ತ್ಯಾಗ, ನಿಸ್ವಾರ್ಥ ಹಾಗೂ ಮಾನವೀಯತೆಯ ಬೆಳಕು ಪಸರಿಸುವ ಅಪರೂಪದ ಜೀವನಗಾಥೆ ‘ಹೆಗಲು’: ಬೆಂಶ್ರೀ ರವೀಂದ್ರ, ಬೆಂಗಳೂರು

ಬದುಕು ಹಲವು ಸಾಧನೆಗಳಿಗೆ ಅವಕಾಶ ಮಾಡುವ ರಂಗಮಂಚ. ಯಾವ ಸಾಧನೆಯನ್ನೂ ಒಬ್ಬ ವ್ಯಕ್ತಿ ಮಾಡಲಾರ. ಆತನಿಗೆ ಹತ್ತಾರು ಜನರ ಸಹಕಾರ ಇದ್ದೇ ಇರುತ್ತದೆ. ಅದು ಅವನ ಅರಿವಿಗೆ ಬರಬಹುದು ಅಥವಾ ಬಾರದಿರಬಹುದು. ಈ ಸಾಧನೆಗಳು ವ್ಯಷ್ಟಿಯಾಗದೆ ಸಮಷ್ಟಿಯಾದಾಗ ಮಾತ್ರ ಸಾರ್ಥಕವಾಗುತ್ತದೆ. ಸಾಧಿಸಿ ಮುಂದೆ ನಡೆದವನು ತನ್ನನ್ನು ಆ ಎತ್ತರಕ್ಕೆ ಕರೆದೊಯ್ಯದವರನ್ನು ಪ್ರಜ್ಞಾಪೂರ್ವಕವಾಗಿ ಕೃತಜ್ಞತೆಯಿಂದ ನೆನಪಿಸಿಕೊಂಡಾಗ ಆ ಸಾಧನೆಗೂ, ವ್ಯಕ್ತಿಗೂ ಗೌರವ ಬರುತ್ತದೆ. ಅಂತಹ ಸಾರ್ಥಕತೆ “ಹೆಗಲು” ಪುಸ್ತಕದಲ್ಲಿ ಕಾಣುತ್ತದೆ. “ಹೆಗಲು”, ಒಂದು ಅಪರೂಪದ ಜೀವನಗಾಥೆ. ಈ ಕಥನದಲ್ಲಿ ’ಅಪ್ಪನ ಹೆಗಲು ಅಮ್ಮನ ಮಡಿಲು’ ಆಗಿರುವ ಚಮತ್ಕಾರದ ಚಿತ್ರಣವಿದೆ. ಒಬ್ಬ ಸರಳ, ನಿಸ್ಪೃಹ, ಪಾರದರ್ಶಕ ವ್ಯಕ್ತಿಯ ಆಂತರ್ಯದಲ್ಲಿ ‘ತಾನೇ ಕೇಂದ್ರವಾಗಿ ಉಳ್ಳ ವ್ಯಕ್ತಿತ್ವ’ ದ ಜೊತೆಯಲ್ಲಿ ಅಷ್ಟೇ ಶಕ್ತಿಯುತವಾದ ತಾಯಿ, ತಂದೆ, ಸಹೋದರ, ಗೆಳೆಯ, ಆತ್ಮ ಬಂಧು… ಮೊದಲಾದ ಸಕಾರಾತ್ಮಕ ಭಾವಗಳೂ ಇರುತ್ತವೆ ಮತ್ತು ಅವುಗಳು ರಕ್ತ ಸಂಬಂಧಗಳನ್ನು ಮೀರಿ ಇರಲು ಸಾಧ್ಯ ಎಂಬುದನ್ನು ಈ ಜೀವನಚಿತ್ರವು ಸಮಾಜಕ್ಕೆ ಯಶಸ್ವಿಯಾಗಿ ತಿಳಿಸುತ್ತದೆ.

ಖ್ಯಾತ ಶಿಕ್ಷಣ ತಜ್ಞ ಡಾ. ಎಂ.ಕೆ. ಶ್ರೀಧರ ಅವರನ್ನು ಕರ್ನಾಟಕ ಮಾತ್ರವಲ್ಲ, ಇಡೀ ಭಾರತವು ಬಲ್ಲದು. ವಾಣಿಜ್ಯ ಶಾಸ್ತ್ರದ ಪ್ರಾಧ್ಯಾಪಕರಾಗಿ, ಬೆಂಗಳೂರಿನ ವಿಜಯಾ ಕಾಲೇಜು ಹಾಗೂ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ದುಡಿದು ವಿದ್ಯಾರ್ಥಿಗಳಿಂದ ಮನ್ನಣೆ ಪಡೆದವರು. ಬ್ಯಾಂಕಿಂಗ್ ನಲ್ಲಿ ಪಿಎಚ್ಡಿ ಪದವಿಯನ್ನು ಮೈಸೂರು ವಿಶ್ವವಿದ್ಯಾನಿಲಯದಿಂದ ಪಡೆದು ಸ್ವತಃ ಹಲವಾರು ವಿದ್ಯಾರ್ಥಿಗಳಿಗೆ ಪಿಎಚ್ಡಿ ನಿರ್ದೇಶಕರಾಗಿ ಕೆಲಸ‌ಮಾಡಿದವರು. ಜ್ಞಾನ ಅಯೋಗ, ರಾಷ್ಟ್ರೀಯ ಶಿಕ್ಷಣ ನೀತಿ ಸಮಿತಿಯಲ್ಲಿ ಪ್ರಮುಖ ಜವಾಬ್ದಾರಿಗಳನ್ನು ಹೊತ್ತವರು. ಮಿಗಿಲಾಗಿ ಹಲವಾರು ಸಂಘ ಸಂಸ್ಥೆಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಕೊಂಡವರು. ಪದ್ಮಶ್ರೀ , ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಭಾರತೀಯ ವಿಜ್ಞಾನ ಕಾಂಗ್ರೆಸ್ ‌ಅಧ್ಯಕ್ಷರ ಚಿನ್ನದ ಪದಕ… ಮೊದಲಾದ ಹಲವಾರು ಪ್ರಶಸ್ತಿಗಳನ್ನು ಪಡೆದು ಜನಮನ್ನಣೆಯನ್ನು ಪಡೆದವರು. ಇಂತಹ ಹಲವಾರು ಸಾಧನೆಗಳನ್ನು ಮಾಡಿ ಜನಮುಖಿಯಾಗಿ ದುಡಿಯುತ್ತಿರುವ ಶ್ರೀಧರ್ ಅವರು ಪೋಲಿಯೋದಿಂದಾಗಿ ಎರಡು ಕಾಲು ಹಾಗೂ ಒಂದು ಕೈಯನ್ನು ಉಪಯೋಗಿಸಲಾರರು. ಗಾಲಿ ಕುರ್ಚಿಗೆ ಬಂಧಿತರಂತೆ ಕಂಡರೂ, ತಮ್ಮ ದೈಹಿಕ ಇತಿಮಿತಿಗಳನ್ನು ಮೀರಿ ಪ್ರಬಲವಾದ ಆತ್ಮಶಕ್ತಿ ಮತ್ತು ದೃಢ ಮನೋಭಾವದಿಂದ, ಸತತ ಜನ ಸಂಪರ್ಕ, ಸೇವೆಗಳಿಂದ ಜನಜನಿತರಾಗಿರುವವರು.

ಆದರೆ, ಈ ಜೀವನ ಚರಿತ್ರೆ ಅವರದಲ್ಲ, ಶ್ರೀಧರ್ ಅವರು ನೆರಳು ಅನ್ನುವುದಕ್ಕಿಂತ ಅವರ ಭಾಗ ಹಾಗೂ ಭಾವವೇ ಆಗಿರುವ ಶ್ರೀ ನರಸಿಂಹ ಅವರದ್ದು. ೧೯೮೪ ರಿಂದಲೂ ಶ್ರೀಧರ್ ಅವರ ಆಪ್ತ ಸಹಾಯಕರಾಗಿ ೨೪ ಗಂಟೆಗಳ ಕಾಲ ಅವರ ಎಲ್ಲಾ ಅಗತ್ಯಗಳಿಗೆ ಸ್ಪಂದಿಸುತ್ತಾ ಇರುವವರು ಶ್ರೀ ನರಸಿಂಹ ಅವರು. ಲೇಖಕರಾದ ಶ್ರೀಮತಿ ಭಾರತಿ ಹೆಗಡೆಯವರು ಜೀವನ ಚರಿತ್ರೆಯನ್ನು ದಾಖಲಿಸಲು ವಿಭಿನ್ನವಾದ ತಂತ್ರವನ್ನು ಅಳವಡಿಸಿಕೊಂಡಿದ್ದಾರೆ. ನರಸಿಂಹ, ಅವರ ಪತ್ನಿ ಸುಧಾ, ಶ್ರೀಧರ್ ಅವರೂ ಸೇರಿದಂತೆ ಒಟ್ಟು ೧೭ ಜನರಿಂದ ವಿಷಯವನ್ನು ಸಂಗ್ರಹಿಸಿದ್ದಾರೆ. ಇವರೆಲ್ಲರೂ ನರಸಿಂಹ ಅವರ ಬದುಕನ್ನು, ತಮ್ಮ ಅನುಭವ ಮತ್ತು ಗ್ರಹಿಕೆಗಳನ್ನು ಪ್ರಥಮ ಪುರುಷದಲ್ಲಿ ತಮ್ಮ ಮಾತುಗಳಲ್ಲಿ ಅಭಿವ್ಯಕ್ತಿಸಿದ್ದಾರೆ. ನರಸಿಂಹ ಅವರದ್ದು ಮಂಚೇನಹಳ್ಳಿ. ದೊಡ್ಡ ಬಡ ಕುಟುಂಬ. ಅನ್ನ ಆಹಾರಕ್ಕಾಗಿ ತಿಣುಕುವ ಪರಿಸ್ಥಿತಿ. ಮಂಚೇನಹಳ್ಳಿಯಲ್ಲಿ, ನಿಪ್ಪಟ್ಟು, ಚಕ್ಕುಲಿ, ಹಣ್ಣು ಮಾರುತ್ರಾ ಸಂಸಾರಕ್ಕೆ ಸಹಕಾರಿಯಾಗಿದ್ದ, ಕಥಾ ನಾಯಕರು ಬೇರೆ ಕೆಲಸ ಹುಡುಕುತ್ತಿರುತ್ತಾರೆ. ೧೯೮೪ ರಲ್ಲಿ, ಸಮಾರಂಭವೊಂದರಲ್ಲಿ, ಶ್ರೀಧರ್ ಅವರ ತಂದೆ ‘ಮಗನನ್ನು ನೋಡಿಕೊಳ್ಳಲು ಬರುತ್ತಿಯಾ” ಎಂದು ಕರೆದಾಗ, ಒಪ್ಪಿಕೊಂಡು ಬೆಂಗಳೂರಿಗೆ ಬರುತ್ತಾರೆ. ಅಲ್ಲಿಂದ ಆತ ಹಿಂದುರಿಗೆ ನೋಡಲಿಲ್ಲ. ಯಾವ ತಪಸ್ವಿಗೂ ಕಡಿಮೆ ಇಲ್ಲದ ನಿಷ್ಠೆಯಿಂದ ಒಪ್ಪಿಕೊಂಡ ಕೆಲಸವನ್ನು ಕಳೆದ ೪೦ ವರ್ಷಗಳಿಂದ ಮಾಡುತ್ತಿದ್ದಾರೆ.

ಮೊದಲಲ್ಲಿ, ಶ್ರೀಧರ್ ಅವರಿಗೆ ದೈಹಿಕ ಸಹಾಯ ಒದಗಿಸುತ್ತಿದ್ದ ನರಸಿಂಹ, ನಂತರದ ದಿನಗಳಲ್ಲಿ ವೈಯುಕ್ತಿಕ ಆಡಳಿತ ಸಹಾಯಕರೂ ಆಗುತ್ತಾರೆ. ಶ್ರೀಧರ್ ಅವರು ಪಿಎಚ್ಡಿ ಮಾಡುವಾಗ, ನಂತರ ಜ್ಞಾನ ಅಯೋಗದಲ್ಲಿ, ಶಿಕ್ಷಣ ಸಮಿತಿಯಲ್ಲಿ ಶ್ರೀಧರ್ ಅವರಿಗೆ ಮಾಹಿತಿ ಸಂಗ್ರಹಣೆ, ಸಂವಹನ, ಸಂಪರ್ಕ, ಸಮೀಕ್ಷೆ, ಸಭೆಗಳನ್ನು ಕರೆಯುವುದು, ಸಂಘಟಿಸುವುದು ಮೊದಲಾದ ಬಹುಮುಖ್ಯ ಕೆಲಸಗಳಲ್ಲಿ ನಂಬಿಕೆಯ ಸಹಾಯಕರಾಗಿದ್ದಾರೆ. ಶ್ರೀಧರ ಅವರ ನಂಬಿಕೆ ಹಾಗೂ ವಿಶ್ವಾಸವನ್ನು ಎಂದೂ ನರಸಿಂಹ ಮುರಿದಿಲ್ಲ. ಶ್ರೀಧರ್ ಹೇಳುತ್ರಾರೆ “ನರಸಿಂಹ ನನ್ನನ್ನು ನೋಡಿಕೊಳ್ಳಲು ಬಂದರೂ ಅದೊಂದು ಉದ್ಯೋಗವೇ ಆಗಿತ್ತು. ಆದರೆ ನರಸಿಂಹ ಅದನ್ನು ಕೇವಲ ಒಂದು ಉದ್ಯೋಗವೆಂದು ನೋಡದೆ ಇಂದು ಸೇವೆಯೆಂದು ಪರಿಗಣಿಸಿದರು. ತುಂಬ ಪ್ರೀತಿಯಿಂದ ನನ್ನನ್ನು ಮತ್ತು ನನ್ನ ಕೆಲಸಗಳನ್ನು ನೋಡಿದರು. ನನ್ನಂಥ ಒಬ್ಬ ಅಂಗವೈಕಲ್ಯ ಇರುವವರಿಗೆ ಸಹಾಯಕರ ಅಗತ್ಯ ಇದ್ದೇ ಇರುತ್ತದೆ. ಆದರೆ ನನ್ನನ್ನು ನೋಡಿಕೊಳ್ಳುವುದೆಂದರೆ ನನ್ನ ಇಡೀ ಕಾರ್ಯವ್ಯಾಪ್ತಿಯನ್ನು ಕಲಿಯದಯೇ, ಓದದೆಯೇ ನರಸಿಂಹ ನೋಡಿಕೊಂಡರಲ್ಲ, ಅದು ನನ್ನನ್ನು ಇವತ್ತಿಗೂ ಬೆರಗುಗೊಳಿಸಿದೆ.”
ಸರಸಿಂಹ ಅವರು ಮಾತ್ರವಲ್ಲ, ಅವರ ಹೆಂಡತಿ ಶ್ರೀಮತಿ ಸುಧಾ ಅವರೂ ಅಸಾಧಾರಣವಾದ ಹೊಂದಾಣಿಕೆಯನ್ನು ಮಾಡಿಕೊಂಡು ಈ ವಿಶಿಷ್ಟವಾದ ಜೀವನದ ಅಂಗವಾಗಿದ್ದಾರೆ. ನರಸಿಂಹ ಅವರ ಮಗ ಭರತ್ ಅವರೂ ಕೂಡಾ ಶ್ರೀಧರ್ ಕುಟುಂಬದ ಭಾಗವಾಗಿದ್ದಾರೆ.

ಶ್ರೀಧರ್ ಅವರು ತಮ್ಮ ಜೀವನದ ಸಾಧನೆಗೆ ನರಸಿಂಹ ಅವರ ಕಾಣಿಕೆ ಬಲು ದೊಡ್ಡದು ಎಂದು ಗುರುತಿಸಿದ್ದಾರೆ. ಓದುಗರಿಗೆ ಅನ್ನಿಸಬಹುದು. ಅಂಗವೈಕಲ್ಯದ ಸವಾಲನ್ನು ದೃಢಚಿತ್ತದಿಂದ ಗೆದ್ದು, ಶಿಕ್ಷಣ, ಸಾಮಾಜಿಕ ಕ್ಷೇತ್ರಗಳಿಗೆ ಅಪಾರ ಸೇವೆ ಸಲ್ಲಿಸಿದ ಶ್ರೀಧರ್ ಜೀವನ ಚರಿತ್ರೆಯನ್ನು ರಚಿಸುವುದು ಸರಿ. ಆದರೆ, ನರಸಿಂಹ ಅವರ ಜೀವನ ಚರಿತ್ರೆ ಯಾಕೆ? ಅಂತ. ಈ ಪ್ರಶ್ನೆಗೆ ಶ್ರೀಧರ್ ಅವರೇ ಉತ್ತರಿಸಿದ್ದಾರೆ ಕೆಳಕಂಡಂತೆ. ” ನಾನೀಗ ನರಸಿಂಹ ಕುರಿತಾಗಿ ಪುಸ್ತಕ ಹೊರತರಬೇಕು ಅಂದುಕೊಂಡಿದ್ದಕ್ಕೂ ಒಂದು ಕಾರಣ ಇದೆ. ಅದು ಅವರನ್ನು ಸಂತೈಸುವುದಕ್ಕೆ ಅಥವಾ ಇವರಿಗೇನೋ ಕಿರೀಟ ಕೊಡುವುದಕ್ಕೆ ಅಲ್ಲ. ಬದಲಾಗಿ ಸಮಾಜದಲ್ಲಿ ಇಂಥ ವ್ಯಕ್ತಿ ಇದ್ದಾರೆ. ನಿಸ್ವಾರ್ಥವಾಗಿ, ಸೇವಾ ಮನೋಭಾವನೆಯಿಂದ ಕೆಲಸ ಮಾಡುತ್ತಿದ್ದಾರೆ. ಬೇರೆಯವರಿಗಾಗಿ ಬದುಕಿದ, ಅದರಲ್ಲೂ ವಿಶೇಷಚೇತನ ವ್ಯಕ್ತಿಗಳನ್ನು ಬೆಳಕಿಗೆ ತರಬೇಕೆಂಬ ಉದ್ದೇಶದಿಂದ ಮಾತ್ರ ಈ ಪುಸ್ತಕ ವನ್ನು ತರುತ್ತಿರುವುದು”
“ಹೆಗಲು”, ಎರಡು ಹೆಗಲುಗಳನ್ನು ಬೆಳಕಿಗೆ ತಂದಿದೆ. ಒಂದು ಸಮಾಜಕ್ಕೆ ಹೆಗಲಾದ ಶ್ರೀಧರ್ ಅವರದ್ದು, ಮತ್ತೊಂದು ಶ್ರೀಧರ್ ಅವರಿಗೆ ಹೆಗಲಾದ ನರಸಿಂಹ ಅವರದ್ದು.

ಕನ್ನಡಿಗರು ” ಹೆಗಲು” ಓದಿ, ಸ್ಪೂರ್ತಿ ಪಡೆದುಕೊಂಡರೆ ಭಾರತಿ ಹೆಗಡೆಯವರ ಶ್ರಮ ಸಾರ್ಥಕವಾಗುವುದು.

-ಬೆಂಶ್ರೀ ರವೀಂದ್ರ, ಬೆಂಗಳೂರು

“ಹೆಗಲು”
ಲೇಖಕರು ; ಭಾರತಿ ಹೆಗಡೆ
ಪ್ರಕಾಶಕರು ; ಬೆನಕ ಬುಕ್ಸ ಬ್ಯಾಂಕ್.
ಪುಟಗಳು ; 142, ಬೆಲೆ ; ₹180/-
ಅಧಿಕೃತ ಮಾರಾಟಗಾರರು ;
ಗಹನಾ ಬುಕ್ಸ್ ಲಿಂಕ್ಸ್
ಮೊ; 73384 37666


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x