ಅದು ಬೆಳಿಗ್ಗೆ ಹತ್ತೂಕಾಲು ಗಂಟೆಯ ಸಮಯ. ಬ್ಯಾಂಕ್ ಶಾಖೆಯೊಳಕ್ಕೆ ಸಿಬ್ಬಂದಿ ಒಬ್ಬೊಬ್ಬರಾಗಿ ಬಂದು ತಂತಮ್ಮ ಸೀಟಿನತ್ತ ನಡೆದು, ಅಲ್ಲಿನ ಕಂಪ್ಯೂಟರ್, ಕುರ್ಚಿ, ಮುಂಗಟ್ಟೆಯ ಭಾಗ ಮುಂತಾದವನ್ನು ಒರೆಸಿಕೊಂಡು ಕೆಲಸ ಆರಂಭಿಸಲು ಅಣಿಯಾಗುತ್ತಿದ್ದರು. ಇನ್ನೂ ಹತ್ತೂವರೆ ಆಗದೆ ಇದ್ದುದರಿಂದ ಗ್ರಾಹಕರಿಗೆ ಪ್ರವೇಶವಿರಲಿಲ್ಲ. ಹಾಗೆ ಒಳಕ್ಕೆ ನುಗ್ಗಲು ಯತ್ನಿಸುತ್ತಿದ್ದವರಿಗೆ ಬಾಗಿಲಲ್ಲಿ ನಿಂತಿದ್ದ ಭದ್ರತಾ ಸಿಬ್ಬಂದಿ ತಡೆಯುತ್ತಿದ್ದ.
ಅದೇ ಸಮಯದಲ್ಲಿ ನಗರ ಪೋಲಿಸ್ ಠಾಣೆಯ ಇನ್ಸ್‌ಪೆಕ್ಟರ್ ದಯಾನಂದ ಅವರು ತಮ್ಮ ಒಬ್ಬ ಸಿಬ್ಬಂದಿಯೊಡನೆ ಆಗಮಿಸಿ ಒಳಕ್ಕೆ ಬಿಡಲು ಭದ್ರತಾ ಸಿಬ್ಬಂದಿಗೆ ಆಗ್ರಹಿಸಿ ಒಳಹೋದರು. ಅವರು ಯಾವುದೋ ತುರ್ತು ಕೆಲಸದ ಮೇಲೆ ಬ್ಯಾಂಕಿಗೆ ಬಂದಿದ್ದರೆಂಬುದನ್ನು ಅವರ ಮುಖಭಾವವೇ ಸಾರುತ್ತಿತ್ತು.
ಬಂದವರೇ ಸೀದಾ ಶಾಖಾ ವ್ಯವಸ್ಥಾಪಕರ ಕ್ಯಾಬಿನ್ ಒಳಗೆ ನುಗ್ಗಿದರು. ವ್ಯವಸ್ಥಾಪಕರು ಅಲ್ಲಿರಲಿಲ್ಲ. ಸಿಬ್ಬಂದಿ ಹಾಜರಿ, ಸೀಟು ವ್ಯವಸ್ಥೆ ಇತ್ಯಾದಿಗಳನ್ನು ಗಮನಿಸಲು ಲೆಕ್ಕಾಧಿಕಾರಿಗಳ ಜತೆ ಚರ್ಚಿಸುತ್ತಿದ್ದರು.
ಅಲ್ಲಿಗೆ ಬಂದ ಅಧೀನ ಸಿಬ್ಬಂದಿಗೆ ಸಿದ್ಧರಾಜುವಿಗೆ ಫ್ಯಾನ್ ಹಾಕಲು ಸೂಚಿಸಿದರು ಇನ್ಸ್‌ಪೆಕ್ಟರರು. ಫ್ಯಾನ್ ಹಾಕಿದ ಸಿದ್ಧರಾಜು”ಸಾರ್ ಯಾರು ಬೇಕಿತ್ತು?” ಎಂದು ಕೇಳಿದ. ಇನ್ಸ್‌ಪೆಕ್ಟರರು”ನಿಮ್ಮ ಮ್ಯಾನೇಜರ್ ಎಲ್ಲಪ್ಪ. ಬೇಗ ಕರಿ. ಅರ್ಜೆಂಟ್ ಕೆಲಸ ಇದೆ ನನಗೆ”ಎಂದು ಅವಸರಿಸಿದರು.
ಸಿದ್ಧರಾಜುವಿನಿಂದ ವರ್ತಮಾನ ತಿಳಿದ ವ್ಯವಸ್ಥಾಪಕ ವರಚಂದ್ರಮೂರ್ತಿಯವರು ಧಡಧಡ ಬಂದು ಇನ್ಸ್‌ಪೆಕ್ಟರರಿಗೆ ವಂದಿಸಿ”ಸಾರ್, ಏನು ವಿಷಯ?”ಎಂದು ಕೇಳಿದಾಗ,
ಅದಕ್ಕೆ ಅವರು” ಕೆಲಸವಿಲ್ಲದೆ ಬರ್ತೀವಾ ಇಲ್ಲಿಗೆ? “ಎಂದು ಶುಷ್ಕವಾಗಿ ನಕ್ಕರು.
“ಸಾರ್, ಕಾಫಿ, ಟೀ ಏನು ತೆಗೆದುಕೊಳ್ತೀರಿ? ಎಂದು ವರಚಂದ್ರಮೂರ್ತಿಯವರು ವಿಚಾರಿಸಿದಾಗ ” ಯಾವುದಾದರೂ ಸರಿ” ಎಂದ ಇನ್ಸ್‌ಪೆಕ್ಟರರು. “ನನ್ನ ಹೆಸರು ದಯಾನಂದ, ಆರು ತಿಂಗಳ ಹಿಂದೆ ನಗರ ಠಾಣೆಗೆ ಬಂದಿದ್ದೇನೆ. “ಎಂದರು.
“ನಿಮ್ಮ ಸಂಬಳದ ಖಾತೆ ಇಲ್ಲೇ ಇದೆ ಅಲ್ಲವೆ?”ಎಂದು ಮೂರ್ತಿಗಳು ಕೇಳಿದಾಗ ಅವರು ” ಇದೆ, ಇದೆ, ಅವನ್ನೆಲ್ಲ ನಮ್ಮ ಸಿಬ್ಬಂದಿ ನೋಡಿಕೊಳ್ತಾರೆ. ನನಗೆಲ್ಲಿದೆ ಟೈಮು?”ಎಂದು ಉತ್ತರಿಸಿದರು.
ಕಾಫಿ ಸೇವಿಸಿದ ಇನ್ಸ್‌ಪೆಕ್ಟರರು , ನೋಟೀಸ್ ಒಂದನ್ನು ಮೂರ್ತಿಯವರಿಗೆ ಕೊಟ್ಟು”ನಾನು ಬರಲು ಕಾರಣ ಇದು” ಎಂದರು.
ವ್ಯವಸ್ಥಾಪಕರು ನಿಧಾನವಾಗಿ ಆ ನೋಟಿಸಿನ ಒಕ್ಕಣೆ ಓದತೊಡಗಿದರು. ಅದು ಅಪ್ರಮೇಯ ಎನ್ನುವ ಬ್ಯಾಂಕಿನ ಪ್ರತಿಷ್ಠಿತ ಗ್ರಾಹಕ ನೀಡಿದ ದೂರನ್ನು ಆಧರಿಸಿತ್ತು.
ಅಪ್ರಮೇಯ ಅವರು ಈ ಬ್ಯಾಂಕಿನ ಶಾಖೆಯಲ್ಲಿ ತಾವು ಹೊಂದಿರುವ ಭದ್ರತಾ ಕಪಾಟಿನಲ್ಲಿ ಇರಿಸಿದ್ದ ಆಭರಣಗಳು ನಾಪತ್ತೆಯಾಗಿದೆಯೆಂದೂ, ಈ ವಿಷಯದಲ್ಲಿ ಬ್ಯಾಂಕಿನ ಸಿಬ್ಬಂದಿ ಮೇಲೆ ಅನುಮಾನವೆಂದೂ, ಕಳವಾದುದನ್ನು ಪತ್ತೆ ಮಾಡಿ ಕೊಡಬೇಕೆಂದೂ ದೂರು ನೀಡಿದ್ದರು. ಅದಕ್ಕೇ ಈ ನೋಟೀಸು. ಓದಿದೊಡನೆ ಮೂರ್ತಿಯವರಿಗೆ ಒಂದು ಕ್ಷಣ ಆಘಾತವಾಯಿತು. ಏನು ಹೇಳಲೂ ತೋಚಲಿಲ್ಲ.
ಇನ್ಸ್‌ಪೆಕ್ಟರರು ಏನನ್ನುತ್ತೀರಿ ಎನ್ನುವಂತೆ ನೋಡಿದರು.
ಭದ್ರತಾ ಕಪಾಟುಗಳ ವಿಷಯದಲ್ಲಿ ಬ್ಯಾಂಕ್ ಹಾಗೂ ಗ್ರಾಹಕರದ್ದು ಮಾಲೀಕ ಹಾಗೂ ಬಾಡಿಗೆದಾರರ ಸಂಬಂಧ. ಲಾಕರ್ ತೆರೆಯುವಾಗ ಬ್ಯಾಂಕಿನ ಲೆಕ್ಕಾಧಿಕಾರಿ ಹಾಗೂ ಗ್ರಾಹಕ ಇಬ್ಬರೂ ಕೀಲಿಯನ್ನು ತಿರುಗಿಸಿದರೆ ಮಾತ್ರ ತೆಗೆದುಕೊಳ್ಳುತ್ತದೆ. ಆದರೆ ಕೆಲಸ ಮುಗಿದ ಮೇಲೆ ಗ್ರಾಹಕ ಒಮ್ಮೆ ಕೀಲಿ ತಿರುಗಿಸಿದರೆ ಎರಡೂ ಬೀಗಗಳು ಮುಚ್ಚಿಕೊಳ್ಳುತ್ತವೆ. ಒಳಗಿರುವ ವಸ್ತುಗಳ ಬಗ್ಗೆ ಮಾಹಿತಿ ಬ್ಯಾಂಕಿನವರಿಗೆ ತಿಳಿದಿರಲು ಸಾಧ್ಯವಿಲ್ಲ . ಇವೆಲ್ಲ ಗ್ರಾಹಕರು ಸಹಿ ಮಾಡಿ ನೀಡುವ ಒಪ್ಪಂದ ಪತ್ರದಲ್ಲೇ ಇರುತ್ತದೆ ಎಂದೆಲ್ಲ ವಿವರಿಸಿದರು.
ಅದಕ್ಕೆ ಇನ್ಸ್‌ಪೆಕ್ಟರು “ಲಾಕರನ್ನು ಜಂಟಿಯಾಗಿ ತೆಗೆಯಬೇಕು ಎಂದಿರಿ. ಲಾಕರ್ ನ ಮಾಸ್ಟರ್ ಕೀ ಅಕೌಂಟೆಂಟ್ ಹತ್ತಿರ ಇರುತ್ತದೆ ಅಲ್ಲವೆ. ಗ್ರಾಹಕರ ಪಾಲಿನ ಕೀ ಅವರಿಗೆ ಕೊಡುವವರು ಯಾರು?” ಎಂದು ಪ್ರಶ್ನಿಸಿದರು.
“ಸಾರ್, ಅದು ನಮ್ಮ ನಗದು ಅಧಿಕಾರಿ ಹತ್ತಿರ ಇರುತ್ತದೆ. ಅವರೇ ಅದನ್ನು ಗ್ರಾಹಕರಿಗೆ ನೀಡುವುದು. ಖಾಲಿ ಇರುವ ಎಲ್ಲ ಲಾಕರುಗಳ ಕೀಲಿ ಅವರ ಹತ್ತಿರ ಇರುತ್ತದೆ. ” ಎಂದರು ವ್ಯವಸ್ಥಾಪಕರು.
“ಎಲ್ಲಿ ಇಟ್ಟಿರುತ್ತಾರೆ ಆ ಕೀಲಿಗಳನ್ನು?” ಪ್ರಶ್ನಿಸಿದರು ಇನ್ಸ್‌ಪೆಕ್ಟರ್.
“ಈ ಕೀಲಿಗಳನ್ನೆಲ್ಲ ಒಂದು ಖಾಲಿ ಲಾಕರಿನಲ್ಲಿ ಇಡಲಾಗುತ್ತೆ. “ಎಂದರು ಮೂರ್ತಿ.
” ಅಂದರೆ ಅವರಿಬ್ಬರಿಗೆ ಲಾಕರಿನ ಕೀಲಿಗಳ ವಿಷಯ ತಿಳಿದಿರುತ್ತದೆ ಅಲ್ಲವೆ? ಎಂದರು ಇನ್ಸ್‌ಪೆಕ್ಟರ್.
“ಹೌದು ಸಾರ್, ಯಾರಾದರೂ ಲಾಕರ್ ಖಾಲಿ ಮಾಡಿದರೆ ಆ ಬೀಗವನ್ನು ಬದಲಿಸಿ ಹೊಸದಾಗಿ ಲಾಕರ್ ತೆಗೆದುಕೊಳ್ಳುವವರಿಗೆ ಬೇರೆ ಕೀ ಕೊಡುತ್ತೇವೆ” ಎಂದರು ವ್ಯವಸ್ಥಾಪಕರು.
ಇನ್ಸ್‌ಪೆಕ್ಟರು ಏನೋ ಆಲೋಚಿಸಿ” ಅಂದರೆ ಅವರಿಬ್ಬರೂ ಸೇರಿ ಲಾಕರಿನ ನಕಲಿ ಕೀ ಮಾಡಿಸಿಕೊಳ್ಳುವ ಸಂಭವಕ್ಕೆ ಏನನ್ನುತ್ತೀರಿ?”ಎಂದು ಪ್ರಶ್ನಿಸಿದಾಗ ವ್ಯವಸ್ಥಾಪಕರಿಗೆ ಈ ಅನುಮಾನದ ಫಿರಂಗಿ ಜಂಟಿಸುಪರ್ದಿಗಾರರ ಕಡೆ ತಿರುಗಿದೆಯೇ ಎನಿಸಿತು.
ಸಾವರಿಸಿಕೊಳ್ಳುತ್ತ”ಹಾಗಾಗಲಾರದು ಸಾರ್. ಅವರಿಬ್ಬರೂ ಪ್ರಾಮಾಣಿಕ ಸಿಬ್ಬಂದಿ. ಅದೂ ಅಲ್ಲದೆ ಇಂಥ ದೂರು ನಮ್ಮ ಶಾಖೆಯ ಇತಿಹಾಸದಲ್ಲೇ ಬಂದಿರಲಿಲ್ಲ ಎಂದು ವಿವರಿಸಿ ದರು.
“ಈಗ ಅಂಥ ಇತಿಹಾಸ ಸೃಷ್ಟಿಯಾಗಿದೆಯಲ್ಲ . ಅದಕ್ಕೇನಂತೀರಿ?ಎಂದು ಪ್ರಶ್ನಿಸಿದರು ದಯಾನಂದ ಅವರು.
ಹೊರಗಿನಿಂದ ಇವೆಲ್ಲವನ್ನೂ ನೋಡುತ್ತಿದ್ದ ಇತರ ಸಿಬ್ಬಂದಿ ಹಾಗೂ ಗ್ರಾಹಕರಿಗೆ ಕುತೂಹಲ. ಪೋಲಿಸ್ ಆಗಮನ ಏಕಿರಬಹುದು?ವಿಷಯ ಏನಿರಬಹುದು? ಎಂದೆಲ್ಲ ಸಿದ್ಧರಾಜುವಿಗೆ ಕೇಳಲಾರಂಭಿಸಿದರು.
” ಏನೋಪ್ಪ ನನಗೂ ಏನೂ ಗೊತ್ತಿಲ್ಲ. ಟಪಾಲು ಬಂದಿದ್ದನ್ನು ಓಪನ್ ಮಾಡಲು ಕ್ಯಾಬಿನ್ನಿಗೆ ಹೋದೆ. ಅದನ್ನ ಅಲ್ಲಿ ಇಟ್ಟು ಹೋಗು ಆಮೇಲೆ ನೋಡೋಣ ಎಂದು ನನ್ನ ಕಳಿಸಿ ಒಳಗಡೆಯಿಂದ ಲಾಕ್ ಮಾಡಿಕೊಂಡರು “ಎಂದಷ್ಟೇ ಹೇಳಿದ.
ಇತ್ತ ಇನ್ಸ್‌ಪೆಕ್ಟರರು ” ನೋಡಿ ದೂರು ಕೊಟ್ಟಿರುವವರು ಪ್ರಭಾವಿ ವ್ಯಕ್ತಿ, ಕೇಂದ್ರ ಸರಕಾರದ ಉನ್ನತ ಹುದ್ಧೆಯಲ್ಲಿದ್ದೋರು ಮೇಲಾಗಿ ಹಿರಿಯ ನಾಗರಿಕರು. ದೂರಿನ ವಿಷಯ ಕಮಿಷನರಿಗೂ ಗೊತ್ತು. ಅವರು ವಿಶೇಷ ಮುತುವರ್ಜಿ ವಹಿಸಿ ಕೇಸ್ ವಿಚಾರಣೆ ಮಾಡಲು ತಾಕೀತು ಮಾಡಿದ್ದಾರೆ. “ಖಡಕ್ಕಾಗಿಯೇ ಹೇಳಿದರು ಇನ್ಸ್‌ಪೆಕ್ಟರ್.
“ಸಾರ್ ದಯವಿಟ್ಟು ಒಂದಿಷ್ಟು ಸಮಯ ಕೊಡಿ. ನೋಟೀಸಿಗೆ ಉತ್ತರಿಸಲು” ಎಂದು ಗೋಗರೆದರು ಮೂರ್ತಿ.
“ಸಾಧ್ಯವೇ ಇಲ್ಲ, ಹೇಳಿದೆನಲ್ಲ ಕಮಿಷನರ್ ಪದೇ ಪದೇ ಪೋನ್ ಮಾಡಿ ಪ್ರೋಗ್ರೆಸ್ ಕೇಳ್ತಾರೆ. “ಇನ್ಸ್‌ಪೆಕ್ಟರರ ಮಾತಿನ ಧಾಟಿ ಇನ್ನೂ ಗಡುಸಾಯಿತು.
” ಎರಡು ದಿನವಾದರೂ ಟೈಮ್ ಕೊಡಿ ಇನ್ಸ್‌ಪೆಕ್ಟರ್ ಸಾಹೇಬರೇ”ಎಂದು ಮತ್ತೆ ವಿನಂತಿಸಿದರು ವ್ಯವಸ್ಥಾಪಕರು.
“ನೋಡಿ , ನಾಳೆ ಸಾಯಂಕಾಲದ ವರೆಗೆ ಟೈಮ್ ಕೊಡ್ತೀನಿ. ನೋಟೀಸಿಗೆ ಜವಾಬು ಬರಬೇಕು. ಅದಲ್ಲದೆ ನಿಮ್ಮ ಬ್ರಾಂಚಿನ ಪ್ರತಿಯೊಬ್ಬ ಸಿಬ್ಬಂದಿಯನ್ನೂ ವಿಚಾರಣೆ ಮಾಡಬೇಕು. ಅವರು ಕರೆದಾಗ ಸ್ಟೇಷನ್ನಿಗೆ ಬರಬೇಕು” ಎಂದರು .
“ಸಾರ್, ನಿಮ್ಮ ತನಿಖೆಗೆ ಅಡ್ಡಿ ಬರಲ್ಲ. ಆದರೆ ದಯವಿಟ್ಟು ವಿಚಾರಣೆಗೆ ನೀವು ಇಲ್ಲಿಗೇ ಬನ್ನಿ. ನಿಮಗೆ ಎಲ್ಲ ಅನುಕೂಲ ಮಾಡಿಕೊಡುತ್ತೇನೆ. ನಾವು ನಿಮ್ಮ ಠಾಣೆಯ ಎಲ್ಲ ಸಿಬ್ಬಂದಿಯ ಸಂಬಳದ ಲೆಕ್ಕ , ಸಾಲ ನೀಡಿಕೆ ಎಲ್ಲವನ್ನೂ ಚಾಚೂ ತಪ್ಪದೆ ಮಾಡಿದ್ದೇವೆ. ಈ ಉಪಕಾರ ಮಾತ್ರ ಆಗಲ್ಲ ಎನ್ನಬೇಡಿ” ಎಂದು ವಿನಂತಿಸಿದರು ವ್ಯವಸ್ಥಾಪಕರು.
“ನೋಡೋಣ, ಎಸಿಪಿ ಸಾಹೇಬ ರನ್ನು ಕೇಳಬೇಕು. ನಾಳೆ ಸಾಯಂಕಾಲದೊಳಗೆ ಜವಾಬು ಬರಬೇಕು ನೆನಪಿರಲಿ ” ಎನ್ನುತ್ತ ಜತೆಯಲ್ಲಿ ಬಂದ ತಮ್ಮ ಸಿಬ್ಬಂದಿ ಸಮೇತ ಹೊರಟರು ದಯಾನಂದ್.
ಅವರು ಹೊರಟೊಡನೆ ಮುಖ್ಯ ಕಚೇರಿಗೆ ದೂರಿನ ವಿಷಯ ತಿಳಿಸಿದರು ವ್ಯವಸ್ಥಾಪಕರು.
“ನೈಪುಣ್ಯದಿಂದ ಪರಿಸ್ಥಿತಿ ನಿಭಾಯಿಸಿ, ವಿಷಯ ಪತ್ರಿಕೆಗಳಿಗೆ ಬರದಂತೆ ನೋಡಿಕೊಳ್ಳಿ. ಬ್ಯಾಂಕಿನ ವಕೀಲರಿಗೆ ತಿಳಿಸಿ” ಇಂಥ ಮಾಮೂಲು ಉತ್ತರ ಲಭಿಸಿತು.
ವ್ಯವಸ್ಥಾಪಕರು ಈ ವಿಷಯದ ಬಗ್ಗೆ ಚರ್ಚಿಸಲು ಲೆಕ್ಕಾಧಿಕಾರಿಗಳಿಗೆ, ನಗದು ಅಧಿಕಾರಿಗಳಿಗೆ ಹೇಳಿ ಕಳಿಸಿದರು.
ಅಂತೂ ಇಡೀ ಶಾಖೆಯಲ್ಲಿ ಈಗ ಶಾಂತ ಆದರೆ ಪ್ರಕ್ಷುಬ್ಧ ಎಂಬಂಥ ವಾತಾವರಣ.
ಸಹಿಗಾಗಿ ಯಾವುದೋ ವೋಚರ್ ವ್ಯವಸ್ಥಾಪಕರ ಬಳಿ ತಂದ ಸಿದ್ಧರಾಜುವಿಗೆ “ಅವರಿಬ್ಬರಿಗೂ ಹೇಳಿದೆಯಾ?ಎಂದು ಕೇಳಿದರು. ” ಹೇಳಿದ್ದೇನೆ ಐದು ನಿಮಿಷದಲ್ಲಿ ಬರ್ತಾರೆ” ಎಂದು ಉತ್ತರಿಸಿದ ಅವನು .
“ಅಂದ ಹಾಗೆ ಈ ಅಪ್ರಮೇಯ ಅನ್ನುವವರು ಯಾರು, ನನಗೆ ಮುಖ ಜ್ಞಾಪಕಕ್ಕೆ ಬರುತ್ತಿಲ್ಲವಲ್ಲ?” ಎಂದು ಅವನನ್ನು ಕೇಳಿದರು ವರಚಂದ್ರಮೂರ್ತಿಗಳು.
“ಎಪ್ಪತ್ತು ವರುಷ ದಾಟಿದೆ ಸಾರ್. ಬಂದಾಗಲೆಲ್ಲ ಅವರು ಕೌಂಟರಿನಲ್ಲೇ ಕೆಲಸ ಮುಗಿಸಿಕೊಂಡು ಹೋಗ್ತಾರೆ. ರಜನಿ ಮೇಡಂ ಅವರ ಕೆಲಸ ಮಾಡಿಕೊಡ್ತಾರೆ. ಕ್ಯಾಬಿನ್ನಿಗೆ ಬರೋದು ಅಪರೂಪ. ಹೋದ ತಿಂಗಳು ಅವರು ಬಂದಾಗ ಕೌಂಟರಿನಲ್ಲಿ ತುಂಬಾ ಜನ ಇದ್ದರು ಇಲ್ಲೇ ಬಂದು ಕೂತು ನಿಮ್ಮ ಹತ್ತಿರ ಮಾತಾಡ್ತಾ ಇದ್ದರು. ನಾನೇ ಚೆಕ್ಕಿಗೆ ಕ್ಯಾಶ್ ತಂದುಕೊಟ್ಟೆ. ಸ್ವಲ್ಪ ಅನುಮಾನದ ಗಿರಾಕಿ. ಅದಕ್ಕೇ ಪೂರ್ತಿ ಎಣಿಸಿಕೊಳ್ಳೋವರ್ಗೂ ಇಲ್ಲೇ ನಿಂತಿದ್ದೆ” ಅಂತ ಅವರ ಸ್ವಭಾವ ಚಿತ್ರಣವನ್ನು ಮಾಡಿದ ಸಿದ್ಧರಾಜು.
ಅವನು ಹೇಳುತ್ತಿದ್ದಂತೆ ಮೂರ್ತಿಯವರಿಗೂ ಈಗ ನೆನಪಾಗತೊಡಗಿತು. ಕಳೆದ ತಿಂಗಳು ಒಬ್ಬರು ನೀಶಕಾಯದ ಆಕರ್ಷಕ ವ್ಯಕ್ತಿತ್ವದ ಹಿರಿಯ ನಾಗರಿಕರೊಬ್ಬರು ಭೇಟಿಯಾಗಿ ತಾವು ಕೇಂದ್ರ ಸರಕಾರದ ನಿವೃತ್ತ ಸಂಪುಟ ಉಪಕಾರ್ಯದರ್ಶಿಗಳೆಂದು ಪರಿಚಯಿಸಿಕೊಂಡಿದ್ದರು. ಅವರ ಕುಟುಂಬದ ಹಾಗೂ ಅಮೆರಿಕದಲ್ಲಿದ್ದಮಗನ ಠೇವಣಿ ಖಾತೆಗಳು ಈ ಶಾಖೆಯಲ್ಲೇ ಇದ್ದವು. ಹಾಗೆ ಲೋಕಾಭಿರಾಮವಾಗಿ ಮಾತನಾಡುತ್ತಾ “ನೋಡಿ ನನಗೆ ಒಬ್ಬನೇ ಮಗ, ಅಮೆರಿಕಾದಲ್ಲಿ ಒಳ್ಳೆ ಕೆಲಸದಲ್ಲಿ ಇದ್ದಾನೆ. ವಾಪಸು ಬರುವುದು ಸದ್ಯಕ್ಕೆಅನುಮಾನ. ಇಲ್ಲಿ ನಾವು ಗಂಡ ಹೆಂಡತಿಇಬ್ಬರೇ. ಹೋದ ವಾರ ನನ್ನ ಹೆಂಡತಿಗೆ ಹುಷಾರಿಲ್ಲದಾಗ ಪಕ್ಕದ ಮನೆಯ ವಿದ್ಯಾರ್ಥಿಯೊಬ್ಬನ ಸಹಾಯದಿಂದ ಆಸ್ಪತ್ರೆಗೆ ಸೇರಿಸಬೇಕಾಯಿತು. ಯಾವುದೋ ಕೇಟರಿಂಗ್ ನವರರಿಂದ ಊಟ, ಉಪಹಾರ ತರಸಿಕೊಳ್ತೇವೆ. ಒಟ್ಟಿನಲ್ಲಿನಾನು ನನ್ನ ಮಗನ ಮನೆ, ಹಣ ಎಲ್ಲದಕ್ಕೂ ಕಾವಲುಗಾರ’ ಎಂದು ಬೇಸರಿಸಿಕೊಂಡು ” ನನ್ನ ಮಾತಿನಿಂದ ನಿಮಗೆ ತೊಂದರೆಯಾಗಿಲ್ಲ ತಾನೆ”ಎಂದು ಕೇಳಿದ್ದರು.
ಬ್ಯಾಂಕಿನ ಮೇಲೆ ಇಷ್ಟು ವಿಶ್ವಾಸ ಇರಿಸಿದ್ದ ವ್ಯಕ್ತಿಯಿಂದ ಘೋರವಾದ ಆಪಾದನೆಯೇ. !”ಧಣಿ ಚಿತ್ತ ಮರದ ನೆರಳು”ಎಂಬಂತೆ ಈ ಗ್ರಾಹಕರ ಚಿತ್ತ ಯಾವಾಗ ಎತ್ತ ಎಂದು ಅರಿಯಲಾಗದೇನೋ ಎಂದುಕೊಂಡರು ಮೂರ್ತಿ.
ಲೆಕ್ಕಾಧಿಕಾರಿ ಹಾಗೂ ನಗದು ಅಧಿಕಾರಿ ಇಬ್ಬರೂ ಬಂದಾಗ ದೂರಿನ ಸಂಗತಿಯನ್ನು ಸಾದ್ಯಂತವಾಗಿ ವಿವರಿಸಿದರು ಮೂರ್ತಿಯವರು.
ಅದನ್ನು ಕೇಳಿ ಇಬ್ಬರೂ ಒಂದರೆಕ್ಷಣ ಅವಾಕ್ಕಾದರು. ಮುಂದೆ ಕಾರ್ಯಾಚರಣೆಗಳನ್ನು ಊಹಿಸಿ ಭೀತರಾದರು.
“ಸಾರ್, ಇದು ಹೇಗೆ ಸಾಧ್ಯ?ನಮ್ಮ ಮೇಲೇ ಆಪಾದನೇಯೇ?”, ಎಂದು ನಡುಗುವ ಸ್ವರದಲ್ಲೇ ಕೇಳಿದರು ನಗದು ಅಧಿಕಾರಿ ಮಲ್ಲೇಶ್.
ಅದೇ ದನಿಯಲ್ಲೇ ಲೆಕ್ಕಾಧಿಕಾರಿ ಅಪ್ಪಾರಾವ್ ” ನನ್ನ ಮೂವತ್ತು ವರುಷಗಳ ಸೇವೆಯಲ್ಲಿ ಇಂಥ ಕಳಂಕ ಬಂದಿರಲಿಲ್ಲ. ಈಗೇನು ಮಾಡೋಣ ಸಾರ್ ?”ಎಂದರು ಕಂಪಿಸುತ್ತ.
” ಏನು ಮಾಡಬೇಕೆಂದು ನಿಧಾನವಾಗಿ ಯೋಚಿಸೋಣ. ಉದ್ವೇಗ ಬೇಡ”, ಎಂದರು ಮೂರ್ತಿ.
ಬಹುಶಃ ಯೋಚನೆಗಳ ಮುಖವಾಡ ಹೊತ್ತ ನೀರವತೆಯೇ ಆ ಸನ್ನಿವೇಶವನ್ನುಆಳುತ್ತಿತ್ತೇನೋ!
ನಗದು ಅಧಿಕಾರಿ ಮಲ್ಲೇಶ್ ಏನೋ ಹೊಳೆದವರಂತೆ”ಸಾರ್ , ಅಮೆರಿಕದಲ್ಲಿರುವ ಅವರ ಮಗನಿಗೆ ಈ ವಿಷಯ ತಿಳಿಸೋಣವೇ”ಎಂದರು.
“ಅದರಿಂದೇನು ಪ್ರಯೋಜನ. ?ಅವರೂ ಅಪ್ಪನ ದೂರನ್ನೇ ಸರಿ ಎನ್ನುತ್ತಾರೆ. ” ಎಂದರು ಮೂರ್ತಿ.
“ಪ್ರಯತ್ನಿಸಿದರೆ ತಪ್ಪೇನು ?”ಎಂದು ಹೇಳಿದರು ಅಪ್ಪಾರಾವ್.
“ಸರಿ, ದಾಖಲೆಗಳಲ್ಲಿ ಅವರ ಪೋನ್ ನಂಬರ್ ಹುಡುಕಿ” ಎಂದರು ವ್ಯವಸ್ಥಾಪಕರು.
“ಹೋದ ವರ್ಷ ಬಂದಾಗ ಅವರನು ನನಗೆ ವಿಸಿಟಿಂಗ್ ಕಾರ್ಡ್ ಕೊಟ್ಟಿದ್ರು. ಇದೆಯೇ ನೋಡ್ತೀನಿ’ಎಂದು ಸೀಟಿನತ್ತ ಹೊರಟರು ಅಪ್ಪಾರಾವ್.
ಪೋನ್ ನಂಬರೇನೋ ಸಿಕ್ಕಿತು. ಇಬ್ಬರೂ ವ್ಯವಸ್ಥಾಪಕರತ್ತ ಧಾವಿಸಿದರು. ಆಗ ಗಂಟೆ ಹನ್ನೆರಡು ದಾಟಿತ್ತು. ಅಮೆರಿಕದಲ್ಲಿ ಹತ್ತು ಅಥವಾ ಹನ್ನೊಂದು ಇರಬಹುದೇ ಎಂದು ಲೆಕ್ಕಿಸುತ್ತ ” ಸಾರ್ ಈಗ ಪೋನ್ ಮಾಡೋಣವೇ?” ಎಂದು ಕೇಳಿದರು ಮಲ್ಲೇಶ್.
” ಮಾಡೋಣ ಅದಕ್ಕೇನು? ನಾನೇ ಮಾಡ್ತೀನಿ”ಎನ್ನುತ್ತ ಮೂರ್ತಿಗಳು ಅಪ್ರಮೇಯ ಅವರ ಮಗ ಶ್ರೀವತ್ಸ ಅವರನ್ನು ಸಂಪರ್ಕಿಸಿದಾಗ ಅತ್ತ ಕಡೆಯಿಂದ ಒಂದು ದನಿ “ಯಾರಿದು ಈ ಹೊತ್ತಿನಲಿ, ಅದೂ ಅನುಮತಿಯಿಲ್ಲದೆ”. ಎಂದು ಮಾತನಾಡಿದಂತಾಯ್ತು.
” ಶ್ರೀವತ್ಸ ಅವರೆ ನಾವು ಬ್ಯಾಂಕಿನಿಂದ ಮಾತನೋಡೋದು. ನಿಮ್ಮ ತಂದೆ ಅಪ್ರಮೇಯ ಅವರ ಅಕೌಂಟ್ ಬಗ್ಗೆ. . . . . “
ಅವರ ಸಂಭಾಷಣೆಯನ್ನು ತುಂಡರಿಸಿ”ಯಾವ ಬ್ಯಾಂಕಿನಿಂದ?ಎಂದು ಕೇಳಿದರು ಶ್ರೀವತ್ಸ.
ಅಂದರೆ ಅಪ್ರಮೇಯ ಅವರಿಗೆ ಮತ್ತೊಂದು ಅಕೌಂಟ್ ಇರುವಂತಿದೆ.
ನಾವು . . . . ಬ್ಯಾಂಕಿನವರು. ಮತ್ತೆ ಯಾವ ಬ್ಯಾಂಕಿನಲ್ಲಿ ನಿಮ್ಮ ತಂದೆಯವರ ಹೆಸರಲ್ಲಿ. ?
“ಹೌದು ಇದೆ ನಿಮ್ಮ ಬ್ಯಾಂಕಿನ ಕಸ್ತೂರಿನಗರ ಬ್ರಾಂಚಿನಲ್ಲಿ. ನಿಮಗೇಕೆ ಅದರ ವಿಷಯ?” ಕಟುವಾಗಿಯೇ ಕೇಳಿದರು ಶ್ರೀವತ್ಸ.
“ಅಲ್ಲಿ ಲಾಕರೂ ಇದೆಯೇ?”
“ಇದೆ, ನನ್ನ ಸಹನೆ ಪರೀಕ್ಷಿಸಬೇಡಿ. ನೀವೇನು ಹೇಳಬೇಕಿದೆ ನೇರವಾಗಿ ಹೇಳಿ. “
” ಧನ್ಯವಾದ, ನಿಮ್ಮ ತಂದೆ ನಮ್ಮ ಶಾಖೆಯ ಲಾಕರಿನಲ್ಲಿ ಇರುವ. ಬೆಲೆಬಾಳುವ ಆಭರಣಗಳು ನಾಪತ್ತೆಯಾಗಿದೆ ಎಂದು ಪೋಲೀಸರಿಗೆ ದೂರು ನೀಡಿ ಬ್ಯಾಂಕ್ ಸಿಬ್ಬಂದಿ ಮೇಲೆ
ಅನುಮಾನ ಪಟ್ಟಿದ್ದಾರೆ. “
“ಅದಕ್ಕೂ ನನಗೂ ಏನು ಸಂಬಂಧ?” ಶ್ರೀವತ್ಸ ಅವರ ಪ್ರಶ್ನೆ.
“ನಿಮ್ಮ ತಂದೆಯವರು ಬೆಂಗಳೂರಿನ ಲಾಕರ್ ತೆಗೆದು ಪರಿಶೀಲಿಸಿ ಕಳುವಾಗಿದೆಯೆಂದು ಹೇಳಿರುವ ವಸ್ತು ಗಳು ಅಲ್ಲಿ ಇದೆಯೇ ಎಂಬುದನ್ನು ಖಾತರಿ ಮಾಡಬೇಕು ನಾಳೆ ಮಧ್ಯಾಹ್ನ ನಾಲ್ಕು ಗಂಟೆಯೊಳಗೆ. ಇಲ್ಲದಿದ್ದರೆ ಇನ್ನೊಂದು ಲಾಕರ್ ಇರುವ ವಿಷಯ ಮುಚ್ಚಿಟ್ಟಿದ್ದಕ್ಕಾಗಿ ನಿಮ್ಮ ತಂದೆಯವರ ಮೇಲೆ ಪ್ರತಿದೂರು ನೀಡಬೇಕಾಗುತ್ತದೆ. ” ಎಂದು ಗಡುಸಾಗಿಯೇ ಹೇಳಿದರು ವ್ಯವಸ್ಥಾಪಕರು.
ಶ್ರಿವತ್ಸ ಅವರಿಗೆ ಈಗ ಪರಿಸ್ಥಿತಿ ಅರ್ಥವಾಯಿತು. “ಸಾರ್ ನಾಳೆ ಬೆಳಿಗ್ಗೆ ನಮ್ಮ ಸೋದರಮಾವ ಶೇಷಾದ್ರಿಯವರ ಜತೆ ಆ ಬ್ಯಾಂಕಿಗೆ ಕಳಿಸಿ ಖಾತರಿ ಮಾಡಲು ಹೇಳುತ್ತೇನೆ. ‘ಎಂದು ಭರವಸೆ ನೀಡಿದರು. ಹಾಗೆಯೇ ಪೋನ್ ಇಡುವಾಗ “ಛೆ !ಎಂಥ ಮರೆಗುಳಿ ಈ ಅಪ್ಪ , ” ಎಂದು ಕ್ಷೀಣದನಿಯಲ್ಲಿ ಹೇಳಿದ್ದು ಮೂರ್ತಿಯವರಿಗೆ ಕೇಳಿಸಿತು.
ಲೆಕ್ಕಾಧಿಕಾರಿ ಹಾಗೂ ನಗದು ಅಧಿಕಾರಿ ಇಬ್ಬರೂ ಉದ್ವೇಗದಿಂದ”ಏನಂತೆ ಸಾರ್’ಎಂದು ಕೇಳಿದರು.
ಸಂಭಾಷಣೆಯ ವಿವರ ತಿಳಿಸಿದ ಮೂರ್ತಿಯವರು , “ಈ ಸಂದಿಗ್ಧ ಅವರು ಹೋಗಿ ಖಾತರಿ ನೀಡುವವರೆಗೂ ಮುಂದುವರೆಯುತ್ತದೆ. “ಎಂದು ನಿಟ್ಟುಸಿರು ಬಿಟ್ಟರು.
ಆ ಶಾಖೆಯ ವ್ಯವಸ್ಥಾಪಕರಿಗೆ ಪೋನ್ ಮಾಡಿ ಅಪ್ರಮೇಯ ಅವರು ದೂರಿನಲ್ಲಿತಿಳಿಸಿದ್ದ ವಸ್ತುಗಳು ಆ ಲಾಕರಿನಲ್ಲೇ ಇದೆಯೆಂಬ ಮಾಹಿತಿ ಬಗ್ಗೆ ಒಂದು ಪತ್ರ ಪಡೆದು ಫ್ಯಾಕ್ಸ್ ಮಾಡಲು ತಿಳಿಸಿದ್ದರು.
ಅಪ್ರಮೇಯ ಅವರು ಮಾರನೆಯ ಆ ಶಾಖೆಗೆ ಹೋಗಿ ಲಾಕರ್ ತೆಗೆದಾಗ ಇನ್ನೊಂದು ಲಾಕರಿನಿಂದ ಕಳವಾಗಿದೆಯೆಂದು ದೂರು ನೀಡಲಾಗಿದ್ದ ಎಲ್ಲ ಆಭರಣಗಳು ಅಲ್ಲೇ ಇದ್ದುದನ್ನು ಕಂಡು ಅಪರಾಧೀ ಭಾವದಿಂದ ಖಿನ್ನರಾದರು. ಆ ಶಾಖೆಯ ವ್ಯವಸ್ಥಾಪಕರು ಅವರಿಂದ ಖಾತರಿ ಪತ್ರ ಪಡೆದು ಮೂರ್ತಿಯವರಿಗೆ ಫ್ಯಾಕ್ಸ್ ಮಾಡಿದರು.
ಇಷ್ಟು ಹೊತ್ತಿಗೆ ಶಾಖೆಯವರಿಗೆಲ್ಲ ದೂರಿನ ವಿಚಾರ ಪ್ರಚಾರಗೊಂಡಿತ್ತು. ಲಾಕರಿನ ಆಭರಣಗಳು ಕಳವಾಗಿಲ್ಲವೆಂದು ತಿಳಿದು ಸಂಭ್ರಮಾಚರಣೆ ಮುಗಿಲು ಮುಟ್ಟಿತು.
ವ್ಯವಸ್ಥಾಪಕರು ಇನ್ಸ್‌ಪೆಕ್ಟರರಿಗೆ ವಿಷಯ ತಿಳಿಸಿ ನೋಟೀಸಿಗೆ ಉತ್ತರ ಕಳಿಸುತ್ತಿರುವುದಾಗಿ ಹೇಳಿದರು
ಅದಕ್ಕೆ ಇನ್ಸ್‌ಪೆಕ್ಟರ್ ‘ಆ ಮರೆಗುಳಿ ಮುದುಕರು ನಿಮ್ಮನ್ನೆಲ್ಲ ಬೆಂಕಿಗೆ ತಳ್ಳಿಬಿಡುತ್ತಿದ್ದರಲ್ಲ”ಎಂದು ನಕ್ಕು ನಾಳೆ ಭೇಟಿಯಾಗುತ್ತೇನೆ ಎಂದರು.
ಮಾರನೆಯ ದಿನ ಅಪ್ರಮೇಯ ಅವರನ್ನು ಜತೆಯಲ್ಲಿ ಕರೆದುಕೊಂಡು ಬಂದ ಇನ್ಸ್‌ಪೆಕ್ಟರರು “ಇವರು ದೂರು ವಾಪಸು ತೆಗೆದುಕೊಂಡಿದ್ದಾರೆ . ಮುಂದಿನ ಕ್ರಮ ನಿಮಗೆ ಬಿಟ್ಟದ್ದು. ಮುಂದೆ ಇಂಥವರ ಬಗ್ಗೆ ಹುಷಾರು”ಎನ್ನುತ್ತ ಹೊರಟರು.
ಅಪ್ರಮೇಯ ಅವರಿಗೆ ವ್ಯವಸ್ಥಾಪಕರು ‘ನಿಮಗೆ ಒಂಟಿಯಾಗಿ ಲಾಕರು ವ್ಯವಹರಿಸಲು ಸಾಧ್ಯವಿಲ್ಲ ಅನಿಸುತ್ತದೆ. ಬೇರೆಯವರನ್ನು ಜಂಟಿಯಾಗಿವ್ಯವಹರಿಸಿ. ಅಂತೂ ನಿಮ್ಮ ಸೇವೆ ಮಾಡಿದ್ದಕ್ಕೆಒಳ್ಳೆ ಪ್ರತಿಫಲ ನೀಡಿದಿರಿ!” ಎಂದು ವ್ಯಂಗ್ಯವಾಗಿ ನುಡಿದರು.
“ಸಾರ್ ಇನ್ನು ಮೇಲೆ ಹೀಗಾಗುವುದಿಲ್ಲ ಕ್ಷಮಿಸಿ” ಎಂದರು ಜತೆಯಲ್ಲಿ ಬಂದಿದ್ದ ಅಪ್ರಮೇಯ ಅವರ ಭಾವಮೈದುನ ಶೇಷಾದ್ರಿ.
ಭಾರವಾದ ಹೆಜ್ಜೆಗಳೊಡನೆ ಶಾಖೆಯಿಂದ ಹೊರಟಾಗ ಅಪ್ರಮೇಯ ಅವರಿಗೆ ವಯಸ್ಸಿನ ಹಿರಿತನ, ಮೆರೆದ ಹುದ್ದೆಯ ಹಮ್ಮುಗಳು ಎಲ್ಲ ಮಣ್ಣುಪಾಲಾದಂತೆ ಭಾಸವಾಗುತ್ತಿತ್ತು.
-ಕೆ ಎನ್ ಮಹಾಬಲ
