ಜಗತ್ತಿನಲ್ಲಿ ಇತರರನ್ನು ತಿದ್ದುವ ಅಧಿಕಾರ ಮತ್ತು ಶ್ರಮ ಬೇಡ. ಒಬ್ಬ ವ್ಯಕ್ತಿ ಒಳ್ಳೆಯವರು/ ಕೆಟ್ಟವರು ಎಂದು ನಿರ್ಧಾರ ಮಾಡುವ ಕಷ್ಟವೂ ನಮಗೆ ಬೇಡ. ಒಬ್ಬರಿಗೆ ಒಳ್ಳೆಯವರಾಗಿ ಕಂಡವರು ಇನ್ನೊಬ್ಬರಿಗೆ ಕೆಟ್ಟವರಾಗಿ ಕಾಣುಬಹುದು ಅಥವಾ ಇನ್ನೊಬ್ಬರಿಗೆ ಕೆಟ್ಟವರಾಗಿ ಕಂಡವರು ಮತ್ತೊಬ್ಬರಿಗೆ ಒಳ್ಳೆಯವರಾಗಿ ಕಾಣಬಹುದು. ಅದು ಆಯಾ ಸಂದರ್ಭಕ್ಕೆ ಅನ್ವಯಿಸಿರುತ್ತದೆ.
ವಸ್ತುಗಳಿಗೆ ಕೊಟ್ಟಷ್ಟು ಬೆಲೆಯನ್ನು ನಾವು ಇಂದು ವ್ಯಕ್ತಿಗಳಿಗೆ ನೀಡುತ್ತಿಲ್ಲ. ಕಾರು ಬಂಗಲೆ ಐಷಾರಾಮಿ ಜೀವನಕ್ಕಾಗಿ ಕಾತರಿಸುತ್ತೇವೆಯೇ ಹೊರತು, ವ್ಯಕ್ತಿಗಳಿಗೆ ಅಲ್ಲ ಎನ್ನುವುದು ಹಲವಾರು ಸಂದರ್ಭದಲ್ಲಿ ನಮ್ಮನ್ನು ನಾವು ಪ್ರಶ್ನಿಸಿಕೊಂಡಾಗ ಉದಾಹರಣೆಯಾಗಿರುತ್ತದೆ. ಒಂದು ಕಡೆಯಿಂದ ನೋಡಿದಾಗ ಕಾಣುವ 6 ರ ಸಂಖ್ಯೆ ಎದುರಿಗೆ ನಿಂತು ಉಲ್ಟಾ ನೋಡುವವರಿಗೆ 9 ಆಗಿ ಕಾಣುತ್ತದೆ. ಆಗ ಇಬ್ಬರೂ ಅವರವರ ಸ್ಥಳದಲ್ಲಿ ಸರಿ ಎಂದೇ ಅರ್ಥ. ಮತ್ತೊಬ್ಬರನ್ನು ಸರಿಪಡಿಸುವ ಕಷ್ಟ ತೆಗೆದುಕೊಳ್ಳದೆ ಅವರವರ ತಪ್ಪುಗಳನ್ನು ತಿದ್ದಿ ನಡೆಯುವ ಪ್ರಯತ್ನವನ್ನು ಮಾಡಬೇಕಿದೆ.
ಪ್ರತಿಯೊಬ್ಬರೂ ತಮ್ಮ ಆತ್ಮಾವಲೋಕನ ಮಾಡಿಕೊಂಡರೆ ಒಳಿತು. ಈ ಪ್ರಪಂಚ ಕೆಟ್ಟುಹೋಗಿದೆ ಎನ್ನುವುದಕ್ಕಿಂತ ನಾನು ಸರಿಯಾಗಿ ಇರುವೆನೇ…!? ಎಂದು ಪ್ರಶ್ನಿಸಿ ಕೊಳ್ಳಬೇಕು. ಬೇರೆಯವರ ನಡೆಯನ್ನು ಪ್ರಶ್ನೆಮಾಡುವ ಪೂರ್ವದಲ್ಲಿ ತಮ್ಮ ನೈತಿಕತೆಯ ಮೂಲವನ್ನು ಪ್ರಶ್ನಿಸಿಕೊಳ್ಳಬೇಕು. ೧೨ನೇ ಶತಮಾನದಲ್ಲಿ ಶಿವಶರಣರು ಮಾಡಿದ್ದು ಇದೇ ಕೆಲಸ.
ಈ ಕಾರಣಕ್ಕೆ ಅಣ್ಣ ಬಸವಣ್ಣನವರು ಹೇಳಿದ್ದು…!!
"ಲೋಕದ ಡೊಂಕ ನೀವೇಕೆ ತಿದ್ದುವಿರಿ.!?
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ
ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ
ಕೂಡಲಸಂಗಮದೇವ".
ನಮ್ಮನ್ನು ನಾವು ತಿದ್ದಿಕೊಳ್ಳದೆ, ಸದಾ ಬೇರೆಯವರನ್ನು ತಿದ್ದುವ ಪ್ರಯತ್ನವನ್ನು ಮಾಡುತ್ತಾ, ಅವರ ವರ್ತನೆಗಳನ್ನು ವಿಮರ್ಶೆ ಮಾಡುತ್ತಿರುತ್ತೇವೆ. ಪ್ರತಿಯೊಬ್ಬ ವ್ಯಕ್ತಿ ಇತರರ ನಡತೆಯ ವಿಚಾರದಲ್ಲಿ ಸುಧಾರಣೆಯನ್ನು ತರಲು ಬಯಸುವ ಸಂದರ್ಭದಲ್ಲಿ ಈ ವಚನವನ್ನು ಸ್ಮರಿಸಿಕೊಳ್ಳುವುದು ಅಗತ್ಯ. ಲೋಕದಲ್ಲಿ ಪರಿಪೂರ್ಣರೆನಿಸಿಕೊಂಡವರು ಯಾರು ಇಲ್ಲ. ಪರಿಪೂರ್ಣರೆನಿಸಿಕೊಂಡರೆ ಆ ವ್ಯಕ್ತಿ ಮನುಷ್ಯನಾಗಿರದೆ, ಭಗವಂತ ಎನಿಸಿಕೊಳ್ಳುತ್ತಾನೆ.
ವ್ಯಕ್ತಿಗಳಲ್ಲಿ ಲೋಪ ದೋಷಗಳು ಇರುವುದು ಸಾಮಾನ್ಯ. ‘ನಡೆವರೆಡಹದೆ ಕುಳಿತವರೆಡಹುವರೇ..!’ ಎನ್ನುವ ಕವಿವಾಣಿಯಂತೆ ಮನುಷ್ಯನಾಗಿ ಜನ್ಮ ಪಡೆದ ಮೇಲೆ ಒಂದಲ್ಲ ಒಂದು ತಪ್ಪು ಮಾಡುತ್ತಾನೆ. ತಪ್ಪು ಮಾಡ ಹೊರಟಾಗಲೇ ಮನುಷ್ಯನ ಮನಸ್ಸು ಎಚ್ಚರಿಸಿರಬಹುದು ಅಥವಾ ಕಾರ್ಯ ಘಟಿಸಿದಾಗ ಎಚ್ಚರಿಸಿರಬಹುದು. ತನ್ನನ್ನು ತಾನೇ ತಿದ್ದಿಕೊಳ್ಳುವುದಕ್ಕೆ ಇದು ಯುಕ್ತ ಸಮಯವಾಗುತ್ತದೆ.
ಕುಂಬಾರ ಮಣ್ಣನ್ನು ಹಿತಮಿತವಾಗಿ ಕಲಸಿ ತಿಗರಿಯಲ್ಲಿ ಇಟ್ಟು ತಿರುಗಿಸುತ್ತಾ, ಬೇರೆ ಬೇರೆ ಆಕಾರದ ಪಾತ್ರೆಗಳನ್ನು ಸಿದ್ಧಗೊಳಿಸುತ್ತಾನೆ, ಪಾತ್ರೆಗಳು ಅರ್ಧ ಒಣಗಿ ಇನ್ನೂ ಹಸಿ ಇರುವಾಗಲೇ ಅವುಗಳನ್ನು ತಟ್ಟಿ, ಕುಟ್ಟಿ ಪರಿಪೂರ್ಣ ಆಕಾರಕ್ಕೆ ತರುತ್ತಾನೆ. ಒಂದು ವೇಳೆ ತಿಗರಿಯಿಂದ ತೆಗೆದು ಬಿಸಿಲಿನಲ್ಲಿ ಇಟ್ಟು ಒಣಗಲಿ ಎಂದು ತನ್ನ ಕರ್ತವ್ಯವನ್ನು ಮರೆತು ಬಿಟ್ಟರೆ, ತಯಾರಿಸಿದ ಪಾತ್ರೆಗಳು ಅಲ್ಲಿಯೇ ಒಣಗುತ್ತವೆ. ಆಗ ಅವುಗಳಿಗೆ ಸರಿಯಾದ ಆಕಾರವನ್ನು ಕೊಡುವುದಕ್ಕೆ ಸಾಧ್ಯವಾಗುವುದಿಲ್ಲ. ಪಾತ್ರೆಗಳೂ ವ್ಯರ್ಥ…!! ಶ್ರಮವು ವ್ಯರ್ಥ…!!ಸಮಯವು ಹಾಳು…!! ಅದೇ ರೀತಿಯಲ್ಲಿ ವ್ಯಕ್ತಿ ತಪ್ಪು ಮಾಡಿದಾಗ ಅದನ್ನು ಅರಿತು ತನ್ನನ್ನು ತಾನು ತಿದ್ದಿಕೊಂಡು ಉಳಿದವರಿಗೆ ಮಾದರಿಯಾಗಬೇಕು.
ಶರಣರು,ದಾಸರು,ದಾರ್ಶನಿಕರು, ತತ್ವಪದಕಾರರು ತಮ್ಮನ್ನು ತಾವು ತಿದ್ದಿಕೊಳ್ಳುತ್ತಾ, ಇತರರನ್ನು ತಿದ್ದುವ ಪ್ರಯತ್ನ ಮಾಡಿದರು. ಇದರಿಂದಾಗಿ ಅವರಲ್ಲಿ ಆತ್ಮ ವಿಮರ್ಶೆಯ ಪ್ರಕ್ರಿಯೆ ನಿರಂತರ ಕಂಡು ಬರುತ್ತದೆ. ಆದರೆ ಇಂದು ತಮ್ಮನ್ನು ತಾವು ತಿದ್ದಿಕೊಳ್ಳದೇ, ಕೇವಲ ಬೇರೆಯವರನ್ನು ತಿದ್ದಲು ಪ್ರಯತ್ನಿಸುವವರ ಸಂಖ್ಯೆ ಹೆಚ್ಚಿದೆ. ಮನುಷ್ಯ ತನ್ನ ಮೈ ಮನಸ್ಸುಗಳಲ್ಲಿ ಅಮಾನವೀಯ, ದುರಹಂಕಾರ, ಸ್ವೇಚ್ಛಾಪ್ರವೃತ್ತಿ, ಅಪಕಾರ, ಮೋಸ, ವಂಚನೆ ಇತ್ಯಾದಿ ಭಾವನೆಗಳನ್ನು ತುಂಬಿಕೊಂಡು ಪರರನ್ನು ತಿದ್ದಲು ಹೊರಟರೆ, ಆ ವ್ಯಕ್ತಿ ಅಪಹಾಸ್ಯಕ್ಕೆ ಗುರಿಯಾಗುತ್ತಾನೆ.
ಆಧುನಿಕ ಶಿಕ್ಷಣ ನೈತಿಕತೆಯನ್ನು ಕಳೆದುಕೊಂಡು, ಮನುಷ್ಯನ ಬೌದ್ಧಿಕ ಹಾಗೂ ಮಾನಸಿಕ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತಿದೆ. ಯಾವುದೂ ತಲಸ್ಪರ್ಶಿ ಜ್ಞಾನವಲ್ಲ. ಇತ್ತೀಚೆಗೆ ವ್ಯಕ್ತಿ ದೈಹಿಕವಾಗಿ ಮಾತ್ರವಲ್ಲ, ಮಾನಸಿಕವಾಗಿಯೂ ಕುಗ್ಗುತ್ತಿದ್ದಾನೆ. ಕೆಲವು ಅತಿ ಬುದ್ಧಿವಂತರು ತಮ್ಮ ಸ್ವಪ್ರತಿಷ್ಠೆಗಾಗಿ, ಹಣ ಗಳಿಸುವುದಕ್ಕಾಗಿ, ತಮ್ಮನ್ನು ಪರಮ ಜ್ಞಾನಿಗಳೆಂದು ತೋರಿಸಿಕೊಳ್ಳುವುದಕ್ಕಾಗಿ, ಮಹಾ ಸಂಭಾವಿತರಂತೆ ನಟಿಸುತ್ತಾ, ಪರರನ್ನು ತಿದ್ದುವ/ಸಾಂತ್ವನ ಹೇಳುವ/ ಮಾರ್ಗದರ್ಶನ ಮಾಡುವುದು ಕಂಡು ಬರುತ್ತದೆ. ಮೂಲಭೂತವಾಗಿ ತನಗೆ ಅರ್ಹತೆ ಇಲ್ಲದಿದ್ದರೂ ಇತರರನ್ನು, ಇತರರ ತಪ್ಪನ್ನು ತಿದ್ದುವ, ಅನ್ಯರ ನೋವಿಗೆ ಸಾಂತ್ವನ ಹೇಳುವ, ಇತರರ ಡೊಂಕನ್ನು ಒರೆಸುವವರೇ ಎಲ್ಲೆಡೆ ತುಂಬಿಕೊಂಡಿದ್ದಾರೆ.
ಲೋಕದ ಡೊಂಕನ್ನು ತಿದ್ದುವ, ದುಡ್ಡು ಮಾಡುವ ದಂಧೆ ಒಂದು ಮಾಫಿಯವಾಗಿ ಬೆಳೆದು ನಿಂತಿದೆ. ವ್ಯಕ್ತಿತ್ವ ವಿಕಸನ ಶಿಬಿರಗಳನ್ನು ನಡೆಸಿ, ಇತರರಿಗೆ ಮಾರ್ಗದರ್ಶನ ಮಾಡುತ್ತಾ ಅವರ ವ್ಯಕ್ತಿತ್ವವನ್ನು ವಿಕಾಸಗೊಳಿಸುವುದಕ್ಕೆ ಪ್ರಯತ್ನಿಸುವ ಸ್ವಯಂ ಘೋಷಿತ ದೇವಮಾನವರು ಗಂಟೆಗಟ್ಟಲೆ ಭಾಷಣ ಬಿಗಿಯುವ ಭಾಷಣಾಸುರರು ಎಲ್ಲೆಡೆ ಕಂಡು ಬರುತ್ತಾರೆ. ಸಮಾಜಸೇವೆಯ ಹೆಸರಲ್ಲಿ ಪರೋಪಕಾರದ ದೊಡ್ಡಸ್ತಿಕೆ ಎನ್ನುವ ಡಂಬಾಚಾರದ ಭಾವನೆ ಇಂದು ಬಹುತೇಕರಲ್ಲಿ ರಕ್ತಕತವಾಗಿದೆ. ಈ ಭಾವನೆ ಯಾವುದೇ ಸಾಂಕ್ರಾಮಿಕ/ ಮಾರಣಾಂತಿಕ ರೋಗಕ್ಕಿಂತ ಕಡಿಮೆ ಇಲ್ಲ. ಈ ರೋಗ ಜನರನ್ನು ಹೇಗೆ ಕಬಂಧ ಬಾಹುಗಳಿಂದ ಬಿಗಿದು ನಾಶ ಮಾಡಬಹುದೋ ಹಾಗೆ ಪರರ ಡೊಂಕನ್ನು ಸದಾ ತಿದ್ದಲು ಹಂಬಲಿಸುವ ಕೆಲವು ಸಮಾಜ ಸುಧಾರಕರು, ಸಮಾಜವನ್ನೇ ತಿದ್ದ ಹೊರಟ ಭಂಡರು, ಸಮಾಜವನ್ನೇ ನಾಶ ಮಾಡುತ್ತಿದ್ದಾರೆ. ಮನುಷ್ಯ ತನ್ನನ್ನು ತಾನು ತಿದ್ದಿಕೊಳ್ಳದೇ,ಇತರರನ್ನು ತಿದ್ದುವ ಅರ್ಹತೆಯನ್ನು ಪಡೆಯುವುದಿಲ್ಲ. ಈ ಅರ್ಹತೆಯನ್ನು ಅಥವಾ ಅಧಿಕಾರವನ್ನು ಪಡೆದುಕೊಳ್ಳುವುದು ಅತ್ಯಂತ ಪ್ರಯಾಸದ ಕೆಲಸ. ಆದ್ದರಿಂದ ಬಸವಣ್ಣನವರ ಮಾತುಗಳನ್ನು ಪ್ರತಿಯೊಬ್ಬರೂ ಸದಾ ನೆನಪಿನಲ್ಲಿ ಇಟ್ಟುಕೊಂಡು ಅನುಸರಿಸುವುದು ಅತ್ಯಂತ ಅವಶ್ಯಕ. ಲೋಕದ ಡೊಂಕನ್ನು ತಿದ್ದದೇ ನಮ್ಮ ನಮ್ಮನ್ನು ತಿದ್ದಿಕಳ್ಳೋಣ.
"ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ
ಕೂಡಲಸಂಗಮದೇವ".
ವಚನದ ಕೊನೆಯ ಸಾಲುಗಳು ಅತ್ಯಂತ ಅರ್ಥ ಪೂರ್ಣವಾಗಿವೆ. ನೆರೆಯವರ ದುಃಖಕ್ಕೆ ಮರುಗುವುದಕ್ಕೂ, ನೆರೆಯವರ ದುಃಖಕ್ಕೆ ಅಳುವುದಕ್ಕೂ ಬೆಟ್ಟದಷ್ಟು ವ್ಯತ್ಯಾಸವಿದೆ. ಮರುಕದಲ್ಲೊಂದು ಕ್ರಿಯಾಶೀಲತೆಯಿದೆ. ಸಾಂತ್ವನವಿದೆ. ಆದರೆ ಅಳುವುದರಲ್ಲಿ ನಿಸ್ಸಹಾಯಕತೆ ಮಾತ್ರ ಇದೆ. ನೆರೆಯವರ ದುಃಖ ಕೆಲವರ ಡೊಂಕಿನಿಂದಾದದ್ದೂ ಆಗಿರಬಹುದು. ಹಾಗಾಗಿ ತಮ್ಮ ಡೊಂಕನ್ನು ತಿದ್ದಿಕೊಂಡರೆ ಸ್ವಸ್ಥ ಸಮಾಜ ನಿರ್ಮಾಣವಾಗುವುದರಲ್ಲಿ ಸಂದೇಹವಿಲ್ಲ.
-ಶೋಭಾ ಶಂಕರಾನಂದ