”ಕನಸಿನವರು”: ನಾಗಸಿಂಹ ಜಿ ರಾವ್ 

ಸಿಂಹಾವಲೋಕನ – 5

ವೇಣುಜೀಯವರ ”ಹೆಣಗಳು ” ಬೀದಿನಾಟಕದ ಅಭ್ಯಾಸ ನಡೆದಿತ್ತು, ನೀರಿನ ಸಮಸ್ಯೆಯಿಂದ ಹಿಡಿದು ಮಾನವನ ಸಂಕುಚಿತ ಮನೋಸ್ಥಿತಿಯ ಬಗ್ಗೆ ಕನ್ನಡಿ ಹಿಡಿದ ನಾಟಕ ಅದು. ಗಣಪತಿ ಹಬ್ಬದ ನಂತರ ಆ ನಾಟಕದ ಪ್ರದರ್ಶನ ಇತ್ತು. ಮೈಸೂರಿನಲ್ಲಿ ಗಣಪತಿ ಪೆಂಡಾಲುಗಳಲ್ಲಿ ‘ಸುಂದರ ಸಾಮಾಜಿಕ’ ನಾಟಕಗಳು ಪ್ರದರ್ಶನ ವಾಗುತ್ತಿದ್ದವು. ಹಾಸ್ಯ,, ಜನರನ್ನು ಹೇಗಾದರೂ ನಗಿಸುವ ಉದ್ದೇಶದ ನಾಟಕಗಳು, ನಾಟಕಗಳಿಗಿಂತ ವಾದ್ಯಗೋಷ್ಠಿಗಳು ಹೆಚ್ಚು ಪ್ರಸಿದ್ದಿ ಪಡೆದಿದ್ದವು. ಒಂದು ದಿನ ನಾವು ನಾಟಕ ಅಭ್ಯಾಸ ಮಾಡುವಾಗ ಪಾಪು ”ನಾಳೆ ಸಂಜೆ ಗಾಯತ್ರಿ ಪುರಂ ಗಣಪತಿ ಪೆಂಡಾಲಿನಲ್ಲಿ ನಮ್ಮ ಕನಸಿನವರು ನಾಟಕ ಇದೆ ” ಎಂದರು. ಕನಸಿನವರು ಪಾಪು ಬರೆದ ನಾಟಕ, ಆ ನಾಟಕದ ಬಗ್ಗೆ ಕೆಲವೊಮ್ಮೆ ಗುಂಪಿನಲ್ಲಿ ಚರ್ಚೆ ಆಗುತ್ತಿತ್ತು,ಆದರೆ ನಾನು ಆ ನಾಟಕ ಓದಿರಲಿಲ್ಲ, ನಾಟಕ ನೋಡಿರಲಿಲ್ಲ. ಮರುದಿನ ಸಂಜೆ ಗಾಯತ್ರಿಪುರಂ ಗೆ ಹೊರಟಾಗ ಕನಸಿನವರು ಒಂದು  ‘ಸುಂದರ ಸಾಮಾಜಿಕ’ ನಾಟಕ ಇರಬೇಕು ಎಂಬುದೇ ನನ್ನ ಕಲ್ಪನೆಯಾಗಿತ್ತು. 

ಮರುದಿನ ಸಂಜೆ ಸುಮಾರು ನಾವು ಸುಮಾರು ಹತ್ತು ಜನ ಅಂಕ ಕಲಾವಿದರು ಸೈಕಲ್ ನಲ್ಲಿ ಗಾಯತ್ರಿ ಪುರಂಗೆ ಹೊರಟೆವು. ಕಾಶಿ, ಶಿವಾಜಿ, ಚಂದ್ರಮೌಳಿ, ಧೀರನಾಥ್, ಹೆಬ್ಬಾಲೆ ಶ್ರೀನಿವಾಸ್, ಪಾಪು ಪಾತ್ರದಾರಿಗಳು, ನಾನು ಪ್ರೇಕ್ಷಕರ ನಡುವೆ ಕುಳಿತೆ. ಸುಮಾರು ಇನ್ನೂರು ಜನ ಸೇರಿದ್ದರು. ನಾಟಕ ಪ್ರಾರಂಭವಾಯಿತು. ಕನಸುಗಳನ್ನು ಮಾರುತ್ತಾ ಬರುವ ಮಾಂತ್ರಿಕ ಕೆಲವರಿಗೆ ಕನಸುಗಳನ್ನು ಮಾರುತ್ತಾನೆ ಒಬ್ಬ ತನ್ನ ಕನಸಿನಲ್ಲಿ ಜನನಾಯಕನಾಗುತ್ತಾನೆ,ಮತ್ತೊಬ್ಬ ಸರ್ಕಾರೀ ಅಧಿಕಾರಿ, ಮೊತ್ತೊಬ್ಬ ವಕೀಲ, ಮಗದೊಬ್ಬ ಪತ್ರಕರ್ತ, ಕೊನೆಗೆ ಉಳಿದ ವ್ಯಕ್ತಿ ಕೂಲಿ ಅವನಿಗೆ ಕನಸೇ ಬರುವುದಿಲ್ಲ ಆದರೂ ಬಲವಂತವಾಗಿ ಕೂಲಿಯ ಕನಸು ಕಾಣತೊಡಗುತ್ತಾನೆ. ಇಂತಹ ಅದ್ಬುತ ಕಲ್ಪನೆ, ಈ ನಾಟಕ ಸರ್ವಕಾಲಿಕ ನಾಟಕ. ಪ್ರಜಾಪ್ರಭುತ್ವ ನಾಲ್ಕು ಸ್ಥ೦ಬಗಳ  ನಡುವೆ ಸಾಮಾನ್ಯ ಪ್ರಜೆ, ಸರ್ಕಾರದ ನೀತಿಗಳು, ಕಾನೂನುಗಳು ಶ್ರೀಸಾಮಾನ್ಯನ ಮೇಲೆ ಹೇಗೆ ಪರಿಣಾಮ ಬೀರುತ್ತವೆ,ಶೋಷಣೆ,ದೌರ್ಜನ್ಯ ಗಳನ್ನು ವಿಡಂಬನೆಯ ಮೂಲಕ ಎಳೆ ಎಳೆಯಾಗಿ ಬಿಚ್ಚಿಡುವ ಏಕಾಂಕ ನಾಟಕ. ಸುಮಾರು ಒಂದು ಗಂಟೆಗಳ ಕಾಲ ಮಂತ್ರಮುಗ್ದನಾಗಿ ನಾಟಕವನ್ನು ನೋಡಿದೆ. ಕನಸಿನವರು ನಾಟಕವನ್ನು ನಾನು ಮೊದಲ ಬಾರಿಗೆ ನೋಡಿದ್ದು 1985 ರ ಸೆಪ್ಟೆಂಬರ್ ನಲ್ಲಿ ಸುಮಾರು ನಲವತ್ತು ವರುಷಗಳ ನಂತರವೂ ನನಗೆ ಆ ದಿನ ನೋಡಿದ ನಾಟಕದ ದೃಶ್ಯಗಳು ಕಣ್ಣಿಗೆ ಕಟ್ಟಿದಂತಿದೆ. ಕೂಲಿ ಪಾತ್ರ ಮಾಡಿದ ಹೆಬ್ಬಾಲೆ ಶ್ರೀನಿವಾಸ್ ಮಾಡಿದ ನಟನೆಯನ್ನು ಪದಗಳಲ್ಲಿ ವಿವರಿಸಲು ಅಸಾಧ್ಯ. 

ನಾಟಕ ಮುಗಿದ ಮೇಲೆ ಗಣಪತಿಗೆ ಮಹಾಮಂಗಳಾರತಿ ಮಾಡಿದರು. ನಾಟಕ, ರಂಗಭೂಮಿಯ ಆರಂಭದ ಮೆಟ್ಟಲುಗಳಲ್ಲಿ ಇದ್ದ ನಾನು ಒಂದು ಅದ್ಭುತವನ್ನು ನೋಡಿದ್ದೆ. ಆ ಅದ್ಭುತವನ್ನು ಅರಗಿಸಿಕೊಳ್ಳಲು ಮೌನಕ್ಕೆ ಶರಣಾಗಿದ್ದೆ. ಹೀಗೂ ನಾಟಕ ಬರೆಯ ಬಹುದೇ ? ಎಂತಹ ಅದ್ಬುತ ಕಲ್ಪನೆ.. ಸಂಭಾಷಣೆ.. ಸಂಘರ್ಷ.  ಈ ನಾಟಕದ ಕಲ್ಪನೆ ಮಾಡಿಕೊಂಡು ಅದಕ್ಕೆ ಸಂಭಾಷಣೆ ಬರೆದ ಪಾಪು, ನಾ.ಶ್ರೀನಿವಾಸ್ ನಿಜಕ್ಕೂ ಒಬ್ಬ ಸೂಪರ್ ಮ್ಯಾನ್ ಅನ್ನಿಸಿದ್ದು ಸುಳ್ಳಲ್ಲ. ನಾಟಕದ ಕೊನೆಗೆ ಬರುವ ವಾಕ್ಯ ” ಎಲ್ಲರ ಗೋರಿಯ ಮೇಲೆ ಹೊಸ ಸೃಷ್ಟಿ ಅರಳ ಬೇಕು ” ಎಂದುದನ್ನು ನಾಟಕ ನೋಡಿದವರು ಮರೆಯಲು ಅಸ್ಸಾಧ್ಯ. 

ಮುಂದಿನ ದಿನಗಳಲ್ಲಿ ನಾನು ಕನಸಿನವರು ನಾಟಕದ ವಕೀಲನ ಪಾತ್ರ ಮಾಡತೊಡಗಿದೆ. ಬಹಳ ಜನ ನನ್ನನ್ನು ಲಾಯರ್ ಸಿಂಹ ಎಂದು ಕರಿಯತೊಡಗಿದ್ದರು. ಮೈಸೂರಿನ ಪ್ರಖ್ಯಾತ ರಂಗಭೂಮಿ ತಂಡ ಅಮರಕಲಾ ಸಂಘ ಏರ್ಪಡಿಸಿದ್ದ ನಾಟಕ ಸ್ಪರ್ಧೆಯಲ್ಲಿ ಕನಸಿನವರು ನಾಟಕಕ್ಕೆ ಬಹುಮಾನ ಬಂದಿತ್ತು. ಕನಸಿನವರು ನಾಟಕದ ವಿಶೇಷವೆಂದರೆ ಈ ನಾಟಕವನ್ನು ರಂಗದ ಮೇಲೆ, ಬೀದಿಯಲ್ಲಿ, ಆತ್ಮೀಯ ರಂಗಭೂಮಿಯಲ್ಲಿ ಪರಿಣಾಮಕಾರಿಯಾಗಿ ಅಭಿನಯಿಸ ಬಹುದು. ಮೈಸೂರನ  ಆಕಾಶವಾಣಿಯಲ್ಲಿಯೂ ಸಹ ಈ ನಾಟಕವನ್ನು ಮಾಡಿದ್ದೆವು. ಒಮ್ಮೆ ಮೈಸೂರು ದಸರಾ ವಸ್ತುಪ್ರದರ್ಶನದಲ್ಲಿ ಕನಸಿನವರು ಪ್ರದರ್ಶನ ಏರ್ಪಾಡಾಗಿತ್ತು. ನಾಟಕದ ಅವಧಿ ಕೇವಲ ಒಂದು ಗಂಟೆ ಆದರೆ ವಸ್ತುಪ್ರದರ್ಶನದ ಆಯೋಜಕರು ನಮಗೆ ನೀಡಿದ್ದು ಎರಡು ಗಂಟೆ.. ಒಂದು ಗಂಟೆ ನಾಟಕವನ್ನು ಎರಡುಗಂಟೆಗಳ ಕಾಲ improvise ಮಾಡಿದ್ದು ಇಂದಿಗೂ ಮರೆಯಲಾಗದ ಅನುಭವ. 

ಕನ್ನಡ ರಂಗಭೂಮಿಯಲ್ಲಿ ಕನಸಿನವರು ನಾಟಕ ಒಂದು ಮಾಸ್ಟರ್ ಪೀಸ್, ಈ ನಾಟಕದಲ್ಲಿ ಅಭಿನಯಿಸುವವರಿಗೆ ಆಗುವ ವಿನೂತನ ಅನುಭವ ಹೇಳಲು ಅಸಾಧ್ಯ. ಸರಳ ರಂಗಸಜ್ಜಿಕೆಯಲ್ಲಿ ಪರಿಣಾಮಕಾರಿಯಾಗಿ ಅಭಿನಯಿಸ ಬಹುದು.  ನಲವತ್ತು ವರುಷಗಳು ಕಳೆದರು ಕನಸಿನವರು ನಾಟಕದ ಸಂಭಾಷಣೆಗಳನ್ನು ನಾನು ಮರೆತಿಲ್ಲ. ನಾಟಕ ಅಭಿನಯಿಸುತ್ತಿದ್ದ ಆ ನಮ್ಮ ಅದ್ಬುತ ತಂಡ, ನಮ್ಮಲ್ಲಿ ಇದ್ದ ಹಾಸ್ಯ ಪ್ರಜ್ಞೆ, ಸಹಕಾರ ಮನೋಭಾವ ನನ್ನ ವ್ಯಕ್ತಿತ್ವ ವನ್ನು ಬೆಳೆಸುವಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವಲ್ಲಿ ನೂರಕ್ಕೆ ನೂರರಷ್ಟು ಕೊಡಿಗೆ ನೀಡಿದೆ.  ಮಕ್ಕಳ ಹಕ್ಕು, ಮಾನವ ಹಕ್ಕುಗಳ ಬಗ್ಗೆ ಕೆಲಸ ಮಾಡುತ್ತಿರುವ ಈ ಸಂದರ್ಭದಲ್ಲಿ ಕನಸಿನವರು ನಾಟಕ ಮಾನವಹಕ್ಕುಗಳನ್ನು ವಿಶ್ಲೇಷಿಸುವ ಒಂದು ಚಿರಂತರ.. ನಿರಂತರ.. ನಾಟಕ. 

ನಾಗಸಿಂಹ ಜಿ ರಾವ್ 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
NAGARAJA
NAGARAJA
10 days ago

ಕನಸಿನವರು ನಾಟಕದ ಸುಂದರ ನೆನಪು ನಮ್ಮ ಕಣ್ಣಿಗೆ ಕಟ್ಟುವಂತೆ ಬರೆದು ಓದುಗರನ್ನು ಓದುವಂತೆ ಮಾಡಿದೆ.
ನಿಮ್ಮ ಲೇಖನಕ್ಕೆ ಧನ್ಯವಾದಗಳು ಲಾಯರ್ ನಾಗಸಿಂಹ ಸರ್

dattatreyahg
dattatreyahg
10 days ago

ಕನಸಿನವರು ನಾಟಕ ಎಲ್ಲಿ ಸಿಗುತ್ತೆ?

2
0
Would love your thoughts, please comment.x
()
x