“ಅರ್ಥ ಹೀನ”: ಅರವಿಂದ. ಜಿ. ಜೋಷಿ.

“ಅಮ್ಮಾ…. ನೀನೂ ನಮ್ಮ ಜೊತೆಗೆ ಬೆಂಗಳೂರಿಗೆ ಬಾ,.. ಇಷ್ಟು ದಿನ ಅಪ್ಪಾ ಇದ್ರು ಆಗ ಮಾತು ಬೇರೆ ಇತ್ತು, ಈಗ ಈ ಊರಲ್ಲಿ ನೀನೊಬ್ಬಳೇ ಇರೋದು ಬೇಡಾ”
ಎಂದು ಪ್ರಕಾಶ್ ತನ್ನ ತಾಯಿಗೆ ಹೇಳಿದಾಗ ಆತನ ತಾಯಿ ರಾಧಾಬಾಯಿ ಕೊಂಚ ಯೋಚನೆಗೊಳಗಾದರು. ಕಳೆದ ಹದಿನೈದು ದಿನ ಗಳ ಹಿಂದಷ್ಟೇ, ಅವರ ಪತಿ ರಾಜಪ್ಪನವರು ಹೃದಯಾಘಾತದಿಂದ ಮರಣಹೊಂದಿದ್ದರು. ಅಂದಿನಿಂದ ತಮ್ಮನ್ನು ತಾವು ಸಮಾಧಾನಿಸಿಕೊಳ್ಳಲು ಸಾಕಷ್ಟು ಪ್ರಯತ್ನಿಸಿದ್ದರು. ರಾಧಾಬಾಯಿಯ ಮಗ ಪ್ರಕಾಶ್ ಹಾಗೂ ಸೊಸೆ ಪ್ರಿಯಾ ಇಬ್ಬರೂ ಇಂಜಿನೀಯರ್ ಆಗಿದ್ದು ಇಬ್ಬರೂ ಕೆಲಸಕ್ಕೆ ಹೋಗುತ್ತಿದ್ದರು.

ಈ ನಡುವೆ ರಾಧಾಬಾಯಿಯ ಒಂದಿಬ್ಬರು ಗೆಳತಿಯರು -“ಯೋಚನೆ ಮಾಡಿ ಹೆಜ್ಜೆ ಇಡು ರಾಧಾ,.. ಮಗ, ಸೊಸೆ ಇಬ್ಬರೂ ಕೆಲಸಕ್ಕೆ ಹೋಗುವವರು ಅಂತೀಯಾ, ಅಲ್ಲಿ ನೀ ಹೋಗಿ ಈಗಿರುವ ನಿನ್ನ ಸ್ವಾತಂತ್ರ್ಯ ಕ್ಕೆ ಧಕ್ಕೆ ತಂದ್ಕೋತಿಯಾ.. ನಿನ್ನ ಪತಿ ಬದುಕಿದ್ದಾ ಇರೋಬರೋ ಆಸ್ತಿನೆಲ್ಲಾ ನಿನ್ನ ಮಗನ ಹೆಸರಿಗೆ ಮಾಡಿದ್ದಾರೆ ಅಂತ ಬೇರೆ ಹೇಳ್ತಿದ್ದೀ ಅಲ್ಲಿ ಇಂಥಾ ಪರಿಸ್ಥಿತಿಯಲ್ಲಿ ನೀನು ಅಲ್ಲಿಗೆ ಹೋಗಿ ದುಡ್ಡಿನಿಂದ ಮೊದಲು ಮಾಡಿ ಎಲ್ಲಾದಕ್ಕೂ ಒದ್ದಾಡಲ್ಲ ಅಂತ ಏನು ಗ್ಯಾರಂಟಿ? ಯಾವ್ದಕ್ಕೂ ಇನ್ನೊಂದು ಸಲ ಯೋಚನೆ ಮಾಡು.. “ಎಂದು ಕಿವಿ ಊದಿದ್ದರು. ಆದರೆ ಮಗನ ಮತ್ತು ಸೊಸೆಯ ಗುಣ ಏನೆಂಬುದನ್ನು ಚೆನ್ನಾಗಿ ಅರಿತಿದ್ದ ರಾಧಾಬಾಯಿ ಅವರು ಗಳು ಆಡಿದ ಮಾತುಗಳನ್ನು ಅಷ್ಟು ಸೀರಿಯಸ್ ಆಗಿ ಪರಿಗಣಿಸಗಣಿಸಲಿಲ್ಲ.

ಸ್ವರ್ಗಸ್ಥ ಪತಿಯ ಉತ್ತರ ಕ್ರಿಯೆಗೆ ತಮ್ಮ ಕೈಯಲ್ಲಿದ್ದಷ್ಟು ಹಣವನ್ನು ಮಗನಿಗೆ ಕೊಟ್ಟಿದ್ದರು. ಆತ ಆಗೇನೂ ಮಾತನಾಡದೇ ಅದರೊಂದಿಗೆ ತನ್ನಲ್ಲಿಯ ಹಣ ಸೇರಿಸಿ ಎಲ್ಲ ಕಾರ್ಯಗಳನ್ನು ವಿಧಿವತ್ತಾಗಿ, ಎಲ್ಲರಿಗೂ ತೃಪ್ತಿ ಆಗುವಂತೆ ಮಾಡಿ ಮುಗಿಸಿದ್ದ. ಈ ಒಂದು ಸಂದರ್ಭದಲ್ಲಿ ರಾಧಾಬಾಯಿ ಯವರ ಕೈ ಪೂರ್ತಿ ಬರಿದಾಗಿತ್ತು. ಅವರು ಈ ಒಂದು ಗಾಢ ಯೋಚನೆಯಲ್ಲಿ ಇದ್ದುದರಿಂದ ಮಗ ಕೇಳಿದ ಪ್ರಶ್ನೆಗೆ ಉತ್ತರ ನೀಡಿರಲಿಲ್ಲ. ಈ ನಡುವೆ ಅವರ ಸೊಸೆ ಪ್ರಿಯಾ
“ಅತ್ತೇ… ನಿಮ್ಮ ಎಲ್ಲಾ ಬಟ್ಟೆಗಳನ್ನು ಕೊಡಿ, ಎಲ್ಲಾ ಪ್ಯಾಕ್ ಮಾಡ್ತಾ ಇದ್ದೇನೆ”ಎಂದು ಕೇಳಿದಾಗ ರಾಧಾಬಾಯಿ ಯವರು ಮೌನದಿಂದ ಎದ್ದು ಹೋಗಿ ತಮಗೆ ಸೇರಿದ ಎಲ್ಲ ಬಟ್ಟೆಗಳನ್ನು ಪ್ಯಾಕ್ ಮಾಡಲು ಅವಳ ಕೈಗೆ ಕೊಟ್ಟರು.

ಮರುದಿನ ಎಲ್ಲರೂ ಪೂರ್ವ ಯೋಜನೆಯಂತೆ ಬೆಂಗಳೂರಿಗೆ ಬಂದಿಳಿದರು. ಅಲ್ಲಿ ಬಂದಾಗಿನಿಂದ ಪ್ರಕಾಶ್ ಮತ್ತು ಪ್ರಿಯಾ ರಾಧಾಬಾಯಿ ಯವರನ್ನು ತುಂಬಾ ಚೆನ್ನಾಗಿ ನೋಡಕೊಳ್ಳತೊಡಗಿದರು. ಪತಿ ಕಳೆದುಕೊಂಡ ದು:ಖ ಅವರಿಗೆ ಮರುಕಳಿಸದಿರಲೆಂದು ಮಗ, ಸೊಸೆ ಮತ್ತು ಅವರ ಏಳು ವರ್ಷದ ಪುತ್ರ ರಾಹುಲ್ ಸದಾ ಜೊತೆಗೆ ಗಿದ್ದು ಅವರನ್ನು ಸಂತಸದಿಂದ ಇರುವಂತೆ ಮಾಡಿದರು.
ರಾಧಾಬಾಯಿ ಯವರೂ ಅಷ್ಟೇ ಹಗಲಿನ ವೇಳೆ ಎಚ್ಚವಾಗಿರುವಷ್ಟು ಕಾಲ ತಮ್ಮ ಮೊಮ್ಮಗ ಜೊತೆಗೆ ಆಟವಾಡುತ್ತ ಇರುತ್ತಿದ್ದರಿಂದ ಅವರ ಮನಸ್ಸು ಮುಂಚಿಗಿಂತ ಹಗುರವಾಗಿ ಆರೋಗ್ಯ ಕೂಡ ಸುಧಾರಿಸತೊಡಗಿತ್ತು. ಇಂತಹ ದಿನಗಳಲ್ಲಿ ಊರಲ್ಲಿನ ಕೆಲವು ಜನ, ತಾವು ಇಲ್ಲಿಗೆ ಹೊರಟು ನಿಂತ ಸಂದರ್ಭದಲ್ಲಿ ಹಿಂದೆ ಮುಂದೆ ಯೋಚಿಸದೇ “ಕೆಲಸಕ್ಕೆ ಹೋಗುವ ಮಗ ಸೊಸೆ ಜೊತೆಗೆ ಹೋಗಿ ಇರ್ತೀನಿ ಅಂತೀಯಾ.. “ಎಂದು ಹೇಳುತ್ತಿದ್ದ ಮಾತು ಬರೀ ಸುಳ್ಳು ಎನಿಸದಿರಲಿಲ್ಲ.

ಅಂದೊದು ರಜಾ ದಿನ, ರಾಧಾಬಾಯಿಯನ್ನು ಕರೆದು ಕೊಂಡು ಪ್ರಕಾಶ್, ಪ್ರಿಯಾ ತಮ್ಮ ಮಗ ರಾಹುಲ್ ನೊಂದಿಗೆ ನಗರದಲ್ಲಿ ಸ್ವಲ್ಪ ಸುತ್ತಾಡಿ ಆನಂತರ ಮಾಲ್ ಗೆ ಕೆಲವು ಬಟ್ಟೆ, ಮನೆ ವಸ್ತು ಖರೀದಿಸಲು ಅವರದೇ ಕಾರಿನಲ್ಲಿ ಹೋಗಿದ್ದರು. ಎಲ್ಲರೂ ಮಾಲ್ ಗೆ ತಲುಪಿದಾಗ, ಪ್ರಕಾಶ್ ತನ್ನ ಅಮ್ಮನಿಗೆ -“ಅಮ್ಮಾ.. ಬಟ್ಟೆ ಸೆಕ್ಷನ್ ನಲ್ಲಿ ತುಂಬಾ ರಷ್ ಇದೆ. ನೀನು ರಾಹುಲ್ ನ ಜೊತೆಗೆ ಇಲ್ಲೇ ಕುಳಿತಿರು” ಎಂದು ಅಲ್ಲಿದ್ದ ಸೋಫಾದ ಮೇಲೆ ಕೂರಿಸಿ ಹೋಗಿದ್ದ. ಐದಾರು ನಿಮಿಷ ಗಳ ನಂತರ ರಾಹುಲ್ ನ ಕಣ್ಣಿಗೆ ಐಸ್ಕ್ರೀಮ್ ಅಂಗಡಿ ಕಂಡ ನಂತರ ಆತ ತನ್ನ. ಅಜ್ಜಿಗೆ”ಅಜ್ಜೀ.. ನನಗೆ ಐಸ್ಕ್ರೀಮ್ ತಿನ್ಬೇಕು ಅಂತ ಆಸೆ ಆಗ್ತಾ ಇದೆ ಪ್ಲೀಸ್ ಕೊಡಿಸು ಅಜ್ಜಿ.. “ಎಂದು ಕೇಳಿದಾಗ ರಾಧಾಬಾಯಿ ಯವರಿಗೆ ಒಂದು ರೀತಿಯ ಶಾಕ್ ಹೊಡೆದಂತಾಯಿತು. ಏಕೆಂದರೆ ಅವರ ಬಳಿ ಹಣ ಇರಲಿಲ್ಲ. ಮಗನ ಮನೆಗೆ ಬಂದಾಗಿನಿಂದ ಎಲ್ಲವನ್ನೂ ಅವರೇ ನೋಡಿಕೊಳ್ಳುತ್ತಿದ್ದುರಿಂದ ಅದನ್ನು ಇಟ್ಟುಕೊಳ್ಳುವ ಅಗತ್ಯತೆ ಅವರಿಗೆ ಇರಲಿಲ್ಲ…. ” ಈಗ ನಾನೇನು ಮಾಡಲಿ?”ಎಂದು ಯೋಚಿಸುತ್ತಿದ್ದಾಗ ಪುನಃ ಅವರ ಕೈ ಹಿಡಿದು ಎಳೆಯುತ್ತಾ ರಾಹುಲ್ “ಬಾ.. ಅಜ್ಜಿ ಐಸ್ಕ್ರೀಮ್ ಕೊಡಿಸು”ಎನ್ನಲು ಶುರು ಮಾಡಿದ. ಆಗ ರಾಧಾಬಾಯಿವರು “ಮಗೂ ನಾನು ಪರ್ಸ ಮನೆಯಲ್ಲಿ ಮರೆತು ಬಂದಿದ್ದೇನೆ, ಇವತ್ತು ಬೇಡಾ ಕಣೊ ಮತ್ಯಾವಗ್ಲಾದ್ರೂ ಕೊಡ್ಸತೇನೆ “ಎಂದು ಹೇಳಿದರಾದರೂ ಮನದಲ್ಲಿ “ಛೇ.. ಪಾಪದ ಮಗು ಅಪರೂಪಕ್ಕೆ ಕೇಳಿದ ಐಸ್ಕ್ರೀಮ್ ಕೊಡಿಸಲಾಗಲಿಲವಲ್ಲಾ.. “ಎಂದು ಹಳವಿಸತೊಗಡಿದರು. ಅಷ್ಟರಲ್ಲಿ ತಮ್ಮ ಎಲ್ಲ ಪರ್ಚೇಜ್ ಮುಗಿಸಿ ಬಂದ ಪ್ರಕಾಶ್ ಎಲ್ಲರೊಂದಿಗೆ ಒಳ್ಳೆಯ ಹೋಟೆಲ್ ಗೆ ಹೋಗಿ ರುಚಿಕಟ್ಟಾದ ಉಪಹಾರ ಸೇವಿಸಿ ಕಾರಿನಲ್ಲಿ ಮನೆಗೆ ಬಂದರು. ಮನೆಗೆ ಬಂದ ನಂತರ ರಾಧಾಬಾಯಿವರು ಕೆಲ ನಿಮಿಷ ಟಿವಿ ನೋಡುತ್ತ ಕುಳಿತು ಬಿಡುತ್ತಾರೆ. ಪ್ರಕಾಶ್ ಗೆ ದಣಿವಾಗಿದ್ದರಿಂದ ಆತ ಮಲಗಲು ತನ್ನ ರೂಮಿಗೆ ಹೋಗುತ್ತಾನೆ. ಇತ್ತ ರಾಧಾಬಾಯಿ ಕೂಡ ಟಿವಿ ಆಫ್ ಮಾಡಿ ಮಲಗಲು ತಮ್ಮ ರೂಮಿಗೆ ಬರುತ್ತಾರೆ.

ರಾಧಾಬಾಯಿ ಯವರು ಮಲಗುವ ಕೋಣೆಯ ಎದುರೇ ಮೊಮ್ಮೊಗ ರಾಹುಲ್ ನ ರೂಮು ಇದ್ದುದರಿಂದ ಅಲ್ಲಿ ಆಡಿದ ಮಾತು ಗಳು ಸ್ಪಷ್ಟವಾಗಿ ಇವರಿಗೆ ಕೇಳುವಂತಿತ್ತು. ಕೆಲ ನಿಮಿಷಗಳ ನಂತರ ಪ್ರೀಯಾ ತನ್ನ ಮಗ ಏನು ಮಾಡುತ್ತಿದ್ದಾನೆ ಎಂದು ನೋಡಿ ಬರಲು ಆತನ ರೂಮಿಗೆ ಬಂದಾಗ ರಾಹುಲ್ ತನ್ನ ತಾಯಿಗೆ -“ಅಮ್ಮಾ.. ನಮ್ಮ ಅಜ್ಜೀ ಭಾರೀ ಜಿಪುಣಿ ಕಣಮ್ಮಾ.. “ಎಂದು ಹೇಳಲು ಶುರುಮಾಡಿದಾಗ ಆತನ ತಾಯಿ, -“ಯಾಕೋ… ಏನಾಯ್ತು, ಹೀಗ್ಯಾಕೆ ಹೇಳ್ತಿದ್ದೀ”? ಎಂದು ಪ್ರಶ್ನಿಸಿದಾಗ, ಮುಂದುವರೆದ ರಾಹುಲ್”ನೋಡಮ್ಮಾ.. ನೀವು ಮಾಲ್ ನಲ್ಲಿ ನನ್ನ ಮತ್ತು ಅಜ್ಜಿನ ಬಿಟ್ಟು ಹೋದ ಟೈಂ ನಲ್ಲಿ, ಅಲ್ಲೊಂದು ಐಸ್ಕ್ರೀಮ್ ಅಂಗಡಿ ನೋಡ್ದೆ ಅದನ್ ತಿನ್ಬೇಕು ಅನಿಸ್ತು, ಅದಕ್ಕೆ ಅಜ್ಜಿ ಹತ್ರ ಬಂದು ನನಗೆ ಐಸ್ಕ್ರೀಮ್ ಕೊಡಿಸು ಅಜ್ಜಿ ಎಂದೆ ಅದಕ್ಕೆ ಅವರು”ಇಲ್ಲಾ ಪುಟ್ಟಾ.. ನಾನು ಪರ್ಸ್ ಮನೇಲಿ ಮರ್ತು ಬಂದಿದ್ದೇನೆ ಅಂದ್ರು.. ಇದು ಜಿಪುಣತನ ಅಲ್ದೇ ಮತ್ತೇನಮ್ಮಾ.. “ಎಂದು ಹೇಳಿ ಮುಗಿಸಿದಾಗ ಪ್ರಿಯಾ -“ಏಯ್ ರಾಹುಲ್ ಆ ರೀತಿ ಮಾತಾಡುವಾಗ ಸ್ವಲ್ಪ ಯೋಚನೆ ಮಾಡಿ ಮಾತಾಡು… ಅದರಲ್ಲೂ ಅಜ್ಜಿ ಬಗ್ಗೆ ಮಾತಾಡಲು ನಿನಗೆ ಮನಸ್ಸಾದರೂ ಹೇಗೆ ಬಂತು?ಪಾಪ ಅವರು ಈ ಹೊತ್ನಲ್ಲಿ ಎಷ್ಟು ದು:ಖ ದಲ್ಲಿ ಇದ್ದಾರೆ ಅನ್ನೋದು ನಿನಗೆ ತಿಳಿಯದು….

ಅಜ್ಜ ಅಜ್ಜಿ ಜೊತೆಗೆ ಹಳ್ಳಿಯಲ್ಲಿದ್ದಾಗ ಒಬ್ಬರನ್ನೊಬ್ಬರು ಬಿಟ್ಟು ಇರ್ತಿರಲಿಲ್ಲ.., ನಾವು ಅವರಲ್ಲಿ ಹೋದಾಗ ಎಷ್ಟು ಅಕ್ಕರೆ ಪ್ರೀತಿಯಿಂದ ನಮ್ಮನ್ನು ನೋಡಿಕೊಂಡು ಕಷ್ಟ ಸುಖ ವಿಚಾರ ಮಾಡ್ತಿದ್ರು.. ಆದರೆ ನೋಡು ಅಜ್ಜ ಇದ್ದಕ್ಕಿದ್ದಂತೆ ಎಲ್ಲರನ್ನೂ ಬಿಟ್ಟು ದೂರ ತುಂಬಾ ದೂರ ಹೋಗಿ ಬಿಟ್ಟಿದ್ದಾರೆ.. ಅದರಿಂದ ಅಜ್ಜಿ ಗೆ ಆದ ದು:ಖ ನಿನಗೆ ಅರ್ಥ ಆಗಲ್ಲ… ನೋಡು ಒಂದು ಪಕ್ಷ ನಾನು ನಿನ್ನ ಅಪ್ಪ ನಿನ್ನ ಬಿಟ್ಟು ದೂರ ದೂರ ಹೋದ್ರೆ ನಿನಗೆ ದು:ಖ ಆಗಲ್ವಾ? ಎಂದು ಹೇಳಿದ್ದೇ ತಡ ರಾಹುಲ್ ಅಳುತ್ತ ಅಮ್ಮನನ್ನು ತಬ್ಬಿ ಹಿಡಿದು “ಅಮ್ಮಾ.. ನೀನು ಅಪ್ಪ ನನ್ನ ಬಿಟ್ಟು ಎಲ್ಲೂ ಹೋಗಬೇಡಿ ಪ್ಲೀಸ್”ಎಂದಾಗ ಪ್ರಿಯಾ -“ನೋಡಿದೆಯಾ.. ನಾನು ಬರೀ ಹೋಗ್ತೀವಿ ಅಂದಿದ್ದಕ್ಕೆ ನಿನಗೆ ಇಷ್ಟು ದು:ಖ ಆಯ್ತಲ್ಲಾ.. ಇನ್ನು ಅಜ್ಜ ಅಜ್ಜಿ ನ್ನ ಬಿಟ್ಟು ಹೋದದ್ದಕ್ಕೆ ಆವರಿಗೆಷ್ಟು ದು:ಖ ಆಗಿರಬೇಡಾ ?ಯೋಚನೆ ಮಾಡು.., ಯಾರ ಬಗ್ಗೆ ಮಾತನಾಡಬೇಕಾದ್ರೂ ಅವರ ಸ್ಥಿತಿ ಗತಿ ಬಗ್ಗೆ ಯೋಚಿಸಿ ಮಾತಾಡ್ಬೇಕು ತಿಳೀತಾ.. ?” ಅಜ್ಜಿ ಗೆ ನಿನ್ನ ಕಂಡ್ರೆ ಎಷ್ಟು ಇಷ್ಟಾ ಗೊತ್ತಾ? ನೀನೆನಾದ್ರೂ ಸ್ಕೂಲಿನಿಂದ ಮನೆಗೆ ಬರುವುದು ಹತ್ತು ನಿಮಿಷ ಲೇಟ್ ಆದ್ರೆ ಸಾಕು.. ಅವರು ಬಾಲ್ಕನಿ ಯಲ್ಲಿ ನಿಂತು ನಿಂದೇ ಜಪಾ ಮಾಡ್ತಾಇರ್ತಾರೆ ಅದು ಗೊತ್ತಾ?”ಎನ್ನುವ ಮಾತುಗಳು ರಾಧಾಬಾಯಿವರ ಕಿವಿಯ ಮೇಲೆ ಬಿದ್ದಾಗ ಅವರಿಗೆ ಸೊಸೆ ಮೇಲೆ ಅಭಿಮಾನ ಉಕ್ಕಿತಲ್ಲದೇ.. ಅವಳ ಸ್ಥಳದಲ್ಲಿ ತಾವೇನಾದರೂ ಇದ್ದಿದ್ದರೆ ಇಷ್ಟು ಚೆನ್ನಾಗಿ ರಾಹುಲ್ ಗೆ ತಿಳಿಹೇಳಲು ಆಗುತ್ತಿರಲಿಲ್ಲ ಎಂದು ಕೊಳ್ಳುತ್ತಾರೆ.

ಮಾರನೇಯ ದಿನ, ಪ್ರಕಾಶ್, ಪ್ರಿಯಾ ಕಚೇರಿಗೆ ಹಾಗೂ ರಾಹುಲ್ ಶಾಲೆಗೆ ಹೊರಟು ನಿಂತಾಗ, ಪ್ರಿಯಾ ತನ್ನ ಪರ್ಸನಿಂದ ಒಂದಿಷ್ಟು ಹಣ ತೆಗೆದು ಅತ್ತೆ ಗೆ ಕೊಡಲು ಮುಂದಾಗುತ್ತಾಳೆ, ಆಗ ಅವರು “ಯಾಕಮ್ಮಾ ಈ ದುಡ್ಡು.. “ಎಂದಾಗ ಪ್ರಿಯಾ “ಅತ್ತೆ.. ಯಾರಿಗೆ ಯಾವಾಗ ದುಡ್ಡಿನ ಅಗತ್ಯತೆ ಬರತ್ತೋ ಗೊತ್ತಿಲ್ಲ, ನೀವು ಇದನ್ನು ನಿಮ್ಮ ಹತ್ರ ಇಟ್ಕೊಂಡಿರಿ, ಸಂಜೆ ದೇವಸ್ಥಾನ ಕ್ಕೆ ಹೋದಾಗ ಆರತಿ ಸಮಯದಲ್ಲಿ ಆರತಿ ತಟ್ಟೆಗೆ ಹಾಕಲು ಬೇಕಾಗಬಹುದು,, ಹಾಗೆ ಬರುವಾಗ ನಿಮಗೇನು ಬೇಕೋ, ರಾಹುಲ್ ಗೆ ಏನು ಬೇಕೋ ಅದನ್ನು ಖರೀದಿಸಲು ಬೇಕಾಗಬಹುದು, ನಿಮಗೇನು ಬೇಕೋ ಅದನ್ನು ತಗೊಂಡು ಬನ್ನಿ ಇಟ್ಕೊಳ್ಳಿ”ಎಂದಾಗ ಪುನಃ ರಾಧಾಬಾಯಿವರು -“ಅಲ್ಲಮ್ಮಾ ಪ್ರಿಯಾ….. “ಎಂದು ಇನ್ನೇನೋ ಹೇಳ ಹೊರಟವರನ್ನು ಅರ್ಧಕ್ಕೆ ತಡೆದ ಸೊಸೆ “ಅತ್ತೆ.. ಇದೆ ದುಡ್ಡು ನಿಮ್ಮ ಮಗಾ ಕೊಟ್ರರೆ ಬೇಡಾ ಅಂತ ಹೇಳ್ತಿರಲಿಲ್ಲ ಅಲ್ವಾ? ನಾನು ನಿಮ್ಮ ಸೊಸೆ ನಾನೂ ಸಂಪಾದನೆ ಮಾಡ್ತಾ ಇದ್ದೇನೆ ನನ್ನಿಂದ ಹಣ ಪಡೆಯೋಕೆ ಯಾಕೆ ಹಿಂಜರಿತೀರಾ? ನಿಮ್ಮ ಮಗಳೇ ಕೊಡ್ತಿದ್ದಾಳೆ ಅಂತ ತಿಳೀರಿ ಪ್ಲೀಸ್ ಬೇಡಾ ಅನ್ಬೇಡಾ, ತಗೊಳ್ಳಿ “ಎನ್ನುತ್ತ ಬಲವಂತವಾಗಿ ಆ ಹಣ ಅವರ ಕೈ ಗೆ ಕೊಟ್ಟು ಹೊರಟು ನಿಂತಾಗ ರಾಧಾಬಾಯಿ ಯವರ ಕಣ್ಣಂಚಿನಲ್ಲಿ ನೀರು ಬಂದು ನಿಂತಿದ್ದವು, ಮನದಲ್ಲಿ “ಯಾರೋ ಏನೋ ಬಾಯಿಗೆ ಬಂದಂತೆ ದುಡಿಯುವ ಸೊಸೆ ಬಳಿ ಇದ್ದರೆ ಹಾಗೆ ಹೀಗೆ ಎನ್ನುವ ಕೊಂಕು ಮಾತುಗಳು ಅರ್ಥ ಹಿನ ಎಂದೆನಿಸದೇ ಇರಲಿಲ್ಲ.

ಅರವಿಂದ. ಜಿ. ಜೋಷಿ.

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x