
ಬೈಸನ್ ಎಂಬ ಮಾರಿಸೆಲ್ವರಾಜ್ ಅವರ ಸಿನಿಮಾ ಕಳೆದ ವರ್ಷದ ಅಕ್ಟೋಬರ್ ನಲ್ಲಿ ಬಿಡುಗಡೆಗೊಂಡಾಗ ತಮಿಳು ಸಿನಿ ವಲಯ ಒಳಗೊಂಡಂತೆ ಮೇನ್ ಸ್ಟ್ರೀಮ್ ಮಾಧ್ಯಮಗಳಲ್ಲಿ ಅದರ ಪರವಾಗಿ ಹೆಚ್ಚಿನ ಒಲವು ಕಂಡು ಬರಲಿಲ್ಲ, ಬಹುತೇಕ ವಿರೋಧದ ಚರ್ಚೆಗಳು ಎಗ್ಗಿಲ್ಲದೆ ಶುರುವಾದವು. ಹಾಗೆ ನೋಡಿದರೆ ತಾನು ನಿರ್ದೇಶಿಸಿದ ಸಿನಿಮಾವೊಂದಕ್ಕೆ ನಿರ್ದೇಶಕನೊಬ್ಬ ತಾನೇ ಮೀಡಿಯಾದೆದುರು ಕೂತು ತನ್ನ ಸಿನಿಮಾದ ಬಗ್ಗೆ ಸಮರ್ಥನೆ ಮಾಡಿಕೊಳ್ಳುವ ಮಟ್ಟಿಗೆ ಒತ್ತಡಕ್ಕೆ ದೂಡಿತು. ಅದಕ್ಕೆ ಕಾರಣಗಳು ಹಲವಿರಬಹುದು. ಆದರೆ ಒಂದೊಳ್ಳೆಯ ಚಿತ್ರ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣದೆ ಹೋದ ಹಲವು ಉದಾಹರಣೆಗಳು ನಮ್ಮ ಕಣ್ಣ ಮುಂದೆಯೇ ಇವೆ. ಹಾಗಾಗಿ ಇದು ಮಾರಿಸೆಲ್ವರಾಜ್ ಎಂಬ ಅಪ್ರತಿಮ ಸೃಜನಶೀಲ ನಿರ್ದೇಶಕನಿಗೆ ಇಂತಹದ್ದೆಲ್ಲಾ ತಿಳಿಯದ ವಿಷಯವೇನಲ್ಲ. ಪರಿಯೇರುಮ್ ಪೆರುಮಾಳ್, ಕರ್ಣನ್, ಮಾಮಣ್ಣನ್, ವಾಳೈ, ಅಂತಹ ಕಲಾತ್ಮಕ ಚಿತ್ರಗಳನ್ನು ಕಮರ್ಷಿಯಲ್ಗೆ ಒಗ್ಗಿಸಿಕೊಂಡು ತನ್ನ ನೆಲದ ತಳ ಸಂಸ್ಕೃತಿಯ ಕತೆಗಳನ್ನು ಹೇಳಲು ಸೃಜನಶೀಲತೆಯ ಜೊತೆ ಜೊತೆಗೆ ಎದೆಗಾರಿಕೆಯೂ ಬೇಕು. ಅಂತಹ ಎದೆಗಾರಿಕೆಯನ್ನು ಮಾರಿಸೆಲ್ವರಾಜ್ ಒಳಗೊಂಡಂತೆ ಅನೇಕ ತಮಿಳು ನಿರ್ದೇಶಕರು ಅದನ್ನು ಮಾಡುತ್ತಲೇ ಬಂದಿದ್ದಾರೆ. ಒಂದು ಕತೆಯನ್ನು ವಿವಿಧ ಮಗ್ಗುಲಗಳಲ್ಲಿ ಹೇಗೆಲ್ಲಾ ಕಟ್ಟಲಿಕ್ಕೆ ಸಾಧ್ಯವೋ ಅಷ್ಟು ಸಾಧ್ಯತೆಗಳನ್ನೂ ಅಲ್ಲಿನ ನಿರ್ದೇಶಕರು ಒಬ್ಬರಿಗಿಂತ ಮತ್ತೊಬ್ಬರು ಭಿನ್ನ ಪ್ರಯೋಗಗಳ ಮೂಲಕ ತೆರೆಯ ಮೇಲೆ ತಂದು ಯಶಸ್ಸನ್ನು ಕಾಣುವ ಮೂಲಕ ಚಿತ್ರರಂಗದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದ್ದಾರೆ.
ಹೀಗಿರುವಾಗ ಮಾರಿಸೆಲ್ವರಾಜ್ ಅಂತಹ ನಿರ್ದೇಶಕ ಈ ವಿಚಾರದಲ್ಲಿ ಹಿಂದೆ ಬಿದ್ದ ಮಾತುಗಳಿಲ್ಲ. ತನ್ನ ಚೊಚ್ಚಲ ನಿರ್ದೇಶನದ ‘ಪರಿಯೇರುಮ್ ಪೆರುಮಾಳ್’ ಚಿತ್ರದ ಮೂಲಕ ತನ್ನ ಪ್ರತಿಭೆ ಮತ್ತು ಸಾಮರ್ಥ್ಯಗಳ ಮೂಲಕ ತಮಿಳಿನಲ್ಲಿ ಹೊಸ ಭರವಸೆ ಸೃಷ್ಟಿಸಿದ್ದು ಈಗ ಗತಕಾಲದ ಇತಿಹಾಸ..! ತಳ ಸಂಸ್ಕೃತಿಯ ತುಳಿತಕ್ಕೆ ಒಳಪಟ್ಟ ಶೋಷಿತರ ಕತೆಗಳನ್ನು ಸಿನಿಮಾವೊಂದರ ಚೌಕಟ್ಟಿನಲ್ಲಿ ವಿಶಿಷ್ಟವಾಗಿ ಹೆಣೆಯಲು ಹೊಸ ತಂತ್ರಗಾರಿಕೆಯನ್ನು, ಕಲೆಗಾರಿಕೆಯನ್ನು, ಪ್ರತಿಭೆಯನ್ನು, ನವನವೀನ ಸೃಜನಶೀಲ ಮಾದರಿಗಳನ್ನು ಮಾರಿಸೆಲ್ವರಾಜ್ ಆರಂಭದಿಂದಲೂ ತಮ್ಮೊಳಗೆ ಕರಗತ ಮಾಡಿಕೊಂಡಿದ್ದಾರೆ. ಸಿದ್ದ ಮಾದರಿಯ ರೂಪಕಗಳನ್ನು ಕತೆಯೊಳಗೆ ಕಟ್ಟಿಕೊಳ್ಳುವ ಅವರು ಪರಿಯೇರುಮ್ ಪೆರುಮಾಳ್ ಚಿತ್ರದಲ್ಲಿ ತನ್ನ ಕಥಾನಾಯಕನೊಂದಿಗೆ ಕಪ್ಪುನಾಯಿಯೊಂದನ್ನು ತಳ ಜಾತಿಯ ಗುರುತಿಗೆ ಸೂಚ್ಯವಾಗಿ, ಕತೆಯ ವಿವಿಧ ಮಗ್ಗುಲಗಳಿಗೆ ಒಪ್ಪಿತವಾಗುವಂತೆ ಒಗ್ಗಿಸುವಲ್ಲಿ ಅದನ್ನು ಹಲವು ಆಯಾಮಗಳ ಮೂಲಕ ಕತೆಯ ಓಟಕ್ಕೆ ವಿಶಿಷ್ಟ ರೂಪಕಗಳಲ್ಲಿ ಹೊರಹೊಮ್ಮುವಂತೆ ಅದನ್ನು ಬಳಸಿಕೊಂಡಿದ್ದಾರೆ. ಇಂತಹ ರೂಪಕಗಳನ್ನು ಅಲ್ಲಿಗೆ ಬಿಡದ ನಿರ್ದೇಶಕ ತನ್ನ ಮುಂದಿನ ಕರ್ಣನ್ ಚಿತ್ರಕ್ಕೂ ಒಂದು ಸಿದ್ದ ಮಾದರಿಯಲ್ಲಿ ಕತ್ತೆಯನ್ನು, ಆ ಕತ್ತೆಯ ಕಾಲುಗಳಿಗೆ ಕಟ್ಟು ಹಾಕಿದ ಹಗ್ಗವನ್ನು ವಿಶಿಷ್ಟ ರೂಪಕಗಳಾಗಿ ಸಿನಿಮಾದ ಕೆಲ ಭಾಗಗಳಲ್ಲಿ ಕತೆಯ ಓಟಕ್ಕೆ ತಕ್ಕಂತೆ ಬಳಸಿಕೊಳ್ಳುವ ಮೂಲಕ ತಾನು ಹೇಳಲೊರಟಿರುವ ಕತೆ ಯಾರದ್ದು? ತನ್ನ ಕತೆಯೊಳಗಿನ ಪಾತ್ರಗಳ ವೈಶಿಷ್ಟ್ಯಗಳೇನು? ಎಂಬುದನ್ನು ಅವು ಸೃಜನಶೀಲವಾಗಿ ಚಿತ್ರಿಸುತ್ತದೆ. ಮಾಮಣ್ಣನ್ ಕೂಡ ಅದೇ ಹಾದಿಯ ಮುಂದುವರಿಕೆಯ ಭಾಗವೆಂಬಂತೆ ಒಂದು ಸಿದ್ದ ಮಾದರಿಯ ರೂಪಕವಾಗಿ ಆ ಚಿತ್ರದಲ್ಲಿ ಹಂದಿ ಕಾಣಿಸಿಕೊಳ್ಳುತ್ತದೆ. ಇನ್ನು ವಾಳೈನಲ್ಲಿ ಡಮರುಗದ ಸದ್ದು, ಆತಂಕದಲ್ಲಿ ತಮ್ಮ ಗೂಡಿಗಾಗಿ ಅರಸುತ್ತಾ ಹಾರಾಡತ್ತಿವೇಯೇನೋ ಎಂಬ ಸಾಲು ಹಕ್ಕಿಗಳ ಹಿಂಡು ಕತೆಯನ್ನು ಅರ್ಥೈಸುವಲ್ಲಿ ವಿಶಿಷ್ಟ ರೂಪಕಗಳಾಗಿ ಒಡಮೂಡಿವೆ. ಇಂತಹ ಸಿದ್ದಮಾದರಿಯ ರೂಪಕಗಳೊಂದಿಗೆ ತನ್ನ ಸಿನಿಮಾದ ಕಥನ ಕ್ರಮವನ್ನು ಕಟ್ಟಿಕೊಡುವ ಮಾರಿ ಸೆಲ್ವರಾಜ್ ಕತೆಯಿಂದ ಕತೆಗೆ ಸಿನಿಮಾದಿಂದ ಸಿನಿಮಾಕ್ಕೆ ಕತೆ ಹೇಳುವ ಕ್ರಮದಲ್ಲಿ ಜಿಗಿಯುತ್ತಲೇ ಹೋಗಿದ್ದಾರೆ ಎಂದು ಅನಿಸದೆ ಇರದು.!

ಈ ಸಮಾಜದಲ್ಲಿ ತಿರಸ್ಕಾರಕ್ಕೆ ಒಳಪಟ್ಟ, ಅವಗಣನೆಗೆ ಒಳಗಾದ ನಾಯಿ,ಕತ್ತೆ,ಹಂದಿಯಂತಹ ಪ್ರಾಣಿಗಳನ್ನೇ ತನ್ನ ಕತೆಯ ಜೀವಾಳವಾಗಿಸಿಕೊಂಡು ಶೋಷಿತರ, ದಮನಿತರ ನೆಲೆಯಲ್ಲಿ ನಿಂತು ಅವುಗಳಿಗೆ ವಿಶಿಷ್ಟಾರ್ಥವನ್ನು ಕೊಡುವ ಮೂಲಕ ತಳ ಸಂಸ್ಕೃತಿಯ ನೈಜ ಜನಪದ ಬೇರುಗಳ ಹುಟ್ಟಿಗೆ ಮತ್ತೆ ಹೊಸ ಚಲನೆಯ ದಿಕ್ಕನ್ನು ಕೊಡಬೇಕೆಂಬ ಆಶಯಗಳನ್ನು ಸದ್ದಿಲ್ಲದಂತೆ ತಮ್ಮ ರೂಪಕಗಳಲ್ಲೇ ಹೇಳಿಬಿಡುವ ಮಾರಿಸೆಲ್ವರಾಜ್ ಅವರ ನಿಲುವುಗಳನ್ನು ನಾವು ಮೆಚ್ಚಲೆಬೇಕು.
ಹಾಗಾಗಿಯೇ ಬೈಸನ್ ಎಂದಾಕ್ಷಣ ಕಾಡೆಮ್ಮೆಯ ಎರಡು ಕೊಂಬಿನ ತಲೆಯನ್ನು ನಾಯಕನಿಗೆ ಅನ್ವರ್ಥವಾಗಿರುವಂತೆ ಸಾಂಕೇತಿಕವಾಗಿ ಪೋಸ್ಟರ್ ನಲ್ಲಿಯೇ ಅದನ್ನು ಹೊರ ಹಾಕುವ ಮೂಲಕ ತನ್ನ ಕತೆಯ ನಾಯಕ, ಅವನ ಹಿನ್ನೆಲೆ ಎಲ್ಲವನ್ನೂ ಅದರೊಳಗೆ ಹಿಡಿದಿಟ್ಟಿದ್ದಾರೆ ಎಂಬುದು ಪ್ರೇಕ್ಷಕನಿಗೆ ಸುಲಭದಲ್ಲಿ ದಕ್ಕಬಹುದು. ತಮಿಳುನಾಡಿನ ತೂತುಕುಡಿಯ ಜಿಲ್ಲೆಯೊಂದರ ಹಳ್ಳಿಯಲ್ಲಿ ನಡೆಯುವ ಘಟನಾ ಕ್ರಮಗಳನ್ನು ಕಿಟ್ಟಾನ್ ಎಂಬ ತನ್ನ ಕಥಾನಾಯಕನ ಹತಾಶೆಯ ಕಣ್ಣುಗಳಲ್ಲಿ, ಅವನ ತಂದೆ ವೇಲುಸ್ವಾಮಿಯ ಎದೆಯೊಳಗಿನ ಆರ್ದ್ರತೆಯ ಅಸಹಾಯಕ ಭಾವಗಳಲ್ಲಿ ಏಕಕಾಲಕ್ಕೆ ಸಿಂಹಾವಲೋಕನ ಕ್ರಮದಲ್ಲಿ ಕತೆಯನ್ನು ಪ್ರೇಕ್ಷಕನೆದುರಿಗೆ ಎಳೆಎಳೆಯಾಗಿ ತೆರೆದುಕೊಳ್ಳುತ್ತಾ ಹಿಮ್ಮುಖವಾಗಿ ಚಲಿಸುತ್ತಾ ಹೋಗುವಂತೆ ಮಾಡಿರುವ ನಿರ್ದೇಶಕ ಕಲಾತ್ಮಕ ಚಿತ್ರವೊಂದನ್ನು ಕಮರ್ಷಿಯಲ್ ನೆಲೆಗಟ್ಟಿನಲ್ಲಿ ಸಿನಿಮಾದ ಬಿಗಿ ಬಂಧ ಹಾಳಾಗದಂತೆ, ಪ್ರೇಕ್ಷಕನಿಗೆ ಎಲ್ಲೂ ಬೋರ್ ಹೊಡೆಸದಂತೆ ಹಿಡಿದಿಡುವಲ್ಲಿ ಹೆಚ್ಚು ಎಚ್ಚರಿಕೆ ವಹಿಸಿದ್ದಾರೆ.ಜಾತಿ ಆಧಾರಿತ ತಾರತಮ್ಯ, ಮೇಲ್ವರ್ಗದ ಜಾತಿಗಳೆಂದು ತಮ್ಮನ್ನು ಕರೆದುಕೊಳ್ಳುವವರ ಅಸೂಯೆ, ಸ್ಥಳೀಯ ರಾಜಕೀಯ ಪ್ರಜ್ಞೆ, ಅಂಧಾಭಿಮಾನ,ಗಲಭೆ, ಘರ್ಷಣೆ, ತಿಕ್ಕಾಟಗಳು ತೀವ್ರಗೊಂಡ ಕಾಲಘಟ್ಟದ ಜೊತೆಯಲ್ಲಿಯೇ ಆ ಸುತ್ತಲ ಹಳ್ಳಿಗಳಲ್ಲಿ ಬೆಳೆದುಕೊಂಡ ಈ ಕಬಡ್ಡಿ ಆಟವೂ ಜಿದ್ದಿಗೆ ಬಿದ್ದವರಂತೆ, ಪ್ರತಿಷ್ಠೆಗಾಗಿ ನಡೆಯುತ್ತಾ ಹೋಗುವುದನ್ನು, ಹಾಗೂ ಆ ಕಬಡ್ಡಿ ಆಟವನ್ನು ತನ್ನ ಬಾಲ್ಯದ ಕಂಗಳಲ್ಲಿ ಆಸಕ್ತಿಯಿಂದ ನೋಡುತ್ತಾ ತಾನು ಕಬಡ್ಡಿ ಆಟಗಾರನಾಗಬೇಕೆಂಬ ಹೆಬ್ಬಯಕೆಯನ್ನು ಹೊಂದುವಾಗಲೇ ಕೌಟುಂಬಿಕ ವಿರೋಧವನ್ನು ತನ್ನ ತಂದೆಯಿಂದಲೇ ಎದುರಿಸಬೇಕಾದ ಅನಿವಾರ್ಯತೆ ಉಂಟಾಗುವುದನ್ನು ಸೂಕ್ಷ್ಮವಾಗಿ ಕಟ್ಟಿಕೊಡುವ ನಿರ್ದೇಶಕ ಕತೆಯನ್ನು ತೀರಾ ಗಂಭೀರವಾದ ಧ್ವನಿಯ ಹಿನ್ನೆಲೆಯಲ್ಲಿ ಮುನ್ನಡೆಸಿದ್ದಾರೆ.ಎಲ್ಲೂ ಹಾಸ್ಯದ ಲೇಪನವನ್ನು ಬೆರೆಸದೆ ಗಾಂಭೀರ್ಯತೆಯನ್ನೇ ಕಾಯ್ದುಕೊಳ್ಳಲು ಪಣ ತೊಟ್ಟ ನಿರ್ದೇಶಕನೊಬ್ಬನ ಭಗೀರಥ ಪ್ರಯತ್ನವಿದು.
ಈ ಗಾಂಭೀರ್ಯತೆಯಲ್ಲೂ ನಿರ್ದೇಶಕ ತನ್ನ ಸೃಜನಶೀಲತೆಗೆ ಕೊಂಚವೂ ಲೋಪ ಮಾಡಿಕೊಳ್ಳದಂತೆ ಸ್ಥಳೀಯ ರಾಜಕಾರಣದ ಇಬ್ಬರು ಪ್ರಭಾವಿ ನಾಯಕರುಗಳಾದ ಪಾಂಡಿರಾಜ ಮತ್ತು ಕಂದಸ್ವಾಮಿ ಎಂಬ ಪಾತ್ರಗಳನ್ನು ಕೇಂದ್ರೀಕರಿಸಿ ಅವುಗಳ ಸುತ್ತ ಇನ್ನುಳಿದ ಪಾತ್ರಗಳು ಗಿರಕಿ ಹೊಡೆಯುವಂತೆ ಕಮರ್ಷಿಯಲ್ ಗುಣಕ್ಕೆ ಒಗ್ಗಿಸಿದ್ದಾರೆ. ಅವರಿಬ್ಬರ ವೈಯಕ್ತಿಕ ದ್ವೇಷದಿಂದ ಆ ಹಳ್ಳಿಗಳಲ್ಲಿ ಉಂಟಾಗುವ ಪ್ರಕ್ಷುಬ್ಧ ರಕ್ತಪಾತದ ವಾತಾವರಣಗಳ ನಡುವೆ ಕಿಟ್ಟಾನ್ ಎಂಬ ತಳ ಜಾತಿಯ ಹುಡುಗನೋರ್ವ ಸಹಜವಾಗಿ ಕಬಡ್ಡಿಯ ಆಟದ ಕಾರಣಕ್ಕೆ ಅನುಭವಿಸಬಹುದಾದ ತಳಮಳಗಳನ್ನು, ಆತಂಕಗಳನ್ನು, ಅವಮಾನಗಳನ್ನು ಕಾಣುತ್ತಾ ಹೋಗುವ ನಾವು ಜಾತಿಯ ಕಾರಣಕ್ಕೆ ಕಿಟ್ಟಾನ್ ಮತ್ತು ಅವನ ಕುಟುಂಬ ಇಲ್ಲಿ ಏನೆಲ್ಲಾ ದಂಡ ತೆರಬೇಕಾಗುತ್ತದೆ ಎಂಬುದನ್ನು ಸೂಕ್ಷ್ಮವಾಗಿ ಹೇಳಿದ್ದಾರೆ. ಸಾಮಾನ್ಯವಾಗಿ ತಮಿಳಿನಲ್ಲಿ ರಕ್ತಪಾತವಾಗದೆ ತಣ್ಣನೆಯ ಶೈಲಿಯಲ್ಲಿ ಕತೆ ಹೇಳಿದರೆ ಅದು ಆ ನೆಲಕ್ಕೆ ಒಗ್ಗುವುದಿಲ್ಲವೇನೊ? ದೇವರ ಹರಕೆಗೆ ಬಿಟ್ಟ ಗಂಡು ಹೋತನನ್ನು ಬಸ್ಸಿನಲ್ಲಿ ಕೂತವನೊಬ್ಬ ಪಕ್ಕದಲ್ಲಿ ಗಲೀಜು ಮಾಡಿತು ಎಂಬ ಕ್ಷುಲ್ಲಕ ಕಾರಣಕ್ಕೆ ಸಣ್ಣದಾಗಿ ಆರಂಭವಾಗುವ ಜಗಳ ಮಾತಿಗೆ ಮಾತು ಬೆಳೆದು ಉದ್ವಿಗ್ನಗೊಳ್ಳುತ್ತಾ ಕೊನೆಗೆ ಅದು ವಿಕೋಪಕ್ಕೆ ತಿರುಗಿ ಮೇಕೆಗೆ ಕಾಲಿನಿಂದ ಜಾಡಿಸಿ ಒದೆಯುತ್ತಾ ವಿನಾಕಾರಣ ಅದನ್ನು ಕೊಂದು ಬಸ್ಸಿನಿಂದ ಆಚೆಗೆ ಎಸೆಯುವ ಮೂಲಕ ತಮ್ಮ ಜಾತಿಯ ಕ್ರೌರ್ಯವನ್ನು ಮೆರೆಯುವ ಅಮಾನವೀಯ ದೃಶ್ಯವನ್ನು ಕಣ್ಣಿಗೆ ಕಟ್ಟುವಂತೆ ಪರಿಣಾಮಕಾರಿಯಾಗಿ ಚಿತ್ರಿಸಲಾಗಿದೆ.
ಹೀಗೆ ಜಾತಿಯ ತಾರತಮ್ಯದ ಹಂದರಗಳನ್ನು ಏಕಮುಖವಾಗಿ ಚಲಿಸಲು ಬಿಡದೆ ಅದರೊಳಗೆ ನಾಯಕನ ಪ್ರೇಮ ಕತೆಯನ್ನು ನವಿರಾಗಿ ಹೆಣೆದಿದ್ದಾರೆ. ತನಗಿಂತಲೂ ದೊಡ್ಡವಳಾದ ತನ್ನ ಅಕ್ಕನ ವಯಸ್ಸಿಗೆ ಸರಿಸಮಾನಾಳಾದ ರಾಣಿಯ ಮೇಲೆ ಬಾಲ್ಯದಿಂದಲೂ ಒಂದು ಅದಮ್ಯ ಪ್ರೀತಿಯನ್ನು ಇರಿಸಿಕೊಳ್ಳುವ ನಾಯಕ ಕಿಟ್ಟಾನ್ ಅದನ್ನು ಎಲ್ಲೂ ಹೊರ ಹಾಕದೆ ತನ್ನ ಎದೆಯೊಳಗೆ ಜೀವಿಸುತ್ತಿರುತ್ತಾನೆ. ಆದರೆ ಇದನ್ನು ಬಾಲ್ಯದಲ್ಲಿಯೇ ಅರಿತ ರಾಣಿ ಈ ಸಮಾಜದಲ್ಲಿ ಬೇರೂರಿರುವ ಹಳೆಯ ಕಟ್ಟುಪಾಡುಗಳ ವಿರುದ್ಧ ಬಂಡೆದ್ದವಳಂತೆ ಕಿಟ್ಟಾನ್ ಅನ್ನು ಪ್ರಜ್ಞಾಪೂರ್ವಕವಾಗಿ ಪ್ರೀತಿಸುತ್ತಾಳೆ ಮತ್ತು ಅವನು ತನ್ನ ಬಾಳಸಂಗಾತಿಯಾಗಬೇಕೆಂಬ ಹಂಬಲ ಹೊಂದುವ ಜಿದ್ದಿಗೆ ಬಿದ್ದು ಇಲ್ಲಿನ ವ್ಯವಸ್ಥೆಯನ್ನು ಪ್ರಶ್ನೆ ಮಾಡುತ್ತಾಳೆ? ಹಾಗೆ ನೋಡಿದರೆ ಇಂತಹ ತೀರಾ ವಿರಳವಾದ ಅಪರೂಪದ ಪ್ರೇಮ ಪ್ರಕರಣವೊಂದನ್ನು ವಾಸ್ತವ ನೆಲೆಗಟ್ಟಿನಲ್ಲಿ ಸಮಾಜಕ್ಕೆ ಅರ್ಥೈಸುವಲ್ಲಿ ನಿರ್ದೇಶಕ ಸಂಪೂರ್ಣವಾಗಿ ಗೆದ್ದಿದ್ದಾರೆ.ಅಲ್ಲದೇ ಈ ಹಿಂದಿನ ತನ್ನ ಚಿತ್ರಗಳಂತೆ ಈ ಚಿತ್ರದಲ್ಲೂ ನಿರ್ಲಕ್ಷ್ಯಕ್ಕೆ ಒಳಪಟ್ಟ ಕಾಡೆಮ್ಮೆಯನ್ನು ರೂಪಕವಾಗಿ ಬಳಸಿಕೊಂಡಿರುವುದಲ್ಲದೆ ಅದೇ ಹೆಸರನ್ನು ತನ್ನ ಸಿನಿಮಾಕ್ಕೆ ನವಿರಾಗಿ ಬೈಸನ್ ಎಂದು ಮಾರ್ಪಡಿಸುವುದರ ಮೂಲಕ ಪ್ರಚಲಿತಕ್ಕೆ ತಂದಿದ್ದಾರೆ. ತೂತುಕುಡಿಯ ಮಾನತಿ ಪೆರುಮಾಳ್ ಗಣೇಶನ್ ಎಂಬ ರಾಷ್ಟ್ರೀಯ ಕಬಡ್ಡಿ ಆಟಗಾರನ ವ್ಯಕ್ತಿಯ ನೈಜ ಜೀವನ ವೃತ್ತಾಂತವನ್ನು ಸಿನಿಮಾ ಕತೆಯಾಗಿಸಿರುವ ಮಾರಿಸೆಲ್ವರಾಜ್ ಕತೆ ಹೇಳಲು ಎಲ್ಲೂ ಸೋತಂತೆ ಕಾಣುವುದಿಲ್ಲ. 1994 ರ ಜಪಾನಿನ ಹಿರೋಶಿಮಾದಲ್ಲಿ ನಡೆಯುವ ರಾಷ್ಟ್ರೀಯ ಕಬಡ್ಡಿ ಚಾಂಪಿಯನ್ ಶಿಪ್ ಪಂದ್ಯಾವಳಿಯನ್ನು ಕಣ್ಣೆದುರಿಗೆ ಇರಿಸಿ.ಹಣ, ಅಧಿಕಾರ, ಜಾತಿ,ರಾಜಕೀಯ ಬೆಂಬಲದ ಯಾವುದೇ ಒತ್ತಾಸೆಗಳಿಲ್ಲದ ಈ ಮಣ್ಣಿನ ಶುದ್ಧ ಪ್ರತಿಭೆಯನ್ನು ಮೀಸಲಾತಿ ಕೋಟಾದಡಿ ಆಯ್ಕೆಯಾದವನೆಂಬ ದ್ವಿತೀಯ ದರ್ಜೆಯ ಕಂಗಳಲಿ ಅನುಮಾನಿಸುವ, ಅವಕಾಶ ಸಿಗದೆ ಹೋಗುವ ಪರಿಸ್ಥಿತಿಯನ್ನು ಮಾರಿ ತಣ್ಣಗೆ ಹೇಳುವಾಗ ನನ್ನ ಕಣ್ಣಮುಂದೆ ದಕ್ಷಿಣ ಆಫ್ರಿಕಾದ ಈಗಿನ ಲೆಜೆಂಡರಿ ಕ್ರಿಕೆಟರ್ ತೆಂಬಾ ಬವುಮಾ ಕಾಡತೊಡಗಿದ. ಮೈ ಬಣ್ಣದ ಕಾರಣಕ್ಕೆ, ದೇಹದ ಕಾರಣಕ್ಕೆ ವಿಪರೀತ ಟ್ರೋಲ್ಗೆ ಒಳಗಾಗಿಯೂ ತನ್ನ ದೇಶವನ್ನು ವಿಶ್ವ ಟೆಸ್ಟ್ ಚಾಂಪಿಯನ್ನಾಗಿ ಮಾಡುವಲ್ಲಿ ಅವನು ತೋರಿದ ಧೈರ್ಯ, ಛಲ, ಸಾಹಸ, ಎದೆಗಾರಿಕೆ ಅಷ್ಟು ಸಾಮಾನ್ಯವಾದುದಲ್ಲ. ಈ ಸಿನಿಮಾದಲ್ಲೂ ನೈಜ ಪ್ರತಿಭೆಗೆ ಅವಕಾಶಗಳು ದಕ್ಕಬೇಕು ಎಂಬ ಆಶಯ ಇದ್ದದ್ದೆ ಅದು ತಡವಾಗಿಯಾದರೂ ಎಲ್ಲ ಅಡೆತಡೆಗಳನ್ನು ದಾಟಿ ಪಾಕಿಸ್ತಾನದೆದುರಿನ ಪಂದ್ಯದಲ್ಲಿ ದಕ್ಕಿಬಿಡುತ್ತದೆ. ಮುಂದಿನದು ಇತಿಹಾಸ ಮಾನತಿ ಪಿ ಗಣೇಶನ್ ಎಂಬ ಆಟಗಾರ 1995 ರಲ್ಲಿ ಕಬಡ್ಡಿ ಆಟದಲ್ಲಿ ಭಾರತವನ್ನು ಗೆಲ್ಲಿಸುವಲ್ಲಿ ತೋರಿದ ಅತ್ಯುತ್ತಮ ಪ್ರದರ್ಶನಕ್ಕೆ ಅರ್ಜುನ್ ಪುರಾಸ್ಕರವನ್ನು ತನ್ನ ಸಾಧನೆಯ ಮಡಿಲಿಗೆ ಸೇರಿಸಿಕೊಳ್ಳುತ್ತಾನೆ ಎನ್ನುವಲ್ಲಿಗೆ ಚಿತ್ರ ಮುಕ್ತಾಯವಾಗುತ್ತದೆ. ಇಂತಹ ಒಂದು ನೈಜ ಜೀವನದ ವೃತ್ತಾಂತವೊಂದನ್ನು ಸಿನಿಮಾದ ಕಮರ್ಷಿಯಲ್ ಮಾದರಿಗೆ ಒಗ್ಗಿಸಿಕೊಂಡು ಕತೆಗೆ ಚ್ಯುತಿಯಾಗದಂತೆ ಕತೆಯ ಓಟ ಕುಂಟದಂತೆ ತೀವ್ರಗತಿಯಲ್ಲಿ ಒಂದು ಸಮನಾಗಿ ಬೇಸರ ತರಿಸದಂತೆ ಕಟ್ಟಿಕೊಡುವ ತಂತ್ರಗಾರಿಕೆ ನಿಜಕ್ಕೂ ಅಸಾಮಾನ್ಯವಾದುದು. ಹಾಡು, ಸಂಗೀತ, ಹಿನ್ನೆಲೆಯ ಧ್ವನಿಗಳನ್ನು ಮಿತವಾಗಿ ಬಳಸಿಕೊಂಡಿರುವ ನಿರ್ದೇಶಕ ಅದನ್ನು ಕತೆಯ ಓಟಕ್ಕೆ ತಕ್ಕಂತೆ ಅಗತ್ಯವಿರುವ ಕಡೆ ಮಾತ್ರ ಬಳಸಿಕೊಂಡಿರುವುದು ಎದ್ದು ಕಾಣುತ್ತದೆ.! ಆಗಾಗಿ ಒಂದು ಕಲಾತ್ಮಕ ಚಿತ್ರವೊಂದನ್ನು ಕಮರ್ಷಿಯಲ್ ನೆಲೆಗಟ್ಟಿನಲ್ಲಿ ಒಗ್ಗಿಸಿ ಅಳವಡಿಸಿಕೊಳ್ಳುವುದನ್ನು ನಾವು ತಮಿಳಿಗರಿಂದ ಕಲಿಯಬೇಕೇನೋ ಎಂದು ಅನಿಸದೆ ಇರದು.! ಆರಂಭದಲ್ಲಿ ಬೈಸನ್ ಕುರಿತ ನೆಗೆಟಿವ್ ನರೆಟಿವ್ ಗಳ ನಡುವೆಯೂ ತಮಿಳಿಗರು ಒಂದೊಳ್ಳೆಯ ಸಿನಿಮಾವನ್ನು ಕೈ ಬಿಡಲಿಲ್ಲ. ಬೈಸನ್ಗೆ ನಿರೀಕ್ಷಿತ ಯಶಸ್ಸು ದಕ್ಕದೆ ಹೋದರು ಒಂದು ಹಂತದ ಗೆಲುವು ಮಾತ್ರ ಚಿತ್ರ ತಂಡಕ್ಕೆ ಲಭಿಸಿದೆ. ಹಾಗೆ ನೋಡಿದರೆ ಒಂದು ಚಿತ್ರದ ಮಾನದಂಡವನ್ನು ಅದರ ಲಾಭ – ನಷ್ಟದ ಗಳಿಕೆಯಲ್ಲಿ ನೋಡಲಾಗುವುದಿಲ್ಲ ಎಂಬುದು ಕೂಡ ಅಷ್ಟೇ ಸತ್ಯ.! ಈಗಾಗಲೇ ಒಟಿಟಿಯಲ್ಲಿ ಲಭ್ಯವಿರುವ ಬೈಸನ್ ಸಿನಿಮಾವನ್ನು ಯಾರಾದರೂ ನೋಡದೆ ಇದ್ದರೆ ಖಂಡಿತ ನೀವೊಮ್ಮೆ ಬಿಡುವು ಮಾಡಿಕೊಂಡು ನೋಡಿ ಎಂದಷ್ಟೇ ಹೇಳಬಲ್ಲೆ..!
–ಪ್ರಶಾಂತ ಬೆಳತೂರು
