ಹಬ್ಬಗಳ ಆಚರಣೆ – ಆರೋಗ್ಯ: ಕೆ ಟಿ ಸೋಮಶೇಖರ ಹೊಳಲ್ಕೆರೆ.

somashekar-k-t

ನಮ್ಮ ಪೂರ್ವಜರು ಪುರಾತನ ಕಾಲದಿಂದಲೂ ಹಬ್ಬ ಹರಿದಿನಗಳ ಆಚರಣೆಗೆ ತಂದಿರುವುದು ಬಹಳ ಔಚಿತ್ಯಪೂರ್ಣವೂ, ಆರೋಗ್ಯಪೂರ್ಣವೂ ಆಗಿದೆ. ಜತೆಗೆ ಆಚರಣೆ ವಿಧಾನಗಳು, ರೀತಿ ನೀತಿಗಳು ಅಷ್ಟೇ ಮಹತ್ವ ಪಡೆದಿವೆ. ಈ ದೃಷ್ಟಿಯಿಂದ ನಮ್ಮ ಪೂರ್ವಜರ ಮೆಚ್ಚಬೇಕಾದದ್ದೇ! ಅವು ನಮ್ಮ ಧರ್ಮ, ಸಂಸ್ಕೃತಿ, ಪರಂಪರೆ ಭಾಗವಾಗಿವೆ!

ಹಬ್ಬಗಳ ನೆಪದಲ್ಲಿಯಾದರೂ ಆಗಾಗ ಮನೆ ಧೂಳು ತೆಗೆದು, ಸುಣ್ಣ, ಬಣ್ಣ ಬಳಿಸಿ ಶುಚಿಗೊಳಿಸುತ್ತೇವೆ. ಇದರಿಂದ ಕ್ರಿಮಿ, ಕೀಟಗಳು, ರೋಗಾಣುಗಳು ನಾಶವಾಗುತ್ತವೆ. ಇದರಿಂದ ರೋಗಗಳು ಹರಡದಂತೆ, ಅವು ಬರದನ್ನು ತಡೆಗಟ್ಟಿದಂತೆ ಆಗುತ್ತದೆ. ಮನೆ ಸ್ವಚ್ಛ ಆಗುವುದರಿಂದ ಮನಸ್ಸಿನ ಸಂತೋಷ ಹೆಚ್ಚುತ್ತದೆ. ಬದುಕಿನಲ್ಲಿ ಲವಲವಿಕೆ ತುಂಬುತ್ತದೆ! ಆ ಸಂತೋಷ ಆಯುಷ್ಯವನ್ನು , ಆರೋಗ್ಯವನ್ನು ಹೆಚ್ಚಿಸುತ್ತದೆ!

ಹಬ್ಬ ಎಂದರೆ ಸಂತೋಷ. ರುಚಿರುಚಿಯಾದ ಭಕ್ಷ್ಯ ಭೋಜ್ಯಗಳು, ಆಕರ್ಷಣೀಯ ಉಡುಗೆ ತೊಡುಗೆ ಅಲಂಕಾರಗಳು ಕಣ್ಮನಸೆಳೆಯುತ್ತವೆ! ಸಂತೋಷವನ್ನುಂಟು ಮಾಡುತ್ತವೆ.  ಮಾನವನ ಜೀವನದಲ್ಲಿ ಸಂತೋಷ ಇಲ್ಲದಿದ್ದರೆ ಏಕತಾನತೆ ಉಂಟಾಗಿ ಬದುಕು ನೀರಸವೂ, ನಿಸ್ಸಾರವೂ ಕಳಾಹೀನವೂ, ನಿರುತ್ಸದಾಯಕವೂ ಆಗುತ್ತಿತ್ತು. ಹಾಗೆ ಆಗದಿರಲೆಂದು ಈ ಹಬ್ಬಹರಿದಿನಗಳ ಆಚರಣೆ ಆರಂಭವಾಗಿರಬೇಕು. ಈ ಬದಲಾವಣೆ ಇರದಿದ್ದರೆ ಜೀವನ ಏಕತಾನತೆಯಿಂದ ಬೇಸರುಂಟಾಗುತ್ತಿತ್ತು. ಈ ಹಬ್ಬಹರಿದಿನಗಳು ಏಕತಾನತೆಯನ್ನು ಹೋಗಲಾಡಿಸಿ ಉತ್ಸಾಹ ತುಂಬಿ ಜೀವನ ಪೂರ್ತಿ ಕ್ರೀಯಾಶೀಲವಾಗಿಯೂ, ಲವಲವಿಕೆಯಿಂದಿರುವಂತೆಯೂ ಮಾಡುತ್ತವೆ. ಆದ್ದರಿಂದ ಹಬ್ಬಹರಿದಿನಗಳನ್ನು ಆಚರಿಸುವುದು ಬಹಳ  ಅವಶ್ಯಕ. 

ಈ ಆಚರಣೆಗಳಲ್ಲಿ ಜನ ಸೇರುವುದು ದೇವರ ಮೇಲಿನ ಭಕ್ತಿ ತೋರಿಸುತ್ತದೆ. ಅದು ಒಳ್ಳೆಯದೆ. ಅವರ ಹಾಜರಿ ಒಳಿತಿನ ಪರವಾಗಿರುವುದನ್ನು ಸೂಚಿಸುತ್ತದೆ. ಭಗವಂತ ಎಂದರೆ ಭಕ್ತೋದ್ದಾರ, ದುಷ್ಟ ಸಂಹಾರ, ಶಿಷ್ಟ ರಕ್ಷಕ! ಆದ್ದರಿಂದ ನಾವು ದುಷ್ಟರಾಗದೆ ಸಜ್ಜನರಾಗಬೇಕೆಂಬ ಸಂದೇಶ ಇವು ಕೊಡುವುದರಿಂದ ಜನ ಸಜ್ಜನರಾಗುವ ಪ್ರಯತ್ನ ಮಾಡುತ್ತಾರೆ. ಇದು ಉತ್ತಮ ಸಮಾಜ ನಿರ್ಮಾಣಕ್ಕೆ ಅನುವು ಮಾಡಿಕೊಡುತ್ತದೆ. ಈ ದೃಷ್ಟಿಯಿಂದ ಹಬ್ಬಹರಿದಿನದ ಆಚರಣೆಗಳು ಅವಶ್ಯಕ. ದೇವರ ಮೇಲಿನ ಭಯ ಭಕ್ತಿ ಹೀಗಾಗುವಂತೆ ಮಾಡುವುದು ಒಳಿತಲ್ಲವೆ? ಇದರಿಂದಾಗಿ ದುಷ್ಕೃತ್ಯಗಳು, ಕೊಲೆ, ಸುಲಿಗೆಗಳು, ಭಯೋತ್ಪಾದನೆಗಳು, ಅಪರಾಧಗಳು ಹೆಚ್ಚಾಗದಂತೆ ಈ ದೇವರ ಮೇಲಿನ ಭಯ ಭಕ್ತಿ ತಡೆಯುತ್ತವೆ!  ಸಮಾಜ ಇನ್ನೂ ಅದೋಗತಿಗೆ ಹೋಗುವುದನ್ನು ತಡೆಯುತ್ತವೆ.

ಈ ಹಬ್ಬ ಹರಿದಿನಗಳ ಆಚರಣೆಯ ದಿನದಂದು ಇಂತಿಂತಹ ದವಸಧಾನ್ಯಗಳಿಂದ ತಯಾರಿಸಿದ ಅಡುಗೆಗಳನ್ನು ಸೇವಿಸಬೇಕೆಂದು ಮಾಡಿರುತ್ತಾರೆ. ಅದು ವೈಜ್ಞಾನಿಕ ಮತ್ತು  ಋತುಗಳಿಗೆ ಅನುಗುಣವಾದ ಆಹಾರ ಸೇವನೆಯಾಗಿದೆ. ಅದು ಆ ಋತುವಿನಲ್ಲಿ ಅವಶ್ಯವಾಗಿ ಸೇವಿಸಬೇಕಾಗಿರುತ್ತದೆ. ಜನವರಿ ಅಥವಾ ಫೆಬ್ರವರಿಯಲ್ಲಿ ಕಾಳಮ್ಮನ ಹಬ್ಬ ಅಂತ ಹಳ್ಳಿಗಳಲ್ಲಿ  ಹೆಚ್ಚಾಗಿ ಬಡವರು ಆಚರಿಸುತ್ತಾರೆ. ಹಿಂದೆ ಎಷ್ಟೋ  ಹಳ್ಳಿಗಳಲ್ಲಿ ಬಡವರ  ಮನೆಗಳಲ್ಲಿ ದ್ವಿದಳ ಧಾನ್ಯಗನ್ನು ಹೆಚ್ಚು  ಬಳಸುತ್ತಿರಲಿಲ್ಲ. ಅದರ ಕೊರತೆಯಿಂದ ಅವರಿಗೆ ತೊಂದರೆಗಳು ಆಗುತ್ತಿದ್ದವು. ಅವುಗಳನ್ನು ತಡೆಯುವ ದೃಷ್ಟಿಯಿಂದ ಈ ಥರ ಕಾಳವ್ವನ ಹಬ್ಬ ಯಾರೋ ಒಬ್ಬ ಬುದ್ದಿವಂತ ಇಂಥಾ ಆಚರಣೆ ಹುಟ್ಟು ಹಾಕಲು ಕಾರಣರಾಗಿರಬಹುದು. ಏಕೆಂದರೆ ಅಂದು ದ್ವಿದಳ ಧಾನ್ಯಗಳನ್ನು ಉಪಯೋಗಿಸಿ ಬಗೆಬಗೆಯ ಆಹಾರ ತಯಾರಿಸಿ ಸೇವಿಸಿ ನಲಿಯುವುದು ಕಾಣುತ್ತೇವೆ. ಅವು ಅವರ ದೇಹಕ್ಕೆ ದ್ವಿದಳ ಧಾನ್ಯಗಳ ಕೊರತೆಯಿಂದಾಗಬಹುದಾದ ತೊಂದರೆಯನ್ನು ನೀಗಿಸುತ್ತವೆ!

ಜನವರಿ ತಿಂಗಳ ಮಧ್ಯ ಭಾಗದಲ್ಲಿ ಸಂಕ್ರಾಂತಿ ಬರುತ್ತದೆ. ಆಗ ಚಳಿಗಾಲವಿರುತ್ತದೆ. ಆ ಹಬ್ಬದಂದು ಕೊಬ್ಬರಿ, ಸೇಂಗ, ಕಡಲೆ, ಎಳ್ಳು, ಬೆಲ್ಲ, ಸಕ್ಕರೆ ಅಚ್ಚಿನ ಮಿಶ್ರಣವನ್ನು ಪರಸ್ಪರರು ಹಂಚಿ ಸವಿಯುತ್ತಾರೆ. ಎಳ್ಳು ದೇಹದ ಉಷ್ಣ, ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಆ ಮಿಶ್ರಣ ಶೀತ – ವಾತ ಸಂಬಂಧಿ ಕಾಯಿಲೆಗಳನ್ನು ನಿವಾರಿಸುತ್ತದೆ. ಈ ಋತುವಿನ ಕಾರಣದಿಂದ ದೇಹ ಜಡವಾಗಿ ಕೊಬ್ಬು ನಷ್ಟವಾಗಿರುತ್ತದೆ. ಆ ಮಿಶ್ರಣದ ಸೇವನೆಯಿಂದ ಅದು ಮರು ಸಂಚಯವಾಗುತ್ತದೆ.

ಯುಗಾದಿಯಂದು ಬೇವು – ಬೆಲ್ಲ ಹಂಚಿ ಶುಭ ಕೋರುತ್ತಾರೆ. ಬೇವಿನಲ್ಲಿ ರೋಗ ನಿರೋಧಕ ಶಕ್ತಿ ಹೇರಳವಾಗಿದೆ. ಅದನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಬೆಲ್ಲದಲ್ಲಿ ಸೋಡಿಯಂ, ಕ್ಯಾಲ್ಸಿಯಂ, ಕಬ್ಬಿಣಾಂಶ ಅಧಿಕವಾಗಿರುತ್ತದೆ. ಇದು ಆರೋಗ್ಯ ಪೋಷಕವಾಗಿದೆ. ಶ್ರೀ ರಾಮನವಮಿಯಂದು ಬೆಲ್ಲದ ಪಾನಕ ಹಬ್ಬದ ಆಚರಣೆಯ ಆಹಾರದ ಮುಖ್ಯ ಭಾಗವಾಗಿರುತ್ತದೆ. ಅದರಿಂದ ದೇಹಕ್ಕೆ ಅನುಕೂಲವಾಗುತ್ತದೆ.           

ರಂಜಾನ್ ಮಾಸದಲ್ಲಿ ಉಪವಾಸವಿದ್ದವರು ಖರ್ಜೂರ ಸೇವಿಸುವ ಮೂಲಕ ಉಪವಾಸ ಅಂದು ಅಂತ್ಯಗೊಳಿಸುತ್ತರೆ. ಒಟ್ಟಾರೆ ಉಪವಾಸದ ಪ್ರತಿದಿನ ಖರ್ಜೂರ ಸೇವಿಸುತ್ತಾರೆ. ಇದರಲ್ಲಿ ಕಬ್ಬಿಣ, ಕ್ಯಾಲ್ಸಿಯಮ್, ಮೆಗ್ನೀಸಿಯಂ, ಸೆಲೆನಿಯಮ್, ಕರಗುವ ಮತ್ತು ಕರಗದ ನಾರು, ಸುಕ್ರೋಸ್, ಫ್ರಕ್ಟೋಸ್‌‌, ಗ್ಲೂಕೋಸ್ ಮುಂತಾದವು ಅಗತ್ಯಕ್ಕೆ ತಕ್ಕಷ್ಟು ಪ್ರಮಾಣದಲ್ಲರುತ್ತವೆ. ಉಪವಾಸದ ಅವಧಿಯಲ್ಲಿ ನಷ್ಟವಾದ ಕೊಬ್ಬು, ಶಕ್ತಿಯನ್ನು ಮರು ಸಂಚಯನವಾಗುವಂತೆ ಮಾಡುತ್ತದೆ. ಇದರಲ್ಲಿ ಕರಗುವ ಮತ್ತು ಕರಗದ ನಾರು ಇರುವುದರಿಂದ ಮಲಬದ್ದತೆಯಾಗದಂತೆ ನೋಡಿಕೊಳ್ಳುತ್ತದೆ! ಹೀಗೆ ಆರೋಗ್ಯ ಕಾಪಾಡುತ್ತವೆ. ಹೀಗೆ ಈ ಆಹಾರ ಸೇವನೆ  ದೀರ್ಘ ಉಪವಾಸಾನುಸಾರ ಆರೋಗ್ಯ ವೃದ್ಧಿಸುವಂತೆ ಮಾಡಿರುವುದು ಪೂರ್ವಜರ ಹಿರಿಮೆಯಲ್ಲವೆ? ಪ್ರಯುಕ್ತ ಈ ಹಬ್ಬಗಳ ಆಚರಿಸುವುದು ಸೂಕ್ತ ತಾನೆ? 

ಹಬ್ಬಗಳಲ್ಲಿ ರುಚಿರುಚಿಯಾದ ಆಹಾರ ತಯಾರಿಸಿರುತ್ತಾರೆ. ತಮಗೆ ಇಷ್ಟ ಎಂದೋ, ತುಂಬಾ ರುಚಿಯಾಗಿದೆ ಎಂದೋ ಅತಿಯಾಗಿ ಸೇವಿಸಬಾರದು. ಮಿತವಾಗಿ ಸೇವಿಸಬೇಕು. ಅತಿಯಾದರೆ ಅಜೀರ್ಣ! ಅದರಿಂದ ಅನಾರೋಗ್ಯ! ಹೀಗಾಗಬಾರದು.

'ಅಜೀರ್ಣ ಪ್ರಭಾವಾರೋಗಾಃ' ಎಲ್ಲಾ ರೋಗಗಳಿಗೂ ಅಜೀರ್ಣವೇ ಕಾರಣ ಎಂದು ಆಯುರ್ವೇದ ಹೇಳುತ್ತದೆ.ಆದ್ದರಿಂದ ಹಬ್ಬ ಮುಂತಾದ ದಿನಗಳಂದು ಅದು ಎಷ್ಟು ಪ್ರಿಯಕರ ಆಹಾರವಾಗಲಿ ಮಿತವಾಗಿ ಸೇವಿಸುವುದು ಉತ್ತಮ. ಹಿತ್  ಬುಕ್, ಮಿತ್ ಬುಕ್, ಋತ್ ಬುಕ್ ' ಎಂದು ಆಯುರ್ವೇದದಲ್ಲಿ ಹೇಳಿದೆ. ಆದ್ದರಿಂದ ಹಿತವಾಗಿ ಮಿತವಾಗಿ ಋತುಗಳಿಗೆ ಅನುಗುಣವಾಗಿ ಆಹಾರ ಸೇವಿಸಬೇಕಿದೆ.

ಶಸ್ತ್ರ ವೈದ್ಯನಾದ ಅಲೆಕ್ಲೆಸ್ ಕಾರೆಲ್ ' ಒಚಿಟಿ ಣhe uಟಿಞಟಿoತಿಟಿ ' ಕೃತಿಯಲ್ಲಿ  ಮನುಷ್ಯ ತಿಂಗಳಿಗೆ ಎರಡು ಬಾರಿ ನಿರಾಹಾರನಾಗಿರಲು ಕಲಿತರೆ ಆರೋಗ್ಯದ ನಿಮಿತ್ತ ವೈದ್ಯರ ಬಳಿ ಹೋಗುವ ಅಗತ್ಯವಿಲ್ಲ. ಉಪವಾಸವೇ ದೊಡ್ಡ ಚಿಕಿತ್ಸೆ ಎಂದಿದ್ದಾರೆ.  ಹೊರಗಿರುವ ಕೊಳೆ ಕಣ್ಣಿಗೆ ಕಾಣುತ್ತದೆ. ಅದನ್ನು ಶುಚಿಗೊಳಿಸುವ ಸಾಧನಗಳಿಂದ ಶುಚಿಗೊಳಿಸುತ್ತೇವೆ. ದೇಹದ ಒಳಗಿರುವ ಕೊಳೆ ಕಣ್ಣಿಗೆ ಕಾಣಿಸದು. ಕಂಡರೆ ತಾನೆ ತೊಳೆಯಲು ಹೋಗುವುದು. ಕಾಣದಿದ್ದರೂ ಕಾಣದ ಕೊಳೆಯ ಶುಚಿಗೊಳಿಸುವ ಸಾಧನವೊಂದಿದೆ. ಅದೇ ಉಪವಾಸವೆಂಬ ಅನನ್ಯ ಸಾಧನ!

ನಮ್ಮ ಅನೇಕ ಹಬ್ಬಗಳು ಉಪವಾಸ ವ್ರತದ ಹಿನ್ನೆಲೆಯನ್ನು ಹೊಂದಿವೆ. ಅನೇಕರು ಉಪವಾಸದ ಮಹತ್ವದ ಬಗ್ಗೆ ಹೇಳಿದ್ದಾರೆ. ಒಂದು ವಾರಕ್ಕೆ ಒಂದು ದಿನವಾದರೂ ಉಪವಾಸವಿರುವುದು ಒಳ್ಳೆಯದು ಎಂದು ಕೆಲವರು ಹೇಳಿದರೆ ಮತ್ತೆ ಕೆಲವರು ೧೫ ದಿನಕ್ಕೆ ಒಮ್ಮೆ ಉಪವಾಸವಿರುವುದು ಆರೋಗ್ಯಕ್ಕೆ ಒಳ್ಳೆಯದೆಂದಿದ್ದಾರೆ. ಒಂದು ದಿನ ಅಂದರೆ ೨೪ ಗಂಟೆ ಉಪವಾಸವಿರುವುದರಿಂದ ಜೀರ್ಣಾಂಗಗಳಿಗೆ ವಿಶ್ರಾಂತಿ ದೊರೆತು ಅವು ಪುನಃಚೇತನಗೊಂಡು ಲವಲವಿಕೆಯಿಂದ ಕಾರ್ಯ ನಿರ್ವಹಿಸುತ್ತವೆ. ಪಂಚೇಂದ್ರಿಯಗಳು ಸಹ ಉತ್ಸಾಹದಿಂದ  ಕಾರ್ಯ ನಿರ್ವಹಿಸಲು  ಸಜ್ಜಾಗುತ್ತವೆ! ಆ ಉಪವಾಸದ ಅವಧಿಯಲ್ಲಿ  ಹಬ್ಬಹರಿದಿನಗಳು ಬಂದಾಗ ಮನೆಯ ದೂಳು ಕೊಡವಿ ಶುಚಿಗೊಳಿಸಿದಂತೆ ದೇಹದೊಳಗಿನ ಮಲಗಳು ಹೊರ ಹೋಗಿ ದೇಹ ನಿರ್ಮಲವಾಗುತ್ತದೆ. ಇದರಿಂದ ರೋಗಗಳು ಬರದಂತಾಗುತ್ತವೆ! ಏಕಾದಶಿಯಂದು ಹರಿ ಭಕ್ತರಲ್ಲಿ ಅನೇಕರು ಏಕಾದಶಿ ಉಪವಾಸ ಮಾಡಿ ಆರೋಗ್ಯವಾಗಿರಲು ಪ್ರಯತ್ನಿಸುತ್ತಿದ್ದಾರೆ. ಒಂದು ತಿಂಗಳಿಗೆ ಎರಡು ಏಕಾದಶಿಗಳು ಬರುವುದರಿಂದ ೧೫ ದಿನಕ್ಕೊಮ್ಮೆ ಉಪವಾಸ ಅವರು ಆಚರಿಸಿದಂತಾಗುತ್ತದೆ. ಆ ಮೂಲಕ ಉತ್ತಮ ಆರೋಗ್ಯ ಪಡೆಯಬಹುದು. ರಂಜಾನ್ ಮಾಸದ, ಸಂಕಷ್ಟ ಆಚರಣೆಯ,  ಉಪವಾಸಾಚರಣೆಗಳು ಆರೋಗ್ಯ ದೃಷ್ಟಿಯಿಂದ ಬಹು ಮುಖ್ಯ. ಹಾಗೆ ಕೆಲವರು ಕೊನೆಪಕ್ಷ ಶಿವನ ಮೇಲಿನ ಭಕ್ತಿಯಿಂದ ವರ್ಷಕ್ಕೊಮ್ಮೆಯಾದರೂ ಉಪವಾಸವಿದ್ದು ದೇಹವ  ನಿರ್ಮಲ ಮಾಡಿಕೊಂಡು ಆರೋಗ್ಯವಂತರಾಗಿರಲಿ ಎಂದು ಶಿವರಾತ್ರಿ ಜಾಗರಣೆ ಆಚರಣೆಗೆ ತಂದಿರಬಹುದು. ಆ ಉದ್ದೇಶದಿಂದ ಶಿವರಾತ್ರಿ ಜಾಗರಣೆ ಮಹತ್ವ ಪಡೆದುಕೊಳ್ಳುತ್ತದೆ. ಈ ರೀತಿ ಉಪವಾಸಗಳ ಆಚರಿಸಿ ಆರೋಗ್ಯದಿಂದಿರಿ ಎಂದರೆ ಯಾರೂ ಆಚರಿಸರೆಂದು ಅದಕ್ಕೆ ದೇವರು, ಭಕ್ತಿ, ಸಂಪ್ರದಾಯದ ಸ್ಪರ್ಷ ಕೊಟ್ಟಿರುವುದು. 

ಧ್ಯಾನ ಬಹಳಷ್ಟು ಹಬ್ಬಗಳ, ನಿತ್ಯ ಪೂಜೆಗಳ  ಭಾಗವಾಗಿದೆ. ಭಗವಂತನ ಧ್ಯಾನ ಮಾಡುವುದೆಂದರೆ  ಒಳಿತನ್ನು ಮಾಡುವುದು ಎಂದು ಅರ್ಥ. ಅದು ಒಳ್ಳೆ ಚಿಂತನೆಗೆ, ಧನಾತ್ಮಕವಾದ ಬದುಕ ರೂಪಿಸಿಕೊಳ್ಳಲು ಅನುಕೂಲವಾಗಿದೆ. ಏಕಾಗ್ರತೆಯಿಂದ ಮಾಡಿದ ಧ್ಯಾನ ಆಧುನಿಕ ಬದುಕಿನ ಒತ್ತಡವನ್ನು ಸ್ವಲ್ಪ ದೂರವಾಗಿಸಿ ಶಾಂತಿಯನ್ನು ಒದಗಿಸಿ, ಮಾನಸಿಕ ಆರೋಗ್ಯ ಉಂಟಾಗಲು ಸಹಕಾರಿಯಾಗಿದೆ. ಆದ್ದರಿಂದ ಧ್ಯಾನ ಮಹತ್ವದ್ದಾಗುತ್ತದೆ!  ಒಟ್ಟಾರೆ ಹಬ್ಬಗಳ ಆಚರಣೆಗಳು ಆರೋಗ್ಯದ ದೃಷ್ಡಿಯಿಂದಲೂ ಯೋಗ್ಯ!

* ಕೆ ಟಿ ಸೋಮಶೇಖರ ಹೊಳಲ್ಕೆರೆ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x