ಜಿ ಎಸ್ ಎಸ್
	ಎದೆ ತುಂಬಿ ಹಾಡಿದ ಕವಿ
	ನವೋದಯದ ಸಮನ್ವಯ ಋಷಿ
	ಕನ್ನಡಿಗರ ಮನಸ ಗೆದ್ದ ಭಾವಜೀವಿ    
	ಇರುವಷ್ಟು ಕಾಲದಿ ಎದೆ ತುಂಬಿ
	ಮನತುಂಬಿ ತನು ತುಂಬಿ ಹಾಡಿದಾ ಕವಿ
	ಇಲ್ಲದ ದೇವರ ಹುಡುಕದೆ
	ಕಲ್ಲು ಮಣ್ಣುಗಳ ಗುಡಿಯೊಳಗೆ
	ಇಲ್ಲೇ ಇರುವ ಪ್ರೀತಿ-ಸ್ನೇಹಗಳ ಹೊಸೆದು 
	ದೇವರ ದರ್ಶನ ತೋರಿದ ದಾರ್ಶನಿಕ ಕವಿ
	ಹಾಡು ಹಳೆಯದಾದರೇನು ಭಾವ ನವನವೀನ ಎನಿಸಿ
	ಎಂದೆಂದಿಗೂ ಮರೆಯದ ಕಾವ್ಯ ಸೃಷ್ಟಿಸಿ
	ತುಂಬಿದರು ಬತ್ತದ ಅನಂತ ಜೀವನೋತ್ಸಾಹ!!
	ಹೂವು ಅರಳೀತು ಹೇಗೆ ಪ್ರೀತಿ ಇಲ್ಲದಾ ಮೇಲೆ ಎಂದಾ ಕವಿ
	ಯಾವುದೀ ಪ್ರವಾಹವು? ಎನುತಾ
	ಜೀವನದ ಅರ್ಥವ ವಾಸ್ತವದಿ ಹುಡುಕುತ
	ಹೊನ್ನಲ್ಲಿ ಮಣ್ಣ ಕಂಡು ವೇದಾಂತಿ ಯಾಗದೆ
	ಮಣ್ಣಲ್ಲಿ ಹೊನ್ನ ಕಂಡ ಚೈತನ್ಯದ ಚಿಲುಮೆಯಾ ಕವಿ
	ಆಕಾಶದ ನೀಲಿಯ ಬೆಳಕಲ್ಲಿ  ಸ್ತ್ರೀ ಕುಲವ ಗೌರವಿಸಿ
	ಕಾಣದ ಕಡಲಿಗೆ ಹಂಬಲಿಸಿದ ಮನ ಜಾರಿದೆ ಚಿರನಿದ್ರೆಗೆ 
	ಸಾಲದಾಗಿದೆ ಇಂದು ಎನಗೆ ಬಣ್ಣಿಸಲು ಪದ ಸಂಪತ್ತು ಹೇಳಬಲ್ಲೆ ಇಷ್ಟೆ…..
	ಹಣತೆಯ ಕವಿಗೆ ಇದೋ ತಲೆಬಾಗಿ ಕೈ ಮುಗಿವೆ….
	-ಶ್ರೀಮತಿ.ಶೋಭಾಶಂಕರ್, ಹೊಸಪೇಟೆ..
ಕಾವ್ಯ ಕನ್ನಿಕೆ
	ನೀ ತೊರೆದು ತೆರವಾದ  ಹೃದಯದಲಿಂದು
	ಕಾವ್ಯಕನ್ನಿಕೆ ಬಂದು ನೆಲೆಸಿರುವಳು
	ನೀ ಉಳಿಸಿ ಹೋದಂಥ ನೋವುಗಳನೆಲ್ಲ
	ಕವನಗಳಾಗಿ ಹೊರಹರಿಸಿ ಹೃದಯ ಹಗುರಾಗಿಸಿಹಳು
	ನಾವಂದು ಜೊತೆಕಲೆತ ತಾಣಗಳೆ ಇಂದು
	ಸ್ಪೂರ್ತಿಯಾಗಿವೆ ನನ್ನ ಕವಿತೆಗಳಿಗೆ
	ನಿನ್ನೊಲವ ನೆನಪುಗಳೆ ಚೈತನ್ಯವಾಗಿ
	ಉಸಿರನುಣಿಸಿವೆ ಸೋತ ಭಾವಗಳಿಗೆ
	ಎಲ್ಲೆಲ್ಲೊ ಅರಸಿದೆನು ನೆಮ್ಮದಿಯ ಹೂವ
	ನನ್ನಲ್ಲೆ ಅರಳಿಸಿತು ಈ ಕಾವ್ಯಭಾವ
	ಭಾವಗಳ ಉಳಿಯೇಟು ತಿಂದಂಥ ಹೃದಯ
	ನೋವಿನಲೆಗಳನುಂಡು ರೂಪಿಸಿತು ಕವಿಯ
	ನಮ್ಮೊಳಗೆ ಮೇಳೈಸಿ ಮರೆಯಾದ ಒಲವಿನ
	ನೆನಪುಗಳೆ ಆವರಿಸಿವೆ ನನ್ನೆಲ್ಲ ಬರಹವನ್ನು
	ಕಾವ್ಯಕನ್ನಿಕೆಯ ಒಡನಾಟದಲೆ ಸಹಿಸುವೆನು
	ನನ್ನೊಡನೆ ನೀನಿರದ ವಿರಹವನ್ನು.
-ವಿನಾಯಕ ಭಟ್,
	
	-: ಯಾರು ನೀನು :-
	ಯಾರು ನೀನು, ನಿನ್ನನೇನೆಂದು ಹೆಸರಿಸಲಿ ನಾನು
	ಮುಖವೇ ಇಲ್ಲದ ನಿನ್ನ ಮಂದಹಾಸಕೆ ಮನಸೋತಿಹೆ
	ನೀನೊಬ್ಬಳೇ ನಿನಗೆ ಸಮವಾಗಬಲ್ಲೆ
	ನಿನ್ನ ಗುರುತು ನನಗಿದ್ದರೂ, ನಾ ನಿನ್ನ ಕಂಡಿಲ್ಲ
	ಎಲ್ಲೆಲ್ಲಿಗೋ ಓಡುವ ಮನ, ನಿನ್ನೆದುರು ನಿಂತಿಹುದು
	ನಿನ್ನ ಹಿಂದೆಯೆ ಸದಾ ಸುತ್ತಿದರೂ ಕಾಣುವವಳಲ್ಲ ನೀನು
	ನೀ ನನ್ನ ಪೂರ್ಣತೆಯ ಪ್ರತೀಕವೊ ಅಥವಾ
	ಅಪೂರ್ಣತೆಯ ಪರಿಣಾಮವೊ, ನೀನೆ ತಿಳಿಸಬೇಕು
	ಕವನ ಕಟ್ಟುವಮಟ್ಟಿಗೆ ನೀನು ನನ್ನಲಿರುವೆ
	ಆದರೂ ಒಂದು ಬಾರಿಯೂ ಕಣ್ಣತುಂಬಲಿಲ್ಲವೆ
	ನಿಜವಾಗಿಯೂ ನೀನಿಲ್ಲವೆ ಅಥವಾ ನಾನು ನಾನಾಗಿಲ್ಲವೆ?
	ಯಾರು ನೀನು, ನಿನ್ನನೇನೆಂದು ಹೆಸರಿಸಲಿ ನಾನು
	-ಶ್ರೀಕಾಂತ ಧಾರವಾಡ.
					

