ಸ್ನೇಹ ಭಾಂದವ್ಯ (ಭಾಗ 6): ನಾಗರತ್ನಾ ಗೋವಿಂದನ್ನವರ

ಇಲ್ಲಿಯವರೆಗೆ


ಇತ್ತ ರೇಖಾಳ ಮನೆಯಲ್ಲಿ ರಾಧಮ್ಮ ನೋಡ್ರಿ ನಾವು ನಮ್ಮ ರೇಖಾಳಿಗೆ ಮದುವೆ ಮಾಡಬೇಕೂರಿ ಎಂದು ಗಂಡನಿಗೆ ಹೇಳಿದಳು. ಅದಕ್ಕೆ ಶಿವಾನಂದ ಮಾಡೋಣ ಬಿಡು ಈಗ ಅವಳಿಗೇನು ವಯಸ್ಸಾಗಿರೋದು ಎಂದು ಮಾತು ತೇಲಿಸಿದನು. ರೇಖಾಳಿಗೆ ವಾರ್ಷಿಕ ಪರೀಕ್ಷೆಯು ಹತ್ತಿರ ಬಂದಿದ್ದರಿಂದ ಓದುವುದು ಹೆಚ್ಚಾಗಿ ಊರಿಗೆ ಬರಲು ಸಾಧ್ಯವಾಗಲಿಲ್ಲ. ಅವಳು ಸುಧಾಳಿಗೆ ಪರೀಕ್ಷೆಗೆ ಹಾಜರಾಗಲು ಪತ್ರ ಬರೆದಳು. ಅದನ್ನೊದಿದ ಸುಧಾಳಿಗೆ ಗೆಳತಿಗೆ ತನ್ನ ಬಗ್ಗೆ ಇರುವ ಕಾಳಜಿಯನ್ನು ಕಂಡು ರೇಖಾಳ ಬಗ್ಗೆ ಅಭಿಮಾನ ಮೂಡಿತು. ಒಂದು ದಿನ ಅವಳು ಸಮಯ ನೋಡಿ ರಾಜೇಶನಿಗೆ ತಾನು ಪರೀಕ್ಷೆಗೆ ಹದಿನೈದು ದಿನಗಳಿವೆ. ನಾನು ಏನು ಓದಿಯೆ ಇಲ್ಲ. ಅದಕ್ಕೆ ಶಿವಮೊಗ್ಗಕ್ಕೆ ಹೋಗುತ್ತೇನೆ. ಸ್ವಲ್ಪದಿನ ಓದಿಕೊಂಡು ಪರೀಕ್ಷೆ ಮುಗಿಸಿ ಬರುತ್ತೇನೆ ಎಂದಳು. ಅದಕ್ಕೆ ರಾಜೇಶ ಹಾಗೆ ಮಾಡು ಎಂದು ಸಮ್ಮತಿ ಸೂಚಿಸಿದ. ಆದರೆ ಪದ್ಮಾಳಿಗೆ ಮಾತ್ರ ಇದ್ಯಾವುದು ಸರಿಕಾಣಲಿಲ್ಲ. ಈಗ ತಾನೆ ಮದುವೆಯಾಗಿ ಸರಿಯಾಗಿ ಮೂರು ತಿಂಗಳು ಕಳೆದಿಲ್ಲ, ಹಾಯಾಗಿ ಗಂಡ-ಮನೆ ಎಂದು ಇರೋದು ಬಿಟ್ಟು ಓದಬೇಕೂ ಅಂದರೆ ದುಡ್ಡು ದಂಡ ಬೇರೆ ಎಂದು ಮಗನ ಮುಂದೆ ಮಾತಾಡಿದಳು. ಹೋಗಲಿ ಬಿಡಮ್ಮ ಅವಳಿಗೆ ಓದಬೇಕೂಂತ ಆಸೆ. ಅದಕ್ಕೆ ಅಡ್ಡಿ ಮಾಡೋದು ಬೇಡಾ. ಅವಳು ಮದುವೆಗೆ ಮುಂಚೆನೆ ನನ್ನ ಮುಂದೆ ಷರತ್ತು ಹಾಕಿದ್ದಳು. ನಾನು ಅದಕ್ಕೆ ಒಪ್ಪಿಕೊಂಡಿದ್ದೆ. ಈಗ ಬೇಡಾಂದ್ರೆ ಅವಳ ಮನಸ್ಸಿಗೆ ನೋವಾಗುತ್ತದೆ ಎಂದ. ಹೌದಪ್ಪ ಹೆಂಡತಿ ಬಂದದ್ದೆ ತಡ ತಾಯಿಯ ಮಾತು ಅಂದರೆ ನಿನಗೆ ಕಾಲಕಸವಾಯಿತು ಎಂದಳು ಪದ್ಮಮ್ಮ ಹಾಗಲ್ಲಮ್ಮ ಎಂದು ಏನೋ ಹೇಳಲು ಬಾಯ್ತೆರೆಯುವಷ್ಟರಲ್ಲಿ ಪದ್ಮಮ್ಮ ಅಲ್ಲಿ ನಿಲ್ಲದೆ ಹೊರಟು ಹೋದಳು. ಗಂಡನ ಒಪ್ಪಿಗೆಯ ಮೇರೆಗೆ ಶಿವಮೊಗ್ಗಕ್ಕೆ ಹೊರಟು ನಿಂತಳು. ರಾಜೇಶನೇ ಅವಳನ್ನು ಬಸ್ಸ್‌ಗೆ ಹತ್ತಿಸಿ ಬಂದ ಧೀಡಿರೆಂದು ಗೆಳತಿ ಬಂದುದನ್ನು ನೋಡಿ ರೇಖಾಳಿಗೆ ಅತೀವ ಆನಂದವಾಯಿತು. ನೀನು ಬರ್‍ತಿಯೊ ಇಲ್ವೊ ಅಂತ ಅದೆಷ್ಟು ಆತಂಕ ಅಗಿತ್ತು ಗೊತ್ತಾ ಎಂದಳು ರೇಖಾ. ಬರದೇ ಇರ್‍ತಿನಾ ನಿನ್ನ ಪತ್ರ ಬಂದಿದ್ದೆ ತಡಾ ಬಂದ್ಬಿಟ್ಟೆ ಎಂದಳು. ಇರು ಚಹಾ ತರ್‍ತಿನಿ ಎಂದಳು. ರೇಖಾ ನೀನು ನನ್ನ ಮೇಲಿಟ್ಟಿರುವ ಪ್ರೀತಿ-ಅಭಿಮಾನಕ್ಕೆ ನಾನು ನಿನಗೆ ಚಿರಖುಣಿ ಎಂದಳು. ಛೆ ಛೆ ನಮ್ಮಿಬ್ಬರ ಮಧ್ಯೆ ಖುಣದ ಮಾತೇಕೆ ಎಂದಳು ರೇಖಾ.

     ಅದೀರಲಿ ಕಣೆ ನಿನ್ನ ಹೊಸ ಜೀವನ ಹೇಗಿದೆ? ಹೇಗಿದ್ದಾರೆ ನಿನ್ನ ಗಂಡ ಎಂದು ರೇಖಾ ಕೇಳಿದಳು. ಅದಕ್ಕೆ ಸುಧಾ ಅತ್ತೆ ಗಂಡ ಮತ್ತೆ ಮಾವ ಕೂಡ ತುಂಬಾ ಒಳ್ಳೆಯವರು ಕಣೆ. ನನ್ನ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ ಇಂತಹ ಕುಂಟುಬದಲ್ಲಿ ನಾನು ಒಬ್ಬಳಾಗೋಕೆ ತುಂಬಾ ಪುಣ್ಯ ಮಾಡಿದ್ದೆ ಅನಿಸತ್ತೆ. ಅಂದಾಗ ರೇಖಾಳಿಗೆ ತುಂಬಾ ಸಂತೋಷವಾಯಿತು. 

     ಇತ್ತ ಪಕ್ಕದ ಮನೆಯವಳು ಏನ್ರಿ ಪದ್ಮಮ್ಮ ನಿಮ್ಮ ಸೊಸೆ ಶಿವಮೊಗ್ಗಕ್ಕೆ ಓದೊದಿಕ್ಕೆ ಅಂತ ಹೋಗಿದ್ದಾಳಂತಲ್ಲ, ಹೌದ್ರಿ ಹೋಗಿದ್ದಾಳೆ.  ಪರೀಕ್ಷೆ ಮುಗಿಯುತ್ತಲೆ ಬಂದುಬಿಡ್ತಾಳೆ ಎಂದಳು. ಪದ್ಮಮ್ಮ ಸೊಸೆಯಂದಿರಿಗೆ ಅಷ್ಟೊಂದು ಸಲಿಗೆ ಕೊಡಬಾರದು ಕಣ್ರಿ ಆಮೇಲೆ ಮನೆ-ಮಠ ಅಂತೆಲ್ಲ ಬಿಟ್ಟು ಅಲ್ಲೆ ಹಾಯಾಗಿದ್ದು ಬಿಡ್ತಾರ್ರಿ ಎಂದಳು ಸರೋಜ. ಛೆ ಏನು ಮಾತೂಂತ ಆಡ್ತೀರ ಸರೋಜ ನನ್ನ ಸೊಸೆ ಅಪರಂಜಿಯಂತವಳು ಹಾಗೆಲ್ಲ ಮಾಡಲ್ಲ. ಹಾಗಿದ್ದರೆ ಚಿಂತೆ ಇಲ್ಲಾ ಬಿಡಿ ಏನೊ ಒಂದು ಮಾತು ಹೇಳಬೇಕು ಅನಿಸ್ತು ಅದಕ್ಕೆ ಹೇಳಿದೆ. ಪದ್ಮಮ್ಮ ಎನ್ನುತ್ತಾ ಒಲೆಯ ಮೇಲೆ ಹಾಲಿಟ್ಟಿದ್ದಿನಿ ನೋಡಬೇಕು ಹೋಗ್ತಿನಿ ಎನ್ನುತ್ತಾ ಸರೋಜ ಹೊರಟು ಹೋದಳು. ಆದರೆ ಸರೋಜಳ ಮಾತು ಪದ್ಮಳ ಮನಸ್ಸಿಗೆ ನಾಟದೆ ಇರಲಿಲ್ಲ. ರೇಖಾ-ಸುಧಾ ಇಬ್ಬರು ಪರೀಕ್ಷೆಯನ್ನು ಚೆನ್ನಾಗಿಯೆ ಮಾಡಿದರು. ಸುಧಾಳ ಜೊತೆ ರೇಖಾಳು ಊರಿಗೆ ವಾಪಸ್ಸಾದಳು. ಸುಧಾ ಮೊದಲು ತನ್ನ ತವರು ಮನೆಗೆ ಬಂದಳು. ಮಗಳು ಸೂಟಕೇಸ ಹಿಡಿದು ಬಂದದ್ದನ್ನು ನೋಡಿ ಕಾವೇರಮ್ಮ ಗಾಬರಿಯಾದರು. ಏನೇ ಸುಧಾ ಏನಾಯ್ತೇ?  ಅಳಿಯಂದಿರೆಲ್ಲಿ ಎಂದು ಪ್ರಶ್ನೆಗಳ ಸುರಿಮಲೆ ಆರಂಭಿಸಿದಳು. ಅಮ್ಮಾ ಗಾಬರಿಯಾಗಬೇಡಾ ನಾನೀಗ ಶಿವಮೊಗ್ಗದಿಂದ ಬರ್‍ತಾ ಇದ್ದೆನೆ ಏನೇ ನೀನು ಹೇಳ್ತಾ ಇರೋದು ಎಂದಳು ಕಾವೇರಮ್ಮ. ಹೌದಮ್ಮ ರೇಖಾ ಪತ್ರ ಬರೆದಿದ್ದಳು ಪರೀಕ್ಷೆ ಹತ್ತಿರ ಬಂದಿದೆ ಬಾ ಎಂದು ಅದಕ್ಕೆ ನಾನು ರಾಜೇಶನ ಅನುಮತಿ ತೆಗೆದುಕೊಂಡು ಶಿವಮೊಗ್ಗಕ್ಕೆ ಹೋಗಿ ಪರೀಕ್ಷೆ ಮುಗಿಸಿಕೊಂಡು ರೇಖಾ ನಾನು ಜೊತೆಯಾಗಿ ಊರಿಗೆ ಬಂದೀವಿ. ಹೋಗುವಾಗ ಅವಸರದಲ್ಲಿದ್ದುದರಿಂದ ನಿನಗೆ ತಿಳಿಸಲು ಆಗಲಿಲ್ಲಾ ಅಂದಳು. ಆಗ ಕಾವೇರಮ್ಮನಿಗೆ ಸಮಾಧಾನ ಆಯಿತು, ಆದರೂ ನೀನು ಹಿಡಿದ ಹಟಾ ಬಿಡೊದಿಲ್ಲಾ ಬಿಡು ಎಂದಳು.   

ಆಟಕ್ಕೆ ಹೋಗಿದ್ದ ಚಂದ್ರು ಒಳಗೆ ಬಂದ ಅಕ್ಕಳನ್ನು ನೋಡಿ ಸಂತೋಷದಿಂದ ಏನಕ್ಕಾ ಯಾವಾಗ ಬಂದೆ ಹೇಗಿದ್ದಿ ಎಂದು ಕೇಳಿದ ನಾನು ಚೆನ್ನಾಗಿದ್ದೆನೆ. ನೀನು ಹೇಗಿದ್ದಿಯಾ ಎಂದಳು. ನಾನು ಚೆನ್ನಾಗಿದ್ದೆನೆ ಪರೀಕ್ಷೆ ಹೇಗೆ ಮಾಡಿದ್ದಿ ಎಂದಳು. ಪಾಸಾಗುವಷ್ಟು ಬರೆದಿದ್ದೆನೆ ಬಿಡಕ್ಕಾ ಎಂದನು. ಈ ಜನ್ಮದಲ್ಲಿನಿನಗೆ ಬುದ್ಧಿ ಬರೊದಿಲ್ಲ ಬಿಡು ಎನ್ನುತ್ತಾ ಬ್ಯಾಗಿನಿಂದ ಎರಡು ಚಾಕಲೇಟನ್ನು ತಗೆದು ತಗೊ ಚಂದ್ರು ಒಂದು ನನ್ನದು ಇನ್ನೊಂದು ನಿನ್ನ ರೇಖಾ ಅಕ್ಕನದು ಎಂದಳು. ಥ್ಯಾಂಕು ಅಂತ ಹೇಳಕ್ಕಾ ರೇಖಾ ಅಕ್ಕಳಿಗೆ ಎಂದ. ಅಷ್ಟೊತ್ತಿಗೆ ಕಾವೇರಮ್ಮ ಮಗಳನ್ನು ಊಟಕ್ಕೆ ಎಬ್ಬಿಸಿದರು. ಅಕ್ಕಾ-ತಮ್ಮ ಇಬ್ಬರು ಸೇರಿ ಊಟಕ್ಕೆ ಕುಳಿತರು. ಅದೇ ಸಮಯಕ್ಕೆ ವೆಂಕಟಗಿರಿ ಬಂದವನು ಅವರ ಜೊತೆ ಸೇರಿ ತಾನು ಊಟ ಮಾಡಲು ಕುಳಿತ. ಮಗಳ ಕ್ಷೇಮ-ಸಮಾಚಾರವನ್ನೆಲ್ಲ ತಿಳಿದ ವೆಂಕಟಗಿರಿ ಅತ್ತೆ ಮನೆಯಲ್ಲಿ ಮಗಳು ಸುಖವಾಗಿರುವಳು ಎಂದು ತಿಳಿದ ಮೇಲೆ ಸಮಾಧಾನ ಹೊಂದಿದ. ಸಂಜೆ ಸುಧಾ ಗಂಡನ ಮನೆಗೆ ಹೊರಟು ನಿಂತಳು. ಕಾವೇರಮ್ಮ ಮಗಳಿಗೆ ಒಂದು ಕಣಾ ಕೊಟ್ಟು ಕುಂಕುಮ ಹಚ್ಚಿ ಬಿಳ್ಕೊಟ್ಟಳು.

     ಸುಧಾ ಗಂಡನ ಮನೆಗೆ ಬಂದಾಗ ರಾಜೇಶ ಇನ್ನು ಬ್ಯಾಂಕಿನಿಂದ ಬಂದಿರಲಿಲ್ಲ ಮಾವ ವಾಕಿಂಗಗೆಂದು ಹೋಗಿದ್ದರು. ಮನೆಯಲ್ಲಿ ಅತ್ತೆ ದೇವರ ಮುಂದೆ ದೀಪ ಹಚ್ಚುತ್ತಿದ್ದವಳು ಇವಳು ಬಂದುದನ್ನು ನೋಡಿ ಬಾಮ್ಮಾ ಸುಧಾ ಬಾ. ನಿನ್ನ ಪರೀಕ್ಷೆ ಹೇಗಾಯಿತು ಎಂದು ಕೇಳಿದಳು. ಚೆನ್ನಾಗಿ ಆಯಿತು ಅತ್ತೆ ಎಂದಳು. ಸರಿ ಬಾಮ್ಮಾ ಸ್ವಲ್ಪ ಕಾಫಿ ಮಾಡಿ ಕೊಡ್ತಿನಿ ಎಂದಳು. ಬೇಡಾ ಅತ್ತೆ ಅಮ್ಮನ ಮನೆಯಲ್ಲಿ ಮುಗಿಸಿಕೊಂಡು ಬಂದಿದೀನಿ ಎಂದಳು. ಹಾಗಾದರೆ ನೀನು ಊರಿನಿಂದ ಯಾವಾಗ ಬಂದೆಯಮ್ಮಾ ಅಂದಳು ಪದ್ಮಮ್ಮ. ಬೆಳಿಗ್ಗೆನೆ ಬಂದೆ ಅತ್ತೆ ಎಂದಳು. ಪದ್ಮಮ್ಮಳಿಗೆ ಮನಸ್ಸಿನಲ್ಲಿಯೆ ರೋಸಿ ಹೋಯಿತು. ಆದರೂ ಸೊಸೆಗೆ ಈಗೇನು ಅನ್ನುವುದು ಬೇಡವೆಂದು ಸುಮ್ಮನಾದಳು. ರಾಜೇಶ ಬಂದವನು ಸುಧಾಳನ್ನು ಕಂಡು ಸಂತೋಷಪಟ್ಟ. ಏನೇ ಸುಧಾ ಎಷ್ಟು ದಿನವೇ ಹೋಗುವುದು ನಿನ್ನ ಬಿಟ್ಟಿರೋದು ಎಷ್ಟು ಕಷ್ಟಾಂತ ಗೊತ್ತಾ ಎಂದ. ಹೌದೇನು ಎಂದಳು ಸುಧಾ. ನಿನಗೆ ಅನುಮಾನವೇನು ಎಂದ ರಾಜೇಶ. ಹೊಗಲಿ ನಿನ್ನ ಪರೀಕ್ಷೆ ಹೇಗಾಯಿತು ತಿಳಿಸು ಎಂದ ಪರೀಕ್ಷೆ ಚೆನ್ನಾಗಿ ಬರೆದಿದ್ದೆನೆ. ರಿಜಲ್ಟ್ ಫಸಕ್ಲಾಸ್ ಆಗೆ ಆಗುತ್ತದೆ ಎಂದಳು. ಹೌದಾ ಒಳ್ಳೆಯದಾಯಿತು ಬಿಡು. ರೇಖಾ ಪರೀಕ್ಷೆ ಹೇಗಾಗಿದೆಯಮ್ಮ ಎಂದು ರಾಧಮ್ಮ ಕೇಳಿದಳು. ಫಸ್‌ಕ್ಲಾಸಿಗಂತು ಮೋಸ ಇಲ್ಲ. ಇದಾದ ಮೇಲೆ ಮೂರು ವರ್ಷ ಎಲ್.ಎಲ್.ಬಿ. ಓದಿಬಿಟ್ಟರೆ ನಾನು ದೊಡ್ಡ ಲಾಯರ್ ಆಗಿಬಿಡ್ತಿನಿ ಅಂದಳು ರೇಖಾ. ಇನ್ನು ಮೂರು ವರ್ಷ ಓದಬೇಕೆ ಎಂದಳು ರಾಧಮ್ಮ. ನೀನು ಸುಧಾನ ಹಾಗೆ ಮದುವೆ ಆಗಿ ಆಮೇಲೆ ಓದಬಹುದಲ್ಲ ಎಂದಳು ಬೇಡಮ್ಮಾ ನಿನಗಂತು ಯಾವಾಗಲೂ ನನ್ನ ಮದುವೆದೆ ಚಿಂತೆ. ಪಾಪಾ ಸುಧಾನ ನೋಡಮ್ಮ ಅವಳು ಗಂಡನ ಮನೆಯಲ್ಲಿ ಇದ್ದಿದ್ದಕ್ಕೆ ಅವರ ಅನುಮತಿ ಪಡೆದೆ ಪರೀಕ್ಷೆಗೆ ಬರಬೇಕಾಯಿತು. ಒಂದು ವೇಳೆ ಅವರು ಬೇಡಾಂದಿದ್ದರೆ ನನಗೆ ಆ ರಗಳೆಯೆಲ್ಲ ಬೇಡಾ ಎಂದಳು. ಅಂದುಕೊಂಡಂತೆ ಗೆಳತಿಯರಿಬ್ಬರು ಫಸ್ಟ್‌ಕ್ಲಾಸಿನಲ್ಲಿ ಪಾಸಾಗಿದ್ದರು. ಸುಧಾಳಿಗಂತು ತುಂಬಾನೆ ಸಂತೋಷ ಆಗಿತ್ತು. ಅಂದು ರಾಜೇಶ ಸುಧಾಳನ್ನು ಹೊರಗೆ ಸುತ್ತಾಡಲು ಕರೆದುಕೊಂಡು ಹೋಗಿದ್ದ. ರಾಜೇಶ ಸುಧಾಳಿಗೆ ನೀನು ಓದಿ ಏನು ಕೆಲಸ ಮಾಡಬೇಕಾಗಿಲ್ಲ. ಹಾಯಾಗಿ ಇನ್ನು ಮೇಲೆ ಮನೆಯಲ್ಲಿರಬಾರದಾ. ಅಮ್ಮನಿಗೆ ಆದಷ್ಟು ಬೇಗ ಮೊಮ್ಮಗನ್ನ ನೋಡಬೇಕೂಂತ ಆಸೆಯಂತೆ. ಅದಕ್ಕೆ ಸುಧಾ ಇಲ್ಲಾರಿ ನಾನು ಲಾಯರಾಗಬೇಕೂಂತ ಚಿಕ್ಕಂದಿನಿಂದಲೂ ಬೆಳೆದ ಆಸೆ. ಅದು ಈಡೇರುವರೆಗು ನಿಮ್ಮ ಅಮ್ಮ ಕಾಯಿಬೇಕಾಗುತ್ತದೆ. ಮುಂದೆ ರಾಜೇಶ ಏನೂ ಮಾತಾಡಲಿಲ್ಲ ಇಬ್ಬರು ಮೌನವಾಗಿಯೆ ಮನೆಗೆ ಬಂದರು.

     ರೇಖಾ ಮುಂದಿನ ವರ್ಷದ ತರಗತಿಗೆ ಪ್ರವೇಶ ಫಿಯನ್ನು ಕಟ್ಟಬೇಕಾಗಿತ್ತು ಸುಧಾಳನ್ನು ಭೇಟಿಯಾಗಬೇಕು ಎಂದು ಸುಧಾಳ ಮನೆಗೆ ಬಂದಳು. ಮನೆ ಹೊರಗಿನಿಂದಲೆ ಎಷ್ಟು ಸುಂದರವಾಗಿದೆ ಎಂದುಕೊಂಡಳು. ಮನೆಯ ಮುಂದೆ ದೊಡ್ಡದಾದ ಗಾರ್ಡನ, ಮುಂದೆ ಗೇಟೊಂದಿತ್ತು. ಅವಳು ಗೇಟ್ ತೆಗೆದ ಶಬ್ದಕ್ಕೆ ಸುಧಾ ಯಾರಿರಬಹುದು ಎಂದು ಹೊರಗೆ ಬಂದಳು. ರೇಖಾಳನ್ನು ನೋಡಿ ಸಂತೋಷಪಟ್ಟು ಅವಳನ್ನು ಒಳಗೆ ಕರೆದುಕೊಂಡು ಹೋಗಿ ತನ್ನ ಅತ್ತೆಗೆ ಪರಿಚಯಿಸಿದಳು. ಪದ್ಮಮ್ಮ ರೇಖಾಳನ್ನು ನೋಡಿ ಇವಳೇಕೆ ಇಲ್ಲಿಗೆ ಬಂದಳೊ ಇವಳಿಂದಾಗಿಯೆ ಸುಧಾಳಿಗೆ ಮಂಕು ಬಡಿದಿದೆ ಎಂದು ಮನದಲ್ಲಿಯೆ ಶಪಿಸಿದಳು. ಆದರೂ ನಗೆಯ ಮುಖವಾಡ ಧರಿಸಿ ಸುಧಾ ನಿನ್ನ ಗೆಳತಿಯನ್ನು ಒಳಗೆ ಕರೆದುಕೊಂಡು ಹೋಗಮ್ಮ ಒಂದು ಲೋಟ ಕುಡಿಯಲು ಹಾಲು ಕೊಡಮ್ಮಾ ಎಂದು ಉಪಚಾರದ ಮಾತಾಡಿದಳು. ಸುಧಾ ತನ್ನ ಗೆಳತಿಯನ್ನು ಕರೆದುಕೊಂಡು ಒಳಗೆ ಹೋದಳು. ಒಳಗು ಮನೆ ಸುಂದರವಾಗಿತ್ತು. ಮನೆಯನ್ನೆಲ್ಲ ನೋಡುತ್ತಿದ್ದ ರೇಖಾ ನೀನು ಪುಣ್ಯ ಮಾಡಿದ್ದೆ ಕಣೆ. ಒಳ್ಳೆಯ ಅತ್ತೆ-ಮಾವ, ಗಂಡ ಎಲ್ಲಾ ಸಿಕ್ಕಿದ್ದಾರೆ ಎಂದಳು. ಹೌದು ರೇಖಾ ಆ ವಿಷಯದಲ್ಲಿ ನಾನು ಲಕ್ಕಿ ಎಂದಳು. ರೇಖಾ ಬೇಡವೆಂದರೂ ಕೇಳದೆ ಉಪ್ಪಿಟು ಚಹಾ ಕೊಟ್ಟು ಉಪಚರಿಸಿದಳು. ಅಂದ ಹಾಗೆ ನಾನು ಬಂದ ವಿಷಯಾನೆ ಮರೆತುಬಿಟ್ಟಿದ್ದೆ. ಇನ್ನು ಒಂದು ವಾರಕ್ಕೆ ಎಲ್.ಎಲ್.ಬಿ ಮೊದಲನೆಯ ವರ್ಷಕ್ಕೆ ಅಡ್ಮಿಷಣ ಮಾಡಬೇಕಲ್ಲ ಅದಕ್ಕೆ ನಿನಗೆ ತಿಳಿಸೋಣ ಎಂದು ಬಂದೆ ಎಂದಳು. ಒಳ್ಳೆಯದಾಯಿತು ರೇಖಾ ಆಗ ನಾನು ಬರ್‍ತಿನಿ ಎಂದು ಗೆಳತಿಯನ್ನು ಬಿಳ್ಕೊಟ್ಟಳು. 

     ಅತ್ತೆ ಈ ವಾರದಲ್ಲಿ ನಾನು ಕಾಲೇಜಿಗೆ ಹೆಸರು ಹಚ್ಚಿ ಬರಬೇಕು ಅಂದಳು ಸುಧಾ. ಹಚ್ಚಮ್ಮಾ ಹಚ್ಚು ನಿನ್ನ ಗಂಡಾನೆ ಅಪ್ಪಣೆ ಕೊಟ್ಟಿರುವಾಗ ನನ್ನನ್ನು ಏನು ಕೇಳ್ತಿಯಾ ಹೇಗಿದ್ದರೂ ನಾನು ಬೇಯಿಸಿ ಹಾಕಲಿಕ್ಕೆ ಇದ್ದಿನಲ್ಲಾ ನೀನು ಊರೂರು ಸುತ್ತಿದರು ಚಿಂತೆಯಿಲ್ಲ ಎಂದಳು ವ್ಯಂಗ್ಯವಾಗಿ. ಅತ್ತೆಗೆ ತಾನು ಹೋಗುವುದು ಇಷ್ಟವಿಲ್ಲವೆಂದು ಮನವರಿಕೆಯಾಯಿತು ಹಾಗೆ ತುಂಬಾ ಬೇಸರವು ಆಯಿತು. ಅಷ್ಟರಲ್ಲಿ ರಾಜೇಶ ಬಂದ ಏನು ಅತ್ತೆ-ಸೊಸೆಯ ಮಾತು ಜೋರಾಗಿದೆ ಎನ್ನುತ್ತಾ ಒಳಗೆ ಬಂದ. ನೋಡು ನಿನ್ನ ಹೆಂಡತಿ ಕಾಲೇಜಿಗೆ ಹೋಗಬೇಕಂತೆ ಎಂದಳು. ಹೌದಾ ಎಂದ ರಾಜೇಶ ಏನೋ ಹೌದಾ ಅಂತಿಯಾ ನಿನ್ನ ಹೆಂಡತಿ ಬರೆ ಹೊರಗೆ ಸುತ್ತಾಡಲಿ ನಾನು ಅಡಿಗೆ ಮನೇಲಿ ಕೋಳೆತಿನಿ ಎಂದಳು. ಬಿಡ್ತು ಅನ್ನಮ್ಮಾ  ಎಂತಹ ಮಾತಾಡ್ತಿಯಾ ಮತ್ತಿನ್ನೇನೊ ರಾಜೇಶ ಸೊಸೆಯ ಕೈಯಲ್ಲಿ ಅಡಿಗೆ ಮಾಡಿಸಿಕೊಂಡು ಊಟ ಮಾಡುವ ಅದೃಷ್ಟಾನು ಇಲ್ವಲ್ಲೊ. ಸೊಸೆ ಮನೆಗೆ ಬಂದರು ಮಾಡೊದು ತಪ್ಪತಾನೆ ಇಲ್ಲಾ ನನಗೆ ಎಂದಳು. ರಾಜೇಶನಿಗೆ ತಾಯಿಯನ್ನು ಹೇಗೆ ಸಮಾಧಾನ ಮಾಡಬೇಕೊ ತಿಳಿಯಲಿಲ್ಲ. ಅವನು ಸುಧಾಳಿಗೆ ಕಡ್ಡಿ ತುಂಡು ಮಾಡಿದಂತೆ ಹೇಳಿಬಿಟ್ಟ ನೋಡು ಇನ್ನು ನೀನು ಓದಿದ್ದು ಸಾಕು ಇನ್ನಾದರೂ ಮನೆ ಮಠ ಅಂತೆಲ್ಲ ಮನೆಯಲ್ಲಿ ಅಮ್ಮನ ಬೇಕು ಬೇಡಗಳನ್ನು ಗಮನಿಸಿಕೊಂಡಿರು ಎಂದ. ಅಲ್ಲಾರೀ ನಾನು ಇನ್ನು ಓದಬೇಕು. ಎನ್ನುವ ಸುಧಾಳ ಮಾತನ್ನು ತಡೆದು ರಾಜೇಶ ನೀನು ಓದೋದು ಬೇಡಾ ಏನು ಬೇಡಾ ನಾನು ಹೇಳಿದ ಹಾಗೆ ಕೇಳು ಇದೇ ನನ್ನ ಕೊನೆಯ ಮಾತು ಎಂದು ಹೇಳಿಬಿಟ್ಟ. ಸುಧಾ ಅಳುತ್ತಾ ರೂಮಿಗೆ ಓಡಿಹೊದಳು. ಪದ್ಮಮ್ಮಳಿಗೆ ಅದೇ ಬೇಕಾಗಿತ್ತು ಅಂತು ನನ್ನ ಮಾತೇ ನಡೆಯಿತು ಎಂದು ಸಮಾಧಾನ ಪಟ್ಟುಕೊಂಡಳು. ಸುಧಾಳಿಗೆ ಅತ್ತೆಯ ಮೇಲೆ ವಿಪರೀತ ಕೋಪ ಬಂದಿತು. ಇವರೆಷ್ಟು ಸ್ವಾರ್ಥಿಗಳು ಮದುವೆಗೆ ಮುಂಚೆ ಒಂದು ಮಾತು ಮದುವೆಯಾದ ಮೇಲೆ ಇನ್ನೊಂದು ಮಾತು ನಾನು ಮದುವೆಯಾಗಬಾರದಾಗಿತ್ತು. ನಾನೇ ನನ್ನ ಭವಿಷ್ಯವನ್ನು ಹಾಳು ಮಾಡಿಕೊಂಡೆ ಎಂದು ಬಿಕ್ಕಿ ಬಿಕ್ಕಿ ಅತ್ತಳು. ಮರುದಿನ ಅವಳು ರೇಖಾಳ ಮನೆಗೆ ಹೋಗಲು ರೇಡಿಯಾದಳು. ಆದರೆ ಪದ್ಮಮ್ಮ ಅವಳನ್ನು ಎಲ್ಲಿಯೂ ಹೋಗಲು ಬಿಡಲಿಲ್ಲ. ರೇಖಾಳಿಗೆ ಸುಧಾ ಇನ್ನು ಬರಲೇ ಇಲ್ವಲ್ವಾ ಎಂದು ಚಡಪಡಿಸುತ್ತಿದ್ದವಳು ತಾನೇ ಯಾಕೆ ಅಲ್ಲಿಗೆ ಹೋಗಿ ನೋಡಿ ಬರಬಾರದು ಎಂದು ಸುಧಾಳ ಮನೆಗೆ ಬಂದಳು. ಬಾಗಿಲಲ್ಲಿ ಕುಳಿತ್ತಿದ್ದ ಪದ್ಮಮ್ಮ ರೇಖಾಳನ್ನು ನೋಡಿ ಸುಧಾ ಮನೆಯಲ್ಲಿಲ್ಲ ದೇವಸ್ಥಾನಕ್ಕೆ ಹೋಗಿದದಾಳೆ ಎಂದು ಸರಾಗವಾಗಿ ಸುಳ್ಳು ಹೇಳಿದಳು. ಅತ್ತೆ ಯಾರ ಜೊತೆಯೂ ಮಾತಾಡುತ್ತಿರುವುದು ಕೇಳಿಸಿ ಯಾರೆಂದು ನೋಡಲು ಬಂದ ಸುಧಾಳಿಗೆ ರೇಖಾ ಕಂಡಳು. ರೇಖಾ ಎಂದು ಕರೆದ ಧ್ವನಿಗೆ ರೇಖಾ ನೋಡಿದಳು. ಸುಧಾ ಒಳಬಾಗಿಲಲ್ಲಿ ನಿಂತಿದ್ದಾಳೆ ಆಗ ಪದ್ಮಮ್ಮ ಹೇಳಿದ್ದು ಸುಳ್ಳು ಎಂದು ರೇಖಾಳಿಗೆ ಮನವರಿಕೆಯಾಯಿತು. ಸುಧಾ ರೇಖಾಳನ್ನು ಒಳಗೆ ಕರೆದುಕೊಂಡು ಹೋದಳು. ಆಗ ಪದ್ಮಮ್ಮಳಿಗೆ ಕೋಪ ನೆತ್ತಿಗೇರಿತ್ತು. ಅವಳು ಒಳಗೆ ಹೋಗಿ ಏನಮ್ಮಾ ರೇಖಾ ನಿನ್ನ ಗೆಳತಿಯ ಮನೆ ಹಾಳು ಮಾಡಬೇಕೆಂದು ಎಷ್ಟು ದಿನದಿಂದ ಕಾದಿದ್ದೆಯೆ ಎಂದಳು. ಅವಳ ಮಾತಿಗೆ ಸುಧಾ ಅತ್ತೆ ಏನು ಮಾತಾಡ್ತಾ ಇದ್ದಿರಾ ಎಂದಳು ರೋಷದಿಂದ. ಓ ಗೆಳತಿ ಬಂದಳೆಂದು ಆನೆಯಷ್ಟು ಬಲ ಬಂದಿತೆ ನಿನಗೆ ಎಂದು ಬಾಯಿಗೆ ಬಂದಂತೆ ಬಯ್ದಳು. ರೇಖಾಳಿಗೆ ಇದು ಕನಸೊ ನಿಜವೊ ಒಂದು ತಿಳಿಯದಾಯಿತು. ಹಿಂದೊಮ್ಮೆ ಈ ಮನೆಗೆ ಬಂದಾಗ ಇವಳತ್ತೆ ನನ್ನ ಅದೆಷ್ಟು ಆದರದಿಂದ ಕಂಡಿದ್ದಳು. ಆದರೆ ಈಗ ನನ್ನನ್ನು ಅವಮಾನ ಮಾಡುತ್ತಿದ್ದಾಳೆ ಹಿಂದೆ ಇವಳು ನನಗೆ ತೋರಿದ ಗೌರವವೆಲ್ಲ ನಾಟಕ ಎಂದೆನಿಸಿತು ರೇಖಾಳಿಗೆ.

     ಅತ್ತೆ ನನಗೆ ಏನಾದರೂ ಅನ್ನಿ ಪರವಾಗಿಲ್ಲ. ಆದರೆ ನನ್ನ ಗೆಳತಿಗೆ ಅವಮಾನ ಮಾಡಬೇಡಿ ಎಂದೆಲ್ಲಾ ಸುಧಾ ಹೇಳುತ್ತಿದ್ದರೂ ಪದ್ಮಮ್ಮ ಕೇಳಲಿಲ್ಲ. ಸುಧಾ ನಾನು ನಿಮ್ಮ ಮನೆಗೆ ಬರಬಾರದಾಗಿತ್ತು ಬಂದು ತಪ್ಪು ಮಾಡಿಬಿಟ್ಟೆ. ನಾನಿನ್ನು ಹೊರಡುತ್ತೇನೆ ಎಂದಳು. ರೇಖಾ ಪ್ಲೀಸ್ ಹೋಗಬೇಡಾ ಎಂದು ಹೇಳಬೇಕೆಂದರೂ ಸುಧಾಳಿಗೆ ಸಾಧ್ಯವಾಗಲಿಲ್ಲ ಅವಳು ಅಳುತ್ತಾ ಒಳಗೋಡಿದಳು. ರೇಖಾಳಿಗೆ ಸುಧಾಳ ಪರಿಸ್ಥಿತಿ ನೆನೆದು ಅಯ್ಯೋ ಅನಿಸಿತು. ಪಾಪ, ಸುಧಾ ನೀನು ಒಳ್ಳೆಯ ಮನೆ ಸೇರಿದ್ದಿಯಾ ಸಂತೋಷವಾಗಿದ್ದಿಯಾ ಅನಕೊಂಡಿದ್ದೆ ಆದರೆ ನೀನಿಗ ಪರಿಸ್ಥಿತಿಯ ಕೈಗೊಂಬೆಯಾಗಿದ್ದಿಯಾ ಎಂದು ಮನಸ್ಸಿನಲ್ಲಿಯೆ ಅಂದುಕೊಳ್ಳುತ್ತಾ ಮನೆಗೆ ಬಂದಳು. ಸುಧಾಳಿಗೆ ಮಾತ್ರ ಆ ದಿನ ರಾತ್ರಿಯೆಲ್ಲ ನಿದ್ದೆ ಹತ್ತಿರ ಸುಳಿಯದಾಯಿತು. ಅವಳು ತನ್ನ ಸೂಟಕೇಸಿನಲ್ಲಿ ಭದ್ರವಾಗಿರಿಸಿಕೊಂಡಿದ್ದ ಪೇಂಟಿಂಗವೊಂದನ್ನು ತೆಗೆದು ನೋಡಿದಳು. ಅದು ಎರಡು ಹಕ್ಕಿಗಳು ಆಕಾಶದಲ್ಲಿ ಸ್ವಚ್ಛಂದವಾಗಿ ಹಾರಾಡುವ ಚಿತ್ರವದು. ಅದನ್ನು ರೇಖಾ ತನ್ನ ನಿಶ್ಚಿತಾರ್ಥದ ಸಮಯದಲ್ಲಿ ತಮ್ಮ ಸ್ನೇಹದ ಪ್ರತೀಕವಾಗಿರಲಿ ಎಂದು ಕೊಟ್ಟಿರಲಿಲ್ಲವೆ, ಆದರೆ ಅದರಲ್ಲಿ ಇಂದು ಒಂದು ಹಕ್ಕಿ ಮಾತ್ರ ಪಂಜರದಲ್ಲಿ ಬಂಧಿಯಾಗಿ ಇನ್ನೊಂದು ಹಕ್ಕಿ ಮಾತ್ರ ಆಕಾಶದಲ್ಲಿ ಹಾರಾಡುತ್ತಿದೆ ಎಂದೆನಿಸಿತು. ಅವಳಿಗೆ ಆ ಪಂಜರದಲ್ಲಿದ್ದ ಹಕ್ಕಿಗೂ ಸ್ವಚ್ಛಂದವಾಗಿ ಹಾರಾಡುವ ಹಕ್ಕಿಯ ಜೊತೆ ಸೇರಬೇಕೆನಿಸಿತು. ಆದರೆ ಅದು ಸಾಧ್ಯವಾಗಿರಲಿಲ್ಲ ಎಂದೆನಿಸಿತು ಸುಧಾಳಿಗೆ.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x