ಮೂಲ: ಒ. ಹೆನ್ರಿ
ಕನ್ನಡಕ್ಕೆ: ಜೆ.ವಿ.ಕಾರ್ಲೊ
‘ರೊಕ್ವಾಲ್’ ಬ್ರಾಯಂಡಿನ ಹೆಸರಿನಡಿಯಲ್ಲಿ ಸೋಪುಗಳನ್ನು ತಯಾರಿಸಿ ಮತ್ತು ಮಾರಾಟ ಮಾಡಿ ಮಿಲಿಯನ್ಗಟ್ಟಳೆ ಡಾಲರುಗಳನ್ನು ಸಂಪಾದಿಸಿದ್ದ ಹಿರಿಯ ತಲೆ ಅಂತೋಣಿ ರೊಕ್ವೆಲ್ ತನ್ನ ವಿಸ್ತಾರವಾದ ಫಿಫ್ತ್ ಅವೆನ್ಯೂ ಮನೆಯ ಕಿಟಕಿಯಬಳಿ ನಿಂತಿದ್ದ. ಅವನು ತನ್ನ ನೆರೆಯವನಾದ ಜಿ.ವ್ಯಾನ್ ಸಫೋಕ್ ಜೋನ್ಸ್ನನ್ನು ಗಮನಿಸುತ್ತಿದ್ದ. ಈ ನೆರೆಯವನು ಪ್ರತಿಷ್ಠಿತ ಹುಟ್ಟಾ ಶ್ರೀಮಂತ ನ್ಯೂಯೋರ್ಕ್ ಕುಟುಂಬವೊಂದರ ಹೆಮ್ಮೆಯ ಸದಸ್ಯನಾಗಿದ್ದ. ಅವನು ತನ್ನ ಮನೆಯಿಂದ ಹೊರಬಂದು ಬಾಡಿಗೆ ಬಂಡಿಯನ್ನೊಂದನ್ನು ಹತ್ತಿದ. ಅಭ್ಯಾಸಬಲದಿಂದೆಂಬಂತೆ ಒಮ್ಮೆ ಅಂತೋಣಿ ರೊಕ್ವೆಲ್ಲಾನ ಮನೆಯ ಕಡೆಗೆ ನೋಡಿದ. ಅವನ ಮುಖಭಾವ, ತಾನೊಬ್ಬ ಪ್ರತಿಷ್ಠಿತ ಮನುಷ್ಯ ಮತ್ತು ಈ ಸೋಪ್ ತಯಾರಕ ತನ್ನ ಮುಂದೆ ಜುಜುಬಿ ಎನ್ನುವಂತಿತ್ತು. “ಮುಂದಿನ ಬೇಸಿಗೆಯಲ್ಲಿ ನನ್ನ ಮನೆಗೆ ಕೆಂಪು, ಬಿಳಿ ಮತ್ತು ನೀಲಿ ಬಣ್ಣವನ್ನು ಹೊಡೆಸುತ್ತೇನೆ. ಇವನ ಪ್ರತಿಕ್ರಿಯೆ ಹೇಗಿರುತ್ತದೆ ನೋಡಬೇಕು!” ಅಂದುಕೊಂಡ ಸೋಪು ರಾಜ. ನಂತರ, “ಹೇಯ್, ಮೈಕ್?” ಎಂದು ಕೂಗಿ ಕರೆದ. ಅವನು ಆಳುಗಳನ್ನು ಗಂಟೆ ಬಾರಿಸಿ ಕರೆಯುತ್ತಿರಲಿಲ್ಲ, ಹೆಸರಿಡಿದೇ ಜೋರಾಗಿ ಕಿರಿಚುತ್ತಿದ್ದ. ಮೈಕ್ ಎಂಬ ಆಳು ಬರುತ್ತಲೇ ರೊಕ್ವಾಲ್ ಅವನಿಗೆ ಹೇಳಿದ, “ನನ್ನ ಮಗ ಹೊರಗೆ ಹೋಗುವ ಮುನ್ನ ನನ್ನನ್ನು ಕಾಣಲು ಹೇಳು.” ಎಂದ
ಮರಿ ರೊಕ್ವೆಲ್ಲ್ ಒಳಗೆ ಬರುತ್ತಲೇ ಹಿರಿಯ ರೊಕ್ವೆಲ್ಲ್ ತಾನು ಓದುತ್ತಿದ್ದ ಪತ್ರಿಕೆಯನ್ನು ಮಡಚಿ ಕೆಳಗಿಟ್ಟ.
“ರಿಚರ್ಡ್, ನೀನು ಬಳಸುತ್ತಿರುವ ಸೋಪಿಗೆ ಎಷ್ಟು ಕೊಡುತ್ತಿದ್ದೀಯ?”
ರಿಚರ್ಡ್ ಆರು ತಿಂಗಳ ಹಿಂದೆ ಕಾಲೇಜು ವ್ಯಾಸಂಗ ಮುಗಿಸಿ ಮನೆಯಲ್ಲೇ ಇದ್ದ. ಅವನಿಗೆ ಇನ್ನೂ ತಂದೆಯ ಬಗ್ಗೆ ಅರ್ಥವಾಗಿರಲಿಲ್ಲ. ಅವನ ಪಾಲಿಗೆ ತಂದೆ ಒಬ್ಬ ಅಚ್ಚರಿಯ ಮನುಷ್ಯನಾಗಿದ್ದ.
“ಹನ್ನೆರಡು ಸೋಪುಗಳಿಗೆ ಆರು ಡಾಲರುಗಳು ಕಣಪ್ಪ”
“ನೀನು ಉಡುವ ಬಟ್ಟೆಗಳಿಗೆ?”
“ಆಸುಪಾಸು ಅರವತ್ತು ಡಾಲರುಗಳು ಕಣಪ್ಪ.”
“ನೀನು ನಿಜವಾಗಲೂ ಒಬ್ಬ ಜೆಂಟಲ್ಮನ್ ಮಗಾ..” ಅಪ್ಪ ಹೇಳಿದ. “ಹನ್ನೆರಡು ಸೋಪುಗಳಿಗೆ ಇಪ್ಪತ್ತನಾಲ್ಕು ಡಾಲರುಗಳನ್ನು ತೆರುವ, ಉಡುವ ಬಟ್ಟೆಗೆ ನೂರು ಡಾಲರುಗಳನ್ನು ಕೊಡುವ ಹುಡುಗರ ಬಗ್ಗೆ ನಾನು ಕೇಳಿದ್ದೇನೆ. ಬೇರೆಲ್ಲಾ ಹುಡುಗರಷ್ಟೇ ನಿನ್ನ ಬಳಿಯೂ ಬಳಸಿ ಬಿಸಾಕುವಷ್ಟು ಡಾಲರುಗಳಿವೆ. ಆದರೂ ನೀನು ಮಾಡುತ್ತಿರುವ ವೆಚ್ಚ ನಿಜಕ್ಕೂ ಮೆಚ್ಚುವಂತದ್ದು. ಸ್ವತಃ ನಾನು ‘ರೊಕ್ವೆಲ್ಲ್’ ಸೋಪನ್ನು ಬಳಸುತ್ತೇನೆ, ಯಾಕೆಂದರೆ ಅದೊಂದು ಅತ್ಯುತ್ತಮ ಸೋಪು. ನೀನು ಒಂದು ಸೋಪಿಗೆ ಹತ್ತು ಸೆಂಟುಗಳನ್ನು ಅದರ ಮಧುರ ಕಂಪು ಮತ್ತು ಅದರ ಹೆಸರಿಗೆ ಖರ್ಚು ಮಾಡುತ್ತಿದ್ದೀಯ!
“ಒಂದು ಸೋಪಿನ ಬಿಲ್ಲೆಗೆ ನೀನು ಖರ್ಚು ಮಾಡುತ್ತಿರುವ ಐವತ್ತು ಸೆಂಟ್ಸ್ ಹಣ ಖಂಡಿತ ದುಬಾರಿಯಲ್ಲ ಬಿಡು. ಖಂಡಿತ ನೀನೊಬ್ಬ ಜೆಂಟಲ್ಮನ್. ತಂದೆ ಜೆಂಟಲ್ಮನ್ ಅಲ್ಲದಿದ್ದರೆ ಅವನ ಮಗನೂ ಕೂಡ ಒಬ್ಬ ಜೆಂಟಲ್ಮನ್ ಆಗಿರಲು ಸಾಧ್ಯವಿಲ್ಲವೆಂಬ ಮಾತಿದೆ. ಆದರೆ ಅದೊಂದು ದೊಡ್ಡ ಸುಳ್ಳು. ಆದರೆ ಹಣ ನಿನ್ನನ್ನು ಎಲ್ಲಕ್ಕಿನ್ನ ಬೇಗ ಜೆಂಟಲ್ಮನ್ನನ್ನಾಗಿ ಮಾಡುತ್ತದೆ. ದುಡ್ಡು ನಿನ್ನನ್ನು ಜೆಂಟಲ್ಮನ್ನನ್ನಾಗಿ ಮಾಡಿದೆ. ನನ್ನನ್ನೂ ಕೂಡ ಆದಷ್ಟು ಮಾಡಿದೆ. ಹಣ, ನನ್ನ ಅಕ್ಕ ಪಕ್ಕದ ಮನೆಯವರ ಥರವೇ ನನ್ನನ್ನೂ ಮಾಡಿದೆ. ನಾನೂ ಅವರಷ್ಟೇ ಕೆಟ್ಟವನಾಗಿದ್ದೇನೆ. ಆದರೆ, ತಮ್ಮ ಮಧ್ಯೆ ಒಬ್ಬ ಯಕಶ್ಚಿತ್ ಸೋಪು ತಯಾರಿಸುವವನು ನೆಲೆಸಿದ್ದಾನೆಂದು ನೆನೆದೇ ಅವರು ರಾತ್ರಿಯ ಹೊತ್ತು ಸರಿಯಾಗಿ ನಿದ್ರೆ ಮಾಡುತ್ತಿಲ್ಲ!”
“ಹಣವೊಂದರಿಂದಲೇ ಎಲ್ಲವನ್ನೂ ದಕ್ಕಿಸಲು ಸಾಧ್ಯವಿಲ್ಲ ಅಪ್ಪ.” ಮಗ ದುಃಖದಿಂದ ಹೇಳಿದ.
“ಮಗಾ, ಹಾಗೇ ಹೇಳಬೇಡ,” ಹಿರಿಯ ರೊಕ್ವೆಲ್ ಹೇಳಿದ. “ಹಣ ಎಲ್ಲಾ ಕಾಲದಲ್ಲೂ ಜಯಿಸುತ್ತದೆ. ಹಣದಿಂದ ಖರೀದಿಸಲು ಸಾಧ್ಯವಿಲ್ಲದ್ದು ಯಾವುದೂ ಇಲ್ಲ. ಅದು ಯಾವುದಿದೆ ಹೇಳು ನೋಡೋಣ? ಈ ಬಗ್ಗೆ ನಾನು ನಿನಗೆ ಮತ್ತಷ್ಟು ಹೇಳುವುದಿದೆ. ನಿನ್ನೊಳಗೆ ಏನೋ ಒಂದು ಕೊರಗು ಇದೆ. ನಾನು ಎರಡು ವಾರಗಳಿಂದ ಗಮನಿಸುತ್ತಿದ್ದೇನೆ. ನನಗೆ ಹೇಳು ಮಗಾ. ನಿನಗೆ ಸಹಾಯ ಮಾಡುತ್ತೇನೆ. ಇಪ್ಪತ್ತುನಾಲ್ಕು ಗಂಟೆಗಳೊಳಗೆ ನಿನ್ನೆದುರೇ ಹನ್ನೊಂದು ಮಿಲಿಯನ್ ಡಾಲರುಗಳನ್ನು ತರಬಲ್ಲೆ. ನಿನಗೇನಾಗಿದೆ? ಆರೋಗ್ಯ ಸರಿ ಇಲ್ಲವೇ?”
“ಕೆಲವರು ಅದನ್ನು ಅನಾರೋಗ್ಯವೆಂದು ಕರೆಯುತ್ತಾರೆ.”
“ಒಹ್, ಅವಳ ಹೆಸರೇನು ಮಗಾ?” ಅಂತೋಣಿ ಕೇಳಿದ. “ಅವಳನ್ನು ಮದುವೆಯಾಗಲು ಕೇಳು. ಅವಳು ಖಂಡಿತ ಖುಷಿಯಿಂದ ಒಪ್ಪಿಕೊಳ್ಳುತ್ತಾಳೆ. ನಿನ್ನ ಬಳಿ ಏನು ಕೊರತೆ ಇದೆ? ನಿನ್ನ ಬಳಿ ಹಣವಿದೆ, ನೀನು ಸ್ಪುರದ್ರೂಪಿ ಮತ್ತು ಅದರ ಮೇಲಿಂದ ಗುಣವಂತ. ನಿನ್ನ ಕೈಗಳು ಸ್ವಚ್ಛವಾಗಿವೆ..”
“ನನಗೆ ಇನ್ನೂ ಅವಳನ್ನು ಕೇಳುವ ಸಂದರ್ಭವೇ ಒದಗಿ ಬಂದಿಲ್ಲ.” ರಿಚರ್ಡ್ ರೊಕ್ವೆಲ್ ಹೇಳಿದ.
“ಅವಳನ್ನು ಜೊತೆಯಲ್ಲಿ ತಿರುಗಾಡಲು ಕರಿ. ಚರ್ಚಿಂದ ಮನೆಗೆ ಬರುವಾಗ ಅವಳ ಜೊತೆ ಹೆಜ್ಜೆ ಹಾಕು.”
“ಹುಟ್ಟಾ ಶ್ರೀಮಂತ ಮನೆಯ ಹೆಣ್ಣಿನ ಜೀವನದ ಬಗ್ಗೆ ನಿಮಗೆ ಗೊತ್ತಿಲ್ಲ ಅಪ್ಪ. ಅವಳ ಪ್ರತಿ ಗಂಟೆ, ನಿಮಿಷವೂ ಯೋಜನಾಬದ್ಧವಾಗಿರುತ್ತದೆ. ಅವಳು ನನಗೆ ಬೇಕೇ ಬೇಕು. ಇಲ್ಲದಿದ್ದರೆ ನನ್ನ ಬದುಕಿಗೆ ಯಾವುದೇ ಅರ್ಥವಿಲ್ಲ. ‘ನಾನು ನಿನ್ನನ್ನು ಪ್ರೀತಿಸುತ್ತೇನೆ.” ಎಂದು ಅವಳಿಗೆ ಪತ್ರ ಬರೆಯುವುದು ಕೂಡ ನನ್ನಿಂದ ಸಾಧ್ಯವಿಲ್ಲ.
“ನಾನು ಬಹಳ ಸಮಯದಿಂದ ಅವಳಿಗಾಗಿ ಕಾದಿದ್ದೇನೆ ಅಪ್ಪ. ಅವಳು ನಾಡಿದ್ದು ಯೂರೋಪಿಗೆ ಹೋಗುತ್ತಿದ್ದಾಳೆ. ಅವಳು ಅಲ್ಲಿ ಎರಡು ವರ್ಷ ಇರುತ್ತಾಳಂತೆ. ನಾಳೆ ಸಂಜೆ ಕೆಲವು ನಿಮಿಷಗಳ ಕಾಲ ಅವಳ ಭೇಟಿಗಾಗಿ ಅವಕಾಶ ಸಿಕ್ಕಿದೆ. ಅವಳು ರೈಲಿನಲ್ಲಿ ನಗರಕ್ಕೆ ಬರುತ್ತಿದ್ದಾಳೆ. ಅವಳನ್ನು ಭೇಟಿಯಾಗಲು ನಾನು ಗಾಡಿಯಲ್ಲಿ ಹೋಗುತ್ತಿದ್ದೇನೆ. ನಾವು ಅಲ್ಲಿಂದ ನೇರವಾಗಿ ಥಿಯೇಟರಿಗೆ ಹೋಗುತ್ತಿದ್ದೇವೆ. ಅವಳು ಅಲ್ಲಿ ತನ್ನ ತಾಯಿ ಮತ್ತು ಇತರ ಕೆಲವರನ್ನು ಭೇಟಿಯಾಗುತ್ತಾಳೆ. ಆ ಸಮಯದಲ್ಲಿ ಅವಳು ನನ್ನ ಮಾತನ್ನು ಕೇಳುತ್ತಾಳೆ ಅಂತ ನಿಮಗೆ ಅನಿಸುತ್ತಿದೆಯಾ ಅಪ್ಪ? ಖಂಡಿತ ಇಲ್ಲ. ಥಿಯೇಟರಿನಿಂದ ಹೊರಟ ಬಳಿಕ? ಇಲ್ಲ, ಅಪ್ಪ ಇಲ್ಲ! ಜೊತೆಯಲ್ಲಿ ಅವಳ ತಾಯಿ ಇರುತ್ತಾರೆ. ಇಲ್ಲಿ ನಿನ್ನ ದುಡ್ಡು ನನ್ನ ಯಾವ ಸಹಾಯಕ್ಕೂ ಬರುವುದಿಲ್ಲ. ನನಗೆ ಅವಳ ಜೊತೆ ಮಾತನಾಡಲು ಕಾಲವಕಾಶ ಬೇಕು. ಹಣ ಬಲದಿಂದ ನಾವು ಒಂದು ನಿಮಿಷವನ್ನೂ ಕೊಳ್ಳಲಾಗುವುದಿಲ್ಲ. ಹಾಗಿದ್ದಿದ್ದರೆ ಶ್ರೀಮಂತರೆಲ್ಲಾ ಮತ್ತಷ್ಟು ವರ್ಷ ಜೀವಿಸುತ್ತಿದ್ದರು! ಮಿಸ್ಸ್ ಲ್ಯಾಂಟ್ರಿಯೊಡನೆ ಅವಳು ಹಡಗು ಹತ್ತುವ ಮುನ್ನ ಮಾತನಾಡಲು ಸಾಧ್ಯವೇ ಇಲ್ಲ.”
“ನೀನು ಆರೋಗ್ಯವಾಗಿರುವೆ ಎಂದು ಖುಷಿ ಪಡುತ್ತಿದ್ದೇನೆ ಮಗ ರಿಚರ್ಡ್” ಅಂತೋಣಿ ರೊಕ್ವೆಲ್ ಹೇಳಿದ. “ನೀನು ಏನಂದೆ? ಹಣಬಲದಿಂದ ಸಮಯ ಖರೀದಿಸಲು ಸಾಧ್ಯವಿಲ್ಲ? ಪೂರ್ತಿ ಅಲ್ಲದಿದ್ದರೂ ಅಷ್ಟಿಷ್ಟನ್ನು ದುಡ್ಡಿದ್ದವರು ಕೊಂಡಿದ್ದನ್ನು ನಾನು ನೋಡಿದ್ದೇನೆ.”
ಆ ದಿನ ಸಂಜೆ ಮನೆಗೆ ಅಂತೋಣಿ ರೊಕ್ವೆಲ್ನ ಸಹೋದರಿ ಎಲೆನ್ ಬಂದಿದ್ದಳು. ಅವಳು ಯುವ ಪ್ರೇಮಿಗಳು ಎದುರಿಸುವ ಸವಾಲುಗಳ ಬಗ್ಗೆ ಮಾತನಾಡಿದಳು.
“ಅದೆಲ್ಲವನ್ನೂ ಅವನು ನನಗೆ ಹೇಳಿದ,” ಅಂತೋಣಿ ರೊಕ್ವೆಲ್ ಸಹೋದರಿಗೆ ಹೇಳಿದ. “ನಿನಗೆ ಎಷ್ಟು ಹಣ ಬೇಕು ಅಷ್ಟನ್ನು ತೆಗೆದುಕೋ ಎಂದು ಹೇಳಿದ್ದೆ. ಹಣದಿಂದ ತನಗೆ ಏನೂ ಪ್ರಯೋಜನವಿಲ್ಲವೆಂದು ಅವನು ಹೇಳುತ್ತಿದ್ದಾನೆ.”
“ಅಯ್ಯೋ ಅಂತೊಣಿ! ಜೀವನದಲ್ಲಿ ಹಣವೊಂದೇ ಸರ್ವಸ್ವವಲ್ಲವೆಂದು ನಿನ್ನ ತಲೆಗೆ ಯಾವಾಗ ಅರ್ಥವಾಗುತ್ತದೆ?” ಎಲೆನ್ ಕೇಳಿದಳು, “ಪ್ರೇಮದ ವಿಚಾರದಲ್ಲಿ ಹಣವೊಂದರಿಂದಲೇ ಏನೂ ಪ್ರಯೋಜನವಿಲ್ಲ. ಪ್ರೇಮಕ್ಕೆ ಪ್ರೇಮವೇ ಸರ್ವಸ್ವ. ರಿಚರ್ಡ್ ಈ ಮೊದಲೇ ಅವಳೊಡನೆ ಮಾತನಾಡಬೇಕಿತ್ತು! ಅವಳು ಖಂಡಿತ ನಮ್ಮ ರಿಚರ್ಡ್ನನ್ನು ಒಪ್ಪದಿರುತ್ತಿರಲಿಲ್ಲ. ಈಗ ತುಂಬಾ ತಡವಾಗಿದೆ ಎಂದು ನನ್ನ ಭಾವನೆ. ನಿನ್ನೆಲ್ಲಾ ಬಂಗಾರ ನಮ್ಮ ರಿಚರ್ಡ್ನಿಗೆ ಸಂತೋಷ ತರಿಸಲು ನೆರವಾಗದು ಅಂತೋನಿ.”
ಮಾರನೆಯ ದಿನ ಸಂಜೆ ಎಂಟಕ್ಕೆ ಎಲೆನ್ ಒಂದು ಹಳೆಯ ಉಂಗುರವನ್ನು ತೆಗೆದುಕೊಂಡು ಹೋಗಿ ರಿಚರ್ಡನಿಗೆ ಕೊಟ್ಟಳು.
“ಇದನ್ನು ಇಂದು ಹಾಕಿಕೊ ರಿಚರ್ಡ್, ಇದನ್ನು ನಿನ್ನ ತಾಯಿ ನನಗೆ ಕೊಟ್ಟಿದ್ದಳು. ಇದರಿಂದ ನಿನ್ನ ಅದೃಷ್ಟ ಖುಲಾಯಿಸಿದರೂ ಖುಲಾಯಿಸಬಹುದು. ನೀನು ಪ್ರೀತಿಸುವ ಹುಡುಗಿ ನಿನಗೆ ಸಿಕ್ಕಾಗ ನಿನಗೆ ಇದನ್ನು ಕೊಡು ಎಂದು ನಿನ್ನ ಅಮ್ಮ ಅಂದಿದ್ದಳು.”
ರಿಚರ್ಡ್ ರೊಕ್ವೆಲ್ ಉಂಗುರವನ್ನು ತನ್ನ ಕಿರು ಬೆರಳಿಗೆ ತೊಡಲು ಪ್ರಯತ್ನಿಸಿದ. ಆದರೆ ಅದು ತುಂಬಾ ಸಣ್ಣದಾಗಿತ್ತು. ಆದ್ದರಿಂದ ಅವನು ಅದನ್ನು ತನ್ನ ಕೋಟಿನ ಜೇಬಿನಲ್ಲಿ ಹಾಕಿದ. ಅದು ಅಲ್ಲಿ ಸುರಕ್ಷಿತವಾಗಿರುತ್ತದೆ ಎಂದು ಅವನು ಭಾವಿಸಿದ. ನಂತರ ಅವನು ಗಾಡಿಯನ್ನು ಕರೆದ.
ರೈಲು ನಿಲ್ದಾಣದಲ್ಲಿ ಅವನು ಮಿಸ್ಸ್ ಲ್ಯಾಂಟ್ರಿಯನ್ನು ಭೆಟ್ಟಿಯಾದ.
“ನಾವು ನನ್ನ ತಾಯಿ ಮತ್ತು ಇತರರನ್ನು ಹೆಚ್ಚು ಹೊತ್ತು ಕಾಯಿಸಬಾರದು.” ಅವಳು ರಿಚರ್ಡನಿಗೆ ಹೇಳಿದಳು.
“ವಾಲಾಕ್ ಥಿಯೇಟರಿಗೆ ನಮ್ಮನ್ನು ಆದಷ್ಟು ಬೇಗ ತಲುಪಿಸಪ್ಪ.” ರಿಚರ್ಡ್ ಗಾಡಿಯವನಿಗೆ ಹೇಳಿದ.
ಅವರು ೪೨ನೇ ಸ್ವೀಟ್ನಿಂದ ಬ್ರಾಡ್ವೇ ಮತ್ತು ಅಲ್ಲಿಂದ ೩೪ ನೇ ಸ್ವೀಟ್ ಕಡೆಗೆ ಹೊರಟರು.
ರಿಚರ್ಡ್ ರೊಕ್ವೆಲ್ ಒಮ್ಮೆಲೇ ಗಾಡಿಯನ್ನು ನಿಲ್ಲಿಸಲು ಹೇಳಿದ. “ನನ್ನ ಉಂಗುರ ಕೆಳಗೆ ಬಿತ್ತು.” ಅವನು ಗಾಡಿಯಿಂದ ಕೆಳಗಿಳಿಯುತ್ತಾ ಹೇಳಿದ. “ಅದು ನನ್ನ ತಾಯಿ ಕೊಟ್ಟಿದ್ದ ಉಂಗುರ. ಯಾವುದೇ ಕಾರಣಕ್ಕೂ ನಾನದನ್ನು ಕಳೆದುಕೊಳ್ಳಲು ತಯಾರಿಲ್ಲ. ಒಂದೇ ಒಂದು ನಿಮಿಷ. ಅದು ಎಲ್ಲಿ ಬಿದ್ದಿತೆಂದು ನನಗೆ ಗೊತ್ತು.”
ಅವನು ನಿಮಿಷದೊಳಗೆ ಉಂಗುರವನ್ನು ಹೆಕ್ಕಿ ಮತ್ತೆ ಗಾಡಿಯನ್ನು ಹತ್ತಿದ.
ಅವರ ಗಾಡಿ ನಿಂತಿದ್ದ ಒಂದು ನಿಮಿಷದ ಅವಧಿಯೊಳಗೆ ಮತ್ತೊಂದು ದೊಡ್ಡ ಗಾಡಿ ಅವರ ಮುಂದೆ ಬಂದು ನಿಂತಿತ್ತು. ಇವರ ಗಾಡಿ ಎಡಕ್ಕೆ ಹೊರಳಿ ಮುಂದಕ್ಕೆ ಹೋಗಲು ತಯಾರಾಗುತ್ತಿರುವಾಗಲೇ ಎಡಕ್ಕೆ ಮತ್ತೊಂದು ಗಾಡಿ ಅಡ್ಡ ಬಂದಿತು. ಬಲಕ್ಕೂ ಅದೇ ತರ. ಅವರಿಗೆ ಯಾವ ಕಡೆಗೂ ಹೋಗಲಿಕ್ಕಾಗದೆ ಅಲ್ಲೇ ಸಿಕ್ಕಿಕೊಳ್ಳುವಂತಾಯಿತು.
ನಗರಗಳಲ್ಲಿ ಈ ತೆರನಾದ ಗೊಂದಲಗಳು ಸರ್ವೆಸಾಮಾನ್ಯವಾಗಿದ್ದವು
“ನಮಗೆ ತಡವಾಗುತ್ತಿದೆ ರಿಚರ್ಡ್,” ಮಿಸ್ಸ್ ಲ್ಯಾಂಟ್ರಿ ಗಾಬರಿಗೊಂಡು ಹೇಳಿದಳು.
ರಿಚರ್ಡ್ ರೊಕ್ವೆಲ್ ಗಾಡಿಯ ಮೇಲೆ ಎದ್ದು ನಿಂತು ಸುತ್ತಲೂ ನೋಡಿದ. ಅವನಿಗೆ ರಸ್ತೆಯಲ್ಲಿ ಗಾಡಿಗಳ ಸಾಗರವೇ ನೆರೆದಂತೆ ಕಂಡಿತು. ಗಾಡಿ ಚಲಾಯಿಸುವವರು ಒಬ್ಬರನ್ನೊಬ್ಬರು ಬೈದಾಡತೊಡಗಿದರು. ನ್ಯೂಯಾರ್ಕಿನ ಗಾಡಿಗಳೆಲ್ಲಾ ಈ ಜಾಗದಲ್ಲಿ ಒಮ್ಮೆಲೇ ತುಂಬಿರುವಂತೆ ಕಾಣಿಸುತ್ತಿತ್ತು.
ರಿಚರ್ಡ್ ರೊಕ್ವೆಲ್ ಅಸಹಾಯಕತೆಯಿಂದ ತಲೆಚಚ್ಚಿಕೊಂಡು ಸುಮ್ಮನೆ ಕುಳಿತುಕೊಂಡ. “ಇದು ಸರಿಯಾಗಲಿಕ್ಕೆ ಒಂದು ತಾಸಾದರೂ ಬೇಕು!” ಅವನು ಹೇಳಿದ.
“ಎಲ್ಲಿ, ಆ ನಿನ್ನ ಉಂಗುರ ತೋರಿಸು?” ಮಿಸ್ಸ್ ಲ್ಯಾಂಟ್ರಿ ಕುತೂಹಲದಿಂದ ಕೇಳಿದಳು. “ಇಲ್ಲಿಂದ ಒಂದು ಚೂರೂ ಕದಲಲಾಗುತ್ತಿಲ್ಲವೆಂದ ಮೇಲೆ ಅವಸರಿಸಿ ಏನು ಪ್ರಯೋಜನ? ನನಗೆ ಥಿಯೇಟರಿಗೆ ಹೋಗಲು ಮೊದಲೇ ಮನಸ್ಸಿರಲಿಲ್ಲ. ನನಗೆ ಥಿಯೇಟರ್ ಇಷ್ಟವಾಗುವುದಿಲ್ಲ.”
*
ಅಂದು ರಾತ್ರಿ ಹನ್ನೊಂದು ಗಂಟೆಗೆ ಅಂತೋಣಿ ರೊಕ್ವೆಲ್ನ ಕೋಣೆಯ ಬಳಿ ಯಾರೋ ಸುಳಿದಂತಾಯಿತು.
ಅವನು ಯಾವುದೋ ಪುಸ್ತಕ ಓದುತ್ತಿದ್ದವನು, “ಕಮ್ ಇನ್.” ಎಂದು ಆಹ್ವಾನಿಸಿದ.
ಅದು ಅವನ ಸಹೋದರಿ ಎಲೆನ್ ಆಗಿದ್ದಳು.
“ಅವರು ಮದುವೆಯಾಗುತ್ತಾರೆ ಆಂಟನಿ,” ಆಕೆ ಹೇಳಿದಳು. “ನಮ್ಮ ರಿಚರ್ಡ್ನನ್ನು ಅವಳು ಮದುವೆಯಾಗುತ್ತೇನೆಂದು ಒಪ್ಪಿಕೊಂಡಿದ್ದಾಳಂತೆ. ಥಿಯೇಟರಿಗೆ ಹೋಗುವ ದಾರಿಯಲ್ಲಿ ಅವರ ಗಾಡಿ ರಸ್ತೆಯಲ್ಲಿ ಟ್ರಾಫಿಕ್ ಮಧ್ಯೆ ಸಿಲುಕಿಕೊಂಡಿದ್ದು ಅದು ಕದಲಲು ಎರಡು ಗಂಟೆಯೇ ಹಿಡಿಯಿತಂತೆ!
“ಮತ್ತೊಂದು ವಿಚಾರ ನೆನಪಿಟ್ಟುಕೋ ಸಹೋದರ ಆಂಟನಿ. ದುಡ್ಡಿನ ಶಕ್ತಿಯ ಕುರಿತು ಮತ್ತೆಂದೂ ಬಡಾಯಿ ಕೊಚ್ಚಲು ಹೋಗಬೇಡ. ಇದೆಲ್ಲಾ ಆದದ್ದು ಆ ಪುಟ್ಟ ಉಂಗುರದಿಂದ. ಆ ನೈಜ ಪ್ರೇಮದ ಉಂಗುರದಿಂದ ನಮ್ಮ ರಿಚರ್ಡನ ಬಾಳು ಬೆಳಗಿತೆನ್ನಬಹುದು. ಉಂಗುರ ಗಾಡಿಯಿಂದ ಕೆಳಗೆ ಬಿದ್ದಿತೆಂದು ಅವನು ಗಾಡಿ ನಿಲ್ಲಿಸಿ ಅದನ್ನು ಹುಡುಕಿ ತರಲು ಕೆಳಗೆ ಇಳಿದಿದ್ದನಂತೆ. ಅವರ ಗಾಡಿ ಮುಂದುವರೆಯುವ ಮುನ್ನ ಟ್ರಾಫಿಕಿನಿಂದ ರಸ್ತೆ ತುಂಬಿ ಹೋಯಿತು. ರಿಚರ್ಡನಿಗೆ ತನ್ನ ಪ್ರೇಮವನ್ನು ನಿವೇದಿಸಿಕೊಳ್ಳಲು ಸಾಕಷ್ಟು ಸಮಯ ಸಿಕ್ಕಿತು. ದುಡ್ಡೇ ಸರ್ವಸ್ವವಲ್ಲ ಆಂಟನಿ. ನಿಜವಾದ ಪ್ರೇಮವೇ ದೊಡ್ಡದು.” ಎನ್ನುತ್ತಾ ಎಲೆನ್ ರಿಚರ್ಡನ ತಾಯಿ ಕೊಟ್ಟಿದ್ದ ಉಂಗುರದ ಬಗ್ಗೆ ಹೇಳಿದಳು.
“ನಮ್ಮ ಹುಡುಗ ಆಶಿಸಿದ್ದ ಹುಡುಗಿ ಕೊನೆಗೂ ಅವನಿಗೆ ಸಿಕ್ಕಿದಳಲ್ಲಾ, ಅದೇ ನನಗೆ ಸಂತೋಷ. ಎಷ್ಟು ಹಣ ಖರ್ಚಾದರೂ ಪರವಾ ಇಲ್ಲ…”
“ಸಹೋದರ ಆಂಟನಿ, ಮತ್ತೆ ಹಣದ ಮಾತು! ನಿನ್ನ ಹಣ ಏನು ಮಾಡಿತು?”
“ಸಹೋದರಿ ಎಲೆನ್, ನಾನೊಂದು ಒಳ್ಳೆಯ ಕತೆ ಪುಸ್ತಕ ಓದುತ್ತಿದ್ದೇನೆ. ಅದೊಂದು ಸಾಹಸ ಕತೆ. ತುಂಬಾ ಕುತೂಹಲಕಾರಿಯಾಗಿದೆ. ಮುಂದೇನಾಯಿತು ಎಂದು ತಿಳಿಯಲು ಕಾತರಿಸುತ್ತಿದ್ದೇನೆ. ನೀನು ನನಗೆ ಅವಕಾಶ ಮಾಡಿಕೊಡುತ್ತೀಯ ಎಂದು ಭಾವಿಸುತ್ತೇನೆ.”
ಈ ಕತೆ ಇಲ್ಲಿಗೇ ಮುಗಿಯಬೇಕಿತ್ತು. ಹಾಗಂತ ನಾನು ಅಂದ್ಕೊಂಡಿದ್ದೆ. ನೀವು ಕೂಡ ಅಂದ್ಕೊಡಿರಬಹುದು. ಆದರೆ ಸತ್ಯ ಏನೆಂದು ತಿಳಿಯಲು ಇದು ಕೊಂಚ ಮುಂದುವರಿಯಲೇ ಬೇಕು.
*
ಮಾರನೆಯ ದಿನ ಭೂಗತ ರೌಡಿಯಂತೆ ಕಾಣಿಸುತ್ತಿದ್ದ, ನೀಲಿ ಟೈ ಧರಿಸಿದ್ದ ಕೆಲ್ಲಿ ಎಂಬ ಹೆಸರಿನ ವ್ಯಕ್ತಿಯೊಬ್ಬ ಅಂತೊಣಿ ರೊಕ್ವೆಲ್ನನ್ನು ಭೇಟಿಯಾಗಲು ಅವನ ಮನೆಗೆ ಬರುತ್ತಾನೆ.
“ನಿನ್ನೆ ನಾವು ತಯಾರಿಸಿದ್ದ ಸೋಪು ಉತ್ಕೃಷ್ಟವಾಗಿತ್ತು,” ಅಂತೋಣಿ ರೊಕ್ವೆಲ್ ಹೇಳಿದ. “ನಿನ್ನೆ ನಾನು ನಿನಗೆ ಐದು ಸಾವಿರ ಡಾಲರುಗಳನ್ನು ಕೊಟ್ಟಿದ್ದೆ, ಸರಿ ತಾನೆ?”
“ನಾನು ನೀವು ಕೊಟ್ಟಿದ್ದಕ್ಕಿಂತ ಮುನ್ನೂರು ಡಾಲರುಗಳನ್ನು ಹೆಚ್ಚುವರಿಯಾಗಿ ನನ್ನ ಜೇಬಿನಿಂದಲೇ ಖರ್ಚು ಮಾಡಿದೆ.” ಕೆಲ್ಲಿ ಹೇಳಿದ. “ನಾನು ಯೋಚಿಸಿದ್ದಕ್ಕಿಂತ ಕೊಂಚ ಜಾಸ್ತಿಯೇ ಖರ್ಚಾಯಿತು. ಒಂದೊಂದು ಗಾಡಿಗೆ ಐದು ಡಾಲರುಗಳೆಂದು ನಾನೆಣಿಸಿದ್ದೆ. ಆದರೆ ಎರಡು ಕುದುರೆಗಳ ಗಾಡಿಗೆ ಹತ್ತು ಡಾಲರುಗಳನ್ನು ಕೊಡಬೇಕಾಯಿತು.. ಇಬ್ಬರು ಪೋಲಿಸರಿಗೆ ಐವತ್ತರಂತೆ ಕೊಟ್ಟೆ. ಮತ್ತೆಲ್ಲರಿಗೂ ಇಪ್ಪತ್ತರಿಂದ ಇಪ್ಪತ್ತೆöÊದು. ಏನೇ ಹೇಳಿ ರೊಕ್ವೆಲ್ ಸಾಹೆಬ್ರೆ., ನನ್ನ ಯೋಜನೆ ಫಲಕಾರಿ ಆಯ್ತು ತಾನೆ? ಎಲ್ಲರೂ ಯೋಜನಾಬದ್ಧವಾಗಿ ಸಹಕರಿಸಿದರು. ನಿಮ್ಮ ಮಗನಿಗೆ ಎರಡು ಗಂಟೆಯ ಕಾಲವಕಾಶ ಸಿಕ್ಕಿತು ತಾನೇ?” ಕೆಲ್ಲಿ ಹೇಳಿದ.
“ಇಲ್ಲಿ ಸಾವಿರದ ಮುನ್ನೂರು ಡಾಲರುಗಳಿವೆೆ ಕೆಲ್ಲಿ. ಮುನ್ನೂರು ಡಾಲರುಗಳನು ನೀನು ಅತಿರಿಕ್ತವಾಗಿ ಖರ್ಚು ಮಾಡಿದ ಬಾಬತ್ತು ಮತ್ತು ಸಾವಿರ ಡಾಲರುಗಳು ನಿನ್ನ ಶ್ರಮಕ್ಕೆ. ನಿನಗೆ ದುಡ್ಡಿನ ಬಗ್ಗೆ ಮೋಹವಿದೆ ತಾನೆ?”
“ಖಂಡಿತವಾಗಿಯೂ ರೊಕ್ವೆಲ್ ಸಾಹೇಬ್ರೆ!” ಕೆಲ್ಲಿ ಹೇಳಿದ, ಬಾಗಿಲ ಕಡೆಗೆ ಹೆಜ್ಜೆ ಹಾಕುತ್ತಾ. ಅವನನ್ನು ನಿಲ್ಲಿಸಿದ ಅಂತೋಣಿ ರೊಕ್ವೆಲ್ ಕೇಳಿದ:
“ನೀನು ಆಕಸ್ಮತ್ತಾಗಿ, ಮೈಮೇಲೆ ಕಿಂಚಿತ್ತೂ ಬಟ್ಟೆ ಇಲ್ಲದೆ, ಬೊಗಸೆ ತುಂಬಾ ಬಾಣಗಳನ್ನು ಹೊತ್ತು ಕೊಂಡಿದ್ದ ಮುದ್ದಾದ ಗುಂಡು ಗುಂಡಾ ಮುದ್ದು ಹುಡುಗನನ್ನು ನಿನ್ನೆ ಥಿಯೇಟರ್ ರಸ್ತೆಯಲ್ಲಿ ಕಂಡೆಯಾ ಕೆಲ್ಲಿ?” ಅಂತೋಣ ರೊಕ್ವೆಲ್ ಕೇಳಿದ.
ಕೆಲ್ಲಿ ಅಚ್ಚರಿಗೊಂಡ. “ಇಲ್ಲವಲ್ಲ ರೊಕ್ವೆಲ್ ಸಾಹೇಬರೆ! ಒಂದು ವೇಳೆ ನೀವು ಹೇಳಿದಂತ ಹುಡುಗ ನಿನ್ನೆ ರಸ್ತೆಯಲ್ಲಿದ್ದಿದ್ದರೆ ಖಂಡಿತವಾಗಿಯೂ ಅವನನ್ನು ಪೋಲಿಸರು ಹಿಡಿದಿರುತ್ತಾರೆ.”
“ಬಹುಶಃ ಮನ್ಮಥ ಅಲ್ಲಿದ್ದಿರಲಾರ..” ಅಂತೋಣ ರೊಕ್ವೆಲ್ ಹೇಳುತ್ತಾ ನಗಲಾರಂಭಿಸಿದ. “ಇರಲಿ. ಗುಡ್ಬೈ ಕೆಲ್ಲಿ.”
*
-ಜೆ.ವಿ.ಕಾರ್ಲೊ

ಹಣ ಎಲ್ಲವನ್ನೂ ಸಾಧ್ಯವಾಗಿಸುತ್ತೆ.