ಹೌದು, ನಾನು ಹೀಗೇನೆ. ತಿಳಿದೋ ತಿಳಿಯದೆಯೋ ನನ್ನಿಂದಾದ ಸಣ್ಣ ಪುಟ್ಟ ತಪ್ಪನ್ನೂ ಬೆಟ್ಟದಷ್ಟೆಂದು ಭಾವಿಸಿ ಭಯಭೀತನಾಗುತ್ತೇನೆ. ಅದೆಷ್ಟೋ ಕಾಲ ಒಳಗೊಳಗೇ ನರಳುತ್ತೇನೆ, ನಲುಗುತ್ತೇನೆ. ಇನ್ನೇನಿಲ್ಲ, ತಲೆಯೇ ಹೋಗುತ್ತದೇನೋ ಎನ್ನುವಷ್ಟರ ಮಟ್ಟಿಗೆ ಅದನ್ನೇ ಆಡಿ ಆಡಿ ಎಳೆದಾಡಿ ಹೈರಾಣಾಗುತ್ತೇನೆ. ಆ ಕ್ಷಣಕ್ಕೆ ನನಗೆ ಸರಿತೋರುವ ಅವರಿವರಿಗೆ ಶೃಂಗರಿಸಿ ಶೃಂಗರಿಸಿ ಎಳೆಎಳೆಯಾಗಿ ಈಜಿ ಈಜಿ ಹಂಚಿಕೊಳ್ಳುತ್ತೇನೆ. ಹಂಚಿಕೊಂಡು ಅಲ್ಪ ಸ್ವಲ್ಪ ಉಸಿರೂಯ್ದು ಕೊಳ್ಳುತ್ತೇನೆ. ಮತ್ತೆ ಮತ್ತದೇ ಬೆಂಕಿಯಲ್ಲಿ ಬಿದ್ದು ಒದ್ದಾಡುತ್ತೇನೆ.
ಇದು ನನ್ನ ಬಲಹೀನತೆಯೇ ? ಈ ಕಾರಣಕ್ಕೆ ಆಗಾಗ್ಗೆ ನನ್ನ ಮೇಲೆ ನನಗೇ ಇನ್ನಿಲ್ಲದ ಕುದಿ ಮಹಾ ಅಸಡ್ಡೆ. ಕೆಲವೊಮ್ಮೆ ನನ್ನ ಈ ಗುಣದ ಬಗ್ಗೆ ಹೀಗೂ ಅನಿಸಿದ್ದಿದೆ. ಒಂದು ವೇಳೆ ನನ್ನಲ್ಲಿನ ಈ ಬಗೆಯ ನನ್ನ ತಪ್ಪಿಗೆ ನನ್ನನ್ನೇ ದೂರುವ, ಉಗಿದು ಉಪ್ಪು ಖಾರ ಹಾಕುವ, ಪಶ್ಚಾತ್ತಾಪ ಪಡುವ, ಕಾಲಿಗೆ ಬುದ್ಧಿ ಹೇಳಿಕೊಳ್ಳುವ ಗುಣಗಳಿದ್ದಾವಲ್ಲಾ ಅವು ಏನಾದರೂ ನನ್ನಲ್ಲಿ ಇಲ್ಲದೇ ಹೋಗಿದ್ದರೆ ನಿಜಕ್ಕೂ ನಾನು ಏನಾಗಿರುತ್ತಿದ್ದೆನೋ ? ಇಂದು ನಾಕು ಜನ ಹೇಳುವ ಒಳ್ಳೇ ಮನ್ಷಾ ಒಳ್ಳೇ ಮನ್ಷಾ. ಮಕ್ಕ ಅಂದ್ರ ನೋಡಪ್ಪ ಹಿಂಗಿರಬೇಕು. ಅನ್ನುವ ಬದಲು ಇನ್ನೇನೇನನ್ನುತ್ತಿದ್ದರೋ ಏನು ಕತೆಯೋ ? ನನ್ನ ಈ ಗುಣಗಳೇ ನನ್ನ ಬಲವೇ ? ಒಂದಂತೂ ಸತ್ಯ. ನಾನು ಹೀಗಿರುವುದರಿಂದಲೇ ನನಗೆ ನಾನೆಂದರೆ ಪಂಚಪ್ರಾಣ, ಲವ್ವು.
ಸುಹಾಸ್ ಮಗ್ಗಲು ಬದಲಿಸಿ ನಿಡುಸುಯ್ದ.
ಮನೆಯ ತನ್ನ ಮಹಡಿಯ ಕೋಣೆಯಲ್ಲಿ ಸಿಸ್ಟಂ ಟೇಬಲ್ಲಿನ ಮೇಲೆ ಬೋರಲು ಬಿದ್ದು ಆತ ಉಗ್ರವಾಗಿ ಚಿಂತಿಸುತ್ತಿದ್ದಾನೆ. ಅದು ಇದು ಇರುವುದು ಇಲ್ಲದಿರುವುದನ್ನೆಲ್ಲಾ ತಲೆಗೆ ತುಂಬಿಕೊಂಡು ತನ್ನನ್ನು ತಾನೇ ಶೋಷಿಸಿಕೊಳ್ಳುತ್ತಿದ್ದಾನೆ. ಮೊನ್ನೆ ಅನಿರೀಕ್ಷಿತವೆಂಬಂತೆ ಒಂದು ಘಟನೆ ಸಂಭವಿಸಿತು ! ಅಂದು ಅಮವಾಸ್ಯೆಯಂತೆ, ಎಳ್ಳಮವಾಸ್ಯೆ. ಪಾಂಡವರು ಕೌರವರ ನಡುವೆ ನಡೆದ ಕುರುಕ್ಷೇತ್ರ ಯುದ್ಧದಲ್ಲಿ ಸಾವನ್ನಪ್ಪಿದ ಅವರವರ ಬಂಧು ಮಿತ್ರರಿಗಾಗಿ ಪಿಂಡ ಪ್ರಧಾನವನ್ನು ನೆರವೇರಿಸಿದ ದಿನವಂತೆ. ಅತ್ತೆ ಹೇಳಿದ್ದು, ಸುಹಾಸನ ಅತ್ತೆ. ಈ ಅತ್ತೆ ಇದ್ದಾಳಲ್ಲಾ ಅವಳು ಮಹಾನ್ ಕ್ಯಾಲೆಂಡರ್ ಜ್ಞಾನಿ. ಶ್ರೀ ಶ್ರೀ ಶ್ರೀ ಚಿಕ್ಕತ್ತೆ ಎಂದು ಅವರ ನಾಮಧೇಯ. ಆಕೆ ಸುಹಾಸನ ಅಪ್ಪನಾದ ಶಿವಣ್ಣನ ಚಿಕ್ಕ ತಂಗಿ.
ದಿನ, ವಾರ, ತಿಂಗಳು, ವರ್ಷ ಇವುಗಳ ಬಗ್ಗೆ ಏನೇ ಕೇಳಿ ಯಾವುದನ್ನೇ ಕೇಳಿ ಉರಿ ತಾಕಿದ ಭತ್ತ ಪಟ್ ಪೊಟ್ ಪಟಾರ್ ಎಂದು ಸಿಡಿಯುವಂತೆ ಸಿಡಿಯುತ್ತಾಳೆ. ಈವತ್ತು ಫೆಬ್ರವರಿ ೨೧ ಬುಧವಾರ ಬಿದ್ದದೆ. ೨೦೧೪ ರಲ್ಲಿ ಯಾವ ವಾರ ಬಿದ್ದಿತ್ತು ? ಯಾವ ಯಾವ ವರ್ಷದಲ್ಲಿ ಏಪ್ರಿಲ್ ೧೪ ಶುಕ್ರವಾರ ಬಿದ್ದಿದೆ ?… ಹೀಗೆ ಅದೆಂಥದ್ದನ್ನೇ ಕೇಳಿ ಕ್ಷಣದಲ್ಲೇ ಉತ್ತರ. ಆದರೆ ಒಂದು. ಯಾರು ಏನೇ ಕೇಳಿದರೂ ಕ್ಯಾಲೆಂಡರ್ ಒಳಗೇ ಕೇಳಬೇಕು. ಕ್ಯಾಲೆಂಡರ್‌ನ್ನು ಹೊರತು ಪಡಿಸಿದರೆ ಆಕೆ ಶುದ್ಧ ಲೊಟ ಪಿಟಿ, ಶತ ಡಮ್ಮಿ. ಸುಮ್ಮನೆ ತಮಾಷೆಗೆ ತುಂಬಾ ಸರಳವಾದ, ಉದಾಹರಣೆಗೆ-ನಮ್ಮ ದೇಶದ ಪ್ರಧಾನ ಮಂತ್ರಿ ಯಾರು ? ಎಂದು ಯಾರೋ ಅವಳನ್ನು ಕೇಳಿದರು ಅಂತ ಇಟ್ಟುಕೊಳ್ಳಿ. ಹಾಗೇನಾದರೂ ಕೇಳಿದರೆ ಅವರ ಕತೆ ಮುಗಿದಂತೇ. ಮಾರಮ್ಮ ಮಾರಮ್ಮನ ಅವತಾರ ತಾಳಿ ಬಿಡುತ್ತಾಳೆ!
_ ಐಂಯ್ ಅವನ್ಯಾರಾದ್ರ ನಂಗೇನ ಅವ್ನ ಎಸುರ್ ಕಟ್ಕಂದು ನಂಗ್ಯಾನಾಗ್ಬೇಕಿತ್ತು ಅಂತಿನಿ.
ಕೈಗೆ ಸಿಕ್ಕಿದ ಏನಾದರೂ ಸರಿಯೇ ಪ್ರಶ್ನೆ ಕೇಳಿದವರತ್ತ ಬೀಸಿ, ಬೆನ್ನು ಹತ್ತಿ –
-ಬಾ ನನ್ ಮಗುನ್ ಕೂಸೆ. ನಿನ್ ಯಾಸ್ಗ ನನ್ ದ್ವಾಸ ಉಯ್ಯಾ. ನನ್ ಕೈಗ ಸಿಕ್ಕು ನಿನ್ ಗಾಚಾರ ಬುಡುಸ್ತಿನಿ… ಎನ್ನುತ್ತಾ ಫುಲ್ ರಾಂಗಾಗಿ ಬಿಡುತ್ತಾಳೆ.
ಹೀಗೆ ಅವರಿವರು ಬೇಕಂತಲೇ ಇವಳನ್ನು ಕಿಚಾಯಿಸುವುದಕ್ಕೂ, ಇವಳು ಮಾರಮ್ಮನ ಅವತಾರ ತಾಳಿ ಅವರ ಭೂತ ಬಿಡುಗಡೆ ಮಾಡುವುದಕ್ಕೂ, ಇತ್ತ ಸುಹಾಸನ ತಂಗಿ ಬಿದ್ದು ಬಿದ್ದು ನಗುತ್ತಾ ಮನೆಯನ್ನೆಲ್ಲಾ ಜೊಲ್ಲು ಜೊಲ್ಲಾಗಿಸುವುದಕ್ಕೂ ಸ ರಿ ಯಾ ಗಿ ದೆ. ಇದನ್ನು ನೋಡುತ್ತಾ ನಿಂತುಕೊಳ್ಳುವವರಿಗಂತೂ ಹಬ್ಬವೋ ಹಬ್ಬ ದೊ ಡ್ಡ ಬ್ಬ.
ಆಕೆ ಈ ಎಳ್ಳಮವಾಸ್ಯೆಯ ವಿಚಾರ ಪ್ರಸ್ತಾಪಿಸಿ ಸುಹಾಸನಿಗೆ ಹೀಗೆ ಪುಂಗಿದ್ದಳು.
- ನಿನ್ನ ಟೇಮು
ನಿನ್ನ ಟೇಮು ಅನ್ನದದಲ್ಲ
ಸುಹಾಸ
ಆ ಟೇಮು ಅಂದ್ರ ಆ ಹೊತ್ತು
ಆ ಹೊತ್ತು ಅಂದ್ರ ಆ ಗಳ್ಗ
ಆ ಗಳ್ಗ ಅನ್ನದು
ನಿಂಗ ಚನ್ನಗಿತ್ತು ಬುಡು ಸುಹಾಸ
ಅದು ಚನ್ನಗಿರವತ್ಗೆ
ಅದು ಚನ್ನಗಿರವತ್ಗೆ ಸಣ್ಣದರಲ್ಲಿ ಕಳದೋಯ್ತು
ಇಲ್ಲದಿದ್ದರ
ಇಲ್ಲದಿದ್ದರ ನೋಡು ನನ್ನಳಿಯ ಸುಹಾಸ
ಅದು ಯತ್ಯತ್ತಗ ತಿರಿಕರದೋ
ಅದು ಯಾನ್ಯಾನ್ ಕತ್ ಕತ ಆಗೋಗದೋ
ಥೇಟ್ ಕಣೀ ಹೇಳುವವರ ಧಾಟಿಯಲ್ಲಿ ಆಕೆ ಪುಂಗಿದ್ದ ವಿಚಾರ ಕುಂದಿಹೋಗಿದ್ದ ಸುಹಾಸನ ಮನಸ್ಸಿಗೆ ಎಷ್ಟೋ ಸರಾಗವನ್ನು ತಂದಿದ್ದುಂಟು. ಅಂಥಾ ಕಲೆಗಾರಿ ಅವಳು ಅಂಥಾ ಕಲೆಗಾರಿ.
*
ಅತ್ತೆ – (ನಾಗರಹಾವು ಚಿತ್ರದಲ್ಲಿ ಜಯಂತಿ ತನ್ನ ಪತಿದೇವನನ್ನು ಕೂಗುವ ಪ್ರಕಾರವಾಗಿ)
ಓ ಓ ಓ… ಅಳಿಮಯ್ಯಾ.. ಮಯ್ಯಾ.. ಮಯ್ಯಾ.. ಮಯ್ಯಾ..
ಸುಹಾಸ್ – (ಗಕ್ಕನೆ ಎದ್ದು ಮಹಡಿಯಿಂದಲೇ ಬಾಗಿ ಗಲಿಬಿಲಿಯಿಂದ)
ಏನಾಯ್ತು ಅತ್ತೇ. ಏನ್ ಮಾಡ್ಕೊಂಡ್ಳು ಅವಳು.
ಸರಿಯಾಗಿ ನೋಡ್ಕೊಳೋದಲ್ವಾ ?
- (ಸಹಜವಾಗಿ)
ಬಾ ಕುಸೂ. ವತಾರಯಿಂದ ಅಲ್ಲಿ ಒಬ್ನೇ ಏನ್ಮಾಡಿಯಪ್ಪಾ ? ನಿನ್ ತಂಗಿ ಜ್ವತ್ಗ ಆಡಿ ಆಡಿ ನಂಗು ಸಾಕಾಗೋಯ್ತು. ಬಾ ನೀನಂತ. ಕರೀತಾವ್ಳ.
- (ಸಿಡಿಮಿಡಿಗೊಂಡು)
ಇದನ್ನು ಹೇಳೋಕೇ ಆ ರೇಂಜ್ ಗೆ ಕೂಗಿದ್ದಾ ? ಎದೆ ಝಲ್ ಅಂತು. ಕೇಳಿಸಿಕೊಂಡವರು ಯಾರಿಗೆ ಏನಾಯ್ತಪ್ಪಾ ಅನ್ಕೋಬೇಕು. ತಲೆಹರಟೆ. ನಿಂದು ಯಾವಾಗ್ಲು ಇದ್ದದ್ದೇ ತಾನೆ. ಅದಕ್ಕೆ ಅಪ್ಪ ಹೇಳೋದು ತಲೆಹರಟೆ ಅತ್ತೆ ಎಂದು.
- ಒಡೊ ಒಡೋ ತಲೆಹರಟೆಯೆಂದಡಿಗಡಿಗೆ ನುಡಿಯಬೇಡವೋ ಬೋಂಡ…
(ಬೊಂಡ ಸುಹಾಸನ ಅಡ್ಡ ಹೆಸರು) - ನೋಡು ಇದಕ್ಕೆ ಇದಕ್ಕೆ. ಹೋಗಿ ಚಿಲ್ಡೆçನ್ಸ್ ಪಾರ್ಕೋ, ಪೀಸ್ ಪಾರ್ಕೋ, ಎಂ,ಜಿ,ಎಸ್,ವಿ. ಮೈದಾನವೋ ಎಲ್ಲಿ ಜನ ಸೇರ್ತಾರೋ ಅಲ್ಲಿ ನಿನ್ನ ಬಂಬ್ಡಿ ಬಜಾಯಿಸು ಹೋಗು. ಒಂದಷ್ಟು ಕಾಸಾದರೂ ಸಿಗುತ್ತೆ. ಎನ್ನುತ್ತಾ ಆತ ಕುಳಿತಿದ್ದಲ್ಲಿಗೇ ಹೋಗಿ ಕುಳಿತುಕೊಂಡ. ಇತ್ತ ಅತ್ತೆಯ ಕುಟಾಣಿ ತನ್ನಷ್ಟಕ್ಕೆ ತಾನು ಕುಟ್ಟುತ್ತಲೇ ಇತ್ತು.
…ಅದ್ಯಾನ ಕೂಸು ನೀನು ? ಸಟಿಗ ಏನಾರ ಆಯ್ತು ಅಂದ್ರ ಮರಡೀಗುಡ್ಡನೇ ತಲಮ್ಯಾಲ ಬಿದ್ದಂಗ ಆಡ್ತಿದಯಲ್ಲಾ. ಅವ್ನೇ ‘ಹೋಗಿ ಹೋಗಿ ಏನೋ ಆಯ್ತು’. ಅಂತಂದ್ಮಾö್ಯಲ ಇನ್ನು ಯಾನ ನಿಂದು ? ನಾನೂವ ನಿನ್ನ ಏನ ಅನ್ಕಂದಿದ್ದಿ ಬಲೇ ಗಂಡ್ಸು ಬುಡಪ್ಪಾ. ನನಗ ಮದ್ವ ಆಗ್ದೆ ಇರದೇ ಒಳ್ಳೆದಾಯ್ತು. ನನಗ ಮದ್ವ ಆಗಿ, ನನಗ ಹುಟ್ಟೋ ಕೂಸು ಹೆಣ್ಣೇ ಆಗಿ. ಆ ಹೆಣ್ಣ ನಿನಗೇ ಅಂತ ಸಾಕಿ ಬೆಳಸಿ, ಧಾರ ರ‍್ದುಕೊಟ್ಟಿದ್ರ, ಹೀಗಾಡ ನಿನ್ನ ಕಟ್ಕಂದು ಆ ಹೆಣ್ಣು ಏನೇನ್ ಪಾಡ್ ಪಡ್ಬೇಕಾಗದೊ ? ಅದುನ್ನ ನೋಡಕಾಗ್ದೆ ನಾ ಎಷ್ಟ್ ಕೊರುಗ್ಬೇಕಾಗದೋ..
*
ಮಹಾರಾಜ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಎಸ್ಸಿ ಓದುತ್ತಿದ್ದ ಸುಹಾಸ್ ರಜೆಯಿಂದಾಗಿ ತನ್ನೂರಿಗೆ ಬಂದು ಮರ‍್ನಾಲ್ಕು ದಿನಗಳೇ ಕಳೆದಿತ್ತು. ಊರು ಮನೆಯೆಂದರೆ ಅವನಿಗೆ ಎಲ್ಲಿಲ್ಲದ ಸಡಗರ. ಮನೆಯವರಿಗೂ ಅಷ್ಟೇ ಅವನು ಮನೆಗೆ ಬಂತೆಂದರೆ ಹಿಗ್ಗೋ ಹಿಗ್ಗು. ತನ್ನ ಪರಪಂಚವೇ ಆಗಿದ್ದ ಅಪ್ಪ. ಎರಡು ಮಕ್ಕಳಿದ್ದರೂ ಹೇಸಿಕೊಳ್ಳದೇ ಮತ್ತೊಬ್ಬನ ಜೊತೆ ಪೇರಿ ಹೊಡೆದ ಹೆತ್ತವಳನ್ನು ಸಂಪೂರ್ಣವಾಗಿ ಮರೆಸಿದ್ದ ಮಮತಾಮಯಿ ಚಿಕ್ಕತ್ತೆ. ಮನೆಯ ಸಿರಿಯೇ ಆಗಿದ್ದ ತಂಗಿ. ಹೀಗೇ ಒಂದು ದಿನ ಶಿವಣ್ಣನ ಸೈಕಲ್ಲಿಗೆ ಅಡ್ಡಲಾಗಿ ನಿಂತು, ತನ್ನ ಮುದ್ದಾದ ಮೈಮಾಟದಿಂದಲೇ ಮನೆಗೆ ಕರಕೊಂಡು ಹೋಗು ಎಂದು ಪುಸಲಾಯಿಸಿದ್ದ ಸಾಕುನಾಯಿ ಟುಟ್ಟು. ಇವಿಷ್ಟು ಅವನ ಕುಟುಂಬ. ಈಕ್ಕೆ ನಾಲ್ಕೆöÊದು ವರ್ಷಗಳೇ ಆಗಿರಬೇಕೇನೋ ? ಶಿವಣ್ಣ ವಿಶೇಷಚೇತನ ಖೋಟಾದಲ್ಲಿ ಗ್ರಾಮಲೆಕ್ಕಾಧಿಕಾರಿಯಾಗಿ ಕೆಲಸವನ್ನು ಗಿಟ್ಟಿಸಿ. ಅದಾದ ಮೇಲೆಯೇ ತನ್ನ ಭಾಗಕ್ಕೆ ಬಂದ ಅಪ್ಪನ ಜಾಗದಲ್ಲಿ ಮನೆಯ ಕನಸು ಮೂಡಿದ್ದು, ಮನೆಯಾದದ್ದು. ಇಂದಿಗೆ ಈ ಕುಟುಂಬ ಇದ್ದದ್ದರಲ್ಲಿ ತಣ್ಣಗೆ ಬದುಕು ಮಾಡುತ್ತಿದೆ. ಅಂದ ಹಾಗೆ ಸುಹಾಸ್ ಆ ಮನೆಗೆ ಪರಪಂಚ ಎಂದು ಹೆಸರಿಟ್ಟಿದ್ದ.
ರಾತ್ರಿಯ ಊಟ ಮುಗಿಸಿ ಅಭ್ಯಾಸಬಲದಂತೆ ಸುಹಾಸ್ ಮಹಡಿಯ ಮೇಲೆ ಗಾಳಿಯಲ್ಲಿ ಅಡ್ಡಾಡುತ್ತಾ ಇದ್ದ. ಅವನ ಮನಸ್ಸಿನ ತುಂಬೆಲ್ಲಾ ಅವನ ತಂಗಿಯೇ ತುಂಬಿಹೋಗಿದ್ದಳು. ಇದೇನು ಅವನಿಗೆ ಹೊಸತಾಗಿರಲಿಲ್ಲ. ತರಗತಿಯಲ್ಲಿರಲಿ, ಚಳುವಳಿಯ ಮುಂದಾಳುವಾಗಿ ಘೋಷಣೆಯನ್ನು ಕೂಗುತ್ತಿರಲಿ, ಇಲ್ಲ ಎಲ್ಲವನ್ನೂ ಮರೆಸುವ, ಮರೆಸಿ ಹಗುರಾಗಿಸುವ ತನ್ನ ಗೆಳೆಯರ ಸಂಗಡ ಬೊಬ್ಬೆ ಹಾಕುತ್ತಲೇ ಇರಲಿ ಅವನಿಗೆ ಅವನ ಜ್ಞಾನವೆಲ್ಲಾ ಬರೀ ತಂಗಿಯ ಮೇಲೆಯೇ. ಈಗ ಆಕೆಗೆ ವಯಸ್ಸು ಹದಿನಾರು. ಸುಹಾಸನಿಗಿಂತ ಐದು ವರ್ಷಕ್ಕೆ ಚಿಕ್ಕವಳು. ಹೆಸರು ಪುಟ್ಟಿ ಎಂದು. ಅವರಪ್ಪ ಗಂಧದಗುಡಿ ಚಿತ್ರದ ಪುಟ್ಟಿಯ ಪಾತ್ರಕ್ಕೆ ಮನಸೋತ ಕಾರಣಕ್ಕೆ ಅವಳಿಗೆ ಆ ಹೆಸರು.
ಹುಚ್ಚುಕೋಡಿಯಂತೆ ತಾರುಣ್ಯವನ್ನು ಸಂಭ್ರಮಿಸಬೇಕಾಗಿದ್ದ ಆಕೆ ಇಂದು ತಾನಾಯಿತು ತನ್ನ ಮಕ್ಕಳಾಟವಾಯಿತು, ಮನೆಯಾಯಿತು, ತನ್ನವರಾಯಿತು ಎಂದು ಇಷ್ಟಕ್ಕೇ… ಸೀಮಿತವಾಗಿಬಿಟ್ಟಿದ್ದಾಳೆ. ಆಕೆ ಒಬ್ಬ ಮಾನಸಿಕ ಅಸ್ವಸ್ಥೆ. ಅವಳ ಪಿಳಿ ಪಿಳಿ ಕಣ್ಣುಗಳು, ತಿದ್ದಿ ತೀಡಿದ ವರ್ಚಸ್ಸು, ಮುಗ್ಧ ನಗು, ಸದಾ ಕಟಬಾಯಿಯಲ್ಲಿ ಒಸರುವ ಜೊಲ್ಲು, ಪೌಡರ್ ಬಳಿದುಕೊಂಡು ಕನ್ನಡಿ ಮುಂದೆ ನಿಂತು ನುಲಿಯುವ ಆಕೆಯ ಭಂಗಿ… ಈ ಎಲ್ಲವನ್ನೂ ಕಣ್ಣ ಮುಂದೆ ತಂದುಕೊಂಡು ಅವನು ಕಣ್ಣೀರಾದನು.
ಇಲ್ಲ. ಅವಳು ಮೊದಲಿನಂತಾಗಬೇಕು. ಹುರುಳಿ ಹುರಿದಂತೆ ಚಟಗುಟ್ಟಬೇಕು. ಶಾರ್ಕ್ ಮೀನಿನಂತೆ ಚಂಗು ಚಂಗನೆ ಪುಟಿದಾಡಬೇಕು. ಹೆಣ್ಣ ಮನಸ್ಸಿನಂತೆ ಮನಸೋ ಇಚ್ಚೆ ಹಾರಬೇಕು. ಎತ್ತರಕ್ಕೆ ಬಲು ಎತ್ತರಕ್ಕೆ. ಎಲ್ಲರಂತೆ ಅವಳಾಗಬೇಕು. ಯಾರೋ ಹೇಳಿದರು. ಮುಂದಿನ ತಿಂಗಳು ವಿದೇಶೀ ಮನೋತಜ್ಞರು ಮೈಸೂರಿನ ಮಿಷನ್ ಆಸ್ಪತ್ರೆಗೆ ಬರುವವರಿದ್ದಾರೆ ಎಂದು. ನಮ್ಮ ವೇದನೆಯನ್ನು ದೂರ ಮಾಡಲೆಂದೇ ಬರುತ್ತಿರುವರೇನೋ ? ನಾಳೆಗಳು ಸುಂದರವಾದರೆ ಸಾಕಪ್ಪಾ.
ಆತ ತನಗೇ ಅರಿವಿಲ್ಲದಂತೆ ಮಂತ್ರ ಮುಗ್ಧನಾದ. ಎಷ್ಟೋ ಹೊತ್ತಿನ ತನಕ ಹಾಗೇ ನಿಂತಿದ್ದ ಅವನನ್ನು ಕಂಡ ಟುಟ್ಟುಗೆ ಏನನ್ನಿಸಿತೋ ಏನೋ ? ಅದು ಅವನ ಸುತ್ತ ಸುತ್ತುತ್ತಾ ಒಂದೇ ಸಮನೆ ಬೊಗಳಲು ಶುರುಮಾಡಿತು. ಆತ ಎಚ್ಚೆತ್ತು ವಾಸ್ತವಕ್ಕೆ ಬಂದ.
ಎಲ್ಲೋ ಸಣ್ಣದಾಗಿ ನೀರು ತೊಟ್ಟಿಕ್ಕುವ ಸದ್ದಾಗುತ್ತಿತ್ತು. ಮೊಬೈಲ್ ಟಾರ್ಚ್ ಹಾಕಿ ನೋಡುತ್ತಾನೆ. ಸೋಲಾರ್ ಟ್ಯೂಬ್‌ಗಳ ನಡುವೆ ಸಣ್ಣದಾಗಿ ನೀರು ಜಿನುಗುತ್ತಿದೆ. ಜಿನುಗಿ ಜಿನುಗಿ ಹನಿಯಾಗಿ, ಆ ಹನಿಯು ಒಡೆದು ತರಗೆಲೆಯ ಮೇಲೆ ಬೀಳುತ್ತಿದೆ. ಅದೋ ಆ ತರಗೆಲೆಯೋ ಅಷ್ಟಕ್ಕೇ ಯಾರೋ ಬಾರುಕೋಲಿನಿಂದ ಬಡಿದಂತೆ ಲಬಲಬೋ ಎನ್ನುತ್ತಿದೆ. ಹನಿ ಬಿದ್ದು ಬಿದ್ದು ಒಂದಷ್ಟು ಅಗಲಕ್ಕೆ ನೆಲ ಒದ್ದೆಯಾಗಿತ್ತು. ಅಯ್ಯೋ… ನಿನ್ನೆ ಚೆಂದಿತ್ತಲ್ಲಾ ಎಂದು ಆತ ಇಂಚಿಂಚನ್ನೂ ಬಿಡದೆ ಜಾಲಾಡಲು ತೊಡಗಿದ.
ಸುಹಾಸ್ ಈಗಾಗಲೇ ತನ್ನ ವ್ಯಕ್ತಿತ್ವದ ಬಗ್ಗೆ ತಾನೇ ಹೇಳಿರುವನಲ್ಲಾ ? ಸಣ್ಣ ಸಿವುರನ್ನೂ ಹೆಬ್ಬೇವಿನ ದಿಮ್ಮಿ ಅಂತಲೇ ಭಾವಿಸುವವನು ಅವನು. ಇನ್ನು ತೊಟ್ಟಿಕ್ಕುತ್ತಲೇ ಇದ್ದ ಸೋಲಾರಿನ ಬಗೆಗೆ ಆತ ಇನ್ನೆಷ್ಟು ತಲೆಕೆಡಿಸಿಕೊಳ್ಳಬೇಡ ?
*
ಸೀದಾ ಸೋಲಾರನ್ನು ಕೊಂಡು ಕೊಂಡ ಶಾಪ್ ಗೆ ಹೋಗಿ ಹೀಗೀಗೆ ಎಂದ. ಅವರೋ ನಿಮ್ಮ ಹಿಂದೆಯೇ ಬರುತ್ತೇವೆ ಹೊರಡಿ ಎಂದರು. ಬರಲೇ ಇಲ್ಲ. ಕಾಲ್ ಹಚ್ಚಿದರೆ ನೀವು ತಲುಪಲು ಪ್ರಯತ್ನಿಸುತ್ತಿರುವ ಚಂದಾದಾರರು ಈ ಸಮಯದಲ್ಲಿ ನಿಮ್ಮ ಕರೆಯನ್ನು ಸ್ವೀಕರಿಸಲು ಆಗುತ್ತಿಲ್ಲ. ಪಿತ್ತ ನೆತ್ತಿಗೇರಿಸುವ ಮಾತು. ಅಲ್ಲಿ ಇಲ್ಲಿ ಹುಡುಕಿ ಸೋಲಾರ್ ಕೇರ್ ಗೆ ಕರೆ ಮಾಡಿದರೆ -ವೆಲ್‌ಕಂ ಟು ಸೋಲಾರ್ ವರ್ಲ್ಡ್. ಕನ್ನಡಕ್ಕಾಗಿ ಒಂದನ್ನು ಒತ್ತಿ. ಇಫ್ ಯು ಸ್ಪೀಕ್ ಇನ್ ಇಂಗ್ಲೀಷ್ ಪ್ರೆಸ್ ಟು… ಒತ್ತಿ ಒತ್ತಿ ಒತ್ತುತ್ತಾ ಹೋದರೆ ನಿಮ್ಮ ಕರೆ ನಿರೀಕ್ಷಣೆಯಲ್ಲಿದೆ ಸ್ವಲ್ಪ ಹೊತ್ತು ಕಾದಿರಿ ಅಥವಾ ಪುನಃ ಪ್ರಯತ್ನಿಸಿ, ಅವರಮ್ಮನ್ ಡಿಸ್ಕು.
ಇತ್ತ ಪರಿಚಯವಿದ್ದ ಪ್ಲಂಬರ್ ಗೆ ಮಾಡಿದರೆ -ಸರ್ ಈಗಷ್ಟೇ ಬಂದು ಸ್ವಾಮಿ, ಶಿವಾ ಅಂತಾ ಕೆಲಸಕ್ಕೆ ಕೈ ಹಾಕಿದೆ. ಅರ್ಜೆಂಟು ಸಾರ್. ನಾಳೆನೇ ಮನೆ ಓಪನ್ನು. ಸಂಜೆ ಬರುತ್ತೇನೆ ಮಿಸ್ಸೇ ಮಾಡಲ್ಲ ಎಂದ. ಸಂಜೆಯಾಯಿತು. ದಿನವಾಯಿತು ಎರಡು ದಿನವಾಯಿತು. ಅಂತೂ ಮಾರನೇ ದಿನಕ್ಕೆ ಪುಣ್ಯಾತ್ಮ ಬಂದ.
ಈ ನಡುವೆ ಸೋಲಾರಿನ ಗೋಳನ್ನು ನೋಡಲಾಗದೇ, ಇತ್ತ ಘನ ಗಂಭೀರವಾಗಿ ಇರಲೂ ಆಗದೇ ದಾರ ಸುತ್ತಿದ. ಜಗ್ಗಲಿಲ್ಲ. ಅದೆಂತದೋ ಟೇಪ್ಲಾನ್ ಬಿಗಿದ ಬಗ್ಗಲಿಲ್ಲ. ಒಂದು ಇನ್ಸುಲೇಷನ್ ಟೇಪು ಖಾಲಿಯಾಯಿತು. ಆದರೂ ಅದಕ್ಕೆ ವಾಂತಿ ಬೇಧಿ ಬರೋದು ಜಪ್ಪಯ್ಯಾ ಅನ್ನಲಿಲ್ಲ. ಪ್ಲಂಬರ್ ಬಂದ. ಒಂದೆರಡು ಟ್ಯೂಬ್ ಬಿಚ್ಚಿ ವಾಶರ್ ಚೇಂಜ್ ಮಾಡಿದ.
- ಯಾರು ಸರ್ ಇದನ್ನು ಇನ್‌ಸ್ಟಾಲ್ ಮಾಡಿದೋರು ?
- ಯಾಕೆ ? ಅದೇ ಆ ಕ್ರಿಶ್ಚಿಯನ್ ಸ್ಟಿçÃಟ್ ಡೌನ್ ಅಲ್ಲಿ ಇದಿಯಲ್ಲ ಆ ಶಾಪಿನವರು.
- ಇನ್ಸಾ÷್ಟಲ್ ಸರಿಯಾಗಿ ಆಗಿಲ್ಲ ಸರ್. ಟ್ಯೂಬ್ ಕೆಳಗೆ ಗ್ಯಾಪ್ ಇದೆ, ಬೇಕಾದರೆ ನೀವೇ ನೋಡಿ. ಅದಕ್ಕೇ ಈ ಫಜೀತಿ. ರೀ ಫಿಟ್ ಮಾಡಿಸಿಬಿಡಿ
- (ಎದೆ ಮೇಲೆ ಕಲ್ಲು ಚಪ್ಪಡಿಯೇ ಬಿದ್ದಂತಾಗಿ) ಇದು ಇನ್ನೂ ತೊಟ್ಟುತ್ತಿದೆಯಲ್ಲಾ ?
- ಈಗ ಹಾಕಿರೋದಲ್ವಾ ಸರ್. ಹೀಟ್ ಆದರೆ ಸರಿ ಹೋಗುತ್ತೆ. ನೀವು ಟೆನ್ಷನ್ ಆಗಬೇಡಿ.
ಪ್ಲಂಬರ್ ಬಂದದ್ದೇನೋ ಬಂದ. ಬಂದು ಏನು ಮಾಡಬಹುದೋ ಅದನ್ನು ಮಾಡಿದ. ಆದರೆ ತಲೆಗೆ ಹುಳಾ ಬಿಡುತ್ತಾರೆ ಅನ್ನೋದನ್ನು ಕೇಳಿದ್ದೆ. ಇವನೋ ಸುಹಾಸನ ತಲೆಗೆ ಸರಿಯಾದ ಚೇಳನ್ನೇ ಬಿಟ್ಟು ಹೊರಟು ನಿಂತ. ಇನ್ನು ಹೀಗಾಯಿತು ಎಂದು ವಾಪಸ್ಸು ಅವನನ್ನು ಬಸ್ ಸ್ಟ್ಯಾಂಡಿಗೆ ಬಿಟ್ಟುಕೊಡದೇ ಹೋದರೆ ಮರ್ಯಾದೆಯೇ ? ಬಿಟ್ಟು ಬರಲು ಹೊರಟ. ಚೇಳು ಅಷ್ಟಕ್ಕಾಗಲೇ ಸುಹಾಸನ ತಲೆಯೊಳಗೆ ತನ್ನ ಕೆಲಸವನ್ನು ಶುರುಮಾಡಿಕೊಂಡಿತ್ತು.
*
ವಾಪಸ್ಸು ಬರುವಾಗ ಹೇಳಿಕೊಳ್ಳುವ ಬಿಸಿಲೇನೂ ಇದ್ದಂತಿರಲಿಲ್ಲ. ಸರಿ ಹಾಕಿದ್ದ ಟೋಪಿ ಬಿಚ್ಚಿ ಟ್ಯಾಂಕ್ ಮೇಲೆ ಇಟ್ಟು ಅದು ಅತ್ತಿತ್ತ ಜಾರದಂತೆ ನಿಗಾ ವಹಿಸಿ ಗಾಡಿ ಚಲಾಯಿಸುತ್ತಿದ್ದ. ಒಂದು ಮಾತಿದೆ. ಅನುಭವದ ಮಾತು. ಒಂದು ಘಳಿಗೆ ಇದ್ದ ಹಾಗೆ ಇನ್ನೊಂದು ಘಳಿಗೆ ಇರೋದಿಲ್ಲ ಎಂದು. ಗಾಡಿಯ ಚಕ್ರಗಳು ವೇಗವಾಗಿ ಉರುಳುತ್ತಿದ್ದವು. ಒಂದು ತಿರುವು. ದಿಕ್ಕು ಬದಲಾಗಿದ್ದೇ ಗಾಳಿಯಲ್ಲಿ ವ್ಯತ್ಯಾಸವಾಗಿ ಟೋಪಿ ಜಾರಿ ಇನ್ನೇನೋ ಬೀಳುವುದರಲ್ಲಿತ್ತು. ಆತ ಪಟಕ್ಕನೆ ಅದನ್ನು ಹಿಡಿದುಕೊಂಡ. ಈ ಸೈಕಲ್ ಗ್ಯಾಪಲ್ಲಿ ಅನಿರೀಕ್ಷಿತವೆಂಬಂತೆ ಒಂದು ಘಟನೆ ಸಂಭವಿಸಿಯೇ ಬಿಟ್ಟಿತು !
ಟೋಪಿಯನ್ನು ಹಿಡಿದುಕೊಳ್ಳುವ ಗೊಂದಲದಲ್ಲಿ ಗಾಡಿಯ ಆಯ ತಪ್ಪಿ, ಆತನ ಎಡಭಾಗದಲ್ಲಿ ನಿಧಾನಕ್ಕೆ ತೆವಳುತ್ತಿದ್ದ ಗಾಡಿಯೊಂದರ ಫುಟ್ ರೆಸ್ಟ್ಗೆ ಸುಹಾಸನ ಅಂಗಾಲು ಬಡಿಯಿತು. ಬಡಿದು ದಿಕ್ಕಾಪಾಲಾದ ತನ್ನ ಗಾಡಿಯನ್ನು ನಿಯಂತ್ರಣಕ್ಕೆ ತಂದು ಅಷ್ಟು ದೂರ ಹೋಗಿ ಆತ ನಿಂತುಕೊಂಡ. ನಿಂತು ಬಡಜೀವ ಬದುಕಿತು ಎಂದುಕೊಳ್ಳುವಷ್ಟರಲ್ಲಿ ಹಿಂದೆಯೇಬರುತ್ತಿದ್ದ ಗಾಡಿಯವನು -ಏನು ರೇಸ್ ಗೆ ಬಿಟ್ಟಿದ್ದಾರಾ ? ಹೋಗ್ರಿ ಹೋಗ್ರಿ ಹೋಗಿ ಅವರಿಗೆ ಏನಾಯ್ತು ಅಂತ ನೋಡು ಹೋಗ್ರಿ ಪಾಪ ಎಂದಿತು. ಎದೆ ಬಡಿದುಕೊಳ್ಳುವುದಕ್ಕೆ ಶುರುವಾಗಿ ಭಯದಲ್ಲೇ ಹಿಂದೆ ತಿರುಗಿ ನೋಡುತ್ತಾನೆ ! ಎಕ್ಸೆಲ್ ಗಾಡಿಯೊಂದು ಕೆಳಕ್ಕೆ ಬಿದ್ದಿದೆ. ಕೆಳಕ್ಕೆ ಬಿದಿದ್ದ ಆ ಗಾಡಿಯ ಸವಾರನನ್ನು ಯಾರೋ ಒಂದಿಬ್ಬರು ಹಿಡಿದು ಮೇಲಕ್ಕೆತ್ತುತ್ತಿದ್ದಾರೆ. ಸುಹಾಸನಿಗೆ ಜೀವ ಧಸಕ್ಕೆಂದಿತು. ಉಸಿರನ್ನು ಕೈಯಲ್ಲಿ ಹಿಡಿದುಕೊಂಡೇ ಆತ ಅವರತ್ತ ಓಡಿದ.
ಅದಾಗಲೇ ಒಂದಷ್ಟು ಜನ ಗುಂಪು ಕಟ್ಟಿದ್ದರು. ಯಾರೋ ಬಿದ್ದಿದ್ದ ಗಾಡಿಯನ್ನು ಎತ್ತುತ್ತಿದ್ದಾರೆ, ಎತ್ತಿ ನಿಲ್ಲಿಸಿದರು. ತರಕಾರಿ ಅಲ್ಲಿ ಇಲ್ಲಿ ಚೆಲ್ಲಾಂಪಿಲ್ಲಿಯಾಗಿ ಬಿದ್ದಿದೆ. ಅಲ್ಲಿ ಯಾರೊಬ್ಬರೂ ಮಾತಾಡುತ್ತಿಲ್ಲ. ಎಲ್ಲರೂ ಮಿಕಿ ಮಿಕಿ ಅಂತ ನೋಡುವವರೇ. ಬಿದ್ದವರು ಎದ್ದು ಮೈ ಕೈ ನೋಡಿಕೊಳ್ಳುತ್ತಿದ್ದಾರೆ. ಅವರ ಬಟ್ಟೆಯೆಲ್ಲಾ ಧೂಳು ಧೂಳು. ಅವರ ಬಲಗೈಯ ಬೆರಳ ಗಿಣ್ಣುಗಳು ತರಚಿ ಕೆಂಪಾಗಿದ್ದರೆ, ಮೊಣಕೈಯಲ್ಲಿ ಷರ್ಟು ಒಂದಷ್ಟಗಲಕ್ಕೆ ಹರಿದಿತ್ತು.
ಸುಹಾಸ್ ತ್ರಾಣ ಕೂಡಿಸಿ ಕೀರಲು ಧ್ವನಿಯಲ್ಲೇ, ಸಾರಿ ಸರ್ ಸಾರಿ ಸರ್. ಕ್ಷಮೆಯಿರಲಿ. ತಿಳಿಯದೇ ಆಗಿ ಹೋಯ್ತು. ಆಸ್ಪತ್ರೆಗೆ ಹೋಗೋಣ್ವ ಸರ್ ? ಬನ್ನಿ ಬನ್ನಿ. ಐ ಯಾಮ್ ಎಕ್ಸ್ ಟ್ರೀಮ್ ಲೀ ಸಾರಿ. ಹಾಳಾದ ಟೋಪಿಯಿಂದ ಹೀಗಾಯಿತು.
ಆ ಆಸಾಮಿ ಇವನನ್ನು ಒಮ್ಮೆ ಮೇಲಿನಿಂದ ಕೆಳಕ್ಕೆ ನೋಡಿ -ಬಿಸಿ ರಕ್ತ, ಹುಡುಗಾಟಿಕೆ. ನೀವು ತಾನೇ ಏನು ಮಾಡುತ್ತೀರ ? ಹುಡುಗಾಟಿಕೆ ಬೇಕು. ಆದರೆ ನಿಮ್ಮ ಹುಡುಗಾಟಿಕೆಯಿಂದ ಯಾರಿಗೂ ತೊಂದರೆ ಆಗಬಾರದು. ವಿದ್ಯಾವಂತರಾಗಿ ಕಾಣುತ್ತೀರ. ವಿದ್ಯಾವಂತರು ತಿದ್ದಬೇಕೇ ಹೊರತು, ತಿದ್ದಿಕೊಳ್ಳೋ ಮಾತನ್ನು ಒಬ್ಬರಿಂದ ಕೇಳಬಾರದು.
ಅವರ ಕಣ್ಣುಗಳು ಅತ್ತಿತ್ತ ಹೊರಳಾಡುತ್ತಾ ಏನನ್ನೋ ಹುಡುಕುವಂತಿತ್ತು. ಅದನ್ನು ಪತ್ತೆ ಹಚ್ಚಿದ ಸುಹಾಸ್ ಓಡಿಹೋಗಿ ಡಿವೈಡರ್‌ನ ಪಕ್ಕದಲ್ಲಿ ಬಿದ್ದಿದ್ದ ನೀರಿನ ಬಾಟಲ್ ತಂದು –
- ಸ್ವಲ್ಪ ನೀರು ಕುಡಿಯಿರಿ ಸರ್.
- (ಆ ಆಸಾಮಿ ಸುಹಾಸ್ ನಿಂದ ಬಾಟಲನ್ನು ಕಸಿದು)
ನೀವು ಇಷ್ಟು ಮಾಡಿದ್ದೇ ಸಾಕು. ಹೋಗಿ ಹೋಗಿ ಏನೋ ಆಯ್ತು. ಆದರೆ ಒಂದು. ಮುಂದೆ ಯಾರಿಗೂ ಹೀಗೆ ಮಾಡಬೇಡಿ. ಆಯ್ದುಕೊಂಡು ತಿನ್ನುವ ಕೋಳೀ ಕಾಲನ್ನು ಮುರೀಬೇಡಿ. ಯಾಕೆಂದರೆ ಆ ಕೋಳಿಯನ್ನು ನಂಬಿಕೊಂಡು ಒಂದಷ್ಟು ಜೀವಗಳು ಬದುಕುತ್ತಿರುತ್ತವೆ.
ಈ ಬಾರಿ ಅವರ ಮಾತು ಖಡಕ್ಕಾಗಿರುವಂತೆ ಕಂಡಿತು. ಇವರ ಜಾಗದಲ್ಲಿ ಬೇರೆ ಯಾರೇ ಇದ್ದಿದ್ದರೂ ಖಂಡಿತ ರಂಪ ರಂಪ ಆಗದೇ ಇರುತ್ತಿರಲಿಲ್ಲ. ಎಂದುಕೊಳ್ಳುತ್ತಾ ಸುಹಾಸ್ ವಿಧಿಯಿಲ್ಲದೇ ಅಲ್ಲಿಂದ ಹೊರಟ. ಅಷ್ಟು ದೂರ ಹೋಗಿ ಹಿಂದಿರುಗಿ ನೋಡುತ್ತಾನೆ, ಅವನ ಹಿಂದೆಯೇ ಅವರ ಗಾಡಿಯೂ ಹೊರಟಿತ್ತು.
*
ಸುಹೀ ಸುಹೀ…ಅಪ್ಪನ ಕರೆ. ಕಿವಿಗೆ ಬಿದ್ದದ್ದೇ ಲಗುಬಗೆಯಲ್ಲಿ ಎದ್ದು, ಬಂದೆ ಅಪ್ಪಾ… ಎನ್ನುತ್ತಾ ಸುಹಾಸ್ ಚಟ್ಟನೆ ಮಹಡಿಯನ್ನು ಇಳಿದನು. ಊಟಕ್ಕೆ ಎಲ್ಲವೂ ಸಿದ್ಧಗೊಂಡಿತ್ತು.
ಆಗಿದ್ದು ಆಯ್ತು. ಅವ್ರೇ ಹೋಗಿ ಹೋಗಿ ಏನೋ ಆಯ್ತು. ಅಂತಂದಮ್ಯಾಲ ಇನ್ನೂ ಯಾನ ಕೂಸು ನೀನು, ಸುಮ್ನೆ ಅದದುನ್ನೆ ಕೆಂಟ್ತ ಕೆಂಟ್ತ ಕೂತಿರದು. ಅದ ಅತ್ತಗ ಬುಟ್ಬುಟ್ಟು ಮಾಡ ಕೆಲ್ಸ ಮಾಡು ಹೋಗು… ಅತ್ತೆಯ ಮಾತಿನ ಮಧ್ಯೆ ಪ್ರವೇಶಿಸಿದ ಶಿವಣ್ಣ-ಬುಡವ್ವಾ. ಇದೇನು ಹೊಸದಾ ನಮಗೇ ? ಚಿಕ್ಕಂದಿನಿಂದಲೂ ಇವನದ್ದು ಇದ್ದದ್ದೇ ತಾನೇ ? ಇವನ ಕಷ್ಟನ ನೋಡೋಕೆ ಆಗದೆ ನಾಳೆಗೆ ರಜೆ ಹಾಕಿಯೇ ಬಂದಿದ್ದೇನೆ. ಅವರು ಯಾರು, ಏನು ಅಂತ ವಿಚರ‍್ಸಿ, ಸಾಧ್ಯವಾದರೆ ಭೇಟಿಯಾಗಿ ಯೋಗಕ್ಷೇಮ ತಿಳುಕೊಂಡು ಬರೋಣ ಅಂತ. ಇವನಿಗೂ ಸಮಾಧಾನ ಆಗುತ್ತೆ. ಅಪ್ಪನ ಮಾತನ್ನು ಕೇಳುತ್ತಿದ್ದಂತೆಯೇ ಉತ್ಸಾಹದಿಂದ ಹ್ಞೂಂ ಹ್ಞೂಂ ಆಂ… ಎನ್ನುತ್ತಿದ್ದ ಪುಟ್ಟಿಯನ್ನು ಕಂಡು. ಹ್ಞೂಂ ಆಯ್ತು ಆಯ್ತು. ನೀನು ಬರುವಂತೆ. ಎಲ್ಲರೂ ಹೋಗೋಣ. ನನ್ನ ಗಾಡೀಲಿ ನೀನು. ಅಣ್ಣನ ಗಾಡೀಲಿ ಈ ನಿಮ್ಮ ತಲೆಹರಟೆ ಅತ್ತೆ. ಆಯ್ತಾ ? ಎಂದದ್ದೇ ಪುಟ್ಟಿಯು ಬಿದ್ದು ಬಿದ್ದು ನಗಾಡ ತೊಡಗಿದಳು.
ಮೈಸೂರಿನಲ್ಲಿರುವ ನನ್ನ ಗೆಳೆಯರು ಊರಿಗೆ ಬಂದಾಗ, ಇಲ್ಲ, ಅಪರೂಪಕ್ಕೆ ಕಾಲ್ ಮಾಡಿದಾಗ ನಿನ್ನ ಬಗ್ಗೆಯೇ ಮಾತಾಡುತ್ತಿರುತ್ತಾರೆ. ಏನಪ್ಪಾ ನಿನ್ನ ಮಗ ಹುಲಿ ಹುಲಿ ಥರಾ ಆಡ್ತಾನಲ್ಲಾ ? ವಿದ್ಯಾರ್ಥಿ ಸಂಘದ ಅಧ್ಯಕ್ಷ ಬೇರೆ ಆಗಿದ್ದಾನೆ. ಹಾಸ್ಟೆಲ್ನಲ್ಲಿ ಸಾರಿಗೆ ಚೂರು ನೀರು ಜಾಸ್ತಿಯಾದರೂ, ಅನ್ನ ಮುಳ್ಳಕ್ಕಿಯಾದರೂ ಗುಂಪು ಕಟ್ಕೊಂಡು ಹೋರಾಟಕ್ಕೆ ನಿಂತು ಬಿಡುತ್ತಾನೆ. ಕಾಲೇಜಲ್ಲೂ ಅಷ್ಟೇ. ಫೀಸು ಜಾಸ್ತಿ ಆಯ್ತು ಅಂತಾ, ಬಸ್ ಪಾಸ್ ಬೇಗ ಆಗಲಿಲ್ಲ ಅಂತಾ, ತರಗತಿಗಳು ಸರಿಯಾಗಿ ಆಗುತ್ತಿಲ್ಲ ಅಂತಾ… ಯಾವ ವಿಚಾರವೇ ಆಗಿರಲಿ ಎಲ್ಲದರಲ್ಲೂ ನಿನ್ನ ಮಗನೇ ಮುಂದು. ವಾರ್ಡನ್ ಹೇಳುದ್ರೂ ಇಲ್ಲ, ವಿ.ಸಿ ಹೇಳುದ್ರೂ ಇಲ್ಲ. ಕೊನೆಗೆ ಪೋಲೀಸರು ಬಂದ್ರೂ ಸುಮ್ಮನಾಗೋದಿಲ್ಲ. ಎರಡು ಮೂರು ಕೇಸು ಬೇರೇ ಆಗಿದಿಯಂತೆ. ಗಟ್ಟಿಗ ಕಣಪ್ಪಾ, ನಿನ್ನ ಮಗ ಗಟ್ಟಿಗಾ.
ಅಂತ ಅದು ಇದು ಹೇಳುತ್ತಲೇ ಇರುತ್ತಾರೆ. ಅಂತವನ ಒಳಗೆ ಇಂಥಾ ಮನಸ್ಸು ಇದೆ ಅಂದ್ರೆ ಯಾರೂ ಕೂಡ ನಂಬೋದಿಲ್ಲ. ನನಗೇ ಆಶ್ಚರ್ಯವಾಗುತ್ತದೆ. ಇರಲಿ ಏನೋ ಒಂದು. ನನ್ನಿಂದ ಒಬ್ಬರಿಗೆ ಒಳ್ಳೇದಾಗದಿದ್ದರೂ ಪರವಾಗಿಲ್ಲ ಕೆಟ್ಟದ್ದು ಮಾತ್ರ ಆಗಬಾರದು ಅನ್ನೋ ಮನಃಸ್ಥಿತಿ ನಿನ್ನದು. ಅದೂ ಒಳ್ಳೇದೇ. ನಾಳೆ ಅವರು ಯಾರು ಏನು ಅಂತ ವಿಚಾರಿಸಿ ಸಾಧ್ಯವಾದರೆ ಭೇಟಿ ಮಾಡೋಣ. ಈಗ ನೆಮ್ಮದಿಯಿಂದ ನಿದ್ದೆಮಾಡು ಹೋಗು. ಆಮೇಲೆ ಮರೆತಿದ್ದೆ. ಮೈಸೂರಿಗೆ ಯಾವಾಗ ಹೋಗ್ತೀಯ ? ಸೋಮವಾರ ಹೋಗ್ತೀನಪ್ಪಾ.
*
ಎಲ್ಲರೂ ತಿಂಡಿ ತಿಂದು ಹೊರಟರು. ಈ ಮೊದಲೇ ಮಾತಾಗಿದ್ದಂತೆ, ಅಪ್ಪನ ಜೊತೆಗೆ ಮಗಳು, ಸುಹಾಸನ ಜೊತೆಗೆ ತಲೆಹರಟೆ ಅತ್ತೆ.
ಸುಹಾಸ್ ಅವರನ್ನು ನೇರವಾಗಿ ಘಟನೆ ಸಂಭವಿಸಿದ್ದ ಸ್ಥಳಕ್ಕೆ ಕರೆದುಕೊಂಡು ಬಂದ. ನಾಲ್ಕು ಪಥದ ರಸ್ತೆ. ಅದರ ನಡುವೆ ಹಾದು ಹೋಗಿರುವ ಹಳದೀ -ಕಪ್ಪು ಬಣ್ಣದ ಡಿವೈಡರ್. ಎಡಕ್ಕೆ ದೊಡ್ಡಕೆರೆಯ ಏರಿ. ಬಲಕ್ಕೆ ಪೆಟ್ರೋಲ್ ಬಂಕ್. ಅದಕ್ಕೆ ಸೇರಿದಂತೆ ಉದ್ದಕ್ಕೂ ಅಂಗಡಿ ಮುಂಗಟ್ಟುಗಳು. ಅಪ್ಪ-ಪುಟ್ಟಿ, ಅತ್ತೆ, ಸುಹಾಸ್ ಒಬ್ಬೊಬ್ಬರೂ ಒಂದೊಂದು ದಿಕ್ಕಿನಲ್ಲಿ ಅದಾಗಲೇ ವಿಚಾರಣೆ ನಡೆಸುತ್ತಿದ್ದಾರೆ. ಆ ಎಲ್ಲರ ಬಾಯಲ್ಲೂ ಒಂದೇ ಮಂತ್ರ. ಅಮವಾಸ್ಯೆ ದಿನ, ಎಕ್ಸೆಲ್ ಗಾಡಿಗೂ ಪ್ಯಾಷನ್ ಪ್ರೋ ಗಾಡಿಗೂ ಸಣ್ಣದಾಗಿ ಡಿಕ್ಕಿ ಆಯ್ತಲ್ಲಾ. ಇಲ್ಲೇ ಇದೇ ತಿರುವಿನಲ್ಲಿ. ಆ ಮನುಷ್ಯ ಕಪ್ಪಗೇ ಕುಳ್ಳಗೆ ಕೈ ಬೆರಳ ಗಿಣ್ಣುಗಳು ತರಚಿತ್ತಲ್ಲಾ, ತರಕಾರಿಯೆಲ್ಲಾ ಚೆಲ್ಲಿ ಹೋಗಿದ್ದವು…
ಹಾಗೆ ವಿಚಾರಿಸುತ್ತಿದ್ದ ಅತ್ತೆಗೆ ಯಾರೋ ಒಬ್ಬ -ಹೋ… ಕರೀಹುಳ್ಳಿ ಇರಬೇಕು.
ಅತ್ತೆ -ಕೂಸು. ಆಡ ಮಾತ ಆಡು. ಸುಮ್ನ ತಮಾಸಿ ಮಾಡ್ಬೇಡ. ಕರೀಹುಳ್ಳಿ ಏನಾರ ಗಾಡಿ ಓಡ್ಸುದ್ದಾ ? ನೀನೊಳ್ಳೇ.
ಅಮ್ಮಾ ಅವನನ್ನು ಎಲ್ಲರೂ ಕರೀಹುಳ್ಳಿ ಅಂತಲೇ ಕರೆಯೋದು. ಅವನ ಹೆಸರು ನನಗಂತೂ ಗೊತ್ತಿಲ್ಲ. ಮೊನ್ನೆ ಸಿಕ್ಕಿದ್ದ. ಸಿಕ್ಕಿ ಹೆಲ್ಮೆಟ್ ಮಾರುತ್ತಾರಲ್ಲ ರೋಡ್ ಸೈಡಲ್ಲಿ ಅಲ್ಲಿ ಒಬ್ಬ ಹುಡುಗ ನನ್ನ ಗಾಡಿಗೆ ಟಚ್ ಮಾಡಿಬಿಟ್ಟ. ನನ್ನ ಪುಣ್ಯ ಚೆನ್ನಾಗಿತ್ತು. ಹೆಚ್ಚಿಗೇನೂ ನೋವಾಗಲಿಲ್ಲ ಎನ್ನುತ್ತಿದ್ದ.
ಅವರು ಹಾಗೆ ಹೇಳುತ್ತಿದ್ದಂತೆಯೇ ಅತ್ತೆ, ತನ್ನ ಕಣ್ಣ ಮುಂದೆ ತಾನೇ ಲೇಡಿ ಸಾಂಗ್ಲಿಯಾನ ಆಗಿ ಟಕ್ ಟಕ್ ಟಕ್ ಅಂತ ಗತ್ತಿನಿಂದ ತಿರುಗಾಡುವುದನ್ನು ಕಂಡು ಉಬ್ಬಿಹೋಗಿ ದೂರದಲ್ಲಿದ್ದ ಸುಹಾಸನತ್ತ ಕೈ ಬೀಸಿದ.
ಇಲ್ಲಿಂದ ಒಂದು ಅರ್ಧ ಕಿ.ಮೀ ಮುಂದಕ್ಕೆ ಹೋದರೆ ಒಂದು ಪುಟ್ಟ ಹಳ್ಳಿ ಇದೆ. ಅದರ ಹೆಸರೇ ಪುಟ್ಟಳ್ಳಿ ಎಂದು. ಅಲ್ಲಿಂದ ಬಲಕ್ಕೆ ತಿರುಗಿದರೆ ದೂ… ರದಲ್ಲೊಂದು ಆ¯ದ ಮರ ಕಾಣಿಸುತ್ತೆ. ಅಲ್ಲಿಗೆ ಹೋಗಿ ಯಾರನ್ನಾದರೂ ಕೇಳಿ ಕರಿಹುಳ್ಳಿ ಮನೆ ಎಲ್ಲಿ ಎಂದು. ಯಾರು ಬೇಕಾದರೂ ಹೇಳುತ್ತಾರೆ. ಅವರೆಲ್ಲರೂ ಆ ಯಾರೋ ಒಬ್ಬ ಹೇಳಿದ ಮಾರ್ಗ ಹಿಡಿದು ಸಾಗಿದರು.
ದೊಡ್ಡ ಆಲದ ಮರದ ಹತ್ತಿರಕ್ಕೆ ಎಲ್ಲರೂ ಬಂದರು. ಆ ಆಲದ ಮರ ಅವರಿಗೆ ಹಸಿರು ಬಣ್ಣದ ಮಜವಾದ ಒಂದು ಮಹಡಿ ಮನೆಯತ್ತ ತನ್ನ ತೋರು ಬೆರಳನ್ನು ತೋರಿಸಿತು. ಸುಹಾಸ್ ಭಯ ಬೆರೆತ ಉತ್ಸಾಹದಲ್ಲಿಯೇ ಮುಂದೆ ಮುಂದೆ ಹೋಗುತ್ತಿದ್ದಾನೆ. ಅಪ್ಪ ಪುಟ್ಟಿಯ ಕಾರಣದಿಂದಾಗಿ ಸ್ವಲ್ಪ ಹಿಂದೆ. ಸುಹಾಸ್ ಮನೆಯ ಹತ್ತಿರಕ್ಕೆ ಬಂದ. ಅತ್ತಿತ್ತ ನೋಡುತ್ತಾ ಆ ಮನೆಯ ಮೆಟ್ಟಿಲನ್ನು ಏರಿದ. ಅತ್ತೆ ಅವನ ಬಾಲವೇ ಆಗಿದ್ದಳು. ಅವನ ದೃಷ್ಠಿ ಸೀದಾ ಕಾಲಿಂಗ್ ಬೆಲ್ಲಿನ ಕಡೆಗೆ ವಾಲಿತು. ಅದರದೋ ದೊಡ್ಡ ರಗಳೆ. ಚಲೆ ಚಂಯ್ಯ ಚಂಯ್ಯ ಚಂಯ್ಯ ಚಂಯ್ಯ. ಚಲೆ ಚಂಯ್ಯ ಚಂಯ್ಯ ಚಂಯ್ಯ ಚಂಯ್ಯ. ಯಾರೂ ಬಂದಂತಾಗಲಿಲ್ಲ. ಮತ್ತೊಮ್ಮೆ ಚಲೆ ಚಂಯ್ಯ ಚಂಯ್ಯ…
- ಯಾರೂ… ಬಂದೆ ಬಂದೆ (ಹೆಣ್ಣು ಧ್ವನಿ).
- ಬಾಗಿಲು ತೆರೆಯಿತು. ಆ ಹೆಂಗಸಿನ ಹಿಂದೆಯೇ ಸುಹಾಸ್ ಹೇಳುತ್ತಿದ್ದ ಕಪ್ಪಗೆ ಕುಳ್ಳಗಿನ ಆಸಾಮಿ ಪ್ರಶ್ನೆಯ ಕಣ್ಣುಗಳನ್ನು ಬಿಡುತ್ತಾ ಹೊರಬಂದಿತು.
- ಯಾರು ? ಯಾರು ನೀವು, ಯಾರು ಬೇಕಾಗಿತ್ತು ?
- ನೀವೇ ಸರ್. ನೀವೇ ಬೇಕಾಗಿತ್ತು. ಚೆನ್ನಾಗಿದ್ದೀರಾ ? ನಾನು ಯಾರೆಂದು ನಿಮಗೆ ಗೊತ್ತಾಗಲಿಲ್ಲವೇ ? ನಾನು, ಅದೇ ಅಮವಾಸ್ಯೆಯ ದಿನ, ದೊಡ್ಡಕೆರೆಯ ಕ್ರಾಸ್‌ನಲ್ಲಿ, ನನ್ನ ಗಾಡಿ ನಿಮ್ಮಗಾಡಿಗೆ…
ಓ… ನಾ ಅದೇ ಅನ್ಕೊಂಡೆ. ಎಲ್ಲೋ ನೋಡಿದ ನೆನಪು ಅಂತಾ. ಹೇಳಿ ಹೇಳಿ. ಏನ್ ಬಂದಿದ್ದು, ಏನಾಗ್ಬೇಕಾಗಿತ್ತು ? ಅಷ್ಟರಲ್ಲಿ ಅಪ್ಪ ಮತ್ತು ಪುಟ್ಟಿ ಅಲ್ಲಿಗೆ ಧಾವಿಸುತ್ತಾರೆ. ಪುಟ್ಟಿ ಅಲ್ಲೇ ಪಕ್ಕದಲ್ಲೇ ಗಸ ಗಸೆ ಮರಕ್ಕೆ ಕಟ್ಟಿದ್ದ ಮೇಕೆಯನ್ನು ಕೌತುಕದಿಂದ ನೋಡುತ್ತಾ ನಿಂತುಕೊಂಡಳು. ಅಪ್ಪ ಸುಹಾಸನ ಬಳಿಗೆ ಬಂದದ್ದೇ ಅತ್ತೆಯು ಬಂದು ಪುಟ್ಟಿಯನ್ನು ಸೇರಿಕೊಂಡಳು.
ಅಪ್ಪ-ಸರ್ ಇವನು ನನ್ನ ಮಗನು. ಆವತ್ತು ಆ ಘಟನೆ ಆದ ದಿನದಿಂದ ಇವನಿಗೆ ನಿಮ್ಮದೇ ಚಿಂತೆ. ಅವರಿಗೆ ಏನಾಯಿತೋ, ಎತ್ತಾಯಿತೋ ? ಅವರಿಗೆ ನೋವಾಗಿದ್ದನ್ನು ಕಂಡು ಅವರ ಮನೆಯವರು ಅದೆಷ್ಟು ಸಂಕಟಪಟ್ಟರೋ ? ಒಂದು ವೇಳೆ ಅವರಿಗೆ ಶುಗರ್ ಇದ್ದರೆ ? ಆ ಗಾಯ ಜಾಸ್ತಿ ಆಗಿ ಬಿಟ್ಟರೆ ? ಥೂ ನಾನೆಂಥಾ ಕೆಲಸ ಮಾಡಿದೆ. ಹೀಗಾಗ ಬಾರದಾಗಿತ್ತು… ಹೀಗೆ. ಕೂತರೂ ನಿಂತರೂ ಇವನಿಗೆ ಬರೀ ನಿಮ್ಮದೇ ಯೋಚನೆ. ಇವನ ಕಷ್ಟ ನೋಡೋಕೆ ಆಗದೇ, ಹಾಗೇ ನಿಮ್ಮ ಯೋಗಕ್ಷೇಮವನ್ನೂ ವಿಚಾರಿಸಿದ ಹಾಗೂ ಆಗತ್ತೆ ಎಂದು ಇಲ್ಲಿವರೆಗೂ ಬಂದೆವು.
ಆಸಾಮಿ – ಅಯ್ಯೋ ತುಂಬಾ ತೊಂದರೆ ತಗೊಂಡ್ರಿ. ನನಗೆ ಏನೂ ಆಗಿಲ್ಲ. ಸ್ವಲ್ಪ ಕೈ ತರಚಿತ್ತು ಅಷ್ಟೇ. ಈಗ ವಾಸಿಯಾಗಿದೆ. ನೋಡಿ ನೀವೆ.
ಎಂದು ಗಾಯವಾಗಿದ್ದ ಕೈಯನ್ನು ಮುಂದಕ್ಕೆ ಚಾಚುತ್ತಾನೆ.
-ಹೋ…ಒಳ್ಳೇದು ಸರ್. ಅಪ್ಪ ಅವರ ಕೈಗೆ ಒಂದಷ್ಟು ಹಣವನ್ನು ತುರುಕಿ, ಬೇಡ ಎನ್ನಬೇಡಿ. ಇದು ನನ್ನ ಮಗನ ಸಮಾಧಾನಕ್ಕಾಗಿ ನೀವು ಇಟ್ಟುಕೊಳ್ಳಲೇ ಬೇಕು. ಹ್ಞೂಂ ಮರೆತಿದ್ದೆ. ಬಿದ್ದಾಗ ನಿಮ್ಮ ಷರ್ಟು ಹರಿದಿತ್ತಂತೇ. ಅದಕ್ಕೆ ಒಂದು ಷರ್ಟು ತಂದಿದ್ದಾನೆ ನನ್ನ ಮಗ. ನಿಮಗೆ ಕೊಡೋದಕ್ಕೆ ಅಂತ. (ಸುಹಾಸ್ ಗುಡು ಗುಡು ಓಡಿ ಗಾಡಿಯಲ್ಲಿದ್ದ ಕವರನ್ನು ತಂದು ಅಪ್ಪನಿಗೆ ಕೊಡುತ್ತಾನೆ) ಅಪ್ಪ ಅದನ್ನು ಅವರಿಗೆ ಕೊಟ್ಟು ಇದನ್ನು ಇಟ್ಟುಕೊಳ್ಳಿ, ಏನೂ ಭಾವಿಸಬೇಡಿ. ಆಗಲಿ ನಾವಿನ್ನು ಬರುತ್ತೇವೆ. ನನ್ನ ಮಗನಿಂದ ನಿಮಗೆ ತೊಂದರೆ ಆಗಿದ್ದಕ್ಕೆ ಕ್ಷಮೆಯಿರಲಿ.
ಇದ್ದಕ್ಕಿದ್ದಂತೇ ಪುಟ್ಟಿ ಆಸಾಮಿಯ ಮನೆ ಮುಂದೆಯೇ ನಿಂತಿದ್ದ ಅಂಬಾಸಿಡರ್ ಕಾರನ್ನು ಕಂಡು ಅದರ ಕಡೆಗೇ ವಿಚಿತ್ರವಾಗಿ ಕೈ ತೋರುತ್ತಾ ಹ್ಞೂಂ… ಹ್ಞೂಂ… ಎಂದು ಹೂಂಕರಿಸತೊಡಗಿದಳು. ಅವಳ ಕಣ್ಣುಗಳು ಕೆಂಡದಂತಾಗಿದ್ದರೆ. ದೇಹ ಸೆಟೆದು ಉಕ್ಕಿನಂತಾಗಿತ್ತು. ಅವಳನ್ನು ಕಂಡದ್ದೇ ಆ ಆಸಾಮಿ ಬೆವತು ಒಳಗಡೆಗೆ ಹೋಗಿ ದಡಾರನೆ ಬಾಗಿಲನ್ನು ಮುಚ್ಚಿಕೊಂಡ. ಅಪ್ಪ ಹ್ಞೂಂ ಹ್ಞೂಂ ಅವರೇ ಅವರೇ. ಅವರಿಗೆ ಏನೂ ಆಗಿಲ್ಲವಂತೆ ಆರಾಮಿದ್ದಾರೆ. ನೀನು ಸೆಲೆಕ್ಟ್ ಮಾಡಿದ್ದ ಷರ್ಟನ್ನೂ ಕೊಟ್ಟೆವು. ಬಾ ಹೋಗೋಣ ಎಂದು ಸಮಾಧಾನ ಪಡಿಸಲೆತ್ನಿಸುತ್ತಾ ಪುಟ್ಟಿಯನ್ನು ಕಷ್ಟ ಪಟ್ಟು ಗಾಡಿಗೆ ಹತ್ತಿಸಿಕೊಂಡರು. ಗಾಡಿ ಹೊರಟವು. ಅಪ್ಪ-ಅತ್ತೆ-ಸುಹಾಸ್ ಎಲ್ಲರೂ ಗಂಭೀರವಾಗಿದ್ದಾರೆ. ಬರುವಾಗ ಅವರಲ್ಲಿ ಇದ್ದಂತಹ ಲವಲವಿಕೆ ಅವರೊಬ್ಬರಲ್ಲೂ ಈಗ ಕಾಣಿಸುತ್ತಿಲ್ಲ. ಸದಾ ತನ್ನ ಮುಗ್ಧನಗುವಿನಿಂದ ಕಿಲುಗುಟ್ಟುತ್ತಿದ್ದ ಪುಟ್ಟಿಯಲ್ಲಿಯೂ ಸಹ. ಆ ಅಚಾನಕ್ ಅಪಘಾತದ ಆಸಾಮಿಯನ್ನು ಭೇಟಿಯಾದೆವಲ್ಲಾ ಎಂಬ ಸಮಾಧಾನಕ್ಕಿಂತ ಅವರಿಗೆ, ತಾವು ಎಂದೂ ಕಂಡಿಲ್ಲದ ಇಂದು ಕಂಡಂತಹ ಪುಟ್ಟಿಯ ವರ್ತನೆಯು ದೊಡ್ಡ ತಲೆನೋವನ್ನೇ ತಂದೊಡ್ಡಿದೆ. ಎಲ್ಲರ ತಲೆಯೊಳಗೂ ಅವರದೇ ಆದ ಲೆಕ್ಕಾಚಾರಗಳು ನಡೆಯುತ್ತಿತ್ತು. ಪುಟ್ಟಿ ಸುಮ್ಮನೆ ದಂಗುಬಡಿದವರಂತೆ ಕೂತಿದ್ದಳು.
ಇಂದಿಗೆ ಏಳೆಂಟು ವರುಷದ ಮಾತು. ಪ್ರತೀ ವರ್ಷದಂತೆ ನಡೆಯುವ ಹತ್ತೂರ ಜಾತ್ರೆಯ ದೊಡ್ಡ ತೇರಿನ ದಿನ. ಮಧ್ಯಾಹ್ನದ ಸುಡುಬಿಸಿಲು. ಜನಸಾಗರವೋ ಜನ ಸಾಗರ. ಗಂಟೆ, ಜಾಗಟೆ, ಮಂತ್ರಘೋಷ, ಜೈಕಾರ, ಸದ್ದುಗದ್ದಲ…
ದೇವಸ್ಥಾನದ ಕಲ್ಯಾಣಿ. ಕಲ್ಯಾಣಿಯ ದಡದಲ್ಲಿ ಒಂದು ಅಂಬಾಸಿಡರ್ ಕಾರು. ಊಟ ಮುಗಿಸಿ ಸುತ್ತಾಡಲೆಂದು ಬಂದ ಪುಟ್ಟಿ ಹಠಾತ್ತನೆ ಆ ಕಾರಿನೊಳಗೆ ಬಂಧಿಯಾಗಿದ್ದಳು. ಒಳಗಡೆಯಿಂದ ಆಕೆಗೆ ಹೊರಗಡೆಯ ಎಲ್ಲವೂ ಕಾಣುತ್ತಿದೆ. ಆದರೆ ಹೊರಗಡೆಗೆ ಮಾತ್ರ ಅವಳು ಕಾಣುತ್ತಿಲ್ಲ. ತನ್ನ ಕಣ್ಣೆದುರಿಗೇ, ತನ್ನ ಪಕ್ಕದಲ್ಲೇ ಜನ ತಿರುಗಾಡುತ್ತಿದ್ದಾರೆ. ಆದರೆ ದುರಂತವೆಂದರೆ ಅರ‍್ಯಾರಿಗೂ ಇವಳ ಆಕ್ರಂಧನ ಕೇಳುತ್ತಿಲ್ಲ. ಅವಳ ಅಂಗಾಂಗಗಳ ಮೇಲೆ ರಾಕ್ಷಸತ್ವವು ಹಲ್ಲು ಕಿರಿಯುತ್ತಾ ನರ್ತಿಸುತ್ತಿತ್ತು. ಆಕೆ ಕಣ್ಣೀರಿಡುತ್ತಾ ಗೋಳಾಡಿದ್ದಳು. ಶಕ್ತಿ ಮೀರಿ ಚೀ…ರಿ ಕೊಂಡಿದ್ದಳು.
–ದಿಲೀಪ್ ಎನ್ಕೆ
