ಅದೊಂದು ದಿನ ಒಬ್ಬ ಯುವಕ ಬೈಕ್ ಸವಾರಿ ಮಾಡುತ್ತಾ ಹೋಗುತ್ತಿರುವಾಗ, ದಾರಿಯಲ್ಲಿ ಒಂದಿಬ್ಬರು ಯುವಕರು ಯುವತಿಯನ್ನು ಚುಡಾಯಿಸುತ್ತಿದ್ದಿದು ಆತನ ದೃಷ್ಟಿಗೆ ಬಿತ್ತು! ಆದರೆ, ಅದು ನಿಜವೋ, ಅಲ್ಲವೋ ಎಂಬುದನ್ನು ತಿಳಿದು ಕೊಳ್ಳಲು, ತನ್ನ ಬೈಕ್ ದೂರದಲ್ಲೇ ನಿಲ್ಲಿಸಿ, ಅವರ ಕೀಟಲೆಯ ಮಾತುಗಳನ್ನು ಕೇಳಲು ಮುಂದಾದನು. ಬಹುಶಃ, ಅವರವರು ಪರಿಚಯದವರೋ ಏನೋ ಎಂಬ ಅನುಮಾನ ಆತನಿಗೆ ಉಂಟಾಯಿತು. ಆದರೂ, ಆತ ಸ್ಪಷ್ಟತೆ ಕಂಡುಕೊಳ್ಳುವದರ ಸಲುವಾಗಿ, ಸ್ವಲ್ಪ ಅವರ ಹತ್ತಿರಕ್ಕೆ ಹೋದ. ಅಲ್ಲಿ ಸ್ಪಷ್ಟವಾಗಿ ಮಾತುಗಳು ಕೇಳಿಸ ತೊಡಗಿದವು ಮತ್ತು ಅವು ಹೀಗಿದ್ದವು;
‘ಏನು ಒಬ್ಳೆ ಹೊರಟಿದ್ದೀಯ.. ನಿನಗೆ ನಮ್ಮ ಜೊತೆ ಬೇಕಾ ? ‘ ಆಗ ಇನ್ನೊಬ್ಬ
ಧ್ವನಿಗೂಡಿಸಿ;
‘ಪರವಾ ಇಲ್ಲ ಹೇಳು. ನಾವಿದ್ದೇವೆ. ನಿನಗೆ ಒಳ್ಳೆಯ ಸಾಥ್ ಕೊಡ್ತೇವೆ ಚಿಂತೆ ಬೇಡ’ ಎಂದಾಗ ಯುವತಿ;
‘ನೋಡಿಯಣ್ಣ, ನೀವ್ಯಾರೋ ನನಗೆ ತಿಳಿದಿಲ್ಲ. ನನ್ನ ಪಾಡಿಗೆ ನಾನು ಹೋಗುತ್ತಿದ್ದೇನೆ.
ನಿಮ್ಮದೇನು ಇದರಲ್ಲಿ ಕಿರಿ ಕಿರಿ ?’
‘ಅರೆ ! ನೀನು ಹುಡುಗಿ, ನಾವು ಹುಡುಗರು ಅಲ್ವ? ಹಾಗಾಗಿ, ಜೊತೆ ಜೋಡಿಯಾಗ
ಬಹುದೆಂದು ಕೇಳಿದೆವು. ಇದರಲ್ಲಿ ತಪ್ಪೇನಿದೆ ?’
‘ತಪ್ಪು ಒಪ್ಪೋ..ಒಂಟಿ ಹುಡುಗಿಯನ್ನು ಅಡ್ಡಗಟ್ಟಿ, ಅಲ್ಲ ಸಲ್ಲದ ಮಾತುಗಳನ್ನು
ಹೇಳುವುದು ತಪ್ಪು ಅಲ್ಲದೇ ಮತ್ತೇನು ? ಎಂದಳು ಯುವತಿ.
‘ನಾವೇನೂ ತಪ್ಪು ಮಾತಾಡಿಲ್ಲ. ನಿನ್ನ ಮನಸ್ಸಿನಾಳದ ಬಯಕೆ ನಮಗೆ ತಿಳಿಯ
ಬೇಕಿತ್ತು. ಹಾಗಾಗಿ ಕೇಳಿದೆವು’ ಎಂದರು.
ಇನ್ನು ಇವರ ಮಾತುಗಳು ದೀರ್ಘಕ್ಕೆ ಹೋಗಬಹುದೆಂದು ಬೈಕಿನ ಯುವಕ ಅವರ
ಹತ್ತಿರಕ್ಕೆ ಹೋಗಿ, ಯುವತಿಗೆ ಹೀಗೆ ಕೇಳಿದ;
‘ನಿಮಗಿಲ್ಲಿ ಸಮಸ್ಯೆಯೇ ? ಎಂದು ವಿಚಾರಿಸಿದ.
‘ಹೌದು.. ನನ್ನ ಪಾಡಿಗೆ ನಾನು ಹೋಗುತ್ತಿರುವಾಗ, ನನ್ನನ್ನು ಅಡ್ಡಗಟ್ಟಿ ಕೆಟ್ಟದಾದ
ದೃಷ್ಟಿಯಲ್ಲಿ ಇವರು ಪ್ರಶ್ನೆ ಕೇಳುತ್ತಿದ್ದಾರೆ’ ಎಂದಳು. ಆಮೇಲೆ, ಬೈಕಿನ ಯುವಕ ಹುಡುಗರ ಕಡೆಗೆ ತಿರುಗಿ ಹೀಗೆ ಕೇಳಿದ;
‘ಎನ್ರೋ.. ಒಂಟಿ ಹುಡುಗಿಯನ್ನು ಕಂಡು ಅಸಹ್ಯವಾಗಿ ಮಾತಾಡಿಸುವುದಕ್ಕೆ ನಿಮಗೆ
ನಾಚಿಕೆ ಆಗುವುದಿಲ್ಲವೇ ?’
‘ಹಾಗೇನೂ ಇಲ್ಲಾ ಸಾರ್…ನಾವು ಸುಮ್ಮನೆ ನಿಂತಾಗ, ಅವಳೇ ನಮಗೆ ಸನ್ನೆ ಮಾಡಿದಳು’
ಎಂದೊಬ್ಬ.
‘ಹೌದೌದು.. ನಾವು ಕೆಟ್ಟವರು ಅಲ್ಲ. ಅವಳೇ ನಮಗೆ ಪ್ರಚೋದಿಸಿದಳು ‘ ಎಂದ ಇನ್ನೊಬ್ಬ.
‘ಇವರು ಹೇಳುತ್ತಿರುವುದು ಸುಳ್ಳು’ ಎಂದು ಯುವತಿ ಹೇಳಿದಾಗ ಆತ ಆಕೆಯನ್ನು ತಡೆದು;
‘ಇಲ್ಲಿಯ ವಿಚಾರ ನನಗೆ ಪೂರ್ತಿ ತಿಳಿದಿಲ್ಲ. ಏನೋ ಅಲ್ಪ ಸ್ವಲ್ಪ ಇವರಿಬ್ಬರ ಯೋಗ್ಯತೆ
ತಿಳಿದಿದೆ. ಇನ್ನುಳಿದ ಶೇಷ ಭಾಗ ಸ್ವಲ್ಪ ಸಮಯದಲ್ಲಿ ತಿಳಿಯುತ್ತದೆ’ ಎಂದು ಯಾರಿಗೋ ಫೋನಿನ ಕರೆ ಮಾಡಿದ. ಆಗ ಆ ಯುವಕರು ಗಾಬರಿಯಾಗಿ;
‘ಸಾರ್.. ಫೋನ್ ಯಾರಿಗೆ ?’
‘ಯಾರೋ ಒಬ್ಬರಿಗೆ ? ನಿಮಗದೇಕೆ ? ಅವರು ಬರುತ್ತಿದ್ದಾರೆ ಕಾಯಿರಿ’ ಎಂದ.
ಆ ಯುವಕರಿಗೆ ಈಗ ಪೀಕಲಾಟ ಪ್ರಾರಂಭವಾಯಿತು. ಅಲ್ಲಿಂದ ಹೇಗೋ ಪಾರಾಗಬೇಕೆಂದು ಯೋಚಿಸಿ ಹೀಗೆ ಹೇಳಿದರು;
‘ಸಾರ್.. ತಪ್ಪು ತಿಳಿಯಬೇಡಿ. ಇಲ್ಲಿ ಅಂಥಹದು ಏನೂ ಆಗಿಲ್ಲ. ನಾವು ಹೋಗುತ್ತೇವೆ’ ಎಂದಾಗ;
‘ಅದ್ಹೇಗೆ ಸಾಧ್ಯ’ ಬೈಕಿನ ಯುವಕ ಅವರಿಗೆ ಹೋಗಲು ಬಿಡಲಿಲ್ಲ.
ಅನಂತರ, ಅಲ್ಲಿಗೆ ಕಟ್ಟು ಮಸ್ತಾದ ಒಬ್ಬ ವ್ಯಕ್ತಿ ಬಂದು, ಬೈಕಿನವನಿಗೆ ಹೀಗೆ ಕೇಳಿದ;
‘ಏನದು.. ಸಮಸ್ಯೆ ?’. ಆಗ ಬೈಕಿನ ಯುವಕ ಎಲ್ಲಾ ವಿವರಿಸಿ ಹೇಳಿದ. ಕಟ್ಟು ಮಸ್ತಾದ ವ್ಯಕ್ತಿ ಅವರಿಬ್ಬರ ಶರ್ಟ್ ಕಾಲರಗಳನ್ನು ಹಿಡಿದು ತನ್ನ ಸುತ್ತಲೂ ಅವರನ್ನು ಗಿರಿಗಿಟ್ಲೆ
ಹಾಗೆ ನಾಲ್ಕೈದು ಸುತ್ತು ತಿರುಗಿಸಿದ. ಆಮೇಲೆ ಫಟಾರನೆ ಇಬ್ಬರ ಕೆನ್ನೆಗೂ ಬಾರಿಸಿದ.
ಇಷ್ಟಕ್ಕೆ ಬಿಡದೇ ಅವರನ್ನು ಎಳೆದು ಹೀಗೆ ಹೇಳಿದ;
‘ನಡೆಯಿರಿ ಸ್ಟೇಷನ್ ಗೆ’ ಎಂದ.
ಆಗ ಯುವಕರ ಜಂಘಾಬಲವೇ ಉಡುಗಿತು. ಆಗ ಯುವಕರು ಆತನ ಕಾಲುಗಳನ್ನು ಗಟ್ಟಿಯಾಗಿ ಹಿಡಿದುಕೊಂಡು;
‘ನಾವು ಸಭ್ಯರು ಸಾರ್. ನಾವು ಹಾಗೇನೂ ಮಾಡಿಲ್ಲ’ ಎಂದರು.
‘ಅದನ್ನೇ ಸರಿಯಾಗಿ ಚಕ್ ಮಾಡಬೇಕಾಗಿದೆ. ಇಲ್ಲಿ ಬೇಡ, ಅಲ್ಲಿಯಾದರೆ ಎಲ್ಲವೂ ಸರಿ.’ ಎಂದು ಅವರಿಬ್ಬರನ್ನು ಎಳೆಯತೊಡಗಿದ.
ಅವರು ‘ಗೊಳೋ’ ಎಂದು ಅಳುವುದಕ್ಕೆ ಪ್ರಾರಂಭಿಸಿದರು ಮತ್ತು ಅಲ್ಲಿದ್ದ ಯುವತಿಗೆ
ಕೈ ಜೋಡಿಸಿ;
‘ಮೇಡಂ..ನಮ್ಮದು ತಪ್ಪಾಯಿತು.ನಮಗೆ ನಾಲ್ಕೇಟು ಹೊಡೆಯಿರಿ, ಆದರೆ, ನಮ್ಮನ್ನು ಇವರಿಗೆ ಕೊಡಬೇಡಿ’ ಎಂದರು.
ಆಮೇಲೆ ಬೈಕಿನ ಯುವಕ ಮತ್ತು ಕಟ್ಟುಮಸ್ತಾದ ವ್ಯಕ್ತಿ ಈ ಇಬ್ಬರ ಕಾಲುಗಳನ್ನು ಅವರು ಗಟ್ಟಿಯಾಗಿ ಹಿಡಿದುಕೊಂಡರು. ಆಗ ಯುವತಿ;
‘ಸಾರ್.. ಅವರಿಗೆ ತಪ್ಪಿನ ಅರಿವು ಆಗಿದೆ. ಹಾಗಾಗಿ, ಬಿಟ್ಟು ಬಿಡಿ’ ಎಂದಳು.
‘ಅರೆ !.. ನೀವು ಬಿಡು ಎಂದರೆ, ಬಿಡೋಕಾಗೋಲ್ಲ. ಇವರು ಪೋಲಿ ಪುಂಡರು. ಇವರು ಅದೆಷ್ಟು ಹುಡುಗಿಯರಿಗೆ ತಮ್ಮ ಪೋಲಿಗಿರಿ ತೋರಿಸಿದ್ದಾರೋ ಏನೋ ತಿಳಿಯ
ಬೇಕಲ್ಲವೇ ?’ ಎಂದಾಗ ಅವರು;
‘ಸಾರ್, ನಾವೆಂದೂ ಹಾಗೆ ಮಾಡಿಲ್ಲ… ಈಗ ಮಾತ್ರ ನಮ್ಮಿಂದ ತಪ್ಪಾಗಿದೆ. ಇಂಥಹ ಕೆಲಸ ಇನ್ನೊಮ್ಮೆ ಮಾಡೋದಿಲ್ಲ. ನಮ್ಮನ್ನು ಬಿಟ್ಟು ಬಿಡಿ ಸಾರ್’ ಎಂದು ಮತ್ತೆ ಮತ್ತೇ ಗೋಗರೆದು, ಅವರ ಕಾಲುಗಳನ್ನು ಗಟ್ಟಿಯಾಗಿ ಹಿಡಿದು, ಬೇಡುತ್ತಲೇ ಇದ್ದರು.
ಆಗ ಬೈಕಿನ ಯುವಕ ಆ ವ್ಯಕ್ತಿಗೆ ಹೀಗೆ ಹೇಳಿದರು;
‘ಅವರಿಗೆ ಇನ್ನೊಂದೆರಡು ಬಾರಿ ಚೆನ್ನಾಗಿ ತದಕಿ ಬಿಟ್ಟು ಬಿಡಿ.’ ಎಂದಾಗ ಆ ವ್ಯಕ್ತಿ ಅವರ ಕಪಾಳಗಳು ಕೆಂಪಗಾಗುವಂತೆ ಮತ್ತೊಮ್ಮೆ ಮುಗುದೊಮ್ಮೆ ಬಾರಿಸಿ, ಅಲ್ಲಿಂದ ಅವರನ್ನು ಓಡಿಸಿ ಬಿಟ್ಟನು. ಆ ವ್ಯಕ್ತಿ ಬೈಕ್ ಯುವಕನ ಸ್ನೇಹಿತನೇ ಆಗಿದ್ದ, ಪೋಲಿಗಳು ತಿಳಿದಂತೆ ಪೊಲೀಸ ಅಲ್ಲವೇ ಅಲ್ಲ ಎಂಬುದು ಅಲ್ಲಿ ತಿಳಿಯಿತು !
ಆಮೇಲೆ ಬೈಕಿನ ಯುವಕ ಯುವತಿಗೆ ಹೀಗೆ ಹೇಳಿದ;
‘ನೋಡಿ.. ಇಂಥಹ ಪೋಕರಿಗಳು ಈಗ ಹೆಚ್ಚಾಗಿದ್ದಾರೆ. ಹಾಗಾಗಿ, ನೀವು ಹೊರಗಡೆ ಈ ರೀತಿ ಒಬ್ಬರೇ ಬರಬೇಡಿ’ ಎಂದ.
‘ಹೌದೌದು.. ನಿಮ್ಮ ಎಚ್ಚರದಲ್ಲಿ ನೀವು ಇರಬೇಕು’ ಎಂದ ಆ ವ್ಯಕ್ತಿ. ಆಗ ಯುವತಿ ಆವರಿಬ್ಬರಿಗೂ ಕೈಜೋಡಿಸಿ ಧನ್ಯವಾದಗಳನ್ನು ಹೇಳಿ ಆಕೆ ಅಲ್ಲಿಂದ ಹೊರಟಳು.
ಈ ಘಟನೆಯಾದ ಹಲವು ದಿನಗಳ ನಂತರ, ಯುವತಿಗೆ ಬೈಕಿನ ಯುವಕ ಮತ್ತೇ
ಕಾಣಿಸಿಕೊಂಡ. ಈಕೆ ಮಾರುಕಟ್ಟೆಗೆ ಹೋಗಿದ್ದಳು. ಆತನು ಕೂಡ ಅಲ್ಲಿಗೆ ಬಂದಿದ್ದ. ಅಲ್ಲಿ ಏನೋ ಸಾಮಾನುಗಳನ್ನು ಖರೀದಿಸುತ್ತಿದ್ದ. ಆತನನ್ನು ಕಂಡ ಈಕೆ ಆತನ ಹತ್ತಿರಕ್ಕೆ ಹೋಗಿ ನಿಂತಳು. ಆಗ ಈಕೆಯನ್ನು ನೋಡಿದ ಯುವಕ ಆಶ್ಚರ್ಯಗೊಂಡು
ಹೀಗೆ ಪ್ರಶ್ನಿಸಿದ;
‘ಅದೇನು.. ನೀವೂ ಇಲ್ಲಿಗೆ ಬಂದೀರಿ ?’
‘ಹೌದು ಖರೀದಿಗೆ ಬಂದಿದ್ದೆ.. ನೀವು ಯಾವಾಗ ಬಂದೀರಿ ?’
‘ಸ್ವಲ್ಪ ಹೊತ್ತು ಆಯಿತು. ಎಲ್ಲಾ ಕ್ಷೇಮ ತಾನೇ ?’ ಎಂದ ಆತ.
‘ಹೂಂ….ಏನೂ ಸಮಸ್ಯೆ ಇಲ್ಲ ‘ ಎಂದಳಾಕೆ.
‘ಸರಿ, ನೀವು ನಿಮ್ಮ ಖರೀದಿ ಮುಂದುವರೆಸಿ’ ಎಂದು ಆತ ಹೊರಟು ಹೋದಾಗ, ಈಕೆ ಅವನನ್ನು ಹಾಗೆಯೇ ನೋಡುತ್ತಾ ನಿಂತಳು. ಆಮೇಲೆ ಆತ ಮರೆಯಾದ.
ಆಮೇಲೆ ಸುಮಾರು ಒಂದು ಗಂಟೆಯ ನಂತರ, ಯುವತಿ ತನ್ನ ಖರೀದಿ ಮುಗಿಸಿ,
ಆಟೋ ರಿಕ್ಷಾಕ್ಕಾಗಿ ಕಾಯುತ್ತ ನಿಂತಳು. ಆದರೆ, ಅದೇಕೋ ಆಕೆಗೆ ಆಟೋ ದೊರಕಲಿಲ್ಲ.
ಅದೆಷ್ಟು ಸಮಯ ಕಳೆದರೂ ಯಾವ ಖಾಲಿ ಆಟೋಗಳು ಬರಲೇ ಇಲ್ಲ. ಅಲ್ಲಿಗೆ ಬಂದವುಗಳೆಲ್ಲಾ ಪ್ರಯಾಣಿಕರನ್ನು ಹೊತ್ತು ಬರುತ್ತಿದ್ದವು. ಆಕೆಗೆ ಬಹಳೇ ಬೇಜಾರೆನಿಸಿತು, ಮತ್ತು ಸುಸ್ತು ಕೂಡಾ ಆಯಿತು. ಇನ್ನೇನು ಅಲ್ಲಿಂದ ಕೆಲವು ಹೆಜ್ಜೆಗಳನ್ನು ನಡೆದೇ ಹೋಗ ಬೇಕೆಂದು ನಿರ್ಧರಿಸಿದಾಗ, ಆಕೆ ಇದ್ದಲ್ಲಿಗೆ ಒಂದು ಆಟೋ ಬಂದು ನಿಂತಿತು. ಆದರೆ, ಅದು
ಪ್ರಯಾಣಿಕನನ್ನು ಹೊತ್ತು ತಂದಿದ್ದು ಆಕೆಯ ಗಮನಕ್ಕೆ ಬಂತು. ಅರೆ ! ಬೈಕ್ ಯುವಕ ಅದರಲ್ಲಿದ್ದದ್ದು ನೋಡಿ ಆಶ್ಚರ್ಯಗೊಂಡಳು !
ಅಲ್ಲಿ ಆತನೇ ಆಟೋ ನಿಲ್ಲಿಸಿ ಆಟೋ ಏರಲು ಹೇಳಿದ.
‘ಅಯ್ಯೋ.. ನೀವು ಯಾವ ಕಡೆ ಹೋಗುತ್ತಿದ್ದೀರಿ ?’ ಎಂದಾಕೆ ಪ್ರಶ್ನಿಸಿದಾಗ;
‘ನೋಡಿ.. ನಾನು ಮೊದಲು ಇಳಿಯಬಹುದು ಇಲ್ಲವೇ ನೀವಿಳಿಯಬಹುದು, ಆಗ ನಮ್ಮ ಆಟೋ ಅಣ್ಣ ಹೇಗೋ ನಮ್ಮಿಬ್ಬರನ್ನೂ ತಲುಪಿಸುತ್ತಾನೆ ಬನ್ನಿ’ ಎಂದಾಗ;
ಆಕೆ ಆಟೋ ಏರಿದಳು. ವಿಚಿತ್ರ ಎಂದರೆ, ಆಕೆಯ ನಿರ್ಧಿಷ್ಟ ಸ್ಥಳ ಮೊದಲೇ ಬಂತು. ಆಕೆ ಇಳಿದು ಆಟೋ ಫೇರ್ ಕೊಡಲು ಮುಂದಾದಾಗ, ಆತ ತಡೆದ. ಆಮೇಲೆ ಆಟೋ ಮುಂದಕ್ಕೆ ಸಾಗಿತು.
ಇವೆಲ್ಲಾ ಘಟನಾವಳಿಗಳನ್ನು ನೆನಪಿಸಿಕೊಂಡ ಯುವತಿಗೆ ಬೈಕ್
ಯುವಕನ ಸರಣಿ ಭೇಟಿಗಳು ಆಕೆಯ ಸ್ಮೃತಿಯಲ್ಲಿ ಅಚ್ಚಳಿಯದೆ ಉಳಿದವು.
ಅಲ್ಲದೆ, ಆ ನೆನಪುಗಳು ಆಕೆಯನ್ನು ಕಾಡತೊಡಗಿದವು. ಈಗ ನಿಶ್ಚಿತವಾಗಿ ಆಕೆ
ಭ್ರಮಾಧೀನಳಾದಳು. ಆತ ಸೌಜನ್ಯದ ಮೂರ್ತಿಯಾಗಿದ್ದು, ಆಕರ್ಷಕ ದೇಹ ಸೌಷ್ಠ ಹೊಂದಿದ್ದ. ಹೀಗಾಗಿ, ಆಕೆಗೆ ಆತನ ನೆನಪು ಬರುತ್ತಲೇ ಇತ್ತು. ಆಕೆಗೆ
ಯಾರ ಬಳಿಯೂ ಇದನ್ನು ಹೇಳಿಕೊಳ್ಳಲೂ ಆಗಲಿಲ್ಲ. ಆಕೆಯ ದುರಾದೃಷ್ಟಕ್ಕೆ
ಆತನ ಕನಿಷ್ಠ ಪರಿಚಯ ಈಕೆ ಮಾಡಿಕೊಳ್ಳಲಿಲ್ಲ. ಮೊಟ್ಟ ಮೊದಲ ಬಾರಿ ಆಗ
ಅವಕಾಶ ಇತ್ತು, ಆದರೆ, ಆಗ ಪರಿಸ್ಥಿತಿ ಅನೂಕೂಲಕರವಾಗಿರಲಿಲ್ಲ. ಆಮೇಲೆ ಆತ ಮಾರುಕಟ್ಟೆಯಲ್ಲಿ ಸಿಕ್ಕಾಗ, ಪರಿಚಯ ಮಾಡಿಕೊಳ್ಳಬೇಕೆಂಬುದರ ಜ್ಞಾನ
ಮೂಡಲಿಲ್ಲ. ಅಷ್ಟಾದ ಮೇಲೂ, ಅವರಿಬ್ಬರೂ ಕೆಲವು ಸಮಯದವರೆಗೆ ಆಟೋದಲ್ಲಿ ಪ್ರಯಾಣಿದ್ದರು. ಆ ಕ್ಷಣದಲ್ಲೂ ಅವಕಾಶ ಕಳೆದುಕೊಂಡೆ ಎಂದು ಪರಿತಪಿಸಿದಳು.
ಆಕೆಯ ಮನಸ್ಸಿನಾಳಕ್ಕೆ ಆತ ಇಳಿದಿದ್ದ. ಒಮ್ಮೊಮ್ಮೆ ಮತಿ ಭ್ರಮಣೆ ಆದವಳಂತೆ
ಆಕೆ ವರ್ತಿಸುತ್ತಿದ್ದಳು. ಆತನನ್ನು ಹುಡುಕಲೆಂದೇ ಮಾರುಕಟ್ಟೆಗೆ ಹಲವು ಬಾರಿ
ಹೋದಾಗ, ಅಲ್ಲಿ ಆಕೆಯ ಕಣ್ಣುಗಳು ಎಡೆಬಿಡದೆ ಹುಡುಕುತ್ತಿದ್ದವು. ಅವಳ
ಒಳ ಮನಸ್ಸು ಕೂಡಾ ಆತನನ್ನು ಹುಡುಕುವ ಕೆಲಸ ಮಾಡುತ್ತಿತ್ತು. ಒಂದು ಬಾರಿ
ಬೆಳಿಗ್ಗೆ ಮಾರುಕಟ್ಟೆಗೆ ಹೋದವಳು ಸಾಯಂಕಾಲದ ನಾಲ್ಕು ಗಂಟೆಗೆ ಹತಾಶೆಗೊಂಡು ಮರಳಿದ್ದಳು. ಆಕೆಯ ಪ್ರಯತ್ನ ಹೇಗಿತ್ತೆಂದರೆ, ಅಂದು ಮಾರುಕಟ್ಟೆಯಲ್ಲಿ ಸಿಕ್ಕಾಗ, ಆತ ಖರಿಸಿದ ಅಂಗಡಿಗಳ ಕಡೆಗೆಯೇ ನೋಡುತ್ತಲಿದ್ದಳು ಮತ್ತು ಆಟೋದಲ್ಲಿ ಪಯಣಿಸಿದ ದಾರಿಯಲ್ಲೇ ಸಾಗಿ ಎಡ ಬಲಕ್ಕೆ ನೋಡುತ್ತಲಿದ್ದಳು. ಆದರೆ, ಆತನು ಕಾಣಸಿಗಲೇ ಇಲ್ಲ. ಒಮ್ಮೊಮ್ಮೆ ಆತನ ಸೌಮ್ಯತೆ ಮತ್ತು ಹಾವ ಭಾವವು ಕಣ್ಣು ಮುಂದೆಯೇ ದೃಶ್ಯ ನೀಡುತ್ತಿತ್ತು ಮತ್ತು ಆಕೆಯ ಮನಸ್ಸನ್ನು ಕಂಗೆಡಿಸಿತು !
ಏನೋ ಕೊನೆಯ ಪ್ರಯತ್ನ ಮಾಡಲೆಂದು ಆಕೆ ಮತ್ತೆ ಮಾರುಕಟ್ಟೆಗೆ
ಹೋಗಲು ತಯಾರಾದಳು. ಅದೇ ಸಮಯದಲ್ಲಿ ಆಕೆಯ ಅಮ್ಮನಿಗೆ ಒಮ್ಮಿಂದೊಮ್ಮೆಲೆ ಜ್ವರ, ಚಳಿ ಬಂದು ನಡುಗ ತೊಡಗಿದಳು. ಆಗ ಮಾರುಕಟ್ಟೆಗೆ ಹೋಗುವುದನ್ನು ಬಿಟ್ಟು ತನ್ನ ಅಮ್ಮನನ್ನು ವೈದ್ಯರ ಬಳಿ ಕರೆದುಕೊಂಡು ಹೋಗಲೇ ಬೇಕಾಯಿತು. ಹಾಗಾಗಿ, ಆಕೆ ಆಟೋದಲ್ಲಿ ‘ಚೈತನ್ಯ ಕ್ಲಿನಿಕ್’ ಗೆ ಅಮ್ಮನನ್ನು ಕರೆದುಕೊಂಡು ಹೋದಳು. ಅಲ್ಲಿ ವೈದ್ಯರು ಇನ್ನೂ ಆಸ್ಪತ್ರೆಗೆ ಬಂದಿರಲಿಲ್ಲ ಮತ್ತು ಅಲ್ಲಿಯ ಸಿಬ್ಬಂದಿ ಇವರಿಗೆ ಕಾಯಲು ಹೇಳಿದರು. ಆಗ ಅವಳ ಅಮ್ಮ ನಡುಗುತ್ತಲೇ ಇದ್ದಳು. ಅದನ್ನು ನೋಡಿಯೂ ನೋಡದಂತೆ ಇದ್ದ ಸಿಬ್ಬಂದಿಯನ್ನು ಕಂಡು ಈಕೆ ಸ್ವಲ್ಪ ಸಿಡಿಮಿಡಿಗೊಂಡಳು ಮತ್ತು ‘ವೈದ್ಯರಿಗೆ ಕರೆ ಮಾಡಬಾರದೇ ?’ ಎಂದು ಅವರಿಗೆ ಹೇಳಿದಳು.
‘ಇನ್ನೇನು ಬರ್ತಾರೆ…ದಾರಿಯಲ್ಲಿ ಇದ್ದಾರೆ’ ಎಂದು ಅವರು ಹೇಳಿದರು.
ಅಮ್ಮಗೆ ಈಗ ವಿಪರೀತ ಚಳಿಯಾಗಿ ನಡುಗಲು ಪ್ರಾರಂಭಿಸಿದಾಗ, ಪಕ್ಕದಲ್ಲಿ ಕುಳಿತಿದ್ದ ಪುಟ್ಟ ಮಗುವಿನ ತಾಯಿ ಈಕೆಯ ಕಷ್ಟವನ್ನು ನೋಡಲಾಗದೆ, ತನ್ನ ಶಾಲನ್ನು ಕೊಟ್ಟಳು. ಆಗ ಅಮ್ಮಗೆ ಸ್ವಲ್ಪ ನೆಮ್ಮದಿ ಉಂಟಾಯಿತು. ಆಮೇಲೆ, ಯುವತಿ ಮಗುವಿನ ತಾಯಿಯನ್ನು ಹೀಗೆ ಮಾತಾಡಿಸಿದಳು;
‘ಅಕ್ಕಾ.. ನಿಮಗೆ ಧನ್ಯವಾದಗಳು’
‘ಅದೆಲ್ಲಾ ಬೇಡ..ನಿನ್ನ ಅಮ್ಮ ಆದರೂ ಅಷ್ಟೇ.. ನನ್ನ ಅಮ್ಮ ಆದರೂ ಅಷ್ಟೇ ಅಲ್ವ ?’
ಎಂದಳಾಕೆ.
‘ಅಂದ ಹಾಗೆ, ನಿಮ್ಮಲ್ಲಿ ಯಾರಿಗೆ ಹುಶ್ಯಾರು ಇಲ್ಲ ?’
‘ನಮ್ಮ ಪುಟ್ಟಿಗೆ ‘ ಎಂದಳಾಕೆ.
‘ನೀವೊಬ್ಬರೇ ಬಂದಿದ್ದೀರಾ ?’
‘ಇಲ್ಲ.. ನನ್ನ ಯಜಮಾನರೂ ಬಂದಿದ್ದಾರೆ. ಇಲ್ಲೇ ಹೋಗಿ ಬರುತ್ತೇನೆ ಎಂದು ಹೊರಗೆ
ಹೋಗಿದ್ದಾರೆ. ಬಹುಶಃ ಇಷ್ಟರಲ್ಲೇ ಬರಬಹುದು’ ಎಂದು ಹೇಳುವಷ್ಟರಲ್ಲಿ;
‘ಅದೋ ಬಂದರು’ ಎಂದಳಾಕೆ. ಆಗ ಯುವತಿ ಆಕೆಯ ಯಜಮಾನರ ಕಡೆ ಕುತೂಹಲದಿಂದ ನೋಡಿದಳು ಮತ್ತು ಆಶ್ಚರ್ಯಗೊಂಡಳು ! ಆ ವ್ಯಕ್ತಿ ಬೇರೆ ಯಾರೂ ಅಲ್ಲ, ಅವರೇ ಈಕೆಗೆ
ಮಾನಸಿಕವಾಗಿ ಚಿಂತೆ ಮೂಡಿಸಿದ ಬೈಕಿನ ಯುವಕ !
ಅವರು ಬಂದವರೇ, ಈಕೆಯನ್ನು ಪ್ರಶ್ನಿಸಿದರು ?
‘ಅದೇನು.. ಇಲ್ಲಿಗೆ ಬಂದಿದ್ದೀರಿ ? ಯಾರಿಗೆ ಹುಶ್ಯಾರು ಇಲ್ಲ ?’ ಎಂದಾಗ; ಆತನ ಹೆಂಡತಿಯೇ ಉತ್ತರ ಕೊಟ್ಟಳು;
‘ಅವರ ಅಮ್ಮಗೆ ಹುಶ್ಯಾರು ಇಲ್ಲ. ಪಾಪ ! ಚಳಿ ಎಂದು ಒದ್ದಾಡ್ತಾ ಇದ್ದಾರೆ. ಹಾಗಾಗಿ, ನನ್ನ ಶಾಲನ್ನು ಅವರಿಗೆ ಕೊಟ್ಟಿದ್ದೇನೆ’ ಎಂದಳು.
‘ಒಳ್ಳೆಯ ಕೆಲಸ ಮಾಡಿದೆ ಅಶ್ವಿನಿ. ಇವರು ನನಗೆ ಪರಿಚಿತರು’ ಎಂದ.
‘ಅಯ್ಯೋ ಹಾಗಾ.. ಒಳ್ಳೆಯದೇ ಆಯಿತು ಬಿಡಿ’ ಎಂದಳು ಅಶ್ವಿನಿ.
ಅಷ್ಟರಲ್ಲಿ ವೈದ್ಯರು ಬಂದರು ಮತ್ತು ಅಲ್ಲಿ ಕುಳಿತಿದ್ದ ಎಲ್ಲಾ ರೋಗಿಗಳು ವೈದ್ಯರನ್ನು
ಕಾಣಲು ತವಕಿಸುತ್ತಿದ್ದರು. ಆ ಪ್ರಸಂಗದಲ್ಲಿ ಅಶ್ವಿನಿಯ ಯಜಮಾನ ಒಳಗೆ ಹೋಗಿ,
ವೈದ್ಯರೊಡನೆ ಮಾತಾಡಿ ಹೊರಕ್ಕೆ ಬಂದ. ಆಮೇಲೆ ಚಳಿಯಿಂದ ನಡುಗುತ್ತಿದ್ದ ಆಕೆಯ
ತಾಯಿಯನ್ನು ತಾನೇ ಕೈ ಹಿಡಿದು ಕರೆದುಕೊಂಡು ಒಳಗೆ ಹೋಗಿ ವೈದ್ಯರ ಬಳಿ
ಬಿಟ್ಟು ಬಂದ. ಅಮ್ಮನ ಜೊತೆ ಮಗಳೂ ಒಳಗೆ ಹೋದಳು.
ಸ್ವಲ್ಪ ಸಮಯದ ನಂತರ ವೈದ್ಯರ ಪರೀಕ್ಷೆಗೆ ಒಳಗಾಗದ ಅಮ್ಮ ಮತ್ತು ಮಗಳು
ಹೊರಗೆ ಬಂದರು. ಅಮ್ಮ ತಾನು ಹೊದ್ದುಕೊಂಡಿದ್ದ ಶಾಲನ್ನು ತೆಗೆದು ಅಶ್ವಿನಿಗೆ ಕೊಡಲು
ಮುಂದಾದಾಗ ಆತ;
‘ಇಲ್ಲ ಅಮ್ಮ ಅದು ನಿಮ್ಮ ಬಳಿಯೇ ಇರಲಿ’ ಎಂದು ಹೇಳಿದ.
ಆತನ ಮಾತು ಕೇಳಿ, ಈಕೆ ಹೀಗೆ ಮನದಲ್ಲಿತನ್ನಷ್ಟಕ್ಕೆ ತಾನು ಹೀಗೆಂದುಕೊಂಡಳು;
‘ಆತನದು ಎಂಥಹ ಅತ್ಯದ್ಭುತ ವ್ಯಕ್ತಿತ್ವ ? ಸದಾ ಪರರ ಹಿತ ಬಯಸುವ ಇಂಥಹ ವ್ಯಕ್ತಿ ಕಾಣ ಸಿಗುವುದಿಲ್ಲ. ತಾನಾದರೋ, ಆತನ ದೇಹ ಧ್ರಾಷ್ಟ್ಯ ಮತ್ತು ಹಾವ ಭಾವಕ್ಕೆ ಮರುಳಾಗಿ, ಇನ್ನೇನು ತನ್ನನ್ನೇ ತಾನು ಆತನಿಗೆ ಸಮರ್ಪಣೆ ಮಾಡಿ ಕೊಳ್ಳಬೇಕೆಂದು ಯೋಚಿಸುತ್ತಿದ್ದೆ. ಈಗ ಆತನ ಪುಟ್ಟ ಕುಟುಂಬ ನೋಡಿ, ತನಗೆ ಎಂಥಹ ಕರಾಳ ಛಾಯೆ ಆವರಿಸಿತ್ತು, ಎಂಬುದಾಗಿ ತನ್ನಷ್ಟಕ್ಕೆ ತಾನು ಬಯ್ದುಕೊಂಡಳು. ಅಲ್ಲದೇ,
ಆತನಿಗೆ ತಕ್ಕುದಾದ ಪತ್ನಿ ಮತ್ತು ಮುದ್ದಾದ ಮಗುವನ್ನು ಕಂಡು ಖುಷಿ ಪಟ್ಟಳು. ಅನಂತರ, ಆತನಿಗೆ ಹೀಗೆ ಹೇಳಿದಳು;
‘ನೋಡಿ.. ನೀವು ನನಗೆ ಅದೆಷ್ಟು ಪರಿಚಿತರಾಗಿದ್ದೀರಿ. ಆದರೆ, ನಿಮ್ಮ ನಾಮಧೇಯ
ಈವರೆಗೂ ನನಗೆ ತಿಳಿದಿಲ್ಲ’ ಎಂದಾಗ;
‘ನಾನು……ರಘು ರಾಮ’ ಎಂದು ಹೇಳಿ, ಆತನೂ ಪ್ರಶ್ನಿಸಿದ ;
‘ಅಂದ ಹಾಗೆ ನೀವು ?’
‘ನಾನು ಶಾಲಿನಿ’ ಎಂದಳು.
‘ಅಯ್ಯೋ, ಇದೇನಿದು ನೀವು ನೀವು ಪರಿಚಯ ಮಾಡಿಕೊಂಡಿರೀ, ನನ್ನ ಪರಿಚಯ ಕೇಳುವುದಿಲ್ವೇ ?’ ಎಂದು ಆತನ ಪತ್ನಿ ಕೇಳಿದಾಗ;
ಅಕ್ಕಾ..ನೀವು ಅಶ್ವಿನಿ ಎಂದು ಅದಾಗಲೇ ನಿಮ್ಮನೆಯವರಿಂದ ತಿಳಿಯಿತು’ ಎಂದು ಶಾಲಿನಿ ಹೇಳಿ ನಕ್ಕಾಗ, ಆಕೆಯ ಜೊತೆಗೂಡಿ ಎಲ್ಲರೂ ನಕ್ಕರು.
-ಬಿ.ಟಿ.ನಾಯಕ್
