ಆಡಿಸುವಾತ: ಪ್ರವೀಣ್‌ ಕುಮಾರ್‌ ಜಿ

ಮೂರು ನಾಳುಗಳಿಂದ(ದಿನ) ಬೆಂಗಳೂರಿನ ವಿಜಯನಗರದ ಮಾರೇನಹಳ್ಳಿಯ ಆರನೆಯ ಕ್ರಾಸು ಬಿಕೋ ಎನ್ನುತ್ತಿತ್ತು. ಅದಕ್ಕೆ ದೂಸರು(ಕಾರಣ) ಆಸ್ಟ್ರೇಲಿಯಾದಿಂದ ಬಂದ ಸುದ್ದಿ. ಹತ್ತು ಸಾಲುಗಳ ಸಿಡ್ನಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕನ್ನಡದ ಉಸಿರನ್ನು ತುಂಬಿಕೊಂಡಿದ್ದ ಕಾರೊಂದಕ್ಕೆ, ಅಂತಹುದೇ ಹೊಸ ಕಾರುಗಳನ್ನು ಹೊತ್ತು ಫ್ಲ್ಯಾಕ್ಟರಿಯಿಂದ ಶೋ ರೂಮಿಗೆ ತಲುಪಿಸುವ ಬ್ರೇಕು ಫೇಲಾಗಿದ್ದ ದೊಡ್ಡ ಲಾರಿಯೊಂದು ಢಿಕ್ಕಿ ಹೊಡೆದು ಉರುಳಿಸಿತ್ತು. ನಿಂತ ಉಸಿರಿನ ಹೆಸರು ಸಂದೀಪ್.

ಕೇವಲ ಇಪ್ಪತ್ತೇಳು ಏಡಿನ(ವರ್ಶ) ಸಂದೀಪ್ ಆಸ್ಟ್ರೇಲಿಯಾದಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. ಕಳೆದ ತಿಂಗಳಶ್ಟೇ ಇಲ್ಲಿಗೆ ಬಂದಾಗ ಹುಡುಗಿಯೊಬ್ಬಳನ್ನು ನೋಡಿ ಮಾತಾಡಿ ಮೆಚ್ಚಿ, ಒಪ್ಪಿಗೆ ಕೊಟ್ಟು, ಇನ್ನಾರು ತಿಂಗಳಲ್ಲಿದ್ದ ಬಸವಜಯಂತಿಗೆಂದು ಗೊತ್ತಾದ ಮದುವೆಗೆ ಅಣಿಯಾಗುತ್ತಿದ್ದ. ಅವನ ಸಾವಿನ ಸುದ್ದಿ ಇಡೀ ಕ್ರಾಸನ್ನು ಮಂಕಾಗಿಸಿತು. ಓದಿಗೆ, ಒಳ್ಳೆಯತನಕ್ಕೆ, ಮಾತುಗಳಿಗೆ ಮಾದರಿಯಂತಿದ್ದ ಹುಡುಗ, ಎಲ್ಲರಿಗೂ ಗೊತ್ತಿದ್ದ ಹುಡುಗ ಇಶ್ಟು ಬೇಗ ತೀರಿಕೊಳ್ಳುವುದೆಂದರೇನು? ಆಯುಶ್ಯವನ್ನು ಯಾರಾದರೂ ಯಾರಿಗಾದರೂ ಕೊಡುವಂತಿದ್ದರೆ ಸಂದೀಪನಿಗೆ ಇಲ್ಲಿನವರು ಕಮ್ಮಿ ಎಂದರೂ ಸಾವಿರ ಏಡು ಬದುಕಿಸುತ್ತಿದ್ದರು. ಅದರಲ್ಲೂ ತನ್ನ ಹದಿನೇಳನೆಯ ಏಡಿಗೆ ಬಿಣಿಗೆಯರಿಮೆ(ಇಂಜಿನಿಯರಿಂಗ್) ಓದಲು ಬೆಂಗಳೂರಿಗೆ ಬಂದು ಮುಗಿಸಿ, ಮುಂದೆ ಇಲ್ಲಿಯೇ ಕೆಲಸ ಹಿಡಿದು, ಕಳೆದ ಏಳು ಏಡುಗಳ ಹಿಂದೆ ಮದುವೆಯ ಹೊತ್ತಿನಲ್ಲಿ ಮನೆಯೊಂದನ್ನು ಭೋಗ್ಯಕ್ಕೆ ಹಾಕಿಕೊಂಡು ಉಳಿದುಬಿಟ್ಟಿರುವಮೂವತ್ತೈದರ ರಾಜೇಶನಂತೂ ಆಯುಶ್ಯದ ಒಂದು ನಾಳೂ ಬಿಡದೇ ಎಲ್ಲವನ್ನು ಸಂದೀಪನಿಗೆ ಕೊಟ್ಟು ಬಿಡುತ್ತಿದ್ದ.

ರಾಜೇಶನ ಬದುಕನ್ನು ಉಳಿಸಿದ್ದೇ ಸಂದೀಪ್. ಕೋವಿಡ್ ಹೊತ್ತಿನಲ್ಲಿ ಮನೆಯವರನ್ನೆಲ್ಲಾ ಕಳೆದುಕೊಂಡು ಕೊರಗುತ್ತಿರುವ ಗಳಿಗೆಗಳಲ್ಲೇ ಸಂದೀಪನ ಪಕ್ಕದ ಮನೆಯಲ್ಲೇ ಇದ್ದ ರಾಜೇಶ್ಗೂ ಅದು ಅಂಟಿಕೊಂಡು ಬಿಟ್ಟಿತ್ತು. ರಾಜೇಶನೊಬ್ಬನದೇ ಉಸಿರನ್ನು ಒಳಗೆ ಹಿಡಿದುಕೊಂಡು ಮನೆಯೊಂದು ಕ್ರಾಸಿನಲ್ಲಿ ಮೆಲ್ಲಗೆ ಉಸಿರಾಡುತ್ತಿತ್ತು. ಒಂದೇ ತಿಂಗಳ ದೂರದಲ್ಲಿ ಅಪ್ಪ, ಅಮ್ಮರ ಸಾವುಗಳನ್ನು ಕಂಡಿದ್ದ ರಾಜೇಶ್, ಎದೆಯನ್ನು ಕುಗ್ಗಿಸಿಕೊಂಡು ತನ್ನಿಂದ ಯಾರಿಗೂ ತೊಂದರೆಯಾಗದಿರಲೆಂದು ಮನಸ್ಸು ಮಾಡಿಬಿಟ್ಟಿದ್ದ. ಹೆಂಡತಿ ಮಗನಿಗೆ ಈ ಸುದ್ದಿ ಹೇಳದೇ, ಊರಲ್ಲಿ ಹಾಯಾಗಿ ಇರಿ, ಇಲ್ಲಿದ್ದರೆ ಒಂದಲ್ಲಾ ಒಂದು ಬಗೆಯಲ್ಲಿ ಅಂಟಿಕೊಳ್ಳಬಹುದು ಕೋವಿಡ್, ನನಗೆ ವರ್ಕ್ಫ್ರಮ್ ಹೋಮ್ ಎಂದು ಕಳಿಸಿದ್ದ.ಅದೇ ಹೊತ್ತಿನಲ್ಲಿ ಸಂದೀಪನಿಂದ, ʼತಾಳ್ಮೆಯೇ ಉಳಿಸುವುದು ಉಸಿರನ್ನು, ಜೋಪಾನವಾಗಿರಿ, ಬೇಗ ಜಗತ್ತು ಮೊದಲಿನಂತಾಗುವುದುʼ ಎನ್ನುವ ಹುರುಳಿನ ಇಂಗ್ಲಿಶ್ ಮೆಸೇಜೊಂದು ಇಮೇಜಿನೊಳಗೆ ಬಂದಿತ್ತು. “ತಾಳ್ಮೆ ಇದೆ ಆದರೆ ಆರೋಗ್ಯ?” ಎಂದು ಒತ್ತಿ ಸಂದೀಪನಿಗೆ ಕಳಿಸಿದ ಕೂಡಲೇ ಸಂದೀಪನ ಕರೆ ಬಂತು ರಾಜೇಶನಿಗೆ.

ʼಹೆಣ ನೋಡಲು ಬನ್ನಿʼ ಎಂದು ಬಿಬಿಎಂಪಿಯವರು ಹೊರ ಊರಿನಲ್ಲಿದ್ದ ಮಕ್ಕಳನ್ನು ಕರೆದಾಗ ಅವರು, “ಸರ್, ನೀವೇ ಮಣ್ಣು ಮಾಡಿ ಬಿಡಿ ಸರ್. ಅದೇನಾಗುತ್ತೋ ಕೊಡ್ತೀವಿ. ಅವ್ರು ಬಿಟ್ಟೋಗಿರೋ ಕ್ಯಾಶ್ ನಿಮ್ಮತ್ರಾನೇ ಇರ‍್ಲಿ, ಆಮೇಲೆ ಬಂದು ತಗೋತೀವಿ” ಎಂದಿದ್ದನ್ನು ಟಿವಿಯಲ್ಲಿ ಕೇಳಿ-ನೋಡಿ ತಮ್ಮ ಮಕ್ಕಳು ತಮ್ಮನ್ನು ಏನು ಮಾಡುವರೋ ಎಂದುಯೋಚಿಸುವತ್ತ ಈ ಕ್ರಾಸಿನ ಹಿರಿಯರುಹೋಗಲೇ ಇಲ್ಲ. ಯಾಕೆಂದರೆ ಇಲ್ಲಿನಸಂದೀಪ್ ಮತ್ತು ಹುಡುಗರು ತಮ್ಮನ್ನು ಉಳಿಸುತ್ತಾರೆ ಎಂಬ ಗಟ್ಟಿ ನಂಬಿಕೆ ಇತ್ತು ಅವರಲ್ಲಿ. ಸಂದೀಪ್ ಮತ್ತು ತಂಡದವರಿಂದ ಸರಿಯಾದ ಊಟ ತಿಂಡಿ ಗುಳಿಗೆ ಆರೈಕೆಗಳಿಂದ ನೆಮ್ಮದಿಯಾಗಿ ಉಸಿರಾಡುತ್ತಿದ್ದವರ ಪಟ್ಟಿಯಲ್ಲಿ ರಾಜೇಶ್ ಕೂಡ ಸೇರಿಕೊಂಡ.ಹತ್ತಿರವೇ ಇದ್ದ ಮೂಡಲಪಾಳ್ಯದಲ್ಲಿ ಕೋವಿಡ್ ಆರೈಕೆಗೆ ಕನ್ನಡನಾಡಿಗೆ ಹೆಸರಾಗಿದ್ದ ಮಾಂಜುಗರ(ಡಾಕ್ಟರ್) ನೆರವಿನಿಂದ ಕೆಲವೇ ನಾಳುಗಳಲ್ಲಿ ಕಂಗಾಲಾಗಿದ್ದ ರಾಜೇಶ್ ಲಕಲಕ ಹೊಳೆಯಲತ್ತಿದ. ಒಂದೇ ಒಂದು ಸಾವಿಲ್ಲದೇ ಇಡೀ ಕ್ರಾಸ್ ಕೋವಿಡ್ ಗೆದ್ದಿತು. ಅಂತಹ ರಾಜೇಶ್ ಸಂದೀಪನ ಸುದ್ದಿ ಕೇಳಿ ಈಗ ಇನ್ನಶ್ಟು ಕುಸಿದಿದ್ದ. ಉಸಿರು ಹದಕ್ಕೆ ಬರಲು ಎಶ್ಟೋ ಗಂಟೆಗಳು ಹಿಡಿದವು. ದೆಹಲಿಯಲ್ಲಿಯ ಕೆಲಸದ ಮಾತುಕತೆಯನ್ನು ಬೇಗ ಮುಗಿಸಿಕೊಂಡು, ಸಂದೀಪ ಮನೆ ಮುಟ್ಟುವ ಹೊತ್ತಿಗೆ ತಾನೂ ಮನೆಗೆ ಬರುವ ದಾರಿಯಲ್ಲಿ ಈಗ ರಾಜೇಶ್ ಇದ್ದಾನೆ.

ಸಂದೀಪನ ಸಾವಿನ ಸುದ್ದಿ ಕೇಳಿ ಮೂರು ನಾಳುಗಳಿಂದಲೂ ಅವನ ಮನೆಗೆ ಬಲ್ಲವರು ಬಂದು ಹೋಗುತ್ತಲೇ ಇದ್ದರು. ಮದುವೆಯಾಗಿದ್ದ ಅಕ್ಕ ಸುಪ್ರಿಯಾಳ ಅಳುವನ್ನಂತೂ ತಡೆಯಲು ಯಾರಿಗೂ ಆಗುತ್ತಿಲ್ಲ. ಸಂದೀಪನ ಅಪ್ಪ, ಹತ್ತು ಏಡುಗಳ ಹಿಂದೆಯೇ ಎದೆ ನೋವಿನಿಂದ ಇಲ್ಲವಾಗಿದ್ದರು. ಈಗ ಅಮ್ಮ ಕಮಲ ಅಳುತ್ತಿರುವ ಮಗಳು ಮತ್ತು ಕಣ್ಣು ಮುಚ್ಚಿರುವ ಮಗನನ್ನು ನೋಡಬೇಕಿತ್ತು. ಮದುವೆಯಾಗಿ ಸುಮಾರು ಏಡುಗಳ ಮೇಲೆ ಕಟ್ಟಿರುವ ಸುಪ್ರಿಯಾಳ ಬಸಿರು, ಈ ನೋವಿನಿಂದ ಹೆಚ್ಚುಕಮ್ಮಿ ಆಗಿಬಿಟ್ಟರೆ ಏನು ಗತಿ ಎನ್ನುವತ್ತಲೇಅಮ್ಮನ ಗುಂಡಿಗೆ ಹೆಚ್ಚು ಹೊಡೆದುಕೊಳ್ಳುತ್ತಿತ್ತು. “ನಿನ್ನ ಹೊಟ್ಟೇಲಿ ಅವ್ನೇ ಹುಟ್ತಾನೆ ಕಣೇ ಅಳ್ಬೇಡ” ಎಂದ ಕಮಲಮ್ಮಳ ಮಾತೇ ಅವಳಿಗೂ ಮತ್ತು ಸುಪ್ರಿಯಾಳ ಉಸಿರುಗಳನ್ನು ಒಂದಶ್ಟು ಹದಕ್ಕೆ ತಂದಿತ್ತು. ಆ ಮಾತು ದಿಟವಾಗಲಿ ಎಂದು ಆಗಿನ ಕಣ್ಣೀರು ಒರೆಸಿಕೊಂಡಿದ್ದರು ಇಬ್ಬರು. ದೊಡ್ಡದೊಂದು ಹೊಡೆತದಿಂದ ಉಳಿದಿಕೊಂಡಿರುವ ಉಸಿರುಗಳಿಗೆ ನೆಮ್ಮದಿ ತರುವುದಕ್ಕೆಂದೇ ಮನುಶ್ಯ, ಮರುಹುಟ್ಟು ಮತ್ತು ಇತರೆ ನಂಬಿಕೆಗಳನ್ನು ಕಟ್ಟಿಕೊಂಡಿರಬಹುದು. ನಮ್ಮನ್ನು ಬದುಕಿನತ್ತ ನಡೆಸುವ ಇಂತಹ ನಂಬಿಕೆಗಳ ಎಣಿ(ಸಂಖ್ಯೆ) ಹೆಚ್ಚಾಗಲಿ ಅನಿಸಿತು ಕಮಲಮ್ಮರಿಗೆ.

ಬೆಳಿಗ್ಗೆಯಿಂದಲೇ ಮಂದಿ ಮನೆಯ ಮುಂದೆ ಮುಕ್ಕರಿದರು. ರಾಜೇಶನ ಹೆಂಡತಿ ನಿರೀಕ್ಶಾ ಮತ್ತು ಐದರ ಏಡಿನ ಮಗ ಆರ್ಯ ಸಂದೀಪನ ಅಮ್ಮನ ಅಳುವಿನೊಂದಿಗೆ ಮಿಡಿಯುತ್ತಿದ್ದರು.ನಡುಹಗಲಿನ ಹನ್ನೆರಡರ ಹೊತ್ತಿಗೆ ಸಂದೀಪನ ಹೆಣ ಆಸ್ಟ್ರೇಲಿಯಾದಿಂದ ಬಾನೋಡದಲ್ಲಿ(ಏರ್ಪ್ಲೇನ್) ಬೆಂಗಳೂರಿಗೆ ಬರುವುದಿತ್ತು. ಸಂದೀಪನ ದೊಡ್ಡಪ್ಪ ಮತ್ತು ಅವನ ಮಗ ಅನಿಲ್ ಸೇರಿದಂತೆ ಮನೆಯವರೆಲ್ಲರೂ ಚಿಕ್ಕಮಗಳೂರಿನಿಂದ ಬಂದು ಮುಂದಿನ ಕೆಲಸಗಳಿಗೆ ಅಣಿ ಮಾಡುತ್ತಿದ್ದರು. ಕೆಂಪೇಗೌಡ ಬಾನೋಡ ನಿಲ್ದಾಣದಿಂದ ಮದ್ದಿನಬಂಡಿಯಲ್ಲಿ (ಆಂಬುಲೆನ್ಸ್) ಮನೆಗೆ ಹೆಣ ಬರುತ್ತಿರುವ ಸುದ್ದಿ ಬಂದ ಮೇಲಂತೂ ಮಂದಿ ಬರುವಿಕೆ ಹೆಚ್ಚಾಯಿತು.

ಮೂರು ನಾಳುಗಳಿಂದ ಎಚ್ಚರಿರುವಾಗಲೆಲ್ಲಾ ಪಕ್ಕದ ಮನೆಯಲ್ಲೇ ಕಳೆಯುತ್ತಿದ್ದ ಆರ್ಯನಿಗೆ ತುಂಬಾ ಬೇಜಾರಾಗಿತ್ತು. ಸಾವು ನೋವುಗಳನ್ನು ತಿಳಿಯದ ಅವನ ಎಳೆತನದಲ್ಲಿ ಅವನಿಗೆ ಮಂದಿ ಯಾಕೆ ಸುಮ್ಮನೆ ಅಳುತ್ತಿದ್ದಾರೆ. ತಾನಾದರೂ ಅಳುವುದು, ಯಾರಾದರೂ ತನ್ನಿಂದ ಏನಾದರೂ ಕಸಿದುಕೊಂಡಿದ್ದಕ್ಕೆ, ಬಿದ್ದು ನೋವಾದಾಗ, ಇಲ್ಲವೇ ನಾನು ಕೇಳಿದ್ದನ್ನು ಕೊಡಿಸದಿರುವುದಕ್ಕೆ ಮಾತ್ರ. ಈಗ ಸಂದೀಪ್ಮಾಮನ ಮನೆಗೆ ಬರುವ ಯಾರೊಬ್ಬರೂ ಜಗಳವಾಡುತ್ತಿಲ್ಲ, ಆದರೆ ಎಲ್ಲರೂ ಅಳುತ್ತಿದ್ದಾರೆ. ಬಂದವರೆಲ್ಲರೂ ಅಜ್ಜಿಯನ್ನು ಅಳಿಸುತ್ತಿದ್ದಾರೆ ಎನಿಸುತ್ತಿತ್ತು ಆರ್ಯನಿಗೆ. ಇದೇ ಕ್ರಾಸಿನಲ್ಲೇ ಹುಟ್ಟಿರುವ ಆರ್ಯನಿಗೆ ತಿಳಿವು ಬಂದಾಗಿನಿಂದ ಪಕ್ಕದ ಮನೆಯ ಕಮಲಮ್ಮರೇ ಅಜ್ಜಿ ಆಗಿದ್ದರು, ಸಂದೀಪ ಮಾಮ ಆಗಿದ್ದ.

ಅಳುತ್ತಿದ್ದ ಹಾಲ್ನಿಂದಆರ್ಯ ಮನೆ ಹೊರಗೆ ಬಂದ, ಒಳಗಿದ್ದ ಅಮ್ಮ ಏನೂ ಅನ್ನಲಿಲ್ಲ. ಅಂಗಳದಲ್ಲಿ ಬೀಗರು ಅಲ್ಲಲ್ಲಿ ನಿಂತು ತಮ್ಮ ಪಾಡಿಗೆ ತಾವು ಮೆಲ್ಲಗೆ ಮಾತಾಡುತ್ತಿದ್ದರು. ಮನೆಯ ಹೊರಗೆ ರಾಶಿ ಚಪ್ಪಲಿಗಳು ಒಂದೆಡೆ ಮಲಗಿದ್ದವು. ಅಪ್ಪ ಇವತ್ತು ದೆಹಲಿಯಿಂದ ಬರುತ್ತಾನೆ ಎಂದು ಆರ್ಯನಿಗೆ, ಬೆಳಿಗ್ಗೆ ಅಮ್ಮ ಅಪ್ಪನಿಗೆ ಮಾಡಿದ್ದ ಕರೆಯಿಂದ ಗೊತ್ತಾಗಿತ್ತು. ಎಶ್ಟು ಹೊತ್ತಿಗೆ ಅಪ್ಪ ಬರುವನೋ, ದೂರದಿಂದ ತಂದಿರುವ ಆಟದ ಸರಕುಗಳನ್ನು ಯಾವಾಗ ಕೈಗಿಡುವನೋ ಎಂದು ಬಯಕೆಯ ಕಣ್ಣುಗಳನ್ನು ದಾರಿಯ ತುದಿಗೆ ನೆಟ್ಟ. ದೊಡ್ಡ ಸರಕಿನ ಆಟೋವೊಂದು ಇವನ ಕ್ರಾಸಿನೊಳಗೆ ಬಂದು ಇವನ ಎದುರು ನಿಂತಿತು. ಲಗೇಜುಆಟೋದ ಹಿಂದೆ ಆರ್ಯನಿಗೆ ದೊಡ್ಡ ಗಾಜಿನ ಪೆಟ್ಟಿಗೆ ಕಾಣಿಸುತ್ತಿತ್ತು. ಪೆಟ್ಟಿಗೆಯೊಂದಿಗೆ ಶಾಮಿಯಾನದ ಬಟ್ಟೆ ಮತ್ತು ತೋಳುಗಳಿಲ್ಲದ ಒಂದಶ್ಟು ಕೆಂಪು ಪ್ಲ್ಯಾಸ್ಟಿಕ್ ಚೇರುಗಳು ಒಟ್ಟಿದ್ದವು. ಅಂಗಳದಲ್ಲಿ ನಿಂತಿದ್ದ ಗಂಡಸರುಬಂದು ಸರಕುಗಳನ್ನು ಇಳಿಸಿಕೊಂಡರು.

ಆರ್ಯ ನೋಡುತ್ತಿದ್ದಂತೆಯೇ ಮನೆಯ ಮುಂದೆ ಶಾಮಿಯಾನ ಎದ್ದಿತು, ಲಗೇಜುಆಟೋ ಹೋಯಿತು. ಚೇರುಗಳು ಒಂದರಿಂದ ಒಂದು ಬಿಡಿಸಿಕೊಂಡು ಹೊರ ಬಂದು ಅಂಗಳದಲ್ಲಿ ಹರಡಿಕೊಂಡವು. ಯಾವುದೋ ಪೂಜಾರಿಯೊಬ್ಬನನ್ನು ಆರ್ಯನಿಗೆ ಗೊತ್ತಿದ್ದ ಕ್ರಿಕೆಟ್ ಅಣ್ಣನೊಬ್ಬ ಗಾಡಿಯಲ್ಲಿ ಕರೆದುಕೊಂಡು ಬಂದ.ಪೂಜಾರಿಯ ಕೈಯ ಚೀಲದೊಳಗೆ ಒಂದಶ್ಟು ಪೂಜೆಯ ಸರಕುಗಳಿದ್ದವು.ಹಿಂದೆ ಬಂದ ಮಂದಿಆಟೋದಿಂದ ಇಳಿದವರೊಬ್ಬರು ಒಂದಶ್ಟು ಕಾಕಡಾ ಮತ್ತು ಗುಲಾಬಿ ಹೂವುಗಳ ಹಾರಗಳನ್ನು ತಂದು ಚೇರೊಂದರ ಮೇಲಿಟ್ಟರು. ತುಸು ಹೊತ್ತಿನಲ್ಲಿ ಚೇರುಗಳನ್ನು ಮಂದಿ ತುಂಬಿಕೊಂಡರು. ಮೊದಲು ಬಂದು ಕಂಬನಿ ಮಿಡಿದ ಹಿರಿಯರೆಲ್ಲರೂ ಸಂದೀಪನಿಂದ ಉಸಿರು ಉಳಿಸಿಕೊಂಡವರೇ ಆಗಿದ್ದರು. ಮನೆಯ ಮಗ ಇಲ್ಲವೇ ಮೊಮ್ಮಗನನ್ನೇ ಕಳೆದುಕೊಂಡ ನೋವಿನಲ್ಲಿತ್ತು ಓಣಿ.

ಮನೆಯ ಒಳಗಿದ್ದ ಅಳು ಮೆಲ್ಲಗೆ ಅಂಗಳದಲ್ಲಿ ಹೊತ್ತಿಕೊಂಡಿತು. ಆರ್ಯ ತನ್ನ ಮನೆಯ ಕಬ್ಬಿಣದ ತಡಿಕೆಯ(ಗೇಟ್) ಹತ್ತಿರ ಬಂದ. ಅಲ್ಲಿ ತನ್ನ ವಾರಿಗೆಯ ಇನ್ನಿಬ್ಬರು ಹುಡುಗರು ಅವತ್ತಿನ ಕಲಿಮನೆಯನ್ನು(ಶಾಲೆ) ಮುಗಿಸಿಕೊಂಡು ಬಂದು ನಿಂತಿದ್ದರು. ದೂರದ ಇಂಟರ್ನ್ಯಾಶನಲ್ ಪಬ್ಲಿಕ್ ಶಾಲೆಯಲ್ಲಿ ಓದುತ್ತಿದ್ದ ಗೆಳೆಯರು ಸ್ಕೂಲ್ ಬಸ್ಸಿನಲ್ಲೇ ಮೂರು ತಾಸು ಕಳೆಯುತ್ತಿದ್ದರು. ತಾಯ್ನುಡಿಯಲ್ಲಿ ಕಲಿಕೆ ಇದ್ದರೆ ಓದಿದ್ದು ಬೇಗ ತಲೆಗೆ ಹತ್ತುವುದು ಎಂಬ ಅಪ್ಪಟ ವಿಜ್ಞಾನದ ಸಂಶೋಧನೆಯ ಸಾಕ್ಶಿಯೊಂದಿಗೆ, ಖಾಸಗಿ ಕಲಿಮನೆಗಳಲ್ಲಿ ಓದಲು ಬೇಕಾಗಿರುವ ದುಡ್ಡನ್ನು ಮಗನ ಮುಂಬೊತ್ತಿಗೆ(ಭವಿಶ್ಯ) ಉಳಿಸಬಹುದು ಎಂಬ ಹಣಕಾಸಿನ ಅರಿವಿದ್ದ ರಾಜೇಶ್ ತನ್ನ ಮಗನನ್ನು ಮಾರೇನಹಳ್ಳಿಯಲ್ಲಿಯೇ ಇರುವ ಹಳ್ಳಿಅಮ್ಮ ಶ್ರೀ ಮಹೇಶ್ವರಮ್ಮ ಗುಡಿಯ ಮುಂದೆಯೇ ಇದ್ದ ಸರ್ಕಾರದ ಕಲಿಮನೆಯಲ್ಲಿ, ಕನ್ನಡದಲ್ಲಿ ಓದಲು ಹಚ್ಚಿದ್ದು ಆರ್ಯನಿಗೆ ಒಳ್ಳೆಯದೇ ಆಗಿತ್ತು. ಸಾವಿನ ನೋವಲ್ಲಿರುವ ರಾಜೇಶ್ ಮತ್ತು ನಿರೀಕ್ಷಾ ಆರ್ಯನನ್ನು ಕಲಿಮನೆಗೆ ಕಳುಹಿಸಿಲ್ಲ ಇವತ್ತು. ಅದೇ ಪ್ರೈವೇಟ್ ಸ್ಕೂಲ್ ಆಗಿದ್ದರೆ? ಇಶ್ಟು ಸುಳುವಾಗಿ(ಸುಲಭ) ಹೇಳದೇ ಕೇಳದೇ ಹೋಗದೇ ಇರಲಾಗುತ್ತಿತ್ತೇ? ಸಾವಿಗೆ ಬಂದು ಅಂಟಿಕೊಳ್ಳುವ ರಜೆಗಳನ್ನು ಅಚ್ಚು ಮಾಡುವ ಯಾವುದೇ ನಾಳ್ಪಟ್ಟಿ(ಕ್ಯಾಲೆಂಡರ್) ಇಡೀ ಉಳಗದಲ್ಲೇ(ಪ್ರಪಂಚ) ಇಲ್ಲ, ಬರುವುದಿಲ್ಲ.

ಗಾಜಿನ ದೊಡ್ಡ ಪೆಟ್ಟಿಗೆಯು ಏತಕೆ ಎಂಬ ಎಣಿಕೆಯಲ್ಲಿ ಮೂವರೂ ಸಣ್ಣ ಹುಡುಗರು ಬಿದ್ದರು. ಕ್ರಾಸಿನಲ್ಲಿ ಮದ್ದಿನಬಂಡಿ ಬರುವುದು ಕಂಡು ಅಂಗಳದಲ್ಲಿನ ಮಂದಿ ಎದ್ದು ನಿಂತರು. ಮನೆಯ ಮುಂದೆ ಬಂದು ಹಿಂದಿನ ಬಾಗಿಲುಗಳನ್ನು ತೆಗೆದು, ಗಾಜಿನ ಪೆಟ್ಟಿಗೆಯೊಂದರಲ್ಲಿ ಬಿಳಿ ಬಟ್ಟೆಯಲ್ಲಿ ಸುತ್ತಿಟ್ಟ ಯಾರನ್ನೋಇಳಿಸಲತ್ತಿದರು. ಸಂದೀಪನ ಮನೆಯ ಅಂಗಳದಲ್ಲಿದ್ದ ಅಳು ನೂರಾರು ಮಂದಿಯಿಂದ ಮುಗಿಲು ಮುಟ್ಟಿತು. ಅಕ್ಕ ಅರಿವು ತಪ್ಪಿ ಬಿದ್ದಳು. ಓಡಿ ಹೋಗಿ ಯಾರೋ ಮನೆಯೊಳಗಿಂದ ನೀರು ತಂದು ಮೋರೆಯ ಮೇಲೆ ಚಿಮುಕಿಸಿ ಎಬ್ಬಿಸಿದರು. ಅಳು ಇನ್ನೂ ಹೆಚ್ಚಾಯಿತು. ಮೆಲ್ಲಗೆ ಎಲ್ಲರನ್ನೂ ಸರಿಸುತ್ತಾ ಸಣ್ಣ ಹುಡುಗರು ಮುಂದೆ ಬಂದು ನಿಂತಾಗ ದೊಡ್ಡವರು ಯಾರೂ ಬೈಯ್ಯಲಿಲ್ಲ.

ಆರ್ಯನಿಗೆ ಸಂದೀಪನ ಮೋರೆ ಕಂಡಿತು. ಆದರೆ ಅದು ಯಾರು ಎಂಬ ಗುರುತು ಹತ್ತಲಿಲ್ಲವಾದರೂ, ಗಾಜಿನ ಪೆಟ್ಟಿಗೆಯೊಳಗೆ ಯಾರೋಸುಮ್ಮನೆ ಮಲಗಿರುವರು ಎನ್ನುವುದು ಗೊತ್ತಾಯಿತು. ಹಿನ್ನೆಲೆಯಲ್ಲಿ ಹಿರಿಯರೊಬ್ಬರು, “ಮುಖ ನೋಡಿ ಪಾಪ, ಎಶ್ಟು ಊದ್ಕೊಂಡಿದೆ” ಎಂದರು. ಸತ್ತಿರುವುದು ಸಂದೀಪ ಎನ್ನುವುದುಆರ್ಯ ಮತ್ತು ಗೆಳೆಯರಿಗೆ ಗೊತ್ತಾಯಿತಾದರೂ ಅದರ ನೋವು ತಟ್ಟಲಿಲ್ಲ. ತಾನು ತಂದಿದ್ದ ಗಾಜಿನ ಪೆಟ್ಟಿಗೆಯಿಂದ ಸಂದೀಪನನ್ನು ಅಂಗಳದಲ್ಲಿದ್ದ ಇನ್ನೊಂದರೊಳಕ್ಕೆ ಹಾಕಿ ಮದ್ದಿನಬಂಡಿ ಅಲ್ಲಿಂದ ಹೊರಟಿತು.ಹೆಣದ ಸಿಂಗಾರ ನಡೆಯಲತ್ತಿತು. ಆರ್ಯ ಗೆಳೆಯರೊಂದಿಗೆ ಇಡೀ ಓಣಿಯಲ್ಲಿ ಓಡಾಡಿಕೊಂಡಿದ್ದ. ಕ್ರಾಸಿನೊಳಗೆ ಬೈಕುಗಳು ಮತ್ತು ಕಾರುಗಳು ಬಂದು ನಿಲ್ಲಲತ್ತಿದವು. ಪೆಟ್ಟಿಗೆಯ ಮೇಲೆ ರಾಶಿ ಹೂಗಳು ಕುಂತವು. ಮಾರುದ್ದದ ಫ್ಲೆಕ್ಸಿನಲ್ಲಿ ಸಂದೀಪನ ತಿಟ್ಟವನ್ನು ಅಚ್ಚಾಕಿಸಿಕೊಂಡು, ಏನನ್ನೋ ಬರೆಸಿಕೊಂಡು ಬಂದಿದ್ದ ಹುಡುಗರು ಅದನ್ನು ಕ್ರಾಸಿನ ತುದಿ ಮತ್ತು ಸಂದೀಪನ ಮನೆಯ ಮುಂದೆ ಕಟ್ಟಿದರು. ಆರ್ಯನ ಇಂಗ್ಲಿಶ್ ಮೀಡಿಯಂ ಗೆಳೆಯ ಮಹೇಶ, “ಇಟ್ ಈಸ್ ಇನ್ ಕನ್ನಡ” ಎಂದು ಹೇಳಿ ಆರ್ಯನತ್ತ ನೋಡುವಾಗ ಆರ್ಯ, “ಮ… ತ್ತೆ…. ಹು… ಟ್ಟಿ… ಬಾ ಗೆ, ಳೆ, ಯ” ಎಂದು ಜೋಡಿಸಿ ಓದಿ ಹೇಳಿದ.

ಫಾರ್ಚೂನರ್ ಕಾರೊಂದು ಬಂದು ಮನೆಯ ಮುಂದೆ ನಿಂತು, ನಾಲ್ಕು ಮಂದಿಯನ್ನು ಇಳಿಸಿತು. ಐವತ್ತರ ಅಪ್ಪ ಅಮ್ಮ, ಮೂವತ್ತರ ಅಣ್ಣ ಮತ್ತು ಇಪ್ಪತ್ತೈದರ ತಂಗಿ ಇಳಿದು ಬಂದರು. ಅವರು ಅಂಗಳಕ್ಕೆ ಬರುತ್ತಿದ್ದಂತೆ ಆರ್ಯನಿಗೆ ಆ ಹುಡುಗಿಯನ್ನು ಮೊನ್ನೆ ಫೋಟೋವೊಂದರಲ್ಲಿ ನೋಡಿದ್ದ ನೆನಪಾಯಿತು. ಆ ಹುಡುಗಿಯನ್ನೇ ಸಂದೀಪ ಮಾಮನಿಗೆ ಮದುವೆ ಮಾಡಲೆಂದು ನೋಡಲು ಹೋಗಿದ್ದು. ಆವತ್ತು ತನ್ನನ್ನೂ ಕರೆದುಕೊಂಡು ಹೋಗಲು ಅಜ್ಜಿಗೆ ಹೇಳಿದರೂ ಇನ್ನೊಂದು ಸಲ ಕರೆದುಕೊಂಡು ಹೋಗುವುದಾಗಿ ಹೇಳಿದ್ದು ನೆನಪಿಸಿಕೊಂಡ ಆರ್ಯ. ಆ ಅಕ್ಕನ ಹೆಸರು, ಪ ಇಂದ ಮೊದಲಾಗುತ್ತದೆ ಎಂಬುದು ನೆನಪಾಯಿತಾದರೂ ಇಡೀ ಹೆಸರುಏನೆಂದು ತಲೆ ಕರೆದುಕೊಂಡರೂ ಹೊಳೆಯಲಿಲ್ಲ. ಯಾರಾದರೂ ಅವಳನ್ನು ಹೆಸರಿಂದ ಕೂಗುವ ಮೊದಲೇ ತಾನೇ ಆ ಅಕ್ಕನ ಹೆಸರನ್ನು ನೆನಪಿಸಿಕೊಳ್ಳಬೇಕು ಎಂದು ಆರ್ಯ ತನ್ನೊಂದಿಗೆ ತಾನೇ ಪೋಟಿಗೆ ಬಿದ್ದ.

ಆ ಪ ಅಕ್ಕ, ನೇರವಾಗಿ ಅಜ್ಜಿಯ ಹತ್ತಿರ ಹೋಗಿ ಕೂತು ಅಳಲತ್ತಿದಳು. ಮೊದಲೇ ಕೆಂಪಾಗಿದ್ದ ಆ ಪ ಅಕ್ಕನ ಕಣ್ಣುಗಳು ಕೆಲ ಗಳಿಗೆಗಳಲ್ಲೇ ಊದಿಕೊಳ್ಳಲತ್ತಿದವು. ಅವಳ ಜೊತೆ ಬಂದಿದ್ದವರೂ ಅಳಲತ್ತಿದರು. ಒಂದಶ್ಟು ಮಂದಿ ಹೆಂಗಸರು ಆ ಅಕ್ಕನನ್ನು ನೋಡಿ ತಮ್ಮಲ್ಲೇ ಮಾತಾಡಿಕೊಂಡರು. ಮಂದಿ ಪೆಟ್ಟಿಗೆಯ ಒಳಗಿನ ಸಂದೀಪ್ಮಾಮನ ಮುಂದೆ ಸಪ್ಪಳ ಮಾಡದೇ ತಲೆ ತಗ್ಗಿಸಿ ನಿಂತು, ಮಾತಿಲ್ಲದೇ ಸರಿದು ಹೋಗುತ್ತಿದ್ದರು. ಯಾರಾದರೂ ಒಬ್ಬರು ಯಾಕೆ ಸಂದೀಪ್ಮಾಮ ಹಾಗೆ ಮಲಗಿದ್ದಾನೆ, ಯಾಕೆ ಯಾರೂ ಅವನನ್ನು ಎಬ್ಬಿಸುತ್ತಿಲ್ಲ ಎಂದು ಸಣ್ಣ ಹುಡುಗರಿಗೆ ತಿಳಿ ಹೇಳುವ ದೊಡ್ಡ ಮನಸ್ಸನ್ನು ಅಲ್ಲಿ ಯಾರೂ ಮಾಡುತ್ತಿಲ್ಲ. ಸಂದೀಪ ಸತ್ತಿದ್ದಾನೆ ಅಂದರೆ ಮಕ್ಕಳಿಗೆ ತಿಳಿಯುವುದಾ? ಅವರೂ ʼಸತ್ತಿದಾರೆʼ ಎಂದು ಬಾಯಲ್ಲಿ ಹೇಳಿಕೊಂಡು ಸುಮ್ಮನಿದ್ದು ಬಿಡುತ್ತಾರೆ. ಮಕ್ಕಳಿಂದ ಮುದುಕರವರೆಗೆ ಸಾವು ಎಂಬ ಕುರಿಪನ್ನು(ವಿಶಯ) ಇಶ್ಟೇ ತಿಳಿದುಕೊಂಡು ಸುಮ್ಮನಿದ್ದು ಬಿಡುವ ಬದುಕಿನ ಗಾಲಿ ಎಶ್ಟೇ ಯುಗಗಳು ಉರುಳಿದರೂ ಯಾವತ್ತೂ ನಿಲ್ಲುವುದಿಲ್ಲ, ಸಾವು ಯಾರಿಗೂ ತಿಳಿಯುವುದಿಲ್ಲ.

ಗಾಜಿನ ಪೆಟ್ಟಿಯ ಪಕ್ಕ ಉದ್ದಿನಕಡ್ಡಿಗಳು ಉರಿದವು, ದೂರದಲ್ಲಿ ಯಾರೋ ಕಟ್ಟಿಗೆಗಳ ಸಣ್ಣ ಕುಪ್ಪೆಗೆ ಬೆಂಕಿ ಹತ್ತಿಸಿದರು. ಅಲ್ಲೇ ಕಲ್ಲುಗಳನ್ನು ಒಟ್ಟಿಅಜ್ಜನೊಬ್ಬಮಡಿಕೆಯಲ್ಲಿ ಅನ್ನ ಮಾಡಿದ. ಆರ್ಯ ಮತ್ತವನ ಗೆಳೆಯರು ಅನ್ನ ಬೇಯುವುದನ್ನು ನೋಡುತ್ತಾ ನಿಂತರು. ಮನೆಯ ಹೊರಗೆ ಅನ್ನ ಮಾಡುವುದನ್ನು ಅವರು ಎಂದೂ ಕಂಡವರೇ ಅಲ್ಲ, ಹಾಗಾಗಿ ಅಚ್ಚರಿಯಲ್ಲಿ ಮುಳುಗಿದ್ದರು. ಮೊನ್ನೆ ತಾನೇ ತಮ್ಮ ಮನೆಯಲ್ಲಿ ಜೊಮ್ಯಾಟೋದಿಂದ ಆರ್ಡರ್ ಮಾಡಿದ ಬಿರಿಯಾನಿಯನ್ನು ಅಂತಹದ್ದೇ ಮಡಿಕೆಯೊಳಗೆ ಇಟ್ಟು ಕಳುಹಿಸಿದ್ದನ್ನು ನೆನಪಿಸಿಕೊಂಡ ಆರ್ಯನ ಗೆಳೆಯ ಪೂರ್ವಿತ್, “ನಮ್ಮನೇಲಿ ಆ ಪಾಟ್ ಇದೆ, ನಾಳೆ ಸಂಡೆ, ನಾವು ರೈಸ್ ಮಾಡೋಣ ಕಣೋ” ಎಂದ. ಗೆಳೆಯರೆಲ್ಲರೂ ಹ್ಞೂಂಗುಟ್ಟಿದರು.

ಅನ್ನ ಬೇಯುತ್ತಿದ್ದ ಎಡೆಗೆ ಬಂದು ಕ್ರಿಕೇಟ್ ಅಣ್ಣ, ಅಲೆಯುಲಿಯಲ್ಲಿ(ಮೊಬೈಲ್) ಯಾರಿಗೋ ದಾರಿ ಹೇಳಿದ. ಹುಡುಗರೆಲ್ಲರೂ ಅತ್ತ ನೋಡುತ್ತಿದ್ದಂತೆ ಹಳೆಯ ಓಮಿನಿ ಗಾಡಿಯೊಂದು ಕ್ರಾಸಿನೊಳಗೆ ಸಿಕ್ಕಾಪಟ್ಟೆ ಅಲುಗಾಡುತ್ತಾ ಬಂದು ನಿಂತಿತು. ಅದರೊಳಗಿನಿಂದ ಒಂದಾರು ಮಂದಿ ಇಳಿದರು. ಎಲ್ಲರೂ ಒಂದೇ ಬಗೆಯ ಕೆಂಪು ನೀಲಿಗಳ ತಮ್ಮ ಅಳತೆಗೆ ಮೀರಿದ, ಅಲ್ಲಲ್ಲಿ ಬಂಗಾರ ಬಣ್ಣದ ಪಟ್ಟಿಗಳಿಂದ ಮಿಂಚುತ್ತಿದ್ದ ಬಟ್ಟೆಗಳನ್ನು ಹಾಕಿಕೊಂಡಿದ್ದರು. ಇಳಿದವರು ಕೈಯಲ್ಲಿದ್ದ ತುದಿಯಲ್ಲಿ ಕುಚ್ಚುಗಳಿದ್ದ ದೊಡ್ಡ ಟೊಪ್ಪಿಗೆಗಳನ್ನು ತಲೆಗೇರಿಸಿಕೊಂಡರು. ಒಳಗಿನಿಂದ ಒಂದೊಂದೇ ನುಡಿಗೆಗಳು(ವಾದ್ಯ) ಹೊರ ಬಂದವು. ಓಮಿನಿಯ ಇಕ್ಕೆಲಗಳ ಮೇಲೆ ಬಣ್ಣಬಣ್ಣಗಳಿಂದಡಾ.ರಾಜ್ಕುಮಾರ್ ಬ್ಯಾಂಡ್ಸೆಟ್, ಮೂಡಲಪಾಳ್ಯ, ವಿಜಯನಗರ ಎಂದು ಅಲೆಯುಲಿ ಎಣಿಯೊಂದಿಗೆ ಕನ್ನಡ ಮತ್ತು ಇಂಗ್ಲಿಶಿನಲ್ಲಿ ಬರೆದಿದ್ದ ಎರಡನ್ನೂ ತಪ್ಪಿಲ್ಲದೇಗೆಳೆಯರಿಗೆ ಆರ್ಯ ಓದಿ ಹೇಳಿದ.

ಇಪ್ಪತ್ತೈದರಿಂದ ಮೂವತ್ತೈದರ ನಾಲ್ಕು ಮಂದಿ ಇರುವ ಬ್ಯಾಂಡು. ಒಂದೊಂದು ಬಗೆಯ ನುಡಿಗೆಯನ್ನು ಹಿಡಿದುಕೊಂಡು ಅಣಿಯಾಗಿದ್ದರೂ ನುಡಿಸಲು ಮೊದಲು ಮಾಡುತ್ತಿಲ್ಲ, ಎಲ್ಲರೂ ಓಮಿನಿಯತ್ತಲೇ ನೋಡುತ್ತಿದ್ದಾರೆ. ಅದರೊಳಗೆ ಒಂದು ಕಿತ್ತಾಟ ನಡೆಯುತ್ತಿದೆ. ಅದೇನೆಂದರೆ ಆರ್ಯನಶ್ಟೇ ಇರುವ ಹುಡುಗನನ್ನು ಅವನ ಅಜ್ಜನಂತಿರುವ ಬ್ಯಾಂಡಿನವನು ಹೊರಗೆ ಎಳೆಯುತ್ತಿದ್ದಾನೆ. ಆದರೆ ಹುಡುಗ ಬರುತ್ತಿಲ್ಲ. “ಬರ್ತೀಯಾ ಇಲ್ಲಾ ಸಾಯಿಸ್ಲಾ” ಎಂದು ಅಜ್ಜ ಬೈಯ್ಯುತ್ತಿದ್ದಾನೆ. ಹುಡುಗ ಅಳುತ್ತಾ, “ಬರಲ್ಲ” ಎಂದು ಒದರುತಿದ್ದಾನೆ ತಮಿಳಿನಲ್ಲಿ. “ಣೋ ಬಾರನಾ, ನಾವೇ ಬಾರ‍್ಸನ” ಎಂದು ಟ್ರಂಪೆಟ್ ಹಿಡಿದಿದ್ದ ಹುಡುಗನೊಬ್ಬ ಅಜ್ಜನನ್ನು ಕರೆದ. ತಿರುಗಿ ಅವನನ್ನು ಗುರಾಯಿಸಿದ ಅಜ್ಜ, “ತಿಕಾ ಮುಚ್ಕೊಂಡ್ ನಿಂದ್ರು” ಎಂದು ಅವನಿಗೆ ಗದರಿ, ಸಣ್ಣ ಹುಡುಗನನ್ನು ಎಳೆಯಲತ್ತಿದ. ಬೈಗುಳವನ್ನು ಕೇಳಿಸಿಕೊಳ್ಳದವನಂತೆ ಟ್ರಂಪೆಟ್ಟು ಹುಡುಗ ಪುರ್ ಪುರ್ ಊದಲತ್ತಿದ. ನುಡಿಸಲು ಸಣ್ಣ ಡ್ರಮ್ ಹಿಡಿದಿದ್ದವನು ಅಜ್ಜನ ಹತ್ತಿರ ಬಂದು, “ಅಣಾ” ಎಂದು ಕರೆದು ಅಜ್ಜನ ಗಮನವನ್ನು ಮನೆಯತ್ತ ಸೆಳೆದ, ಅಲ್ಲಿ ಒಂದಿಬ್ಬರು ಗಂಡಸರು ಇವರತ್ತಲೇ ನೋಡಿ, ಯಾಕೆ ತಡ ಎಂಬಂತೆ ಸನ್ನೆ ಮಾಡಿದರು. “ಎರಡೇ ನಿಮ್ಶ ಸರ್” ಎಂದ ಅಜ್ಜ.

ಅಜ್ಜ ಇನ್ನಶ್ಟು ಅವಸರದಲ್ಲಿ ಓಮಿನಿಯೊಳಗೆ ನುಗ್ಗಿ, “ಎರಡೇ ತಾಸು ಕುಮರ, ನೂರ್ ರೂಪಾಯಿ ಕೊಡ್ತೀನಿ” ಎಂದರೂ ಹುಡುಗ ಕೇಳಿಸಿಕೊಳ್ಳುವ ಮನಸ್ಸಿಗೆ ಬರದೇ ಅಳುತ್ತಲೇ ಇದ್ದ. ಅವನ ತಲೆಗೆ ಸರಿಯಾಗಿ ಒಂದು ಪೆಟ್ಟು ಕೊಟ್ಟ ಅಜ್ಜ, ಇನ್ನೂ ಜೋರಾಗಿ ಅಳಿಸಿ ಅಲ್ಲಿಂದ ಬ್ಯಾಂಡನ್ನು ಸೇರಿದ. ಓಮಿನಿ ಹುಡುಗನ ಕಣ್ಣೀರು ಅವನ ಮುಂದಿದ್ದ ಗಿಲ್ಕಿಯ ಮೇಲೆ ಬಿದ್ದು ಅದರಡಿ ಇದ್ದ ಬಟ್ಟೆಯನ್ನು ತೋಯಿಸಿತು. ಗಿಲ್ಕಿ ಇಲ್ಲದೇ ಯಾವುದೇ ಹಾಡು ಕಳೆಗಟ್ಟದು ಎಂಬುದು ಅಜ್ಜನ ನಂಬಿಕೆ ಮತ್ತು ನಲವತ್ತು ಏಡುಗಳ ತನ್ನ ಈ ಕೆಲಸದಲ್ಲಿ ಅವನು ಕಂಡುಕೊಂಡ ದಿಟ. ಗಿಲ್ಕಿಯನ್ನು ವಿಶೇಶವಾಗಿ ಕಲಿತು ನುಡಿಸಬೇಕಿಲ್ಲ, ಕೈಗಳಲ್ಲಿ ಹಿಡಿದುಕೊಂಡು ತಾಳಕ್ಕೆ ತಕ್ಕಂತೆ ಅಲುಗಾಡಿಸುವುದಶ್ಟೇ ಕೆಲಸ. ಜಿಲ್ ಜಿಲ್ ಜಿಲ್ ಜಿಲ್ ಎಂದು ಸಪ್ಪಳ ಹೊಮ್ಮಿ ಹಾಡಿನ ಇಂಪು ಹೆಚ್ಚಿಸುತ್ತದೆ. ಅದಕ್ಕಾಗಿ ಅದನ್ನು ಬ್ಯಾಂಡ್ ತಂಡದಲ್ಲಿ ಕೆಲಸ ಮಾಡಲು ಬರುವ ಹೊಸಬರಿಗೆ ಕೊಡುವುದು. ಇಲ್ಲವಾದರೆ ಯಾರೋ ಗೊತ್ತಿರುವ ಸಣ್ಣ ಹುಡುಗನನ್ನು ಸೇರಿಸಿಕೊಂಡು ಅವನ ಕೈಗೆ ಕೊಟ್ಟು ಬಿಡುವುದು ಅಶ್ಟೇ. ಸಣ್ಣ ಹುಡುಗರಿಗೆ ಅದು ಆಟದ ಸರಕಿನಂತೆ ಕಂಡು ಎಶ್ಟೊತ್ತು ಬೇಕಾದರೂ ಅಲುಗಾಡಿಸುತ್ತಾರೆ. ಆದರೆ ಹಾಗೆ ಮಕ್ಕಳು ಬಿಟ್ಟಿಯಾಗಿ ಒಂದೆರಡು ಸಲ ಮಾಡಬಹುದೇನೋ. ಯಾರಿಂದಲಾದರೂ ಮಾಡಿದ್ದನ್ನೇ ಮಾಡಿಸಲು ಅವರಿಗೆ ಸಂಬಳ ಕೊಡಬೇಕು ಇಲ್ಲವಾದರೆ ಆ ಕೆಲಸ ಅವರಿಂದ ನಿಂತಂತೆಯೇ, ಇಲ್ಲಾ ಕೆಟ್ಟಂತೆಯೇ ಲೆಕ್ಕ.

ಐದಾರು ಸಾವಿರ ರೂಪಾಯಿಯ ದುಡಿಮೆಯಲ್ಲಿ ಕೇವಲ ತನಗೆ ನೂರು ರೂಪಾಯಿ ಕೊಡುವುದಾದರೆ ತಾನು ಆ ಕೆಲಸ ಮಾಡಬಾರದು ಅದು ಕೆಲಸಕ್ಕೆ ಮಾಡುವ ಮೋಸ ಎಂದು ಎಣಿಸುವ ಅರಿವು ಕುಮರನಿಗೆ ಇನ್ನೂ ಬಂದಿರಲಿಲ್ಲವಾದರೂ, ಗಿಲ್ಕಿಯ ಕೆಲಸ ಮಾಡಲಾರೆ ಎಂದು ಅಜ್ಜನಿಗೆ ಹೇಳುವಶ್ಟು ಕಸುವಂತೂ ಇದ್ದೇ ಇದೆ. ಹೊಡೆಯುವ ಅಂಥಾ ಅಜ್ಜನಿಗೆ ತಿರುಗಿ ಬೀಳುವ ಅಂಥಾ ಮೊಮ್ಮಗನೇ ಹುಟ್ಟಿರುವುದು. ಹೋದ ನೇಸರನಾಳು(ಭಾನುವಾರ) ಹಿಂಗೇ ಹೆಣವೊಂದಕ್ಕೆ ಕರೆದುಕೊಂಡು ಹೋದಾಗ ಅಲ್ಲಿ ಕುಮರ ತನ್ನ ತರಗತಿಯ ಗೆಳೆಯರಿಗೆ ಕಾಣಿಸಿ, ಮರುದಿನ ಇವನ ಅವತಾರಕ್ಕೆ ಎಲ್ಲಾ ಗೆಳೆಯರಿಂದ ಕಲಿಮನೆಯಲ್ಲಿ ಅಣಕಿಸಿಕೊಂಡಿದ್ದ. ಅಂದು ಆದ ಕೀಳರಿಮೆಯಿಂದ ಗಿಲ್ಕಿಗೂ ತನಗೂ ಇನ್ನು ನಂಟು ಮುಗಿಸಬೇಕು ಎಂದು ತೀರ್ಮಾನ ಮಾಡಿ, ಅಜ್ಜ ಮತ್ತು ಅಮ್ಮನಿಗೆ ಹೇಳಿಯೂ ಬಿಟ್ಟಿದ್ದ. ಅದನ್ನು ನೆನಪಿಟ್ಟುಕೊಳ್ಳದೇ ಇವತ್ತು ಬೆಳಿಗ್ಗೆ ತುಂಬಾ ಕಾಡಿದ ಅಜ್ಜನನ್ನು ಸಿಟ್ಟಿನಲ್ಲಿ ಬೈದುಕೊಳ್ಳುತ್ತಲೇ ಇದ್ದ.ಇತ್ತ ಬರುವಾಗ ಅಜ್ಜನ ಯಾವ ರಮಿಸುವಿಕೆಯೂ ಕುಮರನ ಮೇಲೆ ಕೆಲಸ ಮಾಡಿರಲಿಲ್ಲ. ಗಂಡ ತೀರಿದ ಕುಮರನ ಅಮ್ಮ, ಮಗನಿಗೆ ಹೆಚ್ಚು ಬೈಯ್ಯಲಿಲ್ಲ, ಆದರೆ ಅಳಲತ್ತಿದ್ದಳು. ಆಗ ಅಳು ನೋಡಲಾಗದೇ ಸುಮ್ಮನೆ ಕುಮರ ಓಮಿನಿ ಹತ್ತಿದ್ದ, ಈಗ ಅಳುತ್ತಿದ್ದಾನೆ ಇಳಿಯುತ್ತಿಲ್ಲ.

ಬೆಂಗಳೂರಂತಹ ಬಿರುಸಾಗಿ ಬದಲಾಗುತ್ತಿರುವ ಹಲವು ಹಳ್ಳಿಗಳ ಬಹು ದೊಡ್ಡ ಊರಲ್ಲಿ, ಬ್ಯಾಂಡ್ಸೆಟ್ಗಳನ್ನು ಕೆಲಸಗಳಿಗೆ ಕರೆಯುತ್ತಿರುವುದೇ ಅಪರೂಪವಾಗಿರುವ ಈ ನಾಳುಗಳಲ್ಲಿ, ತಮ್ಮನ್ನು ಕೆಲಸಕ್ಕೆ ಕರೆದಿರುವಾಗ ಮೊಮ್ಮಗ ಕುಮರ, ಬರುವುದಿಲ್ಲವೆಂದು ರೊಳ್ಳಿ ತೆಗೆದಿರುವುದು ಅಜ್ಜ ಈಶ್ವರನ್ಗೆ ಸಿಟ್ಟು ತರಿಸಿತ್ತು. ಹಾಡು ಕಳೆಗಟ್ಟದೇ, ಇಲ್ಲಿ ಬಂದಿರುವ ಯಾರಿಗಾದರೂ ಯಾವುದೇ ಒಳ್ಳೆಯ ಇಲ್ಲವೇ ಕೆಟ್ಟ ಗಳಿಗೆಗಳಲ್ಲಿ ಬ್ಯಾಂಡನ್ನು ಕರೆಸಿಕೊಳ್ಳಲು ಮನಸ್ಸಾದಾಗ ನಮ್ಮ ಇವತ್ತಿನ ಈ ಕೆಟ್ಟ ಆಟ ನೋಡಿ, ನಮ್ಮನ್ನು ಬಿಟ್ಟು ಬೇರೊಬ್ಬನ್ನು ಕರೆದು ಬಿಟ್ಟರೆ, ನಾವು ಹೊಟ್ಟೆಗೆ ಮಣ್ಣು ತಿನ್ನಬೇಕಲ್ಲಾ ಎನ್ನುವುದು ಕಾಡಲತ್ತಿತು. ಕೆಲಸ ಮಾಡದೇ ಉಂಡರೆ ಮೈಗೆ ಹತ್ತುವುದಿಲ್ಲ. ಅರಿವು ಮೂಡಿದಾಗಿನಿಂದಲೂ ಮನುಶ್ಯ ಅಕ್ಶರ ಮತ್ತು ದುಡಿಮೆ ಎರಡನ್ನೂ ಮೈಗೂಡಿಸಿಕೊಳ್ಳಬೇಕು. ದುಡಿಮೆಗೆ ಮಕ್ಕಳು ಬೇಗ ಒಗ್ಗಿಕೊಂಡರೆ ಮಾತ್ರ ಬಾಳುವೆಯನ್ನು ಸುಳುವಾಗಿಸುವ ದುಡ್ಡನ್ನು ಕಾಣಬಹುದು ಎಂಬುದನ್ನು ನಂಬಿದ್ದ ಅಜ್ಜ, ಈಗ ಎರಡು ಏಡುಗಳ ಹಿಂದೆ ರಾಜರಾಜೇಶ್ವರಿ ನಗರದ ರಾಜಕಾಲುವೆಯ ಪಕ್ಕವೇ ಇರುವ ಕಟ್ಟಡವೊಂದರ ಹನ್ನೆರಡನೆಯ ಮಹಡಿಯನ್ನು ಹೊರಗಿನಿಂದ ಬಣ್ಣ ಬಳಿಯುತ್ತಿದ್ದಾಗ, ಹಗ್ಗದಿಂದ ಜೋಲಿ ತಪ್ಪಿ ಬಿದ್ದು ಸತ್ತ ಮಗ ಆರ್ಮುಗನನ್ನು ಬೈದುಕೊಳ್ಳುತ್ತಾ ಡ್ರಮ್ ಬಾರಿಸಲು ಅಣಿಯಾಗಲತ್ತಿದ.

ಬ್ಯಾಂಡು ಬಾರಿಸುವ ಕೆಲಸಗಳು ಕಮ್ಮಿಯಾಗಿದ್ದೇ ಮಗನ ಸಾವಿಗೆ ದೂಸರು ಎನ್ನುವುದು ಗಟ್ಟಿಯಾಗಿ ಕೂತುಬಿಟ್ಟಿತ್ತು ಈಶ್ವರನ್ ತಲೆಯಲ್ಲಿ.
ಓಮಿನಿಯ ಹೊರಗಿನಿಂದ ಇದೆಲ್ಲಾ ನೋಡುತ್ತಿದ್ದ ಮಕ್ಕಳ ಗುಂಪು ಅಳುತ್ತಿದ್ದ ಕುಮರನ ಮುಂದೆ ನಿಂತಿತು. ಕುಮರನ ಎದುರಿಗೆ ಅವನ ಅಳತೆಯ ಬ್ಯಾಂಡ್ಸೆಟ್ ಬಟ್ಟೆಗಳು ಮತ್ತು ಅವುಗಳ ಮೇಲೆ ಜೋಡಿ ಗಿಲ್ಕಿಗಳು ಬಿದ್ದಿದ್ದವು.ಕುಮರ ಅವುಗಳತ್ತ ನೋಡದೇ ಸುಮ್ಮನೇ ಅಳುತ್ತಿದ್ದನ್ನು ಕಂಡ ಆರ್ಯ, ಮಹೇಶ, ಪೂರ್ವಿತ್ರಿಗೆ ಆ ಬಟ್ಟೆ ತೊಟ್ಟು, ಗಿಲ್ಕಿ ಅಲುಗಾಡಿಸುವ ಮನಸ್ಸಾಯಿತು.ಹಿಂದೆಯೇ ತಮ್ಮ ಅಪ್ಪ ಅಮ್ಮರನ್ನು ನೆನೆದು ಮನಸ್ಸು ಕಲ್ಲಾಯಿತು.
ಗಿಲ್ಕಿಯಿಲ್ಲದೇ ಮೆಲ್ಲಗೆ ಅಂಗಳ ಬ್ಯಾಂಡ್ಸೆಟ್ಟಿನ ಸಪ್ಪಳದಿಂದ ತುಂಬಿಕೊಂಡಿತು. ನಿರೀಕ್ಶಾ ಸಾವಿನ ಮನೆಗೆ ಬಂದಿದ್ದ ಹೆಂಗಸರಿಗೆಲ್ಲಾ ಟೀ ಕಾಫಿಗಳನ್ನು ಕೊಡುತ್ತಿದ್ದಳು. ಇನ್ನೇನು ಅರೆತಾಸಿನೊಳಗೆ ಬರುವೆನೆಂದು ರಾಜೇಶ್ ಕರೆ ಮಾಡಿ ಹೇಳಿದ್ದ. ಕ್ರಿಕೇಟ್ ಅಣ್ಣನಿಂದ ದೊಡ್ಡ ಗಂಡಸರಂತೆ ತಾವೂ ಟೀ ಇಸಿದುಕೊಂಡು ಕುಡಿದರು ಮಕ್ಕಳು. ಜೇಬಲ್ಲಿದ್ದ ಎರಡು ರೂಪಾಯಿಯ ಪಾರ್ಲೇಜಿ ಬಿಸ್ಕತ್ತನ್ನು ತೆಗೆದು ಹಂಚಿದ ಆರ್ಯ, ಟೀಯಲ್ಲಿ ಅವನ್ನು ಮುಳುಗಿಸಿ ತಿಂದು ಇಲ್ಲವಾಗಿಸಿದ. ಏನೋ ನೆನಪಾದವನಂತೆ ಕೂಡಲೇ ಓಮಿನಿಯತ್ತ ಓಡಿ ಹೋಗಿ, ಜೇಬಲ್ಲಿದ್ದ ಫೈವ್ಸ್ಟಾರ್ ಚಾಕ್ಲೇಟು ಒಂದನ್ನು ಕುಮರನತ್ತ ಒಡ್ಡಿದಾಗ, ಅವನು ತೆಗೆದುಕೊಳ್ಳದೇ ಅಜ್ಜನತ್ತ ನೋಡುತ್ತಾ ಸುಮ್ಮನೇ ಉಳಿದು ಬಿಟ್ಟ. ಈ ಹುಡುಗರು ಅಜ್ಜನತ್ತ ನೋಡಿದರು, ಅಜ್ಜನ ಮೂತಿಯಲ್ಲಿ ಗೆಲುವಿರಲಿಲ್ಲ. ಅಲ್ಲಿ ನುಡಿಸುತ್ತಿರುವವರನ್ನು ಸುಮ್ಮಸುಮ್ಮನೇ ತಪ್ಪು ಮಾಡುತ್ತಿರುವಿರಿ ಎಂಬಂತೆಅಜ್ಜ ತಿದ್ದುತ್ತಿದ್ದ. ನುಡಿಸುಗರು ಅಜ್ಜನ ಅರಿವಿಗಲ್ಲದೇ, ಅವನು ಕೊಡಲಿರುವ ದುಡ್ಡಿಗಾಗಿ ಸುಮ್ಮನೇ ಅನಿಸಿಕೊಳ್ಳುತ್ತಿದ್ದರು.

ಒಂದಶ್ಟು ಮಂದಿಗೆ ಬ್ಯಾಂಡ್ಸೆಟ್ ಹೊಸದಾಗಿತ್ತು. ಕ್ರಾಸಿನ ಎಲ್ಲಾ ಮನೆಗಳವರು ಬಂದು ಸಂದೀಪನನ್ನು ನೋಡಿಕೊಂಡು, ಮನೆಯವರಿಗೆ ನೆಮ್ಮದಿ ಹೇಳಿ ಹೋಗುತ್ತಾ ಒಂದು ಗಳಿಗೆ ಬ್ಯಾಂಡ್ಸೆಟ್ನತ್ತ ಗಮನ ಹರಿಸುತ್ತಿದ್ದರು. ಬಾನೋಡ ನಿಲ್ದಾಣದ ಟ್ಯಾಕ್ಸಿಯೊಂದು ಬಂದು ರಾಜೇಶನನ್ನು ಇಳಿಸಿತು. ನಿರೀಕ್ಶಾ ಹೋಗಿ ಗಂಡನ ಮೋರೆ ನೋಡಿದಾಗ ಕಳೆಯೇ ಇಲ್ಲವಾಗಿತ್ತು. ಅದು ಉಸಿರಾಡುತ್ತಿದೆ ಎನ್ನುವುದನ್ನು ಒಂದು ಗಳಿಗೆ ನಿಂತು ನೋಡಿಕೊಂಡಳು. ಆರ್ಯನಿಗೆ ಅಪ್ಪ ಬಂದಿರುವುದು ಗೊತ್ತಾಗಿ ಓಡಿ ಬಂದ. ಅಪ್ಪ ತನ್ನತ್ತ ಎಂದಿನ ನಲಿವು ತೋರಿಸಿದೇ ಇದ್ದುದು ಕಂಡು, ಅಪ್ಪನ ಸೂಟ್ಕೇಸು, ಗಾಲಿಚೀಲವನ್ನು ಮನೆಯೊಳಗೆ ಹೋದ ಅಮ್ಮನನ್ನು ಆಟದ ಸರಕುಗಳ ಬಗ್ಗೆ ಕೇಳಲು ಓಡಿದ.

ರಾಜೇಶ್ ನೇರ ಸಂದೀಪನ ಬಳಿ ಬಂದು ನಿಂತ. ಯಾಕೋ ರಾಜೇಶನ ಕಣ್ಣು ಮಂಜು ಮಂಜು. ಆವತ್ತು ಕೋವಿಡ್ ಬಂದು ಮನೆಯೊಳಗೇ ಒದ್ದಾಡುತ್ತಿದ್ದಾಗ ಹೀಗೇ ತಾನು ಮಲಗಿದ್ದೆ ಎದುರಿಗೆ ಸಂದೀಪ ನಿಂತಿದ್ದ ಎನ್ನುವುದು ನೆನಪಾಗಿ ಕಣ್ಣೀರು ಹರಿದೇ ಬಿಟ್ಟವು, ರಾಜೇಶ್ ಒರೆಸಿಕೊಳ್ಳಲಿಲ್ಲ. ಅವನ ಅಳುವನ್ನು ಕಂಡು ಕಮಲಮ್ಮನ ಅಳು ಇನ್ನೂ ಹೆಚ್ಚಿತು. ನಿರೀಕ್ಶಾ ಮತ್ತು ಆರ್ಯ ಇಬ್ಬರೂ ಬಂದು ರಾಜೇಶ್ನ ಪಕ್ಕ ನಿಂತರು. ಅಪ್ಪ ಮೊದಲ ಸಲ ಅಳುತ್ತಿರುವುದನ್ನು ನೋಡುತ್ತಿರುವ ಆರ್ಯನಿಗೆ ಅಳು ಉಕ್ಕಿ ಬಂದು ಉಸಿರು ತಿರುಗಿಸುತ್ತಾ ಅಳಲತ್ತಿದ. ಹೆಂಡತಿಕೊಟ್ಟ ಕೈಬಟ್ಟೆಯಿಂದ ಕಣ್ಣೀರು ಒರೆಸಿಕೊಂಡ ರಾಜೇಶ್, ಮಗನನ್ನು ಎತ್ತಿಕ್ಕೊಂಡು ಮತ್ತೆ ಸಂದೀಪನನ್ನೇ ನೋಡುತ್ತಾ ನಿಂತ. ಒಂದೆರಡು ನಿಮಿಶಗಳಾದ ಮೇಲೆ ಸಂದೀಪನ ನೋಡಲು ಬಂದಅವನ ಕಾಲೇಜಿನ ಗೆಳೆಯಯರ ಗುಂಪಿಗೆ ಎಡೆ ಬಿಡಲು ಸರಿದ ರಾಜೇಶನಿಗೆ ಕಮಲಮ್ಮ ತನ್ನತ್ತಲೇ ನೋಡುತ್ತಾ ಅಳುತ್ತಿರುವುದು ಕಂಡು ಅವರತ್ತ ಅಳುತ್ತಲೇ ಸಾಗಿದ.ಮಾತಿಲ್ಲ ಬರೀ ಕಣ್ಣೀರು. ಕಮಲಮ್ಮನ ಪಕ್ಕ ಕೂತಿದ್ದ ಸಂದೀಪನ ಹೆಂಡತಿಯಾಗಬೇಕಿದ್ದ ಹುಡುಗಿ ಪಲ್ಲವಿ ಮತ್ತವರ ಮನೆಯವರನ್ನು ಕಂಡುರಾಜೇಶನಿಗೆ ಏನುಹೇಳುವುದೂ ಆಗಲಿಲ್ಲ. ಸುಮ್ಮನೆ ಕಣ್ಣೀರು ಒರೆಸಿಕೊಳ್ಳುತ್ತಿದ್ದ. ಸಾವಿನ ಮನೆಯವರಿಗೆ ನಿರೀಕ್ಶಾ ನೆರವಾಗುತ್ತಿರುವುದನ್ನು ಕಂಡು ಸಣ್ಣ ನೆಮ್ಮದಿಯಾಯಿತು ರಾಜೇಶನಿಗೆ.

ಒಂದೊಂದೇ ಪೂಜೆಗಳು ಮುಗಿದು ಕಡೆಗೆ ಪೂಜಾರಿ ಹೊತ್ತು ನೋಡಿದರು, ಮೂರು ಗಂಟೆಯಾಗಿತ್ತು. ಬಂದಾಗಿನಿದ್ದ ಸಪ್ಪಳ ಮಾಡುತ್ತಿದ್ದ ಬ್ಯಾಂಡ್ ಯಾಕೋ ನಿಂತಿತು. ದುಡ್ಡು ಇಸಿದುಕೊಂಡು ಅರೆಬರೆ ನುಡಿಸಿ ಓಡುತ್ತಾರೆ ಇವರು ಎಂದು ಬೈದುಕೊಂಡೇ ಅವರತ್ತ ಹೋದ ಸಂದೀಪನ ದೊಡ್ಡಪ್ಪನ ಮಗ ಅನಿಲ್. ಅಲ್ಲಿ ಬ್ಯಾಂಡಿನವರಿಗೆ ಟೀ ಕೊಡಲಾಗಿತ್ತು. ಅದಕ್ಕಾಗೇ ಅವರ ಕೈಬಾಯಿಗಳು ನುಡಿಗೆಗಳಿಗೆ ಹತ್ತಿರಲಿಲ್ಲ. ಅದನ್ನು ನೋಡುತ್ತಲೇ ಯಾಕೋ ಅನಿಲ್ಗೆ ತಾನು ಸುಮ್ಮನೇ ಸಿಟ್ಟಾಗುತ್ತಿರುವೆ ಎನಿಸಲತ್ತಿತು. ಕುಮರನ್ ಓಮಿನಿಯಲ್ಲೇ ಇದ್ದು, ಎಲ್ಲರೂ ಟೀ ಕುಡಿಯುವುದನ್ನೇ ನೋಡುತ್ತಾ, ಅಜ್ಜನೆಡೆಗೆ ಕಣ್ಣು ನೆಡದೇ ತಪ್ಪಿಸುತ್ತಿದ್ದ. ಶಾಮಿಯಾನದ ಒಳಗಿನ ಉಸಿರುಗಳ ಕುದಿಯಿಂದ ತಣ್ಣಗಾಗಲೆಂದು ರಾಜೇಶ್ ಅಲ್ಲಿಗೆ ಬಂದು ನಿಂತರು.

ಪೂಜಾರಿ ಅನಿಲ್ನನ್ನು ಕರೆದರು. ಪೂಜಾರಿ ಹೇಳಿದಂತೆ ಹಾರವೊಂದನ್ನು ಸಂದೀಪನ ಮೇಲೆ ಹಾಕಿ ಎದ್ದು ಬಂದ ಅನಿಲ್, ಅವರಿವರಿಗೆ ಮುಂದಿನ ಕೆಲಸಗಳ ಬಗ್ಗೆ ಹೇಳಿ, ಈಶ್ವರನ್ ಎದುರು ನಿಂತ. “ಅಣ್ಣ, ನೀವು ಊಟ ಮಾಡಿ ಬರೋ ಹಂಗಿಂದ್ರೆ ಮಾಡಿ ಬರ‍್ರಿ. ಇನ್ನೊಂದು ಅರ್ಧಗಂಟೆ ಬಿಟ್ಟು ತಗೊಂಡು ಹೋಗ್ಬೋದು” ಎಂದ ಅನಿಲ್ ಮಾತಿಗೆ ಈಶ್ವರನ್, ಅಚ್ಚಕನ್ನಡದಲ್ಲಿ, “ಅವ್ರು ಮಣ್ಣಾಗೋವರೆಗೆ ನಾವು ಅನ್ನ ಮುಟ್ಟಲ್ಲ ಸರ್. ನಾವೇ ಕಳಿಸ್ತಾ ಇರೋದಲ್ವಾ ಅವ್ರುನ್ನ, ಅವ್ರು ನಮ್ ಮನೆಯೋರೇ ಈಗ” ಎಂದ.ಅನಿಲ್ ಮತ್ತು ರಾಜೇಶರು ಮರುಮಾತಾಡಲಿಲ್ಲ. ಹುಟ್ಟಲ್ಲದಿದ್ದರೂ ಸಾವು ಎಲ್ಲರನ್ನೂ ನೆಂಟರು ಮಾಡುತ್ತದೆಯೇನೋ? ಈಶ್ವರನ್ ಮಾತು ಹೇಳಿದ ಮೇಲೆ ತನ್ನನ್ನೇ ನೋಡಿದ ಬಗೆಯು ಅನಿಲ್ಗೆ ತೀರಿದ ತನ್ನಿಶ್ಟದ ಲೆಕ್ಕದ ಮೇಶ್ಟ್ರು ಒಬ್ಬರನ್ನು ನೆನಪಿಸಿತು. ಕಮಲಮ್ಮ ಕರೆದರೆಂದು ಅನಿಲ್ ಅಲ್ಲಿಂದ ಹೋಗಿ ರಾಜೇಶ್ ಮಾತ್ರ ಉಳಿದ.

ಅಮ್ಮ ಇತ್ತ ಬಂದಾಗ ಉಚ್ಚೆ ಮಾಡಲು ಮನೆಯೊಳಗೆ ಹೋಗುವೆನೆಂದು ಸುಳ್ಳು ಹೇಳಿ ಮನೆ ಬೀಗ ಇಸಿದುಕೊಂಡು ಅಪ್ಪನ ಗಂಟುಮೂಟೆಗಳನ್ನು ಕೆದರಿ ಬಂದಿದ್ದ ಆರ್ಯನ್, ದೆಹಲಿಯಿಂದ ಆಟವಾಡಲು ಏನನ್ನೂ ತರದ ಅಪ್ಪನ ಮೇಲೆ ಸಿಟ್ಟಾಗಿದ್ದ.ಅದರ ಬಗ್ಗೆ ಕೇಳಲು ಅಪ್ಪನ ಬಳಿ ನಿಂತ. ಅಪ್ಪ ಇನ್ನೂ ಮಂಕಾಗಿರುವುದು ಕಂಡು, ಕೇಳುವುದೋ ಬೇಡವೋ ಎನ್ನುವ ಎಣಿಕೆಯಲ್ಲೇ ಇದ್ದ. ಅಜ್ಜ ಆಗಾಗ ಓಮಿನಿಯತ್ತ ನೋಡುತ್ತಿರುವುದ ಕಂಡ ರಾಜೇಶ್, ಓಮಿನಿಯ ಬಳಿ ಹೋಗಿ ಇಣುಕಿ ನಿಂತಾಗ ಅಳುತ್ತಾ ಕೂತಿರುವ ಕುಮರನ್ ಕಂಡ. ಅಪ್ಪನೊಂದಿಗೆ ಓಡಿದ ಆರ್ಯ, “ಅಪ್ಪಾ, ಬಿಸ್ಕೇಟ್ ಕೊಟ್ರೆ ಬೇಡ ಅಂದʼ ಎಂದು ಕುಮರನ್ ಕಡೆಗೆ ದೂರಿದ. ರಾಜೇಶ್, “ಏನಪಾ? ಏನಾಯ್ತು? ಯಾರಾದ್ರೂ ಹೊಡುದ್ರಾ?” ಎಂದಾಗ ಕುಮರ ಅಜ್ಜನತ್ತ ನೋಡಿದ. ಅದೇ ಹೊತ್ತಿಗೆ ಅಜ್ಜನೂ ಇವರತ್ತಲೇ ನೋಡುತ್ತಿದ್ದ. ಉಳಿದವರಿಗೆ ಸನ್ನೆ ಮಾಡಿ, ನುಡಿಸುವದ ನಿಲ್ಲಿಸಿ ಬಂದ ಅಜ್ಜನಿಗೆ ರಾಜೇಶ್ ಏನಾದರೂ ಕೇಳುವ ಮೊದಲೇ, “ಗಿಲ್ಕಿ ಇಲ್ಲ ಅಂದ್ರೆ ನಮ್ಮ ಕೆಲ್ಸಕ್ಕೆ ಕಳೆ ಬರಲ್ಲ ಸರ್, ಹಾಡು ಪೂರ್ತಿ ಆಗಲ್ಲ.ನೆಟ್ಟಗೆ ಕೇಳ್ಸಲ್ಲ. ಹಿಂಗೆಇರೋದನ್ನ ಕೇಳಿಸ್ಕೊಂಡ್ರೆ ನಮ್ಗೆ ಕೆಲ್ಸ ಯಾರ್ ಕೊಡ್ತಾರೆ ಹೇಳಿ ಸರ್? ಇವ್ನು ನಾನು ಗಿಲ್ಕಿ ಆಡ್ಸಲ್ಲ ಅಂತ ಕಿರಿಕಿರಿ ಮಾಡ್ತವ್ನೆ” ಎಂದು ಕುಮರನನ್ನು ದುರುಗುಟ್ಟಿ, “ಮನೇಗ್ ನಡೀ ಐತೆ ನಿಂಗೆ” ಎಂದ. ಅದಕ್ಕೂ ಕುಮರ ಮಿಸುಕಾಡಲಿಲ್ಲ. ಅದೇ ಹೊತ್ತಿಗೆ ನಿರೀಕ್ಶಾ ಗಂಡನಿಗೆ ಏನೋ ಹೇಳಲು ಬಂದಳು. ರಾಜೇಶ್, “ನಾನ್ ಆಡಿಸ್ಲಾ?” ಎಂದ. ಅದಕ್ಕೆ ಅಜ್ಜ ರಾಜೇಶನ ಮೂತಿಯನ್ನೇ ನೋಡಿದ.ನಿರೀಕ್ಶಾಳ ಮೋರೆ ಗಂಟಿಕ್ಕಲತ್ತಿತು. ಅವಳು ಬಂದಿದ್ದು ಗೊತ್ತಿರದ ರಾಜೇಶ್ ಗಂಟಲು ಕಟ್ಟಿಕೊಂಡೇ, “ಕಳ್ಸೋರು ಕಿರಿಕಿರಿಯಿಂದ ಕಳ್ಸಿದ್ರೆ, ಹೋಗೋರಿಗೆ ನೆಮ್ದಿ ಸಿಗಲ್ಲ ಅಲ್ವಾ ಅಣಾ?” ಎಂದ. ರಾಜೇಶನ ಮಾತಿಗೆ ಅಜ್ಜನ ಮರು ಮಾತು ಬರಲಿಲ್ಲ. ಗಿಲ್ಕಿಯ ಸುದ್ದಿಯನ್ನು ಎತ್ತುತ್ತಿದ್ದಂತೆ ಅಪ್ಪನ ಮೇಲಿದ್ದ ಸಿಟ್ಟನ್ನೆಲ್ಲಾ ಇಳಿಸಿಕೊಂಡ ಆರ್ಯ, “ಅಪ್ಪಾ, ನಾನು ನಾನು” ಎಂದು ಎಳೆಯಲತ್ತಿದ. ರಾಜೇಶ್ ಓಮಿನಿಯೊಳಗೆ ಬಗ್ಗಿ ಗಿಲ್ಕಿಗಳನ್ನು ಕೈಗೆ ತೆಗೆದುಕೊಂಡು ಮಗನತ್ತ ಚಾಚಿದ.

ಆರ್ಯ ತುಂಬು ಹಿಗ್ಗಿನಿಂದ ಕಣ್ಣಲ್ಲಿ ಮಿಂಚು ತುಂಬಿಕೊಂಡು ಇಸಿದುಕೊಳ್ಳುವುದಕ್ಕೆ ಸರಿಯಾಗಿ ನಿರೀಕ್ಶಾ ತಡೆದಳು. ಗಂಡನನ್ನು ನೋಡಿ,ಕಣ್ಣಲ್ಲಿ ಕಿರಿಕಿರಿಯನ್ನು ತೋರಿಸುತ್ತಾ, “ನಾವು ಇದೆಲ್ಲಾ ಮಾಡ್ಬಾರ‍್ದು” ಎಂದಳು. ರಾಜೇಶ ಅವಳನ್ನು ತುಂಬು ಸಿಟ್ಟಲ್ಲಿ ದಿಟ್ಟಿಸಿದ. “ಕೋವಿಡ್ಡಲ್ಲಿ ನಾನು ಸಾಯ್ತಾ ಇರೋವಾಗ ಅವ್ನು ʼನಾವು ಇದೆಲ್ಲಾ ಮಾಡ್ಬಾರ್ದುʼ ಅಂತ ಯೋಚ್ನೆ ಮಾಡಿದ್ರೆ?” ಎಂದ ರಾಜೇಶನ ಗಟ್ಟಿ ಉಲಿಗೆಮತ್ತು ಮಾತಿನಲ್ಲಿದ್ದ ಅರಿವಿಗೆ ನಿರೀಕ್ಶಾ ಮೆತ್ತಗಾದಳು.ರಾಜೇಶ್ ಅಶ್ಟಕ್ಕೇ ನಿಲ್ಲಿಸಲಿಲ್ಲ, “ಸಾವನ್ನಗೆದ್ದೋನ್ ನಾನು ಜಾತಿಗೆ ಸೋಲಲ್ಲ” ಎಂದ. ಕಂಗಳನ್ನು ತುಂಬಿಕೊಂಡ ನಿರೀಕ್ಶಾಳ ಕೈಗಳು ಗಿಲ್ಕಿಗಳನ್ನು ಮೆಲ್ಲಗೆ ತಾವೇ ತೆಗೆದುಕೊಂಡು ಮಗನ ಕೈಗೆ ಇತ್ತವು. ಕಂಗಳಲ್ಲೇ ಮನ್ನಿಪು(ಕ್ಶಮೆ) ಕೋರಿದಳು ರಾಜೇಶ ನಸುನಕ್ಕು ದೊಡ್ಡವನಾದ.
ಅಜ್ಜ ಆರ್ಯನಿಗೆ ಅವನ್ನು ಹೇಗೆ ಆಡಿಸುವುದೆಂದು ಹೇಳಿಕೊಟ್ಟ. ಮೆಲ್ಲಗೆ ಅಂಗಳದಲ್ಲಿ ಹೊಸ ಹಾಡು ಮೊದಲಾಯಿತು, ಆರ್ಯನ ಗಿಲ್ಕಿಯೊಂದಿಗೆ ಅಜ್ಜನ ನುಡಿಸುವಿಕೆ ಕಳೆಗಟ್ಟಿತು.ಅಜ್ಜನ ನಲಿವನ್ನು ಕಂಡು ತಂಡ ಗೆಲುವಾಯಿತು. ಸಂದೀಪನ ಪಲ್ಲವಿ, ಅಮ್ಮ, ಅಕ್ಕ ಮತ್ತೆ ಎಲ್ಲರೂ ಒಮ್ಮೆ ಬ್ಯಾಂಡಿನತ್ತ ನೋಡಿದರು, ಆರ್ಯ, ಅಜ್ಜಿ ಕಮಲಮ್ಮರನ್ನು ನೋಡಿ ನಸು ನಕ್ಕ. ಗಿಲ್ಕಿ ಆಡಿಸುತ್ತಿರುವ ಆರ್ಯನ ಕಂಗಳಲ್ಲಿನ ಹಿಗ್ಗಿನ ಮಿಂಚು ಮೆಲ್ಲಗೆ ರಾಜೇಶ್ ಮತ್ತು ನಿರೀಕ್ಶಾಳನ್ನು ತುಂಬಿಕೊಂಡು ಸಾವಿನ ನೋವನ್ನು ಕಮ್ಮಿ ಮಾಡುತ್ತಿತ್ತು. ಓಮಿನಿಯಿಂದ ಇಣುಕಿ ಕುಮರ ತಾನಿಲ್ಲದೇ ಆಡುತ್ತಿರುವ ಗಿಲ್ಕಿಗಳನ್ನು ಕೇಳಿಸಿಕೊಂಡ. ಇಡೀ ಕ್ರಾಸಿನಲ್ಲಿ ಬ್ಯಾಂಡ್ಸೆಟ್ನ ಹಾಡು ತುಂಬಿಕೊಂಡಿತು, ಬೇರಾವ ಸಪ್ಪಳವೂ ಇಲ್ಲ. ಆರ್ಯನ ಗೆಳೆಯರೂ ಗಿಲ್ಕಿಯನ್ನು ಆಡಿಸುವ ತಮ್ಮ ಸರದಿಗಾಗಿ ಕಾಯಲತ್ತಿದರು. ಮಂಜು ಮಂಜು ಕಂಗಳಲ್ಲೇ ಬ್ಯಾಂಡನ್ನು ಕೇಳಿಸಿಕೊಳ್ಳುತ್ತಿದ್ದ ರಾಜೇಶನಿಗೆ, ಮಲಗಿದ್ದ ಸಂದೀಪನ ಮುಖದ ಗಂಟುಗಳು ತಿಳಿಯಾಗುತ್ತಿರುವುದು ಕಾಣಿಸಿತು.

-ಪ್ರವೀಣ್‌ ಕುಮಾರ್‌ ಜಿ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x