ಬದುಕಿಗೆ ಗುರಿ – ಗುರುವಿನ ಸಾಂಗತ್ಯವಿರಲಿ: ಮಧು ಕಾರಗಿ, ಕೆರವಡಿ

ತಮ್ಮ ಮಕ್ಕಳು ವಿದ್ಯಾವಂತರಾಗಲಿ ಎನ್ನುವುದು ಪ್ರತಿ ತಂದೆತಾಯಿಯ ಮನದಾಳದ ಮಾತು ಹಾಗೆಯೇ ಅವರು ಎಷ್ಟೋ ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ .ತಮಗೆ ಬಡತನವಿದ್ದರೂ ಕೂಲಿ ಮಾಡಿ ದುಡಿದು ಮಕ್ಕಳನ್ನು ಓದಿಸುವ ಎಷ್ಟೋ ತಂದೆ ತಾಯಂದಿರಿದ್ದಾರೆ . ಇಂದಿನ ತಂತ್ರಜ್ಞಾನದ ದಿನಮಾನದಲ್ಲಿ ಅಶಿಕ್ಷಿತನೊಬ್ಬ ಬದುಕು ನಡೆಸುವುದು ಕಷ್ಟಸಾಧ್ಯ ಆದ್ದರಿಂದಲೇ ಶಿಕ್ಷಣ ಬದುಕಿನ ಅವಿಭಾಜ್ಯ ಅಂಗವಾಗಿದೆ
” ಜೀವನವೇ ಶಿಕ್ಷಣ ; ಶಿಕ್ಷಣವೇ ಜೀವನ ” ಎಂದು ಮಹಾತ್ಮ ಗಾಂಧೀಜಿಯವರು ಹೇಳಿದ್ದಾರೆ .

ಬಾಲ್ಯದಲ್ಲಿ ದೊಡ್ಡವರು ಯಾರಾದರೂ ನೀನು ದೊಡ್ಡವನಾ/ಳಾದರೆ ಮುಂದೆ ಏನಾಗಬಯಸುತ್ತಿ ಎಂದು ಪ್ರಶ್ನೆ ಮಾಡಿದರೆ ಪ್ರತಿಯೊಬ್ಬರೂ ಸರದಿಯಂತೆ ಒಬ್ಬ ಡಾಕ್ಟರ್ ಆಗುತ್ತೇನೆ , ಮತ್ತೊಬ್ಬ ಪೊಲೀಸ್ , ಮತ್ತೊಬ್ಬಳು ಶಿಕ್ಷಕಿ ಮಗದೊಬ್ಬಳು ಇಂಜಿನಿಯರ್ ಆಗುತ್ತೇನೆಂದು ಹುರುಪಿನಿಂದ ಪಟಪಟನೆ ಹೇಳಿರುತ್ತಾರೆ . ಅದೇ ತುಡಿತ ಅದೇ ಕನಸುಗಳು ಉನ್ನತ ವಿದ್ಯಾಭ್ಯಾಸಕ್ಕೆ ವಿಶ್ವವಿದ್ಯಾಲಯದ ಮೆಟ್ಟಿಲು ಏರಿದಾಗಲು ಇದ್ದದ್ದಾದರೆ ಅವನು ನಿಜವಾದ ಕನಸುಗಾರ ಎನಿಸಿಕೊಳ್ಳುತ್ತಾನೆ ಮತ್ತು ಅವನ ಬದುಕು ಸುಂದರವಾಗಿ ರೂಪುಗೊಳ್ಳುತ್ತದೆ ಥೇಟ್ ಸೂರ್ಯಕಾಂತಿಯ ಹೂವಿನಂತೆ .!

ಬುದ್ಧನಿಗೆ ಬೋಧಿವೃಕ್ಷವಿದ್ದಂತೆ, ಶಿಷ್ಯನಿಗೆ ಗುರು. ನಮ್ಮೊಳಗೆ ಬೀಜವಾಗಿದ್ದ ಅರಿವನ್ನು ಗುರು ತಮ್ಮ ಜ್ಞಾನಗಂಗೆಯನ್ನು ಧಾರೆಯೆರೆಯುತ್ತ ವಸಂತದ ಹಚ್ಚ ಹಸಿರಾಗಿ ಚಿಗುರಿಸುತ್ತಾರೆ. ದಿವ್ಯ ಕರಗಳಿಂದ ಆಳ ಅಗಲಗಳನ್ನು ವಿಸ್ತರಿಸುತ್ತಾರೆ. ಕೊನೆಗೊಂದು ದಿನ ಬೀಜ ಮರವಾಗಿ ನಿಲ್ಲುತ್ತದೆ. ತಾನೇ ಬಿತ್ತಿದ ಬೀಜ ಮರವಾಗಿ ಬೆಳೆದು, ಇತರರಿಗೆ ನೆರಳಾಗಿದ್ದು ಕಂಡ ಗುರು ಎಲ್ಲಿಲ್ಲದ ಹೆಮ್ಮೆಯಿಂದ ತಲೆಯೆತ್ತಿ “ನೋಡಿ ಇವನು ನನ್ನ ಶಿಷ್ಯ” ಎಂದು ನಾಲ್ಕು ಜನರಲ್ಲಿ ಹೇಳಿಕೊಳ್ಳುತ್ತಾರೆ. ಇತಿಹಾಸದ ಪುಟಗಳಲ್ಲಿ ಗುರುಭಕ್ತಿಗೆ ಮೊದಲ ಸಾಲಿನಲ್ಲಿ ನಿಲ್ಲುವ ಏಕಲವ್ಯ ಯಾರಿಗೆ ತಾನೇ ಗೊತ್ತಿಲ್ಲ? ಮಹಾಭಾರತದಲ್ಲಿ ವ್ಯಾಸ ಮಹರ್ಷಿ ಆತನನ್ನು ಕಟ್ಟಿಕೊಟ್ಟ ರೀತಿ ಅನನ್ಯ. ಆ ಮಹಾಕಾವ್ಯವನ್ನು ಆಧಾರವಾಗಿಟ್ಟುಕೊಂಡು ಕುವೆಂಪು ಬರೆದ ‘ಬೆರಳ್ಗೆ ಕೊರಳ್’ ನಾಟಕ ಉಲ್ಲೇಖನೀಯ. ಬಿಲ್ವಿದ್ಯೆ ಕಲಿಯಬೇಕೆಂಬ ಅದಮ್ಯ ಆಸೆಯಿಂದ ದ್ರೋಣಾಚಾರ್ಯರ ಬಳಿ ಹೋದಾಗ, ಕಾಡು ಜನರ ಜೊತೆ ಸ್ನೇಹ ಮಾಡುವುದರಿಂದ ತಮ್ಮ ಘನತೆ ರಾಜ ವೈಭವಕ್ಕೆ ಧಕ್ಕೆ ಎಂದುಕೊಂಡ ಕ್ಷತ್ರಿಯ ಕುಮಾರರು ಅವನನ್ನು ತಮ್ಮ ಗುಂಪಿನಲ್ಲಿ ಸೇರಿಸಿಕೊಳ್ಳಲು ನಿರಾಕರಿಸಿದರು. ಆದರೆ ಗುರು ದ್ರೋಣರು ಕನಿಕರ ಪಟ್ಟು ತನ್ನ ಮನೆಯಲ್ಲಿಟ್ಟುಕೊಂಡು ಅವನಿಗೆ ವಿದ್ಯೆ ಕಲಿಸುತ್ತಿದ್ದರು. ತಂದೆಯು ತೀರಿಕೊಂಡ ಕಾರಣಕ್ಕೆ ಕಾಡಿಗೆ ಹೋದ ಏಕಲವ್ಯ ಮತ್ತೆ ತನ್ನ ಅಬ್ಬೆಯನ್ನು ಕಾಡಿನಲ್ಲಿ ಒಂಟಿಯಾಗಿ ಬಿಟ್ಟು ಬರಲು ಮನಸ್ಸಾಗದೆ, ತಾನಿರುವ ಸ್ಥಳದಲ್ಲಿಯೇ ಭಯ ಭಕ್ತಿಯಿಂದ ಗುರುವಿನ ಪ್ರತಿಮೆ ಸೃಷ್ಟಿಸಿ, ದಿನವೂ ಪೂಜೆ ಅರ್ಪಿಸಿ, ತನ್ನ ವಿದ್ಯಾಭ್ಯಾಸವನ್ನು ಮುಂದುವರೆಸಿದ ಪರಿಣಾಮವೆಂಬಂತೆ ಶಬ್ದವೇಧಿ ವಿದ್ಯೆ (ಗುರಿ ಕಣ್ಣಿಗೆ ಕಾಣದಿದ್ದರೂ, ಪ್ರಯೋಗಿಸಿದ ಬಾಣ ಅಮೋಘ ಗುರಿಗೆ ತಗಲುವುದು/ ನಾಟುವುದು) ಯನ್ನು ಸಾಧಿಸಿದ. ಕಲಿಯುವ ಆಸಕ್ತಿ, ನಿರಂತರ ಶ್ರದ್ಧಾಭಕ್ತಿ ಇದ್ದರೆ ಗುರು ದೈಹಿಕವಾಗಿ ಎಷ್ಟು ದೂರ ಇದ್ದರೂ, ಅವನ ಆಶೀರ್ವಾದಗಳು ನಮ್ಮ ಮೇಲಿರುತ್ತವೆ. ಮಾನಸಿಕವಾಗಿ ಧೈರ್ಯ ತುಂಬಿ ಮುನ್ನಡೆಸುತ್ತಾರೆ ಎಂಬುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕೇ?

ಆದರೆ , ಇಂದಿನ ವಿದ್ಯಾರ್ಥಿಗಳು ತರಗತಿಯ ಆಚೆ ಗುರುವನ್ನು ಯಾರೋ ಅಪರಿಚಿತರಂತೆ ತಮಗೆ ಸಂಬಂಧವೇ ಇಲ್ಲವೆನ್ನುವಂತೆ ಒಂದು ಗೌರವದ ನಮಸ್ಕಾರವನ್ನು ಸಹ ಹೇಳದೆ ಮುಂದೆಯೇ ಎದೆಸೆಟೆದು ನಡೆದುಹೋಗುತ್ತಾರಲ್ಲ ?! ಆ ವರ್ತನೆ ನನಗೆ ಸದಾ ಅಚ್ಚರಿಯುಂಟುಮಾಡುತ್ತದೆ . ನಿಜ ಈಗಿನ ಪೀಳಿಗೆಯಲ್ಲಿ ಅನುಕರಣೆಯ ಶಕ್ತಿ ಕಡಿಮೆಯಾಗಿ ಮೌಲ್ಯಗಳು ಕುಸಿತಗೊಂಡಿವೆ . ಎಲ್ಲವನ್ನು ಸ್ವಂತವಾಗಿ ಮಾಡುವ ಹಠ ಮೇಲಾಗಿ ನಾನೇನು ಕಡಿಮೆ ಎಂಬ ಅಹಂಭಾವ , ವಾಸ್ತವಕ್ಕೆ ಹೊಂದಿಕೊಳ್ಳದೆ ಹೋದ ಉದ್ವಿಗ್ನತೆಯ ಸ್ಥಿತಿ , ಮನಸಂತೂ ಗೇರು ಇಲ್ಲದ ಗಾಡಿ ! ಹೀಗಾಗಿ ಎಷ್ಟೋ ವಿದ್ಯಾರ್ಥಿಗಳ ಬದುಕು ಸರಿಯಾದ ಮಾರ್ಗದರ್ಶನ ಸಿಕ್ಕದೆ ಯಾವುದೋ ದಿಕ್ಕಿಗೆ ತೇಲಿಕೊಂಡು ಹೋಗುತ್ತವೆ ಇತ್ತ ಮುಳುಗಲೂ ಆಗದೆ ಪಾರಾಗುವ ದಾರಿಯೂ ಸಿಗದೆ ಎಂದೂ ಬಿಡಿಸಲಾಗದ ಸಂದಿಗ್ಧತೆಯಲ್ಲಿ ಸಿಲುಕುತ್ತಾರೆ . ಮುಂದೇನು ..? ಎಂಬ ಪ್ರಶ್ನೆಯನ್ನೇ ಇಟ್ಟುಕೊಂಡು ಒಂದಿಡೀ ಬದುಕನ್ನು ನಿರಾಯಾಸವಾಗಿ ಕಳೆದು ಬಿಡುತ್ತಾರೆ . ಅಂತಹ ಬದುಕು ಬದುಕುವುದಿದೆಯಲ್ಲ ಆ ಬದುಕಿಗೆ ಒಂದಿನಿತಾದರೂ ಅರ್ಥವಿದೆಯೇ ?! ಖಂಡಿತ ಇಲ್ಲ .!

ಮಾಡಬೇಕಾದುದೇನು ?

● ಮೊದಲನೆಯದಾಗಿ ನಮ್ಮ ಬದುಕಿನ ಗುರಿಗಳನ್ನು ಮನಸ್ಸಿನ ಪುಟಗಳಲ್ಲಿ ಸ್ಪಷ್ಟವಾಗಿ ಧಾಖಲಿಸಿಕೊಳ್ಳಬೇಕು .
● ಇತರ ಯಾವುದೇ ನಕಾರಾತ್ಮಕ , ಅನಾವಶ್ಯಕ ಆಲೋಚನೆಗಳಿಂದ ಯಾವಾಗಲೂ ಆದಷ್ಟು.ದೂರವಿರಬೇಕು .
● ಒಂದೇ ರೀತಿಯ ಅಭಿರುಚಿ ಹವ್ಯಾಸಗಳನ್ನು ಹೊಂದಿರುವ ಗೆಳೆಯರ ಸ್ನೇಹದಲ್ಲಿರುವುದು ಉತ್ತಮ .ಇವುಗಳು ನಿಮ್ಮ ಗುರಿ ಸಾಧನೆಗೆ ಸಹಕಾರಿಯಾಗಬಲ್ಲುದು .
● ಗುರುವಿನೊಂದಿಗೆ ಸ್ನೇಹಮಯ ಒಡನಾಟವಿರಬೇಕು ನಿಮ್ಮ ಯಾವುದೇ ರೀತಿಯ ಸಂದೇಹಗಳಿದ್ದರೂ ಬಿಚ್ಚುಮನಸ್ಸಿನಿಂದ ಕೇಳಿ ಪರಿಹರಿಸಿಕೊಳ್ಳಬೇಕು .
● ಪ್ರತಿನಿತ್ಯ ಹೊಸದನ್ನು ಕಲಿಯಬೇಕು ಎಂಬ ಮನೋಭಾವವನ್ನು ಬೆಳೆಸಿಕೊಳ್ಳಬೇಕು
● ಸ್ವಾಮಿ ವಿವೇಕಾನಂದ .ಅಬ್ದುಲ್ ಕಲಾಂ ಜಿ .ಕುವೆಂಪು ,ಮಹಾತ್ಮ ಗಾಂಧೀಜಿ ಹೀಗೆ ಮುಂತಾದ ಮಹಾನ್ ಚೇತನಗಳ ಜೀವನ ಸಂದೇಶ ವಿಚಾರ ಧಾರೆಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು
● ನಿಂದನೆ , ಅವಮಾನಗಳಿಗೆ ತಲೆ ಕೆಡಿಸಿಕೊಳ್ಳಲೇಬಾರದು ಮರೆತು ಮುಂದಿನ ದಾರಿಗೆ ಹೆಜ್ಜೆ ಇಡಬೇಕು .
● ಗುರಿ ಮುಂದೆ ಇರಲಿ ಗುರು ಹಿಂದೆ ಇರಲಿ ಬದುಕು ನಿರಂತರ ಸಾಗುತಿರಲಿ !..

ಏನಂತೀರಾ ?

ಮಧು ಕಾರಗಿ, ಕೆರವಡಿ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x