“ಸ್ಮಿತಾ ಹಸ್ಬೆಂಡ್ ಯಾರು ಎನ್ನುತ್ತ, ಡಾಕ್ಟರ್ ಐಸಿಯು ವಾರ್ಡ್ನಿಂದ ಹೊರಕ್ಕೆ ಬಂರರು.
“ನಾನೇ ಡಾಕ್ಟರ್” ಎನ್ನುತ್ತ ಮೋಹನ್, ಸೀನಿಯರ್ ಡಾಕ್ಟರ್ ಸೀತಾರಾಂರವರ ಕಂಚಿನ ಕಂಟದ ಕರೆಗೆ ಅವರ ಹತ್ತಿರಕ್ಕೆ ಹೋದ.
ಎದುರಿಗೆ ಬಂದು ನಿಂತ ಮೋಹನ್ನ ಮುಖ ನೋಡಿದ ಡಾಕ್ಟರ್, “ನೋಡಿ ಮಿಸ್ಟರ್ ಮೋಹನ್, ನಾವು ನಮ್ಮ ಶಕ್ತಿಮೀರಿ ಪ್ರಯತ್ನಿಸಿದ್ದೇವೆ, ನಿಮ್ಮ ಪತ್ನಿಗೆ ಕೊಡಬೇಕಾದ ಚಿಕಿತ್ಸೆಯನ್ನೆಲ್ಲಾ ಕೊಟ್ಟಿದ್ದೇವೆ, ಮುಂದಿನದು ದೈವೇಚ್ಚೆ. ನಿಮ್ಮ ಪತ್ನಿ ಈಗ ಆಕ್ಸಿಜನ್ನಿಂದ ಉಸಿರಾಡುತ್ತಿದ್ದಾರೆ. ಆಕೆಯ ನಾಡಿ ಮಿಡಿತ ಕ್ಷಣ ಕ್ಷಣಕ್ಕು ಕ್ಷೀಣಿಸುತ್ತಿದೆ. ಇನ್ನು ಒಂದೆರಡು ಗಂಟೆಗಳಲ್ಲಿ ಆಕೆಯ ಉಸಿರಾಟ ನಿಂತುಹೋಗಬಹುದು” ಎಂದು ಮಕ್ಕಳು ಟೀಚರ್ ಮುಂದೆ ಒಪ್ಪಿಸಿದ ಕಂಠಪಾಟದಂತೆ ಡಾಕ್ಟರ್, ಮೋಹನ್ ಮುಂದೆ ತಮ್ಮ ವರದಿಯ ಪಾಠ ಒಪ್ಪಿಸಿ ತಕ್ಷಣ ಅಲ್ಲಿಂದ ಹೊರಟುಬಿಟ್ಟರು.
ಮೋಹನ್ ಒಂದು ಕ್ಷಣ ದಿಕ್ಕು ತೋಚದೆ ನಿಂತುಬಿಟ್ಟ. . . ! ಡಾಕ್ಟರ್ ಹೋದ ದಿಕ್ಕನ್ನೇ ನೋಡತೊಡಗಿದ. ಅವರಿಗೆ ತಾನೇನು ಹೇಳಬೇಕಿತ್ತು, ಏನು ಮಾಡಬೇಕಿತ್ತು ಎಂದು ಆ ಕ್ಷಣಕ್ಕೆ ಅವನಿಗೆ ಹೊಳೆಯಲಿಲ್ಲ. ಡಾಕ್ಟರ್ ಮಾತುಗಳಿಂದ ವಿಚಲಿತನಾದ ಅವನಲ್ಲಿ ಆತಂಕ ಗಾಬರಿ ಎರಡೂ ಒಟ್ಟಿಗೆ ಕೆರಳಿದವು. ಅಲ್ಲೇ ನಿಂತಿದ್ದ ಸ್ಮಿತಾಳ ಬಂಧುಗಳು ಸಹ ಡಾಕ್ಟರ್ ಹೇಳಿದ ಮಾತುಗಳನ್ನು ಕೇಳಿಸಿಕೊಂಡು ಅವರೂ ಕಂಗಾಲಾಗಿ ಪರಸ್ಪರ ಮುಖ ನೋಡಿಕೊಂಡರು. ಒಳಗೆ ಸ್ಮಿತಾ ಮಾತ್ರ ಇದಾವುದರ ಪರಿವೆಯೇ ಇಲ್ಲದೆ ತನ್ನ ಪಾಡಿಗೆ ತಾನು ಹಾಸಿಗೆಯಲ್ಲಿ ಬಿದ್ದುಕೊಂಡಿದ್ದಾಳೆ. ಅವಳೀಗ ಜೀವನ್ಮರಣದ ಹೋರಾಟದಲ್ಲಿದ್ದಾಳೆ. ಜೀವನದ ಅಂತಿಮ ಘಟ್ಟ ತಲುಪಿ ಸಾವನ್ನು ಎದುರುನೋಡುತ್ತಿದ್ದಾಳೆ. ಮೋಹನ್ ಪಕ್ಕದಲ್ಲೇ ಅವನ ತೋಳಿಗೆ ತಾಗಿದಂತೆ ಅವನ ಎರಡನೆ ಪತ್ನಿ ಅನಿತಾ ನಿಂತಿದ್ದರೂ ತನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲವೆಂದು ನಿರ್ಲಿಪ್ತಳಾಗಿ ನಿಂತಿದ್ದು, ಅವಳ ಮುಖದಲ್ಲಿ ದುಃಖವಾಗಲಿ, ಆತಂಕವಾಗಲಿ ಇರಲಿಲ್ಲ.
ಮೋಹನ್ನ ಮೊದಲ ಪತ್ನಿ ಸ್ಮಿತಾ ಕಳೆದ ಹದಿನೈದು ದಿನಗಳಿಂದ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ. ಇನ್ನೇನು ಅವಳ ಉಸಿರಾಟವು ನಿಂತು ಅವಳ ಪ್ರಾಣಪಕ್ಷಿ ಹಾರಿಹೋಗುವ ಕ್ಷಣಗಳು ಆರಂಭವಾಗಿವೆ ಶವದಂತೆ ಬಿದ್ದುಕೊಂಡಿರುವ ಅವಳ ಪ್ರಾಣಕ್ಕೆ ಡಾಕ್ಟರ್ ಗಡುವು ಕೂಡ ಕೊಟ್ಟು ಬಿಟ್ಟಿದ್ದಾರೆ. ಭಾರವಾದ ಹೃದಯ ಹೊತ್ತು ಮೋಹನ್ ಐಸಿಯೂ ವಾರ್ಡ್ನೊಳಕ್ಕೆ ಹೆಜ್ಜೆಯಿಟ್ಟ. ಸ್ಮಿತಾಳÀ ಕರುಣಾಜನಕ ಸ್ಥಿತಿಯನ್ನು ಕಂಡು ಒಂದು ಕ್ಷಣ ದುಃಖಿತನಾದ. ಅವಳಿಗೊದಗಿದ ದುರ್ಗತಿಯನ್ನು ಕಂಡು ಅವನ ಮನದಲ್ಲಿ ಮಡುಗಟ್ಟಿದ್ದ ದುಃಖವು ಒತ್ತರಿಸಿಕೊಂಡು ಬಂದು ಕಣ್ಣುಗಳು ತೇವಗೊಂಡÀವು.
ಮೋಹನ್ ತನ್ನ ಕಣ್ಣುಗಳನ್ನು ಒರೆಸಿಕೊಳ್ಳುತ್ತ ಅವಳ ಬಳಿಯೇ ಕುಳಿತುಕೊಂಡ. ಪತ್ನಿ ಸ್ಮಿತಾಳ ತಲೆಯನ್ನು ಮೃದುವಾಗಿ ನೇವರಿಸತೊಡಗಿದ. ಹಾಗೆಯೇ ಅವಳ ಕರವೊಂದನ್ನು ಹಿಡಿದು ತನ್ನ ಎದೆಗವಚಿಕೊಂಡ. ಒತ್ತರಿಸಿಕೊಂಡು ಬರುತ್ತಿದ್ದ ದುಃಖವನ್ನು ಹಾಗೆಯೇ ತಡೆದು ಅದುಮಿಟ್ಟುಕೊಂಡು “ಸ್ಮಿತಾ . . . . . . ಸ್ಮಿತಾ . . . . . .” ಎಂದು ಮೆಲು ದ್ವನಿಯಲ್ಲಿ ಅವಳನ್ನು ಮಾತಾಡಿಸಿದ. ಸ್ಮಿತಾ ಸುಪ್ತ ಪ್ರಜ್ಞಾವಸ್ಥೆಯಲ್ಲಿದ್ದರೂ ತನ್ನ ಪತಿಯ ಕರೆಗೆ ಸ್ಪಂದಿಸತೊಡಗಿದಳು. ಕೃತಕ ಆಕ್ಸಿಜನ್ ಸಂಪರ್ಕ ಕಲ್ಪಿಸಿದ್ದ ಕೊಳವೆಯಿಂದ ಅವಳ ಉಸಿರಾಟದ ಕ್ರಿಯೆಯು ಮಂದಗತಿಯಲ್ಲಿ ಸಾಗುತ್ತಿತ್ತು. ಮೋಹನ್ನ ಕೋಮಲ ಸ್ಪರ್ಶಕ್ಕೆ ಸ್ಮಿತಾ ತನ್ನ ಕಣ್ಣುಗಳನ್ನು ನಿಧಾನವಾಗಿ ತೆರೆಯತೊಡಗಿದಳು. ತನ್ನ ಮುಖಕ್ಕೆ ಅಳವಡಿಸಲಾಗಿದ್ದ ಆಕ್ಸಿಜನ್ ಮಾಸ್ಕ್ನ್ನು ತಾನೇ ಪಕ್ಕಕ್ಕೆ ಸರಿಸಿ ಒಮ್ಮೆ, ತನ್ನ ಪತಿಯನ್ನು ದೃಷ್ಟಿಸಿದಳು. ಅವಳ ಕಣ್ಣುಗಳೂ ತೇವಗೊಂಡಿದ್ದು, ಹರಿದ ಕಣ್ಣೀರು ಅವಳ ತಲೆಯ ದಿಂಬನ್ನು ತೋಯ್ಸಿತು.
ಮೋಹನ್, ಸ್ಮಿತಾಳ ಕಣ್ಣಗಳನ್ನು ಒರೆಸುತ್ತ “ಸ್ಮಿತಾ. . . . ಸ್ಮಿತಾ . . . ನಾನು ತಪ್ಪು ಮಾಡಿಬಿಟ್ಟೆ, ನನ್ನನ್ನು ಒಂದು ಸಲ ಕ್ಷಮಿಸಿದ್ದೇನೆಂದು ಹೇಳು” ಎನ್ನುವಷ್ಟರಲ್ಲಿ ಅವನಿಗೆ ದುಃಖದಿಂದ ಗಂಟಲುಬ್ಬಿ ಬಂತು. ಮುಂದಕ್ಕೆ ಮಾತುಗಳು ಹೊರಡದೆ ಅವು ಗಂಟಲಲ್ಲೇ ಉಳಿದವು. ಪಕ್ಕದಲ್ಲೆ ನಿಂತಿದ್ದ ಅನಿತಾ ಮಾತ್ರ ಯಾವ ಆತಂಕಕ್ಕಾಗಲಿ, ಭಾವೋದ್ವೇಗಕ್ಕಾಗಲಿ ಒಳಗಾದಂತೆ ಕಾಣಲಿಲ್ಲ.
ಸ್ಮಿತಾ ತನ್ನ ಕಣ್ಣುಗಳನ್ನು ಪೂರ್ತಿ ತೆರೆದು ಮೋಹನ್ನ ಮುಖವನ್ನೇ ನೋಡುತ್ತ ಒಂದು ಕ್ಷಣ ಭಾವುಕಳಾದಳು. ಗದ್ಗದಿತಳಾಗಿ “ ನನ್ನನ್ನೂ ಒಮ್ಮೆ ಕ್ಷಮಿಸಿಬಿಡಿ ಮೋಹನ್. . . . ಶಾಸ್ತ್ರೋಕ್ತವಾಗಿ ಸಪ್ತಪದಿ ತುಳಿದು ನಿಮ್ಮ ಬಾಳ ಸಂಗಾತಿಯಾಗಿ ನಿಮ್ಮ ಒಳ್ಳೆಯ ಮನಸ್ಸನ್ನು ನಾನು ಅರ್ಥಮಾಡಿಕೊಳ್ಳದೆ ಹೋದೆ. ನಿಮ್ಮೊಂದಿಗೆ ದಾಂಪತ್ಯ ಬದುಕಿನ ಸುಖವನ್ನು ಹಂಚಿಕೊಳ್ಳದೆ ಹೋದೆ. ಯಾವುದೋ ಅಂಧಕಾರದ ಹುಚ್ಚು ಹಟಕ್ಕೆ ಬಿದ್ದು ನಿಮ್ಮನ್ನು ತುಂಬಾ ನೋಯಿಸಿಬಿಟ್ಟೆ. ನಿಮ್ಮ ಮನಸ್ಸನ್ನು ನೋಯಿಸಿದ್ದು ತಪ್ಪು ಎಂಬ ಅರಿವು ನನಗೆ ಈಗ ಆಗಿದೆ. ನಿಮ್ಮ ಮನಸ್ಸನ್ನು ನೋಯಿಸುವುದರ ಜೊತೆಗೆ ನನ್ನ ಬದುಕನ್ನೂ ಹಾಳುಮಾಡಿಕೊಂಡೆ. ಸುಂದರವಾದ ಬಾಳಿನಲ್ಲಿ ಬೆಳೆದಿಂಗಳನ್ನು ಆಯ್ಕೆಮಾಡಿಕೊಳ್ಳುವ ಬದಲು ಕತ್ತಲು ಕವಿದ ಅಮಾವಾಸ್ಯೆಯನ್ನೇ ಆಯ್ದುಕೊಂಡೆ. ನಿಮ್ಮ ನಿಸ್ವಾರ್ಥ ಮತ್ತು ನಿಷ್ಕಳಂಕ ಪ್ರೀತಿಯ ಮುಂದೆ ನನ್ನದು ಸ್ವಾರ್ಥ ತುಂಬಿದ ಕಠಿನ ಹೃದಯವಾಗಿತ್ತು. ನಾನು ಮಾಡಿದ್ದು ಯಾವ ದೃಷ್ಟಿಯಿಂದಲೂ ಸರಿಯೆಂದು ಈಗ ನನಗೆ ಅನಿಸುತ್ತಿಲ್ಲ. ನಿಮ್ಮೊಡನಾಟವನ್ನು ತೊರೆದು ಬಂದ ಮೇಲೆ, ನನ್ನ ಸ್ಥಾನದಲ್ಲಿ ನೀವು ಅನಿತಾಳನ್ನು ಆಯ್ಕೆಮಾಡಿಕೊಂಡಿದ್ದು ಸಮ್ಮತವೇ ಸರಿ. ನನ್ನ ಅಹಂಕಾರ, ದುರಾಭಿಮಾನಗಳೇ ನನ್ನ ಹೃದಯವನ್ನು ಚುಚ್ಚಿ ಇರಿದವು” ಎನ್ನುತ್ತಾ ಸ್ಮಿತ ನಿಧಾನವಾಗಿ ಶ್ವಾಸ ಎಳೆದುಕೊಂಡಳು.
ಅದುಮಿಟ್ಟಿದ್ದ ತನ್ನ ಭಾವನೆಗಳನ್ನು ಹೊರ ಹಾಕಿದ ಮೇಲೆ ಅವಳ ಮನಸ್ಸು ಹಗುರವಾಯಿತು. “ತಾನೊಂದು ಬಗೆದರೆ, ಬೇರೊಂದು ಬಗೆಯುವುದು ದೈವ ನಿಯಮವಿರಬೇಕು. ನಾನು ಮಾಡಿದ ಪಾಪಕ್ಕೆ ಪ್ರಾಯಶ್ಚಿತ್ತವಾಗಿ ನನ್ನ ಜೀವವೇ ಈಗ ಅವಸಾನದ ಹಾದಿ ಹಿಡಿಯಿತು. ನನ್ನ ಬಾಳಿನ ಅಧ್ಯಾಯವೇ ಕೊನೆಗೊಂಡಿದೆ. ನಾನೀಗ ಮರಣಶಯ್ಯೆಯಲ್ಲಿದ್ದೇನೆ. ಅನಿತಾಳ ಮೇಲೆ ನನಗೆ ಈಗ ಯಾವ ದ್ವೇಷವೂ ಇಲ್ಲ, ಅವಳನ್ನು ಮನಃಪೂರ್ವಕವಾಗಿ ಕ್ಷಮಿಸಿದ್ದೇನೆ, ಅವಳನ್ನು ನನ್ನ ಒಡ ಹುಟ್ಟಿದ ಸಹೋದರಿಯೆಂದು ಸ್ವೀಕರಿಸುತ್ತೇನೆ. ನೀವಿಬ್ಬರು ನೂರು ವರ್ಷಗಳ ಕಾಲ ಬದುಕ ಬೇಕು, ನಿಮ್ಮ ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕು.” ಎಂದು ಹೇಳಿ ಮತ್ತೊಮ್ಮೆ ದೀರ್ಘ ಶ್ವಾಸವೆಳೆದುಕೊಂಡಳು. ಅವಳ ಕಾಯಿಲೆಯ ಲಕ್ಷಣಗಳು ಅವಳ ಸುಪ್ತಮನಸ್ಸಿನಲ್ಲೇ ಗುಪ್ತವಾಗಿ ಉಳಿದುಹೋದವು. ಮುಂದಕ್ಕೆ ಅವಳಿಂದ ಮಾತುಗಳೇ ಹೊರಡಲಿಲ್ಲ. ತುಟಿಗಳು ತಡವರಿಸಿದವು, ಪುನಃ ಅವಳ ಕಣ್ಣಂಚಿನಲ್ಲಿ ನೀರು ತುಂಬಿಕೊಂಡಿತು. ತನ್ನ ಕೈಯನ್ನು ನಿಧಾನವಾಗಿ ಸರಿಸುತ್ತಾ ಸ್ಮಿತಾ ಅವರಿಬ್ಬರ ಕೈಗಳನ್ನು ಪರಸ್ಪರ ಒಗ್ಗೂಡಿಸಿದಳು. ಅವಳ ಮಾತುಗಳು ಮೌನದ ಹಾದಿ ಹಿಡಿದರೆ ಅವಳ ಉಸಿರಾಟವು ಮಂದಗತಿಗಿಳಿಯಿತು. ಬೆಳಕನ್ನು ಇಂಚಿಂಚೇ ನುಂಗುತ್ತಿದ್ದ ಅವಳ ಕಣ್ಣುಗಳಲ್ಲಿ ಕ್ರಮೇಣ ಅಂಧಕಾರವು ಕವಿಯಿತು.
ಸ್ಮಿತಾ ಈಗ ತನ್ನ ಕಣ್ಣುಗಳನ್ನು ಶಾಶ್ವತವಾಗಿ ಮುಚ್ಚಿಯೇ ಬಿಟ್ಟಳು !
ಗಾಳಿ ಜೋರಾಗಿ ಬೀಸಿತು, ದೀಪ ಆರಿತು !
–ಎಲ್.ಚಿನ್ನಪ್ಪ, ಬೆಂಗಳೂರು