ಕಥೆಗಾರರ ದೇಶಕಾಲವ ತೊರೆದು ಓದುಗನ ಎಲ್ಲೆ ಪ್ರವೇಶಿಸುವ ಕತೆಗಳು: ಸ್ವಾಲಿ ತೋಡಾರ್‌



ಒಂದು ಕೃತಿಗೆ ಮುಖ್ಯವಾಗಿ ಎರಡು ಗುಣಗಳಿರಬೇಕು. ಓದುಗನನ್ನು ಸೆಳೆದುಕೊಳ್ಳುವ ಆಕರ್ಷಣೆ ಮತ್ತು ಓದುಗನೊಳಗಿನ ತರ್ಕಶೀಲತೆಯನ್ನು ವಿಶಾಲಗೊಳಿಸುವ ಹೂರಣ. ಲಂಕೇಶರು ಇದನ್ನೇ ರಂಜನೆ ಮತ್ತು ಪ್ರಚೋದನೆ ಎಂದು ಕರೆದಿದ್ದಾರೆ. ಬೋಧನೆ ಎನ್ನುವುದು ಕೃತಿಕಾರನ ಪ್ರಜ್ಞೆ, ಪ್ರಬುದ್ಧತೆಯನ್ನು ಆಧರಿಸಿದ ನಂತರದ ಎತ್ತರ. ಅದು ಸಾಹಿತ್ಯ ಕೃತಿಯಾಗಿರಲಿ, ವೈಚಾರಿಕ ಹೊತ್ತಿಗೆಯಾಗಿರಲಿ ರಂಜನೆ, ಪ್ರಚೋದನೆಗಳು ತುಂಬಾ ಮುಖ್ಯ. ಇತ್ತೀಚೆಗೆ ಪ್ರಕಟವಾಗುತ್ತಿರುವ ಕೃತಿಗಳಲ್ಲಿ ‘ಎಲ್ಲೆ ತೊರೆದ  ಕಥೆಗಳು’ ಸಂಕಲನ ಅಂತಹ ಒಂದು ಕೃತಿ ಎನ್ನಬಹುದು. ಗಿರೀಶ್ ತಾಳಿಕಟ್ಟೆ ಅವರು ಕನ್ನಡಕ್ಕೆ ಅನುವಾದಿಸಿದ ಭಾರತದ ಶ್ರೇಷ್ಠ ಕಥೆಗಾರರ ಕಥೆಗಳ ಸಂಕಲನವಿದು.

ಈ ಸಂಕಲನದಲ್ಲಿರುವ ಅಷ್ಟೂ ಕಥೆಗಳು ನಿಗಿ ಕೆಂಡದಂತೆ ನಮ್ಮನ್ನು ಆವರಿಸಿಕೊಳ್ಳುತ್ತವೆ. ಬದುಕಿನ ದಾರುಣತೆ, ಸಾಂಸ್ಕೃತಿಕ ವೈಪರೀತ್ಯ, ಮೂಢನಂಬಿಕೆ, ಮನುಷ್ಯಪರ ಮಿಡಿಯುವ ಹೃದಯ ಇಲ್ಲಿರುವ ಎಲ್ಲಾ ಕಥೆಗಳ ಸ್ಥಾಯಿಭಾವ ಎನ್ನಬಹುದು. ಎಲ್ಲಾ ಕಥೆಗಳ ಕೇಂದ್ರವೂ ಮನುಷ್ಯ ಮತ್ತು ಅವನ ಬದುಕು; ಆ ಬದುಕು ಕಟ್ಟಿಕೊಡುವ ಅನುಭವಗಳ ಹಿನ್ನೆಲೆಯಲ್ಲಿ ಕಥೆಗಾರರು ಬದುಕಿನ ಆತ್ಯಂತಿಕ ಮೌಲ್ಯಗಳ ಹುಡುಕಾಟದಲ್ಲಿರುವಂತೆ ತೋರುತ್ತದೆ‌.



ಇವು ಕೇವಲ ಬದುಕಿನ ಎಲ್ಲೆಯನ್ನು ಮೀರಿದ ಕಥೆಗಳಷ್ಟೇ ಅಲ್ಲ; ದೇಶಕಾಲಗಳ ಎಲ್ಲೆಯನ್ನು ಮೀರಿ ವಿಶ್ವ ಪರ್ಯಟನೆ ಮಾಡಲು ಯೋಗ್ಯತೆ ಇರುವ ಕಥೆಗಳು; ಎಲ್ಲವನ್ನೂ ಮೀರಿ ಬದುಕನ್ನು ಕೇವಲ ಮಾನವೀಯ ಅಂತಃಕರಣದಿಂದ ಧ್ಯಾನಿಸುವ ಕಥೆಗಳು.

ಹೊರಗಿನ ಪ್ರಲೋಭನೆಗಳಿಗೆ ತಕ್ಕಂತೆ ಮನುಷ್ಯನ ಬಯಕೆಗಳು ಬೆಳೆದು ಜೇಡರ ಬಲೆಯಂತೆ ಸುತ್ತಿಕೊಂಡು ಕೊನೆಗೆ ಅವನನ್ನು ದುರಂತಕ್ಕೆ ತಳ್ಳಿಬಿಡುವುದರಿಂದ ಹಿಡಿದು ಅತ್ತ ನಗರೀಕರಣಕ್ಕೆ ಹೊಂದಿಕೊಳ್ಳಲಾಗದೆ ಇತ್ತ ಹಳೆಯ ನೆನಪುಗಳ ತೊಳಲಾಟಗಳ ತಳಮಳದಿಂದ ಬಿಡುಗಡೆಯಿಲ್ಲದೆ ಒದ್ದಾಡುವ ಹಿರಿಯ ತಲೆಮಾರು, ನಗರೀಕರಣ ಪ್ರಕ್ರಿಯೆಯನ್ನು ಯಾವ ಗೊಂದಲವೂ ಇಲ್ಲದೆ ಒಪ್ಪಿಕೊಳ್ಳುವ ಕಿರಿಯ ತಲೆಮಾರು, ತಲೆಮಾರುಗಳ ಅಂತರ ಸೃಷ್ಟಿಸುವ ನಿರ್ವಾತದಿಂದಾಗಿ ಪರಸ್ಪರ ಅರ್ಥ ಮಾಡಿಕೊಳ್ಳಲಾಗದೆ ಹಿರಿಯ ಜೀವಗಳೊಂದಿಗೆ ಸಂಘರ್ಷಕ್ಕೆ ಬಿದ್ದಿರುವ ಕಿರಿಯ ತಲೆಮಾರು,  ಹಿರಿ ಕಿರಿಯ ತಲೆಮಾರುಗಳ ನಡುವಿನ ಕಂದಕ ಸಾವಿನಲ್ಲಿ ಪರ್ಯಾವಸಾನ ಕಾಣುವ ಬದುಕಿನ ಘೋರ ಚಿತ್ರಣ ಇಲ್ಲಿಯ ಬಹುತೇಕ ಕಥೆಗಳಲ್ಲಿ ಕಾಣಿಸುತ್ತವೆ.‌

ಸಂಕಲನದ ಮೊದಲ ಕಥೆ ಪೆರುಮಾಳ್ ಮುರುಗನ್ ಅವರ ಜಲಕ್ರೀಡೆ ಕಥೆ. ಮನುಷ್ಯ ಹೇಗೆ ಬಯಕೆಗಳ ವಶವಾಗುತ್ತಾನೆ ಎನ್ನುವುದನ್ನು ರೂಪಕಗಳ‌ ಮೂಲಕ ವಿಶಿಷ್ಟವಾಗಿ ಹೇಳುವ ಕಥೆ.



ಈ ಸಂಕಲನದಲ್ಲಿ ನನ್ನನ್ನು ತುಂಬಾ ಕಾಡಿದ ಕಥೆ ಆ ಪತ್ರ. ಈ ಕಥೆ ಮನುಷ್ಯ ಸಂಬಂಧದ ಹೃದಯವಿದ್ರಾವಕ ಅನುಭವವನ್ನು ಆಳವಾಗಿ ಶೋಧಿಸುತ್ತದೆ.  ಯೌವನದಲ್ಲಿ ಬೇಟೆಗಾರನಾಗಿ ಹೆಂಡತಿ ಮಕ್ಕಳನ್ನು ಮರೆತು ಮೈಮರೆಯುವ ಅಲಿ ವೃದ್ಧಾಪ್ಯದಲ್ಲಿ ಮದುವೆಯಾಗಿ ಗಂಡನ ಜೊತೆಗೆ ಹೋಗಿರುವ ಮಗಳ ಒಂದು ಪತ್ರಕ್ಕಾಗಿ ತೀವ್ರವಾಗಿ ಹಂಬಲಿಸುತ್ತಾನೆ.  ಮಗಳಿಂದ ಬರಬಹುದೆಂದು ತಾನು ನಂಬಿರುವ ಒಂದೇ ಒಂದು ಪತ್ರಕ್ಕಾಗಿ ವರ್ಷಗಳ ಕಾಲ ಒಂದು ದಿನವೂ ಬಿಡದೆ ಅಂಚೆ ಕಛೇರಿಗೆ ಎಡತಾಕುತ್ತಿರುತ್ತಾನೆ.‌ ಅವನ ಅಂತಃಕರಣ, ಮುಗ್ಧ ನಂಬಿಕೆಯನ್ನು ಗೇಲಿ ಮಾಡುವ ಅಲ್ಲಿನ ಸಿಬ್ಬಂದಿಗಳು ಹೀಗೆ ಓದುಗರ ಭಾವನೆಯ ಕೊಳವನ್ನು ಕಲಕುತ್ತಾ ಸಾಗುತ್ತದೆ ಕಥೆ. ಈ ಕಥೆಯ ಟ್ವಿಸ್ಟ್ ಚೆನ್ನಾಗಿದೆ.‌ ಮನುಷ್ಯ ಸಂಬಂಧದ ಮಹತ್ವವನ್ನು ತೋರಿಸಿಕೊಡುವುದರ ಜೊತೆಗೆ ಒಬ್ಬರ ಅನುಭವ ಇನ್ನೊಬ್ಬರ ಅನುಭವವಾಗುವ ವಿಚಿತ್ರ ಬೆರಗು ಮೂಡಿಸುತ್ತದೆ.

ಪ್ರೇಮ್ ಚಂದ್ ಅವರ  ‘ಆ ಮಗು’ ಎಂಬ ಕಥೆ ಸಮಾಜದ ಸ್ಟೀರಿಯೋಟೈಪ್ ನಂಬಿಕೆಗಳನ್ನು ಬುಡಮೇಲುಗೊಳಿಸುವ ರೀತಿ ಅದ್ಭುತವಾದುದು. ನಿಜ ಪ್ರೇಮ ಯಾವತ್ತೂ ಸೋಲುವುದಿಲ್ಲ ಎಂಬುದಕ್ಕೆ ಈ ಕಥೆ ಅನುಭವದ ಮೂಲಕವೇ ಸಾಕ್ಷಿಗಳನ್ನೊದಗಿಸುತ್ತದೆ.

ಹಾಗಂತ, ಈ ಸಂಕಲನದಲ್ಲಿ ಬರೀ ದುರಂತ ಕಥೆಗಳೇ ತುಂಬಿವೆ ಎಂದಲ್ಲ; ಮಲಯಾಳಂ ಭಾಷೆಯ ಶ್ರೇಷ್ಠ ಕಥೆಗಾರ ವೈಕಂ ಮುಹಮ್ಮದ್ ಬಶೀರ್ ಅವರ ಮೌಢ್ಯವನ್ನು ತಿಳಿ ಹಾಸ್ಯದ ಮೂಲಕ ವಿಡಂಬಿಸುವ ‘ಮಂತ್ರದಾರ’ ಎಂಬ ಕಥೆಯೂ ಇದೆ.

‘ಕಣ್ಣನ್’ ಎಂಬ ಕಥೆ ಕೃಷಿಕನೊಬ್ಬನ ಬದುಕಿನ ಏರಿಳಿತಗಳಲ್ಲಿ ರಾಸುವೊಂದು ನಿರ್ವಹಿಸುವ ಪಾತ್ರ ಮತ್ತು ಆ ರಾಸುವಿಗಾಗಿ ಅವನು ಸಹಿಸುವ ತ್ಯಾಗ, ಅದು ಕಸಾಯಿಖಾನೆ ಸೇರದಿರಲು ಅವನು ಮಾಡುವ ಹೋರಾಟವನ್ನು ಮನೋಜ್ಞವಾಗಿ ಹೇಳುತ್ತದೆ. ಆದರೆ, ರೈತರ ಬದುಕು ಹೇಗಿದೆಯೆಂದರೆ, ಅವರು ತಮ್ಮ ಪ್ರೀತಿಯ ರಾಸುಗಳನ್ನು ಕಸಾಯಿಖಾನೆಗೆ ಮಾರಾಟ ಮಾಡದೆ ಯಾವ ನಿರ್ವಾಹವೂ ಇರುವುದಿಲ್ಲ. ವ್ಯವಸ್ಥೆ ರೈತರನ್ನು ಅವರ ಪ್ರೀತಿಪಾತ್ರರ ಜತೆಗೆ ಸಾಯಿಸುತ್ತದೆ ವಿನಾ ಬದುಕಿಸುವ ಕುರಿತು ಆಲೋಚಿಸುವುದಿಲ್ಲ.

‘ಕರ್ಫ್ಯೂ’ ಎಂಬ ಕಥೆ ಮನುಷ್ಯರು ಸೈನಿಕರ ವೇಷತೊಡಬೇಕಾದ ಅನಿವಾರ್ಯತೆ, ಆ ಸೈನಿಕ ಶಿಸ್ತಿನ ವೇಷದಲ್ಲಿದ್ದೂ, ಪರಿಸ್ಥಿತಿಯೋ ಅವರೊಳಗಿನ ಒತ್ತಡವೋ ಒಟ್ಟಿನಲ್ಲಿ ಸಾಮಾನ್ಯರ ಬೇಕು ಬೇಡಗಳ ಜತೆ ಬೆರೆಯುವ, ಮನುಷ್ಯ ಸಹಜ ಆಸೆಗಳಿಗೆ ಬಿದ್ದು ಮನುಷ್ಯರಾಗಿ ಬಿಡುವ ಅದ್ಭುತವನ್ನು ನವಿರಾಗಿಯೇ ವಿವರಿಸುತ್ತದೆ.

ಇಂತಹ ಇನ್ನೂ ಹಲವು ಕಥೆಗಳನ್ನೊಳಗೊಂಡ ಈ ಸಂಕಲನ ಈಗಿನ ತಲೆಮಾರಿಗೆ ಎಪ್ಪತ್ತು-ಎಂಬತ್ತರ ದಶಕದ ಅಥವಾ ಅದಕ್ಕೂ ಹಿಂದಿನ(ಕೆಲವು ಕಥೆಗಳಲ್ಲಿ) ಭಾರತವನ್ನು ಸುತ್ತಾಡಿಕೊಂಡು ಬಂದ ಅನುಭವವನ್ನು ನೀಡುವುದರಲ್ಲಿ ಅನುಮಾನವಿಲ್ಲ. ಗಿರೀಶ್ ಅವರ ಅನುವಾದವೂ ಚೆನ್ನಾಗಿದೆ. ಸರಳ ಭಾಷೆ, ಸಂಭಾಷಣೆಗಳಲ್ಲಿ ಅಗತ್ಯವಿರುವ ಕಡೆ ಆಡುಭಾಷೆ ಬಳಸುವ ಮೂಲಕ ಅಷ್ಟೂ ಕಥೆಗಳನ್ನು ಕನ್ನಡದ್ದೇ ಸ್ವಂತ ಎನಿಸುವಂತೆ ಮಾಡಿದ್ದಾರೆ. ಸಾಹಿತ್ಯಾಸಕ್ತರು ಒಮ್ಮೆ ಓದಲೇಬೇಕಾದ ಕೃತಿ

ಸ್ವಾಲಿ ತೋಡಾರ್‌



ಕೃತಿ: ಎಲ್ಲೆ ತೊರೆದ ಕಥೆಗಳು
ಪ್ರಾಕಾರ: ಅನುವಾದಿತ ಸಂಕಲನ
ಮೂಲ ಲೇಖಕರು: ಭಾರತದ ಆಯ್ದ ಶ್ರೇಷ್ಠ ಕತೆಗಾರರು
ಅನುವಾದ: ಗಿರೀಶ್‌ ತಾಳಿಕಟ್ಟೆ
ಪ್ರಕಟಣೆ: ಕಾವ್ಯಕಲಾ ಪ್ರಕಾಶನ
ಬೆಲೆ: ರೂ. 225 (ಅಂಚೆವೆಚ್ಚ ಪ್ರತ್ಯೇಕ 40/-)
ಪ್ರತಿಗಳಿಗೆ ಸಂಪರ್ಕಿಸಿ: 8694912860







ಕನ್ನಡದ ಬರಹಗಳನ್ನು ಹಂಚಿ ಹರಡಿ
5 1 vote
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x