ಹಿಂದಿನ ಕಾಲದ ಕನ್ನಡ ಸಾಹಿತ್ಯದಲ್ಲಿ ಅಂದರೆ ದಾಸ ಸಾಹಿತ್ಯ, ವಚನ ಸಾಹಿತ್ಯ ಪ್ರಾರಂಭವಾದಾಗ ಬಂಡಾಯದ ಸಾಲುಗಳು ಪ್ರಾರಂಭವಾದರೂ ಕೂಡ ಎಂಭತ್ತರ ದಶಕದಲ್ಲಿ ಬಂಡಾಯ ಸಾಹಿತ್ಯ ಉಚ್ಛ್ರಾಯ ಸ್ಥಿತಿಗೆ ಬಂತು ಅಂತಲೇ ಹೇಳಬಹುದು. ಅಂದಿನ ಕಾಲದಲ್ಲಿ ನೆಲೆಯೂರಿನಿಂತಿದ್ದ ಅಸ್ಪೃಶ್ಯತೆ, ಸಮಾನತೆ, ಶೋಷಣೆ ಮುಂತಾದ ವಿಷಯಗಳ ಬಗ್ಗೆ ವಿರೋಧಿಸುತ್ತಾ, ಅನ್ಯಾಯದ ವಿರುದ್ಧ ಲೇಖಕರು ತಮ್ಮ ಬರವಣಿಗೆಯ ಮೂಲಕ ಸಮಾಜದ ಮತ್ತು ಸರ್ಕಾರದ ವಿರುದ್ದ ಹೋರಾಡುವ ಬರಹದ ಮೂಲಕ ಜನರ ಮನೋಭಾವವನ್ನು ತಿದ್ದಲು ಪ್ರಯತ್ನ ಪಡುತ್ತಿದ್ದರು.
ಅದರೆ ಇವತ್ತಿನ ದಿನಗಳಲ್ಲಿ ಕನ್ನಡ ಸಾಹಿತ್ಯದ ಬರವಣಿಗೆಯಲ್ಲಿ ಬಂಡಾಯದ ಕಾವು ತೀರ ಕಡಿಮೆಯಾಗಿದೆ ಅನಿಸುತ್ತದೆ. ಬರಹಗಾರರು ಸಮಾಜವನ್ನು, ಸರ್ಕಾರಗಳನ್ನು ಎದರು ಹಾಕಿಕೊಂಡು ಬದುಕಲು ಧೈರ್ಯ ತೋರುತ್ತಿಲ್ಲ. ಅಸ್ಪೃಶ್ಯತೆಯ ಆಚರಣೆಯನ್ನು ತಮ್ಮ ಬರಹದ ಮೂಲಕ ಯಾರು ಖಂಡಿಸುವ ಪ್ರಯತ್ನ ಮಾಡುತ್ತಿಲ್ಲ. ಅಂಧಕಾರ, ಮೌಢ್ಯದ ಆಚರಣೆಗಳನ್ನು ಜನರ ಮನಸ್ಸಿನಿಂದ ದೂರ ಮಾಡಲು ಪ್ರಯತ್ನಿಸುತ್ತಿಲ್ಲ. ನೋವುಂಡ ಜೀವಿಯ ಎದೆಯಾಳದ ಭಾವನೆಗಳು ಇಂದು ನಗೆಪಾಟಲಿಗೆ ಈಡಾಗುತ್ತಿವೆ.
ಇಂತಹ ಕಾಲಘಟ್ಟದಲ್ಲಿ ಇತ್ತೀಚಿನ ದಿನಗಳಲ್ಲಿ ಬಂಡಾಯದ ಸಾಲುಗಳಿಂದ ಓದುಗರ ಮನಗಳನ್ನು ತಲುಪುತ್ತಿರುವ ಕವಿ/ಲೇಖಕರೇ ರಾಣಿಬೆನ್ನೂರಿನ ದೇವರಾಜ್ ಹುಣಸಿಕಟ್ಟೆ ರವರು.
ಇವರು ಮುಖಪುಟದಲ್ಲಿ ಸ್ನೇಹಿತರಾದವರು. ಇವರ ಸಾಲುಗಳನ್ನು ಓದಲು ಕಾಯುತ್ತಿದ್ದೆ. ಯಾಕೆಂದರೆ ನನಗೆ ಪ್ರಕೃತಿಯ ಬಗ್ಗೆ, ದೇವರ ಬಗ್ಗೆ, ಪ್ರೀತಿ ವಿರಹದ ಬಗೆಗೆ ಬರಹವನ್ನು ಓದುವುದಕ್ಕಿಂದ ಈ ಸಮಾಜದಲ್ಲಿ ನಡೆಯುವ ಅನ್ಯಾಯ, ಅಸಮಾನತೆ, ಸರ್ಕಾರದ ಧೋರಣೆಯನ್ನು ವಿರೋಧಿ ಬರೆಯುವ ಸಾಹಿತ್ಯ ನನಗೆ ಇಷ್ಟವಾಗುತ್ತದೆ. ನನಗೆ ಇಷ್ಟವಾಗುವ ಸಾಹಿತ್ಯ ಇವರ ಸಾಲುಗಳಲ್ಲಿ ಹೇರಳವಾಗಿರುತ್ತದೆ.
ಕೆಲಸದ ನಿಮಿತ್ತ ಕಳೆದ ತಿಂಗಳು ರಾಣಿಬೆನ್ನೂರಿಗೆ ಹೋದಾಗ ಇವರನ್ನು ಭೇಟಿಯಾಗಿ ಇವರ “ಹಕೀಮನೊಬ್ಬನ ತಕರಾರು” ಎಂಬ ಕೃತಿಯನ್ನು ಕೇಳಿ ಪಡೆದೆ. ಅದರೆ ಓದಲು ಸಾಧ್ಯವಾಗಲಿಲ್ಲ. ಸಮಯ ಸಿಕ್ಕಾಗ ಒಂದೊಂದೆ ಕವಿತೆಯನ್ನು ಓದತೊಡಗಿದೆ. ಇವರ ಕೃತಿಯಲ್ಲಿ ಸುಮಾರು ಎಪ್ಪತ್ತು ಕವಿತೆಗಳಿವೆ. ಪ್ರತಿಯೊಂದು ಕವಿತೆಯ ಸಾಲುಗಳಲ್ಲಿ ಅನ್ಯಾಯದ ಧೋರಣೆಯನ್ನು ಪ್ರತಿಭಟಿಸುವ, ಸಮಾಜದ, ರಾಜಕೀಯ ಅವ್ಯವಸ್ಥೆಯನ್ನು ಧಿಕ್ಕರಿಸುವ ಸಾಲುಗಳನ್ನು ನಾವು ನೋಡಬಹುದಾಗಿದೆ.
ಇವರ ಕವಿತೆಗಳಲ್ಲಿ ಈ ಪುರುಷ ಸಮಾಜ ಮಹಿಳೆಯರನ್ನು ಯಾವ ರೀತಿಯಲ್ಲಿ ಶೋಷಣೆ ಮಾಡುತ್ತಿದೆ. ಅವ್ವನ ಪ್ರೀತಿ, ಬುದ್ದ ಮತ್ತು ಬೌದ್ದ ಧರ್ಮ, ಪ್ರೀತಿ ಪ್ರೇಮದ ಬಗೆಗಿನ ಸಾಲುಗಳು ಈ ಕೃತಿಯಲ್ಲಿವೆ.
“ಬಚ್ಚಿಟ್ಟ ಕನಸಿನ ಪಿಟಾರ” ಎಂಬ ಶೀರ್ಷಿಕೆಯ ಕವಿತೆಯ ಸಾಲುಗಳು
“ನನ್ನವ್ವ ಅದೆಷ್ಟು ಕನಸುಗಳ
ಸಾಸಿವೆ ಜೀರಿಗೆ ಡಬ್ಬಗಳಲ್ಲಿ
ಬಚ್ಚಿಟ್ಟಿದ್ದಾಳೆ ಗೊತ್ತೇ ?
ಅದೆಷ್ಟೋ ವರ್ಷಗಳಿಂದ
ತದೇಕ ಚಿತ್ತದಿಂದ ಕಾದಿದ್ದಾಳೆ ಗೊತ್ತ? ಈ ಸಾಲುಗಳಲ್ಲಿ ಬರುವ ವಿಷಯ ಎದೆಯೊಳಗಿನ ನೆನಪುಗಳನ್ನು ಒಮ್ಮೆ ಕಲುಕಿಸುತ್ತದೆ. ಬಡತನದ ಬದುಕನ್ನು ಅನುಭವಿಸಿದ ಪ್ರತಿಯೊಬ್ಬ ವ್ಯಕ್ತಿಯ ಜೀವನದ ಪಯಣವನ್ನು ತಿಳಿಸುತ್ತವೆ. ಬಡತನದಲ್ಲಿ ಬದುಕುತ್ತಿದ್ದ ಅವ್ವಂದಿರು ನಾಳಿನ ತನ್ನ ಮಕ್ಕಳ ಭವಿಷ್ಯತ್ತನ್ನು ಯೋಚಿಸಿ, ಅಲ್ಪಸ್ವಲ್ಪ ಹಣವನ್ನು ಸಾಸಿವೆ ಜೀರಿಗೆ ಡಬ್ಬಿಗಳಲ್ಲಿ ಬಚ್ಚಿಡುತ್ತಿದ್ದರು, ಇಲ್ಲಿ ಕವಿಯು ಅವ್ವನ ಕನಸುಗಳನ್ನು ಸಾಸಿವೆ ಜೀರಿಗೆ ಡಬ್ಬಿಯಲ್ಲಿ ಬಚ್ಚಿಟ್ಟ ಕನಸುಗಳಿಗೆ ಹೋಲಿಸಿದ್ದಾರೆ. ಆಕೆಯ ತನ್ನ ಎದೆಯಾಳದಲ್ಲಿ ಕನಸುಗಳನ್ನು ತುಂಬಿ ಅದೆಷ್ಟೋ ವರುಷಗಳಿಂದ ತನ್ನ ಕನಸುಗಳು ನನಸು ಅಗಬಹುದೆಂದು ಕಾಯುತ್ತಿದ್ದಾಳೆ ಎಂದು ತನ್ನ ಹೃದಯಂತರಾಳದಲ್ಲಿ ಹುದಗಿದ್ದ ನೆನಪುಗಳನ್ನು ರೂಪಕಗಳಾಗಿ ರೂಪಿಸಿದ್ದಾರೆ.
“ಬುದ್ಧನೆಂಬ ಬೆಳಕಿಗೆ ಬನ್ನಿ” ಎಂಬ ಶೀರ್ಷಿಕೆಯ ಕವಿತೆಯಲ್ಲಿ ಮೌಢ್ಯದ ತುಂಬಿದ ಅಚಾರಗಳನ್ನು ಬಿಟ್ಟು ನಮ್ಮಿಂದ ಲಂಚದ ರೂಪದಲ್ಲಿ ಉಡುಗೊರೆಯನ್ನು ಕೇಳುವ ದೇವರುಗಳನ್ನು ಬಿಟ್ಟು ಬುದ್ದನೆಂಬ ಬೆಳಕ ಹತ್ತಿರ ಬನ್ನಿ ಎಂಬ ಸಂದೇಶವನ್ನು ಕವಿಯು ಈ ಕವಿತೆಯ ಮೂಲಕ ತಿಳಿಸುತ್ತಾರೆ.
“ಕೋಳಿ ಕುರಿ ಕೋಣ
ಬಲಿ ಕೇಳದ ದೇವರ ಹತ್ತಿರ
ಗುಡಿ ಗುಂಡಾರ
ವಿಭೂತಿ ಬಂಡಾರ
ಕಳಸ ಗಂಟೆ ಬೇಡದ
ದೇವರ ಹತ್ತಿರ
ಬನ್ನಿರಿ ಬನ್ನಿರಿ
ಬುದ್ದನೆಂಬ ಬೆಳಕ ದೇವರ ಹತ್ತಿರ ಬನ್ನಿ… ಭಾರತ ದೇಶದಲ್ಲಿ ಮುಕ್ಕೋಟಿ ದೇವರು ಇದ್ದಾರೆ ಅಂತ ನಮಗೆಲ್ಲಾ ಗೊತ್ತು.. ಅದರೆ ಇಲ್ಲಿನ ಪ್ರತಿ ದೇವರಿಗೂ ಎನೋ ಒಂದನ್ನು ಕಾಣಿಕೆಯಾಗಿ ನೀಡಬೇಕು . ಕೆಲವು ದೇವರು ಕೋಳಿ ಕುರಿಯನ್ನು ಬಲಿ ಕೇಳಿದರೆ ಕೆಲವು ದೇವರು ಕೋಣವನ್ನೆ ಬಲಿ ಕೇಳುತ್ತವೆ. ಕೆಲವು ದೇವರು ಗುಡಿಯನ್ನು ಉಡುಗೊರೆ ಕೇಳಿದರೆ ವಿಭೂತಿ ಬಂಡಾರವವನ್ನು, ಕಳಸ ಗಂಟೆಯನ್ನು ಕೇಳುತ್ತವೆ. ಇತ್ತಿಚೆಗೆ ಕೆಲವು ದೇವರು ಸುರುಪಾನವನ್ನೆ ಕೇಳುತ್ತಿವೆ.. ಅದು ಇದು ಮನುಜ ಮನದಲ್ಲಿ ನೆಲೆಸಿರುವ ಅಂಧಕಾರವೋ ಅಂಧಾನುಕರಣೆಯೋ ಅಸಾಯಕತೆಯೋ ಗೊತ್ತಿಲ್ಲ. ಅದರೆ ಎಲ್ಲಾ ದೇವರನ್ನು ಬಿಟ್ಟು, ಯಾವುದೇ ಉಡುಗೊರೆಯನ್ನು ಬಯಸದ ಸರ್ವರಲ್ಲಿ ಜ್ಞಾನ ತುಂಬಿ ಸರ್ವ ಜನರ ಹಿತವನ್ನು ಬಯಸುವ, ಶಾಂತಿ ತುಂಬಿದ ಸಮಾಜವನ್ನು ಬಯಸುವ ಬುದ್ದ ದೇವರ ಹತ್ತಿರ ಬನ್ನಿ ಎಂದು ಕವಿಯು ಕವಿತೆಯ ರೂಪದಲ್ಲಿ ಇಂದಿನ ಸಮಾಜಕ್ಕೆ ಸಂದೇಶವನ್ನು ನೀಡಿದ್ದಾರೆ.
“ಕನ್ನಡ” ಎಂಬ ಶೀರ್ಷಿಕೆಯ ಕವಿತೆಯಲ್ಲಿ ಹೇಳುತ್ತಾರೆ ಕನ್ನಡ ಅಂದ್ರೆ ಸುಮ್ನೆ ಅಲ್ಲಾ ಸ್ವಾಮಿ
ಕಲ್ಲಿಗೂ ಮಾತು ಕಲಿಸಿ
ಕಲೆಯಲ್ಲಿ ಭಾಷೆ ಅರಳಿಸಿ
ಅಚ್ಚ ಅಳಿಯದಂತೆ ಉಳಿಸಿ
ಬೇಲೂರ್ ಐಹೊಳೆ ಬನವಾಸಿ ಸಾಕ್ಷಿ ಗಿರಿಸಿ
ಕಣ್ ಕಣ್ ಬಿಡೋ ಹಂಗ್ ಮಾಡಿದ ಭಾಷಾ ಅದ… ಕನ್ನಡ ಭಾಷೆ ಪ್ರತಿಯೊಬ್ಬ ಕನ್ನಡಿಗನ ಹೃದಯದ ಭಾಷೆ, ಅದೊಂದು ಎದೆಯ ಮಿಡಿತ, ಕನ್ನಡ ಭಾಷೆಯೆಂದರೆ ಕಲ್ಲಿ ಕಲ್ಲಿಗೂ ಮಾತನ್ನು ಕಲಿಸುವಂತಹ ಒಂದು ಸಂಗೀತವನ್ನು ಹೊರಹೊಮ್ಮಿಸುವ ರಾಗ. ಕಲೆಯಲ್ಲಿ ಭಾಷೆಯನ್ನು ಅರಳಿಸಿದ ಭಾಷೆಯಿದು. ಬೇಲೂರು, ಐಹೊಳೆ, ಬನವಾಸಿಯಲ್ಲಿ ಇಂದಿಗೂ ಸಾಕ್ಷಿಯಾಗಿ ಉಳಿದಿರುವಂತಹ ಕನ್ನಡ ಭಾಷೆಯು ಸಾಮಾನ್ಯವಾದ ಭಾಷೆಯಲ್ಲ ಎಂದು ಈ ಕವಿತೆಯ ಸಾಲುಗಳಲ್ಲಿ ಕನ್ನಡ ಭಾಷೆಯ ಮಹತ್ವವನ್ನು ಸೊಗಸಾಗಿ ವರ್ಣಿಸಿದ್ದಾರೆ.
” ಇನ್ನೆಷ್ಟು ಮನುಷ್ಯರಾಗುವುದು ಸ್ವಾಮಿ” ಎಂಬ ಕವನದ ಶೀರ್ಷಿಕೆಯಲ್ಲಿ ಭಾರತದಂತಹ ಒಂದು ಪುರುಷ ಪ್ರಧಾನವಾದ ಸಮಾಜದಲ್ಲಿ ಅನಾಧಿ ಕಾಲದಿಂದಲೂ ಇಂದಿಗೂ ಒಂದು ಹೆಣ್ಣನ್ನ ಯಾವ ರೀತಿಯಾಗಿ, ಅಪಮಾನ, ಶೋಷಣೆ ಗುರಿ ಮಾಡುತ್ತಿದ್ದಾರೆ ಅನ್ನುವುದು ಕವಿತೆಯ ವಿಷಯ ವಸ್ತುವಾಗಿದೆ. ಭಾರತ ದೇಶದ ಉತ್ತರ ರಾಜ್ಯಗಳಲ್ಲಿ ಎರಡು ವರ್ಷಗಳ ಹಿಂದೆ ನಡೆದ ಎರಡು ಘಟನೆಗಳ ಅಮಾನವೀಯ ವರ್ತನೆಯ ಬಗ್ಗೆ ಈ ಕವಿತೆಯನ್ನು ಕವಿಗಳು ಬರೆದಿದ್ದಾರೆ ಅನಿಸುತ್ತದೆ.
“ಯೋನಿಗೆ ಕೈ ಹಾಕಿ
ರಕ್ತ ವಸರುವಾಗ
ಮೊಲೆ ಹಿಡಿದು ಜಗ್ಗಿ ವಿಕೃತಿ
ಮೆರೆವಾಗ
ಹೆತ್ತ ತಾಯಿಯೋ ಮಗಳೋ
ನೆನಪಾಗದಷ್ಟು ಮನುಷ್ಯರಾಗಿದ್ದೇವೆ…. ಇಲ್ಲಿ ಕವಿತೆಯನ್ನು ಓದುವಾಗ ನಮಗೆ ಅನಿಸುತ್ತದೆ. ಮನುಷ್ಯನಲ್ಲಿ ಮಾನವೀಯತೆಯೇ ಸತ್ತು ಹೋಗಿದೆಯೇ? ಮನುಜನಲ್ಲಿ ಕರುಣೆ, ಸಹೃದಯತೆ, ಅನುಕಂಪ, ಮನುಷತ್ವ ಮರೆಯಾಗಿ ಹೋಗಿದೆಯೇ? ಎಂಬ ವಿಷಯದಲ್ಲಿ ನಮ್ಮ ಮನಸ್ಸನ್ನು ನಾವೇ ಕೇಳಿಕೊಳ್ಳಬೇಕಾಗಿದೆ. ಉತ್ತರ ಭಾರತದ ಒಂದು ರಾಜ್ಯದಲ್ಲಿ ಹೆಣ್ಣು ಮಕ್ಕಳು ಕಳ್ಳತನ ಮಾಡಿದರು ಎಂಬ ಅರೋಪದಿಂದ ಅವರನ್ನು ಬೆತ್ರಲೆಯಾಗಿಸಿ, ಅವರ ಗುಪ್ತಾಂಗಕ್ಕೆ ಕೈಯಿಂದ ಗಾಯವನ್ನು ಮಾಡಿ, ಅದನ್ನು ವಿಡಿಯೋ ಮಾಡಿ ವಿಕೃತಿಯನ್ನು ಮೆರೆದ ಕೆಲವು ಪುರುಷರು ನಮ್ಮ ಮನೆಯಲ್ಲಿ ಕೂಡ ಅಕ್ಕ, ಅಮ್ಮ, ತಂಗಿ ಹೆಂಡತಿ ಇದ್ದಾರೆ ಎಂಬುದನ್ನು ಮರೆದು ಹೋದರೆ?. ಒಂದು ಹೆಣ್ಣುನ್ನು ವಿವಸ್ತ್ರಗೊಳಿಸಿದಾಗ ಅದು ಇಡೀ ಸ್ತ್ರೀ ಕುಲಕ್ಕೆ ಅವಮಾನ ಮಾಡಿದಂತೆ ಅಲ್ಲವೇ? ಮತ್ತೊಂದು ಘಟನೆಯಲ್ಲಿ ತನ್ನ ಗಂಡನ ಜೊತೆಯಲ್ಲಿ ಹೆಂಡತಿ ದ್ವಿಚಕ್ರ ವಾಹನದ ಮೇಲೆ ಹೋಗುತ್ತಿರುವಾಗ ಅವರನ್ನು ತಡೆದು, ಅವನ ಮೇಲೆ ಹಲ್ಲೆಯನ್ನು ಮಾಡಿ ಅವನ ಹೆಂಡತಿಯ ಸ್ತನಗಳನ್ನು ಜಗ್ಗಿ ಅದನ್ನು ವಿಡಿಯೋ ಮಾಡಿ ಸಂತೋಷ ಪಡುವಂತಹ ಕರುಣೆಯೇ ಇಲ್ಲದ ಮೃಗಗಳಂತಿರುವ ಜನರನ್ನು ಈ ಸಮಾಜ ಖಂಡಿಸಿದೆಯೇ? ಎಷ್ಟು ಜನ ಬರಹಗಾರರು ಈ ಘಟನೆಗಳನ್ನು ತಮ್ಮ ಬರಹದ ಮೂಲಕ ಖಂಡಿಸಿದ್ದಾರೆ. ಬರಹಗಾರರಲ್ಲೂ ಕೂಡ ಮನುಷತ್ವದ ಕೊರತೆಯು ಎದ್ದು ಕಾಣುತಿದೆ. ಕವಿ ಹುಣಸೆಕಟ್ಟಿ ರವರು ಇದನ್ನು ತಮ್ಮ ಕವಿತೆಯ ಮೂಲಕ ಪ್ರತಿರೋಧ ಒಡ್ಡಿರುವುದು ಸ್ವಾಗತಾರ್ಹವಾಗಿದೆ. ಅವರು ಹೇಳುತ್ತಾರೆ. ಹೆಣ್ಣನ್ನು ಹೆತ್ತ ತಾಯಿಯೋ, ಮಗಳೋ ಎಂದು ನೆನಪು ಮಾಡಿಕೊಳ್ಳಲಾಗದಷ್ಟು ಮನುಷ್ಯರಾಗಿದ್ದೇವೆ ನಾವು ಅಂತ ಹೇಳಿದ್ದಾರೆ
“ಆ ದೇವರು’ ಎಂಬ ಶೀರ್ಷಿಕೆಯ ಕವಿತೆಯಲ್ಲಿ ಬರೆಯುತ್ತಾರೆ.
“ಎಷ್ಟು ಮಾನಗೆಟ್ಟೋನ್
ಇರಬೇಕು ಈ ದೇವ್ರು
ಗುಡಿ ಗುಂಡಾರಕ್ಕೆ
ಬೆಳ್ಳಿ ಬಂಗಾರದ ಕಳಸಾ
ಇಡಸಗೊಂಡ
ಪಕ್ಕದಲ್ಲಿ ನೂರಾರು ಜೋಪಡಿ ಕಂಡು
ಕಣ್ಣ್ ಮುಚ್ಚಿಕೊಂಡು ಕುಳಿತುಕೊಂಡ….. ಅನಾದಿಕಾಲದಿಂದಲೂ ದೇವರು, ದೆವ್ವ, ಪೂಜೆ, ಹೋಮ ಹವನ ಎಂಬ ಮೌಢ್ಯಗಳಿಗೆ ಮನುಜ ಬಲಿಯಾಗಿದ್ದಾರೆ. ಹನ್ನೆರಡೆಯ ಶತಮಾನದಲ್ಲಿಯೇ ಕಲ್ಲು ದೇವರು ದೇವರಲ್ಲ ಮಣ್ಣು ದೇವರು ದೇವರಲ್ಲ ಎಂಬ ಅರಿವನ್ನು ಚಿಂತಕರು ಬೋಧಿಸಿದರೂ ಕೂಡ ದೇವರಿಗೆ ಹರಕೆ ಕಟ್ಟಿ ಕೂಲಿ ಮಾಡಿ ಬಂದ ಹಣವನ್ನು ಪೂಜೆ ನೈವೇದ್ಯ, ದಾನದ ರೂಪದಲ್ಲಿ ಕೊಟ್ಡು ದೇವರನ್ನು ಒಲಿಸಿಕೊಳ್ಳಲು ಪ್ರಯತ್ತಿಸುತ್ತಲೇ ಇದ್ದಾರೆ. ಅದರೆ ದೇವರು ಬಡವನಿಗೆ ಒಲಿಯಲೇ ಇಲ್ಲ… ಇಲ್ಲಿ ಕವಿಯು ದೇವರು ಬಡವರಿಗಾಗಿ ಒಲಿಯಲಿಲ್ಲ ಅವರ ಬಡತನವನ್ನು ದೂರ ಮಾಡದ ಶಕ್ತಿಹೀನನಾಗಿ ಗುಡಿಯೊಳಗೆ ಕಣ್ಣುಮುಚ್ಚಿ ಕುಳಿತಿದ್ದಾನೆ. ತನಗಾಗಿ ಬೆಳ್ಳಿ ಬಂಗಾರದ ಲೇಪನದ ಗುಡಿಯನ್ನು ಕಟ್ಟಿಸಿಕೊಂಡು ತನ್ನ ಗುಡಿಯ ಪಕ್ಕದಲ್ಲೇ ನೂರಾರು ಗುಡಿಸಲನ್ನು ಇಟ್ಟುಕೊಂಡಿರುತ್ತಾನೆ. ಸರ್ವಾಂತರಿಯಾಮಿಯಾದ ದೇವರಿಗೆ ಬಡವನ ಗುಡಿಸಲು ಕಾಣಿಸಲಿಲ್ಲವೆ? ಅವರನ್ನು ಇತರರಂತೆ ಉದ್ದಾರ ಮಾಡಲು ದೇವರಿಗೆ ಮನಸ್ಸು ಬರಲಿಲ್ಲವೇ? ಎಂಬುದಾಗಿ ಈ ಕವಿತೆಯಲ್ಲಿ ಕವಿಯು ತನ್ನಂತರಂಗದ ವೇದೆನೆಯನ್ನು ಕಠೋರವಾಗಿ ಪ್ರಶ್ನಿಸಿದ್ದಾರೆ.
ಒಮ್ಮೆಯಾದರೂ ಎಂಬ ಕವನದ ಶೀರ್ಷಿಕೆಯ ಕವಿತೆ ಯಲ್ಲಿ ಹೇಳುತಾರೆ. ಈ ದೇಶವವನ್ನು ಅಳುತ್ತಿರುವ ದೊರೆ ಕಡು ಬಡತನವನ್ನು ಅನುಭವಿಸಿ ಅದರ ನಿಕೃಷ್ಟವಾದ ಜೀವನವನ್ನು ನಡೆಸುತ್ತಿರುವ ಬಡವನ ಗುಡಿಸಲಿನಲ್ಲಿ ಒಮ್ಮೆಯಾದರೂ ಬಂದು ಪ್ರವೇಶ ಮಾಡಿ ಒಂದು ದಿನ ಅವರ ಜೀವನ ಪರಿಸ್ಥಿತಿ, ಅವರ ಬದುಕು ನೋಡಿದ್ದರೆ ಬಡವನ ಬದುಕು ಎಷ್ಟು ಕಷ್ಟವಾಗಿದೆ. ಅವರ ಬದುಕನ್ನು ರೂಪಿಸಲು ಯಾವ ಯೋಜನೆಗಳನ್ನು ತರಬೇಕು, ಆ ಯೋಜನೆಗಳು ಅವರನ್ನು ತಲುಪುವಂತೆ ಹೇಗೆ ಕ್ರಮವಹಿಸಬೇಕೇಂದು ಅರಿಯ ಬಹುದಿತ್ತು. ಅವರನ್ನು ಅರ್ಥ ಮಾಡಿಕೊಳ್ಳಬಹುದಿತ್ತು. ಐಶಾರಾಮಿ ಬಂಗಲೆಯಲ್ಲಿ ಕುಳಿತು ರಂಗುರಂಗಿನ ಬೆಳಕಿನ ಮಧ್ಯದಲ್ಲಿ ದಿನದೂಡುವ ದೊರೆಯು, ಎಲಿಕ್ಯಾಪ್ಟರ್ ಮೂಲಕ ರೈತನ ಅವಸಾನದ ಬದುಕನ್ನು ವೀಕ್ಷಣೆ ಮಾಡುವ ದೊರೆಗೆ ಮುರಕಲು ಗುಡಿಸಲಿನಲ್ಲಿ ದೀಪ ಉರಿಯುವದನ್ನು ನೋಡಲು ಸಾಧ್ಯವೇ? ಎಂಬುದನ್ನು ಕವಿತೆಯ ಮೂಲಕ ಜನರ ಗಮನ ಸೆಳೆದಿದ್ದಾರೆ
“ಒಮ್ಮೆಯಾದರೂ ಈ ಮುರುಕಲು ಗುಡಿಸಲಿನಲ್ಲಿ
ದೀಪ ಉರಿಯುವುದನ್ನು ಆತ ನೋಡಬೇಕಿತ್ತು ಬೆಳಕಾಗುವುದೆಂದರೆ ಬತ್ತಿ ಎಣ್ಣೆ ಹೀರಿ
ತನ್ನೆ ತಾನು ಸುಟ್ಟುಕೊಳ್ಳುವುದೆಂದು ಅರ್ಥವಾಗುತ್ತಿತ್ತು
ಬರೀ ಹುಸಿ ಭಾಷಣವಷ್ಟೇ ಅಲ್ಲವೆಂದು….
“ನಶಿಸಿ ಬಿಡಲಿ” ಎಂಬ ಕವನದ ಶೀರ್ಷಿಕೆಯಲ್ಲಿ ಎರಡು ದೇಶಗಳ ನಡುವಿನ ಸಂಬಂಧದ ಬಗ್ಗೆ ಸೊಗಸಾದ ರೂಪಕಗಳನ್ನು ಹಣೆದಿದ್ದಾರೆ.
“ಅಳಿಯುವುದಾದರೆ
ಅಳಿದು ಬಿಡಲಿ
ತಮ್ಮ- ಅವರೊಳಗಿನ ಅಂತರ್ ದ್ವೇಷ
ಗಡಿಯಾಚಿಗಿನ ಬೇಲಿ- ಮುಳ್ಳುಗಳ
ಕಳಚಿ ಅರಳಿ ಬಿಡಲಿ ಹೂವು
ಕಳೆದು ಬಿಡಲಿ ಹೃದಯದ ನೋವು…..
ಚಂದ್ರಮ ಬರಲೇ ಇಲ್ಲ ಎಂಬ ಕವಿತೆಯ ಕೆಲವು ಸಾಲುಗಳನ್ನು ಗಮನಿಸಿ.
ದೇವರ ಹೆಸರಿನಲಿ
ಕಾಲಿಗೆ ಗಜ್ಜೆಯ ಕಟ್ಟಿಸಿ
ಕೊರಳಿಗೆ ಮುತ್ತಿನ ಸರವನೇ
ಸದ್ದಿಲ್ಲದೆ ಬಿಗಿಸಿ
ಜಡೆಗೆ ಜಂಜಡವ ಮುಡಿಸಿ
ಸಂಪ್ರದಾಯದ ನೆಪದಲಿ
ತಿಂದುಂಡು ಬೀಗಲು
ಬಳಕೆಯಾದ ದೇವದಾಸಿಯರ
ಬದುಕ ಬಂದಾಳಕ್ಕೆ
ಚಂದ್ರಮ ಬರಲಿ ಇಲ್ಲ….. ಭಾರತದಂತಹ ದೇಶದಲ್ಲಿ ಉತ್ಕೃಷ್ಟ ಜಾತಿಗಳೆಂದು ಹೇಳಿಕೊಂಡು, ಮಡಿ ಮೈಲಿಗೆಯನ್ನು ಸೃಷ್ಟಿಸಿ ದೇವರ ಗುಡಿಗಳನ್ನು ನಿರ್ಮಿಸಿ, ಬಡಜನರ ಅಂದರೆ ಕೆಳಜಾತಿಯ ಹೆಣ್ಣುಮಕ್ಕಳನ್ನು ದೇವದಾಸಿಯರೆಂದು ಹೆಸರಿಟ್ಟು ಅವರು ದೇವರಿಗಾಗಿ ಮೀಸಲು ಎಂದು ಹೇಳಿ ಅವರ ಕಾಲುಗಳಿಗೆ ಹೆಜ್ಜೆಯನ್ನು ಕಟ್ಟಿ ದೇವರ ಮುಂದೆ ಕುಣಿಸಿ ಅವರನ್ನು ದೈಹಿಕವಾಗಿ ಬಳಸಿಕೊಂಡು ಅವರ ಬದುಕನ್ನು ಕೊನೆಗಾಣಿಸುತ್ತಿದ್ದರು. ಇಂತಹ ಅಸಾಯಕರ ಬದುಕಿನ ಅಂಗಳದ ಕಡೆಗೆ ತಣ್ಣನೆಯ ತಂಪನ್ನು ನೀಡುವ ಚಂದಿರ ಬರಲೇ ಇಲ್ಲ ಎಂದು ಕವಿಯು ಬಹಳಷ್ಟು ಮಾರ್ಮಿಕವಾಗಿ ಈ ಕವಿತೆಯನ್ನು ರಚಿಸಿದ್ದಾರೆ.
ಈ ಹಕೀಮನೊಬ್ಬನ ತಕರಾರು ಕೃತಿಯೊಳಗೆ ಇಂತಹ ಹತ್ತಾರು ಕವಿತೆಗಳಿವೆ. ಎಲ್ಲಾ ಕವಿತೆಗಳನ್ನು ತಿಳಿಸುತ್ತಾ ಹೋಗುವುದು ತಕ್ಕದಲ್ಲಾ ಅಂತ ನನ್ನ ಭಾವನೆ. ಆಂತರಿಕ ತುಡಿತ, ಬಹುಜನರ ನೋವುಗಳು, ಅವರು ಅನುಭವಿಸಿದ ಯಾತನೆಗಳು, ಹೆಣ್ಣಿನ ಶೋಷಣೆ, ಮುಂತಾದ ವಿಷಯಗಳ ಬಗ್ಗೆ ಕವಿತೆಗಳಿವೆ. ನಲ್ಬೆಳಗು ಪ್ರಕಾಶನ ಪ್ರಕಟಿಸಿರುವ ಈ ಕೃತಿಗೆ ಡಾ. ಎಚ್ ಎಲ್ ಪುಪ್ಪ ರವರು ಮುನ್ನುಡಿಯನ್ನು ಬರೆದಿದ್ದು ಹಲವು ಚಿಂತನೆಗಳಿಗೆ ಒಡ್ಡುವ ಸಮಕಾಲೀನ ಕವಿತೆಗಳನ್ನು ಹುಣಸೀಕಟ್ಟೆರವರು ರಚಿಸಿದ್ದಾರೆ ಎಂದಿದ್ದಾರೆ. ಬೆನ್ನುಡಿಯನ್ನು ಬರೆದಿರುವ ಕನ್ನಡ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಪುರುಷೋತ್ತಮ ಬಿಳಿಮನೆಯವರು ಹೇಳುತ್ತಾರೆ. ಸಮಕಾಲೀನ ರಾಜಕೀಯದೊಂದಿಗೆ ಸಂಬಂದ ಹೊಂದಿಯೂ, ಪ್ರತಿಭಟನೆಯ ವಿಶಾಲವಾದ ಪರಿಕಲ್ಪನೆಯನ್ನು ಇವರ ಕವಿತೆಗಳು ಮೈಗೂಡಿಸಿಕೊಂಡಿವೆ ಎಂದಿದ್ದಾರೆ.
ಕನ್ನಡ ನಾಡಿನ ಬರಹಗಾರರು ಓದುಗರು ಲೇಖಕನ ಬರಹವನ್ನು ಓದಿ ಲೇಖಕರನ್ನು ಪ್ರೋತ್ಸಾಹಿದಾಗ ಮಾತ್ರ ಅವರು ಇನ್ನಷ್ಟು ಬರೆಯಲು ಪ್ರಯತ್ನ ಪಡುತ್ತಾರೆ. ಈ ನಿಟ್ಟಿನಲ್ಲಿ ಈ ಕೃತಿಯನ್ನು ಓದಿ ಲೇಖಕರನ್ನು ಪ್ರೋತ್ಸಾಹಿಸಿ..
ದೇವರಾಜ್ ಹುಣಸಿಕಟ್ಟೆ ರವರು ಇನ್ನು ಮುಂದೆಯೂ ಉತ್ತಮ ಕೃತಿಗಳನ್ನು ಬರೆದು ಪ್ರಕಟಿಸಲಿ ಮತ್ತು ಅವರ ಬರಹದ ಆಸಕ್ತಿ ಗದ್ಯದೆಡೆಯೂ ವಾಲಲಿ ಎಂದು ನಾನು ಆಶಿಸುತ್ತೇನೆ.
ನಾರಾಯಣಸ್ವಾಮಿ ವಿ (ನಾನಿ)