ಅಂಕ ಪ್ರಯಾಣ: ನಾಗಸಿಂಹ ಜಿ ರಾವ್

ಸಿಂಹಾವಲೋಕನ 3

“ಪುಲಪೇಡಿ” ಎಂಬ ಸಮುದಾಯ ತಂಡದ ನಾಟಕದಲ್ಲಿ ಭಾಗವಹಿಸಿದ ನಂತರ, ನನ್ನ ಶಾರದಾವಿಲಾಸ ಕಾಲೇಜಿನ ಸಹಪಾಠಿಗಳು ಮತ್ತು ಅಧ್ಯಾಪಕರೆಲ್ಲರೂ ನನ್ನನ್ನು ಗುರುತಿಸತೊಡಗಿದರು. “ಮುಂದಿನ ನಾಟಕ ಯಾವಾಗ?” ಎಂಬ ಪ್ರಶ್ನೆಗಳು ನನ್ನನ್ನು ಕಾಡತೊಡಗಿದವು. ಆದರೆ, ಆ ಪ್ರಶ್ನೆಗೆ ಉತ್ತರವೇ ನನಗೆ ತಿಳಿದಿರಲಿಲ್ಲ. ಒಂದು ದಿನ ಕಾಲೇಜ್ ಮುಗಿಸಿಕೊಂಡು ಮನೆಗೆ ಹೋಗುವಾಗ, ಚಾಮುಂಡಿಪುರಂ ವೃತ್ತದಲ್ಲಿ ಪಾಪು ಎದುರಾದರು. “ಏನ್ರಿ, ಹೇಗಿದ್ದೀರಾ? ನಾಟಕ ಮಾಡ್ತೀರಾ?” ಎಂದು ಕೇಳಿದರು. “ಹೂ, ಮಾಡ್ತೀನಿ, ” ಎಂದೆ. “‘ಬೆಲೆ ಇಳಿದಿದೆ’ ಎಂಬ ಬೀದಿನಾಟಕದ ರಿಹರ್ಸಲ್ ನಾಳೆಯಿಂದ ಶುರು. ಸಂಜೆ 5 ಗಂಟೆಗೆ ವಿದ್ಯಾರಣ್ಯಪುರಂನ ಪಾರ್ಕ್ನ ಹತ್ತಿರ ಇರುವ ಟೆಲಿಫೋನ್ ಬೂತ್ಗೆ ಬಾ, ” ಎಂದರು.

“ಬೀದಿನಾಟಕ?” ಈ ಪದವೇ ನನಗೆ ಹೊಸದಾಗಿತ್ತು. ಏನದು? ಎಲ್ಲಿ ಮಾಡೋದು? ಹೇಗೆ? ಒಂದೇ ಸಮನೆ ನೂರಾರು ಪ್ರಶ್ನೆಗಳು ತಲೆಯಲ್ಲಿ ಕುಣಿಯತೊಡಗಿದವು. ನಾನೆಂದೂ ಬೀದಿನಾಟಕವನ್ನು ನೋಡಿರಲಿಲ್ಲ, ಕೇಳಿಯೂ ಇರಲಿಲ್ಲ. ಮರುದಿನ ಮಧ್ಯಾಹ್ನ 4 ಗಂಟೆಗೆ ವಿದ್ಯಾರಣ್ಯಪುರಂನ ಪಾರ್ಕ್ನ ಹತ್ತಿರದ ಟೆಲಿಫೋನ್ ಬೂತ್ಗೆ ಹೋದೆ. ಆ ಬೂತ್ ನಡೆಸುತ್ತಿದ್ದ ವಿಜಯಕುಮಾರ್ ಹಸನ್ಮುಖಿ ಕೂಡ ರಂಗಾಸಕ್ತರಾಗಿದ್ದರು. 5 ಗಂಟೆಗೆ ಪಾಪು, ನಾಲ್ಕೈದು ಜನರೊಂದಿಗೆ ಬಂದರು. ಅವರ ಜೊತೆಗಿದ್ದವರನ್ನು ಪರಿಚಯಿಸಿದರು: ಹೆಬ್ಬಾಲೆ ಶ್ರೀನಿವಾಸ್, ಧೀರಾನಾಥ್, ನಾಗೇಶ್, ನಾಗಭೂಷಣ, ಶಿವಾಜಿರಾವ್ ಜಾದವ್, ಮತ್ತು ಕಾಶಿ ಕೆರೆಹಳ್ಳಿ. ಶಿವಾಜಿರಾವ್ ಮತ್ತು ಕಾಶಿಯವರನ್ನು ನಾನು ಈಗಾಗಲೇ ತಿಳಿದಿದ್ದೆ. ಎಲ್ಲರೂ ಸೈಕಲ್ಗಳಲ್ಲಿ ಬಂದಿದ್ದರು. ಒಟ್ಟಾಗಿ ಚಾಮುಂಡಿ ಬೆಟ್ಟದ ಕಡೆಗೆ ಸೈಕಲ್ ತುಳಿದೆವು.

ನಾವು ತಲುಪಿದ್ದು ಚಾಮುಂಡಿಬೆಟ್ಟ ಮತ್ತು ಚಾಮುಂಡಿಪುರಂ ಮಧ್ಯದ ಒಂದು ಬಯಲು ಪ್ರದೇಶ. ಆ ಜಾಗದಲ್ಲಿ ಸಮಾದಿಗಳು, ಹಳ್ಳಗಳು, ಮತ್ತು ಪೊದೆಗಳಿದ್ದವು. ಸಮವಾದ ಒಂದು ಸ್ಥಳದಲ್ಲಿ ಸೈಕಲ್ಗಳನ್ನು ವೃತ್ತಾಕಾರವಾಗಿ ಇರಿಸಿ, ಮಧ್ಯದಲ್ಲಿ ಕುಳಿತೆವು. ಪಾಪು “ಬೆಲೆ ಇಳಿದಿದೆ” ಎಂಬ ನಾಟಕದ ಬಗ್ಗೆ ವಿವರಿಸಿದರು. ಈ ನಾಟಕವನ್ನು ಬರೆದವರು ಪ್ರೊಫೆಸರ್ ಎಂ ಯಸ್ ವೇಣುಗೋಪಾಲ್. ಇದೊಂದು ವಿಡಂಬನಾತ್ಮಕ ನಾಟಕವಾಗಿದ್ದು, ಬೆಲೆ ಏರಿಕೆಯ ಹಿಂದಿನ ವಂಚಕರ ಮುಖವಾಡವನ್ನು ಕಳಚುವಂತಹದ್ದು. ನಾಟಕದಲ್ಲಿ ಹಲವಾರು ಹಾಡುಗಳಿದ್ದವು, ಮತ್ತು ಇವೆಲ್ಲವನ್ನೂ ರಚಿಸಿದ್ದು ಪ್ರೊಫೆಸರ್ ಎಂ ಯಸ್ ವೇಣುಗೋಪಾಲ್. ಅವರು ನಾಟಕದ ದಿನ ಬರುತ್ತಾರೆ, ಆದರೆ ರಿಹರ್ಸಲ್ಗೆ ಬರುವುದಿಲ್ಲ ಎಂದು ತಿಳಿಯಿತು. ರಿಹರ್ಸಲ್ ಸಮಯದಲ್ಲಿ ಪಾಪು ಪ್ರತಿಯೊಂದು ವಿಷಯವನ್ನು ಸೂಕ್ಷ್ಮವಾಗಿ ವಿವರಿಸುತ್ತಿದ್ದರು: ವೃತ್ತಾಕಾರದಲ್ಲಿ ಚಲಿಸುವುದು, ದ್ವನಿಯ ಏರಿಳಿತ, ಪ್ರೇಕ್ಷಕರೊಡನೆ ಸಂವಹನ, ಮತ್ತು ಹಾಡುಗಳಿಗೆ ಅಭಿನಯ. ಇವೆಲ್ಲವೂ ನನಗೆ ಹೊಸ ಕಲಿಕೆಯಾಗಿತ್ತು. ಆದರೆ, ಬೀದಿನಾಟಕದ ಬಗ್ಗೆ ಒಂದು ಆತಂಕವೂ ಇತ್ತು. ರಂಗಸ್ಥಳದಲ್ಲಿ ಪ್ರೇಕ್ಷಕರು ಒಂದೇ ಕಡೆ ಇರುತ್ತಾರೆ, ಆದರೆ ಬೀದಿನಾಟಕದಲ್ಲಿ ಸುತ್ತಲೂ ಜನರಿರುತ್ತಾರೆ. ಎಲ್ಲರ ದೃಷ್ಟಿಯೂ ನಮ್ಮ ಮೇಲೆ. ಸಂಭಾಷಣೆ ಮರೆತರೆ? ತಪ್ಪಾದರೆ? ಯಾವುದಕ್ಕೂ ಕ್ಷಮೆಯಿಲ್ಲ !

ನಾಟಕ ಪ್ರದರ್ಶನದ ಹಿಂದಿನ ದಿನ ಟೀಮ್ ಮೀಟಿಂಗ್ ತಂಡಕ್ಕೆ ಏನು ಹೆಸರು ಇಡುವುದು ಎಂಬ ಚರ್ಚೆ ? ಎಲ್ಲರೂ ಒಂದೊಂದು ಹೆಸರು ಸೂಚಿಸಿದೆವು. ಕೊನೆಗೆ ಪಾಪು ಸೂಚಿಸಿದ ”ಅಂಕ ‘ ಎಲ್ಲರಿಗೂ ಒಪ್ಪಿಗೆಯಾಯಿತು. ತಂಡದ ಹೆಸರು ಅಂಕ ನಾವೆಲ್ಲರೂ ”ಅಂಕ ಕಲಾವಿದರು ”
ನಾಟಕದ ದಿನ ಬಂದಿತು. ಚಾಮುಂಡಿಪುರಂನ ಪಾರ್ಕ್ ನಲ್ಲಿ ಸುಮಾರು ಒಂದು ಸಾವಿರ ಪ್ರೇಕ್ಷಕರು ಜನಸಾಗರವಾಗಿ ಗುಂಡಿಗೆ ಸೇರಿದ್ದರು. ನನ್ನ ಹಾಗೂ ತಂಡದ ಎಲ್ಲರ ಕುಟುಂಬವೂ ಬಂದಿತ್ತು—ಅಮ್ಮ, ಅಪ್ಪ, ಅಕ್ಕ, ತಮ್ಮ, ಎಲ್ಲರೂ. ಅವರೆದುರಿನ ಅಭಿನಯದ ಒತ್ತಡ ನನ್ನ ಆತಂಕವನ್ನು ಇನ್ನಷ್ಟು ಹೆಚ್ಚಿಸಿತು. “ನಾನು ಸಂಭಾಷಣೆ ಮರೆತರೆ? ಜನ ಕಿರಿಕಿರಿಯಿಂದ ಕೂಗಾಡಿದರೆ?” ಎಂಬ ಭಯ ತಲೆಯಲ್ಲಿ ಕಾಡತೊಡಗಿತು. ಆದರೆ, ರಿಹರ್ಸಲ್ನ ಸಮಯದಲ್ಲಿ ಪಾಪುರವರ ತರಬೇತಿಯ ಆತ್ಮವಿಶ್ವಾಸ ನನಗೆ ಧೈರ್ಯ ತಂದಿತು.

ನಾಟಕದ ದಿನ ಪ್ರೊಫೆಸರ್ ಎಂ ಯಸ್ ವೇಣುಗೋಪಾಲ್ ಅವರು ಸ್ಥಳಕ್ಕೆ ಆಗಮಿಸಿದರು. ಅವರ ಆಗಮನವೇ ಒಂದು ಉತ್ಸಾಹವನ್ನು ತಂದಿತು. ಸರಳವಾದ ಉಡುಗೆಯಲ್ಲಿ, ಆದರೆ ತೀಕ್ಷ್ಣವಾದ ಮಾತುಗಳು, ಅವರು ನಮ್ಮೆಲ್ಲರೊಂದಿಗೆ ಕೆಲವು ನಿಮಿಷ ಮಾತನಾಡಿದರು. “ನಾಟಕ ಎಂಬುದು ಕೇವಲ ಅಭಿನಯವಲ್ಲ, ಜನರಿಗೆ ಸಂದೇಶವನ್ನು ತಲುಪಿಸುವ ಕಲೆ. ನೀವು ಇಂದು ಜನರ ಮನಸ್ಸಿಗೆ ಮುಟ್ಟುವಿರಿ. ಧೈರ್ಯವಾಗಿ, ಆತ್ಮವಿಶ್ವಾಸದಿಂದ ನಿಮ್ಮ ಪಾತ್ರವನ್ನು ನಿಭಾಯಿಸಿ, ” ಎಂದು ಅವರು ಹೇಳಿದ ಮಾತುಗಳು ನನ್ನ ಆತಂಕವನ್ನು ಕ್ಷಣಕಾಲ ಮರೆಸಿತು. ಅವರ ಮಾತುಗಳಲ್ಲಿ ಒಂದು ರೀತಿಯ ಶಕ್ತಿಯಿತ್ತು, ಜನರಿಗೆ ಸತ್ಯವನ್ನು ತಿಳಿಸುವ ಉತ್ಸಾಹವಿತ್ತು.

ಹಾಡಿನ ಮೂಲಕ ನಾಟಕ ಆರಂಭವಾಯಿತು. ಪಾರ್ಕಿನಲ್ಲಿ ವೃತ್ತಾಕಾರದಲ್ಲಿ ನಿಂತು, ಸುತ್ತಲಿನ ಜನರ ಗಮನವನ್ನು ಸೆಳೆಯುತ್ತಾ, ನಾವು “ಬೆಲೆ ಇಳಿದಿದೆ” ಎಂಬ ವಿಡಂಬನಾತ್ಮಕ ಸಂದೇಶವನ್ನು ತಿಳಿಸತೊಡಗಿದೆವು. ಹಾಡುಗಳು, ಚಲನೆಗಳು, ಮತ್ತು ಸಂಭಾಷಣೆಗಳು ಜನರನ್ನು ತಕ್ಷಣವೇ ಸೆಳೆದವು. ಪ್ರೇಕ್ಷಕರ ಕೂಗಾಟ, ಚಪ್ಪಾಳೆ, ಮತ್ತು ಕೆಲವರ ಗಂಭೀರವಾದ ಮೌನ—ಇವೆಲ್ಲವೂ ನಾಟಕದ ಸಂದೇಶವನ್ನು ಅವರು ಗಂಭೀರವಾಗಿ ಸ್ವೀಕರಿಸುತ್ತಿದ್ದಾರೆ ಎಂಬುದನ್ನು ತೋರಿಸಿತು. “ಬೆಲೆ ಏರಿಕೆಯ ಹಿಂದಿನ ವಂಚನೆ” ಎಂಬ ನಾಟಕದ ಸಂದೇಶವು ಜನರ ಮನಸ್ಸಿಗೆ ಮುಟ್ಟಿತು ಅನಿಸಿತು. ಕೆಲವರು ನಗುತ್ತಿದ್ದರೆ, ಇನ್ನೂ ಕೆಲವರು ಗಂಭೀರವಾಗಿ ಯೋಚಿಸತೊಡಗಿದರು.

ನನ್ನ ಕುಟುಂಬದವರ ಕಣ್ಣುಗಳು ನನ್ನ ಮೇಲೆ ನೆಟ್ಟಿದ್ದವು. ಅಮ್ಮನ ಕಣ್ಣುಗಳಲ್ಲಿ ಹೆಮ್ಮೆ, ಅಪ್ಪನ ಮುಖದಲ್ಲಿ ಸಂತೋಷದ ಒಂದು ಚಿರಪರಿಚಿತ ಮಂದಹಾಸ, —ಇವೆಲ್ಲವೂ ನನಗೆ ಒಂದು ರೀತಿಯ ಶಕ್ತಿಯನ್ನು ತುಂಬಿತು. ಒಂದು ಕ್ಷಣವೂ ಸಂಭಾಷಣೆಯನ್ನು ಮರೆಯದೆ, ನಾನು ಪಾತ್ರಕ್ಕೆ ಜೀವ ತುಂಬಿದೆ.

ನಾಟಕ ಮುಗಿದಾಗ, ಸುಮಾರು ಸಾವಿರ ಪ್ರೇಕ್ಷಕರ ಚಪ್ಪಾಳೆಯ ಗುಂಡಿಗೆಯೇ ಗುಂಗಿತು. ಕೆಲವರು ನಮ್ಮ ಬಳಿಗೆ ಬಂದು, “ನಿಮ್ಮ ನಾಟಕ ತುಂಬಾ ಚೆನ್ನಾಗಿತ್ತು, ಸತ್ಯವನ್ನು ತೋರಿಸಿತು, ” ಎಂದು ಮೆಚ್ಚುಗೆ ಸೂಚಿಸಿದರು. ಕೆಲವರು ಬೆಲೆ ಏರಿಕೆಯ ಬಗ್ಗೆ ತಮ್ಮ ಕಥೆಗಳನ್ನು ಹಂಚಿಕೊಂಡರು. ನನ್ನ ಕುಟುಂಬದವರು ನನ್ನ ಬಳಿಗೆ ಬಂದು, “ನೀನು ಇಂಥದ್ದರಲ್ಲಿ ಭಾಗವಹಿಸುತ್ತೀಯಾ ಎಂದು ತಿಳಿದಿರಲಿಲ್ಲ!” ಎಂದು ಹೆಮ್ಮೆಯಿಂದ ಹೇಳಿದರು. ನಾವು ಪೋಷಕರಿಂದ ಹಣ ಸಂಗ್ರಹ ಮಾಡಿದೆವು.

ಪ್ರೊಫೆಸರ್ ಎಂ ಯಸ್ ವೇಣುಗೋಪಾಲ್ ಅವರು ನಮ್ಮೆಲ್ಲರನ್ನೂ ಒಟ್ಟಿಗೆ ಕರೆದು, “ನೀವು ಜನರಿಗೆ ಯೋಚಿಸುವಂತೆ ಮಾಡಿದ್ದೀರಿ. ಇದು ಬೀದಿನಾಟಕದ ಶಕ್ತಿ, ” ಎಂದು ಹೇಳಿದರು. ಅವರ ಈ ಮಾತುಗಳು ನನಗೆ ಒಂದು ಹೊಸ ದೃಷ್ಟಿಕೋನವನ್ನು ನೀಡಿತು. ಬೀದಿನಾಟಕವು ಕೇವಲ ಕಲೆಯಲ್ಲ, ಜನರೊಂದಿಗೆ ಸಂವಾದ ನಡೆಸುವ, ಸಮಾಜದ ಸಮಸ್ಯೆಗಳನ್ನು ಎತ್ತಿಹಿಡಿಯುವ ಒಂದು ಶಕ್ತಿಶಾಲಿ ಮಾಧ್ಯಮ ಎಂದು ಅರಿವಾಯಿತು.

-ನಾಗಸಿಂಹ ಜಿ ರಾವ್

ಕನ್ನಡದ ಬರಹಗಳನ್ನು ಹಂಚಿ ಹರಡಿ
5 2 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x