ಪತ್ರಕರ್ತನ ಸತ್ಯಕಥೆ: ಬೊಗಸೆ ನೀರು
ಲೇಖಕರು: ಅರುಣಕುಮಾರ ಹಬ್ಬು
ಪ್ರಕಾಶನ: ಸುದರ್ಶನ ಪ್ರಕಾಶನ, ಬೆಂಗಳೂರು.
ಬೊಗಸೆ ನೀರನ್ನು ಹೀರಿ ಮುಗಿಸುವಷ್ಟರಲ್ಲಿ ಗಂಗೆಯಲ್ಲಿ ಮಿಂದು ಮಡಿಯಾದಂತಾಯಿತು. ಪದ ಕುಸಿಯೆ ನೆಲವಿಹುದು ಮಂಕುತಿಮ್ಮ ಎಂದು ಡಿವಿಜಿಯವರು ಹೇಳಿದಂತೆ ಪ್ರತಿಸಾರಿ ಮನುಷ್ಯ, ತನ್ನ ಚೈತನ್ಯವನ್ನು ಆತ್ಮಸ್ಥೈರ್ಯವನ್ನು ಕಳೆದುಕೊಂಡಾಗೆಲ್ಲ ಯಾವುದೋ ಒಂದು ದಿವ್ಯಶಕ್ತಿ ಆಸರೆಯಾಗಿ ಒದಗಿಬರುತ್ತದೆ ಎಂಬುದು ಸತ್ಯವಾದ ಮಾತು. ಬದುಕೆಂಬ ಕತ್ತಿಯಲಗಿನ ಮೇಲೆ ನಡೆಯುತ್ತಾ, ಜೀವನವನ್ನು ಸರಿದೂಗಿಸಲು ಸಮತೋಲನಗೊಳಿಸುತ್ತಾ, ಇಡೀ ಜೀವನವನ್ನೇ ಸವೆಸುವುದಿದೆಯಲ್ಲ ಅದಕ್ಕಿಂತ ದೌರ್ಭಾಗ್ಯ ಇನ್ನೊಂದಿಲ್ಲ. ಆದರೆ ಆ ದುರದೃಷ್ಟವನ್ನೇ ತನ್ನ ಪಾಲಿನ ಸೌಭಾಗ್ಯವನ್ನಾಗಿ ಸ್ವೀಕರಿಸಿ ಬದುಕನ್ನು ಸುಗಮಗೊಳಿಸಿಕೊಳ್ಳಲು ಮನುಷ್ಯ ಹಾಕುವ ಪ್ರಯತ್ನ ನಿಜಕ್ಕೂ ಮೆಚ್ಚತಕ್ಕದ್ದು. ಇಂತಹ ಒಂದು ಪ್ರಯತ್ನ ಮಾಡಿ, ಜಯಶೀಲರಾಗಿರುವುದು ನಮ್ಮ ಅರುಣಕುಮಾರ ಹಬ್ಬು ಅವರು.
ಬದುಕಿನ ಸಂಧ್ಯಾಕಾಲದಲ್ಲಿರುವ ಅರುಣಕುಮಾರರ ಆತ್ಮಕಥೆ ಅಥವಾ ಪತ್ರಕರ್ತನ ಸತ್ಯಕಥೆ ಓದುತ್ತಿದ್ದಂತೆ ಹೃದಯ ಮಮ್ಮಲ ಮರುಕಕ್ಕೊಳಗಾಯಿತು. ಮನಸು ಆರ್ದ್ರವಾಯಿತು. ಬಹುಶಃ ಸುಖದ ಸುಪ್ಪತ್ತಿಗೆಯಲ್ಲಿರುವವರು ಇದನ್ನು ಓದಿದರೆ ನಂಬಲಾರರು. ಇಷ್ಟೊಂದು ಕಷ್ಟ ನಿಜಕ್ಕೂ ಇರುತ್ತದೆಯೇ ಎಂದು ಅಚ್ಚರಿ ಪಡಬಹುದು. ಆದರೆ ಕಷ್ಟಗಳನ್ನೇ ನೀಚಿ ಬಂದವರಿಗೆ ಅವರ ಎಲ್ಲ ಕಷ್ಟನಿಷ್ಠುರಗಳ ಅರಿವು ಥಟ್ಟೆಂದು ಮನಸ್ಸಿಗೆ ತಟ್ಟುತ್ತದೆ. ಈ ನಿಟ್ಟಿನಲ್ಲಿ ಬೊಗಸೆ ನೀರು ಯಶಸ್ವೀ ಆತ್ಮಕಥೆಯಾಗುತ್ತದೆ. ಬಡತನವನ್ನೇ ಹಾಸಿ ಹೊದ್ದು ಮಲಗಿದ ಕುಟುಂಬದಲ್ಲಿ ಜನಿಸಿ, ತಂದೆಯ ಆಸರೆ, ತಾಯಿಯ ಪ್ರೀತಿಯಲ್ಲಿ ಹಠಮಾರಿಯಾಗಿ ಬೆಳೆಯುವ ಬಾಲಕ ಅರುಣ, ತನ್ನ ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಳ್ಳುವ ದುಃಸ್ಥಿತಿ ಒದಗುತ್ತದೆ. ತಾಯಿಯು ತವರು ಸೇರಿಕೊಂಡು ಮಕ್ಕಳು ಚೆಲ್ಲಾಪಿಲ್ಲಿಯಾದರೂ, ಈ ಅಣ್ಣತಮ್ಮಂದಿರಲ್ಲಿ ಯಾರೊಬ್ಬರೂ ಬದುಕಿನ ಸನ್ಮಾರ್ಗವನ್ನು ತೊರೆದು, ಅಡ್ಡದಾರಿ ಹಿಡಿಯದೆ, ಮೌಲಿಕವಾದ ಬದುಕು ಕಟ್ಟಿಕೊಂಡವರು! ಪ್ರಶಂಸಾರ್ಹರು! ಇಂದಿನ ಯುವ ಜನಾಂಗಕ್ಕೆ ಮಾದರಿಯಾಗಿ ನಿಲ್ಲುವವರು.
`ಕಷ್ಟದಡವಿಯ ಕಳೆದು ಇಷ್ಟ ಹೊಳೆಗಳ ಹಾದು ಇರುಳನ್ನು ನೂಕದಿಹೆಯಾ’ ಅನ್ನುವಂತೆ ಬೆಳಕಿಗಾಗಿ ಆತ್ಮವಿಶ್ವಾಸದಿಂದ ಕಾದು, ತಡವಾದರೂ ಬೆಳಕನ್ನೇ ಆವಿರ್ಭವಿಸಿಕೊಂಡು ಬಡತನದ ಕತ್ತಲನ್ನೇ ಸುಸಂಸ್ಕೃತ, ಸಂಸ್ಕಾರದಿಂದ ಬೆಳಗುವ ಹಣತೆಯಾಗಿಸಿಕೊಂಡ ಕತೆಯಿದು. ಇಲ್ಲಿ ಯಾವುದೂ ಅತಿಯೆನಿಸುವುದಿಲ್ಲ. ಇವರ ಕಷ್ಟ ಕಾರ್ಪಣ್ಯಗಳಿಗೆ ಮನ ಮರುಗಿದರೂ, ಇವರ ಸ್ವಾಭಿಮಾನಕ್ಕೆ ಹೆಮ್ಮೆಯೆನಿಸುತ್ತದೆ. ತುತ್ತಿನ ಚೀಲ ತುಂಬಲಿಕ್ಕಾಗಿ ಯರ್ಯಾರನ್ನೋ ಆಶ್ರಯಿಸದೆ, ತನ್ನ ಜೊತೆಗೆ ಸರಿಸಮಾನರಾಗಬಹುದಾದ ಅಥವಾ ತನಗಿಂತ ಎಲ್ಲ ವಿಷಯಗಳಲ್ಲೂ ಉನ್ನತರಾದವರನ್ನೇ ಅವಲಂಬಿಸುತ್ತಾರೆ. ಇದಕ್ಕೆ ಉದಾಹರಣೆ ಗೋರ್ಸಗದ್ದೆಯ ವಿ.ವಿ. ಹೆಗಡೆ ಮನೆತನದವರು ಮತ್ತು ಬೀಳಗಾ ಗ್ರಾಮದ ಮೀನು ಮಾರಿ ಬದುಕುವ ಆ ಮಹಾತಾಯಿ ಆಯಿ. ಸಿಕ್ಕಸಿಕ್ಕವರನ್ನು ಸ್ನೇಹಿತರೆಂದು ಆರಿಸಿಕೊಳ್ಳದೆ ಉತ್ತಮರೊಡನೆಯೇ ಸ್ನೇಹವನ್ನು ಹಂಚಿಕೊಳ್ಳುತ್ತಾರೆ ಅಥವಾ ಇವರ ಪರಿಧಿಗೆ ಬಂದವರೆಲ್ಲ ಉತ್ತಮರೇ ಆಗುತ್ತಾರೆ. ಬದುಕು ಬಂದಂತೆ ಸ್ವೀಕರಿಸಿದರೂ, ಮೂಲಭೂತ ಸೌಕರ್ಯಗಳಿಲ್ಲದೆ ಬದುಕುವ ದಯನೀಯ ಪರಿಸ್ಥಿತಿಗೆ ಮನಸ್ಸು ಮರುಗುವುದನ್ನೂ ಮರೆತು ಸ್ತಬ್ಧವಾಗುತ್ತದೆ.
ಮಂಚಿಕೇರಿ, ಗೋರ್ಸಗದ್ದೆ ಹಳದೀಪುರ, ಬೀಳಗಾ, ಕಾರವಾರದ ಸುತ್ತಲೇ ಸುತ್ತಾಡುತ್ತಾ ಬೊಗಸೆ ನೀರಿಗಾಗಿ ಮತ್ತು ಮೂಲ ಸೌಕರ್ಯಕ್ಕಾಗಿ ಅಲೆದಾಡುವ ಪುಟ್ಟ ಹುಡುಗನ ಚಿತ್ರ ಕಣ್ಣಿಗೆ ಕಟ್ಟಿ, ಈ ಹುಡುಗನ ಮುಂದಿನ ಬದುಕು ಹೇಗೆ ಎಂದು ಚಿಂತೆಗೊಳಗಾಗುವಂತೆ ಮಾಡುತ್ತದೆ. ಆದರೆ ಅರುಣ ಛಲಗಾರ. ಇಲ್ಲಿ ಬರೆಯಲ್ಪಟ್ಟ ಕೆಲವು ಘಟನೆಗಳು ಹೃದಯವಿದ್ರಾವಕವಾಗಿವೆ. ಪ್ರಾಮಾಣಿಕತೆಗೆ, ಸೇವೆಗೆ ಹೆಸರಾದ ಸಗುಣ ಹಬ್ಬು ಶಾನುಭೋಗರ ಶವಯಾತ್ರೆಗೆ ಹೆಗಲು ಕೊಡಲು ಮೂವರು ಮಾತ್ರವಿದ್ದುದು, ತಂದೆಯ ಸಾವಿನ ನಂತರ ಸಾವಿನ ಮನೆಯಲ್ಲಿ ಹಸಿವಿನಿಂದ ಕಂಗೆಟ್ಟಿದ್ದ ಮಕ್ಕಳಿಗೆ, ಕರಡಿಮನೆ ನಾರಾಯಣ ಭಟ್ಟರು ಹೊಟ್ಟೆತುಂಬ ಊಟ ಹಾಕಿ ಕಳುಹಿಸಿದ್ದು, ಅಪ್ಪ ಸತ್ತಾಗ ಬಿಟ್ಟುಹೋದದ್ದು, ಆಸ್ತಿಯಲ್ಲ; ಅಮ್ಮ ಮತ್ತು ಆರು ಜನ ಗಂಡು ಮಕ್ಕಳು, ಬೊಪ್ಪ ಅಗಲಿದ ಕೆಲ ತಿಂಗಳಲ್ಲಿಯೇ ಅಮ್ಮ ಹತ್ತಿರವೇ ಇದ್ದ ತನ್ನ ತಂಗಿ ಮನೆ ಸೇರಿಕೊಂಡಿದ್ದು, ತಾಯಿಯಿಲ್ಲದ ಮಕ್ಕಳು ಆಶ್ರಯಕ್ಕಾಗಿ ಶೋಧನೆ ನಡೆಸಿ ಸೋತಿದ್ದು……ಇಂತಹ ಹೃದಯ ಕರಗಿಸುವ ನೂರಾರು ಘಟನೆಗಳಿವೆ.
ಪರೀಕ್ಷಾಶುಲ್ಕ ಇಪ್ಪತ್ತು ರೂಪಾಯಿಗಳಿಗಾಗಿ ಊರೂರನ್ನು ನಡೆದುಕೊಂಡು ಅಲೆದದ್ದು, ಕಲಿಯಲೇ ಬೇಕೆಂಬ ಬಾಲಕ ಅರುಣರ ಛಲಕ್ಕೆ ಹಿಡಿದ ಕನ್ನಡಿಯಾಗಿದೆ. ಎಲ್ಲಿಯೂ ಇಪ್ಪತ್ತು ರೂಪಾಯಿ ಸಿಗದೆ, ಮತ್ತೆ ವಾಪಸಾದಾಗ ತನ್ನ ಗುರುಗಳೇ ಅದನ್ನು ಭರಿಸಿದ್ದು, ಅವರೆಡೆಗೆ ಎಂಥ ಕೃತಜ್ಞತಾಭಾವವನ್ನು ಮೂಡಿಸುತ್ತದೆಂದರೆ ಅದನ್ನು ಅನುಭವಿಸಿ ಬರೆದಿದ್ದಾರೆ! ಹೀಗೇ ಇದೇ ದಿಸೆಯಲ್ಲಿಯೇ ಕಾಲೇಜು ಶಿಕ್ಷಣ, ಸ್ನಾತಕ ಪದವಿ ಪಡೆದದ್ದು ಸಂತೋಷ ತಂದರೆ, ತನ್ನ ಅರ್ಥವಾಗದ ಕೈಬರೆಹದ ಕಾರಣ ಮೂರನೇ ದರ್ಜೆಯ ಉತ್ತೀರ್ಣತೆಯು ಇವರಿಗೆಲ್ಲೂ ಕೆಲಸ ದೊರಕದಂತೆ ಮಾಡಿ, ಕುಗ್ರಾಮವಾದ ಬೀಳಗಾಕ್ಕೆ ಅನಿವಾರ್ಯವಾಗಿ ಹೋಗಿ, ಉಪನ್ಯಾಸಕ ಹುದ್ದೆಯನ್ನು ಸ್ವೀಕರಿಸಿದ್ದು ವಿಪರ್ಯಾಸ.
ವೈಮನಸ್ಯವೆಲ್ಲಿರುವುದಿಲ್ಲ? ಬೀಳಗಾ ಬಿಟ್ಟು ಬಂದು ಅನೇಕ ಕಡೆ ಉದ್ಯೋಗವರಸಿ ಅದು ಸಿಕ್ಕಿ ಅಣ್ಣನ ಆಶ್ರಯದಲ್ಲಿ ಬದುಕು ಕಟ್ಟಿಕೊಳ್ಳುವಂತಾಯಿತು. ನಂತರ ಪ್ರಜಾವಾಣಿಯ ಅರೆಕಾಲಿಕ ಪತ್ರಕರ್ತ ಹುದ್ದೆ ನಂತರ ಪೂರ್ಣಾವಧಿ ಹುದ್ದೆ ಸಿಕ್ಕು ಬೆಂಗಳೂರಿಗೆ ಪ್ರಯಾಣ, ಜೊತೆಗೆ ಅಸ್ತಮಾ, ಬೀದರ್, ಅಲ್ಲಿಯ ಜನರ ಮಮತೆ ಪ್ರೀತಿ ವಾತ್ಸಲ್ಯದ ಮಳೆ, ಹೊತ್ತಿ ಉರಿದ ಬೀದರ್, ಹುಬ್ಬಳ್ಳಿ, ಬೇಡದ ಕಿರುಕುಳ, ಮತ್ತೆ ಬೆಂಗಳೂರು, ರಾಜೀನಾಮೆ, ಉದಯವಾಣಿ ಹೀಗೆ ಪತ್ರಕರ್ತನ ಹುದ್ದೆಯ ಜೊತೆಜೊತೆಗೇ ಬೆಳೆದದ್ದಲ್ಲದೆ, ಎಂತಹ ಬಡತನವಿದ್ದರೂ ವೃತ್ತಿಗೆ ನಿಷ್ಠರಾಗಿದ್ದುದು, ಖಾಯಿಲೆಯಲ್ಲೂ ಕೆಲಸ ಮಾಡಲು ಹಾತೊರೆದುದು, ಏಳು ಬೀಳುಗಳಲ್ಲಿ ಸಾಗುವಾಗಲೂ ಚಂಚಲಗೊಳ್ಳದ ವಿವೇಕ, ತನಗೆಷ್ಟೇ ಕಷ್ಟ ನೋವುಗಳಿದ್ದರೂ ಯಾರನ್ನೂ ದೂರದ, ಬೇಡಿಕೊಳ್ಳದ ಪ್ರಾಮಾಣಿಕತೆ, ನಿರ್ಲಿಪ್ತತೆ, ತನ್ನ ಸಂಕಷ್ಟಗಳಿಗೆ ತಾನು ಮಾತ್ರವೇ ಹೊಣೆ ಎಂಬ ವಿಶಾಲ ಭಾವ ಇದು ಹಬ್ಬು ಮನೆತನದ ಸ್ವಭಾವವೇ ಎಂಬಂತೆ ಅರುಣಕುಮಾರರಲ್ಲಿ ಹರಿದು ಬಂದಿದೆ.
ಹವ್ಯಕ ಸಮುದಾಯಕ್ಕಾಗಿ ಎಲ್ಲರನ್ನು ಒಗ್ಗೂಡಿಸಿ ಎಲ್ಲರ ಸಹಕಾರದಿಂದ ಕಟ್ಟಲ್ಪಟ್ಟ ಹವ್ಯಕ ಭವನವೂ ಇವರ ಕೆಲಸ ಮಾಡುವ ಅಭೀಪ್ಸೆ, ಕೆಲಸದೆಡೆಗೆ ಇದ್ದ ಉತ್ಸುಕತೆ, ದೂರದೃಷ್ಟಿಯನ್ನು ಬಿಂಬಿಸುತ್ತದೆ. ಎಲ್ಲ ಕಹಿಗಳನ್ನೂ ನುಂಗಿ ನೀಲಕಂಠನಂತೆ ಕಾಣುವ ಅರುಣಣ್ಣ ಒಂದು ಕಡೆಯಾದರೆ, ಜೀವನದುದ್ದಕ್ಕೂ ಏನನ್ನೂ ಅಪೇಕ್ಷಿಸದೆ, ಪತಿಯ ನೆರಳಾಗಿ, ಅವರ ಕಷ್ಟಗಳನ್ನು ತಡೆಯಲು ನಿಂತ ಸುಮನದ ಸುಮಾ ಅವರನ್ನು ಅಭಿನಂದಿಸಲೇ ಬೇಕು.
ದುರ್ಭರತೆಗಳನ್ನೇ ಸಹಿಸಿಕೊಂಡು ಬಂದ ಅರುಣ್ಕುಮಾರ್ ಅವರಿಗೆ ಇನ್ನು ಮುಂದೆ ಅನುಭವಿಸಲು ಯಾವ ಕಷ್ಟಗಳೂ ಬಾಕಿಯಿಲ್ಲ ಅನಿಸಿಬಿಟ್ಟಿತು ನನಗೆ. ಬೊಗಸೆ ನೀರನ್ನು ಓದಿ ಕೆಳಗಿಟ್ಟಾಗ ಕಣ್ತುಂಬಿ ಬಂದು ದುಃಖದಿಂದ ಗಂಟಲು ಕಟ್ಟಿ ಬಂದಿತ್ತು. ಎಲ್ಲಿಯೂ ನಿಲ್ಲದೆ ಮನೆಯನೆಂದೂ ಕಟ್ಟದೆ ನವೆಯುತ್ತಲೇ ದಾರಿ ಸವೆಸಿದ ಬಗೆಯನ್ನು ಲೇಖಕರು ಹೃದಯಸ್ಪರ್ಶಿಯಾಗಿ ಕಟ್ಟಿಕೊಡಬೇಕೆನ್ನುವ ಇರಾದೆಯಿಂದ ಇದನ್ನು ಬರೆದದ್ದಲ್ಲ. ಘಟನೆಗಳ ಮರುಕಳಿಕೆಗಳು ಹೃದಯಸ್ಪರ್ಶಿಯಾಗಿಯೂ, ಹೃದಯವಿದ್ರಾವಕವಾಗಿಯೂ ಓದುಗನ ಮುಂದೆ ನಿಲ್ಲುತ್ತವೆ. ಈಗ ಸುಮಾರು ಎಪ್ಪತ್ತಾರು ವರ್ಷಗಳ ಅರುಣ್ ಕುಮಾರರು ಬದುಕಿನ ಸಂಜೆಯಲ್ಲಿದ್ದಾರೆ. ಅತ್ಯಂತ ಶುದ್ಧ ಚರಿತ್ರರೂ, ಸ್ವಚ್ಛ ಮನಸ್ಸಿನವರೂ ಇವರೆಂದು ನನ್ನ ಅರಿವಿಗೆ ಬಂದು ಒಮ್ಮೆ ಕೈ ಮುಗಿಯಬೇಕೆಂಬ ಹಂಬಲ ಮೂಡಿದ್ದು ನಿಜ. ಇರುವ ಆಯಸ್ಸು ಸುಭಗವಾಗಿರಲಿ, ಮಕ್ಕಳ ಆಸರೆ ಸದಾ ಇರಲಿ, ಪತ್ನಿಯ ಜೊ
ಇಂದು ನಮ್ಮ ಮಕ್ಕಳಿಗೆ ಎಲ್ಲ ಸೌಕರ್ಯಗಳನ್ನು ಒದಗಿಸಿಕೊಟ್ಟರೂ ಓದಲು ಕಷ್ಟ ಪಡುತ್ತಾರೆ. ಏನನ್ನಾದರೂ ತೆಗೆದುಕೊಡಲಿಲ್ಲವೆಂದರೆ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳಿವೆ. ದಯವಿಟ್ಟು ಇಂದಿನ ಯುವಜನಾಂಗ ಈ ಪುಸ್ತಕವನ್ನು ಓದಲಿ. ಬದುಕಲು ಕಲಿಯಲಿ. ಆತ್ಮಸ್ಥೈರ್ಯವೆಂದರೇನೆಂದು ಅರಿಯಲಿ. ತಮ್ಮ ಜೀವನವನ್ನು ರೂಪಿಸಿಕೊಳ್ಳಲಾದರೂ ಆತ್ಮಚರಿತ್ರೆಗಳನ್ನು ಓದಲಿ.
-ಬಿ.ಕೆ.ಮೀನಾಕ್ಷಿ, ಮೈಸೂರು.