ಕರಿಸಿದ್ಧ: ತಿರುಪತಿ ಭಂಗಿ

“ಹಣಿಮ್ಯಾಲ ಹಚ್ಚಿರಿ ಭಂಡಾರ
ಅಕೈತಿ ನಿಮ್ಮ ಜೀವನ ಸಿಂಗಾರ
ಗುಡಿಮುಂದ ಕೂಡಿದ ಜನಸಾಗರ
ನೋಡಿ ಬರಗಾಗ್ಯಾನ ನಮ್ಮ ದೇವರ”

ಗುಡಿಮ್ಯಾಲಿನ ಮೈಕ್ ಕೊಣ್ಣೂರ ಅಜ್ಜನ ಲೀಲಾ ಹೊಗಳಿ ಹೊಗಳಿ ಹಾಡಾಕತ್ತಿತ್ತು. ಭಂಡಾರದೊಡೆಯನ ಜಾತ್ರೆಗೆ ಟ್ರ್ಯಾಕ್ಟರ್, ಬೈಕ್, ಕಾರ್, ಬಸ್ಸು ಹತ್ತಿ, ಎತ್ತಿನ ಬಂಡಿ ಹೂಡಿಕೊಂಡು, ನಾಡಿನ ಜನರೆಲ್ಲರೂ ಬಾನ, ನೈವದ್ಯ, ಮಾಡಿಕೊಂಡು, ಕಾಯಿಕರ್ಪೂರ ತಗೆದುಕೊಂಡು, ಅಜ್ಜನ ದರುಶನಕ್ಕೆ ಸಜ್ಜಾಗಿ ಬಂದಿದ್ದರು.

ಅಜ್ಜನ ಗುಡಿ ಮುಂದೆಲ್ಲಾ ಜನಜಾತ್ರಿಯೇ ಸೇರಿ ಗಿಜಿಗಿಜಿ ಗಿಜಗೂಡುತಿತ್ತು. ಗುಡಿಯ ಮುಂಬಾಗದಲ್ಲಿ ತೆಂಗನಿ ಕಾಯಿ ಮಾರುವವರು, ಕುಂಕುಮ ಭಂಡಾರ ಮಾರುವವರು, ಬೆಂಡು ಬೆತ್ತಸ್ಸಿನ ಅಂಗಡಿ, ಬಳೆ ಅಂಗಡಿ, ತರಾವರಿ ವ್ಯಾಪರದ ಅಂಗಡಿ ಮುಗ್ಗಟ್ಟುಗಳಲ್ಲಿ ಭಕ್ತರು ಸೇರಿಕೊಂಡು ತಮಗೆ ಬೇಕಾದ ವಸ್ತುವನ್ನು ಖರೀದಿಸಲು ಬ್ಯೂಸಿಯಾಗಿದ್ದರು.

ಮೊತ್ತೊಂದು ಕಡೆ ಡೊಳ್ಳಿನ ಮ್ಯಾಳಿನವರು “ಜಿದ್ದಂಗ್ ಪಟ್ಟಂಗ್ ಜಿಂತಳ್ …… ಜಿದ್ದಂಗ್ ಪಟ್ಟಂಗ್ ಜಿಂತಳ್” ಅಂತ ಡೊಳ್ಳು ಬಾರಿಸುತ್ತ ಬಂದ ಭಕ್ತರನ್ನು ತಮ್ಮ ಕಡೆ ಗಮನ ಸೆಳೆದುಕೊಂಡು ಡೊಳ್ಳು ಬಾರಿಸುವ ಗತ್ತನ್ನು ತೋರಿಸುತ್ತಿದ್ದರು. ಕೆಲವು ಭಕ್ತರು ಕೆ,ಜಿ ಗಟ್ಟಲೆ ಭಂಡಾರ ಕೈಯಲ್ಲಿ ಹಿಡಿದುಕೊಂಡು ಭಂಡಾರದೊಡೆಯನ ಪಾಲಿಕಿ ಪಲ್ಲಕ್ಕಿಗೆ ಹಾರಿಸಿ ಕೈಮುಗಿದು ತಮ್ಮ ಮನದ ಬೇಕು ಬೇಡಿಕೆಗಳನ್ನು ಮನದಲ್ಲಿಯೇ ಕೇಳಿಕೊಳ್ಳುತ್ತಿದ್ದರು. ಭಂಡಾರದ ಹುಡಿ ಮುಗಿಲ ತುಂಬೆಲ್ಲ ಏರಿ ಚಿತ್ತಾರ ಬರೆದಂತೆ ಕಾಣುತ್ತಿತ್ತು.

ಬಾಗಲಕೋಟ ಜಿಲ್ಲೆಯಲ್ಲಿ ಕೊಣ್ಣೂರ “ಕರಿಸಿದ್ಧ”ನ ಹೆಸರು ದೊಡ್ಡದು. ನಾಡ ತುಂಬೆಲ್ಲ ಪಾಲಕಿ ಹೊತ್ತುಕೊಂಡು ಭಕ್ತರ ಮನಿಮನಿಗೆಲ್ಲ ಹೋಗಿ ಭಿಕ್ಷಾಟನೆ ಮಾಡಿಬಂದು, ಭಕ್ತರು ಕೊಟ್ಟ ಕಾಳು ಕಡಿ, ಧನ ಕನಕದಲ್ಲಿಯೇ ಪ್ರತಿ ವರ್ಷ ಜಾತ್ರೆ ಮಾಡುವುದೊಂದು ಆ ಊರ ದೈವದವರ ಸಂಪ್ರದಾಯ. ಹಾಲುಮತದವರೇ ಆ ದೇವರ ಪೂಜೆ ಪುನಸ್ಕಾರ ಮಾಡುವ ವಾಡಿಕೆ ಮೊದಲಿನಿಂದಲೂ ಜಾರಿಯಲ್ಲಿದೆ. ಅರ್ಧಕ್ಕರ್ಧ ಊರಲ್ಲಿ ಪೂಜಾರಿಗಳ ಕುಟುಂಬಳೇ ಇವೆ. ಅದರಲ್ಲಿ ಅಜ್ಜಪ್ಪನ ಅಜ್ಜಿಯಾದ ಗಂಗವ್ವನ ಕುಟುಂಬವೂ ಒಂದು.

ಗಂಗವ್ವನ ಗಂಡ ಹೊನ್ನಪ್ಪನಿಗೆ ವರ್ಷದಲ್ಲಿ ಮೂರುತಿಂಗಳು ದೇವರ ಜಾಕ್ರಿ ಮಾಡುವ ಸೌಭಾಗ್ಯ ಬರುತ್ತಿತ್ತು. ಅವರಿಗೆ ಪೂಜಾರಿಕೆ ಬಂದಾಗ ಹಗಲೂ ರಾತ್ರಿ ಗಂಡ ಹೆಂಡತಿಗೆ ಕಣ್ಣಿಗೆ ನಿದ್ದಿಯೇ ಪಾವನವಾಗುತ್ತಿತ್ತು. ಹೊನ್ನಪ್ಪ ಮೂರು ತಿಂಗಳಲ್ಲಿ ಅಪರೂಪಕ್ಕೆ ಒಮ್ಮೊಮ್ಮೆ ಮನೆಗೆ ಬರುತ್ತಿದ್ದ. ದೇವರ ಪೂಜೆ ಪುನಸ್ಕಾರದಲ್ಲಿ, ದೂರದೂರಿಂದ ಬಂದ ಭಕ್ತರನ್ನು ಸಂಬಾಳಿಸುವುದರಲ್ಲಿ ಮೂರು ತಿಂಗಳು ಹೆಂಗೆ ಕಳಿಯುತ್ತಿತ್ತೋ ಅನ್ನುವುದು ಅವನಿಗೆ ಗೊತ್ತಾಗುತ್ತಿರಲಿಲ್ಲ.
ಹೊನ್ನಪ್ಪ ತುಂಬಾ ಕಟ್ಟು ನಿಟ್ಟಿನ ಆಸಾಮಿ ಆಗಿದ್ದ. ದೇವರ ಪಾಲಿಗೆ ಭಕ್ತರು ಪ್ರೀತಿಯಿಂದ ಕೊಟ್ಟದ್ದು ದೇವರಿಗೆ, ದೇವಸ್ಥಾನಕ್ಕೇ ಮುಟ್ಟುವಂತೆ ಹಣಗಲ ಹಾಕುತ್ತಿದ್ದ. ಅವನ ಎಡಬಲಕ್ಕಿದ್ದವರು ದೇವರಿಗಿಂತ ಮೊದಲು ತಮ್ಮ ಹೊಟ್ಟೆ, ತಮ್ಮ ಮನೆ ತುಂಬಿಸಲು ಹೆನಗಾಡುತ್ತಿದ್ದರು. ಹೊನ್ನಪ್ಪನ ಕಂಡರೆ ಉಳಿದವರಿಗೆ ಒಂದಿಷ್ಟು ಮನದಲ್ಲಿ ಭಯ ಇರುತ್ತಿತ್ತು. ಇನ್ನು ಕೆಲವರು “ಈ ಮಗಾ ತಾನೂ ತಿನ್ನಂಗಿಲ್ಲಾ ತಿನ್ನವರ್ನೂ ತಿನಿಸಿ ಕೊಡಂಗಿಲ್ಲ” ಎಂದು ಅವನ ಮ್ಯಾಲೆ ಅಸಮಾಧಾನ ಪಡುತ್ತಿದ್ದರು. ಹೊನ್ನಪ್ಪ ಹೃದಯಘಾತದಿಂದ ತೀರಿಕೊಂಡ ಮೇಲೆ ಗಂಗವ್ವನ ಕುಟುಂಬಕ್ಕೆ ಗಂಡು ವಂಶ ಇಲ್ಲೆಂದು ಪೂಜಾರಿಕೆಯ ಚಾಕ್ರಿಯನ್ನು ದೈವದವರು ಕಸಿದುಕೊಂಡರು.

ಎರಡು ವರ್ಷದವನು ಇರುವಾಗಲೇ ಮಗಳ ಮಗನಾದ ಅಜ್ಜಪ್ಪನನ್ನು ತಂದು ತಾನೇ ಜತನ ಮಾಡುತ್ತ, ಬೆಳಸಿದಳು. ಅದೇ ಊರಿನ ಸರಕಾರಿ ಸಾಲಿಗೆ ಅವನನ್ನು ಸೇರಿಸಿದಳು. ಸಾಲಿಯ ಓದಿನಲ್ಲಿ ಅಜ್ಜಪ್ಪ ಎಲ್ಲರಿಗಿಂತ ಒಂದು ಕೈ ಮೇಲಿದ್ದ. ಅಲ್ಲಿದ್ದ ಗುರುಗಳು ಶಿವಶಂಕರ ಮೇಷ್ಟ್ರು, ಅಪ್ಪಣ್ಣ ಮೇಷ್ಟ್ರು ಈ ಹುಡಗನ ಮೇಲೆ ಅಪಾರ ಪ್ರೀತಿ ಇಟ್ಟುಕೊಂಡಿದ್ದರು. ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಅಜ್ಜಪ್ಪ ಹಾಡಿದ “ಕರಿಸಿದ್ಧನ ಹಾಡಿಗೆ” ಮೊದಲ ಬಹುಮಾನ ಸಿಕ್ಕು ಸಾಲಿಯ ಘಣತೆ ಹೆಚ್ಚಿಸಿದ್ದ. ಊರಲ್ಲೂ ಹಿರಿಯರಿಂದ ಗೌರವಕ್ಕೆ ಪಾತ್ರನಾಗಿದ್ದ.

ಅಜ್ಜಪ್ಪ ಬೆಳೆದಂತೆ ಅವನಲ್ಲಿರುವ ದೈವಭಕ್ತಿಯೂ ದಿನದಿನ ಬೆಳೆಯತೊಡಗಿತು. ರವಿವಾರ ಬಂದ್ರೇ ಅಜ್ಜಪ್ಪ ಅಜ್ಜನ ಗುಡಿಯಲ್ಲಿಯೇ ಬೆಳಗಿನಿಂದ ಸಂಜಿಯ ತನಕ ಟಿಕಾನಿ ಹೂಡುತ್ತಿದ್ದ. ಬಂದ ಭಕ್ತರಿಗೆಲ್ಲ ಅಜ್ಜಪ್ಪಾ ತಾಟೀನ ತುಂಬ ಆಮ್ಲಿ ಹಾಕಿ ಹಾಕಿ ಕೊಡುತ್ತಿದ್ದ. ಆಮ್ಲಿ ಕುಡಿದ ಭಕ್ತರು “ದೇವ್ರ ಪ್ರಸಾದ ಹೆಂಗಿದ್ರೂ ನಾಲಗಿಗೊಂದು ರುಚೀನ ಬ್ಯಾರೆ ನೋಡು” ಅನ್ನುತ್ತ ಒಮ್ಮೆ ಹಾಕಿಸಿಕೊಂಡವರು ಮತ್ತೊಮ್ಮೆ ನಾಚಿಕೆ ಇಲ್ಲದೇ ಅಜ್ಜಪ್ಪನ ಮುಂದೆ ಕೈ ಒಡ್ಡುತ್ತಿದ್ದರು. ಮಂಡ ಚಡ್ಡಿ ತೊಟ್ಟು, ಮೈಮ್ಯಾಲೊಂದು ಪಟ್ಟಿ ಬನಿಯನ್ ಹಾಕಿಕೊಂಡು, ತಲೆಗೆ ಟವಲ್ ಸುತ್ತಿ, ಹಣೆ ತುಂಬ ಭಂಡಾರ ಬಳೆದುಕೊಂಡು ಕೈ ಚಾಚಿ ಬೇಡುವ ಭಕ್ತರಿಗೆಲ್ಲ ಅಜ್ಜಪ್ಪ ಹುರುಪಿನಿಂದ ಆಮ್ಲಿ ತಾಟಿಗೆ ಸುರಿದು “ಹಾಕಸ್ಕೊಂಡವ್ರ ಹಂಗ ಸ್ವಲ್ಪ ಮುಂದಕ ಸರಿರೀ ಅಕ್ಕಾರ ಅಣ್ಣಾರ” ಎಂದು ಹೇಳುತ್ತಿದ್ದ. ಗುಡಿಮ್ಯಾಲ ಹಚ್ಚಿದ ಮೈಕಿನ ಹಾಡಿಗೆ ತಾನೂ ದನಿ ಗೂಡಿಸಿ ಹಂಗ ಗುಣುಗುಣು ಗುಣಗುತ್ತ ತಾಟೀಗೆ ಆಮ್ಲಿ ಸುರಿಯುತ್ತಿದ್ದ.

ಆಮ್ಲಿಗಿಂತ ಆಮ್ಲಿ ನೀಡುವ ಹುಡುಗನ ಮೇಲೆ ಅಲ್ಲಿದ್ದ ಮಂದಿಗೆ ಮಮತೆ ಹೆಚ್ಚು ಮೂಡುತ್ತಿತ್ತು. ಅಜ್ಜಪ್ಪ ಅಷ್ಟೊಂದು ಚುರುಕುತನದಿಂದ ದೇವರ ಸೇವೆಯಲ್ಲಿ ತೊಡಗಿಕೊಂಡಿದ್ದ. ಅಂವನು ಹಾಕಿದ ವೇಷನೋಡಿ “ಇಂವಾ ಗೌರ್ಮೆಂಟ್ ಸಾಲಿ ಹುಡುಗನೇ” ಅನ್ನುವುದು ಅಲ್ಲಿದ್ದವರಿಗೆ ಸರಳವಾಗಿಯೇ ಖಾತ್ರಿ ಆಗುತ್ತಿತ್ತು. ಒಂದಿಬ್ಬರು ಅಂವನ ಹೆಸರು, ಓದುವ ತರಗತಿಯನ್ನೂ ಕೇಳಿದ್ದರು. “ಐದನೆಯಿಯತ್ತೆ ಓದತಿನ್ರೀ, ಹೆಸರು “ಕರಿಸಿದ್ಧ” ಊರ ಮಂದಿಯಲ್ಲ ನನ್ನ ಪ್ರೀತಿಯಿಂದ “ಅಜ್ಜಪ್ಪ” ಅಂತಾರೆಂದು ಕೇಳಿದವರಿಗೆ ನಗುತ್ತ ಹೇಳಿದ. ಅಂವನ ತಲೆ ಸವರಿ “ನೀ ಬಾಳ ಶ್ಯಾನ್ಯಾ ಅದಿಯಪ್ಪಾ ಭಂಗಾರಾ” ಎಂದು ಅರವತ್ತರ ಆಸುಪಾಸಿನ ಒಬ್ಬಳು ಅಜ್ಜಿ ಹಾರೈಸಿ ಅಂವನ ಕೈಯಿಂದ ಆಮ್ಲಿ ಹಾಕಿಸಿಕೊಂಡು ಕುಡಿದು ಸಂತಸದಿಂದ ಹೋಗಿದ್ದಳು.

ಕೊಣ್ಣೂರ ಕರಿಸಿದ್ಧನ ಗುಡಿಯಲ್ಲಿ ದೇವರಿಗಿಂತ ಈ ಹುಡುಗನ ಹೆಸರೇ ಹೆಚ್ಚು ಪ್ರಚಾರದಲ್ಲಿತ್ತು. ಬಂದ ಭಕ್ತರೂ, ಊರಿನ ಹಿರಿಯರೂ, ಕಿರಿಯರೂ, ಯಾರೇ ಇದ್ದರೂ ಪುಟ್ಟ ಹುಡುಗ ಅಜ್ಜಪ್ಪನನ್ನು ತುಂಬಾ ಆಪ್ತತೆಯಿಂದ ಅಪ್ಪಿಕೊಂಡು ಮಾತಾಡಿಸುತ್ತಿದ್ದರು. ದೂರ ದೂರಿನಿಂದ ಬಂದ ಭಕ್ತರು ಅಂವನ ಕೈಗೆ ದೊಡ್ಡ ನೋಟೊಂದು ಮಡಚಿ ಕೊಟ್ಟು ತಲೆ ಸವರಿ ಹೋಗುತ್ತಿದ್ದರು.

ಪೂಜಾರಿ ಭರಮಪ್ಪನಿಗೆ ಹೊನ್ನಪ್ಪನ ಮೇಲಿದ್ದ ಸಿಟ್ಟು,ಸೆಡವು, ದ್ವೇಷಭಾವನೇ ಅವನ ಮೊಮ್ಮಗನಾದ ಅಜ್ಜಪ್ಪನ ಮೇಲೂ ಮುಂದು ವರೆದಿತ್ತು. “ಗಂಗಿಗೆ ಗಂಡ ಮಕ್ಕಳಿಲ್ಲಂತ ಈ ಪುಡಾರೀನ ಸಾಕಿ ಮುಂದ ಪೂಜಾರ್ಕಿ ಚಾಕ್ರೀ ಮಾಡುವ ಹೊಂಚ ಹಾಕ್ಯಾಳ” ಎಂದು ಅಲ್ಲಿದ್ದವರ ಕಿವಿ ಊದಿ ಊದಿ ಅವರಲ್ಲಿ ಈ ಹುಡುಗನ ಮೇಲೆ ದ್ವೇಷದ ಕಿಚ್ಚು ಹಚ್ಚಿದ್ದ. ಸಮಯ ನೋಡಿ ಈ ಹುಡುಗನನ್ನು ಈ ಗುಡಿಯಿಂದ ಓಡಿಸಬೇಕೆಂದು ಹಂಚಿಕೆ ಹಾಕಿಕೊಂಡು ಕುಳಿತಿದ್ದ.
ಅಜ್ಜಪ್ಪ ಗುಡಿಯಲ್ಲಿ ಯಾರೇ ಕರೆದರೂ, ಏನೇ ಕೆಲಸ ಹೇಳಿದರೂ, ಹೋಗಿ ಅವರು ಹೇಳಿದ ಕೆಲಸ ಚಾಚುತಪ್ಪದೆ ಮಾಡಿ ಸೈ ಅನಿಸಿಕೊಳ್ಳುತ್ತಿದ್ದ. ಅದರಲ್ಲೂ ಸಿದ್ದಪ್ಪಜ್ಜನಿಗೆ ಹುಡುಗನ ಕಂಡ್ರೇ ಅತೀವ ಪ್ರೀತಿ. “ಹತ್ತ ಹಡಿಯುವಕಿನ್ನ ಒಂದ ಮುತ್ತಿನಂತ ಮಗನ ಹೆತ್ತಾಳ ನೋಡ ನಮ್ಮ ರೇಣವ್ವ” ಕುಂತನಿಂತಲ್ಲಿ ಗುಡಿಯ ಹಿರೇಪೂಜಾರಿ ಸಿದ್ದಪ್ಪಜ್ಜ ಹುಡಗನ ಗುಣಗಾಣ ಮಾಡುತ್ತಿದ್ದ.

ಭರಮಪ್ಪ ಕಿವಿ ಊದಿದ ಮೂರ್ಖರಿಗೆ ಈ ಹುಡುಗ ಏನೇ ಮಾಡಿದರೂ ಅದಕ್ಕೊಂದು ಕೊಂಕಾಡುವುದು, ಹಂಗಿಸುವುದು, ಮಾಡಿ ಆ ಹುಡುಗನನ್ನು ಗುಡಿಯಿಂದ ಹೊರಗಟ್ಟುವ ಹುನ್ನಾರ ಮಾಡುತ್ತಿದ್ದರು. ಸಿದ್ದಪ್ಪಜ್ಜ ಹುಡುಗನನ್ನು ಯಾರಾದರೂ ಬೈದ್ರೆ ತನ್ನೇ ಬೈದಂತೆ ಅವರ ಮೇಲೆ ಎರಗಿ ಹೋಗುತ್ತಿದ್ದ. ಆಗಾಗ ಭರಮಪ್ಪನ ಕಡೆಯವರಿಗೆ ಸಿದ್ದಪ್ಪಜ್ಜ ಈ ಹುಡಗನಷ್ಟು ದ್ಯಾನ ನಿಮಗಿಲ್ಲವೆಂದು ಛೀ ಥೂ ಉಗಳುತ್ತಿದ್ದ. ಆಗ ಸಿದ್ದಪ್ಪನ ಬೈಗುಳ “ಮೋತಿಯ ಮೇಲೆ ನಾಯಿ ಉಚ್ಚಿ ಹೊಯ್ದಂತೆ” ಅನಿಸಿ ಅಜ್ಜಪ್ಪನ ಮೇಲೆ ಸೇಡುತೀರಿಸಿಕೊಳ್ಳಲು ಪೇಚಾಡುತ್ತಿದ್ದರು.

ಎಷ್ಟೋ ಸರತಿ ದೊಡ್ಡವರೊಂದಿಗೆ ತಾನೂ ಊರೂರು ಸುತ್ತಿ ಭಿಕ್ಷಾಟನೆಯಲ್ಲಿ ತೊಡಗಿದ್ದ. ದೇವರ ಪಾಲಿಕೆ ಹೋದಲ್ಲಿ ತಾನೂ ಹೋಗುತ್ತಿದ್ದ. ಡೊಳ್ಳಿನ ಪದ ಕೇಳುವುದು, ಭೀರದೇವರ ಚರಿತೆ, ಕರಿಸಿದ್ದನ ಚರಿತೆ, ಮಾಳಿಂಗರಾಯನ ಚರಿತೆ, ದೇವರ ಲೀಲೆ, ಪವಾಡ ಕೇಳುತ್ತ ಅಜ್ಜಪ್ಪನ ಎಳೆ ಮನಸ್ಸಲ್ಲಿ ಭಕ್ತಿ ರಸವೇ ಸ್ಥಾಯಿಯಾಗಿ ಸಂಚರಿಸುತ್ತಿತ್ತು.

ಎಲ್ಲೇ ಡೊಳ್ಳಿನ ಪದದ ಕಾರ್ಯಕ್ರಮ ಇರಲಿ, ಇಡೀ ರಾತ್ರಿ ಕಲ್ಲು ಮೂರ್ತಿಯಂತೆ ಕುಳಿತು ಕೇಳುವ ವ್ಯವದಾನ ಅವನ ಮನಸ್ಸಿಗಿತ್ತು. ಐದಾರು ಡೊಳ್ಳಿನ ಪದಗಳನ್ನು ಬಾಯಿಪಾಟ ಮಾಡಿಕೊಂಡಿದ್ದ. ತಾನೊಬ್ಬನೇ ಇದ್ದಾಗ ಗುಣುಗುಣು ಗುಣುಗುವುದು ಅವನಜ್ಜಿ ಗಂಗವ್ವ ಕೇಳಿ ಒಳಗೊಳಗೆ ಹಿಗ್ಗಿದ್ದಳು. “ನನ್ನ ಮೊಮ್ಮಗ ಅವರ ಅಜ್ಜನಂತೆ ಮುಂದ ಒಂದಿಲ್ಲೊಂದು ದಿನಾ ಒಳ್ಳೆಯ ಹಾಡುಗಾರ ಅಕ್ಕಾನ” ಅನ್ನುವುದು ಖಾತ್ರಿ ಮಾಡಿಕೊಂಡು ಖುಷಿಗೊಂಡಿದ್ದಳು.

*

ರೇಣವ್ವನ ಗಂಡ ಬಳಗಪ್ಪ ದಿನಾ ಕುರಿ ಮೇಸಲು ಹೋಗುತ್ತಿದ್ದ. ಅವನಿಗೆ ಕುರಿಕಾಯೊದೊಂದು ಬಿಟ್ಟು ಬ್ಯಾರೇನೂ ಕೆಲಸ ಮಾಡಲು ಬರುತ್ತಿರಲಿಲ್ಲ. ಹುಟ್ಟಂದಿನಿಂದ ಅಂವನ ಬುದ್ದಿ ಒಂಚೂರು ಮಂಕಾಗಿಯೇ ಇತ್ತು. ಅಂವನಿಗೆ ಹೆಣ್ಣು ಕೊಡಲು ಯಾರೂ ಮುಂದೆ ಬರಲಾರದಕ್ಕೆ ಸ್ವತ ತನ್ನ ಮಗಳನ್ನೇ ಮದುವೆ ಮಾಡಿ ಗಂಗವ್ವ ತನ್ನ ತಮ್ಮನ ಬಾಳಿಗೆ ಆಸರೆ ಆಗಿದ್ದಳು. ರೇಣವ್ವ ಮೊದಮೊದಲು “ಅಂವನ ಮದವಿ ನಾ ಆಗೂದಿಲ್ಲೆಂದು” ತಿಂಗಳಾನೂ ಗಟ್ಟಲೆ ಕಣ್ಣೀರು ಹಾಕುತ್ತ, ಕೂಳು ನೀರು ಬಿಟ್ಟು ಪ್ರತಿಭಟಿಸಿದ್ದಳು. ಅವರವ್ವನ ಮುಂದೆ ಅಕಿಯ ಪ್ರತಿಭಟನೆಗೆ ಫಲಸಿಗದೆ ಕೊನೆಗೂ ಅವಳ ಕೊರಳಿಗೆ ತಾಳಿಯೊಂದು ಜೋತುಬಿದ್ದು ಬಳಗಪ್ಪ ಹೆಂಡತಿಯಾಗಿದ್ದಳು.

ರೇಣವ್ವ ಮದುವೆಯಾಗಿ ಐದಾರು ವರ್ಷ ಉರಳಿದರೂ ಅವಳ ಹೊಟ್ಟೆಯಲ್ಲಿ ಒಂದು ಕುಡಿಯೂ ಮೂಡಲಿಲ್ಲ. ರೇಣವ್ವನ ತಾಯಿಗೆ ಇದೊಂದು ದೊಡ್ಡ ತೆಲೆನೋವು ಆಗಿ ಕಾಡತೊಡಗಿತು. ಮಗಳು ಮನಸ್ಸಿಲ್ಲದೇ ಮದುವೆ ಆಗಿದ್ದಾಳೆ ಗಂಡನೊಂದಿಗೆ ಸರಿಯಾಗಿ ಸಂಸಾರ ಮಾಡುತ್ತಿದ್ದಾಳೋ ಇಲ್ಲವೋ ಅನ್ನುವ ಚಿಂತೆ ಅವಳ ಎದೆಯನ್ನು ದಿನವೂ ಹಿಂಡಿ ಹಾಕತೊಡಗಿತು. ಮದುವೆಯಾದ ಮೇಲೆ ಮಗಳು ತವರೂರಿಗೆ ಹೆಜ್ಜೆ ಇಡದೆ ಮುನಿಸಿಕೊಂಡು ಸರಿಯಾಗಿ ಮಾತಾಡದೇ ಇರುವುದು ಗಂಗವ್ವಳಿಗೆ ಮತ್ತಷ್ಟು ಯಾತನಗೆ ಕಾರಣವಾಗಿತ್ತು. ಇದ್ದ ಕೆಲಸ ಮೂಲಿಗೆ ಒತ್ತಿ ಮಗಳ ಹಂತೇಕ ಆಗಾಗ ಹೋಗಿ ಬರುತ್ತಿದ್ದಳು.
ಅಕೀ ಸಂಸಾರ ಸಸಾರ ಆಗಿದಿಯೋ ಇಲ್ಲವೋ ತಿಳಿಯಬೇಕು ಅನ್ನುವ ಕಾತರದಲ್ಲಿ ಗಂಗವ್ವ ಮಂಟೂರು ಬಸ್ಸು ಹತ್ತಿ ಇಳಿದು ಸಾಕಷ್ಟು ಬಾರಿ ಮುಖಬಾಡಿಸಿಕೊಂಡು ಬಂದಿದ್ದಳು. ಮಗಳ ಮನೆಗೆ ಹೋದಾಗ ಗಂಡ-ಹೆಂಡತಿ ಜಗಳಾಡತಾರಾ? ಹೇಳಿ, ನನಗಂತು ಅವರು ಹೇಳಲ್ಲ. ಆಜೂಬಾಜೂ ಮನೆಯವರನ್ನು ಗಂಗವ್ವ ಚೌಕಾಸಿ ಮಾಡಿಯೂ ಸೋತಿದ್ದಳು.

ಅಂದು ಅಮವಾಸೆ ಇತ್ತು ದೇವರಿಗೆ ಎಡೆ ಕೊಟ್ಟು ಮಗಳ ಮನೆ ತಲುಪಿದಳು. ಮಂಟೂರು ತಲುಪಿದಾಗ ಆ ಊರಿನ ಒಂದೊಂದು ಮನನೆಗಳುಲ್ಲಿ ಬಾಗಿಲು ಮುಚ್ಚಿ ದೀಪ ಆರಿದ್ದವು. ಅವ್ವ ಹೇಳದೇ ಕೇಳದೇ ದೀಡಿರನೇ ಬಂದದ್ದು ರೇಣವ್ವನಿಗೆ ಅಚ್ಚರಿಗಿಂತ ಆನಂದವೇ ಹೆಚ್ಚಾಗಿತ್ತು.

ಉಂಡ ಮೇಲೆ ರೇಣವ್ವ ಅಂದು ತಾಯಿ ಹತ್ತಿರವೇ ಮಲಗಿದಳು. “ಒಳಗ ಹೋಗಿ ನೀವ ಕೂಡಿ ಮಲಗ್ರೀ” ಎಂದು ಗಂಗವ್ವಾ ಮಗಳಿಗೆ ಹೇಳಿದ್ರೂ ಅಕೀ ಮಿಸಗಲಿಲ್ಲ. ಮೆಲ್ಲಕ ಗಂಗವ್ವ ಮಗಳನ್ನ ಕೇಳಲೋ ಬ್ಯಾಡೋ ಅನ್ನುವ ಭಯದಲ್ಲಿಯೇ “ಯವ್ವಾ ಮಗಳ ಮಾವನ ಜೋಡಿ ಚೆಂದ್ಹಂಗ ಸಂಸಾರ ಮಾಡಾಕತ್ತಿಯೋ ಇಲ್ಲೋ” ಅಂತ ಕೇಳಿದಳು. “ಓಡಾಡಿ ಮದವಿ ಮಾಡಿಯಲ್ಲಾ ಸಂಸಾರ ಮಾಡದ ಇರ್ತಾರೇನು?” ಮಗಳಾಡಿದ ಕೊಂಕು ಮಾತಿಗೆ ತಾಯಿಯ ನಾಲಿಗೆ ಮತ್ತೊಂದು ಮಾತು ಕೇಳಬೇಕನಿಸದೇ ಸುಮ್ಮನೇ ಮೌನತಾಳಿತು. ಮಗಳ ಏನಾರ ಅಂದ್ರೂ ಅನ್ನಲಿ, ಎರಡ ಬೈದ್ರೂ ಬೈಲಿ. ಅಕೀ ಬಾಳೆ ಸುಂದರವಾದ್ರೆ ಸಾಕೆನ್ನುವ ಭಾವವದಲ್ಲಿಯೇ ಗಂಗವ್ವ ಮತ್ತೆ ಮಗಳನ್ನು ಮಾತಿಗೆಳೆದಳು.

“ನಾಳೆ ದವಾಖಾನಿಗರಾ ತೋರ್ಸೂನು ನಡಿ”
“ದವಾಖಾನಿಗೆ ತೋರಸಾಕ ನನಗೇನ ಆಗೇತಿ?”
“ಇಷ್ಟ ದಿನಾ ಆದ್ರೂ ಮಕ್ಕಳ ಆಗವಲ್ಲೂ ಅದಕ್ಕ”
“ಆಗಲಿಲ್ಲಂದ್ರ ಆಗಲಿಲ್ಲ, ಅದಕ್ಯಾಕ ತಲಿ ನೀ ಕೆಡಸ್ಕೊಂಡಿ”
“ಬಂಜಾಗಿರ್ತಿಯೇನ ದೌಳಾಕೀನss”
“ನನ್ನ ಹಣೆ ಬರದಾಗ ಬರದ್ಹಂಗ ಅಕೈತಿ ನೀ ನನ್ನ ಜೀವಾ ತಿನಬ್ಯಾಡ ಸುಮ್ಮನ ಮಲಗ”
ಮೊದಲ ಕೊಟ್ಟಿ ಗೆಂಗಸ ಅನ್ನುದ ಗಂಗವ್ವಗ ಗೊತ್ತಿದ್ದ ಮಾತು. ಒಂದು ಎರಡು ಅನ್ನದ ಸುಮ್ನ ಮಲಗಿದ್ಳು. ತಮ್ಮನ ಬಾಯಾಗಿಂದ ಕೇಳಿದ್ರ ಸಂಸಾರದ ಗುಟ್ಟ ತಿಳಿತೈತಿ, ಇಕಿ ಏನ್ಮಾಡಿದ್ರೂ ಬಾಯಿ ಬಿಡುವ ಹೆಣ್ಣಲ್ಲೆಂದು ಗಂಗವ್ವ ನಿದ್ದೇ ಬರದಿದ್ದರೂ ಕಣ್ಣು ಮುಚ್ಚಿಕೊಂಡು ರಾತ್ರಿ ಇಡೀ ಚಿಂತೆಯಲ್ಲಿಯೇ ದೂಡಿದಳು.

ಬಳಗಪ್ಪ ಬಗಲಿಗೊಂದು ವಡಚೀಲ ಹಕ್ಕೊಂಡು, ಕೈಯಾಗೊಂದು ಬಡಗಿ ಹಿಡ್ಕೊಂಡು ಕುರಿಗಳನ್ನು ದಡ್ಡಿಯಿಂದ ಇನ್ನೇನು ಎಬ್ಬಿಸಬೇಕು ಅನ್ನುವ ಹೊತ್ತಿಗೆ ಗಂಗವ್ವ ಅವನ ಮುಂದೆ ಹಾಜರಿದ್ದಳು. ಅಕ್ಕನ ನೋಡಿದ ಬಳಗಪ್ಪ “ನೀ ಯಾಕ ಇತ್ತಾಗ ಬಂದೆವ್ವಾ, ಮನ್ಯಾಗಿರ್ಬೇಕಿಲ್ಲೋ” ಅಂದ. “ಹಂಗss ನಿನ್ನ ಜೋಡಿ ಒಂದ ತಟಗ ಮಾತಾಡಾಕ ಬಂದ್ಯಾ” ಅಂತ ಗಂಗಗವ್ವ ಮಾತಿಗೆ ಪೀಠಿಕೆ ಹಾಕಿದ್ಳು.

“ನಿನ್ನ ಜೋಡಿ ರೇಣವ್ವಾ ಜಗಳಾ ಜೋಟಿ ಮಾಡ್ತಾಳನಪ್ಪಾ” ಅಂದ್ಳು.
“ಯಾಕss ಯಕ್ಕಾ ಇದ್ದಕ್ಕಿದ್ದಂಗ ಹಿಂಗ್ಯಾಕ ಕೇಳಾಕತ್ತಿ” ಅಂದ.
“ಗಂಡ ಹೆಂತಿ ಹೆಂಗದಿರಿ ಅಂತ ಇಚಾರ್ಸೂದ ತಪ್ಪೇನು? ಮನ್ಯಾಗ ಯಾರದಾರ ನಿಮಗ ಹಿರ್ಯಾರು?”
“ಅಕೀ ನನಗ ಒಂದ ದಿನಾನೂ ಸರದ ಕುಂದ್ರ ಅಂದಿಲ್ಲ, ಇನ್ನss ಜಗಳದ ಮಾತಂತೂ ದೂರ ಹೋತು, ನಾನು ಗುಡ್ಡಾ ಸುತ್ತಿ ಬಂದಿರ್ತಿನಂತ ತಿಳಕೊಂಡು, ಮಲಗುವಾಗ ನನ್ನ ಕೈ-ಕಾಲ ಒತ್ತಲಾರ್ದ ಮಲಗುದಿಲ್ಲ, ನನಗೆಂದೂ ತಂಗಳೂಟಾ ತಿನಿಸಿಲ್ಲಾ, ಅಂಥಾ ಹೆಂತಿ ಪಡದದ್ದು ನನ್ನ ಪೂರ್ವ ಜನ್ಮದ ಪುಣ್ಯಾ” ಎಂದು ಹೇಳಿದ. ತಮ್ಮನಾಡಿದ ಮಾತು ಕೇಳಿ ಗಂಗವ್ವನ ಮನಸ್ಸಿಗೊಂದಿಷ್ಟು ನೆಮ್ಮದಿ ಸಿಕ್ಕಿತು.

“ನಿಮಗೊಂದ ಹೆಣ್ಣೋ ಗಂಡೋ ಒಂದ ಲಗೂನ ಮಗುವಾದ್ರ ನನ್ನ ಚಿಂತಿ ದೂರ ಅಕೈತಿ” ಎಂದು ತಮ್ಮನೆದರು ತನ್ನ ಮನದಲ್ಲಿಯ ನೋವು ತೋಡಿಕೊಂಡಳು. “ ನಮ್ಮ ಕೈಯಾಗೇನೈತೆವ್ವಾ ಎಲ್ಲಾ ಆ ಗುಡಿಯಾಗೀನ ಅಜ್ಜಗ ಬಿಟ್ಟದ್ದು, ಅಕಿ ದಿನಾ ಇದss ಚಿಂತಿ ಮಾಡ್ತಾಳ, ದೇವರಿಗೆ ಹರಕಿನೂ ಹೊತ್ತಾಳ ಏನಿದ್ರೂ ಇನ್ನ ಮುಂದಿಂದೂ ಆ ಗುಡಿಯಾನಂವಗ ಬಿಟ್ಟದ್ದು” ಎಂದು ಬಳಗಪ್ಪ ಹೇಳಿದ್ದು ಕೇಳಿದ ಗಂಗವ್ವಳಿಗೆ ತಂಬಿಗೆ ಹಾಲು ಗಟಗಟ ಕುಡದ್ಹಂಗಾತು. ತನ್ನ ಮಗಳು ಗಂಡನೊಂದಿಗೆ ಸರಿಯಾಗಿ ಸಂಸಾರ ಮಾಡುತ್ತಿದ್ದಾಳೆ. ತಪ್ಪೇನಿದ್ರೂ ಆ ದೇವರದೇ ಎಂದು ದೇವರ ಮೇಲೆ ಸಿಡಿಮಿಡಿಗೊಂಡು ಮಗಳ ಮನೆಯತ್ತ ಹುರುಪಿನಿಂದ ನೆಡೆದಳು.

“ನೋಡ ತಂಗಿ ಕೊಣ್ಣೂರ ಕರಿಸಿದ್ಧಪ್ಪಗ ಬೆಡ್ಕೊಂಡಿನಿ, ಮುಂದಿನ ವರ್ಷ ಅನಗೋಡ್ದ ಆ ಭಂಡಾರ ಒಡೆಯಾ ನಿನ್ನ ಹೊಟ್ಯಾಗೊಂದ ಕುಡಿ ಮೂಡಸ್ತಾನ, ಅದಕ್ಕ ನೀ ಐದ ಅಮವಾಸಿ ನಿಮ್ಮೂರಾಗಿಂದ ಅಂವನ ಗುಡಿಮಟಾ ನಡೆಕೊಂದ ಬಂದ ಅವನ ದರಸನಾ ತಗೋ” ಎಂದು ಗಂಗವ್ವ ಮಗಳಿಗೆ ದೈನಾಸದಿಂದ ಬೇಡಿಕೊಂಡ್ಳು. ತಾಯಿಯ ಮಾತಿಗೆ ರೇಣವ್ವ ಗೋಣು ಹಾಕಿ ಒಪ್ಪಿಕೊಂಡಳು.

ತಾಯಿ ಹೇಳಿದ್ಹಂಗ ತಮ್ಮೂರು ಮಂಟೂರಿನಿಂದ ತನ್ನ ತವರ ಮನೆ ದೇವರಾದ ಕರಿಸಿದ್ದನಿಗೆ ಮೂರ ಅಮವಾಸಿ ನಡೆದೇ ದೇವರ ದರುಶನ ಮಾಡಿದ್ಳು. ನಾಕನೇ ಅಮವಾಸಿಗೆ ದೇವರನ್ನು ಕಾಣುವ ಮೊದಲೇ ಅವಳ ಉದರದಲ್ಲಿ ಒಂದು ಕುಡಿ ಮೂಡಿತ್ತು. ಆಗ ರೇಣವ್ವ ತಾಯಿಯನ್ನು ಅಪ್ಪಿ ಗಳಗಳ ಅತ್ತು ತನ್ನ ನೋವು ಹೊರಹಾಕಿದ್ದಳು. “ಗಂಡು ಮಗಾ ಹುಟ್ಟಿದ್ರ ನಿನ್ನ ಹೆಸರ ಇಡ್ತನಪ್ಪಾ ಭಗವಂತಾ” ಎಂದು ರೇಣವ್ವ ಐದನೇ ಅಮಾಸಿಗೆ ಹೋದಾಗ ದೇವರಲ್ಲಿ ಮತ್ತೊಂದು ಹರಕೆ ಇಟ್ಟು ಬಂದಿದ್ದಳು. ರೇಣವ್ವನ ಹರಕೆಯನ್ನು ದೇವರು ಸ್ವೀಕರಿಸಿ ಗಂಡು ಮಗನನ್ನೇ ಅವಳಿಗೆ ಕೊಟ್ಟಿದ್ದ.

ಗಂಗವ್ವ ಮೊಮ್ಮಗನನ್ನು ಮುದ್ದಾಡಿದ್ದೇ ಮುದ್ದಾಡಿದ್ದು. “ನನ್ನ ಮುದ್ದಿನ ಗಂಡ ನೀನೇ, ನನ್ನ ಸುಳ್ಳ ಗಂಡನೂ ನೀನೇ” ಎಂದು ಆ ಹುಡಗನ ತಿಳಿಗುಂಡಿಗೆ ಕಳ್ಳೇಟು ಹಾಕಿ ನಕಲಿ ಮಾಡುತ್ತ ಮುದ್ದಿಸುತ್ತಿದ್ದಳು. ರೇಣವ್ವ ಮಗನಿಗೆ ”ಕರಿಸಿದ್ದ”ನೆಂದು ಹೆಸರಿಟ್ಟ ಮೇಲೆ ಆ ಹೆಸರನ್ನು ನೇರವಾಗಿ ಕೂಗಿದರೆ ಅಪಚಾರವೆಂದು ಭಾವಿಸಿ. ಕರಿಸಿದ್ದನಿಗೆ ಪರಿಯಾಯವಾಗಿ ಊರಿನಲ್ಲಿ ಕರೆಯುವ “ಗುಡಿಯಜ್ಜ”, ”ಕರಿದೇವರಜ್ಜ”, “ಕರಿಯಪ್ಪಜ್ಜ”, “ಅಜ್ಜಪ್ಪ” ಅನ್ನುವ ಹೆಸರಲ್ಲೊಂದು ಆರಿಸಿಕೊಂಡು “ಅಜ್ಜಪ್ಪ” ಎಂದೇ ಕರೆಯತೊಡಗಿದಳು. ದಾಖಲಾತಿಯಲ್ಲಿ ಕರಿಸಿದ್ಧನಾದರೂ ಊರ ಜನರ ಬಾಯಿಯಲ್ಲಿ ಹುಡುಗ “ಅಜ್ಜಪ್ಪ”ನಾಗಿ ಉಳಿದ. ಎರಡು ವರುಷ ತುಂಬುವುದರೊಳಗೆ ಅಜ್ಜಿಯ ಮನೆಯಲ್ಲಿ “ಅಜ್ಜಪ್ಪ” ಕೊಣ್ಣೂರಲ್ಲಿ ಬೆಳೆಯತೊಡಗಿದ. ಕರಿಸಿದ್ಧನ ಅಂಗಳದಲ್ಲಿ ನಿತ್ತಯವೂ ನಲಿಯತೊಡಗಿದ.

*

ಗುಡಿಯ ಪೂಜಾರಿಕೆಯ ಚಾಕ್ರಿ ಭರಮಪ್ಪನಿಗೆ ಬಂದಿತ್ತು. ಸಿದ್ದಪ್ಪಜ್ಜನ ಮೈಯಲ್ಲಿ ಹುಷಾರಿಲ್ಲದ ಕಾರಣ ನಾಕುದಿನದಿಂದ ಅವನು ಗುಡಿ ಸನಿಹಕ್ಕೂ ಸುಳಿದಿರಲಿಲ್ಲ. ಹುಡುಗ ಅಜ್ಜಪ್ಪ ತಪ್ಪದೇ ಸಂಜೆ ಮುಂಜಾನೆ ಯಾರೇ ಬರಲಿ ಯಾರೇ ಬಿಡಲಿ ತಾನು ಮಾತ್ರ ಹಾಜರಿರುತ್ತಿದ್ದ. ಗುಡಿಯಂಗಳ ಕಸಗೂಡಿಸಿ, ಕೈಕಾಲು ತೊಳೆದು ಹಣೆಗೆ ಭಂಡಾರ ಬಡೆದುಕೊಂಡು ಗುಡಿಯಲ್ಲಿದ್ದ ಕೆಲಸ ಹುಡುಕಿಕೊಂಡು ಮಾಡುವುದು ಅವನ ನಿತ್ಯದ ಕಾಯಕವಾಗಿತ್ತು.
ಭರಮಪ್ಪನ ಕೈಯಲ್ಲಿ ಗುಡಿಯ ಅಧಿಕಾರ ಬಂದ ಮೇಲೆ ಅಜ್ಜಪ್ಪನಿಗೆ ಅಲ್ಲಿ ಕೆಲಸ ಅಷ್ಟೊಂದು ಇರುತ್ತಿರಲಿಲ್ಲ. ಇದ್ದರೂ ಭರಮಪ್ಪ ಈ ಹುಡುಗನ್ನು ಸನಿಹಕ್ಕೂ ಕರೆಯುತ್ತಿರಲಿಲ್ಲ. ಈ ಹುಡುಗ ಇಲ್ಲಿರುವುದರಿಂದ ಒಂದಿಲ್ಲ ಒಂದು ದಿನ ನಮಗೇ ಮುಳ್ಳಾಗುತ್ತಾನೆ, ಹೆಂಗಾದರೂ ಮಾಡಿ ಈ ಹುಡಗನ ಮೇಲೊಂದು ದೊಡ್ಡ ಅಪಾದನೆಯನ್ನು ಹೇರಿ ಖಾಯಂ ಆಗಿ ಗುಡಿ ಸನೀಹಕ್ಕೆ ಬರದಂತೆ ಮಾಡಬೇಕೆನ್ನುವ ಭರಮಪ್ಪನ ದುಷ್ಟ ಮನಸ್ಸು ಲೆಕ್ಕಾಚಾರ ಮಾಡುತ್ತಿತ್ತು.

ರವಿವಾರ ಸಾಲಿ ಸೂಟಿ ಇತ್ತು. ಅಜ್ಜಪ್ಪ ಲಗೂನ ಎದ್ದು ಗುಡಿಗೆ ಬಂದು ಅಂಗಳ ಕಸಾ ಗೂಡಿಸಿ, ನೀರು ಚಿಮುಕಿಸಿ, ಕೈಕಾಲು ಮುಖ ತೊಳೆದು ನೀಟಾಗಿ ಟವಲ್ಲಿಂದ ವರಸಿಕೊಂಡು ಗರ್ಭಗುಡಿಯಲ್ಲಿರು ದೇವರ ಸನ್ನಿದಾನಕ್ಕೆ ಹೋಗಿ. ಭಂಡಾರದೊಡೆಯನ ಮುಂದೆ ಅಡ್ಡಬಿದ್ದು ಹಣಿಮನಿಸಿ, ಹಣೆತುಂಬಾ ಭಂಡಾರ ಬಡೆದುಕೊಂಡು ಎಣ್ಣಿಗಂಬಕ್ಕೂ ಹಣಿ ಒತ್ತಿ. ಅಜ್ಜಪ್ಪ ಗುಡಿ ಬಾಗಿಲು ದಾಟಿ ನಾಕ್ಹೆಜ್ಜೆ ಮುಂದೆ ಹೋಗಿದ್ದ. ಅಷ್ಟರಲ್ಲಿಯೇ ಹಿಂದಿನಿಂದ ಭರಮಪ್ಪ ಅಜ್ಜಪ್ಪನ ಹಿಡಿದು ರಪಾರಪಾ ಹೊಡೆಯಲು ಸುರುಮಾಡಿದ. ಅಂವನ ಹೊಡೆತಕ್ಕೆ ಅಜ್ಜಪ್ಪ “ಅಯ್ಯೋ.. ಯಪ್ಪೋ” ಎಂದು ಅರ್ಧ ಊರಿಗೆ ಕೇಳುವಂತೆ ಕಿರಚತೊಡಗಿದ. ಇದ್ದಬಿದ್ದವರೆಲ್ಲಾ ಗ್ವಾಳಿಯಾದರೂ. “ಏನಾತು ಏನಾತು” ಎಂದು ಕೂಡಿದ ಮಂದಿ ಕೇಳುತ್ತಿದ್ದರೂ ಭರಮಪ್ಪ ಹುಡುಗನನ್ನು ಬಲ್ಲಂಗ ಹೊಡೆಯುತ್ತಿದ್ದ. ನೋಡಿದ ಮಂದಿ ಅವನನ್ನು ಹಿಡಿದು ದೂರ ತಳ್ಳಿದರು. ಅಜ್ಜಪ್ಪ ಏಟು ತಿಂದ ಹಾವಿನಂತೆ ನೆಲದ ಮೇಲೆ ಹೊರಳಾಡುತ್ತಿದ್ದ. “ಈ ಬಡ್ಡಿ ಮಗಾ ದೇವ್ರ ಮೈಮ್ಯಾಲಿಂದ ಬಂಗಾರ ಕದ್ದಾನ” ಎಂದು ಮತ್ತೆ ಹುಡುಗನನ್ನು ಹೊಡೆಯಲು ಹವನಿಸಿದ. ಅಲ್ಲಿದ್ದವರಿಗೆ ಭರಮಪ್ಪನ ಮಾತಿನ ಮೇಲೆ ನಂಬಿಕೆ ಬರಲಿಲ್ಲ. ಅಜ್ಜಪ್ಪ ಅಂಥ ಹುಡುಗ ಅಲ್ಲ ಎನ್ನುವುದು ಇಡೀ ಊರಿಗೆ ತಿಳಿದಿತ್ತು. “ಯಾವ ಹುತ್ತದೊಳಗೆ ಯಾವ ಹಾವು ಇರುತ್ತದೆಯೋ ಯಾರು ಬಲ್ಲರು” ಎಂದು ಭರಮಪ್ಪನ ಬಾಲಂಗೋಸಿಯೊಬ್ಬ ನುಡಿದ ಮಾತಿಗೆ ಎಲ್ಲರೂ ಸುಮ್ಮನಾದರು. ಸತ್ಯಯಾವುದೋ ಸುಳ್ಳು ಯಾವುದೋ ಅನ್ನುವುದು ತಿಳಿಯದೇ ಊರ ಮಂದಿ ಗೊಂದಲಕ್ಕೆ ಬಿದ್ದರು.

ಅಜ್ಜಪ್ಪಾ “ನಾ ದೇವ್ರ ಮ್ಯಾಲಿನ ಬಂಗಾರ ನಾ ಕದ್ದಿಲ್ರಪೋ, ಈ ಭರಮಪ್ಪ ಮಾಂವ ಸುಳ್ಳ ಅಪಾದನೆ ನನಗ ಹೊರಸಾಕತ್ತಾನ್ರೋ” ಎಂದು ರೊಂಯ್ ಗುಡುತ್ತಿದ್ದ. “ಕದ್ದಕೊಂಡ ಹೋಗಿ ಸುಳ್ಳೊಂದ ಸೊಟ್ಟೊಂದ ಮಾತಾಡ್ತಿ ಏನೋ ಹಲಕಟ್ಟಾ” ಎಂದು ಮತ್ತೆ ಗಧರಿಸಿದ. ಭರಮಪ್ಪನ ಬಾಲಂಗಸಿಗೋಳು ಇಂವss ಕದ್ದದ್ದ ನಮಗ ಖಾತ್ರಿ ಐತೆಂದು ಜವಾಬ್ ಕೊಟ್ಟಾಗ ಊರ ದೈವವೆಲ್ಲ ಅವರ ಮಾತು ನಂಬುವ ಪ್ರಸಂಗ ಬಂದಿತು.
ಸುದ್ದಿ ಕೇಳಿದ ಗಂಗವ್ವ ಬಿದ್ದಕೋತ ಎದ್ದಕೋತ ಗುಡಿಕಡೆ ಓಡಿ ಬಂದ್ಳು. ಮೊಮ್ಮಗನ ಮೈಮ್ಯಾಲ ಬಿದ್ದ ಏಟಾ ನೋಡಿ ಭರಮಪ್ಪನ ಒಂದು ಎರಡು ಉಳಸದ್ಹಂಗ ಬೈದ್ಳು. ಊರ ಮಂದಿಯೆಲ್ಲ “ನಿನ್ನ ಮೊಮ್ಮಗಂದ ತಪ್ಪ ಇಟಗೊಂದ ಅವನ್ಯಾಕ ಬೈತಿಬೇ” ಎಂದು ಕವ್ ಕವ್ ಮಾಡಿದಾಗ ಗಂಗವ್ವ ಗುಡಿಯಾಗಿದ್ದ ದೇವ್ರಿಗೆ ಶಾಪಾ ಹಾಕಿದ್ಳು.

“ಕದ್ದ ಎರಡ ತ್ವಲಿ ಬಂಗಾರ ಕೊಡ್ಬೇಕು, ಇನ್ನ ಮ್ಯಾಲಿಂದ ಈ ಕಳ್ಳ ಈ ಗುಡಿಯಾಗ ಕಾಲ ಊರುವಂಗಿಲ್ಲೆಂದು” ಊರವರ ಮುಂದ ಭರಮಪ್ಪ ಡಂಗರ ಹೊಡೆದ್ಹಂಗ ಜೋರಾಗಿ ಹೇಳಿದ. ಅಜ್ಜಪ್ಪ ಮ್ಯಾಲೆದ್ದು ನೆಡಿಯಾಕ ಬಾರದಷ್ಟು ನೋವು ತಿಂದು ಗುಡಿಗೆ ಬೆನ್ನು ತೋರಿಸಿಕೊಂಡು ಅವರ ಅಜ್ಜಿಯ ಕೈ ಆಸರೆ ಮಾಡಿಕೊಂಡು ನೆಡೆಯುತ್ತ ಹೋಗುವುದನ್ನು ಊರ ಮಂದಿಯಲ್ಲ ನಿಂತು ನೋಡುತ್ತಿತ್ತು.

ಮಗನ ಮ್ಯಾಲ ಹರಲಿ ಹೊರಸಿದ ಕತಿ ಕೇಳಿ ರೇಣವ್ವ ಕೊಣ್ಣೂರ ಬಸ್ಸ ಹತ್ತಿ ಗಾಬರಿಗೆಟ್ಟು ಬಂದಿದ್ಳು. ಮಗನ ಮೈಮ್ಯಾಲ ಬಿದ್ದ ಏಟಿಗೆ ಅಂಗೈ ಅಗಲ ಬಾರ ಮುಡಿದ್ದು ಕಂಡು ತಾಯಿ ಕರಳು ಚುರುಚುರು ಚುರುಗುಟ್ಟಿ ಬೋರಾಡಿ ಅತ್ತಿದ್ಳು. ಗಂಗವ್ವ “ನಾನು ನಿನ್ನ ಮಗನಿಗೆ ಕಳ್ಳ ಅಪಾದನೆ ಹರಲಿ ಹೊರಸಾಕ ಇಲ್ಲಿಗೆ ಕರ್ಕೊಂಡ ಬಂದಿನವ್ವೋ ಮಗಳೆ” ಎಂದು ಅಳತೊಡಗಿದಳು. “ನೀ ಯಾಕ ಅಳತಿ ಸುಮ್ನಿರವ್ವಾ ಆ ಗುಡಿಯಾನಜ್ಜ ಅವರಿಗೆ ಏನ್ ತೋರಸ್ಬೇಕ ಅದನ ತೋರಸ್ತಾನ” ಈಗ ಸುಮ್ಮನಾಗು ಎಂದು ತಾಯೀನ ಸಮಾಧಾನ ಮಾಡಿದ್ಳು. “ಇನ್ನ ಮ್ಯಾಲಿಂದ ಅಜ್ಜಪ್ಪಾ ಇಲ್ಲಿ ಇರೂದ ಬ್ಯಾಡ. ಅಂವ್ನ ನಮ್ಮೂರಿಗೆ ಕರ್ಕೊಂಡ ಹೊಕ್ಕಿನೆಂದು” ಮಗಳ ಹೇಳಿದ ಮಾತಿಗೆ ಗಂಗವ್ವಗ ನಾಲಿಗೆ ಹೊರಳಲಿಲ್ಲ, ಮಾತು ಬರಲಿಲ್ಲ. ಸುಮ್ಮನಾದಳು. “ನನ್ನ ಮಗನ ಮ್ಯಾಲ ಹೆಂಥಾ ಅಪಾದನೆ ಹೆರಿಸದಪ್ಪಾ ಭಂಡಾರದೊಡೆಯ” ಎಂದು ದೂರದಿಂದಲೇ ಗುಡಿಯತ್ತ ಕೈ ಮುಗಿದು ಮಗನನ್ನು ಕರೆದುಕೊಂಡು ರೇಣವ್ವ ಮಂಟೂರಿನ ಹಾದಿ ಹಿಡಿದಳು. ಆಗ ಹೊತ್ತು ಮುನಗಿತ್ತು.
*

ಅಜ್ಜಪ್ಪ ಹೈಸ್ಕೂಲ್ ಮುಗಿಯುವುದರೊಳಗಾಗಿ ನೂರಕ್ಕಿಂತ ಹೆಚ್ಚು ಡೊಳ್ಳಿನ ಪದಗಳನ್ನು ಬಾಯಿಪಾಟ ಮಾಡಿದ್ದ. ತಾನೊಬ್ಬನೇ ಅವರಪ್ಪನೊಂದಿಗೆ ರವಿವಾರ ಕುರಿ ಕಾಯಲು ಹೋದಾಗ ಗುಡ್ಡದ ತುತ್ತ ತುದಿಯಲ್ಲಿ ಕುಳಿತು ಮನತುಂಬಿ ಪದ ಹಾಡುತ್ತಿದ್ದ. ಅಜ್ಜಪ್ಪನ ಪದ ಕೇಳಿ ಕುರಿಗಳು ಬ್ಯಾ ಬ್ಯಾ ಎಂದು ಅಭಿನಂದಿಸುತ್ತಿದ್ದವು. ಗುಡ್ಡದಲ್ಲಿದ್ದ ತರಾವರಿ ಮುಳ್ಳುಕಂಟಿಗಳು ನಾಚುತ್ತಿದ್ದವು, ಆಗಸದಲ್ಲಿದ್ದ ಹಾರಾಡುವ ಒಲಸೆ ಹಕ್ಕಿಗಳು ಅಜ್ಜಪ್ಪನ ದನಿಗೆ ಪಿದಾ ಆಗಿ ಅವನ ಸುತ್ತಮುತ್ತಲೇ ಗಿರಕಿ ಹೊಡೆಯುತ್ತಿದ್ದವು. ಎಲೆಯ ಮರೆಯ ಕಾಯಿಯಂತೆ ಅಜ್ಜಪ್ಪನ ಪ್ರತಿಭೆ. ಆ ಪ್ರತಿಭೆಗೆ ಇಂಬು ಸಿಗದೇ ಚಡಪಡಿಕೆ ಶುರುವಾಗಿತ್ತು. ಅದಕ್ಕೂ ಒಂದು ಹೊತ್ತು ಕಾದು ಕುಳಿತಿತ್ತು.

ಹುಲಜಂತಿ ಮಾಳಿಂಗರಾಯನ ಜಾತ್ರೆಗೆ ರೇಣವ್ವ ಅಜ್ಜಪ್ಪನನ್ನು ಕರೆದುಕೊಂಡು ಹೋಗಿದ್ದಳು. ಅವರಜ್ಜಿ ಗಂಗವ್ವಳೂ ಕೊಣ್ಣೂರಿನಿಂದ ಆಜುಬಾಜು ಮನೆಯವರೊಂದಿಗೆ ಕೂಡಿಕೊಂಡು ಬಂದಿದ್ದಳು. ಮಗಳು, ಮೊಮ್ಮಗನನ್ನು ಕಂಡ ಕೂಡಲೇ ಬಿಸಿಲಲ್ಲಿ ಬಾಯಾರಿದಾಗ ತಣ್ಣೀರು ಸಿಕ್ಕಷ್ಟು ಮನಸ್ಸಿಗೆ ಆನಂದವಾಯಿತು.

ಮಾಳಿಂಗರಾಯನ ಸಡಗರ ನೋಡಲು ಕಣ್ಣಿಗೆ ಹಬ್ಬವಾದರೆ, ಮನಸ್ಸಿಗೆ ಉತ್ಸವ. ಇಡೀ ಅಥಣಿ, ರಾಯಬಾಗ, ಗೋಕಾಕ, ಬೆಳಗಾವಿ ಭಾಗದ ಭಕ್ತರೆಲ್ಲರೂ ಜಾತ್ರೆಯಲ್ಲಿ ಗುಬುಗುಡುತ್ತಿದ್ದರು. ಬೇರೆ ಬೇರೆ ಜಿಲ್ಲೆಯಿಂದಲೂ ಸಾವಿರಾರು ಭಕ್ತರು ಬಂದು ಜಾತ್ರೆಯ ಸೊಬಗನ್ನು ಮತ್ತಷ್ಟು ಹೆಚ್ಚಿಸಿದ್ದರು. ಜಾತ್ರೆಯ ನಿಮಿತ್ಯವಾಗಿ, ಟಗರಿನ ಕಾದಾಟ, ಎತ್ತಿನ ಬಂಡಿಯ ರೇಸ್, ಡೊಳ್ಳಿನ ಕುಣಿತ, ಡೊಳ್ಳಿನ ಪದ ಹಾಡುಗಾರಿಕೆ ಹೀಗೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಕರು ಹಮ್ಮಿಕೊಂಡು, ಬಂದ ಭಕ್ತರಿಗೆ ರಂಜನೆ ನೀಡುತ್ತಿದ್ದರು.

ರಾತ್ರಿಯ ಹೊತ್ತು ಶುರುವಾಗುವ ಡೊಳ್ಳಿನ ಪದದ ಹಾಡುಗಾರಿಕೆ ಕೇಳಲು ಜಾತ್ರೆಯ ಜನರೆಲ್ಲರೂ ಹಾಡುಗಾರಿಕೆ ಶುರುವಾಗುವ ಮೊದಲೇ ವೇದಿಕೆಯ ಮುಂಬಾಗದಲ್ಲಿ ತಮ್ಮ ಹಾಸಿಗೆ ಸಮೇತ ಜಾಗ ಹಿಡಿದುಕೊಂಡು ಟಿಕಾನಿ ಹುಡಿಕೊಂಡಿರುತ್ತಿದ್ದರು. ಇಡೀ ರಾತ್ರೀ ಬೀರದೇವರ ಚರಿತೆ, ಮಾಳಿಂಗ ದೇವರ ಚರಿತೆ, ಕರಿಸಿದ್ಧನ ಚರಿತೆ, ಅವರ ಲೀಲೆಗಳ ಕುರಿತು ಹಾಡಲು ನಾಡಿನ ಮೂಲೆ ಮೂಲೆಯಿಂದ ತಂಡದವರು ಬಂದಿದ್ದರು. ಮೊದಲು ಬಂದವರಿಗೆ ವಿಶೇಷವಾದ ಬಹುಮಾನ ನೀಡುವ ವಾಡಿಕೆಯನ್ನು ಆಯೋಜಕರು ಮೈಕಿನಲ್ಲಿ ಆಗಾಗ ಘೋಷನೆ ಕೂಗುತ್ತಿದ್ದರು.

ಕೊಣ್ಣೂರಿನ ಸಿದ್ದಪ್ಪಜ್ಜನ ಡೊಳ್ಳಿನ ಮ್ಯಾಳದವರೂ ಬಂದಿದ್ದರು. ಮುಂದೆ ಅವರವ್ವ ಮತ್ತು ಅವರಜ್ಜಿಯೊಂದಿಗೆ ಕುಂತು ನೋಡುತ್ತಿದ್ದ ಅಜ್ಜಪ್ಪನಿಗೆ ಕೊಣ್ಣೂರ ಮ್ಯಾಳದವರ ಹೆಸರು ಮೈಕಿನಲ್ಲಿ ಕೂಗಿದಾಗ ಅವನ ಮನದಲ್ಲಿ ಆನಂದದ ಹೊಳೆ ಉಕ್ಕಿ ಹರೆಯತೊಡಗಿತು. ಅದರಲ್ಲೂ ತನ್ನನ್ನು ತುಂಬಾ ಪ್ರೀತಿಸುವ ಹಿರೇ ಪೂಜಾರಿ ಸಿದ್ದಪ್ಪಜ್ಜ ಬಂದಿದ್ದಕ್ಕೆ ಹುಡುಗನ ಸಂಭ್ರಮ ಇಮ್ಮಡಿಯಾಗಿತ್ತು.

ಮೊದಲನೇ ಡೊಳ್ಳಿನ ತಂಡದವರಿಂದ ಬೀರದೇವರ ಪದ ಸುರುವಾಯಿತು. ಹಾಡುಗಾರರ ರಾಗ ತಾಳಕ್ಕೆ ಅಜ್ಜಪ್ಪನ ಕೈಕೂದಲು ನಿಮರಿನಿಂತಿದ್ದವು. ಹಾಗೇ ಒಂದರ ನಂತರ ಮತ್ತೊಂದು ತಂಡದವರು ಹಾಡಿ ಸೈ ಅನಿಸಿಕೊಂಡರು. ಅದೇ ಹುಲಜಂತಿ ಊರಿನ ತಂಡದವರು ಹಾಡಲು ವೇದಿಕೆಗೆ ಬಂದಾಗ ಆ ಊರಿನ ಜನ ಕೇ ಕೇ ಹಾಕಿ ಅವರನ್ನು ಹೆಚ್ಚು ಹುರುದುಂಬಿಸಿದರು. ಮಾಳಿಂಗರಾಯನ ಬಾಲ ಲೀಲೆಯ ಮೇಲೆ ಪದಕಟ್ಟಿ ಹಾಡಿ ಜನರಿಗೆ ಭಕ್ತಿರಸ ಮನತುಂಬ ಹನಿಸಿದರು.

ಅಜ್ಜಪ್ಪ ಬೇರಗಾಗಿ ಕಾಯುತ್ತಿರುವ ಕೊಣ್ಣೂರ ತಂಡದವರು ವೇದಿಕಿಗೆ ಬಂದರು. ಅವರೆಲ್ಲರೂ ತನಗೆ ಗೊತ್ತಿದ್ದವರು. ಅವರೊಟ್ಟಿಗೆ ಕಳೆದ ತನ್ನ ಬಾಲ್ಯದ ದಿನಗಳ ಅನುಭವವನ್ನು ಕುಂತಜಾಗದಲ್ಲಿಯೇ ಮೆಲಕು ಹಾಕಿದ. “ಕರಿಸಿದ್ಧ”ನ ಕುರಿತು ಹಾಡಲು ಗಂಟಲ ಸರಿಪಡಿಸಿಕೊಂಡು ಸಿದ್ದಪ್ಪಜ್ಜ ಸಜ್ಜಾದ. ಸಿದ್ದಪ್ಪಜ್ಜ ತನ್ನ ಮೇಲೆ ಅಗಾದವಾದ ಪ್ರೀತಿ, ನಂಬಿಕೆ ಇಟ್ಟಿದ್ದ. ಅಂದು ಸಿದ್ದಪ್ಪಜ್ಜ ಗುಡಿಯಲ್ಲಿ ಇದ್ದಿದ್ದರೆ ನನಗೆ ಈ ಕಳ್ಳತನದ ಅಪಾದನೆ ಬರುತ್ತಿರಲಿಲ್ಲ. ಅಂವ ಅಂದು ಜ್ವರದಿಂದ ತತ್ತರಿಸಿ ನಾಕು ದಿನ ಗುಡಿಗೆ ಬರದಿದ್ದಾಗ ನನ್ನ ಜೀವನದಲ್ಲಿ ದೇವರು ಇಂಥದೊಂದು ಅನಾಹುತ ಮಾಡಿಬಿಟ್ಟನೆಂದು ಅಜ್ಜಪ್ಪ ಹಳಹಳಿಸಿದ.

“ಸ್ವಾಮಿ ನಮ್ಮಯ ದೇವರು ಬಂದಾನ ನೋಡಿರೇ
ಗುರುವೇ ನಮ್ಮ ದೇವರು ಬಂದಾನ ನೋಡಿರೇ”
ಎಂದು ಸಿದ್ದಪ್ಪಜ್ಜ ಪದ ಪ್ರಾರಂಬಿಸಿದ. ಆ ಹೊತ್ತಿಗೆ ಅಂವನಿಗೆ ವಿಪರೀತ ಕೆಮ್ಮು ಬಂದು ಗಂಟದಲ್ಲಿಯೇ ದನಿಯನ್ನು ಹಿಚಗಿತು. ಮತ್ತೆ ಕೊಸ ಕೊಸ ಕೆಮ್ಮಿ ಹಾಡಲು ಸುರುಮಾಡಿದ. ದನಿಯಲ್ಲಿ ಸ್ವಾದ ಇರಲಿಲ್ಲ. ಮತ್ತೆ ಕೆಮ್ಮು ಜೋರಾಯಿತು. ಮುಂದೆ ಕುಳಿತ ಜನರು ನಗತೊಡಗಿದರು. ಕೆಲವರು “ಕೆಳಗಿಳಿಯಪೋ” ಎಂದು ಕಿರಚಿದರು. ಸಿದ್ದಪ್ಪಜ್ಜ ನೀರು ಕುಡಿದು ಗಂಟಲ ಮತ್ತೆ ಸರಿಪಡಿಸಿಕೊಳ್ಳಲು ಹೆಣಗಾಡಿದ. ಹಾಳಾದ ಕೆಮ್ಮು ಅವನನ್ನು ಅಪಮಾನಕ್ಕೀಡು ಮಾಡತೊಡಗಿತು. ಆ ತಂಡದಲ್ಲಿ ಅವನ ಹೊರತುಪಡಿಸಿ ಮುಂಚೂನಿಯಲ್ಲಿ ಹಾಡವರ್ಯಾರೂ ಇರಲಿಲ್ಲ. ತಂಡದ ಅಳಿವು ಉಳಿಯು ಸಿದ್ದಪ್ಪಜ್ಜನ ಮೇಲೆ ನಿಂತಿತ್ತು. ಹಿಮ್ಮೇಳದವರು ಗುಜುಗುಜು ಮಾತಾಡುವುದು ಕೇಳುಗರ ಕಿವಿಯಲ್ಲಿಗುಂಗಾಡ ಹೊಕ್ಕಂತನಿಸಿ ಚಿಟ್ಟನೇ ಚೀರತೊಡಗಿದರು. ಆಗ ತಳಗೆ ಕುಳಿತ ಅಜ್ಜಪ್ಪ ಓಡಿ ಹೋಗಿ ವೇದಿಕೆ ಹತ್ತಿದ. ಸಿದ್ದಪ್ಪಜ್ಜನ ಪಾದ ಮುಟ್ಟಿ ನಮಸ್ಕರಿಸಿದ. “ಅಜ್ಜಾ ನಾ ಹಾಡ್ತೀನಿ ನೀ ಹಿಂದಕ ಸರದ ಕುಂದ್ರೇಂದು” ಹೇಳಿದ. ಹಿಮ್ಮೇಳದವರು “ಲೇ ಅಜ್ಜಪ್ಪಾ ಇದೇನ ಸಿನಮಾ ಹಾಡ ಹಾಡಿದ್ಹಂಗ ಮಾಡಿಯೇನೆಂದು” ಅಂವನ ಕೆನಕಿದರು. ಅಜ್ಜಪ್ಪ ರಾಗ ಹಿಡಿದು ಆಲಾಪನೇ ಮಾಡಿದ. ಇಡೀ ಜಾತ್ರೆಯ ಜನ ಮೂಕರಾದರು. ಮಗನ ಪದ ಕೇಳುವಾಗ ರೇಣವ್ವನ ಕಣ್ಣಲ್ಲಿ ಆನಂದದ ಕಣ್ಣೀರು ತಟಗುಡುತ್ತಿದ್ದವು. ಗಂಗವ್ವ ನನ್ನ ಮೊಮ್ಮಗ ಒಂದಿಲ್ಲೊಂದು ದಿನಾ ಹಾಡುಗಾರ ಅಕ್ಕಾನ ಅವತ್ತು ಅಂದುಕೊಂಡದ್ದು ನೆನಿಸಿಕೊಂಡು ಅವಳೂ ಅಳುತ್ತಳು.

ಅಜ್ಜಪ್ಪನ ಹಾಡುವುದನ್ನು ಬೇರೆ ಬೇರೆ ತಂಡದಿಂದ ಬಂದ ಗವಾಯಿಗಳು ಕಲ್ಲು ಮೂರ್ತಿಯಂತೆ ಕುಂತು ಕೇಳಿ.ಮನದಲ್ಲಿ “ಹೌದೌದು”, “ವಾರೆವಾ” ಅನ್ನುತ್ತ ತಲೆದೂಗಿದರು. ಇಡೀ ಜಾತ್ರೆಯ ಜನರು ಅಜ್ಜಪ್ಪನ ಪದ ಮುಗಿದ ನಂತರ ಕೇ ಕೇ ಸಿಳ್ಳೆ, ಚಪ್ಪಾಳೆಯ ಸುರಮಳೆಯನ್ನು ಸುರಿಸಿದರು.
ಒಂದೊಂದು ತಂಡದವರು ಮೂರು ಮೂರು ಬಾರಿ ಹಾಡಿ ತಮ್ಮ ಹಾಡುಗಾರಿಕೆಯ ಸಾಮರ್ಥ ತೋರಿಸಿದರು. ಕೊನೆಗೆ ಆಯೋಜಕರ ನಿರ್ಣಯದಂತೆ ಕೊಣ್ಣೂರು ತಂಡದವರು ಮೊದಲ ಬಹುಮಾನಕ್ಕೆ ಪಾತ್ರರಾದರು. ಕೊಣ್ಣೂರ ಮ್ಯಾಳದ ಮಾನ, ಅಪಮಾನ ಕಾಪಾಡಿ, ಮೊದಲ ಬಹುಮಾನ ತಂದುಕೊಟ್ಟ ಅಜ್ಜಪ್ಪನನ್ನು ಹೆಗಲ ಮೇಲೆ ಹೊತ್ತು ಹಿರೇಪೂಜಾರಿ ಸಿದ್ದಪ್ಪಜ್ಜ ಕುಣಿದಾಡಿದನು. ಉಳಿದವರು ಅವನ ಮೇಲೆ ಬಂಡಾರ ಎರಚಿ ಸಂಭ್ರಮಿಸಿದರು.
ಅಂದು ಕೊಣ್ಣೂರ ತುಂಬ ಅಜ್ಜಪ್ಪನ ಮಾತೇ ಮಾತು. “ಕರಿಸಿದ್ಧ” ದೇವನ ಮೇಲೆ ಡೊಳ್ಳಿನ ಪದಾ ತಾನೇ ಸ್ವತಾ ಪದಾ ಕಟ್ಟಿ ಹಾಡಿ ಹುಲಜಂತಿ ಜಾತ್ರೆಯಲ್ಲಿ ಮೊದಲ ಬಹುಮಾನ ತಂದು ಕೊಟ್ಟ. ಗಂಗವ್ವನ ಮೊಮ್ಮಗ ಅಜ್ಜಪ್ಪನ ದನಿ ಕೋಗಿಲೆಗಿಂತ ಒಂದು ಕೈ ಮೇಲು ಎಂದು ಇಡೀ ಊರ ಜನರ ಮನೆ ಮನದ ಬಾಗಿಲು ಮುಟ್ಟಿತ್ತು.

“ಅಜ್ಜಪ್ಪನ ಮೇಲೆ ಅಂದು ಸುಳ್ಳು ಅಪಾದನೆ ಹೊರಸಿ ತನ್ನೆರಡು ಗಂಡು ಮಕ್ಕಳನ್ನು ಕಳಕೊಂಡ, ಈಗ ಲಕ್ವಾ ಹೊಡದು ನೆಲ ಹಿಡಿದು ಸಾಯಾಕತ್ಯಾನ ಮುಂಡೆ ಮಗಾ” ಎಂದು ಊರ ತುಂಬ ಜನರು ಅಲ್ಲಲ್ಲಿ ಭರಮಪ್ಪನಿಗೆ ಆಡುವ ಮಾತು ಕೇಳಿ ಗಂಗವ್ವ ಮತ್ತೊಮ್ಮೆ ಕಣ್ಣೊರಸಿಕೊಂಡಳು.

“ಸತ್ತುಳ ದೇವ್ರು ಸತ್ಯವಂತರ ಪಾಲಿಗೆ ಸಾವುತನಾ ಇರ್ತಾನ್ರೋ…
ಸುಳ್ಳರ ಕಳ್ಳರ ಖದೀಮರ ಆಟಾ ಜಗದಾಗ ಹೆಚ್ಚು ದಿನ ನೆಡೆಯುದಿಲ್ರೋ
ಆನಿ ಮಾಡಿ ನಿಮಗ ಮಾತೊಂದ ಹೇಳ್ತಿನಿ ನನ್ನ ಮಾತು ಸುಳ್ಳಲ್ರೋ
ಕರಿಸಿದ್ಧನ ಕೈಯಾನ ಬೆತ್ತದಾನೆಗೂ ಈ ಮಾತ ನಿಜವಂತ ನಿಂವ ತಿಳಿರೋ”
“ಅಂದು ಅಜ್ಜಪ್ಪ ಜಾತ್ರೆಯಲ್ಲಿ ಹಾಡಿದ ಪದ ತನ್ನ ಬದುಕನ್ಯಾಗ ನೆಡದದ್ದೇ” ಎಂದು ಸಿದ್ದಪ್ಪಜ್ಜ ಗುಡಿಯಾನ ದೇವರಿಗೆ ಮಂಗಳಾರತಿ ಮಾಡುವ ಹೊತ್ತಲ್ಲಿ ಇದ್ದಕ್ಕಿದ್ದಂತೆ ನೆನಸಿಕೊಂಡ. ಆ ಹೊತ್ತಲ್ಲಿ ದೇವರ ಬಲಬದಿಯಿಂದ ಹಳದಿ ಹೂವೊಂದು ಉದರಿ ಹೌದೆನ್ನುವ ಸೂಚನೆ ಕೊಟ್ಟದ್ದು ಕಂಡು ಬೆರಗಾದ. ಆಗ ಅಜ್ಜಪ್ಪನ ಹೋಲಿಕೆಯೊಂದು ಅಲ್ಲೆ ಸುಳಿದಾಡಿದಂತೆ ಅನಿಸಿ, ಎಷ್ಟೋ ಹೊತ್ತು ಹಿರೇಪೂಜಾರಿ ಮೂಕನಾಗಿ ಅಲ್ಲೇ ನಿಂತುಕೊಂಡು ತಾನು ನಿತ್ಯವೂ ಪೂಜಿಸುವ ದೇವರನ್ನೇ ನೋಡತೊಡಗಿದ.

-ತಿರುಪತಿ ಭಂಗಿ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x