“ಯಾಕೆ ಮದುವೆ ಆಗಿದ್ದೇನೋ ಎನಿಸುತ್ತಿದೆ. ಇದಕ್ಕಿಂತ ಒಂಟಿಯಾಗಿರುವುದೇ ಒಳ್ಳೆಯದಿತ್ತು” ಶೂ ಕಳಚಿಡುತ್ತಾ ಅವನು ಹೇಳಿದ ಈ ಮಾತು ಮೊದಲೇ ಕೋಪದಿಂದಿದ್ದ ಅವಳನ್ನು ಕೆರಳಿಸಿತು.
“ನನಗೂ ಈ ಸಂಬಂಧ ಬೇಕಿರಲಿಲ್ಲ. ನೀವು ಇಂಥವರು ಅಂತ ಮೊದಲೇ ಗೊತ್ತಿದ್ದರೆ ನಾನು ಮದುವೆಗೆ ಒಪ್ಪುತ್ತಿರಲಿಲ್ಲ” ಎಂದು ಅವಳು ಹೇಳಿದ ತಕ್ಷಣವೇ ಅವನು ಕಳಚಿದ್ದ ಶೂವನ್ನು ಬಲವಾಗಿ ನೆಲದ ಮೇಲೆ ಬಿಸಾಡಿದ. ಅವನ ವರ್ತನೆಯನ್ನು ಲೆಕ್ಕಕ್ಕೇ ತೆಗೆದುಕೊಳ್ಳದವಳಂತೆ ಅವಳು “ಬೇಕಿರುವುದನ್ನೆಲ್ಲಾ ತೆಗೆದುಕೊಳ್ಳುವಷ್ಟು ಪುರುಸೊತ್ತು ಇಲ್ಲವೆಂದ ಮೇಲೆ ಶಾಪಿಂಗ್‌ಗೆ ಬಂದದ್ದಾದರೂ ಯಾಕೆ? ನಾನೊಬ್ಬಳೇ ಹೋಗುತ್ತಿದ್ದೆ. ಆಫೀಸಿನ ಕೆಲಸ ಇದೆ ಅಂತ ಮೊದಲೇ ಗೊತ್ತಿರಲಿಲ್ಲವಾ ನಿಮಗೆ? ಅಲ್ಲಿಗೆ ಬಂದಮೇಲೆ ಗೊತ್ತಾದದ್ದಾ?” ಎಂದಳು.
“ನನಗೆ ಆಫೀಸ್ ಕೆಲಸವೇ ಮುಖ್ಯ. ಶಾಪಿಂಗ್‌ಗೆ ಜೊತೆಗೆ ಬಂದೆ ಅಂದಮಾತ್ರಕ್ಕೆ ಇಡೀ ದಿನ ಅಲ್ಲಿಯೇ ಇರುತ್ತೇನೆ ಅಂತ ಅರ್ಥ ಅಲ್ಲ. ಕೆಲಸದ ಟೆನ್ಶನ್ ಮಧ್ಯೆಯೂ ಪುರುಸೊತ್ತು ಮಾಡಿಕೊಂಡು ನಿನ್ನ ಜೊತೆ ಬಂದೆನಲ್ಲಾ, ಅದಕ್ಕೆ ಖುಷಿಪಡಬೇಕು ನೀನು. ಅದುಬಿಟ್ಟು ಜಗಳ ಆಡುತ್ತಿದ್ದೀಯಲ್ಲಾ, ಜಗಳಗಂಟಿ!” ಅವನ ಮಾತುಗಳನ್ನು ಸಹಿಸಿಕೊಳ್ಳುವುದಕ್ಕಾಗಲಿಲ್ಲ ಅವಳಿಗೆ.
“ಓಹೋ ನೀವು ಬಾರದೇ ಇದ್ದರೆ ನಾನೊಬ್ಬಳೇ ಹೋಗುತ್ತಿದ್ದೆ. ಅದೇನೂ ದೊಡ್ಡ ವಿಷಯ ಅಲ್ಲ. ಹೆಂಡತಿಯ ಜೊತೆಗೆ ಅನುಸರಿಸಿಕೊಂಡು ಹೋಗುವ ಜಾಯಮಾನ ನಿಮ್ಮದಲ್ಲ ಅಷ್ಟೇ” ಎಂದು ಅವಳು ಬೊಬ್ಬೆ ಹೊಡೆಯುತ್ತಿರುವಾಗಲೇ ಅವನು ಅಲ್ಲೇ ಟೇಬಲ್ ಮೇಲಿದ್ದ ಲ್ಯಾಪ್‌ಟಾಪ್‌ನ್ನು ಎತ್ತಿಕೊಂಡು ಕೋಣೆಯ ಒಳಹೋಗಿ ಜೋರಾಗಿ ಸದ್ದಾಗುವಂತೆ ಬಾಗಿಲು ಹಾಕಿಕೊಂಡ.
ಅವಳಿಗೆ ಅವಮಾನ ಆದಂತಾಗಿತ್ತು. ಅತ್ತಳು. ಇವನ ಜೊತೆಗೆ ಬದುಕುವುದಕ್ಕಾಗಿ ತಾನು ತನ್ನ ಅಪ್ಪ ಅಮ್ಮನನ್ನು ಎದುರು ಹಾಕಿಕೊಂಡೆನಾ! ಎಂಬ ಯೋಚನೆ ಅವಳಲ್ಲಿ ಮೂಡಿಬಂತು.
ಅವನು ಮತ್ತು ಅವಳ ಮಧ್ಯೆ ಈ ಬಗೆಯ ಜಗಳ ಈಚೀಚೆಗೆ ಸಾಮಾನ್ಯವಾಗಿಬಿಟ್ಟಿದೆ. ಅವನಿಗೆ ಇಪ್ಪತ್ತೆಂಟು ವರ್ಷ. ಅವಳಿಗೆ ಇಪ್ಪತ್ತೈದು. ಸಣ್ಣ ವಯಸ್ಸು. ಆದ್ದರಿಂದಲೇ ಸಣ್ಣಪುಟ್ಟ ವಿಚಾರಕ್ಕೂ ಮನಸ್ತಾಪ. ಒಮ್ಮೆ ಎದ್ದ ಉರಿ ತಣಿಯುವುದಕ್ಕೆ ಮೂರು ನಾಲ್ಕು ದಿನಗಳು ಬೇಕು. ಈ ಕದನ ವಿರಾಮ ಕೊನೆಗೊಳ್ಳುವುದಕ್ಕಾಗಿಯೇ ಕಾದು ಕುಳಿತಂತೆ ತಕ್ಷಣವೇ ಶುರುವಾಗುತ್ತದೆ ಘರ್ಷಣೆಯ ಪರಮಾವಧಿ.
ದಿನವೆಲ್ಲಾ ಕೆಲಸ ಕೆಲಸ ಎಂದು ಜಪಿಸುತ್ತಾ ಅವನು ಒದ್ದಾಡುವ ಪರಿ ಅವಳಿಗೆ ಸಹ್ಯ ಎನಿಸುವುದಿಲ್ಲ. ಮದುವೆಯಾಗಿ ಇನ್ನೂ ಮೂರು ವರ್ಷ ಕಳೆದಿಲ್ಲ. ಆಗಲೇ ಅವನು ಸಂಸಾರದಲ್ಲಿ ಆಸಕ್ತಿ ಕಳೆದುಕೊಂಡವನಂತಾಗಿದ್ದಾನೆ. ಇದೇಕೆ ಎಂದು ಅವಳಿಗೆ ಅರ್ಥವಾಗುತ್ತಿಲ್ಲ. ಆಫೀಸು ಮುಗಿಸಿ ಮನೆಗೆ ಬಂದಮೇಲೂ ಲ್ಯಾಪ್‌ಟಾಪ್ ಹಿಡಿದು ಕುಳಿತುಕೊಳ್ಳುತ್ತಾನೆ. ಮಾತಿಲ್ಲ. ಕಥೆಯಿಲ್ಲ. ಒಂದು ಅನುರಾಗದ ಧ್ವನಿಯನ್ನೂ ಹೊಮ್ಮಿಸುವುದಿಲ್ಲ. ತಾನೇನಾದರೂ ತಮಾಷೆಯಾಗಿ ಹೇಳಿದರೆ ಅದಕ್ಕೂ ಪ್ರತಿಕ್ರಿಯೆ ಅಷ್ಟಾಗಿ ಇಲ್ಲ. ಬರೀ ಒಂದು ಸಣ್ಣ ನಗು. ಇದಾವ ಬಗೆಯ ಸಂಸಾರ ಎನ್ನುವುದವಳಿಗೆ ಅರ್ಥವಾಗಲಿಲ್ಲ. ಸೋಫಾದ ಮೇಲೆ ಕುಳಿತ ಅವಳು ಅದೆಷ್ಟೋ ಹೊತ್ತಿನವರೆಗೆ ಬುಸುಗುಡುತ್ತಲೇ ಇದ್ದಳು.
ಆತ ಫೇಸ್‌ಬುಕ್‌ನಲ್ಲಿ ಈಗ ಆ್ಯಕ್ಟೀವ್ ಆಗಿದ್ದಾನೆ ಎಂದು ಗೊತ್ತಾದ ತಕ್ಷಣವೇ ಅವಳು ಚಾಟ್ ಆರಂಭಿಸಿದಳು. ತಲೆಯೇರಿ ಕುಳಿತಿದ್ದ ಭಾರವನ್ನು ಇಳಿಸಿಕೊಳ್ಳುವುದಕ್ಕೆ ಅವಳಿಗಿದರ ಅಗತ್ಯವಿತ್ತು.
ಆತ ಮೂರು ತಿಂಗಳ ಹಿಂದೆ ಅವಳಿಗೆ ಫೇಸ್‌ಬುಕ್‌ನಲ್ಲಿಯೇ ಪರಿಚಯ ಆದವನು. ಅವನ ಜೊತೆ ಅತಿಯಾದ ಜಗಳವಾದ ಅದೊಂದು ಸಂದರ್ಭದಲ್ಲಿ ಅವಳಿಗೆ ಬೇರೆ ಯಾರದ್ದಾದರೂ ಪ್ರೀತಿಯ ಮಾತಿನ ಸಾಂತ್ವನ ಬೇಕಿದೆ ಎನಿಸಿತ್ತು. ಅದಕ್ಕಾಗಿ ಬೇರೊಂದು ಹೆಸರಿನಲ್ಲಿ ಫೇಸ್‌ಬುಕ್ ಖಾತೆ ತೆರೆದಿದ್ದಳು. ಅಲ್ಲಿ ಕಾಣಸಿಗುವ ಯಾರ ಜೊತೆಗಾದರೂ ಅನುರಾಗದ ಬಂಧವನ್ನು ಇರಿಸಿಕೊಳ್ಳುವುದು ಅವಳ ಮನದ ಯೋಚನೆ. ಅದಕ್ಕೆ ತಕ್ಕುದಾಗಿ ಪ್ರೀತಿಯ ಬಗ್ಗೆ ಅದೇನೋ ನಾಲ್ಕು ಸಾಲುಗಳನ್ನು ಪೋಸ್ಟ್ ಮಾಡಿದ್ದ ಆತನ ಕಡೆಗೆ ಅವಳ ಗಮನ ಹೋಗಿತ್ತು. ಸಾಲುಗಳು ಇಷ್ಟವಾಗುವಂತಿತ್ತು. ಗುಲಾಬಿ ಹೂವೊಂದನ್ನು ಪ್ರೊಫೈಲ್ ಫೋಟೋ ಆಗಿ ಹಾಕಿಕೊಂಡಿದ್ದ. ಬೇರೆ ಯಾವ ಫೋಟೋಗಳೂ ಇರಲಿಲ್ಲ. ಪ್ರೊಫೈಲ್‌ನಲ್ಲಿ ಇರುವ ಆತನ ಜನ್ಮದಿನಾಂಕ ಆತನಿಗಿನ್ನೂ ಇಪ್ಪತ್ತಮೂರು ವರ್ಷ ಎಂದು ಹೇಳುತ್ತಿತ್ತು. ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದಳು. ಆತ ತಕ್ಷಣವೇ ಅದನ್ನು ಒಪ್ಪಿಕೊಂಡ. “ನೀವು ಬರೆದ ಸಾಲುಗಳು ತುಂಬಾ ಚೆನ್ನಾಗಿವೆ” ಎಂದು ಅವಳು ಮೆಸೇಜ್ ಕಳಿಸಿದ್ದಕ್ಕೆ ಆತ “ಅಯ್ಯೋ ಅದು ನಾನು ಬರೆದದ್ದಲ್ಲ. ಬೇರೆ ಯಾರೋ ಬರೆದದ್ದು. ಅದನ್ನು ಕಾಪಿ ಪೇಸ್ಟ್ ಮಾಡಿದ್ದೇನೆ ಅಷ್ಟೇ” ಅಂತ ಪ್ರತಿಕ್ರಿಯಿಸಿದ್ದ. ಅದೆಷ್ಟು ಪ್ರಾಮಾಣಿಕನಾಗಿದ್ದಾನೆ ಆತ ಎನಿಸಿತ್ತು ಅವಳಿಗೆ. ತಾನೇ ಬರೆದದ್ದೆಂದು ಸುಳ್ಳು ಹೇಳಿ ಬಿಟ್ಟಿ ಬಿಲ್ಡಪ್ ತೆಗೆದುಕೊಳ್ಳದ ಆತನ ನಡೆ ಅವಳಿಗೆ ಮೆಚ್ಚುಗೆಯಾಗಿತ್ತು. ಯಾವಾಗ ಅವಳ ಮನಸ್ಸು ನೋಯುತ್ತದೋ ಆಗೆಲ್ಲಾ ಆತನ ಜೊತೆ ಚಾಟ್ ಮಾಡಲಾರಂಭಿಸಿದಳು. ತೀರಾ ಆತ್ಮೀಯತೆಯ ಧಾಟಿಯನ್ನಿಟ್ಟುಕೊಂಡ ಹುಡುಗನಾತ ಎನ್ನುವುದು ಅವಳಿಗೆ ಇಷ್ಟು ದಿವಸಗಳಲ್ಲಿ ಸ್ಪಷ್ಟವಾಗಿದೆ.
“ಯಾಕೋ ಮನಸ್ಸೆಲ್ಲಾ ಬೇಜಾರು” ಎಂದು ಅವಳು ಸಂದೇಶ ಕಳುಹಿಸಿದ ತಕ್ಷಣವೇ “ಯಾಕೆ?” ಎಂದಿತು ಆತನ ಸಂದೇಶ. ಇರುವ ಸತ್ಯವನ್ನು ಹೇಳಲಾಗದ ಅಳುಕು ಅವಳೊಳಗೆ. ತನಗೊಬ್ಬ ಗಂಡ ಇದ್ದಾನೆ, ತಾನು ಮದುವೆಯಾದವಳು ಎನ್ನುವುದನ್ನು ಇಷ್ಟೂ ದಿವಸಗಳಲ್ಲಿ ಅವಳು ಆತನಲ್ಲಿ ಹೇಳಿಕೊಂಡಿರಲಿಲ್ಲ. ನಿಜ ಹೇಳಿದರೆ ಆತ ತನ್ನ ಜೊತೆ ಚಾಟ್ ಮಾಡುವುದನ್ನು ನಿಲ್ಲಿಸಿಬಿಡುತ್ತಾನೋ ಏನೋ ಎಂಬ ಭಾವನೆ ಅವಳಲ್ಲಿತ್ತು.
“ನಮ್ಮ ಸುತ್ತಮುತ್ತ ಇರುವವರು ತೀರಾ ಒರಟಾಗಿ ನಡೆದುಕೊಂಡಾಗ ದುಃಖ ಆಗದೇ ಇರುತ್ತದಾ? ನೀನೇ ಹೇಳು” ಎಂಬ ಸಂದೇಶ ಕಳುಹಿಸಿದವಳು ಆತನ ಸಂದೇಶಕ್ಕಾಗಿ ಕಾದುಕುಳಿತಳು. ಆತನಿಂದ ಬರುವ ಸಾಂತ್ವನದ ಅಕ್ಷರಗಳನ್ನು ಅವಳ ಹೃದಯ ನಿರೀಕ್ಷಿಸುತ್ತಿತ್ತು. ಆತ ಟೈಪಿಸುವ ಅಕ್ಷರಗಳಿಗೇನೋ ವಿಶೇಷ ಶಕ್ತಿಯಿದೆ ಎನ್ನುವುದು ಅವಳ ಭಾವನೆ. ಅವಳಿಗೆ ಆತನ ಧ್ವನಿ ಕೇಳಬೇಕೆಂಬ ತುಡಿತ ಇರಲಿಲ್ಲ. ಆತನನ್ನು ಕಾಣಬೇಕೆಂಬ ತವಕ ಇರಲಿಲ್ಲ. ನೂರು ನೋಟ, ಸಾವಿರ ಮಾತುಗಳು ನೀಡಬಲ್ಲ ಸಮಾಧಾನವನ್ನು ಆತನಿಂದ ಹೊಮ್ಮಿಬರುವ ಐವತ್ತೋ ನೂರೋ ಅಕ್ಷರಗಳು ನೀಡುತ್ತವೆ ಎನ್ನುವುದು ಅವಳಲ್ಲಿದ್ದ ನಂಬಿಕೆ.
ಕಾದುಕುಳಿತ ಅವಳ ಹೃದಯ ಕದವನ್ನು ತಟ್ಟುವಂತೆ ಸಂದೇಶವೊಂದು ಬಂತು. ಏನಿತ್ತು ಅದರಲ್ಲಿ? ಒಂದು ಪುಟ್ಟ ಕಥೆ. ಪ್ರೀತಿಗೆ ಸಂಬಂಧಪಟ್ಟದ್ದು. ಓದಿದಳು. ಅದೇನೋ ಭರವಸೆ ಮೂಡಿದಂತಾಯಿತು ಅವಳಲ್ಲಿ. ಏನೇ ಕಷ್ಟ ಎದುರಾದರೂ ಅದೆಲ್ಲವನ್ನೂ ದಾಟಿ ಮುನ್ನುಗ್ಗುತ್ತಲೇ ಇರಬೇಕು ಬದುಕಿನಲ್ಲಿ ಎಂಬ ಸ್ಫೂರ್ತಿ ತುಂಬುವ ಸಾಲುಗಳು ಹಾಗೆಯೇ ತೇಲಿಬಂದವು. ಜೊತೆಗೆ “ಇದನ್ನು ನಾನೇ ಬರೆದದ್ದು. ಬೇರೆ ಎಲ್ಲಿಂದಲೂ ಕಾಪಿ ಪೇಸ್ಟ್ ಮಾಡಿದ್ದಲ್ಲ” ಎಂಬ ಸಂದೇಶ. ಅದನ್ನೂ ಓದಿದಳು. ಈಗ ಅವಳ ಮನಸ್ಸಿನಲ್ಲೇನೋ ನಿರಾಳತೆ. ತನಗಿನ್ನೂ ಬದುಕು ನಡೆಸುವ ಆಯ್ಕೆಯಿದೆ ಎಂಬ ಸಮಾಧಾನ. ಇಷ್ಟೂ ಸಮಯ ತಾನು ಬದುಕಿದ ರೀತಿಯ ಬಗೆಗೆ ಸಂತೃಪ್ತಿ. ತಾನು ಸರಿಯಾಗಿದ್ದೇನೆ. ಅವನೇ ಸರಿಯಿಲ್ಲ ಎಂಬ ಭಾವನೆ ಅವಳೊಳಗೆ ಮೂಡಿತು. ಆತನಿಗೆ ಧನ್ಯವಾದ ಹೇಳಿದವಳು ಖುಷಿಖುಷಿಯಾಗಿ ಮೊಬೈಲ್ ಆಚೆಗಿಟ್ಟು ಎದ್ದುನಿಂತಳು.
ಅಡುಗೆ ಕೋಣೆಗೆ ಹೋದವಳು ರಾತ್ರಿಯ ಅಡುಗೆ ತಯಾರು ಮಾಡಿದಳು. ಊಟ ಮುಗಿಸಿದಳು. ಅಷ್ಟರಲ್ಲಿ ಕೋಣೆಯಿಂದ ಹೊರಬಂದ ಅವನು ಆದ ಜಗಳವನ್ನು ಮರೆತವನಂತೆ “ನನಗೂ ಊಟ ಬಡಿಸು” ಎಂದು ಹೇಳಿ ಕೈ ತೊಳೆದುಕೊಂಡು ಬಂದ. “ನಿಮಗೆ ನಾನೇನೂ ಅಡುಗೆ ಮಾಡಿಲ್ಲ. ಬೇಕಿದ್ದರೆ ನೀವೇ ಅಡುಗೆ ಮಾಡಿ. ಊಟ ಮಾಡಿ” ಎಂದು ಠೀವಿಯಿಂದ ಹೇಳಿದ ಅವಳು ಗೆದ್ದೆ ಎಂಬ ಭಾವದಲ್ಲಿ ಕುಳಿತಲ್ಲಿಂದ ಎದ್ದು ಕೋಣೆಯ ಕಡೆಗೆ ಹೋದಳು. ಅವನು ದಂಗಾದವನAತೆ ಅವಳು ಹೋಗುವುದನ್ನೇ ನೋಡುತ್ತಿದ್ದ.
ಬೆಳಗ್ಗೆ ಏಳು ಗಂಟೆಯ ಹೊತ್ತಿಗೆ ಅವಳೊಳಗೆ ಹುಟ್ಟಿಕೊಂಡಿದ್ದ ಅಸಮಾಧಾನ ಗಂಟೆ ಎಂಟಾದಾಗಲೂ ತಣಿದಿರಲಿಲ್ಲ. ಹಿಂದಿನ ದಿನ ಅಡುಗೆ ಮಾಡದ್ದನ್ನೇ ನೆಪವಾಗಿಟ್ಟುಕೊಂಡು ಅವನು ಅವಳ ಜೊತೆಗೆ ಜಗಳ ಆಡಿದ್ದ. ಅವಳು ಮಾಡಿದ್ದ ತಿಂಡಿಯನ್ನೂ ತಿನ್ನದೆ “ನಾನು ಆಫೀಸ್ ಕ್ಯಾಂಟೀನ್‌ನಲ್ಲಿಯೇ ತಿನ್ನುತ್ತೇನೆ. ರಾತ್ರಿಗೆ ಬೇಕಾದದ್ದನ್ನೂ ಕಟ್ಟಿಸಿಕೊಂಡು ಬರುತ್ತೇನೆ. ನೀನೇನೂ ಮಾಡುವುದು ಬೇಡ. ನಿನಗೆ ಬೇಕಾದಷ್ಟನ್ನು ಮಾಡಿಕೋ ಸಾಕು” ಎಂದು ಹೇಳಿ, ದುರದುರನೆ ಮನೆಯಿಂದ ಹೊರನಡೆದಿದ್ದ.
ಇನ್ನು ಅವನ ಜೊತೆ ಬದುಕುವುದು ಸಾಧ್ಯವಿಲ್ಲ ಎಂದೇ ತೋರಿತು ಅವಳಿಗೆ. ತಾನೆಲ್ಲಿಯೋ ಸೋತಿದ್ದೇನೆ ಎಂಬ ಅತಂತ್ರ ಭಾವ ಅವಳಲ್ಲಿ. ಅವನ ಜೊತೆಗೇ ಜೀವನ ನಡೆಯುತ್ತಿದ್ದರೆ ಸೋಲುವುದೇ ಅನುದಿನದ ಬದುಕಾಗಿಬಿಡುತ್ತದೆ ಎಂಬ ಯೋಚನೆ ಸುಳಿದದ್ದೇ ತಡ ಅವಳು ಕಂಗಾಲಾದಳು. ಸರಿಯಾದ ನಿರ್ಧಾರವೊಂದನ್ನು ತಾನೀಗ ತೆಗೆದುಕೊಳ್ಳಲೇಬೇಕು ಎಂದಂದುಕೊಂಡ ಅವಳ ಮನಸ್ಸು ನಿರ್ಣಯವೊಂದನ್ನು ಕೈಗೊಂಡಿತು.
ಫೇಸ್‌ಬುಕ್ ನೋಡಿದರೆ ಆತ ಆ್ಯಕ್ಟಿವ್ ಆಗಿದ್ದ. ಸಂದೇಶ ಕಳಿಸಿದಳು. “ನಿನ್ನನ್ನೊಮ್ಮೆ ನೋಡಬೇಕು ಎನಿಸುತ್ತಿದೆ. ನಿನ್ನ ಜೊತೆಗೆ ಮಾತನಾಡಬೇಕು. ಯಾವಾಗ, ಎಲ್ಲಿ ಸಿಗುತ್ತೀಯ ಹೇಳು” ಆತನಿಂದ ಯಾವ ಪ್ರತಿಕ್ರಿಯೆಯೂ ಇಲ್ಲ. ಮತ್ತೆ ಅದೇ ಸಂದೇಶ ಕಳಿಸಿದಳು.
“ಸದ್ಯಕ್ಕೆ ನಾವು ಭೇಟಿಯಾಗುವುದು ಬೇಡ. ಒಂದಷ್ಟು ಸಮಯ ಕಳೆಯಲಿ” ಎಂಬ ಉತ್ತರ ಬಂತು. ಅವಳಿಗದು ಮೆಚ್ಚುಗೆಯಾಗಲಿಲ್ಲ.
“ಇಲ್ಲ, ನಾವು ಮೀಟ್ ಆಗಲೇಬೇಕು. ಇಲ್ಲವಾದರೆ ಇನ್ನು ಚಾಟ್ ಮಾಡುವುದೇ ಬೇಡ” ಎಂದು ಸಂದೇಶ ಕಳಿಸಿದವಳ ಒಳಗಿದ್ದದ್ದು ತುಂಬು ಆವೇಶ. ಅವಳ ಈ ಪರಿಯನ್ನು ಆತ ಕಾಣದೆಯೇ ಅರ್ಥೈಸಿಕೊಂಡ.
“ಸರಿ ಮುಂದಿನ ಭಾನುವಾರ ಮೀಟ್ ಆಗೋಣ” ಎಂದು ಸಂದೇಶ ಕಳಿಸಿದ. ಆತನೊಂದಿಗೊಂದಷ್ಟು ಹೊತ್ತು ಆತ್ಮೀಯತೆಯ ಸಂವಹನ ನಡೆಸಿದವಳಲ್ಲಿ ಅದೇನೋ ಹೊಸ ಕನಸು.
ಮನೆಯಿಂದ ಹೊರಬಂದವಳು ಸೀದಾ ಹೋದದ್ದು ತನ್ನ ಪರಿಚಯದ ಲಾಯರ್ ಆಫೀಸ್ ಕಡೆಗೆ. ಅಲ್ಲಿ ವಕೀಲೆಯಾಗಿದ್ದವಳು ಅವಳನ್ನು ಕಂಡ ತಕ್ಷಣವೇ ನಗುಬೀರಿದಳು. ಅವಳು ಬಂದ ಕಾರಣವನ್ನು ಕೇಳಿದಳು. ಅವಳು ನುಡಿದದ್ದು ಕೇಳಿ ಆ ವಕೀಲೆಯೊಳಗೇನೋ ತಳಮಳ. ಆದರೂ ಕೆಲಸ ಮಾಡಲೇಬೇಕಿತ್ತು. ಅವಳು ಹೇಳಿದ ರೀತಿಯಲ್ಲಿಯೇ ಏನೆಲ್ಲಾ ಆಗಬೇಕೋ ಅದನ್ನು ಮಾಡಿಕೊಟ್ಟಳು.
ರಾತ್ರಿ ಅವನು ಮನೆಗೆ ಬಂದಾಗ ಎದುರು ಬಂದುನಿಂತ ಅವಳ ಕೈಯ್ಯಲ್ಲಿ ಕಾಗದವೊಂದಿತ್ತು. ಅದನ್ನು ಅವನ ಮುಖದ ಮುಂದೆ ಹಿಡಿದು ನಿರ್ಭಾವುಕವಾಗಿ “ಇದಕ್ಕೆ ಸಹಿ ಬೇಕಿತ್ತು” ಎಂದಳು. ಅವನು ಅದನ್ನು ಎತ್ತಿಕೊಂಡವನು ಓದಿದ. ಡಿವೋರ್ಸ್ ಪೇಪರ್ ಅದು ಎನ್ನುವುದು ಅವನಿಗೆ ಕ್ಷಣದಲ್ಲಿಯೇ ಅರ್ಥವಾಯಿತು. ಅವನ ಮುಖವನ್ನೇ ನೋಡುತ್ತಿದ್ದ ಅವಳಿಗೆ ಅವನ ಮುಖ ಬಿಳುಚಿಕೊಂಡಂತೆ ಕಂಡಿತು. “ನಾನೂ ಇದನ್ನೇ ಬಯಸಿದ್ದೆ. ನನಗೂ ನಿನ್ನ ಜೊತೆ ಬದುಕುವುದೇನೂ ಇಷ್ಟ ಇಲ್ಲ” ಎಂದವನು ಪೆನ್ನು ಎತ್ತಿಕೊಂಡು ಅದರ ಮೇಲೆ ಸಹಿ ಹಾಕಿದ. ಕಾಗದವನ್ನು ಅಲ್ಲೇ ಟೀಪಾಯಿಯ ಮೇಲಿಟ್ಟವನು ಕೋಣೆಯ ಒಳಹೋದ.
ಬೇಸರ ಆಗಿದೆ. ಆದರೂ ಅದನ್ನವನು ತೋರಿಸಿಕೊಂಡಿಲ್ಲ ಎಂದು ಅಂದುಕೊಂಡ ಅವಳ ಮುಖದಲ್ಲಿ ಸಂತಸದ ನಗು ಮೂಡಿತು.
ಅವಳು ಆತನಲ್ಲಿ ಹೇಳಿದ್ದ ಭಾನುವಾರ ಬಂದಿತ್ತು. ಅವನು ಬೆಳಗ್ಗೆಯೇ ಲ್ಯಾಪ್‌ಟಾಪ್ ಹಿಡಿದು ಕುಳಿತಿದ್ದ. ಹೊರಡುವುದಕ್ಕೆ ತಯಾರಾಗಿ ಬಂದ ಅವಳು ಆತನಿಗೆ ತನ್ನ ಗುರುತು ಸಿಗಲಿ ಎಂಬ ಕಾರಣಕ್ಕೆ ಹಸಿರು ಬಣ್ಣದ ಉಡುಗೆ ಧರಿಸಿದ್ದಳು. ಮುಖದಲ್ಲಿ ನಗು ತುಂಬಿಕೊಂಡಿತ್ತು. “ಇವತ್ತು ನಾನು ಹೇಳಿದಲ್ಲಿಗೆ ಬರುತ್ತೀಯ ತಾನೇ?” ಎಂದು ಆತನಿಗೆ ಸಂದೇಶ ಕಳಿಸಿದವಳು ಆತನಿಂದ “ಖಂಡಿತಾ ಬರುತ್ತೇನೆ” ಎಂಬ ಉತ್ತರ ಬಂದ ತಕ್ಷಣವೇ ಇನ್ನಷ್ಟು ಖುಷಿಖುಷಿಯಾದಳು. ಅವನ ಕಡೆಗೊಮ್ಮೆ ನೋಡಿದವಳು ತಿರಸ್ಕಾರದ ಮುಖಭಾವ ಮಾಡುತ್ತಾ ಅಲ್ಲಿಂದ ಹೊರಟಳು.
ಪಾರ್ಕಿನ ಕಲ್ಲುಬೆಂಚಿನ ಮೇಲೆ ಕುಳಿತವಳು ಸಮಯ ಎಷ್ಟಾಯಿತೆಂದು ನೋಡಿದಳು. ಆತನಲ್ಲಿ ಹೇಳಿದ ಸಮಯ ಆಗುವುದಕ್ಕೆ ಇನ್ನೂ ಅರ್ಧ ಗಂಟೆಯಿತ್ತು. ಆತನನ್ನು ಕಾಣುವ ತವಕದಲ್ಲಿ ತಾನಿಷ್ಟು ಬೇಗ ಬಂದು ತಲುಪಿಯಾಗಿದೆ ಎನ್ನುವುದು ಅವಳಿಗೆ ಮನವರಿಕೆಯಾಗಿತ್ತು.
ಇಂದು ಆತನಲ್ಲಿ ಎಲ್ಲಾ ಸತ್ಯವನ್ನೂ ಹೇಳಿಬಿಡಬೇಕು. ಮುಂದೆ ಆತನ ಜೊತೆಗೇ ಬದುಕುವ ನಿರ್ಧಾರ ಮಾಡಿರುವುದನ್ನೂ ತಿಳಿಸಬೇಕು. ಒಂದುವೇಳೆ ಆತ ನೋಡುವುದಕ್ಕೆ ಸುಂದರನಾಗಿಲ್ಲದಿದ್ದರೂ ಪರವಾಗಿಲ್ಲ. ಹೆಚ್ಚು ಸಂಪಾದನೆಯಿರದಿದ್ದರೂ ತೊಂದರೆಯಿಲ್ಲ. ಒಳ್ಳೆಯ ಮನಸ್ಸು ಇದೆಯಲ್ಲ, ಅಷ್ಟೇ ಸಾಕು. ನೆಮ್ಮದಿಯಿಂದ ಬದುಕಬಹುದು. ಇಂತಹ ಯೋಚನೆಗಳೆಲ್ಲ ಅವಳ ಮನಸ್ಸನ್ನು ಸುತ್ತುವರಿಯುವ ಮರಿದುಂಬಿಯಾಯಿತು.
ಆಗಾಗ ಕಣ್ಣುಗಳನ್ನು ಪಾರ್ಕ್ ತುಂಬೆಲ್ಲಾ ಓಡಿಸುತ್ತಲೇ ಇದ್ದಳು. ನೀಲಿ ಬಣ್ಣದ ಅಂಗಿ, ಕಪ್ಪು ಪ್ಯಾಂಟು ಧರಿಸಿದವರು ಯಾರಾದರೂ ಇದ್ದಾರಾ ಎಂದು ನೋಡುತ್ತಲೇ ಇದ್ದಳು. ನೀಲಿ ಅಂಗಿ ಹಾಕಿದ ಒಬ್ಬನನ್ನು ಕಂಡಾಗ ಎದ್ದುನಿಂತಳು. ಆದರೆ ಆ ವ್ಯಕ್ತಿ ಕಪ್ಪು ಪ್ಯಾಂಟು ಹಾಕಿರಲಿಲ್ಲ. ಬಿಳಿಯ ಪ್ಯಾಂಟು ಹಾಕಿಕೊಂಡಿದ್ದ. ಫೋನಿನಲ್ಲಿ ಯಾರಿಗೋ “ಸರಿಯಾದ ಟೈಮಿಗೆ ಬರಬೇಕೂಂತ ಹೇಳಯ್ಯ ಅವನಿಗೆ. ಇಲ್ಲವಾದರೆ ನಾನು ಹೊರಟುಹೋಗುತ್ತೇನೆ ಅಷ್ಟೇ” ಎಂದು ಜೋರುದನಿಯಲ್ಲಿ ಗದರುತ್ತಿದ್ದ. ಇಷ್ಟದವಳೊಬ್ಬಳನ್ನು ಕಾಣುವುದಕ್ಕೆ ಬಂದವನಲ್ಲ ಆ ವ್ಯಕ್ತಿ ಎನ್ನುವುದು ಅವಳಿಗೆ ಅರ್ಥವಾಗಿತ್ತು.
ಹಾಗೆಯೇ ಆ ವ್ಯಕ್ತಿಯ ಕಡೆಗೆ ನೋಡುತ್ತಿದ್ದ ಅವಳು ಈ ಕಡೆಗೆ ಕಣ್ಣು ಹಾಯಿಸುವಷ್ಟರಲ್ಲಿ, ತುಸು ದೂರದಲ್ಲಿ, ಪಾರ್ಕಿನ ಗೇಟಿನ ಬದಿಯಿಂದ ನಡೆದುಬರುತ್ತಿರುವ ಕಪ್ಪು ನೀಲಿ ಆಕೃತಿಯೊಂದು ಕಣ್ಣಿಗೆ ಬಿತ್ತು. ಉತ್ಸಾಹದಿಂದ ಅವಳು ಎದ್ದುನಿಂತಳು. ನಡೆದುಬರುತ್ತಿದ್ದ ಆಕೃತಿಯ ಅಸ್ಪಷ್ಟ ಮುಖ ಸ್ಪಷ್ಟವಾಗುತ್ತಾ ಹೋಯಿತು. ಆತನ ನಿರೀಕ್ಷೆಯಲ್ಲಿದ್ದ ಅವಳು ಅವನನ್ನು ಕಂಡು ಒಂದುಕ್ಷಣ ತಲ್ಲಣಿಸಿಹೋದಳು.
-ಡಾ. ವಿಶ್ವನಾಥ ಎನ್ ನೇರಳಕಟ್ಟೆ
