’ಮಂಗಳಮುಖಿ’ಯರಿಗೆ ಮರೀಚಿಕೆಯಾದ ಸಮಾನತೆಯ ಬದುಕು: ಗುರುರಾಜ್ ಎನ್

ಪ್ರಿಯಾಂಕ, ಮಮತ, ಚೆಲುವೆ, ಅಪ್ಸರ, ಜಯಶ್ರೀ, ವಿಧ್ಯಾ, ಹೀಗೆ  ಎಷ್ಟೋಂದು ಸುಂದರ ಹೆಸರುಗಳು, ಇವು ಒಂದು ವಿಭಿನ್ನ ಸಾಮಜಿಕ ಗುಂಪಿಗೆ ಸೇರಿದ ಹಿಜ್ರಾ, ಕೋಥಿ, ಮಂಗಳಮುಖಿ, ಜೋಗಪ್ಪ, ಡಬಲ್ ಡೆಕ್ಕರ್,  ದ್ವಿಲಿಂಗ ಕಾಮಿ, ಟ್ರಾನ್ಸ್‌ಜೆಂಡರ್, ಅಂತರ್‌ಲಿಂಗಿ, ಇಕ್ವಿಯರ್, ಲೈಂಗಿಕ ಅಲ್ಪಸಂಖ್ಯಾತ ವ್ಯಕ್ತಿಗಳ ಹೆಸರುಗಳು. ಗಂಡು ದೇಹದಲ್ಲಿ ಬಂದಿಯಾಗಿರುವ ಹೆಣ್ಣುಗಳ ಹೆಸರುಗಳಿವು ಹಾಗೇನೆ ಹೆಣ್ಣು ದೇಹದಲ್ಲಿ ಗಂಡುಗಳ ಹೆಸರುಗಳು ಬಂದಿಯಾಗಿರುವವರು ಇದ್ದಾರೆ. ಸಮಾಜದ ಕಣ್ಣಿಗೆ ಅವರು ಯಾರು? ಅವರ ನೋವು ಸಂಕಟಗಳೇನು? ಅವರ ತೊಂದರೆಗಳೇನು? ಎಂದು ಊಹಿಸಲು ಸಾದ್ಯಾವಾಗುವುದಿಲ್ಲ, ಅಷ್ಟರ ಮಟ್ಟಿಗೆ ಅವರ ಬದುಕು ದುಸ್ಥಿತಿಯಲ್ಲಿದೆ. ಅವರು ನಮ್ಮಂತೆಯೇ ಮನುಷ್ಯರು, ಅವರಿಗೂ ಮನಸ್ಸಿದೆ, ಭಾವನೆಗಳಿವೆ, ಕಷ್ಟದಲ್ಲಿರುವರನ್ನು ನೋಡಿದರೆ ಮರುಗುವ ಗುಣವಿದೆ, ನೊಂದವರಿಗೆ ನೆರವು ನೀಡುವ ಮನಸ್ಸಿದೆ, ಬುದ್ದಿವಂತಿಕೆ ಇದೆ, ವಿದ್ಯೆ ಪ್ರತಿಭೆಗಳಿವೆ, ಆದರೂ ಅವರನ್ನು ಮನುಷ್ಯರಂತೆ ಕಾಣಲು ಜನರು ಹಿಂಜೆರೆಯುತ್ತಾರೆ, ಏಕೆ? ಅವರಿಗೂ ಜೀವನದಲ್ಲಿ ಸಹಜವಾಗಿ ಸಹ-ಬಾಳ್ವೆ ನಡೆಸಲು ನಾಗರಿಕ ಸಮಾಜ ಒಪ್ಪುತ್ತಿಲ್ಲ ಏಕೆ? ಅವರ ಮೇಲಿನ ತಪ್ಪು ತಿಳುವಳಿಕೆಯೇ ಅಥವಾ ಅವರ ಬಗೆಗಿನ ಅವ್ಯಕ್ತ ಭಯವೇ? ಇತಿಹಾಸದ ಅನಾದಿ ಕಾಲದಿಂದಲು ಶಿಖಂಡಿ, ನಪುಂಸಕ ಎಂದು ಕರೆಸಿಕೊಳ್ಳುತ್ತಿದ್ದ ವ್ಯಕ್ತಿಗಳು ಇರುವುದನ್ನು ಓದಿದ್ದೇವೆ ಮತ್ತು ಕೇಳಿದ್ದೇವೆ. 

ರಾಜ-ಮಹಾರಾಜರು ಅಂತ:ಪುರಗಳನ್ನು ಕಾಯಲು ನಪುಂಸಕರನ್ನು ನೇಮಿಸಿಕೊಳ್ಳುತ್ತಿದ್ದರಂತೆ, ಇದರಿಂದ ಅಂತಃಪುರದಲ್ಲಿ ರಾಣಿಯರ ಮೇಲೆ ಲೈಂಗಿಕ ಅತ್ಯಾಚಾರವಾಗುವುದಿಲ್ಲವೆಂಬ ನಂಬಿಕೆಗಳಿಂದ ಪಾಶ್ಚಿಮಾತ್ಯರು ಈ ಗುಂಪುಗಳನ್ನು ಸಂಗೀತ ಬಳಗಳಲ್ಲಿ ಸೇರಿಸಿಕೊಳ್ಳುತ್ತಿದ್ದರು. ದೇಶದಲ್ಲಿನ ಹಲವಾರು ಶಿಲ್ಪಕಲೆಗಳಲ್ಲಿ ಶಿಖಂಡಿಗಳ ಚಿತ್ರಣವಿರುವುದನ್ನು ನೋಡಬಹುವುದು, ಇಂತಹ ಗುಂಪುಗಳಿಗೆ ಯಾವುದೋ ಅಗೋಚರ ಶಕ್ತಿ ಇದೆ. ಅದರಿಂದ ಅವರು ಸಾಮನ್ಯ ಜನರನ್ನು ಆಶೀರ್ವದಿಸುವ ಸಾಮರ್ಥ್ಯವನ್ನು ಪಡೆದಿರುತ್ತಾರೆ ಎಂದೆಲ್ಲಾ ನಂಬಿದ್ದರು. ಇಂಥವರಿಗೆ ನಮ್ಮ ಸಮಾಜದಲ್ಲಿ ನಮ್ಮೆಲ್ಲರ ಮಧ್ಯ ಬದುಕಲು ಅವಕಾಶಕೊಡಿ ಅವರೇನು ಹುಟ್ಟುವಾಗಲೇ ಯಾರು ತೃತೀಯ ಲಿಂಗಿಯಾಗಿರಬೇಕು ಎಂದು ಬೇಡಿಕೊಂಡು ಹುಟ್ಟಿರುವುದಿಲ್ಲ. ಹುಟ್ಟುತ್ತಾ ಮಗುವಾಗಿ ಬೆಳೆ-ಬೆಳೆಯುತ್ತಾ ತಿಳಿದು-ತಿಳಿಯದೊ ಮನಸ್ಸಿನ ಮೇಲೆ ಯಾವುದೊ ಪರಿಣಾಮ ಬೀರಿ, ಚಲನ-ವಲನಗಳು ಬದಲಾವಣೆ ಗೊಂಡು ಕೊನೆಗೆ ತೃತೀಯ ಲಿಂಗಿಗಳಾಗಿ ಪರಿವರ್ತನೆಯಾಗುತ್ತಾರೆ. ಇವರು ಹೀಗೆ ಆಗುವುದಕ್ಕೆ ತಂದೆ-ತಾಯಿ, ಸಮಾಜ ಹೊಣೆಯಲ್ಲ ಅದು ಮಾನವ ಜೀವಿಯಲ್ಲಿ ಹೇಗೆ ಗಂಡು-ಹೆಣ್ಣುಗಳೆಂಬ ಜಾತಿಗಳಿವೆಯೊ ಹಾಗೆಯೇ ತೃತೀಯ ಲಿಂಗಿಗಳು ಸಹ ಪ್ರಕೃತಿ ಸಹಜ ಮನುಷ್ಯ ಜಾತಿಯಷ್ಟೇ. ಅದನ್ನು ಉಳಿದವರು ಅದನ್ನು ವಿಚಿತ್ರವೆಂದು ಪರಿಗಣಿಸದೆ, ಮುಕ್ತ ಮನಸ್ಸಿನಿಂದ ಸ್ವೀಕರಿಸಬೇಕು. ಆದರೆ ನಮ್ಮೊಂದಿಗೆ ಸಹಜ ಜೀವನ ನಡೆಸದಂತೆ ಸಮಾಜ ಪ್ರಭಾವ ಬೀರುತ್ತದೆ.  ಹುಟ್ಟಿದ ಮನೆಯಲ್ಲಿ ತಂದೆ-ತಾಯಿ, ಅಣ್ನ-ತಮ್ಮ, ಬಂದು-ಬಳಗದೊಂದಿಗೆ ಜೀವನ ಮಾಡಲು, ನೆರೆ-ಹೊರೆಯವರು ಮಾತನಾಡುವ ಕೊಂಕು ಮಾತಿನಿಂದ ಮನನೊಂದು ಒಂಬತ್ತು ತಿಂಗಳು ಹೊತ್ತು-ಹೆತ್ತು ಬೆಳೆಸಿದವರ ಮನಸ್ಸಿನಲ್ಲಿ ಯಾವುದೊ ತಳ-ಮಳ ಮೂಡುವ ಮನಸ್ಥಿಯನ್ನು ನಮ್ಮ ಸಮಾಜ ನಿರ್ಮಿಸುತ್ತದೆ, ಎಂದರೆ ಎಂತಹ ವಿಪರ್ಯಾಸ ನೋಡಿ.
    
ಶಿಕ್ಷಣ ಪಡೆಯುವ ಹಾದಿಯಲ್ಲಿ, ಶಾಲಾ ಕಾಲೇಜುಗಳಲ್ಲಿ ಜೊತೆಗಾರರ ಗೇಲಿಗೊಳಗಾಗಿ ಶಿಕ್ಷಣ ಮುಂದುವರಿಸಲು ಆಗವುದಿಲ್ಲ. ಉದ್ಯೋಗ ಸ್ಥಳಗಳಲ್ಲಿ ಸಹೊದ್ಯೋಗಿಗಳ ಮೂದಲಿಕೆ ತಾತ್ಸಾರಗಳಿಂದಾಗಿ ಕೆಲಸ ಮಾಡಲಾಗದೆ, ಜೀವ ನಿರ್ವಹಣೆಗೆ ಬಿಕ್ಷೆ ಬೇಡುವುದು ಅನಿವಾರ್ಯವಾಗಿದೆ. ತೃತೀಯ ಲಿಂಗಿಗಳ ಲೈಂಗಿಕತೆಯ ಬಗ್ಗೆ ಅಮೇರಿಕಾದ ಪ್ರಖ್ಯಾತ ಲೈಂಗಿಕ ವೈದ್ಯಕೀಯ ತಜ್ಞ ಡಾ|| ಆಲ್ಪ್ರೇಡ್ ಕಿನ್ಸೆ ಇವರು ಮೊದಲ ಬಾರಿಗೆ ಲೈಂಗಿಕ ಅಲ್ಪಸಂಖ್ಯಾತರ ಸಂಖ್ಯೆ, ಸಲೀಂಗ ಕಾಮಿಗಳ ಸಂಖ್ಯೆ, ಅವರ ವರ್ತನೆ, ಇವುಗಳ ಬಗ್ಗೆ ಅಧ್ಯಯನ ಮಾಡಿ ಅವರ ಪ್ರಕಾರ ಒಂದು ಅಳತೆ ಮಾಪಕದಲ್ಲಿ ಸೊನ್ನೆಯಿಂದ ಆರರ (೦-೬)ವರೆಗೆ ವ್ಯಕ್ತಿಗಳನ್ನು ವಿಂಗಡಿಸಿದಾಗ ’೦’ ಶ್ರೇಣಿಯಲ್ಲಿ ವಿಬಿನ್ನ ಲಿಂಗಿಗಳು ’೬’ ಶ್ರೇಣಿಯಲ್ಲಿ ಪರಿಪೂರ್ಣ ಸಲೀಂಗ ಹಾಗು ಇವೆರಡರ ನಡುವಿನ ಶ್ರೇಣಿಗಳಲ್ಲಿ ವಿವಿಧ ತೀವ್ರತೆಯ ದ್ವಿಲಿಂಗ ವರ್ತನೆ ಕಂಡು ಬರುತ್ತದೆ ಎಂದು ತಿಳಿಸಿದ್ದಾರೆ. ಭಾರತದಲ್ಲಿ ಹೈದರಾಬಾದ್ ಪ್ರದೇಶವನ್ನುಳಿದಂತೆ ಇನ್ನಿತರ ಪ್ರದೇಶಗಳಲ್ಲಿ ಅವರಿಗೆ ಮಾನ್ಯತೆ ಕಡಿಮೆ ಅವರನ್ನು ತಿರಸ್ಕರಿಸಿ ಬಹಿಷ್ಕರಿಸುವವರೆ ಹೆಚ್ಚು. ಉತ್ತರ ಭಾರತದಲ್ಲಿ ಅನೇಕ ಕಡೆ ಹಿಜಡಾಗಳು ರಾಜಕೀಯಕ್ಕೆ ಬಂದಿರುವುದು ಕಾಣಬಹುದು. ಗ್ರಾಮ ಪಂಚಾಯ್ತಿ ಸದಸ್ಸತ್ವದಿಂದ ಹಿಡಿದು ವಿಧಾನ ಸಭಾ ಸದಸ್ಸತ್ವದವರೆಗೂ ಅವರು ಹಬ್ಬಿರುವುದು ಒಂದು ಉತ್ತಮ ಬೆಳವಣಿಗೆ.

ಇತ್ತೀಚೆಗೆ ಕರ್ನಾಟಕದಲ್ಲಿಯೂ ಮಂಗಳ ಮುಖಿಯೊಬ್ಬರು ೨೦೧೪ ರಲ್ಲಿ ನಡೆದ ಸಂಸದ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗಳಿಗೆ ನೇರ ಪೈಪೋಟಿ ನೀಡಿರುವುದು ಉತ್ತಮ ಬೆಳವಣಿಗೆ. 

ಕೆನಾರ ಬ್ಯಾಂಕ್‌ನವರು ರಾಜ್ಯದ್ಯಾಂತ ಜಿಲ್ಲಾ ಕೇಂದ್ರಗಳಲ್ಲಿ ನಿರುದ್ಯೋಗಿ ಯುವ ಜನತೆಗೆ ಕಂಪ್ಯೂಟರ್, ಟೈಲರಿಂಗ್, ಮೋಟ್ರು ರಿಪೇರಿ, ಮೋಬೈಲ್ ರಿಪೇರಿ, ಟಿವಿ ರಿಪೇರಿ, ಪೋಟೋ-ವಿಡಿಯೋಗ್ರಫಿ ಹೀಗೆ ಹತ್ತಾರು ತರಬೇತಿಗಳನ್ನ್ನು ನೀಡಿ ತರಬೇತಿ ಪಡೆದವರಿಗೆ ಬ್ಯಾಂಕ್ ಸಾಲ ನೀಡಿ ಸ್ವಲ್ಪವಾದರೂ ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ತೋಳುಣುಸೆ ಗ್ರಾಮದಲ್ಲಿರುವ ಕೆನಾರ ಬ್ಯಾಂಕ್ ತರಬೇತಿ ಕೇಂದ್ರದಲ್ಲಿ, ಇತ್ತೀಚಿಗೆ ಒಂದೇ ಬಾರಿಗೆ ೪೦ ಜನ ಮಂಗಳ ಮುಖಿಯರಿಗೆ ವಿವಿಧ ತರಬೇತಿಗಳನ್ನು ನೀಡಿ ಸ್ವಾಲಂಬಿಗಳಾಗಿ ಜೀವನ ನಡೆಸುವಂತೆ ದಾರಿ ತೋರಿಸಿದೆ.               

ಸರಕಾರ ಕೇವಲ ನಿರುದ್ಯೋಗ ಯುವಕ, ಯುವತಿಯರಿಗೆ ಮಾತ್ರ ಉದ್ಯೋಗ ತರಬೇತಿ, ಶಿಕ್ಷಣ, ಧನ ಸಹಾಯ, ಈ ರೀತಿ ಹಲವಾರು  ಕಾರ್ಯಕ್ರಮಗಳನ್ನು ಹಾಕಿಕೊಂಡು ಉದ್ಯೋಗ ತರಬೇತಿ  ನೀಡಿ ಸಹಾಯ ಧನ ನೀಡಿದರೆ ಸಾಲದು. ಮಂಗಳ ಮುಖಿಯರು ಮಾನವ ಜಾತಿಗೆ ಸೇರಿದವರು ಇವರಿಗೂ ಪ್ರತ್ಯೇಕ ಸೌಲಭ್ಯ ಒದಗಿಸಿ ಮಾನವೀಯತೆಗೆ ಸ್ಪಂದಿಸಲಿ,  ಅವರು ನಮ್ಮೆಲ್ಲರಂತೆ ಬದುಕು ಕಟ್ಟಿಕೊಳ್ಳಲಿ. ನಗರ ಪ್ರದೇಶಗಳಲ್ಲಿ ಪ್ರತ್ಯೇಕ ಶೌಚಾಲಯಗಳಿಲ್ಲದೆ ಪರದಾಡುತ್ತಾರೆ, ಯಾಕೆ ಇವರ ಮೇಲೆ ತಾತ್ಸಾರ ದೋರಣೆ. ಸರ್ಕಾರ ಕೂಡಲೆ ಎಚ್ಚೆತ್ತುಕೊಂಡು ಸೌಲಭ್ಯ ಒದಗಿಸದಿದ್ದರೆ ರೈಲುಗಳಲ್ಲಿ, ಹೈವೆ ರೋಡುಗಳಲ್ಲಿ, ಬಸ್ ಸ್ಟಾಪ್‌ಗಳಲ್ಲಿ, ನಗರದ ಬೀದಿ-ಬೀದಿಗಳಲ್ಲಿ ಬಿಕ್ಷೆ ಬೇಡುವುದು ಹೆಚ್ಚು ನೋಡ ಬೇಕಾಗುತ್ತದೆ.         

ಸರ್ವ್ರೋಚ್ಚ ನ್ಯಾಯಾಲಯವು ಏಪ್ರಿಲ್ ೧೫/೨೦೦೧೪ ರಂದು ಟ್ರಾನ್ಸ್‌ಜೆಂಡರ್ ಹಕ್ಕುಗಳಿಗೆ ಮಾನ್ಯತೆ ನೀಡಿ ಅವರ ಹಕ್ಕುಗಳಿಗೆ ರಕ್ಷಿಸಲು ಮತ್ತು ಅವರ ಅಬಿವೃದ್ಧಿಗಾಗಿ ಕೇಂದ್ರ ಹಾಗು ರಾಜ್ಯ ಸರಕಾಗಳನ್ನು ನಿರ್ದೇಶಿಸಿದೆ, ಆದರೂ ಯಾವುದೇ ರೀತಿಯ ಅಬಿವೃದ್ದಿ ಕಾಣುತ್ತಿಲ್ಲ. ಮಾನವಿಯತೆ ಇಲ್ಲದಿದ್ದರು ನ್ಯಾಯಾಲದ ತೀರ್ಪನ್ನಾದರು ಪಾಲಿಸಿ ಅಭಿವೃದ್ದಿಪಡಿಸಬೇಕಾಗಿದೆ. ಪ್ರಸ್ತುತ ದಿನಮಾನದಲ್ಲಿ ಕರ್ನಾಟಕ ಸರ್ಕಾರವು ಕನ್ನಡ ರಾಜ್ಯೋತ್ಸವದ ಅಂಗವಾಗಿ ಮಂಗಳಮುಖಿ ಅಕ್ಕಯ್ಯ ಪದ್ಮಶಾಲಿ ಇವರಿಗೆ  ಸಮಾಜ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿರುವುದನ್ನು ಗುರುತಿಸಿ ಕನ್ನಡ ರಾಜ್ಯೋತ್ಸವದ ಪ್ರಶಸ್ತಿ ನೀಡಿರುವುದು ಸಂತೋಷದ ಸಂಗತಿಯಾಗಿದೆ. ಮೇಘನ ಎನ್ನುವ ಮಂಗಳಮುಖಿ ಬಿಕ್ಷಾಟನೆಯ ಹಣದಲ್ಲಿ ಅನಾಥ ಮಕ್ಕಳಿಗೆ ಹಾಗೂ ವೃದ್ಧರಿಗೆ ಆಶ್ರಮವನ್ನು ನಿರ್ಮಿಸಿ ಮತ್ತು ಅನಾಥ ಮಹಿಳೆಯರಿಗೆ ಪಿಂಚಣಿ ನೀಡುತ್ತಿದ್ದು ಸರ್ಕಾರ ನಾಚುವಂತೆ ಮಾಡಿ ಸಮಾಜಮುಖಿ ಕಾರ್ಯಕ್ರಮಗಳನ್ನ ಮಾಡುತ್ತಿರುವ ಮೇಘನನಿಗೆ ಒಂದು ಸಲಾಮು. ಅನಿಕೇತನ ಕನ್ನಡ ಬಳಗ ಮೇಘನ ಅವರ ಪರೋಪಕಾರವನ್ನು  ಗುರುತಿಸಿ ಪೂರ್ಣಚಂದ್ರ ತೇಜಸ್ವಿ  ಪ್ರಶಸ್ತಿ ನೀಡಿರುವುದು ಹೆಮ್ಮೆಯ ವಿಷಯ. ಈ ಪ್ರಶಸ್ತಿಯು ಕನ್ನಡ ಸಾಹಿತ್ಯಕ್ಕೆ ಗಣನೀಯ ಸೇವೆ ಸಲ್ಲಿಸಿದವರಿಗೆ ನೀಡುತ್ತಿರುವ ಪ್ರಶಸ್ತಿ, ಈ ಬಾರಿ ಸಮಾಜ ಮುಖಿ ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಿ ಬಾಡುತ್ತಿದ್ದ ಮಂಗಳ ಮುಖಿಯರ ಬಾಳಲ್ಲಿ ನವಚೇತನದ ಚಿಗುರು ಮೂಡಿದಂತಾಗಿದೆ. ಈ ರೀತಿ ಎಷ್ಟೋ ಮಂಗಳ ಮುಖಿಯರು ಒಂದೊಂದು ಕ್ಷೇತ್ರದಲ್ಲಿ ತಮ್ಮದೆಯಾದ ಛಾಪು ಮೂಡಿಸುತ್ತಿದ್ದಾರೆ. ಇಂತ ಸಮುದಾಯಗಳಿಗೆ ಪ್ರಶಸ್ತಿ ನೀಡಿ ಗೌರವ ಕೊಟ್ಟರೆ ಸಾಲದು ಈ ಸಮುದಾಯವನ್ನು ಅಭಿವೃದ್ದಿ ಪಡಿಸುವುದರ ಕಡೆ ಗಮನ ಹರಿಸಬೇಕಾಗಿದೆ. ಸರ್ಕಾರ ಹಾಗೂ ಸಂಸ್ಥೆಗಳು ಮುಂದೆ ಬಂದು  ನೆರವು ನೀಡಿ, ಅವರಿಗೂ ಸಮಾನ ಬದುಕು ಕಲ್ಪಿಸಿ ಮುಖ್ಯ ವಾಹಿನಿಗೆ ತಂದರೆ ಅವರು ಸಮಾನತೆಯ ಬದುಕು ಕಟ್ಟಿ ಕೊಳ್ಳುತ್ತಾರೆ. ಅಲ್ಲವೆ !?.

-ಗುರುರಾಜ್ ಎನ್  


         

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
savitri
savitri
8 years ago

ಸರ್,  ಲೈಂಗಿಕ ಅಲ್ಪ ಸಂಖ್ಯಾತರ ಬಗ್ಗೆ ಚೆಂದ ಬರೆದಿದ್ದೀರಿ. ಈ ಲೇಖನವನ್ನು ಸಾಧ್ಯವಾದರೆ ಯಾವುದಾದರೂ ರಾಜ್ಯ ಮಟ್ಟದ ದಿನಂಪತ್ರಿಕೆಯಲ್ಲಿ ಪ್ರಕಟಿಸಲು ಪ್ರಯತ್ನಿಸಿ. ಇ-ಪತ್ರಿಕೆಗಳ ಓದು ಬಹಳಷ್ಟು ಸಾಮಾನ್ಯ ಜನರಿಗೆ ಲಭ್ಯವಾಗುವುದು ಕಷ್ಟ ಇದೆ..

1
0
Would love your thoughts, please comment.x
()
x