“ಇಲ್ಲಿ ಕುಳಿತುಕೊಳ್ಳಿ ಮೇಡಂ” ಎಂದು ನಗುವಿನಿಂದ ಮುಖವರಳಿಸಿದ ಕಾರ್ ಶೋರೂಮಿನ ಆ ಹುಡುಗಿ ವಿಸಿಟರ್ಸ್ ಕೊಠಡಿಯ ಬಾಗಿಲನ್ನು ಅವಳಾಗಿಯೇ ತೆರೆದುನಿಂತಳು. “ಥ್ಯಾಂಕ್ಸ್” ಎಂದು ಹೇಳುತ್ತಾ, ಒಳಹೋದ ತಕ್ಷಣವೇ ನನಗೆ ಕಾಣಿಸಿದ್ದು ಅಗಲ ಹಣೆ, ಚಿಕ್ಕ ಕಣ್ಣು, ಮಧ್ಯಮ ಕಿವಿ, ಬಿಳಿಯ ತಲೆಗೂದಲು, ಚೂಪು ಮೂಗು, ನಿರ್ದಾಕ್ಷಿಣ್ಯ ಭಂಗಿಯಲ್ಲಿ ಕುಳಿತ ಆ ವ್ಯಕ್ತಿ. ಹವಾ ನಿಯಂತ್ರಿತ ಕೋಣೆ ಎನ್ನುವುದನ್ನೂ ಮರೆತವನಂತೆ ಅಂಗಿಯ ಮೇಲಿನದೊಂದು ಗುಂಡಿಯನ್ನು ತೆರೆದು ಕುಳಿತಿದ್ದರು. ನೋಡಿ ಅದಾಗಲೇ ಏಳು ವರ್ಷ ಕಳೆದಿದೆ.ನೋಡಿಯೂ ನೋಡದಂತೆ ನಟಿಸುತ್ತಲೇ ಅವನ ಎದುರು ಬದಿಯಲ್ಲಿದ್ದ ಸೋಫಾದ ಮೇಲೆ ಕುಳಿತೆ.ಪೇಪರ್ ಹಿಡಿದು ಓದುತ್ತಿದ್ದವರು ನನ್ನ ಕಡೆಗೊಮ್ಮೆ ನೋಡಿದರು. ನಕ್ಕರೇ?! ಸಾಧ್ಯವೇ ಇಲ್ಲ. ಅಪ್ಪಿತಪ್ಪಿ ನಗು ಬಂದರೂ ಅದನ್ನು ಹರಿಯಬಿಡುವವರಲ್ಲ. ಇನ್ನೂ ಬಿಗುಮಾನ ಬಿಟ್ಟಿಲ್ಲ. ಯಾಕೋ ಅಲ್ಲಿ ಹೆಚ್ಚು ಹೊತ್ತು ಕುಳಿತುಕೊಳ್ಳುವುದಕ್ಕೆ ಸಾಧ್ಯವಿದೆ ಎಂದು ನನಗನ್ನಿಸಲಿಲ್ಲ. ಇವರೂ ಈಗ ತಾನೇ ಬಂದಿದ್ದಾರೋ ಏನೋ, ಇಲ್ಲಿಂದ ಹೋಗುವುದಕ್ಕೆ ಇನ್ನೆಷ್ಟು ಹೊತ್ತಿದೆಯೋ.ನಾನಂತೂ ಇಲ್ಲಿಂದ ಬೇಗ ಹೋಗಿಬಿಡುತ್ತೇನೆ ಎಂದಂದುಕೊಂಡ ನಾನು ನನ್ನ ಕಾರನ್ನು ಸರ್ವಿಸ್ಗೆ ತೆಗೆದುಕೊಂಡು ಹೋಗಿದ್ದ ಹುಡುಗನಿಗೆ ಕರೆಮಾಡಿದೆ. “ನೋಡಿ ನನಗೆ ಇಲ್ಲಿ ಹೆಚ್ಚು ಸಮಯ ಕುಳಿತುಕೊಳ್ಳುವುದಕ್ಕೆ ಸಾಧ್ಯ ಇಲ್ಲ. ಇಷ್ಟವೂ ಇಲ್ಲ. ಆದಷ್ಟು ಬೇಗ ನನ್ನ ಕಾರಿನ ಸರ್ವಿಸ್ ಮುಗಿಸಿಬಿಡಿ. ನನಗೊಂದು ಅರ್ಜೆಂಟ್ ಕೆಲಸ ಇದೆ” ಎಂದೆ.ನನ್ನ ಮಾತು ಕೇಳಿದ ಆ ವ್ಯಕ್ತಿಯ ಮುಖಭಾವ ಬದಲಾದದ್ದು ನನ್ನ ಅರಿವಿಗೆ ಬಂತು. “ಆಯಿತು ಮೇಡಂ.ಆದಷ್ಟು ಬೇಗ ಮಾಡಿಕೊಡುತ್ತೇನೆ” ಎಂದ ಹುಡುಗ.
ಆರಡಿ ಎತ್ತರದ ಇಬ್ಬರು ನಿರಾಳವಾಗಿ ಕೈಕಾಲುಗಳನ್ನು ಚಾಚಿ ಮಲಗುವಷ್ಟು ದೊಡ್ಡದಾಗಿಯಷ್ಟೇ ಇದ್ದ ಕೊಠಡಿಯದು.ಎದುರು ನೋಡಿದರೆ ಕಾಣುವುದು ಅದೇ ವ್ಯಕ್ತಿಯ ಮುಖ.ನೋಡುವುದಕ್ಕೆ ಇಷ್ಟವಾಗಲಿಲ್ಲ. ಅವರಿಗೂ ಇಷ್ಟವಿರಲಿಲ್ಲ ಎನಿಸುತ್ತದೆ.ಪತ್ರಿಕೆಯ ಅದೇ ಪುಟವನ್ನು ಓದುತ್ತಾ ಕುಳಿತಿದ್ದರು. ಅಲ್ಲೇ ಪುಟ್ಟ ಟೀಪಾಯಿಯ ಮೇಲಿದ್ದ ರಿಮೋಟನ್ನು ಎತ್ತಿಕೊಂಡು ಮೂಲೆಯಲ್ಲಿದ್ದ ಟಿ.ವಿ.ಯನ್ನು ಚಾಲೂ ಮಾಡಿದೆ.
*
ಆಗತಾನೇ ನಾನು ಪಿಯುಸಿ ಮುಗಿಸಿಯಾಗಿತ್ತು.ಡಿಗ್ರಿ ಸೇರಿಕೊಂಡಿದ್ದೆ. ಅಂದು ಕಾಲೇಜಿನ ಮೊದಲ ದಿನ. ಸುರಿದ ಭಾರೀ ಮಳೆ ನನ್ನನ್ನು ಮುಕ್ಕಾಲು ಭಾಗ ತೋಯಿಸಿತ್ತು.ಮುಜುಗರಪಡುತ್ತಲೇ ತರಗತಿಯ ಒಳಹೋದ ನಾನು ಖಾಲಿಯಿದ್ದ ಜಾಗವೊಂದರಲ್ಲಿ ಕುಳಿತುಕೊಂಡಿದ್ದೆ.ಹತ್ತಿರ ಇದ್ದ ಹುಡುಗಿಯ ಕಡೆಗೊಮ್ಮೆ ನೋಡಿ ನಗುಬೀರಿದೆ.ಇನ್ನೊಂದು ಬದಿಯನ್ನು ನೋಡಿದರೆ ಹುಡುಗರ ಸಾಲು. ಸಂಪ್ರದಾಯಸ್ಥ ಮನೆಯಲ್ಲಿ ಬೆಳೆದಿದ್ದ ನನಗೆ ಅದೇನೋ ಸಂಕೋಚ.ಹಾಗೆಯೇ ಕಣ್ಣನ್ನು ಅತಿವೇಗದಿಂದ ಈ ಬದಿಗೆ ಹಾಯಿಸಿದೆ.ಆ ಅಂತರದಲ್ಲಿಯೇ ಅದೊಬ್ಬ ಹುಡುಗ ನನ್ನ ಕಣ್ಣನ್ನು ಸೆಳೆದಿದ್ದ.ಎದುರಿದ್ದವರ ಇಡಿಯ ದೇಹವನ್ನೇ ಒಳತುಂಬಿಕೊಳ್ಳುವಷ್ಟು ಅಗಲಗಲ ಕಣ್ಣುಗಳಿದ್ದವು ಅವನಿಗೆ.ಅವನು ನನ್ನನ್ನೇ ನೋಡುತ್ತಿದ್ದ.ಈಗತಾನೇ ನಾನು ಬಂದುಕುಳಿತದ್ದರಿಂದಾಗಿ ನನಗೆ ಹಾಗನಿಸುತ್ತಿತ್ತೋ ಗೊತ್ತಿಲ್ಲ.
ಅಷ್ಟರಲ್ಲಿ ಉಪನ್ಯಾಸಕರೊಬ್ಬರು ತರಗತಿಗೆ ಬಂದರು.ಎಲ್ಲಾ ವಿದ್ಯಾರ್ಥಿಗಳೂ ಅವರವರ ಪರಿಚಯವನ್ನು ಹೇಳಿಕೊಳ್ಳಬೇಕಿತ್ತು.ಆ ಅಗಲ ಕಣ್ಗಳ ಹುಡುಗನ ಹೆಸರು ವಿಶಾಲ್ ಎಂದು ನನಗೆ ಗೊತ್ತಾದದ್ದು ಆಗಲೇ.
ಮೊದಲ ದಿನ ಕಣ್ಣಿಗಿಳಿದವನು ಹಂತಹಂತವಾಗಿ ನನ್ನ ಹೃದಯದೊಳಕ್ಕೆ ಇಳಿಯುತ್ತಾ ಹೋದ.ಅವನು ಬಹಳ ಚೆನ್ನಾಗಿ ಕವಿತೆ ಬರೆಯುತ್ತಿದ್ದ.ಕನ್ನಡ ವಿಭಾಗದ ಮುಂದೆ ಇದ್ದ ಗೋಡೆ ಫಲಕದಲ್ಲಿ ಅವನ ಕವಿತೆಗಳು ಆಗಾಗ ಕಾಣಿಸಿಕೊಳ್ಳುತ್ತಿದ್ದವು.ನಾನು ಹಲವಾರು ಸಲ ಓದಿದ್ದೆ.ಖುಷಿಪಟ್ಟಿದ್ದೆ.ತಮಾಷೆಯಾಗಿ ಬರೆಯುವ ಕೌಶಲ್ಯ ಅವನಿಗಿತ್ತು.ನಾನು ಭರತನಾಟ್ಯ ಮಾಡುತ್ತಿದ್ದೆ.ಪ್ರತಿಭಾ ದಿನಾಚರಣೆಗೆ ನನ್ನ ನೃತ್ಯ ಪ್ರದರ್ಶನ ಇತ್ತು.ವೇದಿಕೆಯಿಂದಿಳಿದ ಕೂಡಲೇ ನನ್ನನ್ನು ಹೊಗಳಿದವನು ಇದೇ ವಿಶಾಲ್. ಭಾವನಾತ್ಮಕನಾಗಿದ್ದ ಆ ಹುಡುಗ ನನಗೆ ಹತ್ತಿರವಾಗುತ್ತಲೇ ಹೋದ.
ಅದೊಂದು ದಿನ ನಾನೇ ಅವನಲ್ಲಿ ನನ್ನ ಪ್ರೀತಿಯನ್ನು ಹೇಳಿಕೊಂಡೆ.ಅವನಲ್ಲಿಯೂ ಅದೇ ಭಾವನೆಯಿತ್ತು.ತಕ್ಷಣವೇ ಒಪ್ಪಿಕೊಂಡ.ನಮ್ಮ ಪ್ರೇಮಯಾನ ಆರಂಭವಾಗಿತ್ತು.
*
“ನನಗೇನು ಇಲ್ಲಿಯೇ ಕುಳಿತುಕೊಳ್ಳಬೇಕೆಂಬ ಆಸೆಯಿಲ್ಲ. ಇಲ್ಲಿಂದ ಒಂದು ಸಲಕ್ಕೆ ಹೊರಟರೆ ಸಾಕು ಎನಿಸಿಬಿಟ್ಟಿದೆ.ಎಷ್ಟು ಬೇಗ ಆಗುತ್ತದೋ ಅಷ್ಟು ಬೇಗ ನನ್ನ ಕಾರನ್ನು ರೆಡಿ ಮಾಡಿಕೊಡಿ.ಗೊತ್ತಾಯಿತಲ್ಲಾ?”ಆ ವ್ಯಕ್ತಿ ಮೊಬೈಲ್ ಕಿವಿಗಿಡುತ್ತಾ ಹೇಳುತ್ತಿರುವ ಈ ಮಾತುಗಳು ನನ್ನ ಆಗಿನ ಮಾತುಗಳಿಗೆ ನಿಧಾನದ ಪ್ರತಿಕ್ರಿಯೆ ಎನ್ನುವುದು ನನಗರ್ಥವಾಯಿತು.ಶಬ್ದಗಳು ನನ್ನ ಕಿವಿಗೆ ಬಿದ್ದೇ ಇಲ್ಲ ಎಂಬಂತೆ ಕುಳಿತೆ.
ಮೊಬೈಲ್ ಕೆಳಗಿಟ್ಟವರಿಗೆ ಸಮಾಧಾನ ಆಗಲಿಲ್ಲವೆಂದು ತೋರುತ್ತದೆ.ಮತ್ತೆ ಯಾವುದೋ ನಂಬರ್ ಅದುಮಿದವರು ಮಾತನಾಡತೊಡಗಿದರು.
“ಈ ವಾಗೀಶ್ವರ ರಾವ್ ಮಹಾ ಸ್ವಾಭಿಮಾನಿ ಮನುಷ್ಯ, ನೆನಪಿರಲಿ. ಯಾರಿಗೂ ತಲೆಬಾಗುವ ವ್ಯಕ್ತಿಯಲ್ಲ. ಪ್ರಾಣಹೋದರೂ ಸರಿಯೇ ನನ್ನ ತನವನ್ನು ಬಿಟ್ಟು ಇರುವುದಿಲ್ಲ…” ಈ ಮಾತುಗಳನ್ನೆಲ್ಲಾ ಹೇಳುತ್ತಿರುವುದು ನನ್ನನ್ನು ತಲೆಯಲ್ಲಿರಿಸಿಕೊಂಡೇ ಎನ್ನುವುದು ನನ್ನ ಮನ ಹೊಕ್ಕಲು ಹೆಚ್ಚು ಸಮಯ ಬೇಕಾಗಲಿಲ್ಲ.
*
ವಾಗೀಶ್ವರ ರಾವ್. ನನ್ನ ತಂದೆ.ಮಹಾ ಶಿಸ್ತಿನ ವ್ಯಕ್ತಿ.ನಾನು ಮತ್ತು ವಿಶಾಲ್ ಅಂದು ಅವರೆದುರು ಬಂದುನಿಂತಿದ್ದೆವು. ಅದಾಗಲೇ ಎಂ.ಎ. ಮುಗಿಸಿದ್ದ ನಮಗಿಬ್ಬರಿಗೂ ನಮ್ಮ ಪ್ರೀತಿಯನ್ನು ನನ್ನ ಅಪ್ಪನೆದುರು ಹೇಳಿಕೊಳ್ಳುವ ಧೈರ್ಯ ಬಂದಿತ್ತು.ನಮ್ಮ ನಡುವಿನ ಒಲವಿಗಾಗ ನಾಲ್ಕು ವರ್ಷ ತುಂಬಿತ್ತು.ನಾನು ಇಂಗ್ಲಿಷ್ ಎಂ.ಎ.ಮುಗಿಸಿ ಕೆಲಸದ ಹುಡುಕಾಟದಲ್ಲಿದ್ದೆ.ವಿಶಾಲ್ ಕನ್ನಡ ಎಂ.ಎ.ಮುಗಿಸಿದವನು ಕಾಲೇಜೊಂದರಲ್ಲಿ ಉಪನ್ಯಾಸಕನಾಗಿ ಸೇರಿಕೊಂಡಿದ್ದ.ಸತ್ಯ ಹೇಳಬೇಕೆಂದರೆ ನಮಗಿಬ್ಬರಿಗೂ ದುಡಿದೇ ಬದುಕಬೇಕೆಂಬ ಅನಿವಾರ್ಯತೆಯೇನೂ ಇರಲಿಲ್ಲ. ಹಣದ ನೆಲೆಯಿಂದ ಗಟ್ಟಿ ಗಟ್ಟಿಯಾಗಿದ್ದೆವು.ಅಷ್ಟು ವರ್ಷಗಳ ಪ್ರೀತಿಯನ್ನು ಇನ್ನಷ್ಟು ಚಂದವಾಗಿಸುವ ಆಸೆ ನಮ್ಮೆದೆಯೊಳಗಿತ್ತು.ಅದನ್ನೇ ನನ್ನ ಅಪ್ಪನಲ್ಲಿ ಹೇಳಿಕೊಂಡೆವು.ವಿಶಾಲ್ ನನಗಿಂತಲೂ ಹೆಚ್ಚೇ ಮಾತನಾಡಿದ, ನನ್ನ ಅಪ್ಪನಲ್ಲಿ.
ತಕ್ಷಣವೇ ಜೋರುಗಣ್ಣಿನಲ್ಲಿ ವಿಶಾಲ್ನನ್ನೇ ನೋಡುತ್ತಾ ಅಪ್ಪ ಕೇಳಿದ ಪ್ರಶ್ನೆ “ನಿನ್ನ ಜಾತಿ ಯಾವುದು ಅಂತ ಹೇಳಬಹುದಾ?”
ವಿಶಾಲ್ಗೆ ಆ ಮಾತು ಹಿಡಿಸಲಿಲ್ಲ. ಅವನು ಮೊದಲಿನಿಂದಲೂ ಹಾಗೆಯೇ.ಜಾತಿಯನ್ನು ಮೈಗೆ ಅಂಟಿಸಿಕೊಂಡವನಲ್ಲ. ಜಾತಿ ನೋಡದೆ ಎಲ್ಲರ ಜೊತೆಗೂ ಬೆರೆಯುವ ಸ್ವಭಾವ ಅವನದ್ದು. “ಮನುಷ್ಯ ಜಾತಿ” ಎಂದ ತುಸು ಜೋರಾಗಿ.ಜೊತೆಗೆಯೇ “ನನಗೆ ಜಾತಿಯ ಬಗೆಗೆ ನಂಬಿಕೆ ಇಲ್ಲ” ಎಂಬ ಮಾತನ್ನೂ ಸೇರಿಸಿದ.
“ನನಗೆ ನಂಬಿಕೆ ಇದೆ” ಅಪ್ಪನ ಮಾತು ಬಿಟ್ಟ ಬಾಣದಂತೆ ಬಂದು ನಾಟಿದ್ದು ನಮಗಿಬ್ಬರಿಗೂ.“ಈ ಮದುವೆಗೆ ನನ್ನ ಒಪ್ಪಿಗೆ ಇಲ್ಲ. ನಾನು ಯಾರನ್ನು ಮದುವೆಯಾಗಲು ಹೇಳುತ್ತೇನೋ ಅವನನ್ನೇ ನನ್ನ ಮಗಳು ಮದುವೆಯಾಗಬೇಕು” ಎಂದರು ಅಪ್ಪ, ಮತ್ತೇನೂ ಮಾತಿಗೆ ಅವಕಾಶ ಇಲ್ಲ ಎಂಬಂತೆ.
ವಿಶಾಲ್ ಮಾತನಾಡಲು ಹೊರಟ.ನಾನೇ ಅವನನ್ನು ತಡೆದೆ.ಅಪ್ಪನನ್ನು ಕಾಣುತ್ತಲೇ ಬೆಳೆದ ನನಗೆ ಒಮ್ಮೆ ಅವರಾಡಿದ ಮಾತನ್ನು ಯಾವ ಕಾರಣಕ್ಕೂ ಬದಲಾಯಿಸಲಾರರು ಎನ್ನುವುದು ಗೊತ್ತಿತ್ತು.
*
“ನಿಮಗೆ ಚಹಾ ಆಗಬಹುದೋ?ಕಾಫಿಯೋ?”ಶೋರೂಮಿನ ಹುಡುಗಿ ಬಾಗಿಲನ್ನು ದೂಡಿ ಒಳಬಂದು ಒಳಗಿದ್ದ ನಮ್ಮಿಬ್ಬರಲ್ಲಿಯೂ ಕೇಳಿದಳು.
“ಕಾಫಿ ಇರಲಿ” ಎಂದೆ ನಾನು ಅವಳ ಕಡೆಗೆ ನೋಡಿ ಮುಗುಳ್ನಗುತ್ತಾ.“ಹಾಗಿದ್ದರೆ ನನಗೆ ಚಹಾ” ಎಂದರು ನನ್ನ ತಂದೆ, ಹಠದ ದನಿಯಲ್ಲಿ.
ಅಪ್ಪ ಯಾವತ್ತೂ ಕಾಫಿಯೇ ಕುಡಿಯುತ್ತಿದ್ದದ್ದು.“ಗಿರಿಜಾ, ಒಂದು ಲೋಟ ಕಾಫಿ ತಾ” ಎಂದು ಅವರು ದಿನಕ್ಕೆ ನಾಲ್ಕು ಸಲ ಬಾಯಿ ಅಗಲ ಮಾಡಿ ನನ್ನಮ್ಮನಲ್ಲಿ ಘೋಷಣೆ ಹೊರಡಿಸುತ್ತಿದ್ದದ್ದಿತ್ತು.ಅವರು ಕಾಫಿ ಕುಡಿಯುವುದಕ್ಕಾಗಿಯೇ ಉಳಿದೆಲ್ಲಾ ಲೋಟಗಳಿಗಿಂತ ದೊಡ್ಡದಾದ ಲೋಟವೊಂದು ನಮ್ಮ ಮನೆಯಲ್ಲಿತ್ತು.ಹೀಗಿದ್ದ ಕಾಫಿಪ್ರಿಯರು ಈಗ ‘ಹಾಗಿದ್ದರೆ ನನಗೆ ಚಹಾ’ ಎಂಬ ದನಿಯೆಬ್ಬಿಸಿದ್ದಾರೆಂದರೆ ಅದರ ಹಿಂದಿನ ಕಾರಣ ನನಗೆ ತಿಳಿಯದ್ದೇನಲ್ಲ. ಅವರು ಮೊದಲಿನಿಂದಲೂ ಹಾಗೆಯೇ.ಅದೇನೋ ವಿಚಿತ್ರ ಕೋಪ, ಹಠ.ತನ್ನದು ತಪ್ಪೆಂದು ಗೊತ್ತಿದ್ದೂ ಅದನ್ನು ಸರಿಯೆಂದು ವಾದಿಸುವ ಮೊಂಡುತನ. ಎದುರಿನವರನ್ನು ಏನೆಂದರೂ ಒಪ್ಪಿಕೊಳ್ಳದ ಜಾಯಮಾನ. ಅವರಿದ್ದದ್ದೇ ಹಾಗೆ.
ಕಾಫಿ ಚಹಾದ ಲೋಟವನ್ನು ಹಿಡಿದು ಬಂದ ಹುಡುಗಿ ನಮಗಿಬ್ಬರಿಗೂ ಅದನ್ನು ಕೊಟ್ಟಳು.ಅಷ್ಟರಲ್ಲಿ ಇನ್ನೊಬ್ಬರು ಕೊಠಡಿಯ ಒಳಗೆ ಕಾಲಿಟ್ಟರು. ಅವರಿಗೆ ಕಾಫಿಯೋ ಚಹಾವೋ ಎಂದು ಕೇಳತೊಡಗಿದಳು ಆ ಹುಡುಗಿ…
*
ಅದಲ್ಲದೆ ಬೇರೆ ದಾರಿಯಿಲ್ಲ ಎಂದು ನಾನು ವಿಶಾಲ್ಗೆ ಹೇಳಿದೆ.ಅವನಿಗೂ ಅದೇ ಸರಿ ಎನಿಸಿತು.ಸರಳವಾಗಿ ರಿಜಿಸ್ಟರ್ಡ್ ಮದುವೆ ಮಾಡಿಕೊಂಡೆವು ನಾವಿಬ್ಬರೂ.
ವಿಶಾಲ್ ಬಂದು ಮಾತನಾಡಿಹೋದಮೇಲೆ ಅಪ್ಪ ನನ್ನನ್ನು ಮನೆಯಿಂದ ಹೊರಗೆ ಕಳುಹಿಸುತ್ತಿರಲಿಲ್ಲ. ಅವರ ಪರಿಚಯದ ಯಾರೋ ಒಬ್ಬ ಹುಡುಗನ ಜೊತೆ ಮದುವೆ ಮಾಡುವುದಕ್ಕೆಂದು ಮಾತುಕತೆಯನ್ನೂ ಮುಗಿಸಿಯಾಗಿತ್ತು.ವಿಶಾಲ್ನನ್ನು ಬಿಟ್ಟು ಬದುಕುವುದು ಸಾಧ್ಯವೇ ಇಲ್ಲ ಎನಿಸಿಬಿಟ್ಟಿತ್ತು ನನಗೆ.ಅದೊಂದು ರಾತ್ರಿ ಹೇಗೋ ಕಷ್ಟಪಟ್ಟು ಅಪ್ಪನ ಕಣ್ಣುತಪ್ಪಿಸಿ, ಮನೆಯಿಂದ ಹೊರಬಂದವಳು ಸೀದಾ ಹೋದದ್ದು ವಿಶಾಲ್ನ ಮನೆಗೆ.ತಕ್ಷಣವೇ ಮದುವೆ ಆಗದಿದ್ದರೆ ಅಪ್ಪ ಇನ್ನೇನಾದರೂ ಅನಾಹುತ ಮಾಡಿಬಿಟ್ಟಾರು ಎಂಬ ಭಯ ನನ್ನಲ್ಲಿತ್ತು.ಮಗುವೊಂದು ಆದಮೇಲೆ ಹೋಗಿ ಅಮ್ಮ ಅಪ್ಪನನ್ನು ಕಾಣುವುದು ನಮ್ಮಿಬ್ಬರಲ್ಲಿಯೂ ಇದ್ದ ಯೋಚನೆ. ಮಗುವಿನ ಮುಖ ನೋಡಿಯಾದರೂ ತಂದೆ ನಮ್ಮನ್ನು ಒಪ್ಪಿಕೊಂಡಾರು, ಮುನಿಸು ಮರೆತಾರು ಎಂಬ ಅಂದಾಜಿತ್ತು ನಮ್ಮಲ್ಲಿ.
ಮದುವೆಯಾಗಿ ಹದಿನಾರನೇ ತಿಂಗಳಿಗೆ ಚಿರಂತನ ಹುಟ್ಟಿದ.ಐದು ತಿಂಗಳ ಕೂಸನ್ನು ಕೈಯ್ಯಲ್ಲಿ ಹಿಡಿದುಕೊಂಡ ನಾನು ವಿಶಾಲ್ನ ಜೊತೆಗೆ ನನ್ನ ಮನೆಗೆ ಹೋದೆ.ಅಪ್ಪನೆಂಬ ದೂರ್ವಾಸ ಮಹಾಮುನಿಗಳು ಮನೆಯಂಗಳದಲ್ಲಿಯೇ ಕುಳಿತಿದ್ದರು.ನಮ್ಮ ಬೈಕ್ ಹೋಗಿ ನಿಂತ ತಕ್ಷಣವೇ ಕಾಡಿದ್ದು ಅವರ ತೀಕ್ಷ÷್ಣ ನೋಟ.ಮುಖದಲ್ಲಿ ಕ್ರೋಧ ಭಾವ.
ಒಳಗಿಂದ ಬಂದ ಅಮ್ಮ ಮಗುವನ್ನು ಎತ್ತಿಕೊಳ್ಳುವ ಧಾವಂತದಲ್ಲಿ ಹತ್ತಿರ ಬಂದಳು.ಅಪ್ಪನ ಗಂಟಲಿನಾಳದಿಂದೆದ್ದ ಗಡಸು ದನಿಯೊಂದು ಅವಳನ್ನು ತಡೆಯಿತು.ಚಲನೆ ಅಲ್ಲಿಗೇ ನಿಂತಿತು.
“ಅಪ್ಪಾ, ನಾನು ಮಾಡಿದ್ದನ್ನು ಮರೆತುಬಿಡಿ” ಕಣ್ಣಿನಲ್ಲಿ ನೀರು ತುಂಬಿಸಿಕೊಳ್ಳುತ್ತಾ ನುಡಿದೆ.“ಗಿರಿಜಾ, ಒಳಗಿಂದ ನೀರಿರುವ ಕೊಡಪಾನ ತಾ” ಎಂದರು.ಅಮ್ಮ ತಂದ ತಕ್ಷಣವೇ ತಲೆ ಮೇಲೆ ಸುರಿದುಕೊಂಡರು.“ಇಂದಿಗೆ ನಿನ್ನ ನನ್ನ ಸಂಬಂಧ ಮುಗಿಯಿತು.ನೀನು ನನ್ನ ಪಾಲಿಗೆ ಸತ್ತಿದ್ದೀಯ ಎಂದು ಅಂದೇ ಮನಸ್ಸಿನಲ್ಲಿ ಅಂದುಕೊಂಡಾಗಿದೆ.ಇನ್ನುಮುಂದೆ ನೀನು ನನ್ನ ಮಗಳಲ್ಲ. ನಾನು ನಿನ್ನ ಅಪ್ಪನಲ್ಲ. ಇಲ್ಲಿಂದ ಹೊರಡಬಹುದು” ಎಂದವರು ದುರದುರನೆ ಮನೆಯೊಳಕ್ಕೆ ಹೊರಟುಹೋದರು.
*
ಟಿ.ವಿ. ಪರದೆಯಲ್ಲಿ ಚಿರತೆಯೊಂದು ಜಿಂಕೆಯನ್ನು ಅಟ್ಟಾಡಿಸತೊಡಗಿತ್ತು.ಧೂಳು ಮೇಲಕ್ಕೆ ಏಳುತ್ತಲೇ ಇತ್ತು.ಜೀವವನ್ನುಳಿಸಿಕೊಳ್ಳುವ ತವಕ ಜಿಂಕೆಯದ್ದಾದರೆ ಜಿಂಕೆಯನ್ನು ಮುಗಿಸಿ ತನ್ನ ಅಸ್ತಿತ್ವ ಉಳಿಸಿಕೊಳ್ಳುವ ಜಿದ್ದು ಚಿರತೆಯ ಎದೆಯೊಳಗೆ. ವಕ್ರವಕ್ರವಾಗಿ ಓಡುತ್ತಿದ್ದ ಜಿಂಕೆ ಚಿರತೆಯನ್ನೂ ಅದೇ ಮಾದರಿಯಲ್ಲಿ ಓಡಲು ಪ್ರೇರೇಪಿಸುತ್ತಿತ್ತು.ಜಿಂಕೆಯ ಓಟದ ಗತಿಯನ್ನು ಮೀರುವ ಉಮೇದು ಚಿರತೆಯಲ್ಲಿತ್ತು.
ಅದೊಂದು ಕ್ಷಣದಲ್ಲಿ ಜಿಂಕೆ ಚಿರತೆ ಎರಡೂ ಒಂದೇ ಬಿಂದುವಿನಲ್ಲಿ ಸಂಧಿಸಿದವು.ಜಿಂಕೆಯ ಬದುಕು ಮುಗಿದಿತ್ತು. ನನಗೆ ಅದನ್ನು ನೋಡಲಾಗಲಿಲ್ಲ. ತಕ್ಷಣವೇ ಟಿ.ವಿ. ಆಫ್ ಮಾಡಿದೆ.
*
ಅಮ್ಮ ಕಣ್ಣೀರು ಸುರಿಸುತ್ತಾ ಅಲ್ಲಿಯೇ ನಿಂತಿದ್ದಳು. ಹತಾಶೆಯಿಂದ ನಿಂತಿದ್ದ ನನ್ನ ಬೆನ್ನನ್ನು ಲಘುವಾಗಿ ತಡವಿ ಸಂತೈಸಿದ ವಿಶಾಲ್. ಮಗಳನ್ನು ಏನೆಂದರೂ ಒಪ್ಪಿಕೊಳ್ಳದಇವರೆಂತಹ ಅಪ್ಪ ಎನಿಸಿತು ಆ ಕ್ಷಣದಲ್ಲಿ. ಅವರಿಗೆ ಬೇಡದ ಸಂಬಂಧ ನನಗೂ ಬೇಡ ಎಂದು ಮನಸ್ಸು ಗಟ್ಟಿಯಾಗಿಯೇ ನುಡಿಯಿತು.ಅಮ್ಮನ ಬಳಿ ಹೋದವಳು “ಇನ್ನುಮುಂದೆ ಯಾವತ್ತೂ ನಾನಿಲ್ಲಿಗೆ ಬರುವುದಿಲ್ಲ. ಎಲ್ಲಾ ನಿನ್ನ ಗಂಡನಿಂದಾಗಿ.ಬೇಸರ ಮಾಡಿಕೊಳ್ಳಬೇಡ ಅಮ್ಮ” ಎಂದು ಹೇಳಿ, ಒತ್ತಿಬಂದ ಕಣ್ಣೀರನ್ನು ತೋರಗೊಡದೆಯೇ ಅಲ್ಲಿಂದ ಹೊರಟುಬಂದೆ.
*
“ಈ ವಯಸ್ಸಲ್ಲಿ ತುಂಬಾ ಜಾಗ್ರತೆಯಿಂದ ಮಗಳನ್ನು ನೋಡಿಕೊಳ್ಳಬೇಕು ನೀವು.ಇಲ್ಲವಾದರೆ ಪ್ರೀತಿ ಗೀತಿ ಅಂತೆಲ್ಲಾ ನೀತಿ ತಪ್ಪಿ ನಡೆದು ಬದುಕನ್ನು ಹಾಳುಮಾಡಿಕೊಳ್ಳುತ್ತಾರೆ” ನನ್ನಪ್ಪ ಈ ಮಾತನ್ನು ಹೇಳಿದ್ದು ಒಳಬಂದಿದ್ದ ಆ ಹೊಸ ವ್ಯಕ್ತಿಯಲ್ಲಾದರೂ ಆ ಮಾತು ಚುಚ್ಚಿದ್ದು ನನ್ನನ್ನು.“ಮಗಳು ಪಿಯುಸಿ ಓದುತ್ತಿದ್ದಾಳೆ.ಸೈನ್ಸು” ಎಂದು ಮಗಳ ಬಗೆಗೆ ಹೆಮ್ಮೆಯ ಭಾವ ತುಂಬುತ್ತಾ ಆ ವ್ಯಕ್ತಿ ಹೇಳಿದ್ದಕ್ಕೆ ಪ್ರತಿಯಾಗಿ ಹೀಗೆ ನುಡಿದಿದ್ದರು ನನ್ನಪ್ಪ. ನನಗೆ ಅವರ ಮಾತನ್ನು ಸಹಿಸಿಕೊಳ್ಳುವುದಕ್ಕಾಗಲಿಲ್ಲ. ಏನಾಗಿದೆ ನನ್ನ ಬದುಕಿಗೆ! ಪ್ರೀತಿಸಿ ಮದುವೆಯಾಗಿದ್ದರೂ ನಾನೇನೂ ಜೀವನದಲ್ಲಿ ಸೋತಿಲ್ಲ. ಬದುಕನ್ನು ಹಾಳುಮಾಡಿಕೊಂಡಿಲ್ಲ. ವಿಶಾಲ್ ತುಂಬಾ ಪ್ರೀತಿಯಿಂದಲೇ ನೋಡಿಕೊಳ್ಳುತ್ತಿದ್ದಾನೆ, ಇವತ್ತಿಗೂ. ಹಾಗಿರುವಾಗ ನನ್ನ ಬದುಕು ಹಾಳಾಗಿಹೋಗಿದೆ ಎಂದು ಅವರು ತೀರ್ಮಾನ ಮಾಡಿದ್ದಾದರೂ ಹೇಗೆ?! ಅಷ್ಟಕ್ಕೂ ತಲೆಗೆ ನೀರೆರೆದುಕೊಂಡು ನನ್ನ ಸಂಬಂಧವನ್ನೇ ಕಡಿದುಕೊಂಡ ಇವರಿಗೆ ನನ್ನ ಬದುಕಿನ ಬಗೆಗೆ ಮಾತನಾಡುವ ಅಧಿಕಾರ ಏನಿದೆ! ನನಗಂತೂ ಸಹಿಸಲಸಾಧ್ಯವಾದ ನೋವಾಗಿತ್ತು.
ಹಾಗಿದ್ದಾಗಲೇ ನನ್ನಪ್ಪ ಮಾತು ಮುಂದುವರಿಸಿ “ಯಾರನ್ನೋ ನಂಬಿಕೊಂಡು ಅವರ ಜೊತೆ ಹೋಗುತ್ತಾರೆ. ನಾವು ಅವರ ಬಗ್ಗೆ ಅದೆಷ್ಟು ಕನಸು ಕಟ್ಟಿರುತ್ತೇವೆ, ಅವರ ಮದುವೆಯ ಬಗ್ಗೆ ಏನೆಲ್ಲಾ ಅಂದುಕೊಂಡಿರುತ್ತೇವೆ ಎಂಬ ಯೋಚನೆಯೇ ಅವರಲ್ಲಿರುವುದಿಲ್ಲ. ನೋವು ಕೊಡುವುದರಲ್ಲಿಯೇ ಏನೋ ಸಂತೋಷ ಅಂಥ ಮಕ್ಕಳಿಗೆ” ಎಂದರು.ಕಣ್ಣೀರು ಬಂತೇನೋ.ಅಥವಾ ನನಗೆ ಹಾಗೆ ಕಾಣಿಸಿತೋ ಏನೋ.ಅಪ್ಪ ಮುಖವನ್ನಂತೂ ಒಂದುಸಲ ಕೆಳಹಾಕಿದರು.
ತಕ್ಷಣವೇ ಅವರ ಪಕ್ಕದಲ್ಲಿದ್ದ ಆ ವ್ಯಕ್ತಿ “ಅಂದಹಾಗೆ ನಿಮಗೆಷ್ಟು ಮಕ್ಕಳು?”ಎಂದು ನನ್ನಪ್ಪನಲ್ಲಿ ಕೇಳಿದ.“ಇದ್ದಳು ಒಬ್ಬ ಮಗಳು.ಏಳು ವರ್ಷಗಳ ಹಿಂದೆ ಸತ್ತುಹೋದಳು” ಅನಾದರ ಭಾವದಿಂದ ಅಪ್ಪನಾಡಿದ ಮಾತು ಚೂರಿಹಾಕಿದ್ದು ನನ್ನ ಹೃದಯಕ್ಕೆ.
*
ಈಗ ಆ ವ್ಯಕ್ತಿಯೂ ಹೊರಟುಹೋಗಿದ್ದ.ಅಲ್ಲಿ ನಾನೂ ನನ್ನ ಅಪ್ಪ ಇಬ್ಬರೇ ಇದ್ದೆವು, ಮೊದಲಿನಂತೆ.ನನಗ್ಯಾಕೋ ಅಲ್ಲಿ ಕುಳಿತುಕೊಳ್ಳಲು ಮನಸ್ಸಾಗಲಿಲ್ಲ. ಎದ್ದು ಹೊರಬರೋಣವೆಂದು ಬಾಗಿಲಿನ ಕಡೆಗೆ ನಡೆದೆ.ಬಾಗಿಲನ್ನು ಎಳೆದರೆ ಅದು ಗಟ್ಟಿಯಾಗಿತ್ತು.ತೆರೆಯಲು ಆಗಲಿಲ್ಲ. ಮತ್ತೆ ಮತ್ತೆ ಜೋರಾಗಿ ಎಳೆದೆ. ಲಾಕ್ ಆಗಿರುವಂತಿತ್ತು.ಈ ಮೊದಲು ಹೊರಹೋದ ವ್ಯಕ್ತಿ ಬಾಗಿಲನ್ನು ಬಲವಾಗಿ ಎಳೆದುಹೋಗಿದ್ದ ಎನಿಸುತ್ತದೆ.ಹಿಂದೆ ತಿರುಗಿ ನೋಡಿದೆ.ಅಪ್ಪ ನನ್ನನ್ನೇ ನೋಡುತ್ತಿದ್ದರು.ಸಹಾಯಕ್ಕೆ ಬರಲಿಲ್ಲ. ಬಾಗಿಲಿನ ಗಾಜಿನಿಂದ ಹೊರಗನ್ನು ನೋಡಿದ ನಾನು ಅಲ್ಲಿ ಯಾರಾದರೂ ಇದ್ದಾರೆಯೇ ಎಂದು ನೋಡಿದೆ. ಯಾರೂ ಕಾಣಲಿಲ್ಲ. ಎಲ್ಲಿ ಹೋಗಿದ್ದಾರೆ ಎಲ್ಲರೂ?! ಗೊತ್ತಾಗಲಿಲ್ಲ. “ಹಲೋ, ಯಾರಾದರೂ ಇದ್ದೀರಾ?ಪ್ಲೀಸ್ ಬನ್ನಿ” ಎಂದು ಬೊಬ್ಬೆ ಹೊಡೆದೆ.ಯಾರ ದನಿಯೂ ಇಲ್ಲ. ಬರುವ ಸೂಚನೆಯೂ ಇಲ್ಲ.
ಕೊಠಡಿಯ ಹಿಂಬದಿಯಲ್ಲೊಂದು ಗಾಜಿನ ಭಾಗವಿತ್ತು.ಅಲ್ಲಿಂದ ನೋಡಿದರೆ ಕಾರುಗಳನ್ನು ತೊಳೆಯುವುದೆಲ್ಲವೂ ಕಾಣಿಸುತ್ತಿತ್ತು.ಶೋರೂಮಿನ ಅಷ್ಟೂ ಮಂದಿ ಅಲ್ಲಿ ನಿಂತಿದ್ದರು.ಅವರೆಲ್ಲರ ಮುಖದಲ್ಲಿಯೂ ಕುತೂಹಲ.ಎದುರಿದ್ದ ಯಾವನೋ ಒಬ್ಬ ವ್ಯಕ್ತಿ ಕೈಯ್ಯನ್ನು ಬಲವಾಗಿ ಆಡಿಸುತ್ತಾ, ಆಕ್ರೋಶದ ಮುಖಭಾವ ಹೊತ್ತಿದ್ದ.ಅವನೇನು ಮಾತನಾಡುತ್ತಿದ್ದಾನೆ ಎನ್ನುವುದು ನನಗೆ ಕೇಳುತ್ತಿರಲಿಲ್ಲ. ಆದರೆ ಕೋಪದಿಂದ ಏನೋ ಬೊಬ್ಬೆ ಹೊಡೆಯುತ್ತಿದ್ದಾನೆ ಎನ್ನುವುದು ಗೊತ್ತಾಗುವಂತಿತ್ತು.
ಸರ್ವಿಸ್ ಮಾಡುವ ಹುಡುಗನಿಗೆ ಕರೆಮಾಡಿದರೆ ಪ್ರಯೋಜನವಾದೀತು ಎನಿಸಿತು.ಮೊಬೈಲ್ ಎತ್ತಿಕೊಂಡೆ.ನೋಡಿದರೆ ನೆಟ್ವರ್ಕ್ ಇರಲೇ ಇಲ್ಲ. ಆಗ ಕರೆಮಾಡಿದಾಗಲೇ ನೆಟ್ವರ್ಕ್ ಕಡಿಮೆಯಿತ್ತು.ಈಗಂತೂ ಪೂರಾ ಪೂರಾ ಬರಿದಾಗಿಹೋಗಿದೆ.ಮೊಬೈಲನ್ನು ಹಾಗೆಯೇ ಮೇಲಕ್ಕೊಮ್ಮೆ ಕೆಳಕ್ಕೊಮ್ಮೆ ಆಡಿಸಿದೆ.
ಬಾಗಿಲು ತೆಗೆಯಲಾಗುತ್ತಿಲ್ಲ ಎನ್ನುವುದು ತಿಳಿದಿದ್ದೂ ಸುಮ್ಮನೆ ಕುಳಿತ ಅಪ್ಪನ ರೀತಿ ಅಚ್ಚರಿ ಹುಟ್ಟಿಸಿತು.ಅವರ ಕಡೆಗೊಮ್ಮೆ ನೋಡಿದೆ.ಚಲನೆಯಿಲ್ಲದೆ ಕುಳಿತಂತಿತ್ತು.ಮುಖದಲ್ಲಿ ವೇದನೆಯ ಭಾವ. ಅವರ ಬಲಗೈ ಎದೆಯನ್ನು ಅಮುಕುತ್ತಿದೆ. ಏನಾಯಿತು?! ಹೃದಯಾಘಾತ ಆಗುತ್ತಿದೆ ಎನ್ನುವುದು ಅರ್ಥವಾಗುವುದಕ್ಕೆ ಅರೆಚಣವೂ ಬೇಕಾಗಲಿಲ್ಲ.
*
ನಾನು ಚಿಕ್ಕವಳಿದ್ದಾಗ ಸೈಕಲ್ ಕಲಿಯಹೋಗಿ ಕೆಳಕ್ಕೆ ಬಿದ್ದು ಕಾಲಿಗೆ ಪೆಟ್ಟು ಮಾಡಿಕೊಂಡಿದ್ದೆ.ಅಪ್ಪ ಕಣ್ಣೀರು ಸುರಿಸುತ್ತಲೇ ಏನೋ ಔಷಧಿ ಹಚ್ಚಿದ್ದರು ನನ್ನ ಗಾಯಕ್ಕೆ.ಅವರು ಜೀವನದಲ್ಲಿ ಅತ್ತದ್ದನ್ನು ನಾನು ನೋಡಿದ್ದು ಅದೇ ಮೊದಲು.
ಎದೆ ಒತ್ತಿಕೊಂಡು ಒದ್ದಾಡುತ್ತಿರುವ ಅಪ್ಪನನ್ನು ಆ ಬಗೆಯಲ್ಲಿ ಕಾಣಲಾಗದ ಒತ್ತಡ ನನ್ನೊಳಗೆ.ತಕ್ಷಣವೇ ಟಿ.ವಿ. ರಿಮೋಟನ್ನು ಕೈಗೆತ್ತಿಕೊಂಡವಳು ಅದರಿಂದ ಕೋಣೆಯ ಬಾಗಿಲಿನ ಗಾಜನ್ನು ಬಲವಾಗಿ ಬಡಿಯತೊಡಗಿದೆ.ನನ್ನ ಶಕ್ತಿಗೂ ಮೀರಿದ ರಭಸ ಆ ಹೊಡೆತದಲ್ಲಿ.ಗಾಜು ಅಳುಕಲಿಲ್ಲ. ರಿಮೋಟ್ ಜೀವ ಕಳೆದುಕೊಂಡಿತು.ಏನು ಮಾಡುವುದೋ ತೋಚಲಿಲ್ಲ. ಕೈಗಳಿಂದಲೇ ಹೊಡೆಯತೊಡಗಿದೆ.ಗಾಜಿನ ದೃಢತೆ ಕದಲಲಿಲ್ಲ.
ಅಪ್ಪ ನರಳಿದ ದನಿ ಬಲವಾಗಿಯೇ ಕೇಳಿಬಂತು.ತಿರುಗಿ ಅವರತ್ತ ನೋಡಿದೆ. ಕೈಯ್ಯನ್ನು ಮೇಲಕ್ಕೆತ್ತಿ ನನ್ನನ್ನು ಕರೆಯುತ್ತಿದ್ದರು. ಹೋದೆ. ಅವರ ಪಾದದ ಬಳಿಯಲ್ಲಿ ಕೂತೆ.“ಅಪ್ಪಾ ನನ್ನನ್ನು ಕ್ಷಮಿಸಿಬಿಡಿ” ಎಂದು ಕೈಮುಗಿದೆ.ನನ್ನ ತಲೆಯ ಮೇಲೆ ಕೈಗಳನ್ನಿಟ್ಟರು.
ತಕ್ಷಣವೇ ಎದ್ದು ಕೊಠಡಿಯ ಹಿಂಬದಿಯ ಗಾಜಿನ ಬಳಿಹೋದ ನಾನು ಬಲವಾಗಿ ಅದರ ಮೇಲೆ ಬಡಿಯುತ್ತಾ ಅದರಾಚೆ ಹೊರಗೆ ಇದ್ದವರನ್ನು ಕರೆಯತೊಡಗಿದೆ. ಬೊಬ್ಬೆ ಹೊಡೆದೆ.ಯಾರಿಗೂ ನನ್ನ ದುಃಖ ಗೊತ್ತಾಗಲೇ ಇಲ್ಲ.
ತಕ್ಷಣವೇ ಮತ್ತೆ ತಿರುಗಿ ಅಪ್ಪನ ಬಳಿಬಂದ ನಾನು ಅಲ್ಲೇ ಇದ್ದ ಪುಟ್ಟ ಟೀಪಾಯಿಯನ್ನು ಎತ್ತಿಕೊಂಡು ಬಾಗಿಲಿನ ಗಾಜಿಗೆ ಬಲವಾಗಿ ಬಡಿದೆ.ಸಣ್ಣ ತೂತೊಂದು ಕಾಣಿಸಿತು ಬಾಗಿಲಿನಲ್ಲಿ.ಮತ್ತೆ ಬಡಿದೆ.ಮತ್ತದೇ ಏಟು. ಹೊಡೆತ. ಎಂಟನೆಯ ಏಟಿಗೆ ಗಾಜು ಪೂರಾ ಒಡೆದುಹೋಯಿತು.ಅಲ್ಲಿಂದ ಕೈ ಹೊರಹಾಕಿ ಚಿಲಕವನ್ನು ತಿರುಗಿಸಿದೆ.ಬಾಗಿಲು ತೆರೆದುಕೊಂಡಿತು.
ಅಪ್ಪನ ಬಳಿಗೆ ಓಡಿಬಂದ ನಾನು “ಬನ್ನಿ ಅಪ್ಪ.ನಾನು ನಿಮ್ಮನ್ನು ಬದುಕಿಸಿಕೊಳ್ಳುತ್ತೇನೆ” ಎಂದು ಹೇಳುತ್ತಾ ಅವರನ್ನು ಮೇಲಕ್ಕೆ ಎಬ್ಬಿಸಿದೆ.ಅವರು ಹಾಗೆಯೇ ನನ್ನ ಮೇಲೆ ಒರಗಿಕೊಂಡರು.
*
-ಡಾ. ವಿಶ್ವನಾಥ ಎನ್ ನೇರಳಕಟ್ಟೆ
