ಜೀವನಪಾಠ: ಕೋಡೀಹಳ್ಳಿ ಮುರಳೀಮೋಹನ್


ತೆಲುಗು ಮೂಲ : ಅಪ್ಪರಾಜು ನಾಗಜ್ಯೋತಿ
ಕನ್ನಡ ಅನುವಾದ : ಕೋಡೀಹಳ್ಳಿ ಮುರಳೀಮೋಹನ್
ನನಗೂ ರೈಲ್ವೇ ಸ್ಟೇಷನಿಗೂ ಒಂದು ಬಗೆಯ ಅವಿನಾಭಾವ ಸಂಬಂಧವಿದೆ. ಪ್ರತಿ ಪ್ರಯಾಣವೂ ನನಗೆ ಹೊಸ ವಿಷಯವನ್ನು ಕಲಿಸುತ್ತದೆ. ಈ ಬಾರಿ ಏನನ್ನು ಕಲಿಯಬೇಕಿದೆಯೋ ಅಂತ ಯೋಚಿಸುತ್ತಾ ನಿಧಾನವಾಗಿ ಪ್ಲಾಟ್ಫಾರ್ಮ್ ಸುತ್ತಲೂ ನೋಡಿದೆ.

ನನ್ನ ಬಲಕ್ಕೆ ಇದ್ದ ಬೆಂಚಿನ ಮೇಲೆ ಸುಮಾರು ಮೂವತ್ತು ವರ್ಷದ ಮಹಿಳೆಯೊಬ್ಬಳು ತನ್ನ ಇಬ್ಬರು ಮಕ್ಕಳೊಂದಿಗೆ ಕುಳಿತಿದ್ದಳು. ಮಗಳಿಗೆ ಸುಮಾರು ಏಳು ವರ್ಷವಿರಬಹುದು, ಗೊಂಬೆಯಂತೆ ಮುದ್ದಾಗಿದ್ದಳು, ಚುರುಕಾಗಿ ಪ್ಲಾಟ್ಫಾರ್ಮ್ನಲ್ಲೆಲ್ಲಾ ಓಡಾಡುತ್ತಿದ್ದಳು. ಇನ್ನೊಂದು ಮಗುವಿಗೆ ಒಂದು ವರ್ಷವೂ ಆಗಿರಲಿಲ್ಲ, ಬೆರಳು ಬಾಯಲ್ಲಿಟ್ಟುಕೊಂಡು ದೊಡ್ಡ ಕಣ್ಣುಗಳಿಂದ ಎಲ್ಲ ಕಡೆ ನೋಡುತ್ತಿತ್ತು. ಎಡಭಾಗದಲ್ಲಿರುವ ಬೆಂಚಿನ ಮೇಲೆ, ನಾಲ್ಕು ವರ್ಷದ ಮಗುವೊಂದು ಒಂದು ಕ್ಷಣವೂ ಸುಮ್ಮನೆ ಕೂರದೆ ತಾಯಿಯನ್ನು ತುಂಬಾ ತೊಂದರೆ ಕೊಡುತ್ತಿತ್ತು. ಆ ಮಗುವಿನ ತುಂಟತನಕ್ಕೆ ಸುತ್ತಮುತ್ತಲಿನ ಜನರ ಮುಖದಲ್ಲಿ ಅಸಹನೆ ಸ್ಪಷ್ಟವಾಗಿ ಕಾಣುತ್ತಿತ್ತು. ನಮ್ಮ ಮಗನ ಜೊತೆ ನಾವು ಕೂಡ ಇಂತಹ ಅನುಭವಗಳನ್ನು ಬಹಳ ಎದುರಿಸಿದ್ದರಿಂದ, ನನಗೆ ಅದು ದೊಡ್ಡ ವಿಷಯ ಅನಿಸಲಿಲ್ಲ. ಆ ವಯಸ್ಸೇ ಹಾಗಿತ್ತು, ಅಷ್ಟಕ್ಕೂ, ಮಕ್ಕಳು ಬಿಟ್ಟು, ಸಾಯಲು ಕಾಯುತ್ತಿರುವ ನನ್ನಂತಹ ವೃದ್ಧರು ತಾನೆ ಗಲಾಟೆ ಮಾಡುತ್ತಾರೆ? ಅದಕ್ಕೇ, ಆ ಮಗು ನನ್ನ ಸೂಟ್ಕೇಸ್ ಅನ್ನು ಆ ಕಡೆ ಈ ಕಡೆ ಎಳೆಯುತ್ತಾ ಆಡುತ್ತಿದ್ದರೆ, ಮುದ್ದಾಗಿ ನೋಡುತ್ತಾ ಸುಮ್ಮನೆ ಕುಳಿತೆ ಹೊರತು ಅವನನ್ನು ಬೈಯಲಿಲ್ಲ.

ಅಷ್ಟರಲ್ಲಿ ಕಪ್ಪು ಕೋಟ್ ಹಾಕಿಕೊಂಡು ನನ್ನ ಮುಂದೆಯೇ ಹೋಗುತ್ತಿದ್ದ ಟಿಸಿಯನ್ನು ನೋಡಿ ತರಾತುರಿಯಲ್ಲಿ ಪರ್ಸ್ನಿಂದ ಟಿಕೆಟ್ ತೆಗೆದು ಅವನಿಗೆ ತೋರಿಸಿದೆ.
ತನ್ನ ಕೈಯಲ್ಲಿದ್ದ ರಿಸರ್ವೇಷನ್ ಲಿಸ್ಟ್ನಲ್ಲಿ ನೋಡಿ “ಕನ್ಫರ್ಮ್ ಆಗಿಲ್ಲ ಸರ್” ಅಂತ ಸಾವಿನ ಸುದ್ದಿಯನ್ನು ನಿಧಾನವಾಗಿ ಹೇಳಿದನು ಟಿಸಿ.
‘ಹತೋಸ್ಮಿ, ಇನ್ನು ಏನು ಮಾಡುವುದು? ನನ್ನ ಮಗ ಹೇಳಿದಂತೆ ಅವನ ಬಾಲ್ಯ ಸ್ನೇಹಿತನಾದ ರೈಲ್ವೇ ಆಫೀಸರ್ ರಾಜೀವ್ನನ್ನು ಭೇಟಿಯಾಗಲೇಬೇಕು’ ಎಂದುಕೊಂಡು ಎದ್ದು ಸೂಟ್ಕೇಸ್ ಹಿಡಿದುಕೊಂಡ ತಕ್ಷಣ ಹ್ಯಾಂಡಲ್ ಕಳಚಿ ನನ್ನ ಕೈಗೆ ಬಂತು.

ಆ ಮಗುವಿನ ತುಂಟತನದ ಫಲ ಈಗ ನನ್ನ ಪ್ರಾಣಕ್ಕೇ ಬಂತು ಅಲ್ವಾ! ಅಷ್ಟಕ್ಕೂ ಮನೆಯಲ್ಲಿ ನನ್ನ ಮಗ ಹೇಳಿಯೇ ಇದ್ದ.
“ಅಪ್ಪ, ಮದುವೆಗೆ ಹೋಗುತ್ತಾ ಆ ಹಳೆಯ ಪೆಟ್ಟಿಗೆ ಯಾಕೆ? ನಾನು ಅಮೆರಿಕದಿಂದ ತಂದ ಹೊಸ ಸೂಟ್ಕೇಸ್ ತೆಗೆದುಕೊಂಡು ಹೋಗಿ” ಅಂತ.
ಅಯ್ಯೋ, ಕೇಳಿದ್ನ ಅಲ್ವಾ! ಹೂಂ.
“ಏನೋ ಹುಚ್ಚ, ಹಳೆಯದಾದರೆ ಏನಂತೆ, ನನ್ನ ಪೆಟ್ಟಿಗೆ ಚೆನ್ನಾಗಿದೆ. ಅಷ್ಟಕ್ಕೂ, ಓಲ್ಡ್ ಈಸ್ ಗೋಲ್ಡ್. ನಾನೂ, ನಿಮ್ಮ ಅಮ್ಮಾ ವೃದ್ಧರಾಗಲಿಲ್ವಾ” ಅಂತ ಅವನ ಮಾತುಗಳನ್ನು ಹಗುರವಾಗಿ ತಳ್ಳಿಹಾಕಿದೆ.
ಆ ವಿಷಯ ನೆನಪಾಗಿ “ಮಾಡಿದ್ದುಣ್ಣೋ ಮಹರಾಯ” ಎಂದುಕೊಂಡು ಪೆಟ್ಟಿಗೆಯನ್ನು ಎತ್ತಿಕೊಂಡು ನಾಲ್ಕು ಹೆಜ್ಜೆ ಇಟ್ಟ ಕೂಡಲೇ ತುಂಬಾ ಆಯಾಸವಾಗಿ ಅದನ್ನು ಕೆಳಗಿಟ್ಟೆ. ಈಗ ಏನು ಮಾಡಬೇಕು?

ಕ್ಷಣಮಾತ್ರದಲ್ಲಿ ಒಂದು ಆಲೋಚನೆ ಹೊಳೆಯಿತು, ತಕ್ಷಣ ನನ್ನ ಬಲಕ್ಕೆ ಇದ್ದ ಬೆಂಚಿನ ಮೇಲೆ ಕುಳಿತಿದ್ದ ಯುವತಿ ಬಳಿಗೆ ಹೋದೆ.
ಇಷ್ಟೊತ್ತಿನಿಂದ ಅವಳು ನನ್ನನ್ನೇ ಗಮನಿಸುತ್ತಿದ್ದಳೇನೋ ‘ಏನು ಅಂಕಲ್, ಏನಾದರೂ ಸಹಾಯ ಬೇಕಾ?’ ಅಂತ ನಗುತ್ತಾ ಮಾತನಾಡಿಸಿದಳು.
ನಿಸ್ಕಲ್ಮಷವಾದ ಆ ನಗುವನ್ನು ನೋಡಿದಾಗ ಮನಸ್ಸಿಗೆ ಆರಾಮ ಅನಿಸಿತು, “ಅಮ್ಮಾ, ನಾನು ಅರ್ಜೆಂಟ್ ಆಗಿ ಹೋಗಿ ಇಲ್ಲಿನ ರೈಲ್ವೇ ಆಫೀಸರ್ನನ್ನು ಭೇಟಿ ಮಾಡಬೇಕು. ನಾನು ಹಿಂದಿರುಗುವವರೆಗೆ ಸ್ವಲ್ಪ ಈ ಪೆಟ್ಟಿಗೆಯನ್ನು ನೋಡಿಕೊಳ್ಳುತ್ತೀಯಾ ತಾಯೀ” ಅಂತ ಕೇಳಿಕೊಂಡೆ.
“ಖಂಡಿತ ಅಂಕಲ್. ನೀವು ಕೂಡ ಕಾವೇರಿ ಎಕ್ಸ್ ಪ್ರೆಸ್ ಗೆ ಅಲ್ವಾ. ಇನ್ನೂ ಸಾಕಷ್ಟು ಸಮಯವಿದೆ. ನೀವು ಹೋಗಿ ಬನ್ನಿ. ನಿಮ್ಮ ಸಾಮಾನು ನಾನು ಸುರಕ್ಷಿತವಾಗಿ ನೋಡಿಕೊಳ್ಳುತ್ತೇನೆ. ಅಂದಹಾಗೆ, ನನ್ನ ಹೆಸರು ಸಾಹಿತಿ.”
“ಚೆನ್ನಾಗಿದೆ ಅಮ್ಮಾ ನಿನ್ನ ಹೆಸರು. ಮಕ್ಕಳು ಮುತ್ತುಗಳಂತೆ ಇದ್ದಾರೆ. ನನ್ನ ಹೆಸರು ಮಹೇಂದ್ರ ಗೌಡ. ಬ್ಯಾಂಕ್ ಮ್ಯಾನೇಜರ್ ಆಗಿ ಐದು ವರ್ಷಗಳ ಹಿಂದೆ ನಿವೃತ್ತನಾದೆ.”

ಪರಸ್ಪರ ಪರಿಚಯಗಳ ನಂತರ ಸಾಹಿತಿ ನೀಡಿದ ಭರವಸೆಯೊಂದಿಗೆ, ನನ್ನ ಪೆಟ್ಟಿಗೆಯನ್ನು ಅವಳ ಬಳಿ ಬಿಟ್ಟು ಹೋದೆ.


ರಾಜೀವ್ನನ್ನು ಭೇಟಿ ಮಾಡಿ ವಿಷಯ ಹೇಳಿದ ಕೂಡಲೇ ವಿಐಪಿ ಕೋಟಾದಲ್ಲಿ ನನಗೆ ಬರ್ತ್ ವ್ಯವಸ್ಥೆ ಮಾಡಿದನು. ಅವನಿಗೆ ಧನ್ಯವಾದಗಳು ತಿಳಿಸಿ ಹೊರಗೆ ಬಂದಾಗ ಪಕ್ಕದಲ್ಲಿ ಕಂಡ ಹಣ್ಣುಗಳು, ಬಿಸ್ಕೇಟ್ ಪ್ಯಾಕೆಟ್ಗಳನ್ನು ಕೊಂಡೆ. ‘ಹಾಮ್ಮಯ್ಯ, ಇನ್ನು ತಡೆರಹಿತವಾಗಿ ಪ್ರಯಾಣ ಮಾಡಬಹುದು’ ಅಂತ ಅಂದುಕೊಂಡು ಮತ್ತೆ ಪ್ಲಾಟ್ಫಾರ್ಮ್ ಕಡೆಗೆ ನಡೆಯಲು ಹೊರಟಾಗ ‘ತಪ್ಪಿಕೊಳ್ಳಿ ತಪ್ಪಿಸಿಕೊಳ್ಳಿ’ ಎನ್ನುತ್ತಾ ಮೂವರು ಕೂಲಿಗಳು ಲಗೇಜ್ ತೆಗೆದುಕೊಂಡು ಹೋಗುತ್ತಾ ಅಡ್ಡಬಂದಾಗ, ಪಕ್ಕಕ್ಕೆ ಸರಿದು ಅವರಿಗೆ ದಾರಿ ಮಾಡಿಕೊಟ್ಟೆ.
ಆ ಕೂಲಿಗಳ ಕೈಯಲ್ಲಿದ್ದ ಟ್ರಂಕ್ ಪೆಟ್ಟಿಗೆಗಳನ್ನು ನೋಡಿದ ಕೂಡಲೇ ನನ್ನ ಮನಸ್ಸು ನಲವತ್ತು ವರ್ಷಗಳ ಹಿಂದೆ ಹೋಯಿತು.


ಪ್ರೊಬೇಷನ್ ತರಬೇತಿ ಮುಗಿದ ನಂತರ ಮೊದಲ ಕೆಲಸ ದೆಹಲಿಯಲ್ಲಿ ಸಿಕ್ಕಿತು.
ಕಚೇರಿಗೆ ಸಮೀಪದಲ್ಲಿರುವ ಒಂದು ಸಣ್ಣ ಫ್ಲಾಟ್ನಲ್ಲಿ ಇನ್ನಿಬ್ಬರೊಂದಿಗೆ ವಾಸಿಸುತ್ತಾ ನಾನೇ ಅಡುಗೆ ಮಾಡಿಕೊಳ್ಳಲು ಶುರುಮಾಡಿದೆ.
“ನೀನು ಬ್ಯಾಂಕ್ ಕೆಲಸಕ್ಕೆ ಸೇರಿದ್ದಿ ಗೊತ್ತಾದ ತಿಳಿದ ತಕ್ಷಣ ಹೆಣ್ಣುಮಕ್ಕಳ ಪೋಷಕರು ಪ್ರತಿದಿನ ನಮ್ಮ ಮನೆಯ ಸುತ್ತಲೂ ತಿರುಗುತ್ತಿದ್ದಾರೆ. ನಿನಗೂ ಇಪ್ಪತ್ತೈದು ವರ್ಷ ದಾಟುತ್ತಿದೆ. ತರಬೇತಿ ಮುಗಿದು ಕೆಲಸವೂ ಪರ್ಮನೆಂಟ್ ಆಗಿದೆ. ಇನ್ನು ಯಾವುದಕ್ಕೆ ತಡ? ಎಷ್ಟು ದಿನ ಅಲ್ಲಿ ಒಬ್ಬಂಟಿಯಾಗಿ ಅಡುಗೆ ಮಾಡಿಕೊಳ್ಳುತ್ತೀಯಾ? ಬಂದ ಸಂಬಂಧಗಳಲ್ಲಿ ನಮಗೆ ಸೂಕ್ತವಾದವುಗಳನ್ನು ನಾನೂ, ನಿಮ್ಮ ಅಮ್ಮಾ ಆಯ್ಕೆ ಮಾಡಿ ಇಡುತ್ತೇವೆ. ನೀನು ಒಂದು ವಾರ ರಜೆ ಹಾಕಿ ಇಲ್ಲಿಗೆ ಬಂದರೆ ನಿನಗೆ ಇಷ್ಟವಾದ ಸಂಬಂಧವನ್ನು ಖಚಿತಪಡಿಸಿಕೊಳ್ಳೋಣ” ಅಂತ ಫೋನ್ ಮಾಡಿದಾಗಲೆಲ್ಲಾ ಅಮ್ಮಾ ಅಪ್ಪಾ ಸತಾಯಿಸುತ್ತಿದ್ದರೆ “ನನ್ನ ಮದುವೆಗೆ ಈಗ ಏನು ಅವಸರ? ಮೊದಲು ತಂಗಿಯ ಮದುವೆ ಮಾಡಿ ಜವಾಬ್ದಾರಿ ತೀರಿಸಿಕೊಳ್ಳೋಣ. ಆ ನಂತರವೇ ನನ್ನ ಮದುವೆ” ಅಂತ ಅವರಿಗೆ ಗಟ್ಟಿಯಾಗಿ ಹೇಳಿದೆ.

ಅದರಿಂದ ನಮ್ಮವರು ನನ್ನ ಮದುವೆ ಪ್ರಸ್ತಾಪವನ್ನು ತಾತ್ಕಾಲಿಕವಾಗಿ ಪಕ್ಕಕ್ಕಿಟ್ಟು, ಆ ವರ್ಷವೇ ಡಿಗ್ರಿ ಮುಗಿಸಿಕೊಂಡಿದ್ದ ನಮ್ಮ ತಂಗಿಗೆ ಸಂಬಂಧಗಳನ್ನು ಹುಡುಕಲು ಶುರುಮಾಡಿದರು.
ಎರಡು ವರ್ಷಗಳ ನಂತರ ಒಂದು ದಿನ ಬೆಳಗ್ಗೆ ಅಪ್ಪನಿಂದ ಫೋನ್ ಬಂತು.
“ಏನೋ, ತಂಗಿಗೆ ಒಳ್ಳೆಯ ಸಂಬಂಧ ಕುದುರಿದೆ. ಹದಿನೈದು ದಿನಗಳಲ್ಲಿ ಮುಹೂರ್ತಗಳನ್ನು ಇಟ್ಟುಕೊಂಡಿದ್ದೇವೆ. ನೀನು ಆದಷ್ಟು ಬೇಗ ಹೊರಟು ಬಾ” ಅಂತ ಅಪ್ಪ ಹೇಳಿದ ಶುಭ ಸುದ್ದಿಗೆ ನನ್ನ ಕಾಲುಗಳು ನೆಲದ ಮೇಲೆ ನಿಲ್ಲಲಿಲ್ಲ.
ತಕ್ಷಣ ಕಚೇರಿಗೆ ರಜೆ ಹಾಕಿ ತತ್ಕಾಲ್ನಲ್ಲಿ ರೈಲು ಟಿಕೆಟ್ ಖರೀದಿಸಿದೆ.
ನನಗೆ ಬರುತ್ತಿದ್ದ ಸಂಬಳವನ್ನು ಮಿತವಾಗಿ ಬಳಸಿಕೊಂಡು ಇಷ್ಟರವರೆಗೆ ನಾನು ಉಳಿಸಿದ ಹಣಕ್ಕೆ, ನಮ್ಮ ಬ್ಯಾಂಕ್ನಿಂದ ತೆಗೆದುಕೊಂಡ ಸಾಲವನ್ನೂ ಸೇರಿಸಿ ಒಟ್ಟು ಐವತ್ತು ಸಾವಿರ ರೂಪಾಯಿಗಳನ್ನು, ಜಾಗರೂಕತೆಯಿಂದ ಟ್ರಂಕ್ ಪೆಟ್ಟಿಗೆಯಲ್ಲಿ ಇಟ್ಟುಕೊಂಡು ಕರ್ನಾಟಕ ಎಕ್ಸ್ಪ್ರೆಸ್ ಏರಲು ಗಂಟೆಗಟ್ಟಲೆ ಮುಂಚಿತವಾಗಿ ರೈಲ್ವೇ ಸ್ಟೇಷನ್ ತಲುಪಿದೆ.

ಪ್ಲಾಟ್ಫಾರ್ಮ್ ಮೇಲೆ ಬೆಂಚಿನ ಮೇಲೆ ಕುಳಿತು ನಿಧಾನವಾಗಿ ಇಂಡಿಯಾ ಟುಡೇ ಪತ್ರಿಕೆಯನ್ನು ತೆರೆದು ಅದರಲ್ಲಿ ಮುಳುಗಿ ಹೋದೆ.
ಐದು ನಿಮಿಷ ಕಳೆದಿದೆಯೋ ಇಲ್ಲವೋ ‘ಕೂಲಿ, ಸಾಮಾನ್ ಇಧರ್ ರಖೋ’, ‘ದೀದಿ, ಆಪ್ ಉಧರ್ ಬೈಟೋ’ ಅಂತ ದೊಡ್ಡದಾಗಿ ಮಾತುಗಳು ಕೇಳಿಸುತ್ತಿದ್ದರೆ ತಲೆ ಎತ್ತಿ ನೋಡಿದೆ.
ದೊಡ್ಡ ಕುಟುಂಬ. ಮಕ್ಕಳು, ವೃದ್ಧರು ಸೇರಿ ಇಪ್ಪತ್ತೈದು ಜನಕ್ಕಿಂತ ಹೆಚ್ಚಿದ್ದರು. ಮಕ್ಕಳೇ ಹತ್ತು ಜನರಿದ್ದರು. ಅವರ ತುಂಟತನದಿಂದ ಆ ಜಾಗವೆಲ್ಲಾ ಜಾತ್ರೆ ತರಹ ಆಯಿತು. ಎಲ್ಲರೂ ಸೇರಿ ಯಾವುದೋ ಮದುವೆಗೆ ಪ್ರಯಾಣಿಸು ಹೋಗುತ್ತಿದ್ದಂತಿದೆ.
ಸಾಮಾನುಗಳನ್ನು ಸರಿಪಡಿಸಿದ ನಂತರ, ಅವರಲ್ಲಿ ನನ್ನ ವಯಸ್ಸಿನ ಹುಡುಗನೊಬ್ಬ ಬಂದು ನನ್ನ ಪಕ್ಕದಲ್ಲಿ ಕುಳಿತು ನನ್ನ ಜೊತೆ ಮಾತನಾಡಲು ಶುರುಮಾಡಿದ.

ತನ್ನ ಹೆಸರು ಇಕ್ಬಾಲ್ ಎಂದೂ, ಕುಟುಂಬವೆಲ್ಲಾ ಆಗ್ರಾ ಹತ್ತಿರ ಇರುವ ಸಣ್ಣ ಹಳ್ಳಿಯಲ್ಲಿ ಮದುವೆಗೆ ಹೋಗುತ್ತಿದ್ದೇವೆ ಎಂದೂ ಹೇಳಿದ. ಸಮವಯಸ್ಕರಾಗಿದ್ದರಿಂದ ನಾವಿಬ್ಬರೂ ಬೇಗನೆ ಹೊಂದಿಕೊಂಡೆವು. ಅವನೊಂದಿಗೆ ಮಾತನಾಡುತ್ತಿದ್ದರೆ ಸಮಯ ಹೇಗೆ ಕಳೆದುಹೋಯಿತೋ ಗೊತ್ತಾಗಲಿಲ್ಲ.
ರೈಲು ಬರಲು ಮುಕ್ಕಾಲು ಗಂಟೆ ಸಮಯವಿದೆ ಎನ್ನುವಾಗ “ಅನಿವಾರ್ಯ ಕಾರಣಗಳಿಂದ ಈ ಸಂಜೆ ಐದು ಗಂಟೆಗೆ ಹೊರಡಬೇಕಿದ್ದ ಕರ್ನಾಟಕ ಎಕ್ಸ್ಪ್ರೆಸ್ ರದ್ದುಪಡಿಸಲಾಗಿದೆ” ಅಂತ ಮೈಕ್ನಲ್ಲಿ ಘೋಷಣೆ ಕೇಳಿದಾಗ ಆಘಾತವಾಯಿತು. ಎರಡು ಕ್ಷಣಗಳ ಕಾಲ ನನಗೇನು ಮಾಡಬೇಕೆಂದು ಅರ್ಥವಾಗಲಿಲ್ಲ.
ನಂತರ, ನನ್ನ ಟ್ರಂಕ್ ಪೆಟ್ಟಿಗೆಯನ್ನು ನೋಡಿಕೊಳ್ಳಲು ಇಕ್ಬಾಲ್ಗೆ ಕೊಟ್ಟು, ವಿಷಯ ತಿಳಿದುಕೊಳ್ಳಲು ತರಾತುರಿಯಲ್ಲಿ ರೈಲ್ವೆ ಎನ್ಕ್ವೈರಿಗೆ ಹೋದೆ. ಅಲ್ಲಿ ಉದ್ದನೆಯ ಕ್ಯೂ ಇತ್ತು. ನನ್ನ ಸರದಿ ಬರುವಷ್ಟರಲ್ಲಿ ಇಪ್ಪತ್ತು ನಿಮಿಷ ಹಿಡಿಯಿತು.

ಅಲ್ಲಿನ ಕ್ಲರ್ಕ್ ಹೇಳಿದ ಪ್ರಕಾರ, ನಾನು ಆ ಘೋಷಣೆಯನ್ನು ತಪ್ಪಾಗಿ ಅರ್ಥಮಾಡಿ ಕೊಂಡಿದ್ದೇನೆಂದೂ, ರದ್ದಾಗಿದ್ದು ಕೇವಲ ಎರಡು ಎಸಿ ಕೋಚ್ಗಳು ಮಾತ್ರವೇ ಹೊರತು ಪೂರ್ಣ ರೈಲು ಅಲ್ಲವೆಂದೂ ತಿಳಿದ ನಂತರ ಅಲ್ಲಿಯವರೆಗೂ ಇದ್ದ ನನ್ನ ಆತಂಕವೆಲ್ಲಾ ಮಾಯವಾಯಿತು.
ಎರಡು ವರ್ಷಗಳಿಂದ ದೆಹಲಿಯಲ್ಲಿ ಇದ್ದರೂ ಇನ್ನೂ ಹಿಂದಿ ಭಾಷೆಯಲ್ಲಿ ಹಿಡಿತ ಸಾಧಿಸದ ನನ್ನನ್ನೇ ನಾನು ಬೈದುಕೊಳ್ಳುತ್ತಾ ಮತ್ತೆ ಪ್ಲಾಟ್ಫಾರ್ಮ್ಗೆ ಬಂದಾಗ ಅಲ್ಲಿ ನನಗೆ ಮತ್ತೊಂದು ಆಘಾತ ಕಾದಿತ್ತು! ಇಷ್ಟರವರೆಗೆ ನಾನು ಕುಳಿತಿದ್ದ ಜಾಗದಲ್ಲಿ ಆ ದೊಡ್ಡ ಕುಟುಂಬವೂ ಇರಲಿಲ್ಲ. ನನ್ನ ಟ್ರಂಕ್ ಪೆಟ್ಟಿಗೆಯೂ ಇರಲಿಲ್ಲ. ಆತಂಕದಿಂದ ನಾನು ಆ ಕಡೆ ಈ ಕಡೆ ನೋಡುತ್ತಿದ್ದರೆ, ಓಡಿ ಬರುತ್ತಿದ್ದ ಇಕ್ಬಾಲ್ ಕಂಡನು.

ಹೆದರಿಕೊಂಡು “ಭಾಯಿ ಸಾಬ್, ನಿಮ್ಮ ಟ್ರಂಕ್ ಪೆಟ್ಟಿಗೆ” ಅಂತ ಪೆಟ್ಟಿಗೆಯನ್ನು ನನ್ನ ಕೈಗೆ ಕೊಟ್ಟ.
ಹೋದ ಪ್ರಾಣ ಮರಳಿ ಬಂದಂತಾಯಿತು. “ನಮ್ಮ ರೈಲು ಬಂದ ಗಡಿಬಿಡಿಯಲ್ಲಿ ನಮ್ಮ ತಮ್ಮಂದಿರು ತಪ್ಪಾಗಿ ನಿಮ್ಮ ಪೆಟ್ಟಿಗೆಯನ್ನು ನಮ್ಮ ಸಾಮಾನುಗಳ ಜೊತೆ ಕೋಚ್ನಲ್ಲಿ ಇಟ್ಟುಬಿಟ್ಟರು” ಅಂತ ಸಮಜಾಯಿಷಿ ನೀಡುತ್ತಿದ್ದ ಅವನ ಮಾತುಗಳನ್ನು ನಾನು ಗಮನಿಸಲಿಲ್ಲ.
ಪೆಟ್ಟಿಗೆ ಸಿಕ್ಕಿದ ಆನಂದದಲ್ಲಿ ಪ್ರೀತಿಯಿಂದ ಅವನನ್ನು ಅಪ್ಪಿಕೊಂಡೆ.
ದಾರಿಯಲ್ಲಿ ನಾನು ಕೊಂಡ ಚಾಕೊಲೇಟ್ಗಳನ್ನು ಮಕ್ಕಳಿಗೆ ಕೊಡಲು ಹೇಳಿ ಅವನ ಕೈಯಲ್ಲಿ ಇಟ್ಟೆ.
ಮನೆಗೆ ತಲುಪಿದ ಕೂಡಲೇ ಈ ಘಟನೆಯನ್ನು ಅಮ್ಮಾ ಅಪ್ಪನಿಗೆ ಹೇಳಿದೆ.
“ಆ ಹುಡುಗ ಒಳ್ಳೆಯವನು ಆದ ಕಾರಣ ಸರಿಯಾಯಿತು, ಇಲ್ಲದಿದ್ದರೆ ಎರಡು ವರ್ಷಗಳಿಂದ ಉಳಿಸಿದ ಕಷ್ಟಪಟ್ಟು ಸಂಪಾದಿಸಿದ ಹಣವೆಲ್ಲಾ ಹಾಳಾಗುತ್ತಿತ್ತು. ಅಷ್ಟಕ್ಕೂ, ಪರಿಚಯವಿಲ್ಲದವರನ್ನು ನಂಬಿ ಪೆಟ್ಟಿಗೆಯನ್ನು ಹೇಗೆ ಒಪ್ಪಿಸಿದೆ” ಅಂತ ಅಮ್ಮ ಬೈದಳು.

“ಅದು ಏನಪ್ಪಾ ಬಿಂದೂ! ಮನುಷ್ಯ ಮನುಷ್ಯನನ್ನು ನಂಬದಿದ್ದರೆ ಹೇಗೆ? ಲೋಕದಲ್ಲಿ ಕೆಲವರು ಮೋಸಗಾರರು, ವಂಚಕರು ಇದ್ದ ಮಾತ್ರಕ್ಕೆ ಇಡೀ ಮಾನವ ಜನಾಂಗದ ಮೇಲೆಯೇ ನಂಬಿಕೆ ಕಳೆದುಕೊಳ್ಳುವುದು ಸರಿಯಲ್ಲ. ವಸ್ತು ನಮ್ಮದಾದರೆ ನಮ್ಮ ಕೈ ದಾಟಿ ಎಲ್ಲಿಗೂ ಹೋಗುವುದಿಲ್ಲ” ಅಂತ ಅಪ್ಪ ತಕ್ಷಣ ಅಮ್ಮನ ಮಾತುಗಳನ್ನು ಖಂಡಿಸಿದರು.
ನಂತರ ನನ್ನ ಸ್ನೇಹಿತರಿಗೂ, ಮದುವೆಯಾದ ನಂತರ ನನ್ನ ಹೆಂಡತಿಗೂ, ಮಗನಿಗೂ, ಮತ್ತು ತಿಳಿದಿರುವವರೆಲ್ಲರಿಗೂ ಈ ಘಟನೆಯನ್ನು ಮನುಷ್ಯರಲ್ಲಿನ ಪ್ರಾಮಾಣಿಕತೆಗೆ ಉತ್ತಮ ಉದಾಹರಣೆಯಾಗಿ ಹೇಳುತ್ತಾ “ಯಾವುದೇ ವ್ಯವಸ್ಥೆಯಲ್ಲಾದರೂ ಕೆಟ್ಟವರೂ, ಒಳ್ಳೆಯವರೂ ಇರುತ್ತಾರೆ. ಎಂದಾದರೂ ಒಬ್ಬರ ಕೈಯಲ್ಲಿ ಮೋಸಕ್ಕೊಳಗಾಗಿದ್ದೇವೆ ಅಂತ ಹೇಳಿ ಇಡೀ ಜೀವನ ಯಾರನ್ನೂ ನಂಬದೆ ಎಲ್ಲರನ್ನೂ ಅನುಮಾನಿಸುತ್ತಾ ಹೋಗುವುದು ತಪ್ಪು. ‘ಯದ್ಭಾವಂ ತದ್ಭವತಿ’ ಎಂದಿದ್ದಾರೆ. ಆ ದಿನ ಇಕ್ಬಾಲ್ನನ್ನು ನಾನು ಮನಸ್ಸಿನಿಂದ ನಂಬಿ ಅವನಿಗೆ ನನ್ನ ಪೆಟ್ಟಿಗೆಯನ್ನು ಒಪ್ಪಿಸಿದೆ. ಅವನ ಮೇಲಿದ್ದ ನನ್ನ ನಂಬಿಕೆಯೇ ನನ್ನ ಪೆಟ್ಟಿಗೆಯನ್ನು ಮತ್ತೆ ನನ್ನ ಬಳಿಗೆ ತಲುಪಿಸಿರಬಹುದು. ಎದುರಿನ ಮನುಷ್ಯನ ಪ್ರಾಮಾಣಿಕತೆಯನ್ನು ಶಂಕಿಸುವುದು ಮಹಾಪಾಪ” ಅಂತ ಮುಗಿಸುತ್ತಿದ್ದೆ.


“ಚಾಯ್ ಚಾಯ್” ಎಂಬ ಕೂಗಿನಿಂದ ಅಂದಿನ ಘಟನೆಗಳ ನೆನಪುಗಳಿಂದ ಹೊರಬಂದೆ. ಮನುಷ್ಯರ ಬಗ್ಗೆ ನಂಬಿಕೆಯ ವಿಷಯಕ್ಕೆ ಬಂದರೆ ಇಂದಿಗೂ ನನ್ನ ಅಭಿಪ್ರಾಯದಲ್ಲಿ ಯಾವುದೇ ಬದಲಾವಣೆಯಿಲ್ಲ. ಮನೆಯಲ್ಲಿ ನನ್ನ ಹೆಂಡತಿ, ಸೊಸೆ, ಮತ್ತು ದಾರಿಯುದ್ದಕ್ಕೂ ನನ್ನ ಮಗ ನನ್ನ ಕಿವಿಯಲ್ಲಿ ಹೇಳಿದ ಎಲ್ಲಾ ಎಚ್ಚರಿಕೆಗಳನ್ನು ಗಾಳಿಗೊಡ್ಡಿ ಒಬ್ಬ ಅನ್ಯ ಯುವತಿಯನ್ನು ಮನಃಪೂರ್ವಕವಾಗಿ ನಂಬಿ ನನ್ನ ಪೆಟ್ಟಿಗೆಯನ್ನು ಅವಳಿಗೆ ಒಪ್ಪಿಸಿ ಬಂದಿದ್ದೇ ಇದಕ್ಕೆ ಸಾಕ್ಷಿ!
ಚಾಯ್ ಹುಡುಗನಿಗೆ ಹಣ ಕೊಟ್ಟ ನಂತರ, ನಿಧಾನವಾಗಿ ಚಾಯ್ ಕುಡಿಯುತ್ತಾ ಪ್ಲಾಟ್ಫಾರ್ಮ್ ತಲುಪಿದೆ. ಬೆಂಚಿನ ಬಳಿ ಬಂದಾಗ ಅಲ್ಲಿ ಸಾಹಿತಿ ಅಥವಾ ಮಕ್ಕಳು ಯಾರೂ ಕಾಣಿಸಲಿಲ್ಲ, ಗಾಬರಿಯಾಯಿತು. “ಏನಿದು ಭಗವಂತಾ, ಇಷ್ಟು ದಿನ ಇಲ್ಲದಿದ್ದು ಹೀಗಾಯಿತಲ್ಲಾ” ಅಂತ ಅಂದುಕೊಂಡೆ.
ಕಳೆದುಹೋದ ಪೆಟ್ಟಿಗೆಗಿಂತ ‘ಇಷ್ಟು ವರ್ಷಗಳಿಂದ ನಾನು ಮನುಷ್ಯರ ಮೇಲೆ ಬೆಳೆಸಿಕೊಂಡಿದ್ದ ನಂಬಿಕೆಗೆ ಈ ವೃದ್ಧಾಪ್ಯದಲ್ಲಿ ಇಷ್ಟು ದೊಡ್ಡ ವಿಘ್ನವಾಯಿತಲ್ಲಾ’ ಎಂಬ ನೋವು ನನ್ನ ಮನಸ್ಸನ್ನು ಸುಡುತ್ತಿದ್ದರೆ ಅಲ್ಲೇ ಸ್ತಬ್ಧವಾಗಿ ಕೂತಿದ್ದೆ.

ದೆಹಲಿ ರೈಲ್ವೇ ಸ್ಟೇಷನ್ನಲ್ಲಿ ನನ್ನ ಅನುಭವವನ್ನು ನನ್ನ ಸೊಸೆಗೆ ಹೇಳಿದಾಗ ಅವಳು ನನ್ನೊಂದಿಗೆ ಹೇಳಿದ ಮಾತುಗಳು ನನ್ನ ಕಿವಿಯಲ್ಲಿ ಗುನುಗುಡುತ್ತಿದ್ದವು.
“ಈ ಕಾಲದಲ್ಲಿ ಎಲ್ಲರೂ ದಗಾಕೋರರೇ ಮಾವ. ಈಗ ಯಾರಿಗಾದರೂ ಸಾಮಾನು ಒಪ್ಪಿಸಲು ಹೋದರೆ ಅದರಲ್ಲಿ ಯಾವುದಾದರೂ ಬಾಂಬ್ ಇದೆಯೇನೋ ಎಂಬ ಭಯದಿಂದ ಯಾರೂ ತೆಗೆದುಕೊಳ್ಳುವುದಿಲ್ಲ. ಒಂದು ವೇಳೆ ತಲೆ ತಿರುಗಿದವನೊಬ್ಬ ಒಪ್ಪಿಕೊಂಡರೂ ಅವನು ಖಂಡಿತ ಕಳ್ಳನೇ ಆಗಿರುತ್ತಾನೆ. ನೀವು ಅತ್ತ ಹೋದರೆ ಅವನು ಇತ್ತ ಆ ಸಾಮಾನುಗಳೊಂದಿಗೆ ಓಡಿಹೋಗುವುದು ಗ್ಯಾರಂಟಿ.”

“ಕೊನೆಗೆ ನನ್ನ ಸೊಸೆಯ ಮಾತುಗಳೇ ನಿಜವಾಯಿತಾ? ಮನುಷ್ಯರಲ್ಲಿ ನೀತಿ, ಪ್ರಾಮಾಣಿಕತೆಗಳು ಮಾಯವಾಗಿವೆಯೇ?” ಎಂದುಕೊಳ್ಳುತ್ತಿದ್ದರೆ ಮನಸ್ಸಿಗೆ ಚುಚ್ಚಿದಂತಾಯಿತು. ‘ನಿಮ್ಮ ಒಳ್ಳೆಯತನದಿಂದ ಕಂಡ ಪ್ರತಿಯೊಬ್ಬರನ್ನೂ ನಂಬಿಬಿಡುತ್ತೀರಿ, ಎಲ್ಲರೊಂದಿಗೂ ಮಾತುಗಳನ್ನು ಬೆಳೆಸುತ್ತೀರಿ. ಬಿಳಿ ಇರುವವೆಲ್ಲಾ ಹಾಲು, ಕಪ್ಪು ಇರುವವೆಲ್ಲಾ ನೀರು ಎಂದುಕೊಳ್ಳುವ ನಿಮ್ಮ ಭೋಳಾತನ ಈ ದಿನಗಳಲ್ಲಿ ನಡೆಯುವುದಿಲ್ಲ. ಒಂದು ಕ್ಷಣ ಮರೆತರೂ ನಿಂತಲ್ಲಿಯೇ ಕಳ್ಳತನ ಮಾಡುವ ಪ್ರಬುದ್ಧರು ಇರುವ ಕಾಲವಿದು. ಅದರಲ್ಲಿಯೂ ರೈಲುಗಳಲ್ಲಿ ಹೇಳುವುದೇ ಬೇಡ! ನಿಮ್ಮ ಪೆಟ್ಟಿಗೆಯಲ್ಲಿ ಲಕ್ಷಾಂತರ ಬೆಲೆಯ ಮದುವೆ ಆಭರಣಗಳಿವೆ ಅಂತ ಯಾರಾದರೂ ಒಬ್ಬರು ಗುರುತಿಸಿದರೆ ಇನ್ನು ಅಷ್ಟೇ ಸಂಗತಿ. ಆದ್ದರಿಂದ ನಿಮ್ಮ ಹಳೇಯ ಪದ್ಧತಿಗಳನ್ನು ಪೆಟ್ಟಿಗೆಯಲ್ಲೇ ಇಟ್ಟು ಜಾಗ್ರತೆಯಿಂದ ಹೋಗಿ ಸುರಕ್ಷಿತವಾಗಿ ಬನ್ನಿ’ ಅಂತ ಮನೆಯವರು ಪದೇ ಪದೇ ಹೇಳಿದ ಮಾತುಗಳನ್ನು ಗಾಳಿಗೊಡ್ಡಿ ತಪ್ಪು ಮಾಡಿದೆನೇನೋ!
ನನ್ನಲ್ಲೇ ನಾನು ಮಥನಗೊಂಡೆ. ಪೆಟ್ಟಿಗೆಯಲ್ಲಿದ್ದ ಆಭರಣಗಳೆಲ್ಲಾ ಸೇರಿಸಿದರೆ ಐವತ್ತು ತೊಲಕ್ಕಿಂತ ಹೆಚ್ಚಿರುತ್ತವೆ. ಅವುಗಳ ಕೂಲಿ ಖರ್ಚು ಸುಮಾರು ಆರು ತೊಲಗಳಿಗೆ ಸಮಾನವಾಗಿರುತ್ತದೆ. ಆ ಆಭರಣಗಳೆಲ್ಲವನ್ನೂ ತನ್ನ ತಂಗಿಯ ಮದುವೆಗಾಗಿ ನಮಗೆ ಚೆನ್ನಾಗಿ ತಿಳಿದ ಅಂಗಡಿಯಲ್ಲಿ ವಿಶೇಷವಾಗಿ ಮಾಡಿಸಿದ್ದು ನನ್ನ ಸೊಸೆ. ಮದುವೆಗೆ ಮುಂಚಿತವಾಗಿ ಲಕ್ಷ್ಮೀದೇವಿ ಪ್ರತಿಮೆಗೆ ಮದುವೆ ಆಭರಣಗಳನ್ನೆಲ್ಲಾ ಅಲಂಕರಿಸಿ ಮದುಮಗಳಿಂದ ಪೂಜೆ ಮಾಡಿಸುವುದು ನಮ್ಮ ಸಂಬಂಧಿಕರ ಮನೆಯ ಸಂಪ್ರದಾಯ. ಆದ್ದರಿಂದ ಆಭರಣಗಳನ್ನು ತೆಗೆದುಕೊಂಡು ಮದುವೆಗೆ ಒಂದು ವಾರ ಮುಂಚೆಯೇ ಊರಿಗೆ ಹೋಗಬೇಕೆಂದುಕೊಂಡಿದ್ದ ಸೊಸೆ, ಪ್ರಯಾಣ ನಾಳೆ ಎನ್ನುವಾಗ ಟೈಫಾಯ್ಡ್ ಜ್ವರದಿಂದ ಹಾಸಿಗೆ ಹಿಡಿದಳು. ನನ್ನ ಮಗನಿಗೆ ಅದೇ ಸಮಯಕ್ಕೆ ಆಫೀಸ್ನಲ್ಲಿ ಆಡಿಟ್ ನಡೆಯುತ್ತಿದ್ದುದರಿಂದ ರಜೆ ಸಿಗಲಿಲ್ಲ.

ಈ ಎಲ್ಲಾ ಬೆಳವಣಿಗೆಗಳ ಕಾರಣದಿಂದ, ನಾನೇ ಆ ಆಭರಣಗಳನ್ನು ತೆಗೆದುಕೊಂಡು ಮೈಸೂರುದಲ್ಲಿರುವ ನಮ್ಮ ಸಂಬಂಧಿಕರ ಮನೆಗೆ ಪ್ರಯಾಣಿಸಬೇಕಾಯಿತು. ನಮ್ಮ ಸಂಬಂಧಿಕರು ಬೇರೆಯವರಲ್ಲ. ಅವರು ನನ್ನ ಆತ್ಮೀಯ ಸ್ನೇಹಿತರೇ, ಆದ್ದರಿಂದ ಅವರನ್ನು ಭೇಟಿ ಮಾಡಿದಂತಾಗುತ್ತದೆ, ಮದುವೆ ಕೆಲಸಗಳಲ್ಲಿ ಅವರಿಗೆ ಸಹಾಯ ಮಾಡಿದಂತಾಗುತ್ತದೆ ಅಂತ.. ಒಬ್ಬನೇ ಆದರೂ ಉತ್ಸಾಹದಿಂದ ಹೊರಟೆ.
ಈಗ ನಡೆದ ಈ ಅನಿರೀಕ್ಷಿತ ಘಟನೆಯಿಂದ ನನ್ನಲ್ಲಿದ್ದ ಉತ್ಸಾಹವೆಲ್ಲಾ ಉಫ್ ಅಂತ ಆರಿಹೋದಂತಾಯಿತು.


“ತಾತಾ, ತಾತಾ” ಎಂಬ ಕರೆಯಿಂದ ದಿಗ್ಭ್ರಮೆಗೊಂಡು ತಲೆ ಎತ್ತಿದೆ.
ಎದುರಿಗೆ ಸಾಹಿತಿ ಮಗಳು! ಓಡಿ ಬಂದಿದ್ದಳೇನೋ, ಉಸಿರಾಡುತ್ತಾ ನಿಂತಿದ್ದಳು.
“ತಾತಾ, ತಮ್ಮ ಏನೋ ಆ ಬೆಂಚಿನ ಮೇಲೆ ಸುಸು ಮಾಡಿದ, ಕೆಟ್ಟ ವಾಸನೆ. ಅದಕ್ಕೆ ಅದು ಖಾಲಿ – ಮಾಡಿ, ಅದುಗೋ, ಆ ಮೂಲೆಯಲ್ಲಿರುವ ಬೆಂಚಿನ ಮೇಲೆ ಕುಳಿತಿದ್ದೇವೆ. ನಾನೂ, ಅಮ್ಮಾ ಸೇರಿ ನಿಮ್ಮ ಪೆಟ್ಟಿಗೆಯನ್ನೂ ಅಲ್ಲಿಗೆ ಸಾಗಿಸಿದ್ದೇವೆ ತಾತಾ ನೋಡಿ” ಅಂತ ಆ ಮಗು ತೋರಿಸಿದ ಕಡೆ ನೋಡಿದೆ.
ನಿಜವೇ, ಮಗುವಿನ ಜೊತೆ ಅಲ್ಲಿ ಸಾಹಿತಿ ಕುಳಿತಿದ್ದಾಳೆ. ಅವಳ ಪಕ್ಕದಲ್ಲೇ ನನ್ನ ಪೆಟ್ಟಿಗೆಯೂ!
ಆಭರಣಗಳು ಸುರಕ್ಷಿತವಾಗಿ ಇವೆ ಎಂಬುದಕ್ಕಿಂತಲೂ ಮನುಷ್ಯರ ಮೇಲೆ ನಾನು ಬೆಳೆಸಿಕೊಂಡಿದ್ದ ನಂಬಿಕೆ ಉಳಿದುಕೊಂಡಿದ್ದಕ್ಕೆ ಆ ಕ್ಷಣ ನನಗೆ ಹೇಳಲಾಗದಷ್ಟು ಖುಷಿಯಾಯಿತು.

ಮಗುವನ್ನು ಕರೆದುಕೊಂಡು ತರಾತುರಿಯಲ್ಲಿ ಸಾಹಿತಿ ಬಳಿಗೆ ಹೋದೆ. ‘ತೆಗೆದುಕೊಳ್ಳಮ್ಮಾ’ ಅಂತ ಹಣ್ಣುಗಳು, ಬಿಸ್ಕೇಟ್ ಪ್ಯಾಕೆಟ್ಗಳನ್ನು ಕೈಯಲ್ಲಿ ಇಟ್ಟರೆ ನಾಚಿಕೆಯಿಂದಲೇ ಅವುಗಳನ್ನು ತೆಗೆದುಕೊಂಡಳು.
ನಂತರ ನಿಧಾನವಾಗಿ ಬೆಂಚಿನ ಮೇಲೆ ಕುಳಿತು “ಏನಮ್ಮಾ, ಒಬ್ಬಂಟಿ ಇರುವವನು ಹೀಗೆ ನನ್ನ ಸಾಮಾನುಗಳನ್ನು ಇಲ್ಲಿ ಬಿಟ್ಟು ಹೋಗಿದ್ದೀನಿ ಅಲ್ವಾ! ಅದರಲ್ಲಿ ಯಾವುದಾದರೂ ಬಾಂಬ್ ಇದೆಯೇನೋ ಎಂಬ ಭಯ ನಿನಗೆ ಬರಲಿಲ್ವಾ? ಇನ್ನು, ಈಗ ನಾನು ಕೊಟ್ಟ ಹಣ್ಣುಗಳಲ್ಲಿ ಅಥವಾ ಬಿಸ್ಕೇಟ್ಗಳಲ್ಲಿ ಯಾವುದಾದರೂ ವಿಷ ಬೆರೆಸಿದ್ದೇನೋ ಎಂಬ ಅನುಮಾನವೂ ಬರಲಿಲ್ವಾ?” ನನ್ನ ಸೊಸೆಯ ಮಾತುಗಳನ್ನು ನೆನೆಸಿಕೊಳ್ಳುತ್ತಾ ಸಾಹಿತಿಯನ್ನು ಕೇಳಿದೆ.
“ಏನು ಅಂಕಲ್, ನಿಮ್ಮನ್ನು ನೋಡಿದರೆ ಅಪ್ಪನನ್ನೇ ನೋಡಿದಂತಿದೆ. ಅವರು ಯಾವಾಗಲೂ ನನ್ನ ಜೊತೆ ಒಂದು ಮಾತು ಹೇಳುತ್ತಿದ್ದರು ‘ಎದುರಿನ ವ್ಯಕ್ತಿ ನಮ್ಮನ್ನು ಮೋಸ ಮಾಡುತ್ತಾನೇನೋ ಎಂಬ ಆಲೋಚನೆಯೇ ನಮ್ಮ ಮನಃಶಾಂತಿಯನ್ನು ಹಾಳುಮಾಡುವ ಭಯಂಕರ ವಿಷಕೀಟ! ಸಹ ಮನುಷ್ಯರ ಬಗ್ಗೆ ಭಯದ ಬದಲಿಗೆ ನಂಬಿಕೆಯನ್ನು ಬೆಳೆಸಿಕೊಳ್ಳುವುದೇ ಆ ವಿಷ ಕೀಟದ ಕಡಿತಕ್ಕೆ ಮದ್ದು. ಯದ್ಭಾವಂ ತದ್ಭವತಿ ಎಂದಿದ್ದಾರೆ. ನಾವು ಮನಸ್ಸಿನಲ್ಲಿ ಏನನ್ನು ಭಾವಿಸುತ್ತೇವೋ ಅದೇ ಆಗುತ್ತದೆ.”

ಒಂದು ಕ್ಷಣ ನಿಂತು ನಾನು ಆಸಕ್ತಿಯಿಂದ ಕೇಳುತ್ತಿರುವುದನ್ನು ನೋಡಿ ಮತ್ತೆ ಹೇಳಿದಳು ಸಾಹಿತಿ.
“ಅಪ್ಪ ಹೇಳಿದ್ದು ನಿಜ ತಾನೆ ಅಂಕಲ್! ಮನುಷ್ಯನಿಗೆ ಸಹ ಮನುಷ್ಯನ ಮೇಲೆ ಇರಬೇಕಾದದ್ದು ನಂಬಿಕೆಯೇ ಹೊರತು ಭಯವಲ್ಲ. ರಸ್ತೆಯಲ್ಲಿ ನಡೆಯುತ್ತಿರುವಾಗ ಅಪಘಾತಗಳು ಆಗುತ್ತವೆ ಅಂತ ಹೇಳಿ ನಡೆಯುವುದನ್ನು ನಿಲ್ಲಿಸುತ್ತೇವೆಯೇ ಹೇಳಿ? ಹಾಗೆಯೇ, ಇದು ಕೂಡ! ಯಾವುದೇ ವ್ಯವಸ್ಥೆಯಲ್ಲೂ ಕೆಟ್ಟದ್ದೂ, ಒಳ್ಳೆಯದ್ದೂ ಎರಡೂ ಇರುತ್ತವೆ. ಎಂದೋ ಯಾರೋ ಮೋಸ ಮಾಡಿದರು ಅಂತ ಹೇಳಿ, ಎಲ್ಲರನ್ನೂ ಅನುಮಾನಿಸಲು ಪ್ರಾರಂಭಿಸಿದರೆ ಇನ್ನು ಜಗತ್ತಿನಲ್ಲಿ ಯಾವ ಮನುಷ್ಯನೂ ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲ ಅಂಕಲ್.”
ಸಾಹಿತಿ ಮಾತುಗಳಿಗೆ ನನ್ನಲ್ಲಿ ಆನಂದ ತುಂಬಿತು.

ನನ್ನಂತೆ ಯೋಚಿಸುವವರು ಈ ಜಗತ್ತಿನಲ್ಲಿ ಇನ್ನೂ ಕೆಲವರು ಇದ್ದಾರೆ ಎಂಬ ಭಾವನೆ ನನಗೆ ತುಂಬಾ ಸಂತೋಷವನ್ನು ತಂದಿತು.
ನನ್ನ ಭಾವನೆಗಳಿಗೆ ಹತ್ತಿರವಾಗಿದ್ದ ಸಾಹಿತಿಯ ತಂದೆಯನ್ನು ಮದುವೆಗೆ ಆಹ್ವಾನಿಸೋಣ ಅಂತ ಅವರ ವಿಳಾಸ ಬರೆದುಕೊಳ್ಳಲು ಪೆನ್ನು ಹುಡುಕುತ್ತಾ ಜೇಬಿಗೆ ಕೈ ಹಾಕಿದೆ.
ಆದರೆ ಜೇಬಿನಲ್ಲಿ ಪೆನ್ನಿನ ಜೊತೆಗೇ ಇರುವ ಪರ್ಸ್ ನನ್ನ ಕೈಗೆ ಸಿಗದಿದ್ದಾಗ ಗಾಬರಿಯಿಂದ ನನ್ನ ಮೈಯೆಲ್ಲಾ ಬೆವರಿತು.
“ಏನಾಯಿತು ಅಂಕಲ್? ಇದ್ದಕ್ಕಿದ್ದಂತೆ ಹಾಗಾಗಿಬಿಟ್ಟರಲ್ಲಾ” ಅಂದಳು ಸಾಹಿತಿ.
“ನನ್ನ ಪರ್ಸ್ ಕಾಣುತ್ತಿಲ್ಲಮ್ಮಾ. ಅದರಲ್ಲಿ ನಾಲ್ಕು ಸಾವಿರ ರೂಪಾಯಿಗಳು, ಮತ್ತು ನನ್ನ ಐಡೆಂಟಿಟಿ ಕಾರ್ಡ್. ಇದಲ್ಲದೆ ರೈಲು ಟಿಕೆಟ್ ಕೂಡ ಅದರಲ್ಲಿಯೇ ಇದೆ.”

“ಅಯ್ಯೋ, ಈಗ ಹೇಗೆ ಅಂಕಲ್? ಕೊನೆಯ ಬಾರಿ ಪರ್ಸ್ ಅನ್ನು ಯಾವಾಗ ನೋಡಿದಿರಿ ಸ್ವಲ್ಪ ನೆನಪಿಸಿಕೊಳ್ಳಿ” ಅಂತ ನನಗಿಂತ ಹೆಚ್ಚಾಗಿಯೇ ಗಾಬರಿಪಟ್ಟಳು ಸಾಹಿತಿ.
“ಇತ್ತೀಚೆಗಷ್ಟೇ ಚಾಯ್ ಹುಡುಗನಿಗೆ ಹಣ ಕೊಡಲು ನಾನು ಪರ್ಸ್ ತೆರೆದೆ. ಪರ್ಸ್ ಅನ್ನು ಮುಟ್ಟಿದ್ದು ಅದೇ ಕೊನೆಯ ಬಾರಿ. ಆ ನಂತರವೇ ಅದು ಮಾಯವಾಯಿತು. ಅನುಮಾನವಿಲ್ಲ, ಮತ್ತೆ ಜೇಬಿನಲ್ಲಿ ಹಾಕುವಾಗ ಅಲ್ಲೇ ಕೆಳಗೆ ಬಿದ್ದಿರಬೇಕು. ಒಮ್ಮೆ ಹೋಗಿ ನೋಡಿ ಬರುತ್ತೇನೆ” ಅಂತ ಸಾಹಿತಿಗೆ ಹೇಳಿ ತರಾತುರಿಯಲ್ಲಿ ನಾನು ಚಾಯ್ ಕೊಂಡಿದ್ದ ಜಾಗಕ್ಕೆ ಹೋಗಿ ನೋಡಿದೆ. ಆದರೆ ಅಲ್ಲಿ ಪರ್ಸ್ ಕಾಣಿಸದೆ ನಿರಾಶೆಯಿಂದ ಹಿಂದಿರುಗಿದೆ.
ನನ್ನ ಮುಖ ನೋಡಿ ವಿಷಯ ಅರ್ಥಮಾಡಿಕೊಂಡ ಸಾಹಿತಿ “ಚಿಂತೆ ಮಾಡಬೇಡಿ ಅಂಕಲ್. ತಕ್ಷಣ ಹೋಗಿ ಸ್ಟೇಷನ್ ಮಾಸ್ಟರ್ಗೆ ಕಂಪ್ಲೇಂಟ್ ಕೊಡಿ. ಅಲ್ಲೇ ಡುಪ್ಲಿಕೇಟ್ ಟಿಕೆಟ್ ಕೂಡ ತೆಗೆದುಕೊಳ್ಳಬಹುದು” ಅಂತ ಏನೋ ಹೇಳುತ್ತಿದ್ದಳು ಆದರೆ ಅವೆಲ್ಲವೂ ನನ್ನ ಕಿವಿಗೆ ಬೀಳುತ್ತಿರಲಿಲ್ಲ.
ಏನಾಗಿರಬಹುದು ಅಂತ ನನ್ನಲ್ಲೇ ವಿಶ್ಲೇಷಿಸಿಕೊಳ್ಳಲು ಪ್ರಾರಂಭಿಸಿದೆ.

“ಪರ್ಸ್ ತೆರೆದು ಚಾಯ್ ಹುಡುಗನಿಗೆ ಹಣ ಕೊಟ್ಟೆ. ಆ ನಂತರ ಚಾಯ್ ತೆಗೆದುಕೊಂಡು ಕುಡಿಯುತ್ತಾ ಇಲ್ಲಿಗೆ ಬಂದೆ. ಚಾಯ್ಗೆ ಹಣ ಕೊಡುವಾಗಲೇ ನನ್ನ ಪರ್ಸ್ ಕೆಳಗೆ ಬಿದ್ದಿರಬೇಕು. ಅದನ್ನು ಆ ಚಾಯ್ ಹುಡುಗ ಖಂಡಿತ ನೋಡೇ ಇರುತ್ತಾನೆ. ನಾನು ಅಲ್ಲಿಂದ ಕದಲಿದ ಕೂಡಲೇ ಅವನೇಕೆ ನನ್ನ ಪರ್ಸ್ ತೆಗೆದುಕೊಂಡು ತನ್ನ ಜೇಬಿನಲ್ಲಿ ಇಟ್ಟುಕೊಂಡಿರಬಹುದು. ಅಷ್ಟೇ, ಅದೇ ಆಗಿರಬೇಕು ಅಲ್ವಾ ಸಾಹಿತಿ” ಎಂದೆ.
ಅವಳಿಂದ ಯಾವುದೇ ಪ್ರತಿಕ್ರಿಯೆ ಬರುವ ಮೊದಲೇ “ಸಾಮಿ , ಇಡ್ಕೋ ನಿಮ್ ಪರ್ಸ್! ದುಡ್ಡು ಸರಿ ಇದೀಯಾ ನೋಡ್ಕೊಳಿ ಒಂದ್ಸಲ. ಚಾಯ್ ದುಡ್ಡು ಕೊಟ್ಮೇಲೆ ಪಾಕೆಟ್ಗೆ ಹಾಕಿದ ತಕ್ಷಣ ಕೆಳಗೆ ಬಿದ್ದೋಯ್ತು. ನಾ ಎಷ್ಟ್ ಕೂಗ್ತಿದ್ರೂ ಕೇಳ್ದೇ ಹೊರಟುಹೋದ್ರಿ!” ಅಂತ ಹಿಂದಿನಿಂದ ನನ್ನ ಕೈಯಲ್ಲಿ ಪರ್ಸ್ ಇಟ್ಟ ಆಗಲೇ ಅಲ್ಲಿಗೆ ಬಂದ ಚಾಯ್ ಹುಡುಗ.

ಹೋಗಿದೆ ಎಂದುಕೊಂಡಿದ್ದ ಪರ್ಸ್ ಕಾಣಿಸಿದಾಗ ನನಗೆ ಅತೀವ ಆನಂದವಾಯಿತು. ಅಲ್ಲಿಯವರೆಗೂ ಇದ್ದ ಟೆನ್ಶನ್ ಎಲ್ಲಾ ಹೋಯಿತು, ‘ತುಂಬಾ ಥ್ಯಾಂಕ್ಸ್ ಅಪ್ಪಾ, ಈ ಪರ್ಸ್ ಇಲ್ಲದಿದ್ದರೆ ನಾನು ಇಂದು ತುಂಬಾ ತೊಂದರೆಗೆ ಸಿಕ್ಕಿಹಾಕಿಕೊಳ್ಳುತ್ತಿದ್ದೆ, ಆ ತೊಂದರೆಯಿಂದ ನನ್ನನ್ನು ತಪ್ಪಿಸಿದೆ. ಹಬ್ಬಕ್ಕೆ ಒಳ್ಳೆಯ ಶರ್ಟ್ ಕೊಂಡುಕೋ ಅಪ್ಪಾ’ ಅಂತ ನನ್ನ ಪರ್ಸ್ನಿಂದ ಐನೂರು ರೂಪಾಯಿ ನೋಟನ್ನು ಉದಾರವಾಗಿ ತೆಗೆದು ಹುಡುಗನ ಕೈಯಲ್ಲಿ ಇಟ್ಟೆ.
ನನ್ನ ಈ ಕೆಲಸಕ್ಕೆ ಅವನು ಆನಂದದಿಂದ ಕುಣಿದು ಹಾರುತ್ತಾನೆ ಅಂತ ಅಂದುಕೊಂಡೆ. ಆದರೆ ನನ್ನ ಊಹೆ ತಪ್ಪಾಯಿತು! “ಏನ್ರೀ ಸಾಮಿ ! ಪ್ರಾಮಾಣಿಕತೆಗೆ ಹೀಗ್ ಬೆಲೆ ಕಟ್ಟಿ ಅಪಮಾನ ಮಾಡ್ಬೇಡಿ. ಮನುಷ್ಯರನ್ನ ನಂಬೋದ್ ಕಲ್ಕೊಳ್ಳಿ ಮೊದ್ಲು!” ಅಂತ ಆ ನೋಟನ್ನು ಮತ್ತೆ ನನ್ನ ಕೈಯಲ್ಲಿಟ್ಟು ಹಿಂದಿರುಗಿ ನೋಡದೆ ಹೊರಟುಹೋಗುತ್ತಿದ್ದ ಚಾಯ್ ಹುಡುಗನ ಮಾತುಗಳು ನನ್ನ ಕೆನ್ನೆಗೆ ಬಡಿದಂತಾಯಿತು,
“ಕೃತಜ್ಞತೆಯಿಂದ ನನಗೆ ತೋಚಿದ್ದನ್ನು ಏನಾದರೂ ಕೊಡೋಣ ಅಂದರೆ, ವಯಸ್ಸಿನಲ್ಲಿ ದೊಡ್ಡವನಾಗಿದ್ದರೂ ಹಾಗೆ ಹೇಳಿಬಿಟ್ಟನಲ್ಲಾ ಅಮ್ಮಾ?” ಆಕ್ರೋಶದಿಂದ ಸಾಹಿತಿಯೊಂದಿಗೆ ಹೇಳಿದೆ.

“ಅಂಕಲ್, ಅವನ ಬಾಯಿಂದ ಬಂದ ಮಾತುಗಳು ಅಕ್ಷರಶಃ ಸತ್ಯವೇ! ನೀವು ಬೇರೆ ಏನಾದರೂ ಅಂದುಕೊಳ್ಳದಿದ್ದರೆ ನನ್ನ ಮನಸ್ಸಿಗೆ ತೋಚಿದ್ದನ್ನು ಹೇಳುತ್ತೇನೆ. ಪ್ರಾಮಾಣಿಕತೆ ಎಂಬುದು ಮನುಷ್ಯನಿಗೆ ಇರಬೇಕಾದ ಸಹಜ ಲಕ್ಷಣ. ಚಿನ್ನಕ್ಕೆ ಹೊಳಪು ಹೇಗೋ, ಮನುಷ್ಯನಿಗೆ ಪ್ರಾಮಾಣಿಕತೆ ಹಾಗೆಯೇ. ಸಹಜ ಸ್ವಭಾವವನ್ನು ತೋರಿಸಿದರೆ ಬಹುಮಾನ ನೀಡುವುದು ಎಂದರೆ, ಪರೋಕ್ಷವಾಗಿ ಆ ಗುಣ ಎಲ್ಲರಲ್ಲೂ ಇರುವುದಿಲ್ಲ ಅಂತ ಒತ್ತಿ ಹೇಳುವುದಲ್ಲದೆ ಎದುರಿನ ವ್ಯಕ್ತಿಯಲ್ಲಿನ ಪ್ರಾಮಾಣಿಕತೆಯನ್ನು ಶಂಕಿಸುವುದು ಕೂಡ! ಅದಕ್ಕೆ ಜೊತೆಯಾಗಿ, ಕೆಲವೇ ಕ್ಷಣಗಳ ಮೊದಲು ನಿಮ್ಮ ಮನಸ್ಸು ಆ ಚಾಯ್ ಹುಡುಗನನ್ನು ಅನುಮಾನಿಸಿದ್ದು ಮಾತ್ರವಲ್ಲದೆ ಅವನು ಮೋಸಗಾರನೆಂದು ನಂಬಿತ್ತು. ಆ ವಿಷಯವನ್ನು ನೀವು ನನ್ನೊಂದಿಗೆ ಹೇಳುವಾಗ ಅವನು ಕೇಳಿದ. ನೋವಾಯಿತು. ಅದಕ್ಕೇ ಅವನು ಹೇಳಿದ ಮಾತುಗಳಲ್ಲಿ ನನಗೆ ಯಾವುದೇ ತಪ್ಪೇನೂ ಕಾಣಿಸುತ್ತಿಲ್ಲ” ಅಂತ ನೇರವಾಗಿ ಹೇಳಿದ ಸಾಹಿತಿ ಮಾತುಗಳು ನನ್ನಲ್ಲಿ ಆತ್ಮಾವಲೋಕನಕ್ಕೆ ಕಾರಣವಾದವು.

ನಿಜವೇ, ಮನುಷ್ಯನಿಗೆ ಮನುಷ್ಯನ ಮೇಲೆ ಇರಬೇಕಾದ ನಂಬಿಕೆಯ ಬಗ್ಗೆ ಇಷ್ಟು ವರ್ಷಗಳಿಂದ ಎಷ್ಟೋ ದೊಡ್ಡದಾಗಿ ಹೇಳುತ್ತಾ ಬಂದ ನಾನೂ, ಅನಿರೀಕ್ಷಿತ ಘಟನೆ ನಡೆದಾಗ ಅಷ್ಟೇ ವರ್ಷಗಳ ನನ್ನ ಅಭಿಪ್ರಾಯವನ್ನೂ ಒಂದೇ ಕ್ಷಣದಲ್ಲಿ ಬದಲಾಯಿಸಿಕೊಂಡಿದ್ದೆ.
‘ಯಾವುದೇ ಸಿದ್ಧಾಂತಗಳಾದರೂ, ನೀತಿಗಳಾದರೂ ಎಲ್ಲವೂ ಸರಿ ಇದ್ದಷ್ಟು ಕಾಲವಷ್ಟೇ. ಪರಿಸ್ಥಿತಿಗಳು ಸ್ವಲ್ಪ ಆ ಕಡೆ ಈ ಕಡೆ ಆದ ಮರುಕ್ಷಣವೇ ಅವು ಸಂಪೂರ್ಣವಾಗಿ ಬದಲಾಗಿಬಿಡುತ್ತವೆ’ ಅಂತ ಒಂದು ಕಾಲದಲ್ಲಿ ಯಾರಾದರೂ ನನ್ನೊಂದಿಗೆ ಹೇಳಿದರೆ ‘ನನ್ನ ವಿಷಯದಲ್ಲಿ ಮಾತ್ರ ಹಾಗೆ ಎಂದಿಗೂ ಆಗುವುದಿಲ್ಲ’ ಅಂತ ಖಂಡಿತವಾಗಿ ಹೇಳುತ್ತಿದ್ದೆ. ಹಾಗೆ ಹೇಳುವಾಗ ನಾನು ಎಲ್ಲರಿಗಿಂತ ವಿಭಿನ್ನವಾದ ಮನುಷ್ಯ ಎಂಬ ಭಾವನೆ ನನ್ನ ಧ್ವನಿಯಲ್ಲಿ ಸ್ಪಷ್ಟವಾಗಿ ಕೇಳಿಸುತ್ತಿತ್ತು.

ಆದರೆ ಇಂದು ಅದೆಲ್ಲಾ ತಪ್ಪು ಅಂತ ಸಾಬೀತಾಯಿತು. ನಾನು ಕೂಡ ಎಲ್ಲರಂತೆ ಒಬ್ಬ ಸಾಮಾನ್ಯ ಮನುಷ್ಯನೇ!
ಒಬ್ಬ ಪ್ರಾಮಾಣಿಕನನ್ನು ಅನುಮಾನಿಸಿ ಅವನ ನಿರ್ಮಲ ಮನಸ್ಸಿಗೆ ನೋವುಂಟು ಮಾಡಿದ್ದಕ್ಕಾಗಿ ಕಪಾಳಕ್ಕೆ ಹಾಕಿಕೊಂಡು ತಕ್ಷಣ ಆ ಚಾಯ್ ಹುಡುಗನನ್ನು ಹುಡುಕಿಕೊಂಡು ಹೋದೆ. ಹೆಚ್ಚು ಶ್ರಮ ಪಡದೆ ಸಿಕ್ಕ ಆ ಹುಡುಗನ ಕೈಗಳನ್ನು ಹಿಡಿದುಕೊಂಡು ಕ್ಷಮೆಯಾಚಿಸಿ ನನ್ನಲ್ಲಿದ್ದ ಅಪರಾಧ ಭಾವನೆಯನ್ನು ನಿವಾರಿಸಿಕೊಂಡ ನಂತರವೇ ನನ್ನ ಮನಸ್ಸು ಶಾಂತವಾಯಿತು.
ಅಷ್ಟರಲ್ಲೇ ಜೋರಾಗಿ ಕೂಗುತ್ತಾ ಪ್ಲಾಟ್ಫಾರ್ಮ್ಗೆ ಬಂದು ನಿಂತಿತು ರೈಲು ಗಾಡಿ.

‘ನೀತಿ ಪಾಠಗಳು ಇರುವುದು ಇತರರಿಗೆ ಬೋಧಿಸಲು ಮಾತ್ರವಲ್ಲ, ನಾವೂ ಕೂಡ ಪಾಲಿಸಲು. ಅಷ್ಟೇ ಅಲ್ಲದೆ, ಎಲ್ಲಾ ಸಂದರ್ಭಗಳಲ್ಲೂ’ ಎಂಬ ಅಮೂಲ್ಯ ಜೀವನ ಪಾಠವನ್ನು ಕಲಿಸಿದ ಈ ಪ್ರಯಾಣಕ್ಕೆ ಮನಸ್ಸಿನಲ್ಲೇ ಪ್ರಣಾಮ ಮಾಡುತ್ತಾ ರೈಲು ಹತ್ತಿದೆ!


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x