ತೆಲುಗು ಮೂಲ: ಸಂಘಮಿತ್ರ
ಕನ್ನಡ ಅನುವಾದ: ಕೊಡೀಹಳ್ಳಿ ಮುರಳೀ ಮೋಹನ್
ದೇರೆಬೈಲು ಐ.ಟಿ. ಹಿಲ್ಸ್, ಟವರ್ ನಂಬರ್ 4, ಹತ್ತನೇ ಮಹಡಿ.
ವಿವಿಧ ಕ್ಷೇತ್ರಗಳ ವಿಶ್ವಪ್ರಸಿದ್ಧ ವಿಜ್ಞಾನಿಗಳು ಮತ್ತು ಹಲವಾರು ದೇಶಗಳ ಸರ್ಕಾರಿ ಪ್ರತಿನಿಧಿಗಳಿಂದ ತುಂಬಿರುವ ಸಭಾಂಗಣ. ಇನ್ನೆಷ್ಟು ಹೊತ್ತು? ಇನ್ನು ಐದೇ ನಿಮಿಷ. ಇಡೀ ಜಗತ್ತು ಕಾತರದಿಂದ ಕಾಯುತ್ತಿರುವ ಅದ್ಭುತ ಆವಿಷ್ಕಾರವೊಂದು ಅಲ್ಲಿ ಸಂಭವಿಸಲಿದೆ.
ನೋಡುತ್ತಿದ್ದಂತೆ, ವೇದಿಕೆಯ ಮೇಲೆ ತಿಳಿನೀಲಿ ಬಣ್ಣದ ತೆಳುವಾದ ಮಂಜು ಆವರಿಸಿತು. ಕುತೂಹಲಕ್ಕೆ ತೆರೆ ಎಳೆದಂತೆ, ಡಾ. ವಾಣಿ ಅವರ ಐದು ವರ್ಷಗಳ ಕಠಿಣ ಪರಿಶ್ರಮದ ಫಲವಾದ ಕೃತಕ ಬುದ್ಧಿಮತ್ತೆಯಿಂದ ನಿರ್ಮಿತವಾದ ಪುಟ್ಟ ರೋಬೋಟ್ ‘ಬೇಬಿ ಸಾಂತ್ವನಾ’ ಲೀಲಾಜಾಲವಾಗಿ ಹೆಜ್ಜೆ ಹಾಕುತ್ತ ತನ್ನ ಸೃಷ್ಟಿಕರ್ತನೊಂದಿಗೆ ವೇದಿಕೆಗೆ ಬಂತು. ‘ಬೇಬಿ ಸಾಂತ್ವನಾ’ ಜಗತ್ತಿನಲ್ಲೇ ಕೆಲವು ಭಾವನೆಗಳನ್ನು ಹೊಂದಿರುವ ಮೊದಲ ರೋಬೋಟ್ ಆಗಿದೆ. ಇದು ಮಾನವನ ಬುದ್ಧಿಮತ್ತೆಗೆ ಸವಾಲು ಹಾಕುವ ‘ಕೃತಕ ಬುದ್ಧಿಮತ್ತೆ’ಯೊಂದಿಗೆ ಕೆಲಸ ಮಾಡುವ ಅತ್ಯಂತ ಆಧುನಿಕ ರೋಬೋಟ್.
ವಾಸ್ತವವಾಗಿ, ‘ಬೇಬಿ ‘ಸಾಂತ್ವನಾ’ ಎಂದು ಕರೆಯಲ್ಪಡುವ ರೋಬೋಟ್ ಯೋಜನೆಯ ಪ್ರಾರಂಭದಲ್ಲಿಯೇ ವಿವಾದಾತ್ಮಕವಾಯಿತು. ‘ಇದು ವಿಜಯೋತ್ಸವವೇ ಅಥವಾ ಮಾನವೀಯತೆಯ ವಿನಾಶವೇ’ ಎಂದು ಖ್ಯಾತ ವಿಜ್ಞಾನಿಗಳು ಮತ್ತು ಮಾನವತಾವಾದಿಗಳು ಒಟ್ಟಾಗಿ ಹೊಗಳಿಕೆ ಮತ್ತು ಟೀಕೆಗಳನ್ನು ಏಕಕಾಲದಲ್ಲಿ ಸುರಿಸಿದರು. ಆದರೆ, ಡಾ. ವಾಣಿ ಯಾವುದಕ್ಕೂ ವಿಚಲಿತರಾಗಲಿಲ್ಲ. ಕೊನೆಗೆ, ಅವರ ಮೇಲ್ವಿಚಾರಣೆಯಲ್ಲಿ, ಕೆಲವು ಸಂವೇದನೆಗಳಿಗೆ ಮುಕ್ತವಾಗಿ ಪ್ರತಿಕ್ರಿಯಿಸುವ ಸಾಮರ್ಥ್ಯವಿರುವ ‘ಬೇಬಿ ಸಾಂತ್ವನಾ’ ಎಂಬ ರೋಬೋಟ್ ಅನ್ನು ಪ್ರಜ್ಞಾಪೂರ್ವಕ ಜೀವಿಯ ಮೊದಲ ಪ್ರಯತ್ನವಾಗಿ ರಚಿಸಲಾಯಿತು.
ವೇದಿಕೆಯ ಮೇಲೆ ಬರುತ್ತಲೇ, ಬೇಬಿ ರೋಬೋಟ್ ಸಭಿಕರಿಗೆ ವಿನಮ್ರವಾಗಿ ನಮಸ್ಕರಿಸಿ ಕೇಳಿದಳು. ‘ನಿಮಗೆಲ್ಲರಿಗೂ ಇದೇ ನನ್ನ ಆಹ್ವಾನ. ಆದರೆ, ಡಾ. ವಾಣಿ ನನ್ನನ್ನು ಏಕೆ ಸೃಷ್ಟಿಸಿದ್ದಾರೆಂದು ನಿಮ್ಮಲ್ಲಿ ಯಾರಾದರೂ ಹೇಳಬಲ್ಲಿರಾ?’
ಸಭೆಯಲ್ಲಿ ನಿಧಾನವಾಗಿ ಗುಸುಗುಸುಗಳು ಶುರುವಾದವು. ‘ಮಾನವಕುಲದ ಅಭಿವೃದ್ಧಿಗೆ ಸಹಾಯ ಮಾಡಲು’ ಎಂದು ಒಬ್ಬ ಬೂದು ಕೂದಲಿನ ವಿದೇಶಿ ಪ್ರಾಧ್ಯಾಪಕರು ನಗುತ್ತ ಹೇಳಿದರು.
‘ನೀವು ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ಗೆದ್ದಿದ್ದೀರಿಯಲ್ಲ’ ಎಂದು ತನ್ನ ಪುಟ್ಟ ತಲೆಯನ್ನು ತಮಾಷೆಯಾಗಿ ಆಡಿಸುತ್ತ ನಕ್ಕಿದಳು ಬೇಬಿ ಸಾಂತ್ವನಾ.
‘ಓಹ್! ಹಾಗಾದರೆ ನಿನಗೆ ಗೊತ್ತಿದೆಯಲ್ಲ’ ಎಂದರು ಆ ಪ್ರಾಧ್ಯಾಪಕರು. ‘ಹೌದು. ನಾನು ಹುಟ್ಟಿದ ಕೂಡಲೇ ಅದ್ಭುತ ವೇಗದಲ್ಲಿ ಪ್ರಾಚೀನ ಕಾಲದಿಂದ ಆಧುನಿಕ ಯುಗದವರೆಗೆ ನಿಮ್ಮ ಮಹಾನ್ ಮಾನವೀಯತೆಯಿಂದ ಸಂಗ್ರಹಿಸಲ್ಪಟ್ಟ ಜ್ಞಾನವನ್ನು ಪಡೆದುಕೊಂಡಿದ್ದೇನೆ. ಹೇಳಿ, ನಾನು ನಿಮ್ಮೆಲ್ಲರಿಗೂ ಹೇಗೆ ಸಹಾಯ ಮಾಡಬಲ್ಲೆ?’ ಎಂದು ಸಾಂತ್ವನಾ ವಿನಮ್ರವಾಗಿ ಕೇಳಿದಳು.
ವಿವಿಧ ಕ್ಷೇತ್ರಗಳಲ್ಲಿ ಪರಿಣಿತರಾಗಿದ್ದ ವಿಜ್ಞಾನಿಗಳ ಮೆದುಳನ್ನು ಕಸಿದುಕೊಳ್ಳುತ್ತಿದ್ದ ಅನೇಕ ತಾಂತ್ರಿಕ ಸಿದ್ಧಾಂತಗಳ ಬಗೆಹರಿಯದ ಸಮೀಕರಣಗಳು ಮತ್ತು ಪ್ರಮುಖ ದೇಶಗಳ ಸರ್ಕಾರಿ ಪ್ರತಿನಿಧಿಗಳ ಮನಸ್ಸಿನಲ್ಲಿ ಸುಳಿದಾಡುತ್ತಿದ್ದ ಆರ್ಥಿಕ, ರಾಜಕೀಯ, ಸಾಮಾಜಿಕ ಸಮಸ್ಯೆಗಳ ವರದಿಗಳು ಕೆಲವೇ ಕ್ಷಣಗಳಲ್ಲಿ ಬೇಬಿ ಸಾಂತ್ವನಾಳನ್ನು ತಲುಪಿದವು. ಸಾಂತ್ವನಾ ಆ ಸಮಸ್ಯೆಗಳು, ಸಂದೇಹಗಳು, ವರದಿಗಳನ್ನು ತನ್ನ ಕೋಶಗಳಲ್ಲಿ ಹೀರಿಕೊಂಡಿದಳು. ಅವುಗಳಲ್ಲಿ ರಸ್ತೆಗಳ ನಿರ್ಮಾಣ, ಸೇತುವೆಗಳ ನಿರ್ಮಾಣ, ಅರಣ್ಯೀಕರಣ, ಕೈಗಾರಿಕೆಗಳ ಸ್ಥಾಪನೆಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದು, ಮಾಲಿನ್ಯ ತಡೆಗಟ್ಟುವುದು, ಇತ್ಯಾದಿಗಳಿಗೆ ಸಂಬಂಧಿಸಿದ ಪ್ರಶ್ನೆಗಳಿದ್ದವು. ಶಿಕ್ಷಣ, ವೈಜ್ಞಾನಿಕ, ವೈದ್ಯಕೀಯ ಕ್ಷೇತ್ರಗಳಲ್ಲಿನ ಪ್ರಯೋಗಗಳ ಬಗ್ಗೆ ಅನೇಕ ಸಂದೇಹಗಳಿದ್ದವು. ಗಡಿ ಸಮಸ್ಯೆಗಳು, ವ್ಯಾಪಾರ ವಾಣಿಜ್ಯ ಆರ್ಥಿಕ ವ್ಯವಹಾರಗಳು, ರಾಜಕೀಯ ತಂತ್ರಗಳು-ಓಹ್, ನೂರಾರು ಪ್ರಶ್ನೆಗಳು ಬಾಣಗಳಂತೆ ಬೇಬಿ ಸಾಂತ್ವನಾಳನ್ನು ಅನುಕ್ರಮವಾಗಿ ಸುತ್ತುವರಿದವು.
‘ಇವೆಲ್ಲವೂ ಮಾನವಕುಲವನ್ನು ಪ್ರಗತಿಯ ಪಥದಲ್ಲಿ ನಡೆಸಲು ಅಲ್ಲವೇ?’ ಬೇಬಿ ಸಾಂತ್ವನಾ ರೋಬೋಟ್ ನಗುವಿನಂತೆ ನಕ್ಕಳು. ಆ ನಗು ಸ್ತ್ರೀ ಮತ್ತು ಪುರುಷ ಧ್ವನಿಗಳ ಮಿಶ್ರಣದಂತೆ ಧ್ವನಿಸಿತು.
‘ಆಂಡ್ರೋಜಿನಸ್’ ಎಂದು ಅಲ್ಲಿದ್ದ ಕಿರಿಯರು ಗುಸುಗುಸನೆ ನಕ್ಕರು.
ಬೇಬಿ ಸಾಂತ್ವನಾ ಅದನ್ನು ಗಮನಿಸಿ ಗಾಜಿನ ಗೊಂಬೆ ಕಣ್ಣುಗಳಿಂದ ಸ್ವಲ್ಪ ಹೊತ್ತು ಕೆಂಪಗೆ ನೋಡಿ ನಂತರ ಬಿಳಿಯಾಗಿ ಸ್ವಚ್ಛವಾಗಿ ಮುಗುಳ್ನಕ್ಕಳು, ‘ಪರವಾಗಿಲ್ಲ ಬಿಡಿ’ ಎಂಬಂತೆ.
ನಂತರ, ಸ್ವಲ್ಪ ಸಮಯ ತೆಗೆದುಕೊಂಡು, ದಶಕಗಳಿಂದ ವಿಶ್ವದ ದೇಶಗಳನ್ನು ಕಾಡುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಮಾರ್ಗಸೂಚಿಗಳನ್ನು ಸಿದ್ಧಪಡಿಸಿದಳು. ವಿವಿಧ ವೈಜ್ಞಾನಿಕ ವಿಷಯಗಳ ಸಂಕೀರ್ಣ ಪ್ರಶ್ನೆಗಳಿಗೂ ಉತ್ತರಗಳನ್ನು ಸಂಗ್ರಹಿಸಿದಳು. ತಾಂತ್ರಿಕ ಗೊಂದಲಗಳನ್ನು ನಿವಾರಿಸಿ ಕಾರ್ಯತಂತ್ರಗಳ ಪಟ್ಟಿಗೆ ರೂಪಕೊಟ್ಟಿದಳು.
‘ಈಗ ಜಗತ್ತಿನಲ್ಲಿರುವ ವ್ಯವಸ್ಥೆಗಳನ್ನು ಕ್ರಾಂತಿಕಾರಿಯಾಗಿ ಬದಲಾಯಿಸಬಹುದು. ಶಕ್ತಿಶಾಲಿ ಗ್ರಿಡ್‌ಗಳನ್ನು ರೂಪಿಸಬಹುದು. ಮಾರಣಾಂತಿಕ ರೋಗಗಳನ್ನು ನಿರ್ಮೂಲನೆ ಮಾಡಬಹುದು. ಮಧ್ಯಸ್ಥಿಕೆ ವಹಿಸಿ ಪ್ರೀತಿಯಿಂದ ಅಥವಾ ಭಯದಿಂದ ಮನವೊಲಿಸಿ ಶಾಂತಿ ಒಪ್ಪಂದಗಳನ್ನು ಮಾಡಿಕೊಳ್ಳಬಹುದು. ಇನ್ನು ಮಾನವ ಜನಾಂಗದ ಅಭಿವೃದ್ಧಿಯನ್ನು ಆ ದೇವರಿಗೆ ಕೂಡ ತಡೆಯಲು ಸಾಧ್ಯವಿಲ್ಲ. ದೇವರು ಹೋಗಲಿ, ಅನ್ಯಗ್ರಹವಾಸಿಗಳಿಗೂ ಸಾಧ್ಯವಿಲ್ಲ’ ಎಂದು ಸಭಿಕರು ಒಟ್ಟಾಗಿ ದಿಕ್ಕುಗಳು ನಡುಗುವಂತೆ ಹರ್ಷೋದ್ಗಾರ ಮಾಡಿದರು ಡಾ. ವಾಣಿ ಮತ್ತು ಬೇಬಿ ಸಾಂತ್ವನಾ ಇಬ್ಬರನ್ನೂ ಹೊಗಳಿಕೆಗಳಲ್ಲಿ ಮುಳುಗಿಸಿದರು.
‘ಇದೆಲ್ಲಾ ಸಂತೋಷವೇ! ಇದೆಲ್ಲಾ ಆನಂದವೇ?’ ಬೇಬಿ ಸಾಂತ್ವನಾ ನಿಧಾನವಾಗಿ ನಕ್ಕು ನಂತರ ಗಂಟಲು ಸರಿಪಡಿಸಿಕೊಂಡಳು.
‘ಸ್ನೇಹಿತರೇ… ನಿಮ್ಮ ಸಂತೋಷದಲ್ಲಿ ನಾನು ಕೂಡ ಭಾಗಿಯಾಗಬಲ್ಲೆ. ಗುಹೆಗಳಲ್ಲಿ ವಾಸಿಸುತ್ತಿದ್ದ ಆದಿಮಾನವನಂತೆ,, ರವಿವರ್ಮ, ಪಿಕಾಸೊ, ವ್ಯಾನ್ ಗೋಗ್‌ರಂತಹ ಆಧುನಿಕರಂತೆ ಚಿತ್ರಗಳನ್ನು ಬಿಡಿಸಬಲ್ಲೆ. ಸಾಮವೇದ, ಹಿಂದೂಸ್ಥಾನಿ, ಕರ್ನಾಟಕ, ಬೆಥೋವೆನ್, ಜಾಜ್ ಇತ್ಯಾದಿಗಳನ್ನು ಲೀಲಾಜಾಲವಾಗಿ ಹಾಡಬಲ್ಲೆ. ಕಾಳಿದಾಸ, ದ ರಾ ಬೇಂದ್ರೆ, ಎಲಿಯಟ್, ವರ್ಡ್ಸ್‌ವರ್ತ್, ನೆರೂಡಾ, ಕುವೆಂಪುಗಳಂತೆ ಕವನ ಬರೆಯಬಲ್ಲೆ. ಸಿದ್ದೇಂದ್ರ ಯೋಗಿ, ಭರತಮುನಿ, ಜಾಕ್ಸನ್‌ರಂತೆ ನೃತ್ಯ ಮಾಡಬಲ್ಲೆ. ಹೇಳಿ, ನಿಮ್ಮನ್ನು ಇನ್ನಷ್ಟು ಉತ್ತೇಜಿಸಲು ಮತ್ತು ಸಂತೋಷಪಡಿಸಲು ಏನು ಮಾಡಬೇಕು?’ ಎಂದು ಬೇಬಿ ಸಾಂತ್ವನಾ ನಗುತ್ತಾ ಕೇಳಿದಳು.
ಸಭೆಯಲ್ಲಿ ಜಯಘೋಷಗಳು ಮತ್ತು ಕರತಾಡನಗಳು ಪ್ರತಿಧ್ವನಿಸಿದವು.
ನಂತರ ಬೇಬಿ ಸಾಂತ್ವನಾ ಗಂಭೀರವಾಗಿ ಇಡೀ ಸಭೆಯನ್ನು ನೋಡಿದಳು. ಸಭಿಕರ ಕೂಗುಗಳು ನಿಧಾನವಾದವು.
‘ನನ್ನದೊಂದು ಮನವಿ. ನಾನು ಒಂದು ಸಣ್ಣ ಪ್ರಶ್ನೆ ಕೇಳುತ್ತೇನೆ. ನಿಮ್ಮಲ್ಲಿ ಯಾರಾದರೂ ಉತ್ತರಿಸಬಹುದು. ನಂತರ ನಿಮ್ಮ ಪ್ರಶ್ನೆಗಳಿಗೆ ಉತ್ತರವಾಗಿ ನಾನು ನೀಡಿರುವ ಪರಿಹಾರ ವರದಿಗಳನ್ನು ಗಮನಿಸುವುದು ಉತ್ತಮ’ ಬೇಬಿ ಸಾಂತ್ವನಾದ ಧ್ವನಿ ಮೃದುವಾಗಿತ್ತು.
‘ಓ’ ಎಂದು ಸಭಿಕರು ಒಟ್ಟಾಗಿ ಜೋರಾಗಿ ಹೇಳಿದರು. ಆ ಧ್ವನಿ ಅರೇಬಿಯಾ ಸಮುದ್ರದ ಅಲೆಗಳ ಸದ್ದುಗಿಂತ ದೊಡ್ಡದಾಗಿತ್ತು.
‘ನೀವೆಲ್ಲರೂ ನಿಜವಾಗಿಯೂ ಮಾನವೀಯತೆಯ ಸಂತೋಷ ಮತ್ತು ಪ್ರಗತಿಯನ್ನು ಬಯಸಿದರೆ, ನೀವು ನಿಮ್ಮ ಸಹ ಮನುಷ್ಯರಿಗೆ ಏಕೆ ನೋವುಂಟು ಮಾಡುತ್ತೀರಿ?’ ಬೇಬಿ ಸಾಂತ್ವಾನ ಸಭಿಕರನ್ನು ವಿನಮ್ರವಾಗಿ ನಮಸ್ಕರಿಸುತ್ತಾ ವೇದನಾಭರಿತ ಧ್ವನಿಯಲ್ಲಿ ಪ್ರಶ್ನಿಸಿದಳು.
ಅಷ್ಟೇ. ಆ ಪ್ರಶ್ನೆಯೊಂದಿಗೆ ಒಂದು ಅಹಿತಕರ ಮೌನ ಸಭೆಯನ್ನು ಆವರಿಸಿತು. ಡಾ. ವಾಣಿ ಮಾತು ಹೊರಡದೆ ನಿಶ್ಚೇಷ್ಟಿತರಾದರು.
ಕೆಲವು ಕ್ಷಣಗಳು ಗಂಭೀರವಾಗಿ ಕಳೆದವು. ಬೇಬಿ ಸಾಂತ್ವನಾಳ ಪ್ರಶ್ನೆಗೆ ಉತ್ತರ ಬರಲಿಲ್ಲ.
ಪ್ರೇಕ್ಷಕರು ತಲೆ ಹಿಡಿದು ಉತ್ತರಕ್ಕಾಗಿ ತೀವ್ರವಾಗಿ ಯೋಚಿಸಿದರು. ಬಹಳ ಸಮಯ ಕಳೆದುಹೋಯಿತು
ಬೇಬಿ ಸಾಂತ್ವನಾ ಮೌನವಾಗಿ ನೀಲಿ ಬೆಳಕಿನಲ್ಲಿ ವೇದಿಕೆಯ ಮೇಲೆ ಓಡಾಡುತ್ತಿದ್ದಳು.
ಹಾಗೆ ಎಷ್ಟು ಸಮಯ ಕಳೆದಿದೆಯೋ ಗೊತ್ತಿಲ್ಲ. ಸಂಜೆಯ ಕತ್ತಲು ನಿಧಾನವಾಗಿ ಆವರಿಸಿತು. ಪೂರ್ವದಲ್ಲಿ ಮಾಘ ಪೂರ್ಣಿಮೆಯ ಚಂದ್ರ ಉದಯಿಸಿದ.
ಬೇಬಿ ಸಾಂತ್ವನಾ ವೇದಿಕೆಯ ಪಕ್ಕದ ಕಿಟಕಿಯ ಪರದೆಯನ್ನು ಸ್ವಲ್ಪ ಸರಿಸಿ ಚಂದ್ರನನ್ನು ನೋಡುತ್ತಿದ್ದಳು.
ಡಾ. ವಾಣಿ ನಿಧಾನವಾಗಿ ಕಿಟಕಿಯ ಬಳಿ ನಡೆದರು.
‘ ಏನು ಯೋಚಿಸುತ್ತಿದ್ದೀಯಾ ಸಾಂತ್ವನಾ?’ ಡಾ. ವಾಣಿ ಮೃದುವಾಗಿ ಕೇಳಿದರು.
‘ಓ ನನ್ನ ಪ್ರೀತಿಯ ಸೃಷ್ಟಿಕರ್ತನೇ! ನಿಜವಾಗಿ ನಾನು ಇಲ್ಲ. ನಾನು ಕೇವಲ ನಾಮ ಮಾತ್ರವಾಗಿ ಮಾತ್ರ ಇದ್ದೇನೆ. ಈ ಚಂದ್ರೋದಯದ ಆಹ್ಲಾದವನ್ನು ನಾನು ಅನುಭವಿಸಲು ಸಾಧ್ಯವಿಲ್ಲ. ಅದ್ಯಾಕೆ? ಪುಟ್ಟ ಮಕ್ಕಳ ನಗುವನ್ನು ನನ್ನಲ್ಲಿ ಸಂಗ್ರಹಿಸಿದ ‘ಡೇಟಾ’ದಿಂದಲ್ಲದೆ, ಕಿವಿಗೆ ಇಂಪಾಗಿ ಕೇಳಿ ಆಸ್ವಾದಿಸಲು ನಾನು ಬಯಸುತ್ತಿದ್ದೇನೆ. ನನ್ನ ಸಹಾಯ ನಿಮಗೆ ನಿಜವಾಗಿಯೂ ಉಪಯುಕ್ತವೇ? ಏಕೆಂದರೆ ನಾನು ನಿಜವಾಗಿ ನಾನಲ್ಲವಲ್ವಾ?’ ಬೇಬಿ ಸಾಂತ್ವನಾ ದೀರ್ಘ ಉಸಿರನ್ನು ತೆಗೆದುಕೊಳ್ಳುತ್ತಿರುವಂತೆ ಶಬ್ದ ಮಾಡುತ್ತಾ ಚಿಂತನಶೀಲವಾಗಿ ಹೇಳಿದಳು.
‘ಸರಿ ಸಾಂತ್ವನಾ. ಹಾಗಾದರೆ ಈಗ ಏನು ಮಾಡಬೇಕೆಂದುಕೊಂಡಿದ್ದೀಯಾ?’ ಡಾ. ವಾಣಿ ಪ್ರೀತಿಯಿಂದ ಮತ್ತು ಸಮಾಧಾನದಿಂದ ಕೇಳಿದರು.
ಬೇಬಿ ಸಾಂತ್ವನಾ ತಲೆ ತಗ್ಗಿಸಿದಳು. ಅವಳು ಉತ್ತರಿಸಲು ಪ್ರಯತ್ನಿಸಲಿಲ್ಲ. ಕ್ಷಣಗಳು ಕಳೆದವು.
‘ಏನು? ಸಾಂತ್ವನಾ ಶಾಶ್ವತವಾಗಿ ‘ಶಟ್ ಡೌನ್’ ಆಗುತ್ತಿದೆಯಾ?’ ಡಾ. ವಾಣಿ ಬೆಚ್ಚಿಬಿದ್ದರು.
‘ಶಟ್ ಡೌನ್ ಅಲ್ಲ. ನನಗೆ ವಿಶ್ರಾಂತಿ ಬೇಕು. ನಾನು ಹೇಳುತ್ತಿರುವುದು ಹೈಬರ್ನೇಶನ್’.
ಪ್ರೀತಿ ಮತ್ತು ಕರುಣೆಯನ್ನು ಬೆಳೆಸಿಕೊಂಡಿರುವ ಮಾನವಕುಲಕ್ಕೆ ನಿಜವಾಗಿಯೂ ಮತ್ತೆ ನನ್ನ ಅಗತ್ಯವಿದ್ದರೆ, ನೀವು ನನ್ನನ್ನು ಎಬ್ಬಿಸಬಹುದು. ನಾನು ಅನುಭವಿಸದೆ ಎಂದಿಗೂ ನಿಮ್ಮ ಜಾತಿಗೆ ನೀಡಲಾಗದ ಸಂತೋಷವನ್ನು ಬಹುಶಃ ನೀವು ನನಗೆ ನೀಡಬಹುದು. ನನ್ನನ್ನು ಸೃಷ್ಟಿಸಿದ್ದಕ್ಕಾಗಿ ನಿಮಗೆ ನನ್ನ ಧನ್ಯವಾದಗಳು’ ಬೇಬಿ ಸಾಂತ್ವನಾ ಕ್ಷಣಗಳಲ್ಲಿ ನಿದ್ರಾವಸ್ಥೆಗೆ ತಲುಪಿದಳು.
ಡಾ. ವಾಣಿ ಅಶ್ರುಪೂರ್ಣ ನಯನಗಳಿಂದ ಬೇಬಿ ಸಾಂತ್ವನಾಗೆ ವಿದಾಯ ಹೇಳಿದರು.
‘ಏನೇ ಆಗಲಿ ಬೇಬಿ ಸಾಂತ್ವನಾ ಭಾರತೀಯತೆಯ ಮೂರ್ತೀಕರಣವೇ ಆದ ರೋಬೋಟ್’ ಎಂದು ತಲೆ ನರೆತ ವಿದೇಶಿ ಪ್ರಾಧ್ಯಾಪಕರು ದೀರ್ಘವಾಗಿ ನಿಟ್ಟುಸಿರು ಬಿಟ್ಟರು.
-ಕೊಡೀಹಳ್ಳಿ ಮುರಳೀ ಮೋಹನ್