1
ಪಂಪಣ್ಣ ಹಾಗೂ ಸಿದ್ದಪ್ಪ ತಮ್ಮ ಹೊಲಗಳನ್ನ ಮಲ್ಲಾರೆಡ್ಡಿ ಎಂಬಾತಗ ಪಾಲಿಗೆ ಕೊಟ್ಟರು. ಈ ಸಂಗತಿ ಸಂಗವ್ವಗ ಸಮಾಧಾನ ತಂದಿರ್ಲಿಲ್ಲ. ಎಷ್ಟನ ಬೆಳಿಲಿ ಮನೆವ್ರೆ ಮಾಡ್ಕೆಂದು ತಿನ್ಬೇಕು. ಭೂಮಿತಾಯಿ ಒಂದೊರ್ಷ ಕೊಡ್ಲಿಲ್ಲಂದ್ರ ಇನ್ನೊಂದೊರ್ಷ ಕೊಡ್ತಾಳ. ರೈತ್ರು ನಂಬಿಕೀನ ಕಳ್ಕಾಬಾರ್ದು ಅಂತ ಸಂಗವ್ವನ ಗಂಡ ಸತ್ಯಪ್ಪ ಹೇಳ್ತಿದ್ದ. ಎಂತಾ ತಂದಿಗೆ ಎಂತಾ ಮಕ್ಳು ಹುಟ್ಟಿದ್ರಲಾ? ಅಂತ ಸಂಗವ್ವ ಭಾಳ ಚಿಂತಿ ಮಾಡಂಗಾತಿ. ರಡ್ಡೇರು ಮೊದ್ಲ ಹೊಲ್ದಾಗ ಕಾಲಿಡ್ತಾರಾ ಆಮ್ಯಾಗ ಮಾಲಕ್ರಿಗೆ ಸಾಲ ಕೊಟ್ಗಂತ ಹೋತಾರ. ಆ ಸಾಲಾನ ಟೈಮಿಗೆ ತೀರ್ಸಲಿಲ್ಲಂದ್ರ ತಮ್ ಹೆಸ್ರಿಗೆ ಆ ಹೊಲಾನ ಮಾಡಿಸೆಂತಾರ. ಇಂತ ಘಟನೆಗಳ್ನ ಸಾಕಷ್ಟು ಕಂಡಿದ್ದ ಸಂಗವ್ವಗ ಇಸ್ಪಾಟ, ಮಟಗ, ಕುಡಿಯಾ ಚಟ ಇದ್ದ ತನ್ಮಕ್ಳು ಕೂಡ ಸಾಲದ ಸುಳಿಗೆ ಸಿಕ್ಕೆಂದು ಇದ್ದ ಹೋಲಾನೂ ಕಳ್ಕಂತಾರೆಂಬ ಭಯ ಆಗಿತ್ತು. ಆದರೆ ಸೊಸಿದೋರು ಅತ್ತೆಯ ಮಾತು ನಡಿಯಾಕ ಬಿಡಲಿಲ್ಲ. ಮಾಡ್ಕೆಂದು ತಿಂದು ಮುಂದ ಬರ್ಬೇಕಂದ್ರ ನಮತ್ತಿದು ಬಲು ಕಾಟಂತ ಊರ್ತುಂಬ ಹೇಳಿಕೆಂದು ಬಂದರು. ಅತ್ತೆನ ಮೂಲಿಗೆ ಕುಂದ್ರಿಸಿ ಮಲ್ಲಾರೆಡ್ಡಿಗೆ ಹತ್ತೆಕರೆ ಹೊಲಾನ ಲೀಜಿಗೆ ಕೊಟ್ಟು ಸಿದ್ದಪ್ಪ ಬೆಂಗ್ಳುರಿಗೆ ಗುಳೆ ಹೋದ್ರ, ಪಂಪಣ್ಣ ಸಿರುಗುಪ್ಪದಾಗ ಎತ್ತಿನಬಂಡಿ ಹೊಡ್ಕಂತ ಜೀವನ ಸಾಗಿಸುತ್ತಿದ್ದ. ಮುದೇಕಿಯ ನಿಗಾ ಯಾರು ನೋಡ್ತಾರಂಬ ಕನಿಷ್ಟ ತಿಳುವಳಿಕೆ ಮಕ್ಳಿಗೆ ಸೋಸೇರಿಗೆ ಇರಲಿಲ್ಲ. ನಿಮುಗೂ ನನ್ನಂಗ ಗೊಳಾಡದು ಬರ್ತಾದ ತಡಿರಲೋ ಅಂಬ ಸಂಕಟದ ಮಾತಾಡುತ್ತಿದ್ದ ಸಂಗವ್ವ ಸಿದ್ದಪ್ಪ ಬೆಂಗ್ಳೂರಿಗೆ ಹೋಗಾದಿನ ನಮಪ್ಪ ನಿನೇ ಕಾಯೆಪ ಅಂತ ಮುಗುಲಿನ ಕಡೆ ಕೈ ಮುಗಿದಿದ್ದಳು.
2
ನಾಗಪ್ಪನಿಗೆ ಸಾಹೇಬರು ಜಗ್ಗಿ ಬೈಯ್ಯುತ್ತಿದ್ದರಿಂದ ಸರ್ಯಾಗಿ ಊಟ ಸೇರ್ಲಾರ್ದಂಗ, ನಿದ್ದಿ ಹತ್ತಲಾರ್ದಂಗ ಆಗಿತ್ತು. ಕೆಲಸದ ಒತ್ತಡದಿಂದಾಗಿ ನಾಕೈದು ವರ್ಷದ ಹಿಂದನೇ ಕುಡ್ಯಾದು ಕಲಿತಿದ್ದ. ಈಗ ಗಾಂಜಾ ಕೇಸು ಮಾಡುವ ಚಿಂತೆಯಿಂದ ದಿನಾ ಒಂದು ಪಾಕಿಟಿಗೆ ಇದ್ದತ ಎಲ್ಡು ಪಾಕಿಟಿಗೆ ಬಂದಿದ್ದ. ನೌಕ್ರಿ ಹೋದ್ರ ಹೋಗ್ಲಿ ಮೊದ್ಲ ನೀನು ಚೊಲಿರಂತ ಹೆಣ್ತಿ ಧೈರ್ಯ ತುಂಬಿದ್ರೂ ನಾಗಪ್ಪನ ಒಳಗ ಪುಕುಪುಕು ಅನಾದು ನಿಂತಿದ್ದಿಲ್ಲ.
ತೆಕ್ಕಲಕೋಟೆ ಖಾನವಳಿಯಾಗ ಊಟ ಮಾಡಿ ಒಬ್ಬ ಮಾಹಿತಿದಾರನಿಗೆ ಖರ್ಚಿಗೆ ನೂರ್ರುಪಾಯಿ ಕೊಟ್ಟು, ಗಾಂಜಾ ಹುಡುಕಾಕ ಹೊಲಗಳಗ ಹೊಂಟ. ಯಾರಿಗೂ ಕೂನ ಸಿಗ್ಲಾರ್ದಂದ ಅಂಗಿ ಲುಂಗಿ ಹಾಕ್ಕೆಂದು ಕೊಳ್ಳಾಗ ಟವಾಲು ಹಾಕ್ಕೆಂದು ರೈತರಂಗ ಕಾಣುತ್ತಿದ್ದ. ಯಾರಾದರೂ ನೀವ್ಯಾರು? ಇಕಡ್ಯಾಕ ಬಂದೀರಂತ ಪ್ರಶ್ನೆ ಮಾಡಿದರೆ, ಎಮ್ಮೆ ಕಳುದಾವ ಹುಡುಕಾಕ ಬಂದೀನಿ; ಮೊಲದ ಬ್ಯಾಟಿಗೆ ಹೊಂಟೀನಿ ಅಂತಿದ್ದ. ಜನರಿಗೆ ಅನುಮಾನ ಬರ್ಲಾರ್ದಂಗ ಉತ್ರ ಕೊಟ್ಗಂತ ಗುಪ್ತ ತನಿಖೆ ನಡೆಸಿದ್ದ.
ಸುಮಾರು ನಾಗ್ಗಂಟೆ ಆಗಿತ್ತು. ನಾಗಪ್ಪಗ ತೆಕ್ಕಲಕೋಟೆ ಮಾಹಿತಿದಾರನಿಂದ ಪೋನು ಬಂತು.
“ನನ್ಗ ಹತ್ತು ಸಾವ್ರ ಕೊಟ್ರ ನಿಮಗ ಗಾಂಜಾ ಮಾಹಿತಿ ಕೊಡ್ತಿನಿ ಸಾರ್” ಅಂದ.
ಸಿಹಿ ಸುದ್ದಿ ಕೇಳಿದ ನಾಗಪ್ಪ- ಆತಿ ಎಲ್ಲ್ಯಾದ ಹೇಳು? ಅಂತ ಪುಸುಲಾಯಿಸಿದ.
“ಇಲ್ಲ ಸಾರ್, ಮೊದ್ಲ ರಕ್ಕ ಕೊಡ್ರಿ ಆಮ್ಯಾಗ ಹೇಳ್ತಿನಿ. ಅಚ್ಚೆವರ್ಷ ಇದ್ರಂಗ ಪೋಲಿಸ್ನೌರಿಗೆ ತೋರ್ಸಿದ್ದೆ. ಐದ್ಸಾವ್ರ ಕೊಡ್ತಿನಂದ್ಕೇಶಿ ಕೇಸಾದ ಮ್ಯಾಗ ಒಂದ್ರುಪಾಯಿನೂ ಕೊಡ್ಲಿಲ್ಲ” ಅಂತ ಬೇಜಾರದಿಂದ ಹೇಳಿದ. ಪೇಚಿಗೆ ಸಿಕ್ಕಂದ ನಾಗಪ್ಪ ಇರೋ ಸಂಗತಿನ ತಿಳ್ಸಾಕ ಸಾಹೇಬ್ರಿಗೆ ಖುಷಿಯಿಂದ ಫೋನಚ್ಚಿದಾಗ- ಎಷ್ಟು ಗಿಡೈದಾವಂತ? ಸಾಬ ಕೇಳಿದ. ನಾಗಪ್ಪ ಗದ್ದಲದಾಗ ಅದ್ನ ಕೇಳಿರಲಿಲ್ಲ.
“ಒಂದ್ಗಿಡ ಇದ್ರ ಹತ್ಸಾವ್ರ ಕೊಡ್ತಿದ್ದೆನಪ? ಮೊದ್ಲ ಎಷ್ಟು ಗಿಡಾವ? ಎಲ್ಲೈದಾವ? ಕೇಳ್ಬೇಕು. ಎಷ್ಟು ಕೇಜಿ ಆತಾದಂತ ಲೆಕ್ಕ ಹಾಕ್ಬೇಕು. ಕಡಿಗೆ ಅಷ್ಟು ಆಗಂಗಿಲ್ಲ ಇಷ್ಟು ತಗಂತ ಮಾಹಿತಿದಾರ್ನ ರಮುಸ್ಬೇಕಪ” ಅಂತ ತನಿಖಾ ಸೂಕ್ಷ್ಮಗಳನ್ನ ಸಿಬ್ಬಂದಿಗೆ ಹೇಳಿದಾಗ ನಾಗಪ್ಪ ಮಾಹಿತಿದಾರಗ ಕರೆ ಮಾಡಿದ.
“ಐದ್ನೈದು ಇಪ್ಪತ್ತು ಗಿಡಿರ್ಬೌದು ಸಾರ್. ಹತ್ತಿ ಹೊಲ್ದಾಗೈದಾವ. ಹುವ್ವು ಕಾಯಿ ಬುಟ್ಟಾದಂತ. ಸನ್ಯಾಕೋದ್ರ ಗಮ್ಮಂತ ವಾಸ್ನಿ ಬರ್ತಾದಂತ ನನ್ ಹೆಣ್ತಿ ಹೇಳ್ಯಾಳ” ಅಂಬ ನಿಖರ ಮಾಹಿತಿ ಕೊಟ್ಟ. ಅವುನು ಹೇಳಾದು ಕೇಳಿದ್ರ ಸುಮಾರು ಮೂವತ್ತು ಕೇಜಿ ಸನ್ಯಾಕ ಆಗ್ಬೌದಂತ ಅಂದಾಜು ಮಾಡಿದ ನಾಗಪ್ಪ ತಕ್ಷಣನೆ ಸಾಹೇಬ್ರಿಗೆ ಸುದ್ದಿ ಮುಟ್ಟಿಸಿದ. ಮಾಹಿತಿದಾರ ಗಿಡಗಳನ್ನು ತೋರಿಸಿದರೆ ಅವನಿಗೆ ಐದು ಸಾವ್ರ ಕೊಡುವ ನಿಷ್ಕರ್ಷೆ ಮಾಡಿದರು.
3
ಹೊಲಾನ ಇನ್ನೊಬ್ರಿಗೆ ಮಾಡಾಕ ಕೊಟ್ಟ ಮ್ಯಾಲೆ ಪುಗ್ಸಟ್ಟೆ ಹೊಲದ ಕಡೆ ಹೋಗಿ ಚಪ್ಲಿ ಯಾಕ ಸವಿಸಾಮು ಅನ್ನೋದು ಸಂಗವ್ವ ಮತ್ತು ಅಕಿಯ ಮಕ್ಕಳ ಲೆಕ್ಕಾಚಾರ ಆಗಿತ್ತು. ಹೊಲಾನ ಹೊತುಗಂದು ಹೋಗಾಕ ಆತಾದನು? ಅಂಬ ಆತ್ಮವಿಶ್ವಾಸ ಅವರದು.
ನೂರ್ಕಲ್ಲು ಎಸೆದ್ರ ಅದ್ರಾಗ ಒಂದು ಕಲ್ಲನ ತಟ್ಟಂಗಿಲ್ಲನು? ಅಂಬಂಗ ಮಣಕಾಲಚ್ಚಿ ಹಡುದು, ಎದೆಹಾಲು ಕುಡ್ಸಿ ಬೆಳ್ಸಿದ ತಾಯೀನ ಭಿಕಾರಿಯಂಗ ಬಿಸಾಕಿ ಹೆಂಡರ ಜತೆ ಸುಖದಲ್ಲಿರೋ ಪಂಪಣ್ಣ ಮತ್ತು ಸಿದ್ದಪ್ಪಗ ಕಂಡೋರ ಕಾಲು ಹಿಡಿಯೋ ಸಮಯ ಬಂತು. ನಾಗಪ್ಪ ಸಾರ್ ತೆಕ್ಕಕೋಟೆದಾಗ ಮಾಹಿತಿ ತೆಗೆದ್ರ ರಾರಾವಿ ಊರಾಗ ಸುದ್ದಿ ಹೊಂಟಿತ್ತು. ಮಾಹಿತಿದಾರನ ಹೆಣ್ತಿ ಮಲ್ಲಾರೆಡ್ಡಿನ ಹೊಲುಕ ಹತ್ತಿ ಬುಡ್ಸಾಕ ಹೋದಾಗ ಅಲ್ಲಿ ಗಾಂಜಾದ ಗಿಡಗಳನ್ನು ನೋಡಿದ್ದಳು.
ಸಂಗವ್ವನ ಹೊಲದಾಗ ಯಾರಿಗೆ ಗೊತ್ತಾಗಲಾರ್ದಂಗ ಎಲ್ಡೊರ್ಸ ಗಾಂಜಾ ಹಾಕಿ, ಊರೌರಿಗೆ ತನ್ನ ಬಂಡವಾಳ ಗೊತ್ತಾದ್ರ ಕೆಲ್ಸ ಕೆಡ್ತಾದಂತ ಹತ್ತಿ ಬುಡುಸಾಕ ಹಳೆಕೋಟೆ, ತೆಕ್ಕಲಕೋಟೆಯ ಜನಗಳನ್ನ ಕೂಲಿಗೆ ಕರಿಸಿ ತಾನೇ ಶ್ಯಾಣ್ಯಾ ಅಂನ್ಕಂಡಿದ್ದ ಮಲ್ಲಾರೆಡ್ಡಿ ತನ್ನ ಅಡ್ಡಕಸುಬು ಯಾರಿಗೆ ಗೊತ್ತಾಗಂಗಿಲ್ಲಂತ ತಿಳಿದಿದ್ದ. ಆದರೆ ಕಳ್ಳ ಎವತ್ತಿದ್ರೂ ಸಿಕ್ಕೇ ಸಿಗ್ತಾನ ಅಂಬಾಕ ಈ ಪ್ರಕರಣನೇ ಸಾಕ್ಷಿಯಾಗಿದೆ.
4
ರಾತ್ರಿ ಹತ್ತು ಗಂಟೇಕ ಎಲ್ಲಾರೂ ಮಕ್ಕಂದ ಮ್ಯಾಲೆ ಮಾಹಿತಿದಾರನ ಕರ್ಕಂದು ಸಂಗವ್ವನ ಹೊಲದಾಗ ನಿಂತು ಇನ್ಸಪೆಕ್ಟರ್ ಸಾಹೇಬ್ರಿಗೆ ಪೋನ್ ಮಾಡಿದಾಗ- ಈಗ ವಾಪಸ್ ಬರ್ರಿ. ನಾಳೆ ಬೆಳಿಗ್ಗೆ ನೀನು ಶಿವರಾಜ ಆರ್ಗಂಟೆ ಅನಟಿಗೆ ಸ್ಪಾಟಿಗೆ ಹೋಗ್ರಿ. ಆರೋಪಿ ಸಿಕ್ರ ಆದಷ್ಟು ಜಲ್ದಿ ಜೈಲಿಗೆ ಬುಟ್ಟು ಬರ್ಬೇಕು. ರಾತ್ರಿ ಹತ್ಗಂಟೆ ಆದಮ್ಯಾಲೆ ಮನೆಕಡೆ ಬರಬ್ಯಾಡ್ರಿ ಅಂತ ಜಡ್ಜು ಸಾಹೇಬ್ರು ಮೊನ್ನೆನೆ ಹೇಳ್ಯಾರ. ಇಲ್ಲಂದ್ರ ಆರೋಪಿನ ಬೆಳತನ ಕಾಯ್ಬೇಕಾತಾದ್ನೋಡು ಅಂತ ಕಿವಿ ಮಾತು ಹೇಳಿದರು.
ಬೆಳಗಾ ಮುಂಜಾನೆ ಹನ್ನಂದು ಗಂಟೆಕ ಅಬಕಾರಿ ಜೀಪುಗಳು ಸಂಗವ್ವನ ಹೊಲದ ಕಡೆ ಬಂದ ಮ್ಯಾಲೆ ಮಲ್ಲಾರೆಡ್ಡಿ ಊರು ಬಿಟ್ಟ. ಸಂಗವ್ವಗೂ ಬೀಗರೂರಿಗೆ ಹೋಗಂತ ಜನರು ಹೇಳಿದರು. ಆರೋಪಿಗಳು ನಾಪತ್ತೆ ಆಗಿದ್ದರಿಂದ ಪರಾರಿ ಪ್ರಕರಣ ದಾಖಲಾಯಿತು.
ಆರೋಪಿಗಳು ತಾವಾಗೇ ಕಚೇರಿಗೆ ಬರುವಂತೆ ತನಿಖಾಧಿಕಾರಿಗಳು ಮಾಡಿದರು. ತಮ್ಮ ಹೊಲದ ಮ್ಯಾಲೆ ಕೇಸಾದ ಸುದ್ದಿ ಕೇಳಿ ಎದೆಗುಂಡಿಗೆ ಒಡೆದಂತಾಗಿದ್ದ ಪಂಪಣ್ಣ ಎದ್ನೋ ಬಿದ್ನೋ ಅಂತ ಎಮ್ಮೆಲ್ಲೆ ಪಿಎನ ಮುಂದಾಕ್ಕೆಂದು ಅಬಕಾರಿ ಕಚೇರಿಗೆ ಬಂದ. ಯಾರೇ ಕೈ ಹಾಕಿದರೂ ಗಾಂಜಾದ ಕೇಸನ್ನು ಮುಚ್ಚಿ ಹಾಕಂಗ ಇರಲಿಲ್ಲ.
“ಆ ಮಲ್ಲಾರೆಡ್ಡಿನ ಹಿಡ್ಕಂದು ಬರ್ಬೇಕು. ಹಂಗಾದ್ರ ನಿಮ್ನ ಬುಡ್ತಿನಿ. ಇಲ್ಲಂದ್ರ ನಿಮ್ನ ಕೇಸಾಗ ಸೇರ್ಸುತೀನಿ” ಅಂದಾಗ ಪಂಪಣ್ಣಗ ಮಕದಾಗ ನೀರು ಇಳಿದವು.
“ಸಾಹೇಬ್ರು ಹೇಳಿಕಳಿಸ್ಯಾರ..” ಅಂತ ಶಾಸಕರ ಪಿಯೆ ಹೇಳಿದಾಗ ಅಧಿಕಾರಿಗಳಿಗೆ ಕಪಾಳ ತುರಿಸುವಂತಾಯಿತು. ಕ್ಷೇತ್ರದ ಜನಪ್ರತಿನಿಧಿಗಳನ್ನು ಎದುರು ಹಾಕ್ಕೆಂದೂ ನೌಕ್ರಿ ಮಾಡಾದು ಸವಾಲಿನ ಕೆಲಸ ಆಗಿದ್ದರಿಂದ ನನ್ ಕೈಲಾದ ಸಹಾಯ ಮಾಡ್ತೀನಂತ ಹೇಳಿದ ಮ್ಯಾಲೆನೆ ಪಂಪಣ್ಣ ಉಸುರಾಡಿಕ್ಯಾಂತ ಊರಿಗೆ ಹೋದ.
ಹೊಲದ ಮಾಲಿಕರನ್ನು ಕೇಸಾಗ ಸೇರಿಸೋ ಅವಕಾಶ ಇದ್ದರೂ ಉಳಿಸೋ ಪ್ರಯತ್ನ ನಡೆದಿತ್ತು. ಅಕಸ್ಮಾತ್ ಆರೋಪಿ ಸಿಕ್ರ ಅವನ ಕಡಿಂದ- ಸಂಗವ್ವನ ಹೊಲಾನ ನಾನೇ ಪಾಲಿಗೆ ಮಾಡಿದ್ದು, ನಾನೇ ಗಾಂಜಾ ಹಾಕಿದ್ದು, ಗಾಂಜಾನ ಬೆಳ್ಯಾಕ ಹೊಲದ ಮಾಲಿಕರ ಪ್ರೇರಣೆ ಆಗಲಿ ಸಹಕಾರ ಆಗಲಿ ಇಲ್ಲ. ಈ ಗಾಂಜಾ ಕೇಸಿಗೂ ಹೊಲದ ಮಾಲಿಕರಿಗೂ ಯಾವುದೇ ಸಂಬಂಧ ಇಲ್ಲ ಎಂಬ ಸ್ವಖುಷಿ ಹೇಳಿಕೆ ಬರಿಸಿಕೊಂಡು ಮಲ್ಲಾರೆಡ್ಡಿನ ಜೈಲಿಗೆ ಹಾಕಿದರೆ ಮಾತ್ರ ಸಂಗವ್ವ ಮತ್ತು ಅಕಿನ ಮಕ್ಕಳನ್ನು ಈ ಪ್ರಕರಣದಿಂದ ಬಚಾವು ಮಾಡಬಹುದಿತ್ತು. ಇನ್ಸಪೆಕ್ಟರ್ ಸಾಹೇಬ್ರಿಗೆ ಇಂತದ್ರಾಗ ಸಾಕಷ್ಟು ಅನುಭವ ಇದ್ದರಿಂದ ಹಲವು ಸೇಂದಿ, ಮದ್ಯದ ಕೇಸುಗಳಲ್ಲಿ ಗಾಡಿಯ ಮಾಲಕರನ್ನು ಇದೇ ಆಧಾರದ ಮ್ಯಾಗ ಬಿಟ್ಟಿದ್ದರು. ತನಿಖಾಧಿಕಾರಿಗೆ ಹಿಂಗೇ ತನಿಖೆ ಮಾಡ್ರಿ ಅಂತ ಯಾವ ಕಾನೂನಾಗೂ ಹೇಳಿಲ್ಲ ಅನ್ನುತ್ತಿದ್ದ ಅವರು ಅದರ ಲಾಭಾನ ಕೆಲವೊಮ್ಮೆ ತೆಗೆದುಕೊಳ್ಳುತ್ತಿದ್ದರು.
ಊರಲ್ಲಿ ಪಂಚನಾಮೆ ಮಾಡಿದಾಗ ಸಂಗವ್ವನ ಆಸ್ತಿ ಭಾಗ ಆಗಿದ್ದು ನಿಜವಿತ್ತು. ಆದರೆ ಮಕ್ಕಳ ಹೆಸರಿಗೆ ಇನ್ನೂ ನೋಂದಣಿ ಆಗಿರಲಿಲ್ಲ. ಅಣ್ಣತಮ್ಮರು ಹೆಸರಿಗೆ ಹೊಲವನ್ನು ಹಂಚಿಕೊಂಡು ಹೊಡ್ಡಿಗೆ ಕಲ್ಲು ಇಟ್ಟುಕೊಂಡಿದ್ದರಷ್ಟೇ. ಪಂಪಣ್ಣ ಮತ್ತು ಸಿದ್ದಪ್ಪರು- ಆ ಹೊಲ ನಮ್ ಪಾಲಿಗೆ ಬಂದಾದ. ನಮ್ಮ ಹೊಲದ ಆಗುಹೋಗುಗಳಿಗೆ ನಾವೇ ಜವಾಬ್ದಾರ್ರು ಅಂತ ಪತ್ರ ಬರ್ದು ಕೊಟ್ಟರೆ ಅಥವಾ ಸಂಗವ್ವಳು- ನಾನು ನನ್ನ ಮಕ್ಳಿಗೆ ಹೊಲಾನ ಭಾಗಮಾಡಿ ಕೊಟ್ಟೀನಿ. ಹೊಲ ಭಾಗ ಆದಮ್ಯಾಲೆ ಆ ಹೊಲಕೂ ನನಗೂ ಯಾವ ಸಂಬಂಧ ಇಲ್ಲಂತ ಹೇಳಿಕೆ ಕೊಟ್ಟರೆ, ಹೊಲದ ದಾಖಲೆಗಳು ಸಂಗವ್ವನ ಹೆಸ್ರಾಗ ಇದ್ದರೂ ಅಕಿನ ಈ ಪ್ರಕರಣದಿಂದ ಕೈ ಬಿಡಬೌದಿತ್ತು.
ಮೂರು ತಿಂಗಳು ಒಳಗ ಚಾರ್ಜಶೀಟನ್ನು ಕೋರ್ಟಿಗೆ ಕೊಡಬೇಕಿತ್ತು. ಇನ್ನೂ ಮಲ್ಲಾರೆಡ್ಡಿಯ ಪತ್ತೆ ಆಗಲಿಲ್ಲ. ಆರೋಪಿ ನಾಪತ್ತೆಯಾದರೆ ಅಥವಾ ಗುರುತಿಸಲು ಅಸಾಧ್ಯವಾದರೆ ಕೃತ್ಯ ನಡೆದ ಜಾಗ ಅಥವಾ ವಸ್ತು ಯಾರ ಹೆಸರಲ್ಲಿ ಇರುತ್ತದೋ ಆ ವ್ಯಕ್ತಿಗಳನ್ನು ಆರೋಪಿಗಳನ್ನಾಗಿ ಮಾಡುವ ಪ್ರಕ್ರಿಯೆ ಕಾನೂನಿನಲ್ಲಿ ಇರುವುದು.
ಒಂದಿನ ತನಿಖಾಧಿಕಾರಿಗಳು ಸಂಗವ್ವನ ಕುಟುಂಬಾನ ಕಚೇರಿಗೆ ಕರೆಸಿದರು. ಎಂದಿಗೂ ಠಾಣೆಯ ಮೆಟ್ಟಿಲು ಅತ್ತದ ಸಂಗವ್ವ ಖಾಕಿಮಂದಿನ ಕಂಡು ಕಂಗಾಲು ಆದಳು. “ನಾನು ಹೇಳಿದೆಲೋ ಅವ್ನಿಗೆ ಹೊಲ ಕೊಡಬ್ಯಾಡ್ರಂತ! ಅವತ್ತು ನನ್ಮಾತು ಕೇಳಿದ್ರ ಇವತ್ತು ಈ ಗತಿ ಬರ್ತಿತ್ತನಲೋ.. ನಿಮ್ಗ ಏನು ಮಾಯಾ ಮುಚ್ಚ್ಯಾದನಲೋ.. ನಾನು ಸತ್ರ ಎಲ್ಲಾ ಚೊಲಾತದಂತ ಕಾಣ್ತದಲೋ..” ಅಂತ ಸತ್ತಾಗ ಅಳುವಂಗ ಚಾಲು ಮಾಡಿದಳು. “ಇದೇನು ಮನೆಂತ ತಿಳಿದಿದ್ಯಾ, ಏನ ಸ್ಟೇಷನಂತ ತಿಳಿದಿದ್ಯಾ?” ಅಂತ ಸಾಹೇಬರು ಗದರಿದಾಗ ಸೆರಗಿಲೆ ಗಪ್ನ ಬಾಯಿ ಮುಚಿಗೆಂದಳು. ಅಕಿನ ಕಣ್ಣಾಗ ನೀರು ಸೋರಾಕ ಶುರು ಮಾಡಿತ್ತು. ಕಣ್ಣುಗಳನ್ನು ಕೆಳಗ ಮ್ಯಾಗ ಮಾಡಾದು ನೋಡಿ ಅಧೀರರಾದ ಸಾಹೇಬರು ತಾಯಿನ ರಮುಸಾಕ ಮಕ್ಳಿಗೆ ಹೇಳಿದರು.
ಸಾಹೇಬರ ಕೆಂಡದಂತ ಮಾತುಗಳನ ಕೇಳಿ ಸಂಗವ್ವ ರೆಪ್ಪಿ ಬಡಿಲಾರ್ದಂಗ ಗ್ವಾಡೆ ನೋಡತೊಡಗಿದಳು. ಪಂಪಣ್ಣ, ಸಿದ್ದಪ್ಪ ಒಬ್ಬರಿಗೊಬ್ಬರು ಮಕಮಕ ನೋಡಿಕೊಂಡರು. ಅವರಿಬ್ರಿಗೂ ಈ ಕೇಸಾಗ ಸೇರಾಕ ಸುತರಾಂ ಇಷ್ಟ ಇರಲಿಲ್ಲ. ಆದ್ದರಿಂದ ಹಡೆದವಳ ಕಡೆ ತಮ್ಮ ದೃಷ್ಟಿಯನ್ನು ಹಾಯಿಸಿದರು. ನೀನೇ ಏನನ ಮಾಡಿ ನಮ್ನ ಪಾರು ಮಾಡಂಗೆ ಅಂಬಂಗ ಅಂಗಲಾಚುವ ರೀತಿಯಲ್ಲಿ ನೋಡಿದರು. ಹಡೆದವಳು ಮನಸು ಮಾಡಿದ್ರ ತಾವು ಓಳಾತೀವಿ ಅಂಬ ಭರವಸೆ ಅವರೊಳಗಿತ್ತು. ಇಲ್ಲಂದ್ರ ಜೈಲೂಟ ಉಣಬೇಕಾತದೆಂಬ ಭಯಾನೂ ಕಾಡಾಕತ್ತಿತ್ತು.
ಮಕ್ಕಳು ಮಾಡಿದ ಪಾಪಗಳು ಸೊಸಿದೊರು ಕೊಟ್ಟ ಕಷ್ಟಗಳು ಸಂಗವ್ವನ ಮುಂದ ಕುಣಿದಾಡಿದವು. ಮಕ್ಕಳಿಗೆ ಪಾಠ ಕಲಸಾಕ ಅವಕಾಶ ಇದ್ದರೂ ಅಕಿ ತನ್ನ ಮಕ್ಕಳನ್ನು ಬಿಟ್ಟು ಕೊಡಲಿಲ್ಲ. ಅವ್ರುನ ಜೈಲಿಗೆ ಕಳಿಸುವ ಯೋಚನೆಯನ್ನೂ ಮಾಡಲಿಲ್ಲ. ಅದೇ ಮಕ್ಕಳನ್ನು ಹಡಿಯುವಾಗ ಸಾಕಷ್ಟು ನೋವು ಉಂಡಿದ್ದು ಅಕಿಗಿನ್ನೂ ನೆನಪಿತ್ತು. ಹೆರಿಗೆ ಆಗಾಕಲ್ಕ ನಾನು ಸತ್ರೂ ಪರ್ವಾಗಿಲ್ಲ ನನ್ ಮಕ್ಳು ಉಳಿಬೇಕು ಅಂತ ಮಕ್ಕಳಿಗಾಗಿ ತನ್ನ ಜೀವಕ್ಕೆ ಬೆಲೆ ಕೊಡದ ಅಕಿ ಜುಜುಪಿ ಜೈಲಿನ ವಿಷಯದಲ್ಲಿ ಬಿಟ್ಟು ಕೊಡುವ ಪ್ರಮೇಯ ಇರಲಿಲ್ಲ. ತನ್ನದಲ್ಲದ ತಪ್ಪನ್ನು ತನ್ನ ಮ್ಯಾಲೆ ಹಾಕಿಕೊಂಡಳು. ಹೆತ್ತ ಮಕ್ಕಳನ್ನು ಉಳಿಸಲು ಭಾಗ ಮಾಡಿದ ಆಸ್ತಿಗೆ ಮತ್ತೆ ತಾನೇ ವಾರಸುದಾರಳಾದಳು. ಮನ್ಯಾಗ ತನ್ಮಾತು ನಡಿತಿತ್ತಂದ್ರ ಆ ಮಲ್ಲಾರೆಡ್ಡಿಗೆ ಹೊಲಾನೇ ಕೊಡ್ತಿರಲಿಲ್ಲ. ಭೂಮಿತಾಯಿ ಕೊಟ್ಟಷ್ಟು ಕೊಡ್ಲಿ ನಾವೇ ಮಾಡಿಕೆಂದು ತಿನ್ಬೇಕೆಂಬ ವಾದ ಸಂಗವ್ವಂದೂ ಆಗಿತ್ತು.
ಸೊಲ್ಪ ಸಮಯ ಕಳೆದ ನಂತರ…
“ನನ ಮಕ್ಳು ಏನೂ ತಿಳಿಲಾರ್ದೋರು ಸಾರು.. ನಾವು ಓದಿಲ್ಲ ಸಾರು.. ನಮುಗ ಕಾನೂನು ಗೊತ್ತಿಲ್ಲ ಸಾರು.. ಯಾವನ್ನಾ ನಂಬಿ ಮಾಡ್ಕೆಂದು ತಿಂತಾನಂತ ಹೊಲ ಕೊಟ್ಟಾರ. ಅವ್ನು ನಮ್ನ ಸಿಗೆ ಹಾಕಿ ಓಡಿ ಹೋಗ್ಯಾನ. ನೀವು ಏನನ ಮಾಡ್ರಿ; ಕೋಟಿಗೆನ ಹಾಕ್ರಿ ಜೈಲಿಗೆನ ಹಾಕ್ರಿ. ನಂದೇನು ಎಲ್ಲಾ ಆಗ್ಯಾದ ಹೋಗ್ಯಾದ. ನನ ಮಕ್ಳು ಬಾಳಿ ಬದ್ಕಬೇಕಾದೋರು ಸಾರು..” ಅಂತ ಮತ್ತೆ ಗಳಗಳ ಅಳಾಕ ಶುರು ಮಾಡಿದಳು. ಅಕಿ ಹೇಳದ್ರಾಗ ಸಂಗವ್ವನ ನಿಲುವು ಸಾಹೇಬರಿಗೆ ಗೊತ್ತಾತಿ. ಸಂಗವ್ವನ ಜೈಲಿಗೆ ಹಾಕಾಕ ಸಿದ್ಧತೆ ನಡಿತಿ.
ಬಳ್ಳಾರಿ ಜೈಲಿಗೆ ಹೋಗಾಕ ಕಚೇರಿ ಜೀಪು ತಯಾರಾತಿ. ಸಂಗವ್ವ ಕಲ್ಮನುಸು ಮಾಡಿ ಜೀಪಾಗ ಕುಂದ್ರಾಕ ಹೊಂಟಳು. ಇನ್ನೇನು ಗಾಡ್ಯಾಗ ಕುಂದುರ್ಬೇಕು “ಯವ್ವಾ… ನಮ್ನ ಕ್ಷಮಿಸಿ ಬುಡಂಗೆ…, ನಮ್ಮಿಂದ ತಪ್ಪಾತೆಂಗೆ…” ಅಂತ ಇಬ್ಬರು ಮಕ್ಕಳು ಕಣ್ಣೀರು ಸುರಿಸುತ್ತಾ ತಾಯಿಯ ಕಾಲು ಹಿಡಿದರು. ತಾಯಿ ಮತ್ತು ಮಕ್ಕಳ ಪೇಚಾಟ ನೋಡಿ ಸಾಹೇಬರ ಕಲ್ಲು ಮನಸು ಕರಗಿದಂಗ ಆತಿ. ಈ ಕೇಸ್ನ ಯಾಕನ ಮಾಡಿದ್ವೆನು ಅಂಬ ಭಾವನೆ ಮಿಂಚಂಗ ಸುಳಿದು ಹೋತಿ.
-ಅಕ್ಬರ್ ಅಲಿ
