ಸೆರೆಮನೆರಹಿತ ಕೈದಿ: ಎಲ್.ಚಿನ್ನಪ್ಪ, ಬೆಂಗಳೂರು.

“ನನ್ನ ಮಗ ಎಷ್ಟೇ ಕೆಟ್ಟವನಾಗಿದ್ದರೂ ನಮ್ಮೊಡಲಿನ ರಕ್ತವನ್ನು ಹಂಚಿಕೊಂಡು ಧರೆಗೆ ಬಂದವನಲ್ಲವೆ? ನಮ್ಮ ಕರುಳ ಕುಡಿಯೇ ಅಲ್ಲವೆ? ತನ್ನ ತಾಯಿಯ ತದ್ರೂಪವನ್ನೇ ಹೊತ್ತು ಬಂದಿರುವ ಅವನ ಮುಖದಲ್ಲಿ ನನ್ನ ಪತ್ನಿಯ ಪ್ರತಿಬಿಂಬ ಕಾಣುತ್ತಿದ್ದೇನೆ”

ಎಂದಿನಂತೆ ಕಛೇರಿ ಕೆಲಸ ಮುಗಿಸಿಕೊಂಡು ಅಂದು ಸಂಜೆ ಮನೆಗೆ ಮರಳಿದೆ. ಬೀಗ ಹಾಕಿದ್ದ ನನ್ನ ಮನೆಯ ಬಾಗಿಲ ಬಳಿ ಆ ವೃದ್ಧರು ಕಾದು ಕುಳಿತ್ತಿದ್ದರು. ನಾನೊಬ್ಬ ಸರಕಾರಿ ನೌಕರ, ಇಲ್ಲಿಗೆ ಬಡ್ತಿಯ ಮೇಲೆ ವರ್ಗವಾಗಿ ಬಂದು ಆರು ತಿಂಗಳಾಗಿವೆ. ನನ್ನ ಸ್ವಂತ ಸ್ಥಳವು ಇಲ್ಲಿಂದ ಬಹಳ ದೂರವಿರುವುದರಿಂದ ಹಾಗು ಕೆಲವು ಕೌಟುಂಬಿಕ ಸಮಸ್ಯೆಗಳಿಂದ ಪತ್ನಿ ಮಕ್ಕಳನ್ನು ಇಲ್ಲಿಗೆ ಕರೆದು ತಂದಿರಲಿಲ್ಲ. ನನಗೆ ರಜೆ ಸಿಕ್ಕಾಗ ಅಲ್ಲಿಗೆ ಹೋಗಿ ಅವರನ್ನು ನೋಡಿಕೊಂಡು ಬರುತ್ತಿರುವೆ. ಈ ನಡುವೆ, ನಮ್ಮ ಊರಿಗೆ ಹತ್ತಿರವೇ ಇರುವ ಬೇರೊಂದು ಊರಿಗೆ ವರ್ಗಾವಣೆ ಕೋರಿ ಮನವಿ ಪತ್ರವನ್ನೂ ಸಲ್ಲಿಸಿದ್ದೇನೆ. ಆದರೆ ಅದು ಎಂದು ಸರ್ಕಾರದಿಂದ ಒಪ್ಪಿಗೆಯಾಗಿ ನನ್ನ ವರ್ಗಾವಣೆಯಾಗುವುದೋ ಎಂಬ ನಿರೀಕ್ಷೆಯಲ್ಲೇ ಇದ್ದೇನೆ.

ಆ ಹಿರಿಯರು ತಮ್ಮ ವಯಸ್ಸು ಈಗ ೭೫ ಅಂತ ಎಂದೋ ಒಮ್ಮೆ ಹೇಳಿದ್ದ ನೆನಪು. ನಾನು ಆ ವೃದ್ಧರ ಮಗನ ಮನೆಯಲ್ಲೇ ವಾಸವಿದ್ದೇನೆ. ಅವರಿಗೆ ಒಬ್ಬನೇ ಮಗ. ಆದರೆ ಆ ಹಿರಿಯರು ತಮ್ಮ ಮಗನ ಜೊತೆ ಇಲ್ಲ, ಅವರೊಬ್ಬರೇ ಬೇರೆ ಕಡೆ ನೆಲೆಸಿದ್ದಾರೆ. ಅವರು ಪ್ರಸ್ತುತ ವಾಸವಿರುವ ಮನೆ ಇಲ್ಲಿಂದ ಒಂದು ಕಿ.ಮೀ. ದೂರವಿದೆಯಂತೆ. ಅದೊಂದು ಹಳೇ ಕಾಲದ ಹರುಕು-ಮುರುಕು ಹೆಂಚಿನ ಮನೆ ಎಂದು ವೃದ್ಧರು ನನಗೆ ಹೇಳಿದ್ದಾರೆ. ಅಲ್ಲಿ ಅವರು ಒಬ್ಬರೇ ಒಂಟಿಯಾಗಿ ನೆಲೆಸಿರುವುದು ನನಗೆ ಸಂಶಯದ ಜೊತೆಗೆ ಕುತೂಹಲವೂ ಕಾಡಿತ್ತು. ಆದರೆ ಈ ಬಗ್ಗೆ ನಾನು ಅವರನ್ನು ವಿಚಾರಿಸಿಲ್ಲ.

ನಾನು ಇಲ್ಲಿ ಬಾಡಿಗೆಗೆ ಬಂದ ದಿನವೇ ನನಗೆ ಆ ವೃದ್ದರ ಪರಿಚಯವಾಯಿತು. ನಂತರ ಅವರು ನನಗೆ ಆತ್ಮೀಯರೂ ಆದರು. ಅವರು ಆಗಾಗ್ಗೆ ಮನೆಗೆ ಬಂದು ಕುಳಿತುಕೊಂಡು ನನ್ನ ಜೊತೆ ಸ್ವಲ್ಪ ಹೊತ್ತು ಲೋಕಾಬಿರಾಮವಾಗಿ ಮಾತಾಡುತ್ತಿದ್ದರು. ನನಗೂ ಸ್ವಲ್ಪ ಸಮಯ ಕಳೆಯುತ್ತಿತ್ತು. ಅವರು ತಮ್ಮ ಹಳೆಯ ಕಾಲದ ವಿಚಾರಗಳನ್ನಲ್ಲದೆ ಎಲ್ಲಾ ಪ್ರಚಲಿತ ವಿದ್ಯಮಾನಗಳನ್ನು ನನ್ನ ಜೊತೆ ಮುಕ್ತವಾಗಿ ಚರ್ಚಿಸುತ್ತಿದ್ದರು. ಮಾತಿನಲ್ಲಿ ಅವರೊಬ್ಬ ಪ್ರವೀಣ ಎಂದು ಹೇಳಬಹುದು. ಅವರ ಬಿಚ್ಚು ಮನಸ್ಸಿನ ನೇರ ನುಡಿಗಳು ನನ್ನನ್ನು ಒಮ್ಮೊಮ್ಮೆ ಅಚ್ಚರಿ, ಬೆರಗುಗೊಳಿಸುತ್ತಿತ್ತು. ಅವರು ತಮ್ಮ ಎಲ್ಲಾ ವಿಷಯಗಳನ್ನು ಕುರಿತು ನನ್ನ ಬಳಿ ಮಾತಾಡುತ್ತಿದ್ದರೂ ತಮ್ಮ ಮಗನ ಬಗ್ಗೆ ಅವರ ಬಾಯಿಂದ ಒಂದು ಮಾತೂ ಬಂದಿರಲಿಲ್ಲ. ನಾನೂ ಅದನ್ನು ಒತ್ತಾಯಪೂರ್ವಕವಾಗಿ ಕೇಳಿರಲಿಲ್ಲ. ಆದರೆ ಒಮ್ಮೆ ನನ್ನಲ್ಲಿ ಏನೋ ಕುತೂಹಲ ಉಂಟಾಗಿ ಅವರನ್ನು ಕೇಳಿಯೇ ಬಿಟ್ಟೆ.

“ ಹೌದು ಯಜಮಾನ್ರೆ, ನಿಮ್ಮ ಮಗ, ಸೊಸೆ ಮೊಮ್ಮಕ್ಕಳು ಎಲ್ಲರೂ ಇಲ್ಲೇ ಇದ್ದರೂ ಅರ್ಯಾರೂ ನಿಮ್ಮ ಜೊತೆ ಮಾತಾಡಿರುವುದನ್ನು ನಾನು ಕಂಡಿಲ್ಲ. ಇಷ್ಟು ದೊಡ್ಡ ಮನೆಯಿದ್ದರೂ ನೀವು ಇವರೊಂದಿಗೆ ಒಟ್ಟಿಗೆ ವಾಸಿಸುತ್ತಿಲ್ಲ, ನೀವೊಬ್ಬರೇ ಒಂದು ಹಳೆಯ ಮನೆಯಲ್ಲಿ ಪ್ರತ್ಯೇಕವಾಗಿ ನೆಲೆಸಿದ್ದೀರಿ. ಅದೂ ಅಲ್ಲದೆ ವಯಸ್ಸಾಗಿರುವ ನಿಮ್ಮನ್ನು ನೋಡಿಕೊಳ್ಳಲು ಅಲ್ಲಿ ಬೇರೆ ಯಾರೂ ಇಲ್ಲ, ಇದಕ್ಕೆಲ್ಲ ಏನು ಕಾರಣ?” ಎಂದು ಕೇಳಿದೆ.

ನಾನು ಕೇಳಿದ ಪ್ರಶ್ನೆಯಿಂದ ವೃದ್ಧರಿಗೆ ಕಿರಿಕಿರಿಯಾಯಿತೋ ಮುಜುಗರವಾಯಿತೋ ಅವರು ತಕ್ಷಣ ಮಾತು ನಿಲ್ಲಿಸಿ ನನ್ನ ಮೇಲೆ ಮುನಿಸಿಕೊಂಡುಬಿಟ್ಟರು. ಒಂದೆರಡು ನಿಮಿಷ ಅವರು ಬಾಯೇ ತೆರೆಯಲಿಲ್ಲ. ಇಲ್ಲಿಗೆ ಬಂದು ಕುಳಿತರೆಂದರೆ ಅವರ ಬಾಯಿಗೆ ಪುರುಸೊತ್ತೇ ಇರುತ್ತಿರಲಿಲ್ಲ. ಮಾತಿಗೆ ಕಡಿವಾಣವಿಲ್ಲದೆ ಅರಳು ಹುರಿದಂತೆ ಕಡ್ಡಿ ಮುರಿದಂತೆ ಮಾತಾಡುತ್ತಿದ್ದರು. ಅಂಥಹವರು ಮಾತಿಗೆ ಏಕ್ದಂ ಪುಲ್ ಸ್ಟಾಪ್ ಹಾಕಿಬಿಟ್ಟರು. ನಾನೂ ಸುಮ್ಮನಾಗಿ ಬಿಟ್ಟೆ. ಸ್ವಲ್ಪ ಹೊತ್ತು ಕಳೆದ ಮೇಲೆ ಅವರೇ ಮೌನ ಮುರಿದು ಮಾತು ಮುಂದುವರೆಸುತ್ತ “ಈ ಪ್ರಶ್ನೆ ಕೇಳೋದಿಕ್ಕೆ ನೀನೊಬ್ಬ ಮಾತ್ರ ಬಾಕಿ ಉಳ್ದಿದ್ದೆ ನೋಡು, ಕೊನೆಗೆ ನೀನೂ ಅದೇ ಪ್ರಶ್ನೆ ಕೇಳ್ಬಿಟ್ಟೆ, ಇನ್ನು ಮೇಲೆ ನಾನು ನಿನ್ನ ಮನೆಗೆ ಬರೋದಿಲ್ಲ, ನಿನ್ನ ಕೂಡ ಮಾತಾಡೋದಿಲ್ಲ” ಎಂದು ಮಕ್ಕಳು ಮುನಿಸಿಕೊಂಡಂತೆ ಮಾತಾಡುತ್ತ ವೃದ್ಧರು ಎದ್ದು ಹೊರಟೇ ಬಿಟ್ಟರು.

ನಾನು ಧರ್ಮಸಂಕಟಕ್ಕೀಡಾದೆ. ಸುಮ್ಮನಿರದೆ ನಾನೇಕೆ ಇಂದು ಅವರನ್ನು ಈ ಪ್ರಶ್ನೆ ಕೇಳಿಬಿಟ್ಟೆ ಎನಿಸಿತು. ಅಪ್ಪ-ಮಗನ ನಡುವೆ ಅದೇನು ಮನಸ್ತಾಪವಿದೆಯೋ ನಾನು ಅವರನ್ನು ಹಾಗೆ ಕೆದಕಿ ಕೇಳಬಾರದಿತ್ತು ಎಂಬ ಅಪರಾಧಿ ಭಾವವೂ ನನ್ನನ್ನು ಕಾಡದಿರಲಿಲ್ಲ. ಮಾರನೇ ದಿನ ಅವರು ಇಲ್ಲಿಗೆ ಬಂದ ತಕ್ಷಣ ಮೊದಲು ಅವರ ಕ್ಷಮೆ ಕೇಳಬೇಕು ಎಂದುಕೊಂಡೆ. ಅಂದು ರಾತ್ರಿಯೆಲ್ಲ ನನಗೆ ಅವರದೇ ಕನವರಿಕೆ. ಮರುದಿನ ಬೆಳಗಾಯಿತು. ಗಂಟೆ ೯.೦೦ ದಾಟಿದರೂ ಅವರ ಸುಳಿವಿಲ್ಲ. ಅಂದು ಸಂಜೆ ಕೂಡ ಅವರ ಮುಖ ದರ್ಶನವಾಗಲಿಲ್ಲ ! ಎಲ್ಲೋ ಯಜಮಾನರು ನಿಜವಾಗಿ ನನ್ನ ಮೇಲೆ ಬೇಜಾರುಮಾಡಿಕೊಂಡು ಬಿಟ್ಟಿದ್ದಾರೆ, ಒಮ್ಮೆ ಅವರನ್ನು ಕಂಡು ಹೇಗಾದರೂ ಸಮಾಧಾನ ಪಡಿಸಿ ಬರಬೇಕು ಎಂದುಕೊಂಡೆ. ಅವರು ತಮ್ಮ ಮನೆ ಇರುವ ಸ್ಥಳವನ್ನು ನನಗೆ ಮೊದಲೇ ಹೇಳಿದ್ದರಿಂದ ಅದನ್ನು ಹುಡುಕುತ್ತಾ ಹೊರಟೆ. ಅವರು ಹೇಳಿದಂತೆ ಅದನ್ನು ಹುಡುಕಲು ಅಷ್ಟೇನು ಕಷ್ಟವಾಗಲಿಲ್ಲ. ಮನೆಯನ್ನು ಸುಲಭವಾಗಿಯೇ ಪತ್ತೆ ಹಚ್ಚಿದೆ. ಅವರ ಮನೆ ಮುಂದೆ ನಿಂತು ಕಣ್ಣಾಡಿಸಿದೆ. ಅದೊಂದು ಹಳೆಯ ಕಾಲದ ಮಣ್ಣು, ಇಟ್ಟಿಗೆ ಮತ್ತು ಗಾರೆಯಿಂದ ಕಟ್ಟಿದ ಮನೆ. ಕಟ್ಟಿ ಬಹಳ ವರ್ಷಗಳಾಗಿದ್ದರಿಂದ ಅದು ಶಿಥಿಲಗೊಂಡು ಬೀಳುವ ಪರಿಸ್ಥಿತಿಯಲ್ಲಿತ್ತು. ಗೋಡೆಯ ಪ್ಲಾö್ಯಸ್ಟರಿಂಗ್ ಅಲ್ಲಲ್ಲಿ ಕಿತ್ತು ಬಂದಿತ್ತು. ಛಾವಣಿ ಹೆಂಚುಗಳು ಕೆಲವು ಕಡೆ ಒಡೆದು ಮುಕ್ಕಾಗಿದ್ದವು. ಸುಣ್ಣ ಬಣ್ಣ ಕಾಣದ ಗೋಡೆಗಳು ಮಸುಕು ಮಸುಕಾಗಿದ್ದವು. ಮುಚ್ಚಿದ್ದ ಮನೆಯ ಬಾಗಿಲನ್ನು ನಿಧಾನವಾಗಿ ಸರಿಸಿದೆ. ಅದೂ ಹಳೆಯ ಮುರಿದುಹೋದ ಬಾಗಿಲು. ಮನೆ ಒಳಗೆ ಇಣುಕಿ ಸುತ್ತಲೂ ನೋಡಿದೆ. ಒಂದು ಮೂಲೆಯಲ್ಲಿ ಹಳೆಯ ಮಂಚದ ಮೇಲೆ ದೇಹವೊಂದು ಶವದಂತೆ ಬಿದ್ದುಕೊಂಡಿರುವುದು ಕಂಡಿತು.

ಅಲ್ಲೇ ನಿಂತು, ‘ಯಜಮಾನ್ರೆ ಯಜಮಾನ್ರೆ’ ಎಂದು ಕರೆದೆ. ಒಳಗಿನಿಂದ ಯಾವ ಶಬ್ದವೂ ಇಲ್ಲ, ಉತ್ತರವೂ ಇಲ್ಲ. ನಾನೇ ಒಳಕ್ಕೆ ಅಡಿಯಿಟ್ಟೆ. ಆಗ ವೃದ್ಧರು ಮಂಚದ ಮೇಲೆ ಪ್ರಜ್ಞೆಯಿಲ್ಲದೆ ಬಿದ್ದುಕೊಂಡಿದ್ದರು. ತಟ್ಟಿ ಎಬ್ಬಿಸೋಣವೆಂದು ಅವರ ದೇಹ ಮುಟ್ಟಿದೆ. ನನ್ನ ಕೈಗೆ ಬೆಚ್ಚನೆಯ ಸ್ಪರ್ಶವಾಯಿತು. ನನ್ನ ಸ್ಪರ್ಶಕ್ಕೆ ಅವರು ಎಚ್ಚರಗೊಂಡರೂ ಮಾತಾಡುವ ಸ್ಥಿತಿಯಲ್ಲಿರಲಿಲ್ಲ. ಭಯಂಕರ ಜ್ವರದ ತಾಪಕ್ಕೆ ಬಳಲಿ ಹೋಗಿದ್ದರು. ಹೊರಕ್ಕೆ ಬಂದು ಅಕ್ಕಪಕ್ಕದಲ್ಲಿ ಯಾರಾದರೂ ಇದ್ದಾರೆಯೇ ಎಂದು ನೋಡಿದೆ. ಯಾರೂ ಇದ್ದಂತೆ ಕಾಣಲಿಲ್ಲ. ಸಹಾಯಕ್ಕೆ ಕರೆದರೆ ಇನ್ನೆಲ್ಲಿಂದ ಬಂದಾರೆಂದುಕೊಂಡು ನಾನೇ ಒಂದು ಆಟೋ ತರಲು ಹೊರಟೆ. ಸ್ವಲ್ಪ ದೂರದಲ್ಲೆ ಸಿಕ್ಕ ಆಟೊವೊಂದನ್ನು ಕರೆದು ತಂದು ಹತ್ತಿರವೇ ಇದ್ದ ಆಸ್ಪತ್ರೆಗೆ ಅವರನ್ನು ಕರೆದೊಯ್ದೆ. ಅಲ್ಲಿ ವೃದ್ಧರನ್ನು ಪರೀಕ್ಷಿಸಿದ ವೈದ್ಯರು ಅವರನ್ನು ಒಳರೋಗಿಯಾಗಿ ದಾಖಲಿಸಿಕೊಂಡರು. ನಂತರ ವೃದ್ಧರು ಅಲ್ಲಿ ಐದು ದಿನಗಳ ಕಾಲ ಚಿಕಿತ್ಸೆ ಪಡೆದ ಮೇಲೆ ಸ್ವಲ್ಪ ಚೇತರಿಸಿಕೊಂಡರು. ಅವರನ್ನು ಆಸ್ಪತ್ರೆಗೆ ದಾಖಲಿಸಿದ ದಿನದಂದೇ ಅವರ ಮಗನಿಗೆ ವಿಷಯ ತಿಳಿಸಿದೆ. ಅವನು ತನ್ನ ತಂದೆಯನ್ನು ನೋಡಲು ಒಮ್ಮೆ ಮಾತ್ರ ಆಸ್ಪತ್ರೆಗೆ ಹೋಗಿದ್ದನಂತೆ. ಐದು ನಿಮಿಷ ಅವರ ಬಳಿ ಸುಮ್ಮನೆ ಕುಳಿತಿದ್ದು ತಾನು ಕೊಂಡುಹೋಗಿದ್ದ ಹಣ್ಣಿನ ಕವರನ್ನು ಅಲ್ಲೇ ಬಿಟ್ಟು ಎದ್ದು ಬಂದನಂತೆ. ಅಸ್ವಸ್ಥ ತಂದೆಯನ್ನು ನೋಡಲು ಆಸ್ಪತ್ರೆಗೆ ಹೋದ ಮಗ ಅವರ ಆರೋಗ್ಯ ವಿಚಾರಿಸದೆ ಏನೂ ಮಾತಾಡದೆ ವಾಪಸ್ ಬಂದ ವಿಷಯ ಕೇಳಿ ನನಗೆ ಖೇದವಾಯಿತು.

ವೃದ್ದರು ಗುಣಮುಖರಾದ ಮೇಲೆ ಅವರನ್ನು ಮನೆಗೆ ಕರೆದುಕೊಂಡು ಹೋಗಲು ಅವರ ಕಡೆಯವರು ಯಾರೂ ಬರಲಿಲ್ಲ. ಕೊನೆಗೆ ನಾನೇ ಅವರನ್ನು ಆಸ್ಪತ್ರೆಯಿಂದ ಡಿಸ್ ಚಾರ್ಜ್ ಮಾಡಿಸಿ ಅವರ ಮನೆಗೆ ಕರೆದುಕೊಂಡು ಹೋದೆ. ಅವರನ್ನು ಮನೆಯಲ್ಲಿ ಬಿಟ್ಟು ಅಂದು ಅವರಿಗೆ ಬೇಕಾದುದೆಲ್ಲವನ್ನು ಸಿದ್ದತೆ ಮಾಡಿಕೊಟ್ಟೆ. ಅಂದು ರಾತ್ರಿ ಅವರು ತೆಗೆದುಕೊಳ್ಳಬೇಕಾದ ಔಷಧಿಗಳನ್ನು ಒಂದೆಡೆ ತೆಗೆದಿರಿಸಿ ಅದನ್ನು ಹೇಗೆ ತೆಗೆದುಕೊಳ್ಳಬೇಕೆಂದು ತಿಳಿಸಿ ನಾನು ಎದ್ದು ಹೊರಡಲು ಮುಂದಾದೆ. ತಕ್ಷಣ ವೃದ್ಧರು ನನ್ನ ಕೈ ಹಿಡಿದುಕೊಂಡು ಈ ಒಂದು ರಾತ್ರಿ ಅಲ್ಲೇ ಇದ್ದು ಹೋಗುವಂತೆ ನನ್ನನ್ನು ಧೈನ್ಯದಿಂದ ಕೇಳಿಕೊಂಡರು. ಅವರ ಧ್ವನಿಯಲ್ಲಿ ನೋವು ಅಸಹಾಯಕತೆ ತುಂಬಿತ್ತು, ಆ ಕ್ಷಣ ಅದು ಅವರ ಮುಖದಲ್ಲಿಯೂ ಅಭಿವ್ಯಕ್ತಗೊಂಡಿತ್ತು. ಅವರ ಬಾಯಿಂದ ಮಾತುಗಳು ಹೊರಟ ಕೂಡಲೆ ಕಣ್ಣುಗಳು ತೇವಗೊಂಡವು. ನಾನು ಅವರ ಕೈಗಳನ್ನು ತಬ್ಬಿಹಿಡಿದು ಸಂತೈಸುತ್ತ “ ಹಾಗೆ ಆಗಲಿ ಯಜಮಾನ್ರೆ, ಬೇಜಾರು ಮಾಡಿಕೊಳ್ಳಬೇಡಿ, ನಿಮ್ಮ ಇಚ್ಛೆಯಂತೆ ಇಂದು ರಾತ್ರಿ ಇಲ್ಲೇ ಇದ್ದು ಹೋಗುತ್ತೇನೆ” ಎಂದೆ. ಆಗ ಆ ವೃದ್ಧರ ಮುಖದಲ್ಲಿ ಮಂದಹಾಸ ಮೂಡಿತಲ್ಲದೆ ತಮ್ಮ ಬಳಿಯೇ ಕುಳಿತುಕೊಳ್ಳುವಂತೆ ನನಗೆ ಸಂಜ್ಞೆ ಮಾಡಿದರು. ನಾನು ಅಲ್ಲೇ ಕುಳಿತುಕೊಂಡೆ. ಅವರ ಮಾತನ್ನು ಕೇಳಲು ನನಗೆ ಮನಸ್ಸಿಲ್ಲದಿದ್ದರೂ ವೃದ್ಧರ ಮನಸ್ಸಿಗೆ ನೋವಾಗಬಾರದೆಂದು ಒಲ್ಲದ ಮನಸ್ಸಿನಿಂದ ಕೇಳತೊಡಗಿದೆ. ವೃದ್ಧರು, “ದಯವಿಟ್ಟು ತಪ್ಪು ತಿಳಿದುಕೊಳ್ಳಬೇಡಪ್ಪ, ನೀನು ಯಾರೋ ನಾನು ಯಾರೋ, ಅಂದು ನಾನೇ ನಿನ್ನ ಮನಸ್ಸನ್ನು ವೃಥಾ ನೋಯಿಸಿಬಿಟ್ಟೆ, ಬೇಜಾರು ಮಾಡಿಕೊಳ್ಳಬೇಡಪ್ಪ “ಎಂದು ವೃದ್ದರು ತಮ್ಮ ಒದ್ದೆಯಾಗಿದ್ದ ಕಣ್ಣುಗಳನ್ನು ಒರೆಸಿಕೊಂಡರು. ಅಂದು ಏತಕ್ಕೊ ಅವರ ಮಾತನ್ನು ಆಲಿಸುವ ಆಸಕ್ತಿಯಾಗಲಿ ಕುತೂಹಲವಾಗಲಿ ನನ್ನಲ್ಲಿ ಇರಲಿಲ್ಲ. ವೃದ್ಧರು ಸ್ವಲ್ಪ ಸಾವರಿಸಿಕೊಂಡ ಮೇಲೆ ತಮ್ಮ ಮಾತನ್ನು ಎಂದಿನ ಧಾಟಿಯಲ್ಲಿ ಮುಂದುವರೆಸುತ್ತಾ “ಅಂದು ನೀನು ಕೇಳಿದ ಪ್ರಶ್ನೆಗಳಿಗೆ ಇಂದು ಉತ್ತರ ಕೊಡಬಹುದಲ್ಲವೆ?” ಎನ್ನುತ್ತ ನನ್ನ ಮುಖ ನೋಡಿದರು. ನಾನೂ ಏನೂ ಮಾತಾಡದೆ ಅವರ ಮಾತನ್ನು ಆಲಿಸತೊಡಗಿದೆ.

“ ನಮ್ಮದು ಕೇವಲ ಎಂಟು ವರ್ಷದ ಅನ್ಯೋನ್ಯ ದಾಂಪತ್ಯ ಬದುಕು. ಎಂಟು ವರ್ಷಗಳ ಕಾಲ ನಮ್ಮ ದಾಂಪತ್ಯ ಜೀವನ ಸುಖವಾಗಿಯೇ ಸಾಗಿತ್ತು. ಪತ್ನಿಯ ಮೇಲೆ ನನಗೆ ಅಪಾರ ಪ್ರೀತಿ ವಿಶ್ವಾಸ. ನಾವಿಬ್ಬರೂ ಪರಸ್ಪರ ಚೆನ್ನಾಗಿ ಅರ್ಥಮಾಡಿಕೊಂಡವರು. ಅವಳೇ ನನ್ನ ಪ್ರಾಣ, ಸರ್ವಸ್ವವೆಂದು ಭಾವಿಸಿದ್ದೆ. ಆದರೆ ದೇವರು ಆಕೆಯನ್ನು ಹೆಚ್ಚು ಕಾಲ ನನ್ನ ಬಳಿ ಇರಲು ಬಿಡಲಿಲ್ಲ. ಯಾವುದೋ ತೀವ್ರ ಸ್ವರೂಪದ ಕಾಯಿಲೆಗೆ ತುತ್ತಾಗಿ ತೀರಿಕೊಂಡಳು. ಎಂಟು ವರ್ಷಕ್ಕೇ ನಮ್ಮ ದಾಂಪತ್ಯ ಬದುಕು ಅಂತ್ಯ ಕಂಡಿತು. ನಮ್ಮ ದಾಂಪತ್ಯ ಬದುಕಿನಲ್ಲಿ ನಮಗೊಬ್ಬ ಪುತ್ರ ಜನಿಸಿದ್ದ. ಅವಳು ಕಣ್ಮುಚ್ಚಿದಾಗ ಅವನ ವಯಸ್ಸು ಇನ್ನೂ ಆರು ವರ್ಷ. ಆಗ ನನಗೂ ನಡು ಪ್ರಾಯ. ನಾನು ಮತ್ತೊಂದು ವಿವಾಹ ಮಾಡಿಕೊಳ್ಳಬಹುದಿತ್ತು. ನನ್ನ ಬಂದು ಬಳಗದವರು ಸಹ ಒತ್ತಾಯ ಮಾಡಿದರು. ಆದರೆ ನನಗೆ ಎರಡನೆ ವಿವಾಹ ಮಾಡಿಕೊಳ್ಳುವ ಮನಸ್ಸಿರಲಿಲ್ಲ. ಏಕೆಂದರೆ, ನನ್ನ ಏಕೈಕ ಕರುಳ ಕುಡಿಯನ್ನು ಮಲತಾಯಿಯ ಮಡಿಲಿಗೆ ಒಪ್ಪಿಸಲು ನನಗೆ ಮನಸ್ಸು ಬರಲಿಲ್ಲ. ತಾಯಿ ಇಲ್ಲದ ತಬ್ಬಲಿ ಮಗು ಎಂದು ನನ್ನ ಅಂತರಾತ್ಮ ತುಡಿಯಿತು. ನನ್ನ ಸ್ವಾರ್ಥಕ್ಕಾಗಿ ಅವನನ್ನು ಮಲತಾಯಿಯ ತೆಕ್ಕೆಗೆ ಒಪ್ಪಿಸಲು ನನಗೆ ಇಷ್ಟವಾಗಲಿಲ್ಲ. ತಾಯಿ ಪ್ರೀತಿಯನ್ನು ಮಲತಾಯಿ ಎಂದಾದರೂ ನೀಡಬಲ್ಲಳೆ? ಇಲ್ಲ, ಅದು ಎಂದಿಗೂ ಸಾಧ್ಯವಿಲ್ಲ. ನಾನೇ ಅವನಿಗೆ ನನ್ನ ಪ್ರೀತಿ, ತಾಯಿ ಪ್ರೀತಿ ಎರಡನ್ನೂ ಧಾರೆಯೆರೆದು ಮುತುವರ್ಜಿಯಿಂದ ಬೆಳೆಸಿದೆ. ಅವನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡೆ. ಒಳ್ಳೆಯ ಶಿಕ್ಷಣ ಕೊಡಿಸಿದೆ. ಸಮಾಜದಲ್ಲಿ ಅವನನ್ನು ಒಬ್ಬ ಗೌರವ ವ್ಯಕ್ತಿಯನ್ನಾಗಿ ಮಾಡಿದೆ. ಮುಂದೆ ವಿದ್ಯಾಭ್ಯಾಸಕ್ಕೆ ತಕ್ಕಂತೆ ಅವನಿಗೆ ಒಂದು ಒಳ್ಳೆಯ ಉದ್ಯೋಗವೂ ಸಿಕ್ಕಿತು. ಅವನು ಒಪ್ಪಿದ ಒಳ್ಳೆಯ ಮನೆತನದ ಹೆಣ್ಣೊಂದನ್ನು ಸಹ ತಂದು ವಿವಾಹ ಮಾಡಿ ನನ್ನ ಕರ್ತವ್ಯವನ್ನು ಕೊನೆಗೊಳಿಸಿಕೊಂಡೆ.

ಅವನ ಕೈಹಿಡಿದ ಪತ್ನಿಯೂ ಒಳ್ಳೆಯವಳೇ. ಸ್ವಲ್ಪ ದಿನಗಳ ಕಾಲ ಅವರೆಲ್ಲರೂ ನನ್ನನ್ನು ಚೆನ್ನಾಗಿಯೇ ನೋಡಿಕೊಂಡರು. ಅದರಲ್ಲಿ ಎರಡು ಮಾತಿಲ್ಲ. ಮಗ-ಸೊಸೆ ಒಳಗೊಂಡ ನಮ್ಮ ಪುಟ್ಟ ಸಂಸಾರವು ಸಂತೋಷದಿಂದ ಕೂಡಿತ್ತು. ಒಂದು ದಿನ ಎಂದಿನಂತೆ ಸೊಸೆ ನನಗೆ ಕಾಫಿ ತಂದು ಕೊಟ್ಟಳು. ಅವಳು ತಂದುಕೊಟ್ಟ ಕಾಫಿ ಅರ್ಥಾತ್ ನನ್ನ ಪತ್ನಿ ಮಾಡಿ ಕೊಡುತ್ತಿದ್ದ ಕಾಫಿ ರುಚಿಯಂತೆಯೇ ಇತ್ತು. ಸೊಸೆ ಕೊಟ್ಟ ಕಾಫಿಯನ್ನು ಆಸ್ವಾದಿಸಿ ಕುಡಿದು ಒಂದು ಕ್ಷಣ ಭಾವುಕನಾಗಿಬಿಟ್ಟೆ. ಮಾತಿನಲ್ಲಿ ಆಕೆಗೆ ಕೃತಜ್ಞತೆ ಸೂಚಿಸುವ ಬದಲು ಆಕೆಯ ಎರಡೂ ಕೈಗಳನ್ನು ಹಿಡಿದುಕೊಂಡು ನನ್ನ ಕೃತಜ್ಞತಾಭಾವವನ್ನು ವ್ಯಕ್ತಪಡಿಸಿದೆ. ಅದಕ್ಕೆ ಅಪಾರ್ಥ ಕಲ್ಪಿಸಿಕೊಂಡ ಅವಳು ತಕ್ಷಣ ತನ್ನ ಕೈಗಳನ್ನು ಕೊಡವಿ ಬಿಡಿಸಿಕೊಂಡು ‘ಹೋ’ ಎಂದು ಚೀರುತ್ತ ಓಡಿಬಿಟ್ಟಳು. ನಾನು ತಬ್ಬಿಬ್ಬಾದೆ. ಆ ಒಂದು ಕ್ಷಣ ನಾನೇನು ಮಾಡಿಬಿಟ್ಟೆ ಎಂದು ನನಗೇ ಗೊತ್ತಾಗಲಿಲ್ಲ. ನಾನಂತು ಆಕೆಯನ್ನು ಯಾವ ಕೆಟ್ಟ ದೃಷ್ಟಿಯಿಂದಾಗಲಿ, ಭಾವನೆಯಿಂದಾಗಲಿ ನೋಡಲಿಲ್ಲವೆಂದು ಹೇಳಿಕೊಳ್ಳಲು ನನ್ನ ಆತ್ಮಸಾಕ್ಷಿಗೆ ಬದ್ದನಾಗಿದ್ದೇನೆ. ಆದರೂ ನನ್ನಿಂದ ಆಗಬಾರದ ತಪ್ಪು ಆಗಿ ಹೋಯಿತೇನೊ ಎಂಬ ಭ್ರಮೆಗೂ ಒಳಗಾದೆ. ನಾನು ಆಕೆಯ ಜೊತೆ ಅಸಭ್ಯನಾಗಿ ನಡೆದುಕೊಂಡೆನೆಂದು ನನ್ನ ವಿರುಧ್ಧ ಆಕೆ ತನ್ನ ಗಂಡನ ಬಳಿ ಸುಳ್ಳು ಆರೋಪ ಮಾಡಿದಳೆಂದು ತಿಳಿಯಿತು. ಅಂದು ನಡೆದದ್ದು ಅಷ್ಟೆ. ಆದರೆ, ಆ ಒಂದು ಕ್ಷಲ್ಲಕ ಕಾರಣಕ್ಕೆ ನನ್ನ ಮೇಲೆ ಅವರು ದೊಡ್ಡ ತಪ್ಪನ್ನೇ ಹೊರಿಸಿದರು. ಮಗ ತನ್ನ ಹೆಂಡತಿ ಹೇಳಿದ ಮಾತನ್ನು ನಂಬಿದನೇ ಹೊರತು ನನ್ನ ಅಹವಾಲನ್ನು ಆಲಿಸಲಿಲ್ಲ, ಸತ್ಯಾಂಶವನ್ನು ಅರಿಯಲಿಲ್ಲ. ಸುಳ್ಳು ದೂರನ್ನೇ ಆತ ಸತ್ಯವೆಂದು ನಂಬಿದ. ನನ್ನ ನಿರಾಪರಾಧಿ ಮನೋಭಾವದ ಅಂತರಂಗವನ್ನು ಅರ್ಯಾರೂ ಅರ್ಥಮಾಡಿಕೊಳ್ಳದೆ ಹೋದರು. ಮುಂದೆ ನಾನು ಮಗ ಮತ್ತು ಸೊಸೆಯ ಅನಾಧರಕ್ಕೆ ತುತ್ತಾಗಬೇಕಾಗಿ ಬಂತು. ಇದೇ ಕಾರಣವನ್ನು ಮುಂದಿಟ್ಟುಕೊಂಡು ನನ್ನನ್ನು ಮನೆಯಿಂದ ದೂರವಿಟ್ಟು ಬಿಟ್ಟರು.

ನನ್ನ ಅಂತರಂಗದ ರೋದನವೆಲ್ಲ ಘೋರ್ಕಲ್ಲಿನ ಮೇಲೆ ಮಳೆ ಸುರಿದಂತಾಯಿತು. ನನ್ನ ಸ್ವಂತ ಮನೆ ಆಸ್ತಿಪಾಸ್ತಿ ಎಲ್ಲವನ್ನೂ ಅವರಿಗೇ ಬಿಟ್ಟುಕೊಟ್ಟು ಮನೆಯಿಂದ ಹೊರಗೆ ಬಂದು ಬಿಟ್ಟೆ. ನನ್ನ ಮಗ ಮತ್ತು ಸೊಸೆಯ ದೃಷ್ಟಿಯಲ್ಲಿ ನಾನೊಬ್ಬ ದೊಡ್ಡ ಅಪರಾಧಿ. ಕ್ಷಮೆಗೂ ಅರ್ಹನಲ್ಲದ ಪಾಪವನ್ನು ನಾನು ಮಾಡಿದೆ ಎಂಬ ಮನೋಭಾವ ಅವರಲ್ಲಿ ಮನೆ ಮಾಡಿತು. ಮಾಡದ ತಪ್ಪಿಗೆ ಅವರು ನನಗೊಂದು ಅಪರಾಧದ ಹಣೆಪಟ್ಟಿ ತೊಡಿಸಿದರು. ಕಳೆದ ಇಪ್ಪತ್ತು ವರ್ಷಗಳಿಂದಲೂ ನಾನು ಅವರಿಂದ ದೂರವಿದ್ದೇನೆ. ಒಬ್ಬ ಆಳಿನ ಮೂಲಕ ನನಗೆ ಅವರು ಪ್ರತಿದಿನ ಮನೆಗೆ ಊಟ ಕಳುಹಿಸುತ್ತಾರೆ. ಅದಕ್ಕೆ ನಾನು ಅವರಿಗೆ ಆಭಾರಿ. ನಾನು ಅಲ್ಲಿಗೆ ಹೋದಾಗಲೆಲ್ಲ ನನ್ನ ಮಗನ ಮುಖ ನೋಡಿದರೆ, ಭಾವುಕನಾಗಿಬಿಡುತ್ತೇನೆ. ಅದೇನೋ ಅವನ ಮೇಲೆಯೇ ನನಗೆ ಹೆಚ್ಚು ವ್ಯಾಮೋಹ. ಒಂದು ಕ್ಷಣ ನನ್ನ ಮನಸ್ಸು ತುಡಿಯುತ್ತದೆ. “ನನ್ನ ಮಗ ಎಷ್ಟೇ ಕೆಟ್ಟವನಾಗಿದ್ದರೂ ನಮ್ಮೊಡಲಿನ ರಕ್ತವನ್ನು ಹಂಚಿಕೊಂಡು ಧರೆಗೆ ಬಂದವನಲ್ಲವೆ? ನಮ್ಮ ಕರುಳ ಕುಡಿಯೇ ಅಲ್ಲವೆ? ತನ್ನ ತಾಯಿಯ ತದ್ರೂಪವನ್ನೇ ಹೊತ್ತು ಬಂದಿರುವ ಅವನ ಮುಖದಲ್ಲಿ ನನ್ನ ಪತ್ನಿಯ ಪ್ರತಿಬಿಂಬ ಕಾಣುತ್ತಿದ್ದೇನೆ” ಎಂದು ವೃದ್ಧರು ತಮ್ಮ ನೋವಿನ ಕಥೆಯ ಜೊತೆಗೆ ಮಗನ ಮೇಲಿರುವ ಪ್ರೀತಿ ಮಮಕಾರವನ್ನು ಎಳೆ ಎಳೆಯಾಗಿ ಬಿಡಿಸಿ ನನ್ನ ಮುಂದಿಟ್ಟರು. ಆ ಹಿರಿಯರ ಹೃದಯ ವಿದ್ರಾವಕ ಮಾತುಗಳನ್ನು ಕೇಳಿ ನಾನು ಒಂದು ಕ್ಷಣ ಭಾವುಕನಾಗಿ ಕುಳಿತಲ್ಲೇ ಕುಸಿದು ಹೋದೆ. ಮನಸ್ಸು ಕದಡಿ ನನ್ನ ಕಣ್ಣಾಲೆಗಳೂ ತುಂಬಿ ಬಂದವು.

ತಮಗರಿವಿಲ್ಲದೆ ಸಂಭವಿಸಿದ ಒಂದು ಪುಟ್ಟ ಪ್ರಮಾದದಿಂದ ಆ ವೃದ್ಧರ ಬದುಕೆಲ್ಲಾ ನರಕವಾಯಿತು. ಹೆತ್ತು ಹೊತ್ತು ಸಾಕಿ ಬೆಳೆಸಿದ ಮಗನಿಂದಲೇ ತಂದೆಗೆ ಮನೆಯಿಂದ ಹೊರಗಟ್ಟುವ ಭಹಿಷ್ಕಾರದ ಶಿಕ್ಷೆ ! ಎಂತಹ ವಿಪರ್ಯಾಸ !

ಮಗನ ಅನಾದರಕ್ಕೆ ತುತ್ತಾದ ಅವರು ಯಾರ ಆಸರೆಯೂ ಇಲ್ಲದೆ ಅನಾಥರಂತೆ ಬದುಕುತ್ತಿರುವುದು ಅತ್ಯಂತ ಖೇದಕರ. ಮಗ-ಸೊಸೆ ಮೊಮ್ಮಕ್ಕಳು, ಕುಟುಂಬ ಬಂಧು-ಬಳಗದವರು ಮತ್ತು ಸಾಮಾಜಿಕ ಒಡನಾಟದಿಂದ ದೂರವೇ ಉಳಿದ ಅವರು ಸೆರೆಮನೆರಹಿತ ಕೈದಿ !

ಎಲ್.ಚಿನ್ನಪ್ಪ, ಬೆಂಗಳೂರು.

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x