್ಟಿಸುವ ದಾರಿಯಾಗಿದೆ. ವಿಭಿನ್ನ ಬಗೆಯಲ್ಲಿ ವ್ಯಾಖ್ಯಾನಿಸುವ ಸುನೀಲರ ಅಭಿವ್ಯಕ್ತಿಯಲ್ಲಿ ಹೊಸತು ಜನಿಸಿದೆ.
ಸೃಜನಶೀಲತೆಯಾಗಿ ಅರಳಿದೆ. ತಂತಾನೇ ಕಲಾತ್ಮಕ ಆವರಣ ದಕ್ಕಿದೆ. ಅದಕಾಗಿ ಇದು ತೆರೆದ ಮನದ ಮಿಂಚು; ಹೀಗೆ ಬಂದು ಹಾಗೆ ಬೀಸಿ ಹೋಗುವ ಕುಳಿರ್ಗಾಳಿ. ಒಂದು ಕ್ಷಣ ರೋಮಾಂಚನ; ಮಗದೊಂದು ಕ್ಷಣ ಅದರ ತನನ. ಇಲ್ಲಿಯ ತನಗಗಳೂ ಹಾಗೆಯೇ. ಅನಿಸುವಿಕೆಗಳಿಗೆ ತಾತ್ತ್ವಿಕ ರೂಪ ಕೊಡುವಲ್ಲಿ ಕವಿಯ ಪ್ರತಿಭೆ ಅಡಗಿದೆ. ಇದು ಕಷ್ಟ. ಏಕೆಂದರೆ ಎಲ್ಲವೂ ಅಮೂರ್ತ ಭಾವವಿಭಾವಗಳು. ಮತಿಯನ್ನು ಬಳಸಿಯೇ ನಿಷ್ಕರ್ಷೆ ಮಾಡಬೇಕಾದ ಗಹನತರ ಲಹರಿ. ಪಾತ್ರೆಯಲ್ಲಿ ತುಂಬಿಟ್ಟ ಕುದಿನೀರು. ಆಹಾರವಾಗಿ ಜೀರ್ಣವಾಗುವ ತನಕ ಬಿಸಿ ಬೇಕು; ಆಮೇಲೆ ಅದು ತಣ್ಣಗಾಗಬೇಕು. ನಮ್ಮ ಈ ಲೋಕದ ವಿದ್ಯಮಾನಗಳೂ ಹಾಗೆಯೇ. ಅರ್ಥವಾಗುವ ತನಕ ಬೇಗುದಿ; ಅರ್ಥವಾದ ಮೇಲೆ ನೆಮ್ಮದಿ!
ಅದಕಾಗಿಯೇ ನಾನು ಇದರ ಶೀರ್ಷಿಕೆಯಲಿ ಹೇಳಿದ್ದು: ಹೊಳೆಯ ದಡಕೆ ಹೋಗಿ, ಬಗ್ಗಿ ನಮ್ಮ ಬೊಗಸೆಯಲಿ ತುಂಬಿಕೊಳ್ಳುವ ನದಿನೀರ ನೀರವತೆಯಂತೆ. ಒಂದೆಡೆ ಶುಭ್ರತೆ; ಇನ್ನೊಂದೆಡೆ ಮನಸಿನ ಮಾಗುವಿಕೆ. ನೀರೂ ಶುದ್ಧವಾಗಿರಬೇಕು. ಬೊಗಸೆಯು ಪರಿಶುದ್ಧವಾಗಿರಬೇಕು. ಮೊಗೆದು ಹಿಡಿದುಕೊಂಡ ಮೇಲೆ ಕಾಣಬಹುದಾದ ನಮ್ಮ ಪ್ರತಿಬಿಂಬದಂತೆ. ನಾವು ಹೇಗೋ ನಮ್ಮ ಪ್ರತಿಬಿಂಬ ಹಾಗೆ. ಆ ಸಂದರ್ಭದಲ್ಲಿ ನಮ್ಮ ಮನಸೂ ಮುಖ್ಯ. ಈ ಚೆಂದದ ಭಾವವನ್ನು ಗುರುತಿಸಿ, ಆಸ್ವಾದಿಸುವ ಆಸಕ್ತಿಯೂ ಇರಬೇಕು; ಸೋರಿ ಹೋಗದ ಹಾಗೆ ಸ್ವಲ್ಪ ಹೊತ್ತು ನೀರನ್ನು ಹಿಡಿದುಕೊಂಡಿರುವ ಶಕ್ತಿಯೂ ಬೇಕು. ಸುನೀಲರ ತನಗಗಳನ್ನು ಓದಿದ ಮೇಲೆ ನನಗನ್ನಿಸಿದ್ದು ಇದು. ಇಲ್ಲಿ ಜಗದೆಲ್ಲ ಸಕಲೆಂಟು ವಸ್ತು ವಿಚಾರಗಳ ವಿಮರ್ಶೆಯಿದೆ; ವಿಚಕ್ಷಣೆಯಿದೆ. ವ್ಯಾಖ್ಯಾನವೂ ಇದೆ. ಅದೆಲ್ಲವನ್ನೂ ಸಮಚಿತ್ತದಿಂದ ಪರಿಭಾವಿಸಲಾಗಿದೆ. ಇದು ಪಕ್ವತೆಯ ಪ್ರತೀಕ; ಪ್ರಬುದ್ಧತೆಯ ದ್ಯೋತಕ. ಒಂದೆಡೆ ತಾನೇ ವಿಧಿಸಿಕೊಂಡ ಪದ್ಯರೂಪ ಚೌಕಟ್ಟು; ಇನ್ನೊಂದೆಡೆ ವಿಚಾರ ಸಂಪನ್ನ ಮೈಕಟ್ಟು. ಇವನ್ನು ಸಂತುಲನಗೊಂಡ ಸಂತಭಾಷೆಯಲಿ ಅಭಿವ್ಯಕ್ತಿಸುವುದು ಹುಡುಗಾಟಿಕೆಯ ಸಂಗತಿಯಲ್ಲ. ಸುನೀಲರು ತಮ್ಮ ಈ ಮೊದಲ ಪ್ರಯತ್ನದಲ್ಲೇ ಯಶ ಕಂಡಿದ್ದಾರೆ. ಏಕೆಂದರೆ ಇವನ್ನು ಈಗಾಗಲೇ ಹೊಸಗನ್ನಡದಲ್ಲಿ ಬಂದಿರುವ ನೀತಿಕಾವ್ಯಗಳ ಜೊತೆಗಿಟ್ಟು ತೂಗಿ ನೋಡಿದರೆ ಖಂಡಿತ ನಿರಾಸೆಯಾಗುವುದಿಲ್ಲ; ಭರವಸೆ ಮೂಡುತ್ತದೆ. ಪುಸ್ತಕದ ಮುನ್ನುಡಿ ಮತ್ತು ಬೆನ್ನುಡಿಗಳು ಸಹ ಈ ಮಾತನ್ನೇ ಅನುಮೋದಿಸುತ್ತವೆ. ಎಲ್ಲಿಂದಲೋ ಬರುವ ಹೊಸತನದ ಛಾಯೆ, ನಿತ್ಯವೂ ಅಚ್ಚರಿಯ ಜಗವೊಂದು ಸೋಜಿಗ ಎಂಬ ಕವಿಯ ಮಾತು ಈ ಎಲ್ಲ ರಚನೆಗಳ ಮೂಲಚೂಲ. ಏನೇತಕೆ ಎಂಬುದೇ ಹವ್ಯಾಸ; ಅದನುಳಿದಾಗದು ಪದವಿನ್ಯಾಸ ಎನ್ನುತ್ತಾರೆ ಒಂದೆಡೆ ಪುತಿನ ಅವರು. ಬರೆಹವನ್ನು ರಮಣೀಯವಾಗಿಸುವುದು ಸುಲಭ; ಶೋಧನೆಗೆ ಒಡ್ಡುವುದು ಕಷ್ಟ. ಇಂಥದೊಂದು ಕಷ್ಟದ ಟಾಸ್ಕಿನಲ್ಲಿ ಸುನೀಲರು ಸಕ್ಸಸ್ ಕಂಡಿದ್ದಾರೆ. ಗೋವಿಂದ ಹೆಗಡೆಯವರು ಹೇಳುವಂತೆ, ಕಳೆಯ ನಡುವೆ ಬೆಳೆ ಕಾಣದಾಗುತ್ತಿದೆ ಎಂಬ ಆತಂಕ ಬೇಕಾಗಿಲ್ಲ. ಕವಿಯದು ಭರವಸೆಯ ವ್ಯವಸಾಯ. ಅದೂ ಅಪರೂಪದ ನೆಲದಲ್ಲಿ ಸಂಪೂರ್ಣ ಸಾವಯವ ಬೇಸಾಯ!
ಕೊನೆಯಲೊಂದು ಮಾತೆಂದರೆ, ಡಿವಿಜಿಯವರ ಕಗ್ಗವು ಎಷ್ಟೊಂದು ಕೃತಿರಚನೆಗೆ ಕಾರಣವೂ ಪ್ರೇರಣವೂ ಆಗಿದೆಯೆಂದರೆ ಅದರಲ್ಲಿ ಸುನೀಲರ ತನಗವೂ ಒಂದು. ತನಗವೋ ಚೌಪದಿಯೋ ಕಾವ್ಯರೂಪ ಮತ್ತು ಶಿಲ್ಪಗಳು ಒಂದು ಕಡೆಯಿರಲಿ; ಕಾವ್ಯವಸ್ತುವಿಗೊಂದು ಹೆದ್ದಾರಿಯೂ ಹೆದ್ದೊರೆಯೂ ನಿರ್ಮಾಣವಾಯಿತು. ಇಂಥದೊಂದು ಗಹನವೂ ಗಗನಸದೃಶವೂ ಆದಂಥ ವಿಶಾಲ ತತ್ತ್ವ ಪ್ರಪಂಚವು ಈ ಕವಿಕುತೂಹಲಿಗರನ್ನು ಕೈ ಬೀಸಿ ಕರೆದಿದೆ. ಇದಕೆ ತಮ್ಮನ್ನು ಅರ್ಪಿಸಿಕೊಂಡು ಪರವಶವಾಗಿದ್ದಷ್ಟೇ ಅಲ್ಲ; ತಮ್ಮದೂ ಆದಂಥ ಮಹತ್ವದ ಕೊಡುಗೆಯನ್ನು ನೀಡಿ ಧನ್ಯರಾಗಿದ್ದಾರೆ ಮತ್ತು ಓದುವ ನಮ್ಮಂಥವರನ್ನೂ ಧನ್ಯರಾಗಿಸಿದ್ದಾರೆ. ಶ್ರೀಯುತರ ಕಾವ್ಯ ರಚನಾಸಕ್ತಿ ಮತ್ತು ಪುಸ್ತಕ ಪ್ರಕಟಣಾ ಶಕ್ತಿ – ಎರಡೂ ಇನ್ನಷ್ಟು ಅಧಿಕಗೊಂಡು ಗುಣಾತ್ಮಕಗೊಳ್ಳಲಿ ಎಂದು ಆಶಿಸುತ್ತಾ ಹಾರೈಸುವೆ.
-ಡಾ. ಹೆಚ್ ಎನ್ ಮಂಜುರಾಜ್
ಕೃತಿ: ಮನದೊಳಮಿಡಿತ (ತನಗಗಳ ಸಂಕಲನ)
ಕವಿ: ಸುನೀಲ್ ಹಳೆಯೂರು,
ಪ್ರಕಾಶನ: ಕದಂಬ ಪ್ರಕಾಶನ, ಬೆಂಗಳೂರು
ಮೊದಲ ಮುದ್ರಣ: 2025
ಬೆಲೆ : ₹ 175
ಬಹಳ ಒಳ್ಳೆಯ ವಿಮರ್ಶೆ ಸರ್.ಧನ್ಯವಾದಗಳು. ಕೃತಿಕಾರರಿಗೆ ಹಾರ್ದಿಕ ಶುಭಾಶಯಗಳು ಹಾಗೂ ಅಭಿನಂದನೆಗಳು. 🙏😊
ಆತ್ಮೀಯ ಮಂಜುರಾಜ್ ಸರ್,
ಸುನೀಲರನ್ನಾಗಲಿ ಮತ್ತು ಅವರ ತನಗಗಳನ್ನಾಗಲಿ ನಾನು ಓದಿಲ್ಲ. ಮುಂದೆ ಓದುವೆನೋ ಏನೋ ತಿಳಿಯದು ಕೂಡ. ಆದರೆ ಸುನೀಲರ ತನಗ ಸೃಷ್ಟಿ ಮತ್ತದರ ವಸ್ತುವಿನ ಕುರಿತಾದ ನಿಮ್ಮ ವಿರಾಟ್ ಚಿತ್ರಣ ಸುನೀಲರನ್ನೇ ಅರಗಿಸಿಕೊಂಡು ನಮಗೆ ನವೀನವಾಗಿ ಅವರ ಸಾಹಿತ್ಯ ಮತ್ತು ವ್ಯಕ್ತಿತ್ವವನ್ನು ಮನೋಜ್ಞವಾಗಿ ತೋರ್ಪಡಿಸುವ ಪರಿಯಲ್ಲಿದೆ .
ಬರೆಯುವುದು ಒಂದು ವಿಚಾರವಾದರೆ, ಅದನ್ನು ಓದಿ ಮರುಚಿತ್ರಿಸುವುದು ಇನ್ನೊಂದು ವಿಚಾರ. ಅದಕ್ಕೆ ತಾಳ್ಮೆಯೂ, ಉದಾರತೆಯೂ ಎರಡೂ ಬೇಕು. ಮುಂದುವರೆದು, ಇನ್ನೂರ್ವರ ಮನದ ಕಲ್ಪನೆಯೂ ಬೇಕು, ಅದನ್ನು ಗ್ರಹಿಸುವ ಕಾರುಣ್ಯವೂ ಬೇಕು.
ಎಂದಿನಂತೆ, ಅನ್ಯಕೃತಿಗಳ ಪರಾಮರ್ಷೆಯ ವಿಚಾರದಲ್ಲಿ ನಿಮಗಿರುವ ನಿರ್ಮೋಹದಾಸಕ್ತಿ, ಸಂವೇದನೆ, ಸಹೃದಯೀತನ ಮೇಲಿನ ನಿಮ್ಮ ಬರಹದಲ್ಲಿ ಎದ್ದು ಕಾಣುತ್ತಿದೆ. ಸಾಹಿತ್ಯವೆಂದರೆ, ಅದು ಕೇವಲ ಪದ್ಯ ಮತ್ತು ಕಾವ್ಯವಷ್ಟೇ ಅಲ್ಲ. ಅದು ಗದ್ಯವೂ ಆಗಿರಬಹುದು ಮತ್ತು ಈ ರೂಪದಲ್ಲಿ ಅಧಿಕರುಗಳ ಮನಸ್ಸನ್ನು ಪ್ರಸನ್ನಗೊಳಿಸಬಹುದೆಂಬ ವಾದಕ್ಕೆ ನಿಮ್ಮ ಈ ಬರೆಹ ಸೋದಾಹರಣೆಯೂ ಆಗಿದೆ. ಸಾಹಿತ್ಯ ಕೃಷಿಯಲ್ಲಿ ಹೊಸ ಪ್ರತಿಭೆ ಹಾಗೂ ಪ್ರಯೋಗಗಳನ್ನು ನೀವು ಉತ್ತೇಜಿಸುತ್ತಿರುವುದು ಮತ್ತು ಪೋಷಣೀಯ ನುಡಿಗಳನ್ನಾಡುತ್ತಿರುವುದು ಅತಿಅವಶ್ಯಕವೂ ಹಾಗೂ ಸಾಮಯಿಕವೂ ಆಗಿದೆ.
ಧನ್ಯವಾದಗಳು!