ಹೇಗಾದರೂ ಮದುವೆ ಪೂರೈಸಬೇಕೆಂದು ಗಟ್ಟಿಮನಸ್ಸಿನಿಂದ ಭಾವನೆಗಳನ್ನು ನಿಗ್ರಹಿಸಿಕೊಂಡಿದ್ದ ಅಯ್ಯರ್ ಕುಟುಂಬವರ್ಗದವರಿಗೆ ಮದುವೆ ಮುಗಿದೊಡನೆ ಮನೆಯೊಡಯನ ಅನುಪಸ್ಥಿತಿಯಲ್ಲಿ ಮದುವೆ ನಡೆಸಿದ ಬಗ್ಗೆ ಪಾಪ ಪ್ರಜ್ಞೆ ಕಾಡತೊಡಗಿತು. ಆವರೆಗೂ ಮಡುಗಟ್ಟಿದ್ದ ಸಂಕಟದ ಕಟ್ಟೆಯೊಡೆದು ಒಂದಿಬ್ಬರು ಮೆಲ್ಲನೆ ಬಿಕ್ಕತೊಡಗಿದರು. ಮದುವೆ ನಡೆದ ಗ್ರೌಂಡ್ ಫ್ಲೋರಿನ ಹಾಲಿನಲ್ಲಿ ಮದುವೆಗೆ ಬಂದಿದ್ದ ಅನೇಕ ಅತಿಥಿಗಳು ಇನ್ನೂ ಕುಳಿತಿದ್ದನ್ನು ಗಮನಿಸಿದ ಮರಳಿಯವರಿಗೆ ಅವರೆದುರು ಮುಜುಗರ ಉಂಟಾಗುವುದು ಬೇಡವಿತ್ತು. ಮದುವೆ ಮಂಟಪದೆದುರು ಹಾಗೆ ಹೆಂಗಸರು ಕುಳಿತು ಅಳುವುದು ವಿವಾಹಿತ ವಧೂವರರಿಗೆ ಶ್ರೇಯಸ್ಸಲ್ಲವೆಂದು ಹೇಳಿ ಎಲ್ಲರನ್ನೂ ಮೂರನೆ ಮಹಡಿಯಲ್ಲಿದ್ದ ಲಾಬಿಗೆ ಸಾಗಹಾಕಿದರು. ಎಲ್ಲರೂ ಮೇಲೆ ಹೋದ ಸ್ವಲ್ಪಹೊತ್ತಿನಲ್ಲೇ ದುಃಖವು ಸಾಂಕ್ರಾಮಿಕವಾಗಿ ಹೆಂಗಸರ ರೋದನ ಮುಗಿಲುಮುಟ್ಟಿತು. ಹೆಣ್ಣಿನ ಮನೆಯವರು ಊಟಕ್ಕೆ ಎಷ್ಟು ಒತ್ತಾಯಮಾಡಿದರೂ ಯಾರೂ ಬ್ಯಾಂಕ್ವೆಟ್ ಹಾಲಿನತ್ತ ಸುಳಿಯುವಂತೆ ಕಾಣಲಿಲ್ಲ. ಸಮಯ ಆಗಲೇ ಎರಡು ಘಂಟೆ ದಾಟಿತ್ತು. ಮದುವೆಗೆ ಬಂದಿದ್ದ ಅತಿಥಿಗಳ ಊಟ ನಡೆಯುತ್ತಿತ್ತಾದರೂ ಗಂಡಿನ ಮನೆಯವರು ಹೀಗೆ ಊಟಕ್ಕೆ ಬರದೆ ಅಳುತ್ತಾ ಕುಳಿತದ್ದು ಕಂಡು ಕೃಷ್ಣಯ್ಯರ್ ಪೇಚಾಡಿಕೊಂಡು ಮುರಳಿಯ ಬಳಿ ಸಂಕಟ ತೋಡಿಕೊಂಡರು. ಮುರಳಿಯವರು ಕೃಷ್ಣಯ್ಯರಿಗೆ “ಪಾಪ ಮಕ್ಳು ಸಂಕ್ಟ ತಡ್ಕೊಂಡು ಇಷ್ಟ್ ಹೊತ್ತು ಹೇಗೋ ಕೋಆಪ್ರೇಟ್ಮಾಡಿವೆ. ನೀವ್ಯಾರ್ಗೂ ಬಲ್ವಂತ ಮಾಡಕ್ಹೋಗ್ಬೇಡಿ, ಹಸಿವಿಗೆ ಶರಣಾಗದ ಮನುಷ್ಯ ಇನ್ನೂ ಹುಟ್ಟಿಲ್ಲಾ ಮಾವಾ ಸ್ವಲ್ಪ ತಾಳ್ಮೆ ತಗೋಳಿ ಎಲ್ಲಾ ಸರ್ಯಾಗತ್ತೆ” ಎಂದು ಸಾಂತ್ವನ ನುಡಿದು “ನಾನೊಂದ್ ಸ್ವಲ್ಪ ಹೋಗಿ ಆ ಮಕ್ಳಿಗೆ ಸಮಾಧಾನ ಹೇಳಕ್ ಟ್ರೈ ಮಾಡ್ತೀನಿ. ಅಷ್ಟ್ರಲ್ಲಿ ನೀವು ಬೇಕಾದ್ರೆ ಗೆಸ್ಟುಗಳನ್ನ ಅಟೆಂಡ್ ಮಾಡ್ಬಿಟ್ಬನ್ನಿ, ಛೇಂಬರಲ್ಲಿ ಕೂತು ಭಾವ್ನೋರನ್ನ ಹುಡ್ಕಕ್ಕೆ ಏನ್ಮಾಡ್ಬೋದು ಯೋಚ್ನೆ ಮಾಡಣ” ಎಂದು ಹೇಳಿ ಮೂರನೇ ಫ್ಲೋರಿಗೆ ಹೋದರು.
ಮೂರನೇ ಫ್ಲೋರನ್ನು ಪ್ರವೇಶಿಸಿದ ಮುರಳಿಯವರನ್ನು ಕಂಡು ಅಲ್ಲಿನ ಲಾಬಿಯಲ್ಲಿ ಅಳುತ್ತಿದ್ದ ಬೃಂದಾ, ಶ್ರುತಿ, ರೇವತಿ, ಶಾರದೆ ಮತ್ತು ಗಣೇಶ ಅವರಿಗೆ ಮುಗಿಬಿದ್ದರು. “ಚಿಕ್ಕಪ್ಪಾ…ನೆನ್ನೆ ನೀವು ನಾಳೆ ಬೆಳಗ್ಗೆ ಹೊತ್ಗೆ ಅಪ್ಪಾ ಸಿಕ್ತಾರೇಂದ್ರಿ…ಅಪ್ಪ ಎಲ್ಲಿ” ಎಂದಳು ಶಾರದೆ ಅಪ್ಪ ಸಿಗದಿದ್ದಕ್ಕೆ ನೇರ ಮುರಳಿಯವರೇ ಹೊಣೆ ಎಂಬಂತೆ. “ಚಿಕ್ಕಪ್ಪಾ…ನಂಗಪ್ಪಾ ಬೇಕೂ…” ಗಣೇಶ ವರಾತ ತೆಗೆದ ಮುರಳಿಯವರ ಅಂಗಿ ತುದಿ ಹಿಡಿದು. “ಬರ್ತಾರೆ ಕಂದಾ, ನಿಮ್ಮಪ್ಪ ಬೇಗ್ಬಂದ್ಬಿಡ್ತಾರೆ” ಗಣೇಶನ ಕೆನ್ನೆ ಸವರಿ ರಮಿಸುತ್ತಾ ಹೇಳಿದರು ಮುರಳಿ. ಅಷ್ಟರಲ್ಲಿ ಒಂದು ಟೆಲಿಗ್ರಾಂ ಹಿಡಿದು ಅಲ್ಲಿಗೆ ಬಂದ ಮೋಹನ “ಗುಡ್ ನ್ಯೂಸ್, ರಾಜನ್ ಅಯ್ಯರ್ಮಾವ ಟೆಲಿಗ್ರಾಂ ಕಳ್ಸೀದಾರೆ” ಎಂದ. ಒಡನೆ “ಹೌದಾ…ಕೊಡಿಲ್ಲೀ” ಎನ್ನುತ್ತಾ ಮೋಹನನ ಕೈಲಿದ್ದ ಟೆಲಿಗ್ರಾಮನ್ನು ಹೆಚ್ಚೂ ಕಮ್ಮಿ ಕಿತ್ತುಕೊಂಡ ಮುರಳಿ “I am safe, Going to Tirupati, Proceed with the wedding, I bless the couple” ಎಂದು ಅಯ್ಯರ್ ಕಳಿಸಿದ್ದ ಟೆಲಗ್ರಾಮಿನಲ್ಲಿದ್ದ ವಿಚಾರವನ್ನು ಗಟ್ಟಿಯಾಗಿ ಓದಿದರು. ವಿಷಯ ಕೇಳಿದ ಎಲ್ಲರಿಗೂ ಖುಷಿಯಿಂದ ಹುಚ್ಚು ಹಿಡಿಯುವುದೊಂದು ಬಾಕಿ.
ಅಯ್ಯರ್ ಪತ್ತೆಯಾದ ಸುದ್ದಿ ಕಾಡ್ಗಿಚ್ಚಿನಂತೆ ಕ್ಷಣಮಾತ್ರದಲ್ಲಿ ಹೋಟೆಲಿನ ತುಂಬಾ ಹರಡಿತು. ಎಲ್ಲರೂ ಒಬ್ಬರನ್ನೊಬ್ಬರು ತಬ್ಬಿಕೊಂಡು ಪರಸ್ಪರ ಕೈಕುಲುಕುತ್ತಾ ಸಂಭ್ರಮಿಸುತ್ತಿದ್ದರು. ಹೆಚ್ಚು ಗ್ಯಾಪು ಕೊಡದೆ ಹೆಣ್ಣುಮಕ್ಕಳು ಆನಂದ ಕಣ್ಣೀರು ಸುರಿಸತೊಡಗಿದರು. ಹಿಂದಿನ ದಿನ ಅಯ್ಯರ್ಮನೆಯವರು ರೈಲ್ವೇಸ್ಟೇಷನ್ನಿಗೆ ಬಂದಾಗಿನಿಂದ ಅವರು ಸುರಿಸುತ್ತಿದ್ದ ಕಣ್ಣೀರನ್ನು ಗಮನಿಸಿದ್ದ ಮೋಹನನಿಗೆ ಆ ಹೆಣ್ಮಕ್ಕಳಲ್ಲಿದ್ದ ಕಣ್ಣೀರಿನ ಸ್ಟಾಕು ಕಂಡು ಅಚ್ಚರಿಯಾಗದಿರಲಿಲ್ಲ. ವಾತಾವರಣ ತಿಳಿಗೊಂಡದ್ದು ಕಂಡು ಎಲ್ಲರೂ ಊಟಕ್ಕೆ ಬ್ಯಾಂಕ್ವೆಟ್ ಹಾಲಿಗೆ ಬರಬೇಕೆಂದು ಕೃಷ್ಣಯ್ಯರ್ ಒತ್ತಾಯ ಹೇರತೊಡಗಿದರು. ಯಾವುದೇ ಪ್ರತಿರೋಧ ತೋರದೆ ಎಲ್ಲರೂ ಊಟಕ್ಕೆ ಬಂದರಾದರೂ ಸಂತಸದಿಂದ ಅತ್ಯುತ್ತೇಜಿತರಾಗಿದ್ದ ಕಾರಣ ತುತ್ತು ಗಂಟಲೊಳಗಿಳಿಯಲಿಲ್ಲ. ವಿಶೇಷವಾಗಿ ತಯಾರಿಸಲಾಗಿದ್ದ ಕಾಯ್ಹಾಲು ಪಾಯಸವನ್ನು ಕೃಷ್ಣಯ್ಯರ್ ಖುದ್ದು ನಿಂತು ಮುತುವರ್ಜಿಯಿಂದ ಎಲ್ಲರಿಗೂ ಬಡಿಸಿಸಿದರು. ಪಾಯಸ ಮೆಲ್ಲುತ್ತಾ ಸೀತಮ್ಮನವರು “ಅಲ್ಲಾ ಆ ಮಹಾನುಭಾವ್ರು ಅದೆಷ್ಟು ಕರಾರುವಾಕ್ಕಾಗಿ ಮೂರ್ಗಂಟೆಯೊಳ್ಗೆ ಯಜ್ಮಾನ್ರು ಸಿಕ್ತಾರೇಂತ್ ಹೇಳಿದ್ರಲ್ಲಾ!” ಎಂದುಸುರಿದರು ತಮ್ಮಷ್ಟಕ್ಕೆ ತಾವೇ. “ಅವ್ರೆಲ್ಲಿ ಮೂರ್ಗಂಟೇಂತಂದ್ರು, ಅವರ್ಹೇಳಿದ್ದು ಮೂರ್ದಿನ ಅಲ್ವೇನಮ್ಮ” ಎಂದು ಸಿಡುಕಿದ ಸುಬ್ಬು. “ಮೂರ್ಗಂಟೆ ಒಳ್ಗೆ ಅವರ್ಸುದ್ದಿ ಸಿಕ್ಕತ್ತೆ, ಮೂರ್ದಿನ್ದೊಳ್ಗೆ ಅವ್ರು ನಿಮ್ಮನ್ಬಂದು ಸೇರ್ತಾರೆ ಅಂತಂದ್ದಿದ್ರು, ಎಲ್ವೂ ಹಾಗೇ ಆಗ್ತ ಇದ್ಯಲ್ಲ, ಭಾವ್ನೋರು ದಕ್ಷಿಣ ದಿಕ್ನಲ್ಲೇ ಇದಾರೇಂತಾನೂ ಅದೆಷ್ಟು ಕರೆಕ್ಟಾಗಿ ಹೇಳಿದ್ರು ನೋಡಿ ಸೀತಕ್ಕಾ… ತಿರ್ಪತಿ ಅಂದ್ರೆ ಸೌತೇ ಆಯ್ತಲ್ಲಾ” ಅಚ್ಚರಿ ನಟಿಸಿ ಹೇಳಿದರು ಮುರಳಿ. ಊಟ ಮಾಡುತ್ತಿದ್ದ ಕೈ ಎಂಜಲಾಗಿದ್ದರಿಂದ ಸೀತಮ್ಮನವರಗೆ ಗಲ್ಲ ಬಡಿದುಕೊಳ್ಳಲಾಗಲಿಲ್ಲ. ಆದರೂ ಭಕ್ತಿಯಿಂದ ಕಣ್ಮುಚ್ಚಿ ಬಲಗೈಗೂ ಎಡಗೈಗೂ ನಡುವೆ ಸ್ವಲ್ಪ ಗ್ಯಾಪು ಬಿಟ್ಟು ಸ್ವಾಮಿ ಸರ್ವೋತ್ತಮಾನಂದರಿಗೆ ಮನದಲ್ಲೇ ಕೈಮುಗಿದರು. ಮಾತಿನ ಮಧ್ಯೆ ಎಲ್ಲರೂ ಸೇರಿದಷ್ಟು ತಿಂದು ಊಟದ ಶಾಸ್ತ್ರ ಮುಗಿಸಿದರು.
ಊಟದ ನಂತರ ಎಲ್ಲರೂ ಒಂದೆಡೆ ಕುಳಿತು ವಿಳ್ಳೆದೆಲೆ ಹಾಕಿಕೊಂಡು ಲೋಕಾಭಿರಾಮವಾಗಿ ಹರಟುತ್ತಿದ್ದಾಗ ಶೇಖರ ಮತ್ತು ಮೋಹನನ ಹೆಂಡತಿಯರು ಇನ್ನೊಂದಿಬ್ಬರು ಹೆಣ್ಮಕ್ಕಳೊಂದಿಗೆ ಬಂದು ನಾಗವಲ್ಲಿ ಕಾರ್ಯಕ್ರಮದ ಸಿದ್ಧತೆ ಪೂರ್ಣಗೊಂಡಿರುವುದಾಗಿ ಹೇಳಿ ಕೊಂಚ ವಿಶ್ರಮಿಸಿ ನಾಗವಲ್ಲಿಗೆ ಬರಬೇಕೆಂದು ಗಂಡಿನ ಕಡೆಯವರನ್ನು ಆಹ್ವಾನಿಸಿದರು. ನಾಗವಲ್ಲಿಯಲ್ಲಿ ವಧೂವರರನ್ನು ಎದುರುಬದಿರು ಕೂರಿಸಿ ಅವರೊಂದಿಗೆ ಎರಡೂ ಕಡೆಯ ಹೆಂಗಸರು ಬೇರೆ ಬೇರೆ ಟೀಮಿನಂತೆ ಕೂತು ನವ ವಿವಾಹಿತ ದಂಪತಿಗಳಿಗೆ ಹಲವು ಆಟಗಳನ್ನಾಡಿಸುತ್ತಾರೆ. ಹಾಲು ತುಂಬಿದ ಪಾತ್ರೆಯಲ್ಲಿ ಒಂದು ಉಂಗುರವನ್ನು ಹಾಕಿ ದಂಪತಿಗಳಿಗಿಬ್ಬರಿಗೂ ಒಟ್ಟಿಗೆ ಹುಡುಕಲು ಹೇಳುತ್ತಾರೆ. ಉಂಗುರ ಸಿಗದವರು ಜೀವನ ಪರ್ಯಂತ ಮೊದಲು ಉಂಗರ ಸಿಕ್ಕವರು ಹೇಳಿದಂತೆ ಕೇಳುತ್ತಾರೆಂದು ಹೆಂಗೆಳೆಯರು ಕಿಚಾಯಿಸುತ್ತಾರೆ. ಇಬ್ಬರ ಮಧ್ಯದಲ್ಲಿಟ್ಟ ತೆಂಗಿನ ಕಾಯಿ ಕಿತ್ತುಕೊಳ್ಳುವುದು, ಒಬ್ಬರಿಗೊಬ್ಬರು ತಲೆಯ ಮೇಲಿಟ್ಟ ಹಪ್ಪಳ ಒಡೆಯುವುದು ಮುಂತಾದ ಆಟಗಳಾಡಿಸಿ ಹುಡುಗ ಹುಡುಗಿಯನ್ನು ಇನ್ನಿಲ್ಲದಂತೆ ಛೇಡಿಸಿ ಪೀಡಿಸಿ ಹೈರಾಣು ಮಾಡುತ್ತಾರೆ. ಒಟ್ಟಾರೆ ಎರಡೂ ಪಾಳಯದವರು ಒಬ್ಬರಿಗೊಬ್ಬರು ಕಾಲೆಳೆಯುತ್ತಾ ದಂಪತಿಗಳನ್ನು ಗೋಳುಹಯ್ದುಕೊಳ್ಳುತ್ತಾರೆ. ನವನಿವಾಹಿತರಿಗೆ ಇರಬಹುದಾದ ಭಯ ಬಿಗುಮಾನಗಳನ್ನು ಹೋಗಲಾಡಿಸಿ ಪರಸ್ಪರ ಸಲುಗೆ ಬೆಳೆಸಲೆಂದು ನಾಗವಲ್ಲಿಯ ಶಾಸ್ತ್ರ ಮಾಡುತ್ತಾರೆ.
ಸುಬ್ಬುವಿಗೆ ನಾಗವಲ್ಲಿಯೆಂದರೆ ಅಷ್ಟಕ್ಕಷ್ಟೆ. ಬೇರೆ ನೆಂಟರಿಷ್ಟರ ಮದುವೆಗಳಿಗೆ ಹೋದಾಗ ನಾಗವಲ್ಲಿಯ ಶಾಸ್ತ್ರವನ್ನು ಬಾಲಿಶವೆಂದು ಮೂಗುಮುರಿಯುತ್ತಿದ್ದ ಸುಬ್ಬುವಿಗೆ ತನ್ನ ಮದುವೆಯಲ್ಲಿ ನಾಗವಲ್ಲಿ ರದ್ದಾದದ್ದರಿಂದ ಖುಷಿಯೇ ಆಗಿತ್ತು. ಸಣ್ಣ ಪುಟ್ಟ ಹುಡುಗಿಯರಿಂದ ಲೇವಡಿಗೊಳಗಾಗುವುದು ತಪ್ಪಿತೆಂದು ನಿರಾಳವಾಗಿದ್ದ. ಈಗ ಮತ್ತೆ ನಾಗವಲ್ಲಿಯ ಕಾರ್ಯಕ್ರಮವೆಂದಾಗ ಸಹಜವಾಗಿ ಅವನಿಗೆ ಕಿರಿಕಿರಿಯಾಯಿತು. “ನಾಗ್ವಲ್ಲೀ ಗೀಗ್ವಲ್ಲಿ ಏನೂ ಬೇಕಾಗಿಲ್ಲ, ಒಂದ್ಸಲಿ ಕ್ಯಾನ್ಸಲ್ಲಂದ್ಮೇಲೆ ಮುಗೀತು. ನಾನ್ಯಾವ ನಾಗ್ವಲ್ಲೀಗೂ ಬರಲ್ಲ” ಎಂದು ಕಡಕ್ಕಾಗಿ ಹೇಳಿಬಿಟ್ಟ ಸುಬ್ಬು. ಕರೆಯಲು ಬಂದವರು ಅಸಹಾಯಕರಾಗಿ ಮುರಳಿಯವರತ್ತ ನೋಡಿ “ನೀವೊಂದ್ಮಾತು ಅಳಿಯಂದ್ರಿಗೆ ಹೇಳಿ ಒಪ್ಸಿದ್ರೆ ಚೆನ್ನಾಗಿತ್ತು” ಎಂದರು. ಅದಕ್ಕೆ “ನೋಡ್ರೀ ನಮ್ಸುಬ್ಬು ಹೇಳಿದ್ಮೇಲೆ ಮುಗ್ದೋಯ್ತು, ನಾವ್ಹಾಗೆಲ್ಲ ನಂ ಹುಡ್ಗನ ಇಚ್ಛೇಗೆ ವಿರುದ್ಧವಾಗಿ ಏನೂ ಮಾಡಲ್ಲ, ಅವ್ನು ಬೇಡಾಂದ್ಮೇಲೆ ಮುಗೀತು, ಬಿಟ್ಬುಡಿ” ಎಂದ ಮುರಳಿಯವರ ಮಾತು ಕೇಳಿದ ಸುಬ್ಬು ಯುದ್ಧ ಗೆದ್ದವನಂತೆ ಬೀಗಿದ. ಮುರಳಿಯವರು ಕೊಂಚ ವಿಶ್ರಮಿಸಿ ಬರುವುದಾಗಿ ಹೇಳಿ ತಮ್ಮ ರೂಮಿಗೆ ತೆರಳಿದರು.
ಮುರಳಿಯವರು ರೂಮಿಗೆ ಹೋದ ಬೆನ್ನಲ್ಲೇ ಅಲ್ಲಿದ್ದ ಇಂಟರ್ಕಾಂ ರಿಂಗಾಯಿತು. ಫೋನೆತ್ತಿಕೊಂಡಾಗ ಅತ್ತಕಡೆಯಿಂದ ಕೃಷ್ಣಯ್ಯರ್ “ಯಾಕ್ಮುರಳೀ ನಾಗ್ವಲ್ಲಿ ಬೇಡಾಂದ್ಬುಟ್ರಂತೇ… ಬೀಗ್ರು ಸೇಫಾಗಿದಾರೇಂತ ಗೊತ್ತಾಯ್ತಲ್ಲಾ, ಇನ್ನೇನ್ ಪ್ರಾಬ್ಲಮ್ಮೂ, ಸೊಲ್ಪ ದೊಡ್ಮನಸ್ಮಾಡೀ ದೇವ್ರೂ…ಹೆಣ್ಮಕ್ಳು ಆಸೆಪಡ್ತಿವೆ” ಅಂದರು. ಅದಕ್ಕೆ ಮುರಳಿಯವರು “ಮಾವಾ…ನೀವೇ ಸ್ವಲ್ಪ ನಿಮ್ಮನೆ ಹೆಣ್ಮಕ್ಳಿಗೆ ಹೇಳಿ ಕನ್ವಿನ್ಸ್ ಮಾಡ್ಬೋದಲ್ವೇ? ಪಾಪ ನಮ್ಹುಡ್ಗಾನೂ ನೆನ್ನಯಿಂದ ಇಷ್ಟ ಇದ್ರೂ ಇಲ್ದಿದ್ರೂ ಎಲ್ಲಾತ್ಕೂ ಹೊಂದ್ಕೊಂಡ್ಬಂದಿಲ್ವೇ…ನೆಗೋಸಿಯೇಷನ್ನೂಂದ್ರೆ ಬೋತ್ ಪಾರ್ಟೀಸ್ ಶುಡ್ ಫೀಲ್ ಗುಡ್ ಮಾವಾ, ನಮ್ಸುಬ್ಬೂಗೂ ನಂದೂ ಒಂದ್ಮಾತ್ ನಡೀತೂನ್ನೋ ಸಮಾಧಾನ ಇರ್ಲಿ ಬಿಡಿ” ಅಂದದ್ದು ಕೇಳಿದ ಕೃಷ್ಣಯ್ಯರಿಗೂ ಹೌದೆನಿಸಿ ಎಲ್ಲರ ಭಾವನೆಗಳಿಗೂ ಬೆಲೆಕೊಡುವ ಮುರಳಿಯ ಸೂಕ್ಷ್ಮ ಸಂವೇದನೆಯ ಬಗ್ಗೆ ಮೆಚ್ಚುಗೆ ಮೂಡಿತು. “ಆಯ್ತಪ್ಪಾ ನೀನ್ಹೇಳಿದ್ಮೇಲೆ ಸರೀಗೇ ಇರತ್ತೆ, ಹಾಗೇ ಆಗ್ಲಿ” ಅಂದರು. “ಮಾವಾ…ಅಂತೂ ಆರತಕ್ಷತೆ ಹೊತ್ಗಾದ್ರೂ ಎಲ್ಲಾ ಸರಿಹೋಗಿದೆ, ಹೇಗೂ ಭರ್ಜರಿ ಕಛೇರಿ ಇಡ್ಸಿದೀರಿ, ಆರ್ತಕ್ಷತೇನ ಅದ್ದೂರ್ಯಾಗಿ ಜಮಾಯಿಸ್ಬಿಡೋರಂತೆ” ಎಂದು ನಗುತ್ತಾ ಹೇಳಿ “ಅಂದ್ಹಾಗೆ ನಾನೇ ನಿಮ್ಗೆ ಫೋನ್ಮಾಡೋದ್ರಲ್ಲಿದ್ದೆ ಮಾವಾ, ಪಾಪ ಅಯ್ಯರ್ ಹೋಟೆಲ್ ಸ್ಟ್ಯಾಫು, ಆ ಚೀಟಿ ಎಲ್ಲಿಟ್ನಪ್ಪಾ… ನಾನೀಗಷ್ಟೆ ಸುಬ್ಬೂ ಹತ್ರ ಅವರ ನೇಮ್ಸ್ ಕಲೆಕ್ಟ್ ಮಾಡ್ಕೊಂಡಿದ್ನಲ್ಲಾ…” ಎಂದು ಕಿಸೆಯಲ್ಲಿದ್ದ ಚೀಟಿ ತೆಗೆದು, “ಹಾ… ತಂಗಮಣಿ, ವೇಲಾಯುಧನ್ ಮತ್ತೆ ಶರವಣಾಂತ, ಇವರ್ಮೂರೂ ಜನ ಪಾಪ ಭಾವ್ನೋರನ್ನ ಹುಡುಕ್ಕೊಂಡ್ಹೋಗಿದಾರಂತೆ ನೋಡಿ, ಅವರ್ದೇನಾದ್ರೂ ಫೋನ್ಬಂದ್ರೆ ಯಜ್ಮಾನ್ರು ಸೇಫಾಗಿ ತಿರುಪ್ತೀಲಿದಾರಂತೆ ಅಂತ್ಹೇಳಿ ಅವ್ರಿಗೆ ತಿರ್ವಾರೂರ್ಗೆ ಹೋಗಕ್ಕೆ ಹೇಳ್ಬೇಕಿತ್ತೂ…ಹಾಗಂತ ರಿಸಪ್ಷನ್ನಲ್ ಒಂದ್ಮಾತು ತಿಳಿಸ್ಬೇಕಿತ್ತಲ್ಲಾ ಮಾವಾ” ಅಂದರು. ಕೃಷ್ಣಯ್ಯರ್ “ಖಂಡಿತಾ ಈಗ್ಲೇ ಹೇಳ್ತೀನ್ರಾಜ, ಗ್ರೇಟ್ ಕಣಯ್ಯ ನೀನು… ಸಣ್ಸಣ್ ವಿಚಾರಾನೂ ಮರೀದೆ ಅಟೆಂಡ್ಮಾಡ್ತಿ ನೋಡು, ಮೆಚ್ದೆ ನಿನ್ನ, ನಿಜ್ವಾಗ್ಲೂ ನಿಂಥರ ಜನ ಭಾರೀ ಅಪ್ರೂಪನಪ್ಪ” ಎಂದು ಮುರಳಿಯನ್ನು ಮನಸಾರೆ ಹೊಗಳಿ ಫೋನಿಟ್ಟರು.
ಆರತಕ್ಷತೆಗೆಂದು ಸಭಾಂಗಣವನ್ನು ಅದ್ಭುತವಾಗಿ ಸಜ್ಜುಗೊಳಿಸಲಾಗಿತ್ತು. ಇಡೀ ಹೋಟೆಲ್ಲಿಗೆ ಮಾಡಲಾಗಿದ್ದ ದೀಪಾಲಂಕಾರವಂತೂ ನೋಡುಗರನ್ನು ಬೆರಗುಗೊಳಿಸವಂತಿತ್ತು. ಹಾಲಿನ ಹೊರಗೆ ಪ್ರವೇಶದ್ವಾರದ ಬಳಿ ಸುಂದರವಾಗಿ ಅಲಂಕರಿಸಿಕೊಂಡಿದ್ದ ಹೆಣ್ಣುಮಕ್ಕಳು ನಿಂತು ಬಂದವರಿಗೆ ಗುಲಾಬಿ ಹೂವನ್ನಿತ್ತು, ಪನ್ನೀರುದಾನಿಯಿಂದ ಸುಗಂಧ ದ್ರವ್ಯ ಸಿಂಪಡಿಸಿ ಅತಿಥಿಗಳನ್ನು ಸ್ವಾಗತಿಸುತ್ತಿದ್ದರು. ಒಳಬಂದ ಅತಿಥಿಗಳಿಗೆ ತಂಪುಪಾನೀಯ ನೀಡುವ ವ್ಯವಸ್ಥೆ ಮಾಡಲಾಗಿತ್ತು. ಸಾಲಂಕೃತರಾದ ವಧೂವರರು ಸಭಾಂಗಣವನ್ನು ಪ್ರವೇಶಿಸುವಾಗ ಇಂಪಾದ ಹಿನ್ನಲೆ ಸಂಗೀತ ಮೂಡಿಬರುತ್ತಿತ್ತು. ಕ್ಯಾಮರಾ ಹಿಡಿದ ಫೋಟೋಗ್ರಾಫರುಗಳು ನವದಂಪತಿಗಳು ಕೈಕೈಹಿಡಿದು ನಡೆದುಬರುವುದನ್ನು ವಿವಿಧ ಕೋನಗಳಿಂದ ಕ್ಲಿಕ್ಕಿಸುತ್ತಿದ್ದರು. ಪರಸ್ಪರ ಹಾರ ಹಾಕಿಕೊಂಡ ಬಳಿಕ ವಧೂವರರು ವಿಶಿಷ್ಠ ವಿನ್ಯಾಸದ ಸೋಫಾದಮೇಲೆ ಆಸೀನರಾದರು. ಅಷ್ಟರಲ್ಲಾಗಲೇ ವೇದಿಕೆಯನ್ನೇರಿ ಕುಳಿತಿದ್ದ ನೇದನೂರಿ ಕೃಷ್ಣಮೂರ್ತಿಗಳ ತಂಡದವರು ಶ್ರುತಿ ಹೊಂದಾಣಿಕೆ ಮಾಡಿಕೊಳ್ಳುವುದರಲ್ಲಿ ಮಗ್ನರಾಗಿದ್ದರು. ಮೋಹನ ವೇದಿಕೆಯನ್ನೇರಿ ಮೈಕುತೆಗೆದುಕೊಂಡು ಔಪಚಾರಿಕವಾಗಿ ಅತಿಥಿಗಳನ್ನು ಆಹ್ವಾನಿಸಿ ವೇದಿಕೆಯ ಮೇಲಿದ್ದ ಕಲಾವಿದರನ್ನು ಸಭಿಕರಿಗೆ ಪರಿಚಯಿಸಿದ. ಸಭಿಕರಿಗೆ ವಂದಿಸಿದ ಕಲಾವಿದರು ಕಾರ್ಯಕ್ರಮ ಆರಂಭಿಸಲು ಅನುವಾದರು.
ತಮ್ಮ ಸುಶ್ರಾವ್ಯ ಕಂಠ ಸಿರಿಯಲ್ಲಿ ಶ್ರುತಿ ಹಿಡಿದ ನೇದನೂರಿಯವರು ವೀರೀಬೋಣಿ ವರ್ಣದಿಂದ ಕಛೇರಿಗೆ ಚಾಲನೆಯಿತ್ತರು. ಬಹುತೇಕ ಅಯ್ಯರ್ ಕುಟುಂಬದವರೆಲ್ಲಾ ಶಾಸ್ತ್ರೀಯ ಸಂಗೀತದ ಒಳ್ಳೆಯ ಕೇಳುಗರಾಗಿದ್ದರಿಂದ ಹೆಚ್ಚಿನವರು ಮುಂದಿನ ಸಾಲುಗಳಲ್ಲಿ ಕುಳಿತು ತಲೆ ಅಲ್ಲಾಡಿಸಿಕೊಂಡು ತಾಳಹಾಕುತ್ತಾ ಗಾನರಸಾಸ್ವಾದನೆಯಲ್ಲಿ ಮಗ್ನರಾದರು. ಗಣನೀಯ ಸಂಖ್ಯೆಯಲ್ಲಿದ್ದ ಅತಿಥಿಗಳು ಸಾಲಾಗಿ ಬಂದು ವಧೂವರರಿಗೆ ಶುಭಹಾರೈಸಿ ಉಡುಗೊರೆಗಳನ್ನು ಕೊಡಲು ಆರಂಭಿಸಿದರು. ಎರಡು ದಿನದಲ್ಲಿ ಮೊದಲಬಾರಿಗೆ ಹೋಟೆಲ್ ಗ್ರ್ಯಾಂಡ್ ರೆಸಿಡೆನ್ಸಿಯಲ್ಲಿ ನಿಜವಾದ ಸಂತೋಷ ಸಂಭ್ರಮ ತುಂಬಿ ತುಳುಕುತ್ತಿತ್ತು. ಮಗನ ಮದುವೆಯಲ್ಲಿ ಏರ್ಪಡಿಸಲಾಗಿದ್ದ ಅದ್ಭುತ ಸಂಗೀತ ಕಛೇರಿ ಕೇಳಲು ಮಹಾ ಸಂಗೀತ ರಸಿಕರಾದ ಅಯ್ಯರ್ ಇಲ್ಲದ್ದು ಅವರ ಮನೆಯವರಿಗೆ ತುಸು ಪಿಚ್ಚೆನಿಸುತ್ತಿತ್ತಾದರೂ ಅಯ್ಯರ್ ಸುರಕ್ಷಿತವಾಗಿ ತಿರುಪತಿಯಲ್ಲಿರುವುದು ತಿಳಿದಿದ್ದರಿಂದ ಆತಂಕವೇನೂ ಇರಲಿಲ್ಲ.
ಕೇವಲ ಮದುವೆ ನಡೆಸುವವರ ಪ್ರತಿಷ್ಠೆ ಮೆರೆಸಲು ಕಛೇರಿ ಇಡಿಸುವುದರಿಂದ ಸಾಧಾರಣವಾಗಿ ಮದುವೆಮನೆಗಳಲ್ಲಿ ನಡೆವ ಸಂಗೀತ ಕಛೇರಿಗಳಲ್ಲಿ ಸಂಗೀತಕ್ಕೆ ಪ್ರಾಶಸ್ತ್ಯ ಕಮ್ಮಿ. ಆದರೆ ಶ್ರೋತೃವರ್ಗದ ಸ್ಪಂದನ ಕಂಡ ಇಲ್ಲಿ ಹಾಗಿರಲಿಲ್ಲವೆನ್ನುವುದು ನುರಿತ ವಿದ್ವಾಂಸರ ಗಮನಕ್ಕೆ ಬಂದಿರಬೇಕು. ಕಲಾವಿದರ ಉತ್ಸಾಹ ಇಮ್ಮಡಿಸಿ ಕಛೇರಿ ನಿಧಾನಕ್ಕೆ ರಂಗೇರತೊಡಗಿತು. ಬ್ಯಾಂಕ್ವೆಟ್ ಹಾಲಿನಲ್ಲಿ ಬಫೆ ವ್ಯವಸ್ಥೆ ಮಾಡಲಾಗಿತ್ತು. ನವಜೋಡಿಯನ್ನು ಹರಸಿದ ಹಲವು ಅತಿಥಿಗಳು ಈಗಾಗಲೆ ಅಲ್ಲಿಗೆ ಹೋಗಿ ಕೇರಳ ಮತ್ತು ಆಂಧ್ರ ಶೈಲಿಯಲ್ಲಿ ತಯಾರಿಸಿದ್ದ ವಿವಿಧ ವ್ಯಂಜನಗಳನ್ನು ಆಸ್ವಾದಿಸುತ್ತಿದ್ದರು. ಆದರೂ ಸಭಾಂಗಣದಲ್ಲಿ ಅತಿಥಿಗಳ ಸಂಖ್ಯೆ ಕಮ್ಮಿಯಾಗಿರಲಿಲ್ಲ. ದಶಕಗಳಿಂದ ವಿಶಾಖಪಟ್ಟಣದಲ್ಲಿ ನೆಲೆಗೊಂಡಿದ್ದ ಕೃಷ್ಣಯ್ಯರಿಗೆ ಸಹಜವಾಗಿ ದೊಡ್ಡ ಬಳಗವಿತ್ತು. ಹಾಗಾಗಿ ಮದುವೆಯ ಆರತಕ್ಷತೆಗೆ ಅತಿಥಿಗಳು ಅವ್ಯಾಹತವಾಗಿ ಬರುತ್ತಲೇ ಇದ್ದರು.
ಕೃಷ್ಣಮೂರ್ತಿಗಳು ಸವಿಸ್ತಾರವಾಗಿ ಮಾಡಿದ ಕಲ್ಯಾಣಿ ಆಲಾಪನೆಯನ್ನು ಅವರಿಗೆ ಸರಿಸಮಾನವಾಗಿ ನಿಭಾಯಿಸಿದ ಪಿಟೀಲು ವಾದನಕ್ಕೆ ಮನಸೋತ ಕೇಳುಗರು ಸುಧೀರ್ಘ ಕರತಾಡನದಿಂದ ಮೆಚ್ಚುಗೆ ವ್ಯಕ್ತಪಡಿಸಿದರು. “ಶಾಭಾಷ್” ಎಂದು ಪಿಟೀಲು ವಾದಕನನ್ನು ಅಭಿನಂದಿಸಿದ ಗಾಯಕರು “ನಂಬಿ ಕೆಟ್ಟವರಿಲ್ಲವೋ ರಾಯರ ಪಾದ ನಂಬಿ ಕೆಟ್ಟವರಿಲ್ಲವೋ” ಎಂಬ ದಾಸರ ಕೃತಿಯನ್ನೆತ್ತಿಕೊಂಡದ್ದು ಕೇಳಿ ಮುರಳಿಯವರಿಗೆ ರೋಮಾಂಚನವಾಯಿತು. ಈ ಮದುವೆ ನಡೆದ ರೀತಿಗೆ ಸರಿಯಾಗಿ ಕೃಷ್ಣಮೂರ್ತಿಗಳು ಅದೇ ಕೃತಿ ಆರಿಸಿಕೊಂಡದ್ದು ಬಹಳ ಅರ್ಥ ಪೂರ್ಣವೆಂದುಕೊಂಡರು. “ನಂಬಿದ ಜನರಿಗೆ ಬೆಂಬಲ ತಾನಾಗಿ ಹಂಬಲಿಸಿದ ಫಲ ತುಂಬಿ ಕೊಡುವರ… ನಂಬಿ ಕೆಟ್ಟವರಿಲ್ಲವೋ” ನೇದನೂರಿಯವರು ಹಾಡು ಮುಂದುವರೆಸಿದ್ದರು. ದೇವರು ದಿಂಡರನ್ನು ನಂಬುವ ಆಸ್ತಿಕರಿಗೆ ಸಂಕಷ್ಟಕಾಲದಲ್ಲಿ ಅವರ ನಂಬಿಕೆಗಳು ಊರುಗೋಲಿನಂತೆ ಬಳಕೆಯಾಗಿ ಬದುಕಿನ ಸವಾಲುಗಳನ್ನೆದುರಿಸಲು ಸಹಕಾರಿಯಾಗುವುದು ಹಲವು ಬಾರಿ ಮುರಳಿಯವರ ಅರಿವಿಗೆ ಬಂದಿತ್ತು. ಇಂತಹ ಸನ್ನಿವೇಶಗಳಲ್ಲಿ ಸಣ್ಣಪುಟ್ಟ ಸುಳ್ಳುಹೇಳಿ ಸಂತ್ರಸ್ತರ ನಂಬಿಕೆಗಳ ಸದ್ಬಳಕೆ ಮಾಡಿಕೊಳ್ಳುವುದರಲ್ಲಿ ಅವರಿಗೆ ತಪ್ಪೇನೂ ಕಾಣಲಿಲ್ಲ. ಕೆಡುಕು ಮಾಡುವ ಸತ್ಯಕ್ಕಿಂತ ಒಳಿತು ಮಾಡುವ ಸುಳ್ಳೇ ಲೇಸೆನಿಸಿತು. ಯಾವುದೋ ಯೋಚನಾಲಹರಿಯಲ್ಲಿ ಕಳೆದು ಹೋಗಿದ್ದ ಮುರಳಿ ಕಲ್ಯಾಣಿಯಲ್ಲಿ ಮಿಂದೆದ್ದ ಶ್ರೋತೃಗಳ ಕರತಾಡನ ಕೇಳಿ ವಾಸ್ತವಕ್ಕೆ ಮರಳಿದರು.
ಆಲಾಪನೆಯ ಮೊದಲ ತುಣುಕು ಶುರುವಾಗುತ್ತಿದ್ದಂತೆ ಮುಂದಿನ ಸಾಲಿನಲ್ಲಿ ಕುಳಿತಿದ್ದ ರೇವತಿಗೆ ಕೃಷ್ಣಮೂರ್ತಿಗಳು ಪ್ರೇಕ್ಷಕರನ್ನು ರಂಜನಿಯಲ್ಲಿ ರಂಜಿಸಲಿರುವುದು ತಿಳಿದುಹೋಯಿತು. ರಂಜನಿಯೆಂದೊಡನೆ ಠಕ್ಕನೆ ಏನೋ ನೆನಪಾಗಿ ಮೂರನೇ ಮಹಡಿಯಲ್ಲಿದ್ದ ಅವಳ ಕೋಣೆಗೋಡಿದಳು. ಗಡಿಬಿಡಿಯಿಂದ ಸೂಟ್ಕೇಸ್ ತೆಗೆದು ಅದರೊಳಗಿದ್ದ ಪರ್ಸಿಗಾಗಿ ಹುಡುಕಾಡಿದಳು. ಪರ್ಸು ಸಿಕ್ಕ ತಕ್ಷಣ ಅದರಲ್ಲಿದ್ದ ಪುಟ್ಟ ಡೈರಿ ಹೊರತೆಗೆದು R ಅಕ್ಷರದ ಪುಟದಲ್ಲಿ ಕಣ್ಣು ಹಾಯಿಸಿದಳು. ಅವಳ ಎಣಿಕೆ ಸರಿಯಿತ್ತು. ಡೈರಿಯಲ್ಲಿ ಅವಳೆದುರುಮನೆಯ ರಂಜನಿಯ ಫೋನ್ ನಂಬರಿತ್ತು. ಅಂದರೆ ಅವಳು ಈಗಿಂದೀಗಲೇ ಅಪ್ಪನೊಂದಿಗೆ ಮಾತನಾಡುವುದು ಸಾಧ್ಯವಿತ್ತು. ರೇವತಿಯ ಖುಷಿಗೆ ಎಣೆಯಿರಲಿಲ್ಲ. ತಡಮಾಡದೆ ಡೈರಿಯೊಂದಿಗೆ ಶರವೇಗದಲ್ಲಿ ರಿಸೆಪ್ಷನ್ ಕೌಂಟರಿಗೆ ಬಂದು ರಂಜನಿಯ ನಂಬರಿಗೆ ಫೋನು ಮಾಡಿಕೊಡುವಂತೆ ವಿನಂತಿಸಿದಳು. ತಿರುಪತಿಯಲ್ಲಿ ಫೋನುತೆಗೆದುಕೊಂಡ ಗೆಳತಿ ರಂಜನಿಯನ್ನು ತಕ್ಷಣವೇ ತನ್ನ ಮನೆಗೆ ಹೋಗಿ ಅಲ್ಲಿದ್ದ ತನ್ನ ತಂದೆಯನ್ನು ಕರೆತರಬೇಕೆಂದು ಕೋರಿ ಅವರ ಬಳಿ ತುರ್ತಾಗಿ ಮಾತನಾಡುವುದಿದೆಯೆಂದೂ ಹೇಳಿದಳು. ಐದು ನಿಮಿಷದ ಬಳಿಕ ಮತ್ತೆ ಕರೆಮಾಡಬೇಕೆಂದು ತಿಳಿಸಿ ರಂಜನಿ ಅಯ್ಯರನ್ನು ಕರೆತರಲು ರೇವತಿಯ ಮನೆಗೆ ಹೋದಳು.
ಅಷ್ಟರಲ್ಲಿ ರೇವತಿ ಸಭಾಂಗಣಕ್ಕೆ ಬಂದು ಸೀತಮ್ಮ, ಮುರಳಿ ಮೊದಲಾದವರಿಗೆ ತಿರುಪತಿಯಲ್ಲಿನ ಎದುರುಮನೆಯವರಿಗೆ ಫೋನು ಮಾಡಿರುವುದಾಗಿ ತಿಳಿಸಿ ಐದೇ ನಿಮಿಷದಲ್ಲಿ ಅಪ್ಪ ಅಲ್ಲಿಗೆ ಬರಲಿರುವುದಾಗಿಯೂ ಹೇಳಿದಳು. ಒಬ್ಬರಿಂದ ಒಬ್ಬರಿಗೆ ವಿಷಯ ಮುಟ್ಟಿ ಇಡೀ ಅಯ್ಯರ್ ಪರಿವಾರವೇ ಹೋಟೆಲ್ಲಿನ ಲಾಬಿಗೆ ಧಾವಿಸಿತು. ವೈದೇಹಿಯೊಂದಿಗೆ ಆರತಕ್ಷತೆಗೆ ಕುಳಿತಿದ್ದ ಸುಬ್ಬುವಿಗೆ ಮಾತ್ರ ಇನ್ನೂ ವಿಚಾರ ತಿಳಿದಿರಲಿಲ್ಲ. ಐದು ನಿಮಿಷ ಕಳೆದು ರೇವತಿ ಮತ್ತೆ ಕರೆಮಾಡಿದಾಗ ಫೋನು ತೆಗೆದುಕೊಂಡ ಸೀನ ಅತ್ತಿಗೆಯೊಂದಿಗೆ ಮಾತನಾಡಿ ಅಯ್ಯರಿಗೆ ಫೋನು ಕೊಟ್ಟ. ರಿಸೆಪ್ಷನ್ನಿನಲ್ಲಿ ಫೋನಿಗೆ ಕಿತ್ತಾಟ ಶುರುವಾಯಿತು. ನಾ ಮೊದಲು ತಾ ಮೊದಲು ಎಂದು ಕಿತ್ತಾಡಿಕೊಂಡು ಎಲ್ಲರೂ ಅಯ್ಯರೊಂದಿಗೆ ಮಾತಾಡಿದರು. ಅಷ್ಟರಲ್ಲಿ ಯಾರೋ ಸುಬ್ಬುವಿಗೂ ವಿಚಾರ ಮುಟ್ಟಿಸಿ ಅವನೂ ಲಾಬಿಗೆ ಓಡಿ ಬಂದಿದ್ದ. ಸುಬ್ಬು ಬಂದೊಡನೆ ಅವನಿಗೆ ಫೋನು ಕೊಟ್ಟರು. “ಪಾಪಿ ಕಣಪ್ಪಾ ನಾನೂ… ನೀನಿಲ್ದೆ ಮದ್ವೆಯಾದ ಪಾಪಿ ನಾನು” ಎಂದು ಸುಬ್ಬು ಅಳತೊಡಗಿದ. ಅಯ್ಯರ್ ಸುಬ್ಬುವಿಗೆ ಸಮಾಧಾನ ಹೇಳಿ ಫೋನಿನಲ್ಲೇ ಆಶೀರ್ವದಿಸಿದರು. ಬಹುತೇಕ ಎಲ್ಲರ ಕಣ್ಣುಗಳೂ ಒದ್ದೆಯಾಗಿತ್ತು. ಮಾತು ಮುಗಿಸಿ ಸುಬ್ಬು ಸಭಾಂಗಣಕ್ಕೆ ಮರಳಿದಾಗ ನೇದನೂರಿಯವರು ತೋಡಿಯಲ್ಲಿ ಪಲ್ಲವಿ ಹಾಡುತ್ತಿದ್ದರು. ಒಬ್ಬೊಬ್ಬರಾಗಿ ಮನೆಯವರೆಲ್ಲಾ ಮಾತನಾಡಿ ಮುಗಿಸಲು ಸುಮಾರು ಮುಕ್ಕಾಲು ಘಂಟೆ ಹಿಡಿಯಿತು. ಕೊನೆಯಲ್ಲಿ ಮುರಳಿಯವರು ಮತ್ತೊಮ್ಮೆ ಫೋನು ಪಡೆದು ಮರುದಿನ ತಿರುವಾರೂರಿಗೆ ಬುಕ್ಕಾಗಿದ್ದ ತಿರುವಾರೂರಿನ ರೈಲು ಸಂಜೆ ಆರಕ್ಕೆ ವಿಶಾಖಪಟ್ಟಣದಿಂದ ಹೊರಟು ಬೆಳಗ್ಗೆ ಹತ್ತು ಘಂಟೆಗೆ ಮದರಾಸು ತಲುಪುವುದೆಂದೂ ಅಯ್ಯರ್ ಮುಂಜಾನೆ ತಿರುಪತಿಯಿಂದ ಬಸ್ಸಿನಲ್ಲಿ ಹೊರಟರೆ ಹತ್ತಕ್ಕೆ ಮುಂಚೆ ಮದ್ರಾಸು ತಲುಪಿ ಮುಂದಿನ ಪ್ರಯಾಣಕ್ಕೆ ಕುಟುಂಬವನ್ನು ಸೇರಿಕೊಳ್ಳಬಹುದೆಂದು ಸಲಹೆಯಿತ್ತರು. ಈಗಾಗಲೆ ವಿಶಾಖಪಟ್ಟಣದಿಂದ ಅಯ್ಯರಿಗೂ ಸೇರಿ ರಿಸರ್ವೇಶನ್ ಮಾಡಿತ್ತಾದ್ದರಿಂದ ಮತ್ತೊಮ್ಮೆ ರಿಸರ್ವೇಶನ್ನಿಗಾಗಿ ಪರದಾಡುವುದು ತಪ್ಪುತ್ತಿತ್ತು. ಹಾಗಾಗಿ ಮುರಳಿಯವರ ಸಲಹೆ ಅಯ್ಯರಿಗೂ ಸರಿಕಂಡಿತು. ಆ ದಿನ ರಜೆ ಹಾಕಿ ಅಯ್ಯರನ್ನು ಮದ್ರಾಸಿಗೆ ಕರೆದುಕೊಂಡು ಬಂದು ರೈಲು ಹತ್ತಿಸುವುದಾಗಿ ಸೀನ ಹೇಳಿದ. ಆದರೆ ಹಾಗೆ ಮಾಡಿದರೆ ತನಗೆ ಅಪ್ಪನನ್ನು ಭೇಟಿಮಾಡಲು ಸಾಧ್ಯವೇ ಆಗುವುದಿಲ್ಲವೆಂದು ರೇವತಿ ತಕರಾರು ತೆಗೆದಳು. ಹೇಗೂ ಹತ್ತುದಿನದ ನಂತರ ತಿರುವಾರೂರಿನ ರಿಸಪ್ಷನ್ನಿದ್ದದರಿಂದ ರೇವತಿಯೇ ತವರಿಗೆ ಹೋಗಿ ತಂದೆಯನ್ನು ನೋಡಿ ಆರತಕ್ಷತೆಯನ್ನೂ ಮುಗಿಸಿಕೊಂಡು ಬರಬಹುದೆಂದು ಹೇಳಿ ಮುರಳಿ ಅವಳನ್ನೊಪ್ಪಿಸಿದರು. ಅದರಂತೆ ಅಯ್ಯರ್ ಮದರಾಸಿನಲ್ಲಿ ತಮ್ಮ ಕುಟುಂಬವನ್ನು ಕೂಡಿಕೊಂಡು ತಿರುವಾರೂರಿಗೆ ಹೋಗುವುದಾಗಿ ನಿರ್ಧಾರವಾದ ನಂತರ ಮುರಳಿ ಫೋನಿಟ್ಟರು. ಆ ವೇಳೆಗೆ ಕಛೇರಿ ತನಿಯಾವರ್ತನದ ಹಂತ ತಲುಪಿತ್ತು.
–ನಾರಾಯಣ ಎಮ್ ಎಸ್
ಮುಂದುವರೆಯುವುದು…