ಕುರುಕ್ಷೇತ್ರ ಯುದ್ಧದ ಹತ್ತೊಂಭತ್ತನೆಯ ದಿನ ರಣರಂಗದಲ್ಲಿ ಶಬರಿ ಬಂದು ಅಳುತ್ತಾ ಕುಳಿತಂತೆ ಕಾಣಿಸುತ್ತಿದ್ದಳು,ಭರತಪುರದ ತನ್ನ ಜಮೀನಿನಲ್ಲಿ ಕೆಂಪು ನೆಲದ ಮೇಲೆ ಕುಳಿತು ಅಳುತ್ತಿರುವ ಪಳನಿಯಮ್ಮ. ಸುತ್ತಮುತ್ತ ನಡು ಮುರಿಸಿಕೊಂಡು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಬಾಳೆಯ ಗಿಡಗಳು, ಅವುಗಳ ಮಧ್ಯೆ ಎಪ್ಪತ್ತೆರಡರ ಹಿರಿಜೀವ ಪಳನಿಯಮ್ಮ. ಕದಳಿ ವನದಲ್ಲಿ ಕದಡಿ ಕುಳಿತಂತಹ ನಿಲುವು ಅವಳದ್ದಾಗಿತ್ತು. ಬಿಕ್ಕಳಿಸುತ್ತಿದ್ದಳು. ನೆಲದ ಮೇಲೆ ಎರಡೆರಡು ಸಲ ಕೈಬಡಿದಳು. ತನ್ನ ಹೊಟ್ಟೆ ಸೇರಿ ತಂಪುಮಾಡಲಿ ಎಂದು ತಾನು ನಿರುಕಿಸುತ್ತಿದ್ದ ಹಣ್ಣುಹಣ್ಣಾದ ಗೊನೆ ಇದೆಯೇ ಎಂದು ತಾನು ಕುಳಿತಲ್ಲಿಂದಲೇ ನಾಲ್ಕೂ ದಿಕ್ಕಿನೆಡೆಗೆ ಹೊರಳಿಕೊಂಡು ಹುಡುಕಿದಳು. ಕಾಣಿಸಲಿಲ್ಲ. ಎದ್ದುನಿಂತಳು. ನಡೆಯುತ್ತಾ ಉದ್ದಕ್ಕೂ ಹುಡುಕುತ್ತಾ ಹೊರಟಳು. ಅಷ್ಟು ಹೊತ್ತು ಕುಳಿತದ್ದರಿಂದ ನೇರ ನಿಲ್ಲುವುದಕ್ಕೆ ಮೊಣಗಂಟು ಸುತಾರಾಂ ಸಿದ್ಧವಿರಲಿಲ್ಲ. ಆದರೂ ಕಷ್ಟಪಟ್ಟು ನಡೆಯತೊಡಗಿದಳು. ಗೊನೆ ಎಲ್ಲಿಯೂ ಇರಲಿಲ್ಲ. ಇನ್ನೊಂದು ಅರೆಹಣ್ಣಾದ ಗೊನೆಯೂ ದೃಷ್ಟಿಗೆ ಗೋಚರವಾಗಲಿಲ್ಲ.
“ನಾನು ಇದನ್ನೆಲ್ಲಾ ಬೆಳೆಸಿದ್ದು ಅದರ ಹೊಟ್ಟೆ ತುಂಬಿಸುವುದಕ್ಕಾ! ಅದು ಹಾಳಾಗಿ ಹೋಗಲಿ. ಆ ಅರೆಹಣ್ಣಾದ ಗೊನೆಯನ್ನೂ ಬಿಟ್ಟಿಲ್ಲ. ಅದನ್ನೇನು ಅದರ ಅಜ್ಜಿಗೆ ಕೊಡುವುದಕ್ಕೆ ತೆಗೆದುಕೊಂಡು ಹೋದದ್ದಾ?” ಎಂದೆಲ್ಲಾ ಬೈದವಳು, “ಅದೀಗ ಕೈಗೆ ಸಿಕ್ಕಿದರೆ ಇಲ್ಲೇ ಅದನ್ನು ಹಿಸುಕಿಹಾಕುತ್ತಿದ್ದೆ” ಎಂದಳು. ಆ ಕ್ಷಣವೇ ತಾನು ಹೇಳಿದ್ದು ತನಗೆ ಸಲ್ಲುವಂತಹ ಮಾತಲ್ಲ ಎನ್ನುವುದು ಅವಳಿಗೆ ಸ್ಪಷ್ಟವಾಯಿತು. “ಎಲ್ಲಾ ನನ್ನ ಕರ್ಮ” ಎಂದು ತನ್ನ ತಲೆಮೇಲೆ ತಾನೇ ಹೊಡೆದುಕೊಂಡವಳು, ಅಂಗಳದ ಕೆಂಪು ಕಟ್ಟೆ ಮೇಲೆ ಕುಳಿತುಕೊಂಡಳು.
ಅರ್ಧ ತೋಟ ಹಾಳಾಗಿಹೋಗಿತ್ತು. ಅವಳ ಮನಸ್ಸೂ ಸಹ ಈಗ ಅವಳ ಕಣ್ಣೆದುರಿಗಿದ್ದ ಕದಳಿವನದಂತೆಯೇ ಆಗಿತ್ತು. ಹೇಗೆ ಬುದ್ಧಿ ಕಲಿಸಲಿ ಅದಕ್ಕೆ ಎಂದು ಕೈ ಕೈ ಹಿಸುಕಿಕೊಳ್ಳುತ್ತಿದ್ದ ಪಳನಿಯಮ್ಮನಿಗೆ ಕಾಣಿಸಿದ್ದು ಕಮಲಳ ತಲೆ. ಗೇಟು ದಾಟಿ ಈಚೆ ಬರುತ್ತಿದ್ದವಳು ನೆಲಕ್ಕಡರಿನಿಂತ ಬಾಳೆಗಿಡಗಳನ್ನು ಕಾಣುತ್ತಲೇ ಬಾಯಿಯ ಮೇಲೆ ಕೈಯ್ಯಿಟ್ಟುಕೊಂಡು ಪಳನಿಯಮ್ಮನ ಕಡೆಗೆ ಕಣ್ಣೋಟ ಹರಿಸಿದಳು. ಪಳನಿಯಮ್ಮ ಇನ್ನಾವ ಬಗೆಯಲ್ಲಿ ಬಾಯಿ ಬಡಿದುಕೊಳ್ಳಲಿಕ್ಕಿದೆ ಎಂಬ ಅಂದಾಜು ಅವಳಿಗಿತ್ತು. ಕಳೆದ ಒಂದು ವರ್ಷದಿಂದ ಪಳನಿಯಮ್ಮ ಅನುಭವಿಸುತ್ತಿದ್ದುದನ್ನು ಕಣ್ಣಾರೆ ಕಂಡವಳು ಈ ಕಮಲ. ವಾರಕ್ಕೆರಡು ಸಲ ಪಳನಿಯಮ್ಮನ ಮನೆಗೆಲಸಕ್ಕೆ ಬರುತ್ತಿದ್ದವಳು.
“ನೋಡಿದೆಯಾ ಅದು ಏನು ಮಾಡಿದೆ ಅಂತ. ಅರ್ಧ ತೋಟ ಹಾಳಾಗಿದೆ. ಹಾಗೇನೂ ಮಾಡಲಿಕ್ಕಿಲ್ಲ ಎನ್ನುತ್ತಿದ್ದೆಯಲ್ಲ. ನಿನಗೆ ಬುದ್ಧಿ ಇಲ್ಲ ಅಷ್ಟೇ” ಎಂದು ಮಾತು ನಿಲ್ಲಿಸಿದ ಪಳನಿಯಮ್ಮ ದುರುಗುಟ್ಟಿ ಕಮಲಳ ಮುಖ ನೋಡಿದಳು.
“ಅಯ್ಯೋ ಇದೆಂಥ ಹೀಗಾದದ್ದು ಅಮ್ಮ. ಹೀಗೆ ಆದೀತು ಅಂತ ನಾನು ಎಣಿಸಿಯೇ ಇರಲಿಲ್ಲ. ಎಲ್ಲಾ ಬಾಳೆ ಒಟ್ಟಾರೆ ಬಿದ್ದಿದೆ” ಎಂದು ಬಾಯಿ ಅಗಲ ಮಾಡಿದಳು ಕಮಲ. ಬೆನ್ನಿಗೆಯೇ ಪಳನಿಯಮ್ಮನ ಮುಖ ಸಣ್ಣಗಾದುದನ್ನು ನೋಡಿ “ಏನು ಮಾಡುವುದಮ್ಮ! ಆದದ್ದನ್ನು ಸರಿ ಮಾಡುವುದಕ್ಕಾಗುತ್ತದಾ? ಬೇಜಾರು ಮಾಡಿಕೊಳ್ಳಬೇಡಿ” ಎಂದಳು.
ಅವಳ ‘ಬೇಜಾರು ಮಾಡಿಕೊಳ್ಳಬೇಡಿ’ ಎಂಬ ಮಾತೇ ಪಳನಿಯಮ್ಮನ ಕೋಪ ಹೆಚ್ಚುಮಾಡಿದ್ದು. “ನಾನು ಬೇಜಾರು ಮಾಡಿಕೊಳ್ಳುವುದಲ್ಲ. ಅದಕ್ಕೆ ಸರಿಯಾಗಿ ಬುದ್ಧಿ ಕಲಿಸುತ್ತೇನೆ. ಇವತ್ತಿನ ದಿನ ಕಳೆಯಲಿ. ನಾಳೆಯೇ ನಾನು ಏನು ಅಂತ ತೋರಿಸುತ್ತೇನೆ” ಎಂದು ದೊಂಡೆ ದೊಡ್ಡದು ಮಾಡಿ ಹೇಳಿದ ಪಳನಿಯಮ್ಮನ ಮೂಗು ಉಬ್ಬರವಿಳಿತವನ್ನು ಧೇನಿಸುತ್ತಿತ್ತು.
ತಮಿಳುನಾಡಿನಿಂದ ಐವತ್ತೆರಡು ವರ್ಷಗಳ ಹಿಂದೆ ಭರತಪುರಕ್ಕೆ ಬಂದವಳು ಈ ಪಳನಿಯಮ್ಮ. ಅವಳ ಗಂಡ ಮುತ್ತಪ್ಪ. ಭರತಪುರದವನು. ಕೂಲಿ ಕೆಲಸಕ್ಕೆಂದು ತಮಿಳುನಾಡಿಗೆ ಹೋದವನ ಕಣ್ಣಿಗೆ ಕಾಣಿಸಿದ್ದು ನೀರಿನಲ್ಲಿ ನೆನದು ಉಬ್ಬಿದ ಒಣದ್ರಾಕ್ಷಿಯಂತಿದ್ದ ಈ ಪಳನಿಯಮ್ಮ. ಆಗಿನ್ನೂ ಇವಳಿಗೆ ಇಪ್ಪತ್ತಾಗಿತ್ತಷ್ಟೇ. ಇವಳ ಅಪ್ಪನೂ ಕೂಲಿ ಕೆಲಸಕ್ಕೆ ಬಂದಿದ್ದವ. ಮುತ್ತಪ್ಪ ಆಗ ಇಪ್ಪತ್ತೆಂಟು ದಾಟದ ಗಟ್ಟಿ ಜವ್ವನಿಗ. ಅವನು ಇವಳನ್ನು ಕಂಡ. ಇವಳು ನಾಚಿಕೆಯಿಂದ ನಕ್ಕಳು. ಅವನಲ್ಲೇನೋ ರೋಮಾಂಚನ. ಅಲ್ಲಿಂದ ಹೊರಡುವಾಗ ಯಜಮಾನನಲ್ಲಿ “ಕೆಲಸ ಇದ್ದರೆ ಹೇಳಿ ಧಣಿ. ಮತ್ತೆ ಬರುತ್ತೇನೆ” ಎಂದವನ ನೋಟ ನೆಟ್ಟಿದ್ದದ್ದು ಇವಳ ಮೇಲೆ. ಐದು ತಿಂಗಳಲ್ಲಿಯೇ ಮತ್ತೆ ಕೆಲಸಕ್ಕೆ ಬುಲಾವ್ ಬಂತು. ಅವಳೂ ತನ್ನಪ್ಪನ ಜೊತೆಗೆ ಬಂದಾಳು ಎಂಬ ಇವನ ನಿರೀಕ್ಷೆ ಹುಸಿಯಾಗಲಿಲ್ಲ. ಅವಳಲ್ಲಿ ಮನದ ಆಸೆಯನ್ನು ಹೇಳಿಕೊಂಡ. ಅವಳು ತನ್ನ ಅಪ್ಪ ಅಮ್ಮನನ್ನು ಒಪ್ಪಿಸಿದಳು. ಹೀಗೆ ತಮಿಳುನಾಡಿನ ಪಳನಿಯಮ್ಮ ಭರತಪುರವನ್ನು ಸೇರಿಕೊಳ್ಳುವಂತಾಯಿತು. ಕನ್ನಡದ ನೆಲ ಸೇರಿಕೊಂಡ ಪಳನಿಯಮ್ಮ ಇಲ್ಲಿಯ ಜಾಯಮಾನಕ್ಕೆ ಒಗ್ಗಿಕೊಂಡಳು. ತನಗೆ ಗೊತ್ತಿರದ ಕನ್ನಡ ಭಾಷೆ ಕಲಿತಳು. ತಮಿಳಿನ ರೀತಿಯಲ್ಲಿಯೇ ಅವಳು ಕನ್ನಡ ಮಾತನಾಡುವುದನ್ನು ಕೇಳುವುದೇ ಬಲುಚಂದ.
ಇಂಥ ಪಳನಿಯಮ್ಮನ ಜೊತೆಗೆ ಈಗ ಗಂಡನಿಲ್ಲ. ಮುತ್ತಪ್ಪ ತೀರಿಕೊಂಡು ಎಂಟು ವರ್ಷಗಳೇ ಕಳೆದಿವೆ. ಕಲಿಯುವುದರಲ್ಲಿ ತೀರಾ ಮುಂದಿದ್ದ ಒಬ್ಬ ಮಗ ಅಮೇರಿಕಾದಲ್ಲಿ ಕೆಲಸ ಗಿಟ್ಟಿಸಿಕೊಂಡು, ಹೆಂಡತಿ ಇಬ್ಬರು ಮಕ್ಕಳ ಸಮೇತ ಖುಷಿಖುಷಿಯಾಗಿದ್ದಾನೆ. ವರ್ಷಕ್ಕೋ, ಎರಡು ವರ್ಷಕ್ಕೋ ಒಂದು ಸಲ ಇಲ್ಲಿಗೆ ಬರುತ್ತಾನೆ. ಕಾರಿನ ತುಂಬಾ ಹೊತ್ತುಕೊಂಡು ಬಂದ ಉಡುಗೊರೆಗಳನ್ನು ಪಳನಿಯಮ್ಮನಿಗೆ ಕೊಟ್ಟು, ಅವಳ ಮುಖದಲ್ಲಿ ನಗು ಮೂಡಿಸುವ ಪ್ರಯತ್ನ ನಡೆಸುತ್ತಾನೆ. ಅವಳು ನಗುವುದಿಲ್ಲ. ಅವನು ಕಷ್ಟಪಟ್ಟು ದೂರದಲ್ಲೆಲ್ಲೋ ದುಡಿದದ್ದು ಸಾಕು. ಇಲ್ಲೇ ಸಣ್ಣಪುಟ್ಟ ಕೆಲಸ ಮಾಡುತ್ತಾ ತನ್ನ ಜೊತೆಗಿರಲಿ ಎನ್ನುವುದು ಅವಳ ಇಚ್ಛೆ. ಅವನು ಹೊರಟುನಿಂತಾಗ ಈ ಹಿರಿದಾಸೆಯನ್ನು ಅವಳು ಅವನ ಕಿವಿಗೆ ಹಾಕುತ್ತಾಳೆ. ಆದರೆ ಅವನು ಸುಮ್ಮನೆ ನಗುತ್ತಾ ಹೊರಟುಹೋಗುತ್ತಾನೆ. ಇದು ಎಂಟು ವರ್ಷಗಳಿಂದಲೂ ಹೀಗೆಯೇ ನಡೆಯುತ್ತಾ ಬಂದಿದೆ.
ಕಳೆದ ಒಂದು ವರ್ಷದಿಂದಲಂತೂ ಪಳನಿಯಮ್ಮ ರೋಸಿಹೋಗಿದ್ದಾಳೆ. ಕಾಡಿಗೆ ಹತ್ತಿರದಲ್ಲಿರುವ ಜಮೀನು ಇವಳದ್ದು. ಇದ್ದ ಎರಡೂವರೆ ಎಕರೆ ಭೂಮಿಯಲ್ಲಿ ಬಾಳೆಗಿಡಗಳನ್ನು ಬೆಳೆಸುತ್ತಿದ್ದಾಳೆ. ಆದರೆ ಹೀಗೆ ಬೆಳೆದದ್ದರಲ್ಲಿ ಹೆಚ್ಚಿನದ್ದು ಕಾಡಿನಿಂದ ಬರುವ ಆನೆಯೊಂದರ ಪಾಲಾಗುತ್ತಿದೆ. ಎರಡು ಸಲ ಕಾಲು ಭಾಗ ತೋಟವನ್ನು ನಾಶಮಾಡಿಹಾಕಿದೆ ಆ ಆನೆ. ಈಗ ನೋಡಿದರೆ ಅರ್ಧಕ್ಕರ್ಧ ತೋಟವನ್ನೇ ಇನ್ನಿಲ್ಲವಾಗಿಸಿದೆ. ಆನೆಗೆ ಹಿಡಿಶಾಪ ಹಾಕುತ್ತಾ, ಕಳೆದುಹೋದದ್ದಕ್ಕೆ ಪರಿತಪಿಸುತ್ತಾ ಅವಳ ಬದುಕು ನಡೆಯುತ್ತಿದೆ.
ಕಿಟಕಿಯಲ್ಲಿ ಕಣ್ಣು ಹರಿಸಿದ ಫಾರೆಸ್ಟ್ ಆಫೀಸರ್‍ಗೆ ನಾಲ್ಕು ಬೆಳ್ಳನೆಯ ತಲೆಗಳು ಕಾಣಿಸಿದವು. ಜೊತೆಗೆ ಧಿಕ್ಕಾರ ಧಿಕ್ಕಾರ ಎಂದ ಧ್ವನಿ ಮೆಲುವಾಗಿ ಕೇಳಿಬಂತು. ಏನಿದು ಈ ಹಿರಿಜೀವಗಳ ತಾಕಲಾಟ ಎಂಬಂತೆ ಆಫೀಸರ್ ತನ್ನ ಸಹಾಯಕನ ಮುಖ ನೋಡಿದರು.
“ಆನೆ ಧಾಳಿ ಮಾಡಿದೆಯಂತೆ ಸರ್. ಅರಣ್ಯ ಇಲಾಖೆ ಈ ತೊಂದರೆ ಬಗೆಹರಿಸಲೇಬೇಕು ಅಂತ ಪ್ರತಿಭಟನೆ ಮಾಡುತ್ತಿದ್ದಾರೆ” ಎಂದ ಸಹಾಯಕ.
“ಅಯ್ಯೋ ಸರಿ ಮಾಡುತ್ತೇವೆ ಅಂತ ಹೇಳಿ ಕಳಿಸಿ. ಇರುವ ವರ್ಕ್ ಪ್ರೆಶರ್ ಮಧ್ಯೆ ಇದೊಂದು ತಲೆನೋವು ಬೇರೆ” ಎಂದ ಫಾರೆಸ್ಟ್ ಆಫೀಸರ್ ತಮ್ಮ ಕೆಲಸದಲ್ಲಿ ಮುಳುಗುವ ಲಕ್ಷಣ ತೋರಿದರು.
“ಹೇಳಿದ್ದೇನೆ ಸರ್. ಒಂದು ಹೆಂಗಸು ಇದೆ ಸರ್ ಅವರ ಗುಂಪಲ್ಲಿ. ಅವರಿಗೆಲ್ಲಾ ಲೀಡರ್ ಇದ್ದ ಹಾಗೆ. ಭಾರೀ ಜೋರಿದೆ ಸರ್” ಎಂದ ಸಹಾಯಕ.
ಈ ತಲೆಬೇನೆ ಸರಿಮಾಡದೆ ತನ್ನ ಉಳಿದ ಕೆಲಸ ಮುಂದಕ್ಕೋಡಲಿಕ್ಕಿಲ್ಲ ಎಂಬ ಭಾವನೆ ಬಂತು ಫಾರೆಸ್ಟ್ ಆಫೀಸರ್‍ಗೆ. ಹೊರಗೆ ಬಂದ. ಧಿಕ್ಕಾರ ಕೂಗುತ್ತಿದ್ದ ಪಳನಿಯಮ್ಮ ಸೀದಾ ಎದ್ದು ಬಾಗಿರುವ ಮೊಣಗಾಲನ್ನೇ ಮುಂದೆಮಾಡಿಕೊಂಡು ಬಂದ ರೀತಿಯನ್ನು ನೋಡಿದಾಗಲೇ ಫಾರೆಸ್ಟ್ ಆಫೀಸರ್‍ಗೆ ತನ್ನ ಸಹಾಯಕ ಹೇಳಿದ ಜೋರಿನ ಹೆಂಗಸು ಇವಳೇ ಎನ್ನುವುದು ಸ್ಪಷ್ಟವಾಯಿತು. ಇದ್ದ ತಲೆಗಳನ್ನು ಎಣಿಸಿದ ಆಫೀಸರ್‍ಗೆ ಒಳಗಿಂದ ಕಂಡದ್ದೆಷ್ಟೋ ಅದಕ್ಕಿಂತ ಒಂದು ತಲೆಯೂ ಹೆಚ್ಚಿಲ್ಲ ಎಂದು ಗೊತ್ತಾದಾಗಲೇ ನಿರಾಳತೆ ಮೂಡಿತು. ಈ ಮುದಿಗುಂಪನ್ನು ಸಾಗಹಾಕುವುದಕ್ಕೆ ನಾಲಗೆ ಹೆಚ್ಚೇನೂ ಸವೆಯಬೇಕಿಲ್ಲ ಎಂದಂದುಕೊಂಡರು.
ತನ್ನ ಬಳಿ ಬಂದುನಿಂತ ಪಳನಿಯಮ್ಮನಿಗೆ “ಏನಮ್ಮಾ ನಿಮ್ಮಂಥ ಹಿರಿಯರೆಲ್ಲ ಆರಾಮಾಗಿ ಮನೆಯಲ್ಲಿರಬೇಕು. ಹೀಗೆ ಹೊರಗೆ ಬಿಸಿಲಿಗೆ ಬಂದು ಆರೋಗ್ಯ ಎಲ್ಲ ಹಾಳುಮಾಡಿಕೊಳ್ಳುವುದಲ್ಲ” ಎಂದರು.
“ಮನೆಯಲ್ಲಿರುವುದು ಹೇಗೆ ಸಾರ್! ನೀವೇ ಹೇಳಿ. ಆ ಆನೆ ಬಿಡಬೇಕಲ್ಲ ನೆಮ್ಮದಿಯಲ್ಲಿ ಇರುವುದಕ್ಕೆ. ನನ್ನ ಬಾಳೆತೋಟ ಎಲ್ಲಾ ಹಾಳುಮಾಡಿಹಾಕಿದೆ ಸಾರ್” ಎಂದು ಪಳನಿಯಮ್ಮ ಮಾತನಾಡುತ್ತಿದ್ದ ರೀತಿಯಲ್ಲಿಯೇ ಆ ಫಾರೆಸ್ಟ್ ಆಫೀಸರ್‍ಗೆ ಇವಳ್ಯಾರೋ ತಮಿಳಮ್ಮ ಎನ್ನುವುದು ಗೊತ್ತಾಗಿಹೋಗಿತ್ತು.
“ಏನು ಮಾಡುವುದಮ್ಮ. ನಮ್ಮಲ್ಲಿ ಬಂದೂಕಿದೆ. ಆದರೆ ಆನೆಯನ್ನು ಕೊಲ್ಲುವ ಹಾಗಿಲ್ಲ. ಪ್ರಯೋಜನಕ್ಕಿಲ್ಲದ ಬಂದೂಕಮ್ಮ ನಮ್ಮದು. ಈಗ ನೀವು ಹೋಗಿ. ಇನ್ನುಮುಂದೆ ತೊಂದರೆ ಆಗದ ಹಾಗೆ ನೋಡಿಕೊಳ್ಳುತ್ತೇನೆ” ಎಂದು ಆಫೀಸರ್ ಹೇಳಿದ್ದು ಪಳನಿಯಮ್ಮನನ್ನು ರೊಚ್ಚಿಗೆಬ್ಬಿಸಿತು.
“ಹ್ಞ ಹ್ಞ ಹ್ಞ! ಹೀಗೆಲ್ಲಾ ಹೇಳಿ ಇಲ್ಲಿಂದ ಕಳಿಸುವುದು ಬೇಡ. ನಿನ್ನೆ ಆ ದರಿದ್ರ ಆನೆಯಿಂದ ನನ್ನ ಅರ್ಧ ಬಾಳೆತೋಟ ಹಾಳಾಗಿದೆ. ಹೀಗಾದದ್ದು ಇದು ಮೂರನೇ ಸಲ. ನನಗೆ ಆದ ನಷ್ಟ ನೀವು ಕೊಡುತ್ತೀರಾ ಸಾರ್? ಹೇಳಿ, ನೀವು ಕೊಡುತ್ತೀರಾ?” ಎಂದು ಆಫೀಸರ್ ಮುಖಕ್ಕೆ ಉಗಿದಂತೆ ಕೇಳಿದ ಪಳನಿಯಮ್ಮ ಏನೆಂದರೂ ತಾನು ಹೋಗಲಾರೆ ಎಂಬಂತೆ ಮುಖಮಾಡಿ, ಕುಳಿತಿದ್ದ ಉಳಿದ ಮೂವರ ಕಡೆಗೆ ಕೈತೋರಿಸಿ,“ಅವರಿಗೂ ಆ ಆನೆಯಿಂದ ತೊಂದರೆ ಆಗಿದೆ ಸಾರ್. ಅದಕ್ಕೇ ಅವರನ್ನೂ ಜೊತೆಗೆ ಕರೆದುಕೊಂಡು ಬಂದದ್ದು ನಾನು. ನಮಗೆಲ್ಲಾ ಇವತ್ತು ನ್ಯಾಯ ಸಿಗಬೇಕು” ಎಂದಳು.
ತನ್ನ ಸಹಾಯಕ ಜೋರಿನ ಹೆಂಗಸು ಎಂದದ್ದೇಕೆ ಎನ್ನುವುದು ಆಫೀಸರ್‍ಗೆ ಈಗ ಸ್ಪಷ್ಟವಾದಂತಿತ್ತು. ಬಗೆಹರಿಸುತ್ತೀರಿ ಹೇಗೆ ನೋಡುತ್ತೇನೆ ಎನ್ನುವಂತೆ ತನ್ನ ಕಡೆಗೇ ನೋಡುತ್ತಿದ್ದ ಸಹಾಯಕನಲ್ಲಿ “ಏನೋ ನೋಡುತ್ತಿದ್ದೀಯ. ಒಳಗಿಂದ ಪೆನ್ನು ಕಾಗದ ತಾ” ಎಂದರು. ಅವನು ಓಡಿ ಬರುವುದರೊಳಗೆ “ನೋಡಿಯಮ್ಮ, ನಮ್ಮ ಆಫೀಸಿನ ನಂಬರ್ ಕೊಡುತ್ತೇನೆ. ಆ ಆನೆ ಬಂದಾಗ ಫೋನ್ ಮಾಡಿ. ಕೂಡಲೇ ಬರುತ್ತೇವೆ” ಎಂದು ಹೇಳಿ, ಅವನು ತಂದುಕೊಟ್ಟ ಕಾಗದದಲ್ಲಿ ಆಫೀಸಿನ ಫೋನ್ ನಂಬರ್ ಬರೆದು ಪಳನಿಯಮ್ಮನ ಕೈಗಿಟ್ಟರು. ಹನ್ನೊಂದು ಗಂಟೆಗೆ ಬಂದು ಆಫೀಸ್ ಎದುರು ಕುಳಿತಿದ್ದ ಪಳನಿಯಮ್ಮನಿಗೆ ಹೊಟ್ಟೆಯಲ್ಲಿ ಬಕಾಸುರ ನರ್ತನ ಆರಂಭ ಆದದ್ದರಿಂದ ಅವಳು ಆಫೀಸರ್ ಮಾತಿಗೆ ಒಪ್ಪಿಕೊಂಡಳು. ಅದನ್ನು ತನ್ನ ಗೆಲುವೆಂದೇ ಬಗೆದ ಅವರು ಪಳನಿಯಮ್ಮ ತನ್ನ ಗುಂಪಿನ ಜೊತೆಗೆ ಸಾಗುವುದನ್ನು ನೋಡಿ ಸಂತಸಪಟ್ಟರು.
ಮನೆಗೆ ಬಂದ ತಕ್ಷಣ ಪಳನಿಯಮ್ಮ ಮಾಡಿದ ಮೊದಲ ಕೆಲಸ ಆಫೀಸರ್ ಬರೆದುಕೊಟ್ಟಿದ್ದ ನಂಬರ್‍ಗೆ ಕರೆಮಾಡಿದ್ದು. ಗೊರಗೊರಗೊರ ಎನ್ನುವ ಸದ್ದು ಕೇಳಿಸಿತು. ಮತ್ತೆ ಮತ್ತೆ ಕರೆ ಮಾಡಿದಾಗಲೂ ಅದೇ ಸ್ವರ. ರಿಂಗ್ ಆಗುವ ಧ್ವನಿಯೂ ಇಲ್ಲ. ಕೊಲ್ಲಬೇಕಾದದ್ದು ಆನೆಯನ್ನಲ್ಲ; ಫಾರೆಸ್ಟ್ ಆಫೀಸರ್‍ನನ್ನು ಎಂಬಷ್ಟು ಕೋಪ ಬಂದಿತು ಪಳನಿಯಮ್ಮನಿಗೆ. “ಸರಿಯಾದ ನಂಬರ್ ಕೊಡದೇ ಮೋಸ ಮಾಡಿದ್ದೀಯ. ಆನೆಯ ಜೊತೆಗೆ ನಿನಗೂ ಬುದ್ಧಿ ಕಲಿಸುತ್ತೇನೆ” ಎಂದು ಬೈದು ಫೋನಿಟ್ಟಳು, ಆ ಕಡೆಯಲ್ಲಿ ಆಫೀಸರ್ ಇದ್ದರೆ ಕೇಳಿಸಿಕೊಳ್ಳಲಿ ಎಂಬ ಕಾರಣಕ್ಕೆ.
ಆನೆ ಬರುವ ದಾರಿಯನ್ನೇ ಕಾಯುತ್ತಿದ್ದಳು ಪಳನಿಯಮ್ಮ. ಮನೆಯ ಚಾವಡಿಯಲ್ಲಿ ನಿಂತು ಕಿಟಕಿಯ ಮೂಲಕ ಮನೆಯ ಹೊರಗನ್ನು ದಿಟ್ಟಿಸುತ್ತಿದ್ದಳು. ಹೊರಗೆ ನಿಂತರೆ ತನ್ನನ್ನೂ ಸುಮ್ಮನೆ ಬಿಡುವ ಆನೆ ಅದಲ್ಲ ಎಂಬ ಯೋಚನೆ ಅವಳದ್ದು. ಹದಿನೈದು ನಿಮಿಷ ಕಳೆಯಿತು. ಮೇಲೆ ಹತ್ತು ನಿಮಿಷ. ಅದರ ಮೇಲೆ ಇನ್ನರ್ಧ ಗಂಟೆ. ಜಗಲಿ ಮೇಲಿದ್ದ ಎರಡು ಬಾಳೆಗೊನೆಗಳನ್ನೇ ನೋಡುತ್ತಿದ್ದಳು ಪಳನಿಯಮ್ಮ. ಎರಡರಲ್ಲಿ ಒಂದರ ಮೇಲೆ ಕ್ರಿಮಿನಾಶಕ ಹಾಕಿದ್ದಳು. ಕ್ರಿಮಿನಾಶಕ ಹಾಕದ ಗೊನೆಯನ್ನು ಎದುರಿಗಿಟ್ಟಿದ್ದಳು. ಹಾಗೆ ಮಾಡಿದರೆ ಆನೆಗೆ ಅನುಮಾನ ಬರಲಿಕ್ಕಿಲ್ಲ. ಕ್ರಿಮಿನಾಶಕ ಇಲ್ಲದ್ದನ್ನು ತಿಂದುಮುಗಿಸಿದ ಆನೆ ನಂತರ ಕ್ರಿಮಿನಾಶಕ ಇರುವುದಕ್ಕೆ ಬಾಯಿ ಹಾಕುತ್ತದೆ. ಆಗ ಅದರ ಕಥೆ ಮುಗಿದಂತೆಯೇ ಎಂಬ ಯೋಚನೆ ಪಳನಿಯಮ್ಮನದ್ದು. ಕಿಟಕಿಯಿಂದ ಇಣುಕಿ ಇಣುಕಿ ಪಳನಿಯಮ್ಮನ ಕುತ್ತಿಗೆ ನೋವೆದ್ದಿತು. ಆನೆ ಬರಲೇ ಇಲ್ಲ.
“ಮಾರಿ ಸಂತಾನ. ಅದ್ಯಾವ ತೋಟ ಹಾಳು ಮಾಡುವುದಕ್ಕೆ ಹೋಗಿದೆಯೋ” ಎಂದು ಬೈದುಕೊಂಡವಳು, ಮಧ್ಯಾಹ್ನದ ಅಡುಗೆ ಮಾಡಿ ಮುಗಿಸುವುದಕ್ಕೆ ಒಳಹೋದಳು. ಒಗ್ಗರಣೆಯ ಸದ್ದಿನ ಮಧ್ಯೆಯೇ ಆನೆಯ ಕೂಗು ಕೇಳಿದಾಗ ಅವಳ ಕಿವಿ ನೆಟ್ಟಗಾಯಿತು. ಬೇಗ ಬೇಗ ಚಾವಡಿಗೆ ಬಂದಳು. ಕಿಟಕಿಯಾಚೆ ಕಣ್ಣುಬಿಟ್ಟು ತೋಟ, ಅಂಗಳ ಎಲ್ಲೆಡೆಯೂ ನೋಡಿದಳು. ಆನೆಯ ಸುಳಿವಿಲ್ಲ. ಜಗಲಿ ಮೇಲಿಟ್ಟಿದ್ದ ಗೊನೆಗಳೆರಡೂ ಅವಳನ್ನು ನೋಡಿ ನಗುತ್ತಿದ್ದವು. ತನ್ನ ಭ್ರಮೆಯಿದು ಎಂದುಕೊಂಡವಳು ಒಳಗೆ ಹೋದಳು.
ಸಮಯ ಕಳೆಯುತ್ತಲೇ ಇತ್ತು. ಅವಳ ಅಡುಗೆಯೆಲ್ಲಾ ಮುಗಿದಿತ್ತು. ಆನೆಗೆ ಮನಸ್ಸಿನಲ್ಲೇ ಬೈದುಕೊಳ್ಳುತ್ತಾ, ಊಟ ಮಾಡಿ ಮುಗಿಸಿದಳು. ಮಧ್ಯಾಹ್ನ ಒಂದರ್ಧ ಗಂಟೆ ಮಲಗುವ ಅಭ್ಯಾಸ ಇತ್ತು ಪಳನಿಯಮ್ಮನಿಗೆ. ನಿದ್ರಿಸುವುದಕ್ಕೆ ಮೊದಲು ಗೊನೆಗಳ ಕಥೆ ಏನು ನೋಡಿಬರುತ್ತೇನೆ ಎಂದುಕೊಂಡವಳು ಕಿಟಕಿ ಪಕ್ಕ ಬಂದುನಿಂತಳು.
ಒಂದು ಗೊನೆಯಲ್ಲಿ ಬಾಳೆಹಣ್ಣುಗಳು ಇರಲಿಲ್ಲ. ಬಾಗಿಲು ತೆರೆದು ಹೊರಬಂದ ಪಳನಿಯಮ್ಮ ಯಾವ ಗೊನೆ ಖಾಲಿಯಾದದ್ದೆಂದು ಮತ್ತೆ ಮತ್ತೆ ನೋಡಿದಳು. ಕ್ರಿಮಿನಾಶಕ ಇಲ್ಲದ ಗೊನೆಯನ್ನು ತಿಂದುಮುಗಿಸಿ, ಕ್ರಿಮಿನಾಶಕ ಇದ್ದದ್ದನ್ನು ಹಾಗೆಯೇ ಉಳಿಸಿಹೋಗಿತ್ತು ಕಿಲಾಡಿ ಆನೆ.
ಮರುದಿನ ಇದನ್ನು ಪಳನಿಯಮ್ಮ ಕಮಲಳಲ್ಲಿ ಹೇಳಿದಾಗ ಅವಳು ಜೋರಾಗಿ ನಗುತ್ತಾ “ಈಗಿನ ಕ್ರಿಮಿನಾಶಕವೂ ಸಹ ಕಲಬೆರಕೆ ಅಮ್ಮ. ಆ ಗೊನೆಯನ್ನು ತಿಂದಿದ್ದರೂ ಆನೆಗೆ ಏನೂ ಆಗುತ್ತಿರಲಿಲ್ಲ” ಎಂದಳು.
“ನೋಡು ಪದ್ಮನಾಭ, ಯಾವ ಕಾರಣಕ್ಕೂ ಅದು ಉಳಿಯಬಾರದು. ಮುಟ್ಟಿದ ತಕ್ಷಣ ಸತ್ತುಹೋಗಬೇಕು. ಹಾಗೆ ಮಾಡು” ಎಂದು ಬೇಲಿಯ ಪಕ್ಕದಲ್ಲಿಯೇ ನಿಂತು ಕೆಲಸದ ಪದ್ಮನಾಭನಿಗೆ ಹೇಳುತ್ತಿದ್ದಳು ಪಳನಿಯಮ್ಮ.
“ಅಯ್ಯೋ, ನೀವ್ಯಾಕಮ್ಮ ಚಿಂತೆ ಮಾಡುತ್ತೀರಿ. ಇಂಥದ್ದೆಲ್ಲ ಎಷ್ಟೋ ಮಾಡಿದ್ದೇನೆ ನಾನು. ಇದನ್ನು ಮುಟ್ಟಿದ ಕೂಡಲೇ ಅದು ಸತ್ತು ಬೀಳದಿದ್ದರೆ ಕೇಳಿ. ಅಪ್ಪಿತಪ್ಪಿ ನೀವು ಮುಟ್ಟದಿದ್ದರಾಯಿತು ಅಷ್ಟೇ” ಎಂದು ಹೇಳಿದವನು, ಬೇಲಿಯಿಂದ ಈಚೆ ಬಂದು ವಿದ್ಯುತ್ ಕಂಬದಲ್ಲಿದ್ದ ಸ್ವಿಚ್ ಹಾಕಿದ.
“ನೋಡಿಯಮ್ಮ ಈಗ ಬೇಲಿ ತಂತಿಯಲ್ಲಿ ಕರೆಂಟ್ ಇದೆ. ಆನೆ ಸಾಯುವುದಕ್ಕೆ ಇಷ್ಟು ಸಾಕು” ಎಂದವನು ಗುಟ್ಟಾಗಿ “ಅದು ಸತ್ತ ಕೂಡಲೇ ನನಗೆ ಫೋನ್ ಮಾಡಿ. ಬಂದು ಕರೆಂಟ್ ಕನೆಕ್ಷನ್ ತೆಗೆಯುತ್ತೇನೆ. ಇಲ್ಲದಿದ್ದರೆ ನಿಮಗೂ ಕಷ್ಟ, ನನಗೂ ಕಷ್ಟ. ಈ ಅರಣ್ಯ ಇಲಾಖೆಯವರಿಗೆ ಉತ್ತರ ಹೇಳಬೇಕಾಗುತ್ತದೆ” ಎಂದ.
“ಸರಿ ಸರಿ ತೆಗೆದುಕೋ ಪದ್ಮನಾಭ” ಎಂದ ಪಳನಿಯಮ್ಮ ದೊಡ್ಡ ದೊಡ್ಡ ನೋಟುಗಳನ್ನು ಅವನ ಕೈಗಿತ್ತಳು.
ನೋಟುಗಳನ್ನೊಮ್ಮೆ ಎಣಿಸಿದವನು “ಇಷ್ಟೇ ಸಾಕಾಗುವುದಿಲ್ಲಮ್ಮ. ಹೊರಗೆಲ್ಲಾದರೂ ಗೊತ್ತಾದರೆ ನನ್ನ ಕುತ್ತಿಗೆಗೆ ಬರುತ್ತದೆ” ಎಂದು ನಕ್ಕ.
ಇನ್ನೆರಡು ನೋಟುಗಳನ್ನು ಅವನ ಕೈಗೆ ತುರುಕಿದ ಪಳನಿಯಮ್ಮ “ಯಾರಲ್ಲೂ ಬಾಯಿ ಬಿಡಬೇಡ. ಗೊತ್ತಾಯಿತಲ್ಲ?” ಎಂದಳು.
ಪದ್ಮನಾಭ ಹೋದ ಮೇಲೆ ಅವಳು ಬೇಲಿಯನ್ನೇ ನೋಡುತ್ತಾ ನಿಂತುಕೊಂಡಳು. ಈಗಲೇ ಸಂಜೆಯಾಗಿದೆ. ಇನ್ನು ಆ ಆನೆ ಬರುವುದಿಲ್ಲ. ನಾಳೆ ಬೆಳಗ್ಗೆ ಹೊತ್ತಿಗೆ ಬರಬಹುದು. ಆಗಲೇ ಅದರ ಹೆಣ ಬೀಳುತ್ತದೆ ಎಂದುಕೊಂಡಳು.
ಮರುದಿನ ಬೆಳಗ್ಗೆ ಅವಳಿನ್ನೂ ನಿದ್ರೆಯಿಂದ ಎದ್ದಿರಲಿಲ್ಲ. ಆನೆಯ ದೊಡ್ಡದಾದ ಕೂಗು ಕೇಳಿತು. ಬಾಳೆಗೊನೆಗೆ ಕ್ರಿಮಿನಾಶಕ ಇಟ್ಟ ದಿನದ ರೀತಿಯದ್ದೇ ಭ್ರಾಂತಿ ತನ್ನದು ಎಂದುಕೊಂಡಳು. ಕಣ್ಣು ಮುಚ್ಚಿದರೆ ಮತ್ತೆ ಅದೇ ಕೂಗು. ಚಾವಡಿಗೆ ಬಂದು ಹೊರಗೆ ಇಣುಕಿದಳು.
ವಿದ್ಯುತ್ ಸಂಪರ್ಕ ಇದ್ದ ಬೇಲಿಯೆದುರು ನಿಂತ ಆನೆ ಗಳಿಗೆಗೊಮ್ಮೆ ಸೊಂಡಿಲೆತ್ತಿ ಜೋರು ಸದ್ದೆಬ್ಬಿಸುತ್ತಿತ್ತು. ಬೇಲಿಯಲ್ಲಿ ವಿದ್ಯುತ್ ಹರಿಯುತ್ತದೆ ಎನ್ನುವುದು ಅದರ ಅರಿವಿಗೆ ನಿಲುಕಿದಂತಿತ್ತು. ಬೇಲಿ ದಾಟಲು ಹೋಗಿ ಕಾಲು ಸುಟ್ಟುಕೊಂಡಿತ್ತೋ ಏನೋ. ತಂತಿಯನ್ನು ದಾಟಲಾಗದ ಭಯ ಅದರ ಕಣ್ಣಲ್ಲಿತ್ತು. ಪಳನಿಯಮ್ಮನ ಕಣ್ಣಿಗೆ ಅದು ಕಾಣಿಸುತ್ತಿತ್ತು.
ಬೇಲಿಯನ್ನು ಮುಟ್ಟಿದರೆ ಅದು ಸಾಯುತ್ತದೆ ಎಂಬ ಯೋಚನೆ ಬಂದದ್ದೇ ತಡ ಪಳನಿಯಮ್ಮನೊಳಗೆ ಅವ್ಯಕ್ತ ಭಾವವೊಂದು ಸುಳಿಯತೊಡಗಿತು. ಸಾಯುವುದನ್ನು ಕಾಣಲಾರೆ ಎಂಬ ತಳಮಳ ಅವಳೊಳಗೆ. ಚಾವಡಿಯಿಂದ ಈಚೆಬಂದಳು. ಆನೆಯ ಆಕ್ರಂದನ ತನ್ನ ಕಿವಿ ಹೊಕ್ಕದಿರಲಿ ಎಂದು ಎರಡೂ ಕಿವಿಗಳನ್ನು ಬಲವಾಗಿ ಎರಡೂ ಕೈಗಳಿಂದ ಮುಚ್ಚಿ ಕುಳಿತುಕೊಂಡಳು.
ಸಮಯ ಕಳೆಯಿತು. ಈಗ ಆನೆ ಸತ್ತಿರಬಹುದು ಎಂದುಕೊಂಡವಳು ಕಿಟಕಿಯಾಚೆ ನೋಡಿದಳು. ಬೇಲಿ ದಾಟಿ ಒಳಬಂದಿದ್ದ ಆನೆ ಈಗ ಬಹು ಎಚ್ಚರಿಕೆಯಿಂದ ತಂತಿಗೆ ಮೈ ತಾಗದಂತೆ ದಾಟಿ ಹೊರಹೋಗುತ್ತಿತ್ತು. ಪಳನಿಯಮ್ಮ ನೋಡುತ್ತಿದ್ದಂತೆಯೇ ಬೆನ್ನು ತೋರಿಸುತ್ತಾ ಹೊರಟುಹೋಯಿತು. ಪಳನಿಯಮ್ಮನಿಗೆ ಆನೆಯ ಜಾಣತನ ವಿಸ್ಮಯ ಮೂಡಿಸಿತು. ತೋಟದ ಕಡೆಗೆ ಕಣ್ಣು ಹಾಯಿಸಿದರೆ ಇನ್ನೆರಡು ದಿನ ಕಳೆದರೆ ಹಣ್ಣಾಗಬಹುದಾಗಿದ್ದ ಗೊನೆಯೊಂದು ನಾಪತ್ತೆಯಾಗಿತ್ತು!
ಫೋನ್ ಹಿಡಿದುಕೊಂಡು ಮಗನಲ್ಲಿ ಮಾತನಾಡುತ್ತಲೇ ಪಳನಿಯಮ್ಮ ಅಂಗಳಕ್ಕೆ ಬಂದು ನಿಂತುಕೊಂಡಳು. ಮಗ ಚಿಂತೆಯಲ್ಲಿದ್ದ. ಅವನ ಕೆಲಸ ಹೋಗಿತ್ತು. ಮುಂದೇನು ಮಾಡುವುದೆಂಬ ಯೋಚನೆಗೆ ಅವನಿಗೆ ಉತ್ತರ ಸಿಕ್ಕಿರಲಿಲ್ಲ. ಅದನ್ನು ತಿಳಿಸಲೆಂದು ತಾಯಿಗೆ ಕರೆ ಮಾಡಿದ್ದ.
“ನೋಡಪ್ಪಾ, ನೀನು ತಕ್ಷಣ ಇಲ್ಲಿಗೆ ಹೊರಡು. ಇನ್ನು ಇಲ್ಲಿಯೇ ಇದ್ದರಾಯಿತು. ನನಗೂ ಇಲ್ಲಿರುವ ತೊಂದರೆಯನ್ನು ಸಹಿಸುವುದಕ್ಕಾಗುತ್ತಿಲ್ಲ. ನೀನು ಜೊತೆಗಿದ್ದರೆ ಒಳ್ಳೆಯದು. ನನಗೂ ಧೈರ್ಯ. ಇಲ್ಲಿಯೇ ಯಾವುದಾದರೂ ಕೆಲಸ ನೋಡಿಕೊಂಡರಾಯಿತು” ಎಂದಳು ಪಳನಿಯಮ್ಮ.
“ಇಲ್ಲಮ್ಮ, ಅಲ್ಲಿ ನನಗೆ ಸರಿಯಾದ ಕೆಲಸ ಸಿಗುವುದಿಲ್ಲ. ಅಮೇರಿಕಾಕ್ಕೆ ಬಂದದ್ದೇ ಆ ಕಾರಣಕ್ಕೆ. ಅಲ್ಲಿಯೇ ಕೆಲಸ ಸಿಕ್ಕಿದ್ದಿದ್ದರೆ ನಾನ್ಯಾಕೆ ಅಮೇರಿಕಾಕ್ಕೆ ಬರುತ್ತಿದ್ದೆ! ಇನ್ನು ಮತ್ತೆ ಅಲ್ಲಿಗೆ ಬರುವುದಕ್ಕೆ ಸಾಧ್ಯ ಇಲ್ಲ. ಇಲ್ಲೇ ಏನಾದರೂ ಮಾಡಬೇಕು” ಎಂದ ಮಗ ಆ ಕಡೆಯಿಂದ.
“ಅಲ್ಲಪ್ಪಾ, ನನಗೂ ವಯಸ್ಸಾಗಿದೆ. ಇನ್ನೆಷ್ಟು ದಿನ ಇರುತ್ತೇನೋ ಗೊತ್ತಿಲ್ಲ. ನೀನು ಇದ್ದರೆ ಒಳ್ಳೆಯದು…” ಪಳನಿಯಮ್ಮನ ಮಾತಿನ್ನೂ ಮುಗಿದಿರಲಿಲ್ಲ. ಆಗಲೇ ಮಗ ಆರ್ಭಟಿಸಿದ.
“ನೋಡಿ ಅಮ್ಮ, ನಿನ್ನ ಕೊನೆಗಾಲಕ್ಕೆ ಜೊತೆಯಿರಬೇಕು ಅಂತ ನನ್ನ ಕನಸು ಬಿಟ್ಟು ಬರುವುದಕ್ಕೆ ಸಾಧ್ಯ ಇಲ್ಲ. ಈಗ ನಾನು ಅಮೇರಿಕಾ ಬಿಟ್ಟು ಅಲ್ಲಿಗೆ ಬಂದರೆ ಇಷ್ಟು ದಿನ ಇಲ್ಲಿದ್ದು ನಾನೇನು ಸಾಧಿಸಿದಂತಾಯಿತು. ನಮ್ಮ ಕಡೆಯವರೆಲ್ಲಾ ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ. ಅವರಿಗೆ ಉತ್ತರ ಕೊಡುವವರು ಯಾರು? ನೀನು ಕೊಡುತ್ತೀಯ? ನಾನು ಯಾವ ಕಾರಣಕ್ಕೂ ಅಲ್ಲಿಗೆ ಬಂದು ಇರುವುದಿಲ್ಲ. ನಿನ್ನ ಕೊನೆಗಾಲಕ್ಕೆ ನೀನೇ ಏನಾದರೂ ವ್ಯವಸ್ಥೆ ಮಾಡಿಕೋ. ಹಣ ಎಷ್ಟು ಬೇಕಿದ್ದರೂ ಕಳುಹಿಸುತ್ತೇನೆ. ನಾನು ಅಲ್ಲಿಗೆ ಬರುತ್ತೇನೆ ಅಂತ ಮಾತ್ರ ಅಂದುಕೊಳ್ಳಬೇಡ. ನಾನು ಇಷ್ಟು ಸಮಯ ಇಲ್ಲೇ ಬದುಕಿದ್ದು. ಸಾಯುವುದೂ ಸಹ ಇಲ್ಲಿಯೇ…” ಮಗನ ಮಾತು ಸಾಗುತ್ತಲೇ ಇತ್ತು.
ತನ್ನ ದೇಹದಲ್ಲೇನೋ ಮಾರ್ಪಾಡಾಗುತ್ತಿದೆ ಎಂಬ ಅರಿವಾಗುವಷ್ಟರಲ್ಲಿ ಪಳನಿಯಮ್ಮ ನೆಲದ ಮೇಲೆ ಬಿದ್ದರು. ಮೊಬೈಲ್ ಇನ್ನೊಂದು ಕಡೆಯಲ್ಲಿ ಬಿದ್ದಿತು. ರಕ್ತದೊತ್ತಡ ಏರಿರಬಹುದು, ಪಳನಿಯಮ್ಮನ ಪ್ರಜ್ಞೆ ಕಳೆದುಹೋಯಿತು. ಹಾಗೆಯೇ ಕಣ್ಣು ಮುಚ್ಚಿದಳು.
ನೀರಿನ ಸಿಂಚನ ಆದಾಗ ಪಳನಿಯಮ್ಮ ಕಣ್ಣುಬಿಟ್ಟಳು. ತನಗೆ ಆದದ್ದೇನು, ನೀರನ್ನು ಮುಖದ ಮೇಲೆ ಎರಚಿದ್ದು ಯಾರು ಎಂದು ಅತ್ತಿತ್ತ ನೋಡಿದರು. ಮನೆಯೆದುರಿನ ಅಂಗಳದಲ್ಲಿ ನೆಲದಿಂದ ತುಸು ಮೇಲೆದ್ದುನಿಂತಿದ್ದ ನೀರಿನ ಪೈಪ್ ಒಡೆದುಹೋಗಿತ್ತು. ಅದರಿಂದ ನೀರು ಚಿಮ್ಮುತ್ತಿತ್ತು. ನೀರು ಚಿಮ್ಮಿ ಸುತ್ತಮುತ್ತ ಉಂಟಾಗಿದ್ದ ಕೆಸರಿನಲ್ಲಿ ದಪ್ಪ ದಪ್ಪ ಹೆಜ್ಜೆ ಗುರುತುಗಳು. ಎದ್ದು ಕುಳಿತಲ್ಲಿಂದ ಒಂದೊಂದೇ ಹೆಜ್ಜೆ ಗುರುತಿನ ಮೇಲೆ ಕಣ್ಣು ಹಾಯಿಸುತ್ತಾ ಹೋದ ಪಳನಿಯಮ್ಮನಿಗೆ ಅಂತಿಮವಾಗಿ ಕಾಣಿಸಿದ್ದು ಒಂದು ಕಿರುಬಾಲ, ಕಂಬದಂತಹ ಕಾಲುಗಳು ಮತ್ತು ಕರಿಗಪ್ಪಿನ ದೈತ್ಯದೇಹ.
“ಅಮ್ಮ ಅದನ್ನು ಕೊಲ್ಲುವುದಕ್ಕೆ ಬಾಳೆಹಣ್ಣಿಗೆ ಕ್ರಿಮಿನಾಶಕ ಮಿಶ್ರ ಮಾಡಿಟ್ಟವರು ನೀವು. ಮತ್ತೆ ಇದನ್ನು ಮಾಡುವುದರಲ್ಲಿ ಏನಿದೆ. ಒಟ್ಟಾರೆ ಅದರಿಂದಾಗುವ ತೊಂದರೆ ಸರಿಯಾದರೆ ಅಷ್ಟೇ ಸಾಕಲ್ಲ” ಎಂದು ಕಮಲ ಹೇಳಿದ್ದು ಸರಿ ಎನಿಸಿತು ಪಳನಿಯಮ್ಮನಿಗೆ.
“ಇಲ್ಲಿ ನಮಗೆ ಆನೆಯ ತೊಂದರೆ ಇರುವಂತೆ ಪಕ್ಕದ ಊರಲ್ಲಿ ಮಂಗಗಳ ಕಾಟ ಇದೆಯಂತೆ. ಅದಕ್ಕೆ ತುಂಬಾ ಜನ ಹೀಗೇ ಮಾಡಿದ್ದಾರಂತೆ. ಈಗ ತೊಂದರೆ ಇಲ್ಲ ಅಂತ ಸುದ್ದಿ” ಎಂಬ ಮಾತನ್ನು ಸೇರಿಸಿದಳುಕಮಲ. “ಸರಿ ಇದನ್ನೂ ಮಾಡಿ ನೋಡುತ್ತೇನೆ” ಎಂದಳು ಪಳನಿಯಮ್ಮ.
ಮರುದಿನ ಆನೆ ಪಳನಿಯಮ್ಮನ ಮನೆಯಂಗಳಕ್ಕೆ ಬಂದಾಗ ಅದಕ್ಕೇ ಅಚ್ಚರಿ ಕಾದಿತ್ತು. ಒಂದು ದೊಡ್ಡ ಪಾತ್ರೆಯಲ್ಲಿ ಅನ್ನವನ್ನು ಇಡಲಾಗಿತ್ತು. ತಿಂದು ಮುಗಿಸಿದ ಆನೆ ತೋಟದ ಕಡೆಗೆ ಹೆಜ್ಜೆ ಹಾಕದೆಯೇ ಹೊರಟುಹೋಯಿತು. ಇದು ಹೀಗೆಯೇ ಮುಂದುವರಿಯಿತು. ಕಮಲ ಕೊಟ್ಟ ಉಪಾಯ ಫಲಿಸುತ್ತಿದೆ ಎಂಬ ಸಂತೋಷ ಪಳನಿಯಮ್ಮನಲ್ಲಿ. ಅದಕ್ಕೆ ಊಟ ಮೀಸಲಿಟ್ಟು ಉಳಿದಿರುವ ತೋಟವನ್ನಾದರೂ ಹಾಗೆಯೇ ಉಳಿಸಿಕೊಳ್ಳುವ ಯೋಚನೆ ಅವಳದ್ದು.
ದಿನಗಳು ಕಳೆಯುತ್ತಲೇ ಇದ್ದವು. ಈಗಂತೂ ಆನೆ ಪ್ರತೀದಿನವೂ ಮಧ್ಯಾಹ್ನದ ಹೊತ್ತಿಗೆ ಬರುತ್ತಿದೆ. ಅನ್ನ ತಿಂದು ಹೋಗುತ್ತಿದೆ. ಅದಕ್ಕಾಗಿಯೇ ಅನ್ನ ಮಾಡಲೆಂದು ಕಮಲಳನ್ನು ಪ್ರತೀದಿನ ಕೆಲಸಕ್ಕೆ ಬರಹೇಳಿದ್ದಾಳೆ ಪಳನಿಯಮ್ಮ. ತೋಟ ಉಳಿದರೆ ಎಷ್ಟು ಆದಾಯ ಬರುತ್ತಿತ್ತೋ ಅದಕ್ಕಿಂತಲೂ ಹೆಚ್ಚು ಖರ್ಚು ಮಾಡುತ್ತಿದ್ದಾಳೆ ಅವಳು. ಅದು ಅವಳಿಗೂ ಗೊತ್ತಿದೆ. ಈ ಬಗೆಯಲ್ಲಿ ಅವಳನ್ನು ಮುನ್ನಡೆಸುತ್ತಿರುವ ಶಕ್ತಿ ಯಾವುದು? ಅವಳಿಗೂ ಗೊತ್ತಿಲ್ಲ.
ಅದೊಂದು ದಿನ ಆನೆ ಆಹಾರ ತಿಂದುಮುಗಿಸಿ ಇನ್ನೇನು ಹೊರಡುವುದಕ್ಕೆ ಸಿದ್ಧವಾಗಿತ್ತು. ಮನೆಯೊಳಗಡೆ ಕಿಟಕಿ ಪಕ್ಕ ನಿಂತಿದ್ದ ಪಳನಿಯಮ್ಮ “ಭೀಮಾ” ಎಂದು ಕರೆದಳು. ಅದು ಅವಳ ಪಾಲಿಗೆ ಅಚ್ಚುಮೆಚ್ಚಿನ ಹೆಸರು. ಚಿಕ್ಕಂದಿನಲ್ಲಿ ಮಹಾಭಾರತದ ಕಥೆ ಕೇಳಿದಾಗಿನಿಂದಲೂ ಅವಳ ಮನಸ್ಸಿನಲ್ಲಿ ನೆಲೆನಿಂತಿದ್ದ ಹೆಸರದು. ಆ ಭೀಮನಿಗೂ ವಿಪರೀತ ಹಸಿವಿತ್ತು ಎಂಬ ಅರಿವು ಪಳನಿಯಮ್ಮನಿಗಿತ್ತು. ಈ ಕಾರಣದಿಂದಲೇ ತಿಂದು ಹೊರಡುತ್ತಿದ್ದ ಆನೆಯನ್ನು ಆ ಹೆಸರಿನಿಂದ ಕರೆದಿದ್ದಳು. ಕರೆದೆಯಾ ನನ್ನ ಎಂಬಂತೆ ಆ ಆನೆ ಸೊಂಡಿಲು ಎತ್ತಿ ಘೀಳಿಟ್ಟಿತು. ಮತ್ತೆ ಪಳನಿಯಮ್ಮ “ಭೀಮ” ಎಂದಳು. ಮತ್ತೆ ಅದೇ ಕೂಗು. ಮತ್ತೆ “ಭೀಮ”. ಮತ್ತದೇ ಕೂಗು.
ಬಾಗಿಲು ತೆರೆದು ಹೊರಬಂದ ಪಳನಿಯಮ್ಮ ಭೀಮನ ಎದುರು ನಿಂತಳು. ಆಹಾರ ಕೊಟ್ಟ ತನ್ನನ್ನು ಅವನೇನೂ ಮಾಡಲಿಕ್ಕಿಲ್ಲ ಎಂಬ ಧೈರ್ಯ ಅವಳೊಳಗೆ. ಹಾಗೆಯೇ ನೋಡುತ್ತಿದ್ದ ಭೀಮನ ಸೊಂಡಿಲನ್ನು ಸವರಿದಳು. ಅದೆಷ್ಟೋ ಹೊತ್ತು ಹಾಗೆಯೇ ಸವರಿದಳು. ಭೀಮನ ಕಣ್ಣೋಟ ಪಳನಿಯಮ್ಮನ ಕಣ್ಣುಗಳೊಳಗೆ ಇಳಿಯುವುದಕ್ಕೆ ಹೆಚ್ಚೇನೂ ಸಮಯ ಹಿಡಿಯಲಿಲ್ಲ.
ಜ್ವರ ಹಿಡಿದು ಮಲಗಿದ್ದ ಪಳನಿಯಮ್ಮನಿಗೆ ಎಚ್ಚರವಾದದ್ದು ಕಮಲ “ಅಮ್ಮಾ ವಿಷಯ ಗೊತ್ತಾಯಿತಾ? ಆ ದರಿದ್ರ ಆನೆ ನಿಮಗೆ ತೊಂದರೆ ಕೊಡುತ್ತಿತ್ತಲ್ಲ, ಅದು ಸತ್ತುಹೋಯಿತು. ಬೆಳಗ್ಗೆ ರುದ್ರಪ್ಪನ ತೋಟಕ್ಕೆ ಧಾಳಿ ಇಟ್ಟಿತಂತೆ. ಏಳೆಂಟು ಜವ್ವನಿಗರು ಬಂದೂಕಿನಲ್ಲಿ ಶೂಟ್ ಮಾಡಿ ಕೊಂದರಂತೆ. ಬನ್ನಿ ಒಂದು ಸಲ ಹೋಗಿ ನೋಡಿಬರೋಣ” ಎಂದು ಹೇಳಿದಾಗಲೇ. ಕಮಲಳಿಗೆ ಪಳನಿಯಮ್ಮ ಆ ಆನೆಗೆ ಭೀಮನೆಂದು ಹೆಸರಿಟ್ಟದ್ದು, ಆತ್ಮೀಯತೆ ಬೆಳೆಸಿಕೊಂಡದ್ದು ಇದಾವುದರ ಅರಿವೂ ಇರಲಿಲ್ಲ. ಅದರ ಬಗೆಗೆ ಈಗಲೂ ಪಳನಿಯಮ್ಮನಿಗೆ ಕೋಪ ಇದೆ ಎಂಬ ಯೋಚನೆ ಕಮಲಳದ್ದು.
ಅದುವರೆಗೂ ಮೇಲೇಳಲಾರೆ ಎಂಬಂತೆ ಬಿದ್ದುಕೊಂಡಿದ್ದ ಪಳನಿಯಮ್ಮನ ಮೇಲೆ ಯಾವುದೋ ಶಕ್ತಿ ಆವಾಹನೆಯಾದಂತಾಯಿತು. ಎದ್ದುನಿಂತವಳು ಅಂಗಳ ದಾಟುತ್ತಿದ್ದಂತೆ ವಿಪರೀತ ನಿತ್ರಾಣಕ್ಕೆ ಒಳಗಾದಳು. ಮುಂದೆ ಹೋಗಲಾರೆ ಎಂಬ ಭಾವ ಅವಳನ್ನು ಆವರಿಸಿತು. ಅಲ್ಲೇ ಕುಸಿದು ಕುಳಿತಳು.ಕಮಲ ಓಡಿಹೋಗಿ ಹಿಡಿದುಕೊಳ್ಳದಿದ್ದರೆ ನೆಲಕ್ಕೇ ಬೀಳುತ್ತಿದ್ದಳೋ ಏನೋ. ಆಗಲೇ ಕಮಲಳಿಗೆ ಗೊತ್ತಾದದ್ದು, ಪಳನಿಯಮ್ಮ ವಿಪರೀತ ಜ್ವರದಲ್ಲಿ ನರಳುತ್ತಿದ್ದಾಳೆ ಎಂದು. ಕಣ್ಣು ತೆರೆಯಲಾರದ ನಿಶ್ಶಕ್ತಿಯಿತ್ತು ಪಳನಿಯಮ್ಮನಲ್ಲಿ. ಪರಿಚಯದ ರಿಕ್ಷಾದವರಿಗೆ ಕರೆಮಾಡಿದ ಕಮಲ ಪಳನಿಯಮ್ಮಳನ್ನು ಆಸ್ಪತ್ರೆಗೆ ಸೇರಿಸಿದಳು.
“ಭೀಮಾ ಭೀಮಾ” ಎಂದು ಅರೆಪ್ರಜ್ಞಾವಸ್ಥೆಯಲ್ಲಿ ಪಳನಿಯಮ್ಮ ಕನವರಿಸುತ್ತಿದ್ದುದನ್ನು ಕಂಡ ವೈದ್ಯರು ಕಮಲಳಲ್ಲಿ “ಅದ್ಯಾರು ಭೀಮ? ಇವರ ಮಗನಾ? ಅವನನ್ನು ಬೇಗ ಕರೆಸಿ. ಆಗ ಇವರು ಹುಷಾರಾಗಬಹುದು” ಎಂದರು.
“ನನಗೆ ಗೊತ್ತಿದ್ದ ಹಾಗೆ ಆ ಹೆಸರಿನವರು ಯಾರೂ ಇವರಿಗೆ ಪರಿಚಯ ಇಲ್ಲ. ಏನೋ ಪ್ರಜ್ಞೆ ಇಲ್ಲದ ಕಾರಣ ಹಾಗೆ ಹೇಳುತ್ತಿದ್ದಾರೋ ಏನೋ” ಎಂದಳು ಕಮಲ. ಅದೆಷ್ಟೋ ಹೊತ್ತಿನವರೆಗೂ ಪಳನಿಯಮ್ಮನ ಕನವರಿಕೆ ಮುಂದುವರಿದೇ ಇತ್ತು.
ಪಳನಿಯಮ್ಮ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಬಂದು ಎರಡು ದಿನ ಕಳೆದಿತ್ತು. ಭೀಮ ತೀರಿಹೋಗಿದ್ದಾನೆ ಎಂಬ ಕೊರಗು ಅವಳಲ್ಲಿತ್ತು. ಕೊನೆಗಾಲಕ್ಕೂ ಅವನನ್ನು ಕಾಣಲಾಗಲಿಲ್ಲ ಎಂಬ ಬೇಗುದಿ ಅವಳೊಳಗನ್ನು ಬೇಯಿಸತೊಡಗಿತ್ತು. ಹಾಗೆಯೇ ಕಣ್ಣೀರು ಹರಿಸುತ್ತಾ ಚಾವಡಿಯಲ್ಲಿ ಕುಳಿತಿದ್ದಳು.
ಅವಳ ಕಣ್ಣುಗಳು ಅರಳಿದ್ದು ಭೀಮ ಘೀಳಿಟ್ಟ ಸದ್ದು ಕೇಳಿದಾಗ. ತಕ್ಷಣ ಎದ್ದುನಿಂತವಳು ಹೊರಗೆ ನೋಡಿದಳು. ಭೀಮ ಭಾರೀ ಗತ್ತಿನಿಂದ ಅಂಗಳದೆಡೆಗೆ ನಡೆದುಬರುತ್ತಿದ್ದ. ಬಾಗಿಲು ತೆರೆದವಳು ಅಂಗಳದ ಕಟ್ಟೆ ಮೇಲೆ ಹೋಗಿನಿಂತು “ಭೀಮಾ ಭೀಮಾ”ಎನ್ನುತ್ತಾ, ಕೈ ಮುಂದೆ ಮಾಡಿದಳು. ಇವಳ ಕೈ ನಿಲುಕುವಿಕೆಗೆ ಎಟಕುವಂತೆ ಸೊಂಡಿಲನ್ನು ಮುಂದೆ ಮಾಡಿದ ಭೀಮ ಮುದ್ದು ಮಾಡಿಸುವುದಕ್ಕೆಂದೇ ನಿಂತಂತೆ ನಿಂತುಕೊಂಡ. ಸೊಂಡಿಲನ್ನು ಸವರುತ್ತಾ ಕೊಂಡಾಟ ಮಾಡಿದ ಪಳನಿಯಮ್ಮ ಮುದ್ದು ಮಾಡಿದ್ದು ಇನ್ನೂ ಸಾಕಾಗಲಿಲ್ಲ ಎಂಬಂತೆ ಕಟ್ಟೆಯಿಂದಿಳಿದು ಭೀಮನ ಹೆಜ್ಜೆ ಗುರುತುಗಳ ಮೇಲೆಯೇ ಹೆಜ್ಜೆಯಿಟ್ಟು ಭೀಮನ ಸಾಮಿಪ್ಯ ಪಡೆದಳು. ಅವಳ ಮೊಗವೀಗ ಭೀಮನ ಸೊಂಡಿಲ ಸ್ಪರ್ಶದಲ್ಲಿ ಲೀನವಾಗಿತ್ತು.
ಡಾ. ವಿಶ್ವನಾಥ ಎನ್ ನೇರಳಕಟ್ಟೆ
