’ನಿಮ್ಮದು ಯಾವ ಧರ್ಮ? ’ 
	’…. ಧರ್ಮವೆ?  ಹಿಂದೂ ಇರಬಹುದು’ 
	ಆಕೆ ನನ್ನ ಮುಖವನ್ನು ವಿಚಿತ್ರವಾಗಿ ನೋಡಿದಳು. 
	’ಇರಬಹುದು , ಅಂದರೆ ಏನು ಸಾರ್ ಸರಿಯಾಗಿ ಹೇಳಿ’ 
	ಆಕೆಯ ಮುಖದಲ್ಲಿ ಅಸಹನೆ.
	’ಸರಿ, ಹಿಂದೂ ಎಂದು ಬರೆದುಕೊಳ್ಳಿ’ 
	’ಮತ್ತೆ ಜಾತಿ ಯಾವುದು ಸಾರ್, ಅದರಲ್ಲಿ ಪಂಗಡ ಯಾವುದು ತಿಳಿಸಿ’ 
	’ಜಾತಿಯೆ ? ಯಾವುದೆಂದು ಸರಿಯಾಗಿ ತಿಳಿಯದು. ಪಂಗಡವು ಗೊತ್ತಿಲ್ಲ’ 
	ಆಕೆಗೆ ನನ್ನ ಉತ್ತರದಿಂದ ರೇಗಿಹೋಯಿತು, ಆಕೆಯ ಸಹನೆಯೂ ಮೀರಿಹೋಗಿತ್ತು.
	ಬಿಸಿಲಿನಲ್ಲಿ ಅಲೆಯುತ್ತ ಮನೆಯಿಂದ ಮನೆಗೆ ಸುತ್ತುತ್ತ ಇದ್ದ ಆಕೆಗೆ ಸಹನೆ ಇರಲು ಹೇಗೆ ಸಾದ್ಯ? 
	ಆಕೆ ಮನೆಯಲ್ಲಿ  ಕೆಲಸದವರ ಜೊತೆಗೋ, ಅಥವ ತನ್ನ ಅತ್ತೆಯ ಜೊತೆಗೋ, ಮತ್ಯಾರ ಹತ್ತಿರವೋ ಇರುವ ತನ್ನ ಮಗುವನ್ನು ನೆನೆಯುತ್ತಿರಬಹುದು, ಛೇ! ಆಕೆಯನ್ನು ನೋಡಿದರೆ ತೀರ ದೊಡ್ಡವಳಂತೆ ಕಾಣುತ್ತಿಲ್ಲ, ಮಕ್ಕಳು ಇರಲಿಕ್ಕಿಲ್ಲ.
	ಇಲ್ಲ ಬೆಳೆಗ್ಗೆ ಕುಡಿಯಲು ಹಣ ಕೊಡಲಿಲ್ಲ ಎಂದು ಕೂಗಾಡುತ್ತ ಹೊರಗೆ ಹೋದ ತನ್ನ ಗಂಡನನ್ನು ನೆನೆಯುತ್ತಿರಬಹುದು. 
	ಮತ್ತೇನೊ ಸಂಕಟ ಆಕೆಯನ್ನು ಕಾಡಿಸುತ್ತಿರಬಹುದು. ಹಾಗಿರಲು ನನ್ನ ಉತ್ತರ ಆಕೆಯ ಸಹನೆ ಒಡೆಯುವಂತೆ ಆಗಿದ್ದರಲ್ಲಿ ಆಶ್ಚರ್ಯವಿಲ್ಲ ಅನ್ನಿಸಿತು.
ಸರ್ಕಾರ ಜಾತಿಗಣತಿ ನಡೆಸಲು ನಿರ್ಧಾರಮಾಡಿದೆ ಎಂದು ವೃತ್ತಪತ್ರಿಕೆಗಳಲ್ಲಿ ಓದಿದ್ದೆ. ಈಕೆ ಸರ್ಕಾರದ ಪರವಾಗಿ ನಮ್ಮ ಮನೆಗೆ ಬಂದಿರುವ ಜಾತಿಗಣತಿಯ ಕೆಲಸ ನಿರ್ವಹಿಸುತ್ತಿರುವಾಕೆ, ಶಾಲೆಯಲ್ಲಿ ಶಿಕ್ಷಕಿಯೊ, ಅಥವ ಮತ್ತೇನು ಕೆಲಸದಲ್ಲಿದ್ದಾಳೊ.
	’ಸಾರ್ ತಮಾಷಿ ಮಾಡಬೇಡಿ. ನಮಗೆ ನಿಮ್ಮ ಮನೆಯೊಂದೆ ಅಲ್ಲ. ಇನ್ನೂ ನೂರಾರು ಮನೆಗಳ ಸರ್ವೆ ಮಾಡಬೇಕಿದೆ. ಸರಿಯಾದ ಉತ್ತರ ಕೊಡಿ’ 
	ನಾನು ನಿಧಾನವಾಗಿ ನುಡಿದೆ, 
	’ನಾನು ಸರಿಯಾದ ಉತ್ತರವನ್ನೆ ಕೊಟ್ಟಿದ್ದೇನೆ ಮೇಡಮ್ ’
ಆಕೆಯ ಕಣ್ಣುಗಳು ಬೆಂಕಿ ಉಗುಳಿದವು,
’ನೀವು ರಾಜಕೀಯ ಪಕ್ಷದವರಾ ಸಾರ್ ’
	’ಏಕೆ ಹಾಗೆ ಕೇಳುವಿರಿ?" 
	ನಾನು ಆಶ್ಚರ್ಯದಿಂದ ಕೇಳಿದೆ
	’ಮತ್ತೇನು, ನಿಮಗೆ ಎಲ್ಲವೂ ರಾಜಕೀಯ, ತಮಾಷಿ. ನಮ್ಮಂತಹವರ ಕಷ್ಟಗಳು ತಿಳಿಯುವದಾದರು ಹೇಗೆ ಹೇಳಿ. ಬೆಳಗ್ಗೆಯಿಂದ ಹತ್ತುಮನೆಗಳನ್ನು ಮುಗಿಸಲು ಆಗಿಲ್ಲ. ಒಂದೊಂದು ಮನೆಯಲ್ಲೂ ಕೊಂಕು ನುಡಿಗಳಿಂದ ಮಾತನಾಡುತ್ತಾರೆ.  ನನ್ನ ಪ್ರಶ್ನೆಗಳನ್ನು ಕೇಳುತ್ತ, ಅದು ನನ್ನದೆ ಪ್ರಶ್ನೆಯೋ ಎನ್ನುವಂತೆ ದಾಷ್ಠೀಕದ , ಕೊಂಕಿನ ಉತ್ತರಗಳನ್ನೆ ಕೊಡುತ್ತ ಇದ್ದಾರೆ. ಅಷ್ಟಕ್ಕೂ ಇದು ನಾನು ನಡೆಸುತ್ತಿರುವ ಸರ್ವೆ ಏನಲ್ಲ. ಸರ್ಕಾರ ನಮ್ಮನ್ನು ಕಳಿಸುತ್ತ ಇದೆ, ಇದನ್ನೆಲ್ಲ ಕೇಳಬೇಕಾಗಿರುವುದು ನಮ್ಮ ಡ್ಯೂಟಿ ಹೊರತಾಗಿ, ಇದನ್ನೆಲ್ಲ ಕಟ್ಟಿಕೊಂಡು ನನಗೇನು ಆಗಬೇಕಿಲ್ಲ. ನಿಮಗೆ ಯಾರೊ ಈ ರೀತಿ ಉತ್ತರಗಳನ್ನು ಹೇಳಿ ಎಂದು ಹೇಳಿರುತ್ತಾರೆ ಹೇಳುತ್ತೀರಿ, ಆದರೆ ನಮ್ಮ ಕಷ್ಟಗಳು ನಿಮಗೆ ತಿಳಿಯುವದಿಲ್ಲ’  
	ಆಕೆ ಪಟ ಪಟ ಮಾತನಾಡುತ್ತಿದ್ದಳು, ಕಣ್ಣಂಚಿನಲ್ಲಿ ಒಂದೆರಡು ಹನಿ ನೀರು ಇದ್ದ ಹಾಗಿತ್ತು. 
ನಾನು ಆಕೆಯ ಮಾತಿಗೆ ಏನು ಪ್ರತಿಕ್ರಿಯೆ ನೀಡುವದೆಂದು ತಿಳಿಯದೆ ಸುಮ್ಮನೆ ಕುಳಿತೆ.
	ಆಕೆಯ ಮಾತು ನಿಂತ ನಂತರ ಮೆಲುವಾಗಿ ಕೇಳಿದೆ 
	’ಮೇಡಮ್ ನೀರು ಕುಡಿಯುತ್ತೀರ, ಹೊರಗೆ ಬಾರಿ ಬಿಸಿಲಿದೆ, ದಣಿದಿದ್ದೀರಿ ಅನ್ನಿಸುತ್ತೆ’ 
	ಆಕೆ ನನ್ನ ಮುಖವನ್ನು ಅನುಮಾನದಿಂದ ದಿಟ್ಟಿಸಿದಳು.
	’ಅಗತ್ಯವಿಲ್ಲ ನಾನು ನೀರು ತಂದಿದ್ದೇನೆ ’ 
	ಎನ್ನುತ್ತ ತನ್ನ ಬ್ಯಾಗಿನಿಂದ ನೀರಿನ ಬಾಟಲಿ ತೆಗೆದು ಕುಡಿದು, ಮತ್ತೆ ನುಡಿದಳು
’ನಮ್ಮ ಪ್ರಶ್ನೆಗಳಿಗೆ ಬೇಗ ಬೇಗ ಉತ್ತರ ಹೇಳಿ ಮುಗಿಸಿದರೆ ಸಾಕು, ನಮಗೆ ಮತ್ಯಾವ ಉಪಕಾರವು ಬೇಡ’
ಈಕೆ ಅದ್ಯಾರೋ ಅಗ್ನಿ ನಕ್ಷತ್ರದಲ್ಲಿ ಜನಸಿದವಳು ಇರಬಹುದು ಎನ್ನುತ್ತ ನಗು ಬಂದಿತು. ಆದರೆ ನಗಲು ಹೋಗಲಿಲ್ಲ.
	’ಈಗ ಹೇಳಿ ನಿಮ್ಮ ಜಾತಿ ಯಾವುದು ?’ 
	ಆಕೆ ಮತ್ತೆ ಕೇಳಿದಳು
	’ನಾನು ನಿಜವನ್ನೆ ಹೇಳಿದ್ದೇನೆ ಮೇಡಮ್ ತಿಳಿಯದು ಎಂದು’ ನಾನು ಮತ್ತೆ ನುಡಿದೆ
	’ಹೋಗಲಿ ಬಿಡಿ ನನಗೇನು ಆಗಬೇಕು, ಕಾಲಂಗಳನ್ನು ಗೊತ್ತಿಲ್ಲ ಎಂದು ತುಂಬಿಸುತ್ತೇನೆ. ನಿಮ್ಮಂತಹವರಿಂದ ನಮಗೆ ಕಷ್ಟ ಅಷ್ಟೆ.ಇರಲಿ ಮುಂದಿನ ಪ್ರಶ್ನೆಗೆ ಉತ್ತರಿಸಿ ’ 
	ಆಕೆಯ ಎಲ್ಲ ಪ್ರಶ್ನೆಗಳಿಗೂ ಉತ್ತರಿಸುತ್ತ ಹೋದೆ. 
	’ನಿಮಗೆ ಮದುವೆ ಆಗಿದೆಯ?" 
’ಹೆಣ್ಣು ಹುಡುಕಿಕೊಡುತ್ತೀರ? ’ ಎಂದು ಕೇಳಲಾ ಎಂದುಕೊಂಡವನ್ನು , ಆಕೆಯ ಕೋಪದ ಮುಖ ನೋಡುತ್ತ, ನಗುತ್ತ ಹೇಳಿದೆ
’ಇನ್ನು ಇಲ್ಲ ’
	’ಮಕ್ಕಳು?’  
	ಆಕೆ ಅಭ್ಯಾಸಬಲದಿಂದ ಎನ್ನುವಂತೆ ಕೇಳಿದಾಗ, ನಾನು ಜೋರಾಗಿ ನಕ್ಕುಬಿಟ್ಟೆ, ಆಕೆಗೆ ತಪ್ಪಿನ ಅರಿವಾಯಿತೇನೊ ಸುಮ್ಮನಾದಳು . ಮತ್ತಷ್ಟು ಪ್ರಶ್ನೆಗಳು ಎಲ್ಲಕ್ಕೂ ಉತ್ತರಿಸಿದೆ.
	ಆಕೆ ಕೊಟ್ಟ ಪೇಪರಿನ ಮೇಲೆ ಸೈನ್ ಮಾಡಿಕೊಟ್ಟೆ. ಆಕೆ ಅಲ್ಲಿಂದ ಹೊರಟುಬಿಡುವಳೇನೊ ,ಆಕೆಯನ್ನು ಮಾತನಾಡಿಸಬೇಕು ಅನ್ನಿಸಿತು
’ಮೇಡಮ್ ತಪ್ಪು ತಿಳಿಯಬೇಡಿ, ನಿಮ್ಮದು ಯಾವ ಧರ್ಮ , ಜಾತಿ ?"
’ಅದನ್ನು ಕಟ್ಟಿಕೊಂಡು ನಿಮಗೇನು ಆಗಬೇಕು’ ಆಕೆ ಕಿಡಿಕಾರಿದಳು.
’ಕೋಪಮಾಡಬೇಡಿ ಬಿಡಿ, ಸುಮ್ಮನೆ ಕೇಳಿದೆ, ಧರ್ಮ ಅಥವ ಜಾತಿಗೆ ಆಧಾರ, ನಾವು ಯಾವ ಧರ್ಮದ ತಂದೆ ಅಥವ ತಾಯಿಗೆ ಹುಟ್ಟಿದ್ದೇವೆ ಅನ್ನುವದಲ್ವ?, ಹಾಗಾಗಿ ಕೇಳಿದೆ, ಹೋಗಲಿ ಬಿಡಿ ನಿಮ್ಮ ತಂದೆ ತಾಯಿ ಎಲ್ಲಿ ಇದ್ದಾರೆ?"
	ಪ್ರಶ್ನೆ ಕೇಳಿಬಿಟ್ಟಿದ್ದೆ, ಖಂಡೀತ ಆಕೆ ತಿರುಗಿಬೀಳುವಳು, ಮತ್ತೆ ಆಕೆಯಿಂದ ಬೆಂಕಿಯ ಕಿಡಿಗಳು ಚುಮ್ಮುವುದು ಅನ್ನುವ ನಿರೀಕ್ಷೆಯಲ್ಲಿದ್ದೆ.
	ಆದರೆ ಆಕೆ ಅದೇಕೊ ಸಪ್ಪಗಾಗಿ ಹೋದಳು. 
	’ಇಲ್ಲ ಸಾರ್ ನನಗೆ ತಂದೆ ಅಥವ ತಾಯಿ ಯಾರು ಇಲ್ಲ’ 
	’ಅಂದರೆ ?’ ನಾನು ಕೊಂಚ ಕುತೂಹಲದಿಂದ ಕೇಳಿದೆ.
	’ಅಂದರೆ ನಾನು ಅನಾಥೆ ಎಂದು ಅದನ್ನು ಬಿಡಿಸಿ ಹೇಳಬೇಕೇನು’ ಆಕೆ ಮತ್ತೆ ಸಿಡುಕಿದಳು
	’ಸರಿ ನೀವು ಅನಾಥಾಶ್ರಮದಲ್ಲಿದ್ದೀರಾ?" 
	ನಾನು ಕೇಳಿದಾಗ ಆಕೆ ನನ್ನನ್ನು ಕರುಣೆಯಿಂದ ಎಂಬಂತೆ ನೋಡಿದಳು
	’ಇಲ್ಲ ನಾನು ನನ್ನನ್ನು ಸಾಕಿದವರ ಜೊತೆ ಇದ್ದೇನೆ. ನಾನು ಚಿಕ್ಕಮಗುವಾಗಿರುವಾಗಲೆ ನನ್ನನ್ನು ಆಶ್ರಮದಿಂದ ತಂದು ಸಾಕಿದರು ನನ್ನ ಸಾಕು ತಂದೆ ತಾಯಿ ಅವರ ಜೊತೆ ಇರುವೆ’
	ನನಗೆ ಎಂತದೋ ಒಂದು ಸಮಾದಾನವೆನಿಸಿತು.!
	’ಈಗ ನಿಮ್ಮ ಜಾತಿ ಎಂತದೂ ಎಂದು ನಿಮಗೆ ಹೇಳಲು ಆಗುತ್ತಾ?" ನಾನು ಕೇಳಿದೆ
	’ಇಲ್ಲ ಸರಿಯಾಗಿ ಗೊತ್ತಾಗಲ್ಲ, ಆದರೆ ನನ್ನನ್ನು ಸಾಕಿದ ಅಪ್ಪ ಅಮ್ಮನ ಜಾತಿಯೆ ನನ್ನ ಜಾತಿ ಆಗುತ್ತಲ್ಲ’ ಆಕೆ ನಗುತ್ತ ನುಡಿದಳು. 
	ನಾನು ಹೇಳಿದೆ 
	’ನೋಡಿದಿರಾ, ನಿಮಗೆ ಆ ಅನುಕೂಲವಾದರು ಇದೆ, ಆದರೆ ನನಗೆ ಅದೂ ಇಲ್ಲ, ಹಾಗಿರಲು ನಾನು ಯಾವ ಜಾತಿ ಎಂದು ಹೇಳಲಿ’ 
	ನಾನು ನುಡಿದೆ.
	ಆಕೆ ಸ್ವಲ್ಪ ಕುತೂಹಲದಿಂದ ಎಂಬಂತೆ ಕೇಳಿದರು
	’ಅಂದರೆ ನೀವು ಸಹ ಅನಾಥರೆ ನನ್ನ ರೀತಿ’ 
	’ಹೌದು ನಾನು ಸಹ ಅನಾಥನೆ , ಆದರೆ ನಿಮ್ಮ ರೀತಿ ಅಲ್ಲ, ನಿಮಗೆ ಸಾಕು ತಂದೆ ತಾಯಿ ಇದ್ದಾರೆ ನನಗೆ ಅವರೂ ಇಲ್ಲ. ಹುಟ್ಟಿನಿಂದಲೂ ಒಂಟಿಯೆ. ಚಿಕ್ಕ ವಯಸ್ಸಿನಲ್ಲಿ ಅನಾಥಶ್ರಮದಲ್ಲಿ ಬೆಳೆದೆ. ಹೇಗೋ ಅವರಿವರ ಸಹಾಯದಿಂದ ಓದಿದೆ. ಈಗ  ಕೆಲಸ ಎಂದು ಆದ ಮೇಲೆ, ಚಿಕ್ಕದೊಂದು ಮನೆಮಾಡಿ  ಈ ಊರಿಗೆ ಬಂದು ನೆಲೆಸಿರುವೆ.’
	ನನ್ನ ಉತ್ತರದಿಂದ ಆಕೆಯ ಮುಖ ಸ್ವಲ್ಪಮಟ್ಟಿಗೆ ಕಳೆಗುಂದಿತು. 
	’ಮತ್ತೆ ಧರ್ಮ ಯಾವುದು ಎಂದರೆ ಹಿಂದೂ ಇರಬಹುದು ಎಂದಿರಿಲ್ಲ ಹೇಗೆ?" ಆಕೆ ನಗುತ್ತ ಕೇಳಿದರು
	’ನಿಜ ನಾನು ಅನಾಥ ನನಗೆ ತಂದೆ ತಾಯಿ ಯಾರು ಎಂದು ಸಹ ತಿಳಿಯದು. ಆದರೆ ನಾನು ಯಾವುದೋ ದೇವಾಲಯದ ಬಾಗಿಲ ಮುಂದೆ ರಾತ್ರಿಯೆಲ್ಲ ಅನಾಥನಂತೆ ಮಲಗಿದ್ದನಂತೆ, ನನ್ನನ್ನು ಹೆತ್ತವರೊ ಮತ್ಯಾರೋ ನನ್ನನ್ನು ಅಲ್ಲಿ ಮಲಗಿಸಿ ಹೋಗಿದ್ದರು. ಅನಾಥಾಶ್ರಮದಲ್ಲಿ ತಾತ ಒಬ್ಬರಿದ್ದರು. ಅವರು ಹೇಳುತ್ತಲಿದ್ದರು, ನನ್ನನ್ನು ಆಶ್ರಮಕ್ಕೆ   ಕರೆತಂದಾಗ, ನನ್ನ ಸೊಂಟದಲ್ಲಿ ಉಡಿದಾರ ಒಂದಿತ್ತಂತೆ, ಅದನ್ನು ನೋಡಿ, ತಾತ ಹೇಳಿದರು, ನಾನು ಹಿಂದೂ ಮಗು ಇರಬಹುದು ಎಂದು’ 
	ನಾನು ದೀರ್ಘವಾಗಿ ಹೇಳಿದಾಗ ಆಕೆಗೆ ಅರ್ಥವಾಗಿತ್ತು, ನನ್ನ ಹಿನ್ನಲೆ ಹಾಗು ಕತೆ. 
	ಒಂದು ದೀರ್ಘ ಮೌನ ನಂತರ ಆಕೆ ನುಡಿದರು
	’ಸರಿ ಬಿಡಿ ಅಲ್ಲಿಗೆ ನಾವಿಬ್ಬರು ಅನಾಥರೆ ಅಂತಾಯಿತಲ್ಲ’ 
	ನಾನು ನಗುತ್ತ ನುಡಿದೆ
	’ಇಲ್ಲ ನಾವು ಅನಾಥರು ಆಗಲಾರೆವು’
	’ಹೇಗೆ’ ಆಕೆ ಕಣ್ಣನ್ನು ಅರಳಿಸಿದರು
	’ನೋಡಿ ಯಾರಿಗೆ ತಂದೆ ತಾಯಿಯರು ಇರುವದಿಲ್ಲವೋ, ಅಥವ ನೋಡಿಕೊಳ್ಳುವರು ಇರುವದಿಲ್ಲವೋ, ಅಂತಹವರು ಅನಾಥರು ಅಲ್ಲವೆ ?. ನಿಮಗೆ ಸಾಕು ತಂದೆ ತಾಯಿ ಇದ್ದಾರೆ, ಹಾಗಿರಲು ನೀವು ಅನಾಥರೆ ಅಲ್ಲ. ಇನ್ನು ನನಗೆ ಅನಾಥಶ್ರಮವೆ ತಂದೆ ತಾಯಿ, ಮತ್ತೆ ತಿಳಿದವರು ಹೇಳುವರಲ್ಲ, ’ಅನಾಥೋ ದೈವರಕ್ಷಕಃ ’ ಎಂದು , ಎಲ್ಲರನ್ನು ದೈವಶಕ್ತಿ ಕಾಪಾಡುತ್ತೆ ಅನ್ನುವ ಹಾಗಿದ್ದಲ್ಲಿ, ಯಾರು ಅನಾಥರೆ ಅಲ್ಲ ಅಲ್ಲವೆ. ನನಗೆ ತಿಳಿದಂತೆ ಈ ವಿಶ್ವದಲ್ಲಿ ಅನಾಥ ಎಂದರೆ, ಇರುವನು ಅವನೊಬ್ಬನೆ ನೋಡಿ , ದೇವರು’ ಎಂದೆ ತಮಾಷಿಯಾಗಿ.
	’ಅದೆಂತದು ದೇವರು ಅನಾಥನೆ’ ಆಕೆ ನಗುತ್ತ ಕೇಳಿದರು
	’ಹೌದಲ್ಲವೆ, ನೋಡಿ, ಎಲ್ಲರನ್ನು ಸೃಷ್ಟಿಸಿದ ಆ ದೈವ ಅದ್ಯಾವುದೆ ಆಗಿರಲಿ, ಅವನನ್ನು ಸಾಕಿ ಸಲಹಿದವರು ಯಾರು ಇಲ್ಲ, ಅವನಿಗೆ ಅಥವ ಅವಳಿಗೆ ತಂದೆ ತಾಯಿ ಯಾರು ಇಲ್ಲ, ಅವನಿಗೆ ಕಷ್ಟ ಬಂದರೆ ಸಲಹುವರು ಯಾರು ಇಲ್ಲ ಅಲ್ಲವೆ, ಅಲ್ಲಿಗೆ ದೇವರೊಬ್ಬ ಮಾತ್ರ ಅನಾಥ  ಅಲ್ಲವೆ ?" ಎಂದು ಗಂಭೀರವಾಗಿ ಕೇಳಿದೆ. ಆಕೆ ನಕ್ಕು ಬಿಟ್ಟಳು.
	’ಸರಿ ಮಾತಿಗೆ ಕುಳಿತರೆ ಆಯಿತು, ನನ್ನ ಕೆಲಸವಾದ ಹಾಗೆ ಇದೆ, ಮುಂದಿನ ಮನೆಗೆ ಹೋಗಬೇಕು ಜಾತಿಗಣನೆಯ ಕೆಲಸಕ್ಕೆ’ ಆಕೆ ಎದ್ದರು. ಅದೇಕೊ ಆಕೆ ಹೊರಟು ಹೋಗುತ್ತಾರೆ ಎಂದರೆ ನನ್ನ ಮನ ವಿಹ್ವಲವಾಯಿತು. 
	’ಅಯ್ಯೋ ಹೊರಟು ಬಿಡಬೇಕೆ?" 
	ನನ್ನ ಮನ ಅರ್ಥವಾದಂತೆ ಆಕೆ ನುಡಿದರು
	’ಹೌದಲ್ಲ ಹೋಗಬೇಕು. ಮತ್ತೆ ಸಿಗೋಣ’ 
	ಮತ್ತೆ ಸಿಗೋಣ ಅನ್ನುವಾಗ ಆಕೆಯ ಮುಖ ಸ್ವಲ್ಪ ಕೆಂಪಾದಂತೆ ಅನ್ನಿಸಿತು. 
	ಮತ್ತೆ ಸಿಗೋಣ ಎನ್ನುವ ಆಕೆಯ ಮಾತು ನನಗೆ ಎಂತದೋ ಒಂದು ಹುರುಪು ತುಂಬಿತು. 
	ಮತ್ತೆ ಸಿಗೋಣ ಎನ್ನುವ ಆಕೆಯ  ಮಾತು ಮುಂದಿನ ಜೀವನ ಹಲವು ಕನಸುಗಳಿಗೆ ಬೀಜದಂತೆ ನನಗೆ ಭಾಸವಾಯಿತು.
	ಒಂದು ರೀತಿಯ ಉಲ್ಲಾಸ ಉತ್ಸಾಹ ನನ್ನ ದೇಹ ಮನಸು ಹೃದಯಗಳನ್ನೆಲ್ಲ ವ್ಯಾಪಿಸಿತು. 
-ಮುಗಿಯಿತು.
*****
					
ಸೂಪರ್ ಪಾರ್ಥಸಾರಥಿಗಳೆ. ಓದುತ್ತೋದುತ್ತಾ ಕಣ್ಣಾಲಿಗಳು ತುಂಬಿ ಬಂದವು 🙁
ಮೆಚ್ಚುಗೆಗೆ ವಂದನೆಗಳು ಪ್ರಶಸ್ತಿ.ಪಿ , ಹೀಗೆ ಸರ್ಕಾರದ ಜಾತಿನೊಂದಣಿಯ ಮತ್ತೊಂದು ಮುಖ ಅಷ್ಟೆ
ಕಥೆಯ ಅಂತ್ಯದಲೊಂದು ಆರಂಭ ಕಾಣುತಿದೆ. ಇದೇ ಉದಯ ರಾಗ…
ಹಲವು ಪ್ರಶ್ನೆಗಳನು ಹುಟ್ಟು ಹಾಕಿದ ಬರಹ. ಜನ್ಮಕೊಂದು ಜಾತಿಯೇ? ಅಥವ ಆಚರಿಸುವ ಕರ್ಮಕೊಂದು ಜಾತಿಯೇ?
ಚರ್ಚಾಸ್ಪದ….