ಇದೇನು ಕತಿಯಲ್ಲ. ನಮ್ಮೂರಾಗ ನಡೆದದ್ದು. ಆದರೂ ನೀವು ನಂಬೂದಿಲ್ಲ ನನಗ ಗೊತ್ತದ. ಅಂಥಾದ್ದೇನದ ಅಂದರ. ನಮ್ಮೂರಾಗ ಒಂದು ಇನ್ಸಪೆಕ್ಷನ್ ಬಂಗಲೋ ಅದ. ಅದೇನು ದೊಡ್ಡದು ಅಂತೀರಾ ಅಥವಾ ಈಗ ಹೋಗಿ ನೋಡಿದರ ಅದೊಂದು ಹಳೆಯ ಪಳೆಯುಳಿಕೆಯ ಕೋಟೆ ಕೊತ್ತಳದಂಗ ಕಾಣತದ. ಆದರೆ, ಒಂದಾನೊಂದು ಕಾಲದಾಗ, ಇದು ನಮ್ಮೂರಿನವರಿಗೆ ಒಂದು ಪಿಕ್ ನಿಕ್ ಸ್ಪಾಟ್ ಆಗಿತ್ತು. ಅದು ಹೆಂಗೆ ಅಂದರೆ, ಊರಿಗೆ ಯಾರಾದರೂ ಬಂಧುಗಳು ಬಂದರೆ, ಅವರಿಗೆ ಊರಲ್ಲಿ ತೋರಿಸ ಬೇಕಾದ ವಿಶೇಷ ಸ್ಥಳದಲ್ಲಿ ಇದೂ ಒಂದಾಗಿತ್ತು. ಹಂಗಂದರ, ವಿಶೇ಼ಷ ಸ್ಥಳಗಳು ಭಾಳ ಅವ ಅಂದುಕೊಂಡರೆ ಅದು ನಿಮ್ಮ ತಪ್ಪು. ನಾನೇನೂ ಮಾಡಲಿಕ್ಕಾಗೂದಿಲ್ಲ. ಬಂದ ಬಂಧುಗಳನ್ನು ಕರೆದೊಯ್ಯುವ ಮೊದಲ ಸ್ಥಳ ಎಂದರೆ, ಮುಂಜಾನೆ ಸ್ನಾನಕ್ಕೆ ಹೋಗುವುದು, ವರದಾ ನದಿಗೆ, ಸಂಜೀಗೆ ಹೋಗೋದು ಕಲ್ಮೇಶ್ವರ ಗುಡೀಗೆ. ಇವೆರಡೂ ಹೆಂಗ ನಮ್ಮ ಜೀವನದೊಳಗೆ ಹಾಸು ಹೊಕ್ಕಾಗ್ಯಾವ ಅಂದರ, ನಮ್ಮನ್ನ ನೀವು, ಮುಂಜಾನೆದ್ದ ಕೂಡ್ಲೆ ಯಾರೂ ಸ್ನಾನಾತನೂ ಅನ್ನೂದಿಲ್ಲ, ನದೀಗೆ ಹೋಗಿದ್ಯಾ ಅಂತಾರ, ಅದು ಪುಣ್ಯ ಸ್ನಾನ ಅಂತಲ್ಲ, ದಿನಾನೂ ಸ್ನಾನ ಮಾಡೋದು, ಪುಣ್ಯ ಸ್ನಾನಾನೇ. ಮತ್ತ ಅವರು ನಮಗ, ತಿಂಡಿ ತಿಂದ್ಯಾ ಅಂತ ಯಾರೂ ಕೇಳೂದಿಲ್ಲ. ಅವರು ಕೇಳೋದು, ಅವಲಕ್ಕಿ ತಿಂದ್ಯಾ ಅಂತ. ಅಂದರ, ನಮಗೆಲ್ಲಾ ತಿಂಡಿ ಅಂದರೆ, ಅವಲಕ್ಕೀನೆ. ಇರಲಿ ಬಿಡರೀ ಅವಲಕ್ಕಿ ಬಗ್ಗೆ ಬ್ಯಾರೇದ ಪುರಾಣ ಬರಿಬಹುದು.
ಈಗ ಮತ್ತ, ನಮ್ಮ ಇನ್ಸಪೆಕ್ಷನ್ ಬಂಗಲೋದ ಕಡೆ ಬರೋಣ. ನಮ್ಮೂರಾಗಿನ ಕಲ್ಮೇಶ್ವರ ಗುಡಿ, ಹೊಯ್ಸಳರ ವಾಸ್ತು ಶಿಲ್ಪದ, ನಕ್ಷತ್ರಾಕಾರದಲ್ಲಿ ಕಟ್ಟಿದ, ಅತ್ಯಂತ ಸುಲಭದ ಆಡು ಭಾಷೆಯಲ್ಲಿ ಹೇಳಬೇಕೆಂದರೆ, ಜಕ್ಕಣಾಚಾರಿ ಕಟ್ಟಿದ ಈಶ್ವರನ ಗುಡಿಗಳೆರಡಿವೆ. ಅವುಗಳನ್ನು ನೋಡಿಕೊಳ್ಳಲು ಸರ್ಕಾರದ ಪುರಾತತ್ವ ಇಲಾಖೆಯ ಒಬ್ಬರು ಗ್ರೂಪ್ ಡಿ ಹುದ್ದೆಯವರಿದ್ದಾರೆ. ಅವರು ತುಂಬಾ ಚನ್ನಾಗಿ ದೇವಸ್ಥಾನದ ಆವರಣವನ್ನು ಸ್ವಚ್ಛಗೊಳಿಸಿ, ತುಳಸಿ ಹಾಗೂ ಹೂವಿನ ಗಿಡಗಳನ್ನು ಬೆಳೆದು, ಈಶ್ವರನಿಗೆ ಪೂಜೆ ಮಾಡಿ ನೋಡಿಕೊಳ್ಳುತ್ತಾರೆ. ಅದು ಈಶ್ವರನ ಗುಡಿಯಾದರೂ, ನೋಡಿಕೊಳ್ಳುವವರು ಗೋಪಾಲನಾದ್ದರಿಂದ, ಜನರು ಕರೆವುದು, ಗೋಪಾಲನ ಗುಡಿ ಎಂದೇ. ಇನ್ನೊಂದು ಗುಡಿಗೆ, ರಾತ್ರಿಯೊಳಗಾಗಿ, ಗುಡಿ ಕಟ್ಟಿದರೂ, ಬೆಳಗಾಗುವ ಸೂಚನೆ ಎಂದು ಕೋಳಿ ಕೂಗಿದ್ದರಿಂದ, ಆ ಗುಡಿಗೆ ಶಿಖರವನ್ನಿಟ್ಟಿಲ್ಲ, ಆದ್ದರಿಂದ ಅಲ್ಲಿ ಪೂಜೆ ನಡೆಯುವುದಿಲ್ಲ, ಅದು ಬೋಳ ದೇವರ ಗುಡಿ. ನಮ್ಮೂರಿನವರಿಗೆ ಇವು ಎರಡೂ ಗುಡಿಗಳೂ ಬೇಲೂರಿನ ಚನ್ನಕೇಶವನ ಹೊಯ್ಸಳೇಶ್ವರ, ಶಾಂತಲೇಶ್ವರ ದೇವಾಲಯಗಳಂತೆ.
ಆದರೆ, ಈ ಎರಡನ್ನೂ ಮೀರಿದ ಒಂದು ವಿಹಾರ ಸ್ಥಳವಿದೆ. ಅದು ತಿಮ್ಮಪ್ಪನ ಗುಡ್ಡ. ಅದು ನಮ್ಮೂರಿನಿಂದ ತುಸು ದೂರದಲ್ಲಿದೆ. ಒಂದು ಪುಟ್ಟ ಗುಡ್ಡವಾದರೂ, ಅದರ ಮೇಲೆ, ಎರಡು ಪುಟ್ಟ ಪುಟ್ಟ ಅಂದರೆ, ಜೀರ್ಣೋದ್ಧಾರಕ್ಕೆಂದೇ ಭಕ್ತರಿಗಾಗಿ ಕಾಯ್ದು ಕೂತಿದ್ದ ಗುಡಿಗಳಿವೆ. ಒಂದಂತೂ ಒಳಗಡೆ ಏನೂ ಕಾಣಿಸದಂತೆ ಕತ್ತಲು ತುಂಬಿದ ಲಕ್ಷ್ಮೀ ಗುಡಿ. ಗರ್ಭಗುಡಿಯಲ್ಲಿ ನಾಲ್ಕೈದು ಜನ ನಿಲ್ಲಬಹುದು, ಹೊರಗಡೆ ಐದಾರು ಜನ ನಿಲ್ಲಬಹುದಾದ ಗುಡಿಯದು. ಅದರ ಪಕ್ಕದಲ್ಲಿ ಇದಕ್ಕಿಂತ ದೊಡ್ಡದಾದ ಗುಡಿಯೊಂದಿದೆ. ಅದೇ ತಿಮ್ಮಪ್ಪನ ಗುಡಿ. ಅದು ತುಸು ದೊಡ್ಡದಾದ ಗುಡಿ ಅಲ್ಲಿಯ ವೆಂಕಪ್ಪ, ನಮ್ಮಷ್ಟೇ ಎತ್ತರವಿದ್ದಾನೆ. ಗರ್ಭಗುಡಿಯಲ್ಲಿ ಐದಾರು ಜನ ನಿಲ್ಲಬಹುದಾದ ಜಾಗವಿದೆ. ಹೊರಗಡೆ ಹತ್ತು ಜನ ನಿಲ್ಲಬಹುದೇನೋ. ನಮ್ಮೂರಿನವರಿಗೆ, ಈ ದೇವಸ್ಥಾನ ನೆನಪಾಗೋದು, ಮಳೆ ಬಾರದೇ ತೊಂದರೆಯಾದಾಗ ಮಾತ್ರ. ಆಗ, ಊರವರೆಲ್ಲಾ ಸೇರಿ, ವೆಂಕಪ್ಪನಿಗೆ ಅಭಿಷೇಕ ಮಾಡಿಸುತ್ತಾರೆ. ಅದೇ ತಿಮ್ಮಪ್ಪನ ಪರವು. ಆಗ ತಪ್ಪದೇ ಮಳಿ ಬರುತ್ತದೆ. ಇನ್ನೊಮ್ಮೆ ವೆಂಕಪ್ಪ ಸ್ನಾನ ಕಾಣ ಬೇಕಾದರೆ, ನವರಾತ್ರಿಯ ಒಂದು ದಿನ. ಆ ದಿನ ಊರಿನಲ್ಲಿಯ ಯಾವುದಾದರೂ ಬ್ರಾಹ್ಮಣರ ಮನೆಯವರು, ಮಡಿಯಿಂದ ನೀರಿನ ಕೊಡ ಹೊತ್ತುಕೊಂಡು, ಹಿಂದೆ ಒಬ್ಬರು ಮಡಿಯಿಂದ ನೈವೇದ್ಯದ ತಾಟು ಹಿಡಿದ ಇನ್ನೊಬ್ಬರು ಹೋಗಿ, ಅಭಿಷೇಕ ಮಾಡಿ, ನೈವೇದ್ಯ ತೋರಿಸಿ ಬರುತಾರೆ ಅಷ್ಟೆ.
ನಾವೆಲ್ಲಾ ಸಣ್ಣವರಿದ್ದಾಗ, ತಿಮ್ಮಪ್ಪನ ಗುಡ್ಡಕ್ಕೆ ಹೋದರೆ, ಮೇಲಿನಿಂದ ಸುಂದರವಾಗಿ ಕಾಣುವ ನಮ್ಮೂರನ್ನು ನೋಡಿ, “ಬೆಳೆದಿದೆ ನೋಡಾ, ಬಾಳಂಬೀಡಾ, ಕಲ್ಲು ಮುಳ್ಳುಗಳ ಸುಂದರ ನಾಡ” ಎಂದು ಹಾಡುತ್ತಿದ್ದೆವು. ಎಷ್ಟೆಂದರೂ “ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪೀ ಗರೀಯಸೇ” ಅಲ್ಲವೇ. ಇಲ್ಲೊಂದು ತಮಾಷೆಯಿದೆ. ಇದು, ಬೆಟ್ಟವಲ್ಲ, ಪುಟ್ಟ ಗುಡ್ಡ. ಗುಡ್ಡದ ತುದಿಗೆ ಎರಡು ಗುಡಿಗಳಿವೆ, ಅದೂ ಅಕ್ಕಪಕ್ಕದಲ್ಲಿ, ಆದರೆ, ತಿಮ್ಮಪ್ಪನಿಗೆ, ಲಕ್ಷ್ಮೀದೇವಿ ಹೆಂಡತಿಯಲ್ಲವೇ. ಇಬ್ಬರಿಗೂ ಒಂದೇ ಗುಡಿಯಲ್ಲಿ ಪೂಜೆ ಮಾಡಬಹುದಿತ್ತಲ್ಲವೇ ಎಂದು ನಿಮಗೆ ಅನ್ನಿಸಿದರೆ, ಅದರಲ್ಲಿ ತಪ್ಪೇನೂ ಇಲ್ಲ. ಆದರೆ, ಜಗದ ಅಪ್ಪ, ತಿಮ್ಮಪ್ಪ ಹಾಗೂ ತಾಯಿ ಲಕ್ಷ್ಮೀದೇವಿ ಇಬ್ಬರಿಗೂ ಜಗಳವಂತೆ. ಅದಕ್ಕೇ, ಗಂಡನ ಜೊತೆ ನಿಲ್ಲದೇ, ಲಕ್ಷ್ಮೀದೇವಿ, ಪ್ರತ್ಯೇಕವಾಗಿ ಇನ್ನೊಂದು ಗುಡಿಯಲ್ಲಿ ನಿಂತಿದ್ದಾಳಂತೆ. ಬಹುಷಃ ಭೃಗು ಮುನಿ ಇಲ್ಲೇ ಬಂದು ತಿಮ್ಮಪ್ಪನಿಗೆ ಒದ್ದಿರುವನೇನೋ ಎಂದು ತಿಳೀಬೇಡಿ, ಇಲ್ಲಿರುವ ಕಾರಣ ಬೇರೇನೇ ಇದೆ. ಎಲ್ಲಾ ದಂಪತಿಗಳಿಗೆ ಇರುವಂತೆ, ಇವರಿಗೂ ಒಂದು ಸಂಶಯವಿದೆಯಂತೆ. ಅಂದರೆ, ನಮ್ಮ ತಿಮ್ಮಪ್ಪನಿಗೆ ಲಕ್ಷ್ಮೀದೇವಿಯ ಜೊತೆಗೆ, ಪಕ್ಕದ ಇನ್ನೊಂದು ಊರಿನ ಪದ್ಮಾವತಿಯೊಂದಿಗೆ ಸ್ನೇಹವಿದೆಯಂತೆ, ಅದಕ್ಕಾಗೇ, ಗುಡ್ಡದ ಕೆಳಗೆ ಒಂದು ಕಲ್ಲಿನ ಮೇಲೆ ವೆಂಕಪ್ಪನ ಪಾದವಿದೆ, ಇನ್ನೊಂದು ಪಾದ ಆ ಪದ್ಮಾವತಿಯ ಮನೆಯಿರುವ ಊರಿನಲ್ಲಿದೆಯಂತೆ. ಅದಕ್ಕಾಗೇ, ತಿಮ್ಮಪ್ಪನ ಗುಡಿಯಲ್ಲಿ ಎಷ್ಟೇ ಜೋರಾಗಿ ಡೋಲು, ಡೊಳ್ಳೂ ಬಾರಿಸಿದರೂ, ಅದು ಪಕ್ಕದಲ್ಲಿಯೇ ಇರುವ ಲಕ್ಷ್ಮಿದೇವಿಯ ಗುಡಿಯೊಳಗೆ ಕೇಳುವುದಿಲ್ಲ.
ಬಿಡಿ, ಊರು ಅಂದ ಮೇಲೆ, ಇದೆಲ್ಲಾ ಇದ್ದಿದ್ದೇ ಅಲ್ಲವೇ. ಈಗ ಜಂಬೂ ಸವಾರಿಗೆ ಬರೋಣ. ಇಂತಹ ಪುಟ್ಟ ಊರಿನಲ್ಲಿ, ಅದೇನು ಜಂಬೂ ಸವಾರಿ ಅಂದುಕೋ ಬ್ಯಾಡರೀ, ನಮ್ಮೂರಾಗ, ಸರ್ಕಾರಿ ಶಾಲೆಯೊಂದಿದೆ. ಬ್ರಿಟಿಷರ ಕಾಲದ್ದಂತೆ, ನೂರಿಪ್ಪತ್ತೈದು ವರ್ಷಗಳಾದುವಂತೆ. ಆ ಶಾಲೆಗೆ ಇರುವ ಸರ್ಕಾರಿ ಶಿಕ್ಷಕರು ಹಾಗೂ ಊರ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿಗಳು, ಇವರೇ ನಮ್ಮೂರಿಗೆ ಸರ್ಕಾರಿ ಅಧಿಕಾರಿಗಳು.
ಒಮ್ಮೆ ಊರಿನಲ್ಲಿಯ, ಒಂಚೂರು ಕಾಲೇಜು ಮೆಟ್ಟಿಲೇರಿದ ಹುಡುಗರೆಲ್ಲಾ ಹಾಗೇ ಮಾತಾಡುತ್ತಿದ್ದಾಗ, ನಾಡಹಬ್ಬದ ಮಾತು ಬಂತು, ಕನ್ನಡ ನಾಡಿನ ಹಮ್ಮೆಯನ್ನು ಸಾರುವ ನಾಡಹಬ್ಬ ದಸರೆಯ ಆಚರಣೆ ವಿಜಯ ನಗರದ ಅರಸರು ಪ್ರಾರಂಭಿಸಿದ್ದು, ಅಲ್ಲಿಯ ಮಹಾನವಮಿ ದಿಬ್ಬದ ಮೇಲೆಯೇ, ಕೃಷ್ಣದೇವರಾಯರು ಆಸ್ಥಾನವನ್ನು ನಡೆಸುತ್ತಿದ್ದರಂತೆ. ಅದರಂತೆ, ಈ ನಾಡ ಹಬ್ಬವನ್ನು ಮೈಸೂರರಸರು ಮುಂದುವರೆಸಿರುವುದು, ನಾಡ ದೇವತೆಯಂದು ಚಾಮುಂಡೇಶ್ವರಿಯನ್ನು ಪೂಜಿಸುವುದು, ಕೊನೆಯ ದಿನ ಪಾಂಡವರಿಂದ ಬಂದ ಸಿಂಹಾಸನವನ್ನು ಪೂಜಿಸುವುದು, ೭೫೦ ಕೆಜಿ ಚಿನ್ನದ ಅಂಬಾರಿಯನ್ನು ಆನೆ ಮೇಲೆ ಕಟ್ಟಿ, ಚಾಮುಂಡೇಶ್ವರಿಯನ್ನು ಕೂಡ್ರಿಸಿದ ಮೆರವಣಿಗೆ. ಬನ್ನಿ ಮಂಟಪದ ಸೀಮೋಲ್ಲಂಘನದ ಮಾತಾಡಿದರು. ಇದೇ ಜಂಬೂಸವಾರಿ ಎಂಬ ಮಾತು ಬಂತು. ಈ ಹುಡುಗರಿಗೂ ಅದರಿಂದ ಏನೋ ಹುಮ್ಮಸ್ಸು ಬಂತು. ನಮ್ಮೂರಿನಲ್ಲಿ ನದೀ ದಂಡೆಯ ವೆಂಕಪ್ಪನ ಗುಡಿಯಲ್ಲಿ, ಊರ ಹೊರಗಿನ ಬನ್ನಿ ಗಿಡದ ಟೊಂಗೆ ಕತ್ತರಿಸಿ ತಂದು, ಬನ್ನಿ ಮುಡಿಯುವ ಕಾರ್ಯಕ್ರಮವನ್ನೇ ದೊಡ್ಡ ಪ್ರಮಾಣದಲ್ಲಿ ಮಾಡಿ, ನಂತರ ಅದನ್ನು ತಿಮ್ಮಪ್ಪನ ಗುಡ್ಡದವರೆಗೆ ಒಯ್ಯುವುದು ಪದ್ಧತಿ. ಅದನ್ನೇ ಜಂಬೂ ಸವಾರಿ ಅಂತ ಆರಾಧಿಸುವ, ಹಬ್ಬದ ಸಂಭ್ರಮವನ್ನು ಹೆಚ್ಚಿಸುವುದು ಎಂದು ಮಾತನಾಡಿಕೊಂಡರು.
ಇದರ ತಯಾರಿಗೆಲ್ಲಾ ತಿಳುವಳಿಕೆಯವರು ಎಂದರೆ, ನಮ್ಮ ಸರ್ಕಾರಿ ಶಾಲೆಯ ಶಿಕ್ಷಕರು ಹಾಗೂ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ಎಂದುಕೊಂಡು, ಅವರಿಗೆ ತಮ್ಮ ಚರ್ಚೆಯ ವಿಷಯವನ್ನೆಲ್ಲಾ ಹೇಳಿದರು, ಅವರಿಬ್ಬರೂ ತುಂಬ ಉತ್ಸಾಹಿಗಳು. ಹೊಸತನದ ತುಡಿತಕ್ಕೆ ಕಾರಣರು. ಆಗ ಸೃಷ್ಟಿಯಾಗಿದ್ದೊಂದು ಹೊಸಾ ಕಾರ್ಯಕ್ರಮ. ಬನ್ನಿ ಮುಡಿಯುವ ಕಾರ್ಯಕ್ರಮವನ್ನೇ ಸೀಮೋಲ್ಲಂಘನ ಎನ್ನುವುದು. ಅದನ್ನೇ ಮೆರವಣಿಗೆಯಲ್ಲಿ ಮಾಡುವುದು, ಅದೇ ಜಂಬೂ ಸವಾರಿ ಎಂಬ ಮೆರವಣಿಗೆ ಎಂಬುದಾಗಿ ಮಾತಾಡಿಕೊಂಡರು. ಬಿಡಿರಿ, ನಮ್ಮೂರೆಂಬೋ ನಮ್ಮೂರು, ದೊಡ್ಡದೊಂದು ಐತಿಹಾಸಿಕ ದಾಖಲೆಗೆ ತಯಾರಾತು. “ಜಂಬೂ ಸವಾರಿ, ಜಂಬೂ ಸವಾರಿ, ನೀವೀಗ ನಮ್ಮೂರಿಗೆ ಬರ್ರಿ”, “ಬನ್ನಿ ಮುಡಿಯೋಣ ಬಾರ, ಕೋಲು ಕೋಲ, ಜಂಬೂ ಸವಾರಿಗೆ ನಮ್ಮ ಕೋಲು ಕೋಲ” “ನಾಡಹಬ್ಬದ ಆಚರಣೆ, ಹೋಳಿಗೆ ಕಡಬು ಸೀಕರಣೆ”, “ಜಂಬೂ ಸವಾರಿಗೆ ನಮ್ಮೂರು, ಬನ್ನಿ ನೀವೆಲ್ಲಾ ಈಗ ನಮ್ಮೋರು” ಅಂತೆಲ್ಲಾ ಮೆರವಣಿಗೆಯೊಳಗೆ ಕೂಗಲಿಕ್ಕೆ ಘೋಷಣೆಗಳನ್ನು ತಯಾರು ಮಾಡಿದರು.
ನದೀ ದಂಡಿ ಮ್ಯಾಲೆ ವೆಂಕಪ್ಪನ ಗುಡಿಗೆ, ಮೂರ್ತಾಚಾರ್ರು, ಸ್ವಂತ ತಾವೇ ನಿಂತು ಧೂಳಾ ಉಡುಗಿ, ಒಳಗೆಲ್ಲಾ ಸುಣ್ಣಾ ಹಚ್ಚಿದ್ರು. ಹೊರಗ ಸುಣ್ಣಾ ಹಚ್ಚಲಿಕ್ಕೆ ಬಂದ ಸಾಬರ ದಾದಾ, ಮ್ಯಾಲ ಹತ್ತಲಿಕ್ಕೆ ಒಂದ ಕಾಲು ತುಳಸೀ ಕಟ್ಟೀ ಮ್ಯಾಲಿಟ್ಟ, ಮೂರ್ತಾಚಾರ್ರು ಸಹಸ್ರ ನಾಮಾವಳಿ ಶುರೂ ಹಚ್ಚಿದ್ರು. “ಏ ಹುಚ್ಚ ಸೋಳೇಮಗನ. ದೇವರ ಮ್ಯಾಲೆ ಕಾಲಿಡತೀಯಲಲೇ, ಹಿಂಗಾದರ ನೀವು ಉದ್ಧಾರಾಗೂದಿಲ್ಲ. ದೇವರಿಲ್ಲ, ದಿಂಡರಿಲ್ಲ.” ಅಂತ. ಅದಕ್ಕ ನಮ್ಮ ಸಾಬಣ್ಣ ಏನೂ ಉತ್ರಾ ಕೊಡಲಿಲ್ಲ ಬಿಡ್ರಿ. ಮೂರ್ತಾಚಾರ್ರು ಶಾಂತಾದ್ರು. ಮುಖ್ಯ ನಮ್ ವೆಂಕಪ್ಪ ತನ್ನ ಗುಡಿಗೆ ಹೊಸದಾಗಿ ಸುಣ್ಣ ಬಣ್ಣ ಕಂಡು ಎಷ್ಟು ವರ್ಷಾಗಿತ್ತೋ ಏನೋ. ಛಂದಂಗ ಸುಣ್ಣಾ ಕೆಮ್ಮಣ್ಣು ಕಂಡ. ಸಂಜೀಮುಂದ, ಖಾದ್ರಿ ದಾದಾ ಯಾರೂ ಹೇಳದ, ಕೇಳದಿದ್ದರೂ, ತಾನೇ ಸ್ವಂತ ಇಚ್ಛಾದಿಂದ, ಲೈಟಿನ ಸರಾ ತಂದು ಹಾಕಿ, ಜಂಬೂ ಸವಾರಿ ಉತ್ಸವದ ಹೊಳಪಿಗೆ ಕಾರಣಾದ. ಆದರೆ, ತಾಯವ್ವನ ಗಂಡ ಮುದಿಯಪ್ಪ ಮಾತ್ರ, ತಾನು ತನ್ನ ಪಂಪ ಸೆಟ್ಟಿಂದ ಕರೆಂಟು ಕೊಟ್ಟೆ, ನನ್ನ ಹೆಸರು ಯಾರೂ ಹೇಳಲಿಲ್ಲ ಅಂತ ಸಿಟ್ಟು ಮಾಡಿಕೊಂಡ.
“ಇದನ್ಯಾರು ಕೇಳಿದ್ದರು, ಸುಳ್ಳ ಸುಳ್ಳೇ ಅರ್ಭಾಟ ಮಾಡತಾವ ಇವು, ದೇವರಿಗೊಂದು ನೈವೇದ್ಯ ದಕ್ಷಿಣಿ ಕೊಡಲಿಕ್ಕೆ ಕೈ ಮುಂದ ಬರೂದಿಲ್ಲ. ಎಲ್ಲಾ ಸೋಳೇ ಮಕ್ಕಳು ಹತ್ತ ಪೈಸಾ ದಕ್ಷಿಣಿ ಕೊಡತಾವ” ಅಂತ ಜೋರಾಗೇ ಬೈದರು ಮೂರ್ತಾಚಾರ್ರು. ಅದನ್ನ ವೆಂಕಪ್ಪನೂ ಕೇಳಿಸಿಕೊಳ್ಳಲಿಲ್ಲ ಬಿಡ್ರಿ. ಮಾನೌಮಿ ದಿನಾ, ಸಂಜೀ ಮುಂದ ಮೆರವಣಿಗೆಯೊಳಗ ಹೋಗಿ, ಬನ್ನಿ ಮಾಂಕಾಳವ್ವನ ಪೂಜಾ ಮಾಡೋಣು ಅಂತ. ಊರಾಗ ಹಿರೇರು ಹೇಳಿದರು. ನಮ್ಮೂರಾಗಿನ ಜನರೆಲ್ಲಾ ಭಾಳ ಒಳ್ಳೇವರು. ಒಳ್ಳೇ ಕೆಲಸಕ್ಕ ದೇವರ ಸಹಾಯ ಮಾಡತಾನಂತ. ನಮ್ಮೂರಿನವರೆಲ್ಲಾರೂ ದೇವರಂತವರೂ….. ಊರಿಗೆ ಊರೇ ಬನ್ನಿ ಮರಕ್ಕ ಪೂಜಾಕ್ಕಂತ ಹೊಂಟರು.
ನಿಮಗ ಗೊರ್ತಿಲ್ಲ, ನಮ್ಮೂರಿನ ಬ್ಯಾಂಡ್ ಸೆಟ್ಟು, ಭಾಳ ಚಂದದ. ಆಗಿನ ಕಾಲದಾಗೇನ, ಎಲ್ಲಾರೂ ಕೆಂಪನೀ ಕೋಟು ಮತ್ತದಕ್ಕ ಬಂಗಾರದ ಬಣ್ಣದ ಎಳಿ ಮುಂದ ಎದ್ದು ಕಾಣೋ ಹಂಗ, ಈ ಸೈನಿಕರೆಲ್ಲಾ ತಮ್ಮ ತೋಳಿನ ಮ್ಯಾಲ ಒಂದು ಸರದಂಗ ಹಾಕ್ಕೊಂಡಿರತಾರಲ್ಲ, ಹಂಗೇನೇ. ಅದಕ್ಕ ಹೊಂದುವ ಬಿಳೇ ಪೈಜಾಮ, ಕೆಂಪಂದು ಟೊಪಗಿ, ಅದಕ್ಕ ಕೋಳಿ ಪುಚ್ಚದ ತುರಾಯಿ ಇರೋದು. ಇಷ್ಟೆಲ್ಲಾ ಹಾಕ್ಕೊಂಡು, ತಾವೇ ಸ್ವಯಂ ಸೇವಕರಂಗ ಬಂದರು. ಯಾರೂ ಅವರಿಗೆ ವಿಳೇ ಕೊಟ್ಟು ಕರದಿಲ್ಲ. ಆದರೂ, ಊರಾಗಿನ ಕಾರ್ಯಕ್ರಮ, ಊರ ಹುಡುಗರು ಎಲ್ಲಾ ಸೇರಿ ಒಳ್ಳೆ ಕೆಲಸಾ ಮಾಡತಾರ ಅಂತ ತಾವೂ ಬಂದರು, ಒಳ್ಳೇ ಕೆಲಸಿದ್ದರೆ ನಾನೇ ಬರತೇನಿ ಅಂತ ಭಗವದ್ಗೀತೆಯೊಳಗ ಕೃಷ್ಣ ಹೇಳ್ಯಾನಲ. ಅದನ್ನೆಲ್ಲಾ ಕುರಿತೋದದೆಯಂ ಕಾವ್ಯ ಪ್ರಯೋಗ ಪರಿಣಿತ ಮತಿಗಳಾದ ನಮ್ಮೂರಿನವರು, ಶಾಲಿಯೊಳಗೆ ಕಲೀದೇನೇ ತಿಳಕೊಂಡಿದ್ದರು. ನಮ್ಮೂರಿನ ಜಂಬೂ ಸವಾರಿ ಯಾವ ಮೈಸೂರಿಗೂ ಕಡಿಮೆ ಇರಲಿಲ್ಲ. ಅಲ್ಲಿನಂಗೇನೇ, ಬ್ಯಾಂಡ ಕೂಡಾ ಅದ.
ಇಷ್ಟೆಲ್ಲಾ ಆದ ಮ್ಯಾಲ, ಫಕ್ಕೀರಪ್ಪ ತಮ್ಮ ಮನೀಯೊಳಗಿನ ಎರಡು ಗ್ಯಾಸ್ ಲೈಟ್ ತಂದೇ ಬಿಟ್ಟ, ರಸ್ತೆಯ ಎರಡೂ ತುದಿಗೆ ಕೈಯಾಗ ಅವನ್ನ ಹಿಡಕೊಂಡು ಹೊಂಟರ, ನಮ್ಮೂರಿನ ಜಂಬೂ ಸವಾರಿ, ಮೈಸೂರಿನ ಪಂಜಿನ ಮೆರವಣಿಗೆ ಹಂಗ ಕಾಣತಿತ್ತು. ಊರಾಗಿನ ಮುತ್ತೈದೇರು, ಪೂರ್ಣ ಕುಂಭ ಹೊತಗೊಂಡು ಬಂದರು, ತಮ್ಮ ಹಸರು ಟೋಪ ಸೆರಗಿನ ಸೀರಿ ಉಟಗೊಂಡು. ಐದೂ ಮಂದಿ ಒಂದೇ ಬಣ್ಣದ ಸೀರಿ, ನೋಡಲಿಕ್ಕೆ ಛಂದಿತ್ತು. ಆದರ, ಇದನ್ನ ಬಿಟ್ಟರ, ಇನ್ನೊಂದು ಛೊಲೋ ಸೀರಿ ಅವರ ಹತ್ರ ಇರಲಿಲ್ಲ ಅನ್ನೋದು ಅವರಿಗೇನೂ ಕೊರತೇನೇ ಅನಸಲಿಲ್ಲ, ಈ ಸಂಭ್ರಮದೊಳಗೆ. ಹಂಗಿತ್ತು ನಮ್ಮೂರಿನ ಜನರ ಸ್ವಭಾವ. ಅದಕ್ಕಂತನ “ನಮ್ಮೂರೆಂದರ ನಮಗ ಪಾಡ, ಯಾತಕವ್ವಾ ಬ್ಯಾರೆ ಊರು ನಮಗ ಬ್ಯಾಡ”. ತುತ್ತು ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ, ತುಂಡು ಬಟ್ಟೆ ಸಾಕು ನಮ್ಮ ಮಾನಾ ಮುಚ್ಚೋಕೆ, ಅಂಗೈಯಗಲ ಜಾಗಾ ಸಾಕು ಹಾಯಾಗಿರೋಕೆ. ಅಂತಾರೆ ನಮ್ಮೂರಿನವರು.
ಪೂರ್ಣ ಕುಂಭ, ಕಲಶ ಹಿಡದುಕೊಂಡ ಸುವಾಸಿನಿಯರು ಮುಂದ ನಿಂತಿದ್ದರು. ಅವರಿಗೆ ಬೆಳಕು ನೀಡಲಿಕ್ಕೆ ಆಜೂ ಬಾಜೂ ಎರಡೂ ಕಡೆ ಗ್ಯಾಸ ಲೈಟು, ಮುಂದ ಮಂಗಳವಾದ್ಯ ನುಡಿಸುವ ಬ್ಯಾಂಡ್ ಸೆಟ್ಟು. ಇಷ್ಟಾದಾಗ, ಹೊಸದಾಗಿ ಮದುವೆಯಾಗಿ, ಹೊಸಾ ಹೆಂಡತಿ ಕರಕೊಂಡು ಬಂದ, ಊರಾಗಿನ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು, ಎಲ್ಲಾ ಕಾರ್ಯಕ್ಕೂ ಉತ್ಸಾಹದಿಂದ ಕೈ ಜೋಡಿಸಿದ್ದರು. ಸಾಲಿ ಮಾಸ್ತರಂತೂ ತಮ್ಮದೇ ಮನೀ ಕೆಲಸ ಅಂತ, ಲಗ್ಗನ ಮನಿ ಪುರೋಹಿತರಂಗ, ಹಿಂದ ಮುಂದ ಓಡ್ಯಾಡಿಕೋತ, ಎಲ್ಲಾ ಜವಾಬ್ದಾರಿ ತಾವ ತೊಂಗೊಂಡಿದ್ದರು. ಹೊಸಾ ದಂಪತಿಗಳನ್ನ ನಡುವೆ ನಿಲ್ಲಿಸಿ, ಮೆರವಣಿಗೆ ಕರಕೊಂಡು ಹೋಗಿ, ಅವರಿಂದನ ಬನ್ನಿ ಮಾಂಕಾಳಿ ಪೂಜಾ ಮಾಡಿಸೋಣ ಅಂತ ಯಾರೋ ಹೇಳಿದರು, ಈ ಎಲ್ಲಾ ಅಲ್ಲೇ ಡ್ರಾ, ಅಲ್ಲೇ ಬಹುಮಾನ ಅಂತ, ಅಲ್ಲಲ್ಲೇ ನಿರ್ಧಾರಾಗಿದ್ದಲ್ಲ. ಹಂಗೇ ಇದು.
ನಮ್ಮ ಕಾರ್ಯದರ್ಶಿಗಳ ಹೆಂಡತಿಯೇನೋ, ತನ್ನ ಲಗ್ನದ್ದ ರೇಶಿಮಿ ಸೀರಿ ಉಟಗೊಂಡು ಚಂದಂಗ ಪಿನ್ ಮಾಡಿಕೊಂಡಿದ್ದು, ಮ್ಯಾಲ ಗೊರಟಗಿ ಹೂ ಮುಡಕೊಂಡು, ಫಾವುಡರ್ ಹಚಿಕೊಂಡು ನಿಂತಿದ್ದಳು. ಕಾರ್ಯದರ್ಶಿಗಳು ಪಾಪ, ಹಳೇ ಪ್ಯಾಂಟು ಹಕ್ಕೊಂಡಿದ್ದರು. ಮೆರವಣಿಗೆ ಅಂದರ ಹಂಗ ಬರಲಿಕ್ಕೆ ಆಗೂದಿಲ್ಲ ಅಂತ, ಓಡಿ ಹೋಗಿ, ಹೊಸಾ ಪ್ಯಾಂಟು ಹಕ್ಕೋಳಿಕ್ಕೆ ನೋಡಿದರು. ತಾವೇ ಮುಂಜಾನೆ ಒಗದು ಹಾಕಿದ್ರು. ವಿಜಯದಶಮಿ ದಿನ ಬನ್ನಿ ಕೊಡಲಿಕ್ಕೆ ಇಸ್ತ್ರಿ ಮಾಡೋಣು ಅಂತ. ಈಗೇನು ಮಾಡೋದು. ಅವರಿಗೆ ಕೂಡಲೇ ನೆನಪಾತು. ಹೆಂಡತಿ ಲಗ್ಗನದ ರೇಶಿಮಿ ಸೀರೀ ಉಟಗೊಂಡಾಳ. ನಾನೂ ಈ ರೇಶಿಮೆ ಪಂಚೆ ಉಟಗೊಂಡರ, ಇಬ್ಬರಿಗೂ ಸರಿಯಾಗತದ ಅಂತ, ತಮ್ಮ ಮದುವಿಯ ರೇಶಿಮೆಯ ಪಂಚೆಯನ್ನ ತಗದರು. ಬಿಳೇ ರೇಶಿಮಿ ಶರಟು ಹಕ್ಕೊಂಡು ತಯಾರಾದರು. ನೋಡಿದವರೆಲ್ಲಾ, ಯಾವೂರಂವಾ ಇಂವಾ ಯಾವೂರಂವಾ ಅಂತ ಹಾಡೂ ಹಂಗ.
ಅವಸರ ಅವಸರದಿಂದ ಓಡಿಕೋತ ಬಂದರು. ನಮ್ಮ ಜಿನ್ನಪ್ಪ, ಈ ರೇಶಿಮೆ ಪಂಚೆ ರೇಶಿಮೆ ಶರಟಿನ್ಯಾಗ ಬಂದ ಹೊಸಾ ಮದುಮಗನ್ನ ನೋಡಿದವನ, ತನ್ನ ಸಂದೂಕಾ ತಗದು, ಅವರಪ್ಪನ ರೇಶಿಮೆ ಕೆಂಪ ರುಂಬಾಲು ತೊಗೊಂಡರು. ನಮ್ಮ ಕಾರ್ಯದರ್ಶಿಗಳನ್ನ ಕರೆದು ಅವರ ತಲೀಗೆ ಚಂದಂಗ ರುಂಬಾಲು ಸುತ್ತಿದರು. ಪಟಗಾ ಸುತಿಗೊಂಡ ಹುಡಗನ್ನ ನೋಡಿ, ಅವರ ಹೆಂಡತಿ, ಕಣ್ಣಾಗ ನಾಚಿಕೊಂಡಳು. ಇವರು ಮಾತ್ರ ತಲೀ ಮ್ಯಾಲ ಸುತ್ತಿದ ಪಟಗಾದಾಗ ತಗಣಿ ತುಂಬಿರಬೇಕು, ತಲೀ ಕೆರಕೋಳೋದು ಹೆಂಗ ಅಂತ ಒದ್ದಾಡಿ. ಹಂಗ ಹಿಂಗ ಹೊಳ್ಳಿಕೋತ ತಡಕೋಳಿಕ್ಕತ್ತಿದ್ದರು. ಆಗ, ಉಟಗೊಂಡಿದ್ದ ಪಂಚೆ ಒಂಚೂರು ಸಡಲಾತು ಅನಸತದ. ಅಷ್ಟೊತ್ತಿಗೆ ಬನ್ನಿ ಮಾಂಕಾಳವ್ವನ ಹೊಲದ ಹತ್ತರನ ಬಂದಿದ್ದರು.
ಬ್ಯಾಂಡ ಸೆಟ್ಟಿನವರು, “ಸ್ವಾಮಿ ದೇವನೆ ಲೋಕ ಪಾಲನೆ ತೇನಮೋಸ್ತು ನಮೋಸ್ತುತೇ” ಅಂತ ನುಡಿಸತಿದ್ದರು. ಬನ್ನಿ ಮುಡಿಯುವ ಆಯುಧವನ್ನು ಹಿಡಿದ ಕಾರ್ಯದರ್ಶಿಗಳ ಪಂಚೆ ಮಾತ್ರ ತುಸುವೇ ಹೊರಳಾಡಿ, ಸೊಂಟದ ಮೇಲೆ ತಣ್ಣಗೆ ಹರಿದಾಡಿದ ಹಾವಿನಂತೆ ಎಚ್ಚರಿಸಿತು. ನಮ್ಮ ಕಾರ್ಯದರ್ಶಿಗಳೇನೂ ದಿನಾ ಪಂಚೆ ಉಡೋವರೇನು, ಹೆಂಗೋ ಒಂದು ಬ್ಯಾಲನ್ಸ ಮಾಡಲಿಕ್ಕೆ. ಪಂಚೆ ಅಂದರೇನೇ ಕೈ ಮುಗಿಯೋವರು. ಥಣ್ಣಗ ಬೆಲ್ಟ ಕಟಿಗೊಂಡ ಪ್ಯಾಂಟ್ ಬಿಟಗೊಂಡು ಇದೇನು ಕಟಿಗೊಂಡೆ ನಾನು ಅಂದರು. ಸ್ವಾಮಿ ದೇವನೇ ಹೋಗಿ, “ಪಂಚೆ ದೇವನೆ ಮಾನ ಪಾಲನೆ ತೇನಮೋಸ್ತು ನಮೋಸ್ತುತೇ” ಅಂದರು. ಹಾವಿನಂಗ ಸರದಾಡುವ ಪಂಚೆ ಕಟ್ಟಲಿಕ್ಕೆ ಇವರೇನು ಗಣಪ್ಪನೇ, ಹಾವೇ ಬೆಲ್ಟು ಅನಲಿಕ್ಕೆ.
“ಪಂಚೆ ಸೀರೆಯಲಿ ನವದಂಪತಿಗಳ ಸವಾರಿ, ದಸರಾ ಹಬ್ಬದಿ ಹಿಂದೆ ಬಂದಿದೆ ಜಂಬೂ ಸವಾರಿ”, ಪಂಚೆ ಜಾರಿತಿರಬೇಕು, ಪತಿರಾಯ ಹಲ್ಲು ಬೀರಿ, ಅರ್ಥವಾಯಿತೇನೋ, ನಕ್ಕಳು, ಸುಮ್ಮನೇ ಕೆಂಗಣ್ಣು ಬೀರಿ”. ಎಂಬ ತನ್ನದೇ ಚುಟುಕನ್ನು ನೆನೆಸಿಕೊಂಡು ತಾನೇ ಬಗ್ಗಿದರು, ಕಾರ್ಯದರ್ಶಿಗಳು, ಬನ್ನಿ ಮಾಂಕಾಳಿಯ ಪೂಜಿಸಲು. ಪಂಚೆಗದು ಹೇಳಿ ಮಾಡಿಸಿದ ಅವಕಾಶ. ಹೊಟ್ಟೆಯಿಂದ ಕೆಳಗೆ ಜಾರಿಯೇ ಬಿಟ್ಟಿತು. ಅದೇ ಸಮಯಕ್ಕೇ, ಶಾಲಾ ಶಿಕ್ಷಕರು, ಕಾರ್ಯದರ್ಶಿಗಳಿಗೆ ಏನೋ ಹೇಳಲು ಮುಂದೆ ಬಂದರು. ಅರಿಯದೇ ಹಿಂದಿನಿಂದ ಬಂದವರು, ಜಾರುತಿರುವ ಪಂಚೆ ಮೇಲೆಯೇ ಕಾಲಿಟ್ಟು ಬಿಟ್ಟರು. ನಡೆದಿದ್ದು ಇಷ್ಟೇ.
ಪಂಚೆ, ಹಿಂದ ಮುಂದ ಆಧಾರ ನಿಲ್ಲದೇ ಜಾರಿ ಬಿಟ್ಟಿತು, ನಮ್ಮ ಕಾರ್ಯದರ್ಶಿಗಳು, ಹೇ ಹೇ ಅಂದವರೇ, ಮ್ಯಾಲೆದ್ದು ಬಿಟ್ಟರು, ಬನ್ನಿ ಮಾಂಕಾಳವ್ವನ ಪೂಜೆಗೆ ಕೈಯಲ್ಲಿ ಹಿಡಿದ ಆಯುಧವಿತ್ತು. ಹಿಂದಿನಿಂದ ಬಂದ ಶಿಕ್ಷಕರ ಕತ್ತಿನ ಬಳಿ ಬಂದಿತ್ತಷ್ಟೇ. ಯಾರೋ ಇಬ್ಬರು ಮುಂದೆ ಬಂದರು. ಇಬ್ಬರನ್ನೂ ಜನರ ಸಂದಣಿಯಿಂದ ಎಳೆದು ಹೊರಗೆ ತಂದರು. ಏನೂ ಅರಿಯದ ಕಾರ್ಯದರ್ಶಿಗಳ ಹೆಂಡತಿಯೂ ಅವರ ಹಿಂದೆಯೇ ಬಂದರು. ಇನ್ನೊಬ್ಬರು, ಮುಹೂರ್ತಕ್ಕೆ ಸರಿಯಾಗಿ, ಯಾರೋ ಬನ್ನಿ ಮುಡಿದು, ವೆಂಕಪ್ಪನ ಗುಡಿಗೆ ಎಲ್ಲರನ್ನೂ ಮೆರವಣಿಗೆಯಲ್ಲಿ ಕರೆದೊಯ್ದರು. ಮಾಮೂಲಿನಂಗೇ ಹಬ್ಬ ಆಯಿತು. ಆದರೂ, ಏನೂ ಅರಿಯದ ಜನರಿಗೂ, ಏನೋ ತಳಮಳ. ಗೊಂದಲ, ಖುಷಿಯಿಂದ ಹಬ್ಬ ಮಾಡಲಿಕ್ಕೆ ಆಗಲಿಲ್ಲ. ದುಡ್ಡಿಲ್ಲ, ದುಗ್ಗಾಣಿಲ್ಲಾಂದರೂ, ಊರಾಗಿನವರೆಲ್ಲಾ ಸೇರಿ, ಬನ್ನಿ ಕೊಟ್ಟು ಬಂಗಾರದಂಗಿರೋಣ ಅಂತ ಹಾರೈಸುವ ಮನಸ್ಸಿನವರು. ಈ ಸಡಗರ, ಸಂಭ್ರಮವನ್ನು ಕಣ್ತುಂಬೋ ಮೊದಲೇನೇ ಘಾಬರಿ ಆಗಿದ್ದರು.
ಹಬ್ಬಾ, ಮರುದಿನ ಬನ್ನಿ ಕೊಡುವ ಮೊದಲಿನ ಉತ್ಸಾಹ ಇಲ್ಲ. ಯಾರ ಮನ್ಯಾಗೂ ಹೂರಣದ ಉಬ್ಬಿನ ಸಡಗರ ಇಲ್ಲ. ಬೆಲ್ಲಾ ಏಲಕ್ಕಿಯ ಘಮಘಮದ ಕಡೆಗೆ ಗಮನವಿಲ್ಲ. ಒಬ್ಬರು ಅಂತಾರ. “ಆ ಕಾರ್ಯದರ್ಶಿಗಳಿಗೆ, ಶಿಕ್ಷಕರನ್ನು ಮುಂದೆ ತರೋದು ಇಷ್ಟ ಇರಲಿಲ್ಲ. ಅದಕ್ಕೇ ಬನ್ನಿ ಪೂಜಾದ್ದ ನೆವಾ ಮಾಡಿ, ಕೊಲ್ಲಲಿಕ್ಕೆ ಬಂದಿದ್ದರು, ನಮ್ಮ ಮಾಂಕಾಳವ್ವ ಸತ್ಯುಳ್ಳ ದೇವರು. ಕಾಪಾಡಿದಳು” ಅಂತ. ಇನ್ನೊಬ್ಬರಂದರು, “ಆ ಶಿಕ್ಷಕನದೇ ತಪ್ಪು, ಅವನೇ, ಕಾರ್ಯದರ್ಶಿಗಳಿಗೆ ಅವಮಾನ ಮಾಡಲಿಕ್ಕಂತನೇ, ಬೇಕಂತಲೇ ಅವರ ಪಂಚೆ ಬಿಡಿಸಿ ಎಳೆದ.” ಅಂತ. “ಅಲ್ಲ, ಅವರ ಹೆಂಡತಿ ಮೈಮೇಲೆ ಕೈ ಹಾಕಿದನಂತ” ಹೀಂಗೆ ಕತೆ ಮೂಲದಲ್ಲಿ ಫುಲ್ ಪಾಯಿಂಟ್ ಇಟ್ಟರೂನು, ಜನರು ತಮ್ಮ ಬಾಯಿಗೆ ಇಡಲಿಲ್ಲ.
ಒಟ್ಟಿನೊಳಗೆ, ಮೊದಲ ಹೆಜ್ಜೆಯ ಜಂಬೂ ಸವಾರಿ, ಅನೆ ಮೇಲೆ ಅಂಬಾರಿಯಾಗಲಿಲ್ಲ. ತಪ್ಪಿಲ್ಲದೇ, ಏನು ತಪ್ಪಾಯ್ತು ಅಂತ ತಿಳೀದೇನೇ, ತಪ್ಪಿತಸ್ಥರಾದವರು ಶಿಕ್ಷಕರು ಮತ್ತು ಕಾರ್ಯದರ್ಶಿಗಳು. ಅವರಿಬ್ಬರಿಗೂ ಮಾತಾಡಲಿಕ್ಕೇ ಬಿಡದ ಊರಿನವರು, ತಾವೇ ಅವರ ಮಧ್ಯ ಹುಲ್ಲು ಹಾಸಿ, ಕಿಡಿ ಹೊತ್ತಿಸಿ, ಬೆಂಕಿ ಮೂಡಿಸಿದರೇನೋ. ಒಟ್ಟಿನಲ್ಲಿ ನಮ್ಮೂರಿನಲ್ಲಿ ಇಂದಿಗೂ ಶಿಕ್ಷಕರು ಮತ್ತು ಕಾರ್ಯದರ್ಶಿಗಳು, ಬೇರೆ ಬೇರೆಯವರು ಬಂದರೂ ಸಹ, ಒಟ್ಟಾಗಿ ಸಭೆಯಲ್ಲಿ ಭಾಗವಹಿಸುವುದಿಲ್ಲ. ಒಬ್ಬರಿಗೊಬ್ಬರು ಮುಖತಃ ಮಾತಾಡುವುದಿಲ್ಲ. ಜಂಬೂ ಸವಾರಿಯೂ ಮುಂದೆಂದೂ ನಡೆದಿಲ್ಲ. ತಿಮ್ಮಪ್ಪನಂತೂ ತನ್ನ ಹೆಂಡತಿಯನ್ನ ಸಮಾಧಾನಿಸುತ್ತಾ ಇರುವುದರಲ್ಲೇ ಹಗಲೂ ರಾತ್ರಿ ಸಾಲದು ಅಂತ ಸುಮ್ಮನಿದ್ದಾನೆ. ವರದವ್ವನೂ ಶಾಂತಾಗೇ ಹರೀತಾಳ. ಆಗಾಗ ವೆಂಕಪ್ಪ, ರಿಂದವ್ವನ ಗುಡಿಯೊಳಗೆ ನಿಂತು, ಹಳೇದನ್ನೆಲ್ಲಾ ನೆನಪಿಸಿಕೊಳ್ಳತಾನ.
ಒಂದು ಸುಂದರ ಆಚರಣೆಯಾಗಬಹುದಿದ್ದ ಕಾರ್ಯಕ್ರಮಕ್ಕೆ ಯಾಕೆ ಓಂ ಬರಲಿಲ್ಲವೋ ತಿಳೀಲಿಲ್ಲ. ರಕ್ತಪಾತವಿಲ್ಲದೇ ಸೀಮೋಲ್ಲಂಘನ ಮುಗೀತು. ಅದೇ ಸಮಾಧಾನ. ಒಟ್ಟಿನಲ್ಲಿ, ಮೈಸೂರಿನ ಜಂಬೂ ಸವಾರಿ, ಕವಾಯಿತು, ಪಂಜಿನ ಮೆರವಣಿಗೆ, ಏಕಮೇವಾದ್ವಿತೀಯವಾಗಲಿಕ್ಕೆ, ನಮ್ಮೂರು ಐತಿಹಾಸಿಕ ದಾಖಲೆಯಾಗಿದ್ದು ಸಾಕ್ಷಿ, ಅದಕ್ಕೆ ನಾವೆಲ್ಲರೂ ತಲೆದೂಗುತ್ತೇವೆ, ನಿಮ್ಮನ್ನೂ ಸೇರಿಸಿ, ಅಷ್ಟೇ.
-ಡಾ.ವೃಂದಾ ಸಂಗಮ್
