ಜಯಂತಿಪುರವೆಂಬ ಸಾವಿರದ ಕಥಾಕಡಲು…!: ಜಗದೀಶ ಬ. ಹಾದಿಮನಿ


ಶ್ರೀಧರ ಬನವಾಸಿಯವರು ‘ಅಮ್ಮನ ಆಟೋಗ್ರಾಫ್’, ‘ಬ್ರಿಟಿಷ್ ಬಂಗ್ಲೆ’, ‘ದೇವರ ಜೋಳಿಗೆ’ ಕಥಾ ಸಂಕಲನಗಳು; ‘ತಿಗರಿಯ ಹೂಗಳು’, ‘ಬಿತ್ತಿದ ಬೆಂಕಿ’, ‘ಪೂರ್ಣಚಂದ್ರನಿಗೆ ಮುಖವಾಡವಿಲ್ಲ’ ಕವನ ಸಂಕಲನಗಳು, ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ ಪಡೆದ ‘ಬೇರು’ ಕಾದಂಬರಿ ಹಾಗೂ ‘ಪಂಚಮಿ ಪ್ರಕಾಶನ’ದಿಂದ ಈಗಾಗಲೇ ಕನ್ನಡನಾಡಿಗೆ ಚಿರಪರಿಚಿತರು. ಈಗಿವರ ಮತ್ತೊಂದು ವಿಶಿಷ್ಟಕೃತಿಯೇ ‘ಜಯಂತಿಪುರದ ಕತೆಗಳು’ ಎಂಬ ಕಥಾ ಸಂಕಲನ. ಇದರಲ್ಲಿ ಒಟ್ಟು ಹತ್ತು ಕತೆಗಳು, ಎರಡು ನೀಳ್ಗತೆಗಳಿವೆ. ಯಾವವೂ ಅವಸರದ ರಚನೆಗಳಾಗಿಲ್ಲ; ಎಲ್ಲವೂ ಧ್ಯಾನಿಸಿಕೊಂಡು ನಿಧಾನ ಮೈದಾಳಿದಂತಹವುಗಳು. ಜಯಂತಿಪುರವನ್ನೇ ಕೇಂದ್ರಸ್ಥಾನ ಮಾಡಿಕೊಂಡು ಮಧುಕೇಶ್ವರ, ನರಸಿಂಹ, ಮಾರಿಕಾಂಬ, ಬೀರಪ್ಪ, ಬ್ಯಾನಪ್ಪ ದೇವರುಗಳ ಪವಾಡ ಮೆರೆಸಿ, ಜೀವನದಿ ವರದೆಯ ಮೈದುಂಬಿಸಿ, ‘ಪಂಪವನ’, ‘ವಸಿಷ್ಠ ತೀರ್ಥ’, ‘ಕುದುರೆ ಹೊಂಡ’, ‘ಕೆರೆಹೊಂಡ’, ‘ಬಿದಿರುಮಟ್ಟಿ’, ‘ರಥಬೀದಿ’, ‘ಕಂಚ್ಗಾರ ಓಣಿ’, ‘ಉಪ್ಪಾರಕೇರಿ’, ‘ಸಂತೆಪೇಟೆ’, ‘ಹೂವಿನ ಕೊಪ್ಪಲಕೇರಿ’, ‘ತೆಗ್ಗಿನಕೇರಿ’, ‘ದೊಡ್ಕೇರಿ’, ‘ಮೀನು ಮಾರ್ಕೆಟ್’, ‘ಕಾಮನಗಲ್ಲಿ’, ಸೊರಬ, ಶಿವಮೊಗ್ಗ, ಶಿರಸಿ, ಸಿದ್ದಾಪುರ, ಬಂಕಾಪುರ, ಅಗಳೇರಿ, ಸಾಗರ, ಕಪಗೇರಿ, ಅಜ್ಜರಣಿ, ಎಡೂರ್ಬೈಲು, ತಿಗಣಿ, ಭಾಸಿ, ಸಂಪಗೋಡು, ನರೂರು, ಗುಡ್ನಾಪುರು, ಹೊಸನಗರವರೆಗಿನ ರಸ್ತೆಗಳ ಸುತ್ತ ಗಿರಕಿ ಹೊಡೆದರೂ ಆಗಾಗ ಹೊನ್ನಾವರ, ಉಡುಪಿ, ಮಂಗಳೂರು, ಹಾನಗಲ್ಲ, ಜಡೆ, ಹಾವೇರಿ, ಶಿರಾಳಕೊಪ್ಪ, ಕಾರವಾರ, ಗೋಕರ್ಣ, ತೀರ್ಥಹಳ್ಳಿ,ಸಕಲೇಶಪುರ, ಧಾರವಾಡ, ಡಾವಣಗೇರಿ, ರಾಣಿಬೆನ್ನೂರು, ಹುಬ್ಬಳ್ಳಿ, ಕುಂದಾಪುರ, ಹರಿಹರ, ಭದ್ರಾವತಿ, ಗೋವಾ, ಪೂನಾ, ಕೇರಳ, ಬಾಂಬೆ, ಇಂಗ್ಲೆಂಡ್, ಅಮೇರಿಕಾವರೆಗೆ ವಿಶ್ವವ್ಯಾಪಿಯಾಗಿ ಹಾಯಿಸಿ, ದೃಷ್ಟಿ ಹಿಗ್ಗಿಸಿದ್ದೂ ಇದೆ. ಏನೇಯಾದರೂ ಇವು ಕೇವಲ ಜಯಂತಿಪುರದ ಕತೆಗಳಲ್ಲ; ಯಾವುದೋ ಒಂದು ರೂಪದಲ್ಲಿ ಪ್ರತಿಯೂರಿನ, ಪ್ರತಿಯೊಬ್ಬರ ಎದೆಯೊಳಗೆ ಜೋಪಾನವಾಗಿ ಕಾಪಿಟ್ಟುಕೊಂಡಿರುವ ಕತೆಗಳಾಗಿವೆ. ಮೊದಲೇ ಈ ಹಾದಿಯಲ್ಲಿ ಎಂ.ಆರ್.ಶ್ರೀನಿವಾಸಮೂರ್ತಿಯವರ ‘ರಂಗಣ್ಣನ ಕನಸಿನ ದಿನಗಳು’, ಅಬ್ಬಾಸ್ ಮೇಲಿನಮನಿಯವರ ‘ಜನ್ನತ್ ಮೊಹಲ್ಲಾ’, ಓಲ್ಗಾರವರ ‘ವಿಮುಕ್ತೆ’, ಟಿ.ಎಸ್.ಗೊರವರವರ ‘ರೊಟ್ಟಿ ಮುಟುಗಿ’ಯಂತಹ ಕೃತಿಗಳು ಸಾಕಷ್ಟು ಯಶಸ್ವಿಯಾಗಿವೆ. ಆದರೆ ಒಂದೇ ನೆಲೆಗಟ್ಟಿನಲ್ಲಿ ಒಂದೂರಿನ ಘಟನೆಗಳನ್ನು ಒಂದೆಡೆಗೆ ಈ ರೀತಿಯಾಗಿ ಕಟ್ಟಿಕೊಟ್ಟ ನಿದರ್ಶನಗಳು ಇರಲಿಲ್ಲ. ಆ ನಿಟ್ಟಿನಲ್ಲಿ ಇದೊಂದು ಯಶಸ್ವಿ ಸಂಕಲನವೆನ್ನಬಹುದು. ಯಾವುದಾದರೊಂದೊಂದು ಚಿಕ್ಕ ಎಳೆಗಳನ್ನು ಮತ್ತೆಮತ್ತೆ ಪುನರಾವರ್ತಿಸುತ್ತ, ಎಲ್ಲಿಯೂ ಬೇಸರಕ್ಕೆಡೆ ಮಾಡಿಕೊಡದಂತೆ ಕತೆಗಳನ್ನು ಕಟ್ಟಿ, ಬೆಳೆಸಿಕೊಂಡು ಹೋಗುವ ಕೌಶಲವಿದೆಯಲ್ಲ ಅದಷ್ಟು ಸುಲಭವಲ್ಲ; ಇದು ಇವರಿಗಿಲ್ಲಿ ಸಹಜವೆಂಬಂತೆ ಕರಗತವಾಗಿದೆ. ಇಲ್ಲಿನ ಪುನರುಕ್ತಿಗಳನ್ನು ಗಮನಿಸಿದರೆ, ಕತೆಗಾರನೊಳಗೊಬ್ಬ ಬೃಹತ್ ಕಾದಂಬರಿಗಾರನೇ ಅಡಗಿದ್ದಾನೆ.

‘ಎಲ್ಲಿಂದಲೋ ಬಂದವನು’ ಒಂದು ಕುತೂಹಲದ ಕತೆಯಾಗಿದೆ. ಜಯಂತಿಪುರದ ಕಾಮನಗಲ್ಲಿಗೊಬ್ಬ ಅಪರೂಪದ ವ್ಯಕ್ತಿ ಬಂದ. ಅವನ ಕೈಗೆ ಬೇಡಿ, ಕಾಲಿಗೆ ಸರಪಳಿ ಹಾಕಿದ್ದರು. ಬಂದವನು ಬಡಗಿ ಕೃಷ್ಣಪ್ಪನ ಮನೆಯ ಮುಂದೆ ನಿಂತು, ರಂಗನಾಥನನ್ನು ಒಂದೇಸಮ ಕೂಗುತಿದ್ದನು. ಅವನ ಆತ್ಮೀಯನಾಗಿದ್ದ ರಂಗನಾಥ ಸತ್ತು ಆಗಲೇ ಹತ್ತು ವರ್ಷಗಳಾಗಿದ್ದ ಸಂಗತಿಯನ್ನು ಅವರ ಅಣ್ಣ ಕೃಷ್ಣಪ್ಪ ಹಾಗೂ ಊರಿನ ಹಿರಿಯ ಗುಂತ್ಯಪ್ಪಜ್ಜನಿಂದ ಕೇಳಿ ಕಣ್ಣೀರಾಗುತ್ತಾನೆ. ಜೊತೆಗೆ, ತಾನು ಕೊಲೆ ಮಾಡಿ ಜೈಲು ಸೇರಿದ್ದು, ಪಶ್ಚಾತ್ತಾಪ, ಹೆಂಡ್ತಿ-ಮಕ್ಕಳೊಂದಿಗೆ ಮುಂದಿನ ಬದುಕನ್ನು ಕಟ್ಟಿಕೊಳ್ಳುವುದರ ಬಗ್ಗೆ ಹೇಳುತ್ತಾನೆ. ಅವನ ಅಂತಃಕರಣಕ್ಕೆ ಕರಗಿ, ಹೊಟ್ಟೆತುಂಬ ಉಣಿಸಿ, ಕೈಕೋಳ-ಕಾಲ ಸರಪಣಿಯನ್ನು ತುಂಡರಿಸಿ, ಪೊಲೀಸಿನವರು ಬರುವುದರೊಳಗೇ ಊರು ತೊರೆಯಲು ಹೇಳುತ್ತಾರೆ. ಅವರ ಸೂಚನೆಯಂತೆ ಅವನು ಅಲ್ಲಿಂದ ಕಾಲ್ಕಿತ್ತುವುದರೊಂದಿಗೆ ಕತೆ ಮುಗಿಯುತ್ತದೆ.

ಒಬ್ಬ ಅಪರಿಚಿತ ವ್ಯಕ್ತಿ ಊರಿಗೆ ಬಂದಾಗಿನ ಜನರ ಕುತೂಹಲ ಹೇಗಿರುತ್ತೆಂಬುದನ್ನು ಈ ಕತೆಯೊಳಗೆ ಪ್ರವೇಶ ಮಾಡಿದಂತೆ ತಿಳಿದುಬರುತ್ತದೆ. ಅವನ ಆಕಾರ, ವೇಷಭೂಷಣ, ಕೈಗೆ ಕೋಳ-ಕಾಲಿನ ಸರಪಳಿ, ಮನೆಮುಂದೆ ನಿಂತು “ರಂಗ್ನಾಥ ಬಾರೋ ಹೊರ್ಗೆ…ಲೋ ದೋಸ್ತಾ ಬೇಗ ಬಾರೋ…ನನ್ನನ್ನು ಕಾಪಾಡೋ…!” ಅಂತ ಅರಚುತಿದ್ದ ರೀತಿಯೆಲ್ಲವೂ ಕ್ಷಣಕ್ಷಣಕ್ಕೂ ಕೌತುಕವನ್ನು ಹೆಚ್ಚಿಸುತ್ತ ಹೋಗುತ್ತದೆ. ಅದರಿಂದ ಹತ್ತು ವರ್ಷದ ಹಿಂದೆ ಆಕ್ಸಿಡೆಂಟ್ನಲ್ಲಿ ಕೇವಲ ಮೂವತ್ತೈದು ವರ್ಷಕ್ಕೆ ಸತ್ತಿದ್ದ ರಂಗನಾಥ, ಅವನ ವ್ಯಕ್ತಿತ್ವ ಎಲ್ಲವೂ ಅನಾವರಣಗೊಳ್ಳುತ್ತಲೇ ಸಾಗುತ್ತದೆ.

ಆಗುಂತಕನಲ್ಲಿ ಎಷ್ಟೇ ಪಶ್ಚಾತ್ತಾಪವಿದ್ದರೂ ಜೈಲಿನಿಂದ ತಪ್ಪಿಸಿಕೊಂಡು ಬಂದಿದ್ದು ತಪ್ಪು. ಅದರಲ್ಲೂ ಪೊಲೀಸರಿಗೆ ಬೇಕಾದಂಥ ವ್ಯಕ್ತಿಯಂತ ಗೊತ್ತಿದ್ದರೂ ಅವನ ಕೈಕೋಳ-ಸರಪಳಿಯನ್ನು ಚಾಣದಿಂದ ತುಂಡರಿಸಿ ತಪ್ಪಿಸಿಕೊಳ್ಳಲು ಕೃಷ್ಣಪ್ಪ ಸಹಕರಿಸಿದ್ದು ಮತ್ತೊಂದು ತಪ್ಪು. ಅವನೇನೋ ಸ್ವತಂತ್ರನಾದ. ಆದರೆ ಮತ್ತೆ ಅವನು ಯಾವ ಪ್ರಮಾದಗಳನ್ನೂ ಎಸಗುವುದಿಲ್ಲವೆಂಬುದಕ್ಕೆ ಯಾವ ಭರವಸೆಯೂ ಇಲ್ಲ. ಹಾಗೆ ಯೋಚಿಸಿದರೆ, ಶಿಕ್ಷೆ ಮುಗಿಸಿದ ಬಳಿಕನೂ ಆ ಖಚಿತತೆ ಇರುವುದಿಲ್ಲ! ಆದರೆ ಅಲ್ಲಿ ತಪ್ಪಿಗೆ ಶಿಕ್ಷೆ ಅನುಭವಿಸಿದ ವ್ಯಕ್ತಿಯಾಗಿರುತ್ತಾನೇ ವಿನಃ ಪರಾರಿಯಾದ ಖೈದಿಯಾಗಿರುವುದಿಲ್ಲ.

ಪ್ರತಿವರ್ಷ ಕಾಮಣ್ಣನನ್ನು ಸುಡುತಿದ್ದರಿಂದ ಕಾಮನಗಲ್ಲಿಯೆಂಬ ಹೆಸರು ಬಂತು ಎಂದು ಹೇಳುತ್ತ, ಮೊದಲು ಊರಿಗೇ ಹಬ್ಬವಾಗಿದ್ದು ಈಗ ಕೇರಿಗಷ್ಟೇ ಮೀಸಲಾಗಿದ್ದರಿಂದ ನಿರೂಪಕರಲ್ಲಿ ವಿಷಾದ ಮಡುಗಟ್ಟಿದ್ದು ಸಹಜವಾಗಿದೆ. ಯಾವುದೇ ಒಂದು ಹಬ್ಬ-ಜಾತ್ರೆ-ಉತ್ಸವ ಎನಿಸಿಕೊಳ್ಳಬೇಕಾದರೆ ಎಲ್ಲರೂ ಕೂಡಿ ಆಚರಿಸಿದಾಗಲೇ ಅದಕ್ಕೊಂದು ಅರ್ಥ. ಇಲ್ಲವಾದರೆ ಅದು ನೆಪವಷ್ಟೆ ಎಂಬುದರಲ್ಲಿ ಎರಡು ಮಾತಿಲ್ಲ. ಇಲ್ಲಿ ಆಗಿರುವುದೂ ಕೂಡ ಅದೆ. ನೂರಾರು ವರ್ಷಗಳಿಂದ ಆಚರಿಸಿಕೊಂಡು ಬಂದ ಹಬ್ಬವಿಂದು ಕಾಟಾಚಾರವಾಗಿದ್ದು ಬೇಸರದ ಸಂಗತಿಯೇ ಸರಿ. ಇಂಥ ಬದಲಾವಣೆ ಯಾವುದೇ ಊರಿಗೆ ಶೋಭೆ ತರುವಂಥದ್ದಲ್ಲ.

ಜಯಂತಿಪುರದ ಓಣಿಗಳು; ಕಾಮನಗಲ್ಲಿ ಹೆಸರು ಬರಲು ಕಾರಣ; ಊರಿನ ಆಕಾಶವಾಣಿಯಾಗಿದ್ದ ಗುಂತ್ಯಪ್ಪಜ್ಜ; ವಿಶಿಷ್ಟವ್ಯಕ್ತಿ ರಂಗನಾಥನ ನಿಗೂಢ ಬದುಕು; ಕೃಷ್ಣಪ್ಪನ ಅಂತಃಕರಣ, ಅದೇ ಕಾರಣಕ್ಕೆನೇ ಪೊಲೀಸ್ಠಾಣೆ ಮೆಟ್ಟಿಲು ಹತ್ತುವುದು; ಆಗುಂತಕನ ಆಗಮನದಿಂದ ಊರಿಗೆ ಆವರಿಸಿದ ಭಯ, ಕತೆಗೆ ಸೇತುವೆಯಾಗಿವೆಯಾದರೂ ಕಥನವೆಲ್ಲವೂ ಕುತೂಹಲದ ಮೂಟೆಯೊಳಗೇ ಮುಗಿಯುವುದರಿಂದ ಮುಂದೇನಾಗುತ್ತದೆಂದು ನಿರೀಕ್ಷಿಸುವವರಿಗೆ ಖಂಡಿತ ನಿರಾಸೆ ಮೂಡಿಸುತ್ತದೆ.

‘ಕಾಡುಪಾಲಾದ ಮಾರಿಬಲಿ’ಯು ಊರ ಮಾರಮ್ಮಳಿಗೆ ಬಲಿಕೊಡುವುದರ ಸುತ್ತ ಸಾಗುವ ಕತೆಯಾಗಿದೆ. ನಿರೂಪಕರಿಗೆ ವರ್ಷಕ್ಕೊಮ್ಮೆ ನಡೆಯುವ ಮಧುಕೇಶ್ವರ ಜಾತ್ರೆಗಿಂತ ಮಾರಿಹಬ್ಬವೇ ಬಹುವಾಗಿ ಆಕರ್ಷಿಸಿತ್ತು. ಮಾರಮ್ಮಳಿಗೆಂದು ಬಿಟ್ಟಿದ್ದ ಕೋಣವನ್ನು ಸರಕಾರದ ಬಿಗಿನಿಯಮಗಳು ಹಾಗೂ ಪ್ರಾಣಿದಯಾ ಸಂಘದವರಿಂದ ಕೊಡಲಾಗದೇ ಕೊನೆಗೆ ಕೊಬ್ಬಿದ್ದ ಗಂಡುಹಂದಿಯೊಂದನ್ನು ಬಲಿಕೊಡಲಾಯಿತು. ಆ ದೃಶ್ಯವನ್ನು ನೋಡಿ ಘಾಸಿಗೊಂಡಿದ್ದ ಕತೆಗಾರರು ‘ತಾಯಿ ಈ ಬಲಿಯನ್ನು ನೀನು ನಿರೀಕ್ಷಿಸಿದ್ಯಾ? ರಕ್ತವನ್ನು ಹಾಲೆಂಬಂತೆ ಉಣಿಸುವ ನೀನು ಈ ರಕ್ತದ ಹಾಲಾಹಲವನ್ನು ಬಯಸುತ್ತಿಯೇ?’ ಎಂದು ಮಾರಮ್ಮಳನ್ನೇ ಪ್ರಶ್ನಿಸುತ್ತಾರೆ. ಅವಳಿಂದ ಯಾವ ಉತ್ತರವೂ ಬಾರದಿದ್ದಾಗ, ತಾಯಿ ಮತ್ತು ಅಜ್ಜಿಯನ್ನು ಕೇಳಿ ಉತ್ತರ ಕಂಡುಕೊಂಡರಾದರೂ ಬಲಿಯ ಆಕ್ರಂದನ, ಹಿಂಸೆ ಅವರ ಮನಸನ್ನು ಹಿಂಡುತಲೇಯಿತ್ತು.

ಹೀಗೆ, ಆ ವರ್ಷ-ಮರುವರ್ಷದ ಹಬ್ಬಗಳು ಮುಗಿದವು. ಕಳೆದ ಎರಡು ವರ್ಷಗಳಿಂದಲೂ ಕೋಣದಬಲಿ ತಪ್ಪಿದ್ದರಿಂದ ಈ ಸಲ ಏನಾದರೂ ಮಾಡಿ ಅದನ್ನು ಬಲಿಕೊಡಲೇಬೇಕೆಂದು ನಿರ್ಧರಿಸಿ, ಗುಪ್ತವಾಗಿ ಹೂವಿನಕೊಪ್ಪಲಿನಲ್ಲಿ ಕಟ್ಟಿದ್ದನ್ನು ಹಿಡಿದುಕೊಂಡು ಬರುತ್ತಾರೆ. ಆದರೆ ಅದು ಹಿಡಿದವರನ್ನು ಗುದ್ದಿ ಗಾಯಗೊಳಿಸಿ, ಅಲ್ಲಿಂದ ತಪ್ಪಿಸಿಕೊಂಡು ಸಂಪಗೋಡಿನ ಕಾಡುಪಾಲಾಗುತ್ತದೆ. ಇದರಿಂದ ಸುಬ್ರಾಯ ಶಾಸ್ತ್ರಿಗಳ ಸಲಹೆಯಂತೆ ಬೂದುಕುಂಬಳಗಾಯಿಯನ್ನು ಬಲಿಕೊಟ್ಟು ಜಾತ್ರೆ ಮುಗಿಸುತ್ತಾರೆ. ಆಗ ‘ರಕ್ತ ಕೊಡುವವಳು ಎಂದಾದರೂ ರಕ್ತ ಬಯಸುವಳೆ?’ ಎಂದು ನಿರೂಪಕರು ಅಂದುಕೊಳ್ಳುವುದರೊಂದಿಗೆ ಕತೆ ಮುಕ್ತಾಯವಾಗುತ್ತದೆ.

ಬಲಿಕೊಡುವ ಪದ್ಧತಿ ಕಾಲಾಂತರದಿಂದಲೂ ಬಹುತೇಕ ಧರ್ಮ-ಜಾತಿ-ಜನಾಂಗಗಳಲ್ಲಿ ಅವ್ಯಾಹತವಾಗಿ ನಡೆದುಕೊಂಡು ಬಂದಿರುವಂಥದ್ದು. ಬಸವಣ್ಣನವರ ‘ದಯವಿಲ್ಲದ ಧರ್ಮ ಅದಾವುದಯ್ಯ| ದಯವೇ ಬೇಕು ಸಕಲ ಪ್ರಾಣಿಗಳಲ್ಲಿ’ ತತ್ವವಿಲ್ಲಿ ಲೆಕ್ಕಕ್ಕೆ ಬರುವುದಿಲ್ಲ. ಹಾಗೆಂದು ಇಲ್ಲಿ ಆಹಾರ ಸಂಸ್ಕೃತಿಯ ಪ್ರಸ್ತಾಪವಿಲ್ಲ. ಬಲಿಕೊಡುವಾಗಿನ ಆ ಮೂಕಪ್ರಾಣಿಯ ಆರ್ತನಾದ ನಿರೂಪಕರನ್ನು ಘಾಸಿಗೊಳಿಸಿದ್ದಂತೂ ಸತ್ಯ. ಅದಕ್ಕೆ ಕಾರಣ, ಅವರೇ ಹೇಳಿಕೊಂಡಂತೆ ಅವರೊಳಗೊಬ್ಬ ಗಾಂಧಿಯೆಂಬ ಅಹಿಂಸಾವಾದಿ ಅಡಗಿ ಕುಳಿತಿದ್ದೇ ಇರಬಹುದು. ‘ಅದನ್ಯಾಕ ಬಲಿ ಕೊಡಬೇಕು? ಅದು ಒಂದು ಜೀವವಲ್ವ?’ ಅಂದುಕೊಂಡರೂ ಅವರೇನು ಮಾಂಸಹಾರಿ ವಿರೋಧಿಗಳಲ್ಲ; ಮಾಂಸಹಾರ ವರ್ಜ್ಯಕರೂ ಆಗಿರಲಿಲ್ಲ. ಮನೆಯೊಳಗೆ ಬಾಡೂಟ ತಿನ್ನುವಾಗಿಲ್ಲದ ಜಿಜ್ಞಾಸೆ, ಬಲಿಕೊಡುವಾಗ ‘ಜೀವ ಕೊಡೊ ದ್ಯಾವ್ರು ಜೀವ ಬೇಡ್ತಾನ?’ ಅನಿಸಿದ್ದೇ ಅವರೊಳಗಿನ ಒಟ್ಟು ತಾಕಲಾಟಕ್ಕೆ ನಿಮಿತ್ತವಾಗಿದ್ದು; ಬಲಿಯ ಕೋಣ ತಪ್ಪಿಸಿಕೊಂಡಾಗ, ‘ರಕ್ತ ಕೊಡುವವಳು ಎಂದಾದರೂ ರಕ್ತ ಬಯಸುವಳೆ?’ ಎಂದು ಸಂತೋಷದಿಂದ ಕುಣಿದಾಡಿದ್ದು. ಅವರು ಮಾಂಸ ಸೇವಿಸುತಿದ್ದರೂ ಆಡು-ಕುರಿಗಳನ್ನು ಕಡಿಯುತ್ತಿದ್ದದ್ದು ಆವರೆಗೂ ಅವರ ಕಣ್ಣಿಗೆ ಕಾಣದ ಸಂಗತಿಗಳಾಗಿದ್ದವು. ಅದೇ ಕಾರಣಕ್ಕೇನೋ ಕಟುಕರ ಅನಂತಪ್ಪ, ರಹೀಂ ಸಾಬರ ಅಂಗಡಿಗಳಲ್ಲಿ ನೇತಾಡುತಿದ್ದ ಸತ್ತದೇಹಗಳು ಅವರನ್ನು ಮೌನಕ್ಕೆ ಜಾರಿಸುತಿದ್ದವು.

‘ಮಾರಮ್ಮನಿಗಂತಲೇ ಬಿಟ್ಟಿದ್ದ ಕೋಣವನ್ನು ಎರಡು ವರ್ಷಗಳ ಮುಂಚೆಯೇ ಹೂವಿನ ಕೊಪ್ಪಲಿನ ಮನೆಯಲ್ಲಿ ಕಟ್ಟಿಹಾಕಿದ್ದರು’ ಎಂದು ಹೇಳುವ ನಿರೂಪಕರು, ಅದನ್ನು ಬಲಿಗಾಗಿ ದೊಡ್ಕೇರಿಯ ಹುಡುಗರು ಹಿಡಿದುಕೊಂಡು ಬರುತಿದ್ದಾಗ, ‘ಜಯಂತಿಪುರಕ್ಕೆ ಬಂದ ನಾಲ್ಕೈದು ವರ್ಷಗಳಲ್ಲಿ ಎಂದೂ ಕಟ್ಟಿಹಾಕದ ಅದನ್ನು, ಈಗ ಕಟ್ಟಿ ಹಾಕಿರುವುದಕ್ಕೆ ಅದರ ಸಿಟ್ಟು ಭಯಂಕರ ಸ್ವರೂಪ ಪಡೆದುಕೊಂಡಿತ್ತು’ ಎನ್ನುವಾಗ ಅರ್ಥವ್ಯತ್ಯಾಸವಾಗುತ್ತದೆ. ಏಕೆಂದರೆ, ಎರಡು ವರ್ಷದ ಮುಂಚೆಯೇ ಕಟ್ಟಿ, ಅದನ್ನು ನೋಡಿಕೊಳ್ಳಲೆಂದೇ ಇಬ್ಬರನ್ನು ನೇಮಿಸಿದ್ದ ಸಂಗತಿ ಮೊದಲೇ ತಿಳಿಯುತ್ತದೆ. ಅದನ್ನು ಹಿಡಿದು ತರುವಾಗ, ಈಗ ಮೊದಲ ಬಾರಿಗೆ ಕಟ್ಟಲಾಗಿತ್ತು ಎಂಬಂತೆ ನಂತರ ಹೇಳುವುದು ಯಾಕೋ ಆಭಾಸವೆನಿಸುತ್ತದೆ. ಕತೆಗಾರರು, ಇಂಥ ನಾಜೂಕಿನ ಸೂಕ್ಷ್ಮಗಳ ಕಡೆಗೆ ಗಮನ ಕೊಡಲೇಬೇಕು. ಈವರೆಗೇ ಕಟ್ಟಿದ್ದಲ್ಲಿ ಕಟ್ಟಿ, ಈಗ ಮೊದಲ ಬಾರಿಗೆ ಕಟ್ಟಿ ಎಳೆದು ತರುತಿದ್ದರು ಎಂದು ಓದಿದರೆ ಸರಿಯಾದೀತು. ಆದರೂ ದೇವರಿಗೆ ಬಿಟ್ಟಿದ್ದನ್ನು ಕಟ್ಟುತಿದ್ದರು ಎಂಬುದನ್ನು ಒಪ್ಪುವುದು ಸ್ವಲ್ಪ ಕಷ್ಟವೆ!

ಒಂಬತ್ತು ದಿನಗಳವರೆಗಿನ ಮಾರಮ್ಮಳ ಪೂಜೆ; ಜನರ ನಂಬಿಕೆಗಳು; ಮಾರಮ್ಮಳ ದೃಷ್ಠಿ ತೆಗೆಯುತಿದ್ದ ಗುಡಿಗಾರರ ನೇಮ, ಮಡಿ, ಪಥ್ಯೆಗಳು; ಕತೆಗಾರರ ತಾಯಿಯ ಹಾಸ್ಯ, ಅಜ್ಜಿ ಹೇಳಿದ ಮಾರಿಹಬ್ಬದ ಹಿನ್ನೆಲೆ; ಬಲಿಕೊಟ್ಟ ಹಂದಿಯ ಬಾಯಲ್ಲಿ ಅದರ ಕಾಲನ್ನೇ ಕಡಿದಿಟ್ಟಿದ್ದ ದೃಶ್ಯ, ಕತೆಯ ಕುತೂಹಲವನ್ನು ಹೆಚ್ಚಿಸುತ್ತ ಓದುಗರನ್ನು ತುದಿಗಾಲ ಮೇಲೆ ನಿಲ್ಲಿಸುತ್ತವೆ.

‘ಕುದುರೆಹೊಂಡ’ವು ಒಂದು ದುರಂತ ಕತೆಯಾಗಿದೆ. ನಿರೂಪಕರು ಜಯಂತಿಪುರವನ್ನು ಬಿಟ್ಟು ಮುಂಬೈ ಸೇರಿದ್ದರೂ ಊರಿಗೆ ಬಂದಾಗಲೆಲ್ಲ ಕುದುರೆಹೊಂಡ ನೋಡದೇ ಮರಳುತ್ತಿರಲಿಲ್ಲ. ಆದರೆ ಅವರ ತಾಯಿಗೆ ಮಾತ್ರ ಇದು ಸ್ವಲ್ಪವೂ ಇಷ್ಟವಾಗುತ್ತಿರಲಿಲ್ಲ. ಏಕೆಂದರೆ, ಆಯೆಡೆಗೆ ಹೋದವರಿಗೆ ಏನಾದರೊಂದು ಕೆಡುಕಾಗುತ್ತದೆಂಬ ಭಯ ಅವಳೊಳಗೆ ಮನೆಮಾಡಿತ್ತು. ಕಾಕತಾಳೀಯ ಎಂಬಂತೆ, ಆಗಾಗ ಅಲ್ಲಿ ಏನಾದರೊಂದು ಕೆಟ್ಟಘಟನೆ ಸಂಭವಿಸುತ್ತಲೇ ಇದ್ದವು. ಇದು ಕೆಲವು ಬಾರಿ ನಿರೂಪಕರ ಅನುಭವಕ್ಕೆ ಬಂದದ್ದೂ ಉಂಟು. ಆದರೂ ಅವರು ಅದರ ಬಗೆಗೆ ಅಷ್ಟಾಗಿ ಯೋಚಿಸದೇ ಅಮ್ಮನಿಗೆ ತಿಳಿಯದಂತೆ ಅಲ್ಲಿಗೆ ಹೋಗಿಬರುತಿದ್ದರು. ಕಾರಣ:ಅದು ಅವರ ಅನುಭವದ ಕಣಜವಾಗಿತ್ತು. ಅದರಲ್ಲೂ ಹೆತ್ತವ್ವಳಿಗಿಂತಲೂ ಹೆಚ್ಚಾಗಿ ಪ್ರೀತಿಸುತಿದ್ದ ಕುರುಬರ ನಿಂಗವ್ವ ಆ ಹೊಂಡದಲ್ಲಿ ಬಿದ್ದು ಸತ್ತಿದ್ದು ಅವರನ್ನು ತೀವ್ರವಾಗಿ ಘಾಸಿಗೊಳಿಸಿತ್ತು. ಅವಳು ದೆವ್ವವಾಗಿ ಕಾಡುತಿದ್ದಾಳೆನ್ನುವುದು ಎಲ್ಲರ ನಂಬಿಕೆಯಾಗಿದ್ದರೂ ಅವಳು ಮಾತ್ರ ತನ್ನನ್ನು ಕಾಡುವುದಿಲ್ಲವೆಂಬ ಭರವಸೆ ನಿರೂಪಕರೆದೆಯಲ್ಲಿ ಬಲವಾಗಿ ಊರಿತ್ತು. ಅದಕ್ಕಾಗಿನೇ ತನ್ನ ಹಿರಿಯರು ಮಾರಿದ ಅಲ್ಲಿಯ ಜಮೀನನ್ನು ಮತ್ತೆ ಕೊಂಡು ನೆಲೆಯೂರಬೇಕೆಂದು ಹಂಬಲಿಸಿ, ಊರ ಒಡೆಯ ಮಧುಕೇಶ್ವರನಿಂದ ಇದು ಸಾಧ್ಯವಾಗಬೇಕಷ್ಟೆ ಎಂದುಕೊಳ್ಳುವುದರೊಂದಿಗೆ ಕತೆ ಮುಗಿಯುತ್ತದೆ.

ಮೂಢನಂಬಿಕೆಯೋ ಕಾಕತಾಳೀಯವೋ ಎಂಬಂತೆ ಎಂದೋ ಘಟಿಸಿದ ಅತೀಮಾನುಷ ಘಟನೆಗಳು ಹೇಗೆ ಜೀವಂತವಾಗುಳಿದು ಬರುತ್ತವೆ ಎನ್ನುವುದಕ್ಕೊಂದು ಜೀವಂತ ನಿದರ್ಶನವಿದು. ಹಿಂದಕ್ಕೆ ಕೆರೆ-ಬಾವಿ-ಹೊಳೆಗಳಲ್ಲಿ ದೆವ್ವ-ಭೂತ-ರಾಕ್ಷಸ ಇರುತ್ತವೆಯೆಂದು ಹೆದರಿಸುತ್ತಿದ್ದದ್ದು, ಅವುಗಳನ್ನು ಯಾರೂ ಹಾಳುಗೆಡವದಿರಲೆಂಬ ಉನ್ನತ ಆದರ್ಶವೇ ಅದರ ಹಿಂದೆ ಇದ್ದೀತು. ಅದರಿಂದಲಾದರೂ ಅವು ಯಾವಾಗಲೂ ತುಂಬಿತುಳುಕುತ್ತ, ಜನರ ದಾಹವನ್ನು ಸದಾಕಾಲ ತಣಿಸುತಿದ್ದವು. ಹಾಗೆಯೇ ಇಲ್ಲಿನ ಕುದುರೆಹೊಂಡವು ಕೂಡ,ಅರ್ಧ ಎಕರೆಯಷ್ಟು ವಿಶಾಲವಾಗಿ ವಿಸ್ತರಿಸಿ, ರಾಜರ ಕಾಲದಲ್ಲಿ ಬಾಯಾರಿದ ಕುದುರೆಗಳಿಗೆ ನೀರು ಕುಡಿಯಲಿಕ್ಕೆ ಮಾಡಿದ್ದ ಕೆರೆಯಾಗಿತ್ತು. ವರದಾ ನದಿ ಬತ್ತಿದರೂ ಇದರೊಳು ಬೊಗಸೆಯಷ್ಟಾದರೂ ನೀರಿರುತಿದ್ದವೆಂದು ಅಭಿಮಾನಪಡುತಿದ್ದ ನಿರೂಪಕರಿಗೆ, ಆ ಬಯಲೀಗ ಬತ್ತಿ ನೆಲಸಮವಾಗಿದ್ದು ಅವರೊಳಗೆ ದುಃಖವನ್ನು ಮಡುಗಟ್ಟುವಂತೆ ಮಾಡಿದ್ದು ಸಹಜವೆ. ಮುಂಬೈನ ಯಾಂತ್ರಿಕ ಬದುಕಿನ ನಡುವೆಯೂ ಈ ಕೆರೆಯೇ ಆಪ್ಯಾಯಮಾನವಾಗಿತ್ತೆಂದರೆ ಅದರೊಂದಿಗೆ ಅವರಿಗಿದ್ದ ಒಡನಾಟ ಅರ್ಥೈಸಿಕೊಳ್ಳಬಹುದು. ‘ಒಂದು ಕೆರೆ ಬತ್ತಿದರೆ, ಒಂದು ಸಂಸ್ಕೃತಿಯೇ ಬತ್ತಿದಂತೆ’ ಎಂಬುದನ್ನು ಈಗ ನಾವು ಮರೆತಂತಿದೆ. ನಾಡಿನ ಇಂಥ ಅದೆಷ್ಟೋ ಜೀವನಾಡಿಯ ಜೀವಸೆಲೆಗಳನ್ನು ಬರಡಾಗಿಸಿ, ಒಣಗಿಸಿದ್ದೇವೆನ್ನುವುದೇ ದುರಂತದ ಸಂಗತಿ. ತನ್ನೊಡಲ ತುಂಬ ಕೆರೆಗಳನ್ನೇ ತುಂಬಿಕೊಂಡಿದ್ದ ಬೆಂಗಳೂರಿಂದು ಬೋಳು ಬಯಲಾಗಿ ನಿಂತ ವಿರ್ಯಾಸವೇ ನಮ್ಮ ಕಣ್ಮುಂದಿದೆ.

ಕುರುಬರ ನಿಂಗಮ್ಮಳೊಂದಿಗಿನ ನಿರೂಪಕರ ಸಾಮೀಪ್ಯ ಖುಷಿ ತರುವಂಥದ್ದು. ಅವಳ ಹಿನ್ನೆಲೆಯೂ ಕುದುರೆಹೊಂಡದಂತೆ ದುರಂತವಾದದ್ದೆ. ಅವಳನ್ನು ಲಗ್ನವಾಗುವುದಾಗಿ ನಂಬಿಸಿ, ಬಸಿರು ಮಾಡಿ ಹೋದವನು ಹೊರಳಿ ನೋಡಲೇಯಿಲ್ಲ. ಕುರಿ ಕಾಯುತ್ತ ಬದುಕು ಕಟ್ಟಿಕೊಂಡು ಇದ್ದೊಬ್ಬ ಮಗನನ್ನು ಅಕ್ಕನ ಮನೆಯಲ್ಲಿಟ್ಟು ಅಕ್ಕರೆಯಿಂದ ಓದಿಸಿದರೆ, ಅವನೋ ಅವಳಲ್ಲಿದ್ದುದ್ದನ್ನೆಲ್ಲ ದೋಚಿ ಮರೆತುಬಿಟ್ಟ. ಹೀಗೆ, ಹೆತ್ತವರ ಬಳಿಯಿದ್ದುದ್ದನ್ನೆಲ್ಲ ಬಳಿದು ಕಡೆಗಾಲದಲ್ಲಿ ಕಡೆಗಣಿಸುವುದು ಯಾವ ಸಮಾಜಕ್ಕೂ ಹೆಸರು ತರುವಂಥದ್ದಲ್ಲ. ಕಠಿಣ ಪರಿಸ್ಥಿತಿಯಲ್ಲೂ ಪರ್ವತದಂತೆ ನಿಂತವಳು, ಕುದುರೆಹೊಂಡದಲ್ಲಿ ಹೆಣವಾಗಿದ್ದು ಖೇದವೆನಿಸುತ್ತದೆ. ಅದು ಅವಳ ಸಾವೋ ಆತ್ಮಹತ್ಯೆಯೋ ಕೊನೆಗೂ ತಿಳಿದುಬರುವುದಿಲ್ಲ. ಎಂಥವರಿಗೂ ಮಾದರಿಯಾಗಬಹುದಾಗಿದ್ದ ಅವಳ ಬದುಕು, ಹೊಳೆಯಲ್ಲಿ ಶವವಾಗಿ ತೇಲಿ ಬಂದದ್ದು ಮರುಕಹುಟ್ಟಿಸುವಂಥದ್ದು. ‘ನನ್ನ ಕಲ್ಪನೆಯ ಜಗತ್ತು ವಿಸ್ತಾರಗೊಂಡಿದ್ದೇ ಅವಳ ಕತೆಗಳನ್ನು ಕೇಳುವ ಮೂಲಕ’ ಎಂದು ಕತೆಗಾರರು ಸ್ಮರಿಸಿಕೊಳ್ಳುತ್ತಾರೆಂದರೆ, ಅವರ ಮೇಲೆ ಬೀರಿದ ಅವಳ ಪರಿಣಾಮವನ್ನು ಗುರುತಿಸಬಹುದು. ಇಂದಿನ ಪೀಳಿಗೆಯ ಅದೆಷ್ಟು ಜನರಿಗೆ ಈ ಸುಖ ದಕ್ಕೀತು. ಆ ಬಂಧ ಬೆಸೆಯುವುದಕ್ಕಾದರೂ ನಿರೂಪಕರಿಗೆ ಅಲ್ಲಿಯೇ ಭದ್ರವಾಗಿ ನೆಲೆಯೂರುವಾಸೆ.ಊರ ಒಡೆಯ ಮಧುಕೇಶ್ವರನಿಂದ ಇದು ಸಾಧ್ಯವಾಗಬೇಕಷ್ಟೆ ಎಂದು ಭಗವಂತನಲ್ಲಿ ಮೊರೆಯಿಡುತ್ತಾರೆ.

ಇದರೊಂದಿಗೆ, ಕುದುರೆಹೊಂಡದ ಬಗೆಗಿದ್ದ ಜನರ ಭಯ; ನಿರೂಪಕರ ತಾಯಿ ಕುದುರೆಹೊಂಡದ ಪಕ್ಕದಲ್ಲಿದ್ದ ಜಮೀನು ತೆಗೆದುಕೊಳ್ಳದಿರಲು ಕಾರಣ, ಅವಳ ಸಂತೃಪ್ತ ಬದುಕು, ಮಗನಿಗೆ ಹೇಳುತಿದ್ದ ಹಿತವಚನ, ನಿಂಗಮ್ಮಳೊಂದಿಗಿನ ಅವಳ ಬಾಂಧವ್ಯ; ಮುಂಬೈನ ಯಾಂತ್ರಿಕತೆ; ಕುರುಬ ನಿಂಗಮ್ಮಳ ದುರಂತಬಾಳು, ಕತೆಯನ್ನು ಪರಿಣಾಮಕಾರಿಯಾಗಿಸಿವೆ.

‘ಮಾಲಿನಿ ಜೀವಂತವಾಗಿದ್ದಾಳೆ’ ಮಾಲಿನಿಯ ಒಟ್ಟು ವ್ಯಕ್ತಿತ್ವವನ್ನು ಕಟ್ಟಿಕೊಡುವ ದುರಂತಕತೆ. ತನಗೆ ತಾಯಿಪ್ರೀತಿಯನ್ನು ನೀಡಿದ್ದ ಅವಳೇಕೆ ಆತ್ಮಹತ್ಯೆ ಮಾಡಿಕೊಂಡಳೆಂದು, ಫ್ಲಾಶ್ಬ್ಯಾಕ್ ತಂತ್ರದಿಂದ ನಿರೂಪಕರೇ ಅವಳ ಒಟ್ಟು ವ್ಯಕ್ತಿತ್ವವನ್ನು ಕಟ್ಟಿಕೊಡುವ ಕಥನವಿದು.ನಿರೂಪಕರ ತಾಯ್ತಂದೆಯರಿಗೆ ಮಕ್ಕಳಿಲ್ಲದ್ದರಿಂದ, ದೊಡ್ಡಮ್ಮರ ಮಗಳು ಮಾಲಿನಿ ಒಂದು ವರ್ಷದವಳಿದ್ದಾಗಲೇ ಅವರ ಮನೆಗೆ ದತ್ತುರೂಪದಲ್ಲಿ ಬಂದಂಥವಳು. ಅವಳು ಬಂದ ನಾಲ್ಕೈದು ವರ್ಷದ ಬಳಿಕವೇ ನಿರೂಪಕರು ಹುಟ್ಟಿದ್ದು. ಸಹಜವಾಗಿ ಅಕ್ಕಳ ಅಕ್ಕರೆಯಲ್ಲಿ ಬೆಳೆದ ನಿರೂಪಕರಿಗೆ, ನರ್ಸಿಂಗ್ ಕಲಿಯಲು ಹುಬ್ಬಳ್ಳಿಗೆ ಹೋದಾಗಿನಿಂದ ಅವಳು ಬದಲಾಗುತ್ತ ಹೋಗುವುದನ್ನು ಗಮನಿಸುತ್ತಾರೆ. ಇದೇ ಸಂದರ್ಭದಲ್ಲಿ ಮನೆಯ ಸಮಸ್ಯೆಗಳಿಂದ ಸಾಯಲು ಹೋಗಿದ್ದ ಅಪರಿಚಿತ ರಘುರಾಮಶೆಟ್ಟಿಯನ್ನು ಆಕಸ್ಮಿಕ ನೋಡಿದ ನಿರೂಪಕರ ತಂದೆ, ಅವನ ಪ್ರಾಣವನ್ನುಳಿಸಿ, ಮನೆಯಲ್ಲಿಟ್ಟುಕೊಂಡು, ಬದುಕಿಗೊಂದು ಆಶ್ರಯವಾಗಲೆಂದು ಹುಬ್ಬಳ್ಳಿಯ ಟ್ರಾನ್ಸ್ಪೋರ್ಟ್ ಕಂಪನಿಯಲ್ಲಿ ಡ್ರೈವರ್ ಕೆಲಸ ಕೊಡಿಸುತ್ತಾರೆ. ಜೊತೆಗೆ, ಅಲ್ಲಿಯೇ ನರ್ಸಿಂಗ್ ಕಲಿಯುತ್ತಿದ್ದ ಮಾಲಿನಿಯನ್ನೂ ಪರಿಚಯಿಸುತ್ತಾರೆ. ಅದು ಅವರಿಬ್ಬರ ಪ್ರೀತಿಗೆ ಸೇತುವೆಯಾಗುತ್ತದೆ. ಆದರೆ ರಘುರಾಮನು, ತನ್ನ ತಂಗಿಯ ಮದುವೆಗೆ ಮಾಡಿದ್ದ ಸಾಲ ತೀರಿಸುವ ನೆಪದಿಂದ, ತನನ್ನು ಮರೆಯಲು ಮಾಲಿನಿಗೆ ಹೇಳಿ, ತಾನು ಅನುಕೂಲಸ್ಥ ಹುಡುಗಿಯನ್ನು ಮದುವೆಯಾಗುವುದಾಗಿ ಮುಂಬೈಗೆ ತೆರಳುತ್ತಾನೆ. ಇದರಿಂದ ನೊಂದ ಮಾಲಿನಿ, ತಾನು ಕೆಲಸ ಮಾಡುತಿದ್ದ ಧಾರವಾಡದಿಂದ ಊರಿಗೆ ಬಂದು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಸತ್ತು ಇಪ್ಪತ್ತು ವರ್ಷಗಳಾದರೂ ಕಡಲಪ್ರೀತಿಯನುಣಿಸಿದ ಅವಳಿನ್ನೂ ತನ್ನೊಳು ಜೀವಂತವಾಗಿದ್ದಾಳೆಂದು ನೆನಪಿಸಿಕೊಳ್ಳುವುದರೊಂದಿಗೆ ಕತೆ ಮುಗಿಯುತ್ತದೆ.

ರಘುರಾಮಶೆಟ್ಟಿ ತೆಗೆದುಕೊಂಡ ತೀರ್ಮಾನ ಸರಿಯೋ ತಪ್ಪೋ ಎನ್ನುವುದಕ್ಕಿಂತ ಅವನಿಂದಲೇ ಮಾಲಿನಿ ಸತ್ತಿದ್ದಂತೂ ಸತ್ಯ. ಅವಳನ್ನು ಪ್ರೀತಿಸುವಾಗಿಲ್ಲದ ಸಾಲದ ನೆಪ, ತದನಂತರ ನೆನಪಾಯಿತೆ? ತನ್ನಿಂದ ಇನ್ನೊಂದು ಜೀವದ ಮೇಲೆ ಏನು ಪರಿಣಾಮ ಬೀರಿತೆಂಬ ವಿವೇಕ, ಪರಿಜ್ಞಾನವೂ ಬೇಡವೆ. ನನ್ನ ನಿರ್ಧಾರದಿಂದ ಬೇರೆಯವರಿಗೇನಾದರೇನೆಂದು ಉಡಾಫೆ ತೋರುವುದಾದರೆ ಏಕೆ ಪ್ರೀತಿಸಬೇಕಿತ್ತು? ಅವಳೊಂದಿಗೆ ಸುತ್ತಿದ್ದು, ಗೋವಾಕ್ಕೆ ಹೋಗಿಬಂದದ್ದು ಯಾವ ಪುರುಷಾರ್ಥಕ್ಕಾಗಿ? ಹಾಗಾದರೆ, ಅವನ ಪ್ರೀತಿ ಕೇವಲ ನಾಟಕವಾಗಿತ್ತೆ? ಇಂಥ ಹತ್ತುಹಲವು ಒಳಸುಳಿವುಗಳು ತೆರೆದುಕೊಳ್ಳುತ್ತಲೇ ಹೋಗುತ್ತವೆ. ತನ್ನ ತಂಗಿಯನ್ನು ಮದುವೆಯಾಗುತ್ತೇನೆಂದು ಒಪ್ಪಿದ ವ್ಯಕ್ತಿ, ವರದಕ್ಷಿಣೆಯಿಂದ ಮುಂಗಡ ಆರುಲಕ್ಷ ಹಣ ಪಡೆದು ಪರಾರಿಯಾದಾಗ ದಿಕ್ಕುತೋಚದೆ ಸಾಯಲು ಯೋಚಿಸಿದ್ದವನು, ಅವನ ಹಾಗೆ ತಾನೇ ಮಾಡಿ ಮತ್ತೊಂದು ಜೀವ ತೆಗೆದದ್ದು ಯಾವ ನ್ಯಾಯ? ತನ್ನ ಪರಿಸ್ಥಿತಿಯನ್ನೊಮ್ಮೆ ಯೋಚಿಸಬೇಕಿತ್ತಲ್ಲವೆ? ಜೀವವುಳಿಸಿ, ಮನೆಮಗನಿಗಿಂತಲೂ ಹೆಚ್ಚಾಗಿ ಪ್ರೀತಿಸಿ, ಉದ್ಯೋಗವನ್ನೂ ಕೊಡಿಸಿ, ಬಾಳು ಕಟ್ಟಿಕೊಟ್ಟವರ ಮನೆಯ ಕುಡಿಗೇ ಚಟ್ಟಕಟ್ಟಿಸುವ ಮಟ್ಟಕ್ಕೆ ಇಳಿಯುವುದೆಂದರೇನು? ತಾನೇನೋ “ನಿನ್ನನ್ನು ಮದುವೆಯಾಗಲಿಕ್ಕೆ ಸಾಧ್ಯವಿಲ್ಲ. ತಂಗಿಯ ಮದುವೆಗೆ ಮಾಡಿದ ಲಕ್ಷಗಟ್ಟಲೇ ಸಾಲವನ್ನು ತೀರಿಸಲು ಅನುಕೂಲಸ್ಥ ಬೇರೆ ಹುಡುಗಿಯನ್ನು ಮದುವೆಯಾಗಲೇಬೇಕು. ನಿಮ್ಮ ಕುಟುಂಬದಂತಹ ಒಳ್ಳೆಯ ವ್ಯಕ್ತಿಗಳನ್ನು ಉಳಿಸಿಕೊಳ್ಳುವ ಯೋಗ್ಯತೆ ಇಲ್ಲ. ನಮ್ಮಿಬ್ಬರ ಪ್ರೀತಿ ಕೆಟ್ಟ ಕನಸೆಂದು ಮರೆತುಬಿಡು. ಮುಂದೆ ಎಲ್ಲಾ ಒಳ್ಳೆಯದಾಗುತ್ತದೆ” ಎಂದು ಪತ್ರ ಬರೆದು ಪರಾರಿಯಾದ.

ಅವಳಿಗೂ ತನ್ನ ಭಾವನೆಗಳನ್ನು ಹೇಳಲು ಅವಕಾಶ ಬೇಡವೆ? ಆ ಆಘಾತದಿಂದ ಅವಳು ಹೊರಗೆ ಬರಲೇಯಿಲ್ಲ. ಅವಳನ್ನು ಸಾಯಲು, ಸಾಯಿಸಲು ಅವನೇನು ಪ್ರಚೋದಿಸದಿದ್ದರೂ ಬಿದ್ದ ಮಾನಸಿಕ ಹೊಡೆತ, ಅವಳನ್ನು ಆ ಹಂತಕ್ಕೆ ಕರೆದುಕೊಂಡು ಹೋಗಿ ನಿಲ್ಲಿಸಿತ್ತು. ಅವಳೂ ಅಷ್ಟು ದುರ್ಬಲಳಾಗಿ, ದುಡುಕಿ ಸಾಯುವ ಮಟ್ಟಕ್ಕೆ ಹೋಗಬಾರದಿತ್ತು. ಎಲ್ಲಕ್ಕೂ ಸಾವೇ ಪರಿಹಾರವಾದರೆ ಬದುಕಿಗಾದರೆಲ್ಲಿದೆ ಅರ್ಥ? ತನ್ನನ್ನೇ ನಂಬಿದವರ ಪಾಡೇನು? ಸಾವಂತೂ ಇದ್ದೇ ಇದೆ; ಬೇಡವೆಂದರೂ ಬೆಂಬಿಡದದು. ಕಷ್ಟ-ನಷ್ಟಗಳ ಮಧ್ಯೆ ನೋವುಗಳನ್ನು ನಲಿವನ್ನಾಗಿಸಿ, ಇದ್ದು ಜೈಸಿದಾಗಲೇ ಬದುಕು ಸಾರ್ಥಕ್ಯ ಪಡೆಯಲು ಸಾಧ್ಯ.

ನಿರೂಪಕರ ಮೇಲೆ ಗಾಢವಾಗಿ ಬೀರಿದ ಮಾಲಿನಿಯ ಪ್ರಭಾವ ಕತೆಯುದ್ದಕ್ಕೂ ಕಾಣಬಹುದು. ಅವಳ ಸಂಕೋಚ ಸ್ವಭಾವ, ಯಾರ ಬಗೆಗೂ ದೂರು ಹೇಳದ ದೊಡ್ಡತನ, ದುಡಿಮೆ, ತಾಯ್ತಂದೆಯರ ಮೇಲಿಟ್ಟಿದ್ದ ಪ್ರೀತಿ, ಹಠಮಾರಿತನವಿಲ್ಲದ ಸೌಮ್ಯಗುಣ, ಅಕ್ಕಳಾಗಿ-ತಾಯಿಯಾಗಿ ತೋರಿದ ಅಕ್ಕರೆ, ಕಾಳಜಿ ಓದುಗರನ್ನು ಬಹುವಾಗಿ ಕಾಡುತ್ತವೆ. ಅವಳು ನರ್ಸಿಂಗ್ ಕಲಿಯಲು ಹುಬ್ಬಳ್ಳಿಗೆ ಹೋದ ಬಳಿಕ ಸಂಕೋಚ, ಹೆದರಿಕೆ ಮಾಯವಾಗಿ ವಾಚಾಳಿಯಾಗಿದ್ದು ಸಹಜವಿರಬಹುದು. ಯಾಕೆಂದರೆ, ಹೊರ ವಾತಾವರಣದ ಸ್ವಾತಂತ್ರö್ಯ ಅದನ್ನೆಲ್ಲಾ ಕಲಿಸಿರಲೂಬಹುದು. ಆದರೆ ನಿರೂಪಕರಿಗೆ ಮೊದಲಿನ ಪ್ರೀತಿ-ಅಕ್ಕರೆ ಸಿಗದೆ ಹೋದಾಗ ವ್ಯಥೆಯೆನಿಸುತ್ತದೆ. ಅದಕ್ಕೆ, ಆ ವೇಳೆಗೆ ಅವಳು ಪ್ರೀತಿಯ ಬಲೆಯಲ್ಲಿ ಬಿದ್ದು, ಅನೇಕ ತಳಮಳ-ತಲ್ಲಣ-ನೋವು-ಸಂಕಟಗಳನ್ನು ಅನುಭವಿಸುತ್ತಿರಲೂಬಹುದು. ಹೀಗಾಗಿ, ಮನೆಯವರೊಂದಿಗಿನ ಅವಳ ಮೌನ ಮುಂದುವರಿಯಲು ಇದೂ ಒಂದು ಕಾರಣ ಇದ್ದಿರಲೂಬಹುದು.

ಒಂದೆಡೆ ರಘುರಾಮ ಮೋಸ ಹೋದರೆ, ಮತ್ತೊಂದೆಡೆ ಮಾಲಿನಿ ಮೋಸ ಹೋಗುತ್ತಾಳೆ. ಇದರಲ್ಲಿ ಯಾವುದು ಹೆಚ್ಚು, ಯವುದು ಕಡಿಮೆ ಎಂದು ತೂಕ ಹಾಕುವದಲ್ಲ. ಮೋಸ, ಮೋಸನೇ. ಆ ಮೋಸ ಯಾರು, ಯಾರಿಗೆ, ಏಕೆ, ಹೇಗೆ ಮಾಡಿದ್ದು, ಯಾವ ಪ್ರಕಾರದ್ದು ಮುಖ್ಯವಲ್ಲ. ಆ ಒಂದು ಕಾರಣಕ್ಕಾಗಿ ಜೀವ-ಜೀವನ ಕಳೆದುಕೊಳ್ಳಬಾರದಷ್ಟೆ. ಇಲ್ಲಿ ರಘುರಾಮಶೆಟ್ಟಿ ಹೇಗೋ ಬದುಕುಳಿದ. ಆದರೆ ಅಮಾಯಕಳಾಗಿದ್ದ ಮುಗ್ಧ ಮಾಲಿನಿ ಜೀವ ಕಳೆದುಕೊಂಡಿದ್ದು ಮಾತ್ರ ವಿಷಾದನೀಯ.

‘ದೇಹವೆಂಬ ಮಡಿಕೆಯೊಳಗೆ’ ಒಂದು ವಿಷಮದಾಂಪತ್ಯದ ಕತೆ. ಒಂದು ದಿನ ನಿರೂಪಕರ ಕನಸಿನಲ್ಲಿ ಆತ್ಮೀಯ ಗೆಳೆಯನಾಗಿದ್ದ ಮಲ್ಕೇಷಿ ಬರುತ್ತಾನೆ. ಆ ಆಕಸ್ಮಿಕ ಕನಸಿನೊಂದಿಗೆ ಅವನೊಂದಿಗಿನ ಇಪ್ಪತ್ತು ವರ್ಷಗಳ ಹಿಂದಿನ ನೆನಪುಗಳ ಸುರುಳಿ ಬಿಚ್ಚುತ್ತ, ಅವನ ಜೀವನವೃತ್ತಾಂತ ತೆರೆದುಕೊಳ್ಳುವುದು ಇದರ ವಿಶೇಷ. ಮಲ್ಕೇಷಿಯ ಹೆಂಡತಿ ದೇವೀರಿ, ಊರಿನಲ್ಲಿ ಶುಭೋದಯ ಹೊಟೇಲ್ ನಡೆಸುತ್ತಿದ್ದ ಚಂದ್ರಕಾಂತನೊಂದಿಗೆ ಗುಟ್ಟಾಗಿ ಸಂಗ ಬೆಳೆಸುವಳು. ಇದು ಗಂಡನಿಗೆ ತಿಳಿದು, ಅವಳನ್ನು ತ್ಯಜಿಸಿ ಮತ್ತೊಬ್ಬಳನ್ನು ಕೈಹಿಡಿಯುತ್ತಾನೆ. ಇದರಿಂದ ನೊಂದ ದೇವೀರಿ ‘ನನ್ನ ಸಾವಿಗೆ ಗಂಡ ಮಲ್ಕೇಷಿಯೇ ಕಾರಣ’ ಎಂದು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುವುದು ಇಲ್ಲಿನ ಒಂದೆಳೆಯ ಕಥಾವಸ್ತು. ದೇವೀರಿ ಸಾವಿಗೆ ನಿಜಕ್ಕೂ ಯಾರು ಕಾರಣ? ಮಲ್ಕೇಷಿಯೇ ಅಥವಾ ಅವಳನ್ನು ಬಳಸಿ ಬೀಸಾಡಿದ ಚಂದ್ರಕಾಂತನೆ? ಶಾಂತಕುಮಾರನ ಹೆಂಡತಿ ಬೇರೊಬ್ಬನ ಜೊತೆ ಓಡಿಹೋದಾಗ, ಮೂರುತಿಂಗಳ ನಂತರ ಕರೆತಂದು, ಅವಳಿಗೆ ಬಾಳುಕೊಟ್ಟಂತೆ ದೇವೀರಿಗೂ ಕೊಡಬೇಕಿತ್ತು ಎಂಬುದು ನಿರೂಪಕರ ಒಟ್ಟು ಅಭಿಪ್ರಾಯ. ಮಲ್ಕೇಷಿ ಹಾಗೆಯೇ ಶಾಂತಕುಮಾರನೂ ನಿರೂಪಕರ ಆತ್ಮೀಯ ಗೆಳೆಯನೆ. ಶಾಂತಕುಮಾರನ ಹಾಗೆ ಮಲ್ಕೇಷಿಯೂ ದೇವೀರಿಗೆ ಬಾಳುಕೊಟ್ಟಿದ್ದರೆ, ಅವಳೂ ಬದುಕಿರುತಿದ್ದಳೆಂಬುದು ಅವರ ಮನೋಭಿಲಾಸೆ. ಇದನ್ನು ಮರುಕವೆನ್ನುವುದಕ್ಕಿಂತಲೂ ಮನುಷ್ಯ ತಪ್ಪು ಮಾಡುವುದು ಸಹಜ. ಅದನ್ನು ತಿದ್ದಿಕೊಳ್ಳಲು ಒಂದು ಅವಕಾಶ ಕೊಡಬೇಕೆಂಬುದು ಅವರ ಒಟ್ಟಾರೆಯ ಮನಸ್ಥಿತಿ. ಮಾಡಿದ ತಪ್ಪಿಗೆ ಕ್ಷಮಿಸದ ಮನಸ್ಸು ಅದೆಷ್ಟು ಕ್ರೂರ. ಒಂದು ವೇಳೆ ಮಲ್ಕೇಷಿಯ ಸ್ಥಾನದಲ್ಲಿ ನಾನಿದ್ದರೆ ಖಂಡಿತ ಅವಳನ್ನು ಕ್ಷಮಿಸುತಿದ್ದೆ ಎನ್ನುವುದು ಅವರ ಜೀವಪರ ಕಾಳಜಿಯನ್ನಿಲ್ಲಿ ತೆರೆದು ತೋರಿಸುತ್ತದೆ.

ಏನೂ ಆಗಿಲ್ಲವೆಂಬಂತೆ ಬದುಕಿದ ಚಂದ್ರಕಾಂತನು ಮನುಷ್ಯತ್ವದ ಎಲ್ಲೆಯನ್ನು ಮೀರಿದವನು. ಅವಳು ಸತ್ತಾಗಲೂ ‘ಆತನಿಗೆ ದೇವೀರಿಯ ವಿಷಯದಲ್ಲಿ ಪಾಪಪ್ರಜ್ಷೆ ಇದ್ದಂತಿರಲಿಲ್ಲ’ ಎಂಬ ನಿರೂಪಕರ ಮಾತು ಕೂಡ ಇದನ್ನು ಸಾಬೀತುಪಡಿಸುತ್ತದೆ. ಬ್ರಹ್ಮಚಾರಿಯಾಗಿದ್ದ ಅವನಾದರೂ ಅವಳಿಗೆ ಬಾಳು ಕೊಡಬಹುದಿತ್ತು. ಆ ನಿರೀಕ್ಷೆ ಅವಳಲ್ಲಿಯೂ ಇತ್ತು. ಅದು ಹುಸಿಭ್ರಮೆಯಾಗಿದ್ದು ವಿಷಾದನೀಯ. ಹೋಗಲಿ, ಮಲ್ಕೇಷಿಯ ಬಾಳಾದರೂ ಹಳಿಯ ಮೇಲೆ ಸಾಗಿತೆ; ಅದು ಇಲ್ಲ. ‘ನನ್ನ ಸಾವಿಗೆ ಗಂಡನೇ ಕಾರಣ’ವೆಂದು ಹೆಂಡತಿ ಬರೆದಿಟ್ಟು ಸತ್ತಿದ್ದು ಅವನ ಬದುಕು ಬಿರುಗಾಳಿಗೆ ಹೊಯ್ದಾಡುವಂತಾಯಿತು. ಪೊಲೀಸು, ಕೋರ್ಟು ವಿಚಾರಣೆಯಿಂದ ಬೇಸತ್ತು ಅರೆಹುಚ್ಚನಾಗಿ ಅವನು ಊರೇ ಬಿಡಬೇಕಾಯಿತು. ಕೊನೆಗವನು ಬದುಕಿದ್ದಾನೊ, ಸತ್ತನೊ, ಆತ್ಮಹತ್ಯೆ ಮಾಡಿಕೊಂಡನೋ ಇಪ್ಪತ್ತು ವರ್ಷಗಳಿಂದಲೂ ಲೋಕಕ್ಕೆ ತಿಳಿಯದ ಮಾತು. ಆದರೂ ಅವನ ಎರಡನೆಯ ಹೆಂಡತಿ, ಮಕ್ಕಳು, ಅವನು ಬಂದೇಬರುತ್ತಾನೆಂಬ ಭರವಸೆಯಲ್ಲಿ ಕಾಯುತ್ತಿರುವುದು ಮಾತ್ರ ಮರುಕ ಹುಟ್ಟಿಸುತ್ತದೆ.

ಹಾಗಾದರೆ ದೇವೀರಿ ಮಾಡಿದ್ದು ಸರಿಯೆ ಎಂದು ಓದುಗರಿಗೆ ಕಾಡುವುದು ಸಹಜ. ಸರಿಯೆಂದು ಸಮರ್ಥಿಕೊಳ್ಳಲಾಗದಿದ್ದರೂ ಅವಳಿಗೊಂದು ಅವಕಾಶ ಕೊಡಬೇಕಿತ್ತೆಂಬುದು ಸರ್ವವಿದಿತವಾದದ್ದು.ಅದಕ್ಕೇ ನಮ್ಮ ಜನಪದರು, “ಊರಮುಂದಿನ ಭಾವಿ ಯಾರ ತೋಡಿದರೇನು? ಕಾಲು ಜಾರಿದರೆ ಕೈಲಾಸ| ಎಲೆ ಮಗಳೇ| ಮನವು ಜಾರಿದರೆ ವನವಾಸ|| ಎಂದಿದ್ದು. ಇದ ಮರೆತು, ನನ್ನ ಪರಿಸ್ಥಿತಿಗೆ ಯಾವುದೋ ರೀತಿಯಲ್ಲಿ ಗಂಡನೇ ಕಾರಣವಾದನೆಂದು ತಿಳಿದು ಅವನ ವಿರುದ್ಧ ಸೇಡುತೀರಿಸಿಕೊಂಡಿದ್ದು ಸಂಪೂರ್ಣ ಒಪ್ಪಲಾಗದು. ಯಾಕೆಂದರೆ ಆ ಸ್ಥಿತಿಗೆ ಚಂದ್ರಕಾಂತನೊಂದಿಗೆ ತಾನೂ ಕಾರಣಳಾಗಿದ್ದಳೆಂಬುದನ್ನು ತಳ್ಳಿಹಾಕುವಂತಿಲ್ಲ. ಗಂಡನ ಮೇಲಿದ್ದ ಸೇಡು, ತನ್ನ ದೇಹಸುಖವನ್ನು ಅನುಭವಿಸಿ ಕೈಬಿಟ್ಟಿದ್ದ ಚಂದ್ರಕಾಂತನ ಮೇಲೇಕೆ ಬರಲಿಲ್ಲವೆಂದು ಯೋಚನೆಗೆ ಬರುತ್ತದೆ. ಅಲ್ಲಿ ತಾನಷ್ಟೇ ಹೊಣೆಗಾರಳಾಗಿದ್ದಳೆ? ಅವನು ‘ನಿನ್ ಹೆಂಡ್ತಿನೇ ರ್ಲಿಕ್ಕೆ ಹೇಳಿದ್ದು, ಅದ್ಕೆ ಬಂದೆ’ ಅಂತ, ಅವಳ ಗಂಡ ಮಲ್ಕೇಷಿಗೆ ಹೇಳಬೇಕೆಂದುಕೊಂಡರೂ ನಾಲಿಗೆ ಕಚ್ಚಿಕೊಂಡು ಸುಮ್ಮನಾಗಿದ್ದ ಮಾತ್ರಕ್ಕೆ, ಎಲ್ಲ ಆಪಾದನೆಗಳನ್ನು ಅವಳೊಬ್ಬಳ ಮೇಲೆಯೇ ಹಾಕಲಾದೀತೆ? ಹಾಗೆಂದ ಮಾತ್ರಕ್ಕೆ ಅವನು ತಪ್ಪಿನಿಂದ ನುಣುಚಿಕೊಳ್ಳಲು ಸಾಧ್ಯವೆ? ಹೀಗೆ ಎಂದು ಹೇಳಲಾಗದಿದ್ದರೂ ತಪ್ಪಿನಲ್ಲಿ ಅವನೂ ಪಾಲುದಾರನಾಗಿದ್ದನೆಂಬುದು ಕಟುವಾಸ್ತವ.ಏನಾಗಿದ್ದರೂ ತನ್ನ ಬದುಕಿಗೆ ತಾನೇ ಕೊಳ್ಳಿಯಿಟ್ಟುಕೊಳ್ಳುವಂತಹದ್ದೇನಿರಲಿಲ್ಲ. ಇದ್ದು ಸಾಧಿಸುವ ಛಲ ತೊಡಬೇಕಿತ್ತು. ಅದಾಗದೇ ಗರ್ಭಿಣಿಯಾಗಿದ್ದು ನೇಣಿಗೆ ಕೊರಳೊಡ್ಡುವುದು ದುರಂತ. ಅವಳ ಸಾವಿನ ಸುದ್ದಿ ನಿರೂಪಕರ ಕಿವಿಗೆ ಬಿದ್ದು, ‘ಒಂದು ನೇಣಿಗೆ ಎರಡು ಜೀವಗಳ ಬಲಿ’ ಎಂದಾಗ ವ್ಯಥೆಯಾಗದಿರದು. ಹಾಗೆಯೇ ‘ಕರ್ಮದ ಲೆಕ್ಕಚಾರವಂತೂ ತರ್ಕಕ್ಕೆ ಸಿಗದು. ಮಾಡಿದ್ದನ್ನು ಅನುಭವಿಸಲೇಬೇಕು. ಅದು ಯಾವ ಜನ್ಮಕ್ಕಾದರೂ ಸರಿಯೇ! ದೇಹವೆಂಬ ಮಡಿಕೆಯಲ್ಲಿ ಅದೆಷ್ಟು ದುರ್ಗುಣಗಳ ಹೊಲಸು. ಹಾಲು ಅನ್ನ ಇರಬೇಕಾದಲ್ಲಿ ಮಲಮೂತ್ರ ತುಂಬಿಕೊಂಡಿದ್ದೇವೆ’ ಎಂಬ ಮಾತುಗಳು ಚಿಂತನೆಗೆ ಹಚ್ಚುವಂಥವುಗಳು.

‘ಬರ ಮತ್ತು ಸತ್ತವರ ಸಮಾಧಿಗಳು’ ನಂಬಿಕೆಯ ಹಿನ್ನೆಲೆಯಲ್ಲಿ ಹುಟ್ಟಿಕೊಂಡಂತಹ ಕತೆ. ಇದನ್ನು ನಂಬಬಹುದು, ಬಿಡಬಹುದು; ಮೂಢನಂಬಿಕೆಯೆಂದು ಅಲ್ಲಗಳೆದು ಮುಂದೆ ಸಾಗಲೂಬಹುದು. ಅವರವರ ಭಾವಕ್ಕೆ, ಅವರವರ ಬಕುತಿಗೆ ಬಿಟ್ಟಂತಹದು. ಊರಿಗೆ ಬರಗಾಲ ಬೀಳಲು, ವೇದಶಾಸ್ತ್ರ ಬಲ್ಲಂಥ ಕೇಶವಭಟ್ಟರು, ‘ಇಡೀ ಊರನ್ನೇ ಕಾಯುವ ಮಾರಮ್ಮದೇವಿ ಮುನಿಸಿಕೊಂಡಿದ್ದಾಳೆ. ಇಲ್ಲವೇ ಯಾರೋ ತೊನ್ನು ಹಿಡಿದ ವ್ಯಕ್ತಿಯನ್ನು ಭೂಮಿಯಲ್ಲಿ ಹೂತಿದ್ದಾರೆ’ ಎಂದು, ಸೇರಿದ ಪಂಚಾಯಿತಿಯ ಮುಂದೆ ಎರಡು ಕಾರಣಗಳನ್ನು ಮುಂದಿಡುತ್ತಾರೆ. ಅದರಂತೆ ಮಾರಮ್ಮಳಿಗೆ ಶಾಂತಿಪೂಜೆಯನ್ನು ಮಾಡಿದರೂ ಸಂಪೂರ್ಣ ಮಳೆಯಾಗುವುದಿಲ್ಲ. ಆಗ ಹೂತಿಟ್ಟಿರಬಹುದಾದ ತೊನ್ನು ಹಿಡಿತ ವ್ಯಕ್ತಿಯ ಹುಡುಕಾಟ ಶುರುವಾಗುತ್ತದೆ. ಊರಲ್ಲಿ ಹೆಣ ಹೂಳುವವರು ವೀರಶೈವ ಲಿಂಗಾಯತರು, ಬಿಟ್ರೆ ಸಾಬ್ರು ಜನ. ಲಿಂಗಾಯತರ ಜವಾಬ್ದಾರಿಯನ್ನು ಗುರುಲಿಂಗಪ್ಪ, ಸಾಬ್ರು ಕಡೆಗಿನ ಜವಾಬ್ದಾರಿಯನ್ನು ಗಣಪತಯ್ಯನವರು ವಹಿಸಿಕೊಂಡು ಶೋಧನೆ ನಡೆಸುತ್ತಾರೆ. ಕೊನೆಗೆ, ಗೂಡಂಗಡಿ ಇಟ್ಟುಕೊಂಡಿದ್ದ ಸಾಬ್ರು ಶೌಕತ್ ಅಲಿ ಮತ್ತು ಊರಿಗೆ ಅಯ್ಯನವರಾಗಿದ್ದ ಬಸಪ್ಪಜ್ಜ ತೊನ್ನಿನಿಂದಲೇ ಸತ್ತಸಂಗತಿ ತಿಳಿದು, ಅವರ ದೇಹವನ್ನು ಕುಣಿಯಿಂದ ಹೊರತೆಗೆದು ಸುಟ್ಟಾಗ; ಅದೇನು ದೈವಲೀಲೆಯೋ ಏನೋ ಎರಡು ದಿನದ ನಂತರ, ಊರಿಗೆ ಮಳೆಯಾಗಿ ವರದಾ ನದಿ ತುಂಬಿ ಹರಿಯುವುದರೊಂದಿಗೆ ಕತೆ ಮುಗಿಯುತ್ತದೆ.

ಇದು ಜನರ ನಂಬಿಕೆಯ ತಳಹದಿ ಮೇಲೇಯೇ ಜನ್ಮತಾಳಿರುವಂತಹ ಕಥನ. ಜನಪದಗಳಲ್ಲಿ ಇಂಥ ಕೋಟಿಕೋಟಿ ಐತಿಹ್ಯ, ದೃಷ್ಟಾಂತಗಳೇ ಸಿಗುತ್ತವೆ. ಹಿನ್ನೆಲೆಯಾಗಿ ಇದಕ್ಕೆ ಯಾವ ಸಾಕ್ಷಾಧಾರಗಳೂ ಇರುವುದಿಲ್ಲ; ಪುರಾವೆಗಳನ್ನೂ ಕೇಳುವಂತಿಲ್ಲ. ಇದ್ದರೂ ಅದು, ಜನರು ದೈವದ ಮೇಲಿಟ್ಟಿರುವ ನಂಬಿಕೆಯಷ್ಟೆ. ದೈವದ ಹೇಳಿಕೆಗಳು ಈಡೇರಬಹುದು, ಈಡೇರದೆಯೂ ಹೋಗಬಹುದು; ದೇವರಿಚ್ಛೆಗೆ ಶರಣಾಗಿ ಬಂದ ಪರಿಸ್ಥಿತಿಯನ್ನು ಎದುರಿಸಲು ಸಿದ್ಧವಾಗಿರಬೇಕಷ್ಟೆ. ಹಾಗೆಂದುಕೊಂಡೇ ಊರ ಬರಗಾಲಕ್ಕೆ ಹಿನ್ನೆಲೆಯನ್ನು ಹುಡುಕಿದಾಗ, ಸಿಕ್ಕಿದ್ದು ಎರಡು ಕಾರಣಗಳು. ಮಾರಮ್ಮದೇವಿಯ ಮುನಿಸು ಅಥವಾ ತೊನ್ನು ಇರುವ ವ್ಯಕ್ತಿಯನ್ನು ಹೂತಿದ್ದು. ಪೂಜೆ-ಪುನಸ್ಕಾರಗಳಿಂದ ದೇವಿಯನ್ನೇನೋ ಶಾಂತಿಯಿಂದ ಸಂತೃಪ್ತಿ ಮಾಡಲಾಯಿತು. ಆಗಲೂ ಅಂದುಕೊಂಡಷ್ಟು ಮಳೆ ಬಾರದ್ದರಿಂದ, ಸಹಜವಾಗಿ ಹೂತಿಟ್ಟ ಶವದ ಸುತ್ತ ಮತ್ತೊಂದು ಚಿತ್ತ ಹುತ್ತಗಟ್ಟಿತು. ಏಕೆಂದರೆ, ಆವರೆಗೂ ತೊನ್ನಿರುವ ಹೆಣವನ್ನು ಮುಚ್ಚಿದ ನಿದರ್ಶನವಿರಲಿಲ್ಲ. ಇದು ಜಯಂತಿಪುರದಲ್ಲಿ ಕಾಲಾಂತರದಿಂದಲೂ ನಡೆದುಕೊಂಡು ಬಂದ ಪದ್ಧತಿಯಾಗಿತ್ತು. ಇದೇ ಹಿನ್ನೆಲೆಯಲ್ಲಿಯೇ ಕಪ್ಪೆ-ಕತ್ತೆಗಳ ಮದುವೆಯನ್ನು ಮೊದಲು ಮಾಡಿ, ‘ಕೆರೆಗೆ ಹಾರ’ದ ಭಾಗೀರಥಿಯಂತೆ ಬಲಿ ಕೊಡುವುದು, ಹಾರ ಬೇಡುವುದು ರೂಢಿಗತವಾಗಿ ರೂಪಗೊಂಡು ಬಂದಂಥವುಗಳು. ಇಂಥ ಅನಿಷ್ಟ ಮೂಢನಂಬಿಕೆಗಳಿಂದ ಅದೆಷ್ಟೋ ಅಮಾಯಕ ಜೀವಗಳು ಬಲಿಯಾದ ನಿದರ್ಶನಗಳುಂಟು. ಈಗಲೂ ನಿಧಿ ಆಸೆಗಾಗಿಯೋ, ಕೆರೆ-ಬಾವಿಗಳು ನೀರು ತುಂಬುವುದಕ್ಕೋ ಮುಗ್ಧರು ಬಲಿಯಾಗುತ್ತಿರುವುದು ಕೂಡ ದುರಾದೃಷ್ಟವೆ. ಇಲ್ಲೇನು ಅಂಥ ಹೀನಕೃತ್ಯಗಳಿರಲಿಲ್ಲವೆನ್ನುವುದು ಸಮಾಧಾನ. ತರಾವರಿ ರೂಢಿ-ನಂಬಿಕೆಗಳನ್ನು ಪ್ರಶ್ನಿಸದೇ, ಪ್ರಶ್ನಿಸಿದರೂ ಆ ಬಗ್ಗೆ ಅಷ್ಟಾಗಿ ಗಮನವೀಯದೇ ಹೂತಿಟ್ಟ ಶವಗಳನ್ನು ಹೊರತೆಗೆದು ಕಿಚ್ಚಿಟ್ಟು ನಿಟ್ಟುಸಿರುಬಿಟ್ಟರು. ಕಾಕತಾಳೀಯವೋ ದೈವಲೀಲೆಯೋ ಅಂತೂ ಮಳೆಯಾಗಿ ಜನರ ಮುಖದೊಳು ಕಳೆಯೇರಿತು. ಹಾಗಾದರೆ ಯಾವುದನ್ನು ಮೂಢನಂಬಿಕೆಯೆಂದು ಅಲ್ಲಗಳೆಯಬೇಕು? ಪೂಜೆ-ಪುನಸ್ಕಾರ-ಹೋಮಗಳನ್ನೋ, ನೆಚ್ಚಿಕೊಂಡು ಬಂದ ಆಚರಣೆಗಳನ್ನೋ? ಒಟ್ಟಾರೆ, ಇದೊಂದು ಜನರ ನಂಬಿಕೆಯೊಂದಿಗೆ ಆಡುವ ಜೂಜಾಟವೇ ಸರಿ.

ಇದರೊಂದಿಗೆ, ಕೆರೆ-ಬಾವಿ-ಅಂತರ್ಜಲಗಳ ಮಹತ್ವ; ಬಿದಿರು ಮಟ್ಟಿಗಳು ಫಸಲು ತುಂಬಿದಾಗಿನ ನಂಬುಗೆ, ಬರಗಾಲದಲ್ಲಿ ಬಿದಿರಕ್ಕಿಯನ್ನೇ ಆಯ್ದುಕೊಂಡು ಹಸಿವು ನೀಗಿಸಿಕೊಂಡ ಬಡತನದ ಬವಣೆಗಳು; ಕೇಶವಭಟ್ಟರ ಮಡಿವಂತಿಕೆ; ಗುರುಲಿಂಗಪ್ಪ, ಗಣಪತಯ್ಯರ ಹಿರಿತನ; ಹಸನ್ ಸಾಬನ ದೊಡ್ಡತನ; ಕೇರಳದ ಮಲಬಾರಿಗಳ ವರ್ತನೆ, ಗೋಪಿಯ ಆತ್ಮಹತ್ಯೆ, ಪೊಲೀಸರ ಮನಸ್ಥಿತಿ; ಶಂಭೇಷಿ ಹೇಳಿದ ಬಸಪ್ಪಜ್ಜನ ತೊನ್ನಿನ ಪ್ರಸಂಗ; ಮಲೆನಾಡೂ ಅಲ್ಲದ, ಬಯಲುಸೀಮೆಯೂ ಅಲ್ಲದ ಅರೆಮಲೆನಾಡಿಗೆ ಸೇರುವ ಜಯಂತಿಪುರ; ನಿರೂಪಕರ ತಾಯಿ ಹೇಳಿದ ಅಜ್ಜನ ಕಾಲದ ಬರಗಾಲದ ಘಟನೆ; ದೈವೀಭಕ್ತಿ-ನಂಬಿಕೆ, ಮುಂತಾದವುಗಳು ಕತೆಯ ಒಡಲನ್ನು ಹಿಗ್ಗಿಸಿ ಯಶಸ್ವಿಗೊಳಿಸಿವೆ.

‘ಶುಭೋದಯ ಹೋಟೆಲ್’ ಒಂದು ಪ್ರೇಮವೈಫಲ್ಯದ ಕತೆ. ಚಂದ್ರಕಾಂತ-ವತ್ಸಲಾರು ಪರಸ್ಪರ ಪ್ರೀತಿಸುತ್ತಾರೆ. ಇದನ್ನು ಒಪ್ಪದ ಸುಬ್ರಾಯ ಭಟ್ಟರು ಮಗಳನ್ನು ಬೇರೆಯವನಿಗೆ ಕೊಟ್ಟು ಮದುವೆ ಮಾಡುತ್ತಾರೆ. ‘ನಾನು ಮದುವೆಯಾದರೆ ಅವಳನ್ನೆ. ಇಲ್ಲವಾದರೆ ನನಗೆ ಮದುವೆನೇ ಬೇಡ’ವೆಂದು ಹಠಹಿಡಿದ ಚಂದ್ರಕಾಂತನು ಅವಳ ನೆನಪಲ್ಲೇ ಉಳಿದುಬಿಡುತ್ತಾನೆ. ಐದಾರು ವರ್ಷದ ಬಳಿಕ ಮತ್ತೆ ಸಿಕ್ಕು, ಗಂಡನನ್ನು ಕಳೆದುಕೊಂಡ ಸಂಗತಿಯನ್ನು ಹೇಳಿಹೋದಾಗ, ತನಗಿಂತಲೂ ಅವಳು ದುಃಖದಲ್ಲಿರುವುದು ಕೇಳಿ ಖೇದವೆನಿಸುತ್ತದೆ. ಹೀಗಿರುವಾಗಲೇ ಮರುದಿನ ಅವಳು ಹೊಳೆಯಲ್ಲಿ ಹೆಣವಾದಾಗ, ಮತ್ತಷ್ಟು ನೊಂದು ಊರನ್ನೇ ತೊರೆದ ಚಂದ್ರಕಾಂತನು, ಎರಡ್ಮೂರು ತಿಂಗಳ ನಂತರ ಹೋಟೆಲ್ ಮಾರಲು ಪುನಃ ಊರಲ್ಲಿ ಕಾಣಿಸಿಕೊಳ್ಳುವುದರೊಂದಿಗೆ ಕತೆ ಮುಗಿಯುತ್ತದೆ.

ಪ್ರೇಮಿಗಳಿಗೆ ಸಮಸ್ಯೆ ಯಾವ ಕಾಲಕ್ಕೂ ಇದ್ದದ್ದೆ. ಜಾತಿ, ಧರ್ಮ, ವರ್ಗ, ಅಂತಸ್ತುಗಳು ನಡುವೆ ಸುಳಿದು ನಡ ಮುರಿಯುವಂಥವುಗಳೆ! ಇಲ್ಲಿ ಚಂದ್ರಕಾಂತ-ವತ್ಸಲಾರಿಗೆ ಅಡ್ಡಬಂದದ್ದು ಜಾತಿ. ಸುಬ್ರಾಯ ಭಟ್ಟರು ದೊಡ್ಡ ಮನಸ್ಸು ಮಾಡಿದ್ದರೆ, ಬೆಸೆದ ಜೀವಗಳು ಒಂದಾಗಿ ಬದುಕತಿದ್ದವು. ಮರ್ಯಾದೆಗೆ ಅಂಜಿದ ಅವರು, ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಮಠದ ಗುರುಗಳಿಂದ ಮಗಳಿಗೆ ಬುದ್ಧಿ ಹೇಳಿಸಿ, ಬೇರೊಬ್ಬನೊಂದಿಗೆ ಮದುವೆಮಾಡಿಯೇನೋ ಗೆದ್ದರು. ಆದರೆ ಮಗಳ ಇಷ್ಟಕಷ್ಟ ಅವರಿಗೆ ಮುಖ್ಯವಾಗಲೇಯಿಲ್ಲ. ಯಾವ ತಂದೆತಾಯಿಗಳಿಗೂ ತಮ್ಮ ಮಕ್ಕಳು ಹಾಳಾಗಲಿ ಎಂಬ ಉದ್ದೇಶವಿರದಿದ್ದರೂ ಐದಾರು ವರ್ಷಗಳಲ್ಲೇ ವತ್ಸಲಾಳ ಬಾಳು ದುರಂತವಾಗಿದ್ದನ್ನು ಕೇಳಿ ದುಃಖವೆನಿಸದಿರದು. ಸಾವು ಯಾರ ಕೈಯಲ್ಲಿರದಿದ್ದರೂ ಅವಳ ಯಾತನೆ, ನೋವು, ಸಂಕಟಗಳು ಪ್ರಕಟಗೊಳ್ಳುವುದಿಲ್ಲ. “ಚಂದ್ರು, ಅದೊಂದು ದೊಡ್ಡ ಕತೆ. ಅದನ್ನ ನಾ ಹೇಳೋದು ಬೇಡ… ನೀ ಕೇಳೋದು ಬೇಡ… ನನ್ನ ಬದುಕು ಇಷ್ಟೇ” ಎಂದ ಮಾತುಗಳನ್ನು ಕೇಳಿದರೆ, ಖಂಡಿತ ಅವಳು ಸುಖವಾಗಿರಲಿಲ್ಲವೆಂದು ಗೊತ್ತಾಗುತ್ತದೆ.

ಆದರೇನಂತೆ ಚಂದ್ರಕಾಂತನನ್ನು ಮತ್ತೆ ಮದುವೆಯಾಗಲೋ, ಹಾಗೇಯೇ ಬದುಕು ಕಟ್ಟಿಕೊಳ್ಳಲೋ ಅವಕಾಶ ಇದ್ದೇ ಇತ್ತು. ಅವನಂತೂ ಅವಳೊಂದಿಗೆ ಎಲ್ಲಿಗೆ ಬೇಕಾದರೂ ಬರಲು ಸಿದ್ಧನಿದ್ದ.ಈಗ ಮದುವೆ ಪ್ರಸ್ತಾಪ ಮಾಡಿದರೆ, ಅವನೇನೆಂದುಕೊಂಡಾನೆಂದೋ ಅಳುಕಿದಳೇನೊ! ಅವನು ನಿರಾಕರಿಸಿದ್ದರೂ ಬದುಕೇನು ನಿಲ್ಲುತ್ತಿರಲಿಲ್ಲ. ಅದು ಬಿಟ್ಟು ಸಾಯುವುದಕ್ಕೆ ಧಾವಂತ ಮಾಡಿದ್ದೇಕೊ! ನನ್ನಿಂದಲೇ ಅವನ ಬಾಳು ಹಾಳಾಯಿತೆಂದೋ ಅಥವಾ ಬಯಸಿದವನು ಸಿಗಲಿಲ್ಲವೆಂದು ನೊಂದೋ ತಿಳಿದುಬರುವುದಿಲ್ಲ. ಕಾರಣ, ಇವೆರಡೂ ಇರಲಿಕ್ಕಿಲ್ಲ. ಇವೇ ಕಾರಣಗಳಾಗಿದ್ದರೆ, ಸಾಯುವುದಕ್ಕೆ ಇಷ್ಟು ಕಾಲಾವಕಾಶವೇ ಬೇಕಿರಲಿಲ್ಲ. ಚಂದ್ರಕಾಂತನನ್ನು ಭೆಟ್ಟಿಯಾದಾಗ, “ಮದುವೆಯಾಯಿತಾ ನಿನಗೆ?” ಎಂದು ಅವನನ್ನು ಕೇಳಿದಾಗಲೇ ಅವನು ಮದುವೆಯಾಗದೆ ತನ್ನ ನೆನಪಲ್ಲೇ ಉಳಿದ ನಿಜಸಂಗತಿ ತಿಳಿಯುತ್ತದೆಯೇ ವಿನಃ ಈ ಮೊದಲು ಆ ವಿಚಾರ ಅವಳ ಗಮನಕ್ಕೆ ಬಂದಿರುವುದೇ ಇಲ್ಲ. ಅವನೊಂದಿಗಿನ “ಯಾಕೋ ನಮ್ಮೂರು, ದೇವಸ್ಥಾನ, ನದಿ ಎಲ್ಲವೂ ನನ್ನನ್ನು ತುಂಬಾ ಕರೀತಾ ಇದ್ವು. ಜೀವನದಲ್ಲಿ ಇವುಗಳನ್ನು ತುಂಬಾ ಮಿಸ್ ಮಾಡ್ಕೊತಾ ಇದ್ದೀನಿ ಅಂತ ಅನಿಸ್ತು. ಅದ್ಕೆ ಬಂದೆ” ಎನ್ನುವ ಮಾತುಗಳನ್ನು ಕೇಳಿದರೆ, ಅವಳು ಸಾಯುವುದಕ್ಕೆ ಮೊದಲೇ ನಿರ್ಧರಿಸಿ ಬಂದಂತಿತ್ತು ಎನಿಸುತ್ತದೆ. ಆದರೆ ಕಾರಣ ಮಾತ್ರ, ಕೊನೆಗೂ ನಿಗೂಢವಾಗಿಯೇ ಉಳಿಯುತ್ತದೆ.

ಚಂದ್ರಕಾಂತನ ತಂದೆ ಗಣಪತಿ ಶೆಟ್ರು ಹೊನ್ನಾವರದಿಂದ ಜಯಂತಿಪುರಕ್ಕೆ ಬಂದು ‘ಶುಭೋದಯ ಹೋಟೆಲ್’ ಕಟ್ಟಿದ್ದು, ಸುಬ್ರಾಯ ಭಟ್ಟರು ಒಪ್ಪುವುದಿಲ್ಲವೆಂದು ಗೊತ್ತಿದ್ದರೂ ಮಗನಿಗಾಗಿ ಅವರ ಹತ್ತಿರ ಹೆಣ್ಣುಕೇಳಲು ಹೋಗಿದ್ದು, ಮಗನು ವತ್ಸಲಾಳನ್ನು ಮರೆಯದೇ ಅವಳ ನೆನಪಲ್ಲೇ ಮದುವೆಯಾಗದೆ ಉಳಿದಿದ್ದರಿಂದ ನೊಂದು ಹಾಸಿಗೆ ಹಿಡಿದು ಜೀವ ಬಿಟ್ಟಿದ್ದನ್ನು ಓದುವಾಗ ಹೆತ್ತವರ ತ್ಯಾಗ, ಪ್ರೀತಿ, ಕಾಳಜಿ, ವಾತ್ಸಲ್ಯ, ಮಮಕಾರಗಳು ಕಣ್ತುಂಬಿಸುತ್ತವೆ. ಕಣ್ಮುಂದೆಯೇ ಮಕ್ಕಳು ನಿರಾಸೆಯ ಕಾರ್ಮೋಡದಲ್ಲಿ ಮುಳುಗಿದರೆ, ಯಾವುದೇ ತಾಯ್ತಂದೆಗಳಿಗೆ ನೋವಿನ ಸಂಗತಿಯೆ. ತಂದೆ ಇರುವವರೆಗೂ ಚಂದ್ರಕಾಂತನು ತಪ್ಪಿಯೂ ಅವರ ಮಾತು ಕೇಳಲಿಲ್ಲ. ತಂದೆ ತೀರಿದಾಗ, ಅವರ ನೆನಪು ಕಾಡಿ ಪಶ್ಚಾತ್ತಾಪವೆನಿಸಿದರೂ ಮದುವೆಯ ಉಸಾಬರಿಗೆ ಹೋಗಲೇಯಿಲ್ಲ. ಇರುವಂತೆಯೇ ಹೇಗೋ ಬದುಕು ಕಟ್ಟಿಕೊಂಡು ತಾಯಿಯೊಂದಿಗೆ ದಿನಗಳನ್ನು ನೂಕುತಿದ್ದ. ಇದೇ ವೇಳೆ ಮಲ್ಕೇಷಿಯ ಹೆಂಡತಿ ದೇವೀರಿಯೊಂದಿಗೆ ಅಕ್ರಮ ಸಂಬಂಧದ ಬಗ್ಗೆ ಊರಲ್ಲಿ ಗುಸುಗುಸು ಆರಂಭವಾಗಿದ್ದರೂ ಬಾಳಬಂಡಿಯ ಹಳಿಯೇನು ತಪ್ಪಿರಲಿಲ್ಲ. ಯಾವಾಗ ವತ್ಸಲಾ ಹೊಳೆಪಾಲಾದಳೋ ಅವನ ಬದುಕು ಕೂಡ ಬೀದಿಪಾಲಾಗಿದ್ದು ದುರಂತ.

‘ನಿಗೂಢ ಜಗತ್ತಿನ ಅತಿಥಿಗಳು’ ಜಯಂತಿಪುರದ ದೈವಿಕ ಕೇಂದ್ರ ಮಧುಕೇಶ್ವರ ದೇಗುಲಕ್ಕೆ ಯಾರೋ ಅಪರಿಚಿತರು ಕನ್ನ ಹಾಕಿದ್ದರ ಕತೆಯಾಗಿದೆ. ಕಳ್ಳತನ ಮಾಡುವ ದೊಡ್ಡ ಗ್ಯಾಂಗ್ ಊರನ್ನೇ ಬೆಚ್ಚಿಬೀಳಿಸಿದ್ದರೂ ಕಾವಲಿನವರ ಸಮಯಪ್ರಜ್ಞೆಯಿಂದ ಗುಲಗುಂಜಿಯಷ್ಟೂ ಕದಿಯಲಾಗದೇ ಓಡಿಹೋಗಿದ್ದರು. ಅವರು ಯಾರು? ಏನು? ಎತ್ತ? ಅಂತ ತಡಕಾಡುವ ಕುತೂಹಲದ ಕಥನವಿದು. ನಿರೂಪಕರ ತಂದೆ ಸುರೇಶಪ್ಪನು ಸಂಜೆ ವಾಕಿಂಗ್ ಹೋಗುವಾಗ, ಮೂರು ಯಜಡಿ ಗಾಡಿಗಳಲ್ಲಿ ಆರು ಜನ ಹೆಲ್ಮೆಟ್ನಿಂದ ಮುಖಮುಚ್ಚಿಕೊಂಡಿದ್ದ ಮುಸುಕುಧಾರಿಗಳು ದಿನಂಪ್ರತಿ ಭೇಟಿಯಾಗಿದ್ದು, ಭಯಪಡಿಸಿದ್ದು ಮನೆಯಲ್ಲಿ ಹೆಂಡತಿಯಿಂದ ಹಿಡಿದು ಯಾರೂ ನಂಬದವರು, ಅವರು ದೇವಾಸ್ಥಾನದ ಒಡವೆಗಳಿಗೆ ಕೈಹಾಕಿದಾಗಲೇ ‘ಮಿಂಚಿಹೋದ ಕಾಲಕ್ಕೆ ಚಿಂತಿಸಿ ಫಲವೇನು’ ಎಂಬಂತೆ ಅವನ ಮಾತಿನ ಮೇಲೆ ಎಲ್ಲರಿಗೂ ನಂಬಿಕೆ ಬಂದಿತ್ತು. ಅದೃಷ್ಟವಶಾತ್ ದೇವಾಲಯದ ಯಾವ ಒಡವೆಗಳೂ ಕಳುವಾಗಲಿಲ್ಲ. ಅದು ಮಧುಕೇಶ್ವರನ ಪವಾಡವೆಂದೇ ಜನ ಭಾವಿಸಿದರು. ಇಂದಿಗೂ ಇಂಥ ಸಾವಿರಾರು ಜಾಲಗಳು ಪೊಲೀಸರಿಗೆ ತಲೆನೋವಾಗಿದ್ದು ಸುಳ್ಳಲ್ಲ. ಕದಿಯುವವರಿಗೆ ಮನೆ, ಅರಮನೆಗಳೇ ಬೇಕಿಲ್ಲ, ಹಾಳು ದೇಗುಲಗಳಾದರೂ ಸಾಕು. ಯಾವುದನ್ನೂ ಬಿಡದೆ, ಎಲ್ಲವನ್ನೂ ಜಾಲಾಡುವುದೇ ಅವರ ನಿತ್ಯಕಾಯಕವಾಗಿರುವಾಗ, ಅದು ಇದು ಎಂದು ಗೆರೆ ಕೊರೆಯಲಾದರೂ ಹೇಗೆ ಸಾಧ್ಯವಾದೀತು. ನಿರೂಪಕರ ತಂದೆಯ ಪುಕ್ಕಲುತನ ನಗೆ ಉಕ್ಕಿಸಿದರೂ ಯಾರಿಗೇ ಆಗಲಿ ಆ ಭಯ ಸಂದರ್ಭದ ಗಾಳಕ್ಕೆ ಸಿಕ್ಕು ಎದೆಯೊಳಗೆ ಹೊಕ್ಕಾಗಲೇ ಅನುಭವಕ್ಕೆ ಬಂದೀತು.

‘ಸೊನೆಗಾರ ಶೆಟ್ಟರ ಮಗಳು’ ಏಳುಬೀಳುಗಳ ನಡುವೆ ಮತ್ತೆ ಹೊಸಬಾಳು ಕಟ್ಟಿಕೊಂಡಂತಹ ಕಥನ. ಗಜಾನನ ಶೆಟ್ಟರು ಮತ್ತು ಸರೋಜಮ್ಮಳ ಮಗಳು ಮಾಧವಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದವಳು. ತುಂಬಾ ಓದಿಕೊಂಡ ಹುಡುಗಿ. ಮಾಧವಿ ಜಯಂತಿಪುರ ಅಂಕಿತನಾಮದಲ್ಲಿ ‘ಮೋಡ ಚದುರುವ ಮುನ್ನ’ ಎಂಬ ಕವನ ಸಂಕಲನವನ್ನೂ ಹೊರತಂದವಳು. ಒಳ್ಳೆಯ ಮನೆತನವೆಂದು ಕೈಹಿಡಿದ ಸುಧಾಕರ ಹಾಗೂ ಅವನ ಮನೆಯವರಿಂದ ನಿತ್ಯ ಕಿರುಕುಳಕ್ಕೊಳಗಾಗಿ ವಿಚ್ಛೇದನ ಪಡೆದು ತವರು ಸೇರುತ್ತಾಳೆ. ನಂತರ, ಕಾವ್ಯದಲ್ಲೇ ಪಿಎಚ್ಡಿ ಮಾಡಲು ನಿರ್ಧರಿಸಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದೊಳು ಅಧ್ಯಯನ ಆರಂಭಿಸಿದವಳಿಗೆ, ಮಾರ್ಗದರ್ಶಕರಾಗಿದ್ದ ಡಾ.ಶ್ರೀನಿವಾಸ ಹೆಗಡೆಯವರೊಂದಿಗೆ ಪ್ರೇಮ ಅಂಕುರಿಸಿ, ಇಬ್ಬರೂ ಒಂದಾಗುವುದರೊಂದಿಗೆ ಕತೆ ಮುಗಿಯುತ್ತದೆ.

ಮಾಧವಿ ಒಳ್ಳೆಯ ಸ್ವಭಾವದ ಹುಡುಗಿಯಾಗಿ, ಗಂಡನಮನೆಗೆ ಹೊಂದಿಕೊಳ್ಳಲು ಯತ್ನಿಸಿದರೂ ತರಗೆಲೆಯಂತೆ ಅವಳ ಬಾಳಾಗಿದ್ದು ದುರಂತ. ಆಗ ಅವಳಿಗಾಗಿ ಇಡೀ ಊರೇ ‘ಎಂಥ ಹುಡುಗಿಗೆ ಹೆಂಗಾಯ್ತಲ್ಲ’ ಅಂತ ಮಮ್ಮಲ ಮರಗಿದ್ದು ನಿಜ. ಅವಳ ಹೆತ್ತವರು ಮದುವೆ ಬಂಧನದಿಂದ ಮುಕ್ತಗೊಳಿಸಲು ಪ್ರಯತ್ನಿಸಿದಾಗ, ಗಂಡನ ಮನೆಯವರು ಸ್ವಲ್ಪ ಮೆತ್ತಗಾದಂತೆ ಕಂಡರೂ ಮತ್ತೆ ಮಗಳನ್ನು ಆ ನರಕದ ಕೂಪಕ್ಕೆ ತಳ್ಳದೇ ಡಿವೋರ್ಸ್ ಪಡೆದದ್ದು ಅವಳ ಬಾಳಿಗೆ ನೆಮ್ಮದಿ ಸಿಕ್ಕು ಹೊಸಮನುಷ್ಯಳಾಗಲು ಅವಕಾಶ ದೊರೆಯಿತು. ಮೊದಮೊದಲು ಮಗಳ ನೋವು ಸಂಕಟಗಳನ್ನು ಕಿವಿಗೆ ಹಾಕಿಕೊಳ್ಳದೇ ತಾಳ್ಮೆ ವಹಿಸಲು ಹೇಳಿದ ಹೆತ್ತವರು, ತದನಂತರ ತೆಗೆದುಕೊಂಡ ನಿರ್ಧಾರ, ಬೆನ್ನೆಲುಬಾಗಿ ನಿಂತು ನೀಡಿದ ಧೈರ್ಯ ಮೆಚ್ಚುವಂಥದ್ದೆ. ಕಡುಕಷ್ಟದಲ್ಲಿರುವ ಪ್ರತಿಯೊಬ್ಬರಿಗೂ ಬೇಕಿರುವುದೇ ಇಂಥ ಭರವಸೆಯ ಸಾಂತ್ವಾನದ ಧೀಶಕ್ತಿಗಳು. ಇದು ಮಾಧವಿ ಪಾಲಿಗೆ ದೊರೆತದ್ದು ‘ಮುಳುಗುವವನಿಗೆ ಹುಲ್ಲುಕಡ್ಡಿ ಆಸರೆ’ಯಾದಂತಹ ಶುಭಸೂಚಕ. ಸತ್ತು ಸುಡುಗಾಡು ಸೇರುವುದಕ್ಕಿಂತ ಇದ್ದು ಜೈಸಿ ಗೂಡುಕಟ್ಟಿಕೊಬೇಕಿದೆ. ನಮ್ಮ ಮಕ್ಕಳನ್ನು ಧೈರ್ಯಗುಂದದ ಈ ಹಾದಿಯ ನಿಟ್ಟಿನಲ್ಲಿ ಬೆಳೆಸಬೇಕಿದೆ. ತುಸು ತಡವೆನಿಸಿದರೂ ಗಜಾನನ ಶೆಟ್ಟರು ಮತ್ತು ಸರೋಜಮ್ಮರು ನಮಗೆ ಮಾದರಿಗಳು. ಡಾ.ಶ್ರೀನಿವಾಸ ಹೆಗಡೆಯಂಥವರು ಸಿಗದಿದ್ದರೂ ಒಂಟಿ ಬದುಕಿಗೇನು ಮೋಸವಿಲ್ಲ.

ಇದರೊಂದಿಗೆ, ಗಜಾನನ ಶೆಟ್ಟರು ಮತ್ತು ಸರೋಜಮ್ಮರ ತಳಮಳ, ದುಗುಡ, ಆತಂಕಗಳು; ಮಾಧವಿಯ ಕವಿತ್ವಾಶಕ್ತಿ, ಸಾಧು ಸ್ವಭಾವ; ಸುಧಾಕರನ ಅನಾಗರಿಕ ವರ್ತನೆ; ಮದುವೆ ಬ್ರೋಕರ್ಗಳ ಹಾವಳಿ, ಸೊಸೈಟಿ ನಾರಾಯಣಪ್ಪನ ಯಶೋಗಾಥೆ; ಕನ್ಯೆ ಸಿಗದಿದ್ದರಿಂದ ಅಂತರ್ಜಾತಿ ವಿವಾಹಕ್ಕೆ ಒಲವು ತೋರುತ್ತಿರುವ ಬ್ರಾಹ್ಮಣರು; ಕತೆಗೆ ಹಲವು ತಿರುವುಗಳನ್ನು ನೀಡಿವೆ.

‘ಹುತ್ತದ ಅರಮನೆಯಲ್ಲಿ ವಿಷದ ಸುಂಟರಗಾಳಿಯು’ ಕೊರೋನ ಕಾಲದ ಕಹಿಘಟನೆಗಳ ವಾಸ್ತವ ಚಿತ್ರಣಗಳನ್ನು ಚಿತ್ರಿಸುವ ಕಥನ. ಹತ್ತು ವರ್ಷಗಳ ಹಿಂದೆಯೇ ಹುಟ್ಟಿದೂರು ಜಯಂತಿಪುರದಿಂದ ಏಳುನೂರು ಕಿಲೋಮೀಟರ್ ದೂರದ ಮುಂಬೈಗೆ ಕನಸು ಕಟ್ಟಿಕೊಂಡು ಬಂದಿದ್ದ ನಿರೂಪಕರಿಗೆ, ಈಗ ವಾಪಾಸು ಬದುಕು ಕಟ್ಟಿಕೊಳ್ಳಲು ಜಯಂತಿಪುರಕ್ಕೆ ಹೋಗಬೇಕೆಂಬ ತೀವ್ರತೆ ಕಾಡುತ್ತದೆ. ಕಾರಣ, ಕೊರೋನಾ ಎಂಬ ಮಹಾಮಾರಿ ಇಡೀ ದೇಶಾದ್ಯಂತ ಉಲ್ಬಣಿಸಿದ್ದರಿಂದ ಮತ್ತೆ ಊರು ಮುಟ್ಟುವ ಆಸೆಯೇ ದಿನದಿಂದ ದಿನಕ್ಕೆ ಮನಸಿನಿಂದ ನಿಧಾನ ಕರಗುತಿತ್ತು. ಆವರಿಸಿದ ಚಿಂತೆಯ ಕಾರ್ಮೋಡಗಳೇ ಜೀವನವನ್ನು ಬರಡಾಗಿಸಿ, ಇರುವ ಚಿಕ್ಕಕೋಣೆಯಲ್ಲೇ ಒಂಟಿಯಾಗಿ ಬದುಕು ದೂಡಬೇಕಿತ್ತು. ಇಂಥ ದುರಿತ ಕಾಲದಲ್ಲೇ ಅವರಿಗೂ ಕೊರೋನಾದ ಲಕ್ಷಣಗಳು ಮೆಲ್ಲಗೆ ಕಾಣಿಸಿಕೊಳ್ಳುವುದರೊಂದಿಗೆ ಕತೆ ಮುಗಿಯುತ್ತದೆ.

ಜನ್ಮದಾತರು, ಆತ್ಮೀಯರು, ನೆಂಟರು, ನೆರೆಹೊರೆಯವರಾದರೂ ಒಬ್ಬರಿಗೊಬ್ಬರು ಸನಿಹ ಸುಳಿಯುವಂತಿರಲಿಲ್ಲ; ಅಕ್ಕರೆಯಿಂದ ಅಪ್ಪಿಕೊಳ್ಳುವಂತಿರಲಿಲ್ಲ; ಕೈಕುಲುಕಿ, ನಿಂತು ಮಾತಾಡುವಂತಿರಲಿಲ್ಲ. ಇಂಥ ಕಾಲ ಬಂದಿತ್ತೆ, ಬರಲು ಸಾಧ್ಯವೇ ಎಂದು ಊಹಿಸಲು ಅಸಾಧ್ಯವಾದ ವಿಷಮಸ್ಥಿತಿಯನ್ನೇ ಕೊರೋನಾ ನಿರ್ಮಾಣ ಮಾಡಿಯಾಗಿತ್ತು. ಎಲ್ಲಿ ನೋಡಿದರೂ ‘ನಿಮ್ಮ ಕುಟುಂಬದ ಜೀವ ನಿಮ್ಮ ಕೈಯಲ್ಲಿ; ಮನೆಬಿಟ್ಟು ಹೊರಗೆ ಬರದಿರಿ. ಕೊರೋನಾದಿಂದ ದೂರವಿರಿ’ ಎಂಬ ಘೋಷವಾಕ್ಯಗಳೇ ಕೇಳಬೇಕಿತ್ತು. ಬರೀ ಸೀಲ್ಡೌನ್, ಲಾಕ್ಡೌನ್, ಹೋಮ್ ಕ್ವಾರಂಟೈನ್ಗಳೇ ವಿಶ್ವವ್ಯಾಪಿಯಾಗುತಿದ್ದವು. ಮೂಲೆಮೂಲೆಗೆ ಗುಳೆ ಹೋದವರಲ್ಲೆಷ್ಟೋ ಜನ, ಜೀವಭಯದಿಂದ ಮರಳಿ ಗೂಡು ಸೇರಿದ್ದರು. ‘ಎಂದೂ ಹೆತ್ತವ್ರ ಮುಖ ನೋಡಾಕೂ ಬರದವ್ರು ಈಗ ಕಾಯಿಲೆಯ ನೆಪ ಇಟ್ಕೊಂಡು ಬಂದು ಮಕ್ಕಳು ಮೊಮ್ಮಕ್ಕಳೊಂದಿಗೆ ಊರು ಸೇರಿದ್ದಾರೆ. ಈ ಕೊರೋನಾ ಟೈಮಲ್ಲಿ ಪ್ರತಿ ಮನೇದು ವಂಶವೃಕ್ಷದ ಸಾಲಾವಳಿನ ನೀಟಾಗಿ ಮಾಡ್ಬೋದು. ಅವ್ರ ಇಡೀ ಖಾಂದಾನ್ ಮನೆತನದವ್ರು ಎಲ್ರೂ ಬಂದರ್ತಾರೆ. ಇದನ್ನು ಹೇಳೋ ಆ ಹೆಳವರಾದ್ರೂ ಬಂದಿದ್ರೆ ಚನ್ನಾಗರ್ತಿತ್ತಿನೋ?’ ಎನ್ನುವ ಗಾಡಿ ನಿಂಗಣ್ಣನ ಮಾತು ಸಾಕು, ನೂರು ಬೆಸುಗೆ ಬೆಸೆದರೂ ಬೆಸೆಯದ ಸಂಬಂಧಗಳು, ಕೊರೋನಾ ಹೆಮ್ಮಾರಿಗೆ ತತ್ತರಿಸಿ ಮತ್ತೆ ಅದೆಷ್ಟು ಹತ್ತಿರವಾಗಿದ್ದವೆಂದು ಅರಿಯಲು. ಹಾಗೆಯೇ ಲಾಕ್ಡೌನ್ ಮಾಡಿದಾಗಿನಿಂದ ಜಯಂತಿಪುರವನ್ನು ಸಂಪರ್ಕಿಸುವ ರಸ್ತೆಗಳು ಸತ್ತಂತೆ ನಟಿಸುತ್ತಿವೆ; ಮೂರೊತ್ತು ಕೂಲಿ ಕೆಲಸ. ಸಾಯಂಕಾಲ ಕುಡಿವ ಚಟ. ಹೀಗೆ ಇಡೀ ದಿನವನ್ನು ಕಳೆಯುತ್ತಿದ್ದವರಿಗೆ ಲಾಕ್ಡೌನ್ ಹೇಗೆ ನರಕಸದೃಶ್ಯ ಮಾಡಿತ್ತೆನ್ನುವುದನ್ನು ಪರಿಚಯಿಸದೇ ಇರವು. ಇಡಿಯಾಗಿ ನೋಡಿದಾಗ, ಈ ಕತೆ ಕೊರೋನಾ ಕಾಲದ ಭಯಾನಕತೆಯ ಕರಾಳ ಅಧ್ಯಾಯಗಳನ್ನು ಇಂಚಿಂಚಾಗಿ ನಮ್ಮೆದುರು ತೆರೆದಿಡುತ್ತದೆ.

‘ರಾಕ್ಷಸ ಮೊಸಳೆ ಹಾಗೂ ಕಾಡುಹಂದಿಗಳ ಬೇಟೆಯು’ ಪೂರ್ಣಚಂದ್ರ ತೇಜಸ್ವಿಯವರ ‘ಕೃಷ್ಣೇಗೌಡನ ಆನೆ’ಯ ಧಾಟಿಯಲ್ಲಿರುವ ಒಂದು ನೀಳ್ಗತೆ. ನರೂರಿನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕೆಲಸ ಮಾಡುತಿದ್ದ ಬಸವರಾಜ ಮಾಸ್ತಾರರು, ಇಬ್ರಾಹಿಂ ಸಾಹೇಬರ ಸಲಹೆಯಂತೆ ಜಯಂತಿಪುರದಿಂದ ನಾಲ್ಕೈದು ಕಿಲೋಮೀಟರ್ ದೂರದ ಕೆರೆಗೋಡಿನ ಸಮೀಪದಲ್ಲಿ ಹತ್ತು ಎಕ್ಕರೆ ಜಮೀನನ್ನು ಖರೀದಿಸಿ ಅಡಿಕೆ, ತೆಂಗು, ಬಾಳೆ ಹಚ್ಚಿದರು. ಆರಂಭದ ಮಂಗನ ಹಾವಳಿಯಿಂದ ಮುಕ್ತರಾದರೆನ್ನುವಾಗಲೇ ಕಾಡುಹಂದಿಗಳು ಅವರ ನೆಮ್ಮದಿಯನ್ನು ಕೆಡಿಸಿದವು. ಇದರಿಂದ ರೋಸಿಹೋದ ಮಾಸ್ತಾರರು ಫಾರೆಸ್ಟ್ ಆಫೀಸಿನ ಗಾರ್ಡು ಗುರುರಾಜನ ಸೂಚನೆಯಂತೆ ದೊಡ್ಕೇರಿ ಹಾಲೇಷಿಯ ನೆರವಿನಿಂದ, ಸುರೇಶಿ ನೇತೃತ್ವದ ಲೋಕೆಷಿ, ಭರಮ್ಯಾ, ಸೋಮ, ಗಿಡ್ಡ ಚಂದ್ರ, ಮಲ್ಕೇಷಿ, ರಾಮ್ಯಾ ಮುಂತಾದವರ ಹನ್ನೆರಡು ಜನರ ತಂಡದೊಂದಿಗೆ ತೆರೆಳಿ, ಸುಮಾರು ಹತ್ತು ಅಡಿ ಆಳ, ಮೂವತ್ತು ಅಡಿ ಅಗಲದ ಗುಂಡಿ ತೋಡಿ, ಅವುಗಳನ್ನು ಅದರೊಳು ಕೆಡವಿ, ಫಾರೆಸ್ಟ್ ಡಿಪಾರ್ಟ್ಮೆಂಟ್ನವರ ಮುಂದಾಳತ್ವದಲ್ಲಿ ದೂರದ ಕಾಡಿಗೆ ಬಿಟ್ಟುಬರುತ್ತಾರೆ. ತದನಂತರದಲ್ಲಿ ಮಾಸ್ತಾರರು ಅದನ್ನು ಇಬ್ರಾಹಿಂ ಸಾಹೇಬರಿಗೆನೇ ಗುತ್ತಿಗೆ ಕೊಟ್ಟು, ತಾವು ಶಾಲೆಯೆಡೆಗೆ ಮುಖ ಮಾಡುತ್ತಾರೆ. ಆದರೂ ಅವುಗಳು ಸೇಡಿಟ್ಟುಕೊಂಡು ಮತ್ತೆ ತಿರುಗಿ ಬಂದು ಕಾಟ ಕೊಡಬಹುದೇ ಎಂದು ಮಾಸ್ತಾರರು ತಲ್ಲಣಿಸುವುದರೊಂದಿಗೆ ಕತೆ ಮುಗಿಯುತ್ತದೆ.

ನಿಸರ್ಗವನ್ನೇ ನಂಬಿ ಬದುಕಬೇಕಾದ ಮನುಷ್ಯ ಅದರ ವಿರುದ್ಧವೇ ನೂರು ಷಡ್ಯಂತ್ರವನ್ನು ಹೆಣೆದು, ಜೀವನ ಕಟ್ಟಿಕೊಳ್ಳಲು ಹೆಣಗಾಡುವ ಕಥನವಿದು. ನಿಜವಾಗಿ ಪ್ರತಿಭಟಿಸಬೇಕಿದ್ದ ಪ್ರಾಣಿಗಳ ಸ್ವಾತಂತ್ರ್ಯವನ್ನೇ ಹತ್ತಿಕ್ಕುವುದು ಇಲ್ಲಿನ ವಿರ್ಯಾಸ. ಕಾಡಂಚನ್ನೇ ಸರಿಸಿಯೋ ಒಳತಳ್ಳಿಯೋ ತೋಟವನ್ನು ಮಾಡಿಕೊಂಡಾಗ, ತಲಾತಲಾಂತರದಿಂದ ಅಲ್ಲಿಯೇ ಆಶ್ರಯ ಪಡೆದುಕೊಂಡಿದ್ದಅನನ್ಯ ಸಂಕುಲದ ಅಪಾರ ಮೂಲನಿವಾಸಿ ವನ್ಯಜೀವಿಗಳ ಪಾಡೇನು? ಹಾಗಾದರೆ ನಿಜವಾಗಿ ಅರಣ್ಯವನ್ನು ಒತ್ತುವರಿ ಮಾಡಿದವರು, ಅತಿಕ್ರಮಣಗೈದವರು ಯಾರು? ನಾವೋ ಅಥವಾ ಮೂಕಜೀವಜಂತುಗಳೊ? ಈ ಹಾದಿಯಲ್ಲಿ ಪ್ರತಿಯೊಬ್ಬರೂ ಯೋಚಿಸಬೇಕಿದೆ. ಮುಂದಾಲೋಚನೆಯ ಇನಿತೂ ಎಚ್ಚರಿಲ್ಲದೆ, ಪ್ರಭಾವಿಗಳ ನೆರವಿನಿಂದ ಪ್ರಾಕೃತಿಕ ಸಂಪತ್ತನ್ನೇ ಲೂಟಿಗೈಯುತ್ತಿದ್ದೇವೆ. ಇಲ್ಲಿಯೂ ಮಾಸ್ತಾರರು ಬೇರೊಬ್ಬರಿಂದ ಹೊಲವನ್ನು ಖರೀದಿಸಿದ್ದರೂ ಅರಣ್ಯ ಒತ್ತುವರಿಯಾಗಿದ್ದಂತೂ ಸತ್ಯ. ಇದಕ್ಕೆ ಸಹಮತವೆನ್ನುವಂತೆ, ‘ಅಕ್ಕಪಕ್ಕದ ಕಾಡಿನ ಜಾಗವನ್ನು ಹಿಂದಿನವರು ಬಗರ್ಹುಕುಂ ಸಾಗುವಳಿಯ ಅಡಿಯಲ್ಲಿ ಒತ್ತುವರಿ ಮಾಡಿದ್ದು ನಿಜವಾದರೂ ಅದು ಮಲೆನಾಡಿನ ಕೃಷಿಭೂಮಿಯಲ್ಲಿ ಸಾಮಾನ್ಯವಾಗಿ ಕಂಡುಬರುವ ಸಂಗತಿ. ಫಾರೆಸ್ಟಿನವರ ಜೊತೆ ಹೊಂದಾಣಿಕೆಯಲ್ಲಿ ಇದನ್ನು ಮಾಡಿಬಿಡುತ್ತಾರೆ. ಅದು ಅಂತಹ ದೊಡ್ಡ ತಪ್ಪಲ್ಲ’ವೆಂದು ನಿರೂಪಕರೇ ಅಭಿಪ್ರಾಯಪಡುತ್ತಾರೆ. ಹೀಗಿರುವಾಗ, ಅನಾದಿಕಾಲದಿಂದಲೂ ಮೂಲನೆಲೆಗಳನ್ನಾಗಿಸಿಕೊಂಡಿದ್ದ ಅಲ್ಲಿನ ಜೀವಜಂತುಗಳ ಕತೆ? ಅವುಗಳು ನಾವಿಲ್ಲಿದ್ದೀವಿ ಅಂತಾ ತೋರ್ಪಡಿಸುವಂತೆ ಮಾಸ್ತಾರರಿಗೆ ಮೊದಲು ಕಾಟಕೊಟ್ಟಿದ್ದೇ ಮಂಗಗಳು. ಅವುಗಳ ಹಾವಳಿ ತಪ್ಪಿತೆನ್ನುವಾಗಲೇ ಕಾಡುಹಂದಿಗಳು ದಾಂಗುಡಿ ಇಟ್ಟಿದ್ದವು.

ಜೊತೆಗೆ, ಹುರಿದು ಮುಕ್ಕುವ ಅರಣ್ಯ ಅಧಿಕಾರಿಗಳ ಕಿರುಕುಳ. ಇವೆಲ್ಲವುಗಳನ್ನು ನಿಭಾಯಿಸುವುದರೊಳಗೇ ಅನ್ಯಾಯವಾಗಿ ಪ್ರಾಣ ತೆತ್ತವುಗಳು ಮಾತ್ರ ನ್ಯಾಯವಾಗಿ ಬದುಕಬೇಕಿದ್ದ ಕಾಡಹಂದಿಗಳು! ಅವುಗಳನ್ನು ದೂರದ ಕಾಡಿಗೆ ಬಿಟ್ಟುಬಂದಿದ್ದಕ್ಕಿಂತ ಮಾರಾಟವಾಗಿದ್ದು, ಮಾಂಸ ರುಚಿ ನೋಡಿದ್ದೇ ಹೆಚ್ಚು. ಇದು ಕೇವಲ ಹಂದಿಯ ಕತೆಯಲ್ಲ. ಇಂಥ ಅನೇಕ ವೈವಿಧ್ಯಮಯ ಜೀವಜಗತ್ತು ನಮ್ಮಿಂದ ಕಣ್ಮರೆಯಾಗಿದ್ದೇ ಹೀಗೆ. ಇಂದು ಅದೆಷ್ಟೋ ಜೀವರಾಶಿಗಳು ಅಳಿವಿನಂಚಿನಲ್ಲಿವೆ. ಇನ್ನೂ ಅದೆಷ್ಟೋ ಜೀವಕುಲಗಳು ತಮ್ಮ ಅವಸಾನದ ಕೊನೆಯ ದಿನಗಳನ್ನು ಎಣಿಸುತ್ತಿವೆ. ಮನುಷ್ಯ ಹಾಗೂ ಪ್ರಾಣಿಗಳ ಸಂಘರ್ಷದಲ್ಲಿ ಬಹಳಷ್ಟು ಸಾರಿ, ದಿಗ್ವಿಜಯ ಸಾಧಿಸಿದ್ದು ಮಾನವನೇ ಹೆಚ್ಚು. ತನ್ನ ಉಳುವಿಗಾಗಿ ಮನುಜ ಯಾವ ಮಟ್ಟಕ್ಕಾದರೂ ಇಳಿಯಲು ಹೇಸುವುದಿಲ್ಲ; ಹಿಂಜರಿವುದೂ ಇಲ್ಲ. ಯಾಕೆಂದರೆ, ನಮ್ಮ ಬದುಕಷ್ಟೇ ನಮಗೆ ಮುಖ್ಯವಾಗಿದೆ. ಇನ್ನಾದರೂ ನಮ್ಮೊಂದಿಗೆ ವನ್ಯಜೀವಿಗಳ ಬಾಳೂ ಹಸನಾಗಬೇಕಿದೆ. ಇಲ್ಲಿ ಮಾಸ್ತಾರರಿಗೆ ಕಾಡಹಂದಿಗಳನ್ನು ಸಾಯಿಸುವ ಯಾವ ದುರುದ್ದೇಶವಿರದಿದ್ದರೂ ಏನಾದಾರಾಗಲಿ, ಅವುಗಳ ಕಾಟ ತಪ್ಪಿದರೆ ಸಾಕೆಂಬ ಇಂಗಿತವಂತೂ ಇತ್ತು. ಆ ವೇಳೆ ಅನೇಕ ಸಾವುನೋವು, ಅವಘಡವಾಗಿದ್ದಂತೂ ಸುಳ್ಳಲ್ಲ. ಈ ಹಾದಿಯಲ್ಲಿ, ಕೃಪಾಕರ-ಸೇನಾನಿಯವರ ವಿರಚಿತ ‘ಜೀವಜಾಲ’ ಕೃತಿಯನ್ನು ಓದಲೇಬೇಕು.
ಇದರೊಂದಿಗೆ, ಬಸವರಾಜ ಮಾಸ್ತಾರರ ಪ್ರಾಮಾಣಿಕತೆ, ನಂತರದಲ್ಲಿ ಅವರು ಅನುಭವಿಸಿದ ಯಾತನೆ; ಅರಣ್ಯ ಇಲಾಖೆಯವರ ಉಪಟಳ; ಮಂಗ, ಹಂದಿ, ಮೊಸಳೆಯ ಕಾಟ; ಇಬ್ರಾಹಿಂ ಸಾಹೇಬರ ವ್ಯಕ್ತಿತ್ವ; ಹಾಲೇಷಿಯ ಸಹಾಯ; ದೊಡ್ಕೇರಿ ಹುಡುಗರ ಸಾಹಸ; ಫಾರೆಸ್ಟ್ ಆಫೀಸರ್ ಸದಾನಂದ ನಾಯ್ಕರರ ನೇತೃತ್ವದಲ್ಲಿ ಮೊಸಳೆ ಹಿಡಿದದ್ದು; ಫೋಟೊಗ್ರಾಫರ್ ದಿವಾಕರ್ನ ಜನಪ್ರಿಯತೆ; ಕಾಡುಹಂದಿ, ಮೊಸಳೆ ಹಿಡಿಯುವಾಗಿನ ಜಾಗ್ರತೆ; ಮುಂತಾದವುಗಳು ದೀರ್ಘಕತೆಯನ್ನು ಗೆಲ್ಲಿಸಿವೆ.

‘ಭಾನಾಮತಿ’ ಇದೊಂದು ರೋಚಕತೆಯಿಂದೊಡಗೂಡಿದ ಅತಿಮಾನುಷ ಶಕ್ತಿಯ ದೀರ್ಘಕತೆ. ಅದೊಂದು ದಿನ, ರಾತ್ರಿಯ ಏಳೆಂಟು ಗಂಟೆಯ ಸುಮಾರಿಗೆ, ಉಪ್ಪಾರಕೇರಿಯ ಎಂಬತ್ತು ಮನೆಗಳ ಪೈಕಿ, ಕೆಲವು ಮನೆಗಳ ಮೇಲೆ ಇದ್ದಕ್ಕಿದ್ದಂತೆ ಕಲ್ಲುಗಳು ಬೀಳಲು ಆರಂಭಿಸುತ್ತವೆ. ಮೊದಮೊದಲು ತಮ್ಮ ಮನೆಯ ಮೇಲೆ ಯಾರೋ ಬೇಕಂತಲೇ ಕಲ್ಲುಗಳನ್ನು ಎಸೆಯುತಿದ್ದಾರೆಂದು ಅಂದುಕೊಂಡರೂ ಯಾರೊಬ್ಬರಿಂದಲೂ ಮೂಲವನ್ನು ಪತ್ತೆಮಾಡಲಾಗುವುದಿಲ್ಲ. ವಿಶೇಷವಾಗಿ, ಆ ಕಲ್ಲುಗಳು ಸಾಮಾನ್ಯವಾಗಿ ಅಲ್ಲಿ ಸಿಗುವಂತಹವೂ ಅಲ್ಲ; ಅಷ್ಟು ದೊಡ್ಡಗಾತ್ರದ ಕಲ್ಲುಗಳನ್ನು ತುಂಬಾ ದೂರದಿಂದ ಎಸೆಯುವುದಕ್ಕೂ ಸಾಧ್ಯವಿಲ್ಲ. ಹಾಗಾದರೆ ಅವುಗಳನ್ನು ಒಗೆಯುವವರಾದರು ಯಾರು? ಅವು ಎಲ್ಲಿಂದಾದರೂ ಬಂದು ಬೀಳುತ್ತಿವೆ? ಹೀಗೆ ಹಲವು ಅನುಮಾನಗಳ ಹಿಂದೆ ಬೆನ್ನುಬಿದ್ದರೂ ಸಿಕ್ಕ ಉತ್ತರ ನಿರಾಸೆದಾಯಕವಾಗಿಯೇ ಇತ್ತು. ಭೂತಚೇಷ್ಟೆ, ದೆವ್ವಗಳ ಕಾಟವೆಂದೇ ಜನ ಬಗೆದರು. ಪತ್ರಿಕೆಯವರು, ಇನ್ಸ್ಪೆಕ್ಟರ್ ಅಶೋಕ ಪಾಟೀಲರು ಹಾಗೂ ಅವರ ತಂಡ ಬಂದು ಹುಡುಕಾಟ ನಡೆಸಿದರೂ ಯಾವ ಸುಳಿವೂ ಸಿಗಲಿಲ್ಲ. ಇಡೀ ಕೇರಿಯೇ ಇದೇ ಚಿಂತೆಯಲ್ಲಿ ಮುಳುಗಿರುವಾಗ, ಜಯಂತಿಪುರದ ಮಧುಕೇಶ್ವರನ ದರ್ಶನಕ್ಕೆ ಸತ್ಯಾನಂದ ಮಹಾರಾಜ್ ಎಂಬ ಸನ್ಯಾಸಿಗಳು ಆಗಮಿಸುತ್ತಾರೆ. ಅವರಿಗೆ, ಈ ಸುದ್ದಿಯನ್ನು ಕೇರಿಯ ಹಿರಿಯನಾದ ಉಪ್ಪಾರ ಭರಮಣ್ಣನು ರಮಾಕಾಂತ ಭಟ್ಟರ ಮೂಲಕ ಮುಟ್ಟಿಸುತ್ತಾರೆ. ಆಗವರು, ಸೇಡಿಗಾಗಿ ಯಾರೋ ಭಾನಾಮತಿ ಪ್ರಯೋಗ ಮಾಡಿದ ವಿಚಾರ ತಿಳಿಸಿ, ‘ಯಾರೂ ಭಯಪಡಬೇಡಿ, ನಿಶ್ಚಿಂತೆಯಾಗಿರಿ. ಖಂಡಿತ ನಿಮಗೊದಗಿದ ಸಮಸ್ಯೆಯನ್ನು ಬಗೆಹರಿಸುತ್ತೇನೆ’ಂದು ಭರವಸೆ ನೀಡುತ್ತಾರೆ. ಅವರ ತಪಶ್ಶಕ್ತಿಯ ಮಹಿಮೆಯೋ ಏನೋ ಕಾಕತಾಳೀಯ ಎಂಬಂತೆ ಮರುದಿನದಿಂದ ಯಾರ ಮನೆಗೂ ಕಲ್ಲುಗಳು ಬೀಳುವುದಿಲ್ಲ. ಬಂದಂಥ ಆಪತ್ತು ನಿವಾರಣೆಯಾಗಿದ್ದರಿಂದ ಕೇರಿಯ ಸಮಸ್ತ ಜನವೆಲ್ಲ ನಿಟ್ಟುಸಿರು ಬಿಡುತ್ತಾರೆ. ಆದರೆ, ಭಾನಾಮತಿ ಪ್ರಯೋಗ ಮಾಡಿದವರು ಯಾರಿರಬಹುದೆಂದು ಭರಮಪ್ಪ ಚಿಂತೆಗೆ ಜಾರಿದಾಗ, ಹನ್ನೆರಡು ವರ್ಷಗಳ ಹಿಂದೆ ನಿಧಿಯಾಸೆಗಾಗಿ ಪುಟ್ಟಮ್ಮ ಬಲಿಯಾಗಿದ್ದ ಸಂಗತಿ,ಅವಳನ್ನು ಬೆಂಕಿಗೆ ಆಹುತಿ ಮಾಡಿದ ವಿಚಾರ ನೆನಪಿಗೆ ತಂದುಕೊಂಡು ಗದ್ಗದಿತನಾಗುತ್ತಾನೆ. ಆ ಕೊಲೆಯ ರಹಸ್ಯ ತನಗಷ್ಟೇ ಗೊತ್ತಿರುವುದೆಲ್ಲಾ ಸ್ಮೃತಿಪಟಲಕ್ಕೆ ಬಂದು, ಭಾನಾಮತಿ ಪ್ರಯೋಗ ಮಾಡಿದ್ದು ಅವಳ ಮಗ ಪರಶುರಾಮನೇ ಇರಬಹುದೆಂಬ ಸತ್ಯ ತಿಳಿದುಬಂದರೂ ಯಾರಿಗೂ ಹೇಳುವಂತಿಲ್ಲ. ಅವನು, ತನ್ನ ತಾಯಿಯ ಸಾವಿಗೆ ಕಾರಣನಾದ ಮಲ್ಲಪ್ಪನನ್ನು ಬಲಿ ತೆಗೆದುಕೊಂಡಂತೆ, ಅವಳ ಸಾವಿನ ಗುಟ್ಟನ್ನು ಅರಿತ ನನ್ನನ್ನೂ ತೆಗೆದುಕೊಂಡಾನು ಎಂಬ ಭಯ ಮನದೊಳಗೆ ಸುಳಿಯುವುದರೊಂದಿಗೆ ಕತೆ ಮುಗಿಯುತ್ತದೆ.

ಯಂತ್ರ-ತಂತ್ರ, ಮಾಟ-ಮಂತ್ರ, ದೆವ್ವ-ಪಿಶಾಚಿ, ವಾಮಾಚಾರ-ಭಾನಾಮತಿಗಳಿಗೆ ತಾರ್ಕಿಕ ಅಂತ್ಯವಿಲ್ಲ. ಇವು ಸತ್ಯನೋ ಸುಳ್ಳೋ, ಅಂತಕಂತೆಯೋ ಎಂದು ಜಾಡು ಹಿಡಿದು ನಡೆದಷ್ಟೂ ಬಿಗಿಡಾಯಿಸುವಂಥದ್ದು. ಇವು ಕಲ್ಪನೆಯ ಕೃತಕಬಿಂದುಗಳೆಂದು ಜರಿದು ಮುಂದುವರಿದರೂ ಇಂದಿನ ವೈಜ್ಞಾನಿಕ ಯುಗದಲ್ಲೂ ಇನ್ನೂ ಮುನ್ನೆಲೆಗೆ ಬರುತ್ತಿರುವುದು ಆತಂಕಕಾರಿಯಾದ ವಿಷಯವೇ ಸರಿ. ಇಲ್ಲಿನೂ ಎಷ್ಟೋ ಮನೆಗಳಿಗೆ ನಿತ್ಯ ಕಲ್ಲುಗಳು ಬೀಳುತಿದ್ದವು. ಆದರೆ, ಹುಡುಕಿದರೂ ಉತ್ತರವಿರಲಿಲ್ಲ. ಸತ್ಯಾನಂದ ಮಹಾರಾಜರಿಂದ ಊರಿಗೆ ಅಂಟಿಕೊಂಡಿದ್ದ ಅನಿಷ್ಟಪೀಡೆ, ಪೀಡನೆ ತೊಲಗಿತು. ಹಾಗಾದರೆ ಇದನ್ನು ಯಾವ ತಕ್ಕಡಿಯಲ್ಲಿ ತೂಗುವುದು? ಇದನ್ನು ನಂಬಬೇಕೋ ಬಿಡಬೇಕೋ ಅಥವಾ ನಂಬದೇ ಇರುವ ಮಧ್ಯಮಸ್ಥಿತಿಯನ್ನು ತಾಳಬೇಕೊ? ನಿಜಕ್ಕೂ ಕಲ್ಲುಗಳನ್ನು ಬೀಳುವಂತೆ ಮಾಡಿದ್ದು ಪರಶುರಾಮನೆ? ಅದನ್ನು ನಿಲ್ಲಿಸಿದ್ದು ಸತ್ಯಾನಂದ ಮಹಾರಾಜರೆ? ಇದರಲ್ಲಿ ಒಂದು ನಂಬಿ, ಇನ್ನೊಂದು ಬಿಡುವಂತಿಲ್ಲ. ಅಥವಾ ಕಲ್ಲಗಳನ್ನು ಬೀಳದಂತೆ ತಡೆದದ್ದು, ಪೊಲೀಸ್ ಇಂಟಲಿಜೆನ್ಸ್ ಡಿಪಾರ್ಟ್ಮೆಂಟ್ನಿಂದ ಆಗಮಿಸಿದ್ದ ಶಂಕರ್ಶೆಟ್ಟಿಯ ವ್ಯೂಹಗಾರಿಕೆಯಿಂದಲೆ? ಇದೇ ಸತ್ಯವೆಂದರೆ, ಆವರೆಗೆ ಕಲ್ಲುಗಳು ಎಲ್ಲಿಂದ ಬೀಳುತಿದ್ದವು? ಯಾರು ಎಸೆಯುತಿದ್ದರು? ಮತ್ತೆ ಉತ್ತರವಿಲ್ಲದ ಪ್ರಶ್ನೆಗಳು. ಇವೆಲ್ಲವನ್ನೂ ಇಷ್ಟಕ್ಕೇ ಬಿಟ್ಟು ಮುಂದುವರಿಯೋಣವೆಂದರೆ, ದಾರುಣ ಅಂತ್ಯಕಂಡ ಪುಟ್ಟಮ್ಮಳಂಥವರ ಜೀವಕ್ಕೆ ಬೆಲೆ? ಅವಳ ಸಾವಂತೂ ಮಾನವಕೃತ್ಯವೆ. ಕೆರೆಹೊಂಡಕ್ಕೆ ಹತ್ತಿಕೊಂಡಿದ್ದ ಮಲ್ಲಪ್ಪನ ಹತ್ತೆಕರೆ ಜಮೀನಿನಲ್ಲಿ ನಿಧಿ ಇರುವ ಸಂಗತಿಯನ್ನು ಹೇಳಿ, ಅದರಲ್ಲಿ ಅರ್ಧಪಾಲು ಕೇಳಿದ್ದೇ ಅವಳ ಜೀವ ಎರವಾಗಲು ಕಾರಣವಾಯ್ತು. ಆಸೆಯ ಸುಳಿಗೆ ಸಿಕ್ಕ ನಾವುಗಳೆಲ್ಲ ನಿತ್ಯವೂ ಇಂಥ ಆಘಾತಕಾರಿ ಸಂಗತಿಗಳನ್ನು ಕೇಳುತ್ತಿರುವುದು ವಿಷಾದನೀಯ. ಎಲ್ಲವೂ ತನಗೇ ಸಿಗಲಿಯೆಂಬ ದುರಾಸೆಯಲ್ಲಿ, ಗುಡಿಸಲಿಗೆ ಬೆಂಕಿಯಿಟ್ಟು ಅವಳ ಪ್ರಾಣವನ್ನು ತೆಗೆದು ಬೀಗಿದ್ದ. ಮುಂದೆ ಅವನದ್ದೂ ದುರಂತ ಅಂತ್ಯವೆ. ಹೀಗಿರುವಾಗ, ಅವನ ಸಾವನ್ನಾದರೂ ಹೇಗೆ ಬಣ್ಣಿಸುವುದು? ಸ್ವಯಂಕೃತ್ಯವೋ? ದೈವೀಕೃಪೆಯೋ? ಈಗ ಭಯಪಡುತ್ತಿರುವ ಭರಮಪ್ಪನೇನು ಸಾಮಾನ್ಯನೆ? ತನಗೂ ಅಷ್ಟೋ ಇಷ್ಟೋ ಸಿಕ್ಕಿತೆಂದು ಮಲ್ಲಪ್ಪನೊಂದಿಗೆ ಕೈಜೋಡಿಸಿದವನೇ. ಇಬ್ಬರೂ ಪುಟ್ಟಮ್ಮಳನ್ನು ಬಿಟ್ಟು, ಮತ್ಯಾರೋ ಮಂತ್ರವಾದಿಯನ್ನು ಕರೆದು ನಿಧಿಯಿರುವ ಸ್ಥಳವನ್ನು ಪತ್ತೆಹಚ್ಚಿ ದೋಚಬೇಕೆಂದುಕೊಂಡವರೇ. ತಮ್ಮ ಪಾಪಕ್ಕೆ ಪ್ರಾಯಶ್ಚಿತ್ತವೆಂಬಂತೆ ಪುಟ್ಟಮ್ಮ-ಮಲ್ಲಪ್ಪರೇನೋ ಜೀವ ತೆತ್ತರು. ಆದರೆ ತನ್ನದೂ ಸರದಿ ಮುಂದಿದೆಯೆಂಬ ಆತಂಕ, ದುಗುಡ, ಕಳವಳ, ತಳಮಳ ಅವನೊಳಗೂ ಬಂದದ್ದು ಅಸಹಜವೇನಲ್ಲ. ತಪ್ಪು ಮಾಡಿದ ಯಾವನಿಗಾದರೂ ಹಾಗೆ ಅನಿಸಲೇಬೇಕು. ಅಂದಾಗಲೇ ಅವನು ಮನುಷ್ಯವರ್ಗಕ್ಕೆ ಸೇರಲು ಸಾಧ್ಯ. ಇಲ್ಲವಾದರೆ, ಕೃತ್ಯ ಮಾಡುವಾಗಿಲ್ಲದ ಭಯ, ಅಳುಕು ನಂತರದಲ್ಲಿ ಎದೆಯೊಳು ಹೊಕ್ಕರೂ ಅದಕ್ಯಾವ ಅರ್ಥವಿಲ್ಲದೇ ‘ಮಾಡಿದ್ದುಣ್ಣೋ ಮಾರಾಯ’ವೆನ್ನುವಂತಾಗುತ್ತದೆ.

ಇದರೊಂದಿಗೆ, ಮನೆಗೆ ಕಲ್ಲುಗಳು ಬೀಳುವಾಗಿನ ಜನಗಳ ಆತಂಕ, ಗಾಬರಿ, ತರಾವರಿ ಮಾತುಗಳು; ಇನ್ಸ್ಪೆಕ್ಟರ್ ಅಶೋಕ ಪಾಟೀಲರ ಸಾಂತ್ವಾನ, ತುಂಬುತ್ತಿದ್ದ ಧೈರ್ಯ; ಸತ್ಯಾನಂದ ಮಹಾರಾಜರ ಕಳಕಳಿ; ಕೇರಳದಿಂದ ಕೆಲಸ ಅರಸಿ ಬಂದಿದ್ದ ವೆಂಕಪ್ಪನ ಸಾವು; ಪುಟ್ಟಮ್ಮಳ ಹೇಳಿಕೆ, ಅವಳ ದಾರುಣ ಅಂತ್ಯ; ಕೆರೆಹೊಂಡದ ನಿಧಿಬೇಟೆಯ ಕುತೂಹಲ; ತಾಯಿಯನ್ನು ಕಳೆದುಕೊಂಡು ಪರಿತಪಿಸಿದ ಪರಶುರಾಮ; ಮಲ್ಲಪ್ಪನ ದುರಾಸೆ; ಭರಮಪ್ಪನ ತಲ್ಲಣ; ಇತ್ಯಾದಿ ಸಂಗತಿಗಳು ಕೊನೆಯವರೆಗೂ ಕತೆಯ ಕೌತುಕವನ್ನು ಹೆಚ್ಚಿಸಿವೆ.

ಒಟ್ಟಾರೆಯಾಗಿ ‘ಜಯಂತಿಪುರದ ಕತೆಗಳು’ ಒಂದು ಹೊಸಬಗೆಯ ಪ್ರಯತ್ನ, ಜೊತೆಗೆ ಪ್ರಯೋಗವೂ ಹೌದು. ಒಂದೇ ಊರಿನ ಚಿತ್ರಣಗಳನ್ನು ಕಟೆಕಟೆದು ಮೂರ್ತಿ ಮಾಡುವುದು ಒಂದೇ ಏಟಿಗೆ ದಕ್ಕುವುದಲ್ಲ. ಆದರೆ ಶ್ರೀಧರ ಬನವಾಸಿಯವರು ಅದನ್ನು ಸಾಧಿಸಿ ತೋರಿಸಿದ್ದಾರೆ. ಮುಂದಿನವರಿಗೆ ಇದೊಂದು ಹೆದ್ದಾರಿನೇ ಆಗಬಹುದು.

‘ಅಯ್ಯೋ ಗಂಡ ಸತ್ತ ಮುಂಡೇರು ದೇವ್ರು ಕಟ್ಟಿರೋ ಆ ಜಾಗಕ್ಕೆ ಹೋಗಂಗಿಲ್ಲಪ್ಪ… ಅದ್ಕೆ ನಾ ಅಲ್ಲಿಗೆ ರ್ಲಿಲ್ಲ’ ಅಂತ ತಾಯಿ ‘ಕಾಡುಪಾಲದ ಮಾರಿಬಲಿ’ಯಲ್ಲಿ ಆಡಿದ ಮಾತು, ಮುಂದೆ ಕೆಲಕತೆಗಳಲ್ಲಿ ತಂದೆ ಪಾತ್ರ ಹೆಣೆಯದಿದ್ದರೆ; ಒಂದು ವೇಳೆ ಹೆಣೆದರೂ ‘ಮಾಲಿನಿ ಜೀವಂತವಾಗಿದ್ದಾಳೆ’ ಕತೆಯಲ್ಲಿ ವೆಂಕ್ಟೇಶಪ್ಪ, ‘ನಿಗೂಢ ಜಗತ್ತಿನ ಅತಿಥಿಗಳು’ ಕತೆಯಲ್ಲಿ ಸುರೇಶಪ್ಪ ಬದಲಿಗೆ ಒಂದೇ ಹೆಸರನ್ನು ನಮೂದಿಸಿದ್ದರೆ; ‘ದೇಹವೆಂಬ ಮಡಿಕೆಯೊಳಗೆ’ ಕತೆಯಲ್ಲಿ ‘ಶುಭೋದಯ ಹೋಟೆಲ್’ ಇಟ್ಟುಕೊಂಡಿದ್ದ ಕೊಂಕಣಿ ಬ್ರಾಹ್ಮಣ ಚಂದ್ರಕಾಂತ, ಮುಂದೆ ಅದೇ ಹೆಸರಿನ ಕತೆಯಲ್ಲಿ ಬ್ರಾಹ್ಮಣರಲ್ಲಿಯೇಮೇಲ್ವರ್ಗದ ಸುಬ್ರಾಯ ಭಟ್ಟರಿಂದ ತಿರಸ್ಕೃತನಾಗುವುದು ತಪ್ಪಿಸಿದ್ದರೆ;‘ದೇಹವೆಂಬ ಮಡಿಕೆಯೊಳಗೆ’ ಕತೆಯಲ್ಲಿ ನಿರೂಪಕರ ಹೆಸರು ಶ್ರೀನಿವಾಸ ಬಿಟ್ಟರೆ, ಮತ್ತೆಲ್ಲಿಯೂ ಹೆಸರಿನ ಉಲ್ಲೇಖ ಕಂಡುಬಾರದ್ದರಿಂದ ಖಂಡಿತ ಇದನ್ನು ಕಾದಂಬರಿ ಪ್ರಕಾರಕ್ಕೆ ಸೇರಿಸಬಹುದಿತ್ತು. ಇದು ಕೇವಲ ಸಾಧ್ಯಾಸಾಧ್ಯತೆ ಬಗ್ಗೆ ಅರಸಿ ಹೋದದ್ದಷ್ಟೆ; ಅದೇ ಸಾಲಿಗೆ ಸೇರಿಸಬೇಕೆಂಬ ಧಾವಂತದಿಂದಲ್ಲ. ಸೂಕ್ಷ್ಮವಾಗಿ ಗಮನಿಸಿದರೆ, ಕತೆಗಾರರಿಗೆ ಇದನ್ನು ಕಾದಂಬರಿ ವಿಭಾಗಕ್ಕೆ ಸೇರಿಸುವ ಯವ ಇರಾದೆಯೂ ಇದ್ದಂತಿಲ್ಲ. ಅದಕ್ಕಾಗಿಯೇ ಅವರು, ಒಟ್ಟು ಕೃತಿಯನ್ನು ಕಥಾ ಜಾಡಿನಲ್ಲಿಯೇ ನಡೆಸಿದ್ದು ಕಂಡುಬರುತ್ತದೆ. ಹೀಗಾಗಿಇದನ್ನು ಕಥೆಗಳ ಗುಚ್ಛವೆಂದೇ ಭಾವಿಸಿ, ಇಡಿಯ ಬದಲಿಗೆ ಬಿಡಿಯಾಗಿ ನೋಡಬೇಕಷ್ಟೆ.

ಕೆಲವು ಕಥೆಗಳಲ್ಲಿ ಇನ್ನೊಂದು ಮತ್ತೊಂದು ಎಂಬಂತೆ ಒಂದರೊಳಗೊಂದು ಕತೆಗಳು ಸೇರಿ, ಕತೆಯನ್ನು ವರದಿರೂಪದ ಜಾಡಿಗೆ ತಳ್ಳಿವೆ. ಈ ಸೂಕ್ಷö್ಮವನ್ನು ಕತೆಗಾರರು ಅರಿಯದಿದ್ದರೆ, ಕತೆಗಳು ಸೋಲಿನೆಡೆ ಮುಖ ಮಾಡುವುದೇ ಹೆಚ್ಚು. ಉದಾಹರಣೆಗೆ, ‘ಶುಭೋದಯ ಹೋಟೆಲ್’ನಲ್ಲಿ ನಕ್ಸಲೈಟ್ ಹಾವಳಿಯನ್ನು ಬೆರೆಸುವ ಅವಶ್ಯಕತೆ ಇರಲಿಲ್ಲ. ಬೇಕಾದರೆ, ಅದನ್ನೇ ಒಂದು ಪ್ರತ್ಯೇಕ ಕತೆಯನ್ನಾಗಿ ಸೃಜಿಸಿ, ಜೀವ ಕೊಡಬಹುದಿತ್ತು. ‘ಕುದುರೆ ಹೊಂಡ’, ‘ಮಾಲಿನಿ ಜೀವಂತವಾಗಿದ್ದಾಳೆ’, ‘ದೇಹವೆಂಬ ಮಡಿಕೆಯೊಳಗೆ’, ‘ಶುಭೋದಯ ಹೋಟೆಲ್’ನಂತಹ ಬಹುತೇಕ ಕತೆಗಳಲ್ಲಿ ಸಾವೇ ವಿಜೃಂಭಿಸಿದ್ದರಿಂದ ಜೀವವಾಹಿನಿ ವರದೆಯ ತುಂಬ ಕಳೆಬರಗಳನ್ನೇ ಹುಡುಕಬೇಕಿದೆ! ಹೇಳಿಕೆ-ಕೇಳಿಕೆಗಳು ಕತೆಗಳನ್ನು ಆ ನಿಟ್ಟಿನಲ್ಲಿ ಎಳೆಸಿ ಬೆಳೆಸಿ ಬರೆಸಿರಲೂಬಹುದು; ಇಲ್ಲವೆಂದಲ್ಲ. ಆದರೆ ಕೊಂಚ ರಚನಾತಂತ್ರ ಬದಲಿಸಬೇಕಷ್ಟೆ. ಬನವಾಸಿ ವೆಂಕಟೇಶ ದೀಕ್ಷಿತ್ರ ಸುಂದರ ಮುನ್ನುಡಿ ಕೃತಿಯನ್ನು ಕಳೆಗಟ್ಟಿಸಿದೆ. ಲೇಕಕರಿಂದ ಇನ್ನೂ ಇಂತಹ ಬೇರೊಂದು ಮಗ್ಗಲುಗಳನ್ನು ಪರಿಚಯಿಸುವ ಕೃತಿಗಳು ಬರಲಿ ಎಂದು ಹಾರೈಸುವೆ. ಶುಭವಾಗಲಿ.

-ಜಗದೀಶ ಬ. ಹಾದಿಮನಿ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x