ಮಾಸಿದ ಪಟ: ಎಫ್.‌ ಎಂ. ನಂದಗಾವ

ಕ್ರಿಸ್ಮಸ್ ಬಂತಂದ್ರ ನನಗ ನಮ್ಮ ಮನ್ಯಾಗಿದ್ದ ಮಾಸಿದ ಪಟ ನೆನಪಾಗ್ತದ. ಸಣ್ಣಾಂವ ಇದ್ದಾಗ ನಾ ಮಾಡಿದ್ದ ಹಳವಂಡದ ಕೆಲಸ ನೆನಪಾಗಿ ಮನಸ್ಸ ಖಜೀಲ ಆಗ್ತದ. ನನಗ ತಿಳಿವಳಿಕಿ ಬಂದಾಗಿಂದಲೂ, ನಮ್ಮ ಮನೆಯ ದೇವರ ಪೀಠದಾಗ ಅಪ್ಪ ಜೋಸೆಫ್, ಅವ್ವ ಮರಿಯವ್ವ ಮತ್ತು ಬಾಲಯೇಸುಸ್ವಾಮಿ ಅವರ ಪವಿತ್ರ ಕುಟುಂಬದ ಚಿತ್ರಪಟದ ಜೋಡಿ ಒಬ್ಬರು ಸ್ವಾಮಿಗಳ ಚಿತ್ರಪಟಾನೂ ಐತಿ.

ಕನ್ನಡ ಸಾಲಿ ಓದ ಮುಗಿಸಿ, ನಾನು ಪ್ಯಾಟಿಯೊಳಗಿನ ಹೈಸ್ಕೂಲ್ ಕಟ್ಟಿ ಏರಿದಾಗ ನನ್ನ ಸಹಪಾಠಿಗಳು ನಮ್ಮ ಮನಿಗೆ ಬಂದಾಗಲೆಲ್ಲಾ, `ಅದೇನೋ, ಯಾರೋ ಸ್ವಾಮಿಗಳ ಪಟ ಇಟ್ಟಿದ್ದಿರಲ್ಲಾ? ಅವರಾರೋ?’ ಎಂದು ಕೇಳೋರು.

ನಾನು ನೋಡಿರುವಂಗ ಎಲ್ಲರ ಮನಿ ದೇವರ ಖೋಲ್ಯಾಗ, ದೇವರ ಪೀಠದಾಗ, ದೇವರ ಚಿತ್ರಪಟಗಳು ಇಲ್ಲದಿದ್ದರ, ದೇವರ ಸ್ವರೂಪಗಳು ಮತ್ತು ಸಂತರ ಸ್ವರೂಪಗಳು ಇರ್ತಾವ. ಆದರ, ಯಾರ ಮನಿ ಪೀಠದಲ್ಲೂ ಒಬ್ಬ ಗುರುಗಳ, ಅದೂ ಅವರ ಮಾಸಿದ ಪಟ ಇರೂದನ್ನ ನೋಡೇ ಇಲ್ಲ.

ಗುರುಗಳ ಮನ್ಯಾಗ ಮತ್ತ ಮೇತ್ರಾಣಿಗಳ ಮನ್ಯಾಗ, ಆಯಾ ಕಾಲದಾಗಿನ ಅಂದಂದಿನ ಪಾಪುಸ್ವಾಮಿಗಳ ಪಟಗಳಿದ್ದರೂ, ಅವಾವು ಪೀಠದ ಮ್ಯಾಲೆ ಇರೂದನ್ನ ಇನ್ನೂತನ ನಾನು ನೋಡಿಲ್ಲ.

ಬೆಂಜಾಮಿನ್ ಬರ್ನಾಬಸ್, “ಅದೇನೋ, ನಿಮ್ಮ ಮನಿ ದೇವರ ಪೀಠದಾಗ ಅದಾರೋ ಸ್ವಾಮಿಗಳ ಮಾಸಿದ ಪಟ ಹಾಕಿದ್ದಾರಲ್ಲಾ? ಅದು ಯಾವ ಪೋಪರ ಚಿತ್ರಪಟವಪ್ಪಾ?’’ ಎಂದು ಕಿಚಾಯಿಸ್ತಿದ್ದ.

“ಅದು ಯಾವ ಪೋಪರ ಪಟ ಅಥವಾ ಸ್ವಾಮ್ಯಾರ ಪಟ ಅನ್ನೋದು ನನಗೆ ಗೊತ್ತಿಲ್ಲಪ್ಪಾ’’ ಅಂತಿದ್ದೆ.

ತೇಲಿ ಸಾವಕಾರ್ ಓಣ್ಯಾಗಿರೋ ಮಲ್ಲೇಶಪ್ಪ ಮಠಪತಿ, ನಮ್ಮ ಮನಿಗೆ ಬಂದಾಗ, ದೇವರ ಪೀಠದಲ್ಲಿರೋ ದೇವರ ಪಟದ ಜತಿ ಯಾರದೋ ಪಟ ಹಾಕಿದ್ದಿರಿ?’’ ಎಂದು ಕೇಳಿದಾಗ,ನನಗೆ ಗೊತ್ತಿಲ್ಲಪ್ಪಾ’’ ಎಂದು ತಲೆ ಆಡಸ್ತಿದ್ದೆ.

“ನಾವೂ, ನಮ್ಮ ದೇವರ ಖೋಲ್ಯಾಗ ಪಟ ಹಾಕೀವಿ. ಅದರಾಗ ಬಾಳೆಹೋನ್ನೂರಿನ ಶ್ರೀರಂಭಾಪುರಿ ಮಠದ ಶ್ರೀಗಳ ಮತ್ತ ಆಂಧ್ರಪ್ರದೇಶದ ರಾಯಚೂಟಿ ವೀರಭದ್ರಸ್ವಾಮಿಯ ಚಿತ್ರಪಟಗಳಾದವು. ಮತ್ತ, ನಮಗ ನಮ್ಮ ಮೈಮ್ಯಾಲಿನ ಗುಂಡಗಡಿಗಿ ಇಷ್ಟಲಿಂಗನ ಹೆಚ್ಚಪಾ’’ ಅಂತಿದ್ದ ಮಠಪತಿ.

“ನಾವೂ, ನಮ್ಮ ಮನ್ಯಾಗ ದೇವರ ಖೋಲ್ಯಾಗ ಮಂತ್ರಾಲಯದ ರಾಘವೇಂದ್ರ ಸ್ವಾಮೀದು, ಕಾಖಂಡಕಿ ಮಹಿಪತಿದಾಸರ ಚಿತ್ರಪಟಗಳನ್ನ ಹಾಕೀವಿ’’ ಮಠಪತಿ ಜೋಡಿ ಮನಿಗೆ ಬಂದಿದ್ದ ಮುರಳಿಧರ ಕುಲಕರ್ಣಿ, ತಮ್ಮ ಮನ್ಯಾಗಿನ ಚಿತ್ರಪಟಗಳ ಬಗ್ಗಿ ಹೇಳಿದ್ದ.

ಧರಣೇಂದ್ರ ಕುರಕುರಿ, ನಮ್ಮ ಮನ್ಯಾಗ ಶ್ರವಣಬೆಳಗೊಳದ ಗೊಮ್ಮಟೇಶ್ವರಂದ ಮತ್ತು ಭಟ್ಟಾರಕ ಶ್ರೀಗಳ ಪಟ ಅದಾವ’’ ಅಂದ್ರ, ಜಾಗಿರ್ದಾರ ಸಿಕಂದರ,ನಮ್ಮ ಮನ್ಯಾಗ ಬಾಬಾ ಬುಡನಗಿರಿ ಪಹಾಡದ ಚಿತ್ರಪಟ’’ ಅದಾವ ಅಂತಿದ್ದ. ಗುಡಸಲಮನಿ ರಾಚಪ,್ಪ `ನಮ್ಮ ಮನ್ಯಾಗರೆ ಅಂಬೇಡ್ಕರ ಪಟಾ ಐತಿ’ ಅಂತಿದ್ದ.

ನನಗರೆ `ಪೀಠದಾಗಿನ ಆ ಮಾಸಿದ ಪಟಾ ತಗದ ಬ್ಯಾರೆ ಕಡೆ ಇಟ್ಟರ ಹೆಂಗ? ಅನ್ನಸ್ತಿತ್ತ. ಮನಿಗೆ ಬರೂ ಸಹಪಾಠಿಗಳ ಮಾತಿಗೆ ಸಿಕ್ಕೂದರ ತಪ್ಪತದ ಅಂತ ವಿಚಾರ ಮಾಡ್ತಿದ್ದೆ. ಮತ್ತ ನೆದರ ಆಗಬಾರದಂತ ನಮ್ಮಪ್ಪ ನಮ್ಮವ್ವ ಅದನ್ನು ಇಟ್ಟಗೊಂಡಾರೇನೋ ಅನ್ನು ವಿಚಾರಾನೂ ಕಾಡ್ತಿತ್ತ.

*

ಕ್ರಿಸ್ಮಸ್ ಹಬ್ಬಕ್ಕ ಹದಿನೈದ ದಿನ ಉಳದಿದ್ದವು. ಮನೆಯನ್ನ ಸ್ವಚ್ಛ ಮಾಡೂ ಕೆಲಸ ಹಚ್ಚಕೊಂಡಿದ್ವಿ. ಅರಿವಿ ಅಂಚಡಿ, ಹಾಸಿಗೆ ಎಲ್ಲ ತಗದ ಸ್ವಚ್ಛ ಮಾಡಿ, ಒಗದ ಒಣಗಿಸಿ ತಗದ ಇಡೂದರಾಗ ನಾಕ ದಿನಾ ಕಳದಿದ್ದವು. `ಹೋದ ವರ್ಷ ಮನಿಗೆ ಸುಣ್ಣ ಹಚೈತಿ. ಈ ವರ್ಷ ಮತ್ತ ಸುಣ್ಣ ಹಚ್ಚೂದು ಬ್ಯಾಡ’ ಅಂದಿದ್ದ ನಮ್ಮಪ್ಪ. ಏನ ಆದರೂ, ಎಲ್ಲಾ ಸಾಮಾನು ಸರಿಸಿಟ್ಟ ಜೇಡ ತಗದ ಝಳಝಳ ಮಾಡೂದಂತೂ ತಪ್ಪೂ ಕೆಲಸ ಅಲ್ಲ.

ಹಂಗ, ಬಾಗಲ ಕಿಟಕಿ ಫಡಕಗಳನ್ನ, ಅವುಗಳ ಕಟ್ಟಿಗಿ ಚೌಕಟ್ಟುಗಳನ್ನ, ಅರವಿ ಹಸಿಮಾಡಿ ಒರಸಬೇಕಿತ್ತು. ಮತ್ತ ಟೇಬಲ್ಲು, ಕುರ್ಚಿ, ಸೋಫಾಸೆಟ್ ಮುಂತಾದವನ್ನ ಒರಿಸಿ ಹೊಸದರಂಗ ಫಳಫಳ ಹೊಳಿಯುವಂಗ ಮಾಡಬೇಕಿತ್ತ. ಅಣ್ಣ ಕಾಲೇಜಿಗೆ ಹೋಗ್ತಿದ್ದ. ಅದೂ ಇದೂ ಟ್ಯೂಷನ್ ಅಂತ ಬರೀ ಹೊರಗ ಇರತಿದ್ದ. ಮನಿ ಸ್ವಚ್ಛ ಮಾಡೂದು ನಂದ ಜವಾಬ್ದಾರಿ ಆಗಿತ್ತು. ಮತ್ತ ತಂಗಿ ರೋಜಿ ಎರಡನೇ ಇಯತ್ತೆ ಓದುತ್ತಿದ್ದಳು.

ಅವ್ವ, ಅಡಗಿ ಮನಿ ಫಳಫಳ ಹೊಳಿಯೂವಂಗ ಸ್ವಚ್ಛ ಮಾಡೂ ಕೆಲಸ ಹಚ್ಚಕೊಂಡಿದ್ದಳು. ಭಾಂಡೆ ಸಾಮಾನೂ, ತಾಟು ಬಟ್ಟಲಾ, ಕುಡಿಯು ನೀರಿನ ತಾಮ್ರದ ಹಂಡೆ ಎಲ್ಲಾ ಸೋಪಿನ ಪುಡಿ, ಮತ್ತ ಹುಣಸಿಹಣ್ಣ ಹಚ್ಚಿ ತಿಕ್ಕಿ ತಿಕ್ಕಿ ಬೆಳಗಬೇಕಿತ್ತು. ಅಕ್ಕಿ, ಸಕ್ಕರಿ, ಚಾ ಪುಡಿ ಇಂಥಾ ಡಬ್ಬಿಗಳನ್ನು ಒರಿಸಿ ಇಡಾಕ್ಹತ್ತಿದ್ದಳು. ದಿನಾನೂ, ಅಡಿಗಿ ಕೆಲಸ ಅಂತೂ ಇದ್ದ ಇರ್ತಿತ್ತು. ಅದನ್ನಂತೂ ಒಂದಾ ದಿನಾ ತಪ್ಪಸಂಗಿರಲಿಲ್ಲ. ಐದ ಮಂದಿ ಹೊಟ್ಟಿ ದಿನಕ್ಕ ಮೂರ ಸಲ ತುಂಬಬೇಕಿತ್ತು. ಅಪ್ಪ ಅಡತಿ ಅಂಗಡ್ಯಾಗ ರ್ಯಾಕ ಹೋಗತಿದ್ದ. ಅವನಿಗೆ, ಅಂಗಡಿ ಸಾವಕಾರ ಒಂದ ದಿನಾನೂ `ಮಕ್ಕಳು ಕಾಯತಿರ್ತಾವ, ಹೋಗ ನೀ ಮನಿಗೆ ಲಗೂ’ ಅಂತ ಅಂದವನ ಅಲ್ಲ. ಖಾಲಿ ಪುಕ್ಕಟ ಒಂದ ದಿನಾನೂ ಸೂಟಿ ಕೊಡ್ತಿರಲಿಲ್ಲ. ಅಪ್ಪನಿಗೆ ಮನಿ ಕೆಲಸ ಮಾಡಾಕ ಸವಡ ಸಿಗ್ತಿರಲಿಲ್ಲ.

ಮನೀದ ಎಲ್ಲ ಸ್ವಚ್ಚ ಮಾಡೂ ಕೆಲಸ ಮುಗದ ಮ್ಯಾಲ ಕಡೀಕ ದೇವರ ಪೀಠ ಸ್ವಚ್ಛ ಮಾಡೂದು ಉಳಕೊಂಡಿರತಿತ್ತು. ಈ ಸಲ ದೇವರ ಪೀಠದಾಗಿನ ಆ ಮಾಸಿದ ಪಟಾ ಬೀಳಿಸಿದರ, ಒಡಕ ಪಟ ದೇವರ ಪೀಠ ಸೇರೂದು ತಪ್ಪತದ ಅಂತ ವಿಚಾರ ಮಾಡಿದೆ. ಉಳದ ಹಳಿ ಸಮಾನ ಜೋಡಿ ಆ ಮುರದ ಪಟ ಜಗಲಿ ಹತ್ತಿ ಕೂತಗೋತದ ಅಂತ ಲೆಕ್ಕಾ ಹಾಕಿದೆ. ಮನಿ ಸ್ವಚ್ಛ ಮಾಡೂ ಕೆಲಸ ಸಂಜಿ ಮುಂದ ನಡಿತಿತ್ತು. ಎಲ್ಲಾ ಕೆಲಸ ಮುಗಿದ್ದವು. ಅವತ್ತ ದೇವರ ಪೀಠ ಸ್ವಚ್ಛ ಮಾಡೂದಷ್ಟ ಉಳಿದಿತ್ತು. ಮೇಣದ ಬತ್ತಿ ಸ್ಟಾö್ಯಂಡ್ ಇಳಿಸಿ ಕೊಟ್ಟೆ, ತಂಗಿ ಅವನ್ನ ಅಲ್ಲೆ ನೆಲಕ್ಕ ಇಟ್ಟಳು. ಪೀಠದ ಮ್ಯಾಲಿನ ಜಪದ ಪುಸ್ತಕ, ಜಪಮಾಲಿ ಎಲ್ಲಾ ತಗದ ಕೊಟ್ಟೆ. ಅವನ್ನ ಅಲ್ಲೇ ಕೆಳಗ ಇಟ್ಟಳು. ದೇವರ ಪೀಠದಾಗಿನ ಪವಿತ್ರ ಕುಟುಂಬದ ಪಟ ಹಗರಲೇ ಇಳಿಸಿ, ಆಕಿ ಕೈಗೆ ಕೊಟ್ಟೆ. ಅದಾದ ಮ್ಯಾಲ ಹಳೆ ಮಾಸಿದ್ದ ಸ್ವಾಮ್ಯಾರಿದ್ದ ಪಟ ಇಳಸೂಮುಂದ, ಲೇ, ಲಗೂ ತಗೋ’ ಅಂತ ಬಡಕೋತ ಅವಸರಾ ಮಾಡಿದೆ. ಅದು, ತಂಗಿ ಕೈಯಿಂದ ಜಾರಿ ತಳಗ ಬಿದ್ದ ಅದರ ಗಾಜ ಒಡದ ಹೋತು.ಆಯಿತು ನನ್ನ ಕೆಲಸ’ ಅಂದಕೊಂಡೆ.

ಪಳ್ಳ ಅಂತ ಸಪ್ಪಳಕ್ಕ ಅಡಗಿ ಮನಿಯಿಂದ ಹೊರಗ ಪಡಸಾಲಿಗೆ ಓಡಿಬಂದ ನಮ್ಮವ್ವ, “ಏನೋ ಬಾಳ, ಹುಷಾರಾಗಿ ಪಟ ಇಳಸಬೇಕಪಾ. ರೋಜಿಗೆ ಆಗದಿದ್ದರ ನನಗ ಕರಿಬೇಕಿತ್ತು. ನಾ ಒಂದ ಗಳಿಗಿ ಬಂದ ಇಳಿಸಿಗೋತಿದ್ದೆ? ಯಾಕೋ ಹಿಂಗ ಅವಸರಾ ಮಾಡಿದಿ?’’ ಅಂದಳು.

“ಅವ್ವಾ, ಅವಸರಾದಗ ಬಿತ್ತು. ನಾನ ಕೊಡೂ ಹಂಗ ಕೊಟ್ಟೆ. ರೋಜಿ ಸರಿಯಾಗಿ ಗಟ್ಟಿ ಹಿಡಕೊಳ್ಳಿಲ್ಲ. ಪಟ ತಳಗ ಬಿದ್ದ ಗಾಜ ಒಡೀತ.’’

ನನ್ನ ಸಮಜಾಯಿಷಿ ಮುಗಿದಿರಲಿಲ್ಲ.

“ಅಣ್ಣಾ, ಸುಳ್ಳ ಹೇಳತಿ. ಅವಸರಾ ಮಾಡಿದ್ದು ನೀ. ನಾ ಕೈ ಮ್ಯಾಲ ಮಾಡೂ ಮೊದಲ ಕೆಳಗ ಜಾರಿಸಿ ಬೀಳಿಸಿದ್ದು ನೀನು. ಯಾಕ? ಮೊದಲ ಕೊಟ್ಟ ದೇವರ ಪಟಾ ಸರಿಯಾಗಿ ಹಿಡಕೊಂಡಿಲ್ಲ ಏನ್, ನಾ?’’

`ಸೇರಿಗೆ ಸ್ವಾ ಸೇರು ಅನ್ನಂಗ, ಪಟಾಪಟಾ ಮಾತಾಡೂ ನನ್ನ ತಂಗಿ ಎಲ್ಲಾ ತಪ್ಪ ನನ್ನ ಮ್ಯಾಲ ಹಾಕಿದಳು. ಸಣ್ಣಾಕಿ ತಪ್ಪ ಮಾಡಿದರ ನಡೀತದ. ಅಲ್ಲಲ್ಲ ಅಕಿ ತಪ್ಪ ಮುಚ್ಚೆ ಹೋಗ್ತಾವು, ಏನ ಮಾಡೂದು? ಆದರ ಇವತ್ತ ಹಂಗ ಆಗಿರಲಿಲ್ಲ.’

“ಏಯ್, ನೀವಿಬ್ಬರೂ ನಿಂತ ಜಾಗದಾಗ ನಿಲ್ಲರಿ.’’

ಅಷ್ಟು ಹೇಳಿ ಹೊರಗೆ ಹೋದ ಅವ್ವ, ರಸ್ತೆಯೊಳಗ ದನಕರು ಹೋಗೂದು ನೋಡಿ, ಅಲ್ಲಿಂದ ಶಗಣಿ ತಂದಳು. ಬಡಾಬಡಾ ದೊಡ್ಡ ದೊಡ್ಡ ಗಾಜಿನ ಚೂರ ಮೊದಲ ತಗದಳು. ಆಮ್ಯಾಲೆ ಕಸಬರಿಗೀಲೆ ಹುಡುಗಿ, ಕಸದ ಮರದಾಗ ಉಳದಿದ್ದ ಗಾಜಿನ ಚೂರ ತುಂಬಿದಳು. ಅದಾದ ಮ್ಯಾಲೆ ಸಗಣಿ ಗುಪ್ಪಿ ಮಾಡಿ ಗಾಜಿನ ಚೂರುಗಳು ಬಿದ್ದಜಾಗದಾಗ ಒತ್ತಿ ಒತ್ತಿ ಎತ್ತಿದಾಗ, ಕಣ್ಣಿಗಿ ಬೀಳದ ಗಾಜಿನ ಚೂರುಗಳನ್ನ ಸಗಣಿ ಗುಪ್ಪಿಗೆ ಹಚ್ಚಕೊಂಡಿದ್ದವು. ಓಣಿ ಮೂಲ್ಯಾನ ತಿಪ್ಪಿಗೆ ಗಾಜಿನ ಚೂರ ಹಾಕಿ ಬಂದಳು. ಹೊರಗ ಅಂಗಳಕ ಹೋಗಿ ಕೈ ತಕ್ಕೊಂಡ ಬಂದಳು.

“ಬಾಳಾ, ನೀ ಹಂಗ ಮಾಡಬಾರದಿತ್ತು.’’

ಅವ್ವನ ಹಣಿ ಮ್ಯಾಲ ನೋವಿನ ಗೆರೆ ಮೂಡಿದ್ದವು. ಬಲಗೈ ಮುಷ್ಟಿ ಹಣಿಗೆ ಹೋಗಿತ್ತು.

“ಬಾಳಾ, ಅದು ನಮ್ಮ ಅಜ್ಜೀದ ನೆನಪಿನ ನಿಶಾನಿ. ನಿಮ್ಮಪಗ ಅದಂದ್ರ ಜೀವ. ಹಿಂಗ್ಯಾಕ ಮಾಡಿದಿ? ನೋಡ್ಕೊಂಡ, ಸ್ವಲ್ಪ ಸಾವಕಾಶ ಕೆಲಸ ಮಾಡಬೇಕಪಾ.’’

“ಅವ್ವಾ, ಆ ಪಟ ಬಾಳ ಹಳೇದ ಆಗೇದ. ಒಳಗಿನ ಫೋಟೋ ಮಾಸಿದ್ದು ಏನೂ ಕಾಣೂದಿಲ್ಲ. ಅದನ್ನ ಪೀಠದಾಗ ಯಾಕ ಇಡಬೇಕು? ಹಳೇದ ಆಗೇದ ಅಟ್ಟದ ಮ್ಯಾಲ ಇಡೂಣು ಬಿಡವಾ.’’

“ಬಾಳಾ, ಅದು ಹಳೇದು, ಮಾಸಿದ್ದು. ಆದರ ಏನಾತು? ಅದನ್ನ ನೋಡಿದಾಗ ಬರೂ ನೆನಪು ಇನ್ನ ಹಚ್ಚ ಹಸರ ಅದಾವು ನಿಮ್ಮಪ್ಪನ ತಲ್ಯಾಗ.’’

“ಅದೇನವಾ, ಅಂಥಾ ನೆನಪುಗಳು?’’

“ಅದನ್ನೆಲ್ಲಾ ಆಮೇಲೆ ಹೇಳ್ತೀನಿ. ಮೊದಲ ಓಡಿ ಹೋಗಿ ಅದಕ್ಕ ಸೊನಹರಿ ಬಣ್ಣದ ಅಂಚಿನ ಕಟ್ಟಗಿ ಚೌಕಟ್ಟು ಮತ್ತ ಗಾಜ ಹಾಕಿಸಿಕೊಂಡ ಬಾ ಹೋಗ. ಪಾಗಾ ಸಾಲಿ ಮಗ್ಗಲಕ ಪಾಂಡುರಂಗ ಪಿಸ್ಸೆ ಅವರ ಅಂಗಡಿಗೆ ಹೋಗ ನಡಿ. ನಮ್ಮವ್ವ ಸಂಜಿಮುಂದ ಪ್ಯಾಟಿಗೆ ಬಂದಾಗ ರೊಕ್ಕ ಕೊಡ್ತಾಳ ಅಂತ ಹೇಳ.’’

*

ಅಂದ ಸಂಜಿ ಆರಾಗಿತ್ತು. ಸಾಲಿಯಿಂದ ಬಂದಾಗಿಂದ ಶುರು ಹಚ್ಚಕೊಂಡಿದ್ದ ಮನಿ ಸ್ವಚ್ಛ ಮಾಡೂ ಕೆಲಸ ಎಲ್ಲಾ ಮುಗಿಸಿ ಕೂತಿದ್ದೆ. ಸಂಜೆಗತ್ತಲು ಕಂದೀಲಿನ ಗಾಜ ಒರಸೂ ಕೆಲಸಾನೂ ನನಗ ಬಿದ್ದಿತ್ತು. ತಂಗಿ ಇನ್ನೂ ಸಣ್ಣಾಕಿ ಕಂದೀಲಿನ ಪಾವ ಕೆಳಗ ಬೀಳಿಸಿ ಒಡದರ ಅನ್ನೂ ಚಿಂತಿ. ಅವ್ವ ಪ್ಯಾಟಿಕಡೆ ಹೋಗಿದ್ದಳು. ಅಣ್ಣ ಟೂಷನ್ನಿಗೆ ಹೋದಾಂವ ಇನ್ನೂ ಬಂದಿರಲಿಲ್ಲ.

ರಾತ್ರಿ ಎಂಟಾಯಿತು. ಅಣ್ಣ ಬಂದಿದ್ದ. ಅವ್ವನೂ ಮನಿಗೆ ಬಂದಿದ್ದಳು. ರಾಕೇಲ ಎಣ್ಣಿ ಸ್ಟೋವ್ ಹಚ್ಚಿ ಅಡಗಿ ಮುಗಿಸಿದ್ದಳು. ಮಂದ ಉರಿಯೊಳಗ ಇದ್ದಲಿ ಒಲಿ ಮ್ಯಾಲ ಅನ್ನ ಕುದಿಲಿಕ್ಕೆ ಹತ್ತಿತ್ತು.

ಅವ್ವ ಎಲ್ಲಾರನ್ನೂ ಕೂಡಿಸಿಕೊಂಡ ಪೀಠದ ಮುಂದ ಕೂಡಿಸಿದಳು. ಅಣ್ಣ ಮೇಣಬತ್ತಿ ಹಚ್ಚಿದ. ಎಲ್ಲಾರೂ ಕೂಡಿ ರಾತ್ರಿ ಕಾಲದ ಪ್ರಾರ್ಥನಿ ಹೇಳಿದಿವಿ. `ದಿನದಲ್ಲಿ ದೇವರು ನಮಗ ಕರುಣಿಸಿದ ಕೃಪಾವರಗಳಿಗಾಗಿ ಕೃತಜ್ಷತೆ ಹೇಳಬೇಕ. ರಾತ್ರಿ ನಮ್ಮ ಶರೀರ ಮತ್ತ ಆತ್ಮಗಳನ್ನ ಸಕಲ ಕೇಡುಗಳಿಂದ ರಕ್ಷಿಸಪಾ ಅಂತ ದೇವರನ್ನ ಕೇಳಕೊಳ್ಳಬೇಕು’ ಅವ್ವ ಹೇಳತಿದ್ದಳು. ಅಪ್ಪಗ ರಾತ್ರಿ ಕಾಲದ ಮನಿಯ ಕುಟುಂಬದ ಪ್ರಾರ್ಥನಿಯಿಂದ ವಿನಾಯಿತು ಇತ್ತು. ಕೆಲಸ ಮುಗಿಸಿ ಗುಡಿಮುಂದ ಹಾದ ಬರೂ ಮುಂದ ಅಲ್ಲೆ ನಿಂತ ಪ್ರಾರ್ಥನಿ ಹೇಳಿ ಬರ್ತಿದ್ದ ನಮ್ಮಪ್ಪ. ನಮ್ಮ ಪ್ರಾರ್ಥನಿ ಮುಗಿಯೂದಕ್ಕ ನಮ್ಮಪ್ಪ ಮನಿ ಬಾಗಲಿಗೆ ಬರ್ತಿದ್ದ. ಇಲ್ಲಿಕಂದ್ರ ಅವನ ಊಟ ತಡಾ ಮಾಡೇ ಆಗೂದು.

ಎಲ್ಲಾರೂ ಊಟಕ್ಕ ಕೂತಾಗ ಜೇಸುನಾಥರು ಕಲಿಸಿದ ಪರಲೋಕ ಜಪ ಹೇಳಿ, ತಾಟಿಗೆ ಕೈ ಹಾಕೂಮುಂದ ನನಗ ಪೀಠದಾಗಿನ ಮಾಸಿದ ಪಟಾ ನೆನಪಾಯಿತು. ಅಪ್ಪನೂ ಮನೆಗೆ ಬಂದಿದ್ದ. ಎಲ್ಲರೂ ಮಣೆಗಳ ಮೇಲೆ ಊಟಕ್ಕ ಕುಳಿತಿದ್ವಿ.

“ಅಪ್ಪಾ ಅಪ್ಪಾ, ಅದ ಪೀಠದಾಗಿನ ಮಾಸಿದ ಗುರುಗಳ ಪಟಾ ನೋಡಿದರ, ನಿನಗ ಹಳೆ ನೆನಪುಗಳು ಹಸರಾಗಿ ನೆನಪಿಗೆ ಬರ್ತಾವಂತ. ಸಂಜಿಮುಂದ ಅವ್ವ ಹೇಳತಿದ್ದಳು.’’

ಅಪ್ಪ ಮುಗುಳ್ನಕ್ಕ.

“ಅಪ್ಪಾ, ಅದೇನ ಹಸರ ನೆನಪಗಳು ಹೇಳಪಾ’’ ತಂಗಿ ಒತ್ತಾಯ ಮಾಡಿದಳು.

“ಹೌದಪಾ, ಆ ಪಟಾ ಯಾರದು? ಏನ ಕತಿ ಅಂತ ನಾನೂ ನಿನ್ನ ಕೇಳಬೇಕಂತಿದ್ದೆ. ಆದರ ಇನ್ನೂಮಟ ಆಗಿರಲಿಲ್ಲ.’’ ಅಣ್ಣ ಬಾಯಿ ಬಿಟ್ಟ.

“ಮಕ್ಕಳ ಕೇಳಾಕ್ಹತ್ತಾವು, ಆ ಪಟಾ ಯಾರದು? ಅದನ್ನ ಯಾಕ ಅಷ್ಟ ಗೌರವದಿಂದ ಪೀಠದಾಗಿಟ್ಟೀರಿ? ಅನ್ನೂದು ಮಕ್ಕಳಿಗೂ ಗೊತ್ತಾಗಲಿ. ಇದು ನಮ್ಮ ಮನಿ ಕತಿ ಅಲಾ.’’

ಅವ್ವನೂ ಮಕ್ಕಳ ಜೊತಿಗೆ ನಿಂತಕೊಂಡಳು.

“ಆಯಿತು, ಎಲ್ಲಾರೂ ಈಗ ಸಮಾಧಾನದಿಂದ ಊಟಾ ಮಾಡೂಣು. ಊಟಾ ಮಾಡಿ ಮೂಡಣ ಗಾಳಿಗೆ ಹೊರಗ ಕಟ್ಟಿ ಮ್ಯಾಲ ಕೂಡೂಣು. ಆವಾಗ ಆ ಪಟದ ಕತಿ ಹೇಳ್ತೀನಿ, ಕೇಳೀರಂತ.’’

ಪೀಠದಾಗ ಇರೂ ಮಾಸಿದ ಪಟದ ಕತಿ ಹೇಳಾಕ ಅಪ್ಪ ಒಪ್ಪಿಕೊಂಡ..

*

ಅದು ನಮ್ಮ ಅಜ್ಜ, ಅಜ್ಜಿ ಅವರ ನೆನಪಿನ ನಿಶಾನಿ. ನನಗ ನೆನಪಿರುವಂಗ ನಮ್ಮ ಹಳ್ಳಿ ಕುಡುಕರ ಹಳ್ಳೀನ. ಚುಟ್ಟಾ ಸೇದಾವರು ಕಡಿಮಿ ಇರಲಿಲ್ಲ. ಮೂಗಿಗೆ ನಶ್ಯಾ ಏರುಸುವವರೂ ಕಡಿಮಿ ಏನ ಇರಲಿಲ್ಲ. ನಮ್ಮೂರಾಗ ಗಣೇಶ ಬೀಡಿಗಿಂತ, ಗದಗ ನರಸಿಂಗಸಾ ಛಾಪ ಬೀಡೀನ ಬಾಳ ಚಾಲ್ತಿಯೊಳಗ ಇತ್ತ. ಎಲ್ಲಾ ಬೀಡಾ ಅಂಗಡ್ಯಾಗೂ ಬೀಡಿ ಕಟ್ಟಗಳ ಸರಳ ಸಿಗತಿದ್ದವು. ಸಂತಿ ಬಂದ್ರ ಸಾಕು, ಟಾಂಗಾದೊಳಗ ಬೀಡಿಕಟ್ಟ ಇಟ್ಟಗೊಂಡ ಒದರಿಕೋತ ಹೋಗವರು. ಮಗ್ಗಲಕ ಬಂದ ಹುಡುಗರ ಕೈಗೆ, ಮಂದಿ ಕೈಗೆ ಒಂದೆರಡ ಬೀಡಿ ಕೊಡಾವರು. ಹಂಗ ಹರೇದ ಹುಡುಗರಿಗೆ ಬೀಡಿ ಸೇದೂ ಚಟಾ ಹತ್ತಿತ್ತು. ಅವರವರ ಮನ್ಯಾಗ ಅಪ್ಪಾ ಅಣ್ಣಾ ಬೀಡಿ ಸೇದತ್ತಿದ್ದರ, ಅವರ ಸೇದಿ ಒಗದಿದ್ದ ಮೋಟ ಬೀಡಿ ಮತ್ತ ಹಚ್ಚಗೊಂಡ ಬೀಡಿ ಸೇದು ಚಟ ಹಚ್ಚಕೊಂಡವರೂ ಇದ್ದರು.

ಆ ಕಾಲಕ್ಕ ತಂಬಾಕಿನ ಸಿಗರೇಟು, ಬೀಡಿಗಳ ಜೋಡಿ ಜರ್ದಾ, ನಶ್ಯಾನೂ ಇದ್ದವು. ಬಾಯಲ್ಲಿ ಹಾಕಿ ನುರಿಸುವ ತಂಬಾಕು ಎಲೆಯ ಚೂರನ್ನು ಜರ್ದಾ, ಕಡ್ಡಿಪುಡಿ ಅಂದ್ರ, ನಶ್ಯ ಸಂಸ್ಕರಿಸಿದ ತಂಬಾಕಿನ ಎಲೆಯ ನಯವಾದ ಚೂರ್ಣ- ಪುಡಿ. ಅದನ್ನು ಮೂಗಿನ ಹೊಳ್ಳೆಗಳ ಮೂಲಕ ಉಸಿರೆಳೆದುಕೊಳ್ಳೂದು ರೂಢಿ. ಇದು ಸಣ್ಣದಾಗಿ ನಶೆ ಏರಿಸ್ತದ. ಕಾಫಿ ಪುಡಿಯಂಗ ನಶ್ಯ ಇರ್ತಿತ್ತ. ನಶ್ಯಾ ಏರಸೂ ಚಟಾ ಇದ್ದವರು, ತಿಂಗಳಿಗೆ ಆಗೂವಷ್ಟ ಒಂದು ಕಿಲೋ ಅಥವಾ ಅರ್ಧ ಕಿಲೋದಷ್ಟನ್ನು ಕೊಂಡ, ಮನಿಗೆ ಬಂದ ಮ್ಯಾಲ ಸಣ್ಣ ಗುಂಡಕಿನ ತಗಡಿನ ಡಬ್ಯಾಗ ಹಾಕ್ಕೊಂಡ ಕಿಸ್ಯಾಗ ಇಟ್ಟುಕೊಳ್ತಿದ್ದರು. ಆ ಕಾಲದಾಗ ನಂಜನಗೂಡಿನ ಮಂಕಿ ಬ್ರಾಂಡ್ ಹಲ್ಲಿನ ಪುಡಿಹಂಗ ಕೊಡೆ ಮಾರ್ಕಿನ ನಶ್ಯ ಪ್ರಸಿದ್ಧ ಆಗಿತ್ತು. ನಶ್ಯ ನಂಜು ನಿರೋಧಕ ಅಂತಾರ. ಸಣ್ಣವರಿದ್ದಾಗ ನಮಗ ಆಗೂ ತರಚಿದ ಗಾಯಕ್ಕ ನಶ್ಯದ ಪುಡಿ ಬಳಿತಿದ್ದರು.

ನಮ್ಮ ಹಳ್ಯಾಗ, ಬಹುತೇಕರು ಸೆರೆ ಅಂಗಡಿಗೆ ದಿನಾ ಭೆಟಿ ್ಟಕೊಡುವ ಕಾಯಕದವರು. ಗಂಡಸರಾಗಿದ್ದರ ಭೌತಿಕ ಹಾಜರಾತಿ ಇದ್ದ ಇರ್ತದ. ಹೆಂಗಸರದ್ದಾದರ, ಅವರದ್ದ ಒಂಥರಾ ಮಾಯಾ ದಂಡದ ಆಟ. ಅವರ ಬದಲು ಅವರ ಮನ್ಯಾಲಿರೋ ಚಿಳ್ಳಿಪಿಳಿಗಳು ಅದಾವ ಮಾಯದಲ್ಲೋ ಬಂದು ಹೋಗೋವು. ಕೆಲವೊಮ್ಮೆ ಗಂಡಸರು ತಾವು ಕುಡಿಯೋದಲ್ಲದ, ಮನೆಯ ಹೆಂಗಸರಿಗೆ ಅಂತ್ಲೆ ಸರಾಯಿ ಬಾಟಲಿಗಳನ್ನ ಹಿಡಿದುಕೊಂಡು ಹೋಗತಿದ್ದರು. ಹಂಗ ಹೋದರಷ್ಟ ಅವರನ್ನ ಮನೆಯೊಳಗ ಸೇರಿಸಿಕೊಳ್ಳತ್ತಿತ್ತು. ಮುಂದ ಪ್ಲಾಸ್ಟಿಕ್ಕಿನ ಸೆರೆ ಪಾಕೀಟ ಬಂದವು.

ಯುವಕರು, ಮುದುಕರು, ಮುದುಕಿಯರು, ಮದುವೆಯಾದ ಹೆಂಗಸರು ಎಲ್ಲರೂ ಕುಡುಕರ. ಕುಡೀದ ಹೋದರ ಅವರಿಗೆ ಮುಂಜಾನಿ ಬೆಳಕ ಆಗತ್ತಿರಲಿಲ್ಲ, ಸಂಜೆ ಕತ್ತಲಾಗುತ್ತಿರಲಿಲ್ಲ ಮತ್ತು ರಾತ್ರಿ ನಿದ್ದಿ ಬರತ್ತಿರಲಿಲ್ಲ.

ಕುಡಿಲಾರದ ರ್ಯಾದಸ್ತರು ಊರಲ್ಲಿ ಅಲ್ಪಸಂಖ್ಯಾತರು. ಕುಡುಕರು ಗುಂಪಾಗಿ ನಿಂತಾಗ ಆ ಬೀದಿಯಲ್ಲಿ ಕುಡಿಲಾರದ ರ್ಯಾದಸ್ತರು ಬಂದರ, ಅವರನ್ನ `ಬಂದರಪ್ಪ ಮಹಾತ್ಮ ಗಾಂಧಿ ಮಕ್ಕಳು’ ಅಂತೆಲ್ಲಾ ಚಾಷ್ಟಿ ಮಾಡುತ್ತಿದ್ದರ.

ಊರಲ್ಲಿ ಎಲ್ಲಾರಗೂ ತ್ವಾಟಾ ಗದ್ದೆಗಳಿದ್ದವು. ಊರ ಸನೇಕ ಒಂದೆರಡು ಫೌಂಡರಿಗಳು ಅಂದ್ರ ಎರಕಗಾರಿಕೆಗಳು ಬಂದಿದ್ದವು. ಕೆಲವರು ಅದರಲ್ಲಿ ಎರಕಗಾರರಾಗಿ ಕೆಲಸಕ್ಕ ಹೋಗುತ್ತಿದ್ದರ. ಸಂಜೆಯವರೆಗೂ ಹೊಲಗದ್ದೆಗಳಲ್ಲಿ, ಫೌಂಡರಿಗಳಲ್ಲಿ ದುಡಿಯುವ ಗಂಡಸರಿಗೆ, ಸಂಜೆ ಸೋತು ಸುಣ್ಣವಾದಾಗ ಮನಸ್ಸಿಗೆ ಮುದ ನೀಡುವ ಮದ್ಯ ಸೇವನೆ ಅನಿವಾರ್ಯವಾಗಿ ಅಂಟಿಕೊಂಡಿತ್ತ. ವರ್ಷಕ್ಕೊಮ್ಮಿ ನಾಟಕದ ಕಂಪನಿ ಟೆಂಟ್ ಹಾಕಿದರ ಊರಾಗ ಹಬ್ಬನ ಹಬ್ಬ.

ಕ್ರೈಸ್ತ ಕುಟುಂಬಗಳೂ ಇದಕ್ಕ ಹೊರತಾಗಿರಲಿಲ್ಲ. ಇದ್ಯಾಕ ಹಿಂಗ? ಅಂತ ಅವರನ್ನು ಕೇಳಿದರ, ಕುಡಕರಿಂದ `ನಮ್ಮ ಸ್ವಾಮಿ ಜೇಸುನಾಥರು ಅವರ ಕೊನಿ ಊಟದಾಗ ತಮ್ಮ ಶಿಷ್ಯರಿಗೆ ಕುಡ್ಯಾಕ ವೈನ್ ಕೊಟ್ಟಿದ್ದರಲ್ಲಾ? ನಾವು ಜೇಸುನಾಥರ ಶಿಷ್ಯರ, ಕುಡದರ ಏನ್ ತಪ್ಪಾಗತೈತಿ? ಅಂತ್ಲೆ ಹೊಳ್ಳಿ ಕೇಳೋರು. ಮತ್ತಷ್ಟು ಕೆದಕಿದರೆ, ಸ್ವಾಮ್ಯಾರು ಪೂಜೇಲಿ ಕುಡಿಯಲ್ಲಾ? ಸ್ವಾಮ್ಯಾರು, ಕ್ರಿಸ್ತ ಶರೀರ ಅನಕೋತ ನಮಗ ರೊಟ್ಟಿ- ಸತ್ಪಸಾದ ಕೊಡೂವಾಗ, ಅದನ್ನು ವೈನನ್ಯಾಗ ಅದ್ದಿ ಕೊಡೋದು ಸುಳ್ಳಾ?’ ಎಂಬ ಪ್ರಶ್ನೆಗಳು ತೂರಿ ಬರುತ್ತಿದ್ದವು.

ಊರಾಗ ದಿನ್ನಿ ಮ್ಯಾಲ ಇರೂ ಮ್ಯಾಲಿನ ಮನೆಯ ಮಾನಪ್ಪ ಒಬ್ಬ ದೊಡ್ಡ ಕುಡುಕ. ಅವನ ಕುಡಿತದ ಸಂಭ್ರಮ ನೋಡಬೇಕ. ಭಕ್ತ ಕುಂಬಾರನ ಪರಿಯಚ್ಚ ಅವಾಂ. ದೇವರ ಸ್ಮರಣೆ ಮಾಡಕೋತ, ಹದಕ್ಕ ತರಲಿಕ್ಕೆ ಮಣ್ಣನ್ನು ತುಳೀತಿದ್ದ ಭಕ್ತ ಕುಂಬಾರ, ಮಣ್ಣಿನ್ಯಾಗ ತನ್ನ ಕೂಸು ಬಂದದ್ದನ್ನು ನೋಡದ ಭಕ್ತಿ ಪರವಶದಾಗ ಕೂಸನ್ನೂ ತುಳದಾಂವ. ಅವನಂಗ ಮ್ಯಾಲಿನ ಮನಿ ಮಾನಪ್ಪ, ಅದ ಮಾನುವೇಲಪ್ಪ, ಭಕ್ತಿಯಿಂದ ಕುಡ್ಯಾಕ ಶುರುಹಚ್ಚಗೋತಿದ್ದ. ಕುಡದ ಮಂಪರದಾಗ ಭಕ್ತಿಲಿಂದ ಸ್ವರ್ಗ ಸುಖವನ್ನು ಅನುಭವಿಸ್ತಿದ್ದ.

ಅವನ ಕುಡತದ ಭಕ್ತಿ ಹೆಂಗಿತ್ತಪಾ ಅಂದ್ರ, ಎಲ್ಲಾರೂ ಜೀವನದಾಗ ಒಮ್ಮೆ ನೋಡಿ ಪುನೀತರಾಗುವಂಗಿತ್ತ. ಅವನಿಗೆ ಸಂಜಿ ಆದರ ಹೆಂಗರ ಮಾಡಿ ಕುಡಿಯಬೇಕ, ಅನ್ನುವ ತುಡಿತ ಹುಚ್ಚೆದ್ದು ಕುಣಿಯುತ್ತಿತ್ತು. ಹೊರಗ ಇದ್ದಾಗ, ಅವನ ಕಿಸೆಯೊಳಗ ರೊಕ್ಕ ಇದ್ದರ, ಯಾರರೆ ಕುಡಿಸಿದರ ಕಂಠಮಟ ಕುಡಿದು ಬರತಿದ್ದ. ದರ್ಯಾಗ ಸಿಕ್ಕ ಸಿಕ್ಕವರಿಗೆ ಕೆಟ್ಟಕಟ್ಟದಾಗಿ ಮಾತಾಡಿಕೋತ ಬರತಿದ್ದ. ಅವಾಂ ಹಂಗ ಮಾಡಬಾರದಂತ ಹೆಂಡತಿ ಮತ್ತು ಮಕ್ಕಳು ಸಾಹಸಾ ಮಾಡಿ ಅವಾಂ ಮನ್ಯಾಗ ಕುಡದ ಹಾಸಿಗೆ ಸೇರುವಂಗ ಮಾಡಲಿಕ್ಕೆ ಒದ್ದಾಡತಿದ್ದರು.

ಅವರು ಒಂದ ಬ್ಯಾಟಾ ಮಾಡಿದ್ದರು. ಮೂರುಸಂಜಿ ಆಯಿತ ಎಲ್ಲಿದ್ದರೂ ಅವನ್ನ ದರಾ ದರಾ ಎಳೆದುಕೊಂಡ ಮನಿಗ ಕರಕೊಂಡ ಬರ್ತಿದ್ದರು. ಮನಿ ದೊಡ್ಡ ಮಗ ಓಡಿ ಹೋಗಿ ಮುನಿಯಪ್ಪನ ಅಂಗಡ್ಯಾಗ ಸಾರಾಯಿ ಪಾಕೀಟು ಕೊಂಡು ತರ್ತಿದ್ದ.

ಆವಾಗ, ಊರಾಗ ಊರಾಗ ಒಂದಿಬ್ಬರು ಸಾವಕಾರ ಮನ್ಯಾಗ ಮತ್ತ ಉಡಪಿ ಹೊಟೇಲೊಳಗ ರೇಡಿಯೋ ಇರ್ತಿದ್ದವು. ರೇಡಿಯೋದಿಂದ ಹಾಡ ಜೋರಾಗಿ ಹಾಕತಿದ್ದರು. ಅದರಾಗ ಆಗಾಗ ಬರ್ತಿದ್ದ ಕಾಳಿಂಗರಾಯರು ಹಾಡಿದ್ದ ಹಾಡನ್ನ ಭಾಳ ಹಚ್ಚಿಕೊಂಡಿದ್ದ.

ಅದು ಸಾಹಿತಿ ಜಿ.ಪಿ. ರಾಜರತ್ನಂ ಅವರು ಬರದ ಹಾಡಂತ. `ಬ್ರಮ್ಮ ನಿಂಗೆ ಜೋಡಿಸ್ತೀನಿ ಯೆಂಡಾ ಮುಟ್ಟಿದ ಕೈನ್’ ಹಾಡಿನ ಧಾಟಿಯೊಳಗ, ಆ ಕಡೆ ಈ ಕಡೆ ಪದಾ ಬದಲಿಸಿ ಹಾಡುತ್ತಿದ್ದನಂತ. ಆ ಅಪಭ್ರಂಶಗೊಂಡ ಹಾಡು, ಈಗಲೂ ಊರಾಗ ನಾಲ್ಕಾರ ಮಂದಿ ಕುಡುಕರ ಬಾಯಿಂದ ಕೇಳಬಹುದು.

`ಜೇಸುನಾಥಾ ನಿಂಗೆ ಜೋಡಸ್ತೀನಿ ವೈನ್ ಮುಟ್ಟಿದ ಕೈನ|
ಭೂಮಿ ಉದ್ಕೂ ಬೊಗ್ಗಿಸ್ತೀನಿ ವೈನ್ ತುಂಬ್ಕೊಂಡ ಮೈನ||
ಬುರ್ ಬುರ್ ನೊರೆ ಬಸಿಯೂವಂತ ವಳ್ಳೆ ವುಳಿ ಯೆಂಡ|
ಒಂಚೂರ್ ನನ್ದು ಪ್ರಾರ್ಥನೆ ಕೇಳು, ವಸಿ ಪ್ರಾರ್ಥನೆ ಕೇಳು||

ಮುನಿಯಮ್ಮ ಮುನಿಸ್ಕೊಂಡೌಳೆ ನೀನೆ ವಸಿ ಯೇಳು|

ಕುಡದ್ಬುಟ್ಟ ಆಡದ್ರೆ ತೊದಲ್ತದಣ್ಣಾ ನಾಲ್ಗೆ ಬಾಳ ಗೋಳು||’

ಈ ಪದ್ಯದಾಗ ಬರೂ ಮುನಿಯಮ್ಮ ಬೇರೆ ಯಾರೂ ಅಲ್ಲ. ಅದು ಅವಾಂ ತಾಳಿ ಕಟ್ಟಿದ ಅವನ ಹೆಂಡತಿ ಹೆಸರು.

ಅವನ ಕೈಗೆ ಸರಾಯಿ ಪಾಕೀಟು ಬರ್ತಿದ್ದಂಗ, ಅವನ ನಡವಳಿಕೀನ ಬದಲಾಗತ್ತಿತ್ತು. ಮನಿ ಪಡಸಾಲ್ಯಾನ ಪೀಠದ ಮುಂದ ಈಚಲ ಗರಿ ಚಾಪಿ ಹಾಸತ್ತಿದ್ದ. ಆಗಲೇ ಅಡಗಿ ಮನಿಯಿಂದ ಮನಿಯವರು ಒಂದೆರಡು ಬಟ್ಟಲಗಳನ್ನು ತಂದು ಇಟ್ಟಿರತ್ತಿದ್ದರು. ಮನ್ಯಾಗ ಮಾಡಿದ್ದರ, ಹುರದ ಶೇಂಗಾ ಬೀಜ, ಕರದ ಬಜ್ಜಿ ಬಿಸಿ ಬಿಸಿಯಾಗಿ ಸಿಗತ್ತಿದ್ದವು. ಇದೆಲ್ಲಾ ವ್ಯವಸ್ಥೆ ಆಗಿರದಿದ್ದರ, ಓಣಿ ಮೂಲಿ ಡಬ್ಬಾ ಅಂಗಡಿಯಿಂದ ಮೆಣಸಿಕಾಯಿ ಬಜ್ಜಿ, ಬೊಂಡಾಗಳು ಬಂದಿರತ್ತಿದ್ದವು.

ದೇವರ ಪೀಠದ ಕಡೆ ಭಕ್ತಿಲಿಂದ ಹೆಜ್ಜಿ ಇಟಗೋತ ಪೀಠದಾಗ ಮೇಣದ ಬತ್ತಿ ಬೆಳಗತ್ತಿದ್ದ, ಅಗರಬತ್ತಿ ಕಡ್ಡಿಯನ್ನ ಹಚ್ಚಿ ಪಡಸಾಲ್ಯಾಗ ಭಕ್ತಿ ವಾತಾವರಣ ಮೂಡುವಂಗ ಮಾಡತ್ತಿದ್ದ. ಚಾಪಿ ಕಡೆ ಬಂದ ಭಕ್ತಿಲಿಂದ ನಮಸ್ಕಾರ ಮಾಡಿ ಕೆಳಗ ಕೂಡುತ್ತಿದ್ದ ಮಾನಪ್ಪ ಸರಾಯಿ ಪಾಕೀಟನ್ನ ಕತ್ತರಿಯಿಂದ ಕತ್ತರಿಸಿ ಬಟ್ಟಲಕ್ಕ ಸುರಕೊಳ್ಳತ್ತಿದ್ದ.

ಗುಡ್ಯಾಗ ಪೂಜಿ ಮಾಡೂವಾಗ ಸ್ವಾಮ್ಯಾರ ಮಾಡಿದಂಗ ತನ್ನ ಮುಂದಿದ್ದ ಸಾರಾಯಿ ತುಂಬಿದ ಬಟ್ಟಲಾ ಎತ್ತಿ ಹಿಡಿದ, ದೇವರಿಗೆ ನೈವೇದ್ಯ ಮಾಡಾವರಂಗ ಮಾಡುತ್ತಿದ್ದ. ಶಿಲುಬೆ ಗುರುತು ಹಾಕಿ ಸಾರಾಯಿ ಬಟ್ಟಲಾ ತನ್ನ ತುಟಿಗೆ ಮುಟ್ಟಿಸತ್ತಿದ್ದ. ಸಾವಕಾಶ ಗುಟಕರಿಸಿಕೋತ ಕುಡಿತಿದ್ದ. ನಶೆ ಏರಿದಂಗ ತನಗ ಆಗದವರ ಹೆಸರ ತಗೊಂಡ ಬೈಕೋತ ಕೂಡತ್ತಿದ್ದ. ಸುಸ್ತಾದ ಮ್ಯಾಲ ಹೆಂಡತಿ ಮುನಿಯಮ್ಮ ತಾಟ ತಂದ ಮುಂದಿಟ್ಟಾಗ, ಸುಮ್ಮನ ತಿಂತಿದ್ದ. ತಾಟಿನ್ಯಾಗ ಕೈ ತೊಳಕೊಂಡ, ನೀರು ಬಾಯಿಗೆ ಹಚ್ಚಿ ಅಲೇ ಚಾಪಿ ಮ್ಯಾಗ ಉರುಳಿಬಿಡತ್ತಿದ್ದ.

*

ಪ್ರತಿವರ್ಷದ ಕ್ರಿಸ್ಮಸ್ ಹಬ್ಬ ಚಳಿಗಾಲದಾಗ ಬರೂದು. ನಮಗ ಚಳಿಗಾಲ ಇರೂಮುಂದ ಆಸ್ಟೇಲಿಯಾ ಖಂಡದಾಗ ಕೆಟ್ಟ ಕಡುಬ್ಯಾಸಿಗೆ ಇರ್ತದಂತ. ಇರಲಿ ಬಿಡ್ರಿ, ಅದು ಅವರವರ ಹುಟ್ಟಿದ ಖಂಡದ ಪ್ರತಾಪ.

ಕ್ರಿಸ್ಮಸ್ ಹಬ್ಬದ `ಆಗಮನ ಕಾಲ’ ಬರತ್ತಿದ್ದಂಗ, ಗುಡಿ ಒಳಗ ಹೊರಗ ಧುಳಾ ಝಾಡಿಸಿ ಸ್ವಚ್ಛ ಮಾಡು ಕೆಲಸ, ಗ್ವಾಡಿಗೆ ಸುಣ್ಣ ಬಣ್ಣ ಬಳಿಯು ಕೆಲಸ ಒಂದೊಂದ ಶುರು ಆಗತ್ತಿದ್ದವು. ಕಟ್ಟಳೆಯ ಹಬ್ಬ, ಕ್ರಿಸ್ಮಸ್ ಹಬ್ಬಕ್ಕ ಹತ್ತ ಹದಿನೈದ ದಿನ ಅದಾವ ಅನ್ನುವಷ್ಟರಾಗ, ಮನುಷ್ಯಾರ ಅಳತಿ ಗೊಂಬಿಗಳನ್ನ ಇಡಾಕ ದನದಿ ಕೊಟ್ಟಿಗಿ ಮತ್ತು ಬೆತ್ಲೆಹೇಮಿನ ಪರಿಸರ ಸಿದ್ಧಪಡಿಸು ಕೆಲಸ, ಗುಡಿ ಗೋಪುರದ ಮ್ಯಾಲಿಂದ ಇಳಿಬಿಡು ಬಿಳಿ ಬಣ್ಣದ ಹಾಳಿ ಹಚ್ಚಿದ ದೊಡ್ಡ ಚುಕ್ಕಿ ತಯಾರ ಮಾಡೂದು ಮತ್ತ ಅದನ್ನ ಮ್ಯಾಲ ಕಟ್ಟೂದು ಉಪದೇಶಿಯ ಕೊಳ್ಳಿಗೆ ಬೀಳತ್ತಿತ್ತು. ಕ್ರಿಸ್ಮಸ್ ಹಬ್ಬದ ದೊಡ್ಡ ಪೂಜಿಗೆ ಹೊರಗಿನಿಂದ ಸ್ವಾಮ್ಯಾರು ಬರ್ತಿದ್ದರು, ಅವರನ್ನ ಕರಕೊಂಡ ಬರೂದು ಉಪದೇಶೀದ ಕೆಲಸ. ಮುದ್ದಾಮ ವರ್ಷಕ್ಕೊಮ್ಮೆರ ಪಾಪ ನಿವೇದನ ಮಾಡಿಬೇಕ ಅನ್ನೂ ಧರ್ಮಸಭಿ ನಿಯಮ ಪಾಲಸಾಕ ಮುದ್ದಾಮ ಭಾಳ ಮಂದಿ ಬರೋರು. ಅದಕ್ಕ ಕುರ್ಚಿ, ಮುಂದ ಪಡದೆ ಸ್ಟಾö್ಯಂಡಗಳನ್ನ ವ್ಯವಸ್ಥೆ ಮಾಡೂದು ಎಲ್ಲಾ ಉಪದೇಶಿ ತಲಿಗೆ ಬೀಳತಿತ್ತು.

ಆದರ, ಆ ಉಪದೇಶಿ ಎಂದೂ ಬೇಸರಿಕೊಂಡವನೇ ಅಲ್ಲ. ಎಲ್ಲವನ್ನು ಆಸ್ಥೆಯಿಂದ, ಭಕ್ತಿಯಿಂದ ಮಾಡತ್ತಿದ್ದ. ಅಂದಂದಿನ ಸ್ವಾಮ್ಯಾರ ಕಡೆಯಿಂದ ಸೈ ಅನ್ನಿಸಿಕೋತ ಬಂದಿದ್ದ. ಆ ಉಪದೇಶಿ ಬೇರೆ ಯಾರೂ ಅಲ್ಲ ನಮ್ಮಪ್ಪನ ಅಪ್ಪ. ನಿಮ್ಮ ಮುತ್ತಜ್ಜ.

ಆ ನಮ್ಮ ಅಜ್ಜ ಪರದೇಶದವರಂಗ ಬೆಳ್ಳಗ ಇದ್ದನಂತ. ಏಳ ಪೂಟ್ ಎತ್ತರದ ಆಳು. ಯಾವಗರ ಒಮ್ಮಿ ನೋಡಿದ ಮಂದಿ, ಅವರನ್ನ ಸ್ವಾಮ್ಯಾರ ಅನಕೋಬೇಕು ಹಂಗಿದ್ದನಂತ ನಮ್ಮಜ್ಜ. ಹಿಂಗಾಗಿ ಊರಾಗ ನಮ್ಮಜ್ಜಗ ಬಾಳ ರ್ಯಾದಿ ಕೊಡಾವರು.

*

ಹಬ್ಬ ಬಂತು, ರಾತ್ರಿ ಹಬ್ಬದ ಪೂಜಿ ಆಯಿತು. ಹಬ್ಬಕ್ಕ ಮನಗಂಡ ಮಂದಿ ಬಂದಿತ್ತು. ಗುಡಿ ತುಂಬಿ ತುಳಕಾಡಿ, ಹೊರಗೂ ಮಂದಿ ನಿಂತಿತ್ತು. ಪೂಜಿ ಮುಗದ ಮ್ಯಾಲ ಎಲ್ಲಾರೂ ಹೊರಗ ಬಂದ ಒಬ್ಬರಿಗೊಬ್ಬರು ಸರ್ವೇಶ್ವರನಿಗೆ ಸ್ತೋತ್ರ ಅನಕೋತ ಶುಭಾಶಯ ಹೇಳಿದರು. ಎಲ್ಲಾರು ಮುಂದ ಬಂದ ಸ್ವಾಮ್ಯಾರ ಕೈ ಕಲುಕಿದರು. ತಮ್ಮ ತಮ್ಮ ಮಕ್ಕಳಿಗೆ ಆಶೀರ್ವಾದ ಮಾಡಿಸಿಕೊಂಡರು.

ಮುಂಬೈಗೆ ದುಡ್ಯಾಕ ನಮ್ಮೂರಿಂದ ಭಾಳ ಮಂದಿ ಹೋಗಿತ್ತು. ಅಂಥವರಾಗ ಕೆಲವರು ಸ್ವಾಮ್ಯಾರಿಗೆ ಅಂತ ಪರದೇಶದ್ದ ಲಿಕ್ಕರ್ ಬಾಟಲಿ ತಂದ ಕೊಡತಿದ್ದರು. ಸ್ವಾಮ್ಯಾರು ಅವತ್ತ ಹಬ್ಬದ ಖುಷಿಲಿದ್ದರು.

ಎಲ್ಲಾರೂ ಹ್ವಾದ ಮ್ಯಾಲ ನಮ್ಮಜ್ಜನ ಕರದ ಸ್ವಾಮ್ಯಾರು, “ತೊಗೋ ನೀನು ಜಮಾಯಿಸಿಬಿಡು. ಆದರ, ಇವತ್ತ ರಾತ್ರಿ ಬ್ಯಾಡ.’’ ಅಂತ್ಹೇಳಿ ಒಂದ ಪರದೇಶದ್ದ ಬಾಟಲಿ ಕೈಗೆ ತುರುಕಿದರು.

“ಆಯಿತರಿ ಸ್ವಾಮ್ಯಾರ’’ ಭಕ್ತಿಲಿಂದ ನಮ್ಮ ಅಜ್ಜ ಆ ಬಾಟಲಿ ಹಿಡಕೊಂಡ ಮನಿಗೆ ಬಂದಿದ್ದ.

ನಮ್ಮಜ್ಜಿ ಚಾಪಿ ಮ್ಯಾಲ ಉಂಡಿ, ಚಕ್ಕಲಿ, ಹಚ್ಚಿದ ಅವಲಕ್ಕಿ, ರೋಜ್ ಕುಕ್, ಶಂಕರ ಫೋಳೆ, ಕರ್ಚಿಕಾಯಿ ಇದ್ದ ಫರಾಳ ತಾಟ ಮತ್ತ ಕೇಕ್ ಇಟ್ಟಿದ್ದಳು. ನಮ್ಮಜ್ಜ ಮನಿಗೆ ಬರೂದು ತಡಾ ಆದಾಗ, ಎಳೆ ಹುಡುಗ ನಮ್ಮಪ್ಪ ಮತ್ತ ಗೋವಾಕ ದಗದಕ್ಕೆ ಹೋಗಿ ಬಂದಿದ್ದ ದೊಡ್ಡಪ್ಪ ಫರಾಳ ತಿಂದ, ದೂರ ಕೌದಿ ಹಾಸಿದ್ದ ಹಾಸಗಿ ಮ್ಯಾಲ ಬಿದ್ದಕೊಂಡಿದ್ದರು.

ಸಂಕ್ರಸ್ಟಿಯೊಳಗ ಗುಡಿದ ಎಲ್ಲಾ ಸಾಮಾನ ತಗದಿಟ್ಟ, ಎಲ್ಲಾ ಸ್ವಚ್ಛ ಮಾಡಿ ಬರೂದಕ್ಕ ಭಾಳ ತಡಾ ಆಗಿತ್ತು. ಮರುದಿನ ಮುಂಜಾನಿ ಒಂದು ಪೂಜಿ ಹೇಳಬೇಕ ಅಂತ ಸ್ವಾಮ್ಯಾರು ನೆನಪ ಮಾಡಿದ್ದರು. ಅದಕ್ಕ ಎದ್ದ ಮ್ಯಾಲ ಸಜ್ಜ ಮಾಡುದಕ್ಕಿಂತ ಈಗ ಮಾಡಿದರ ಛಲೋ ಅಂತ ಮತ್ತ ಪೂಜಿ ತಯಾರಿನೂ ಸ್ವಲ್ಪ ಮಾಡಿಟ್ಟ. ಗುಡಿ ಬಾಗಲ ಕಿಡಿಕಿ ಎಲ್ಲಾ ಮುಚ್ಚಿ ಮುಂಚಿ ಬಾಗಲಿಗೆ ದಪ್ಪ ಕೀಲಿ ಹಾಕಿ ಬರುದರಾಗ ರಾತ್ರಿ ಎರಡ ಆಗಿತ್ತು. ಇತ್ತ ಕೈಯಾಗಿನ ಸ್ವಾಮ್ಯಾರ ಕೊಟ್ಟ ಸಾರಾಯಿ ಬಾಟಲಿ ನಮ್ಮಜ್ಜನ ತಲಿ ಕೆಡಿಸಿತ್ತು. ಸ್ವಾಮ್ಯಾರು `ಇವತ್ತ ಕುಡಿಬ್ಯಾಡ’ ಅಂತ ಹೇಳಿದ್ದರೂ ಬಾಟಲಿ ಸರಾಯಿ ಕುಡಿಯೋಣ ಅನ್ನಿಸಿತು ನಮ್ಮಜ್ಜಗ. ಅತ್ತ ಮುಂಜಾನಿ ಲಗೂನ ಏಳಬೇಕಲಾ ಅನ್ನೂ ಚಿಂತಿನೂ ಕಾಡಾಕ ಹತ್ತಿತ್ತು. ಕಡೀಕ ಬಾಟಲಿ ಮುಚ್ಚಳ ಬಿಚ್ಚೆ ಬಿಟ್ಟ.

ನಮ್ಮಜ್ಜಿ ಯಾಕ ಇಷ್ಟೊತ್ತ ಮಾಡಾಕ್ಹತ್ತಾರ ಅನಕೋತ ಕೂತಿದ್ದಳು. ಆಕೀಗೆ ಕೂತಲ್ಲೇ ಜೊಂಪ ಹತ್ತಿತ್ತು. ಹೊರಗ ಕಟ್ಟಿ ಮ್ಯಾಲ ಕೂತ ನಮ್ಮಜ್ಜ ಕುಡ್ಯಾಕ ಶುರು ಮಾಡಿದ್ದ. ಮನಿ ಮುಂದ ಇದ್ದ ಬಾವಿ ಕಟ್ಟಿ ಮ್ಯಾಲ ಇದ್ದ ಕೊಡದ ನೀರ ಬೆರಿಸಿಕೋತ ನಡದಿದ್ದ. ನಡುವ ಖಾರಾ ತಿನ್ನೂ ಮನಸ್ಸ ಆಯಿತು.

“ಲೇ, ಏನರೆ ಖಾರಾ ಇದ್ದರ ಕೊಡು’’

ನಮ್ಮಜ್ಜಿ `ಇದೇನ ಹಬ್ಬಕ್ಕೂ ಕುಡಿಯೂದ, ಸಾವಿನ ದುಃಖಕ್ಕೂ ಕುಡಿಯೂದ ಐತಿ ನಮ್ಮ ಮನ್ಯಾಗ’ ಅನಕೋತ ಎದ್ದವಳು, ಫಾರಾಳ ತಾಟದಾಗ ಇಟ್ಟಿದ್ದ ಅವಲಕ್ಕಿ ಮತ್ತ ಚಕ್ಕಲಿ ಕಾಗದದಾಗ ಇಟಗೊಂಡ ಹೊರಗ ಬಂದಳು. ಮನಿ ಮುಂದ ಕಟ್ಟಿ ಮ್ಯಾಲ ಕೂತಗೊಂಡಿದ್ದ ನಿಮ್ಮಜ್ಜನ್ನ ನೋಡಿ, “ಅಯ್ಯ, ಹಬ್ಬದ ದಿನ ಹೊರಗ ಕುಂತ ಯಾಕ ಕುಡಿತೀರಿ? ಒಳಗ ರ್ರಿ’’ ಅಂದಳು.

ನಮ್ಮಜ್ಜ ಒಳಗ ಬಂದ ಈಚಲ ಚಾಪಿ ಮ್ಯಾಲ ಕೂತಗೊಂಡ, ನಮ್ಮಜ್ಜಿ ಕೈಯಾಗಿನ ಕಾಗದದಾಗ ಇದ್ದ ಅವಲಕ್ಕ ಚಕ್ಕಲಿ ಇಸಕೊಂಡ ತಿನ್ನಾಕ ಹಚಗೊಂಡ. ನಮ್ಮಜ್ಜಿ ಒಳಗಿಂದ ತಂಬಿಗ್ಯಾಗ ನೀರ ತಗೊಂಡ ಬಂದಳು. ಒಂದ ದೊಡ್ಡ ಬಟ್ಟಲಾನೂ ತಂದ ಇಟ್ಟಳು. ಹಂಗ ಸಾವಕಾಶ ಬಾಟಲಿ ತಗದ ಮುಚ್ಚಿ ಇಟ್ಟಳು. ವಾರಗಟ್ಟಲೆ ಓಡಾಡಿ ದಣಿದದ್ದ ಜೀವ ನೆಲ ಬೇಡತಿತ್ತು. ನಮ್ಮಜ್ಜ ಕೂತಲ್ಲೇ ಚಾಪಿ ಮ್ಯಾಲ ಅಡ್ಡಾಗಿಬಿಟ್ಟಿದ್ದ.

*

ಹಬ್ಬ ಆಗಿ ಮೂರ ದಿನಾ ಕಳದಿದ್ದವು. ರಾತ್ರಿ ಊಟ ಆದಮ್ಯಾಲ ಎಲ್ಲಾರೂ ಹಾಸಗಿ ಸೇರಿ ಮಲಗೂ ತಯ್ಯಾರಿಯೊಳಗ ಇದ್ದರು. ಅಪ್ಪಗ ಸಟ್ಟನ ಹಬ್ಬದ ದಿನಾ ಸ್ವಾಮ್ಯಾರು ಕುಡ್ಯಾಕ ಕೊಟ್ಟಿದ್ದ ಬಾಟಲಿ ನೆನಪಾಯಿತು. ಮನಿ ಮುಂದ ಬಾಟಲೀನ ಬಾಯಿಗೆ ಹಚ್ಚಿ ಗುಟಕ ಕುಡದದ್ದು, ಹಂಗ ಬಾವಿ ಕಟ್ಟಿ ಮ್ಯಾಲಿನ ಕೊಡದಾನ ನೀರ ಬಾಯಿಗೆ ಹಾಕ್ಕೊಂಡಿದ್ದು, ಆಮ್ಯಾಲೆ ಮನಿಯೊಳಗ ಹ್ವಾದದ್ದು ನೆನಪಾಯಿತು. ಆದರ ಮುಂದಿಂದು ಏನೂ ನೆನಪ ಇರಲಿಲ್ಲ. ನಮ್ಮಜ್ಜಿಗೆ ಕರದ ಕೇಳಿದ, “ಹಬ್ಬದ ದಿನ ಕುಡಿಯುವಾಗ ನನ್ನ ಕೈಯಾಗ ಬಾಟಲಿ ಇತ್ತಲಾ? ಅದ ಎಲೈತಿ ಈಗ?’’

“ಅಯ್ಯ ತಗದ ಇಟ್ಟೀನ್ರಿ ಒಳಗ ಅಡಗಿ ಮನ್ಯಾಗ‘’ ಅನಕೋತ ನಮ್ಮಜ್ಜಿ ಅಡಗಿ ಮನಿಗೆ ಹೋಗಿ ಆ ಬಾಟಲಿ ತಂದ ನಮ್ಮಜ್ಜನ ಕೈಯಾಗ ಕೊಟ್ಟಳು.

ಹಾಸಿಗಿ ತುದಿಗೆ ಕೂತಗೊಂಡ ನಮ್ಮಜ್ಜ ಕುಡಿಲಿಕ್ಕೆ ಶುರು ಮಾಡಿದ. ನಮ್ಮಜ್ಜಿ ಸರಕ್ಕನ ಅಡಿಗಿ ಮನಿಗೆ ಹೋಗಿ ತಂಬಿಗಿ ನೀರು ಒಂದೆರಡ ಬಟ್ಟಲಾ ತಂದ ಇಟ್ಟಳು.

ಬಾಟಲಿಯಿಂದ ಬಟ್ಟಲಕ ಸಾರಾಯಿ ಬಗ್ಗಿಸಿಕೋತ ಕೂತಿದ್ದ ನಮ್ಮಜ್ಜ. ಅವನ ಕೈಯಾಗ ವಿದೇಶದ ಸರಾಯಿ ಇತ್ತು, ಅದೂ ಸ್ವಾಮ್ಯಾರ ಕೊಟ್ಟಿದ್ದು. ಆದರ ಯಾಕೋ ಏನೋ ಅವನಿಗೆ ಕಿಕ್ ಹೊಡದಂಗ ಆಗವಲ್ತು. ವಾರದಾಗ ಒಮ್ಮಿ ಯಾವಾಗರೆ ಲೋಕಲ್ ಸರಾಯಿ ಕುಡದಾಗ ಸ್ವಲ್ಪ ಹೊತ್ತಿನ್ಯಾಗ ನಶೆ ಏರತಿತ್ತು. ಆದರ, ಇಂದ ಹಂಗ ಆಗವಲ್ತಾಗಿತ್ತು. `ಏ, ಇವನೌವನ ಇದೇನ ಹೆಣ್ಣಮಕ್ಕಳ ಕುಡಿಯೋದ ಗಂಡಸರ ಕುಡಿಯೋದ? ಒಂದೂ ಗೊತ್ತ ಆಗವಲ್ತು’ ಅನಕೋತ ನಮ್ಮಜ್ಜಿ ಕಡೆ ನೊಡಿದ. ಆಕಿಗೂ, ಇವತ್ತ ಸೆರೆ ಕುಡಿಸೇ ಬೀಡೋಣ ಅಂತ ಉಮೇದಿ ಬಂದ ಬಿಟ್ಟಿತ್ತು.

ಊರಾಗಿನ ಉಳದ ಹೆಣ್ಮಕ್ಕಳಂಗ ನಮ್ಮಜ್ಜಿಗೆ ಕುಡತದ ಚಟಾ ಇರಲಿಲ್ಲ. ಚುಟ್ಟಾ ಸೇದೂದು ಇರಲಿಲ್ಲ. ಆದರ ದಿನಕ್ಕ ಮೂವತ್ತಸಾರಿ `ಸೊರಕ್ ಸೊಕರ್’ ಅಂತ ಮೂಗಿಗೆ ನಶ್ಯಾ ಏರಸತಿದ್ದಳು. ಸೀನ ಬಂದ್ರ ಅದೂ ಕೆಟ್ಟ ಸೀನ ಬರೂದು. ಸಣ್ಣ ಮಕ್ಕಳಿದ್ದರ ಗಾರ್ಯಾಗ ಎದ್ದಬಿಡತಿದ್ದವು.

“ಏ ಗ್ರೇಸಿ, ಬಾರ.. ನೀನು ಒಂಚೂರ ಕುಡಿ.’’

“ಬ್ಯಾಡ ತಗೀರಿ, ಇದೇನ ಹಚ್ಚೀರಿ. ನನಗ ಕುಡಿಯೂದ ಆಗೂದಿಲ್ಲ.’’ ನಮ್ಮಜ್ಜಿ ಕೊಸರಾಡಿದಳು.

ಇನ್ನೊಂದ ಬಟ್ಟಲ ಖಾಲಿ ಇದ್ದದ್ದ ನೋಡಿ, “ನೋಡ, ದಿನಾ ಒಂದ ಬಟ್ಟಲಾ ತಂದ ಇಡತಿದ್ದಿ ಇವತ್ತ ಎರಡ ಬಟ್ಟಲಾ ತಂದ ಇಟ್ಟಿ. ಅದ ಇನ್ನೊಂದ ಬಟ್ಟಲಾ ನಿನಗ ಅಲ್ಲೇನ? ನಂಗ ಎಲ್ಲಾ ಸೂಕ್ಷö್ಮ ಸೊನ್ನಿ ಗೊತ್ತಾಗ್ತದ. ಸುಮ್ಮನ ನನ್ ಜೋಡ ಕೂಡ ಬಾ.’’

“.. .. .. ‘’

“ಹಂಗೆಂಗ, ನಮ್ಮ ಸ್ವಾಮಿ ಹುಟ್ಟಿದ ವಾರದಾಗ ಕುಡದ ಹಬ್ಬಾ ಮಾಡಬೇಕ. ಕುಡದ ಸಂತೋಸದಾಗ ತೇಲಾಡಬೇಕ.’’

“ನೀವಷ್ಟ ಸಂತೋಸದಾಗ ತೇಲಾಡಿದರ ಸಾಕ ಬಿಡ್ರಿ. ನಾವೆಲ್ಲಾ ಅದರಾಗ ಬರ್ತೀವಿ ಬಿಡ್ರಿ.’’

“ಏ ಗ್ರೇಸವ್ವ, ಇದು ಅಂತಿಂಥ ಮಾಲಲ್ಲ. ವಿದೇಶಿ ಮಾಲು. ಇದು, ಹಂಗ ನನ್ನ ಕೈಯಾಗ ಬಂದಿಲ್ಲ. ಸ್ವಾಮ್ಯಾರ ಕೈಯಾಂದ ನನ್ನ ಕೈಗೆ ಬಂದದ. ಸ್ವಾಮ್ಯಾರ ಕೊಟ್ಟದ್ದನ್ನ ಇಲ್ಲ ಅನಬಾರದ, ಹಬ್ಬದ ಸಂತೋಸದಾಗ ಇಬ್ಬರೂ ಕುಡಿಯೂಣ ಬಾರ..’’

ಕಡೀಕ ನಮ್ಮಜ್ಜನ ಒತ್ತಾಸೆಗೆ ಮಣಿದ ನಮ್ಮಜ್ಜಿನೂ ನಮ್ಮಜ್ಜನ ಜೋಡಿ ಕುಡಿಲಿಕ್ಕೆ ಕುತಗೊಂಡಳು. ರೂಢಿ ಇಲ್ಲದ ಕುಡಿತ ಆಕಿಗೆ ಲಗೂನ ನಶೆ ಏರಿತು. ತೊದಲಕೋತ ಸ್ವಾಮ್ಯಾರಿಗೆ ಸ್ತೋತ್ರ ಅನಕೋತ ಹಂಗ ಈಚಲ ಚಾಪಿ ಮ್ಯಾಲ ಉರುಳಿಬಿಟ್ಟಳು. ನಮ್ಮಜ್ಜ ವಟಾ ವಟಾ ಮಾತಾಡಕೋತ ತನ್ನ ಕುಡಿತ ಮುಂದ ಸಾಗಿಸಿದ. ಅವಾಂ ಹಾಸಿಗಿಗೆ ಉರಳಿದಾಗ ನಸಕಿನ ನಾಲ್ಕ ಆಗಿತ್ತು.

*

ಮುಂಜಾನಿ ಆರಕ್ಕ ಎದ್ದ ಜಳಕಾ ಮಾಡಿದ ಸ್ವಾಮ್ಯಾರು ಮುಂಜಾನಿ ಏಳೂವರಿ ಪೂಜಿಗೆ ಸಜ್ಜಾಗಿ ಕೂತಿದ್ದರು. ಸವಾ ಏಳ ಆದರೂ ಉಪದೇಶಿ ಬಂದಿರಲಿಲ್ಲ. ಗುಡಿ ಗಂಟಿ ಬಾರಿಸಿರಲಿಲ್ಲ. ಸ್ವಾಮ್ಯಾರಿಗೆ ಇನ್ನ ತಡಾಮಾಡಿದರ ಆಗೂದಿಲ್ಲ ಅನ್ನಿಸಿತು. ಎದ್ದ ಹೋಗಿ ಉಪದೇಶಿ ಮನಿ ಬಾಗಲ ಬಡದರು. ನಮ್ಮಪ್ಪ ಆಗಲೇ ಸಾಲಿಗೆ ಪಾಟಿಚೀಲ ಹಿಡಕೊಂಡ ಹೋಗಿದ್ದ. ದೊಡ್ಡಪ್ಪ ಎದ್ದ ಹಲ್ಲತಿಕ್ಕೊಂಡ, ಮಾರಿ ತೊಳಕೊಂಡ ಊರಾನ ದೋಸ್ತರನ್ನು ಮಾತಡಸಾಕ ಹೋಗಿದ್ದ. ನಮ್ಮಜ್ಜ ಮತ್ತ ನಮ್ಮಜ್ಜಿಗೆ ಎಚ್ಚರನ ಆಗಿರಲಿಲ್ಲ.

ನಾಲ್ಕೈದ ಸಾರಿ ಚಿಲಕ ಜೋರಾಗಿ ಬಾರಿಸಿದಾಗ, ನಮ್ಮಜ್ಜಿ ಎದ್ದ ಬಂದ ಬಾಗಲ ತಗದಳು. ಆಕಿ ನಶೆ ಇನ್ನೂ ಇಳದಿರಲಿಲ್ಲ.

“ಯಾವೋನು ಅವನು ಸೂಳೆ ಮಗ, ಇಷ್ಟೊತ್ತಿಗೆ ಬಂದ ಬಾಗಲ ಬಡಿಯೂದ? ಹೊತ್ತು ಗೊತ್ತು ಗೊತ್ತಿಲ್ಲೇನ. ಬರ್ತಾರ ಮುಂಜಾನೆದ್ದ.’’

ನಮ್ಮಜ್ಜಿ ಹಿಂದ, ಎದ್ದು ಬಂದ ನಮ್ಮಜ್ಜ ಕಣ್ಣುಜ್ಜಿಕೊಂಡ ನೋಡ್ತಾನ. ಮನಿ ಮುಂದ ಸ್ವಾಮ್ಯಾರ ನಿಂತಾರ. ಧಡಗ್ಗನ ನಮ್ಮಜ್ಜೀನ ಮಗ್ಗಲಕ ಸರಿಸಿ, ತಾನ ಮುಂದ ನಂತ “ಸ್ವಾಮ್ಯಾರ ಸ್ತೋತ್ರರಿ’’ ಅಂದ.

ಅಷ್ಟರಾಗ ಸ್ವಾಮ್ಯಾರು ಮುಖಾ ತಿರಗಿಸಿ ಗುಡಿ ಕಡೆ ಹೆಜ್ಜಿ ಇಟ್ಟಿದ್ದರು. ಬಾವಿ ಕಡೆ ಓಡಿದ ನಮ್ಮಜ್ಜ ಬಡಾ ಬಡಾ ಮಾರಿ ತೊಳಕೊಂಡ ಗುಡಿ ಕಡೆ ಓಡಿದ. ಗುಡಿ ಗಂಟಿ ಬಾರಿಸಿದ. ನಿನ್ನೆ ರಾತ್ರೀನ ಪೂಜಿಗೆ ಎಲ್ಲಾ ಸಜ್ಜ ಮಾಡಿ ಇಟ್ಟಿದ್ದ. ಮೇಣದ ಬತ್ತಿ ಹಚ್ಚಿದ. ಒಳಗ ಹೋಗಿ ದೂಪಕ್ಕ ಇದ್ದಲಿಗೆ ಬೆಂಕಿ ಹೊತ್ತಿಸಿ ಕೆಂಡ ಮಾಡಿದ. ಪೂಜಿ ಆಯಿತು. ಗುರುಗಳು ಮತ್ತು ಉಪದೇಶಿ ನಡುವ ಮಾತ ಇಲ್ಲ ಕತಿ ಇಲ್ಲ. ಸ್ವಾಮ್ಯಾರು ತಮ್ಮ ಖೋಲಿ ಸೇರಕೊಂಡಿದ್ದರು. ಅವತ್ತ ಇಡೀ ದಿನಾ ಏನಿದ್ದರೂ ಅಡುಗೆ ಆಳು ಅಷ್ಟ, ಗುರುಗಳ ಜೋಡಿ ಮಾತಾಡಿದ್ದು.

ಸಂಜಿ ಮುಂದ ಗುಡಿ ಹಿಂದಿನ ಸ್ವಾಮ್ಯಾರ ಮನಿಗೆ ನಮ್ಮಜ್ಜೀನ ಕರಕೊಂಡ ಹ್ವಾದ ನಮ್ಮಜ್ಜ. ಇಬ್ಬರೂ ತಪ್ಪಾಯಿತ್ರಿ ಅಂತ ಸ್ವಾಮ್ಯಾರ ಕಾಲ ಹಿಡಕೊಂಡರು. ಸ್ವಾಮ್ಯಾರು ಏನೂ ಮಾತಾಡಲಿಲ್ಲ. ಗ್ವಾಡಿ ಮ್ಯಾಲ ತೂಗ ಹಾಕಿದ್ದ ಬೈಬಲ್ ವಚನದ ಪಟದ ಮ್ಯಾಲ ಅವರ ದೃಷ್ಟಿ ನೆಟ್ಟಿತ್ತು.

ಆ ಪಟದಾಗ, ಲೂಕರ ಶುಭಸಂದೇಶದ ಆರನೇ ಅಧ್ಯಾಯದ ೨೮ನೇ ಚರಣ ಇತ್ತು.

`ನಿಮ್ಮನ್ನು ಶಪಿಸುವವರನ್ನು ಆಶೀರ್ವದಿಸಿರಿ, ನಿಮ್ಮನ್ನು ನಿಂದಸುವವರಿಗಾಗಿ ಪ್ರಾರ್ಥಿಸಿರಿ.’

ನಮ್ಮಜ್ಜ ಮತ್ತ ಅಜ್ಜಿ ಅಲ್ಲಿಂದ ಮನಿಗೆ ಹ್ವಾದರು. ಏನ ಮಾಡಬೇಕು ಅಂತ ಗೊತ್ತಾಗಲಿಲ್ಲ.

*

ಅದಾದ ನಾಲ್ಕೈದ ದಿನಾ, ನಮ್ಮಜ್ಜನ ಉಪದೇಶಿ ಕೆಲಸಕ್ಕ ಏನೂ ಭಂಗ ಬರಲಿಲ್ಲ. ನಮ್ಮಜ್ಜಗ ತಡಿಯೂದ ಆಗಲಿಲ್ಲ. ಒಂದ ದಿನಾ ಮುಂಜಾನಿ ಪೂಜಿ ಮುಗದ ಕೂಡ್ಲೆ, ಸ್ವಾಮ್ಯಾರ ಖೋಲಿಗೆ ಹೋಗಿ ಕಾಲ ಹಿಡಕೊಂಡ “ನಂದ ತಪ್ಪಾಯಿತ್ರಿ’’ ಎಂದು ಕಣ್ಣೀರಿಟ್ಟ.

“ನನ್ನಾಕಿ ಬ್ಯಾಡ ಅಂದ್ರೂ ನಾನ ಒತ್ತಾಸಿ ಮಾಡಿ ಕುಡಿಯುವಂಗ ಮಾಡಿದ್ನಿ. ಎಲ್ಲ ನಂದ ತಪ್ಪರಿ.’’ ನಮ್ಮಜ್ಜ ಎದಿ ಬಡಕೊಂಡ ಅತ್ತ.

“ಆಯಿತು, ದೇವರು ಎಲ್ಲಾ ಲೆಕ್ಕಾ ಇಟ್ಟಿರ್ತಾನ. ಶುದ್ಧೀಕರಣದ ಸ್ಥಳದಾಗ ನಾವೆಲ್ಲಾ ಹಾಯ್ದ ಹೋಗಬೇಕಾಗ್ತದ.’’

ಸ್ವಾಮ್ಯಾರು ಸಮಾಧಾನದಿಂದ ನುಡಿದರು.

“ಶನಿವಾರ ಸಂಜಿ ಮುಂದ ಸ್ವಾಮ್ಯಾರು ಪಾಪ ಸಂಕೀರ್ತನ ಕೇಳಾಕ ಕೂತಾಗ ನಮ್ಮಜ್ಜಿ ಹೋಗಿ ಪಾಪ ನಿವೇದನೆ ಮಾಡಿದಳು. ಪ್ರಾಯಶ್ಚಿತ್ತ ಅಂತ ಸ್ವಾಮ್ಯಾರ ಹೇಳಿದಂಗ ಗುಡಿ ಸ್ವಚ್ಛ ಮಾಡೂ ಸೇವಾ ಕೆಲಸಕ್ಕ ನಿಂತಕೊಂಡಳು.

ಮಗ್ಗಲಕಿನ ಊರನ ಸಾವಕಾರ ಸಿಮೋನಪ್ಪನ ಮಗಳು ನಮ್ಮಜ್ಜಿ. ಮನ್ಯಾಗ ಮೈ ಬಗ್ಗಿಸಿ ಕೆಲಸ ಮಾಡಿದವಳಲ್ಲ. ಅಪ್ಪನ ಮೈ ಬಣ್ಣ, ಅವನ ನಡವಳಿಕಿ ಮೆಚ್ಚಿ ಅವನ ಹಿಂದ ಬಂದಿದ್ದಳು. ಆಗಿದ್ದ ಗುಡಿ ಸ್ವಾಮ್ಯಾರು ಪೂಜಿಕೊಟ್ಟ ಮದವಿ ಮಾಡಿಸಿದ್ದರು.

ನಮ್ಮಜ್ಜಿ ಸ್ವಾಮ್ಯಾರಿಗೆ ಆಡಬಾರದ್ದ ಆಡಿ ಆರ ತಿಂಗಳ ಕಳದಿತ್ತು. ಗೋವಾಕ್ಕ ದಗದಕ್ಕ ಹೋಗಿದ್ದ ನಮ್ಮ ದೊಡ್ಡಪ್ಪ, ಅಲ್ಲಿ ಹ್ವಾರೆ ಸಾಕಾಗಿ ಊರಿಗೆ ಹೊಳ್ಳಿ ಬಂದಿದ್ದ. ವಯಸ್ಸಾಗಿತ್ತು. ಅವನಿಗೆ ಒಂದ ಹುಡಗೀನ್ನ ನೋಡಿ ಇಟ್ಟಿದ್ದ ನಮ್ಮಜ್ಜ. ಅವನಿಗೆ ಮದುವಿ ಠರಾವ ಆಯಿತು. ನಮ್ಮಜ್ಜಿ ಗುರುಗಳಿಗೆ ಅಂದಿದ್ದ ಕೆಟ್ಟ ಮಾತಗಳು ಜನರ ಕಿವಿಯಿಂದ ಕಿವಿಗೆ ಹೋಗಿ, ಊರಾನ ಮಂದಿಗೆಲ್ಲಾ ಗೊತ್ತಾಗಿತ್ತು. ಮದುವ್ಯಾದರ ಹೊಸ ಕುಟುಂಬ ಒಂದ ಮನ್ಯಾಗ ಹೆಂಗ ಇರ್ತದ. ಅವರನ್ನು ಗುಡಿ ಜಾಗಾದಿಂದ ಓಡಸೂಣ ಅಂತ ಗುಡಿ ದೈವದವರು ಮಾತಾಡಾಕ ಶುರು ಹಚ್ಚಕೊಂಡಿದ್ದರು. ಆ ಸುದ್ದಿ ಸ್ವಾಮ್ಯಾರ ಕಿವಿಗೆ ಬಂದ ಬಿತ್ತು. ಸ್ವಾಮ್ಯಾರು, ನಮ್ಮ ದೊಡ್ಡಪ್ಪನ ಗುಡಿ ಮದವಿ ದಿನದ ಹಿಂದಿನ ದಿನಾನ ಗೌಂಡಿನ್ನ ಕರಿಸಿ, ಹಳೆಮನಿಗೆ ಹಚ್ಚಿ ಮೂರ ಗ್ವಾಡಿ ಎಬ್ಬಿಸಿ ಒಂದ ಖೋಲಿ ಹಾಕಿಸಿಬಿಟ್ಟಿದ್ದರು. ಹೊಸಾ ಮನ್ಯಾಗ ಮದುಮಕ್ಕಳ ಸಂಸಾರ ಶುರು ಆಗಂಗ ಮಾಡಿದ್ದರು.

ಆ ಸ್ವಾಮಿ ದೊಡ್ಡವರು, ಯೇಸು ಸ್ವಾಮಿ ಹೇಳಿದಂಗ ಬದುಕ ನಡಸ್ತಿದ್ದರು. ಯೇಸುಸ್ವಾಮಿಯು ಪರರ ಸೇವೆಯೇ ಪರಮಾತ್ಮನ ಸೇವೆ ಎಂದು ಸಾರುವ- ‘ಈ ನನ್ನ ಸೋದರರಲ್ಲಿ ಒಬ್ಬನಿಗೆ ಅವನೆಷ್ಟೇ ಕನಿಷ್ಟವಾಗಿರಲಿ, ನೀವು ಹೀಗೆ ಮಾಡುವಾಗಲೆಲ್ಲಾ, ಅದನ್ನು ನನಗೆ ಮಾಡಿದಿರಿ ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ’ ಮೊದಲಾದ ವಾಕ್ಯಗಳು ಅವರಿಗೆ ಕೈ ದೀಪಗಳಾಗಿದ್ದವು. ಆ ಪಟ ಅಂಥ ಬದುಕ ಸಾಗಿಸಿದ್ದ ಸ್ವಾಮೀದು. ಅದಕ್ಕ ಅದು ನಮ್ಮ ಮನಿ ಪೀಠದಾಗ ಐತಿ.

ಅಷ್ಟೆಲ್ಲಾ ನಡದರೂ ಸ್ವಾಮಿ, ನಮ್ಮ ಎಲ್ಲಾ ತಪ್ಪನ್ನ ತಮ್ಮ ಹೊಟ್ಯಾಗ ಹಾಕ್ಕೊಂಡಿದ್ದರು. ಬಡವರಿಗೆ ಕನಕರ ಪಡತಿದ್ದರು. ಕೈಲಾದಷ್ಟು ಸಹಾಯ ಮಾಡತಿದ್ದರು. ವಯಸ್ಸಿನ್ಯಾಗ ಎಷ್ಟೋ ಅನಾಥ ಮಕ್ಕಳನ್ನು ಸಾಕಿದ್ದರಂತ. ಅವರ ಬದುಕ ಕಟ್ಟಿಸಿಕೊಟ್ಟಿದ್ದರು. ಅವರು ಆ ಊರಿಂದ ವರ್ಗಾ ಆದಾಗ, ಊರ ಮಂದೆಲ್ಲಾ ಕಣ್ಣೀರ ಹಾಕಿದ್ದರು. ಮುಂದ ಬಂದ ಯಾವ ಸ್ವಾಮ್ಯಾರು, ಯಾರೂ ಆ ಸ್ವಾಮಾರ ಮಟ್ಟಕ್ಕ ಬರಲೇ ಇಲ್ಲ. ನಮ್ಮಜ್ಜನಿಗೂ ಗುಡಿ ಉಪದೇಶಿ ಕೆಲಸದ ಋಣಾ ಮುಗಿದಿತ್ತು. ನಮ್ಮಪ್ಪ, ನಮ್ಮ ದೊಡ್ಡಪ್ಪ ಗುಡಿ ಅಂಗಳಾ ಬಿಟ್ಟ ಹೊರಗ ಬಂದ ಸಂಸಾರ ನಡಸುವಷ್ಟ ಗಟ್ಟಿಗರಾಗದ್ದರು. ನೀವು ಅಂದಕೊಂಡಿದ್ದ ಖರೆ ಐತಿ ಪಟಾ ಮಾಸೇದ. ಆ ಪಟದಾಗಿರೂ ಸ್ವಾಮ್ಯಾರು ನಿಮಗ ಕಾಣ್ಲಿಕ್ಕಿಲ್ಲ. ಆದರ ನಮ್ಮ ಒಳಗಣ್ಣಾಗ ಆ ಸ್ವಾಮ್ಯಾರು ಇನ್ನೂ ಕಂಡ ಕಾಣ್ತಾರು. ಅದಕ್ಕ ಅನುರಾಗದ ಅನುಭೂತಿ ಇರಬೇಕು, ವಿಶ್ವಾಸ ಇರಬೇಕು, ಕಾಣುವ ಭಾವ ಬೇಕು.’’

-ಎಫ್.‌ ಎಂ. ನಂದಗಾವ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x