ಆಧುನಿಕ ಮಾನವನಿಗೆ ಎಲ್ಲಾ ಇದ್ದರೂ ಸಂತೋಷಕ್ಕಾಗಿ ಕಾರಣ ಹುಡುಕುತ್ತಿರುತ್ತಾನೆ. ಐಷಾರಾಮಿ ಜೀವನ, ಮೋಜು-ಮಸ್ತಿ, ತಿರುಗಾಟ ಇವುಗಳೇ ಸಂತೋಷದ ಮೂಲವೆಂಬ ಭ್ರಮೆಯಲ್ಲಿರುತ್ತಾನೆ. ಆದರೆ ನಾವು ನಮ್ಮ ಬಾಲ್ಯದಲ್ಲಿ ಜಾತ್ರೆ ಬಂದರೆ ಸಾಕು ಐದು ರೂಪಾಯಿ ಕೈಯಲ್ಲಿ ಹಿಡಿದು ಇಡೀ ಜಾತ್ರೆಯನ್ನು ಸುತ್ತಿ ಸುತ್ತಿ ತಿಂಡಿ ತಿನಿಸುಗಳ ತಿನ್ನುತ್ತಾ ಖುಷಿ ಪಡುತ್ತಿದ್ದೆವು. ಹಬ್ಬಗಳು ಬಂದರೆ ಸಾಕು ಹೊಸ ಹೊಸ ರುಚಿ ತಿಂಡಿಗಳ ನೆನೆಯುತ್ತಾ, ಜೊಲ್ಲು ಸುರಿಸುತ್ತಾ ಸವಿಯುತ್ತಿದ್ದ ಕಾಲವದು. ಒಂದೊಂದು ಹಬ್ಬದಲ್ಲಿ ಒಂದೊಂದು ವಿಶೇಷ ತಿನಿಸುಗಳು. ಯುಗಾದಿ ಬಂದರೆ ಹೋಳಿಗೆ ಸಂಭ್ರಮ, ಸಂಕ್ರಾಂತಿ ಬಂದರೆ ವಿಶೇಷ ಕಡುಬಿನ ಸಂಭ್ರಮ, ಶಿವರಾತ್ರಿಯಲ್ಲಿ ಬಗೆ ಬಗೆಯ ತಂಬಿಟ್ಟು, ಗೌರಿ ಗಣೇಶ, ದೀಪಾವಳಿಯಲ್ಲಿ ಬಗೆ ಬಗೆಯ ಊಟ ಬಗೆ ಬಗೆಯ ಪಲ್ಯಗಳು, ಸಿಹಿತಿನಿಸುಗಳು ಇರುತ್ತಿದ್ದವು. ಅಬ್ಬಾ, ಹೀಗೆ ಒಂದೊಂದು ತಿನಿಸುಗಳ ವಿಶೇಷತೆಯನ್ನು ನೆನೆದು ಮನದಲ್ಲೇ ಸವಿಯುತ್ತಾ ಹಬ್ಬಗಳ ಬರವಿಕೆಯನ್ನು ಕಾಯುತ್ತಿದ್ದೆವು. ಪ್ರತಿಯೊಂದು ಹಬ್ಬದಲ್ಲೂ ನಾವು ನಮ್ಮ ಕುಟುಂಬ ಅಪ್ಪ-ಅಮ್ಮ ಅಜ್ಜ-ಅಜ್ಜಿ ಅಣ್ಣ-ತಮ್ಮ, ಅಕ್ಕ -ತಂಗಿ ಇವರೊಂದಿಗೆ ಮಾತ್ರ ಸಂತಸ ಪಡುತ್ತಿದ್ದೆವು. ನಮ್ಮ ಖುಷಿಗೆ ಅಲ್ಲಿಯೂ ಸಹ ಪಾರವೇ ಇರಲಿಲ್ಲ.
ಪೌರಾಣಿಕ ಶಾಸ್ತ್ರಗಳ ಪ್ರಕಾರ ಈ ಪೃಥ್ವಿಯಲ್ಲಿ ಜನ್ಮ ಪಡೆದ ಪ್ರತಿಯೊಬ್ಬ ಮನುಷ್ಯ ಜೀವಿಯು ಜನ್ಮದಿಂದಲೇ ಐದು ಋಣಗಳಿಗೆ ಭಾಜನರಾಗುತ್ತಾರೆ. ದೇವಋಣ, ಋಷಿಋಣ, ಪಿತೃಋಣ, ಭೂತಋಣ ಮತ್ತು ಸಮಾಜ ಋಣಗಳಾಗಿವೆ. ಇವುಗಳಲ್ಲಿ ಪ್ರಮುಖವಾದದ್ದು ಪಿತೃಋಣ. ಇದನ್ನು ತೀರಿಸುವ ಸಲುವಾಗಿ ಮಾಡುವ ಪ್ರಕ್ರಿಯೆಯೇ ಶ್ರಾದ್ಧ.
ಹಾಗಾಗಿ ತಮ್ಮ ತಮ್ಮ ಮಾತಾ ಪಿತೃಗಳು ಮರಣ ಹೊಂದಿದ ತಿಥಿಯ ದಿನದಂದು ಕನಿಷ್ಠ ಮೂರು ತಲೆಮಾರಿನರವರೆಗೆ ಈ ಕಾರ್ಯವನ್ನು ಮಾಡುವುದು ಸಂಪ್ರದಾಯ. ಪೌರಾಣಿಕ ಶಾಸ್ತ್ರದ ಪ್ರಕಾರ ಯಾರಿಗೆ ಈ ತಿಥಿಯ ಬಗ್ಗೆ ಸ್ವಲ್ಪವೂ ಅರಿವಿಲ್ಲದಿದ್ದವರು, ಭಾದ್ರಪದ ಮಾಸದ ಕೃಷ್ಣ ಪಕ್ಷದ ಪಾಡ್ಯ ಅಂದರೆ ಮೊದಲ ದಿನದಿಂದ ಅಮಾವಾಸ್ಯೆಯವರೆಗೆ ಅಂದರೆ 15 ದಿನದವರೆಗೆ ತರ್ಪಣ ನೀಡಬಹುದು. ಈ ಸಮಯವನ್ನು ಪಿತೃಪಕ್ಷ ಎಂದು ಕರೆಯಲಾಗುವುದು. ಈ 15 ದಿನಗಳಲ್ಲಿ ತಮ್ಮ ಅನುಕೂಲವಾದ ದಿನದಂದು ತಮ್ಮ ತಮ್ಮ ಕುಲದ ಎಲ್ಲಾ ಪಿತೃಗಳು ಸೇರಿದಂತೆ ಅಗಲಿದ ಅವರ ಆಪ್ತರು ಬಂಧು ಮಿತ್ರರುಗಳು ಅದಲ್ಲದೇ ಸಾಕು ಪ್ರಾಣಿಗಳನ್ನು ಸಹ ನೆನೆದು ಈ 15 ದಿನಗಳಲ್ಲಿ ಒಂದು ದಿನ ತರ್ಪಣ ಕೊಡುವ ಮೂಲಕ ಶ್ರಾದ್ಧ ಮಾಡಬಹುದಾಗಿದೆ. ಸಾಧ್ಯವಾಗದಿದ್ದರೆ ಕೊನೆಯ ದಿನವಾದ ಅಮಾವಾಸ್ಯೆ ದಿನದಂದು ಮಹಾಲಯ ಅಮಾವಾಸ್ಯೆ ದಿನದಂದು ಶ್ರಾದ್ಧ ಮಾಡಲು ಯೋಗ್ಯ ದಿನವೆಂದು ನಾವು ಓದಿರುವ ಕೇಳಿರುವ ಮೂಲಗಳು ತಿಳಿಸಿವೆ. ಇದನ್ನು ಮಾಡುವುದರಿಂದ ಪೂರ್ವಜರು ಸಂತೃಪ್ತರಾಗಿ ಸಕಲ ಐಶ್ವರ್ಯವನ್ನು ಆಶೀರ್ವದಿಸುವರು ಮತ್ತು ಪಿತೃ ದೋಷ ಪರಿಹಾರವಾಗುವುದು ಎಂಬ ನಂಬಿಕೆ ಇದೆ.
ಆದರೆ ಮಕ್ಕಳಿಗೆ ಸರ್ವಕಾಲಿಕ ಸಂತೋಷ ಕೊಡುವ ಹಬ್ಬಗಳಲ್ಲಿ ಮಹಾಲಯ ಅಮಾವಾಸ್ಯೆ ಅಥವಾ ಪಿತೃ ಪಕ್ಷ ಹಬ್ಬವೆಂದರೆ ಒಂದು ತರಹದ ವಿಶೇಷ. ಏಕೆಂದರೆ ಬೇರೆ ಹಬ್ಬಗಳಲ್ಲಿ ಕೇವಲ ಮನೆಯವರೊಂದಿಗೆ ಸೇರಿ ಒಂದು ಅಥವಾ ಎರಡು ತರಹದ ತಿನಿಸುಗಳೊಂದಿಗೆ ಸಂಭ್ರಮಿಸಿದರೆ ಈ ಹಬ್ಬದಲ್ಲಿ ಬಂಧು-ಬಳಗದವರೆಲ್ಲರೂ ಎರಡು ಅಥವಾ ಮೂರು ದಿನ ಮುಂಚಿತವಾಗಿ ಬಂದು ಸೇರಿ ಹಬ್ಬದ ತಯಾರಿಯನ್ನು, ಎಣ್ಣೆ ತಿಂಡಿತಿನಿಸುಗಳನ್ನು ಸಂಭ್ರಮದಿಂದ ತಯಾರಿಸುತ್ತಾ, ರಾತ್ರಿ ಇಡೀ ಕಷ್ಟ ಸುಖಗಳನ್ನು ಮೆಲುಕು ಹಾಕುವುದರ ಜೊತೆಗೆ ಕೆಲವು ತಿನಿಸುಗಳನ್ನು ಸವಿಯುತ್ತಾ ಕಳೆಯುತ್ತೇವೆ. ಸಂಜೆ 6 ರ ವೇಳೆಗೆ ಶುರುವಾದ ಹಬ್ಬದ ತಯಾರಿಕೆ ಹಾಗೂ ಮಾತುಕತೆ ಬೆಳಿಗ್ಗೆ ನಾಲ್ಕು ಗಂಟೆಯಾದರೂ ಮುಗಿಯುವುದಿಲ್ಲ. ನಂತರ ಪಟಪಟನೆ ಮಲಗಿ ಬೆಳಗ್ಗೆ ಏಳು ಗಂಟೆಗೆ ಎದ್ದು ಅದೇ ಸಡಗರದ ದಿನಚರಿ ಆರಂಭಿಸುತ್ತೇವೆ. ಇದೇ ಕೆಲಸವೂ ಎರಡರಿಂದ ಮೂರು ದಿನಗಳವರೆಗೆ ನಿರಂತರವಾಗಿ ಸಾಗುತ್ತಾ ಎಲ್ಲಾ ದೊಡ್ಡ ದೊಡ್ಡ ಪಾತ್ರೆಗಳಿಗೆ ವಡೆ, ಚಕ್ಕುಲಿ, ಕೋಡ್ಬಳೆ, ನಿಪ್ಪಟ್ಟು, ಬಜ್ಜಿ, ಗರ್ಜಿಕಾಯಿ, ಚಿರೋಟಿ, ಕಜ್ಜಾಯ ಒಂದಾ- ಎರಡಾ. ಆದುದ್ದೆಲ್ಲ ಮಾಡಿ ಎಲ್ಲವನ್ನು ತುಂಬಿಟ್ಟು ಖುಷಿ ಪಡುತ್ತೇವೆ.
ಅಷ್ಟೇ ಅಲ್ಲದೇ ಹಬ್ಬದ ದಿನ ಹೊಸ ಹೊಸ ಉಡುಪುಗಳನ್ನ ಧರಿಸುತ್ತಾ ನಮ್ಮ ಬೀದಿಯ ತುಂಬಾ ನಾವೇ ಗಸ್ತು ಹೊಡೆಯುತ್ತಾ, ಬಂಧು ಬಳಗದ ಜೊತೆಗೆ ಮಿತ್ರರು ಹಾಗೂ ಊರಿನವರು ಎಲ್ಲರನ್ನು ಕರೆದು ಐದೈದು ಎಡೆಗಳನ್ನು ಇಟ್ಟು , ಭರ್ಜರಿ ಪೂಜೆಯೊಂದಿಗೆ ಪೂರ್ವಜರ ನೆನೆದು ಅವರಿಗೆ ಭಕ್ತಿ ಭಾವದಿಂದ ಕೃತಜ್ಞತೆ ಸಲ್ಲಿಸುತ್ತಾ ಆ ಭರ್ಜರಿ ಭೋಜನವನ್ನು ಸವಿಯುತ್ತ ಸಂಭ್ರಮಿಸುತ್ತೇವೆ. ಇವುಗಳೊಂದಿಗೆ ಚಕ್ಕುಲಿ ಚಿರೋಟಿ ನಿಪ್ಪಟ್ಟು ಕಜ್ಜಾಯವನ್ನು ಸ್ವಲ್ಪ ಸ್ವಲ್ಪವೇ ಒಂದೊಂದು ಕವರಿಗೆ ಹಾಕಿ ಬಂದವರಿಗೆಲ್ಲ ಹಂಚುತ್ತಾ ಪ್ರೀತಿಯ ಒಗ್ಗಟ್ಟಿನ ಹಬ್ಬವನ್ನು ಆಚರಿಸುತ್ತೇವೆ. ಇದು ಇನ್ನೂ ಮುಂದುವರೆದಂತೆ ಹಬ್ಬದಲ್ಲಿ ಉಳಿದ ಎಣ್ಣೆಯಿಂದ ಕರಿದ ತಿಂಡಿಗಳು 10-12 ದಿನಗಳಾದರೂ ಮುಗಿಯುವುದಿಲ್ಲ. ಮನೆಗೆ ಬಂದವರೊಡನೆ ಕಾಫಿಯೊಂದಿಗೆ ಅವುಗಳನ್ನು ಸವಿಯುತ್ತಾ ಇರ್ತೇವೆ. ಯಾರಾದರೂ ಬಂಧು ಮಿತ್ರರು ಬಂದರೆ ಸಾಕು ಬಿಸ್ಕೆಟ್ ಹಾಗೂ ಮಿಕ್ಸ್ಚರ್ ಎಲ್ಲ ಬಂದ್ ಮಾಡಿ ಇದೆ ಹೋಂ ಮೇಡ್ ಕರಿದ ತಿಂಡಿ ತಿನಿಸುಗಳನ್ನು, ಅವುಗಳು ಮುಗಿಯುವವರೆಗೆ ಕುಳಿತು ತಿನ್ನುತ್ತಾ ಮಾತನಾಡುವುದನ್ನು ನಿಲ್ಲಿಸುವುದಿಲ್ಲ. ಎಲ್ಲಾ ಖಾಲಿಯಾಗುವವರೆಗೂ ಪ್ರತಿಯೊಂದು ಸಂದರ್ಭದಲ್ಲಿ ಈ ತಿನಿಸುಗಳ ದರ್ಬಾರ.
ಒಟ್ಟಿನಲ್ಲಿ ಹೇಳೋದಾದ್ರೆ ಶಾಸ್ತ್ರದಲ್ಲಿರುವ ಎಲ್ಲಾ ವಿಷಯಗಳು ಗೊತ್ತಿಲ್ಲದಿದ್ದರೂ ಸಹ ಪ್ರೀತಿಯಿಂದ ಒಗ್ಗಟ್ಟಿನಿಂದ ಎಲ್ಲರೊಡಗೂಡಿ ಆಚರಿಸುತ್ತೇವೆ. ಒಬ್ಬೊಬ್ಬರು ಮತ್ತೊಬ್ಬರನ್ನು ಗೌರವಿಸುತ್ತಾ ಒಳ್ಳೊಳ್ಳೆ ಮಾತನಾಡಿಕೊಂಡು ಸಂಭ್ರಮಿಸುತ್ತೇವೆ. ಮಕ್ಕಳಿಗಂತೂ ಕುರುಕುರು ತಿನ್ನುವುದೇ ಖುಷಿ, ಇದೊಂದು ಸರ್ವಕಾಲಿಕ ಸಂಭ್ರಮ. ಪಿತೃಗಳ ನೆನೆಯುವುದರ ಜೊತೆಗೆ ಮತ್ತು ಅವರಿಗೆ ಕೃತಜ್ಞತೆ ಸಲ್ಲಿಸುವುದರ ಜೊತೆಗೆ ಬಂದು ಬಾಂಧವರು ಮಿತ್ರರೊಂದಿಗೆ ಸೇರಿ ಮುಂದಿನ ಐದರಿಂದ ಹತ್ತು ದಿನಗಳವರೆಗೂ ಸಂಭ್ರಮವನ್ನ ಸವಿಯುತ್ತಲೇ ಇರಲು ಸಾಧ್ಯವಾಗುತ್ತದೆ. ಈ ಹಬ್ಬವು ಬಂಧಗಳ ಹಲವು ವೈಮನಸ್ಯಗಳಿಂದ ದೂರವಿರಿಸಿ ಬಂಧು ಮಿತ್ರರು ಸಹ ಸೇರಿ ಶಾಂತಿ ಪ್ರೀತಿ, ಒಗ್ಗಟ್ಟಿನಿಂದ ಸಂಭ್ರಮಿಸುವಂತೆ ಹಾಗೂ ತಮ್ಮ ಪ್ರೀತಿಯನ್ನು ಹಂಚುವಂತೆ ಮಾಡುತ್ತದೆ. ಒಳಗೊಳಗಿನ ವೈಶಮ್ಯಗಳ ಹಾಗೂ ನಕಾರಾತ್ಮಕತೆಯನ್ನು ದೂರಗೊಳಿಸಿ ಸಕಾರಾತ್ಮಕತೆಯ ಧನಾತ್ಮಕತೆಯನ್ನು ಮೂಡಿಸಿ ಪ್ರೀತಿಯ ಪ್ರೀತಿಯಿಂದ ಇಮ್ಮಡಿಗೊಳಿಸುವುದೇ ಪಿತೃಪಕ್ಷ ಹಬ್ಬ
ಚಂದ್ರು ಪಿ ಹಾಸನ್