ಎಕ್ಸ್ಪ್ರೆಸ್ ಟ್ರೈನ್: ಮೋಹನ ಬಣಕಾರ

“ಮೈಸೂರು ಎಕ್ಸ್ಪ್ರೆಸ್”, ಇದು ಬೆಳಗಾವಿಯಿಂದ ಬೆಳಗ್ಗೆ ಸುಮಾರು 6:15 ಕ್ಕೆ ಹೊರಟರೆ, ಮೈಸೂರನ್ನು ತಲುಪೋದು ತಡಸಂಜೆ 8:00 ಗಂಟೆಗೆ. ಸುಮಾರು 615 ಕಿಲೋ ಮೀಟರ್ ರೈಲು ಮಾರ್ಗವನ್ನು ಕ್ರಮಿಸಲು 14 ಗಂಟೆಗಳ ಸುದೀರ್ಘ ಪ್ರಯಾಣ. ಅಂದರೆ ಪ್ರಯಾಣದ ಗತಿ, ಗಂಟೆಗೆ 43 ರಿಂದ 44 ಕಿಲೋಮೀಟರ್ಗಳು. ಇದು ನಮ್ಮ ಎಕ್ಸ್ಪ್ರೆಸ್ ಟ್ರೈನ್ ಗಳ ಹಣೆಬರಹ. ಇದೆಲ್ಲಾ ರೈಲು ನಿಗದಿತ ವೇಳಾಪಟ್ಟಿಯಂತೆ ಚಲಿಸಿದರೆ ಮಾತ್ರ ಅನ್ವಯ. ವಾಸ್ತವದಲ್ಲಿ, ಬಹುತೇಕ ರೈಲು ಪ್ರಯಾಣದ ಸ್ಥಿತಿ ಹೇಗೆಂದರೆ, ರೈಲು ಬಂದಾಗ (ಬಂದಾಗ ಎಂಬ ಶಬ್ದ ಪ್ರಮುಖವಾದದ್ದು) ಹತ್ತುವುದಷ್ಟೇ ನಮ್ಮ, ಅಂದರೆ ಪ್ರಯಾಣಿಕರ ಇಚ್ಛೆ. ನಮ್ಮನ್ನು ನಿಗದಿತ ನಿಲ್ದಾಣಕ್ಕೆ ತಲುಪಿಸಲು ತಗಲುವ ವೇಳೆ, ಅದು ದೈವ ನಿಮಿತ್ತ. ಇದು ಎಕ್ಸ್ಪ್ರೆಸ್ ಟ್ರೈನ್ ಗಳ ಸ್ಥಿತಿಯಾದರೆ, ಇನ್ನು “ನಾನ್-ಎಕ್ಸ್ಪ್ರೆಸ್” ಅಥವಾ ಸಾಮಾನ್ಯ “ಪ್ಯಾಸೆಂಜರ್ ಟ್ರೈನ್” ಗಳ ಸ್ಥಿತಿ, ಅದು ದೇವರಿಗೇ ಪ್ರೀತಿ..!
ನಾನು, ನನ್ನ ಮಗಳೊಟ್ಟಿಗೆ ಹಾವೇರಿಯಿಂದ ಮೈಸೂರಿಗೆ ಇಂತಹ ಒಂದು ರೈಲು ಪ್ರಯಾಣಕ್ಕೆ ಸಿದ್ಧನಾದೆ. ಮೈಸೂರಿನಿಂದ ಹಾವೇರಿಗೆ ಬರುವಾಗ ಎಲ್ಲರೂ ನಮ್ಮದೇ ಕಾರಿನಲ್ಲಿ ಬಂದಿದ್ದೆವು. ನನ್ನ ಹೆಂಡತಿ, ತನ್ನ ಎರಡನೇ ಹೆರಿಗೆಗಾಗಿ ಹಾವೇರಿಯಲ್ಲಿನ ತನ್ನ ತವರು ಮನೆಯಲ್ಲಿ ಉಳಿಯುವವಳಿದ್ದಳು. ಹೆರಿಗೆ ಸಮಯದಲ್ಲಿ ಆಸ್ಪತ್ರೆಯ ಓಡಾಟಕ್ಕೆ ವೈಯಕ್ತಿಕ ವಾಹನ ಬೇಕಾಗಬಹುದಾದ್ದರಿಂದ, ಕಾರನ್ನು ಅಲ್ಲೇ ಬಿಟ್ಟು, ಮಗಳೊಟ್ಟಿಗೆ ರೈಲು ಪ್ರಯಾಣಕ್ಕಾಗಿ ಹವಾನಿಯಂತ್ರಿತವಲ್ಲದ ಬೋಗಿಯಲ್ಲಿ ಆಸನಗಳನ್ನು ಕಾಯ್ತಿರಿಸಿದ್ದೆ. ಆರು ವರ್ಷದ ನನ್ನ ಮಗಳಿಗೆ ಇದು ಚೊಚ್ಚಲು ರೈಲು ಪ್ರಯಾಣ. ಇದುವರೆಗೂ ಮಾಲ್ ಗಳಲ್ಲಿ ಆಟಿಕೆ ರೈಲುಗಳನ್ನು ಅಷ್ಟೇ ಹತ್ತಿದ್ದ ಅವಳು, ರೈಲು ಪ್ರಯಾಣದ ಬಗ್ಗೆ ನೋಡಿದ್ದು-ತಿಳಿದಿದ್ದು ಅವಳು ನೋಡುವ ಯೂಟ್ಯೂಬ್ ವಿಡಿಯೋಗಳ ಮೂಲಕ ಮಾತ್ರ. ಚೊಚ್ಚಲು ರೈಲು ಪ್ರಯಾಣದ ಬಗ್ಗೆ ಅವಳು ನಿರೀಕ್ಷೆಯ ಮಹಾಪೂರವನ್ನೇ ಹೊತ್ತಿದ್ದಳು. ಆ ಉತ್ಸಾಹದ ಭಾಗವೆಂಬಂತೆ, ಅಂದಿನವರೆಗೂ ಎಂದೂ ಬೆಳಿಗ್ಗೆ ಎಂಟು ಗಂಟೆಗೆ ಮೊದಲು ತಾನಾಗಿಯೇ ಏಳದವಳು, ಅಂದು 10:25ಕ್ಕೆ ಹೊರಡುವ ರೈಲಿಗೆ ಅಣಿಯಾಗಲು ಆರು ಗಂಟೆಗೇ ಎದ್ದು ಕುಳಿತಿದ್ದಳು. ಆದರೆ ನನ್ನ ಹೆಂಡತಿಗೆ ಮಾತ್ರ ಎಲ್ಲಿಲ್ಲದ ಆತಂಕ.
“9-10 ಘಂಟೆ ಪಾಪು ಸುಮ್ಮನೆ ಕೂತಿರ್ತಾಳೆನ್ರೀ ರೈಲಲ್ಲಿ..? ಅದೂ ನೀವೂ ಒಬ್ಬರೇ ಇರ್ತೀರಾ. ಯಾವುದಾದರೂ ಬಸ್ಸಿಗಾದ್ರೂ ರಿಸರ್ವೇಶನ್ ಮಾಡಿಸೋದಲ್ವೇ..? ಸ್ವಲ್ಪ ಬೇಗನಾದ್ರೂ ಹೋಗ್ತಿದ್ವು. ಅಟ್ಲೀಸ್ಟ್, ಬೇರೆ ರೂಟಲ್ಲಿ ಹೋಗೋ ಟ್ರೈನ್ ಆದರೂ ಬುಕ್ ಮಾಡಿದ್ರೆ, ಅವಾದರೂ ಸ್ವಲ್ಪ ಬೇಗ ಹೋಗಿರೋವು.”
“ಅವಳು ಬಸ್ಸಲ್ಲಿ ಆರು-ಏಳು ಗಂಟೆ ಕೂಡೋದು ಕಷ್ಟಾನೇ. ಟ್ರೈನ್ ದು ಅವಳಿಗೂ ಫಸ್ಟ್ ಟೈಮ್ ಎಕ್ಸ್ಪೀರಿಯನ್ಸ್ ಅಲ್ವಾ..? ಸ್ವಲ್ಪ ಹೆಚ್ಚಿಗೆ ಟೈಮ್ ತಗೊಂಡ್ರು ಪರವಾಗಿಲ್ಲ, ಎಂಜಾಯ್ ಮಾಡ್ತಾಳೆ ಬಿಡು. ಹೊಸ ಮಕ್ಕಳು ಯಾರಾದ್ರೂ ಪರಿಚಯ ಆಗ್ತಾರೆ. ಅವಳಿಗೆ ಅಂತಾನೇ ಒಂದು ಸೀಟ್ ರಿಸರ್ವ್ ಮಾಡಿಸಿದ್ದೀನಿ. ಆರಾಮಾಗಿರುತ್ತೆ. ನೀನೇನು ಚಿಂತೆ ಮಾಡ್ಬೇಡ..!” ನಾನು ಧೈರ್ಯ ಹೇಳಿದೆ.
“ಆದ್ರೂ… ಅಷ್ಟೊತ್ತು ಅಂದ್ರೆ ಮಕ್ಕಳಿಗೆ ಕಷ್ಟ ಅಲ್ವಾ..?” ನನ್ನ ಹೆಂಡತಿ ಇನ್ನೂ ರಾಗ ಎಳೆಯುತ್ತಿದ್ದಳು, ಅಷ್ಟರಲ್ಲಿ ಅವಳ ತಂದೆ ಮಧ್ಯಪ್ರವೇಶಿಸಿದರು…
“ಅಲ್ಲಮ್ಮ, ನಿಮ್ಮೆಲ್ಲರ ಹಾಗೆ ಅವಳಿಗೂ ಲೋಕದ ರೂಢಿಗಳು ಅನುಭವವಾಗಬೇಡವೇ..? ರೈಲು ಪ್ರಯಾಣ ಅಂದ್ರೆ ಏನು ಎಂದು ಅವಳೂ ತಿಳಿಯೋದು ಬೇಡವೇ..? ಮಕ್ಕಳಿಗೂ ಎಲ್ಲದರ ಅನುಭವ ತಕ್ಕಮಟ್ಟಿಗಾದರೂ ಆಗಬೇಕು. ಬರೀ ಪಾಠದಿಂದ ಬರುವ ಕಲಿಕೆ ಕಲಿಕೆಯಲ್ಲ, ಅನುಭವದಿಂದ ಬರುವ ಕಲಿಕೆಯ ಪಾತ್ರ ಮಕ್ಕಳ ಬೆಳವಣಿಗೆಗೆ ತುಂಬಾ ಮುಖ್ಯ..!” 35 ವರ್ಷ ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಪಡೆದಿದ್ದ ನನ್ನ ಮಾವನವರ ಮಾತುಗಳಲ್ಲಿ ತಪ್ಪು ಹುಡುಕುವ ಅಪದ್ಧವನ್ನು ಅವರ ಮಗಳು ಮಾಡಲಿಲ್ಲ.
“ಈ ಕೈಚೀಲದಲ್ಲಿ ಸ್ವಲ್ಪ ಚಕ್ಕುಲಿ, ಹಣ್ಣು ಮತ್ತು ಮಧ್ಯಾಹ್ನದ ಊಟಕ್ಕೆ ಚಪಾತಿ ಪಲ್ಯ ಇಟ್ಟಿದ್ದೀನಿ… ಪಾಪು ಏನು ತಿನ್ನೋಕೆ ಕೇಳಿದ್ರೂ ಇದರಿಂದಾನೆ ಕೊಡಿ… ರೈಲಲ್ಲಿ ಸಿಗೋ ಚಿಪ್ಸು, ಜ್ಯೂಸು, ಹಾಳು-ಮೂಳೆಲ್ಲ ಅವಳು ಹಠ ಮಾಡ್ತಾಳೆ ಅಂತ ಕೊಡಿಸ್ಬೇಡಿ… ಹುಷಾರು ತಪ್ಪಿದ್ದರೆ ನೋಡ್ಕೊಳ್ಳೋಕೆ ಯಾರಿದಾರೆ ಅಲ್ಲಿ.!?” ನನ್ನ ಹೆಂಡತಿಗೆ ಮಾತು ಕಟ್ಟಿತು…

ನಾನು ಹೂಂ ಎಂಬಂತೆ ತಲೆ ಆಡಿಸಿದೆ. ಪಾಪುಗೆ ರೈಲು ಹತ್ತುವ ತವಕ. ತನ್ನಮ್ಮನಿಗೆ ಆಗುತ್ತಿರುವ ವಿರಹ ವೇದನೆಯ ಅರಿವು ಅವಳಿಗೆ ಇಲ್ಲ.
“ಯಾಕಮ್ಮ ಅಳ್ತೀಯಾ.!? ಅಜ್ಜಿ-ತಾತನ ಜೊತೆ ಇರೋದು ಇಷ್ಟ ಇಲ್ವಾ ನಿಂಗೇ..? ಹಾಳಾದ ಸ್ಕೂಲ್ ಒಂದು ಇರ್ಲಿಲ್ಲ ಅಂದಿದ್ರೆ, ನಾನಂತೂ ಎಷ್ಟು ದಿನ ಬೇಕಾದ್ರೂ ಇಲ್ಲೇ ಇರ್ತಿದ್ದೆ…” ಪಾಪು ಅವಳ ಅಮ್ಮನ ಕಣ್ಣೊರೆಸುತ್ತ ಹೇಳಿದಳು.
“ಸಾಕು-ಸಾಕು, ಸುಮ್ನೇ ಕಣ್ಣೊರೆಸೋ ನಾಟಕ ಮಾಡ್ತಾಳೆ. ಅಪ್ಪ ಹೇಳಿದಂಗೆ ಕೇಳ್ಕೊಂದಿದ್ರೆ, ನೀನು ಅದಕ್ಕಿಂತ ಹೆಚ್ಚಿಗೆ ಮಾಡೋದೇನು ಇಲ್ಲಾ. ಆಮೇಲೆ, ಇವತ್ತು ರಾತ್ರಿಗೆ, ಪಕ್ಕದ ಮನೆ ಸರೋಜಮ್ನವರು ಅನ್ನ ಸಾರು ಮಾಡಿ ಕೊಡ್ತೀನಿ ಅಂತ ಹೇಳಿದ್ದಾರೆ. ನಾಳೆ ಬೆಳಗ್ಗೆಯಿಂದ ಅಡಿಗೆಯವನು ಬರ್ತಾನೆ. ಬೆಳಗ್ಗೆ ಬಂದು ತಿಂಡಿ, ಮಧ್ಯಾಹ್ನದ ಊಟಕ್ಕೆ ಡಬ್ಬಿ, ತಯಾರು ಮಾಡಿಕೊಟ್ಟು ಹೋಗ್ತಾನೆ. ರಾತ್ರಿ ಮತ್ತೆ ಬಂದು ಚಪಾತಿ, ಅನ್ನ ಮಾಡಿಟ್ಟು ಹೋಗ್ತಾನೆ. ಭಾನುವಾರ ರಾತ್ರಿ ಅವನಿಗೆ ರಜೆ. ನೀವಿಬ್ರು ತಂದೆ ಮಗಳು ಹೊರಗೆ ಬೇಕಾದ್ದು ತಿಂದು ನಿಮ್ಮ ಬಾಯಿಚಪಲ ತೀರಿಸ್ಕೊಬಹುದು…” ಈಗಾಗಲೇ ಹತ್ತು ಸರಿ ಹೇಳಿದ್ದ ವಿಷಯವನ್ನು ನನ್ನ ಹೆಂಡತಿ ಮತ್ತೆ ನನಗೆ ತಿಳಿಹೇಳಿದಳು.

………. 2………….
“ಅಪ್ಪಾ, ನಾನು ಮೊದ್ಲೇ ಹೇಳ್ದೆ… ಟ್ರೈನ್ ಹುಬ್ಬಳ್ಳಿ ಬಿಟ್ಟಿರೋದೇ ತಡ. ಅರ್ಧ ಗಂಟೆ ಲೇಟಾಗಿ ಹೋಗೋಣ, ಅಂತ. ನೋಡಿ ಈಗ, ಸುಮ್ನೇ ಉರಿ ಬಿಸ್ಲಲ್ಲಿ ನಿಂತು ಕಾಯೋ ತರ ಆಯ್ತು…” ರೈಲ್ವೆ ಸ್ಟೇಷನ್ ನಲ್ಲಿ ರೈಲಿಗಾಗಿ ಕಾಯುತ್ತಾ ನಿಂತಿದ್ದಂತೆ, ಅಳಿಯ ಮಹೇಶ ತನ್ನ ತಂದೆಗೆ ಹೇಳಿದ.
“ಇರ್ಲಿ ಬಿಡೋ… ಬೇಗ ಬಂದು ಕಾಯೋದು, ಕಡೆಯ ಸೆಕೆಂಡಲ್ಲಿ ಬಂದು ಓಡೋಡಿ ಹೋಗಿ ರೈಲು ಹತ್ತೋದಕ್ಕಿಂತ ನೂರು ಪಾಲು ಉತ್ತಮ…” ನನ್ನ ಮಾವ ಅಷ್ಟು ಸರಳವಾಗಿ ಸೋಲು ಒಪ್ಪುವ ಆಸಾಮಿ ಅಲ್ಲ.

ನನ್ನ ಮಗಳಿಗೋ, ರೈಲು ಹತ್ತುವ ಧಾವಂತ, “ಏನಪ್ಪಾ..? ಎಷ್ಟೊತ್ತಾಯ್ತು… ರೈಲು ಇನ್ನೂ ಬರಲೇ ಇಲ್ಲ..? ಕಾಯ್ದು ಕಾಯ್ದು ಸುಸ್ತಾಯ್ತು ನಂಗೆ…” ಅರ್ಧ ಗಂಟೆಯಲ್ಲಿ ಕನಿಷ್ಠ 20 ಬಾರಿ ಇದೇ ಮಂತ್ರವನ್ನು ಪಠಿಸಿದ್ದಳು.

ಕೊನೆಗೂ, ಹನ್ನೊಂದು ಗಂಟೆಯ ಸುಮಾರಿಗೆ ರೈಲು ಹಾವೇರಿಯ ನಿಲ್ದಾಣಕ್ಕೆ ಬಂದು ನಿಂತಿತು. ನಾನು ಟಿಕೇಟು ಕಾಯಿದಿರಿಸಿದ್ದ ಬೋಗಿಯ ಬಳಿ ಹೋಗಿ, ಪಾಪುವನ್ನು ಮೊದಲು ಹತ್ತಿಸಿ, ನಾನೂ ಹತ್ತಿದೆ. ಅಳಿಯ ಮಹೇಶ ನಮ್ಮ ಕೈ ಚೀಲಗಳನ್ನು ತಂದು ನಮ್ಮ ಸೀಟುಗಳ ಕೆಳಗೆ ಸರಿಸಿದ. ಅಷ್ಟೊತ್ತಿಗೆ ರೈಲು ತನ್ನ ಪ್ರಯಾಣವನ್ನು ಮುಂದುವರಿಸುವುದಾಗಿ ಜೋರಾಗಿ ಶಿಳ್ಳೆಹಾಕಿ ಹೇಳಿತು. ತಾತ, ಮಾಮನಿಗೆ ಪಾಪು ಕೈಬಿಸಿ ವಿದಾಯ ಹೇಳಿದಳು…

ನಿಲ್ದಾಣವನ್ನು ಬಿಟ್ಟ ರೈಲಿನ ವೇಗ ಹೆಚ್ಚಿದಂತೆಲ್ಲಾ, ರೈಲಿನ ವೇಗದೊಂದಿಗೆ ಪೈಪೋಟಿಗೆ ಇಳಿದಂತೆ ಮತ್ತಷ್ಟು ತಂಪರೆಯುತ್ತ ಜೋರಾಗಿ ಬೀಸುತ್ತಿದ್ದ ಗಾಳಿ, ಕಿಟಕಿಯ ಬಳಿ ಕುಳಿತಿದ್ದ ಪಾಪುವಿಗೆ ಮುದ ನೀಡುತ್ತಿರುವಂತೆ ತೋರಿತು.
“ಅಪ್ಪ… ಎಷ್ಟು ಚಂದ ಅಲ್ವಾ ಟ್ರೈನು..? ಎಷ್ಟು ಆರಾಮವಾಗಿ ಕೂತ್ಕೋಬಹುದು..! ಇಷ್ಟು ದೊಡ್ಡ ಸೀಟ್ ಅಲ್ಲಿ ಮೂರೇ ಜನ..! ಕಾರಲ್ಲಿ ಇಷ್ಟು ಚೆನ್ನಾಗಿ ಅನ್ಸಲ್ಲ…”
“ನಿನಗೆ ಬೇಜಾರಾದರೆ ಆ-ಕಡೆ ಈ-ಕಡೆ ಎದ್ದು ಅಡ್ಡಾಡಲೂಬಹುದು. ಕಾರಲ್ಲಾದ್ರೆ ಕೂತಲ್ಲೇ ಕೂತಿರ್ಬೇಕು ನೀನು…” ಎದುರುಗಡೆಯ ಸೀಟಿನಲ್ಲಿ ಕೂತಿದ್ದ, ನನ್ನ ಮಾವನ ವಯಸ್ಸಿನ ಹಿರಿಯರೊಬ್ಬರು ಪಾಪುವಿನ ಮಾತಿಗೆ ಜೊತೆಗೂಡಿದರು.

ಪಾಪು ಆ ಹಿರಿಯರ ಮಾತಿಗೆ ಉತ್ತರಿಸುವುದೋ? ಬೇಡವೋ? ಎಂಬಂತೆ ನನ್ನತ್ತ ಪ್ರಶ್ನಾರ್ಥಕವಾಗಿ ತಿರುಗಿ ನೋಡಿದಳು.
“ನಾನು ನಿನ್ನ ತಾತಾನೇ ಕಣಮ್ಮ… ನೋಡು, ನನ್ನ ಕೂದಲೂ ನಿನ್ನ ತಾತನ ತರ ಬೆಳ್ಳಗೆ ಇಲ್ವಾ..? ಇಷ್ಟ ಆಯ್ತಾ ನಿನಗೆ ಟ್ರೈನು..?” ಹಿರಿಯರಿಗೆ ಪಾಪುವನ್ನು ಮಾತಿಗೆಳೆಯುವ ತವಕ.
ಪಾಪು ಇನ್ನೂ ನನ್ನನ್ನೊಮ್ಮೆ, ಆ ಹಿರಿಯರನ್ನೊಮ್ಮೆ ನೋಡುತ್ತಲೇ ಇದ್ದಳು.
“ಅವರೂ ತಾತ ಕಣಮ್ಮ… ತಾತ ಏನೋ ಕೇಳ್ತಾ ಇದ್ದಾರೆ, ಉತ್ತರ ಹೇಳು ಅವ್ರಿಗೆ… ಟ್ರೈನ್ ಇಷ್ಟ ಆಯ್ತಾ ನಿಂಗೆ?”
ಪಾಪು ಹೂಂ ಎಂಬಂತೆ ತಲೆಯಾಡಿಸಿದಳು…
“ನಿಮ್ಮ ಕಾರಿಗಿಂತಲೂ ಹೆಚ್ಚಿಗೆ ಇಷ್ಟ ಆಯ್ತಾ..?” ಪಾಪುವನ್ನು ಮಾತನಾಡಿಸುವಲ್ಲಿ ಅವರಿಗಾಗುತ್ತಿದ್ದ ಆನಂದ, ಅವರ ಮುಖಭಾವದಲ್ಲಿ ಎದ್ದು ಕುಣಿಯುತ್ತಿತ್ತು.
“ಹೂಂ ತಾತಾ… ತುಂಬಾ ಇಷ್ಟ ಆಯ್ತು… ಕಾರಲ್ಲಿ ತುಂಬಾ ಇಕ್ಕಟ್ಟು… ನನ್ನಮ್ಮಾನೂ ಹೇಳ್ತಾಳೆ, ಕಾಲು ಚಾಚುದಕ್ಕೂ ಜಾಗ ಇಲ್ಲ ಈ ಕಾರಲ್ಲಿ, ಇದನ್ನ ಮಾರಿ ದೊಡ್ಡ ಕಾರಾದ್ರೂ ತಗೋಬಾರದಾ ಅಂತ…”
ಎಲ್ಲರೂ ಗೊಳ್ ಎಂದು ನಕ್ಕೆವು…
“ಅಂದ್ರೆ… ಕಾರು ಇಷ್ಟ ಇಲ್ವಾ ನಿಂಗೇ..?” ಹಿರಿಯರು, ಪಾಪುವಿನೊಂದಿಗೆ ಮಾತು ಹಿಗ್ಗಿಸುವ ಮಾರ್ಗ ಹುಡುಕುತ್ತಿದ್ದರು…
“ಹಾಗಲ್ಲ… ಇಷ್ಟಾನೇ… ಆದ್ರೆ ಟ್ರೈನು ಕಾರಿಗಿಂತ ಹೆಚ್ಚು ಇಷ್ಟ ಆಯ್ತು…” ಪಾಪುವಿನ ಕಣ್ಣುಗಳು ಕಿಟಕಿಯಿಂದ ಆಚೆ ಎಲ್ಲಿ ನೋಡಿದರೂ ಕಾಣುತ್ತಿದ್ದ ಅಡಕೆ ತೋಟಗಳಿಂದಾಚೆ ಏನನ್ನೋ ಹುಡುಕಲು ಪ್ರಯತ್ನಿಸುತ್ತಿದ್ದವು. ಇದು ಇತ್ತೀಚಿನ ದಿನಗಳಲ್ಲಿ ನಮ್ಮ ಬಯಲು ಸೀಮೆಯ ಪ್ರದೇಶದಲ್ಲಿ ಆಗಿರುವ ಗಮನಾರ್ಹ ಪರಿವರ್ತನೆ. ಎಲ್ಲರೂ ಅಡಿಕೆ ಬೆಳೆಯ ಪ್ರವೀಣರೇ…

ತಿರುವಿನಲ್ಲಿ ಚಲಿಸುತ್ತಿದ್ದ ರೈಲಿನ ಮೂತಿ, ಕಿಟಕಿ ಆಚೆಗಿನ ನೋಟದಲ್ಲಿ ಪಾಪುವಿಗೆ ಕಂಡಿತು. ಒಡನೆ ನನ್ನೆಡೆ ತಿರುಗಿ ಪಾಪು ಕೇಳಿದಳು, ” ಅಪ್ಪ ಎಷ್ಟು ದೊಡ್ಡದಿರುತ್ತೆ ಈ ರೈಲು..? ಪೂರ್ತಿ ರೈಲು ಇದೇ ತರ ಜನ ಕೂಡೋಕ್ಕೆ ಸೀಟ್ ಇರುತ್ತಾ..? “
“ತೋರಿಸ್ತೀನಿ, ಬಾ…”, ಪಾಪುವನ್ನು ಕರೆದುಕೊಂಡು ರೈಲಿನ ಬ್ರಹ್ಮಾಂಡ ದರ್ಶನವನ್ನು ನೀಡಲು ಪ್ರಯತ್ನಿಸಿದೆ. ಮಧ್ಯದ ಬರ್ತ್ ಎತ್ತಿ ಕಟ್ಟಿ ಮೂರು ಜನ ಮಲಗಲು ಹಾಸಿಗೆ ತಯಾರು ಮಾಡುವುದು, ಸೈಡ್ ಬರ್ತ್ ನ ಸೀಟುಗಳು ಮಲಗಲು ಹಾಸಿಗೆಯಂತಾಗುವುದು, ಪ್ರತಿ ಬೋಗಿಯ ಎರಡೂ ಕಡೆ ಇರುವ ಶೌಚಾಲಯ ವ್ಯವಸ್ಥೆ, ಎರಡನೇ ಮತ್ತು ಮೂರನೇ ಎಸಿ ಬೋಗಿಗಳು, ಕಿಕ್ಕಿರಿದು ತುಂಬಿದ್ದ ಸಾಮಾನ್ಯ ದರ್ಜೆಯ ಕಾಯ್ದಿರಿಸದ ಬೋಗಿಗಳು, ಆಹಾರ ತಯಾರಿಸಲು ರೈಲಿನಲ್ಲಿರುವ ಪ್ಯಾಂಟ್ರಿ ವ್ಯವಸ್ಥೆ, ಎಲ್ಲವುಗಳನ್ನೂ ತೋರಿಸಿ, ಮರಳಿ ನಮ್ಮ ಸೀಟಿನೆಡೆ ಬರುತ್ತಿದ್ದಾಗ ರೈಲು ಧಡ್ ಧಡ್ ಧಡ್ ಎಂದು ಜೋರಾಗಿ ಶಬ್ದ ಮಾಡ ತೊಡಗಿತು…
“ಏನಪ್ಪಾ ಅದು..?” ಪಾಪುವಿಗೆ ಒಮ್ಮೆಲೇ ಸ್ವಲ್ಪ ದಿಗಿಲಾದಂತಾಗಿತ್ತು.
“ಪಾಪು, ರೈಲು ಈಗ ತುಂಗಭದ್ರಾ ನದಿಯನ್ನು ದಾಟುತ್ತಿದೆ… ನದಿಯ ಮೇಲಿನ ಸೇತುವೆಯನ್ನು ಹಾದು ಹೋಗುವಾಗ ರೈಲು ಈ ರೀತಿ ಶಬ್ದ ಮಾಡುತ್ತೆ…” ಪಾಪುವನ್ನು ಕಿಟಕಿಯ ಬಳಿ ಕರೆದೊಯ್ದು, ದೂರದವರೆಗೂ ಕಾಣುವ ನದಿಯ ನೋಟವನ್ನು ತೋರಿಸಿದೆ.
“ರೈಲಲ್ಲಿ ಹೋಗೋದು ಎಷ್ಟು ಚೆಂದ, ಅಲ್ವಾ ಅಪ್ಪ..?” ಪಾಪುವಿನ ಸಂತೋಷ ನೂರ್ಮಡಿಸಿದಂತಿತ್ತು.
“ಏನಮ್ಮ ಪುಟ್ಟಾ… ನಿನ್ನ ಅಪ್ಪ ರೈಲು ತೋರಿಸಿದ್ರಾ..? ಚೆನ್ನಾಗಿದ್ಯಾ ರೈಲು..?” ಪಾಪುವಿನ ಪುನರಾಗಮನವನ್ನೇ ಎದುರು ನೋಡುತ್ತಿರುವಂತಿದ್ದ, ನಮ್ಮೆದುರು ಕುಳಿತಿದ್ದ ಹಿರಿಯರು ಪಾಪುವನ್ನು ಕೇಳಿದರು.
“ತುಂಬಾ ಚೆನ್ನಾಗಿತ್ತು ತಾತಾ… ನೀವು ನೋಡಿದೀರಾ ಪೂರ್ತಿ ರೈಲು? ಎಷ್ಟು ದೊಡ್ಡದಿದೆ ಗೊತ್ತಾ..? ನೀವು ಹಿಂದೆ ಒರಗಿ ಕೂತಿರೋದನ್ನ ಎತ್ತಿ ಕಟ್ಟಿದರೆ ಮಲಗೋಕೆ ಹಾಸಿಗೆಯಾಗುತ್ತೆ, ಗೊತ್ತಾ..?” ಪಾಪು ತಾನು ವಿಶೇಷವಾದ ಗುಪ್ತ ಮಾಹಿತಿಯನ್ನು ಬಹಿರಂಗ ಪಡಿಸುತ್ತಿರುವಂತೆ ಎದುರಿಗಿದ್ದ ಹಿರಿಯರಿಗೆ ಹೇಳಿದಳು.
“ಹೌದಾ..? ನನ್ಗೆ ಗೊತ್ತೇ ಇರ್ಲಿಲ್ಲ ನೋಡು..! ಮತ್ತೇನೇನು ನೋಡ್ದೆ ರೈಲಲ್ಲಿ..?”
“ಮತ್ತೆ, ಸುಸ್ಸು-ಕಕ್ಕ ಬಂದ್ರೆ ಮಾಡೋಕ್ಕೆ ಟಾಯ್ಲೆಟ್ ಇದೆ. ಕಾರಲ್ಲಿ ಹೋಗುವಾಗ, ಅಪ್ಪನ್ನ ರಸ್ತೆ ಬದಿಗೆ ಟಾಯ್ಲೆಟ್ ಇಲ್ಲ ಹೋಟೆಲ್ ಕಂಡ್ರೆ ಕಾರು ನಿಲ್ಸು ಅಂತ ಕೇಳುವ ಹಾಗೆ ಇಲ್ಲಿ ಕೇಳ್ಬೇಕಿಲ್ಲ. ತಿಂಡಿ ಟೀ ಮಾಡಿ ಕೊಡೋಕೆ ಅಂತ ಒಂದು ಅಡುಗೆಮನೆ ಇದೆ. ಒಂದೆರಡು ಡಬ್ಬಿ ಏಸಿ ಇದೆ, ತುಂಬಾ ತಣ್ಣಗೆ. ಆದರೆ ಕಿಟಕಿ ತೆಗಿಯೋಕೆ ಆಗಲ್ಲ. ಹಾಗಿದ್ರೆ ಏನ್ ಚೆಂದ..? ನಂಗದು ಇಷ್ಟ ಆಗ್ಲಿಲ್ಲ… ಮತ್ತೆ ಸ್ವಲ್ಪ ಡಬ್ಬಿಲಿ ಅಡ್ಡಾಡೋದೇ ಕಷ್ಟ, ಅಷ್ಟೊಂದು ಜನ ಅಲ್ಲಿ. ಮೇಲೆಲ್ಲಾ ಹತ್ತಿ ಕೂತುಬಿಟ್ಟಿದ್ದಾರೆ…” ಪಾಪು ಬಹಳ ಉತ್ಸಾಹದಿಂದ ತನಗೆ ಸಾಧ್ಯವಿದ್ದಷ್ಟು ವಿಸ್ತಾರವಾಗಿ ತನ್ನ ರೈಲು ದರ್ಶನದ ಸಮಗ್ರ ಮಾಹಿತಿಯನ್ನು ಹಿರಿಯರ ಮುಂದೆ ಹಂಚಿಕೊಂಡಳು . ರೈಲಿನ ಈ ಹೊಸ ಅನುಭವ ನಿಜವಾಗಿಯೂ ಅವಳನ್ನು ಮೂಕ ವಿಸ್ಮಿತಳನ್ನಾಗಿ ಮಾಡಿತ್ತು.
“ಅಲ್ಲಿರೋ ಡಬ್ಬಿಗಳಲ್ಲಿ ಯಾಕೆ ಅಷ್ಟು ಜನ ಇದಾರೆ..? ನಮ್ಮ ಡಬ್ಬೀಲಿ ಯಾಕೆ ಸ್ವಲ್ಪ ಜನ ಇದ್ದಾರೆ..?”
“ಇದು ರಿಸರ್ವೇಶನ್ ಇರೋ ಡಬ್ಬಿ ಪುಟ್ಟ… ಇಲ್ಲಿ ನಾವು ಹೊರಡೋಕೂ ಸಾಕಷ್ಟು ಮೊದ್ಲೇ, ನಮಗೆ ಇಷ್ಟು ಜನಕ್ಕೆ ಜಾಗ ಬೇಕು ಅಂತ ದುಡ್ಡು ಕೊಟ್ಟು ಜಾಗ ಗೊತ್ ಮಾಡ್ಕೊಂಡಿರ್ತೀವಿ… ಅದಕ್ಕೆ ಎಷ್ಟು ಜನಕ್ಕೆ ಕೂಡೊಕ್ಕೆ-ಮಲಗೋಕೆ ಜಾಗ ಇರುತ್ತೋ, ಅಷ್ಟೇ ಜನಕ್ಕೆ ಟಿಕೆಟ್ ಕೊಟ್ಟಿರ್ತಾರೆ. ಬಹಳ ಜನಕ್ಕೆ ತಾವು ಇಂತದ್ದೇ ದಿನ ಹೋಗ್ಬೇಕು ಅಂತ ಮೊದಲೇ ಖಾತ್ರಿ ಇರಲ್ಲ, ಅಥವಾ ಅವರು ನಿರ್ಧಾರ ಮಾಡೋ ಹೊತ್ತಿಗೆ ರಿಸರ್ವೇಶನ್ ಡಬ್ಬೀಲಿ ಸೀಟುಗಳೆಲ್ಲ ಫುಲ್ ಆಗಿರ್ತವೆ. ಅಂತವ್ರು, ಊರಿಗೆ ಹೋಗೋ ದಿನ ಬೆಳಗ್ಗೆ ಬಂದು ರೈಲ್ವೆ ಸ್ಟೇಷನ್ ನಲ್ಲಿ ಟಿಕೆಟ್ ತಗೋತಾರೆ. ಆಗ ಅವ್ರಿಗೆ, ಇಂತಹ ಸೀಟು ಅಂತ ನಿಗದಿ ಮಾಡಿ ಟಿಕೆಟ್ ಕೊಡಲ್ಲ, ಬರೀ ಈ ಊರಿಂದ ಈ ಊರಿಗೆ ಹೋಗೋಕೆ ಅಂತ ಟಿಕೆಟ್ ಕೊಡ್ತಾರೆ. ಅವರಿಗೆ ಜನರಲ್ ಬೋಗಿಲಿ ಸೀಟು ಸಿಕ್ರೆ ಕೂಡ್ತಾರೆ, ಸಿಗ್ಲಿಲ್ಲ ಅಂದ್ರೆ ನಿತ್ಕೊಂಡೆ ಹೋಗ್ತಾರೆ. ಅದಕ್ಕೆ ಜನರಲ್ ಬೋಗಿಲಿ ಅಷ್ಟು ಹೆಚ್ಚು ಜನ ಇರ್ತಾರೆ…” ಹಿರಿಯರು, ಪಾಪುವಿಗೆ ಸಾಧ್ಯವಾದಷ್ಟು ಸರಳ ಭಾಷೆಯಲ್ಲಿ ತಿಳಿ ಹೇಳುವ ಪ್ರಯತ್ನ ಮಾಡಿದರು.
“ಅಬ್ಬ, ನಾವು ಸದ್ಯಕ್ಕೆ ಮೊದಲೇ ಟಿಕೆಟ್ ತಗೊಂಡಿದೀವಿ… ಆರಾಮಾಗಿ ಕೂತ್ಕೋಬಹುದು, ಅಲ್ವೇನಪ್ಪಾ..?” ಪಾಪು ನನ್ನಡೆ ತಿರುಗಿ ಕೇಳಿದಳು. ನಾನು ಹೌದೆಂಬಂತೆ ತಲೆಯಾಡಿಸಿದೆ.

ಅಷ್ಟರಲ್ಲಿ ರೈಲು ದಾವಣಗೆರೆ ನಿಲ್ದಾಣವನ್ನ ತಲುಪಿತು. ರೈಲು ನಿಲ್ದಾಣವೆಲ್ಲ ಜನಜಂಗುಳಿ. ನೋಡ ನೋಡುತ್ತಲೇ ಸುಮಾರಷ್ಟು ಜನ ನಮ್ಮ ರಿಜರ್ವ್ಡ್ ಬೋಗಿಯಲ್ಲೂ ತುಂಬಿಕೊಂಡರು.
“ಸ್ವಲ್ಪ ಆ ಕಡೆ ಜರುಗಿ ಸರ್… ಆ ಮಗುನ ಕಾಲು ಮೇಲೆ ಕೂಡಿಸ್ಕೊಳ್ಳಿ… ” ಹತ್ತಿದ ಜನರ ಗುಂಪಿನಲ್ಲಿ ಇದ್ದ ಒಬ್ಬ ನನ್ನತ ನೋಡಿ ಹೇಳಿದ. ನನಗೆ ಏನಾಗುತ್ತಿದೆ ಎಂಬುದರ ಅರಿವೇ ಆಗುತ್ತಿರಲಿಲ್ಲ.
“ಇದು ರಿಸರ್ವೇಶನ್ ಇರೋ ಬೋಗಿ ಕಣ್ರೀ… ಅವರು ತಮಗೂ, ತಮ್ಮ ಮಗುವಿಗೂ ಸೀಟ್ ರಿಸೆರ್ವ್ ಮಾಡಿದಾರೆ… ಅವರು ಯಾಕ್ರೀ ಮಗೂನ ಕಾಲ್ ಮೇಲೆ ಕೂರಿಸಿಕೋತಾರೆ..? ಅಷ್ಟಕ್ಕೂ ನೀವೆಲ್ಲ ಯಾಕ್ರಿ ನಮ್ಮ ಸೀಟಲ್ಲಿ ಬಂದು ಕೂತಿದ್ದೀರಾ..? ರಿಸರ್ವೇಶನ್ ಇದೆಯಾ ನಿಮ್ಗೆ..? ಟಿಕೆಟ್ ತೋರಿಸಿ ನಿಮ್ದು…” ಎದುರುಗಡೆ ಕೂತಿದ್ದ ಹಿರಿಯರು ಆಘಾತಕ್ಕೆ ಒಳಗಾಗಿದ್ದವರಂತೆ, ಏರು ಧ್ವನಿಯಲ್ಲಿ ನಮ್ಮ ಸೀಟುಗಳನ್ನು ಆಕ್ರಮಿಸಿಕೊಳ್ಳಲು ಹವಣಿಸುತ್ತಿದ್ದ ಗುಂಪನ್ನು ತರಾಟೆಗೆ ತೆಗೆದುಕೊಂಡರು.
“ಯಾಕೆ ಅಂದ್ರೆ..? ಅಲ್ಲಿ ಜನರಲ್ ಬೋಗಿಗೆ ಹೋಗಿ ನೋಡಿ, ಒಂದು ಇಲಿ ಹೋಗಕ್ಕೂ ಜಾಗ ಇಲ್ಲ… ಸಂಜೆ ತಿಪಟೂರಿನಲ್ಲಿ ನಮ್ಮ ಜನಾಂಗದ ದೊಡ್ಡ ಸಮಾವೇಶ ಇದೆ. ಇಲ್ಲಿಂದ ಸಾವಿರಾರು ಜನ ಹೊರಟಿದ್ದೀವಿ. ರಿಸರ್ವೇಶನ್ ಇಲ್ಲ ಅಂತ ನಾವೇನು ಇಲ್ಲೇ ಬಿದ್ದಿರಬೇಕಾ? ಜನ ಹೆಚ್ಚಿದ್ದಾರೆ ಅಂದ್ರೆ ಇನ್ನೂ ನಾಲ್ಕು ಜನರಲ್ ಬೋಗಿ ಹಾಕ್ಬೇಕಿತ್ತು ಗೌರ್ಮೆಂಟ್ನವರು… ನಾವೇನು ಬೇಡ ಅಂದಿದ್ವ..? ನಿಮ್ಮಂಗೆ ನಾವು ವೋಟು ಕೊಟ್ಟಿಲ್ವಾ ಅವರಿಗೆ..? ನಿಮಗೆ ಅಷ್ಟು ಕಷ್ಟ ಆದ್ರೆ ಕರೀರಿ ಆ ಟೀಸಿನ… ಅವನತ್ರನೇ ಕೇಳ್ತೀವಿ…” ಗುಂಪಿನಲ್ಲಿದ್ದವನೊಬ್ಬ, ನನ್ನೆದುರು ಕುಳಿತಿದ್ದ ಹಿರಿಯರನ್ನೇ ನುಂಗಿ ಬಿಡುವಂತೆ ನೋಡುತ್ತಾ ಅವರಿಗಿಂತ ಎತ್ತರದ ಧ್ವನಿಯಲ್ಲಿ ಕಿರುಚಾಡಿದ.
“ಜನರಲ್ ಬೋಗಿಲಿ ಜಾಗ ಇಲ್ಲ ಅಂದ್ರೆ ಅದಕ್ಕೆ ನಾವೇನ್ರಿ ಮಾಡ್ಬೇಕು..? ತಿಂಗಳುಗಟ್ಟಲೆ ಮೊದಲು ರಿಸರ್ವೇಶನ್ ಮಾಡಿಸಿರುವ ನಾವೆಲ್ಲ ಏನು ಹುಚ್ಚರೇನೋ ಹಾಗಿದ್ರೆ..? ಹಿರಿಯರ ಜೊತೆ ಹೇಗೆ ಮಾತಾಡಬೇಕು ಅಂತ ಪ್ರಜ್ಞೆನೂ ಇಲ್ವಲ್ರಿ ನಿಮಗೆ…” ನಾನು ಮಾರುತ್ತರ ನೀಡಿದೆ.
“ಇದೆಲ್ಲಾ ಪುರಾಣ-ಹರಿಕಥೆ ಆ ಟಿಸಿ ಮುಂದೆ ಹೇಳಿ ನೀವು..” ನಮ್ಮ ಮಾತುಗಳಿಗೆ ಕಿಂಚಿತ್ತೂ ಮರ್ಯಾದೆ ಇಲ್ಲವೆಂಬಂತೆ ಮೇಲಿನ ಬರ್ತ್, ನೆಲಹಾಸು, ನಾವುಗಳು ಕೂತಿದ್ದ ಬರ್ತ್ ನ ಸೀಟ್ಗಳು, ಎಲ್ಲೆಡೆ ಆಕ್ರಮಿಸಿ ಕೂತುಬಿಟ್ಟರು. ಮೂರು ಜನ ಕೂಡಬೇಕಿದ್ದ ಕೆಳಗಿನ ಬರ್ತಿನಲ್ಲಿ 7 ಜನ ಕೂತಿದ್ದೆವು. ಒಮ್ಮಿಂದೊಮ್ಮೆಲೆ ಬೋಗಿ ಎಲ್ಲಾ ಮನುಷ್ಯರ ಬೆವರಿನ ವಾಸನೆ. ಪಾಪು ಒಮ್ಮೆಲೇ ಭಯಭೀತಳಾದಂತಾಗಿದ್ದಳು. ನಾನು ಪಾಪುವನ್ನು ಕಾಲ ಮೇಲೆ ಕೂರಿಸಿಕೊಂಡು ಕುಳಿತೆ. ಕೆಲ ಸಮಯದ ಹಿಂದಿನವರೆಗೆ ರೈಲು ಪ್ರಯಾಣದ ಹಿತ, ಪಾಪುವಿನ ಮುಖದ ಮೇಲೆ ತಂದಿದ್ದ ಮಂದಹಾಸ ಮಾಯವಾಗಿತ್ತು. ಬೋಗಿಯ ತುಂಬೆಲ್ಲ ಜೋರು ದನಿಯಲ್ಲಿ ಕೇಳಿ ಬರುತ್ತಿದ್ದ ಜನಗಳ ಮಾತು.
ಪಾಪು ನನ್ನ ಕಿವಿಯತ್ತ ತನ್ನ ಮುಖವನ್ನು ತಂದು “ನೀರು…” ಎಂದಳು.

ನೀರಿನ ಬಾಟಲಿ ಇದ್ದುದು ಸೀಟಿನ ಕೆಳಗಡೆ ತಳ್ಳಿದ್ದ ಚೀಲದಲ್ಲಿ. ಅದನ್ನು ಹೊರಗೆ ಎಳೆಯಲು ಜಾಗವೆಲ್ಲಿದೆ? ನೆಲಹಾಸಿನ ಮೇಲೆಲ್ಲಾ ಜನ ಕುಳಿತಿದ್ದಾರೆ. ಪಾಪುಗೆ 10 ನಿಮಿಷ ತಡೆಯಲು ಹೇಳಿದೆ.

ರೈಲು ಚಿಕ್ಕಜಾಜೂರು ತಲುಪಿದ್ದೇ ತಡ, ಪಾಪುವನ್ನು ಎದುರಿಗಿದ್ದ ಹಿರಿಯರ ಬಳಿ ಕೂಡಿಸಿ, ರೈಲಿನಿಂದ ಕೆಳಗಿಳಿದು ಟಿಸಿಯನ್ನು ಹುಡುಕತೊಡಗಿದೆ. ಕೆಳಗಿಳಿದ ಕೂಡಲೇ ನನ್ನ ಅರಿವಿಗೆ ಬಂದಿದ್ದು, ಎಲ್ಲಾ ರಿಜರ್ವೆಷನ್ ಬೋಗಿಗಳ ಕಥೆಯೂ ಇದೇ… ಎಲ್ಲರೂ ಟಿಸಿಯನ್ನು ಹುಡುಕುವವರೇ…

ಟಿಸಿ ರೈಲ್ವೆ ಪೊಲೀಸರ ಸಹಾಯದಿಂದ ಎಲ್ಲಾ ರಿಸರ್ವೇಶನ್ ಬೋಗಿಗಳಲ್ಲಿದ್ದ ಹೆಚ್ಚುವರಿ ಪ್ರಯಾಣಿಕರನ್ನ ಸಾಧ್ಯವಿದ್ದಷ್ಟು ಕೆಳಗಿಳಿಸಿದರು. ಕಾಲು ಸರಿಸಲೂ ಜಾಗವಿಲ್ಲದ ಮೊದಲಿನ ಪರಿಸ್ಥಿತಿಗಿಂತ, ಈಗಿನ ಪರಿಸ್ಥಿತಿ ಸ್ವಲ್ಪ ಸಹ್ಯವಾಗಿತ್ತು. ನೆಲಹಾಸಿನ ಮೇಲೆ ಯಾರೂ ಕುಳಿತಿರಲಿಲ್ಲ. ಮೂರು ಜನ ಕೂಡುವ ನಮ್ಮ ಸೀಟಿನಲ್ಲಿ, ಪಾಪುವನ್ನು ಸೇರಿ ಐದು ಜನ ಕೂತಿದ್ದೆವು. ಪ್ರತಿ ಮೇಲಿನ ಬರ್ತಿನಲ್ಲೂ ಸುಮಾರು ನಾಲ್ಕೈದು ಜನರು ಕೂತಿದ್ದರು. ಟಿಸಿ ನನ್ನೆಡೆ ನೋಡಿ ಇದಕ್ಕಿಂತ ಹೆಚ್ಚು ಅನುಕೂಲ ಮಾಡಿಕೊಡುವುದು ತನ್ನಿಂದ ಅಸಾಧ್ಯವೆಂಬಂತೆ ಅಸಹಾಯಕ ದೃಷ್ಟಿ ಬೀರಿದ. ಈ ಎಲ್ಲಾ ಜಂಜಾಟ ಮುಗಿಯುವ ಸಲುವಾಗಿ, ವಾಡಿಕೆಗಿಂತ 10 ನಿಮಿಷ ಹೆಚ್ಚು ಆ ನಿಲ್ದಾಣದಲ್ಲಿ ನಿಂತಿದ್ದ ರೈಲು, ಮತ್ತೊಮ್ಮೆ ಶಿಳ್ಳೆಹಾಕಿ ತನ್ನ ಪ್ರಯಾಣವನ್ನು ಮುಂದುವರಿಸಿತು.

ಕಳೆದ 10-20 ನಿಮಿಷ ಟಿಸಿ, ಪೊಲೀಸು, ಹೆಚ್ಚುವರಿ ಪ್ರಯಾಣಿಕರ ಜೊತೆಗಿನ ವಾದ ವಿವಾದದಿಂದ ಬಹಳ ದಣಿದಂತಾಗಿದ್ದ ನಾನು, ಸೀಟಿನಲ್ಲಿ ಒರಗಿ, ಕಿಟಕಿಯಿಂದ ಬರುತ್ತಿದ್ದ ತಂಗಾಳಿಗೆ ಮುಖ ಒಡ್ಡಿ, ಕಣ್ಣು ಮುಚ್ಚಿದೆ.
“ಅಪ್ಪಾ… ಕುಡಿಲಿಕ್ಕೆ ನೀರು…” ಪಾಪು ಮತ್ತೆ ನನ್ನ ಕಿವಿಯಲ್ಲಿ ಉಸಿರಿದಳು. ಪಕ್ಕನೆ ಕಣ್ಣು ಬಿಟ್ಟು ಪಾಪುವಿನತ್ತ ನೋಡಿದೆ. ಅವಳು ಇನ್ನೂ ಭಯದಲ್ಲಿದಂತೆ ತೋರಿತು. ನಾನು ಬಹುಶಃ ನಿದ್ರೆಗೆ ಜಾರುತ್ತಿದ್ದೇನೆ ಎಂಬ ಶಂಕೆ ಅವಳ ಭಯವನ್ನು ಇನ್ನೂ ಹೆಚ್ಚಿಸಿತ್ತು. ಸೀಟಿನ ಕೆಳಗಿನ ಬ್ಯಾಗನ್ನು ಹೊರಕ್ಕೆಳೆದು ಬಾಟಲಿನಲ್ಲಿ ಇದ್ದ ನೀರನ್ನು ಪಾಪುವಿಗೆ ಕುಡಿಯಲು ನೀಡುತ್ತಾ ಕೇಳಿದೆ, “ಏನಾದ್ರು ಸ್ವಲ್ಪ ತಿಂಡಿ ತಿಂತಿಯೇನೋ..? ಚೆಕ್ಕುಲಿ, ಶೇಂಗಾ ಚಕ್ಕಿ..? ಇಲ್ಲ ಬಾಳೆಹಣ್ಣಾದರೂ ಕೊಡಲೇ..?”

ಪಾಪು ಎಲ್ಲದಕ್ಕೂ ಬೇಡವೆಂಬಂತೆ ತಲೆಯಾಡಿಸುತ್ತಾ, ನೀರಿನ ಬಾಟಲಿಯನ್ನು ಮರಳಿ ನನ್ನ ಕೈಯಲ್ಲಿಟ್ಟು, ನನ್ನ ಕಾಲಿನ ತೊಡೆಯ ಮೇಲೆ ತನ್ನ ತಲೆಯನ್ನು ಇಟ್ಟು, ಮಲಗಿದಳು.

ಮುಖಕ್ಕೆ ರಾಚುತ್ತಿದ್ದ ಗಾಳಿ ಅವಳ ನಿದ್ದೆಗೆಡೆಸೀತೆಂಬ ಆತಂಕದಿಂದ ಕಿಟಕಿಯನ್ನು ಮುಚ್ಚಲು ಕೈಚಾಚಿದೆ.
“ಕಿಟಕಿ ಮುಚ್ಚ ಬೇಡಪ್ಪ, ನನಗೆ ಗಾಳಿ ಬೇಕು…” ಪಾಪು ಮಂದದನಿಯಲ್ಲಿ ಹೇಳಿದಳು. ನನ್ನ ಕಾಲ ಮೇಲೆ ತಲೆ ಇಟ್ಟು ಮಲಗಿದ್ದಳಾದರೂ, ಅವಳ ತೆರೆದ ಕಣ್ಣುಗಳು ಕಿಟಕಿಯಾಚೆ ಏನನ್ನೋ ಅರಸುತಿದ್ದವು…
“ನಮಗೆಲ್ಲಾ, ಚಿಕ್ಕವರಿದ್ದಾಗ ಈ ಕಿಕ್ಕರಿದ ರೈಲುಗಳಲ್ಲಿನ ಪ್ರಯಾಣ ಅಭ್ಯಾಸವಾಗಿತ್ತು. ಹೀಗಾಗಿ ಇಂತಹ ಅನುಭವಗಳು ನಮಗೆ ವಿಪರೀತವೆನಿಸುವುದಿಲ್ಲ… ಪಾಪ ಮೊದಲ ಸಲ ರೈಲಿನ ಪ್ರಯಾಣದ ಅನುಭವವನ್ನು ಸುಖಿಸುತ್ತಿದ್ದ ಮಗು, ಇಂತಹ ಗದ್ದಲ ಗೊಂದಲಗಳಿಂದ ಧೈರ್ಯಗುಂದುವುದು ಸಹಜ… ಏನೇ ಹೇಳಿ, ನಾವು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಸುಧಾರಿಸುತ್ತೇವೆ ಎಂದು ಎಷ್ಟೇ ಪ್ರಯತ್ನಪಟ್ಟರೂ, ಸಾರ್ವಜನಿಕರೇ ಅಗತ್ಯವಿರುವ ಸಹಕಾರವನ್ನು ನೀಡದೆ, ಬರೀ ಸರಕಾರ ಅಥವಾ ಆಡಳಿತ ಯಂತ್ರದಿಂದ ಸಕಾರಾತ್ಮಕ ಬದಲಾವಣೆ ಬಯಸುವುದರಲ್ಲಿ ಯಾವುದೇ ಅರ್ಥವಿಲ್ಲ. ಅಂತಹ ಅರ್ಥವಿಲ್ಲದ ಪ್ರಯತ್ನಗಳು ಸಾಕಾರವಾಗುವುದೂ ಇಲ್ಲ…” ಎದುರಿಗಿನ ಹಿರಿಯರು, ನಮ್ಮ ಡಬ್ಬಿಯಲ್ಲಿ ಕುಳಿತಿದ್ದ ಹೆಚ್ಚುವರಿ ಪ್ರಯಾಣಿಕರಿಗೆ ಕೇಳಿಸಲೆಂದೇ ತಮ್ಮ ಮಾತುಗಳನ್ನು ಸ್ವಲ್ಪ ಜೋರು ದನಿಯಲ್ಲಿ ಹೇಳಿದರು.

ಅವರ ಮಾತುಗಳು, ಹೆಚ್ಚುವರಿ ಪ್ರಯಾಣಿಕರಿಂದ ಯಾವುದೇ ಪ್ರತಿಕ್ರಿಯೆಯನ್ನು ಪಡೆಯಲು ವಿಫಲವಾದವು. ಅವರೆಲ್ಲ, ಆ ಹಿರಿಯರ ಮಾತುಗಳು ತಮ್ಮ ಕಿವಿಗೆ ಬೀಳಲೇ ಇಲ್ಲವೆಂಬಂತೆ ತಮ್ಮ ತಮ್ಮ ಚರ್ಚೆಗಳಲ್ಲಿ ತಲ್ಲೀನರಾಗಿದ್ದರು. ಇತ್ತ ಪಾಪು ನಿಧಾನವಾಗಿ ನಿದ್ರೆಗೆ ಜಾರುತ್ತಿದ್ದಳು.

ಮುಂದಿನ ಎರಡು ಗಂಟೆಗಳು, ನಿಜವಾಗಿಯೂ ಯಾವುದೇ ಸಾಮಾನ್ಯ ಪ್ರಯಾಣಿಕನ ತಾಳ್ಮೆಯ ಸೀಮೆಯನ್ನು ಪರೀಕ್ಷಿಸುವಂತಿದ್ದವು. ನಾನು ಮತ್ತು ಪಾಪು ಕುಳಿತಿದ್ದ ಸೀಟಿನ ಮೇಲಿನ ಬರ್ತಿನಲ್ಲಿ ಗಂಡ-ಹೆಂಡತಿ ಮತ್ತು ಅವರಿಬ್ಬರ ಮಕ್ಕಳು (ಸುಮಾರು 8 ಮತ್ತು 10 ವರ್ಷದವರಿರಬೇಕು) ಕುಳಿತಿದ್ದರು. ಅವರ ದೊಡ್ಡ ಮಗ (ಸುಮಾರು 12-13 ವರ್ಷದ ವಯಸ್ಸಿನವನಿರಬೇಕು) ಎದುರುಗಡೆಯ ಸೀಟಿನ ಮೇಲಿನ ಬರ್ತಿನಲ್ಲಿ ಕುಳಿತಿದ್ದ. ರೈಲು ಚಿಕ್ಕಜಾಜೂರಿನಿಂದ ಹೊರಟ 15-20 ನಿಮಿಷದಲ್ಲಿ ಅವರ ಭೋಜನ ಕೂಟ ಆರಂಭವಾಯಿತು. ಮನೆಯಿಂದ ಡಬ್ಬಿಯಲ್ಲಿ ತುಂಬಿ ತಂದಿದ್ದ ವಿವಿಧ ಭಕ್ಷಗಳ ಸಾಲು ಸಾಲು ಅನಾವರಣ.

ಮೇಲೆ ಕುಳಿತಿದ್ದವರು ಏನು ತಿನ್ನುತ್ತಿದ್ದಾರೆ ಎಂಬುದು ನನಗೆ ಹೇಗೆ ತಿಳಿದೀತು..? ಭಾರತೀಯ ತಿನಿಸುಗಳು ನಾಲಿಗೆಗೆ ತಲುಪುವ ಮೊದಲು ಮೂಗಿಗೆ ತಲುಪುತ್ತವಷ್ಟೇ..? ರೊಟ್ಟಿ, ಎಣ್ಣೆಗಾಯಿ ಪಲ್ಯ, ಶೇಂಗಾ ಚಟ್ನಿ, ಅನ್ನ, ನುಗ್ಗೆಕಾಯಿ ಸಾರು, ಮೊಸರಿನ ಬುತ್ತಿ, ಎಲ್ಲದರ ವಾಸನೆಯೂ, ಆಗಲೇ ರೈಲಿನಲ್ಲಿದ್ದ ಮನುಷ್ಯರ ಬೆವರಿನ ವಾಸನೆಯೊಡನೆ ಬೆರೆತು, ಒಂದು ವಿಚಿತ್ರವಾದ ಹೊಸದಾದ ವಾಸನೆ ನಮ್ಮ ರೈಲು ಡಬ್ಬಿಯನ್ನು ಆವರಿಸಿತ್ತು.

ವಾಸನೆಯಿಂದಷ್ಟೇ ಎಲ್ಲಾ ಭಕ್ಷಗಳನ್ನು ಗುರುತಿಸುವಷ್ಟು ಆಹಾರಾಭಿರುಚಿ ನನ್ನಲ್ಲಿಲ್ಲ. ಮೇಲುಗಡೆ ಎದುರಿನ ಬರ್ತಿನಲ್ಲಿ ಕುಳಿತಿದ್ದ ತಮ್ಮ ದೊಡ್ಡ ಮಗನ ತಟ್ಟೆಗೆ ಈ ಎಲ್ಲಾ ಭಕ್ಷಗಳನ್ನು ದಾಟಿಸುವಾಗ, ರೈಲಿನ ತುಳುಕಾಟಕ್ಕೆ ಆ ಆಹಾರದ ಸ್ವಲ್ಪ ಭಾಗ ನೆಲಹಾಸಿಗೆ ಬೀಳುತ್ತಲಿತ್ತು. ಮೂಗಿಗೆ ಬಡಿದ ವಾಸನೆಯನ್ನು ನೆಲಹಾಸಿಗೆ ಬಿದ್ದ ಆಹಾರದೊಡನೆ ತಾಳೆ ಹಾಕಿ, ನನ್ನ ಇಂದ್ರೀಯ ಪ್ರಜ್ಞೆಯ ಬಗ್ಗೆ ನಾನೇ ಆಶ್ಚರ್ಯ ಪಡುತ್ತಿದ್ದೆ. ಅಷ್ಟು ಮಾಡದೇ, ಈ ಆವಾಂತರಕ್ಕೆಲ್ಲ ಮತ್ತೆ ಆ ಮೇಲಿನ ಪ್ರಯಾಣಿಕರೊಡನೆ ವಾದಕ್ಕಿಳಿಯುವ ಶಕ್ತಿ ನನ್ನಲ್ಲಿರಲಿಲ್ಲ. ನನ್ನೆದುರು ಕುಳಿತಿದ್ದ ಹಿರಿಯರು ಆಗಲೇ ನಿದ್ರೆಗೆ ಜಾರಿದ್ದರು.

ಮೇಲೆ ಕುಳಿತಿದ್ದ ಕುಟುಂಬದವರು ಊಟ ಮುಗಿಸಿದ ನಂತರ ಒಬ್ಬೊಬ್ಬರಾಗಿ ಕೆಳಗಿಳಿದು ಬಂದು ಕೈ ತೊಳೆಯಲು ಹೋದರು. ಆಗಲೇ ಆಹಾರವೆಲ್ಲ ಚೆಲ್ಲಿದ್ದ ನೆಲಹಾಸಿನ ಮೇಲೆ ನಡೆದು, ನೆಲಹಾಸೆಲ್ಲಾ ಗೊಬ್ಬರದ ಗುಂಡಿಯಂತಾಗಿತ್ತು. ತಮ್ಮ ಊಟದ ತರುವಾಯ ಕೈ ತೊಳೆದು ಮೇಲೆ ಕುಳಿವರು, ಮುಂದಿನ ಒಂದು ಗಂಟೆಯಲ್ಲಿ ರೈಲಿನಲ್ಲಿ ಮಾರಲು ಬಂದ ತಿನಿಸುಗಳೆಲ್ಲವನ್ನು ಒಂದೂ ಬಿಡದಂತೆ ಕೊಂಡು ತಿಂದರು. ಮಂಡಕ್ಕಿ, ಮಸಾಲೆ ವಡೆ, ಆಲೂಗಡ್ಡೆ ಚಿಪ್ಸ, ಪೇರಲ ಹಣ್ಣು, ಹುರಿದ ಶೇಂಗಾ, ಒಂದೇ ಎರಡೇ..? ಮೊದಲೇ ತಿಪ್ಪೆಯಂತಾಗಿದ್ದ ನೆಲಹಾಸು ತನ್ನ ಮೈಮೇಲೆ ಬಿದ್ದ ಈ ಹೊಸ ಆಹಾರ ಪದಾರ್ಥಗಳನ್ನು, ಯಾವ ಸದ್ದೂ ಮಾಡದಂತೆ ತನ್ನ ಒಡಲೊಳಗೆ ಹಾಕಿಕೊಂಡಿತು. ಎಲ್ಲಕ್ಕಿಂತ ಮೇಲೆ ಬಿದ್ದಿದ್ದ ಹುರಿದ ಶೇಂಗಾ ಸಿಪ್ಪೆ, ಕೇಕಿನ ಮೇಲೆ ಹಾಕಿದ ಡ್ರೆಸ್ಸಿಂಗ್ ನಂತಾಗಿತ್ತು.

ಇದನ್ನೆಲ್ಲಾ ನೋಡುತ್ತಿದ್ದ ನನಗೆ, ಪಾಪು ಈ ಹೊತ್ತಿನಲ್ಲಿ ಮಲಗಿದ್ದು ನಿಜಕ್ಕೂ ಅದೃಷ್ಟವೆಂದೇ ತೋರಿತು. ಮೊದಲೇ ಅವಳು ಸ್ವಭಾವತಃ ತುಂಬಾ ಅಚ್ಚುಕಟ್ಟು. ಸ್ವಚ್ಛತೆಯ ಬಗ್ಗೆ ಅವಳಿಗೆ ಯಾವಾಗಲೂ ಗಮನ. ಬೋಗಿಯ ಈ ದುರಾವಸ್ಥೆಯನ್ನು ನೋಡಿದ್ದರೆ, ಅವಳು ಹೇಗೆ ಪ್ರತಿಕ್ರಿಸುತ್ತಿದ್ದಳೋ, ಊಹಿಸುವುದೂ ಕಷ್ಟ…

ಇಷ್ಟೆಲ್ಲಾ ಆಗುವ ಹೊತ್ತಿಗೆ ರೈಲು ಅರಸೀಕೆರೆಯ ಸಮೀಪ ಬಂದಿತ್ತು. ಮೇಲೆ ಕುಳಿತಿದ್ದ ಕುಟುಂಬದ ರಸದೌತಣ ಇನ್ನೂ ಪೂರ್ಣವಾಗಿ ಮುಗಿದಂತಿರಲಿಲ್ಲ. ಚಹಾ ಮಾರಲು ಬಂದವನೊಡನೆ ವ್ಯಾಪಾರಕ್ಕಿಳಿದರು. ಐದು ಕಪ್ಪು ಚಹಾಕ್ಕೆ, ಕಪ್ಪಿಗೆ 15 ರೂಪಾಯಿಯ ಬದಲು 12 ರೂಪಾಯಿ ಮಾಡಬೇಕೆಂದು ವಾದಿಸಿ, ಕೊನೆಗೆ 15 ರೂಪಾಯಿಗೆ ಕೊಟ್ಟರೂ ಕಪ್ಪಿನ ತುಂಬಾ ಚಹಾ ಕೊಡಬೇಕೆಂದು ವ್ಯಾಪಾರ ಕುದುರಿಸಿದರು. ನಿಧಾನಕ್ಕೆ, ಭರ್ತಿ ತುಂಬಿದ್ದ ಐದು ಚಹಾ ಕಪ್ಪುಗಳನ್ನು ಆ ವ್ಯಾಪಾರಿ, ಮೇಲಿನ ಬರ್ತಿನಲ್ಲಿರಿಸಿ, ದುಡ್ಡು ಜೇಬಿಗೆ ಸೇರಿಸಿ, ಮುಂದೆ ನಡೆದ. ತಾಯಿ, ಒಂದು ಭರ್ತಿ ತುಂಬಿದ ಚಹಾ ಕಪ್ಪನ್ನು, ಎದುರಿಗಿನ ಬರ್ತಿನಲ್ಲಿ ಕುಳಿತಿದ್ದ ಮಗನಿಗೆ ಸಾಗಿಸುವ ಪ್ರಯತ್ನದಲ್ಲಿದ್ದಾಗ, ಕಪ್ಪು ತಾಯಿಯ ಕೈತಪ್ಪಿ, ತನ್ನ ಕಾಲು ಚಾಚಿಕೊಂಡು ಮಲಗಿ ಗಾಢ ನಿದ್ರೆಯಲ್ಲಿದ್ದ ಪಾಪುವಿನ ಎಡಗಾಲಿನ ಮೇಲೆ ಬಿತ್ತು. ಆ ಬಿಸಿ ಬಿಸಿ ಚಹಾ ಕಾಲಿಗೆ ರಾಚಿದದ್ದೇ ಪಾಪು ಚಿಳ್ ಎಂದು ಚೀರಿ ನಿದ್ರೆಯಿಂದ ಎದ್ದು ಕುಳಿತಳು. ಒಂದೆರಡು ಕ್ಷಣದಲ್ಲಿ ಕಾಲಿನ ಚರ್ಮ ಕೆಂಪಾಗಿ, ಮತ್ತೆ ಕೆಲವು ಕ್ಷಣಗಳಲ್ಲಿ ಬೊಬ್ಬೆಗಳೆದ್ದು, ಪಾಪು ಜೋರಾಗಿ ಅಳತೊಡಗಿದಳು. ನಿದ್ರೆಗೆ ಜಾರಿದ್ದ ಇತರೆ ಪ್ರಯಾಣಿಕರು ಪಾಪುವಿನ ಕೇಕೆಯಿಂದ ಎಚ್ಚರಗೊಂಡರು.

ನನ್ನ ತಾಳ್ಮೆ ಆಗಲೇ ಸಹನೆಯ ಗಡಿಯನ್ನು ದಾಟಿಯಾಗಿತ್ತು. ಪಾಪುವನ್ನು ಎದುರಿಗಿದ್ದ ಹಿರಿಯರ ಬಳಿ ಕೂಡಿಸಿ ನಾನು ಕುಳಿತಿದ್ದ ಸೀಟಿನ ಮೇಲೆ ಹತ್ತಿ, ಮೇಲಿನ ಬರ್ತಿನಲ್ಲಿ ಕುಳಿತಿದ್ದವನ ಅಂಗಿಯ ಕೊರಳ ಪಟ್ಟಿಯನ್ನು ಹಿಡಿದೆಳೆದು ಜೋರಾಗಿ ಚೀರಿದೆ, ” ನೀವೇನು ಮನುಷ್ಯರೇನು..? ರಿಸರ್ವೇಶನ್ ಇಲ್ದೆ ಬಂದು ರಿಸರ್ವೇಶನ್ ಬೋಗಿಯಲ್ಲಿ ಕೂತಿದ್ದೀರಾ… ಇರ್ಲಿ ಹೋಗ್ಲಿ ಅಂತ ಅಡ್ಜಸ್ಟ್ ಮಾಡ್ಕೊಂಡು ಕೂತ್ರೆ, ಒಂದೆರಡು ಗಂಟೆಯಲ್ಲೇ ಕೂತಿರೋ ಜಾಗನ ಗೊಬ್ಬರದ ಗುಂಡಿ ಮಾಡಿದ್ದೀರಾ… ಎಲ್ಲರೂ ಸುಮ್ನೆ ಇದ್ದಾರೆ ಅಂತ ನೀವು ಆಡಿದ್ದೇ ಆಟ ಆಗಿದೆ… ಇದೇನು ರೈಲು ಅನ್ಕೊಂಡಿದಿರೋ ಇಲ್ಲ ನಿಮ್ಮ ಅಡುಗೆಮನೆ ಅನ್ಕೊಂಡಿದಿರೋ..? ಸ್ವಲ್ಪನೂ ನಾಗರಿಕತೆ ಇಲ್ವೇನ್ರಿ ನಿಮಗೆ..? ” ಇನ್ನೂ ಏನೇನು ಮಾತುಗಳು ಹೊರಬಂದವು ನನ್ನ ಬಾಯಿಂದ…

ನಾನು ಕೊರಳಪಟ್ಟಿ ಹಿಡಿದಿದ್ದರಿಂದ ಆ ವ್ಯಕ್ತಿ ಸ್ವಲ್ಪ ವಿಚಲಿತನಾದಂತಿದ್ದ. ಅವನ ಹೆಂಡತಿ ನಾನು ಕೊರಳು ಪಟ್ಟಿ ಹಿಡಿದಿದ್ದ ಕೈಯನ್ನು ಬಲವಾಗಿ ಹಿಡಿದು ನನ್ನನ್ನು ಹಿಂದಕ್ಕೆ ತಳ್ಳಿದಳು. ಸಂಪೂರ್ಣ ಸಮತೋಲನವಿಲ್ಲದೆ, ತುದಿಗಾಲಿನ ಮೇಲೆ, ಸೀಟಿನ ಅಂಚಿನಲ್ಲಿ ನಿಂತಿದ್ದ ನಾನು, ಆಕೆ ತಳ್ಳಿದ ರಭಸಕ್ಕೆ ಆಯತಪ್ಪಿ ಕೆಳಕ್ಕೆ ಉರುಳಿದೆ. ಮೊದಲೇ ನೆಲಹಾಸಿನ ಮೇಲಿದ್ದ ಆಹಾರದ ರಾಡಿಯಲ್ಲ ನನ್ನ ಪ್ಯಾಂಟು-ಅಂಗಿಗೆ ಮೆತ್ತಿ ಕೊಂಡಿತು. ಈಗಾಗಲೇ ವಿಪರೀತ ಕೋಪದಲ್ಲಿದ್ದ ನನಗೆ, ಇದು ಮತ್ತಷ್ಟು ಅವಮಾನಕರ ಎನಿಸಿತು. ನಾನು ಮೇಲೆ ಏಳುವ ಮೊದಲೇ, ನನ್ನೆದುರು ಸೀಟಿನಲ್ಲಿ ಕುಳಿತಿದ್ದ ಇನ್ನೊಬ್ಬ ದೃಢಕಾಯದ ಮೈಕಟ್ಟಿನ ಮಧ್ಯ ವಯಸ್ಕನೊಬ್ಬ ಎದ್ದು ಬಂದು ನನ್ನ ಸೀಟಿನ ಮೇಲಿನ ಬರ್ತಿನಲ್ಲಿದ್ದ ವ್ಯಕ್ತಿಯನ್ನು ಎಳೆದು ಕೆಳಗಿಳಿಸಿದ. ಅವರು ತಮ್ಮೊಟ್ಟಿಗೆ ಮೇಲಕ್ಕೆ ಇಟ್ಟುಕೊಂಡಿದ್ದ ಚೀಲಗಳನ್ನು ಕೆಳಕ್ಕೆಳೆದು, ರೈಲಿನ ಬಾಗಿಲಿನ ಬಳಿ ಬಳಿ ಸರಿಸಿದ. ಅಷ್ಟರಲ್ಲಿ ರೈಲು ಅರಸೀಕೆರೆ ನಿಲ್ದಾಣವನ್ನು ತಲುಪಿತ್ತು.
“ಇನ್ನು ಹೆಚ್ಚಿಗೆ ಏನು ಮಾತಾಡ್ದೆ ಇಳಿದು ತಿಪಟೂರು ಬರೋವರೆಗೂ ಬಾಗಿಲ ಹತ್ತಿರ ಹೋಗಿ ಕೂತಿರಿ. ಇಲ್ಲ ಅಂದ್ರೆ ನಾನೇ ಮಕ್ಕಳು-ಮರಿ ಅಂತಾನೂ ನೋಡ್ದೆ ಎಲ್ಲರನ್ನೂ ಎಳೆದು ರೈಲಿನಿಂದ ಕೆಳಗಿಳಿಸ್ತೀನಿ. ನಾನೂ ಸುಮಾರು ಹೊತ್ತಿಂದ ನೋಡ್ತಿದೀನಿ, ರೈಲನ್ನ ಒಳ್ಳೆ ಫಿಶ್ ಮಾರ್ಕೆಟ್ ಮಾಡಿದ್ದೀರಾ. ನಾವು ಬಂದು ಕೂತಿರೋದು, ಅವ್ರು ರೀಸರ್ವ್ ಮಾಡಿ ಕೂತಿರೋ ಸೀಟ್ನಲ್ಲಿ ಅನ್ನೋ ಕನಿಷ್ಠ ಪರಿಜ್ಞಾನಾನು ಇಲ್ವಾ ನಿಮ್ಗೆ..? “
“ನಮ್ಮ ಜನ ಈ ರೈಲಲ್ಲಿ ಎಷ್ಟಿದ್ದಾರೆ ಅಂತ ಗೊತ್ತಿದೆಯಾ? ನೀನು ನನ್ನ ಗಂಡನ್ನ ಹೀಗೆಲ್ಲ ಎಳೆದಾಡ್ದೆ ಅಂತ ಒಂದು ಮಾತು ಹೇಳಿದ್ರೆ ನಿನ್ನ ಗತಿ ಏನಾಗುತ್ತೆ ಅಂತ ಗೊತ್ತಾ ನಿನಗೆ..? “
“ಯೋ… ಯಮ್ಮೋ… ನೀನು ಹೊರಟಿರೋ ಸಮಾವೇಶಕ್ಕೇ ನಾನೂ ಹೊರಟಿರೋದು… ನೀನು ಯಾವ ಜನಾಂಗದವಳೋ, ನಾನು ಅದೇ ಜನಾಂಗದವನು. ನೀವು ಮಾಡೋ ಕೆಟ್ಟ ಕೆಲಸಕ್ಕೆ ಯಾಕೆ ನಮ್ಮ ಸಮಾಜದ ಹೆಸರು ಹಾಳು ಮಾಡ್ತೀರಾ? ಹೆಚ್ಗೆ ಮಾತಾಡ್ದೆ ಕೆಳಗಿಳಿದ್ರೆ ಸರೀ… ” ಆ ಮಧ್ಯ ವಯಸ್ಕನ ಮಾತಿನಲ್ಲಿ ಕಾಠಿಣ್ಯವಿತ್ತು. ಮೇಲಿದ್ದವರು ಹೆಚ್ಚು ಮಾತಾಡದೆ ಕೆಳಗಿಳಿದರು.

ಆ ಮಧ್ಯ ವಯಸ್ಕನೇ ಕೆಳಕ್ಕೆ ಇಳಿದು ಹೋಗಿ ರೈಲು ಸ್ವಚ್ಛ ಮಾಡುವವರನ್ನು ಕರೆತಂದು, ನೆಲಹಾಸನೆಲ್ಲ ಸ್ವಚ್ಛವಾಗಿಸಿ, ಕೆಲಸಗಾರರ ಕೈಗೆ ರೂ.50 ಇತ್ತು ಕಳಿಸಿದ. ನಂತರ ನನ್ನತ್ರ ತಿರುಗಿ “ನೀವು ಬಟ್ಟೆ ತಂದಿದ್ರೆ ದಯವಿಟ್ಟು ಹೋಗಿ ಬಟ್ಟೆ ಬದಲಾಯಿಸಿಕೊಂಡು ಬನ್ನಿ. ನಮ್ಮ ಜನರಿಂದ ಆದ ತೊಂದರೆಗೆ ನಾನು ಕ್ಷಮೆ ಕೇಳುತ್ತೇನೆ. ನೀವು ಬಟ್ಟೆ ಬದಲಿಸಿ ಕೊಂಡು ಬನ್ನಿ, ಅಷ್ಟರಲ್ಲಿ ನಿಮ್ಮ ಮಗುವಿನ ಯೋಗಕ್ಷೇಮ ನಾನು ನೋಡಿಕೊಳ್ಳುತ್ತೇನೆ…” ಎಂದು ಹೇಳಿದ.

ಈ ಎಲ್ಲಾ ಗದ್ದಲದಲ್ಲಿ ನನಗೆ ಪಾಪುವಿನ ಗಾಯದ ಬಗ್ಗೆ ಮರೆತೇ ಹೋಗಿತ್ತು. ಹಿರಿಯರ ಕಾಲ ಮೇಲೆ ಕೂತು ಪಾಪು ಇನ್ನೂ ಬಿಕ್ಕಿಸುತ್ತಲೇ ಇದ್ದಳು. ಎಡಗಾಲಿನ ಮೊಣಕಾಲು ಮತ್ತು ಪಾದದ ಒಳಮದ್ಯ ಭಾಗವೆಲ್ಲ ಕೆಂಪಡರಿತ್ತು. ಚಹಾದ ಬಿಸಿಗೆ ಮೂರು ನಾಲ್ಕು ಬೊಬ್ಬೆಗಳು ಎದ್ದಿದ್ದವು. ಈ ಎಲ್ಲ ಜಗಳಗಳ ಮಧ್ಯೆಯೇ ನನ್ನೆದುರು ಕುಳಿತಿದ್ದ ಹಿರಿಯರು ಅವಳ ಸುಟ್ಟ ಗಾಯಕ್ಕೆ ತಮ್ಮ ಬಳಿ ಇದ್ದ ಮುಲಾಮು ಮೆತ್ತಿದ್ದರು.
“ಬಹಳ ನೋವಾಯ್ತ..? ಪಾಪು…” ಕೇಳುತ್ತಲೇ ನನ್ನ ಕಣ್ಣುಗಳು ಹನಿಗೂಡಿದವು.
“ಈಗ ಇಲ್ಲಪ್ಪ… ತಾತ ಔಷಧಿ ಹಚ್ಚಿದ ಮೇಲೆ ಸ್ವಲ್ಪ ತಣ್ಣಗಾಗಿದೆ. ಅಲ್ಲಪ್ಪ, ಆ ಆಂಟಿ ಯಾಕೆ ನಿನ್ನನ್ನ ಕೆಳಗೆ ಬೀಳೋ ತರ ತಳ್ಳಿದ್ರು..?” ಪಾಪುವಿಗೆ ತನ್ನ ಗಾಯದ ನೋವಿಗಿಂತ, ನಾನು ಪಾತ್ರಧಾರಿ ಆಗಿದ್ದ ಜಗಳ ಹೆಚ್ಚು ಆಘಾತ ಮಾಡಿದಂತಿತ್ತು.
“ಅದೇನು ಇಲ್ಲ ಪಾಪು. ಅದರ ಬಗ್ಗೆ ನೀನೇನು ತಲೆಕೆಡಿಸಿಕೊಳ್ಳಬೇಡ.”
“ನೀವು ಹೋಗಿ ಮೊದಲು ಬಟ್ಟೆ ಚೇಂಜ್ ಮಾಡಿಕೊಂಡು ಬನ್ನಿ…” ಆ ಮಧ್ಯ ವಯಸ್ಕರ ಒತ್ತಾಯಕ್ಕೆ, ಬ್ಯಾಗನ್ನು ತೆಗೆದುಕೊಂಡು ಹೋಗಿ, ರೈಲು ಡಬ್ಬಿಯ ಕೊನೆಯಲ್ಲಿದ್ದ ಬಾಗಿಲಿಗೆ ಆತು ನಿಂತು ಬಟ್ಟೆ ಬದಲಿಸಿ ಕೊಂಡು ಬಂದೆ…

…….. 3……..

ತಿಪಟೂರು ನಿಲ್ದಾಣ ಬಂತು. ನಮ್ಮ ಬೋಗಿಯಲ್ಲಿದ್ದ ಹೆಚ್ಚುವರಿ ಪ್ರಯಾಣಿಕರೆಲ್ಲ ಇಳಿದು ಹೋಗಿ, ಮತ್ತೆ ರಿಸೆರ್ವಶನ್ ಬೋಗಿ ಎಂಬ ಭಾವನೆ ಮರಳಿ ಬಂತು. ನಾವು ಕುಳಿತಿದ್ದ ಕಡೆ ಹೊಸ ಕುಟುಂಬದ ಆಗಮನವಾಯಿತು. ಗಂಡ, ಹೆಂಡತಿ, ಇಬ್ಬರು ಹೆಣ್ಣುಮಕ್ಕಳು. ಒಬ್ಬಳಿಗೆ 10 ವರ್ಷವಿರಬೇಕು, ಇನ್ನೊಬ್ಬಳು 7 ವರ್ಷದವಳಿದ್ದಾಳು…

ಪಾಪು ಮತ್ತೆ ಕಿಟಕಿಯ ಬಳಿ ಬಂದು ಕೂತಳು. ಎದುರಿಗಿನ ಹಿರಿಯರು ಹಚ್ಚಿದ ಔಷಧಿ ಕೆಲಸ ಮಾಡಿತ್ತೆಂದು ತೋರುತ್ತದೆ. ಪಾಪುವಿನ ಅಳು ಸಂಪೂರ್ಣ ನಿಂತಿತ್ತು. ಆದರೆ ತುಂಬಾ ದಣಿದಂತೆ ಇದ್ದಳು. ಆ ದಣಿವು ದೈಹಿಕವು ಹೌದು, ಮಾನಸಿಕವೂ ಹೌದು. ಆಗಲೇ ಸಮಯ ಮಧ್ಯಾಹ್ನ 3:00 ಆಗುತ್ತಲಿತ್ತು.

ಎದುರಿಗಿನ ಹಿರಿಯರು ತಮ್ಮ ಊಟದ ಡಬ್ಬಿಯನ್ನು ಬಿಚ್ಚುತ್ತಾ ಕೇಳಿದರು “ಆಗಲೇ ತುಂಬಾ ಸಮಯವಾಯಿತು… ಊಟ ಮಾಡಲ್ವೇ..? ಪಾಪ ಮಗುವಿಗೂ ಆಯಾಸವಾಗಿದೆ. ಹೊಟ್ಟೆ ಹಸಿದಿರ್ಬೇಕು… ಅವಳಿಗೂ ಸ್ವಲ್ಪ ಊಟ ಮಾಡ್ಸಿ, ನೀವೂ ಊಟ ಮಾಡಿ…”

ನನಗೆ ಸಮಯ ಮತ್ತು ಹಸಿವೆಯ ಬಗ್ಗೆ ಧ್ಯಾನವೇ ಹೋಗಿರಲಿಲ್ಲ.
“ಪಾಪು… ಹಸಿವಾಗಿಲ್ವೆ ನಿನಗೆ..? ಒಂದು ಚಪಾತಿ ತಿಂದು, ಸ್ವಲ್ಪ ಹಣ್ಣು ತಿನ್ನು…” ಮತ್ತೆ ಮಲಗುತ್ತಿದ್ದವಳನ್ನು ಎಬ್ಬಿಸಿ ಹೇಳಿದೆ.
“ಇಲ್ಲಪ್ಪ, ನನಗೇನೂ ಬೇಡ…”
“ಅಯ್ಯೋ..! ಬೇಡ ಅಂದ್ರೆ ಹೇಗಮ್ಮ..? ಬೆಳಗ್ಗೆ ತಿಂಡಿ ತಿಂದವಳು ಮತ್ತೇನೂ ತಿಂದಿಲ್ಲ… ನಾನೇ ತಿನ್ನಿಸ್ತೀನಿ ಇರು, ಕೈ ತೊಳೆದು ಬರ್ತೀನಿ…”

ತುಂಬಾ ಹಸಿವಾಗಿರಬೇಕು… ಏನೂ ಬೇಡ ಅಂದವಳು, ಒಂದುವರೆ ಚಪಾತಿ ತಿಂದು, ಒಂದು ಬಾಳೆಹಣ್ಣು ತಿಂದಳು.

ಬಾಳೆಹಣ್ಣಿನ ಸಿಪ್ಪೆಗಳನ್ನ ಕಿಟಕಿಯಿಂದ ಆಚೆ ಎಸೆಯುತ್ತಿದ್ದ ನನ್ನ ಕೈಯನ್ನು ಹಿಡಿದು ತಡೆದು, “ಎಷ್ಟು ಸಾರಿ ಹೇಳಿದ್ದೀನಪ್ಪ ನಾನು, ಏನನ್ನೇ ಆದ್ರೂ ಆಚೆ ಎಸೆಯಬಾರದು ಅಂತ… ನೀನು, ಅಮ್ಮ, ನನ್ನ ಮಾತೇ ಕೇಳಲ್ಲ… ದಿಸ್ ಇಸ್ ರಿಯಲಿ ಬ್ಯಾಡ್ ಬಿಹೇವಿಯರ್…” ಅಂತ ಹೇಳುತ್ತಾ, ಬ್ಯಾಗಿನಲ್ಲಿದ್ದ ಒಂದು ಪ್ಲಾಸ್ಟಿಕ್ ಚೀಲವನ್ನು ಹೊರ ತೆಗೆದು, ಹಣ್ಣಿನ ಸಿಪ್ಪೆಯನ್ನು ಅದರಲ್ಲಿ ಹಾಕಿ, ಮತ್ತೆ ಆ ಪ್ಲಾಸ್ಟಿಕ್ ಚೀಲವನ್ನು ಬ್ಯಾಗಿನಲ್ಲಿ ಇರಿಸಿದಳು.
“ಯಾರಮ್ಮ ನಿನ್ಗೆ ಇಷ್ಟೆಲ್ಲ ಗುಡ್ ಮ್ಯಾನರ್ಸ್ ಹೇಳಿಕೊಟ್ಟಿರೋದು..?” ಎದುರುಗಡೆ, ತಿಪಟೂರಿನಲ್ಲಿ ಬಂದು ಕುಳಿತ ಕುಟುಂಬದ ಮಹಿಳೆ ಪಾಪುವನ್ನು ಕೇಳಿದರು.
“ನಮ್ಮ ಮ್ಯಾಮ್” ಪಾಪು ಬಹು ಹೆಮ್ಮೆಯಿಂದ ಹೇಳಿದಳು.
“ವೆರಿ ನೈಸ್… ಅಯ್ಯೋ… ಕಾಲಿಗೆ ಏನು ಮಾಡಿಕೊಂಡಿದ್ದೀಯ..? ಏನಾಯ್ತು..?” ಮಹಿಳೆಯ ದೃಷ್ಟಿ ಕೆಂಪಗಾಗಿ, ಬೊಬ್ಬೆ ಬಂದಿದ್ದ ಪಾಪುವಿನ ಕಾಲಿನ ಕಡೆ ಹೋಯಿತು.

ನಾನು ಮತ್ತು ನನ್ನೆದುರಿಗಿನ ಹಿರಿಯರು ಸೇರಿ ದಾವಣಗೆರೆಯಿಂದ ಅರಸೀಕೆರೆಯವರೆಗೆ ನಡೆದ ಪ್ರಯಾಣದ ಕಹಿ ವೃತ್ತಾಂತವನಲ್ಲ ಅವರಿಗೆ ಹೇಳಿದೆವು.
“ಏನೂ ಮಾಡೋಕಾಗಲ್ಲ… ಬಹಳಷ್ಟು ಜನಕ್ಕೆ ಸಹ-ಪ್ರಯಾಣಿಕರಿಗೆ ತೊಂದರೆ ಆಗದ ರೀತಿ ನಡ್ಕೋಬೇಕು ಅನ್ನೋ ಕಾಮನ್ ಸೆನ್ಸ್ ಕೂಡ ಇರೋಲ್ಲ… ನಾವೇನಾದ್ರೂ ಹೇಳೋಕೆ ಹೋದ್ರೆ, ನಮ್ಮ ಮೇಲೆನೇ ಜೋರು ಮಾಡ್ತಾರೆ… ಈಗ 20-30 ವರ್ಷದ ಹಿಂದಕ್ಕೆ ಹೋಲಿಸಿದರೆ ನಾವು ಸ್ವಲ್ಪ ಸುಧಾರಣೆ ಕಂಡಿದ್ದೇವೆ. ಆದರೆ, ನಮ್ಮಲ್ಲಿ ಇನ್ನೂ ಕಲಿಯಬೇಕಾದದ್ದು ಬಹಳ ಇದೆ, ನಮ್ಮ ಫ್ಯಾಮಿಲಿಯನ್ನೂ ಸೇರ್ಸಿ ಈ ಮಾತು ಹೇಳ್ತಾ ಇದೀನಿ. ಇದೆಲ್ಲ ಯಾವಾಗ ಸುಧಾರಿಸುತ್ತೋ, ಆ ದೇವರೇ ಬಲ್ಲ…” ಅವರ ಪತಿಯೂ ಮಾತಿಗಿಳಿದರು.

ಮುಂದಿನ ಸ್ವಲ್ಪ ಹೊತ್ತು ಊರು, ಉದ್ಯೋಗ, ಮಕ್ಕಳು, ಪ್ರಯಾಣದ ಉದ್ದೇಶದ ಬಗ್ಗೆ ಚರ್ಚೆಗಳಾದವು.

ನಮ್ಮ ಚರ್ಚೆಯನ್ನಾಧರಿಸಿ ಎದುರಿಗೆ ಕುಳಿತಿದ್ದ ಮಹಿಳೆ ಪಾಪುವನ್ನು ಕೇಳಿದರು “ಓಹೋ… ಇದು ಮೊದಲನೇ ಸಲಾನ ನೀನು ರೈಲಲ್ಲಿ ಹೋಗ್ತಿರೋದು..? ಪಾಪ ಮೊದಲ್ನೇ ಸಲಕ್ಕೆ ಹೀಗೆ ಗಾಯ ಆಗ್ಬಿಡ್ತಲ್ಲ ನಿನಗೆ… ರೈಲಲ್ಲಿ ಕರ್ಕೊಂಡು ಬಂದಿದ್ದಕ್ಕೆ ಅಪ್ಪನ ಬೈಕೋತಿದಿಯಲ್ವಾ..?”

ಪಾಪು ಏನೂ ಹೇಳದೆ ಸುಮ್ಮನೆ ಕುಳಿತಿದ್ದಳು.

ಎದುರಿಗಿದ್ದ ಹಿರಿಯರು ಕೇಳಿದರು “ಪಾಪು… ಮೊದ್ಲು ರೈಲು ಚೆನ್ನಾಗಿದೆ, ಕಾರಿಗಿಂತ ಇದರಲ್ಲಿ ಆರಾಮಾಗಿದೆ ಅಂತ ಹೇಳಿದೆ… ಅಲ್ವಾ..? ಇವಾಗ್ಲೂ ಹಾಗೆ ಅನಿಸುತ್ತಾ..?”
ಪಾಪು ಉತ್ತರಿಸುವ ಗೋಜಿಗೆ ಹೋಗಲಿಲ್ಲ…
“ಅದು ಇರಲಿ ನಿನ್ಗೆ ಮೈಸೂರು ಇಷ್ಟಾನಾ? ಇಲ್ಲ ಹಾವೇರಿ ಇಷ್ಟಾನೋ..?” ಎದುರಿಗಿನ ಮಹಿಳೆ ಮತ್ತೆ ಪಾಪುವನ್ನು ಕೇಳಿದರು…
“ಹಾವೇರಿ…”
“ಯಾಕೆ..?”
“ಯಾಕೆ ಅಂದ್ರೆ, ಅಲ್ಲಿ ತಾತ ಅಜ್ಜಿ ಇರ್ತಾರೆ. ಪ್ರತಿದಿನ ಆಟ ಆಡೋಕೆ ಪಾರ್ಕಿಗೆ ಕರ್ಕೊಂಡ್ ಹೋಗ್ತಾರೆ. ಚೆಂದ ಚೆಂದ ಆಟದ ಸಾಮಾನೂ ಕೊಡುಸ್ತಾರೆ. ರಾತ್ರಿ ಮಲಗುವಾಗ ಚಂದದ ಕಥೆ ಹೇಳ್ತಾರೆ. ಯಾವತ್ತೂ ಬೈಯೋದಿಲ್ಲ ನನಗೆ ಅವರು. ಮೈಸೂರಲ್ಲಿ ಆದರೆ ನಾನು ಓದೋಲ್ಲ ಅಂತ ಅಮ್ಮ ಬೈತಾಳೆ… ಒಂದೊಂದು ಸಲ ಏಟೂ ಕೊಡ್ತಾಳೆ…”
“ಓಹೋ… ಕಥೆ ಕೇಳೋಕೆ ಇಷ್ಟನಾ ನಿನಗೆ..? “
“ತುಂಬಾನೇ ಇಷ್ಟ… ನನ್ನ ತಾತ ತುಂಬಾ ಚೆನ್ನಾಗಿ ಕಥೆ ಹೇಳ್ತಾರೆ… ನನ್ನ ಅಪ್ಪ ಅಮ್ಮನೂ ಹೇಳ್ತಾರೆ, ಆದರೆ ತಾತನಷ್ಟು ಚೆನ್ನಾಗಿ ಕಥೆ ಹೇಳೋಕೆ ಬರಲ್ಲ… “
“ಅಕ್ಕನ ಹತ್ರ ತುಂಬಾ ಕಥೆ ಪುಸ್ತಕ ಇದೆ… ಅವಳು ಚೆನ್ನಾಗಿ ಕಥೆ ಹೇಳ್ತಾಳೆ. ಬಾ ಇಲ್ಲಿ ಅಕ್ಕನ ಹತ್ರ… “

ಪಾಪುವನ್ನು ಕರೆದುಕೊಂಡು ತಮ್ಮ ದೊಡ್ಡ ಮಗಳ ಪಕ್ಕದಲ್ಲಿ ಕೂಡಿಸಿದರು. ಅವರಮ್ಮ ಹೇಳಿದಂತೆ ಮಗಳು ತುಂಬಾ ಸುಂದರವಾಗಿ ಕಣ್ಣಿಗೆ ಕಟ್ಟುವಂತೆ ಕೈಸನ್ನೇ, ಬಾಯ್ಸನ್ನೆ, ಕಣ್ಸನ್ನೆಗಳೊಡನೆ ಕಥೆಗಳನ್ನು ಹೇಳುತ್ತಿದ್ದಳು. ತನ್ನ ಬಳಿ ಇದ್ದ ಕಾಮಿಕ್ಸ್ ಪುಸ್ತಕಗಳನ್ನ ಒಂದೊಂದಾಗಿ ತೆರೆದು, ಪ್ರತಿಯೊಂದು ಚಿತ್ರವನ್ನು ರಸವತ್ತಾಗಿ ಬಣ್ಣಿಸುತ್ತ, ಕಥೆ ಹೇಳುವ ರೀತಿಗೆ ಪಾಪು ಬಹುಬೇಗನೆ ಮನಸೋತಳು… ಅವಳು ಈ ಮೊದಲು ಹೊಸಬರೊಡನೆ ಇಷ್ಟು ಬೇಗ ಬೆರತದ್ದೇ ಇಲ್ಲ…

ಮುಂದಿನ ಮೂರ್ನಾಲ್ಕು ಗಂಟೆಗಳು ಬಹಳ ಸಲೀಸಾಗಿ ಕಳೆದವು. ಕಥೆ, ಆಟ, ಮೊಬೈಲ್ ಗೇಮ್ಸ್, ಕುರುಕಲು ತಿಂಡಿ… ಪಾಪುವಿಗೆ ಸಮಯ ಸರಿದಿದ್ದೇ ಗೊತ್ತಾಗಲಿಲ್ಲ. ಆ ಇಬ್ಬರೂ ಮಕ್ಕಳು ಪಾಪುವಿಗೆ ಬಹಳ ದಿನಗಳಿಂದ ಪರಿಚಯವೇನೋ ಎನ್ನುವ ಮಟ್ಟಿಗೆ ಅವರೊಡನೆ ಬೆರೆತಿದ್ದಳು. ತನ್ನ ಕಾಲಿಗೆ ಆದ ಗಾಯವನ್ನಂತೂ ಸಂಪೂರ್ಣವಾಗಿ ಮರೆತಂತಿದ್ದಳು.

ಸಮಯ ಸಂಜೆ ಸುಮಾರು 8 ಗಂಟೆ 5 ನಿಮಿಷ. ಸುಮಾರು 9 ಗಂಟೆಗಳ ಸುಧೀರ್ಘ ಪ್ರಯಾಣದ ನಂತರ, ರೈಲು ನಮ್ಮನ್ನು ಮೈಸೂರಿಗೆ ತಲುಪಿಸಿತ್ತು. ಪಾಪು, ಇಬ್ಬರು ಅಕ್ಕಂದಿರೊಂದಿಗೆ ಹಾವು ಏಣಿ ಆಡುತ್ತಿದ್ದಳು.
“ಎಲ್ಲರೂ ಏಳಿ, ಮೈಸೂರು ಬಂತು… ಪಾಪು, ನಿನ್ನ ಶೂ ಹಾಕೋ ಬಾ…” ನಾನು ಸೀಟಿನಿಂದ ಮೇಲೆ ಏಳುತ್ತಾ ಎಲ್ಲರಿಗೂ ಹೇಳಿದೆ…
“ಇನ್ನ ಐದು ನಿಮಿಷ ತಡಿಯಪ್ಪ… ಆಟ ಅರ್ಧ ಆಗಿದೆ…” ಪಾಪು ಹೇಳಿದಳು.
“ಅಯ್ಯೋ… ಊರು ಬಂತಮ್ಮ… ನಾವು ತಡಿತೀವಿ ಅಂದ್ರೂ ರೈಲಿನವರು ನಮ್ಮನ್ನು ಕೆಳಗಿಳಿಸುತ್ತಾರೆ… ಬೇಗ ಶೂ ಹಾಕೋ ಬಾ…”
“ಅಪ್ಪಾ… ನಂಗೆ ಕಾಲಿಗೆ ಗಾಯ ಆಗಿಲ್ವಾ..? ಶೂ ಹೇಗೆ ಹಾಕೊಳ್ಳೋಕೆ ಆಗುತ್ತೆ…?”
“ಪಾಪು… ನಿನಗೆ ಗಾಯ ಆಗಿರೋದು ಪಾದದ ಭಾಗದಿಂದ ಮೇಲಕ್ಕೆ, ಅಲ್ವೇನೇ..?” ಎದುರಿಗಿದ್ದ ಹಿರಿಯರು ಹೇಳಿದರು.
“ಇಲ್ಲ ತಾತ.. ಅಂದ್ರು ಶೂ ಹಾಕೋಕೆ ಆಗೋಲ್ಲ… ನೋವಾಗುತ್ತೆ…”
“ಆಯ್ತು ಬಿಡು, ಬ್ಯಾಗಲ್ಲಿ ಚಪ್ಪಲ್ ಇದೆ ತೆಗೆದು ಕೊಡ್ತೀನಿ, ಅದನ್ನೇ ಹಾಕಿಕೋ…” ಪಾಪುವಿಗೆ ಚಪ್ಪಲ್ ಹಾಕಿಸಿ ಬ್ಯಾಗ್ ಗಳನ್ನು ತೆಗೆದುಕೊಂಡು ರೈಲಿನಿಂದ ಕೆಳಗಿಳಿದೆ…

ರೈಲಿನಲ್ಲಿ ಎದುರಿಗಿದ್ದ ಕುಟುಂಬದವರು ಮತ್ತೊಮ್ಮೆ ಪಾಪುವನ್ನು ಅಕ್ಕರೆಯಿಂದ ಮಾತನಾಡಿಸಿ, ನಮ್ಮ ಮನೆಯ ವಿಳಾಸವನ್ನು ಪಡೆದು, ತಮ್ಮ ಮನೆಯ ವಿಳಾಸವನ್ನು ಹಂಚಿಕೊಂಡರು. ಮುಂದಿನ ಭಾನುವಾರ ನಮ್ಮ ಮನೆಗೆ ಕಾರು ಕಳಿಸುವುದಾಗಿಯೂ, ಪಾಪುವನ್ನು ಅಕ್ಕಂದಿರ ಜೊತೆ ಆಡಲು ಮನೆಗೆ ಕಳಿಸಬೇಕೆಂದು ಕೇಳಿದರು. ನನ್ನ ಹೆಂಡತಿ ಮೈಸೂರಿಗೆ ಮರಳಿದ ನಂತರ, ತಾವು ಕುಟುಂಬ ಸಮೇತರಾಗಿ ನಮ್ಮ ಚಿಕ್ಕ ಮಗುವನ್ನೂ, ಅದರ ತಾಯಿಯನ್ನು, ಮಾತನಾಡಿಸಲು ಬರುವುದಾಗಿ ತಿಳಿಸಿ ನಮ್ಮನ್ನ ಬೀಳ್ಕೊಟ್ಟರು…

ನಮ್ಮ ಮನೆ ಮತ್ತು ರೈಲಿನಲ್ಲಿ ನನ್ನೆದುರು ಕುಳಿತಿದ್ದ ಹಿರಿಯರ ಮನೆ ಎರಡೂ ಕುವೆಂಪು ನಗರದಲ್ಲಿಯೇ ಇದ್ದುದರಿಂದ, ಒಂದೇ ಟ್ಯಾಕ್ಸಿಯನ್ನು ಬಾಡಿಗೆ ಪಡೆದು ಮೂವರು ಅದರಲ್ಲಿ ಹೊರಟೆವು…
“ಪಾಪು… ಈಗ ಹೇಳು… ನಿನಗೆ ರೈಲು ಇಷ್ಟಾನೋ..? ಕಾರು ಇಷ್ಟಾನೋ..?” ಹಿರಿಯರು ಟ್ಯಾಕ್ಸಿಯಲ್ಲಿ ಪಾಪುವನ್ನು ಮತ್ತೆ ಮಾತಿಗೆಳೆದರು.
“ನನ್ಗೆ ಎರಡೂ ಇಷ್ಟ ತಾತಾ…”
“ಹಾಗಲ್ಲ… ಎರಡರಲ್ಲಿ ಒಂದು ಆರಿಸುವುದಾದರೆ ಯಾವುದು ಇಷ್ಟ..?”
“ಕಾರಲ್ಲಿ ತುಂಬಾ ಬೋರಾಗುತ್ತೆ… ರೈಲಲ್ಲಿ ಮಜವಾಗಿತ್ತು… ಇಬ್ಬರೂ ಅಕ್ಕಂದಿರು ಎಷ್ಟು ಚೆನ್ನಾಗಿ ಆಟ ಆಡಿದ್ರು ನನ್ ಜೊತೆ.!?”
“ಮತ್ತೆ.? ನಿನ್ನ ಕಾಲಿಗೆ ಗಾಯ ಆಯ್ತಲ್ಲಾ, ನೋವಾಗ್ಲಿಲ್ವಾ..?”
“ಹೌದು… ಅಪ್ಪ ಮೇಲೆ ಕುಳಿತವರ ಜೊತೆ ಜಗಳ ಮಾಡುವಾಗ ತುಂಬಾ ಭಯ ಆಯ್ತು ನನ್ಗೆ… ಕಾಲಿಗೆ ಗಾಯ ಆದಾಗ ನೋವೂ ಆಯ್ತು… ಆದರೆ ಈಗ ನೋವು ಕಡಿಮೆಯಾಗಿದೆ… ಪರವಾಗಿಲ್ಲ ತಾತಾ…”

ನನ್ನ ಬಳಿ ತಿರುಗಿ ಮೆಲ್ಲನೆ ದನಿಯಲ್ಲಿ ಹೇಳಿದಳು “ಅಪ್ಪ… ಅಮ್ಮನ ಹತ್ರ ನನ್ನ ಕಾಲಿಗೆ ಗಾಯ ಆಗಿದೆ ಅಂತ ಹೇಳ್ಬೇಡ… ನನ್ನನ್ನ ಮತ್ತೆ ಯಾವತ್ತೂ ರೈಲು ಹತ್ತೋಕೆ ಬಿಡಲ್ಲ ಅಮ್ಮ…”

ನಮ್ಮ ಜೊತೆಗಿನ ಹಿರಿಯರು ನಗುತ್ತಾ ಹೇಳಿದರು “ನೋಡಿದ್ರಾ..! ಅದಕ್ಕೆ ಹೇಳುವುದು ಮಕ್ಕಳು ದೇವರ ಸಮಾನ ಅಂತ… ಅವಳಿಗೆ ರೈಲಿನಲ್ಲಿ ಸುಮಾರು ಸಮಯ ಆ ಜನಜಂಗುಳಿ, ಚೀರಾಟ, ಜಗಳವನ್ನು ಕಂಡು ತುಂಬಾ ಭಯವಾಗಿತ್ತು. ಚಹಾ ಚೆಲ್ಲಿ ಆದ ಗಾಯದ ನೋವು ಬಹಳವೇ ಆಗಿರಬೇಕು… ಆದರೂ ಅವಳ ಮನಸ್ಸಿನಲ್ಲಿ ಆ ಕಹಿ ನೆನಪು ಉಳಿದಿಲ್ಲ… ಅವಳಿಗೆ ನೆನಪಿನಲ್ಲಿರುವುದು ಆ ಇಬ್ಬರು ಮಕ್ಕಳ ಜೊತೆ ಆಡಿದ ಆಟ, ಕೇಳಿದ ಕಥೆ, ಹಂಚಿ ತಿಂದ ತಿಂಡಿ… ಮಕ್ಕಳ ಮನಸ್ಸಿನಲ್ಲಿ-ಮೆದುಳಿನಲ್ಲಿ ಕಹಿ ನೆನಪಿಗೆ ಹೆಚ್ಚು ಜಾಗವಿಲ್ಲ. ಸಿಹಿ ನೆನಪೇ ಅವರಿಗೆ ಪ್ರಧಾನ. ಅದೇ ನಾನಾಗಲಿ, ನೀವಾಗಲಿ ಇಂದಿನ ಪ್ರಯಾಣವನ್ನು, ಇನ್ನೂ ಐದು ವರ್ಷದ ನಂತರ ನೆನಪಿಸಿಕೊಂಡರೂ, ನಮಗೆ ಮೊದಲು ನೆನಪಾಗುವುದು ಆದ ಜಗಳ, ತಳ್ಳಾಟ, ಸುಟ್ಟ ಗಾಯ, ಅದರಿಂದಾ ನೋವು… ಎಷ್ಟು ವ್ಯತ್ಯಾಸವಲ್ಲವೇ..? ಎಲ್ಲಾ ನೆನಪುಗಳು ಬೇಕು ಮನುಷ್ಯನಿಗೆ… ಯಾವ ನೆನಪಿಗೆ ಪ್ರಾಧಾನ್ಯತೆ ಕೊಡುತ್ತೇವೆ ಎನ್ನುವುದೇ ನಮ್ಮ ಸಂತೋಷ ಅಥವಾ ಅಸಂತೋಷಕ್ಕೆ ಮೂಲಾಧಾರ…”

ನಾನು ಈ ದೃಷ್ಟಿಯಲ್ಲಿ ಅಂದಿನ ಘಟನೆಗಳನ್ನು ಯೋಚಿಸಿರಲಿಲ್ಲ. ಮನೆಯ ಬಳಿ ಟ್ಯಾಕ್ಸಿ ಇಳಿಯುತ್ತಾ ಹಿರಿಯರು ಹೇಳಿದ ಮಾತುಗಳನ್ನು ಮೆಲಕು ಹಾಕುತ್ತಿದ್ದ ಮನಸ್ಸು, ಹೊಸ ಪ್ರಶ್ನೆಗಳನ್ನು ಹುಟ್ಟು ಹಾಕುತ್ತಿತ್ತು…

ಮೋಹನ ಬಣಕಾರ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x