ಉಡುಗೊರೆ: ರಶ್ಮಿ ಪ್ರಶಾಂತ್


ಕಾಲೇಜಿನ ಸಾಂಸ್ಕೃತಿಕ ದಿನಕ್ಕಾಗಿ ಸೀರೆ ಬೇಕು ಎಂದು ಮಗಳು ಒಂದೇ ಸಮನೇ ಕೇಳುತ್ತಿದ್ದಳು, ಬಿಡುವು ಮಾಡಿಕೊಂಡು ಬೀರುವನ್ನು ತೆಗೆದು ಅವಳ ಆಯ್ಕೆಗೆ ಬಿಟ್ಟೆ. ಯಾವುದೂ ಅವಳಿಗೆ ಇಷ್ಟವಾಗಲಿಲ್ಲ. ಕೊನೆಗೆ ಬಾಕ್ಸ್ನಲ್ಲಿದ್ದ ಸೀರೆ ಕಣ್ಣಿಗೆ ಬಿತ್ತು. ಅದನ್ನು ಕೈಗೆತ್ತಿಕೊಂಡಳು.
ಅದು ಸುಂದರವಾದ ಶ್ವೇತ ವರ್ಣದ ಜಾರ್ಜೆಟ್ ಸೀರೆ ಅದರ ಅಂಚಿಗೆ ಬಿಳಿ ಬಣ್ಣದ ಕಸೂತಿಯ ಬಾರ್ಡರ್! ಅವಳಿಗೆ ಹೇಳಿ ಮಾಡಿಸಿದಂತಿತ್ತು. ಇದನ್ನು ಉಟ್ಟಿದ್ದೇ ನೋಡಿಲ್ಲವಲ್ಲ ಎಂದಳು.

ಅದನ್ನು ನೋಡಿದಾಕ್ಷಣ ಕಣ್ಣಾಲಿಗಳು ತುಂಬಿ ಬಂದವು. “ಇಲ್ಲಮ್ಮ ಈ ಸೀರೆಯನ್ನು ಜೀವನದಲ್ಲಿ ಎಂದಿಗೂ ನಾನು ಉಡಲಾರೆ” ಎಂದೆ ಬಿಕ್ಕುತ್ತ.
“ನನ್ನಮ್ಮನಾಸೆಯಂತೆ ಈ ಸೀರೆ ಕೊಳ್ಳಲು ಹೋದಾಗಲೇ ನಗುತ್ತ ಬೀಳ್ಕೊಟ್ಟ ನನ್ನಮ್ಮ ಹೃದಯಸ್ತಂಭನವಾಗಿ ಒದ್ದಾಡಿ ಮನೆಯಲ್ಲಿ ಪ್ರಾಣ ಬಿಟ್ಟಿದ್ದು! ಅವಳು ನರಳಾಡುವಾಗ ಕಾಪಾಡಲು ಆಗದೆ ಇದ್ದಿದ್ದು ಈ ಸೀರೆಯಿಂದ ಎಂಬ ನೋವು ಕಾಡುತ್ತಿದೆ ಇವತ್ತಿಗೂ. ನನ್ನಮ್ಮನ ಜೀವವನ್ನೇ ತೆಗೆದುಕೊಂಡ, ಇಟ್ಟುಕೊಳ್ಳಲು ಆಗದ ಬಿಸಾಡಲೂ ಆಗದಿರುವಂತಹ ಈ ಸೀರೆ ಅವಳ ಕೊನೆಯ ಭಾರಿ ಉಡುಗೊರೆ!” ನಾನು ಅಳುತ್ತಲೇ ಇದ್ದೆ….

ಸುಮಾರು ೧೦-೧೨ ವರ್ಷಗಳ ಹಿಂದೆ ಅಮ್ಮನಿಗೆ ಸ್ವಲ್ಪ ಹುಷಾರಿಲ್ಲದಂತೆ ಆಗಿದ್ದರಿಂದ ಅವರನ್ನು ನೋಡಲು ಊರಿಗೆ ಬಂದಿದ್ದೆ. ಆರೋಗ್ಯ ಸುಧಾರಿಸಿದ್ದರೂ ಹೆಚ್ಚು ಓಡಾಡಲು ಆಗುತ್ತಿರಲಿಲ್ಲ. ಒಂದೆರೆಡು ದಿನದಿಂದ ಏನೋ ಹುಮ್ಮಸ್ಸು ಅವರಿಗೆ. ಮೊಮ್ಮಕ್ಕಳೊಂದಿಗೆ ಖುಷಿಯಾಗಿದ್ದರು. ಅಳಿಯನೂ ಬಂದು ಹೋಗಿದ್ದರಿಂದ ಅವರಿಗೆ ಸಮಾಧಾನ. ಅವರು ಅತೀ ಹೆಚ್ಚು ಮಾಡುತ್ತಿದ್ದ, ನಮೆಗಲ್ಲ ಇಷ್ಟವಾದ ತಿಂಡಿ ಅಡುಗೆಗಳನ್ನು ಮಾಡಲು ಹೇಳಿ, ಅವರೂ ತಿಂದು ಸಂತೋಷ ಪಟ್ಟು ನಮಗೂ ಸಂತಸ ನೀಡಿದ್ದರು. ಅತ್ತಿಗೆ ಹೇಳಿದರು ನಾನು ಬಂದಿದ್ದು ಬಹಳ ಖುಷಿ ಆಗಿರಬಹುದು ಅದಕ್ಕೆ ಚಟುವಟಿಕೆಯಿಂದ ಇದ್ದಾರೆ ಅಂತ. ಆದ್ದರಿಂದ ನಾನೂ ನನ್ನೂರಿಗೆ ಹೊರಡಲು ಸಿದ್ಧಳಾಗುತ್ತಿದ್ದೆ. ಆವತ್ತು ಬೆಳಗ್ಗೆ ಅಮ್ಮ ನಮ್ಮಿಬ್ಬರನ್ನೂ ಕರೆದು ನನಗೊಂದು, ಅತ್ತಿಗೆಗೊಂದು ಸೀರೆ ಕೊಡಿಸಬೇಕೆಂಬ ಆಸೆ ಎಂದು ಹೇಳಿ ಅತ್ತಿಗೆಗೆ ದುಡ್ಡು ಕೊಟ್ಟು ಬಲವಂತ ಮಾಡಿದರು.

ಅಂದು ಅಂಗಡಿಯಲ್ಲಿ ವಿಪರೀತ ಜನಜಂಗುಳಿ. ಆ ಅಂಗಡಿ ಊರಿನಲ್ಲೇ ತುಂಬ ಹೆಸರುವಾಸಿ. ಅಲ್ಲಿಯ ವಸ್ತ್ರಗಳು ಒಳ್ಳೆಯ ಗುಣಮಟ್ಟದ್ದು ಹಾಗೂ ಒಳ್ಳೆ ಬೆಲೆಗೆ ಸಿಗುತ್ತಿದ್ದರಿಂದ ಯಾವಾಗಲೂ ಅಲ್ಲಿ ಜನಜಾತ್ರೆ! ಜೊತೆಗೆ ರಿಯಾಯಿತಿಯ ಕೊಡುಗೆ ಬೇರೆ, ಆದ್ದರಿಂದ ಎಂದಿಗಿಂತ ಹೆಚ್ಚಿನ ಜನಸಾಗರವೇ ಸೇರಿತ್ತು ಎಂದರೆ ತಪ್ಪಾಗಲಾರದು. ಅಮ್ಮನ ಆಸೆಯಂತೆ ನನ್ನ ಅತ್ತಿಗೆ ಸೀರೆ ಕೊಡಿಸಲು ಕರೆತಂದಿದ್ದರು.

ಅAತೂ ಇಂತೂ ಶ್ವೇತವರ್ಣದ ಕಸೂತಿ ಕಲೆಯಿಂದ ಕೂಡಿದ ಅಂಚುಳ್ಳ ಸುಂದರವಾದ ಸೀರೆಯನ್ನು ತೆಗೆದುಕೊಂಡೆ, ಅತ್ತಿಗೆಯೂ ಅದೇ ರೀತಿಯ ಕಡು ನೀಲಿ ಬಣ್ಣದ ಸೀರೆ ತೆಗೆದುಕೊಂಡರು. ಇಬ್ಬರೂ ಖುಷಿಯಾಗಿ ಮನೆಗೆ ಬಂದಾಗ ಬಾಗಿಲು ತೆರೆದಿತ್ತು, ಅಕ್ಕಪಕ್ಕದ ಮನೆಯವರು ಸೇರಿದ್ದರು. ಅಣ್ಣ, ಅವನ ಮಗ ಅಳುತ್ತ ನಿಂತಿದ್ದರು! ಪಕ್ಕದಲ್ಲಿ ನನ್ನ ಮಗಳು ತೀರ ಚಿಕ್ಕವಳು, ಗಾಬರಿಯಲ್ಲಿ ಅಣ್ಣನ ಮಗನ ಕೈಹಿಡಿದು ಅಳುತ್ತಿದ್ದಾಳೆ. ನಮ್ಮ ಕೈಯಲ್ಲಿದ್ದ ಕವರುಗಳು ಕೆಳಗೆ ಬಿದ್ದವು. ಅಲ್ಲಿಯ ವಾತವರಣದಿಂದ ಎಲ್ಲವೂ ಅರ್ಥ ಆಗಿತ್ತು. ಇಬ್ಬರೂ ಸೀದಾ ಅಮ್ಮನ ರೂಮಿಗೆ ಓಡಿದೆವು. ಅಮ್ಮನ ಜೀವ ಹಾರಿ ಹೋಗಿತ್ತು. ಅವರ ಒಂದು ಕೈ ಎದೆಯ ಮೇಲಿದ್ದರೆ ಇನ್ನೊಂದು ಕೈ ಕೆಳಗೆ ಜಾರಿತ್ತು.

ಊಟ ಮಾಡಿದ ಅವರಿಗೆ ಇದ್ದಕ್ಕಿದ್ದ ಹಾಗೆ ನಿರಂತರವಾದ ಕೆಮ್ಮು ಬಂದಿದೆ, ನಂತರ ಮೈಯೆಲ್ಲಾ ಬೆವೆತಿದೆ, ತಿಂದಿದ್ದ ಊಟ ವಾಂತಿ ಆಗಿದೆ. ಹೇಗೇಗೋ ಆಡಲು ಶುರು ಮಾಡಿದ್ದಾರೆ. ಆಗತಾನೇ ಕಾಲೇಜು ಮುಗಿಸಿಕೊಂಡು ಬಂದ ಮೊಮ್ಮಗ ಗಾಬರಿಯಿಂದ ಅವರಪ್ಪನಿಗೆ, ನಮಗೆ ಫೋನ್ ಮಾಡಿದ್ದಾನೆ. ನಮಗೆ ಫೋನ್ ಬಂದದ್ದು ಆ ಜನಸಾಗರದ ಮಧ್ಯೆ ಕೇಳಿಸಿಲ್ಲ. ಅಲ್ಲೇ ಹತ್ತಿರದಲ್ಲಿದ್ದ ಡಾಕ್ಟರ್‌ನ್ನು ಕರೆತಂದಿದ್ದಾನೆ. ಅಷ್ಟರಲ್ಲಿ ಅಮ್ಮನ ಜೀವ ಹಾರಿಹೋಗಿತ್ತು! ಡಾಕ್ಟರ್ ಬಂದು ನೋಡಿದಾಗ ಅವರಿಗೆ ಹೃದಯಸ್ತಂಭನವಾಗಿದ್ದು ತಿಳಿದು ಬಂದಿತು. ಮಗನಿಂದ ಹಾಗೂ ಅಮ್ಮನನ್ನು ನೋಡಿಕೊಳ್ಳುತ್ತಿದ್ದ ಆಯಾಳಿಂದ ತಿಳಿದುಕೊಂಡ ವಿಷಯಗಳನುಸಾರ ಅವರ ಶ್ವಾಸನಾಳದಲ್ಲಿ ಊಟ ಮಾಡುವಾಗ ಆಹಾರ ಸಿಕ್ಕಿಹಾಕಿಕೊಂಡಿದೆ, ಕೆಮ್ಮು ಕೂಡ ಬಂದಿದೆ, ಇದರಿಂದ ಅವರಿಗೆ ಹೃದಯಸ್ತಂಭನವಾಗಿದೆ ಎಂದು ಡಾಕ್ಟರ್ ತಿಳಿಸಿದರು. ಇದಾವುದರ ಪರಿವೆಯೂ ಇಲ್ಲದೆ ಅಮ್ಮನ ಆಸೆಯಂತೆ ನಾವಿಬ್ಬರೂ ಅವರೇ ನೀಡಿದ ಹಣದಿಂದ ಉಡುಗೊರೆಯನ್ನು ಕೊಳ್ಳುವುದರಲ್ಲಿ ಸಂತೋಷದಿಂದ ಮಗ್ನರಾಗಿದ್ದೆವು. ಅಮ್ಮ ಹೇಗೆ ಪ್ರತಿಕ್ರಿಯಿಸಬಹದು, ಆ ಸೀರೆಗಳನ್ನು ನೋಡಿ ಎಷ್ಟು ಸಂತಸ ಪಡಬಹುದು ಎಂದು ಮಾತನಾಡುತ್ತಿದ್ದೆವು! ಎಂತಹ ವಿಪರ್ಯಾಸ! ಆ ಸೀರೆ ಅವರ ಕೊನೆಯ ಉಡುಗೊರೆಯಾಗಿಬಿಟ್ಟೀತು ಎಂಬುದು ನಮ್ಮ ಊಹೆಗೂ ನಿಲುಕಲು ಸಾಧ್ಯವಿರಲಿಲ್ಲ.

ಸ್ವಲ್ಪ ಸಮಯದ ನಂತರ ಬಾಗಿಲ ಬಳಿ ಬಿಸಾಡಿದ್ದ ಆ ಸೀರೆಯ ಕವರ್‌ಗಳನ್ನು ನನ್ನಣ್ಣನ ಮಗ ರೂಮಿಗೆ ತೆಗೆದುಕೊಂಡು ಹೋಗಿ ಬೀರುವಿನಲ್ಲಿ ಇಟ್ಟಿದ್ದ. ಅಮ್ಮನ ಸಾವಿನ ವಿಷಯ ತಿಳಿದ ನಂತರ ಮನೆ ಆಪ್ತರಿಂದ, ಬಂಧು-ಬಳಗದಿAದ ತುಂಬಿ ಹೋಗಿತ್ತು. ಒಂದೆರೆಡು ದಿನದ ಹಿಂದೆ ಊರಿಗೆ ವಾಪಸ್ಸಾಗಿದ್ದ ನನ್ನ ಮನೆಯವರೂ ನನ್ನತ್ತೆ ಮಾವ ಎಲ್ಲರೂ ಮತ್ತೆ ಬಂದರು. ಆಮೇಲೆ ನಡೆಯಬೇಕಾಗಿದ್ದ ಕಾರ್ಯಗಳು ನಡೆದವು. ನಾನು, ನನ್ನ ಮಗಳು ಎಲ್ಲಾ ಕಾರ್ಯಗಳು ಮುಗಿದು ವೈಕುಂಠ ಸಮಾರಾಧನೆಯಾಗುವವರೆಗೆ ಇದ್ದೇ ನಂತರ ನಮ್ಮೂರಿಗೆ ಹಿಂದಿರುಗಿದ್ದು.

ಆ ೧೫-೧೬ ದಿನಗಳಲ್ಲಿ ಎಷ್ಟು ಬಾರಿ ನಾನೂ, ನನ್ನತ್ತಿಗೆ ಒಬ್ಬರಿಗೊಬ್ಬರು ಅಪ್ಪಿ ಅತ್ತಿದ್ದೆವೋ ಗೊತ್ತಿಲ್ಲ… ಅಂದು ನಮ್ಮಿಬ್ಬರಲ್ಲಿ ಯಾರಾದರೂ ಒಬ್ಬರಾದರೂ ಮನೆಯಲ್ಲಿ ಇದ್ದಿದ್ದರೆ ಅಮ್ಮ ಉಳಿಯುತ್ತಿದ್ದರೇನೋ ಎಂಬ ಅಪರಾಧಿ ಭಾವ ನಮ್ಮಿಬ್ಬರನ್ನೂ ಬಹಳ ಕಾಡುತ್ತಿತ್ತು. ನಮ್ಮ ದುಃಖಕ್ಕೆ ಕೊನೆಯೇ ಇರಲಿಲ್ಲ. ಆ ಸೀರೆಗಳನ್ನು ತೆಗೆದು ಎಲ್ಲಾದರೂ ಬಿಸಾಡಿ ಬಿಡುವ ಎನ್ನುವಷ್ಟು ಕೋಪ, ದುಃಖ ಇಬ್ಬರಲ್ಲೂ ಆವರಿಸಿತ್ತು. ಆದರೆ ಅದು ಅಮ್ಮನ ಕೊನೆಯ ಉಡುಗೊರೆ, ಹೇಗೆ ದೂರ ಮಾಡುವುದು?

ನಗುನಗುತ್ತಾ ಕಳಿಸಿಕೊಟ್ಟ ಅಮ್ಮ, ನಾವು ಬರುವ ವೇಳೆಗೆ ಅವಳೇ ಬಾರದ ಲೋಕಕ್ಕೆ ಪಯಣ ಬೆಳೆಸಿಬಿಟ್ಟಿದ್ದಳು! ಇದೇ ನೋವಿನಲ್ಲಿ ನಾನು ಮತ್ತೆ ನನ್ನೂರಿಗೆ ವಾಪಸ್ಸು ಬಂದಿದ್ದು ಆಯಿತು. ಇನ್ನು ಅಮ್ಮನಿಲ್ಲದ ವಿಷಯವನ್ನು ಅರಗಿಸಿಕೊಳ್ಳುವುದು ಕಷ್ಟವಾಗಿತ್ತು. ಸೂಟ್‌ಕೇಸ್ ಎಲ್ಲಾ ಖಾಲಿ ಮಾಡುವಾಗ ಸೀರೆಯ ಆ ಡಬ್ಬ ಕಣ್ಣಿಗೆ ಕಾಣಿಸಿತು. ಹಿಡಿದಿಟ್ಟಿದ್ದ ದುಃಖ ಮತ್ತೆ ಕಟ್ಟೆಯೊಡೆಯಿತು. ಜೋರಾಗಿ ಅಳುತ್ತಾ ಕುಳಿತುಬಿಟ್ಟೆ. ನನ್ನನ್ನು ಈ ಸ್ಥಿತಿಯಲ್ಲಿ ನೋಡಿದ ನನ್ನ ಪತಿ, ಆ ಸೀರೆಯ ಬಾಕ್ಸನ್ನು ತೆಗೆದುಕೊಂಡು ನನ್ನ ಕಣ್ಣಿಗೆ ಕಾಣದಂತೆ ಬೀರುವಿನ ಕೆಳಗಿನ ಶೆಲ್ಫ್ನಲ್ಲಿ ಇಟ್ಟು ಅದರ ಮೇಲೆ ಬೇರೆ ವಸ್ತುಗಳನ್ನಿಟ್ಟು ಮುಚ್ಚಿಟ್ಟರು. ಅವರಿಗೂ ಅದರ ಮೌಲ್ಯದ ಅರಿವಿತ್ತು… ಎಷ್ಟಿದ್ದರೂ ಅದು ಅಮ್ಮನ ಕೊನೆಯ ಉಡುಗೊರೆಯಲ್ಲವೇ…

ಬೀರುವನ್ನು ಸ್ವಚ್ಛ ಮಾಡುವಾಗಲೆಲ್ಲಾ ಆ ಬಾಕ್ಸನ್ನು ತೆಗೆದು ನೋಡುವುದು, ಅದರ ಹಿಂದೆಯೇ ಅಮ್ಮನ ನೆನಪಾಗಿ ಕಣ್ಣೀರಿಡುವುದು…. ಮತ್ತೆ ಸೀರೆಯನ್ನು ಮಡಚಿ ಆ ಬಾಕ್ಸಲ್ಲಿ ಇಟ್ಟು, ಅದು ಕಾಣದ ಹಾಗೆ ಎತ್ತಿಡುವುದು, ಹೀಗೇ ಈ ಹನ್ನೆರೆಡು ವರ್ಷಗಳು ಕಳೆದುಹೋಗಿದ್ದವು!

ಆ ಸೀರೆಯ ಹಿಂದಿದ್ದ ನೋವನ್ನು ಅರಿತ ನನ್ನ ಮಗಳು ಆ ಸೀರೆಯನ್ನು ಕೈಗೆತ್ತಿಕೊಂಡು ಅದಕ್ಕೊಂದು ಮುತ್ತನಿಟ್ಟಳು. ನಂತರ ನಿಧಾನವಾಗಿ ಹೇಳಿದಳು, “ಅಮ್ಮ, ಇದು ಅಜ್ಜಿಯ ಕೊನೆಯ ಉಡುಗೊರೆ ನಿಜ, ಆದರೆ ಅವರ ಸಾವಿಗೆ ನೀವು ಕಾರಣರಲ್ಲ ಎಂಬುದು ನಿನಗೂ ಚೆನ್ನಾಗಿ ಗೊತ್ತಾಗಿರಬೇಕು ಈಗ. ಯಾರಿಗೆ ಗೊತ್ತು ಅವರು ಒದ್ದಾಡುವ ಸಮಯದಲ್ಲಿ ನೀನು, ಅತ್ತೆ ಅಲ್ಲಿ ಇದ್ದೂ, ನೀವು ಏನೂ ಮಾಡದ ಪರಿಸ್ಥಿತಿಯಲ್ಲಿ ಇದ್ದುಬಿಟ್ಟಿದ್ದರೆ ಆ ನೋವು ಇನ್ನೂ ಘೋರವಾಗಿರುತ್ತಿತ್ತಲ್ಲವೇ? ಅಥವಾ ಅಜ್ಜಿಗೆ ತನ್ನ ಕೊನೆಯ ಸಮಯದ ಬಗ್ಗೆ ಮೊದಲೇ ಅರಿವಿತ್ತೇನೋ ಅದಕ್ಕೆ ತಮ್ಮ ಪ್ರೀತಿಯ ಇಬ್ಬರನ್ನೂ ಹೊರಗಡೆ ಕಳುಹಿಸಿರಬಹುದಲ್ಲವೇ? ನೀವಿಬ್ಬರೂ ಅವರ ನರಳಾಟವನ್ನು ನೋಡದಿರಲಿ ಎಂದು… ಗೊತ್ತಿಲ್ಲ ಅಮ್ಮ, ಸಾವು ವಿಧಿ ಲಿಖಿತ ಎನ್ನುತ್ತಾರೆ. ಒಟ್ಟಿನಲ್ಲಿ ತಾನು ಹೋಗುವಾಗಲೂ ಅಜ್ಜಿ ನಿಮ್ಮಿಬ್ಬರ ಮೇಲಿನ ಪ್ರೀತಿಯಿಂದ ಉಡುಗೊರೆ ನೀಡಿದ್ದಾರೆ. ಅದು ಅವರ ಆಶೀರ್ವಾದ… ನಿನಗೆ ಇದರಲ್ಲಿ ಅವರ ಸಾವು ಕಾಣುತ್ತದೆ, ನನಗೆ ಇದರಲ್ಲಿ ಅವರ ಆಶೀರ್ವಾದ ಕಾಣುತ್ತದೆ. ಸೋ ಈ ಸುಂದರವಾದ ಸೀರೆ ಇನ್ನು ನನ್ನ ಪಾಲಿಗೆ ಸೇರಿದ್ದು. ಇದರಲ್ಲಿ ಅವರ ಪ್ರೀತಿ, ಹಾರೈಕೆ ತುಂಬಿದೆ. ಇದನ್ನೇ ನಾನು ಕಾಲೇಜಿನ ಫಂಕ್ಷನ್‌ಗೆ ಉಡುವುದು. ಹಾಗೇ ನನ್ನ ಮುಂದಿನ ಜೀವನದಲ್ಲೂ ಇದು ನನ್ನ ಜೊತೆಯಲ್ಲೇ ಇರುತ್ತದೆ” ಎನ್ನುತ್ತಾ ನನ್ನ ಬೆನ್ನ ಮೇಲೆ ಕೈಆಡಿಸಿ ಎದ್ದು ಸೀರೆಯೊಂದಿಗೆ ತನ್ನ ರೂಮಿಗೆ ಹೋದಳು.

-ರಶ್ಮಿ ಪ್ರಶಾಂತ್


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x