“. . . ವಿಚ. ಕ್ಷಣಗು. ಣಶೀ. ಲದಯಾ. ಲವಾ. ಲಮಾಂ. ಪಾ. ಲಯ. . . ” ತಾರಸ್ಥಾಯಿಯೇ ಉತ್ತುಂಗವೆನಿಸಿದ್ದ ಸಾಲನ್ನು ಹಾಡುವಾಗ ಅಪ್ಪಣ್ಣ ಭಟ್ಟರ ಶ್ರುತಿ ಎಲ್ಲೋ ಕಳೆದುಹೋಯಿತು. ಶುದ್ಧ ಮಧ್ಯಮ ಧ್ವನಿ ಹೊಮ್ಮುವ ಬದಲು ಪ್ರತಿ ಮಧ್ಯಮ ಧ್ವನಿಯನ್ನು ಅವರ ಗಂಟಲು ಹೊರಡಿಸಿದ್ದರಿಂದಾಗಿ ಅಪಶ್ರುತಿ ಕೇಳಿಬಂತು. ಅದು ಅವರಿಗೆ ತಿಳಿಯದ ಸಂಗತಿಯೇನಲ್ಲ. ತಕ್ಷಣಕ್ಕೆ ತಾನೆಲ್ಲೋ ತಪ್ಪು ಮಾಡಿದ್ದೇನೆ ಎಂಬ ಭಾವ ಅವರನ್ನು ಆವರಿಸಿತು. ಆದರೆ ಅದನ್ನು ಒಪ್ಪಿಕೊಳ್ಳಲು ಮನಸ್ಸು ಬಾರದೆ ಶ್ರುತಿಪೆಟ್ಟಿಗೆಯ ಕಡೆಗೆ ಕೈತೋರಿಸಿ, “ಇದು ಸರಿಯಿಲ್ಲವೋ. ಕೆಟ್ಟುಹೋಗಿರಬೇಕು ಎನಿಸುತ್ತಿದೆ” ಎಂದರು ತಮ್ಮ ಪ್ರೀತಿಯ ಶಿಷ್ಯ ಗೋವಿಂದನಲ್ಲಿ. ಅವನು ಎದುರಿನಿಂದ ತಲೆಯಾಡಿಸಿದನಾದರೂ ಇವರ ಶ್ರುತಿ ತಪ್ಪಿಹೋದದ್ದೇ ಹೊರತುಶ್ರುತಿಪೆಟ್ಟಿಗೆಯಲ್ಲೇನೂ ತಪ್ಪಿಲ್ಲ ಎನ್ನುವುದು ಅವನ ಅರಿವಿಗೆ ಬಂದಿತ್ತು. ಆದರೂ ಇವರ ಮಾತಿಗೆ ಎದುರಾಡಬಾರದು ಎಂಬ ಕಾರಣಕ್ಕೆ “ಹೌದು ಗುರುಗಳೇ” ಎಂದ.
ಅಪ್ಪಣ್ಣ ಭಟ್ಟರು ಇದುವರೆಗೂ ಹಾಡುತ್ತಿದ್ದದ್ದು ಹಿಂದೋಳ ರಾಗದಲ್ಲಿರುವ ಸಾಮಜವರಗಮನ ಎನ್ನುವ ಕೃತಿಯನ್ನು. ಅವರಿಗಿದು ಅತ್ಯಂತ ಪ್ರಿಯವಾದದ್ದು. ತ್ಯಾಗರಾಜರ ರಚನೆಯ ಈ ಕೃತಿಯನ್ನು ಅದೆಷ್ಟೋ ಸಲ ಹಾಡಿದ್ದಾರೆ. ಅವರು ಮೊದಲ ಸಂಗೀತ ಕಛೇರಿ ನಡೆಸಿದಾಗ ಇದನ್ನೇ ಹಾಡಿದ್ದರು. ಆ ಬಗೆಯ ಭಾವನಾತ್ಮಕತೆಯನ್ನೂ ಇಟ್ಟುಕೊಂಡಿದ್ದಾರೆ. ಹಿಂದೋಳ ರಾಗವೂ ಅವರಿಗೆ ಇಷ್ಟವಾದದ್ದು. ಎಷ್ಟೇ ಸಲ ಹಾಡಿದರೂ ನವಬಗೆಯ ಭಾವವನ್ನು ಹೊಮ್ಮಿಸುವ ಶಕ್ತಿ ಇದಕ್ಕಿದೆ ಎಂಬ ನಂಬಿಕೆ ಭಟ್ಟರದ್ದು.
ಆದರೆ ಈಗ ಹಾಡುವಾಗ ಭಟ್ಟರಂಥ ಭಟ್ಟರೇ ತಪ್ಪು ಶ್ರುತಿಯಲ್ಲಿ ಸಿಲುಕಿಕೊಂಡದ್ದನ್ನು ಕಂಡು ಗೋವಿಂದನಿಗೆ ಆಶ್ಚರ್ಯವಾಗಿತ್ತು. ಆದರೆ ಇತ್ತೀಚೆಗೆ ಅವನು ಆಗಾಗ ಇಂತಹ ಅಚ್ಚರಿಗಳಿಗೆ ಒಳಗಾಗುತ್ತಲೇ ಇದ್ದಾನೆ. ಹಾಡುವಾಗ ಏನಾದರೂ ತಪ್ಪು ಮಾಡುವುದು, ಆಮೇಲೆ ಶ್ರುತಿಪೆಟ್ಟಿಗೆಯ ತಲೆಯ ಮೇಲೊಂದು ಬಲವಾದ ಏಟು ಕೊಟ್ಟು “ಇದು ಸರಿಯಿಲ್ಲ” ಎನ್ನುವುದು. ಇದು ಈಚೀಚೆಗೆ ಭಟ್ಟರಿಗೆ ಅಭ್ಯಾಸ ಆಗಿಬಿಟ್ಟಿದೆ. “ಇದು ಸರಿಯಿಲ್ಲ ಗೋವಿಂದ. ಇದನ್ನು ಬದಲಾಯಿಸುವುದೇ ಒಳ್ಳೆಯದು” ಎಂದು ತಾನು ತಪ್ಪಿದಾಗಲೆಲ್ಲಾ ಶ್ರುತಿಪೆಟ್ಟಿಗೆಯ ಮೇಲೆ ದೂರು ಹಾಕುತ್ತಲೇ ಬಂದಿದ್ದಾರೆ.
ತಾನು ಎಡವಿದ್ದೆಲ್ಲಿ? ಎಂಬ ಯೋಚನೆ ಭಟ್ಟರ ಮೆದುಳಿನೊಳಗೆ ಸುತ್ತಿ ಸುಳಿದು ಅವರ ಬಾಯಿಯನ್ನು ಕಟ್ಟಿಹಾಕಿತ್ತು. ಹೌದು! ‘ಮ’ ಎನ್ನುವ ಸ್ವರವೇ ತನ್ನನ್ನು ತಪ್ಪು ಹಾದಿಯಲ್ಲಿ ನಡೆಸಿದ್ದು ಎನಿಸತೊಡಗಿತು ಅವರಿಗೆ. ‘ಮ’ ಎಂದರೆ ಮಧ್ಯಮ ಸ್ವರ. ಆಚೀಚೆಯ ಸ್ವರಗಳಿಗೆ ನಡುವಿನ ಕೊಂಡಿ ಇದ್ದಂತೆ. ಗೇಯ ಪಯಣದ ಹಾದಿಗೆ ಭದ್ರವಾದ ನೆಲೆಗಟ್ಟು ಇದ್ದಂತೆ. ಅಲ್ಲಿಯೇ ತಾನು ಎಡವಿದ್ದೇನೆ ಎನಿಸಿತು ಅವರಿಗೆ. ಶುದ್ಧ ಮಧ್ಯಮದಲ್ಲಿ ವಿಹರಿಸಬೇಕಾಗಿದ್ದ ತಾನು ಪ್ರತಿ ಮಧ್ಯಮದೆಡೆಗೆ ಹೊರಳಿಕೊಳ್ಳುವಂತೆ ಮಾಡಿದ ಆ ಮಾಯೆ ಯಾವುದು?ಎನ್ನುವುದು ಅವರಿಗೆ ಅರ್ಥವಾಗಲಿಲ್ಲ.
“ಆ ಕೇಚಣ್ಣ ಭಟ್ಟರಿಗೆ ಕರೆಮಾಡಿ ಕೇಳು, ಮುಂದಿನ ವಾರ ಮದ್ರಾಸಿಗೆ ಹೋಗುವುದಕ್ಕಿದೆಯಾ ಅಂತ. ಹಾಗೆ ಹೋಗುವುದಿದ್ದರೆ ಒಂದು ಶ್ರುತಿಪೆಟ್ಟಿಗೆ ತರುವುದಕ್ಕೆ ಹೇಳು” ಎಂದರು ಭಟ್ಟರು ಗೋವಿಂದನಲ್ಲಿ.
ಅವನು ಎದ್ದು ಆಚೆ ಟೇಬಲ್ ಮೇಲಿದ್ದ ಭಟ್ಟರ ಮೊಬೈಲ್ ಎತ್ತಿಕೊಂಡು ಕೇಚಣ್ಣ ಭಟ್ಟರಿಗೆ ಕರೆಮಾಡಿದ. ಮಾತು ಮುಗಿಸಿ ಬಂದವನು ಮತ್ತೆ ಮೊದಲಿನಂತೆಯೇ ಭಟ್ಟರ ಎದುರಿಗೆ ಕುಳಿತ.
“ಮುಂದಿನ ವಾರ ಹೋಗಲಿಕ್ಕಿಲ್ಲವಂತೆ. ಮೂರು ವಾರ ಕಳೆದಮೇಲೆ ಹೋಗುತ್ತಾರಂತೆ. ಒಂದು ಶ್ರುತಿಪೆಟ್ಟಿಗೆ ಆರ್ಡರ್ ಮಾಡಿದ್ದೇನೆ. ನಿಮ್ಮನ್ನು ಕೇಳಿದರು. ನಾನು ಕೇಳಿದ್ದೇನೆ ಅಂತ ಹೇಳು ಎಂದರು” ಎಂದ.
ಈಗ ಅಪ್ಪಣ್ಣ ಭಟ್ಟರ ಬಳಿ ಇರುವ ಶ್ರುತಿಪೆಟ್ಟಿಗೆಯನ್ನು ತಂದದ್ದು ಮದ್ರಾಸಿನಿಂದಲೇ. ಕೇಚಣ್ಣ ಭಟ್ಟರ ಅಪ್ಪ ಕೃಷ್ಣ ಭಟ್ಟರು ತಂದುಕೊಟ್ಟ ಪೆಟ್ಟಿಗೆಯದು. ಆಗಿನ್ನೂ ಅಪ್ಪಣ್ಣ ಭಟ್ಟರು ಒಂದು ಹಂತದ ಸಂಗೀತ ಅಭ್ಯಾಸವನ್ನು ಮುಗಿಸಿದ್ದರು. ಸಂಗೀತ ಕಛೇರಿ ಕೊಡಬೇಕೆಂಬ ಹಂಬಲ ಅವರಲ್ಲಿತ್ತು. ಆಗ ಸಂಗೀತ ಕಛೇರಿಗಳಲ್ಲಿ ತಂಬೂರಿಯ ಬಳಕೆಯೇ ಹೆಚ್ಚು. ಶ್ರುತಿಪೆಟ್ಟಿಗೆಗಳಿನ್ನೂ ಹೆಚ್ಚಾಗಿ ಕಾಣಿಸಿಕೊಂಡಿರಲಿಲ್ಲ. ಇಂತಹ ಸಮಯದಲ್ಲಿಯೇ ಅಪ್ಪಣ್ಣ ಭಟ್ಟರಿಗೆ ಶ್ರುತಿಪೆಟ್ಟಿಗೆಯನ್ನು ಹೊಂದುವ ಆಸೆ ಮೂಡಿದ್ದು. ಆದರೆ ಭರತಪುರದಲ್ಲೆಲ್ಲೂ ಶ್ರುತಿಪೆಟ್ಟಿಗೆ ಸಿಗುತ್ತಿರಲಿಲ್ಲ. ಅದನ್ನು ದೂರದ ಮದ್ರಾಸಿನಿಂದ ತರಿಸಬೇಕಾಗಿತ್ತು. ಕೃಷ್ಣ ಭಟ್ಟ ಎನ್ನುವವರೊಬ್ಬರು ಹಾಗೆ ಮದ್ರಾಸಿನಿಂದ ಶ್ರುತಿಪೆಟ್ಟಿಗೆ ತರಿಸಿಕೊಡುತ್ತಾರೆ ಎಂಬ ವಿಚಾರ ತಿಳಿದದ್ದೇ ತಡ, ಅಪ್ಪಣ್ಣ ಭಟ್ಟರು ಅವರ ಬಳಿಗೆ ಬಂದರು. ತನಗೊಂದು ಶ್ರುತಿಪೆಟ್ಟಿಗೆ ಬೇಕೆಂದರು. ಮುಂದಿನ ತಿಂಗಳಲ್ಲಿಯೇ ಕಪ್ಪು ಬಣ್ಣದ ಮಧ್ಯಮ ಗಾತ್ರದ ಶ್ರುತಿಪೆಟ್ಟಿಗೆಯೊಂದು ಅಪ್ಪಣ್ಣ ಭಟ್ಟರ ಗಾಯನಕ್ಕೆ ಸಾಥ್ ಕೊಡುವಂತಾಗಿತ್ತು.
ಭಟ್ಟರ ತಲೆತುಂಬಿದ್ದ ಯೋಚನೆಯಿಂದಾಗಿ ಅವರಿಗೆ ಹಾಡು ಮುಂದುವರಿಸುವ ಆಸಕ್ತಿ ಹೊರಟುಹೋಗಿತ್ತು. ಆದರೆ ಅವರೊಳಗಿದ್ದ ಹಠ ಸುಮ್ಮನಿರಲು ಬಿಡಲಿಲ್ಲ. ತಪ್ಪಿದಲ್ಲಿಂದಲೇ ಮತ್ತೆ ಹಾಡು ಆರಂಭಿಸಿದವರು ಗಮ್ಯವನ್ನು ಕಂಡರು.
“ಇನ್ನೇನಿದ್ದರೂ ಹೊಸದು ಶ್ರುತಿಪೆಟ್ಟಿಗೆ ತಂದ ಮೇಲೆಯೇ ಹಾಡುವುದು” ಎಂದರು ಗೋವಿಂದನಲ್ಲಿ. ತನ್ನನ್ನು ಆಗ ಬರಸೆಳೆದ ಪ್ರತಿ ಮಧ್ಯಮ ಸ್ವರವನ್ನು ಧೇನಿಸುತ್ತಲೇ ಕುಳಿತ ಭಟ್ಟರ ಮನದೊಳಗೆ ಮನೆ, ಮಡದಿ, ಮಗಳು ಎಂಬೆಲ್ಲಾ ನೆನಪುಗಳ ಲಯಬದ್ಧ ನಡಿಗೆ ಸಾಗುತ್ತಿತ್ತು.
ಭರತಪುರದ ನಾರಾಯಣ ಭಟ್ಟರ ಏಳು ಜನ ಮಕ್ಕಳಲ್ಲಿನಾಲ್ಕನೆಯವರು ಅಪ್ಪಣ್ಣ ಭಟ್ಟರು. ಮಧ್ಯಮ ಮಗ ಎಂದೇ ಅವನನ್ನು ತಮಾಷೆಯಾಗಿ ಕರೆಯುತ್ತಿದ್ದರು ನಾರಾಯಣ ಭಟ್ಟರು. ಇರುವ ಅಷ್ಟೂ ಜನ ಮಕ್ಕಳಲ್ಲಿ ಹೆಚ್ಚು ಬುದ್ಧಿವಂತ ಇವರೇ ಎನ್ನುವುದು ಇವರ ತಂದೆಯ ಅರಿವಿಗೆ ಬಂದಿತ್ತು. ಆದ್ದರಿಂದಲೇ ಉಳಿದವರಿಗಿಂತ ಹೆಚ್ಚು ಕಕ್ಕುಲಾತಿ ಇವರ ಬಗೆಗಿತ್ತು. ಕೃಷಿಕರಾಗಿದ್ದ ನಾರಾಯಣ ಭಟ್ಟರಿಗೆ ತಮ್ಮ ಈ ಬುದ್ಧಿವಂತ ಮಗ ಚೆನ್ನಾಗಿ ಓದಿ ಆಫೀಸರ್ ಆಗಬೇಕು ಎಂಬ ಕನಸಿತ್ತು. ಅದೆಷ್ಟೋ ಸಲ ಅವರು ಸರ್ಕಾರಿ ಕಛೇರಿಗಳಿಗೆ ಹೋಗಿದ್ದಾಗ ಸುಲಭ ಕೆಲಸವನ್ನೂ ಮಾಡಿಕೊಡದೆ ಸತಾಯಿಸುವ ಅಧಿಕಾರಿಗಳನ್ನು ಕಂಡಿದ್ದರು. ಲಂಚದ ಹಣಕ್ಕೆ ಕೈಮುಂದೆಮಾಡುವವರನ್ನು ಕಂಡು ಹೇಸಿಗೆಪಟ್ಟಿದ್ದರು. ತನ್ನ ಮಗ ಪ್ರಾಮಾಣಿಕ ಅಧಿಕಾರಿಯಾಗಿ ಹೆಸರು ಮಾಡುವಂತಾಗಬೇಕು. ಅವನಿಂದಾಗಿ ಬಡಜನರಿಗೆ ಒಂದಷ್ಟು ಉಪಕಾರವಾಗಬೇಕು ಎಂಬ ಆಕಾಂಕ್ಷೆ ಮೂಡಿದ್ದು ಇದೇ ಸಮಯದಲ್ಲಿ.
“ನೋಡು ಅಪ್ಪಣ್ಣ, ನೀನು ಎಷ್ಟು ಬೇಕಿದ್ದರೂ ಓದು. ನಾನು ಓದಿಸುತ್ತೇನೆ. ನಾಳೆಯ ದಿನ ನೀನು ಆಫೀಸರ್ ಆಗಿ ಹೆಸರು ಮಾಡಬೇಕು” ಎಂದು ಆಗಾಗ ಹೇಳುತ್ತಿದ್ದರು. ಅಪ್ಪಣ್ಣ ಭಟ್ಟರು ಅಪ್ಪನ ಆಸೆ ನೆರವೇರಿಸುತ್ತೇನೆ ಎಂಬಂತೆ ತಲೆಯಾಡಿಸುತ್ತಿದ್ದರು.
ಆದರೆ ಇದರ ಜೊತೆಜೊತೆಗೆ ಅಪ್ಪಣ್ಣ ಭಟ್ಟರ ಹೃದಯದಲ್ಲಿ ಸಂಗೀತದ ಮಧುರ ಧ್ವನಿಅದಾಗಲೇ ಏಳಲಾರಂಭಿಸಿತ್ತು. ಅವರ ಮನೆಗೆ ಅರ್ಧ ಕಿಲೋಮೀಟರ್ ದೂರದಲ್ಲಿದ್ದ ದೇವಸ್ಥಾನವೊಂದರಲ್ಲಿ ರಾಮಕೃಷ್ಣ ಶಾಸ್ತ್ರಿಗಳು ಎನ್ನುವವರೊಬ್ಬರು ಸಂಗೀತ ತರಗತಿಯನ್ನು ಆರಂಭಿಸಿ ಒಂದು ವರ್ಷವೇ ಕಳೆದಿತ್ತು. ಪ್ರತೀ ಶನಿವಾರ ಮಧ್ಯಾಹ್ನ ಸಂಗೀತ ತರಗತಿ ನಡೆಯುತ್ತಿತ್ತು. ಇದಕ್ಕೆ ಸೇರಬೇಕು ಎಂಬ ಆಸೆಯಿಂದ ಅಪ್ಪಣ್ಣ ಭಟ್ಟರು ತನ್ನ ಅಪ್ಪನಲ್ಲಿ ಒಪ್ಪಿಗೆ ಕೇಳಿದ್ದರು. ಅವರು ಹಣ ಕೊಟ್ಟರೆ ಮಾತ್ರ ತಾನು ಸಂಗೀತ ಕಲಿಯಬಹುದು ಎನ್ನುವುದು ಅವರಿಗೆ ಗೊತ್ತಿತ್ತು. ಆದರೆ ಅಪ್ಪ ನಾರಾಯಣ ಭಟ್ಟರು ಒಪ್ಪಿಕೊಂಡಿರಲಿಲ್ಲ.
“ಸಂಗೀತ ಅಂತೆಲ್ಲಾ ಸಮಯ ಹಾಳು ಮಾಡುತ್ತಾ ಇದ್ದರೆ ನೀನು ಕಲಿಯುವುದರಲ್ಲಿ ಹಿಂದೆ ಬೀಳುತ್ತೀಯ. ಅಂಥ ಆಸೆಯೆಲ್ಲಾ ಬೇಡ. ಚೆನ್ನಾಗಿ ಓದುವುದರ ಕಡೆ ಗಮನ ಕೊಡು. ಅಷ್ಟು ಸಾಕು” ಎಂದಿದ್ದರು.
ಆದರೆ ಅಪ್ಪಣ್ಣ ಭಟ್ಟರಿಗೆ ಸಂಗೀತ ಅದೇನೋ ಮೋಡಿ ಉಂಟುಮಾಡಿತ್ತು. ಶಾಸ್ತ್ರಿಗಳ ತರಗತಿ ದೇವಸ್ಥಾನದೊಳಗೆ ನಡೆಯುತ್ತಿದ್ದಾಗ ಇವರು ಅಲ್ಲೇ ಆಚೆ ಕುಳಿತು ಅದನ್ನು ಆಲಿಸುತ್ತಿದ್ದರು. ಹೀಗೆ ಸುಮ್ಮನೆ ಕೇಳಿಸಿಕೊಳ್ಳುವ ಬದಲು ಇದನ್ನೆಲ್ಲಾ ಬರೆದಿಟ್ಟುಕೊಂಡರೆ ಒಳ್ಳೆಯದು ಎನಿಸಿತು ಇವರಿಗೆ. ಮುಂದಿನ ವಾರದಿಂದ ಒಂದು ಪುಸ್ತಕ, ಪೆನ್ಸಿಲ್ ತೆಗೆದುಕೊಂಡು ಹೋಗಿ ಬರೆದಿಟ್ಟುಕೊಳ್ಳತೊಡಗಿದರು.
ಮೂರ್ನಾಲ್ಕು ವಾರ ಕಳೆಯುವಾಗ ಇದು ಶಾಸ್ತ್ರಿಯವರ ಗಮನಕ್ಕೆ ಬಂತು. ಎದುರು ಕುಳಿತ ಮಕ್ಕಳಿಗೆ ಹಾಡು ಹೇಳಿಕೊಡುವುದನ್ನು ನಿಲ್ಲಿಸಿ ಇವರನ್ನು ಬಳಿಗೆ ಕರೆದರು. “ಯಾಕೆ ಹೀಗೆ ಬರೆದುಕೊಳ್ಳುತ್ತಿದ್ದೀಯ?”ಎಂದು ತುಸು ಜೋರಿನಿಂದ ಕೇಳಿದರು.
“ನನಗೆ ಸಂಗೀತ ಎಂದರೆ ಆಸಕ್ತಿ. ಆದರೆ ತರಗತಿಗೆ ಸೇರುವುದಕ್ಕೆ ನನ್ನ ಅಪ್ಪ ಒಪ್ಪಿಗೆ ಕೊಟ್ಟಿಲ್ಲ” ಎಂದರು ಭಟ್ಟರು.
ತಕ್ಷಣವೇ ಶಾಸ್ತ್ರಿಗಳಿಗೆ ಏನನ್ನಿಸಿತೋ ಏನೋ. “ಮುಂದಿನ ವಾರದಿಂದ ಹೀಗೆ ಕಳ್ಳನ ಹಾಗೆ ಬರೆದುಕೊಳ್ಳುವುದು ಬೇಡ. ಇಲ್ಲಿ ಬಂದು ಉಳಿದ ಮಕ್ಕಳ ಜೊತೆಗೇ ಕುಳಿತುಕೋ. ನೀನೇನು ಹಣ ಕೊಡುವುದು ಬೇಡ. ನಾನು ನಿನಗೆ ಸಂಗೀತ ಕಲಿಸಿಕೊಡುತ್ತೇನೆ” ಎಂದು ನಗಾಡಿದರು. ಅಪ್ಪಣ್ಣ ಭಟ್ಟರಿಗೆ ಸ್ವರ್ಗವೇ ದಕ್ಕಿದ ಭಾವ.
ಮುಂದಿನ ವಾರ ಗುರುಗಳು ಬರುವುದಕ್ಕೂ ಒಂದು ಗಂಟೆ ಮೊದಲೇ ಅಪ್ಪಣ್ಣ ಭಟ್ಟರು ಅಲ್ಲಿದ್ದರು. ಸರಳ ವರಸೆಯಿಂದ ಶುರು ಮಾಡಬೇಕಾದ ಅಗತ್ಯ ಇರಲಿಲ್ಲ. ಉಳಿದ ಮಕ್ಕಳಿಗಿಂತ ಚುರುಕಾಗಿದ್ದಾರೆ ಭಟ್ಟರು ಎನ್ನುವುದು ಶಾಸ್ತ್ರಿಗಳಿಗೆ ತಿಳಿಯಲು ಹೆಚ್ಚು ಸಮಯ ಬೇಕಾಗಲಿಲ್ಲ. ಆಸಕ್ತಿಯಿದೆ. ಬುದ್ಧಿವಂತಿಕೆಯೂ ಇದೆ. ಸರಿಯಾಗಿ ಕಲಿಸಿಕೊಟ್ಟರೆ ಇವನು ತನಗೆ ಒಳ್ಳೆಯ ಹೆಸರು ತರುತ್ತಾನೆ ಎನಿಸಿತು ಶಾಸ್ತ್ರಿಗಳಿಗೆ. ತಾವು ಕಲಿತದ್ದೆಲ್ಲವನ್ನೂ ಪ್ರೀತಿಯಿಂದ ಶಿಷ್ಯನಿಗೆ ಧಾರೆ ಎರೆದರು. ಅಲ್ಪ ಸಮಯದಲ್ಲಿಯೇ ಸಂಗೀತದ ಪಟ್ಟುಗಳೆಲ್ಲದರಲ್ಲಿಯೂ ಪಾರಂಗತರೆನಿಸಿಕೊಂಡರು ಅಪ್ಪಣ್ಣ ಭಟ್ಟರು. ತನ್ನನ್ನೇ ಮೀರಿಸುವ ಶಿಷ್ಯನಿವನು ಎಂಬ ಹೆಮ್ಮೆಯ ಭಾವ ಶಾಸ್ತ್ರಿಗಳಲ್ಲಿ ಮೂಡಿತ್ತು.
ಸಂಗೀತ ಲೋಕದಲ್ಲಿಯೇ ಮುಳುಗಿಹೋದ ಮಗ ಶಾಲೆಯನ್ನು ಕಡೆಗಣಿಸಿದ್ದಾನೆ ಎನ್ನುವುದು ನಾರಾಯಣ ಭಟ್ಟರಿಗೆ ತಿಳಿದಾಕ್ಷಣ ಅವರ ಕೋಪ ಎಲ್ಲೆ ಮೀರಿತು. ಸಂಗೀತವನ್ನು ಸಂಪೂರ್ಣವಾಗಿ ಬಿಟ್ಟು ಓದಿನ ಕಡೆಗೆ ಗಮನ ಕೊಡಬೇಕು ಎಂದು ಗದರಿದರು. ಇನ್ನುಮುಂದೆ ತನ್ನ ಬದುಕೇನಿದ್ದರೂ ಸ್ವರ ಸಾಮ್ರಾಜ್ಯದಲ್ಲಿ ಎಂದು ಬಲವಾಗಿ ನಂಬಿಕೊಂಡಿದ್ದ ಭಟ್ಟರಿಗೆ ಅಪ್ಪನ ಮಾತು ಸಹ್ಯವಾಗಲಿಲ್ಲ. ಸಂಗೀತ ಕಲಿಯುವುದಕ್ಕೆ ಅಡ್ಡಬಂದರೆ ತಾನು ಮನೆಬಿಟ್ಟು ಹೋಗುತ್ತೇನೆ ಎಂದರು. ಮಗನ ಮಾತಿನಲ್ಲಿದ್ದ ದೃಢತೆ ನೋಡಿದ ನಾರಾಯಣ ಭಟ್ಟರು ಕರಗದೆ ಬೇರೆ ದಾರಿಯಿರಲಿಲ್ಲ. ಇಲ್ಲದ ಒತ್ತಡ ತಂದು ಇನ್ನೇನೋ ಅನರ್ಥಕ್ಕೆ ದಾರಿಮಾಡಿಕೊಡುವ ಬದಲು ಮಗನ ಏಳಿಗೆ ಕಂಡು ಸಂತಸಪಡುವುದೇ ಒಳ್ಳೆಯದು ಎನಿಸಿತು ಅವರಿಗೆ. ಒಪ್ಪಿಕೊಂಡರು.
ಮದ್ರಾಸಿನಲ್ಲಿ ಯುವ ಸಂಗೀತಗಾರರಿಗಾಗಿ ಸ್ಪರ್ಧೆಯಿದೆ ಎಂಬ ವಿಷಯ ಗುರುಗಳ ಮೂಲಕ ತಿಳಿದಾಗ ಅಪ್ಪಣ್ಣ ಭಟ್ಟರ ಕಾಲುಗಳು ನೆಲದ ಮೇಲೆ ನಿಲ್ಲಲಿಲ್ಲ. ಅದರಲ್ಲಿ ತಾನು ಭಾಗವಹಿಸಬೇಕು, ಗೆಲ್ಲಬೇಕು ಎಂಬ ಉತ್ಸಾಹ ಅವರಲ್ಲಿತ್ತು. ಅಂಥದ್ದೊಂದು ಸ್ಪರ್ಧೆಯಲ್ಲಿ ಗೆದ್ದರೆ ಸಂಗೀತ ಕ್ಷೇತ್ರದಲ್ಲಿ ತನಗೊಂದು ಒಳ್ಳೆಯ ಸ್ಥಾನ ಪ್ರಾಪ್ತಿಯಾಗುತ್ತದೆ ಎನ್ನುವ ಅರಿವು ಅವರಿಗಿತ್ತು.
ತಾನು ಇದರಲ್ಲಿ ಭಾಗವಹಿಸಬಹುದೇ? ಅಂಥದ್ದೊಂದು ಸಾಮರ್ಥ್ಯ ತನ್ನಲ್ಲಿದೆಯೇ?ಎಂದು ಗುರುಗಳನ್ನು ಕೇಳಿದರು. ಗುರುಗಳು ಪೂರ್ಣ ಮನಸ್ಸಿನಿಂದ ಒಪ್ಪಿಗೆ ಕೊಟ್ಟರು.
ಮದ್ರಾಸಿಗೆ ಪಯಣ ಬೆಳೆಸಿದ ಭಟ್ಟರ ಮನಸ್ಸಿನ ತುಂಬೆಲ್ಲಾ ರಾಗ, ತಾಳ, ಲಯಗಳ ಕನವರಿಕೆ. ಸ್ಪರ್ಧೆಯೊಡ್ಡಲೆಂದು ವೇದಿಕೆ ಮೇಲೆ ಕುಳಿತಾಗ ಸಾಸಿವೆ ಕಾಳಿನಷ್ಟು ಅಳುಕಿನ ಅಪಶ್ರುತಿಯೊಂದು ಎದೆಯಲ್ಲಿತ್ತು. ಆದರೆ ಯಾವಾಗ ತಮ್ಮ ಗುರುಗಳನ್ನು ಮತ್ತು ದೇವರನ್ನು ನೆನೆದು ಹಾಡುವುದಕ್ಕೆ ಆರಂಭಿಸಿದರೋ ಆ ಕ್ಷಣವೇ ಮಧುರ ಭಾವವೊಂದು ಇಡೀ ಸಭಾಂಗಣದಲ್ಲಿ ಧೀಂಗಿಣ ತೆಗೆಯಿತು. ಇವರ ಕಂಠದಿಂದ ಹೊಮ್ಮಿಬಂದ ಆನಂದ ಭೈರವಿ ಶ್ರೋತೃಗಳ ಹೃದಯದೊಳಗೆಲ್ಲಾ ಸಂಚರಿಸಿ ತೃಪ್ತವಾಯಿತು.
ಯಾರಿವನು?ಯಾರ ಶಿಷ್ಯ?ಎಂಬ ಮಾತುಗಳು ಎಲ್ಲೆಡೆಯೂ ಕೇಳಿಬಂದವು. ವಯಸ್ಸಿಗೆ ಮೀರಿದ ಆಧ್ಯಾತ್ಮಿಕ ಭಾವವೊಂದು ಅಪ್ಪಣ್ಣ ಭಟ್ಟರ ಕೊರಳಲ್ಲಿ ನಾಟ್ಯವಾಡುತ್ತಿದ್ದುದನ್ನು ಅವರ ಗಾಯನದ ವೈಖರಿ ಸ್ಪಷ್ಟಪಡಿಸಿತ್ತು. ಕೇಳುತ್ತಿದ್ದ ಎಲ್ಲರ ಗಮನಕ್ಕೂ ಬಂದಿತ್ತು.
ಮೊದಲ ಹಂತದಲ್ಲಿ ಗೆಲುವು ಸಾಧಿಸಿದ ಭಟ್ಟರು ಎರಡನೇ ಹಂತದ ಸ್ಪರ್ಧೆಯಲ್ಲಿ ಶ್ರೀರಾಗದ ಆಲಾಪ ಎಬ್ಬಿಸಿದರು. ಅಲ್ಲಿಯೂ ಗೆಲುವು ಒಲಿಯಿತು.
ಕೊನೆಯ ಹಂತದಲ್ಲಿ ಹಿಂದೋಳ ರಾಗ ಭಟ್ಟರ ಕೈ ಹಿಡಿಯಿತು. ಇದ್ದ ಘಟಾನುಘಟಿಗಳ ಮಧ್ಯೆ ಅವರ ಕೈಯ್ಯನ್ನು ಮೇಲೇರಿಸಿತು ಆ ರಾಗ. ಇದೊಂದು ಸ್ಪರ್ಧೆ ಎನ್ನುವುದನ್ನು ಮರೆತಂತೆ ಭಟ್ಟರು ಹಾಡಿದರು. ತಾನು ಹಾಡುತ್ತಿರುವುದು ತನಗಾಗಿ ಮಾತ್ರ ಎಂಬಂತೆ ಹಾಡಿದರು. ಅವರ ಮನಸ್ಸಿಗೆ ಖುಷಿಯಾಯಿತು. ಬೇರೆಯವರಿಗೆ ಅದೇ ಆನಂದ ದೊರಕಿದೆಯೋ ಇಲ್ಲವೋ, ಅವರಿಗದು ಬೇಕಿರಲಿಲ್ಲ. ಸ್ಪರ್ಧೆಯ ವಿಜಯಮಾಲೆ ಒಲಿದದ್ದು ಭಟ್ಟರ ಕೊರಳಿಗೆ. ಭರತಪುರದಿಂದ ಬಂದವರ ಈ ಸಾಧನೆ ಮದ್ರಾಸಿನ ಹುಬ್ಬನ್ನು ಮೇಲಕ್ಕೇರಿಸಿತು.
ಭರತಪುರಕ್ಕೆ ಮರಳಿದ ಭಟ್ಟರು ಗೌರವದಿಂದ ಗುರುಗಳ ಕಾಲಿಗೆ ಬಿದ್ದರು. “ಇದಕ್ಕೆಲ್ಲಾ ನೀವೇ ಕಾರಣ. ನಿಮ್ಮ ಆಶೀರ್ವಾದದ ಫಲವಿದು” ಎಂದರು ಗುರುಗಳಲ್ಲಿ. ಏನೋ ಸಾಧಿಸಿದ್ದೇನೆ ಎಂಬ ಧನ್ಯತಾಭಾವ ಭಟ್ಟರ ಹೃದಯವನ್ನು ಆವರಿಸಿತ್ತು.
ಶಿಷ್ಯನನ್ನು ಬಾಚಿ ತಬ್ಬಿಕೊಂಡ ಶಾಸ್ತ್ರಿಗಳು “ಇದಿನ್ನೂ ಆರಂಭವಷ್ಟೇ. ಇನ್ನಷ್ಟು ಸಾಧಿಸಬೇಕಿದೆ ನೀನು. ಖಂಡಿತವಾಗಿಯೂ ಸಾಧಿಸುತ್ತೀಯ” ಎಂದರು.
ಮದ್ರಾಸಿನ ಸ್ಪರ್ಧೆಯಲ್ಲಿ ಒಲಿದ ಗೆಲುವು ಭಟ್ಟರಿಗೆ ಅನೇಕ ಅವಕಾಶಗಳನ್ನು ದಯಪಾಲಿಸಿತು. ಅನೇಕ ಕಡೆಗಳಲ್ಲಿ ನಡೆಯುತ್ತಿದ್ದ ಕಛೇರಿಗಳು ಅವರನ್ನು ಕರ ಬೀಸಿ ಕರೆದವು. ಬೆಳೆಯಬೇಕೆಂಬ ಕನಸನ್ನು ಇಟ್ಟುಕೊಂಡಿದ್ದ ಭಟ್ಟರಿಗೆ ಏಕಕಾಲಕ್ಕೆ ಹಲವು ಕಾರ್ಯಕ್ರಮಗಳನ್ನು ನಿಭಾಯಿಸುವುದು ಕಠಿಣವೇನೂ ಆಗಲಿಲ್ಲ. ಹೀಗೆ ಒಂದೊಂದೇ ಮೆಟ್ಟಿಲನ್ನು ಏರುತ್ತಾ ಹೋದ ಭಟ್ಟರು ಮಧ್ಯಮ ಸ್ಥಾನವೊಂದರಲ್ಲಿ ಹೋಗಿ ನಿಂತರು. ಸಾಧನೆ ಮಾಡುತ್ತಾ ಹೋದಂತೆ ಭಟ್ಟರು ಅಹಂಕಾರಿ ಎನಿಸಿಕೊಂಡರು ಎನ್ನುವ ಮಾತು ಅದೆಷ್ಟೋ ಸಲ ಕೇಳಿಬಂದಿದೆ.
ಕಷಾಯವನ್ನು ತಂದಿಟ್ಟಳು ಕಲ್ಯಾಣಿ, ಭಟ್ಟರ ಎದುರು. ಅವಳು ಭಟ್ಟರ ಮಗಳು. ಅವಳೆಂದರೆ ವಿಪರೀತ ಎನಿಸುವಷ್ಟು ಪ್ರೀತಿಯಿದೆ ಭಟ್ಟರಿಗೆ. ವಯಸ್ಸು ಮೂವತ್ತು ದಾಟಿದೆ ಅವಳಿಗೆ. ಆದರೆ ಈಗಲೂ ಭಟ್ಟರ ಪಾಲಿಗೆ ಅವಳು ‘ಕೂಸು’. “ಓ ಕೂಸೇ” ಎಂದು ಭಟ್ಟರು ಅವಳನ್ನು ಕರೆಯುವ ರೀತಿಯಲ್ಲಿಯೇ ಒಂದು ಕೊಂಡಾಟದ ಭಾವವಿರುತ್ತದೆ. ತಾಯಿಯ ಪ್ರೀತಿಯನ್ನು ಹೆಚ್ಚು ಪಡೆಯದೆ ಬೆಳೆದವಳು ಅವಳು ಎಂಬ ಕಾರಣಕ್ಕೆ ಮೊದಲಿದ್ದ ಪ್ರೀತಿಯ ದುಪ್ಪಟ್ಟು ಪ್ರೀತಿಯನ್ನು ಇಷ್ಟೂ ವರ್ಷಗಳಲ್ಲಿ ತೋರುತ್ತಲೇ ಬಂದಿದ್ದಾರೆ ಭಟ್ಟರು.
ಇವರು ಕಷಾಯವಿದ್ದ ಲೋಟಕ್ಕೆ ಬಾಯಿ ಇಡುವುದನ್ನು ಕಾಣುತ್ತಿದ್ದ ಅವಳು “ಈಗ ಸ್ವಲ್ಪ ಹೊತ್ತಿಗೆ ಮೊದಲು ಇವರು ಕರೆಮಾಡಿದ್ದರು” ಎಂದಳು.
ಕಷಾಯ ಇಂದೇನೋ ರುಚಿ ಕಳೆದುಕೊಂಡಿದೆ ಎನಿಸಿತು ಭಟ್ಟರಿಗೆ. “ಇವರು ಎಂದರೆ ಯಾರು?ನನಗೆ ಗೊತ್ತಿಲ್ಲ” ಎಂದರು, ಗೊತ್ತಿಲ್ಲದಂತೆ ಮುಖಭಾವ ಮಾಡುತ್ತಾ.
ಅಪ್ಪನ ಮೊಂಡುತನ ಏನು ಎನ್ನುವುದು ಕಲ್ಯಾಣಿಗೆ ತಿಳಿದಿತ್ತು. ಮಣಿದಳು. “ಅದೇ ನಿಮ್ಮ ಅಳಿಯ” ಎಂದಳು.
“ನನ್ನ ಅಳಿಯ ಅಲ್ಲ. ನಿನ್ನ ಗಂಡ ಅಷ್ಟೇ” ಎಂದವರು “ಏನಂತೆ ಅವನದ್ದು?”ಎಂದರು ಜೋರಿನ ಧ್ವನಿಯಲ್ಲಿ.
“ಅದೇ ನನ್ನನ್ನು ಬರಹೇಳುವುದಕ್ಕೆ ಕರೆಮಾಡಿದ್ದು” ಎಂದಳು.
“ನಾನು ಕಳಿಸಿಕೊಡುವುದಿಲ್ಲ ಅಂತ ಹೇಳಿದ್ದೇನೆ ಎನ್ನುವುದನ್ನು ಅವನಿಗೆ ತಿಳಿಸು. ನಿನ್ನ ಜೊತೆಗೆ ಬದುಕಬೇಕು ಅನ್ನುವ ಆಸೆ ಅವನಿಗಿದ್ದರೆ ನನ್ನಲ್ಲಿ ಬಂದು ಮಾತನಾಡುವುದಕ್ಕೆ ಹೇಳು. ಕಳ್ಳನ ಹಾಗೆ ನಿನ್ನ ಜೊತೆಗೆ ಮಾತನಾಡುವುದಲ್ಲ” ಎಂದರು ಭಟ್ಟರು, ಆವೇಶಕ್ಕೆ ಒಳಗಾದವರಂತೆ.
“ಚೆನ್ನಾಗಿ ನೋಡಿಕೊಳ್ಳುತ್ತಾರಂತೆ ನನ್ನನ್ನು. . . ” ಎಂದ ಕಲ್ಯಾಣಿಯ ಮುಖವನ್ನೇ ನೋಡಿದರು ಭಟ್ಟರು. ಗಂಡನ ಜೊತೆ ಬಾಳುವ ಇಚ್ಛೆಯೇ ಹೆಚ್ಚಿದೆಯಾ ಅವಳಲ್ಲಿ?ಇಲ್ಲವಾದರೆ ಇಂಥಾ ಮಾತೇಕೆ ಬರುತ್ತಿತ್ತು ಎಂದುಕೊಂಡರು.
“ಅವನೇನೂ ಚೆನ್ನಾಗಿ ನೋಡಿಕೊಳ್ಳುವುದು ಬೇಡ. ಅಪ್ಪ ಕಳಿಸುವುದಿಲ್ಲ ಅಂತ ಹೇಳು” ಎಂದರು ನಿರ್ದಾಕ್ಷಿಣ್ಯವಾಗಿ.
ಅಪ್ಪಣ್ಣ ಭಟ್ಟರು ಹೆಂಡತಿ ಕಾವೇರಿಯನ್ನು ತೊರೆಯುವಾಗ ಕಲ್ಯಾಣಿಗೆ ಐದು ವರ್ಷವೋ ಆರು ವರ್ಷವೋ ಇದ್ದಿರಬಹುದು. ಕಾವೇರಿಯ ಜೊತೆಗೆ ಇನ್ನು ಬದುಕಿದರೆ ಅದಕ್ಕಿಂತ ಅಸಹ್ಯ ಇನ್ನೊಂದಿಲ್ಲ ಎನಿಸಿಬಿಟ್ಟಿತ್ತು ಭಟ್ಟರಿಗೆ ಆ ಕ್ಷಣದಲ್ಲಿ.
ಅದು ಭಟ್ಟರ ಸಂಗೀತ ಬದುಕಿನ ಉಚ್ಛಾçಯ ಕಾಲ. ಯಾವಾಗ ನೋಡಿದರೂ ಕಛೇರಿ. ಬಿಡುವಿರುವ ಸಮಯವೆಲ್ಲಾ ಅಭ್ಯಾಸಕ್ಕೆ ಮೀಸಲು. ದಿನಕ್ಕೆ ಹನ್ನೆರಡು ಗಂಟೆಗಳಷ್ಟು ಅಭ್ಯಾಸ ನಡೆಯುತ್ತಿತ್ತು. ಅಂಥ ಸಮಯದಲ್ಲಿಯೇ ಭಟ್ಟರು ಮುಂಬೈ ನಗರದಲ್ಲಿ ಎರಡು ಸಂಗೀತ ಕಛೇರಿಗಳನ್ನು ನಡೆಸುವುದಕ್ಕೆ ಒಪ್ಪಿಕೊಂಡರು. ಐದು ದಿನ ಅಲ್ಲಿಯೇ ಇರಬೇಕಾಗಿತ್ತು.
ಇದೇನೂ ಭಟ್ಟರ ಪಾಲಿಗೆ ಹೊಸ ಅನುಭವ ಅಲ್ಲ. ಅದೆಷ್ಟೋ ಸಲ ದೂರದ ಊರುಗಳಲ್ಲಿ ಸಂಗೀತ ಕಛೇರಿ ಒಪ್ಪಿಕೊಂಡಿದ್ದರು. ಆದರೆಈ ಕಛೇರಿ ತನ್ನ ಸಂಗೀತ ಬದುಕನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗುವ ಕಛೇರಿ ಎನ್ನುವುದು ಭಟ್ಟರಿಗೆ ತಿಳಿದಿತ್ತು. ಸಂಗೀತ ಕ್ಷೇತ್ರದ ದಿಗ್ಗಜರೆನಿಸಿಕೊಂಡವರು ಅಲ್ಲಿಗೆ ಬರುವವರಿದ್ದರು. ಮಗಳ ಜೊತೆಗೆ ಬಾಂಧವ್ಯ ಬೆಳೆಯುತ್ತಿರುವ ಈ ಗಳಿಗೆಯಲ್ಲಿ ಅವಳನ್ನು ಬಿಟ್ಟುಹೋಗಲು ತೀರಾ ಕಷ್ಟವೆನಿಸಿತ್ತು. ಹಾಗೆಂದು ಹೋಗದೇ ಇರಲು ಸಾಧ್ಯ ಇರಲಿಲ್ಲ. ಮಗಳನ್ನೊಮ್ಮೆ ಮುದ್ದುಮಾಡಿ ಮುಂಬೈಗೆ ಹೊರಟರು.
ಅಲ್ಲಿಯ ಕಾರ್ಯಕ್ರಮ ಭಟ್ಟರ ಮನಸ್ಸಿಗೆ ಮುದ ನೀಡಿತು. ಆದರೆ ಒಂದೇ ಕಛೇರಿ ನೀಡುವುದಕ್ಕಾದದ್ದು. ಇನ್ನೊಂದು ಕಛೇರಿ ರದ್ದಾಯಿತು. ಗೌರವ, ಪ್ರೀತಿ ಎಲ್ಲವನ್ನೂ ತನ್ನೊಡಲಲ್ಲಿ ತುಂಬಿಕೊಂಡು ಎರಡು ದಿನ ಮೊದಲೇ ಭರತಪುರಕ್ಕೆ ಮರಳಿದರು ಭಟ್ಟರು.
ಅಂಗಳದಲ್ಲಿ ಬಂದುನಿಂತವರಿಗೆ ಹೊಸದು ಚಪ್ಪಲಿಗಳು ಕಣ್ಣಿಗೆ ಬಿದ್ದವು. ಗಂಡಸಿನ ಚಪ್ಪಲಿಗಳು. ಯಾರು ಬಂದಿರಬಹುದು ಎಂದಂದುಕೊಂಡು ಬಾಗಿಲು ಬಡಿದರೆ ಚಾವಡಿಯಲ್ಲಿ ನೆಲದ ಮೇಲೆ ಅದೇನೋ ಆಟ ಆಡುತ್ತಿದ್ದ ಕಲ್ಯಾಣಿ ಕಣ್ಣಿಗೆ ಬಿದ್ದಳು. ಅವಳನ್ನು ಕರೆದರು.
ಬಾಗಿಲು ತೆಗೆದವಳಲ್ಲಿ “ಅಮ್ಮ ಎಲ್ಲಿದ್ದಾಳೆ ಕೂಸೇ?”ಎಂದರು ಭಟ್ಟರು. ಮನೆಯ ಮಾಳಿಗೆ ಕಡೆಗೆ ಕೈತೋರಿದಳು ಆ ಹುಡುಗಿ.
ಹೋಗಿ ನೋಡಿದರೆ ಕೋಣೆಯೊಳಗಿನಿಂದ ನಗು ಕೇಳಿಬರುತ್ತಿತ್ತು. ಭಟ್ಟರು ಕೋಪಕ್ಕೆ ಒಳಗಾದವರಂತೆ ಬಾಗಿಲು ಬಡಿದರು. ಜೋರಾಗಿ “ಕಾವೇರಿ ಕಾವೇರಿ” ಎಂದು ಕೂಗಿದರು. ಬಾಗಿಲು ನಿಧಾನಕ್ಕೆ ತೆರೆಯಿತು.
ಕಾವೇರಿಯ ಶರೀರ ಸುತ್ತಿದ್ದ ಸೀರೆ ಅಚ್ಚುಕಟ್ಟುತನವನ್ನು ಕಳೆದುಕೊಂಡಿತ್ತು. ಕೂದಲು ಕೆದರಿದಂತಿತ್ತು. ರವಿಕೆಯ ಕೆಳಗಿನ ಎರಡು ಗುಬ್ಬಿಗಳನ್ನು ಹಾಕಿರಲಿಲ್ಲ.
ಕೋಣೆಯ ಒಳಗೆ ದೃಷ್ಟಿ ಹಾಯಿಸಿದರು ಭಟ್ಟರು. ಕತ್ತಲು ಕವಿದಿದ್ದ ಕೋಣೆಯಲ್ಲಿ ಲಘುವೆನಿಸುವ ಬೆಳಕಿತ್ತು. ಮಂಚದ ಕೆಳಗೆ ಅಂಗಿ ಹಾಕಿರದ, ಪಂಚೆಯನ್ನಷ್ಟೇ ಸುತ್ತಿಕೊಂಡಿದ್ದ ಗಂಡಸೊಬ್ಬ ಇದ್ದ. ಭಟ್ಟರು ಆವೇಶದಿಂದ ಒಳಗೆ ನುಗ್ಗಿದ ಕೂಡಲೇ ಅಲ್ಲಿಂದ ಎದ್ದ ಅವನು ಭಟ್ಟರ ಕೈಗೆ ಸಿಗದೆ ಓಡಿಹೋದ. ಮಂಚದ ಮೇಲಿದ್ದ ಹಾಸಿಗೆ ಮುದ್ದೆಮುದ್ದೆಯಾದಂತಿತ್ತು. ಕೋಪದಿಂದ ಭಟ್ಟರು ಹೆಂಡತಿಯ ಕಡೆಗೆ ನೋಡಿದರೆ ಅವಳ ಕಣ್ಣುಗಳಲ್ಲಿದ್ದದ್ದು ಅಪರಾಧಿ ಭಾವ.
ಮನಸ್ಸು ಒಡೆದು ಹೋದಂತಾಗಿತ್ತು ಭಟ್ಟರಿಗೆ. ಇನ್ನು ಅವಳ ಜೊತೆಗೆ ಬದುಕುವುದರಲ್ಲಿ ಅರ್ಥವಿಲ್ಲ ಎಂದುಕೊಂಡವರು ಅದೇ ಕ್ಷಣ ಸಂಬಂಧ ಕಳೆದುಕೊಂಡರು.
“ಯಾಕೆ ಹೀಗೆ ಮಾಡಿದೆ?”ಎಂಬ ಪ್ರಶ್ನೆಯನ್ನು ಕೇಳಬೇಕೆಂದು ಅವರಿಗೆ ಅನ್ನಿಸಲಿಲ್ಲ. ತಾನೇನೂ ತಪ್ಪು ಮಾಡಿಲ್ಲ. ಅವಳೇ ತನಗೆ ಮೋಸ ಮಾಡಿದವಳು. ಹಾಗಿರುವಾಗ ಅಂಥ ಪ್ರಶ್ನೆಯನ್ನು ಕೇಳಿ, ಅವಳೇನೋ ಹೇಳಿದ್ದಕ್ಕೆ ಇನ್ನೇನೋ ಸಮರ್ಥನೆ ಕೊಡುತ್ತಾ ಕೂರುವುದೇಕೆ ಎಂಬ ಯೋಚನೆ ಅವರಲ್ಲಿತ್ತು. ಅದಕ್ಕೇ ಮೌನವಾಗಿ ಉಳಿದರು.
ಹೀಗೆ ಹೆಂಡತಿಯನ್ನು ಬಿಟ್ಟ ಬಳಿಕ ಭಟ್ಟರಿಗೆ ಸಂಗೀತಕ್ಕಿಂತಲೂ ಹೆಚ್ಚು ಆಪ್ತ ಎನಿಸಿದವಳು ಕಲ್ಯಾಣಿ. ಹೆಂಡತಿಯನ್ನು ತೊರೆದಷ್ಟು ಸುಲಭವಾಗಿ ಅವಳನ್ನು ಬಿಡುವುದಕ್ಕೆ ಭಟ್ಟರು ಸಿದ್ಧರಿರಲಿಲ್ಲ. ಕಾವೇರಿಗೂ ಸಹ ಬೇರೆಯದೇ ಬದುಕಿನ ಯೋಚನೆ ಇದ್ದಿರಬಹುದು. ಮಗಳು ತನ್ನ ಜೊತೆ ಇರಬೇಕು ಎಂದವಳು ಭಟ್ಟರಲ್ಲಿ ಕೇಳಲೇ ಇಲ್ಲ. ಮಗಳ ಓದು, ಬೆಳವಣಿಗೆ ಇದರತ್ತಲೇ ಗಮನ ಕೊಡುತ್ತಾ ಹೋದರು ಭಟ್ಟರು. ಮತ್ತೆ ಮದುವೆ ಆಗಬೇಕೆಂಬ ಆಸೆ ಅವರಲ್ಲಿ ಹುಟ್ಟಲಿಲ್ಲ. ಮಗಳು ಸಂಗೀತದಲ್ಲಿ ದೊಡ್ಡ ಹೆಸರು ಗಳಿಸಬೇಕು ಎಂಬ ಆಸೆ ಅವರಲ್ಲಿತ್ತು. ಆದರೆ ಕಲ್ಯಾಣಿಗೆ ಸಂಗೀತ ಒಲಿಯಲಿಲ್ಲ. ಹಾಗೆಂದು ಭಟ್ಟರು ಅವಳ ಮೇಲೆ ಒತ್ತಡ ಉಂಟುಮಾಡಲಿಲ್ಲ. ಆಫೀಸರ್ ಆಗಬೇಕೆಂಬ ಅಪ್ಪನ ಆಸೆಯನ್ನು ದೂರತಳ್ಳಿ ಸಂಗೀತಗಾರರಾಗಿದ್ದ ಭಟ್ಟರಿಗೆ ತನ್ನ ಕನಸನ್ನು ಮಗಳ ಮೇಲೆ ಹೇರುವುದು ಸರಿಗಾಣಲಿಲ್ಲ.
ಓದು ಮುಗಿಸುತ್ತಿದ್ದಾಗಲೇ ಕಲ್ಯಾಣಿಗೆ ಒಳ್ಳೆಯ ಸಂಬಂಧವೊಂದು ಕೂಡಿಬಂತು. ಅಪ್ಪಣ್ಣ ಭಟ್ಟರ ಪಾಲಿಗಂತೂ ಅದು ಒಳ್ಳೆಯದರಲ್ಲಿಯೇ ತೀರಾ ಒಳ್ಳೆಯ ಸಂಬಂಧ. ಹುಡುಗ ಶಶಿಧರ ಸಂಗೀತಗಾರನಾಗಿದ್ದ. ಅವನ ಕಛೇರಿಯನ್ನು ಹಲವು ಸಲ ಭಟ್ಟರು ಕೇಳಿದ್ದರು. ಮುಂದೆ ಒಳ್ಳೆಯ ಭವಿಷ್ಯವಿದೆ ಈ ಹುಡುಗನಿಗೆ ಎಂದುಕೊಂಡಿದ್ದರು. ಅಂಥವನು ತನ್ನ ಮಗಳ ಗಂಡನಾದದ್ದರ ಬಗ್ಗೆ ಸಂತೃಪ್ತಿಯಿತ್ತು ಭಟ್ಟರಿಗೆ.
ಆದರೆ ಈ ತೃಪ್ತಿ ಹೆಚ್ಚು ಸಮಯ ಉಳಿಯಲಿಲ್ಲ. ಅಳಿಯ ಮಾವನ ಮಧ್ಯೆ ಬಂದ ಭಿನ್ನಾಭಿಪ್ರಾಯ ಕಲ್ಯಾಣಿಯ ಬದುಕನ್ನು ನುಂಗುವ ಸನ್ನಾಹದಲ್ಲಿತ್ತು.
ತಿರುಮಲ ಭಟ್ಟರ ಸಂಗೀತ ಕಛೇರಿಗೆ ಅತಿಥಿಯಾಗಿ ಹೋಗಿದ್ದ ಶಶಿಧರ. ಹಾಗೆ ಹೋಗುವುದು ಭಟ್ಟರಿಗೆ ಇಷ್ಟವಿರಲಿಲ್ಲ. ಆದರೂ ಅಳಿಯನಲ್ಲಿ ಹೇಳದೇ ಕುಳಿತರು. ಆದರೆ ಆ ಕಛೇರಿಯ ಬಗ್ಗೆ ಅತಿಯಾಗಿ ಶಶಿಧರ ತನ್ನೆದುರು ಹೊಗಳಿದ್ದನ್ನು ಭಟ್ಟರಿಗೆ ಸಹಿಸಿಕೊಳ್ಳುವುದಕ್ಕಾಗಲಿಲ್ಲ.
“ನೀನು ಹೊಗಳುವಷ್ಟು ಒಳ್ಳೆಯ ಕಛೇರಿ ಅವನದ್ದಲ್ಲ. ಏನೋ ಒಳ್ಳೆಯ ಹೆಸರು ಇದ್ದ ತಕ್ಷಣ ಒಳ್ಳೆಯ ಕಛೇರಿ ನೀಡುತ್ತಾರೆ ಎಂದಲ್ಲ. ನನಗೆ ಅವನಷ್ಟು ಹೆಸರಿಲ್ಲ ಒಪ್ಪಿಕೊಳ್ಳುತ್ತೇನೆ. ಆದರೆ ಅವನಿಗಿಂತ ಚೆನ್ನಾಗಿ ಹಾಡಬಲ್ಲೆ. ಆ ವಿಶ್ವಾಸ ನನಗಿದೆ” ಎಂದಿದ್ದರು.
ಶಶಿಧರನಿಗೆ ಇವರ ಮಾತು ಇಷ್ಟವಾಗಿರಲಿಲ್ಲ. “ನಾನು ಹೇಳಿದ್ದು ಅವರ ಕಛೇರಿಯ ಬಗೆಗೆ ಮಾತ್ರ. ನಿಮ್ಮ ಬಗೆಗೆ ಮಾತನಾಡಿಯೇ ಇಲ್ಲ. ನೀವೇ ಏನೇನೋ ಹೋಲಿಕೆ ಮಾಡಿಕೊಳ್ಳುತ್ತಿದ್ದೀರಲ್ಲ” ಎಂದ.
ಭಟ್ಟರು ಸುಮ್ಮನಿರಲಿಲ್ಲ. ಮತ್ತೂ ಜೋರಾಗಿ ದನಿಯೆಬ್ಬಿಸಿದರು. ಅಳಿಯನೂ ಅದೇ ಧಾಟಿಯಲ್ಲಿ ಮಾತನಾಡಿದ.
ಭಟ್ಟರಿಗೆ ಎಲ್ಲಿತ್ತೋ ಕೋಪ, “ನಿನ್ನಂಥ ಮೂರ್ಖನ ಜೊತೆ ನನ್ನ ಮಗಳನ್ನು ಇರುವುದಕ್ಕೆ ಬಿಡುವುದೇ ಇಲ್ಲ” ಎಂದರು.
“ನಿಮ್ಮಂಥ ಅಹಂಕಾರಿಯ ಮಗಳ ಜೊತೆಗೆ ಬದುಕುವುದು ನನಗೂ ಇಷ್ಟ ಇಲ್ಲ” ಎಂದ ಶಶಿಧರ. ಅಲ್ಲಿಗೆ ಕಲ್ಯಾಣಿ ಮತ್ತು ಶಶಿಧರನ ಸಂಬಂಧ ಮುರಿದುಬಿತ್ತು. ಕಲ್ಯಾಣಿ ಮತ್ತೆ ತನ್ನ ತವರುಮನೆ ಸೇರಿಕೊಳ್ಳುವಂತಾಯಿತು.
ಅಪ್ಪಣ್ಣ ಭಟ್ಟರ ಮಗಳ ಬದುಕು ಹಾಳಾಯಿತಂತೆ ಎಂಬ ಸುದ್ದಿ ಊರಿನ ತುಂಬೆಲ್ಲಾ ಹರಡುವುದಕ್ಕೆ ಹೆಚ್ಚು ಸಮಯ ಬೇಕಾಗಲಿಲ್ಲ. ಹೀಗೆ ಊರೆಲ್ಲಾ ಸವಾರಿ ಹೊರಟ ಸುದ್ದಿ ತಿರುಗಿ ಭಟ್ಟರನ್ನೇ ಬಂದು ತಲುಪಿತು. ಹೀಗೊಂದು ವಿಚಾರ ಊರವರ ಬಾಯಿಯಲ್ಲಿ ನಲಿದಾಡುತ್ತಿದೆ ಎನ್ನುವುದನ್ನು ಸುಬ್ರಹ್ಮಣ್ಯ ಉಡುಪರು ಭಟ್ಟರ ಕಿವಿಗೆ ಹಾಕಿದ್ದರು.
“ನೀವು ಮಗಳು ಅಳಿಯನನ್ನು ದೂರ ಮಾಡಿದ್ದೀರಿ ಅಂತ ಇಡೀ ಊರಿನವರು ಮಾತನಾಡುತ್ತಿದ್ದಾರೆ ಭಟ್ಟರೇ” ಎಂದಿದ್ದರು.
“ಮತ್ತೆ ಅವನು ಸರಿಯಾಗಿ ಹಾಡುವುದಕ್ಕೆ ಬರದವರನ್ನೆಲ್ಲಾ ಶ್ರೇಷ್ಠ ಸಂಗೀತಗಾರರು ಅಂತ ಹೊಗಳಿದರೆ ನಾನು ಕೇಳಿಸಿಕೊಳ್ಳಬೇಕಿತ್ತಾ?ತಪ್ಪು ಮಾಡಿದ್ದು ಅಳಿಯ. ಅಂಥವನ ಜೊತೆ ಮಗಳು ಬದುಕುವುದು ಬೇಡ ಅಂತ ಅವರಿಬ್ಬರನ್ನೂ ದೂರ ಮಾಡಿದೆ. ನಾನು ಮಾಡಿದ್ದರಲ್ಲೇನೂ ತಪ್ಪಿಲ್ಲ. ಅಳಿಯನದ್ದೇ ತಪ್ಪು” ಎಂದಾಗ ಭಟ್ಟರ ಮುಖದಲ್ಲಿ ಒಂದಿಷ್ಟೂ ತಪ್ಪಿತಸ್ಥ ಭಾವನೆ ಇರಲಿಲ್ಲ.
ಮಂಚದ ಮೇಲೆ ಮಲಗಿಕೊಂಡಿದ್ದ ಭಟ್ಟರು ಯೋಚಿಸತೊಡಗಿದ್ದರು. ಯಾಕೆ ಮಧ್ಯಮ ಸ್ಥಿತಿಯಲ್ಲಿ ಸಂತಸ ಪಡೆದುಕೊಳ್ಳುವ ಗುಣ ತನ್ನಲ್ಲಿಲ್ಲ?ಮಧ್ಯಮ ಸ್ಥಿತಿಯಲ್ಲಿದ್ದೇನೆ ತಾನು. ಅದಂತೂ ಖಂಡಿತ. ಷಡ್ಜ, ರಿಷಭ, ಗಾಂಧಾರ ಮೆಟ್ಟಿಲುಗಳನ್ನು ದಾಟಿ ಬಂದಿದ್ದೇನೆ. ಪಂಚಮ, ದೈವತ, ನಿಷಾದದ ಮೆಟ್ಟಿಲುಗಳನ್ನು ಏರುವುದಕ್ಕಿದೆ. ಏರಿದ ಮೆಟ್ಟಿಲುಗಳ ಬಗೆಗಿನ ತೃಪ್ತಿಯನ್ನು ಎಲ್ಲಿಯೋ ಕಳೆದುಕೊಂಡಿದ್ದೇನೆ. ಏರದ ಮೆಟ್ಟಿಲುಗಳೇ ತನ್ನನ್ನು ಕಾಡುತ್ತಾ ಆಟವಾಡಿಸುತ್ತಿವೆ. ಆದ್ದರಿಂದಲೇ ಈಗ ಇರುವ ಮಧ್ಯಮ ಸ್ಥಿತಿಯಲ್ಲಿ ಸಂತಸ ಇಲ್ಲ ಎನಿಸಿತು ಅವರಿಗೆ.
ಭಟ್ಟರು ಈಚೀಚೆಗೆ ಸಂಗೀತ ಕ್ಷೇತ್ರದ ಬಗ್ಗೆಯೂ ಬೇಸರ ತೋರಿಸುತ್ತಿದ್ದರು. ಸಂಗೀತದ ಹೆಸರಿನಲ್ಲಿ ನಡೆಯುತ್ತಿರುವ ಕೆಲವು ಪ್ರಯೋಗಗಳನ್ನು ಒಪ್ಪಿಕೊಳ್ಳಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ವೇದಿಕೆಯೊಂದರಲ್ಲಿಯೇ ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ಹೇಳಿದ್ದರು. ಭಟ್ಟರ ಈ ಮಾತು ಚರ್ಚೆಗೆ ಎಡೆಮಾಡಿಕೊಟ್ಟಿತ್ತು. ಕೆಲವೊಂದಷ್ಟು ಮಂದಿ ಇವರದ್ದೇ ಸರಿ ಎಂದರೆ, ಇನ್ನೂ ಕೆಲವರು ಬದಲಾದ ಕಾಲಕ್ಕೆ ತಕ್ಕ ಹಾಗೆ ಸಂಗೀತವೂ ಬದಲಾಗಬೇಕು. ಅದನ್ನು ಹಿರಿಯರೆನಿಸಿಕೊಂಡವರು ಒಪ್ಪಿಕೊಳ್ಳಬೇಕು ಎಂದಿದ್ದರು. ಆಗಾಗ ಫೇಸ್‌ಬುಕ್, ವಾಟ್ಸಾಪ್ ಎಂದೆಲ್ಲಾ ಬಳಸುತ್ತಿದ್ದ ಭಟ್ಟರು ಅಲ್ಲಿಯೂ ಸಹ ತಮಗನಿಸಿದ್ದನ್ನು ನೇರವಾಗಿಯೇ ಹೇಳುತ್ತಿದ್ದರು. ತಾವಂದದ್ದೇ ಸರಿ ಎಂಬ ಧೋರಣೆ ಅವರಲ್ಲಿ ಮೂಡತೊಡಗಿತ್ತು. ಇನ್ನೊಬ್ಬರೇನಾದರೂ ತಮಗೆ ವಿರುದ್ಧ ಅಭಿಪ್ರಾಯ ಹೇಳಿದರೆ ಅದನ್ನು ಸ್ವೀಕರಿಸುವುದಕ್ಕೆ ಅವರಿಂದ ಸಾಧ್ಯವಾಗುತ್ತಿರಲಿಲ್ಲ. ಮಧ್ಯಮ ಸ್ಥಿತಿಯ ತೃಪ್ತಿ ತನಗೆ ಇಲ್ಲವಾದುದೇ ತನ್ನ ಈ ಮನೋಭೂಮಿಕೆಗೆ ಕಾರಣ ಇರಬಹುದೇ ಎಂದುಕೊಂಡರು ಅಪ್ಪಣ್ಣ ಭಟ್ಟರು.
ಗಂಡನ ಮನೆಗೆ ಕಳುಹಿಸಲು ಸಾಧ್ಯವಿಲ್ಲ ಎಂದಾಗ ಕಲ್ಯಾಣಿಯ ಮುಖದಲ್ಲಿ ಅದೆಂತಹ ಬೇಸರವಿತ್ತು!ಅದನ್ನು ಗಮನಿಸಿದ್ದೇನೆ ತಾನು. ಅಳಿಯನ ಜೊತೆ ನನಗೆ ಉಂಟಾದ ಮನಸ್ತಾಪದಿಂದಾಗಿ ಮಗಳ ಬದುಕು ಅತಂತ್ರ ಆಗಬೇಕೇ ಎಂದುಕೊಂಡರು ಅಪ್ಪಣ್ಣ ಭಟ್ಟರು. ಅವಳಿಗೆ ಗಂಡನ ಜೊತೆ ಬದುಕಬೇಕೆಂಬ ಇಚ್ಛೆಯಿದೆ. ಒಳ್ಳೆಯ ರೀತಿಯಲ್ಲಿ ಸಂಸಾರ ಸಾಗಿಸುವ ಕನಸಿದೆ. ಆದರೆ ತನ್ನ ಅಹಂಕಾರ ಅದೆಲ್ಲವನ್ನೂ ಇಲ್ಲವಾಗಿಸಿದೆ. ಎಲ್ಲೋ ತಾನು ತಪ್ಪಿದ್ದೇನೆ ಎನಿಸಿತು ಅವರಿಗೆ. ಮೊಬೈಲ್ ಎತ್ತಿಕೊಂಡರು.
ಬೆಳಗ್ಗೆಯೇ ಶ್ರುತಿಪೆಟ್ಟಿಗೆ ಹಿಡಿದು ಕುಳಿತಿದ್ದರು ಭಟ್ಟರು. ಹಂಸಧ್ವನಿ ಅವರ ಕಂಠದಿಂದ ಹೊಮ್ಮಿಬರುತ್ತಿತ್ತು. ಹೊಸ ಶ್ರುತಿಪೆಟ್ಟಿಗೆ ಬರುವವರೆಗೂ ಹಾಡುವುದಿಲ್ಲ ಎಂದು ಗೋವಿಂದನಲ್ಲಿ ಹೇಳಿದ್ದನ್ನು ಅವರು ಅದಾಗಲೇ ಮರೆತುಬಿಟ್ಟಿದ್ದರು.
ಇವರ ಗಾಯನ ಅರ್ಧದಾರಿಗೆ ಸಾಗಿತ್ತಷ್ಟೇ, ಕಾರೊಂದು ಬಂದು ಮನೆಯ ಮುಂದೆ ನಿಂತಿತು. ಕಾರಿನಿಂದಿಳಿದ ಶಶಿಧರ ಮನೆಯೊಳಗೆ ಬಂದ. ಭಟ್ಟರ ಹಾಡು ನಿಂತಿತು. ಅವನ ಮುಖದಲ್ಲಿ ಆತ್ಮೀಯತೆಯ ನಗುವಿತ್ತು. ಭಟ್ಟರೂ ನಗು ಬೀರಿದರು. ಒಂದಷ್ಟು ಹೊತ್ತು ಮಾತು ಸಾಗಿತು.
ಮಗಳು ಸಿದ್ಧಳಾಗಿ ಬಂದುನಿಂತಳು. “ಸರಿ ನಾವಿನ್ನು ಹೊರಡುತ್ತೇವೆ” ಎಂದು ಅಳಿಯ ಎದ್ದುನಿಂತ. “ಆಗಾಗ ಬರುತ್ತಿರುತ್ತೇನೆ ಅಪ್ಪಾ. ಬೇಜಾರು ಮಾಡಿಕೊಳ್ಳಬೇಡಿ” ಎಂದು ಮಗಳು ಹೇಳಿದಾಗ ಭಟ್ಟರ ಹೃದಯದಲ್ಲಿ ತೋಡಿ ರಾಗದ ಆಲಾಪ. ಅಂಗಳದಲ್ಲಿದ್ದ ಕಾರು ಹೊರಟುಹೋಯಿತು.
ಮತ್ತೆ ಶ್ರುತಿಪೆಟ್ಟಿಗೆಯೆದುರು ಕುಳಿತ ಭಟ್ಟರು ಹಂಸಧ್ವನಿ ಹಾಡತೊಡಗಿದರು. ಅದೆಷ್ಟೋ ಹೊತ್ತು ಹಾಡು ಕೇಳಿಬರುತ್ತಲೇ ಇತ್ತು. ಆಗಲೇ ಬಂದ ಗೋವಿಂದ ಅಲ್ಲಿ ಕುಳಿತ. ಕಣ್ಣುಮುಚ್ಚಿ ಹಾಡುತ್ತಿದ್ದ ಭಟ್ಟರು ಕಣ್ಣು ತೆರೆದ ಕೂಡಲೇ ಕಂಡದ್ದು ಅವನನ್ನು.
ತಕ್ಷಣವೇ “ಕೇಚಣ್ಣ ಭಟ್ಟರಿಗೆ ಈಗಲೇ ಕರೆಮಾಡಿ ಹೊಸ ಶ್ರುತಿಪೆಟ್ಟಿಗೆ ಬೇಡ ಅಂತ ಹೇಳು” ಎಂದರು.
-ಡಾ. ವಿಶ್ವನಾಥ ಎನ್ ನೇರಳಕಟ್ಟೆ
