“ಫಾದರ್, ನಾನು ಪಾಪಿ. ನನ್ನನ್ನು ಆಶೀರ್ವದಿಸಿ. ನಾನು, ನನ್ನ ಮೋಬೈಲ್ನಾಗ ನನ್ನ ಕ್ಲಾಸಿನಲ್ಲಿರೂ ಒಂದು ಹುಡುಗಿಯ ಫೋಟೋ ತಗದು ತಪ್ಪು ಮಾಡೀನಿ. ಅದು ನನಗ ಗೊತ್ತಿಲ್ಲದ ಕುರೂಪ ಪಡದ ವೈರಲ್ ಆಗೂದರಾಗ ಅದ.”
ವಿಶ್ವಾಸಿಕರೊಬ್ಬರ ಪಾಪ ನಿವೇದನೆಯ ನಡಾವಳಿ ಶುರು ಆಗಿತ್ತು.
ಅಷ್ಟರಲ್ಲಿ, ಪಾಪಸಂಕೀರ್ತನದ ಗೂಡಿನ ತಡಿಕೆಯ ಮರೆಯಲ್ಲಿ ಕುರ್ಚಿಯಲ್ಲಿದ್ದ ಕಿರಿಯ ಫಾದರ್ ಗೆ, ಶಿಲುಬೆ ಗುರುತು ಹಾಕುವಾಗಲೇ ಧ್ವನಿಯ ಆಧಾರದಲ್ಲಿ, ಆ ಬದಿಗೆ ಜಾಲರಿಯ ಪರದೆಯ ಆಚೆ ಮೊಣಕಾಲೂರಿ ಕುಳಿತವರ ಪರಿಚಯ ಹತ್ತಿತ್ತು.
“ಯಾರದು? ಏಳನೇ ಕ್ಲಾಸಿನ ಸಿರಿಲ್ ಸುಳ್ಳದ ಅಲ್ಲಾ?”
`”ಹೌದು ಫಾದರ್. ನಾನು ಸಿರಿಲ್.’’
“ಹೂಂ, ಗೊತ್ತಾಯಿತು.’’
“ನಾನು, ಇಂದ ತಪ್ಪ ಮಾಡೀನಿ ಫಾದರ್. ನನ್ನ ಮೊಬೈಲ್‌ನ್ಯಾಗ, ನಮ್ಮ ಕ್ಲಾಸಿನ ಹುಡುಗಿ ಫೋಟೊ ತಗದೀನಿ.’’
“ಸರಿ ಸಿರಿಲ್, ಯಾವುದಪ್ಪಾ ಹುಡುಗಿ? ರಾಚೇಲ್ ಏನ್?”
“ನಾನು ಹೇಳೋದಿಲ್ಲ ಫಾದರ್, ಅವಳ ಹೆಸರು ಹೇಳೂದು ಸರಿಯಲ್ಲ.”
“ಸರಿ, ಜಾಣ ನೀನು, ಅವಳು ನಿತ್ಯಾರಾಣಿ ಅಲ್ಲವಾ?’’
“ನಾನು, ಹೇಳೋದಿಲ್ಲ ಫಾದರ್?’’
“ಹಂಗಾರ, ಮರಿಯವ್ವ ಏನ್?’’
“ಫಾದರ್, ನೀವು ನನ್ನ ಬಾಯಿ ಬಿಡಿಸಾಕ ಆಗೂದಿಲ್ಲ.’’
“ಇವರ‍್ಯಾರೂ ಅಲ್ಲ ಅಂದ್ರ ಮೀನಾ ಅದ.. ಫಿಲೋಮಿನಾ ಇರಬೇಕು.’’
“ಫಾದರ್, ಪ್ಲೀಜ್ ನಾನು ಏನೂ ಹೇಳೂದಿಲ್ಲ..’’
“ನೀನು ತುಟಿ ಬಿಚ್ಚವಲ್ಲಿ. ಅದು ಒಳ್ಳೇದ. ನಿನ್ನ ನಡತಿ ನನಗ ಮೆಚ್ಚುಗೆ ಆಯಿತು. ನೀನು ಪಾಪ ಮಾಡೀದಿ. ಅದೇನ ದೊಡ್ಡ ತಪ್ಪಲ್ಲ. ತಪ್ಪಲ್ಲಿ ದೊಡ್ಡದು ಸಣ್ಣದು ಇರೂದಿಲ್ಲ. ಅದಕ್ಕ ಪಶ್ಚಾತ್ತಾಪ ಪಟ್ಟಿದ್ದೀಯ. ಅದು, ನಿನ್ನ ಒಳ್ಳೆಯ ಗುಣ. ಮುಂದ ಹಂಗ ಮಾಡಬ್ಯಾಡ. ದೇವದೂತರು ಕಾಯ್ತಾರ. ಪ್ರಾಯಶ್ಚಿತ್ತ ಮಾಡಲೇಬೇಕಲ್ಲ. ಇಂದಿನಿಂದ ನಾಲ್ಕು ವಾರ ನೀನು ಪೀಠಬಾಲಕ ಕೆಲಸ ಮಾಡೂದು ಬ್ಯಾಡ. ಎರಡು ಮಂಗಳವಾರ್ತೆ ಪ್ರಾರ್ಥನೆ ಹೇಳು, ಸಾಕು.’’
ಇಷ್ಟು ಹೇಳಿ, ಆಶೀರ್ವದಿಸಿದ ಕಿರಿಯ ಗುರುಗಳು ತಮ್ಮ ಪಾಲಿನ ಕ್ಷಮಾಪಣೆಯ ವಿಧಿ ಪೂರೈಸಿದ್ದರು.
ಪಾಪನಿವೇದನೆಯನ್ನ ಕೇಳಿ, ಪಶ್ಚಾತ್ತಾಪ ವಿಧಿ ನಡೆಸಿಕೊಡುವ ಗುರುಗಳನ್ನ ಮತ್ತ ವಿಶ್ವಾಸಿಕರನ್ನು ಪ್ರತ್ಯೇಕವಾಗಿಸುವ ಪಾಪ ಸಂಕೀರ್ತನ ಗೂಡಿನ ತಡಿಕೆಯ ಪಡದೆಯ ಜಾಲರಿಯ ಆ ಕಡೆ ಮಣಿ ಮ್ಯಾಲ ಮೊಣಕಾಲಲ್ಲಿ ಕೂತಿದ್ದ ಸಿರಿಲ್ ಸುಳ್ಳದ, ಎದ್ದ ಬಂದ ಪೀಠ ಬಾಲಕರ ಗುಂಪಿಗೆ ಸೇರಿಕೊಂಡ. ಅಲ್ಲಿ ಮೊಣಕಾಲೂರಿ, ಎರಡು ಮಂಗಳವಾರ್ತೆ ಹೇಳಿದ. ಪ್ರಾಯಶ್ಚಿತ್ತಪಟ್ಟು, ಪ್ರಭು ಯೇಸುಸ್ವಾಮಿ ಕ್ಷಮೆ ಕೇಳಿ, ʻಇನ್ನೆಂದೂ ಅಂಥ ತಪ್ಪು ಮಾಡುವುದಿಲ್ಲʼ ಎನ್ನುತ್ತಾ, ಶಿಲುಬಿ ಗುರುತ ಹಾಕಿ ಎದ್ದ ಹುಡಗರ ಜೋಡಿ ಕೂತಗೊಂಡ.
``ಏನಪ್ಪಾ, ಫಾದರ್ ಏನು ಹೇಳಿದರು?’’ ಅಕ್ಕಪಕ್ಕದಲ್ಲಿದ್ದ ಹುಡುಗರು ಪಿಸುಮಾತಿನಲ್ಲಿ ಕುಚೇಷ್ಟೆಯಿಂದ ವಿಚಾರಿಸಿದರು.
“ನಾಲ್ಕು ವಾರ ನಾನು ಪೀಠ ಬಾಲಕ ಆಗೂ ಹಂಗಿಲ್ಲ. ನೀ ಈಗ ಸುಮ್ಮಕಿರು. ಮುಂದ ದುಕಾನದ ಮರಿಯವ್ವಳ ಜೋಡಿ ಮದವಿ ಮಾಡಸ್ತೀನಿ ಬಿಡು ಅಂದ್ರು.’’ ಸಿರಿಲ್ ಗಂಟು ಮುಖದಾಗ ಉತ್ತರಿಸಿದ. ಅದರಾಗ ಒಂದು ಖರೆ ಇದ್ದರ, ಮೊತ್ತೊಂದ ಸುಳ್ಳಿತ್ತು.
ಹುಡುಗು ಬುದ್ಧಿ ಸಿರಿಲ್, ಗೌಪ್ಯವಾಗಿ ಇರಿಸಬೇಕಾದ ಪಾಪ ಸಂಕೀರ್ತನೆಯ ಸಂದರ್ಭದಲ್ಲಿ ನಡೆದ ವಿವರಗಳನ್ನು ಗೆಳೆಯರೊಂದಿಗೆ ಎಗ್ಗಿಲ್ಲದೇ ಹಂಚಿಕೊಂಡ. ಕಿಡಿಗೇಡಿ ಹುಡುಗರು ಏನೂ ಕಮ್ಮಿ ಇರಲಿಲ್ಲ, ಅವನ್ನ ಕಾಡಸೂದರಾಗ. ಕಳ್ಳನ ಮನಸ್ಸ ಹುಳ್ಳಗ ಅನ್ನಾವರಂಗ ಕಿಡಿಗೇಡಿ ಹುಡುಗರು, ಅಂವಾ ಬರೂ ಮೊದಲ ಮೊಬೈಲಿನಲ್ಲಿ ಇದ್ದ ಮರಿಯವ್ವಳ ಫೋಟೊ ʻಡಿಲಿಟ್ ಆಲ್ʼ ಮಾಡಿದ್ದರು.
ಏಳನೇ ತರಗತಿಯ ಸಿರಿಲ್ ಸುಳ್ಳದ ತನ್ನ ಓಣಿಯ ಸಹಪಾಠಿಗಳೊಂದಿಗೆ ಅಂದು ಸಾಲಿಗೆ ಬಂದಿದ್ದ. ಅವನಿಗೆ ಜ್ಞಾನಸ್ನಾನದ ಎರಡು ಹೆಸರುಗಳಿದ್ದವು. ಒಂದು ಸಿರಿಲ್ ಮೊತ್ತೊಂದು ಅನ್ನಪ್ಪ. ಮನೆಯಲ್ಲಿ ಅನ್ನಪ್ಪ ಅಂತ ಕರದರ, ಸಾಲ್ಯಾಗ ಅವನನ್ನ ಸಿರಿಲ್ ಅಂತ್ಲೆ ಕರಿತ್ತಿದ್ದರು. ಸುಳ್ಳದ ಅನ್ನುವುದು ಅವರ ಮನೆತನದ ಹೆಸರು, ಅಡ್ಡಹೆಸರು.
ಅವು ಕರೋನಾ ದಿನಗಳು. ದಿನವೂ, ಆನ್‌ಲೈನ್ ಕ್ಲಾಸ್‌ಗಳನ್ನ ಕೇಳಲಿ, ನೋಡಲಿ, ಟೀಚರಮ್ಮಂದಿರ ಜೋಡಿ ಮಾತುಕತಿ ನಡಸಲಿಕ್ಕೆ ಅನುವಾಗಲಂತ ಅವ್ವ ಕೊಟ್ಟಿರತ್ತಿದ್ದ ಮೊಬೈಲ್ ಅನ್ನ, ಅಂದ ಕಿಸ್ಯಾಗ ಇಟ್ಟುಕೊಂಡ ಸಾಲಿಗೆ ತಂದಿದ್ದ. ಆಗ, ಈ ಎಡವಟ್ಟು ಸಂಭವಿಸಿತ್ತು.
ಸಿರಿಲ್ಲನ ಕೈಯಾಗಿನ ಹೊಸಾ ಮೊಬೈಲ್ ನೋಡಿ, ಅವನಿಗೆ ಕಾಡಸೂನು ಅಂತ ಸಹಪಾಠಿ ಕಿಡಿಗೇಡಿ ಹುಡುಗರು ಒಂದ ಬ್ಯಾಟಾ ಮಾಡಿದ್ದರು, ಅವನ ಮೋಬೈಲ್ ನಿಂದ ದುಕಾನದ ಮರಿಯವ್ವಳ ಪೋಟೊ ತಗದಿದ್ದರು. ಆಪ್ ಬಳಸಿ ಅದನ್ನ ಅಂದಗೆಡಿಸಿದ್ದರು. ಅವರ ಕ್ಲಾಸಿನ್ಯಾಗ ಮುಂದ ಕೂಡತಿದ್ದ ಚೆಲುವೆ ಮರಿಯವ್ವ ತನ್ನ ಬಿಳಿ ಮೈಬಣ್ಣದ ದಸಿಂದ ಎಲ್ಲಾರ ಕಣ್ಣಿಗೂ ಎದ್ದ ಕಾಣಸತ್ತಿದ್ದಳು.
ಆನ್ ಲೈನ್ ತರಗತಿ ಮುಗಿದಿದ್ದವು. ಆಫ್ ಲೈನ್ ಕ್ಲಾಸ್‌ಗಳು ಶುರು ಆಗಿದ್ದವು. ಅದು, ಆ ಊರಿನ ಪ್ರತಿಷ್ಠಿತ ಶಾಲೆ. ಅದರಲ್ಲಿ ಶನಿವಾರ ನೈತಿಕ ವಿಷಯದ ಪಾಠದ ಸಮಯದಲ್ಲಿ ಹುಡುಗರನ್ನು ಕೂಡಿಸಿಕೊಂಡು ಪುರಾಣ, ರಾಮಾಯಣ, ಮಹಾಭಾರತದ ಕತೆಗಳನ್ನ ಹೇಳಲಾಗುತ್ತಿತ್ತು. ಉಳಿದಂತೆ ಕ್ರೆöÊಸ್ತ ಮಕ್ಕಳಿಗೆ ಧರ್ಮೋಪದೇಶ ತರಗತಿಗಳು ನಡಿತಿದ್ದವು.
ಅದರಲ್ಲೊಂದಿಷ್ಟು ಹುಡುಗರು ಪೀಠಬಾಲಕರೂ ಆಗಿದ್ದರು. ಫಾದರ್ ಪೂಜಿ ಮೊದಲು ಪೂಜಾ ಅರವಿ ತೊಡಾಕ ಸಹಾಯ ಮಾಡುತ್ತಿದ್ದರು. ಅವರು ಗುಡ್ಯಾಗ ಪೂಜೆ ನಡೆಯುವಾಗ, ಫಾದರ್‌ಗಳಿಗೆ ಸಹಾಯ ಮಾಡ್ತಿದ್ದರು. ಪೂಜಾವಿಧಿ ನಡದಾಗ ಸೂಕ್ತ ವ್ಯಾಳೆದಾಗ ಗಂಟೆ ಬಾರಸ್ತಿದ್ದರು. ಸತ್ಪ್ರಸಾದ ಹಂಚುವಾಗ ಭಕ್ತಾದಿಗಳ ಗದ್ದದ ತಳಗ ತಾಟ ಹಿಡಕೊಂಡ ನಿಲ್ಲತ್ತಿದ್ದರು.
ಶನಿವಾರದ ನೈತಿಕ ಪಾಠದ ವ್ಯಾಳೆದಾಗ ಕಿರಿಯ ಗುರುಗಳು, ಪ್ರಾಥಮಿಕ ಶಾಲೆಯ ಮಕ್ಕಳ ಪ್ರಾಯಶ್ಚಿತ್ತ ವಿಧಿಯಾಚರಣೆಗೆ ಶಾಲೆಗೆ ಬಂದಿದ್ದರು. ಧರ್ಮೋಪದೇಶ ತರಗತಿಗಳೂ ಆರಂಭವಾಗಿದ್ದವು. ಸಿಸ್ಟರ್ ಸಿಸಿಲಿಯಾ, ಅಂದು ದಶಾಜ್ಞೆಗಳ ಬಗೆಗೆ ಹೇಳಿಕೊಟ್ಟಿದ್ದರು. ವಿಶೇಷವಾಗಿ ಹದಿವಯಸ್ಸಿಗೆ ಕಾಲಿಡೂ ಮಕ್ಕಳು ದಾರಿ ತಪ್ಪಬಾರದು ಅಂತ. ಸಿಸ್ಟರ್ ಸಿಸಿಲಿಯಾ ಪೀಠಬಾಲಕರನ್ನು `ಪಾಪ ನಿವೇದನೆ ವಿಧಿ ಮುಗಿಸಿಕೊಂಡ ಬರ‍್ರಿ’ ಅಂತ ಹೇಳಿ ಕಳಿಸಿದ್ದರು.’
ಪ್ರಾಥಮಿಕ ಶಾಲೆ, ಪ್ರೌಢ ಶಾಲೆ ಮತ್ತು ಸಂಯುಕ್ತ ಪ್ರಿ ಯುನಿವರ‍್ಸಿಟಿಯ ತರಗತಿಗಳೂ ಇರೋ ಶಾಲೆಯದು. ಅದರ ಪ್ರಿನ್ಸಿಪಾಲರು ಗುಡಿಯ ಪಾಲನಾ ಗುರುಗಳು. ಅವರ ಸಹಾಯಕ್ಕೆಂದು ಇಬ್ಬರು ಸಹಾಯಕ ಗುರುಗಳಿದ್ದರು. ಅದರಲ್ಲಿ ಒಬ್ಬರು ನಡುವಯಸ್ಸಿನ ಸಹಾಯಕ ಗುರುಗಳು, ಇನ್ನೊಬ್ಬರು ಅದೇ ತಾನೇ ಗುರು ಪಟ್ಟ ಪಡೆದ ಗುರುಗಳಾಗಿದ್ದರು. ಅವರು, ಹದಿವಯಸ್ಸಿನ ಮಕ್ಕಳನ್ನು ಕಂಡರೆ, ಸ್ವಲ್ಪ ಚೆಲ್ಲುಚೆಲ್ಲಾಗಿ ಮಾತನಾಡುತ್ತಾ, ನಗೆಚಾಟಿಕೆ ಹಾರಿಸುತ್ತಾ ಹುಡುಗಾಟ ಆಡುತ್ತಿದ್ದರು. ಅದು ಅವರ ವಯೋಸಹಜ ಗುಣ ಎಂದು ಯಾರೂ ಅದನ್ನು ಅಷ್ಟಾಗಿ ಗಮನಿಸಿರಲಿಲ್ಲ.
`ನೀ, ಈಗ ವ್ಯಭಿಚಾರ ಮಾಡಿದಂಗ. ದೈಹಿಕ ಅಲ್ಲದಿದ್ದರೂ, ಮಾನಸಿಕವಾಗಿ ನಡದರೂ ಅದು ವ್ಯಭಿಚಾರನ. ದೇವರ ದಶಾಜ್ಞೆಗಳಲ್ಲಿ ಆರನೇ ಆಜ್ಞೆ, ವ್ಯಭಿಚಾರ ಮಾಡಬ್ಯಾಡ ಅನ್ನೂದು. ಅದನ್ನ ನೀ ಮಾಡಿದಿ..’ ಎಂದು ಪೀಠಬಾಲಕರಾಗಿದ್ದ ಹೈಸ್ಕೂಲಿನ ಕಿಡಿಗೇಡಿ ಹುಡುಗರು ಕಿಚಾಯಿಸುತ್ತಿದ್ದ ಸುಳ್ಳು ಆರೋಪದ ಮಾತುಗಳು ಸಿರಿಲ್‌ನ ತಲೆ ತಿನ್ನುತ್ತಿದ್ದವು. ಆದರ, ತಪ್ಪ ಮಾಡಿದ್ದ ಅವನಲ್ಲ. ಫೋಟೋ ತಗದದ್ದ ಅವರು, ಮರಿಯವ್ವಳ ಚಿತ್ರ ಅಂದಗೆಡಿಸಿದ್ದ ಅವರು. ಮತ್ತ ಅವನ ತಲ್ಯಾಗ ಯಾವ ಕೆಟ್ಟ ವಿಚಾರ ಇರಲಿಲ್ಲ. ಹುಡುಗರು ಅವನ ತೆಲಿ ಮ್ಯಾಲ ಗೂಬಿ ಕೂಡಸಾಕ ಹೊಂಟಿದ್ದರು.
ಪರೀಕ್ಷೆಯ ಓದು ತಲೆಗೆ ಹತ್ತದಿದ್ದರೂ, ಸಾಕಷ್ಟ ಓದಿಕೊಂಡಿದ್ದ ಸಿರಿಲ್‌ನ ಅಪ್ಪ ಚಿನ್ನಪ್ಪ, ಕನ್ನಡದ ಕಟ್ಟಾ ಅಭಿಮಾನಿ ಆಗಿದ್ದ. ಕನ್ನಡ ಸಾಹಿತ್ಯ ಚರಿತ್ರೆಯನ್ನ ಬರೆದಿರುವ ಎಡ್ವರ್ಡ್. ಪಿ.ರೈಸ್ ಅವರ ಬಗ್ಗೆ ವಿಶೇಷ ಗೌರವ, ಅವರ ಎ ಹಿಸ್ಟರಿ ಆಫ್ ಕೆನರೀಜ್ ಲಿಟರೇಚರ್’ (೧೯೨೧) ಪುಸ್ತಕದ ಕನ್ನಡ ಅನುವಾದ ಮೈಸೂರಿನ ಶರತ್ ಪ್ರಕಾಶನದವರು (೧೯೭೫) ಪ್ರಕಟಿಸಿದಕನ್ನಡ ಸಾಹಿತ್ಯ ಚರಿತ್ರೆ’ ಪುಸ್ತಕ ಕಂಡಾಗಿನಿಂದ, ಅನ್ನಪ್ಪನ ಅಪ್ಪ ಚಿನ್ನಪ್ಪನಿಗೆ ಅದೇನೋ ರೈಸ್ ಪದದ ಮ್ಯಾಲ ಬಹಳ ಅಕ್ಕರೆ. ಆದರೆ, ಏನು ಮಾಡುವುದು?
ಮೊದಲನೇ ಹುಟ್ಟು ಗಂಡು ಮಗು. ಮಗನಿಗೆ ಹೆಸರು ಇಡುವಾಗ, ಅಂದಿನ ಪಾಲನಾ ಗುರುಗಳು, ಅದು ಪ್ರೊಟೆಸ್ಟಂಟ್ ರ ಹೆಸರು’ ಎಂದು ತಳ್ಳಿ ಹಾಕಿದ್ದರು. ಗುಡಿಯ ದಾಖಲೆಯ ಪತ್ರಗಳಲ್ಲಿಸಿರಿಲ್’ ಎಂದು ಹೆಸರಿದ್ದರೂ, ಅಪ್ಪನ ಆಸೆಯಂತೆ ಮನೆಯಲ್ಲಿ, ಆಪ್ತ ಗೆಳೆಯರಲ್ಲಿ ಅವನನ್ನು `ಅನ್ನಪ್ಪ’ ಎಂದು ಗುರುತಿಸಲಾಗುತ್ತಿತ್ತು. ʻಅನ್ನಪ್ಪ ಎನ್ನುವುದು, ದೇವಮಾತೆ ಮರಿಯಳ ತಾಯಿಯ ಹೆಸರು ಸಂತ ಆನ್. ಅದು ಕನ್ನಡಕ್ಕೆ ಬಂದು ಅನ್ನಮ್ಮ ಆಗಿದೆ. ಗಂಡು ಮಕ್ಕಳಿಗೆ ಆ ಹೆಸರು ಇಟ್ಟಾಗ ಅದು, ಅನ್ನಪ್ಪ ಆಗಿಬಿಡಬಹುದುʼ ಅಂಬೋದು ಚಿನ್ನಪ್ಪನ ವಾದ ಆಗಿತ್ತು.
ಅನ್ನಪ್ಪನ ಅಪ್ಪ ಚಿನ್ನಪ್ಪ ಸುಳ್ಳದ, ಊರಾಗ ದೊಡ್ಡ ಕುಳಾನ ಆಗಿದ್ದ. ಚಿನ್ನಪ್ಪ, ಹುಡುಗ ಆಗಿದ್ದಾಗ ಮಾಡಿದ್ದ ಭಾನಗಡಿಗಳು ಒಂದ ಎರಡ. ಅವಾಂ, ಉಡಾಳ ಅಂದ್ರ ದೊಡ್ಡ ಉಡಾಳ ಆಗಿದ್ದ. ಸಾಲಿ ಸೇರಿದ್ದರೂ, ಅಲ್ಲಿ ಕಲಿಯೂದನ್ನ ಏನೂ ಕಲಿಲಾರದ, ಕಲಿ ಬಾರದ್ದನ್ನೆಲ್ಲಾ ಕಲಿತಿದ್ದ. ಆದರ, ಅಪ್ಪ ಸತ್ತ ಮ್ಯಾಲ ಬುದ್ಧಿ ಬಂದಿತ್ತು. ಅಕ್ಕಲ ಹಲ್ಲ ಬಂದಾಗ ಅಂವಾ ಹಾದಿಗೆ ಬಂದಿದ್ದ. `ಸೂಳಿ ವಯಸ್ಸಾದ ಮ್ಯಾಲ ಗರತಿ ಆದಳು’ ಅನ್ನೂಹಂಗ, ಆಮ್ಯಾಲ ಅಂವಾ ಊರಾಗ ಸುದ್ದುಳ್ಳಾಂವ ಆಗಿ ಬಾಳಿದ್ದ. ಅಂವಾ ಎರಡ ವರ್ಷಗಳ ಹಿಂದ ಅದೇನೋ ಜ್ವರಾ ಬಂದ ತೀರಿಕೊಂಡಿದ್ದ.
ನಿನ್ನದು ತಪ್ಪು ತಪ್ಪೇ. ಇಂದ ಶನಿವಾರ. ಪ್ರಾಯಶ್ಚಿತ್ತ ಕೇಳಾಕ ಗುರುಗಳು ಸಾಲಿಗೆ ಬಂದಾಗ, ನೀನು ಪಾಪ ನಿವೇದನೆ ಮಾಡಾಕ ಬೇಕು. ನಿನ್ನ ಜೋಡಿ, ಮೊಬೈಲ್‌ನಲ್ಲಿ ಸೆರೆ ಹಿಡಿದ, ಅಂದಗೆಟ್ಟ ಆ ಚಿತ್ರಗಳನ್ನು ನೋಡಿದನಲ್ಲಾ ನಾನಂತೂ ಪಾಪ ನಿವೇದನೆ ಮಾಡಿಕೊಳ್ತೀನಪ್ಪ.’ ಗೆಳೆಯ ಹಂಚಿನಮನಿ ಚೌರಪ್ಪ ಹೇಳಿದಾಗ, ತಾನುದೊಡ್ಡ ಪಾಪ ಮಾಡಿದೀನಿ’ ಎಂಬ ಭಾವ ಅನ್ನಪ್ಪನನ್ನು ಕಾಡುತ್ತಿತ್ತು. ಸಹವಾಸ ದೋಷ, ಸಿರಿಲ್ ಸುಳ್ಳ ಖರೆ ಮಾಡಾಕ ಹೊಂಟಿದ್ದ.
ಗುಡಿಯ ಕಿರಿಯ ಗುರುಗಳು ಬಂದ ಕೂಡಲೆ ಈ ಪೀಠಬಾಲಕರ ಗುಸುಗುಸು ನಿಂತಿತ್ತು.
ಶನಿವಾರ ಸಂಜೆ ಮನೆಗೆ ಬಂದಿದ್ದ ಜಾನಿ, ಹೋಮ್ ವರ್ಕ್ ಮಾಡುತ್ತಾ ತನ್ನ ಅಪ್ಪನ ಜೋಡಿ ಮಾತನಾಡುವಾಗ, ಅಂದು, ಅವರ ನೈತಿಕ ಬೋಧನೆ, ಅದ, ಮಾರಲ್ ತರಗತಿ ಮುಗದ ಮ್ಯಾಲ ನಡೆದ ಪಾಪನಿವೇದನೆಯ ಪ್ರಸಂಗವನ್ನ ವಿವರಿಸಿ ಹೇಳಿದ.
ಅದನ್ನ ಕೇಳಿದ ಅವರಪ್ಪ ಮಿಖೇಲಪ್ಪ, “ಹ.. ಹ,, ‘’ಎಂದು ಗಹಗಹಿಸಿ ನಗತೊಡಗಿದ.
ಅದನ್ನ ಕೇಳಿಸಿಕೊಂಡ ಅಡುಗೆ ಮನೆಯಲ್ಲಿ ಅಕ್ಕಿ ತೊಳದು ಅನ್ನಕ್ಕಿಡುತ್ತಿದ್ದ ಜಾನಿ ಅವ್ವ ಫಿಲೊಮಿನಾ, `ಅದೇನ್ರಿ ಹಂಗ ನಗ್ತೀರಿ?’’ ಎಂದು ಕೇಳುತ್ತಾ ಹೊರಗೆ ಬಂದಳು.
“ಮತ್ತಿನ್ನೇನ ಮಾಡ್ಲಿ? ನಮ್ಮ ಚಿನ್ನಪ್ಪನ ಮಗ ಅನ್ನಪ್ಪ ಪಾಪ ಸಂಕೀರ್ತನ ಮಾಡಿದ್ದನ್ನೆಲ್ಲಾ ಹುಡುಗರಿಗೆ ಹೇಳಕೊಂಡ ಹೊಂಟಾನಂತ.. ಪಾಪ ಸಂಕೀರ್ತನ, ಪ್ರಾಯಶ್ಚಿತ್ತ ವಿಧಿಯಾಚರಣೆ ಒಂದ ಪವಿತ್ರ ವಿಧಿ. ಅದರ ಉಡಾಫಿ ಮಾಡಂಗಿಲ್ಲ, ಅದು ಒಂಚೂರೂ ಸರಿಯಲ್ಲ. ಅಂವಾ ಹೇಳೂದ, ಎಲ್ಲಾ ಖರೆ ಅಲ್ಲ. ಸುಳ್ಳೂ ಇರ್ತದ ಅಂತ ಈ ಹುಡುಗರಿಗೆ ತಿಳಿದಿಲ್ಲ.’’
“ಏನಾಯತ್ರಿ ಅದು..?’’
“ಅಕ್ಕ ಸತ್ತರೂ ಅಮಾವಾಸ್ಸಿ ನಿಲ್ಲುದಿಲ್ಲ. ಹದಿಹರೆಯದ ಸುಳ್ಳದ ಮನಿಮಂದಿ, ಸುಳ್ಳ ಹೇಳೂದು ನಿಲ್ಲಸುದಿಲ್ಲ.’’
“ಏನ್ರಿ ಅದು?’’
“ನಮ್ಮ ಚಿನ್ನಪ್ಪ ತೀರಿಕೊಂಡ ಎರಡ ವರ್ಷ ಆಯಿತು. ಹಿರಿಯಕ್ಕನ ಚಾಳಿ ಮನಿಮಂದಿಗೆಲ್ಲಾ, ಅಂತಾ ಹೇಳ್ತಾರಲ್ಲಾ ಹಂಗ ಅವನ ಚಾಳಿ ಮಗನಿಗೂ ಬಂದದ ನೋಡ. ಅವನು ಸಾಲ್ಯಾಗ, ಬಂಡಲ್ ಬಿಡ್ತಿದ್ದ ಬಂಡಲ್ ರಾಜಾ ಆಗಿದ್ದ, ಈಗ ಅವನ ಮಗಾ ಸಿರಿಲ್ ಏಳನೇತ್ತಾದಾಗ ಅದಾನ, ಮತ್ತೀಗ, ಇವನೂ ಬಂಡಲ್ ಬಿಡಾಕ್ಹತ್ತಾನ. ಇಂವಾ ಈಗ ಬಂಡಲ್ ರಾಜಕುಮಾರ. ಇವನಿಗೂ, ಅಕ್ಕಲ ಹಲ್ಲ ಬಂದಾಗ ಸುಧಾರಸ್ತಾನ ಕಾಣ್ತದ.’’
“ನೀವ ಹಿಂಗ ಒಗಟೊಟ ಮಾತಾಡಿದರ ಹೆಂಗ?’’
“ಅಪ್ಪ ಗುಡಿ ಕಟ್ಟಿದರ ಮಗ ಕಳಸ ಇಟ್ಟ ಅನ್ನೂ ಮಾತದ. ಅದನ್ನ ಇಲ್ಲಿ ಹಚ್ಚಬಹುದು ನೋಡ. ಅಪ್ಪ ಸುಳ್ಳಿನ ಗುಡಿ ಕಟ್ಟಿದ್ದರ, ಮಗಾ ಈಗ ಅದಕ್ಕ ಗಿಲೀಟಿನ ಸುನಹರಿ ಕಳಸ ಕೂಡಸಾಕ ಹತ್ಯಾನ.’’
“ಏನಾತು? ಅದನ್ನರ ಸ್ಪಷ್ಟ ಬಿಡಿಸಿ ಹೇಳಿರಂತ ತಡೀರಿ. ನಾ ಅನ್ನದ ಕುಕ್ಕರ್ ಗ್ಯಾಸ ಒಲಿ ಮ್ಯಾಲ ಇಟ್ಟ ಬರ್ತೀನಿ.’’
ನಲವತ್ತ ಐವತ್ತು ವರ್ಷಗಳ ಹಿಂದಿನ ಕತಿ ಅದು.
ಊರು ಬೆಳೀತು, ಜನಾ ಹೆಚ್ಚಾತು. ಊರು ಬೆಳದಂಗ ನಮ್ಮೂರಾಗಿನ ಶಂಬರ ದೋನಸೆ ವರ್ಷದ ಹಿಂದ ಕಟ್ಟಿದ ಗುಡಿ ವಿಶ್ವಾಸಿಕರಿಗೆ ಸಾಕಾಗದ ಹೋಯ್ತು. ಹಳೆಯ ಬಾಂದಕಾಮಿನ ಗುಡಿ ಕೆಡವಿ ಹೊಸಾ ಗುಡಿ ಕಟ್ಟಿದಾಗ, ಪಾಪ ಸಂಕೀರ್ತನದ ಪೆಟ್ಟಿಗೆ ಗೂಡು ಬಂದಾಗ ನಡೆದ ಕತಿ. ನಮಗಿಂತ ಭಾಳ ದೊಡ್ಡಾಂವಿದ್ದ ಚಿನ್ನಪ್ಪ ನಮಗ ಸುಳ್ಳಿನ ಕತಿ ಹೇಳಿ ಪ್ಯಾಲಿ ಮಾಡಿದ್ದ ಕತಿ ಅದು.
ಹಳೆಯ ಚರ್ಚ ಕಟ್ಟಡ ಕೆಡವಿ ಹೊಸದಾಗಿ ವಿಶಾಲವಾದ ಚರ್ಚ ಕಟ್ಟಡ ಕಟ್ಟಿಸಿದ್ದರು. ಮೇತ್ರಾಣಿಗಳು ಬಂದ ಮಂತ್ರಿಸಿ ಹೋಗಿದ್ದರು. ಹಳೆಯ ಸಾಮಾನು ಬ್ಯಾಡಂತ ಒಂದು ಖೋಲ್ಯಾಗ ಇಡಿಸಿದ್ದರು. ಆಗ, ಭಕ್ತರು ಕೂಡಲು ಸಾಲು ಸಾಲು ಕಟ್ಟಿಗೆಯ ಬೆಂಚಿನ ಕುರ್ಚಿಗಳನ್ನ ಹಾಕಿದ್ದರು. ಅವುಗಳ ಮುಂದ ಕಾಲುಗಳ ಮುಂದೆ ಕಟ್ಟಿಗೆಯ ಉದ್ದನೆಯ ಮಣೆಗಳನ್ನು ಹಾಕಲಾಗಿತ್ತ. ಪೂಜಾಂಕಣದಲ್ಲಿ ಹೊಸದಾಗಿ ಸಂಗಮರಿ ಕಲ್ಲಿನ ಬಲಿಪೀಠದ ಕಟ್ಟಿ ಕಟ್ಟಲಾಗಿತ್ತು. ಸತ್ಪಸಾದ ಸಂಪುಟ ಎಲ್ಲಾ ಹೊಸ ಬಗೆಯಲ್ಲಿ ಬಂದು ಕೂತಿತ್ತು. ಸತ್ಪಸಾದ ಇರುವುದನ್ನ ಸಾರುವ, ಸದಾಕಾಲ ಉರಿಯುವ ನಂದದ ನಂದಾದೀಪವನ್ನ ಹೊಸ ರೀತಿಳಗ ಜೋಡಿಸಲಾಗಿತ್ತ .
ಅಲ್ಲಿಮಟಾ, ಗುಡಿಯೊಳಗ ಕ್ರೈಸ್ತ ವಿಶ್ವಾಸಿಕರಿಗೆ ಬೆನ್ನು ಮಾಡಿ ಪೂಜಿ ಮಾಡುತ್ತಿದ್ದ ಗುರುಗಳು, ಅಲ್ಲಿಂದ ಮುಂದ, ಎದುರಿಗೆ ನೋಡಿಕೊಂಡ ಪೂಜಿ ಹೇಳಾಕ್ಹತ್ತಾರು. ಮೊದಲು, ವಿಶ್ವಾಸಿಕರು ಗುರುಗಳ ಬೆನ್ನುನೋಡಿಕೊಂಡ ಪೂಜಿ ಹೇಳಬೇಕಾಗಿತ್ತು. ಹೊಸಾ ವ್ಯವಸ್ಥೆ ಬಂದಾಗ ಗುಡ್ಯಾಗ ಅಲ್ಪ ಸ್ವಲ್ಪ ಅದಲಾ ಬದಲಿನೂ ಆಗಿತ್ತು.
ಅಂಥ ಬದಲಾವಣೆಯೊಳಗ ಪಾಪ ಸಂಕೀರ್ತನೆಯ ಗೂಡುಮನೆಯೂ ಬಂದು ಸೇರಿಕೊಂಡಿತು. ಅದು, ಮನೆ ಅಂದರೆ ಮನೆಯಲ್ಲ. ಗೂಡು ಅಂದರೆ ಗೂಡು ಅಲ್ಲ. ಅದು, ಪಾಪ ಸಂಕೀರ್ತನೆಯ ಪೆಟ್ಟಿಗೆ ಗೂಡು ಇಲ್ಲಾ ಗೂಡುಮನೆ. ಮೊದಲಾದರ, ಗುರುಗಳು ಕುರ್ಚಿ ಮ್ಯಾಲ ಕೂತಿರ್ತಿದ್ದರು. ಮಗ್ಗಲಕ ಕಟ್ಟಕಿ ತಡಕಿ ಇರೂದು. ಅದಕ್ಕ ಸ್ವಾಮಿಗಳು ಕಿವಿ ಆನಿಸುವ ಮಟ್ಟದಾಗ ಜಾಲರಿ ಇರೂದು. ಆ ಬಡಗಿ ತಡಕಿನ ಇನ್ನೊಂದ ಮಗ್ಗಲಕ ವಿಶ್ವಾಸಿಗಳು ಬಂದ, ಮೊಣಕಾಲೂರಿ ಪಾಪ ನಿವೇದನೆ ಮಾಡ್ತಿದ್ದರು. ಇದು ಎಲ್ಲಾ ಖರೆ ಹಕೀಕತ್ತ. ನಾವೂ ನೋಡಿದೀವಿ.
ಎಲ್ಲಾ ಸುರಳಿತ ನಡದಾಗ, ಕಾಣಿಕಿ ಲೆಕ್ಕದಾಗ ಅಪರಾತಪರಾ ಆಗಾಕ ಹತ್ತೇದ ಅಂತ ಉಪದೇಶಿ ಅಂದಿನ ಪಾಲನಾ ಗುರು ಮಿಖೇಪ್ಪರ ಗಮನಕ್ಕೆ ತಂದಿದ್ದ.
ಅಳದು ಸುರುದು, ತಮ್ಮ ಖೋಲಿಗೆ ಬಂದ ಹೋಗಾವರ ಲೆಕ್ಕ ಇಟ್ಟ, ಸಾಣಗಿ ಸೋಸಿದ ಮ್ಯಾಲ ಸುಳ್ಳದ ಅವರ ಮನಿ ಹುಡುಗನ ಮ್ಯಾಲ ಸ್ವಾಮಿ ಮಿಖೇಲಪ್ಪರಿಗೆ ಸಂಶಯ ಬಂದಿತ್ತು. ಬರೀ ಡೌಲ ಮಾಡಕೋತ ಅಡ್ಡಾಡತಿದ್ದ ಅವನ ಚಲನವಲನದ ಮ್ಯಾಲ ಕಣ್ಣಿಟ್ಟಿದ್ದರು ಅವರು, ಒಂದ ರವಿವಾರ ಪೂಜಿ ಮುಗದ ಮ್ಯಾಲ ಪೀಠ ಬಾಲಕರ ಜೋಡಿ ಕೂತ, ಕಾಣಕಿ ದುಡ್ಡ ಎಣಸೂ ಮುಂದ ಚಿನ್ನಪ್ಪ ಒಂದಿಷ್ಟ ನೋಟ ತನ್ನ ಕಿಸೆಯೊಳಗ ಸಿಗಿಸಿಕೊಳ್ಳುದನ್ನು ಮಿಖೇಲಪ್ಪ ಸ್ವಾಮ್ಯಾರು ಕಿಡಕಿಯೊಳಗಿಂದ ನೋಡಿದ್ದರು. ಅವರ ಹಿಂದ ಉಪದೇಶಿನೂ ನಿಂತಿದ್ದ. ಅದರ, ಅವನು ಕಿರಿಯ ಸ್ವಾಮಿಗಳ ಜೋಡಿ, ಜ್ಞಾನಸ್ನಾನ ವಿಧಿ ನಡೆಸಿಕೊಡುವ ತರಾತುರಿಯಲ್ಲಿದ್ದ. ಹೊರಗ ಜ್ಞಾನಸ್ನಾನ ಕೊಡಸಾಕ ಕುಟುಂಬವೊಂದು ಕೂಸಿನ್ನ ಹಿಡಕೊಂಡ ಕಾಯ್ತಿದ್ದರು.
`ದುಷ್ಮನ್ ಕಹಾಂ ಹೈ, ಬಗಲ್ಮೆ ಹೈ’ ಅನ್ನಾವರಂಗ ತಮ್ಮ ಮಗ್ಗಲಿನ ಮುಳ್ಳು ಅವರಿಗೆ ಇಷ್ಟರವರೆಗೆ ಕಂಡಿರಲೇ ಇಲ್ಲ. ಎಷ್ಟ ದಿನದಿಂದ ಇದು ನಡದದೋ ಗೊತ್ತಿಲ್ಲ. ತಮ್ಮನ್ನ ಮಾತಾಡಸಲಿಕ್ಕೆ ಬಂದವರನ್ನು ಮಾತಾಡಿಸಿ, ಸ್ವಾಮಿ ಮಿಖೇಲಪ್ಪ ಅವರು ಖೋಲಿ ಕಡೆ ಬರೂದಾರಾಗ ಅಂವಾ ಅಲ್ಲಿರಲಿಲ್ಲ. ಅವನು ಕಿಸೆಗೆ ದುಡ್ಡು ಹಾಕ್ಕೋಳ್ಳುದನ್ನ ಸ್ವಾಮ್ಯಾರ ನೋಡಿದ್ದ ಗೊತ್ತಾಗಿತ್ತೋ ಏನೋ? ಮುಂದ ಹದಿನೈದ ದಿನ ಅಂವಾ ಊರಾಗ ಇರಲಿಲ್ಲ. ದೂರದ ಸ್ವಾದರ ಮಾವನ ಮನಿಗೆ ಹೋಗಿ ಕೂತಿದ್ದ. ಕೈಯಾನ ದುಡ್ಡ ಎಲ್ಲಾ ರ‍್ಚು ಮಾಡಿ ಚೈನಿ ಹೊಡದ ಮ್ಯಾಲ ಊರಿಗೆ ಹೊಳ್ಳಿ ಬಂದಿದ್ದ. ಸ್ವಾಮ್ಯಾರು ಎಲ್ಲಾ ಮರ್ತಿರ್ತಾರ ಅನಕೊಂಡ, ಅಂದ ರವಿವಾರ ಪೂಜಿಗೆ ಬಂದಿದ್ದ.
**
ʻʻತಂದೆಯೇ..ʼʼ ಮಾತು ಆರಂಭಿಸಿದ ಚಿನ್ನಪ್ಪ ಸುಳ್ಳದ ‘’ನಾನು ಪಾಪಿ, ನನಗೆ ನಿಮ್ಮ ಆಶೀರ್ವಾದವನ್ನು ದಯಪಾಲಿಸಿ ತಂದೆಯೇ.’’
“ತಂದೆಯೇ, ನಾನು ಪಾಪ ನಿವೇದನೆ ಮಾಡಿ ಇಂದಿಗೆ ಹದಿನೈದು ದಿನಗಳಾಯಿತು. ಕೊಟ್ಟ ಪ್ರಾಯಶ್ಚಿತ್ತ ವಿಧಿ ತೀರಿಸಿದೀನಿ.ʼʼ
ಇಷ್ಟು ಹೇಳಿದ ಚಿನ್ನಪ್ಪ, ಸುಮ್ಮನಾದ. ಮಿಖೇಲಪ್ಪ ಸ್ವಾಮ್ಯಾರಿಗೆ ಪಾಪ ನಿವೇದನೆಗೆ ಕುಳಿತ ಹುಡುಗನ ಗುರುತು ಹತ್ತಿತ್ತು. ಅದು ಮತ್ತಾರೂ ಅಲ್ಲ ಉಂಡಾಡಿ ಗುಂಡ ಚಿನ್ನಪ್ಪ ಸುಳ್ಳದ. ಆಲಿಸುವ ಕಿಡಕಿ ಪಡದೆಯ ಕಣ್ಣುಗಳು ದೊಡ್ಡವಾಗಿದ್ದವು. ಅದುವರೆಗೂ ಸ್ವಾಮಿಗಳು ಅದನ್ನು ಗಮನಿಸಿರಲಿಲ್ಲ.
ʻʻನಾನು ಐದಾರು ತಿಂಗಳಿನಿಂದ, ರವಿವಾರದ ಪೂಜಿ ಮುಗದ ಮ್ಯಾಲ ಗುಡಿ ಕಾಣಕಿ ದುಡ್ಡ ಎಣಸೂ ಮುಂದ ಪ್ರತಿಸಲಾ ಕೈಗೆ ಸಿಕ್ಕಷ್ಟ ಐವತ್ತು ಇಲ್ಲಾ ನೂರು ರೂಪಾಯಿ ಎತ್ತಕೊಂಡಿದ್ದೀನಿ. ನನ್ನದು ತಪ್ಪಾಯಿತು.ಇನ್ನು ಈ ತಪ್ಪು ಮಾಡುವುದಿಲ್ಲ ತಂದೆಯೇ, ಕ್ಷಮಿಸಿ
ಆಗ, ಸ್ವಾಮ್ಯಾರಿಗೆ ಊಭಯ ಸಂಕಟ. ಪ್ರಾಯಶ್ಚಿತ್ತ ವಿಧಿಯಲ್ಲಿ ವಿಧಿಯಾಚರಣೆಯನ್ನು ಬಿಟ್ಟು. ಬೇರೇನೂ ಪ್ರಸ್ತಾಪಿಸಿ ಸಂಭಾಷಿಸುವಂತಿಲ್ಲ. ಇಲ್ಲಿ ಕೇಳಿಸಿಕೊಂಡಿದ್ದನ್ನೂ ಬಹಿರಂಗ ಪಡಿಸೂ ಹಂಗೂ ಇಲ್ಲ. ಎಂದಿನಂತೆ ತಮ್ಮ ಸ್ಥಾನ ಗೌರವದ ಕರ್ತವ್ಯವನ್ನ ನಿಭಾಯಿಸಿದ್ದರು. ನಡದದ್ದು ಇಷ್ಟ.
ಆದರ ಈ ಬಂಡಲ್ ಬಾಜಿ ಬಾಜಿರಾವ, ಚಿನ್ನಪ್ಪ ಸಾಲ್ಯಾಗ ನಮ್ಮುಂದ ಹೇಳಿದ್ದ ಇನ್ನೊಂದ. “ಅಂದ ಪಾಪಸಂಕೀರ್ತನ ಮಾಡುಮುಂದ ಗುಡ್ಯಾಗ ಯಾರೂ ಇರಲಿಲ್ಲ. ಕಾಣಿಕಿ ದುಡ್ಡ ಎಗರಿಸಿದ್ದ ನನ್ನ ಗುರ್ತ ಹಿಡಿದ ಸ್ವಾಮಿ ಮಿಖೇಲಪ್ಪಾರು ಸಿಟ್ಟ ಮಾಡಿಕೊಂಡಿದ್ದರು. ಎಲ್ಲಾ ಮುಗದ ಎದ್ದ ಹೋಗೂ ಮುಂದ, ಎದ್ದ ಬಂದ ನನ್ನ ತಡದರು. ಅಷ್ಟರಾಗ ಉಪದೇಶಿ ಒಳಗ ಬಂದವನ ʻಕಳ್ಳ ನನ್ನ ಮಗನ, ಕಾಣಿಕಿ ದುಡ್ಡ ಕಳ್ಳತನ ಮಾಡತಿ?ʼ ಅನಕೋತ ನನಗ ಗುದ್ದೇ ಬಿಟ್ಟ. ನಾ ಮುಗ್ಗರಿಸಿ ಬಿದ್ದೆ. ಬೀಳು ಮುಂದ ಪಾಪ ಸಂಕೀರ್ತನ ಮತ್ತ ಪಶ್ವಾತ್ತಾಪದ ಹೊಸಾ ಗೂಡು ಉರಳಿ ಬಿತ್ತು. ಬಿದ್ದ ರಬಸಕ್ಕ ಜಾಲರಿ ಕಿತ್ತಗೊಂಡ ಹೋತು. ಗೂಡು ಹಾಳಾಗೇ ಹೋತು. ನಾ ಸುಳ್ಳ ಹೇಳೂದಿಲ್ಲ ಬೇಕಾರ ನೀವ ಗುಡಿ ಕಡೆ ಹೋಗಿ ನೋಡಕೊಂಡ ಬರ‍್ರಿ.ʼʼ ಅಂತ ನಮಗ ಪುಸಲಾಯಿಸಿ ಕಳಿಸಿದ್ದ. ನಾವು ಹೋಗಿ ನೋಡಿದರ, ಅಂದ ಗುಡ್ಯಾಗ ಇದ್ದ ಹೊಸಾ ಗೂಡು ಕಾಣವಲ್ತಾಗಿತ್ತು. ಅದರ ಜಾಗದಾಗ ಗುರುಗಳ ಕೂಡು ಹಳೇ ಕುರ್ಚಿ ಮತ್ತ ಮಗ್ಗಲಕ ಪಡದಾ ಇದ್ದ ತಡಕು ಬಂದಿದ್ದವು. ಆ ಕ್ಷಣಕ್ಕ ನಾವು ಅವನ ಮಾತ ನಂಬ ಬೇಕಾಗಿ ಬಂದಿತ್ತ.
ಆಮ್ಯಾಗ, ಮೂರು ದಿನದ ಮ್ಯಾಲ ಉಪದೇಶಿ ಹೇಳಿದಾಗ, ನಡದ ಹಕೀಕತ್ತ ಗೊತ್ತಾಯಿತು ನಮಗೆಲ್ಲಾ. ಹೊಸಾ ಪಾಪ ಸಂಕೀರ್ತನ ಗೂಡಿನ ಅಡ್ಡ ತಡಕಿನ ಕಿಡಕಿ ಜಾಲರಿ ಕಣ್ಣ ದೊಡ್ಡವಿದ್ದವು. ಅಲ್ಲಿ ಕುಂತವರು ಸ್ವಾಮಿಗಳಿಗೆ ಕಾಣಬಾರದು. ಪಶ್ಚಾತ್ತಾಪ ವಿಧಿಯ ಅನಾಮಿಕತನಕ್ಕೆ ದೊಡ್ಡ ಕಣ್ಣುಗಳು ಭಂಗ ತರ್ತಾವ ಅಂತ ವಿಚಾರ ಮಾಡಿದ ಸ್ವಾಮಿ ಮಿಖೇಲಪ್ಪ ಅವರು, ಆ ಗೂಡನ್ನ ರಿಪೇರಿ ಮಾಡಸಾಕ ಗುಡಿ ಹಿಂದಿದ್ದ ಗೋಡೌನಿಗೆ ಸಾಗಿಸಿದ್ದರು. ಬಡಿಗೇರ ರಾಚಪ್ಪ ಸಕ್ಕರಿ ಎರಡ ದಿನದಾಗ ಗೂಡಿಗೆ ಸಣ್ಣ ಕಣ್ಣಿಂದ ಜಾಲರಿ ಕೂಡಿಸಿ, ಗುಡಿಯೊಳಗ ತಂದ ಇಟ್ಟಿದ್ದ. ಕಟ್ಟಿ ಕಲ್ಲ ಹೊಳ್ಳಿ ಕಟ್ಟಿಗೆ ಬಂದ ಕೂತಂಗಾಗಿತ್ತು.”
“ಅಯ್ಯ ನಮ್ಮವ್ವ.. !”
“ಇನ್ನೊಂದ ಸಲ, ಆ ಚಿನ್ನಪ್ಪ ಏನ ಘನಂದಾರಿ ಮಾಡಿದ್ದ ಗೊತ್ತಿಲ್ಲ ನಿಮಗ. ಒಂದ ದಿನ ಅಡುಗೆ ಮಾಡು ಆಳಿನ ಮಗಾ ರಾತ್ರಿ ಊಟಾ ಕೊಡಾಕ ಸ್ವಾಮಿಗಳ ಮನಿಗೆ ಬಂದಿದ್ದ. ಹೊಳ್ಳಿ ಹೋಗೂ ಮುಂದ ಮಳಿ ಬರ್ತಿತ್ತು. ಸ್ವಾಮ್ಯಾರಿಗೆ ಹೇಳಿ ಅವರ ಚಪ್ಪಲಿ ಹಾಕ್ಕೊಂಡ ಮನಿಗೆ ಹೋಗಿದ್ದ. ಮುಂಜಾನೆದ್ದ ಸ್ವಾಮಿಗಳು ಚಪ್ಪಲಿ ಹುಡಕೊಂಡ, ಹಾಕ್ಕೊಂಡ ಬಂದಿದ್ದರು. ಅದನ್ನ ನೋಡಿದ್ದ ಚಿನ್ನಪ್ಪ, ಸ್ವಾಮ್ಯಾರ ಹೆಸರಿಗೆ ದೊಡ್ಡ ಮಸಿ ಬಳಿಯೂ ಕತಿ ಕಟ್ಟಿದ್ದ.”
“ಏನಕೇನರ ಕತಿ ಕಟ್ಟಾವರು ಈ ಅಪ್ಪ ಮಗ. ಅಪ್ಪನ ಸುಳ್ಳಿನ ಕತ್ಯಾಗ ಪಾಲನಾ ಗುರುಗಳ ಬುಡಕ್ಕೆ ತಂದಿಟ್ಟ ಕತಿ ಹೇಳಿ ಸುಳ್ಳಿನ ಗುಡಿ ಕಟ್ಟಿದ್ದ. ಈಗ ಮಗಾ, ಅಪ್ಪನ ಚಾಳಿ ಮುಂದವರಿಸ್ಯಾನ. ಏನಕೇನರ ಸುಳ್ಳಿನ ಕತಿ ಕಟ್ಟಿ, ಅಪ್ಪ ಕಟ್ತಿದ್ದ ಸುಳ್ಳಿನ ಗುಡಿಗೆ ಸುಳ್ಳಿನ ಕಳಸ- ಸುನಹರಿ ಗಿಲೀಟಿನ ಕಳಸ ಇಡಾಕ ಹೊಂಟಾನ. ಅನ್ನಬಾರದು, ಆದರ ಏನ್ ಅನ್ನೂದು ಉಳದೈತಿ? ಇಂದಿನ ಹುಡಗಾಟದ ಕಿರಿ ಸ್ವಾಮಿ, ಹೆಂಡ ಕುಡದ, ಅಲ್ಲ ಅಲ್ಲ, ಇಂಗ ತಿಂದ ಮಂಗ್ಯಾನಂಗ ಆಡೂದು, ಈ ಮಗನಿಗೆ ಕೂಡಿ ಬಂದದ.”
“ಆದರ, ಇದ ತಪ್ಪ ಅಲಾ?”
“ಹೌದ ನೀ ಹೇಳೂದು ಖರೆ ಐತಿ. ನಮ್ಮ ಧರ್ಮಸಭೆಯ ನಿಬಂಧನೆಗಳ ಪ್ರಕಾರ, ತಪ್ಪೊಪ್ಪಿಗೆ ಒಪ್ಪಿಸಿ ಪ್ರಾಯಶ್ಚಿತ್ತ ಪಡುವ, ಸ್ವಾಮಿ ಹೇಳುವದನ್ನ ಪಾಲಿಸುವ ವಿಶ್ವಾಸಿಯ ಹೆಸರನ್ನ ಬಹಿರಂಗ ಮಾಡಬಾರದು ಅನ್ನೂದು, ಯೇಸುಸ್ವಾಮಿ ಸ್ಥಾನದಾಗ ನಿಂತ ಪ್ರಾಯಾಶ್ಚಿತ್ತ ವಿಧಿ ನಡೆಸಿಕೊಡುವ ಸ್ವಾಮಿ, ಅಲ್ಲಿನ ಎಲ್ಲಾ ವಿಷಯಗಳನ್ನ ರಹಸ್ಯವಾಗಿಡಬೇಕು ಅನ್ನೂದು ಕ್ರಮ. ಅದು ಅವರ ಪರಮ ಕರ್ತವ್ಯ. ಅದನ್ನ ಪಶ್ಚಾತ್ತಾಪದ ಸಂಸ್ಕಾರದ ಪ್ರಮಾಣ ಅಂತ ಕರಿತಾರ.”
“ಹೌದೇನ್ರಿ, ಇದ ಇಷ್ಟ ಗಂಭಿರದ ವಿಷಯ ಅನ್ನೂದು, ಇಲ್ಲಿ ಮಟ ನನಗ ಗೊತ್ತ ಇರಲಿಲ್ಲ ನೋಡ್ರಿ.”
“ಹೌದ ಮತ್ತ, ನಮ್ಮ ಉಪದೇಶಿ ಹೇಳೂವಂಗ, ಪಾಪ ಸಂಕೀರ್ತನ ಕೇಳೂ ಸ್ವಾಮಿ, ಯೇಸುಸ್ವಾಮಿ ರೂಪದಾಗ ಕೂತಿರ್ತಾರ. ಈ ಪಾಪ ಸಂಕೀರ್ತನ ಅನ್ನೋದು ಧಾರ್ಮಿಕ ದೃಷ್ಟಿಕೋನದಾಗ, ಬೈಬಲ್ಲಿನಲ್ಲಿ ಇರೂ ನೈತಿಕ ಮೌಲ್ಯಗಳ ಚಿಂತನೆಯ ಅನಾವರಣ, ಪ್ರಾರ್ಥನೆಗಳ ಪಠಣ ಸಾಂತ್ವನ ನೀಡ್ತದ. ಅಲ್ಲಿ ಕೂತಿರೋ ಸ್ವಾಮಿಗಳ ಮಾತುಗಳು, ನೊಂದ ಮನಸ್ಸುಗಳಿಗೆ ಸಮಾಧಾನ ಕೊಡೂ ಮಾನಸಿಕ ಚಿಕಿತ್ಸೆ ಹಂಗಿರ್ತದ ಅಂತ್ಲೂ ಹೇಳತಾರ.”
“ಅದಕ್ಕ ನೋಡ್ರಿ ಪಾಪ ಸಂಕೀರ್ತನ ಮಾಡಿದ್ದ ದಿವಸ, ನನ್ನ ಮನಸ್ಸ ಭಾಳ ನಿರಾಳ ಇರ್ತದ. ಅಂದ ಮನಿ ಕೆಲಸಾ ಮೊದಲಿಂದ ಶುರು ಮಾಡುವಷ್ಟ ಹುರುಪ ಬಂದಿರ್ತದ.”
“ಹೌದ ಬಿಡು. ಅಷ್ಟ ಅಲ್ಲ, ಈ ಪಾಪ ಸಂಕೀರ್ತನ ಸಂಸ್ಕಾರದ ಪ್ರಮಾಣ ಮುರಿಯೂದ ಅಂದ್ರ ಸುಮ್ಮನ ಅಲ್ಲ. ಸ್ವಾಮಿ, ಸ್ವಾಮಿ ಪಟ್ಟ ಕಳಕೊಳ್ತಾರ. ಪಾಪ ಸಂಕೀರ್ತನ ಮಾಡಿದಾಂವ, ಹೊರಗ ಬಂದ ಅಲ್ಲೆ ಏನ ನಡೀತು ಅಂತ ಎಲ್ಲಾ ಹೇಳಿದರ, ಅದು ದೈವ ದ್ರೋಹ ಮಾಡಿದಂಗ. ಸಾಮಾನ್ಯವಾಗಿ ಪ್ರಾಯಶ್ಚಿತ್ತ ವಿಧಿಯು ಅನಾಮಧೇಯದ ಸೋಗಿನಲ್ಲಿ ನಡೀತದ. ನಮ್ಮಂತ ಸಣ್ಣ ಸಣ್ಣ ಊರಾಗ ಈ ಅನಾಮಧೇಯತನ, ಅಜ್ಞಾತತನ ಸಾಧ್ಯ ಆಗಾಕಿಲ್ಲ. ಆದರೂ ಅಂದಿನ ಸ್ವಾಮಿ ಮಿಖೇಲಪ್ಪ ಅವರು ಹಳೆ ದೊಡ್ಡ ಕಣ್ಣಿನ ಜಾಲರಿ ಬದಲಿಸಿ ಸಣ್ಣ ಕಣ್ಣಿನ ಜಾಲರಿ ಬಡಿಸಿದ್ದರ ನೋಡ ಆಗ. ನೀತಿವಂತ ಪುಣ್ಯಾತ್ಮರ ಅವರು.”
“… … …!”
“ಈಗಿನ ಸಣ್ಣ ಸ್ವಾಮಿಗಳದ್ದ ಏನ್ ಕತಿನೋ ನನಗ ಸರಿಯಾಗಿ ಗೊತ್ತಿಲ್ಲ, ಪಾಪ ಸಂಕೀರ್ತನದ ಸಂಸ್ಕಾರದ ಬಾಧ್ಯತೆ ಹೊರೂದ ಅಂದ್ರ ದೊಡ್ಡ ಗುಂಡಕಲ್ಲ ಕೊಳ್ಳಿಗೆ ಕಟಗೊಂಡಂಗ ಇರ್ತದ ಅಂತಾರ ದೊಡ್ಡ ಸ್ವಾಮ್ಯಾರು. ಈ ಕಾಲದ ಹೊಸಾ ಸ್ವಾಮಿಗಳ ಹುಡುಗತನ ಗೊತ್ತಾಗುದಿಲ್ಲ. ಆದರ, ಈ ಅಪ್ಪ, ಮಕ್ಕಳು ಹುಡಗತನದಾಗ ಎಡವಟ್ಟ ಮಾಡಕೋತ ಬಂದದ್ದ ಅಂತೂ ಕಣ್ಣಾರೆ ನೋಡಕೋತ ಬಂದೀನಿ ನೋಡ.ʼʼ
``ನೂಲಿನಂಗ ಸೀರಿ. ಅಪ್ಪ ಒಂದ ಸುಳ್ಳ ಹೇಳಿದರ, ಮಗಾ, ಈಗ ಅದರ ತೆಲಿಮ್ಯಾಲ ಹೊಡದವರಂಗ ಸುಳ್ಳ ಹೇಳಕೋತ ಹೊಂಟಾನ ಅಂತಿರೇನ್ ಮತ್ತ?”
``ಹೌದ ಹೌದ, ಅವರೆಲ್ಲಾ ಖರೆ ಮಾತಾಡೂದ ಕಡಿಮಿ.”
``ಅದಕ, ಅವರ ಮನೆತನಕ್ಕ ಸುಳ್ಳದ ಅಂತ ಅಡ್ಡಹೆಸರ ಇಟ್ಟರೋ ಏನೋ?’’
``ಅಪ್ಪಾ ಅದು ಖರೇನ ಇದ್ದರೂ ಇದ್ದೀತ.ʼʼ
ಇಷ್ಟೋತ್ತನ, ಕತಿ ಕೇಳಕೋತ ಸುಮ್ಮನ ಕೂತಿದ್ದ ಮಗಾ ಜಾನಿ ನಡವ ಬಾಯ ಹಾಕಿದ್ದ.
“ಇದೇನ್ ಮಾತ ಅಂತ ಆಡ್ತೀರಿ. ಅದೆಲ್ಲೋ ಹುಬ್ಬಳ್ಳಿ ಸನೇಕಿನ ಸುಳ್ಳ ಹಸರಿನ ಊರಿಂದ ಅವರು ಇಲ್ಲಿಗೆ ಬಂದವರಂತ. ಸುಳ್ಳ ಹೆಸರಿನ ಊರಿಂದ ಬಂದವರ ಸುಳ್ಳದ ಆಗ್ಯಾರು. ಅದಕ್ಕ ಅವರ ಮನೆತನಕ್ಕ ಸುಳ್ಳದ ಅಂತ ಹೆಸರ ಬಿದ್ದದ. ನೀವೂ.. ಏನರೆ ಸುಳ್ಳೊಂದ ಸೊಟ್ಟೊಂದ ಹೇಳಬ್ಯಾಡ್ರಿ’’ ಜಾನಿ ಅವ್ವ ತಕರಾರ ತಗದಳು.
ಅಡುಗೆ ಮನಿಯೊಳಗಿಂದ ಕುಕ್ಕರ್ ಶಿಳ್ಳ ಹೊಡದಿದ್ದ ಕೇಳಿಸಿತು. ಜಾನಿ ಅವ್ವ ಫಿಲೋಮಿನಾ ಅವಸರದಲೇ ಅಡಗಿ ಮನಿಗೆ ಹೋದಳು.
ಅಷ್ಟರಲ್ಲಿ, ಖರೆಖರೇನ ಕಾಗಿ ಹಾರಾಕ ಗಿಡಾ ಮುರಕೊಂಡ ಬೀಳಾಕ ಸರಿಹೋಯಿತು’ ಅನ್ನೂಹಂಗ, ಅದ ವ್ಯಾಳ್ಯಾಕ ನೆರಮನಿಯಿಂದಸುಳ್ಳದ’ರ ಪ್ರಸಂಗಗಳಿಗೆ ವಾಚ್ಯಾರ್ಥದಲ್ಲಿ ಹತ್ತಿರದ ಪುರಂದರ ದಾಸರ ಒಂದು ಪ್ರಸಿದ್ಧ `ನಿಂದಾ ಸ್ತುತಿ’ಯ ಪದ ಕೇಳಿಬರಾಕ ಶುರು ಆಯಿತು.
ಅಲ್ಲಿ ಯಾರೋ `ಯೂ ಟ್ಯೂಬ್’ ನೋಡಕೋತ, ಪುರಂದರ ದಾಸರ ಆ ನಿಂದಾ ಸ್ತುತಿಯ ಬೆಡಗಿನ ಪದ ಹಾಡಾಕ ಕಲಿಲಿಕ್ಕೆ ಹತ್ತಿದ್ರಂತ ಕಾಣ್ತದ.
“ಸುಳ್ಳು ನಮ್ಮಲ್ಲಿಲ್ಲವಯ್ಯ
ಸುಳ್ಳೇ ನಮ್ಮನಿ ದೇವರು ||ಪಲ್ಲವಿ||
ಇಲಿಯು ಒಲೆಯ ಚಾಚೂದ ಕಂಡೆ
ಬೆಕ್ಕು ಭಕ್ಕರಿ ಮಾಡುದ ಕಂಡೆ,
ಮೆಣಸಿನಕಾಯಿ ಕಂಡೆನಪ್ಪ ಒನಕೆ ಗಡತರ ||ಪಲ್ಲವಿ||
ಕಪ್ಪೆ ಪಾತರ ಕಣಿವುದ ಕಂಡೆ
ಏಡಿ ಮದ್ದಳೆ ಬಡಿವುದ ಕಂಡೆ
ಮೆಕ್ಕಿ ತೆನೆಯ ಕಂಡೆನಪ್ಪ ತೆಕ್ಕೆ ಗಡತರ ||ಪಲ್ಲವಿ||”
–ಎಫ್.ಎಂ.ನಂದಗಾವ
