ಹಕ್ಕರಕಿಯೂ, ಸಮೀಕ್ಷೆಯೂ: ಎಫ್.‌ ಎಂ. ನಂದಗಾವ

ʻʻನಾವ್, ಹಕ್ಕರಕಿ ಮಾರೂದಿಲ್ಲರಿ ಸಾವಕಾರರ.ʼʼ

ʻʻಯಾಕವ್ವ, ಹಕ್ಕರಕಿ ನೀವ್ಯಾಕ ಮಾರೂದಿಲ್ಲ?ʼʼ

ʻʻನಿಮಗ ಕಾಯಿಪಲ್ಲೆ ಬೇಕಲಾ? ಮೆಂತೆ ಪಲ್ಲೆ ಬೇಕೋ? ಪುಂಡಿಪಲ್ಲೆ ಬೇಕೋ, ಸಬ್ಬಸಗಿ ಬೇಕೋ, ರಾಜಗಿರಿ ಬೇಕೋ ತಗೊಳ್ರಿ. ಕೋತಂಬ್ರಿ ಬೇಕಾತು ತಗೊಳ್ರಿ. ಬರಿ ಕರಿಬೇವು ಕೊಡಾಂಗಿಲ್ಲ ನೋಡ್ರಿ.ʼʼ ಸಂತೆ ಮೈದಾನದ ಒಳಗೆ ಎತ್ತರದ ಕಟ್ಟೆಗಳಲ್ಲಿನ ಒಂದು ಕಟ್ಟೆಯಲ್ಲಿ ಕುಳಿತು ಕಾಯಿಪಲ್ಲೆ ಮಾರುತ್ತಿದ್ದ ಸಾಂವತ್ರಕ್ಕ ಹೇಳಾಕ್ಹತ್ತಿದ್ದಳು.

ಸಾಂವತ್ರಕ್ಕನ ಹಣಿ ಮ್ಯಾಲ ಮೂರು ಬೆರಳಿನ ವಿಭೂತಿ ಇದ್ದರ, ಕೊರಳಾಗ ತಾಳಿ ಜೋಡಿ ಬೋರಮಾಳ ಮತ್ತು ಅವಲಕ್ಕಿ ಸರಗಳು ಇದ್ದವು. ಚೌಕಡಿ ಚೌಕಡಿ ಚೌಕಳ ಹಸಿರು ಬಣ್ಣದ ಇಲಕಲ್‌ ಸೀರಿ, ಗುಳೇಗುಡ್ಡ ಖಣ ತೊಟ್ಟಕೊಂಡಿದ್ದಳು, ಬಾಯಿತುಂಬ ಎಲಿ ತಿಂದ, ಬಾಯಿ ಕೆಂಪಗ ಮಾಡಿಕೊಂಡಿದ್ದಳು.

ಎರಡ ವಾರದ ಸಂತ್ಯಾಗ ಹೆಂಡತಿ ಜೋಡಿ ಬಂದಾಗ, ಆಕೀ ಬಲ್ಲೆ ತಪ್ಪಲಪಲ್ಲೆ ತಗೋತಿದ್ದ ಶಾಂತವೀರಪ್ಪ ಕುಬಸದಗ, ಆಕಿ ಮಾತುಗಳ ಒಗಟಿನಂಗ ಕಾಡಾಕ್ಹತ್ತಿದ್ದವು.

ʻʻಯಾಕವ್ವ, ನನಗ ಇವತ್ತ ಹಕ್ಕರಕಿ ಪಲ್ಲೆ ತಿನ್ನು ಮನಸ್ಸಾಗೈತಿ. ನೀ ಅರೆ ನಾ ಮಾರಾಂಗಿಲ್ಲ ಅಂತಿಯಲ್ಲ, ಯಾಕವಾ?ʼʼ

ʻʻನೀವು, ಅಂಥಾದ್ದೆಲ್ಲಾ ನಂಬಲ್ಲಿ ಕೇಳಬಾರದರಿ ಸಾವಕರರ.ʼʼ

ʻʻಚೀಲಾ ಹಿಡಿರಿ, ನಿಮ್ಮ ಮನಿ ಹೆಣ್ಮಕ್ಕಳು ಯಾರೂ ನಿಮ್ಮ ಜೋಡಿ ಬಂದಿಲ್ಲ. ಅದಕ್ಕ ಏನೇನೋ ಕೇಳಾಕ್ಹತ್ತೀರಿ. ನನಗ ಗೊತ್ತದ ವೈನಿ ಸಬ್ಬಸಗಿ, ಪುಂಡಿ ಪಲ್ಲೆ ತರಾಕ ಹೇಳಿರ್ತಾರ, ಹೋಗಿ ಹೋಗಿ, ನೀವು ಅದೇನೋ ಹಕ್ಕರಕಿ ಪಲ್ಲೇನ ನನ್ನ ಬಲ್ಲಿ ಬಂದ ಕೇಳಾಕ್ಹತ್ತೀರಿ.ʼʼ

ಸಾಂವತ್ರಕ್ಕ ಹೇಳುತ್ತಿದ್ದುದು ಸರಿಯಾಗಿಯೇ ಇತ್ತು. ಇಂದು ಶಾಂತವೀರಪ್ಪ ಅವರೊಂದಿಗೆ ಅವರ ಹೆಂಡತಿ ಸಂತೆಗೆ ಬಂದಿರಲಿಲ್ಲ. ಅವಳಿದ್ದರೆ, ಸಂತೆಯ ತುಂಬೆಲ್ಲಾ ಓಡಾಡಿ, ಅಲ್ಲಿ ಇಲ್ಲಿ ಚೌಕಾಶಿ ಮಾಡಿ. ಸಸ್ತಾದಾಗ ಕಾಯಿಪಲ್ಲೆ ಖರೀದಿ ಮಾಡತಿದ್ದಳು. ಏನೇ ಆದರೂ ತಪ್ಪಲಪಲ್ಲೇಗ ಮಾತ್ರ ಸಾಂವತ್ರಕ್ಕ ಕಡೇನ ತಗೊತಿದ್ದಳು. ಹಿಂಗಾಗಿ ಶಾಂತವೀರಪ್ಪ ಅವರು ಇವತ್ತ ಆಕಿಗೆ ಹತ್ತರಕಿ ಪಲ್ಲೆ ಕೊಡು ಅಂತ ಗಂಟಬಿದ್ದಿದ್ದರು.

ʻʻಅಲ್ಲವಾ ನಮ್ಮವ್ವ. ಹಕ್ಕರಕಿ ಪಲ್ಲೆ ಅದ ಅನ್ನೂದ ಮರ್ತಿದ್ದೆ ನಾ. ಈಗ ಮತ್ತ ನನ್ನ ಮನಿಯಾಕೀನ ಹಕ್ಕರಕಿ ಪಲ್ಲೆ ರುಚಿ ಹಚ್ಚಾಳ, ಮಳಿಗಾಲ ಶುರು ಆಗಾನ ಎರಡ ವಾರ ಆತೂ ಹಕ್ಕರಕಿ ಪಲ್ಲೆ ಮಾಡಿ ಮಾಡಿ ಹಾಕ್ಯಾಳ. ಅದು ಒಂದ ನಮೂನಿ ಮೆಂತೆ ಪಲ್ಲೆ ತಿಂದಂಗಾಗ್ತದ. ನೀ ನೋಡಿದರ ನಾ ಹಕ್ಕರಕಿ ಪಲ್ಲೆ ಮಾರಾಂಗಿಲ್ಲ ಅಂತಿಯಲ್ಲ.ʼʼ

ʻʻಹೌದರಿ ಸಾವಕಾರರ, ನಾವು ಹಕ್ಕರಕಿ ಪಲ್ಲೆ ನಾವೂ ತಿಂತೀವಿ. ನಮ್ಮ ಹೊಲದಾಗೂ ಮನಾರಗಟ್ಟಲೆ ಹಕ್ಕರಕಿ ಪಲ್ಲೆ ಬೆಳದಿರ್ತದ. ಎಲ್ಲಾ ಕಾಲಕಸದಂಗ ಬೆಳದಿರ್ತದ. ಅದನ್ನ ಕಿತಗೊಂಡ ಬಂದ ಮಾರಿದರ ದರಿದ್ರ ಹತ್ತದಂತ ದರಿದ್ರ, ನಾವೂ ಯಾರೂ ಅದನ್ನು ಮಾರೂದಿಲ್ಲರಿ.ʼʼ

ʻʻಅಲ್ಲವಾ, ಮತ್ತ ನಮ್ಮ ಮನಿಯಾಕಿ ಹಕ್ಕರಕಿ ಪಲ್ಲೆ ಎಲ್ಲಿಂದ ತರ್ತಿದ್ದಳವಾ?ʼʼ

ʻʻಸಾವಕಾರರ ನನಗೇನು ಗೊತ್ತರಿ? ಹಂತೋಟ್ಲೆ ಬಂದಿದ್ದರ… ಅಲ್ಲಿ ಸಂತಿ ಮೈದಾನದ ಗೇಟಿನ ಹೊರಗ ಹಕ್ಕರಕಿ ಮಾರಾವರು ಇದ್ದರ, ನಿಮಗ ಹಕ್ಕರಕಿ ಪಲ್ಲೆ ಸಿಗ್ತದ ಇಲ್ಲಕಂದ್ರ ಇಲ್ಲರಿ.ʼʼ

ಸಂತೆ ಮೈದಾನದ ಗೇಟಿನ ಹತ್ತಿರ ಹೋಗಿ, ಅಲ್ಲಿ ಗೋವಿನ ಜೋಳದ ತೆನಿ ಹಚ್ಚಕೊಂಡ ಕೂತವನಿಗೆ ʻʻಇಲ್ಲಿ ಹತ್ತರಕಿ ಮಾರ್ತಾರಂತಲ್ಲ, ಎಲ್ಲದಾರ ಅವರು?ʼʼ ಶಾಂತವೀರಪ್ಪ ಕುಬಸದ ಅವರು ಕೇಳಿದರು,

ʻʻಸಾವಕಾರರ, ಮುಂಜಾನಿದ್ದ ಇಲ್ಲಿಮಟ ಮುದಕಿ ಮಲ್ಲವ್ವ ಇಲ್ಲಿ ಕುಂತಿದ್ಲು, ದೊಡ್ಡ ಗೊಬ್ಬರ ಚೀಲದಾಗ ತುಂಬಿಕೊಂಡ ಹತ್ತರಕೀ ಪಲ್ಯಾನ್ನ, ಅಂಗೈ ಗುಂಪಿ ಗುಂಪಿ ಮಾಡಿ ಹತ್ತ ರೂಪಾಯಿಗೊಂದ ಗುಂಪಿ ಮಾರಕೋತ. ಆಕಿ ಮಟಮಟ ಮಧ್ಯಾನ್ನನ ವ್ಯಾಪಾರ ಮುಗಿಸಿಕೊಂಡ ಊರ ಹಾದಿ ಹಿಡದಾಳ್ರಿ.ʼʼ

*

ಮೂವತ್ತು ವರ್ಷಗಳ ಹಿಂದೆ ಶಾಂತವೀರಪ್ಪ ಕುಬಸದ ಕೆಲಸದ ನಿಮಿತ್ತ ಬೆಂಗಳೂರು ಸೇರಿ ಕೆ.ಶಾಂತವೀರಪ್ಪ ಆಗಿದ್ದರು. ರಾಜಾಜಿನಗರದಲ್ಲಿ ಬಾಡಿಗೆ ಮನೆ ಹಿಡಿದಿದ್ದರು. ಶಾಸಕರಾಗಿದ್ದ ಎಸ್‌.ಆರ್‌. ಬೊಮ್ಮಾಯಿ ಅವರ ವಸೂಲಿಬಾಜಿಯಿಂದ, ಎಸ್‌ ಎಸ್‌ ಎಲ್‌ ಸಿ ಪಾಸಾಗಿದ್ದ ಶಾಂತವೀರಪ್ಪಗ ಬೆಂಗಳೂರಿನ ಜನತಾ ಬಜಾರಿನಲ್ಲಿ ಗುಮಾಸ್ತನ ಕೆಲಸ ಸಿಕ್ಕಿತ್ತು. ಸಮೀಪದ ಭದ್ರಾಪುರದಲ್ಲಿದ್ದ ಸಂಬಂಧಿಕರಲ್ಲೇ ಒಂದು ಹುಡುಗಿಯನ್ನು ನೋಡಿ, ಅವರ ತಂದೆ ತಾಯಿ ಮದುವೆ ಮಾಡಿ, ಸಂಸಾರದ ಚಕ್ಕಡಿ ಹತ್ತಿಸಿ ಬೆಂಗಳೂರಿಗೆ ಕಳಿಸಿದ್ದರು. ಮುಂದ ಅವರು ರಾಜ್ಯದ ಮುಖ್ಯಮಂತ್ರೀನೂ ಆಗಿದ್ದರು. ಅವರ ಮಗಾನೂ ಈಗ ರಾಜ್ಯದ ಮುಖ್ಯಮಂತ್ರಿ ಆಗಿದ್ದರು.

ಬೊಮ್ಮಾಯಿ ಅವರು ವಕೀಲಿ ವೃತ್ತಿಯ ಆದಿ ಭಾಗದಲ್ಲಿ ತೊರವಿ ಗಲ್ಲಿಯ ಸನೇಕಿನ ಅಟ್ಟದ ಮ್ಯಾಲ ತಮ್ಮ ಕಚೇರಿ ಆರಂಭಿಸಿದಾಗ ಶಾಂತವೀರಪ್ಪ ಕುಬಸದ ಅವರ ಅಪ್ಪ ಚಿಕ್ಕವೀರಪ್ಪ, ಅವರಲ್ಲಿ ಚಿಕ್ಕಪುಟ್ಟ ಕೆಲಸ ಮಾಡಿಕೊಂಡಿದ್ದರು. ಸಾಲಿ ಸೂಟಿ ಇದ್ದಾಗ ಅಪ್ಪನ ಜೋಡಿ ಅಲ್ಲಿಗೆ ಹೋಗಿರತಿದ್ದ ಶಾಂತವೀರಪ್ಪಗ ಬೊಮ್ಮಾಯಿ ಅವರ ಕಡೆ, ಬಡವರು ಶ್ರೀಮಂತರು ಮತ್ತ ಬ್ಯಾರೆ ಬ್ಯಾರೆ ಸಮಾಜದ ಮಂದಿ ಬರೂದನ್ನ ನೋಡಿ ವಿಚಿತ್ರ ಅನ್ನಸ್ತಿತ್ತು. ನ್ಯಾಯದ ಪರ, ಬಡವರ ಪರ ವಕಾಲತ್ತು ವಹಿಸುತ್ತಿದ್ದ ಜನಾನುರಾಗಿ ಬೊಮ್ಮಾಯಿ ಅವರು ರಾಜಕಾರಣಕ್ಕಿಳಿದಿದ್ದರು. ಸಾವಕಾಶ ರಾಜಕೀಯವಾಗಿ ಮೇಲೇರತೊಡಗಿದ್ದ ಬೊಮ್ಮಾಯಿ ಅವರು, ತಮ್ಮ ಮುಂಚಿನ ಒಡನಾಡಿಗಳನ್ನ ಮರೆತಿರಲಿಲ್ಲ. ಹಿಂಗಾಗಿ ಶಾಂತವೀರಪ್ಪನಿಗೆ ಬೆಂಗಳೂರಿನ ಜನತಾ ಬಜಾರಿನಲ್ಲಿ ಗುಮಾಸ್ತನ ಕೆಲಸ ಸಿಕ್ಕಿತ್ತು. ಈ ಕೆಲಸವು ಶಾಂತವೀರಪ್ಪನಿಗೆ ಮನೆ ನಡೆಸುವ ಜವಾಬ್ದಾರಿಯನ್ನು ತಂದು ಕೊಟ್ಟಿತ್ತು. ಇಬ್ಬರ ಅಕ್ಕಂದಿರ ಮದುವೆ ಮತ್ತು ಇಬ್ಬರ ತಮ್ಮಂದಿರ ಶಿಕ್ಷಣದ ಜವಾಬ್ದಾರಿ ಹೆಗಲೇರಿತ್ತು. ಅವನ್ನೆಲ್ಲಾ ನಿಭಾಯಿಸಿ ತಮ್ಮ ಇಬ್ಬರು ಮಕ್ಕಳ ಸಂಸಾರವನ್ನು ತೂಗಿಸಿಕೊಂಡು ಹೋದ ಕೆ.ಶಾಂತವೀರಪ್ಪ ನಿವೃತ್ತಿಯ ಅಂಚಿಗೆ ಬಂದಾಗ ತಂದೆಯ ಮನೆಗೆ ಹಿಂದಿರುಗಿದ್ದರು.

ಸ್ವತಂತ್ರ ಹಕ್ಕಿಗಳಾಗಿದ್ದ ಇಬ್ಬರು ತಮ್ಮಂದಿರು ನೌಕರಿಗಳನ್ನು ಅರಸಿಕೊಂಡು ದೂರ ಹೋಗಿದ್ದರು. ಸಮೀಪದ ಭಂಡಿವಾಡದಲ್ಲಿನ ಹಿರಿಯರ ಹೊಲ ಮನೀನ, ಓದು ಕಲಿಯದ ತಮ್ಮ ನೋಡಿಕೊಳ್ಳುತ್ತಿದ್ದ. ಅಪ್ಪ ಅಮ್ಮ ತೀರದ ಮೇಲೆ ವಾಟ್ನಿ ಆಗಿ, ವರ್ಷಗಟ್ಟಲೆ ಸರಿಯಾದ ದೇಖರೇಕಿ ಇಲ್ಲದೇ ದೆವ್ವದ ಮನೆಯಂತಾಗಿದ್ದ ನಾಗಶೇಟ್ಟಿ ಕೊಪ್ಪದಲ್ಲಿದ್ದ ಹಳೆ ಮನೆ ಶಾಂತವೀರಪ್ಪ ಅವರ ಪಾಲಿಗೆ ಬಂದಿತ್ತು. ಊರು ಬಿಟ್ಟಾಗ ಹುಬ್ಬಳ್ಳಿ ಪ್ಯಾಟಿಯಿಂದ ದೂರ ಇದ್ದ ನಾಗಶೇಟ್ಟಿಕೊಪ್ಪ, ಬೆಂಗೇರಿ, ಗೋಪನಕೊಪ್ಪ ಹುಬ್ಬಳ್ಳಿ ಸೆರಗ ಸೇರಿದ್ದವು. ಹಿಂದ ಕೇಶವಾಪುರದ ಸುಳ್ಳ ಮತ್ತು ಬಿಜಾಪೂರಕ್ಕ ಹೋಗುವ ಕುಸಗಲ್ಲ ಕತ್ತರಿ ಹುಬ್ಬಳ್ಳಿಯ ಪ್ಯಾಟಿ ಗಡಿ ಆಗಿತ್ತು. ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದ ಮಕ್ಕಳು ಬೆಂಗಳೂರಿನವರೇ ಆಗಿದ್ದರು. ಅವರ ಮಕ್ಕಳಿಗೆ ಹಿರಿಯರ ಊರಿನ ಯಾವ ಸೆಳೆತವೂ ಇಲ್ಲವಾಗಿತ್ತು. ಅನ್ನ ಸಾರು, ಇಡ್ಲಿ, ದೋಸೆ, ಪಲಾವು, ರಾಗಿ ಮುದ್ದೆ ತಿಂದು ಬೆಳೆದ ಮಕ್ಕಳಿಗೆ ಜೋಳದ ರೊಟ್ಟಿ ಎಂದರೆ ಹಲ್ಲುನೋವು ಬರುತಿತ್ತು. ಬಸವೇಶ್ವರ ನಗರದಲ್ಲಿ ಶಾಂತವೀರಪ್ಪ ಕಷ್ಟಪಟ್ಟು ಕಟ್ಟಿಕೊಂಡಿದ್ದ ಮನೆ ಅವರ ಇಬ್ಬರು ಮಕ್ಕಳಿಗೆ ಸರಿಹೋಗಿತ್ತು.

*

ಹುಟ್ಟೂರಿಗೆ ಮರಳಿದ್ದ ಶಾಂತವೀರಪ್ಪ ಮತ್ತು ಹೆಂಡತಿ ಈರವ್ವ, ಈಗ ಹುಬ್ಬಳ್ಳಿಯ ನಿವಾಸಿಗಳಾಗುವ ಅನಿವಾರ್ಯತೆ ಮೂಡಿತ್ತು. ಮರೆತುಹೋಗಿದ್ದ ಅಲ್ಲಿಯ ರೀತಿ ನೀತಿಗಳನ್ನು ರೂಢಿಸಿಕೊಳ್ಳಬೇಕಾಗಿತ್ತು. ಸ್ಥಳೀಯ ಭಾಷಾ ವೈವಿಧ್ಯತೆಯ ಸೊಗಡನ್ನು ಮತ್ತೆ ಬಳಕೆಯಲ್ಲಿ ತಂದುಕೊಳ್ಳಬೇಕಾಗಿತ್ತು. ಮನೆಗೆ ಬಂದವರಿಗೆ, ʻಒಳಗ ಬನ್ನಿ, ಕೂಡಿʼ ಎನ್ನುವ ಹಳೆ ಮೈಸೂರು ಸೀಮೆಯ ನಯವಾದ ಮಾತನ್ನು ಬಿಟ್ಟು ʻಬರ್ರಿ ಬರ್ರಿ ಒಳಗ ಬರ್ರಿ ಕುಂಡರ್ರಿʼ ಮಾತು ರೂಢಿಸಿಕೊಳ್ಳಬೇಕಾಗಿತ್ತು. ಊಟಾ ಮಾಡೂವಾಗ ಯಾರರೆ ಬಂದ್ರ, ʻಬರ್ರಿ ಊಟಾ ಮಾಡಬರ್ರಿʼ ಅನ್ನೂದು. ಅವರು ʻಬಾಳಸ ಮಂದಿ ಆಗರಿʼ ಅಂತ ಹಾರೈಸೂದು. ಗೌರವದ ʻರಿʼ ಹಚ್ಚಿ ಮಾತನಾಡುವುದು, ಮೋಬೈಲ ಪೋನ್‌ ರಿಂಗುಣಿಸಿದಾಗ ಅಲ್ಲಲ್ಲ ಬಡಕೊಂಡಾಗ ʻಹಲೋರಿʼ ಅಂತ ಮಾತ ಆರಂಭಿಸಬೇಕಾಗಿತ್ತು. ಜೀವನ ನಡಸೂ ಖರ್ಚು ಬೆಂಗಳೂರಿಗೆ ಹೋಲಿಸಿದರ ಇಲ್ಲಿ ಭಾಳ ಸೋವಿ. ದಿನಾನೂ ತಾಜಾ ಕಾಯಿಪಲ್ಲೆ ಸಿಗ್ತಾವ. ಶನಿವಾರಕ್ಕೊಮ್ಮಿ ಬೆಂಗೇರಿ ಸೆಂಟ್ರಲ್ಲೊಳಗ ಸಂತಿ ಕೂಡಿರ್ತದ. ಕರ್ಚಿಕಾಯಿ, ಹುಣಚೀಕಿನ ಪಲ್ಲೆ, ಹಕ್ಕರಕಿ ಪಲ್ಲೆ ಹಿಂಗ ಮರ್ತಹೋಗಿದ್ದ ಕಾಯಿಪಲ್ಲೆಗಳು ಅಲ್ಲಿ ಸಿಗ್ತಿದ್ದವು. ಈರವ್ವನೂ ಅವುಗಳ ಪಲ್ಲೆ ಮಾಡೂದನ್ನು ಮರ್ತಿದ್ದಳು. ಮಗ್ಗಲಮನಿ ಪರಸಪ್ಪರ ಮನಿಗೆ ಬರ್ತಿದ್ದ ಕಸಾಮುಸರಿ ಕೆಲಸದವಳು ಸಂಗವ್ವ, ಇವರ ಮನಿಗೂ ಬರ್ತಿದ್ದಳು, ಸಂಗವ್ವನ ಆ ಕಾಯಿಪಲ್ಲೆಗಳನ್ನ ಮಾಡೂದ ಹೇಳೊಕೊಡ್ತಿದ್ದಳು.

ಮತ್ತ ಇಲ್ಲಿ ಮಾತು ಮಾತಿಗೆ ʻಇವನೌವ್ವನ, ಹಡಸಿ ಮಗನ, ಬೋಳಿ ಮಗನ, ಸೂಳಿ ಮಗನʼ ಎನ್ನುವ ಆತ್ಮೀಯತೆಯೋ ಮತ್ತು ಬೈಗಳುಗಳೋ ಎಂಬುದನ್ನ ಸ್ಪಷ್ಟವಾಗಿ ಗುರುತಿಸಲಾಗದಂಥ ಸಂಸ್ಕತ ಪದಗಳೆಂಬ ಅಪಖ್ಯಾತಿ ಪಡೆದ ಪದಗಳನ್ನ ಅನಾಯಾಸವಾಗಿ ಕೇಳಿಸಿಕೊಳ್ಳುವ ಮತ್ತು ಅಗತ್ಯ ಬಿದ್ದರೆ ಬಳಕೆ ಮಾಡಲು ಮುಂದಾಗಬೇಕಿತ್ತು. ಈ ಪದಗಳನ್ನ ಸಕಾರಾತ್ಮಕ ತಗೊಂಡ ಸುಮ್ಮನಾಗೂದು ಅಥವಾ ನಕಾರಾತ್ಮಕ ತಗೊಂಡ ಜಗಳಕ್ಕ ನಿಲ್ಲೂದು ಎಲ್ಲಾ ಆಯಾ ಪರಿಸ್ಥಿತಿಗೆ ತಕ್ಕಂಗ ಇರ್ತದ.

ಇದ್ದ ಇಬ್ಬರು ಮಕ್ಕಳಲ್ಲಿ ಎಂಜಿನಿಯರಿಂಗ್‌ ಓದಿದ್ದ ಸಣ್ಣವನು ಒಂದು ಖಾಸಗಿ ಕಂಪನಿ ಸೇರಿದ್ದರೆ, ದೊಡ್ಡವನು ಟಿ.ಸಿ.ಎಚ್‌ ಮುಗಿಸಿಕೊಂಡು ಸರ್ಕಾರಿ ಶಾಲೆಯ ಮಾಸ್ತರಿಕೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಹಾಗೆ ಮುಂದೆ ನೌಕರಿಯಲ್ಲಿ ಇದ್ದಕೊಂಡೇ ಹೈಸ್ಕೂಲ ಮಾಸ್ತರನಾಗಿದ್ದ. ಮಕ್ಕಳಿಬ್ಬರೂ ಅಪ್ಪ ಶಾಂತವೀರಪ್ಪ ಮತ್ತು ತಾಯಿ ಈರವ್ವಳನ್ನು ಮಾತನಾಡಿಸಿಕೊಂಡು ಹೋಗುಲು ಹುಬ್ಬಳ್ಳಿಗೆ ಆಗಾಗ ಹೋಗಿ ಬಂದು ಮಾಡುತ್ತಿದ್ದರು. ಮದುವೆಯಾಗಿ ಸೊಸೆಯಂದಿರು ಮನೆಯೊಳಗೆ ಕಾಲಿಟ್ಟಿದ್ದರು. ತಮ್ಮ ಕಷ್ಟಸುಖ, ನೋವು ನಲಿವುಗಳನ್ನು ಹಂಚಿಕೊಳ್ಳುತ್ತಿದ್ದರು. ಅಷ್ಟು ಕಕ್ಕುಲಾತಿ ಉಳಿಸಿಕೊಂಡಿದ್ದರು.

*

ಶಾಂತವೀರಪ್ಪ ಹುಬ್ಬಳ್ಳಿಯಲ್ಲಿದ್ದು ಒಂದು ವರ್ಷ ಕಳೆದಿತ್ತು. ಹಿಂದುಳಿದ ಆಯೋಗದ ಅಧ್ಯಕ್ಷ ಕಾಂತರಾಜ್‌ ಅಧ್ಯಕ್ಷತೆಯಲ್ಲಿ ಒಂದು ದಶಕದ ಹಿಂದೆ ಸಿದ್ಧಪಡಿಸಲಾಗಿದ್ದ ೨೦೧೫ರಲ್ಲಿನ ಸಾಮಾಜಿಕ, ಆರ್ಥಿಕ ಮತ್ತು ಶಿಕ್ಷಣ ಸಮೀಕ್ಷೆಯ ವಿವಿಧ ಜಾತಿಗಳ ಪ್ರಾತಿನಿಧ್ಯದ ವರದಿ ಹಳ್ಳ ಹಿಡಿದ ನಂತರ ೨೦೨೫ರಲ್ಲಿ ಹೊಸ ಸಮೀಕ್ಷೆ ನಡೆಸಲು ಸರ್ಕಾರ ನಿರ್ಧರಿಸಿತ್ತು. ಈಗ ಜಾತಿ ಉಪಜಾತಿಗಳ ಸಮೀಕ್ಷೆಯ ನಂತರ ಅದರ ಆಧಾರದ ಮೇಲೆ ಮೀಸಲಾತಿಯ ನಿಗದಿಗೆ ಸರ್ಕಾರ ವಿಚಾರ ಮಾಡುತಿತ್ತು.

ಮೊನ್ನೆ ಮನೆಗೆ ಬಂದಿದ್ದ ಹಿರಿಯ ಮಗ ಶಿವಪುತ್ರ ಈ ಹಿಂದುಳಿದ ವರ್ಗಗಳ ಜಾತಿ ಉಪಜಾತಿಗಳ ಸಮೀಕ್ಷೆಯಲ್ಲಿ ತನಗೆ ಎದುರಾಗುತ್ತಿದ್ದ ಸನ್ನಿವೇಶಗಳನ್ನು ಅಪ್ಪ ಅಮ್ಮಂದಿರೊಂದಿಗೆ ಹಂಚಿಕೊಳ್ಳುತ್ತಿದ್ದ.

ರಾಜ್ಯದಲ್ಲಿನ ಶಿಕ್ಷಣ ಮತ್ತು ಸರ್ಕಾರಿ ಸೇವೆಗಳಲ್ಲಿನ ಪರಿಶಿಷ್ಟ ಜಾತಿಯ ಮತ್ತು ವಿವಿಧ ಉಪಜಾತಿಗಳಿಗೆ ಸೇರಿದವರ ಪ್ರಾತಿನಿಧ್ಯತೆಯ ಸಮಗ್ರ ಮಾಹಿತಿ ಸಂಗ್ರಹಹಿಸಿ ಅದರ ಆಧಾರದಾಗ ಪರಿಶಿಷ್ಟ ಜಾತಿಗಳ ಮೀಸಲಾತಿಯಲ್ಲಿ ಒಳಮೀಸಲಾತಿ ಕೊಡುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಹೈಕೋರ್ಟಿನ ನಿವೃತ್ತ ನ್ಯಾಯಾಧೀಶ ಡಾ. ಎಚ್‌ ಎನ್‌ ನಾಗಮೋಹನದಾಸ್‌ ಆಯೋಗ ರಚಿಸಿತ್ತು. ಈ ಆಯೋಗ, ಪರಿಶಿಷ್ಟ ಜಾತಿ, ಮೂಲ ಜಾತಿ ಸಮಗ್ರ ಸಮೀಕ್ಷೆ ನಡೆಸತ್ತಿತ್ತು. ಜನಸಂಖ್ಯೆ ಮತ್ತು ಅವರ ಆರ್ಥಿಕ ಸ್ಥಿತಿಗತಿ ಮತ್ತು ಶೈಕ್ಷಣಿಕ ಮಟ್ಟದ ಮೇಲೆ ನೂರೆಂಟು ಜಾತಿಗಳ ನಿಖರ ಮಾಹಿತಿಗೆ ಮೋಜಣಿ ನಡೆದಿತ್ತು. ಅಂಥ ಗಣತಿ ಕಾರ್ಯದಲ್ಲಿ ಕಾಂತವೀರಪ್ಪ ಅವರ ಹಿರಿಯ ಮಗ ನೋಡಲ್‌ ಅಧಿಕಾರಿ ಆಗಿದ್ದ.

ಆಯೋಗ, ತಾರತಮ್ಯಗಳ ಪಟ್ಟಿಯಲ್ಲಿ ಶಾಲೆಗಳಲ್ಲಿ ಪ್ರತ್ಯೇಕವಾಗಿ ಕೂರಿಸುವುದು, ಆಸನಗಳಲ್ಲಿ ಬೇಧಭಾವ, ಹೊಟೇಲುಗಳಲ್ಲಿ ಪ್ರತ್ಯೇಕ ಆಸನ, ತಟ್ಟೆ ಲೋಟದ ವ್ಯವಸ್ಥೆ, ಹಬ್ಬ ಹರಿದಿನಗಳಲ್ಲಿನ ಪ್ರತ್ಯೇಕ ನಡಾವಳಿ, ಗುಡಿಗುಂಡಾರಗಳ ಪ್ರವೇಶದ, ಸಾರ್ವಜನಿಕ ರಸ್ತೆ ಬಳಕೆಯಲ್ಲಿನ ನಿರ್ಬಂಧ, ಸಾರ್ವಜನಿಕ ಬಳಕೆಯ ಸಂಪನ್ಮೂಲಗಳಾದ ಆಟದ ಮೈದಾನ, ಬಾವಿಗಳ ಬಳಕೆಗೆ ತಡೆ, ಸ್ಮಶಾನಗಳಲ್ಲಿ ಪ್ರತ್ಯೇಕತೆ ಮುಂತಾದವು ಸೇರಿದಂತೆ ಸುಮಾರು ಹದಿನೈದು ತಾರತಮ್ಯಗಳ ಪಟ್ಟಿ ಸಿದ್ಧಮಾಡಿ ಗಣತಿದಾರರಿಗೆ ನೀಡಿತ್ತು.

ಒಬ್ಬ ಗಣತಿದಾರ ಒಂದ ದಿನ ಬಂದ ಕಾಂತವೀರಪ್ಪ ಅವರ ಹಿರಿಮಗನಿಗೆ ತನ್ನ ಅನುಭವ ಹೇಳಿದನಂತ. ಅಂವಾ ಒಂದ ದಿನ ಮುಂಜಾನೆ ಒಂದ ಪರಿಷ್ಟಿತ ಏರಿಯಾದಲ್ಲಿನ ಒಂದ ಓಣಿಗೆ ಹೋಗಿದ್ದ. ಅಲ್ಲಿ ಒಂದ ಮನಿಗೆ ಹೋಗಿದ್ದಾಗ ಅಲ್ಲೆ ಅಂಗಳದ ಕಟ್ಟಿ ಮ್ಯಾಲ ಕೂತಿದ್ದ ಮನಿ ಓನರ್‌, ಗಣತಿದಾರರು ಯಾಕ ಬಂದಾರ ಅಂತ ತಿಳಕೊಂಡ ಕೂಡಲೇ ʻಇಲ್ಲಿ ಯಾರೂ ಎಸ್ಸಿ ಎಸ್ಟಿಗಳು ಇಲ್ಲ ಇಲ್ಲಿʼ ಅಂತ ಓಡಿಸಿ ಬಿಟ್ನಂತ. ಗಣತಿ ಮಾಡಕೋತ ಮುಂದ ಓಣಿ ದಾಟಿದ ಮ್ಯಾಲ ಸ್ಕೂಟರಿನ್ಯಾಗ ಬಂದ ಗಂಡಸೊಬ್ಬ ತಮ್ಮ ಮಾಹಿತಿ ತಿಳಿಸಿದನಂತ. ʻಸಾರ್‌ ಸಾರ್‌ ನಾವು .. ಜಾತಿಯವರು. ನೀವು ನಮ್ಮ ಮನಿ ಹಂತೇಕ ಬಂದಿದ್ರಿ. ನಾವು, ನಮ್ಮ ಮನಿ ಓನರಗ ಪರಿಶಿಷ್ಟ ಜಾತಿವರಲ್ಲ. ಲಿಂಗಾಯತ ಬಣಜಿಗರು ಅಂತ ಹೇಳೀವಿ. ಮನಿ ಕೊಡಸೂ ಏಜಂಟಗೂ ಹಂಗ ಹೇಳೀವಿ. ನಮ್ಮ ಅಡ್ಡ ಹೆಸರು ಅಂಗಡಿ ಅನ್ನೂದು ಅನಕೂಲ ಆಗೇದ. ಇಲ್ಲಕಂದ್ರ ಈ ಏರಿಯಾದಾಗ ನಮ್ಮಂಥವರು ಮನಿ ಮಾಡೂದು ಸಾಧ್ಯನ ಇಲ್ಲರಿ. ಸಾಲಿಪಾಲಿ ಹತ್ತರ ಅದಾವು ಮಕ್ಕಳಿಗೆ ಅನುಕೂಲ ಆಗ್ತದ ಮತ್ತ ಬಜಾರು ಸಮೀಪ ಇತ್ತು. ಹಿಂಗಾಗಿ ಭಾಳ ಹುಡಕ್ಕಾಡಿ ಸುಳ್ಳ ಹೇಳಿ ಇಲ್ಲಿ ಮನಿ ಹಿಡಿದೀವಿ. ಇಲ್ಲಿ ನಾವೊಬ್ಬರ ಮನಿ ಹುಡಕಾಕ ಹೋದರ ʻಏನ್‌ ತಿಂತೀರಿ?ʼ ಅನ್ನೋರು. ಅದರ ಜೋಡಿ ʻಉಡುಪಿ ಹೊಟೇಲೋ ಅಥವಾ ನಾಯ್ಡು ಮಿಲ್ಟ್ರಿ ಹೊಟೇಲಿಗೆ ಹೋಗೋರೋ?ʼ ಅಂತ ಕೇಳೋರು. ʻನಾಯ್ಡು ಹೊಟೇಲ್‌ ಅಂದ್ರ ಮಾಂಸದ ಹೊಟೇಲ್‌ ಅಂತ ನಮಗ ಆಮ್ಯಾಲ ಗೊತ್ತಾತು. ಇಲ್ಲಿ ಬಂದ ಮ್ಯಾಲ ನಮ್ಮ ಬಂಧು ಬಳಗದವರನ್ನೂ ದೂರ ಇಟ್ಟಿವ್ರಿʼ ಅಂತ ಹೇಳತಿದ್ಚರು. ಗಣತಿ ಮಾಡಾವರಿಗೆ ಮನಸ್ಸಿಗೆ ಭಾಳ ಖಜೀಲ ಆಯ್ತಂತ.

ಇನ್ನೊಂದ ಕಡೆ, ಹಣುಮಂತ ಹತ್ತರಕಿ ಅನ್ನಾವರು ಓಡೋಡಿ ಬಂದ ಮಾಹಿತಿ ಮೋಜಣಿಗೆ ಬೇಕಾದ ಮಾಹಿತಿ ಬರಸಿದರಂತ. ಅವರು ಮೂರ್ನಾಲ್ಕ್‌ ವಿಂಗನ್ಯಾಗ ಹರಡಿದ್ದ ಬಹುಮಹಡಿ ಕಟ್ಟಡಗಳ ಇಂದ್ರಪ್ರಸ್ಥ ಹ್ಯಾಬಿಟ್ಯಾಟ್‌ ನ್ಯಾಗ ಇರಾವರಂತ. ನಾವು ಗಣತಿದಾರರು ಅದರ ಮುಂದ ಹೋಗಿ ನಿಂತಾಗ, ʻಇಲ್ಲಿ ಒಳಗ ಯಾರೂ ಎಸ್ಸಿ ಎಸ್ಟಿಗಳ ಇಲ್ಲ ನಡೀರಿʼ ಅಂತ ವಾಚಮನ್‌ ಗಳು ಅಲ್ಲಿಂದ ನಿಲ್ಲಿಸಿಸಿಗೊಡದ ಓಡಿಸಿದರಂತ. ಅವರು ದಿನಸಿ ಸಮಾನ ತರಾಕ ಸಮೀಪದ ಅಂಗಡಿ ಹೋಗಿದ್ರಂತ. ಬರೂ ಮುಂದ ನಾವು ಗೇಟ ಮುಂದ ವಾಚಮನ್‌ ಗಳ ಕೂಡ ಮಾತಾಡುದ್ದನ್ನ, ನಮ್ಮನ್ನ ಅಲ್ಲಿಂದ ಓಡಿಸ್ಸಿದನ್ನ ನೋಡಿದರಂತ. ಪಟ್ಟನ ಅವರಿಗೆ ಟಿವ್ಯಾಗ ಮತ್ತ ಪೇಪರಿನ್ಯಾಗ ಜಂಗಮ ಮತ್ತ ಬೇಡ ಜಂಗಮರ ವಿವಾದ, ಒಡ್ಡರು, ಮಾದಿಗ, ಚಮ್ಮಾರ, ಮಾದಾರ, ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ, ಜಾತಿಗಳ ಸಮೀಕ್ಷೆ ನಡಸ್ತಿದ್ದುದು ನೆನಪಾಗಿ. ಮನಿಗೆ ಹೋಗಿ ಸಾಮಾನ ಇಟ್ಟವರ, ದೌಡಾಯಿಸಿ ಬಂದ ಮಾಹಿತಿ ಬರಿಸಿಸಿದರಂತ.ʻ ನಮ್ಮ ವಿಚಾರ ಬರಕೊಳ್ರಿ. ಇದು ಬಾಡಗಿ ಮನಿ. ಮಗಾ ಇಲ್ಲೇ ವೈಟ್‌ ಫೀಲ್ಡ್‌ ನ್ಯಾಗ ಕೆಲಸ ಮಾಡ್ತಾನ್ರಿ. ಸೊಸಿನೂ ಅವನ ಕಂಪನಿಯೊಳಗ ಕೆಲಸ ಮಾಡ್ತಾಳ್ರಿ. ಮನ್ಯಾಗ ನಾನು ಮತ್ತ ನನ್ನ ಹೇಣ್ತಿ ನಾಕ ಮಂದಿ ಬೆಂಗಳೂರಿನ ಈ ಮನ್ಯಾಗ ಇರತಿವರ್ರಿ. ಊರಾಗ ನಮಗ ಸ್ವಂತದ್ದು ಜಮೀನು ಮನಿ ಏನೂ ಇಲ್ಲʼ ಅಂತ ಹೇಳಿದರಂತ.

ಇಂಥವು ಒಂದ ಎರಡ ನೂರಾರು ಕತಿಗಳಂತ. ಅದಕ್ಕ ಸರ್ಕಾರ, ತಪ್ಪ ತಪ್ಪ ಮಾಹಿತಿ ಕೊಟ್ಟವರಿಗೆ, ಮಾಹಿತಿ ಸರಿಯಾಗಿ ಕೊಡದವರಿಗೆ, ನಾಕ ಮಂದಿ ನಡುವ ಧೈರ್ಯ ಮಾಡಿ ಮುಂದ ಬಂದ ತಮ್ಮ ತಮ್ಮ ಜಾತಿ ಹೇಳಾಕ ಹಿಂದಮುಂದ ನೋಡಕೋತ ಕೂಡು ಪರಿಶಿಷ್ಟ ಜಾತಿ, ಪಂಗಡಗಳ ಸಮುದಾಯದವರಿಗೆ ಅನುಕೂಲ ಆಗಲಿ ಅಂತ, ತಮ್ಮ ಮನ್ಯಾಗ ಕೂತ ಕಂಪ್ಯೂಟರ್‌ ಅಥವಾ ಲ್ಯಾಪ್‌ ಟಾಪ್‌ ಬಳಸಿ ಇಲ್ಲ ಸೈಬರ್‌ ಕೆಫೆಗೆಳಿಗೆ ಹೋಗಿ, ಆನ್‌ ಲೈನ್‌ನ್ಯಾಗ ಮಾಹಿತಿ ಭರ್ತಿ ಮಾಡಾಕ ಅನುಕೂಲ ಮಾಡಿ ಕೊಟ್ಟದಂತ. ಅಲ್ಲಲ್ಲೆ ಸಮೀಕ್ಷಾ ಶಿಬಿರಗಳಿಗೆ ಬಂದ ಮಾಹಿತಿ ಕೊಡಾಕ, ಮತ್ತ ಬೇಕಂದರ ಸಹಾಯಕ್ಕ ಅಂತ ಸಹಾಯವಾಣಿ ಚರದೂರವಾಣಿ ಸಂಖ್ಯಾದ ವ್ಯವಸ್ಥಾ ಮಾಡಿತ್ತು ಸರ್ಕಾರ. ಇದೆಲ್ಲಾ ಹಳ್ಳಿಗಳನ್ನ ಬಿಟ್ಟ ಪಟ್ಟಣ ಸೇರಿವರಿಗೆ ಸ್ವಲ್ಪ ಓದಿಕೊಂಡು ಕಂಪೂಟರ್‌ ಜ್ಞಾನ ಇದ್ದವರಿಗೆ ಅನುಕೂಲ ಆದರ ಹಳ್ಯಾಗ ಏನು? ಅಲ್ಲಿ ಎಲ್ಲಾನೂ ಖುಲ್ಲಾ ಖುಲ್ಲಾನ.

ಒಳ ಮೀಸಲಾತಿ ಜನಗಣತಿ ಮಾಡಾವರ ಒಳಗೂ ಎಲ್ಲಾರೂ ಸುದ್ದುಳ್ಳವರ ಏನಲ್ಲ. ನರಿ ಬುದ್ಧಿ ಗಣತಿದಾರ ಮಂದೀನೂ ಕಡಿಮಿ ಏನ ಇರಲಿಲ್ಲ ಅಂತ. ಎಲ್ಲಾ ಮನಿಮನಿಗೆ ಹೋಗಿ ಗಣತಿ ಮಾಡಿದರೋ ಇಲ್ಲೋ, ಮನಿಗಳ ಮುಂದ ಸುಳ್ಳ ಸುಳ್ಳ ಗಣತಿ ಮುಗದದ ಅಂತ ಚೀಟಿ ಅಂಟಿಸಿಗೋತ ನಡದಿದ್ದರಂತ ಈ ನರಿ ಬುದ್ಧಿ ಗಣತಿದಾರರು.

*

ಮಗ ಹೇಳಿದ ಒಂದ ಕತಿಯೊಳಗ ಹತ್ತರಕಿ ಅಡ್ಡಹೆಸರ ಕೇಳಿದ ಕೂಡ್ಲೆ ಅಪ್ಪ ಶಾಂತವೀರಪ್ಪಗ ಮತ್ತ ಹತ್ತರಕಿ ಪಲ್ಲೆ ನೆನಪಾಯಿತು. ಮನಿ ಮುಂದ, ಮಗ್ಗಲಕಿನ ಜಾಗಾದಾಗ ಮತ್ತ ಹಿಂದ ಹಿತ್ತಲದಾಗಿನ ಬೆಳದ ನಿಂತ ಕಸಾ ತಗಸೂಣ ಆಳನ್ನ ಹುಡುಕುವಾಗ, ಮಗ್ಗಲಮನಿ ಪರಸಪ್ಪ ʻಈಗ ಊರಾನವರು ಯಾರೂ ಇಂಥಾ ಸಣ್ಣ ಕೆಲಸಕ್ಕ ಬರೂದಿಲ್ಲ. ಸ್ಟೇಷನ್ನನಿಗೆ ಹೋಗಿ ಸ್ಟೇಷನ್‌ ಆಳ ಹುಡುಕೊಂಡ ಬರಬೇಕು. ಅವರ ಟೈಮಿಗೆ ಸರಿಯಾಗಿ ಟ್ರೇನಿಗೆ ಬರಾವರು ಟ್ರೇನಿಗೆ ಹೋಗಾವರ, ಅವಸರಗೇಡಿಗಳು ಕೆಲಸಾ ಮಾಡಿದಂಗʼ ಎನ್ನುತ್ತಾ ಸುಳ್ಳದಿಂದ ಒಬ್ಬ ಆಳನ್ನ ಕರಕೊಂಡ ಬಂದ ಬಿಟ್ಟಿದ್ದ.

ಸುಳ್ಳದ ಕೂಲಿ ಮಡಿವಾಳಪ್ಪ ಬಂದಾಗ ಹೊಲಾ ಮನಿ, ಮಳಿ ಬೆಳಿ, ಊರಾನ ಸುದ್ದಿ ಅದು ಇದೂ ಮಾತಾಡೂ ಮುಂದ ಹಕ್ಕರಕಿ ಪಲ್ಲೆ ಮಾತ ಬಂದಿತ್ತು. ʻಸಾರ, ಈಗೀನ ಹುಡುಗರಿಗೆ ಆ ಪಲ್ಲೆ ಗೊತ್ತ ಇಲ್ಲ ನೋಡ್ರಿ. ಅದನ್ನು ಮುಟ್ಟಾಂಗ ಇಲ್ಲ. ಹಿಂದ ಹೊಲದ ದಗದಕ್ಕೆ ಹ್ವಾದಾಗ ಮನಿಯಿಂದ ಕಟ್ಟಿಸಿಕೊಂಡ ಬುತ್ತಿ ಗಂಟ ಬಿಚ್ಚಿದರ ಯಾರರೆ ಹೋಗಿ ಹೊಲದಾಗ, ಹೊಲದ ಬದುವಿನ್ಯಾಗ ಬೆಳದಿದ್ದ ಹಕ್ಕರಕಿ ಪಲ್ಲೆ ಕಿತ್ತಗೊಂಡ ಬರ್ತಿದ್ದರು. ಹಸಿ ಮೆಣಸಿಕಾಯಿ, ಹತ್ತರಕಿಪಲ್ಲೆ ಸಿಕ್ಕರ ಮುಗುದಹೋತ್ರಿ.ʼ ಮಡಿವಾಳಪ್ಪ ಗರಗ ಬಾಯಾಗ ನೀರ ಬರಸಿಕೊಂಡ ಕುಂತಿದ್ದ.

ʻಮತ್ತ ಅದನ್ನ ಭಾಳ ಮಂದಿ ಮಾರೂದಿಲ್ಲ ಅಂತʼ ಶಾಂತವೀರಪ್ಪ ಕೇಳಿದರು. ʻಸಾರ, ಅದನ್ನ ಬಿತ್ತ ಬೇಕಾಗಿಲ್ಲ, ಬೆಳಿ ಬೇಕಾಗಿಲ್ಲ. ಮಳಿ ಬಂದ್ರ ತಾನೂ ಹುಯ್ಯ ಅಂತ ಅಗಲ ಬೆಳದ ನಿಂತಿರ್ತದ. ಅದನ್ನ ಎಷ್ಟ ಬೇಕಾದರೂ ತಿಂತೀವಿ. ಮನಿಗೆ ತಿನ್ನಾಕ ಒಯ್ಯತೀವಿ. ಆದರ ಅದನ್ನ ಕಿತ್ತಗೊಂಡ ಹೋಗಿ ನಾವ್ಯಾರು ಮಾರಾಂಗಿಲ್ಲ. ಅದನ್ನ ಕಿತ್ತಗೊಂಡ ಹೋಗಿ ಮಾರಿದರ ಮನಿಗೆ ದರಿದ್ರ ಹಾಯತದರಿ. ಅದ ದರಿದ್ರ ಲಕಮವ್ವರಿʼ.

ಈ ಕೆಲಸದಾಳು ಮಡಿವಾಳಪ್ಪನ ಮಾತಿಗೂ ಕಾಯಿಪಲ್ಲೆ ಹಚ್ಚಿ ಕೂತಿದ್ದ ಸಾಂತ್ರವ್ವಳ ಮಾತಿಗೂ ಮ್ಯಾಳ ಆಗಿತ್ತು.

ಜಾತೀನ ನೀತಿ ಆಗೇದ ನಮ್ಮ ನಾಡಿನ್ಯಾಗ. ಸಾಮಾಜಿಕ, ಆರ್ಥಿಕ, ಲೌಕಿಕ, ಪಾರಮಾರ್ಥಿಕ ಯಾವದನ್ನ ತೊಗೊಂಡರೂ ಜಾತೀನ ಎದ್ದ ಕಾಣತದ. ರಾಜಕೀಯದಾಗ ಆಡಳಿತದಾಗ ಶಿಕ್ಷಣ ಕ್ಷೇತ್ರದಾಗ ಜಾತಿ ದೆವ್ವ ಎದ್ದೆದ್ದ ಕುಣೀತನ ಅದ.

*

ರಾತ್ರಿ ಊಟಾ ಆದ ಮ್ಯಾಲ, ಹೆಂಡತಿ ಟಿವಿ ಮುಂದ ಕುಂತಿದ್ದರ, ಬೆಡ್‌ ರೂಮ್‌ ಸೇರಿದ್ದ ಶಾಂತವೀರಪ್ಪ, ಮಗ ತಂದ ಕೊಟ್ಟಿದ್ದ ಲ್ಯಾಪ್‌ ಹಿಡಕೊಂಡ ಬೆಡ್‌ ಮ್ಯಾಲ ಕುಂತಿದ್ದರು.

ಕಂಫೂಟರ್‌ ಅಲ್ಲದ ಲ್ಯಾಪ್‌ಟಾಫ್‌ ಮತ್ತು ಮೊಬೈಲಿನ್ಯಾಗ ಅಂಗೈಯೊಳಗಿನ ವಿಶ್ವಕೋಶ ಆಗಿರುವ ಗೂಗಲ್‌ನ್ಯಾಗ, ಹಕ್ಕರಕಿ ಪಲ್ಲೆ ಬರದ ಸರ್ಚ್‌ ಮಾಡಿ ನೋಡಿದರು. ಡಿಗ್ಗಿ ಗಟ್ಟಲೇ ಮಾಹಿತಿಗಳು ಬಂದ ಬಿದ್ದವು.

ಹಕ್ಕರಕಿ ಪಲ್ಲೇನ ಹತ್ತರಕಿ ಪಲ್ಲೆ ಅತ್ಲೂ ಕರತಾರ. ಯಾರೂ ಉಳುಮಿ ಮಾಡಿ ಹತ್ತರಕಿ ಪಲ್ಲೆ ಬೆಳೆಯೂದಿಲ್ಲ. ತನ್ನ ತಾನ ಅದರ ಬೀಜ ಪ್ರಸಾರ ಆಗಿ ಅದು ಬೆಳಿತದ. ಅದರ ಔಷಧಿ ಗುಣದ್ದ ದೊಡ್ಡ ಪಟ್ಟೀನ ಅದ. ಈ ಪಲ್ಲೆ ಮೂತ್ರ ಪಿಂಡದಾಗ ಕಲ್ಲ ಆಗೂದನ್ನು ತಪ್ಪಸದ, ರೋಗ ನಿರೋಧಕ ಶಕ್ತಿ ಮೂಡಸ್ತದ, ತೂಕ ಇಳಿಸೂದಕ್ಕ ಹೇಳಿ ಮಾಡಿಸಿದ ಪಲ್ಲೆ. ರಕ್ತದೊತ್ತಡದ ನಿಯಂತ್ರಣಕ್ಕ ಮತ್ತ ಕೆಲವು ಚರ್ಮ ರೋಗಕ್ಕ ಔಷಧಿಯಂತ ಅದು. ಕ್ಯಾನ್ಸರ್‌ ಮತ್ತ ಏಡ್ಸ್‌ ಗೂ ಅದನ್ನು ಬಳಸೂದ ಶುರು ಮಾಡ್ಯಾರ ಅಂತ, ಒಂದ ನಾಕ ದೊಡ್ಡ ದೊಡ್ಡ ಕಂಪನಿಗಳು ಅದರಿಂದ ಔಷಧಿ ಸಿದ್ಧಪಡಿಸಿ ಹರ್ಬಲ್‌ ಮೆಡೆಸಿನ್‌ ಹೆಸರಿಲೆ ಮಾರಾಟಕ್ಕ ಶುರುಹಚ್ಚಕೊಂಡಾವ. ಅದನ್ನ ಇಂಗ್ಲಿಷ್‌ ನ್ಯಾಗ Dandelion ಅಂತಾರಂತ. ಈ ಪದದ ಮೂಲ ಫ್ರೆಂಚಿನ Dent de lion ಅಂತಾರ. ಚೂಪಾದ ಸಿಂಹದ ಹಲ್ಲುಗಳು ಅನ್ನೂದು ಈ ಪದಪುಂಜದ ಅರ್ಥ! ಎಂಥಾ ಅದ್ಭುತ ಕಲ್ಪನೆ ಅಲಾ!

ʻಆರೋಗ್ಯಕ್ಕ ಎಷ್ಟ ಅನಕೂಲ ಇರೂ ಹಕ್ಕರಕಿ ಪಲ್ಲೇನ ಕೆಲವರು ಮಾರೂದಿಲ್ಲ ಅಂತ. ಅವರಿಗೆ ದರಿದ್ರ ಬರ್ತದಂತ. ಜನಾ ಎಷ್ಟ ಹುಚ್ಚರದಾರು? ಮನಷ್ಯಾರ ಆರೋಗ್ಯಕ್ಕ ಬೇಕಾಗೂ ಛಂದನ ಪಲ್ಲೇ ಮಾರೂದುಕ್ಕು ಜಾತಿ ನಡುವ ತಂದ ಇಟ್ಟಾರʼ ಚಿಂತಿ ಮಾಡತಿದ್ದ ಶಾಂತವೀರಪ್ಪ ಅವರು, ಲ್ಯಾಪ್‌ಟಾಪ್‌ ಮುಚ್ಚಿ ಮಲಗಾಕ ಹಾಸಗಿ ಮ್ಯಾಲ ಕಾಲ ಚಾಚಿ ಕಣ್ಣ ಮುಚ್ಚಿದ ಕೂಡಲೇ ಬಸವಣ್ಣನ ವಚನಗಳು ಮನಿಸ್ಸಿನ್ಯಾಗ ಮೂಡಿದವು.

ಹನ್ನರಡನೇ ಶತಮಾನದ ಬಸವಣ್ಣ, ಸಮಾಜದಾಗ ಮೇಲು ಕೇಳು ಇರಬಾರದುʼ ಅಂತ ಬಯಸಿದ್ದ. ಸರಳ ಮಾತಿನ ಒಂದ ವಚನದಾಗ, ʻಕಳಬೇಡ, ಕೊಲಬೇಡ; ಹುಸಿಯ ನುಡಿಯಲು ಬೇಡ, ಅನ್ಯರಿಗೆ ಅಸಹ್ಯಪಡಬೇಡ, ತನ್ನ ಬಣ್ಣಿಸಬೇಡ, ಇದಿರು ಹಳಿಯಲು ಬೇಡ. ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ. ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ.ʼ ಅನಕೋತ ಧರ್ಮದ ಹಾದಿ ತಿಳಿಸಿದ್ದ. ʻಎಲ್ಲಾರೂ ಒಂದ,ಎಲ್ಲಾರೂ ನಮ್ಮೋರʼ ಎಂದುಕೊಂಡಿದ್ದ ಬಸವಣ್ಣ, ʻಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯ. ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆಂದೆನಿಸಯ್ಯ. ಕೂಡಲಸಂಗಮದೇವಾ ನಿನ್ನ ಮನೆಯ ಮಗನೆಂದೆನಿಸಯ್ಯಾʼ ಅಂತ ಒಂದ ವಚನದಾಗ ಸಾರಿ ಸಾರಿ ಹೇಳಿದ್ದ. ಮತ್ತ ಹದಿನಾರನೇ ಶತಮಾನದ ಹರಿದಾಸರಾದ ಕನಕದಾಸರು ʻಕುಲಕುಲವೆಂದು ಹೊಡೆದಾಡದಿರಿ..ʼಎಂದು ಸಮಾವನ್ನು ಎಚ್ಚರಿಸಿದ್ದರು.

ಶತಮಾನಗಳು ಉರುಳಿದರೂ ಸಮಾಜದಾಗಿನ ತಾರತಮ್ಯಗಳು ಹಂಗ ಉಳಿದಾವ. ಕಲತರ ಇವು ಕಡಿಮಿ ಆಗ್ತಾವ ಅನ್ನೂದು ತಪ್ಪಾಗೇದ ಈಗ. ದಲಿತರೊಳಗ ಕಲಿತ ದಲಿತರು, ತಮ್ಮ ಮನ್ಯಾಗ ಸತ್ಯನಾರಾಯಣರ ಪೂಜಿ ಇಡಿಸಿಕೋತ ದಲಿತರೊಳಗಿನ ಬ್ರಾಹ್ಮಣರಾಗಿ ಕುಂತಾರ.

ʻಶತಮಾನಗಳು ಬರಿಯ ಜಡ ಶಿಲೆಯ ಪೂಜಿಸಾಯ್ತು, ಹಾವುಗಳಿಗೆ ಹಾಲೆರೆದು ಪೋಷಿಸಾಯ್ತು, ಬಿಸಿಲು ಮಳೆ ಗಾಳಿ ಬೆಂಕಿಯನೆಲ್ಲ ಬೇಡಿಯಾಯ್ತು, ದಾಸರನು ಪೂಜಿಸಿಯೇ ದಾಸ್ಯವಾಯ್ತುʼ ಎಂದು ಹಲುಬಿದ, ಕಳೆದ ಶತಮಾನದಲ್ಲಿ ಬದುಕಿದ್ದ ದಾರ್ಶನಿಕ ಕವಿ ಕುವೆಂಪು ಅವರು, ʻನೂರು ದೇವರನೆಲ್ಲ ನೂಕಾಚೆ ದೂರʼ ಎಂದಿದ್ದು ಹೊಳೆಯಲ್ಲಿ ಹುಣಸಿಹಣ್ಣ ತೊಳದಂಗಾಗೇದ. ಹಿಂಗ ವಿಚಾರ ಮಾಡಕೋತ ಮಲಗಿದ ಶಾಂತವೀರಪ್ಪ ಅವರಿಗೆ ಯಾವಾಗ ನಿದ್ದಿ ಬಂತೋ ಗೊತ್ತ ಆಗಲಿಲ್ಲ.

ಮುಗಿಯಿತು

ಎಫ್.‌ ಎಂ. ನಂದಗಾವ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x