‘ಈಗಾಗಲೇ ಎಲ್ಲವನ್ನೂ ಹೇಳಲಾಗಿದೆ; ಆಚರಿಸಬೇಕಷ್ಟೇ!’ ಎಂಬ ಮಾತಿಗೆ ಪೂರಕವಾಗಿ ಪ್ರಾಚೀನ ಗ್ರೀಕಿನತ್ತ ದೃಷ್ಟಿ ಹಾಯಿಸಿದರೆ ಅಪರೂಪದಲ್ಲಿ ನಿಜರೂಪವಾಗಿ ತೋರುವುದು ಎಪಿಕ್ಟೆಟಸ್ ಎಂಬ ತತ್ತ್ವಮೀಮಾಂಸಕ. ಪ್ರಾಚೀನ ಕಾಲದಲ್ಲಿ ನಿಸ್ಸಂಶಯವಾಗಿ ಎರಡು ದೇಶಗಳಲ್ಲಿ ನಾಗರಿಕ ಸಂಸ್ಕೃತಿ ಅತ್ಯುಚ್ಚ ಮಟ್ಟವನ್ನು ಮುಟ್ಟಿತ್ತು. ಒಂದು ಗ್ರೀಕ್ ಇನ್ನೊಂದು ಭಾರತ. ಭರತಖಂಡದಲ್ಲಿ ಸಂಸ್ಕೃತವೂ ಗ್ರೀಕಿನಲ್ಲಿ ಗ್ರೀಕ್ ಭಾಷೆಯೂ ಇದರ ವಾಹಕವಾಗಿತ್ತು. ನಮ್ಮಲ್ಲಿ ಋಷಿಮುನಿಗಳೂ ಸಂತರೂ ಕಾಣಿಸಿಕೊಂಡಂತೆ ಅಲ್ಲಿ ತತ್ತ್ವಜ್ಞಾನಿಗಳು ಅರಳಿದರು, ಹೊರಳಿದರು, ಪ್ರಾಣತ್ಯಾಗವನೂ ಮಾಡಿದರು. ಸಾಕ್ರಟೀಸನ ಶಿಷ್ಯ ಪ್ಲೇಟೊ, ಪ್ಲೇಟೊನ ಶಿಷ್ಯ ಅರಿಸ್ಟಾಟಲ್, ಅರಿಸ್ಟಾಟಲನ ಶಿಷ್ಯ ಜಗದೇಕ ಮಲ್ಲ ಅಲೆಗ್ಸಾಂಡರ್ ಹೀಗೆ ನಾವೆಲ್ಲ ಓದಿಕೊಂಡು ಬಂದಿರುವುದು ವೇದ್ಯ. ಯುರೋಪಿನ ಒಂದು ಪುಟ್ಟ ದೇಶ ಗ್ರೀಸ್, ಇಲ್ಲಿ ಆಗಿ ಹೋದ ಮಹನೀಯರು ಬದುಕಿನ ಎಲ್ಲ ರಂಗಗಳ ಬಗ್ಗೆಯೂ ಮಾತಾಡಿದರು; ಅವರ ಶಿಷ್ಯರುಗಳು ಬರೆದಿಟ್ಟುಕೊಂಡರು. ಭೌತ ಜಗತ್ತಿನ ಅವರ ಆಸಕ್ತಿಯು ಕ್ರಮೇಣ ತಾತ್ತ್ವಿಕತೆಯತ್ತ ತಿರುಗಿತು. ನಮ್ಮಲ್ಲಿ ಅದಾಗಲೇ ಲೋಕೋತ್ತರವನ್ನೂ ಲೋಕಹಿತವನ್ನೂ ಕುರಿತು ಋಷಿವರೇಣ್ಯರು ಮಂತ್ರ ತಂತ್ರಗಳ ವಿದ್ಯೆಯನ್ನು ಆವಿಷ್ಕರಿಸಿ, ಸಂಸ್ಕೃತದಲ್ಲಿ ಜತನವಾಗಿರಿಸಿ, ವಿಶ್ವತೋಮುಖವಾಗುತ್ತಿದ್ದ ಕಾಲ. ಆಗ ಅಲ್ಲಿ ಅಂದರೆ ಗ್ರೀಸ್ನಲ್ಲಿ ಜೀವನ ವಿವೇಕವನ್ನು ಕುರಿತು ಆಲೋಚಿಸಿ, ಜನಸಾಮಾನ್ಯರಿಗೆ ಅದರ ಸಾರವನ್ನು ಹಂಚುವ ಕೆಲಸ ನಡೆಯಿತು. ಶಕಪೂರ್ವದಿಂದ ಶಕವರುಷಕ್ಕೆ ಹೊರಳಿದ ಕಾಲದಲ್ಲಿ ಹಲವಾರು ಮಹನೀಯರು ಕಾಣಿಸಿಕೊಂಡರು. ಸಾಕ್ರಟೀಸ್, ಪ್ಲೇಟೊ, ಅರಿಸ್ಟಾಟಲರ ನಂತರ ಕಾಣಿಸಿಕೊಂಡ ಮಹತ್ವದ ತತ್ತ್ವಜ್ಞಾನಿಗಳ ಪೈಕಿ ಎಪಿಕ್ಟೆಟಸ್ ಕೂಡ ಒಬ್ಬರು. ಈತ ಸ್ಟೋಯಿಕ್ ಪಂಥದವ. ಗ್ರೀಕ್ ತತ್ತ್ವಶಾಸ್ತ್ರದಲ್ಲಿ ಡಯೋಜನಿಸನ ಸಿನಿಕ್, ಪಿರ್ಹೊನ ಸ್ಕೆಪ್ಟಿಕ್, ಎಪಿಕ್ಯೂರಸನ ಎಪಿಕ್ಯೂರಿಯನ್ ಮತ್ತು ಜಿ಼ನೋನ ಸ್ಟೋಯಿಕ್ ಪಂಥಗಳು ಬಲು ಮುಖ್ಯವಾದವು. ಬೇರೆಲ್ಲ ಪಂಥಗಳಿಗಿಂತ ಈ ಸ್ಟೋಯಿಕ್ ಪಂಥವು ಜನರಲ್ಲಿ ಹೆಚ್ಚು ಸಮಂಜಸವಾದ ವಿವೇಕವನ್ನು ಬೋಧಿಸಿತು.
ಬೇರೆಯವು ಅತಿರೇಕವನ್ನು ಮುಟ್ಟಿ ಜನಮನ್ನಣೆಯಿಂದ ದೂರಾದವು. ಈ ಜಿ಼ನೋ ಎಂಬುವವನು ಅಲೆಗ್ಸಾಂಡರನ ಸಮಕಾಲೀನ. ಈತನು ಸಾಕ್ರಟೀಸನ ಬೋಧನೆ ಮಾತ್ರವಲ್ಲ, ಜೀವನವನ್ನೂ ಮೆಚ್ಚಿಕೊಂಡವನು. ಹಣ, ಅಧಿಕಾರ ಮತ್ತು ಇಂದ್ರಿಯಸುಖಗಳಿಗೆ ವಶನಾಗದೇ ಮರಣ ದಂಡನೆಗೂ ಹೆದರದೇ ಧೀರತೆಯಿಂದ ಬಾಳಿದ ಸಾಕ್ರಟೀಸನ ಬದುಕಿನಾದರ್ಶವನ್ನು ಎತ್ತಿ ಹಿಡಿದವನು. ನೀತಿಮೌಲ್ಯಗಳೇ ಜೀವನದ ಪರಮಧ್ಯೇಯ ಎಂಬುದೇ ಈ ಜಿ಼ನೋನ ಸ್ಟೋಯಿಕ್ ಪಂಥದ ತಿರುಳು. ಇದರ ಅನುಯಾಯಿ ನಮ್ಮ ಈ ಎಪಿಕ್ಟೆಟಸ್. ಸ್ಟೋಯಿಕ್ ಪಂಥವು ತರ್ಕಶಾಸ್ತ್ರ, ಭೌತಶಾಸ್ತ್ರ ಮತ್ತು ನೀತಿಶಾಸ್ತ್ರಗಳ ಅಭ್ಯಾಸಿ. ತರ್ಕವು ಮಾನವ ದೇಹದ ಅಸ್ಥಿಪಂಜರ ಮತ್ತು ಸ್ನಾಯು, ಭೌತವು ರಕುತ ಮಾಂಸ, ನೀತಿಯು ಅದರ ಆತ್ಮ ಎಂದು ಗುರುತಿಸುವುದು. ಈ ಪಂಥದ ವಿಚಾರಗಳಿಂದ ಪ್ರಭಾವಿತರಾದವರಲ್ಲಿ ರೋಮ್ ಸಾಮ್ರಾಜ್ಯದ ಖ್ಯಾತ ವಾಗ್ಮಿ ಸಿಸಿರೋ ಕೂಡ ಒಬ್ಬ. ಇನ್ನೋರ್ವ ಈ ಎಪಿಕ್ಟೆಟಸ್ ಮತ್ತು ಚಕ್ರವರ್ತಿಯಾಗಿದ್ದ ಮಾರ್ಕಸ್ ಅರಿಲಿಯಸ್. ಇವರ ಚಿಂತನೆಗಳು ಸಾರ್ವಕಾಲಿಕವಾದವೆಂದು ಆಧುನಿಕ ಯುರೋಪಿಯನ್ ವಿದ್ವಾಂಸರು ಅಭಿಪ್ರಾಯ ಪಟ್ಟಿರುವರು. ಎಪಿಕ್ಟೆಟಸನು ಗುಲಾಮೀ ಮನೆತನದಲ್ಲಿ ಹುಟ್ಟಿದವನು, ಗುಲಾಮನಾಗಿ ಕರ್ತವ್ಯ ಮಾಡುತ್ತಿದ್ದವನು, ತನ್ನ ಅಸಾಧಾರಣ ಬುದ್ಧಿಮತ್ತೆ ಮತ್ತು ಪ್ರತಿಭಾವಂತಿಕೆಗಳಿಂದಾಗಿ ದಾಸ್ಯದಿಂದ ಮುಕ್ತನಾಗಿ, ಶಿಕ್ಷಣವನ್ನು ಪಡೆದುಕೊಂಡು, ಗುರುವಿನ ಸ್ಥಾನ ಪಡೆದವ. ಗ್ರೀಕ್ ಭಾಷೆಯಲ್ಲಿ ಈತನ ಹೆಸರಿಗಿರುವ ಅರ್ಥ: ಜ್ಞಾನ ಗಳಿಸಿಕೊಂಡವ ಎಂದು.
ಅಂತಿಮವಾಗಿ ಈತ ನೀರೊ ಚಕ್ರವರ್ತಿಯ ಆಶ್ರಯ ಪಡೆದು, ಆತನಿಗೆ ಮಂತ್ರಿಯಾಗಿ ನಿಯುಕ್ತನಾಗುವನು. ತದನಂತರ ಬಂದ ಡೊಮಿಶಿಯನ್ ಎಂಬ ರಾಜನು ತತ್ತ್ವಜ್ಞಾನದ ಬೋಧನೆಗಳಿಗೆ ಬಹಿಷ್ಕಾರ ವಿಧಿಸಿ, ಎಲ್ಲ ತತ್ತ್ವಶಾಸ್ತ್ರಕೋವಿದರನ್ನು ತನ್ನ ರಾಜ್ಯದಿಂದ ಗಡೀಪಾರು ಮಾಡುವನು. ಆಗ ಎಪಿಕ್ಟೆಟಸನು ನಗರದಿಂದ ದೂರವಾಗಿ, ಪ್ರಕೃತಿಯ ಮಧ್ಯದಲ್ಲಿ ಶಾಲೆಯೊಂದನ್ನು ಸ್ಥಾಪಿಸಿ, ಅಲ್ಲಿ ತನ್ನ ಅಧ್ಯಾಪನವನ್ನು ಮುಂದುವರಿಸುವನು. ತನ್ನ ಜೀವನದ ಕೊನೆಯವರೆಗೂ ನುಡಿದಂತೆ ನಡೆದವನು, ಪ್ರಾಮಾಣಿಕವಾಗಿ ಜೀವಿಸಿದವನು. ಈತನ ಉಪದೇಶಸಹಿತವಾದ ವಿಚಾರಸರಣಿಯನ್ನು ಈತನ ಶ್ರದ್ಧೆಯ ಶಿಷ್ಯನಾದ ಎರಿಯನ್ ಎಂಬಾತನು ಬರೆದಿಟ್ಟನು. ಇದು ಒಟ್ಟು ಎಂಟು ಸಂಪುಟಗಳಲ್ಲಿ ಸಂಗ್ರಹಗೊಂಡು, ನಮಗೀಗ ಸ್ವಲ್ಪವೇ ಉಪಲಬ್ಧವಾಗಿದೆ. ಈ ಎರಿಯನ್ ನಿಂದಾಗಿ ನಮಗೆ ಎಪಿಕ್ಟೆಟಸನು ಲಭಿಸಿದನು. ಈತನ ಮಾತು, ಆಲೋಚನೆ ಮತ್ತು ಹೇಳಿಕೆಗಳನ್ನು ಒಳಗೊಂಡ ದಿ ಆರ್ಟ್ ಆಫ್ ಲಿವಿಂಗ್ ಅಂದರೆ ಬದುಕಿನ ಅಥವಾ ಬದುಕುವ ಕಲೆ ಎಂಬುದಾಗಿ ಇಂಗ್ಲಿಷಿನಲ್ಲಿ ಪ್ರಕಟಗೊಂಡಿದೆ. ಇದನ್ನು ಸುಭಾಷ್ ರಾಜಮಾನೆ ಎಂಬ ಅಧ್ಯಾಪಕರು ಮುಳುಗದಿರಲಿ ಬದುಕು ಎಂಬ ಹೆಸರಿನಲ್ಲಿ ಕನ್ನಡದಲ್ಲಿ ಅನುವಾದಿಸಿ ಕೊಟ್ಟಿದ್ದಾರೆ.
ಈ ಕೃತಿಯು ಮೂರು ಭಾಗಗಳನ್ನು ಒಳಗೊಂಡಿದೆ. ಮೊದಲನೆಯ ಭಾಗದಲ್ಲಿ ಎಪಿಕ್ಟೆಟಸನ ಹುಟ್ಟು, ಹಿನ್ನೆಲೆ, ಆತನಿದ್ದ ಕಾಲಘಟ್ಟದ ದೇಶವಾಸೀ ವಿವರಗಳಿವೆ. ಈತನ ಬೋಧನೆಗಳ ತಿರುಳನ್ನು ಸಂಕ್ಷೇಪಿಸಲಾಗಿದೆ. ಘಟನೆಗಳಿಗಿಂತ ಅವುಗಳನ್ನು ಕುರಿತು ನಮ್ಮ ವ್ಯಾಖ್ಯಾನಗಳೇ ಹೆಚ್ಚು ವಿಚಲಿತರನ್ನಾಗಿಸುತ್ತವೆಂಬ ಈತನ ದಾರ್ಶನಿಕ ಸತ್ಯವನ್ನು ಅವಲೋಕಿಸಲಾಗಿದೆ. ಮುಖ್ಯವಾಗಿ ನಮ್ಮ ಹೊಸಗನ್ನಡದ ದಿಗ್ಗಜರಲ್ಲಿ ಒಬ್ಬರಾದ ಮಾಸ್ತಿ ವೆಂಕಟೇಶರು 1933 ರಲ್ಲಿಯೇ ‘ಎಪಿಕ್ಟಿಟಸ್ ಗುರುವಿನ ಉಪದೇಶ’ ಎಂಬ ಲೇಖನ ಬರೆದಿರುವುದನ್ನು ಗಮನಿಸಿ, ಅದರ ಸಾರವನ್ನು ಪರಿಚಯಿಸಲಾಗಿದೆ. ಚಕ್ರವರ್ತಿಗಿಂತಲೂ ದೇವರು ದೊಡ್ಡವನು; ಆತನಿಂದ ಒಳಗಿನ ಶಾಂತಿ ಪ್ರಾಪ್ತ ಎಂದ ಎಪಿಕ್ಟೆಟಸನ ಧೋರಣೆಯನ್ನು ಮಾಸ್ತಿಯವರು ಬಹುವಾಗಿ ಮೆಚ್ಚಿದವರು. ದೈವವನ್ನು ಪ್ರಶ್ನಿಸುವುದಕಿಂತ ಒಪ್ಪಿಕೊಂಡು ಮುನ್ನಡೆಯುವುದು ನಿಜ ಬದುಕಿನ ಕಲೆ ಎಂಬ ಧೋರಣೆಯ ಎಪಿಕ್ಟೆಟಸನನ್ನು ಮಾಸ್ತಿಯವರು ಮೆಚ್ಚುವುದು ಸೂಕ್ತವಾಗಿಯೇ ಇದೆ. ಅನುವಾದಕರಾದ ಸುಭಾಷರು ಗುರುತಿಸುವಂತೆ, ಈತನ ಬೋಧನೆಗಳು ಕೇವಲ ಒಣಹರಟೆಗಳಲ್ಲ; ಅಪಾರ ಜೀವನಾನುಭವ ಮತ್ತು ಆಳವಾದ ಚಿಂತನೆಗಳ ಫಲ. ವ್ಯಕ್ತಿ ಸ್ವಾತಂತ್ರ್ಯದ ಪ್ರತಿಪಾದಕನಾದ ಇವನ ಎಲ್ಲ ಬೋಧನೆ ಮತ್ತು ಆಲೋಚನೆಗಳ ಹಿಂದೆ ಒಳಿತನ್ನು ಗುರುತಿಸುವ ಮತ್ತು ಅದನ್ನು ಬದುಕಿನಲ್ಲಿ ಅಳವಡಿಸಿಕೊಂಡು ನೆಮ್ಮದಿಯೇ ನಿಜಸುಖವೆಂದು ಅರಿಯುವ ವಿವೇಕೋದಯವಿದೆ. ಗ್ರೀಕ್ ರಾಜ್ಯದ ಎಲ್ಲ ರಾಜರೂ ಹೋದರು; ಅವರೊಂದಿಗೆ ವೈಭವವೂ ಹೋಯಿತು, ಆದರೆ ತತ್ತ್ವಶಾಸ್ತ್ರಿಗಳ ಹೆಸರು ಚಿರಸ್ಥಾಯಿಯಾಯಿತು. ನಶ್ವರವಾದ ಬಾಳುವೆ ಹೋಗಿ, ಅಕ್ಷರ ಶಾಶ್ವತವಾಯಿತು, ಎಪಿಕ್ಟಿಟಸನಂಥ ಚಿಂತಕರು ಅಮರರಾದರು ಎಂಬ ಮಾಸ್ತಿಯವರ ಮಾತನ್ನು ಲೇಖಕರು ಅನುಮೋದಿಸುವರು. ತಾವು ಈ ಅನುವಾದ ಕೈಗೊಳ್ಳುವಾಗ ಪರಾಮರ್ಶಿಸಿದ ಹಲವು ಗ್ರಂಥಗಳ ಪಟ್ಟಿಯನ್ನು ಕೊಡುವರು. ಇದೇ ಭಾಗದಲ್ಲಿ ಡಾ. ರಿಯಾಜ಼್ ಪಾಷ ಅವರ ಮುನ್ನುಡಿಯಿದೆ. ಎ ಎಸ್ ನೂರ್ ಅಹಮದ್ ಅವರ ಅನಿಸಿಕೆಯೊಂದಿದೆ.
ಕೃತಿಯ ಎರಡನೆಯ ಭಾಗದಲ್ಲಿ ಅರುವತ್ತಕ್ಕೂ ಹೆಚ್ಚಿನ ಎಪಿಕ್ಟೆಟಸನ ಆಲೋಚನೆಗಳನ್ನು ಅನುವಾದಿಸಲಾಗಿದೆ. ಕೆಲವು ಪುಟ್ಟ ಬರೆಹಗಳು; ಇನ್ನು ಕೆಲವು ದೀರ್ಘವಲ್ಲದ ಆದರೆ ಒಂದೆರಡು ಪುಟಗಳ ವ್ಯಾಪ್ತಿಯವು. ಆತನು ವಿಶದೀಕರಿಸಿದ ಜೀವನಮೌಲ್ಯ ಜಿಜ್ಞಾಸೆಯನ್ನು ಪರಿಚಯಿಸಲಾಗಿದೆ. ಹೀಗೆ ಅನುವಾದಿಸುವಾಗ ಲೇಖಕರು ಸ್ವಲ್ಪಮಟ್ಟಿನ ಸ್ವಾತಂತ್ರ್ಯವನ್ನು ತೆಗೆದುಕೊಂಡಿದ್ದಾರೆ. ಆದಷ್ಟೂ ಪದಶಃ ಅನುವಾದ ಮಾಡಹೋಗಿಲ್ಲ. ಕನ್ನಡ ಭಾಷೆಯ ಜಾಯಮಾನಕ್ಕೆ ತಕ್ಕ ಹಾಗೆ ತರ್ಜುಮೆ ಮಾಡಿದ್ದೇನೆಂದು ಅವರು ಹೇಳಿದರೂ ಕೆಲವು ಕಡೆ ಅನುವಾದವು ಯಾಂತ್ರಿಕವಾಗಿದೆ; ತಕ್ಷಣಕ್ಕೆ ಅರ್ಥವಾಗದಂಥ ಪೆಡುಸಾಗಿದೆ. ಮೂರನೆಯ ಭಾಗದಲ್ಲಿ ಎಪಿಕ್ಟೆಟಸನ ಉಪದೇಶಗಳಲ್ಲಿ ಅಡಗಿದ ಹಿತನುಡಿಗಳನ್ನು ಸಂಕಲಿಸಲಾಗಿದೆ. ಈ ಮೂರನೆಯ ಭಾಗವು ಎರಡನೆಯ ಭಾಗದ ಮುಂದುವರಿಕೆ. ಹೆಚ್ಚೇನೂ ವ್ಯತ್ಯಾಸವಿಲ್ಲದ ಬರೆಹಗಳು. ಒಟ್ಟಿನಲ್ಲಿ ಶಕಪೂರ್ವ ಮುಗಿದು ಶಕವರುಷ ಆರಂಭಗೊಳ್ಳುವ ದಿನಮಾನದಲ್ಲಿ ಕಾಣಿಸಿಕೊಂಡ ಎಪಿಕ್ಟೆಟಸನೆಂಬ ತತ್ತ್ವವಿಚಾರಿಯ ಆಲೋಚನೆಗಳು ಈ ಕಾಲಕ್ಕೂ ಅನ್ವಯವಾಗುತ್ತವೆಂಬ ಅಚ್ಚರಿ ನಮಗಾಗುವುದು ಖಂಡಿತ.
ಮನುಷ್ಯನ ಹುಟ್ಟು ಸಾವು, ಸುಖ ದುಃಖದ ಸ್ವರೂಪ, ಲೈಂಗಿಕತೆ ಅದರ ಇತಿಮಿತಿ, ಚಾರಿತ್ರ್ಯ ಮತ್ತು ಯೋಗ್ಯತೆ, ಕರ್ತವ್ಯಪರತೆ ಮತ್ತು ದಕ್ಷತೆ, ಸದ್ಗುಣ ಮತ್ತು ಹವ್ಯಾಸ, ಹಣ, ಕೀರ್ತಿ, ಅಧಿಕಾರ, ಹೀಗೆ ಎಲ್ಲ ಕಾಲಕ್ಕೂ ನಾವು ಎದುರುಗೊಳ್ಳಲೇಬೇಕಾದ ಬದುಕಿನ ನಿತ್ಯಗಳನ್ನು ಕುರಿತು ಈತ ಮಾತಾಡಿದ್ದಾನೆ. ಸೋಜಿಗವೆಂದರೆ ಈ ಕಾಲದಲ್ಲಿದ್ದು ಮಾತಾಡಿದಂತೆ ಭಾಸವಾಗುತ್ತಾನೆ. ಆ ಕಾಲದಲ್ಲೇ ಈ ಕಾಲಕ್ಕೂ ಅನ್ವಯವಾಗುವಂಥ ಸಮಂಜಸ ಮತ್ತು ಸಮರ್ಪಕ ಪರಿಹಾರಗಳನ್ನು ಕೊಡುತ್ತಾನೆ. ನಿಜವಾದ ವ್ಯಕ್ತಿತ್ವ ವಿಕಸನ ಮಂತ್ರಗಳನ್ನೇ ಉಚ್ಚರಿಸಿದ್ದಾನೆ. ವ್ಯಕ್ತಿತ್ವದ ಔನ್ನತ್ಯಕ್ಕಾಗಿ ವ್ಯಕ್ತಿ ಅನುಸರಿಸಬೇಕಾದ ಮಾರ್ಗಗಳು ಯಾವುದೆಲ್ಲ ಇವೆ? ಎಂಬುದರತ್ತ ಬೆಳಕು ಬೀರಿದ್ದಾನೆ. ಹೂವಿಗೆ ಸುವಾಸನೆಯಿದ್ದಂತೆ ವ್ಯಕ್ತಿಯ ವ್ಯಕ್ತಿತ್ವ ಎಂಬುದನ್ನು ಸ್ಥಿರೀಕರಿಸುತ್ತಾನೆ. ಆತ್ಮದ ಸೌಂದರ್ಯವೆಂದರೇನು? ಅದು ಯಾತರಿಂದ ಲಭ್ಯ? ನಮ್ಮ ನಡೆವಳಿಕೆ ಹೇಗಿರಬೇಕು? ಆಲೋಚನೆಗಳು ಯಾವ ದಿಕ್ಕಿನಲ್ಲಿ ಸಾಗಬೇಕು? ನಮ್ಮೆಲ್ಲ ಒಳಿತು ಕೆಡುಕುಗಳಿಗೆ ಯಾರನ್ನೂ ಹೊಣೆ ಮಾಡದೇ ಅವನ್ನು ಹೇಗೆ ಸ್ವೀಕರಿಸಬೇಕು? ನಮ್ಮ ಅಳಲುಗಳ ಸ್ವರೂಪವೇನು? ದುಃಖದಿಂದ ಕುಗ್ಗದಿರಲು ಏನು ಮಾಡಬೇಕು? ನಮ್ಮ ಅಧೀನ ಯಾವುದು? ಯಾವುದಲ್ಲ? ಬಾಹ್ಯ ಚಹರೆಗಳು ಯಾವುವು? ಅವಕ್ಕೆ ಅಂಟಿಕೊಳ್ಳದೇ ಇರುವುದು ಹೇಗೆ? ದೇಹ ಮನಸ್ಸು ಮತ್ತು ಆತ್ಮಗಳ ನಡುವಿನ ಸೂಕ್ಷ್ಮ ಮತ್ತು ಸ್ಥೂಲ ವ್ಯತ್ಯಾಸ, ತಪ್ಪುಗ್ರಹಿಕೆ, ಅತಿಯಾದ ಮನೋರಂಜನೆಯ ದುರಂತ, ಸ್ವಯಂ ಸಿದ್ಧಿ, ಘನತೆ ಯಾವುದು? ಯಾವುದಲ್ಲ? ತೋರಿಕೆಯ ಜೀವನ, ಆದರ್ಶಮಯ ಬದುಕು, ಸ್ವ ಸಮರ್ಥನೆಯ ದುರಂತಗಳು, ಘಟನೆ ಸನ್ನಿವೇಶಗಳನ್ನು ಸ್ವೀಕರಿಸುವ ರೀತಿನೀತಿ ಹೀಗೆ ಇಂದಿನ ಆಧುನಿಕ ಮನೋವಿಜ್ಞಾನ ಅಂದರೆ ವರ್ತನಶಾಸ್ತ್ರವು ಹ್ಯಾಂಡಲ್ ಮಾಡುವ ಆಚಾರ ವಿಚಾರಗಳನ್ನೇ ಆ ಕಾಲದಲ್ಲೇ ಎಪಿಕ್ಟೆಟಸನು ಇಂದಿಗೂ ಸಲ್ಲುವಂಥ ಮಾತುಗಳನ್ನಾಗಿಸಿದ್ದಾನೆ.
ಇವನ ಮಾತು ಎಂದರೆ ಆಪ್ತ ಸಲಹೆಯುಳ್ಳ ಸೈಕೋ ಥೆರಪಿಯೇ ವಿನಾ ಬೇರೇನಲ್ಲ. ಮನದ ನಿರಾಳತೆ ಮತ್ತು ಮನಶ್ಶಾಂತಿಯೇ ವ್ಯಕ್ತಿಯ ಅತ್ಯುತ್ತಮ ಸಾಧನೆ ಎಂಬುದನ್ನು ಹಲವಾರು ಸಂಗತಿಗಳ ಮೂಲಕ ಸೂತ್ರೀಕರಿಸುವ ಈತನ ಪ್ರತಿಪಾದನೆಯು ಎಲ್ಲರಿಗೂ ರುಚಿಸುವಂತಿದೆ. ಇಂದಿನ ಮ್ಯಾನೇಜ್ಮೆಂಟ್ ಗುರುಗಳು ಅಧ್ಯಾತ್ಮದ ತಿಳಿವನ್ನು ಬಾಳಿನ ಹಲವು ನಿದರ್ಶನಗಳ ಮೂಲಕ ದರ್ಶಿಸಿ ಕೊಡುವಂಥ ರೀತಿಯಲ್ಲಿ ಆಗಲೇ ತಿಳಿಸಿರುವುದು ಸಖೇದಾಶ್ಚರ್ಯ. ‘ಇವೆಲ್ಲವನ್ನೂ ಆಗಲೇ ಆ ಕಾಲದಲ್ಲೇ ಹೇಳಲಾಗಿದೆಯಲ್ಲ!’ ಎಂಬ ಸೋಜಿಗ ಬೆರೆತ ಸಂತಸವಾಗುವುದು. ಪುಟ್ಟ ಪುಟ್ಟ ಅಧ್ಯಾಯಗಳಲ್ಲಿ ಬದುಕಿನ ತಾತ್ತ್ವಿಕ ದರ್ಶನವು ನಿರ್ಲಿಪ್ತವಾಗಿ ನಿರೂಪಿತವಾಗಿದೆ ಎಂಬುದನ್ನು ಸರಿಯಾಗಿಯೇ ಗುರುತಿಸಿದ್ದಾರೆ, ಕೃತಿಗೆ ಬೆನ್ನುಡಿ ಬರೆದ ಖ್ಯಾತ ಕವಿ ಮತ್ತು ಚಿಂತಕರಾದ ಡಾ. ಮೂಡ್ನಾಕೂಡು ಚಿನ್ನಸ್ವಾಮಿಯವರು. ಮೂಲಪ್ರಕೃತಿಯೊಂದಿಗೆ ಸಾಮರಸ್ಯ ಬಯಸುವ ಮಾತುಗಳಿವು, ಅಂತರಂಗದ ಅನುಸಂಧಾನ ನಡೆಸುವ ಚಿಂತನೀಯ ಗುಣವುಳ್ಳ ಆಪ್ತನುಡಿಗಳು ಬದುಕುವ ಕಲೆಯಾಗಿ ಅರಳಿವೆ, ಹೊರಳಿವೆ ಎಂಬರ್ಥದಲ್ಲಿ ಶ್ಲಾಘಿಸಿದ್ದಾರೆ. “ವರ್ತಮಾನದಲ್ಲಿ ಬದುಕು, ಇಲ್ಲಿ ಮತ್ತು ಈಗ” ಎಂದ ಗೌತಮ ಬುದ್ಧರ ದರ್ಶನವನ್ನು ನೆನಪಿಸಿಕೊಂಡಿದ್ದಾರೆ. ಹಾಗಾಗಿ ಈಗಾಗಲೇ ಮನೋವಿಜ್ಞಾನದಲ್ಲಿ ಹೊಸ ಆಯಾಮ ನಿರ್ಮಿಸಿಕೊಟ್ಟ ವಿಕ್ಟರ್ ಫ್ರಾಂಕ್ಲ್ನ ಮ್ಯಾನ್ಸ್ ಸರ್ಚ್ ಫಾರ್ ಮೀನಿಂಗ್ ಕೃತಿಯನ್ನು “ಬದುಕಿನ ಅರ್ಥವನ್ನು ಹುಡುಕುತ್ತಾ” ಎಂದು ಅನುವಾದಿಸಿರುವ ಸುಭಾಷ್ ರಾಜಮಾನೆಯವರು, ಕನ್ನಡಿಗರಿಗಾಗಿ ಪ್ರಾಚೀನ ಕಾಲದ ಎಪಿಕ್ಟೆಟಸನನ್ನು ಈ ರೀತಿಯಾಗಿ ಪರಿಚಯಿಸಿದ್ದಾರೆ. ಅಳವಡಿಸಿಕೊಂಡು, ಹಾಯಾಗುವ ಅವನ ಅಮೂಲ್ಯ ಮಾರ್ಗದರ್ಶನವನ್ನು ಸೂಕ್ತ ರೀತಿಯಲ್ಲಿ ದಾಟಿಸಿದ್ದಾರೆ.
ಈ ಕೃತಿಯನ್ನು ಓದಿದಾಗ ಹಳೆಗಾಲದ ಜನಪದ ಕತೆಯೊಂದು ನೆನಪಾಗುತ್ತದೆ. ಪರಸ್ಪರ ಅನ್ಯೋನ್ಯತೆಯೇ ಮೂರ್ತಿವೆತ್ತ ಇಬ್ಬರು ಅಣ್ಣತಮ್ಮಂದಿರು. ತಮಗಿದ್ದ ಸ್ವಲ್ಪ ಜಾಗದಲ್ಲಿಯೇ ಕೂಡಿ, ಸಾಗುವಳಿ ಮಾಡಿಕೊಂಡು ಬರುತ್ತಿದ್ದರು. ಬಂದ ಫಸಲನ್ನು ಸಮವಾಗಿ ಹಂಚಿಕೊಳ್ಳುತ್ತಿದ್ದರು. ಒಂದು ಸಲ ತಮ್ಮನಿಗೊಂದು ಆಲೋಚನೆ ಬಂತು. ನನ್ನಣ್ಣ ಮದುವೆಯಾಗಿ ಮಕ್ಕಳೊಂದಿಗ. ಒಂದು ಉಪಾಯ ಮಾಡೋಣವೆಂದು ಸಮವಾಗಿ ಹಂಚಿಕೊಂಡಿದ್ದ ದವಸಧಾನ್ಯಗಳ ಮೂಟೆಯಲ್ಲಿ ಒಂದು ಮೂಟೆಯನ್ನು ರಾತ್ರಿಯ ವೇಳೆ ಅಣ್ಣನ ಮನೆಗೆ ಸಾಗಿಸಿ ಮಲಗಿಕೊಂಡ. ಹಾಗೆಯೇ ಹೇಳಿದರೆ ಅಣ್ಣ ಬೇಡವೆನ್ನುತ್ತಿದ್ದ. ಮಾರನೆಯ ದಿವಸ ಅಣ್ಣನಿಗೊಂದು ಕನಸು ಬಿತ್ತು. ಗತಿಸಿದ ತಾಯ್ತಂದೆಯರು ಇರುವ ಒಬ್ಬನೇ ತಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದು ಬದುಕಿದ್ದಾಗ ಹೇಳಿದ್ದು ನೆನಪಾಗಿ, ಎಲ್ಲರೂ ನಿದ್ರೆಯಲ್ಲಿರುವಾಗ ತನ್ನ ಉಗ್ರಾಣಕ್ಕೆ ಹೋಗಿ ಒಂದು ಮೂಟೆಯನ್ನು ತಮ್ಮನ ಮನೆಗೆ ಸಾಗಿಸಿ ಮಲಗಿಕೊಂಡ. ಒಂದು ಮೂಟೆ ಸಾಗಿಸಿದರೂ ಲೆಕ್ಕ ಕಡಮೆಯಾಗಲೇ ಇಲ್ಲವಲ್ಲ ಎಂಬುದನ್ನು ಅಣ್ಣತಮ್ಮರು ತಮ್ಮ ಮನಸಿನಲ್ಲೇ ಮೆಲುಕಾಡಿ ಅಚ್ಚರಿಗೊಂಡರಂತೆ. ಹೀಗೆ ಪ್ರತಿ ವರ್ಷವೂ ಅವರ ಕಾಳಜಿ ಸಹಿತ ಪ್ರೀತಿ ಮುಂದುವರೆದಿದ್ದರಿಂದ ಇಬ್ಬರ ಕಣಜದಲ್ಲೂ ದವಸ ಧಾನ್ಯವು ಕಡಮೆಯಾಗಲೇ ಇಲ್ಲ!

ಈ ಕತೆಯಲ್ಲಿ ಬರುವಂಥ ಆಪ್ಯಾಯಮಾನತೆಯು ಈ ಹೊತ್ತಗೆಯನ್ನು ಓದುವಾಗ ಸಿಗುತ್ತದೆ. ಒಂದು ಬಗೆಯ ಆಪ್ತಸಮಾಲೋಚನೆಯು ನಮ್ಮಾತ್ಮದಲ್ಲೇ ಜರುಗುವ ಪವಾಡವಿದು. ಜಗತ್ತಿನಲ್ಲಿ ಒಳ್ಳೆಯದು ಇದೆ, ಅದನ್ನು ಗುರುತಿಸಿ, ಧರಿಸಬೇಕಷ್ಟೇ ಎಂಬುದನ್ನು ಇದರಿಂದ ಕಂಡುಕೊಳ್ಳುತ್ತೇವೆ. ಇದೇ ಎಪಿಕ್ಟೆಟಸನ ಆಶಯವಾಗಿತ್ತು. ‘ನೀವು ಏನನ್ನಾದರೂ ಮಾಡುವುದಕ್ಕಿಂತ ಅದನ್ನು ಹೇಗೆ ಮಾಡುತ್ತೀರಿ’ (ಪುಟ 45) ಎಂಬುದು ಮುಖ್ಯ ಎನ್ನುತ್ತಾನೀತ. ‘ನಮ್ಮ ಬಾಹ್ಯ ಪರಿಸ್ಥಿತಿಗಳನ್ನು ಆಯ್ಕೆ ಮಾಡಲಾಗದು; ಆದರೆ ಅವುಗಳಿಗೆ ನಾವು ಪ್ರತಿಕ್ರಿಯೆ ನೀಡುವುದನ್ನು ಯಾವಾಗಲೂ ಆಯ್ಕೆ ಮಾಡಿಕೊಳ್ಳಬಹುದು!’ ನಿಮಗೆ ಸಂಬಂಧಪಡದೇ ಇರುವುದನ್ನು ನಿರ್ಲಕ್ಷಿಸಿ ಎನ್ನುವ ಈತನು, ‘ನಿಮ್ಮನ್ನು ವಿಶಿಷ್ಟವೆಂದು ಕರೆದಾಗಲೂ ಅದನ್ನು ಗುಮಾನಿಯಿಂದಲೇ ನೋಡುವುದನ್ನು ಮರೆಯದಿರಿ’ (ಪುಟ 58) ಎನ್ನುವನು. ಅಂದರೆ ಸಮಾಜವು ತನ್ನ ಸ್ವಂತ ಸ್ವಾರ್ಥ ಮತ್ತು ಲಾಭಗಳಿಗಾಗಿ ನಮ್ಮನ್ನು ಸ್ತುತಿಸುವುದರ ಹಿಂದಿನ ಮರ್ಮವನ್ನು ಗುರುತಿಸಿಕೊಳ್ಳಬೇಕು. ಸಂಕಷ್ಟದಲ್ಲಿರುವವರಿಗೆ ಅನುಕಂಪ ತೋರಬೇಕು; ಆದರೆ ನಾವು ಅವರಂತೆ ಅಧೋಗತಿಗಿಳಿದಾಗ ಅನ್ಯರ ಅನುಕಂಪವನ್ನು ಬಯಸಬಾರದು (ಪುಟ 64) ಎಂದು ಆಗಲೇ ಈತ ಹೇಳಿದ್ದನ್ನು ಓದಿದರೆ ಜೀವ ಜೀವನದ ಪರಿಪಕ್ವತೆಯನ್ನು ಪರಿ ಪರಿ ಪ್ರಸಂಗಗಳ ಮೂಲಕ ಈತ ನಮ್ಮ ಮುಂದಿಟ್ಟು ಬೋಧಿಸಿದ್ದಾನೆಂಬುದು ಅರಿವಾಗುವುದು.
ಆತನ ಇನ್ನಷ್ಟು ಮುಖ್ಯವೆನಿಸುವ ಸಾಲುಗಳಿವು: ನೀವು ಒಳ್ಳೆಯ ಓದುಗರಾಗಿದ್ದರೆ ಓದಿ; ಲೇಖಕರಾಗಿದ್ದರೆ ಬರೆಯಿರಿ. ನಿಮಗೆ ನೀಡಿರುವ ಪಾತ್ರವನ್ನು ಚೆನ್ನಾಗಿ ನಿರ್ವಹಿಸಿ. (ಪುಟ 65) ಸಂತೋಷವನ್ನು ನಮ್ಮೊಳಗೆ ಕಂಡುಕೊಳ್ಳಬೇಕು, ವಸ್ತುಗಳಿಂದಲ್ಲ. ನಮ್ಮ ಅಧೀನದಾಚೆಗಿರುವ ಸಂಗತಿಗಳನ್ನು ಗಮನಿಸಿದಿರುವುದೇ ಅದನ್ನು ಹೊಂದುವ ದಾರಿ. ಸೆಲೆಬ್ರಿಟಿಗಳೂ ಬುದ್ಧಿಜೀವಿ ಜನರೂ ಸಿರಿವಂತರೂ ಸತ್ಯವಾಗಿಯೂ ಸಂತೋಷದಿಂದ ಇರಲಾರರು (ಪುಟ 68) ನಾವು ಏನನ್ನಾದರೂ ಪಡೆಯಬೇಕಿದ್ದರೆ ಏನನ್ನಾದರೂ ಕಳೆದುಕೊಳ್ಳಬೇಕಾಗುವುದು, ಕ್ರಿಯೆಗಿಂತ ಪ್ರತಿಕ್ರಿಯೆಯೇ ನಮಗೆ ನೋವು ಕೊಡುವಂಥದು. ಹಾಗಾಗಿ ಈ ಕ್ಷಣದಿಂದಲೇ ಪ್ರತಿಕ್ರಿಯೆ ಕೊಡುವುದನ್ನು ನಿಲ್ಲಿಸಿ. ಎಂದಿಗೂ ಅಧೋಗತಿಗೆ ಇಳಿದು ಹೋಗಿರುವ ಆತ್ಮಗಳೊಂದಿಗೆ ಸಂವಾದದಲ್ಲಿ ತೊಡಗದಿರಿ.(ಪುಟ 72) ಅನ್ಯರು ನಿಮ್ಮ ಬಗೆಗೆ ಏನು ಭಾವಿಸುತ್ತಾರೆಂದು ಆಲೋಚಿಸುವುದು ನಿಮ್ಮ ಹೊಣೆಯಲ್ಲ! (ಪುಟ 75) ನಿಮ್ಮೊಂದಿಗೆ ನೀವು ಪ್ರಾಮಾಣಿಕರಾಗಿರಿ. ಶಕ್ತಿ ದೌರ್ಬಲ್ಯಗಳೆರಡನ್ನೂ ಮಾಪನ ಮಾಡಿಕೊಳ್ಳಿ. (ಪುಟ 84) ನೀವು ಯಾರೊಂದಿಗಿರಲು ಬಯಸುತ್ತೀರೋ ಅವರು ನಿಮ್ಮೊಳಗಿನ ಅಂತಃಸತ್ವವನ್ನು ಗುರುತಿಸುವವರಾಗಿರಬೇಕು (ಪುಟ 102) ನಿಮ್ಮೊಂದಿಗೆ ನೀವು ಘನತೆಯಿಂದ ನಡೆದುಕೊಳ್ಳಿ (ಪುಟ 106) ನಿಮ್ಮ ಜೊತೆಗಾರರು ನಿರರ್ಥಕ ಮಾತುಗಳನ್ನಾಡಲು ಶುರು ಮಾಡಿದರೆ, ಆ ಸ್ಥಳದಿಂದ ಹೊರಡಿ, ಇಲ್ಲವೇ ಮೌನವಾಗಿದ್ದು ಬಿಡಿ. ನಿಮ್ಮ ಗಂಭೀರ ಮೌನವೇ ಅದಕ್ಕೆಲ್ಲ ದಿಟ್ಟವಾದ ಪ್ರತಿರೋಧ ಎಂದವರಿಗೆ ತಿಳಿಯುವಂತಾಗಲಿ (ಪುಟ 108) ನಾವೆಂಥ ಕುಟುಂಬದಿಂದ ಬಂದಿದ್ದೇವೆ ಎನ್ನುವುದಕಿಂತ ನಾವು ಏನಾಗುತ್ತೇವೆ ಮತ್ತು ನಮ್ಮೊಳಗೆ ಏನಿದೆ?
ಎಂಬುದೇ ಹೆಚ್ಚು ಮೌಲ್ಯವುಳ್ಳದ್ದು (ಪುಟ 116) ವಿವೇಕದ ಬಗ್ಗೆ ತಿಳಿಯುವುದಕಿಂತ ವಿವೇಕವಂತರಾಗಿ ಬಾಳುವುದೇ ಮೇಲು (ಪುಟ 127) ತತ್ವಜ್ಞಾನದ ಉದ್ದೇಶವೆಂದರೆ, ಮೂಢನಂಬಿಕೆಗಳಲ್ಲಿ ತೊಳಲಾಡುವ ಆತ್ಮವನ್ನು ಬೆಳಗಿಸುವುದು (ಪುಟ 133) ಈ ಜಗತ್ತನ್ನು ಅದು ಇರುವಂತೆಯೇ ನೋಡಿ. ನಿಮಗೆ ಏನೂ ಗೊತ್ತಿಲ್ಲದಿರುವಂತೆ ನೋಡಿ, ಇದು ಹೊಸ ಕಲಿಕೆಯ ಹಾದಿ (ಪುಟ 135) ಒಳ್ಳೆಯತನವು ಸ್ವತಂತ್ರ. ಅದು ನಮ್ಮ ಅಸ್ತಿತ್ವಕ್ಕೂ ಮೊದಲೇ ಇತ್ತು (ಪುಟ 140) ಎಲ್ಲ ಸಂಕುಚಿತತೆಗಳಿಂದ ಬಿಡುಗಡೆಯಾಗಿ, ನೀವು ವಿಶ್ವದ ಪ್ರಜೆ (144) ಕ್ಷಮಿಸಿ, ಮತ್ತೆ ಮತ್ತೆ ಕ್ಷಮಿಸಿ, ಬೇರೆಯವರು ಮಾಡುವ ತಪ್ಪುಗಳನ್ನು ಮನ್ನಿಸಿ, ಮೊದಲಿಗೆ ನಿಮ್ಮನ್ನು ಕ್ಷಮಿಸಿಕೊಳ್ಳಿ (150) ಮೂರ್ಖರನ್ನು ಅನುಕಂಪದಿಂದ ಕಾಣಿ, ನಾವು ಮೂರ್ಖತನವನ್ನು ಕಂಡು ರೇಗುತ್ತೇವೆ; ಆದರೆ ಅಂಥ ಅಂಶಗಳಿಂದಲೇ ನಾವು ಸಹ ನಿರ್ಮಾಣವಾಗಿರುತ್ತೇವೆ (153) ಸದ್ಗುಣದ ಜೀವನವೇ ಸಿರಿವಂತಿಕೆಯದು. ಇದು ಯಾವುದೋ ವಿಶ್ವವಿದ್ಯಾಲಯದಲ್ಲಿ ಸಿಗುವ ಪದವಿಯಲ್ಲ (155) ಕೃತಜ್ಞರಾಗಿರಿ, ಒಳ್ಳೆಯದು ನಡೆದಾಗ ಅದನ್ನು ನೆನೆಯಿರಿ (161) ನಿಮಗೆ ಕೋಪಿಸಿಕೊಳ್ಳುವುದು ಬೇಡವಾಗಿದ್ದರೆ ಆ ಹವ್ಯಾಸಕ್ಕೆ ನೀರು ಸುರಿಯಬೇಡಿ (164) ನಿಮ್ಮೊಳಗಿನ ಅತ್ಯುತ್ತಮವಾದುದನ್ನು ಬೇರೆಯವರಿಗೂ ಕೊಡಿ (166)
ಈ ತೆರನಾಗಿದೆ ಎಪಿಕ್ಟೆಟಸನ ಬೋಧನೆಯ ರೀತಿರಿವಾಜು. ಈತನೊಳಗೆ ಉತ್ಕೃಷ್ಟ ದರ್ಜೆಯ ಆಪ್ತಸಲಹಾಕಾರನಿದ್ದನು. ವ್ಯಕ್ತಿತ್ವವಿಕಸನ ತರಬೇತುದಾರನಿದ್ದನು. ಅನುಭವ ಮತ್ತು ತಿಳಿವುಗಳ ಹದವಾದ ಹೊಂದಾಣಿಕೆ ಈತನ ಪ್ರತಿ ಮಾತಿನ ಹಿಂದಿರುವ ಶಕ್ತಿ. ಬದುಕಿನ ನಿಜವಾದ ಸಾರ್ಥಕತೆ ಯಾವುದು? ಮತ್ತು ಅದು ಎಲ್ಲಿಂದ ದೊರಕುವುದು? ಎಂಬುದರ ಅನ್ವೇಷಕ ಈತ. ಈತನ ಅಮೂಲ್ಯ ಸಲಹೆ ಅಥವಾ ಉಪದೇಶಗಳು ಶ್ರೀಯುತ ಸುಭಾಷ್ ರಾಜಮಾನೆಯವರಿಂದ ಕನ್ನಡಿಗರಿಗೂ ದೊರಕುವಂತಾದುದು ಸುಯೋಗ. ಪದಶಃ ಅನುವಾದದಾಚೆಗಿರುವ ಕಾಳಜಿಯನ್ನು ಅರಿಯುವ ಮನಸುಗಳಿಗೆ ಈ ಹೊತ್ತಗೆಯು ಖುಷಿ ಕೊಡುವುದರಲ್ಲಿ ಯಾವ ಸಂದೇಹವೂ ಇಲ್ಲ.
-ಮಂಜು ರಾಜ್

ಪ್ರಕಟಿಸಿದ ಪಂಜುವಿಗೆ ಧನ್ಯವಾದ
ವಿಶೇಷಾಂಕಕ್ಕೆ ಶುಭವಾಗಲಿ