ರಂಗಭೂಮಿಯ ವೈಭವದ ದಿನಗಳ ಅಂದಿನ ಕಾಲದ ದೀಮಂತರ ಕುರಿತಾದ ಭಾಷಣ ಕೇಳಿ ಹೊರ ಬಂದ ಸುಮಾ ಮತ್ತು ಸೂರಜ ತೀವ್ರ ಭಾವುಕರಾಗಿದ್ದರು. ತನ್ನಜ್ಜಿಯ ಕಂಪನಿಯ ಕುರಿತು ಸವಿಸ್ತಾರವಾಗಿ ವಿವರಿಸಿದ್ದ ಅಧ್ಯಯನಶೀಲ ಅನಾಮಿಕ ಭಾಷಣಕಾರರ ಮಾತುಗಳಿಂದ ಉಬ್ಬಿಹೋಗಿದ್ದ ಸುಮಾಳಿಗೆ ಏನೋ ಹೇಳಿಕೊಳ್ಳಬೇಕೆಂಬ ಉಮೇದು. “ಆ ಉಮೇದಿಗೆ ಉತ್ತರವಾಗಿ ಸ್ಪಂಧಿಸುವವನೆಂದರೆ ಕ್ಲಾಸ್‌ಮೇಟ್ ಸೂರಜ್ ಮಾತ್ರ!” ಎಂದು ಮನದಲ್ಲಿಯೇ ಯೋಚಿಸುತ್ತಾ ಸೂರಜನೆಡೆಗೆ ನೋಡಿದಳು. “ಲೇಟಾದರೆ ಪಿಜಿಯಲ್ಲಿ ಊಟ ಸಿಗೋಲ್ಲಾ, ನಾನು ಬರಲಾ ಸುಮಾ?” ಎಂದು ತನ್ನ ಇಲೆಕ್ಟ್ರಿಕ್ ಸ್ಕೂಟಿ ಸ್ಟಾರ್ಟ ಮಾಡಲು ಬೆರಳಿನಿಂದ ಪಾಸ್ ವರ್ಡ್ ಕುಟ್ಟಿದ. “ಸ್ವಲ್ಪ ತಾಳೋ” ಎಂದು ಹತ್ತಿರ ಹೋದಳು ಸುಮಾ. “ಇವತ್ತು ನಮ್ಮಜ್ಜಿಯ ಕಂಪನಿಯ ಕುರಿತು ಮತ್ತಷ್ಟು ವಿಷಯ ವಿನಿಮಯ ಮಾಡಿಕೊಳ್ಳೋಣ. ಮುಂದಿನ ವಾರದ ಅಸೈನಮೆಂಟಿಗೆ ಇದೇ ಸರಿಯಾದ ವಿಷಯ ಕಣೋ” ಎಂದು ಆತನ ಸ್ಕೂಟಿಯನ್ನೇರುತ್ತಾ, “ಮನೆಯಲ್ಲಿ ಎಲ್ಲರೂ ರಿಲೇಟಿವ್ಸ್ ವೆಡ್ಡಿಂಗ್ ಆನಿವರ್ಸರಿಗೆ ಹೋಗಿದ್ದಾರೆ. ಮರಳುವುದು ಎರಡು ದಿನವಾಗಬಹುದು. ನಮ್ಮ ಮನೆಯಲ್ಲಿ ಚರ್ಚಿಸೋಣ ಬಾ” ಎಂದು ಹೇಳುತ್ತಾ ಆತನ ಹೆಗಲ ಮೇಲೆ ಕೈಹಾಕಿ ಕುಳಿತಳು.
ಪ್ರಿಜ್‌ನಲ್ಲಿದ್ದ ಊಟವನ್ನು ಬಿಸಿ ಮಾಡಿ ಇಬ್ಬರೂ ಚೆನ್ನಾಗಿ ಊಟ ಮಾಡಿ, ಚರ್ಚೆಗಿಳಿದರು. ಸೂರಜನಿಗೆ ರಂಗಭೂಮಿಯ ಕುರಿತು ತೀವ್ರ ಆಸಕ್ತಿ ಮತ್ತು ಕುತೂಹಲ. ಸುಮಾಳ ಮನೆಯಲ್ಲಿಯ ಪುಸ್ತಕ ಸಂಗ್ರಹದಲ್ಲಿ ಸಿಂಹಪಾಲು ರಂಗಭೂಮಿಗೆ ಸಂಬಂಧಿಸಿದ ಪುಸ್ತಕಗಳಿರುವುದನ್ನು ಸೂರಜ್ ನೋಡುತ್ತಿರುವುದನ್ನು ಗಮನಿಸಿದಳು ಸುಮಾ. “ನಮ್ಮ ಅಜ್ಜಿಯ ಕಂಪನಿಯ ಕುರಿತು ಯಾವುದೇ ಪುಸ್ತಕ ಎಲ್ಲಿಯೇ ಪ್ರಕಟವಾಗಲಿ, ಕೊಂಡು ತಂದು ಓದಿ ಮನೆಯಲ್ಲಿಡುವುದು ನಮ್ಮ ಕಾಕಾನ ಅಭ್ಯಾಸ” ಎಂದು ವಿವರಿಸಿದಳು. “ಕಾಕಾ ಅಂದ್ರೆ ಯಾರು ?” ಕುತೂಹಲದಿಂದ ಕೇಳಿದನು. “ಕಂಪನಿ ಕಟ್ಟಿದ್ದ ನಮ್ಮಜ್ಜಿಯ ಪ್ರೀತಿಯ ಕೊನೆಯ ಕುವರ” ಎಂದುತ್ತರಿಸಿದಳು. ಆ ಕಡೆ ಊಟದ ನಂತರ ಎಲ್ಲವನ್ನೂ ಶುಚಿಗೊಳಿಸುವಲ್ಲಿ ನಿರತಳಾಗಿದ್ದಳು ಸುಮಾ. ಈ ಕಡೆ ಸೂರಜ್ ಪುಸ್ತಕವೊಂದನ್ನು ತೆಗೆದು ಕಣ್ಣಾಡಿಸತೊಡಗಿದನು.
ಆ ಪುಸ್ತಕದಲ್ಲಿಯ ಪೋಟೋ ಮತ್ತದರ ಮಾಹಿತಿ ಗಮನ ಸೆಳೆಯಿತು. “ಅಣ್ಣ-ತಂಗಿ” ನಾಟಕ ನಿರಂತರ ಒಂದು ವರ್ಷ ಪ್ರದರ್ಶನ ಮತ್ತು ಯಶಸ್ವಿ ಪ್ರದರ್ಶನದ ೩೬೫ನೇಯ ಪ್ರಯೋಗದ ಸಂದರ್ಭದ ಕಾರ್ಯಕ್ರಮದಲ್ಲಿ ನಾಗರಿಕ ಸನ್ಮಾನದ ಕುರಿತಾಗಿತ್ತು. ಅಣ್ಣನ ಪಾತ್ರದಲ್ಲಿ ತನ್ನ ತಂದೆ ಮತ್ತು ತಂಗಿಯ ಪಾತ್ರದಲ್ಲಿ ಸುಮಾಳ ತಾಯಿ ಪಾತ್ರವಹಿಸಿದ್ದು, “ತಂದೆಯ ಸ್ಥಾನ ತುಂಬಿದ ಅಣ್ಣ ಮತ್ತು ಕೊಟ್ಟ ಮನೆಯನ್ನು ಬೆಳಗಿ, ತವರುಮನೆಗೆ ಕೀರುತಿ ತಂದ ತಂಗಿ, ಇದ್ದರೆ ಇರಬೇಕು ಇಂತಹ ಅಣ್ಣ-ತಂಗಿ” ಎಂದು ಪ್ರಶಂಸೆಯನ್ನು ಪಡೆದ ಕಲಾವಿದರಾಗಿರುವ ವಿಷಯ ಇಲ್ಲಿಯವರೆಗೆ ತನ್ನ ತಂದೆ ಸೇರಿದಂತೆ ಯಾರೂ ಹೇಳಿರಲಿಲ್ಲ. ತನ್ನ ತಂದೆಯ ಕುರಿತು ಆತನಿಗೆ ಅಭಿಮಾನ ಹಚ್ಚಾಯಿತು. ಹೀಗೆ ಗಮನಿಸುತ್ತಿರುವಾಗ ಸುಮಾ ಬಂದಳು. “ಹೌದು ಸೂರಜ್, ನಮ್ಮಜ್ಜಿ ಕಂಪನಿಯಲ್ಲಿ ನಮ್ಮಮ್ಮನೂ ಪಾತ್ರ ಮಾಡುತ್ತಿದ್ದಳು. “ಅಣ್ಣ-ತಂಗಿ” ನಾಟಕದಿಂದ ನಮ್ಮಮ್ಮನು ಫೇಮಸ್ ಆಗಿದ್ದು. ಆ ನಾಟಕದ ಅಣ್ಣನ ಪಾತ್ರದಾರಿ ಕಲಾವಿದನನ್ನು ಪ್ರತಿವರುಷ ರಾಖಿ ಹಬ್ಬದಲ್ಲಿ ನೆನಪಿಸಿಕೊಂಡು ಕಣ್ಣೀರು ಹಾಕುತ್ತಾಳೆ. ಅಂಥಹ ಅಣ್ಣ ಸಿಗಬೇಕೆಂದರೆ ಪುಣ್ಯ ಮಾಡಿರಬೇಕು ಅಂತ ನೆನಪಿಸಿಕೊಳ್ಳುತ್ತಾಳೆ” ಎಂದು ಮಾಹಿತಿ ವಿವರಿಸಿದಳು. “ಆ ಕಲಾವಿದ ನಮ್ಮಪ್ಪ. ನೋಡಿಲ್ಲಿ” ಎಂದು ತನ್ನ ಮೊಬೈಲ್‌ದಲ್ಲಿದ್ದ ತನ್ನ ತಂದೆಯ ನಾಟಕದ ಪೋಟೋಗಳನ್ನು ತೋರಿಸಿದನು. ಕಣ್ಣರಳಿಸಿ ನೋಡಿದ ಸುಮಾ “ಹಂಗಾದ್ರೆ, ನಮ್ಮಮ್ಮನ ಅಣ್ಣನ ಮಗನೇನೋ ನೀನು?” ಎಂದು ಖುಷಿಯಿಂದ ಹಗ್ ಮಾಡಿದಳು. ಆತನೂ ಅಷ್ಟೇ ಸಂಭ್ರಮದಿಂದ “ಮತ್ತೆ ನೀನು ? ನಮ್ಮತ್ತೆ ಮಗಳಲ್ವಾ?” ಎಂದು ಸೂರಜ್ ನು ಸಹ ಹಗ್ ಮಾಡಿದನು. ಸುಮಾಳಿಗೆ ಪೋನ್ ಕಾಲ್ ಬಂದಾಗಲೇ ಬಿಗಿದಪ್ಪಿಕೊಂಡು ನಿಂತಿದ್ದ ಇಬ್ಬರೂ ಸಡಿಲಗೊಂಡರು. ಪೋನ್ ಕಾಲ್ ಕಟ್ ಮಾಡಿದ ಸುಮಾ, ಸೂರಜ್‌ನನ್ನು “ಈ ಖುಷಿಯನ್ನು ಸಂಭ್ರಮಿಸೋಣ ಬಾ ಹೀಗೆ…” ಎಂದು ಎಳೆದುಕೊಂಡು ಒಳಗಿನ ರೂಮಿಗೆ ಹೋಗಿ ಲೈಟ್ ಆಪ್ ಮಾಡಿದಳು.
ಮದುವೆ ವಾರ್ಷಿಕೋತ್ಸವ ಕಾರ್ಯಕ್ರಮ ಆಚರಿಸಿಕೊಳ್ಳುತ್ತಿದ್ದ ಹಿರಿಯ ಅಭಿಮಾನಿಯೊಬ್ಬರು ಅಜ್ಜಮ್ಮನ ಕಂಪನಿಯ ಕಲಾವಿದರೆಲ್ಲರಿಗೂ ಆಹ್ವಾನಿಸಿ, “ಅಣ್ಣ-ತಂಗಿ” ನಾಟಕ ಶೋ ಆಯೋಜಿಸಿದ್ದರು. ಖುಷಿಯಿಂದ ಆಗಮಿಸಿ, ರೆಡಿಯಾಗಿದ್ದ ಕಲಾವಿದರೆಲ್ಲರೂ ಅಜ್ಜಮ್ಮನ ಕಂಪನಿಯ ದಿನಗಳ ಸವಿನೆನಪುಗಳೊಂದಿಗೆ ನಾಟಕ ಆರಂಭಿಸಿದ್ದರು. ಮದುವೆ ಮಾಡಿಕೊಟ್ಟು ತಂಗಿಯನ್ನು ಕಳಿಸುವ ಅಣ್ಣ, ತವರುಮನೆಯಿಂದ ಹೊರಡುವ ತಂಗಿಯ ಭಾವನಾತ್ಮಕ ಅಭಿನಯವು ಎಲ್ಲರನ್ನು ಕಣ್ಣೀರು ಹಾಕುವಂತೆ ಮಾಡಿತ್ತು. “ತಂಗೆಮ್ಮ, ಬೇಗನೆ ಮುದ್ದಾದ ಹೆಣ್ಣು ಮಗುವನ್ನು ಹೆತ್ತು ಕೊಡು, ಸೊಸೆಯಾಗಿ ಮನೆ ತುಂಬಿಸಿಕೊಳ್ತೀನಿ” ಎನ್ನುವ ಅಣ್ಣನ ಮಾತಿಗೆ “ಆಯ್ತಣ್ಣ, ನಿನ್ನಾಶೆಯಂತಾಗಲಿ” ಎಂದಾಗ ಲೈಟ್ ಆಪ್, ಪರದೆ ಸರಿದಿತ್ತು. ಅಣ್ಣ-ತಂಗಿ ಇಬ್ಬರೂ ಸೈಡ್ ವಿಂಗ್ ಗೆ ಬಂದು, “ಅಣ್ಣ, ನಾಟಕದ ಡೈಲಾಗಲ್ಲಿ ಮಾತ್ರ ನನ್ಮಗಳನ್ನು ಸೊಸೆಯಾಗಿ ಮನೆ ತುಂಬಿಸಿಕೊಳ್ತೀನಂತ ಹೇಳಬೇಡ. ನಿಜವಾಗ್ಲೂ ನಿಮ್ಮ ಸೊಸೆ ಈಗಾಗಲೇ ಡಿಗ್ರಿ ಪೈನಲ್ ಓದುತ್ತಿದ್ದಾಳೆ. ಓದು ಮುಗಿಯುತ್ತಿದ್ದಂತೆ ನಿಮ್ಮ ಮಗ ರೆಡಿಯಿದ್ರೆ ನಿಮ್ಮ ಮನೆ ತುಂಬಿಸ್ಕೊಳ್ಳಿ. ಮೂವ್ವತ್ತು ವರುಷದಿಂದ ಈ ನಾಟಕದಲ್ಲಿ ಮಾತ್ರ ಅಣ್ಣ-ತಂಗಿಯಾಗಿರದೇ ನಿಜ ಜೀವನದಲ್ಲಿಯೂ ಅಣ್ಣ-ತಂಗಿಯರಾಗಿ ಬೀಗರಾಗೊಣ” ಎಂದು ಒಂದೇ ಉಸಿರಿನಲ್ಲಿ ಹೇಳಿದ್ದಳು. “ನಾಟಕ ಮುಗಿಯಲಿ, ಯೋಚಿಸೋಣ. ತಾಳಮ್ಮ” ಎಂದು ಹೇಳಿ ಮುಂದಿನ ದೃಶ್ಯಕ್ಕೆ ಅಣಿಯಾದರು.
ಎದ್ದೇಳಲಾಗದೇ ಸುಸ್ತಾದಂತೆನಿಸಿದ ಸೂರಜ್‌ನು ಲೈಟ್ ಆನ್ ಮಾಡಿದ ಸುಮಾಳನ್ನು ನೋಡಿದ. ಎಂದೂ ಆಗದ ಏನೋ ಹೊಸ ಖುಷಿಯ ಅನುಭವ ಕತ್ತಲಲ್ಲಿ ಆಗಿದ್ದನ್ನು ನೆನಪಿಸಿಕೊಂಡು ಮುಖ ಮುಚ್ಚಿಕೊಂಡ ಸುಮಾ, ಬೆರಳುಗಳ ಸಂಧಿಯಿಂದಲೇ ಸೂರಜನನ್ನು ನೋಡಿದಳು. ಸೂರಜ್ ಏನೆಂಬಂತೆ ಹುಬ್ಬು ಹಾರಿಸಿ ಅವಳೆಡೆಗೆ ನೋಡಿದಾಗ ಅವಳೂ ಕಣ್ಣು ಮಿಟುಕಿಸಿ “ಹಾಂ… ಯಾರಾದರೂ ಬಂದರೆ ಗತಿಯೇನು?” ಎಂದು ಹೇಳುತ್ತಾ ವಾಸ್ತವಕ್ಕೆ ಬಂದವಳಾಗಿ, ಹಾಸಿಗೆ ಸರಿಪಡಿಸಿದಳು. ನಂತರ ಇಬ್ಬರೂ ಏನೂ ನಡದೆಯಿಲ್ಲವೆಂಬಂತೆ ಪ್ರೇಶ್ ಅಪ್ ಆಗಲು ಅಣಿಯಾದರು.
ಪ್ರೇಕ್ಷಕರೆಲ್ಲರೂ ಕಣ್ಣೀರಾಗುವಂತೆ ಭಾವನಾತ್ಮಕ ಅಭಿನಯದ ನಾಟಕ ಶೋ ಮುಗಿಸಿದ ಅಣ್ಣ-ತಂಗಿ ಇಬ್ಬರೂ ಬೀಗರಾಗುವ ಸಂಭ್ರಮದ ಗಳಿಗೆಯನ್ನು ಕಲ್ಪಿಸಿಕೊಳ್ಳುತ್ತಾ ಮನೆ ಕಡೆಗೆ ಮರಳಲು ಅಣಿಯಾಗುತ್ತಿದ್ದರು. ನಾಟಕದ ಕೊನೆಯ ಸುಖಾಂತ್ಯ ದೃಶ್ಯದ ನಂತರ “ಕರುಣಿಸೋ ಗಾನಯೋಗಿ ಶಿವಸ್ವರೂಪಿ ನಾದಭ್ರಹ್ಮ ಗುರು ಪುಟ್ಟರಾಜ…ಕರುನಾಡ ಕಲಾರಸಿಕರ ಹೃದಯ ಗದ್ದುಗೆ ಏರಿಕುಳಿತವರೋ… ಅಂಧರಿಗೆ ಜ್ಞಾನನಿಧಿ ರಕ್ಷಿಸು ಗದುಗಿನ ಗಾನ ಗಂಧರ್ವರೇ…” ಮಂಗಳ ಗೀತೆಯೊಂದಿಗೆ ಮಂಗಳ ವಾದ್ಯಗಳು ಮೊಳಗತೊಡಗಿದವು.
-ಸಿದ್ಧರಾಮ ಹಿಪ್ಪರಗಿ (ಸಿಹಿ), ಧಾರವಾಡ.
ಈ ಜೀವನಾನೇ ಒಂದು ನಾಟಕ. ಅಂತಹ ನಾಟಕಗಳನ್ನು ನಿರ್ಮಾಣ ಮಾಡಿ ಆಡಿಸಿದ ಅನುಭವಿಕರು. ಆ ನಾಟಕದ ಪಾತ್ರಗಳು ನಿಜಜೀವನದಲ್ಲಿಯೂ ಬಣ್ಣ ತುಂಬಿಕೊಂಡು ಸಜೀವವಾದಾಗ ಬದುಕು ಸಾರ್ಥಕವೆನಿಸುತ್ತದೆ. ನಿಮ್ಮ ಅಣ್ಣ ತಂಗಿ ಕಥೆ ಸ್ವಾರಸ್ಯಕರವಾಗಿದೆ ಸರ್
…. ಶ್ರೀಧರ ಗಸ್ತಿ, ಧಾರವಾಡ
(ವಾಟ್ಸಾಪ್ ಮೆಸೇಜ್ ದಿಂದ)
ಚೆಂದದ ಕಥೆ