ಬೆಂಗಳೂರಿನಿಂದ ಹೊರಟು, ಹಂಪಿ ಎಕ್ಸ್ ಪ್ರೆಸ್ಸಿನಲ್ಲಿ ಹೊಸಪೇಟೆಗೆ ತಲುಪಿದ್ದೆ. ಅಲ್ಲಿಂದ ಹಂಪಿಗೆ ಹೊರಡುವುದಿತ್ತು. ರೈಲಿನ ಹೆಸರು ಹಂಪಿ ಎಕ್ಸ್ ಪ್ರೆಸ್ ಅಂತ ಇದ್ದರೂ ಅದು ಹಂಪಿಗೆ ಹೋಗುವುದಿಲ್ಲ. ಹಂಪಿಗೆ ನಿಲ್ದಾಣವೇ ಇಲ್ಲ. ಹೆಸರು ಮಾತ್ರ ಉಳಿದುಕೊಂಡಿದೆ. ಹೊಸಪೇಟೆಯಿಂದ ಹಂಪಿಗೆ ಅರ್ಧಗಂಟೆಗೊಂದು ಬಸ್ಸಿದೆ. ಹಾಗಾಗಿ ಬಸ್ ಸ್ಟಾಂಡಿನ ಎದುರಿನಲ್ಲಿರುವ ಉಡುಪಿ ಹೋಟೆಲಿಗೆ ಹೋಗಿ ಬೆಳಗಿನ ಪೆಟ್ರೋಲ್ ಹಾಕೋಣವೆಂದು ಹೊರಟೆ. ರೈಲಿನಲ್ಲಿ ಕಾಲು ನೀಡಿ ನಿದ್ರೆ ಮಾಡಿದ್ದರೂ, ಇನ್ನೂ ಪ್ರಯಾಣದ ದಣಿವು ಮಾತಾಡುತ್ತಿತ್ತು. ಹೋಟೆಲಿಗೆ ಹೋಗಿ ಸರ್ವರನಿಗೆ ಕಾಫಿ ಕೊಡಲು ಹೇಳಿ ಮುಖ ತೊಳೆದು ಬಂದು ಕೂತೆ.
ಇಳಿವಯಸ್ಸಿನ ಪರಿಚಯದವರೊಬ್ಬರು ತೀರಿಹೋಗಿದ್ದರು. ಅವರ ಮರಣೋತ್ತರ ಕರ್ಮದ ಹತ್ತನೆಯ ದಿನವಾದ ಇಂದು ಅವರ ಇಹ ಲೋಕದ ಋಣ ತೀರಿಸಲು ಧರ್ಮೋದಕ ಬಿಡಲು ಬಂದಿದ್ದೆ. ಬರೀ ಪರಿಚಯವೆನ್ನುವಷ್ಟು ದೂರದವರಲ್ಲ. ನನ್ನ ಬಾಲ್ಯದ ಕೆಲ ಮಧುರ ಸ್ಮೃತಿಗಳು ಅವರ ಕುಟುಂಬದ ಜೊತೆಗೆ ತಳುಕು ಹಾಕಿಕೊಂಡಿದ್ದವು. ಅವರ ಮಕ್ಕಳೆಲ್ಲರೂ ಬಳ್ಳಾರಿಯಲ್ಲಿದ್ದರೂ ಅಲ್ಲಿಯ ಕೆಲವು ಅನಾನುಕೂಲಗಳಿಂದಾಗಿ ಈ ಕಾರ್ಯಕ್ರಮಗಳು ಹಂಪಿಯಲ್ಲಿ ನಡೆಯುತ್ತಿದ್ದವು. ಇಲ್ಲಿಯ ಔಟ್ ಸೋರ್ಸಿಂಗ್ ಪದ್ಧತಿ ಎಲ್ಲರಿಗೂ ಅನುಕೂಲವಾಗಿತ್ತು. ಚಿಕ್ಕ ಊರು, ಹೊಳೆದಂಡೆ, ನಡೆಸಿಕೊಡುವ ಎಲ್ಲ ಸಂಪ್ರದಾಯದ ಪುರೋಹಿತ ವರ್ಗ, ಅವರು ಕೊಡುತ್ತಿದ್ದ ಪ್ಯಾಕೇಜ್ ಗಳು ಎಲ್ಲಾ ಸೇರಿ ಇತ್ತೀಚೆಗ ಹಂಪೆಯನ್ನು ಅಪರ ಕಾರ್ಯಕ್ರಮಗಳ ಗಮ್ಯವಾಗಿಸಿದ್ದವು. ತೀರಿಕೊಂಡವರ ಮಗ ನನಗೆ ತೀರ ಸಲಿಗೆಯವನಾಗಿದ್ದ. ಹಾಗಾಗಿ ಅವರ ಈ ಋಣ ತೀರಿಸುವ ಕಾರ್ಯಕ್ರಮಕ್ಕೆ ಬಂದಿದ್ದೆ. ಯಾರ ಸಾವಿನ ವೈಕುಂಠ ಸಮಾರಾಧನೆಗೂ ನಾನು ಹೋಗುವುದಿಲ್ಲವಾಗಿತ್ತು. ಹೋದವರು ತೀರ ಹತ್ತಿರದವರಾದರೆ ಈ ಹತ್ತನೆಯ ದಿನದ ಧರ್ಮೋದಕ ಕಾರ್ಯಕ್ರಮಕ್ಕೆ ಹೋಗಿ ನನ್ನ ನಮನವನ್ನು ಸಲ್ಲಿಸುವುದನ್ನು ರೂಢಿಸಿಕೊಂಡಿದ್ದೆ. ಅಲ್ಲದೆ ತುಂಬಾ ಜನರ ಸದ್ರಿ ಕಾರ್ಯಕ್ರಮಕ್ಕೆ, ಅದೂ ಹಂಪಿಯಲ್ಲಿ ಮಾಡಿದ್ದರೇ ಬಹಳ ಮಟ್ಟಿಗೆ ಹಾಜರಾಗುತ್ತಿದ್ದರಿಂದ ನನ್ನ ನೆಂಟರಿಷ್ಟರಲ್ಲ ’ ಸುಧೀ ಧರ್ಮೋದಕಕ್ಕೆ ಬಂದೇ ಬರುತ್ತಾನೆ ’ ಎನ್ನುವ ಇಂಪ್ರೆಷನ್ ಬಂದಿತ್ತು.
ಕಾಫಿ ಬಂದದ್ದು ನೋಡಿ, ನನ್ನ ಆಲೋಚನೆಗಳಿಗೆ ಕಡಿವಾಣ ಹಾಕಿ, ಕಾಫಿ ಹೀರಲು ಶುರುಮಾಡಿದೆ. ಬಿಸಿ ಬಿಸಿ ದ್ರವ ಗಂಟಲೊಳಗೆ ಇಳಿಯುತ್ತಿದ್ದಂತೆ ನರನಾಡಿಗಳೆಲ್ಲ ಎಚ್ಚೆತ್ತು, ಸಕ್ರಿಯವಾಗತೊಡಗಿದವು. ಸಾವಕಾಶವಾಗಿ ಅದನ್ನು ಒಳಗಿಳಿಸಿ, ಬಿಲ್ಲು ತೆತ್ತು ಹೊರಬಂದೆ. ಹಂಪಿಗೆ ಬಸ್ಸು ತಯಾರಾಗಿ ನಿಂತಿತ್ತು. ಅಷ್ಟೇನೂ ಜನ ಇರಲಿಲ್ಲ. ಸುಲಭವಾಗಿ ಕೂರಲು ಸಿಕ್ಕಿತು. ಕೂತುಕೊಂಡು ಕಾಲು ನೀಡಿ, ಮತ್ತೆ ನನ್ನ ಆಲೋಚನೆಯ ಸರಪಳಿಯನ್ನು ಹರಿಬಿಟ್ಟೆ.
ಐವತ್ತರ ವಯಸ್ಸಿಗೆ ಕಾಲಿಟ್ಟನಂತರ ಧಾರ್ಮಿಕ ಕರ್ತವ್ಯಗಳ ಕಡೆಗೆ ಗಮನ ಹರಿಸಿದ್ದೆ. ನಾನು ಈ ವಯಸ್ಸಿನಾಗುವ ಹೊತ್ತಿಗೆ ಪರಿಚಯವಿರುವ ಹಿರಿಯರು ತೀರಿಕೊಳ್ಳುವುದು ಶುರುವಾಯಿತು. ಮನೆಯ ಹಿರಿಯಮಗನಾದ್ದರಿಂದ, ಮತ್ತೆ ನನ್ನ ತಂದೆಯವರು ಇಲ್ಲವಾದ್ದರಿಂದ, ನಾನು ಈ ತರದ ಕಾರ್ಯಕ್ರಮಗಳಿಗೆ ಹೋಗಬೇಕಾಗಿ ಬರುತ್ತಿತ್ತು. ಒಂದೆರಡು ಸಲ ಅನಾನುಕೂಲವಾಗಿ, ಹತ್ತನೆಯದಿನದ ಬದಲಾಗಿ, ವೈಕುಂಠ ಸಮಾರಾಧನೆಗೆ ಹೋದೆ. ಯಾಕೋ ಸರಿ ಎನಿಸಲಿಲ್ಲ. ಸತ್ತವರಿಗೆ ಎಲ್ಲ ತರದ ಅಪರ ಕರ್ಮಗಳನ್ನು ಮುಗಿಸಿ ಅವರನ್ನು ಉತ್ತಮಲೋಕಕ್ಕೆ ಕಳಿಸಿದಮೇಲೆ, ಇನ್ನು ಅವರ ನೆನಪಿನಲ್ಲೇ ಕಣ್ಣೀರು ಹಾಕದೇ, ಕರ್ತವ್ಯಕ್ಕೆ ಮರಳಬೇಕೆಂದೂ, ಅದಕ್ಕಾಗಿ ಈ ದಿನವನ್ನು ಹಬ್ಬವಾಗಿ ಆಚರಿಸಬೇಕೆಂದು ಪುರೋಹಿತರು ಹೇಳಿದ್ದು ಕೇಳಿದ್ದೇನೆ. ಆದರೂ ಹೋದವರ ಬಗ್ಗೆ ಗೌರವ ಭಾವನೆಯನ್ನು ಸಲ್ಲಿಸುವ ದಿನದ ತರ ನನಗೆ ಕಾಣಲಿಲ್ಲ. ಅದೂ ತೀರಿಕೊಂಡವರು ತೀರ ವಯಸ್ಸಾದವರಾಗಿದ್ದರೆ, ಅಲ್ಲಿಯ ವಾತಾವರಣ ಅವರನ್ನು ಕಳೆದುಕೊಂಡಂತೆ ಕಾಣುತ್ತಿರಲಿಲ್ಲ. ಅದಕ್ಕಾಗಿ ನಾನು ಹತ್ತನೇ ದಿನವನ್ನೇ ಆರಿಸಿಕೊಂಡಿದ್ದೆ. ಮತ್ತೆ ಆ ದಿನಕ್ಕೇ ಸಾಧ್ಯವಾದಷ್ಟು ಹಾಜರಾಗಲು ಪ್ರಯತ್ನಿಸುತ್ತಿದ್ದೆ. ಇವತ್ತು ಸಹ ಅದಕ್ಕೆ ಹೊರತಾಗಿರಲಿಲ್ಲ.
ಇದಕ್ಕೆ ಮುನ್ನ ಎರಡು ಮೂರು ಸಲ ಹಂಪಿಗೆ ಈ ತರದ ಕಾರ್ಯಕ್ರಮಗಳಿಗೆ ಹೋಗಿದ್ದೆ. ಹಾಗಾಗಿ ಅಲ್ಲಿಯ ಜಾಗಗಳು, ನದಿದಂಡೆ, ಕಾರ್ಯಕ್ರಮಗಳ ನಡೆಯುವ ಮಂಟಪ, ನಡೆಸಿಕೊಡುವ ಎಲ್ಲ ಸಂಪ್ರದಾಯದ ಪುರೋಹಿತರು, ಅವರ ರೀತಿ ನೀತಿ, ಅಲ್ಲಿಯ ವಾತಾವರಣ ಎಲ್ಲ ಪರಿಚಯವಾಗಿತ್ತು. ಅಲ್ಲಿಯ ಪುರೋಹಿತರು ಸಹ ನನ್ನನ್ನು ಕಂಡಕೂಡಲೇ “ಓ ತೀರಿಹೋದವರು ನಿಮಗೆ ನೆಂಟರಾ? ಸರಿ ಬಿಡಿ” ಎನ್ನುತ್ತಿದ್ದರು. ಇವತ್ತಿನ ಕಾರ್ಯಕ್ರಮ ಬೇರೇ ಸಂಪ್ರದಾಯದವರದಾಗಿದ್ದರೂ ಎಲ್ಲ ಅಲ್ಲಲ್ಲೇ ನಡೆಯುತ್ತಿದ್ದರಿಂದ ಜಾಸ್ತಿ ಹುಡುಕಬೇಕಾಗಿರಲಿಲ್ಲ. ತಲುಪಿದ ತಕ್ಷಣ ನನಗೆ ಬೇಕಾದವರನ್ನು ಹುಡುಕುವುದು, ಅವರು ಮಾಡಿರುವ ವಸತಿಯಲ್ಲೇ ನನ್ನ ಸಾಮಾನನ್ನು ಇಡುವುದು, ಕಂಡವರನ್ನು ಮಾತಾಡಿಸುವುದು, ಮತ್ತೆ ಹೊಳೆದಂಡೆಗೆ ಹೋಗಿ ಸ್ನಾನ ಮುಗಿಸಿ ಕಾಯುವುದು ಎಲ್ಲ ಯಾಂತ್ರಿಕವಾಗಿ ಹೋಗಿದ್ದವು. ಸಮಯ ಕಳೆಯುವುದೇ ಗೊತ್ತಾಗುತ್ತಿರಲಿಲ್ಲ.
ಬಸ್ಸು ಕಾಮಲಾಪುರದ ಮೇಲೆ ಹೋಗುತ್ತಿತ್ತು. ಪರಿಚಿತ ದಾರಿ. ಬಾಳಿತೋಟಗಳ ನಡುವಿನ ರಸ್ತೆಯಲ್ಲಿ ಮಂದಗತಿಯಲ್ಲಿ ಬಸ್ಸು ಹೋಗುತ್ತಿತ್ತು. ನಾನು ಇದೇ ಜಿಲ್ಲಾದವನೇ. ತುಂಬಾ ಸಲ ಹಂಪಿಗೆ ಬಂದಿದ್ದೆ. ಮನೆಗೆ ದೂರದಿಂದ ನೆಂಟರು ಬಂದಾಗಲೆಲ್ಲ, ಹಂಪಿಯನ್ನ ತೋರಿಸುವ ಮಾರ್ಗದರ್ಶಿಯಾಗುತ್ತಿದ್ದೆ. ಹಾಗಾಗಿ ಈ ದಾರಿಯಲ್ಲಿ ಮತ್ತೊಮ್ಮೆ ಹೋಗುತ್ತಿರುವುದು ನನ್ನ ಹಳೇ ನೆನಪುಗಳನ್ನು ಹುಟ್ಟು ಹಾಕುತ್ತಿತ್ತು. ಕಾಮಲಾಪುರದಂದ ಹಂಪಿಗೆ ಹೋಗುವ ದಾರಿ ಗುಂಟ ಹಲವಾರು ರಕ್ಷಿತ ಅವಶೇಷಗಳು ಕಾಣಸಿಗುತ್ತಿದ್ದವು. ಅವುಗಳನ್ನು ಹಾದುಹೋಗುವಾಗ ನಾನು ಗೆಳೆಯರ ಜೊತೆಗೆ ಪ್ರವಾಸಕ್ಕೆ ಬಂದದ್ದು, ನೆಂಟರಿಗೆ ತೋರಿಸುವಾಗ ಇತಿಹಾಸ ಹೇಳಿದ್ದು ಎಲ್ಲ ನೆನಪಾಗಿ ಮನ ನೆಮ್ಮದಿಗೊಳ್ಳುತ್ತಿತ್ತು. ಹಂಪಿಯಲ್ಲಿ ಇಂಥ ಕಾರ್ಯಕ್ರಮಗಳಿಗೆ ಬರುತ್ತಿದ್ದಕ್ಕೆ ಇದೂ ಒಂದು ಕಾರಣ. ಅವಶೇಷಗಳ ಕಲ್ಲು ಕಲ್ಲು ನನಗೆ ಪರಿಚಯವಿದ್ದಂತೆ ಅನಿಸಿತ್ತಿತ್ತು. ಇಳಿದುಹೋಗಿ ಅವುಗಳ ನಡುವೆ ಸುತ್ತಾಡಲೆ ಎನಿಸುವಷ್ಟು ಅಸೆ ತೀವ್ರವಾಗುತ್ತಿತ್ತು.
ನೆನಪುಗಳ ಸುಳಿಯಿಂದ ಹೊರಬರುವಾಗ ನೋಡಿದರೆ ಬಸ್ಸು ಹಂಪಿ ತಲುಪುವ ಇಳಿಜಾರಿನಲ್ಲಿತ್ತು. ಬಸ್ಸಿನಲ್ಲಿಗೇ ಕಾಣುವ ಕಡಲೇಕಾಳು ಗಣಪನಿಗೆ ಮನದಲ್ಲೇ ನಮಸ್ಕಾರ ಹಾಕಿದೆ. ಮುಂದೆ ಬಸ್ಸು ನಿಲ್ದಾಣಕ್ಕೆ ಬಂತು. ಎಲ್ಲರ ಜೊತೆ ನಾನು ಸಹ ಇಳಿದು ಪುರೋಹಿತರ ಮನೆಯ ಕಡೆಗೆ ಹೆಜ್ಜೆ ಹಾಕಿದೆ. ಅಲ್ಲಿಂದ ಒಂದೈದು ನಿಮಿಷದದಾರಿ ಅಷ್ಟೇ. ಅವರ ಮನೆಯ ಹತ್ತಿರ ಮತ್ತು ಸುತ್ತೂರಾ ಅನೇಕಾನೇಕ ವಸತಿ ಗೃಹಗಳಿವೆ. ಅವುಗಳನ್ನು ಲಾಜಿಂಗ್ ಗಳು ಎನ್ನಲಾಗುವುದಿಲ್ಲ. ಅಂಥ ಸೌಕರ್ಯಗಳೇನೂ ಇರುವುದಿಲ್ಲ.
ಹಂಪಿಯ ಅವಶೇಷಗಳಿಗೆ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಸಿಕ್ಕ ಮನ್ನಣೆ ಮತ್ತು ಹೆಸರಿನಿಂದಾಗಿ ಬಂದು ಹೋಗುವ ವಿದೇಶೀ ಅತಿಥಿಗಳಿಗಾಗಿ ಇಲ್ಲಿಯ ಮನೆ ಮಾಲಿಕರು ತಮ್ಮ ಮನೆಗಳನ್ನೇ ವಸತಿಗಾಗಿ ಕೊಡುತ್ತಾರೆ. ಅದೊಂದು ಆದಾಯದ ದಾರಿ ಅವರಿಗೆ. ಅಂಥ ವಸತಿ ಗೃಹಗಳಲ್ಲಿಯ ಒಂದೆರಡು ರೂಮುಗಳಲ್ಲಿ ನನ್ನ ಬಾಂಧವರೆಲ್ಲ ತಂಗಿದ್ದರು. ಗೊತ್ತಿದ್ದವರು ನನ್ನನ್ನು ಬರಮಾಡಿಕೊಂಡರು. ಮತ್ತೆ ತೀರಿಕೊಂಡವರ ಬಗ್ಗೆ ಮಾತು ಬಂತು. ಅವರ ಗುಣಗಾನ ನಡೆಯಿತು. ರೂಮಿನೊಳಗೆ ಹೋದೆ. ಅಲ್ಲಿ ತೀರಿಹೋದವರ ಭಾವ ಚಿತ್ರ ಒಂದು ಮೂಲೆಯಲ್ಲಿ ಕಂಡಿತು. ಮನಸಾರೆ ನಮಸ್ಕರಿಸಿದೆ. ನನಗೆ ಅವರ ಮೇಲಿದ್ದ ಭಕ್ತಿ ಅಂಥದು. “ ಜಾಸ್ತಿ ಸಮಯವಿಲ್ಲ. ಎಲ್ಲರೂ ಹೊಳೆದಂಡೆಗೆ ಹೊರಡಿ “ ಎನ್ನುತ್ತ ಒಬ್ಬ ಸೀನಿಯರ್ ಎಲ್ಲರನ್ನೂ ಹೊರಡಿಸುತ್ತಿದ್ದರು. ನಾನು ನನ್ನ ಬೆಳಗಿನ ಕೆಲಸಗಳನ್ನು ಮುಗಿಸಿಕೊಂಡೆ. ಯಾರೋ ಬಿಸಿ ಬಿಸಿ ಕಾಫೀ ತಂದುಕೊಟ್ಟರು ಹತ್ತಿರದ ಹೋಟೆಲಿನಿಂದ. ಸ್ನಾನ ಹೇಗೂ ಹೊಳೆಯಲ್ಲಿ ಆದ್ದರಿಂದ ಅದರ ಗೋಜಿಗೆ ಹೋಗಲಿಲ್ಲ. ಅಲ್ಲಿಗೆ ಕೊಂಡೊಯ್ಯ ಬೇಕಾದ ವಸ್ತ್ರಗಳನ್ನು ನನ್ನ ಹೆಗಲ ಚೀಲಕ್ಕೆ ಹಾಕಿ ತಯಾರಾದೆ.
ಅವರೆಲ್ಲರ ಜೊತೆ ಹೋಗಬೇಕಾಗಿರಲಿಲ್ಲ. ನನಗೆ ಹಾದಿಯೆಲ್ಲ ಪರಿಚಿತ. ಮತ್ತೆ ಅಂಥಾ ದೂರವೇನಲ್ಲ. ನಿದಾನವಾಗಿ ಹೆಜ್ಜೆ ಹಾಕತೊಡಗಿದೆ. ಅಲ್ಲಲ್ಲಿ ನಿದ್ರೆಗೂಡಿನಿಂದ ಹೊರಬರುತ್ತಿದ್ದ ವಿದೇಶೀ ಪ್ರವಾಸಿಗಳು ಕಾಣುತ್ತಿದ್ದರು. ಕೆಲವರು ಹತ್ತಿರದ ಚಪ್ಪರ ಹಾಕಿದ ಹೋಟೆಲ್ ಗಳಲ್ಲ್ಲಿ ಕೂತು ಚಹಾನೋ ಕಾಫೀನೋ ಹೀರುತ್ತಿದ್ದರು. ಅವರ ಜೊತೆಯಲ್ಲಿ ಸ್ಥಳೀಯ ಗಂಡಸರು, ಹೆಂಗಸರು, ಮಕ್ಕಳು ಹರಕು ಮುರುಕು ಇಂಗ್ಲೀಷಿನಲ್ಲಿ ಮಾತಾಡುವುದಕ್ಕೆ ಹೆಣಗುತ್ತಾ ಅವರಿಗೇನೋ ಹೇಳುವುದು ಕಂಡು ಮಜಾ ಎನಿಸಿತು. ಅವರೆಲ್ಲರ ಗುರಿ ಮತ್ತಷ್ಟು ಕಮಾಯಿ ಅಷ್ಟೇ. ಹೇಗಾದರೂ ತಮ್ಮ ಮಾಲುಗಳನ್ನು ಈ ಬಿಳಿಚರ್ಮದವರಿಗೆ ಮಾರುವುದು, ಹೆಚ್ಚು ಹಣ ಗಳಿಸುವುದು.
ನಡಿಗೆ ಮುಂದುವರೆಸಿದೆ. ನದೀ ತೀರ ಬಂತು. ಅದರ ಗುಂಟ ನಡೆದೆ. ಬಲಗಡೆಗೆ ಮೂರು ನಾಲಕ್ಕು ಕಡೆಗೆ ಮೆಟ್ಟಿಲು ಕಟ್ಟಿದ್ದಾರೆ ನದಿಯ ವರೆಗೆ. ಅಲ್ಲಿ ಸ್ನಾನ ಮಾಡುವ ಮತ್ತು ಬಟ್ಟೆ ಒಗೆಯುವ ಜನ ಕಂಡರು. ಎಡಗಡೆ ವಿರೂಪಾಕ್ಷ ದೇವಸ್ಥಾನದ ಹಳೇ ಕಟ್ಟಡಗಳು, ಮಂಟಪಗಳು, ಯಾವುದೋ ಮಠದ ಕೋಣೆ. ಎಲ್ಲಾ ಹಳತು ಹಳತು. ಇತಿಹಾಸ. ಮುತ್ತು, ರತ್ನಗಳನ್ನು ಬೀದಿಯಲ್ಲಿ ಮಾರಿದ ವೈಭವ ದೇಶದ ಪಳೆಯುಳಿಕೆಗಳು ಈಗ ನಮ್ಮ ಕಡೆ ನೋಡುತ್ತಾ “ ಒಂದಾನೊಂದು ಕಾಲದಲ್ಲಿ ನಮ್ಮಲ್ಲಿ ಜೀವವಿತ್ತು,ವೈಭವವಿತ್ತು, ಚೈತನ್ಯವಿತ್ತು,ಆದರವಿತ್ತು. ಈಗ ನಾವು ಬೇಡದವರಾಗಿದ್ದೇವೆ. ನಮ್ಮ ಒಂದು ಕಲ್ಲನ್ನಾದರೂ ನೆನಪಿಗಾಗಿ ಸಂರಕ್ಷಿಸಿ “ ಎಂದು ಕೇಳಿಕೊಳ್ಳುವಂತೆ ಕಂಡವು. “ ಇಲ್ಲಿಗೆ ಬಂದರೆ ಅಪ್ಪನಿಗೆ ಅದೇನಾಗುತ್ತೋ ಕಾಣೆ. ಮುಂದಕ್ಕೆ ಹೊರಡೋದೇ ಇಲ್ಲ. ಈ ಕಲ್ಲುಗಳಲ್ಲಿ ಅದೇನಿದೆಯೋ ಏನೋ ! ಅವುಗಳ ಜೊತೆ ಮಾತಾಡ್ತಾ ಇರೋವ್ರ ಹಾಗೆ ಕಾಣ್ತಾರೆ ಅಲ್ವೇನೇ ?” ಎನ್ನುತ್ತ ತನ್ನ ಅಕ್ಕನನ್ನು ಕೇಳುವ ಮಗನ ನೆನಪಾಯಿತು. ತಲೆ ಕೊಡವಿಕೊಂಡು ಗೊತ್ತಿರುವ ಹಾದಿಯಲ್ಲೆ ಹೆಜ್ಜೆ ಹಾಕಿದೆ.
ನನಗೆ ಪರಿಚಿತವಾಗಿರುವ ಮಂಟಪ ಬಂತು. ನನ್ನ ಗೆಳೆಯ ಮತ್ತು ಅವನ ತಮ್ಮಂದಿರು ಶಿರೋಮುಂಡನ ಮಾಡಿಕೊಂಡಿದ್ದು ಅವರಪ್ಪನ ಅಪರ ಕರ್ಮಗಳನ್ನು ಮುಗಿಸುತ್ತಿದ್ದರು. ನನ್ನನ್ನು ನೋಡಿದ ಗೆಳೆಯ ಪರಿಚಯದ ನಗೆ ನಕ್ಕ. ಅವನ ಜೊತೆ ಅವನ ಭಾವ ಕಂಡರು. ಅವರು ಹೊರಗಿನಿಂದ ಅವರೆಲ್ಲರಿಗೂ ಬೇಕಾದ ಸಹಾಯ ಒದಗಿಸುತ್ತಿದ್ದರು. ಅವರ ಜೊತೆ ಮಾತನಾಡಿದೆ. “ ತೀರ ಒಳ್ಳೆಯವರು.ಅವರ ಸಾವು ತೀರದ ನಷ್ಟ. ಎಷ್ಟು ಇದ್ದರೂ ಇನ್ನೂ ಬೇಕಾಗಿತ್ತು. ನನ್ನನ್ನಂತೂ ಅಳಿಯ ಅಂತ ನೋಡಲೇ ಇಲ್ಲ. ಮಗನಾಗಿದ್ದೆ ಅವರಿಗೆ “ ಎನ್ನುತ್ತ ಕಣ್ಣೀರು ತರಿಸಲು ಯತ್ನಿಸಿ ಸೋತರು. ಪರಿಚಯವಿರುವ ಒಬ್ಬಿಬ್ಬರು ಕಂಡರು. ಹೀಗೆ ನಾಲ್ಕೈದು ಜನ ಒಟ್ಟಾದೆವು.
“ನಡೀರಿ. ಮೇಲೆ ಕೋರೋಣ. ಈಗ ನಮ್ದೇನೂ ಕೆಲಸವಿಲ್ಲ.“ ಎನ್ನುತ್ತ ಯಾರೋ ಹೊರಡಿಸಿದರು. ಅಳಿಯ ಮಾತ್ರ “ ನೀವು ಹೊರಡಿ. ನಾನು ಇಲ್ಲಿ ಬೇಕಾಗ ಬಹುದು. “ ಎನ್ನುತ್ತ ಅಲ್ಲೇ ಉಳಿದರು. ನಾವೆಲ್ಲ ಮೆಟ್ಟಲೇರಿ ಮೇಲೆ ಕೂತೆವು. ಚಹಾ ಸಿಕ್ಕುತ್ತಿತ್ತು. ಎಲ್ಲರೂ ಚಹಾ ಸೇವಿಸಿದೆವು. ಹಾಗೇ ಸುತ್ತಮುತ್ತ ನೋಡುವಾಗ ಪರಿಚಯದ ಹೆಂಗೆಳೆಯರ ಬಳಗ ಗುಂಪಾಗಿ ಕೂತಿರುವುದು ಕಂಡಿತು.
“ ಬಾರೋ ಸುಧೀ ! ನಾವೆಲ್ಲ ಇಲ್ಲಿದೀವಿ “ ಎನ್ನುತ್ತಾ ಅಪರ್ಣಾ ಅದೇ ತೀರಿಕೊಂಡವರ ಮಗಳು ಕರೆದಳು. ಇವಳು ಅವರ ಸಂತತಿಯ ದೊಡ್ಡವಳು. ನಂತರ ಮೂವರು ತಮ್ಮಂದಿರು. ಸ್ವಲ್ಪ ಬೀಗುವುದು ಜಾಸ್ತಿ. ಚಿಕ್ಕಂದಿನಿಂದ ಜೊತೆಯಲ್ಲೇ ಬೆಳೆದಿದ್ದೆವು. ನಮಗೆಲ್ಲ ಅವಳೇ ಮಾರ್ಗದರ್ಶಿ. ಅವಳ ಜೊತೆಯಲ್ಲಿನ್ನೂ ನಾಲ್ಕೈದು ಹೆಂಗಸರು ಕೂತಿದ್ದರು. “ನೀನು ಬರ್ತೀಯಾ ಅಂತ ಗೊತ್ತಿತ್ತು ಬಿಡು. ಅದೂ ಹತ್ತನೆಯ ದಿನದ ಬಗ್ಗೆ ನಮಗೆಲ್ಲ ಹೇಳಿದ್ದಿಯಲ್ಲ. ನಾನಂತೂ ಕಾಯ್ತಾ ಇದ್ದೆ. ಬಾ ಕೂತ್ಕೊ,” ಎನ್ನುತ್ತ ಜಾಗ ಮಾಡಿಕೊಟ್ಟಳು. ನಾನು ಅವಳ್ನ ಅಕ್ಕ ಅಂತಲೇ ಕರೀತಿದ್ದೆ. “ ಇನ್ನೂ ಇರ್ತಾರೆ ಅಂತ ಅಂದ್ಕೊಂಡಿದ್ದೆ. ಅದೇನೋ ಅಕಸ್ಮಾತ್ತಾಗಿ ಹೀಗಾಯ್ತು “ ಅಂತ ಶಿಷ್ಟಾಚಾರದ ಮಾತು ಹೇಳಿದೆ. “ ಹೌದು ಸುಧೀ! ನನಗಂತೂ ಅಪ್ಪನ್ನ ಕಳ್ಕೊಂಡೆ ಅಂತ ಅನಿಸ್ತಾನೇ ಇಲ್ಲ. ‘ಏನಮ್ಮಾ ಅಪರ್ಣಾ ಚೆನ್ನಾಗಿದ್ದೀಯಾ ? ಮಕ್ಕಳೇನಂತಾರೆ ?’ ಎನ್ನುವ ಅವರ ಸ್ವರವೇ ಕಿವಿಯಲ್ಲಿ ಕೂತು ಹೋಗಿದೆ. ಮರೀಲಿಕ್ಕೇ ಆಗ್ತಾ ಇಲ್ಲ. “ ಎನ್ನುತ್ತ ಕಣ್ಣಿರಿಡತೊಡಗಿದಳು. ಅವಳ ಜೊತೆ ಕೂತ ಮತ್ತೊಬ್ಬ ಹೆಂಗಸು “ ಸುಧಾರಿಸಿಕೋ ಅಪರ್ಣಾ” ಎನ್ನುತ್ತಾ ಸಮಾಧಾನ ಮಾಡಿದಳು. ಕಣ್ಣೊರೆಸಿಕೊಂಡು ನನ್ನತ್ತ ನೋಡುತ್ತಾ ಅವಳು “ ನೀನು ನಮ್ಮ ಸಂಬಂಧಿಯಲ್ಲ. ಏನಲ್ಲ. ಆದ್ರೂ ಅಪ್ಪನ ಮೇಲಿನ ವಿಶ್ವಾಸದಿಂದ ಇಲ್ಲಿವರೆಗೂ ಬಂದೆ. ಆದ್ರೆ ನೋಡು ನಮ್ಮ ಚಿಕ್ಕಪ್ಪನ ಮಗ ಇದ್ದಾನಲ್ಲಾ , ಪವನ್ ಅವನು ಬರಲೇ ಇಲ್ಲ. ಅವನಿಗೆ ಅಪ್ಪ ಅದೆಷ್ಟು ಮಾಡಿದ್ರು. ಮನೆಯಲ್ಲಿಟ್ಟುಕೊಂಡು ಓದಿಸಿದ್ರು. ಅವನಿಗೆ ಅದರ ವಿಶ್ವಾಸಾನೇ ಇಲ್ಲ.ಅದೇನೋ ಡಿಲ್ಲಿಗೆ ಹೋಗ್ಬೇಕು ಬರ್ಲಿಕ್ಕೆ ಆಗಲ್ಲಣ್ಣ ಅಂತ ಭಾಸ್ಕರನಿಗೆ ಹೇಳಿದ್ನಂತೆ. ಅಪ್ಪ ಅವನಿಗೆ ಓದು ಕಲಿಸದಿದ್ರೆ ಇವನಿಗೆ ಆ ಕೆಲ್ಸ ಸಿಕ್ತಿತ್ತಾ, ಡಿಲ್ಲಿಗೆ ಹೋಗ್ತಿದ್ನಾ “ ಅಂದಳು.
ನನಗೆ ಗೊತ್ತಿರುವ ಹಾಗೆ ಇವರ ಅಪ್ಪ ಯಾವುದನ್ನೂ ಅಪೇಕ್ಷಿಸದೆ ಉಪಕಾರ ಮಾಡಿದವರು. ಇನ್ನೊಬ್ಬರಿಂದ ತನಗೇನಾದೀತು ಎನ್ನುವ ಗೊಡವೆಗೇ ಹೋದವರಲ್ಲ. ಪಕ್ಕಾ ಗಾಂಧೇಯವಾದಿ. ಗಾಂಧಿ ಜಯಂತಿಯ ದಿನ ಹರಿಜನ ಕೇರಿಗೆ ಸ್ಲೇಟು, ಬಳಪ, ಪುಸ್ತಕಗಳು ತೊಗೊಂಡು ಹೋಗಿ ಅಲ್ಲಿಯ ಮಕ್ಕಳಿಗೆ ಹಂಚುತ್ತಿದ್ದರು. ಆಗ ಅವರಿಗೆ ಬರುತ್ತಿದ್ದ ಸಂಬಳದಲ್ಲಿ ಅವರು ಮಾಡುತ್ತಿದ್ದ ಆ ಖರ್ಚು ಭಾರೀನೇ ಎನ್ನಬಹುದು. ಒಬ್ಬರ ಬಗ್ಗೆ ತಾತ್ಸಾರ ಮಾತಾಗಲಿ, ಹೇಳನೆಯಾಗಲಿ ಅವರಿಂದ ಬರುತ್ತಿರಲಿಲ್ಲ. ಸದಾ ತನ್ನ ಕೆಲಸ, ಅದಕ್ಕೆ ಬೇಕಾದ ವ್ಯಾಸಂಗ, ಬಿಡುವಿನ ಸಮಯದಲ್ಲಿ ಇಕೋ ಇಂಥ ಗಾಂಧೀ ಚಟುವಟಿಕೆಗಳೇ ಅವರ ಹವ್ಯಾಸವಾಗಿದ್ದವು. ಸದಾ ಉತ್ಸಾಹದ ಚಿಲುಮೆಯಾಗಿರುತ್ತಿದ್ದರು. ಎಲ್ಲರಿಗೂ ಹುರುಪು ತುಂಬುತ್ತಿದ್ದರು. ಯೋಗಾಸನ, ಪ್ರಾಣಾಯಾಮ ತಪ್ಪಿಸುತ್ತಿರಲಿಲ್ಲ.
ಮೈಯನ್ನು ಪಳಗಿಸಿ ತನಗೆ ಬೇಕಾದ ಹಾಗೆ ದುಡಿಸುತ್ತಿದ್ದರು. ನಿವೃತ್ತಿ ಪಡೆದಮೇಲೆ ತನ್ನ ವಿಷಯವಾದ ಕೃಷಿಯಲ್ಲಿ ತನಗಿರುವ ಅನುಭವವನ್ನು ಇತರರಿಗೆ ಹಂಚಬೇಕೆಂಬ ಸದುದ್ದೇಶದಿಂದ, ಒಂದು ರೈತ ಸಂಘದಲ್ಲಿ ವಿಸ್ತರಣಾಧಿಕಾಯಿಯಾಗಿ ಸೇರಿ, ಬೈಸಿಕಲ್ಲಲ್ಲಿ ರೈತರ ಹೊಲಗಳಿಗೆ ಹೋಗಿ ಅವರಿಗೆ ಮಾರ್ಗದರ್ಶನ ನೀಡುತ್ತಿದ್ದರು. ಅವಕ್ಕೆಲ್ಲ ಹಣ ಬಯಸಿದವರೇ ಅಲ್ಲ. ಭಗವದ್ಗೀತೆಯ ತಿರುಳನ್ನು ತನ್ನ ಜೀವನಕ್ಕೆ ಅಳವಳಿಡಿಸಿಕೊಂಡಿದ್ದವರು. “ನಿನ್ನ ಕರ್ಮವನ್ನು ನೀನು ಮಾಡು, ಉಳಿದದ್ದನ್ನು ಪರಮಾತ್ಮನಿಗೆ ಬಿಡು. ನಿನಗೆ ಏನು, ಯಾವಾಗ ಕೊಡಬೇಕೆನ್ನುವುದು ಅವನಿಗೆ ಗೊತ್ತಿದೆ. ಕೊಟ್ಟೇ ಕೊಡುತ್ತಾನೆ, ಚಿಂತೆ ಬೇಡ” ಎನ್ನುವುದು ಅವರ ಹಿತವಚನವಾಗಿತ್ತು. ನಾನು ಅವರಿಂದಲೇ ಇವೆಲ್ಲವನ್ನೂ ಕಲಿತಿದ್ದೆ.
ಅಪರ್ಣಳು ಮಾತಾಡುವ ಅವರ ಚಿಕ್ಕಪ್ಪನ ಮಗನ ವಿಚಾರ ನನಗೆ ಗೊತ್ತಿತ್ತು. ಅವನು ಓದಿನಲ್ಲಿ ತುಂಬಾ ಚುರುಕಾಗಿದ್ದ. ಅವರಪ್ಪನಿಗೆ ಅವನನ್ನು ಓದಿಸುವಷ್ಟು ಚೈತನ್ಯವಿರಲಿಲ್ಲ. ಅವನ ಓದಿನ ಹುಮ್ಮಸ್ಸು ಕಂಡ ಈ ನನ್ನ ಪರಿಚಿತರು, ಅವನಿಗೆ ಆರ್ಥಿಕ ಪ್ರೋತ್ಸಾಹ ನೀಡಿದ್ದರು. ಅದು ಅವರ ಮನೆಯವರಿಗಾರಿಗೂ ಹಿಡಿಸಿರಲಿಲ್ಲ. ಅವರ ಹತ್ತಿರ ಹೇಳಿದಾಗ ಇವರು ತಮ್ಮ ನಿಲುವನ್ನು ಮುಂದಿಟ್ಟರು. “ ನಿಮ್ಮೆಲ್ಲರ ಬೇಕು ಬೇಡಗಳನ್ನೆಲ್ಲಾ ನೋಡಿಕೊಳ್ಳುತ್ತಿರುವಾಗ ನಾನು ಇನ್ನೊಬ್ಬರಿಗೆ ಸಹಾಯ ಮಾಡಿದರೆ ತಪ್ಪೇನು “ ಅಂತ. ಅವರ ಹೆಂಡತಿಯೂ ಸೇರಿ ಇದರ ಬಗ್ಗೆ ಅವರನ್ನು ಯಾರೂ ಮೆಚ್ಚಿರಲಿಲ್ಲ. ಇವರು ಅದಕ್ಕೆ ಬೆಲೆಯೇ ಕೊಡಲಿಲ್ಲ. ನನ್ನ ಮುಂದೆ ಅದೆಷ್ಟೊ ಸಲ ಹೇಳಿಕೊಂಡು ಹಲುಬಿದ್ದರು. ಪವನ್ ಅವನ ದೊಡ್ಡಪ್ಪನ ಬಗ್ಗೆ ತುಂಬಾ ಅಭಿಮಾನವಿಟ್ಟುಕೊಂಡಿದ್ದ. ನನಗದು ಚೆನ್ನಾಗಿ ಗೊತ್ತಿತ್ತು. ಇವತ್ತು ಅವನು ಬಂದಿರಲಿಲ್ಲವೆಂದರೆ ಅವನಿಗ ತುರ್ತು ಕೆಲಸವರಬೇಕೇ ವಿನಃ ತಪ್ಪಸುವಂಥವನಲ್ಲ. ಅವನ ಮನಸ್ಸು ಅದೆಷ್ಟು ಮಿಡುಕುತ್ತಿತ್ತೋ ನಂಗೆ ಗೊತ್ತಿತ್ತು. ಹಾಗಂತ ಇವರ ಮುಂದೆ ಅವನನ್ನ ಸಮರ್ಥಿಸಿದರೆ ಇವರೆಲ್ಲರ ಬಾಯಿಗೆ ಸಿಕ್ಕ ಹಾಗುತ್ತದೆ. ಅದಕ್ಕೆ “ ಇನ್ನೂ ವೈಕುಂಠ ಇದೆಯಲ್ಲಕ್ಕಾ. ಬರ್ತಾನೆ ಬಿಡು “ ಎನ್ನುವ ಸಮಾಧಾನದ ಮಾತನ್ನು ಹೇಳಿ ಈಚೆ ಬಂದೆ.
ಮನುಷ್ಯ ತನ್ನ ನಿಲುವಿನ ಬಗ್ಗೆ ಅದೆಷ್ಟು ಗಟ್ಟಿಯಾಗಿದ್ದರೂ, ಕೆಲವೊಮ್ಮೆ ತನ್ನವರೇ ಅದರ ಬುಡವನ್ನು ಅಲುಗಾಡಿಸುವುದನ್ನು ನಿಲ್ಲಿಸಲಾಗುವುದಿಲ್ಲ. ಅವನ ಕುಟುಂಬದ ಸದಸ್ಯರೆಲ್ಲರನ್ನೂ ತನ್ನೊಟ್ಟಿಗೆ ಅದರ ಕಡೆಗೆ ಕರೆದೊಯ್ಯಲು ವಿಫಲನಾಗುತ್ತಾನೆ. ಅದೂ ಅದು ಹಣಕಾಸು ಸಂಬಂಧೀ ವಿಷಯವಾಗಿದ್ದರಂತೂ ಸರಿಹೋಯಿತು. ಅವರೆಲ್ಲರೂ ಸೇರಿ ಅವನನ್ನು ಬೇರೇಯವನಂತೆ ನೋಡುತ್ತಾರೆ. ನನ್ನ ಪರಿಚಿತರು ಇದಕ್ಕೆ ಹೊರತಾಗಿರಲಿಲ್ಲ.
ಅವರ ಪತ್ನಿಯನ್ನು ಇನ್ನೂ ಮಾತಾಡಸಲಿಲ್ಲ ಅಂತ ನೆನಪಾಯ್ತು. ಅವರ ಅಳಿಯನ ಹತ್ತಿರ ವಿಚಾರಿಸಿದೆ. ಮಂಟಪದ ಮೂಲೆಯಲ್ಲೆ ಇನ್ಯಾರೋ ಅವರ ತರದವರ ಜೊತೆಯಲ್ಲಿದ್ದರು. ಅರವತ್ತೈದು ವರ್ಷದವರು. ಆದರೂ ಅವರಿಗೂ ಈ ವಿಧಿ ತಪ್ಪುವುದಿಲ್ಲ. ಇದೊಂದು ನಮ್ಮ ಸಂಪ್ರದಾಯದಲ್ಲಿಯ ಕೆಟ್ಟ ಪದ್ಧತಿ ಎಂದು ನನ್ನ ಅಭಿಪ್ರಾಯ. ಗಂಡನನ್ನು ಕಳೆದುಕೊಂಡ ದುಃಖದಲ್ಲಿದ್ದ ಅವರನ್ನು ಕರೆಸಿ ಅವರ ಸುಮಂಗಲೀ ಲಕ್ಷಣಗಳನ್ನು ಕಿತ್ತು ಇವತ್ತಿನಿಂದ ನೀನು ಹೀಗೇ ಇರಬೇಕು ಎಂದು ಸಾರುವ ಈ ಕಾರ್ಯಕ್ರಮ ನನಗೆ ತೀರ ಹಿಡಿಸದ್ದಾಗಿತ್ತು. ಗಂಡನನ್ನು ಕಳೆದುಕೊಂಡ ದುಃಖದ ಜೊತೆಗೆ ವೈಧವ್ಯದ ಅವಲಕ್ಷಣಗಳನ್ನು ಮುಂದಿನ ಜೀವನವೆಲ್ಲ ಹೊತ್ತು ತಿರುಗು ಎನ್ನುವುದು ಅದೆಷ್ಟರ ವರೆಗೆ ಸರಿ ? ಗಂಡ ಹೋದರೇನು ಅವರು ಒಬ್ಬ ವ್ಯಕ್ತಿಯಲ್ಲವೇ ? ಅವರಿಂದ, ಅವರ ಅನುಭವಗಳಿಂದ ಸಮಾಜಕ್ಕೆ ಯಾವರೀತಿಯಾದರೂ ಒಳಿತಾಗಬಹುದಲ್ಲವೇ ? ಅವರನ್ನು ಮೂಲೆಗುಂಪಾಗಿಸುವುದು ಮಾತ್ರ ಅಕ್ಷಮ್ಯ ಅಪರಾಧ ಎನಿಸುತ್ತದೆ.
ಅವರ ಹತ್ತಿರ ಹೋದೆ. “ ಬಾ ಸುಧೀ ! ನೋಡಿದೆಯಾ ! ಇವರು ನನ್ನನ್ನು ಒಬ್ಬಳನ್ನಾಗಿಸಿ ಹೋಗಿಯೇ ಬಿಟ್ಟರು. ಅಂತ್ಯಕಾಲದಲ್ಲಿ ನಾನು ಪಕ್ಕದಲ್ಲಿರಲಿಲ್ಲ. ನಿಮ್ಮಕ್ಕನ ಮನೆಗೆ ಹೋಗಿದ್ದೆ. ಸಡೆನ್ನಾಗಿ ಹೋಗಿ ಬಿಟ್ಟರು. ಇನ್ನು ನಾನು ಈ ಜೀವನ ಹೇಗೆ ಕಳೆಯೋದು? “ ಎನ್ನುತ್ತ ರೋದಿಸ ತೊಡಗಿದರು. ಇಷ್ಟು ವರ್ಷಗಳ ವೈವಾಹಿಕ ಜೀವನದ ಸಂಗಾತಿಯನ್ನು ಕಳೆದುಕೊಂಡದ್ದು ಚಿಂತಾಜನಕ ಪರಿಸ್ಥಿತಿಯೇ ಸರಿ. “ ಅವರ ಕರ್ತವ್ಯ ಮುಗಿಸಿ ಹೋದರು ಬಿಡಿ. ಇನ್ನು ಆ ಮನೆಯಲ್ಲಿ ನೀವು ಅವರ ಸ್ಥಾನ ತೊಗೊಂಡು ಮಕ್ಕಳಿಗೆ ಮಾರ್ಗದರ್ಶನ ಮಾಡಬೇಕು.” ಎನ್ನುವ ಸಾಂತ್ವನ ನುಡಿ ಹೇಳಿದೆ. “ ಈ ಮಕ್ಕಳು ನನ್ನ ಮಾತು ಕೇಳ್ತಾವಾ ಏನು? ಅವರಿರುವಾಗಲೇ ಅವರ ಮಾತು ನಡೆಯುತ್ತಿರಲಿಲ್ಲ. ಇವರಾದರೂ ಕೇಳಿದರಾ ? ಸ್ವಲ್ಪ ಹಣ ತೆಗೆದಿಡಿ. ಈ ಮಕ್ಕಳನ್ನ ನಂಬಲಿಕ್ಕೆ ಆಗುವುದಿಲ್ಲ ಅಂತ ಬಡ್ಕೊಂಡೆ. ಸ್ವಲ್ಪ ಹಣ ಇದ್ದರೆ ಸಾಕು. ಅದ್ಯಾವ ಬೀದಿ ಭಿಕಾರಿಗಳಿಗೆ ಓದಿಗೆ ಅಂತ ಖರ್ಚು ಮಾಡೋದು. ವಿದ್ಯಾದಾನ ಮಹಾದಾನ ಅಂತ ನೀತಿಬೋಧೆ ಬೇರೇ. ಮಕ್ಕಳು ಸಹ ಎಷ್ಟೂಂತ ಸುಮ್ಮನಿರ್ತಾರೆ ಹೇಳು? ಈಗ ನೋಡು. ನನ್ನನ್ನ ಯಾರು ನೋಡ್ಕೊಳ್ತಾರೆ ಹೇಳು “ ಮತ್ತೆ ರೋದನ ಮುಂದುವರೆಯಿತು. ಜೊತೆಗಿರುವ ಹೆಂಗಸರು ಸಮಾಧಾನ ಮಾಡಿದರು. ಆರ್ಥಿಕವಾಗಿ ಅಲ್ಲದಿದ್ದರೂ ಅವರ ಸಲಹೆಗಳ ಮತ್ತು ಸಮಯದ ದಾನ ತೊಗೊಂಡವರಲ್ಲಿ ನಾನೂ ಒಬ್ಬನಾಗಿದ್ದೆ. ನನ್ನ ಪರಿಚಿತರಲ್ಲಿ ನಾನು ಕಂಡ ಆದರ್ಶ ಗುಣಗಳು ಅವರ ಮನೆಯವರಿಗೇಕೆ ಮುಳುವಾದವು ಎನ್ನುವುದು ನನಗೆ ಅರ್ಥಾವಾಗಿಲ್ಲ. ಸಮಾಜದಲ್ಲಿ ಅವರಿಗೊಂದು ಒಳ್ಳೆಯ ಹೆಸರಿತ್ತು. ಅವರ ಹೆಸರು ಹೇಳಿದರೆ ಸಾಕು, ಯಾವುದೇ ಸರಕಾರಿಯ ಕಚೇರಿಯಲ್ಲಿ ಕೆಲಸ ಮಾಡಿಕೊಡುತ್ತಿದ್ದರು. ಅವರ ಮಕ್ಕಳೇ ಅವರ ವ್ಯಕ್ತಿತ್ವದ ಲಾಭ ಪಡೆದುಕೊಂಡಿದ್ದರು. ಅವರಿಗೆ ಅಷ್ಟು ಹೆಸರು ಬರಲು ಕಾರಣ ಅವರ ಉದಾರ ಗುಣವೇ. ಮಕ್ಕಳಿಗೆ ಅವರ ಹೆಸರಿನ ಲಾಭ ಬೇಕು, ಆದರೆ ಆ ಗುಣ ಮಾತ್ರ ಬೇಡ. ಎಂಥ ವಿಪರ್ಯಾಸ !
ಅಷ್ಟರಲ್ಲಿ ಪುರೋಹಿತರಿಂದ ಅವರಿಗೆ ಕರೆ ಬಂತು. ನಾನು ಈಚೆ ಬಂದು ಕೂತೆ. ಮತ್ತೆ ನನ್ನ ಅಂತರ್ಮಥನ ಮುಂದುವರೆಯಿತು. ನಾವೆಲ್ಲ ರಾಮನನ್ನು ಉದಾಹರಣೆಯಾಗಿ ತೊಗೊಳ್ಳುತ್ತೇವೆ. ನೀತಿವಂತ, ಸತ್ಯವಾನ, ಪಿತೃವಾಕ್ಯ ಪರಿಪಾಲಕ, ಏಕಪತ್ನೀ ವ್ರತ, ಪ್ರಜೆಗಳನ್ನು ನಿಯತ್ತಿನಿಂದ ಆಳಿದ ಮಹಾನ್ ರಾಜ, ರಾವಣಾಸುರನನ್ನು ಕೊಂದ ಪರಾಕ್ರಮಿ. ಇವೆಲ್ಲ ಆದರ್ಶ ಗುಣಗಳನ್ನು ಅವನಲ್ಲಿ ಕಾಣುತ್ತೇವೆ. ಆದರೇನು ಒಬ್ಬ ಅಗಸ ಅವನಿಗೆ ಮಾರ್ಕು ಕೊಡಲಿಲ್ಲ. ಗಾಂಧೀಜೀಯೂ ಅಷ್ಟೇ. ಅವನ ಅಹಿಂಸೆ, ಸತ್ಯ ವಾಕ್ಯ ಪಾಲನೆ, ಉಪವಾಸ ಸತ್ಯಾಗ್ರಹ ಜಗತ್ತಿಗೆ ಮಾದರಿಯಾದವು. ಇತರೆ ದೇಶದ ನೇತಾರರು ಅವನ ಹೆಜ್ಜೆಗಳಲ್ಲಿ ನಡೆದು ವಿಶ್ವವಿಖ್ಯಾತರಾದರು. ಆದರೆ ನಮ್ಮವನೇ ಆದ ಗೋಡ್ಸೆಗೆ ಅವನ ನಿಲುವು ಸರಿ ಕಾಣಲಿಲ್ಲ. ಗುಂಡಿಟ್ಟು ಕೊಂದ. ನಮ್ಮ ಜೀವನದ ನಿಲುವುಗಳು ನಮ್ಮ ಸಲುವಾಗಿ ಮಾತ್ರಾನಾ? ಅಥವಾ ಸಮಾಜಕ್ಕಾಗಿಯಾ ? ನಮ್ಮ ಮನೆಯವರು ಆ ಸಮಾಜದ ಜೊತೆಗೆ ಯಾಕಿಲ್ಲ? ನಾವು ನಂಬಿದ ಮತ್ತು ಆಚರಣೆಗೆ ತಂದ ನೀತಿ ನಿಯಮ ಮನೆಯರ ಮೇಲೇಕೆ ಪ್ರಭಾವ ತೋರುವುದಿಲ್ಲ ? ಹತ್ತು ಜನ ಹೊಗಳುವ ಕೆಲಸ ಮಾಡಿದ ಮನುಷ್ಯನನ್ನು ಸಮಾಜ ಕೀರ್ತಿಸುತ್ತದೆ. ಅದು ಹಾಕಿದ ಹೂಮಾಲೆ ಹಿಡಿದು ಮನೆಗೆ ಬಂದಾಗಿ ಮನೆಯವರ ಕೆಕ್ಕರಗಣ್ಣು ಅವರನ್ನು ಪ್ರಶ್ನಿಸುತ್ತದೆ. ಇದರಿಂದ ನಮಗೇನಾಗಬೇಕಿದೆ ಎಂದು. ಇದು ನ್ಯಾಯವಾ? ಹಾಗಾದರೆ ಮನುಷ್ಯ ತನ್ನವರಿಗಾಗಿ ಬದುಕಬೇಕಾ ಅಥವಾ ಸಮಾಜಕ್ಕಾಗಿಯಾ ? ಒಂದೂ ಅರ್ಥವಾಗುವುದಿಲ್ಲ.
ಮಂಟಪದಿಂದ ಹೊರಬಂದ ನನ್ನ ಗೆಳೆಯ ಮತ್ತು ಅವನ ತಮ್ಮಂದಿರು ನನ್ನ ಅಲೋಚನೆಯ ಸರಳಿಗೆ ತಡೆ ಹಾಕಿದರು. “ ಏನ್ ಸುಧೀ ಹೇಗಿದೀಯ ? ಬೆಂಗಳೂರೇನಂತಿದೆ ? ಚಳಿನಾ? ಅದೇನ್ ಟ್ರಾಫಿಕ್ಕಪ್ಪಾ ನಿಮ್ಮೂರಲ್ಲಿ !
ಸಾಕು ಸಾಕಾಗಿ ಹೋಗತ್ತೆ. ಮೊನ್ನೆ ನನ್ನ ಬಾವಮೈದುನ ಇದ್ದಾನಲ್ಲಾ ಕೋರಮಂಗಲದಲ್ಲಿ ಅವನ ಮನೆಯಲ್ಲಿ ಎರಡು ದಿನ ಇದ್ದು ವಾಪಸು ಬರಲಿಕ್ಕೆ ರಾತ್ರಿ ೯.೩೦ ಬಸ್ಸಿಗೆ ಎಂಟು ಗಂಟೆಗೇ ಹೊರಟೆ. ಆದ್ರೆ ಆ ವಾಹನಗಳ ಜಂಗುಳಿಯಲ್ಲಿ ಮೆಜೆಸ್ಟಿಕ್ ಗೆ ಬರುವಾಗಿ ಒಂಬತ್ತೂ ಇಪ್ಪತ್ತಾಗಿತ್ತು. ಓಡೋಡಿ ಹೋಗಿ ಬಸ್ಸು ಹತ್ತಿದೆ. ಸಾಕಪ್ಪಾ ಸಾಕು ನಿನ್ನ ಬೆಂಗಳೂರಿನ ಸಹವಾಸ “ ಎನ್ನುತ್ತಿದ್ದ ನನ್ನ ಗೆಳೆಯ. “ ಏ ಬಿಡು ಮಾರಾಯಾ ! ನಾನೇನು ಬೆಂಗಳೂರನ್ನು ಕಟ್ಟಿಸಲಿಲ್ಲ, ಬೆಳೆಸಲಿಲ್ಲ. ನಂಗೇನಂತೆ ಅದು ಹ್ಯಾಗಿದ್ದರೆ ! ಅದ್ಸರಿ. ದೊಡ್ಡಮ್ಮನ ಬಗ್ಗೆ ಏನು ಆಲೋಚನೆ ಮಾಡಿದೀರಿ ?” ಎಂದೆ. ಜೇನಿನ ಹುಟ್ಟಿಗೆ ಕೈಹಾಕಿದೆ ಎಂದೆನಿಸಿತು. ಆದರೆ ನನ್ನ ಗೆಳೆಯ ಅತಿ ಸಂಯಮದಿಂದ “ ಏನ್ಸುಧೀ ಹಾಗಂತೀ ! ಅವಳ ಮುಂದಿನ ಜೀವನದ ಬಗ್ಗೆ ನಾವೇನು ಆಲೋಚನೆನೇ ಮಾಡ್ಲಿಲ್ಲ ಅಂದ್ಕೊಂಡಿಯಾ ! ಈ ಕಾರ್ಯಕ್ರಮಗಳೆಲ್ಲ ಮುಗಿದ ಮೇಲೆ ಇದರ ಖರ್ಚು ಎಷ್ಟು ಬಂತು ಅಂತ ಗೊತ್ತಾಗ್ದದೆ. ನಿನ್ನಗೆ ಅಪ್ಪನ ಬಗ್ಗೆ ಗೊತ್ತೇ ಇದೆಯಲ್ಲ. ಅವರು ತಮಗೆ ತಿಳಿದ ಹಾಗೆ ಖರ್ಚು ಮಾಡಿದರೇ ವಿನಾ ನಮಗೆ ಬೇಕಾದ ಹಾಗಲ್ಲ. ಕೊನೇ ಹಂತದಲ್ಲಿ ಒಂದು ಮನೆ ತೊಗೊಂಡ್ರು ಅಂತಿಟ್ಕೋ. ಆದ್ರೆ ಅದು ಯಾವ ತರದ್ದು ! ರೈಲ್ವೇ ಬೋಗಿಗಳ ತರ ಲೈನಾಗಿ ಮೂರು ರೂಮು, ಹೊರಗಡೆ ಬಚ್ಚಲ ಮನೆ ಮತ್ತು ಲ್ಯಾಟ್ರಿನ್. ಜಾಗದ ಬೆಲೆ ಸುಮಾರಾಗಿದ್ರೂ ನಮ್ಮೆಲ್ಲರಿಗೇ ಆಗಬೇಕಲ್ಲ. ನೋಡ್ಬೇಕು. ಇದರ ಖರ್ಚು ಎಷ್ಟು ಬರತ್ತೆ, ಒಬ್ಬೊಬ್ಬರು ಎಷ್ಟು ಕೊಡಬೇಕು, ಅಕ್ಕ ಕೊಡ್ತಾಳಾ ಇಲ್ಲೋ ಗೊತ್ತಿಲ್ಲ. ಹೊರಗಿನವರಿಗೆ ಅದೆಷ್ಟೋ ಮಾಡಿದ ಅಪ್ಪನಿಗೆ ನಮ್ ಬಗ್ಗೆ ಕಾಳಜಿನೇ ಇರ್ಲಿಲ್ಲ ನೋಡು. ಇದಕ್ಕೆ ಅಂತ ಸ್ವಲ್ಪ ಹಣ ಇಟ್ಟಿದ್ರೆ ನಮ್ಮ ಮೇಲೆ ಭಾರ ಬೀಳ್ತಿರ್ಲಿಲ್ಲ ಅಲ್ಲ. ಬರೀ ಇತರೆ ಜನಕ್ಕೆ ಉಪಕಾರ ಮಾಡೋದ್ರಲ್ಲೇ ಕಳದ್ರು. ಅವರ ಸಹಾಯ ಪಡೆದೋರು ನಮಗೆಷ್ಟು ಮಾಡ್ತಿದಾರೆ ಅಂತ ನೋಡ್ತಾನೇ ಇರ್ಲಿಲ್ಲ. ನಿನ್ನ ಅಂತಿದೀನಿ ಅಂದ್ಕೊಬೇಡ. ನೀನು ಬರೀ ಅವರ ಮಾರ್ಗದರ್ಶನ ಪಡೆದೋನು. ಅವರ ಹಣ ಸಹಾಯ ಪಡೆಯಲಿಲ್ಲ ಬಿಡು. ಬೇರೇಯವರ ಸುದ್ದಿ ನಾನು ಹೇಳೋದು. ಅಮ್ಮನಿಗೆ ಈಗ ಬರೋ ಪೆನ್ಷನ್ ಕೂಡಾ ಅರ್ಧನೇ ಬರುತ್ತೆ. ಇವರೆಲ್ಲ ಏನಂತಾರೋ ನೋಡ್ಬೇಕು “ ಅಂತ ಇನ್ನೂ ಏನೋ ಹೇಳೋದ್ರಲ್ಲಿ “ಅಣ್ಣಾ ! ಧರ್ಮೋದಕಕ್ಕೆ ಎಲ್ರೂ ಬರಬೇಕಂತೆ “ ಎನ್ನುತ್ತಾ ಅವನ ತಮ್ಮ ಕೂಗಿದ. “ ಬಾ ಮತ್ತೆ ಮಾತಾಡೋಣ. ವೈಕುಂಠದ ವರೆಗೂ ಇರ್ತೀಯಲ್ಲ.” ಎನ್ನುತ್ತಾ ನನ್ನ ಪ್ರತಿಕ್ರಿಯೆಗಾಗಿ ಕಾಯದೇ ಹೊರಟುಬಿಟ್ಟ. ಹೇಳಿ ಕೇಳಿ ಅವನು ಲೆಕ್ಕ ಪತ್ರದವನಾಗಿದ್ದ. ತನ್ನದೇ ಭಾಷೆಯಲ್ಲಿ ಪರಿಸ್ಥಿತಿ ವಿವರಿಸಿದ್ದ ತನ್ನ ಮೇಲೆ ಯಾವ ಹೊಣೆಯೂ ಹಾಕಿಕೊಳ್ಳದೆ.
ನಂತರದ ಕಾರ್ಯಕ್ರಮ ಎಂದಿನಂತೆ ನಡೆಯಿತು. ಚಳಿಗಾಲವಾಗಿದ್ದು ಎರಡೆರಡು ಸಲ ಸ್ನಾನ ಮಾಡುವಾಗ ಕಿರಿಕಿರಿಯಾಯಿತು. ಹಾಗೇ ನಡುಗುತ್ತಾ ಬಂದು ನನ್ನ ಕರ್ತವ್ಯವನ್ನು ಮುಗಿಸಿದೆ. ಕಡಲೆ ತಿಂದು ಉಗುಳುತ್ತಲೇ ಇಹ ಲೋಕದ ಋಣ ಮುಗಿಯುತ್ತದೆ ಎನ್ನುತ್ತಿದ್ದರು ಪುರೋಹಿತರು. ಆಗ ಮಾತ್ರ ಕಣ್ಣು ತೇವವಾದವು. ಒಬ್ಬ ಸಜ್ಜನರನ್ನು ಕಳೆದುಕೊಂಡ ಭಾವನೆಯ ಲಹರಿ ಹಾದು ಹೋಯಿತು. ಒಂದು ನಿಟ್ಟುಸಿರು ಬಿಟ್ಟು ಸಿವಿಲ್ ಡ್ರೆಸ್ಸಿಗಿಳಿದೆ.
ಆಗಲೇ ಮಧ್ಯಾಹ್ನ ಒಂದು ಗಂಟೆಯಾಗಿತ್ತು. “ ಈದಿನ ಅಲ್ಲಿ ಊಟ ಮಾಡಿದರೆ ಹದಿಮೂರನೇ ದಿನ ಸಹ ಮಾಡ್ಬೇಕಾಗುತ್ತೆ. ನೆನಪಿಡಿ. ಅಲ್ಲಿರೋದೂ ಕಷ್ಟ, ಬಂದು ಹೋಗೋದೂ ಕಷ್ಟ “ ಅಂತ ನನ್ನವಳು ಸೂಚನೆ ಕೊಟ್ಟಿದ್ದಳು. ಅದೇ ಮಾತಿನ ಚರ್ಚೆ ನಡೆಯುತ್ತಿತ್ತು. ಅದರಲ್ಲಿ ಕೂದಲು ಹಣ್ಣಾದವರೊಬ್ಬರು “ ಅದು ಕ್ಷೇತ್ರಗಳಲ್ಲಿ ವರ್ತಿಸುವುದಿಲ್ಲ. ಇದು ಪಂಪಾ ಕ್ಷೇತ್ರ. ಊಟ ಮಾಡಬಹುದು. ಎಲ್ರೂ ಏಳಿ. ಪುರೋಹಿತರ ಮನೆಯಲ್ಲೇ ಊಟ ಸಿದ್ಧವಾಗಿರುತ್ತದೆ” ಎಂದರು. ನನಗೆ ಎಲ್ಲಿ ಊಟ ಮಾಡಿದರೂ ನಡೀತಿತ್ತು. “ ನಾನು ನಂತರ ಬರ್ತೇನೆ. ನೀವು ಹೊರಡಿ “ ಎಂದು ಅವರಿಗೆಲ್ಲ ಹೇಳಿ ಕೋಣೆಗೆ ಬಂದು ಚೀಲ ಹೆಗಲಿಗೇರಿಸಿ ಬಸ್ಟಾಂಡ್ ಕಡೆಗೆ ನಡೆದೆ.
ಇಲ್ಲಿಯ ವರೆಗೂ ಈ ತರದ ಎಷ್ಟೋ ಕಾರ್ಯಕ್ರಮಗಳಗೆ ಬಂದಿದ್ದರೂ ಇವತ್ತಿನಷ್ಟು ಚಿಂತನೆ ಯಾವತ್ತೂ ಬಂದಿರಲಿಲ್ಲ. ಬಹುಶಃ ನಾನು ಅವರ ಮೇಲಿರಿಸಿದ ಗೌರವ ಭಾವ ಅದರ ಕಾರಣವಿರಬಹುದು. ಅವರೆಂದರೆ ನನಗೆ ತುಂಬಾ ಅಭಿಮಾನ, ಗೌರವ, ಮರ್ಯಾದೆ. ಆ ಭಾವನೆಯನ್ನು ಯಾರೂ ನನ್ನಿಂದ ತೆಗೆಯಲಾಗುವುದಿಲ್ಲ. ಆದರೆ ಅವರ ಬಗ್ಗೆ ಇತರರು ಸಹ ಅದೇ ಭಾವನೆಯನ್ನು ಹೊಂದಿರ ಬೇಕೆಂದು ಬಯಸುವುದು ಮಾತ್ರ ತಪ್ಪು. ಈ ಜಗತ್ತಿನಲ್ಲಿ ಪ್ರತಿ ವ್ಯಕ್ತಿಗೂ ತನ್ನದೇ ಆದ ಅಭಿಪ್ರಾಯ ಹೊಂದಿರುವ ಸ್ವಾತಂತ್ರ್ಯವಿದೆ ಎಂದ ಮೇಲೆ ನಾನ್ನು ಅವರ ಅಭಿಪ್ರಾಯವನ್ನು ಟೀಕಿಸುವುದು ಎಷ್ಟರವರೆಗೆ ಸರಿ ? ಅವರವರ ಭಾವಕ್ಕೆ, ಅವರವರ ಭಕುತಿಗೆ ಅವರವರ ತೆರನಾಗಿ ನಡೆದಿಹನು ಶಿವಯೋಗಿ ಅಲ್ಲವೇ ! ಲೋಕೋಭಿನ್ನ ರುಚಿಃ ಅಂದಮೇಲೆ ಭಿನ್ನ ಭಿನ್ನ ಅಭಿಪ್ರಾಯಗಳಿರುವುದು ಸಹಜ. ಎಲ್ಲರೂ ತಮ್ಮ ನೇರಕ್ಕೇ ಇತರರನ್ನು ಅಳೆಯುತ್ತಾರೆ. ಮುತ್ತಿಕೊಂಡ ಆಲೋಚನೆಗಳಿಗೆ ಹೀಗೊಂದು ಮುಕ್ತಿ ಕಾಣಿಸಿ, ದಿವಂಗತರ ಆತ್ಮಕ್ಕೆ ಮತ್ತೊಮ್ಮೆ ಶಾಂತಿಯನ್ನು ಕೋರಿ, ನನ್ನ ತಿರುಪ್ರಯಾಣಕ್ಕೆ ಆಣಿಯಾದೆ.
-ಚಂದಕಚರ್ಲ ರಮೇಶ ಬಾಬು
