ನದಿ ತುಂಬಿ ಹರಿಯುತ್ತಿತ್ತು.. ..
ಸಕ್ಕಿ ನೀರಲ್ಲಿ ಕಾಲಿಟ್ಟಳು. ಮೈನಡಗುತ್ತಿತು. ಎಂಥ ಚಳಿ.ಇದರಲ್ಲಿ ಮುಳುಗಿ ಸಾಯುವುದು ಹೇಗೆ? ಸಾಯಲು ಬಂದವಳಿಗೆ ಚಳಿಯೋ-ಮಳಿಯೋ, ಬಿಸಿಲೋ-ಬೆಂಕಿಯೋ ಅಷ್ಟೊಂದು ತರ್ಕ ಸಮ್ಮತವಾದುದಲ್ಲ. “ಹೂಂ.. ಸಾಯಿss ಸಾಯಿss ನಾನು ಬೇಗನೇ ನೀನು ಸಾಯುವುದನ್ನು ನೋಡಬೇಕು, ಈ ರೀತಿ ದಡದಲ್ಲಿಯೇ ನಿಂತು ಏನು ವಿಚಾರಿಸುತ್ತಿರುವೆ? ಸಾಯಲು ಬಂದವರು ವಿಚಾರಿಸಿದರೆ ಏನೂ ಫಲವಿಲ್ಲ”. ಸಕ್ಕಿಯ ಮನಸ್ಸು ಅವಳನ್ನೇ ಹಂಗಿಸತೊಡಗಿತು. ಸಕ್ಕಿಗೆ ಮನಸು ಹಂಗಿಸಿದ್ದಕ್ಕೆ ಅವಮಾನವೆನಿಸಿ ಮುಂದೊಂದು ಹೆಜ್ಜೆ ಇಟ್ಟಳು. ತುಂಬಿ ಹರಿಯುವ ಗಂಗಾದೇವಿ “ಮಗಳೇ ದುಡಕಬೇಡಮ್ಮಾ ಹಿಂದಕ್ಕೆ ಸರಿ, ದುಡಕಿನ ನಿರ್ಧಾರ ಬದುಕಿಗೆ ತೊಡಕು, ಯಾವ ಹೆಣ್ಣಿಗಿಲ್ಲ ಹೇಳು ಕಷ್ಟ-ನಷ್ಟ, ತೊಂದರೆ ,ತಾಪತ್ರೆ. ಹೀಗೆ ನಿನ್ನಂತೆ ಜೀವ ಸಾಕೆಂದು ನನ್ನೊಳಗೆ ಪ್ರತಿಯೊಬ್ಬರು ನುಗ್ಗಿದರೆ ನಾನು ಹೆಣಗಳನ್ನೇ ಹೊತ್ತು ಹರಿಯಬೇಕಾಗುತ್ತದೆ, ದಯವಿಟ್ಟು ಮರಳಿ ನಿನ್ನ ಗೂಡು ಸೇರಿಕೋ” ಗಂಗಾದೇವಿ ತಾಯಿಯಂತೆ ಸಾಂತ್ವನ ಹೇಳಿದರೂ ಅಕಿ ಒಳಗಿದ್ದ ಮನಸು “ನಿನಗೆ ಸಾಯಲು ಧೈರ್ಯವಿಲ್ಲ, ನೀನು ಸಾವಿಗೆ ಹೆದರುವ ಹೇಡಿ ಹೆಣ್ಣು”ಎಂದು ಮತ್ತೆ ಹಂಗಿಸತೊಡಗಿತು.
ಆಗ ಸಕ್ಕಿಯು ಮತ್ತೊಂದು ಹೆಜ್ಜೆ ಮುಂದಿಟ್ಟಳು. ಸಕ್ಕಿಯ ಮೈ ಆಗ ಚಳಿಗೆ ಗಡಗಡ ನಡುಗಲು ಸುರುವಾಯಿತು. ಮಗಳೇ ಮುಂದೆ ಮತ್ತೊಂದು ಹೆಜ್ಜೆ ಇಡಬೇಡ ಹೆಣ್ಣಿಗೆ ಅಪಮಾನ, ಅಪನಿಂದೆ ಸಹಜ,ತಾಳ್ಮೆ ತಗಿದುಕೋ, ಮನೆಯಲ್ಲಿ ಮಕ್ಕಳಿದ್ದಾರೆ, ಬೆಳಗಾದರೆ “ಅವ್ವ” ಎಲ್ಲಿ ಎಂದು ಹುಡಕುತ್ತಾರೆ. ನೀ ಕಾಣದಿದ್ದರೆ ಅಳುತ್ತಾರೆ. ಅನಾಥರಾಗುತ್ತಾರೆ. ಅವರನ್ನು ಆರೈಕೆ ಮಾಡುವವರ್ಯಾರು? ಉನಿಸುವರ್ಯಾರು? ರಮಿಸುವರ್ಯಾರು? ನೀ ವಿಚಾರಿಸಿದ್ದಿಯೇನು? ನೀ ಸತ್ತರೆ ಮಕ್ಕಳ ಗತಿಯೇನು? ಹೆಣ್ಣಿಗೆ ಹಟ ಒಳ್ಳೆಯದಲ್ಲ. “ಈಸಬೇಕು ಇದ್ದು ಜಯಿಸಬೇಕು”. ಮೂರು ವರ್ಷದ ಹಿಂದೆ ಗಂಡನ ಕಿಟಿಕಿಟಿ ತಾಳದೆ ಸಕ್ಕಿಯ ತಾಯಿ ಅದೇ ನದಿಯಲ್ಲಿ ಹಾರಿ ಜೀವ ಬಿಟ್ಟಿದ್ದಳು. ಅವಳು ಆತ್ಮಹತ್ತೆ ಮಾಡಿಕೊಂಡದ್ದರಿಂದ ಹನ್ನೆರಡು ವರುಷ ಪಿಶಾಚಿ ಆಗಿ ಅವಳ ಆತ್ಮ ದಿನವೂ ಹುಣಸೆ, ಮರವೋ ,ಆಲದ ಮರವೋ, ಯಾವುದಾದರೂ ಒಂದು ಮರದಲ್ಲಿ ಜೋತಾಡುತ್ತ ಹೊತ್ತು ಕಳೆಯುತ್ತಿತ್ತು. ಮಗಳು ತನ್ನಂತೆ ಸಾಯಲು ಸಿದ್ದಳಾಗಿ ಬಂದಿರುವುದು ಕಂಡು ಹೊಳೆ ದಂಡೆಯ ಮೇಲೆ ಇರುವ ನೀರಲ ಹಣ್ಣಿನ ಮರದೊಳಗೆ ಕುಳಿತು ತನ್ನ ಅನುಭವಕ್ಕೆ ದಕ್ಕಿದಷ್ಟು ಮಗಳಿಗೆ ತಿಳುವಳಿಕೆ ಹೇಳಿತು. ಸಕ್ಕಿ ಅವರವ್ವನ ಆತ್ಮದ ಮಾತು ಕೇಳಿ ಬಿಕ್ಕಿ ಬಿಕ್ಕಿ ಅಳತೊಡಗಿದಳು. ಮೀನೊಂದು ಸಕ್ಕಿಯ ಕಾಲಡಿಗೆ ಬಂದು “ಅಕ್ಕಾ ನೀನೆನಾದರೂ ಇಂದು ಮುಳುಗಿ ಸತ್ತರೆ ನಮ್ಮ ಮೀನುಗಳ ಕುಲಕ್ಕೆ ದೊಡ್ಡ ಹಬ್ಬದೂಟವೇ ಆಗುತ್ತದೆ. ದಯವಿಟ್ಟು ಬೇಗನೆ ಒಳಗೆ ಬಾ” ಎಂದು ಸ್ವಾಗತಿಸಿತು. “ನುಗ್ಗು ನುಗ್ಗು ಎಲೆ ಹೇಡಿ ಹೆಣ್ಣೆ ಮರಳಿ ನೀ ಮನೆಗೆ ಹೋದರೆ ನಿನಗೆಲ್ಲಿದೆ ಮರ್ಯಾದೆ?” ಎಂದು ಅವಳ ಕ್ರೂರ ಮನ ಅವಳನ್ನು ಮತ್ತೆ ಮತ್ತೆ ಪೀಡಿಸತೊಡಗಿತು.
ಸಕ್ಕಿ ಮತ್ತೊಂದು ಹೆಜ್ಜೆ ಮುಂದಿಟ್ಟಳು. ತೊಟ್ಟಿಲೊಳಗಿದ್ದ ಅವಳ ಮಗು “ಅಮ್ಮಾ” ಎಂದು ಕಿರಿಚಿದಂತಾಗಿ ಬಿಕ್ಕಿ ಬಿಕ್ಕಿ ಅಳತೊಡಗಿದಳು. ನದಿ ದಂಡೆಯ ಕಲ್ಲು ಸಂಧಿಯಲ್ಲಿ ಕುಳಿತ ಕಪ್ಪೆ ಸಕ್ಕಿಯ ಸ್ಥಿತಿ ಕಂಡು “ ನೋಡಮ್ಮಾ ನಿನ್ನ ಗಂಡ ನಿನ್ನ ಮೇಲೆ ಪ್ರಾಣವನ್ನೆ ಇಟ್ಟುಕೊಂಡಿದ್ದಾನೆ. ನನ್ನ ಹೆಂಡಿತಿಯೇ ನನಗೆ ಸರ್ವಸ್ವ ಎಂದು ನಂಬಿದ್ದಾನೆ. ಅಂಥ ಗಂಡನಿಗೆ, ಮುದ್ದಾದ ಮಕ್ಕಳಿಗೆ ನೀ ಮೋಸಮಾಡಿ ಹೋದರೆ ದೇವರು ನಿನ್ನ ಯಾವಕಾಲಕ್ಕೂ ಕ್ಷಮಿಸುವುದಿಲ್ಲ, ನಿನಗೆ ಹೆಚ್ಚು ಹೇಳುವುದರಲ್ಲೇನೂ ಅರ್ಥ ಇಲ್ಲ ನೀನು ತಿಳಿದಂತೆ ಮಾಡೆಂದು” ಕಪ್ಪೆ ಕಲ್ಲಿನ ಸಂಧಿ ಸೇರಿಕೊಂಡಿತು.
ಆಗ ಸಕ್ಕಿಯ ಕಣ್ಣೀರು ನದಿಯಲ್ಲಿ ಕರಗಿದ್ದು ಗೊತ್ತಾಗಲಿಲ್ಲ.
ಅಣ್ಣ ಹೆಂಡತಿಯ ಗುಲಾಮ ಆಗಿರುವುದು ಗೊತ್ತಾಗಿದ್ದರೆ ಖಂಡಿತ ನಾನು ಹೆರಗೆಗೆ ತವರು ಮನೆಗೆ ಬರುತ್ತಿರಲಿಲ್ಲ. “ತಾಯಿ ಸತ್ತ ಮೇಲೆ ತವರೂರಿಗೆ ಬರಬಾರದು” ಅಂಥ ಹಿರಿಯರು ಹೇಳುವ ಮಾತು ಅಕ್ಷರ ಸಹ ಸತ್ಯವಾದದ್ದು. ನನ್ನ ಗಂಡ ಎಷ್ಟು ಹೇಳಿದೂ ಕೇಳದೆ ಅಣ್ಣ ನನ್ನ ತವರಿಗೆ ಕರೆತಂದ. ಮೊದಲೆಲ್ಲ ತಿಂಗಳೊಪ್ಪತ್ತು ಚೆನ್ನಾಗಿ ನೋಡಿಕೊಂಡರು. ಹೆರಿಗೆಯಾದ ಮೇಲೆ ಭಾನಂತಿ ಹೆಂಗಸಿಗೆ ಕೊಡಬೇಕಾದ ಕೊಬ್ರಿ,ಕರಚಿಕಾಯಿ, ಹುಗ್ಗಿ ತುಪ್ಪಾ ಯಾವುದೂ ನನ್ನ ಬಾಯಿ ಕಾಣಲಿಲ್ಲ. ಬರೀ ತೀಳಿ ಸಾರು ಅಕ್ಕಿ ಅನ್ನವೇ ನನ್ನ ಪಾಲಿಗೆ ಮೀಸಲಿತ್ತು. ಅದಲ್ಲದೆ ಜೀವನದಲ್ಲಿ ಕೆಳಗಿಳಿಸಲಾರದ ಕಳಂಕವೊಂದು ಅಣ್ಣನ ಹೆಂಡತಿ ಹೊರಸಿದಳಲ್ಲಾ? “ನಿಮ್ಮ ತಂಗಿ ನನ್ನ ತವರು ಮನೆಯವರು ಕೊಟ್ಟ ಭಂಗಾರದಾಭರಣ ಕಳವು ಮಾಡಿದ್ದಾಳೆ” ಅಂಥ ಅನ್ನನಿಗೆ ಹೇಳಿದಾಗ ಅಣ್ಣ ಆ ಮಾತು ನಂಬೇ ಬಿಡುವುದೇ? ನಾನು ಕಳವಿ ಅಂತ ಗಂಡನ ಮನೆಯವರಿಗೆ ತಿಳಿದರೆ ನನ್ನ ಗತಿಯೇನು? ನನ್ನ ಹೆತ್ತ ತಂದೆ-ತಾಯಿ ಮರ್ಯಾದೆ ಏನಾಗಬಾರದು? ಅತ್ತಿಗೆ ಹೀಗೇಕೆ ಮಾಡಿದಳು? ಅಣ್ಣ ನನ್ನನ್ನೇಕೆ ಅನುಮಾನಿಸಿದ? ನಾನು ಬೇಸರಾಗಿದ್ದರೆ ನನ್ನ ಬೈದೊ, ಹೊಡೆದೋ ಗಂಡನ ಮನೆಗೆ ಕಳಿಸ ಬಹುದಿತ್ತಲ್ಲಾ? ಹಿಂತಾ ಕಳಂಕ ಹೊತ್ತ ಬದಕುವುದು ಹೆಣ್ಣಿಗೆ ಸರಿಯೇ? ನಾಳೆ ಮಕ್ಕಳಿಗೂ “ಇವರವ್ವಾ ಕಳ್ಳಿ” ಎಂದು ಸಮಾಜ ಹಂಗಿಸದೇ ಇರುವುದೇ? ಸಕ್ಕಿ ನಡೆದದ್ದು ನೆನಸಿಕೊಂಡು ಮತ್ತೊಂದು ಹೆಜ್ಜೆ ಮುಂದಿಟ್ಟಳು. ಆಗ ನೀರು ಅವಳ ಮೊಳಕಾಲದವರೆಗೂ ಮುಟ್ಟಿತ್ತು.
ಮುಂದ ಒಂದss ಹೆಜ್ಜಿ ಇಟ್ಟರ ದೊಡ್ಡದೊಂದ ತಗೈತಿ. ದಯಮಾಡಿ ನಿನ್ನ ಮನಸ್ಸು ಬದಲಾಯಿಸು ಸಕ್ಕಮ್ಮಾ. ನಾನೂ ಅವತ್ತ ನಿನ್ಹಂಗ ದುಡಕಿ ಬಂದ ಜೀವಾ ಕಳಕೊಂಡ ಇಂದ ಅಂತರ್ ಪಿಶಾಚಿಯಾಗಿ ಅಲದಾಡಾಕತ್ತೀನಿ. ನನ್ನ ಎರಡ ಮುದ್ದಾದ ಮಕ್ಕಳನ ಅನಾಥರನ್ನಾಗಿ ಮಾಡಿ ಬಂದ್ಯಾ, ದೇವರಂಥ ಗಂಡಗೂ ಹೇಳದ ದುಡಕೀದೆ, ಅರಗಿಣಿಹಂಗ ಸಾಕಿದ ಅವ್ವ -ಅಪ್ಪಗೂ ಒಂದ ಮಾತೂ ಹೇಳಲಿಲ್ಲ. ನಮ್ಮ ಅತ್ತಿಕೊಡುವ ನಿಗ್ಗರಾ ಸಹಿಸಿಕೊಳ್ಳಾಕ ಆಗಲಿಲ್ಲ. “ಈ ಭೂಮಿಮ್ಯಾಲ ಹೆಣ್ಣಿಗೆ ಹೆಣ್ಣss ವೈರಿ” ಆಗಿರ್ತಾಳವ್ವಾ, ನನಗ ನಮ್ಮ ಅತ್ತಿನss ವೈರಿಯಾದ್ಳು, ನಾನು ಶ್ರೀಮಂತರ ಮನಿಯಿಂದ ಬಂದ ಹೆಣ್ಣು. ನನ್ನ ತವರ ಮನ್ಯಾಗ ಉನ್ನಾಕ ಉಡಾಕ ಕೊರತಿ ಇರಲಿಲ್ಲ. ಗಂಡನ ಮನಿಗೆ ಬಂದ ಮ್ಯಾಲ ನನಗ ಪಜೀತಿ ಹಿಡಿತಿ, ನನ್ನ ಗಂಡ ಸರಕಾರಿ ನೌಕರ. ಆದ್ರೂ ತಾಯಿ ಹೇಳಿದ್ಹಂಗ ಕುಣಿತಿದ್ದ. ಹಂಗಿದ್ರೂ ನನ್ನ ಮ್ಯಾಲ ಅಂವಗ ಪ್ರೀತಿ ಒಂದ ಗುಲಗಂಜಿಯಷ್ಟೂ ಕಮ್ಮಾಗಿರಲಿಲ್ಲ. ನಾನೂ ಬಿ.ಎ ಪದವಿ ಕಲತಾಕಿ. ಕತಿ, ಕಾದಂಬರಿ ಓದುತ್ತಾ, ದಿನವೂ ಮನೆಗೆಲಸ ಮಾಡುತ್ತ ಇರ್ತಿದ್ದೆ. ನಮ್ಮತ್ತಿ ನನ್ನ ಗಂಡ ದುಡದದ್ದೆಲ್ಲಾ ತನ್ನ ಮಗಳ ಮನಿಗೆ ತುಂಬತ್ತಿದ್ದಳು. ನಾನು ಆಗ ಅದಕ್ಕೆ ಅಡ್ಡಿಯಾದೆ ನೋಡು. ಅಲ್ಲಿಂದ ನನಗ ಕೆಟ್ಟ ಕಾಲ ಸುರುವಾತು. ನಾನು ಆಗಾಗ ನಮ್ಮ ದೊಡ್ಡಪ್ಪನ ಮಗನ ಜೋಡಿ ಪೋನನ್ಯಾಗ ಮಾತಾಡ್ತಿದ್ದೆ. ಅದನ್ನ ಮುಂದ ಮಾಡಿ ನಮ್ಮತ್ತಿ ಅದಕ್ಕೊಂದು ಹೊಲಸು ಸಂಬಂಧ ಕಟ್ಟಿ ದಿನವೂ ನನ್ನ ಕುಟಗತೊಡಗಿದಳು. ನನ್ನ ಗಂಡನಿಗೂ ಈ ವಿಷಯ ಹೇಳಿ ಅಂವನ ತಲಿ ಕೆಡಸಿದ್ಳು. ಯಾವೊಂದು ಚಟಾ ಇಲ್ಲದ ನನ್ನ ಗಂಡ ದಿನವೂ ಸೆರೆ ಕುಡಿದು ಬರಲು ಸುರುಮಾಡಿದ. ನನ್ನ ಬದುಕೆಲ್ಲ ಆಗ ನುಚ್ಚು ನೂರಾಯಿತು. ನಮ್ಮತ್ತಿ ಮಗನ ಕುಡಿತಕ್ಕೇ ನಾನೇ ಕಾರಣ ಎಂದೂ, ನನ್ನ ಸ್ವಸಿ ನನ್ನ ಮಗನಿಗೆ ಗೊತ್ತಾಗದಂತೆ ಕಳ್ಳ ಸಂಬಂದ ಇಟಗೊಂದಾಳೆಂದು ಊರತುಂಬೆಲ್ಲ ಡಂಗುರ ಸಾರಿದಂತೆ ಅವರಿವರ ಮುಂದೆ ಹೇಳತೊಡಗಿದಳು. ನಾನು ತಲೆಕೆಟ್ಟು ಬಂದು ಈ ನದಿಯಲ್ಲಿ ಹಾರಿ ಬಿಟ್ಟೆ. ಗೌಡರ ಸ್ವಸಿ ಹೊಳಿಬಿದ್ದ ಸತ್ಳು ಎಂದು ಹತ್ತೂರೂಗಿ ಗೊತ್ತಾಗಿ, ಸತ್ತ ಮೇಲೂ ಎಲ್ಲರೂ ನನ್ನೇ ಬೈಯ್ಯುತ್ತಾ ಅಡ್ಡಾಡುತ್ತಿದ್ದಾರೆ. ನಾನು ಅಂದು ಮಾಡಿದ ತಪ್ಪು ನೀ ಇಂದು ಮಾಡಬೇಡವ್ವಾ.ಎಂದು ಗೌಡರ ಸ್ವಸಿ ಮಲ್ಲಮ್ಮನ ಆತ್ಮ ಸಕ್ಕಿಗೆ ತನ್ನ ಬದುಕಿನಲ್ಲಿ ನಡದೆ ಕತೆ ಹೇಳುತ್ತಾ ಅವಳು ಸಾಯದಂತೆ ತಡೆಯಲು ಪ್ರಯತ್ನಿಸಿತು.
ಮಲ್ಲಮ್ಮ ಹೇಳಿದ್ಹಂಗ ಮುಂದಕ ಹೆಜ್ಜಿ ಇಡಬ್ಯಾಡವ್ವೋ..ದೌಳಾಕಿನss ಹೆಣ್ಣಿಗೆ ಹುಟ್ಟಿದಾಗಿಂದ ಸಾಯುವ ತನಕ ಕಷ್ಟ, ನೋವು, ನಿಂದನೆ ತಪ್ಪಿದ್ದಲ್ಲ. ನನಗೂ ಸಾಯುತನ ಒಂದಾತು ಸತ್ತಮ್ಯಾಲೊಂದಾತು. ಸತ್ತ ಸಾದಸಾಕ ಬರ್ತೈತೇನು? ಏನಿದ್ರೂ ಇದ್ದ ಸಾಧಸ್ಬೇಕು. ಇದ್ದ ಗುದ್ದಾಡ್ಬೇಕು. ನನ್ನ ಗಂಡ ಇನ್ನೊಬ್ಬಕಿ ಜೋಡಿ ಸಂಬಂಧ ಇಟಗೊಂದಾನಂತ ಮಗ್ಗಲಿ ಮನಿ ಹೆಂಗಸ ಹೇಳಿದ ಮಾತ ಕಟಗೊಂದು ನನ್ನ ಜೀವನಾನss ಹಾಳ ಮಾಡ್ಕೊಂಡ್ಯಾ. ಅಕಿ ಮಾತ ಕಟಗೊಂದ ರಾತ್ರಿ ಮಗ್ಗಲ ಮಲಗಾಕ ಬಂದ ಗಂಡಗ, ಬಾಯಿಗೆ ಬಂದ್ಹಂಗ ಹಿಗ್ಗಾಮುಗಾ ಜಾಡಿಸಿಡಿದೆ. “ನಾನು ನಿನ್ನ ಬಿಟ್ಟ ಯಾರನ್ನೂ ಕಣ್ಣೇತ್ತಿ ನೋಡಿಲ್ಲ ನನ್ನ ಮಾತ ನಂಬು” ಅಂತ ಅಂವ ರಗಡ ಹೇಳಿದ. “ಬೆಕ್ಕ ಕಣ್ಣ ಮುಚ್ಚಿ ಹಾಲ ಕುಡದ್ರ ಜಗತ್ತಿಗೆ ಗೊತ್ತಾಗುದಿಲ್ಲೇನು?” ಅಂತ ಅವನ ಜೋಡಿ ಜಿದ್ದಿಗೆ ಬಿದ್ದು ಜಗಳಕ್ಕಿಳಿದೆ. ತಪ್ಪ ಮಾಡಲರಾದ ಮನುಷ್ಯಾಗ ಲಗೂನ ಸಿಟ್ಟ ಬಂದ ಬಿಡ್ತೈತಿ. ಅವತ್ತ ನನ್ನ ಗಂಡಗೂ ಸಿಟ್ಟ ಬಂದ ನನ್ನ ರಪಾರಪಾ ಹೊಡಿಯಾಕ ಸುರುಮಾಡಿದ. ಅಂವ ಹೆಂಗ ಹೊಡಿತಾನೋ ಹಂಗ ನಾನು ಅಂವಗ ಹೊಲಸ ಹೊಲಸ ಬೈತಿದ್ದೆ. ಅಂವ ನನ್ನ ಮೈ ಹಣ್ಣಗಾಯ ನೀರಗಾಯ ಮಾಡಿದ. ಆಗ ನನಗ “ಇಷ್ಟ ಆದಮ್ಯಾಲೂ ಈ ಜೀವಾ ಇಟ್ಟರss ಏನ್ ಪೈದೆ ಐತಿ” ಅಂತ ದುಡುಕಿ ಹಿಂದು ಮುಂದು ಇಚಾರ ಮಾಡದ ಬಂದು ತುಂಬಿ ಹರಿಯುವ ಗಂಗವ್ವಗ ಶರಣಾಗಿಬಿಟ್ಟೆ. ಈಗ ನೋಡು ನನ್ನ ಕತಿ ಪಿಶಾಚಿಯಾಗಿ ದಿನವೂ ಸುತ್ತಿ ಸುತ್ತಿ ಸಾಕಾಗೇತಿ. ತನ್ನ ಬದುಕಲ್ಲಿ ಘಟಿಸಿ ಹೋದ ಕತೆಯನ್ನು ರುಕ್ಕವ್ವನ ಆತ್ಮ ಒಂದೇ ಉಸಿರಲ್ಲಿ ಸಕ್ಕವನೆದರು ತೋಡಿಕೊಂಡು ಅಳತೊಡಗಿತು.
“ರುಕ್ಕವ್ವ ಹೇಳಿದ್ದ ಒಂದ ತಟಗss ಕೇಳ ತಂಗೀ. ಮುಂದ ಒಂದ ಹೆಜ್ಜಿನೂ ಊರಬ್ಯಾಡ ಹಂಗೇನಾದ್ರೂ ಇಟ್ಟಿಯೋ ನೀನೂ ನಮ್ಮ ಜೋಡಿ ಅಂತರ್ ಪಿಶಾಚಿ ಆಗೂದು ಕಟ್ಟಿಟ್ಟ ಬುತ್ತಿನss ನೋಡು” ಎಂದು ದ್ಯಾಮಕ್ಕನ ಆತ್ಮ ಹೊಳಿ ದಂಡಿ ಮ್ಯಾಲಿದ್ದ ಲಕ್ಕಿಗಿಡದಾಗ ಜೋತಾಡುತ್ತ ಹೊಳಿಯಾಗ ನಿಂತಕೊಂಡ ಸಾಯಾಕ ಸಜ್ಜಾಗಿ ಕಣ್ಣೀರ ಸುರಸ್ಕೋತ ನಿಂತ ಸಕ್ಕವ್ವಗ ಅರ್ಥ ಆಗುವಂಗ ಹೇಳುತ್ತಿತ್ತು. ತಿರಾರಗೇಡಿ ಸಕ್ಕವ್ವ ಯಾರ ಮಾತೂ ಕೇಳದ ಹಂಗ ಮುಂದ ಹೋಗಾಕ ಹಂಸಾಡ್ತಿದ್ಳು. ನಾನು ನಿನಗಿಂತ ಸಣ್ಣಾಕಿ ಆದರೂ ಹೇಳತಿನಿ ಕೇಳು. ನನಗೂ ಜೀವನದಾಗ ತ್ರಾಸ ಬಂದಿತ್ತು. ಅದನ್ನss ನಾನು ದೊಡ್ಡದ ಮಾಡ್ಕೊಂಡೆ. ನಮ್ಮವ್ವ ಸತ್ತ ಮ್ಯಾಲ ನಮ್ಮಪ್ಪ ಮತ್ತೊಂದ ಮದವಿ ಆದ. ಮಲತಾಯಿ ಮನಿಗೆ ಬಂದ್ಳು. ಆಗ ನನ್ನ ಬದುಕನ್ಯಾಗ ಬಿರುಗಾಳಿ ಬೀಸತೊಡಗಿತು. ನನ್ನ ಮನಿ ಕೆಲಸದ ಆಳಿಗಿಂತ ಕಡಿಯಾಗಿ ನೋಡ್ತಿದ್ಳು, ಹಳಸಿದ್ದು ಪಳಸಿದ್ದು ಉನ್ನಾಕ ಕೊಡತಿದ್ಳು. ಅಪ್ಪಾ ಆಗ ನನಗ ಯಾಕೂ ಅನಲಿಲ್ಲಾ, ನನ್ನ ಹೊಟ್ಟಿ, ನೆತ್ತಿ ನೋಡಲಿಲ್ಲ. ಬರೀ ಮಲತಾಯಿ ಹೇಳಿದ ಮಾತಿಗೆ ನಾಯಿಯಂತೆ ಬಾಲಾ ಅಲ್ಲಾಡಸ್ತಿದ್ದ. ನನಗೂ ಮಳ್ಳ ಬುದ್ದಿ. ನನಗ್ಯಾರೂ ಬಂಧು-ಬಾಂಧವರೂ ಇರಲಿಲ್ಲ. ಗೆಳೆಯರೂ ಇರಲಿಲ್ಲ. ತಿಳುವಳಿಕೆ ಹೇಳವರ ಪರಿಚಯವೇ ನನಗಾಗಲಿಲ್ಲ. ನಾನೂ ದಿನ ಕಳೆದಂತೆ ನನ್ನ ಮತಿ ಭ್ರಮೆ ಆಗತೊಡಗಿತು. ಈ ಜೀವ ಸಾಕೆನಿಸಿ ಈ ಹೊಳೆಗೆ ಬಂದು ಹಾರಿ ಜೀವ ಕಳಕೋಬೇಕಾಯಿತು. ದ್ಯಾಮವ್ವನ ಆತ್ಮ ಮತ್ತೊಮ್ಮೆ ತನ್ನ ಹಿಂದಿನ ಕತಿ ನೆನಪಿಸಿ ಸಕ್ಕವನೆದರು ತೋಡಿಕೊಂಡಿತು. ನಿನ್ನ ಸಮಸ್ಯೆ ಸಮಸ್ಯೆನೇ ಅಲ್ಲಾ ಹೊಡಮರಳಿ ಮನಿಗೆ ಹೋಗು. ಅವತ್ತ ನನಗೂ ಯಾರರss ಹಿಂಗತಿ ತಿಳುವಳಕಿ ಹೇಳುವವರು ಸಿಕ್ಕಿದ್ರ ಸಾಯದ ಬದಕತಿದ್ನೋ ಏನೋ ಅಂತ ದ್ಯಾಮವ್ವನ ಆತ್ಮ ಹಳಹಳಿಸಿತು.
ಇಷ್ಟೆಲ್ಲ ಆತ್ಮಗಳು ನನ್ನ ಉಳಿಸಲು ಇಷ್ಟೊಂದು ಹೆಣಗಾಡುತ್ತಿದ್ದಾವಲ್ಲ ಖಂಡಿತ ನಾನು ಸಾಯ ಬಾರದು ಮರಳಿ ಮನೆಗೆ ಹೋಗಲೇ ಬೇಕು. ತೊಟ್ಟಿಲಲ್ಲಿ ಆಡುವ ಪುಟ್ಟ ಕಂದಮ್ಮಗೆ ಹಾಲುನಿಸಬೇಕು, ಇನ್ನು ಮೂರೇ ಮೂರು ತಿಂಗಳಲ್ಲಿ ಗಂಡ ಬಂದು ಕರೆದುಕೊಂಡು ಹೋಗುತ್ತಾನೆ, ಅಲ್ಲಿಯ ತನಕ ಪಾಲಿಗೆ ಬಂದದ್ದು ಉಂಡರಾಯಿತು. ಮರಳಿ ಈ ತವರೂರಿಗೆ ಕಾಲೇ ಇಡಬಾರದು ಅಂತ ಗಟ್ಟಿ ನಿರ್ಧಾರ ಮಾಡಿ ಸಕ್ಕವ್ವ ನಿಧಾನಕ್ಕೆ ಹಿಂತಿರುಗುತ್ತಿರುವಾಗ ಅವಳ ಎಡಗಾಲು ಸರ್ರನೇ ಜಾರಿತು ಹಳಾನೇ ಹಿಂದಕ್ಕೆ ಬಿದ್ದಳು. ಈಜು “ಬಾರದೇ ಅಯ್ಯೋ.. ನನ್ನ ಕಾಪಾಡಿ ಕಾಪಾಡಿ” ಎಂದು ಹಲುಬತೊಡಗಿದಳು. ಆತ್ಮಗಳ ಬಿಟ್ಟು ಮತ್ತಾರೂ ಆ ಹೊಳೆ ದಂಡಿ ಇರಲಿಲ್ಲ. “ ಈ ಹುಚ್ಚ ಹುಡುಗೀಗೆ ಎಷ್ಟೊಂದು ತಿಳಿಸಿ ತಿಳಿಸಿ ಹೇಳಿದೆವು ನಮ್ಮ ಮಾತೇ ಕಿವಿಗೆ ಹಾಕಿಕೊಳ್ಳಲಿಲ್ಲ” ಅಲ್ಲಿದ್ದ ಆತ್ಮಗಳು ಹುಣಸೆ ಮರದ ಟೊಂಗಿ ಹಿಡಿದು ಜೋತಾಡತೊಡಗಿದವು. ಸಕ್ಕವ್ವನ ದೇಹ ತುಂಬಿ ಹರಿಯುವ ನದಿಯಲ್ಲಿ ಹೆಣವಾಗಿ ತೇಲುತ್ತ ಮುಂದೆ ಸಾಗಿತು. ಹಸಿದ ಮೀನುಗಳು ಆ ಹೆಣವನ್ನು ಕುಕ್ಕಿ ಕುಕ್ಕಿ ತಿನ್ನುತ್ತಿದ್ದವು. ನದಿ ತನ್ನ ಪಾಡಿಗೆ ತಾನು ತುಂಬಿ ಹರೆಯುತ್ತಲೇ ಇತ್ತು.
-ತಿರುಪತಿ ಭಂಗಿ
