ಮರೆಯಲಾಗದ ಚಿಕ್ಕಾತಿಚಿಕ್ಕ ಪಾತ್ರಗಳು:ವಾಸುಕಿ ರಾಘವನ್

 


“ಪೂರೇ ಪಚಾಸ್ ಹಜಾರ್”

ಮೂರೇ ಪದಗಳು!

ಹೇಳಿದವನು ಮಕಿಜಾನಿ ಮೋಹನ್ ಅಲಿಯಾಸ್ ಮ್ಯಾಕ್ ಮೋಹನ್. ಸಾಮಾನ್ಯವಾಗಿ ಖಳನಾಯಕನ ಚೇಲಾ ಪಾತ್ರಗಳಿಂದ ನಮಗೆ ಪರಿಚಿತನಾಗಿರುವ ಆತ ನಟಿಸಿರುವ ಇನ್ನೂರಕ್ಕೂ ಹೆಚ್ಚು ಚಿತ್ರಗಳ ತೂಕ ಒಂದಾದರೆ, ಈ ಪಾತ್ರದ್ದೇ ಒಂದು. ಇದು ಪೋಷಕ ಪಾತ್ರ ಅಂತಲೂ ಹೇಳಲಾಗದಷ್ಟು ಚಿಕ್ಕಾತಿಚಿಕ್ಕ ಪಾತ್ರ. ಆದರೆ ಇವತ್ತಿಗೂ ಗಬ್ಬರ್ ಸಿಂಗ್ ಎಷ್ಟು ಫೇಮಸ್ ಆಗಿದ್ದಾನೋ ಮೂರೇ ಪದ ಹೇಳಿರುವ ಸಾಂಭಾ ಕೂಡ ಅಷ್ಟೇ ಫೇಮಸ್!

“ಮೇರೆ ಸಪ್ಪನೋ ಕೀ ರಾಣಿ ಕಬು ಆಯೇಗಿ ತೂ…ಬುಲ್‌ಬುಲ್ ಮಾತಾಡಕ್ಕಿಲ್ವಾ?”

ಈ ಜಲೀಲನದು ಕೂಡ ಚಿಕ್ಕಾತಿಚಿಕ್ಕ ಪಾತ್ರ. ಕಥೆಯ ದೃಷ್ಟಿಯಿಂದ ನೋಡಿದರೂ ಕೂಡ ಅಂತಹ ಮುಖ್ಯ ಪಾತ್ರವೇನೂ ಅಲ್ಲ. ರಾಮಾಚಾರಿಯ ಆವೇಶ, ಹುಂಬತನ, ತಿರುಗಿ ಬೀಳುವ ಸ್ವಭಾವ – ಇವುಗಳು ವ್ಯಕ್ತವಾಗುವಂತೆ ಮಾಡುವ ಎಷ್ಟೋ ಪಾತ್ರಗಳು, ಸನ್ನಿವೇಶಗಳು “ನಾಗರಹಾವು” ಚಿತ್ರದ ತುಂಬಾ ಇದೆ. ಆದರೂ ಎರಡು ಸೀನ್ ಅಲ್ಲಿ ಬಂದು ಹೋಗುವ ಜಲೀಲನ ಪಾತ್ರ ಯಾಕೆ ಅಷ್ಟೊಂದು ನೆನಪಿನಲ್ಲಿ ಉಳಿದಿದೆ ಗೊತ್ತಿಲ್ಲ! ಪುಟ್ಟಣ್ಣ ಅವರು ಜಲೀಲನ ದೃಶ್ಯಗಳನ್ನ ಸೆರೆ ಹಿಡಿದಿರುವ ರೀತಿಯಿಂದಲಾ ಅಥವಾ ಅಂಬರೀಷ್ ಅವರ raw ಬ್ರಿಲಿಯೆನ್ಸ್ ಇಂದನಾ ಹೇಳೋದು ಕಷ್ಟ.

ತೊಂಭತ್ತರ ದಶಕವನ್ನು ಸಹನೀಯವಾಗಿಸಿದ್ದು ಅನಂತ್ ನಾಗ್. ಕಳಪೆ ಚಿತ್ರಗಳದೇ ರಾಜ್ಯಭಾರ ನಡೆಯುತ್ತಿದ್ದ ಕಾಲದಲ್ಲಿ ನಮಗೆ ಸಿಕ್ಕಿದ್ದು ಗಣೇಶ ಟ್ರಿಲಜೀ. ಅಷ್ಟೇ ರಂಜನೀಯ ಚಿತ್ರ “ಯಾರಿಗೂ ಹೇಳ್ಬೇಡಿ”. ಅನಂತ್ ನಾಗ್ ಕೈಯಿಂದ ಮೋಸ ಹೋಗೋ ವಟಾರದ ಹೆಂಗಸರು ವಿನಯಾ ಪ್ರಸಾದ್, ಗಿರಿಜಾ ಲೋಕೇಶ್, ವೈಶಾಲಿ ಕಾಸರವಳ್ಳಿ ಅವರದು ಅದ್ಭುತ ಅಭಿನಯ. ಆದರೆ ಅಷ್ಟೇ ಖುಷಿ ಕೊಡುವುದು ವಟಾರದ ಹೆಂಗಸಿನ (ನಟಿಯ ಹೆಸರು ಗೊತ್ತಿಲ್ಲ!) ಡೈಲಾಗ್ “ಚನ್ನಾಗಿ ಹೇಳಿದ್ರಿ”. ಗಂಡಂದಿರಿಗೆ ಹೇಗೆ ಯಾಮಾರಿಸೋದು ಅಂತ ಸೀರೀಯಸ್ ಆಗಿ ಬೇರೆ ಅವ್ರೆಲ್ಲಾ ಮಾತಾಡ್ತಾ ಇರೋ ಎಲ್ಲಾ ಸೀನ್ ಅಲ್ಲೂ ಇವಳ ಒಗ್ಗರಣೆ – “ಚನ್ನಾಗಿ ಹೇಳಿದ್ರಿ”! ಈಗಲೂ ಯಾರ ಜೊತೆನಾದ್ರೂ ಏನೋ ಸೀರಿಯಸ್ ವಿಷಯ ಮಾತಾಡ್ತಿರೋವಾಗ ಈ ವಾಕ್ಯ ಹೇಳಿ, ಅವರ ಮುಖದ ಮೇಲೆ ನಗು ಹಾದುಹೋಗದಿದ್ದರೆ ಕೇಳಿ!

ಇನ್ನೊಂದು ಪಾತ್ರ ಇದೆ. ಆ ಚಿತ್ರದಲ್ಲಿ ಅವರು ಹೇಳೋದು ಒಂದೇ ವಾಕ್ಯ, ಇನ್ ಫ್ಯಾಕ್ಟ್ ಒಂದೇ ಪದ. ಆದರೂ ಈ ಚಿತ್ರ ನೋಡಿ ಸುಮಾರು ಹದಿನೈದು ವರ್ಷ ಆದ್ರೂ ಅದನ್ನ ಮರೆಯೋಕೆ ಆಗಿಲ್ಲ. ಚಿತ್ರ “ಆಕ್ಸಿಡೆಂಟ್”. ನಟನ ಹೆಸರು ಗೊತ್ತಿಲ್ಲ. ಪಾತ್ರ ಅನಂತ್ ನಾಗ್ ಅವರ ಪಕ್ಷದ ಕಾರ್ಯಕರ್ತನದು. ಅವನ ಒಂದೇ ಕೆಲಸ ಘೋಷಣೆ ಕೂಗೋದು. “ಧರ್ರ್…ಮಾಧಿಕಾರಿಗೆ” ಜೈ. “ಧರ್ರ್…ಮಾಧಿಕಾರಿಗೆ” ಜೈ. ವಿಲಕ್ಷಣ ಮುಖದ, ವಿಚಿತ್ರ ಕೂಗಿನ ಈ ಪಾತ್ರ ಆ ಪರಿ ಯಾಕೆ ಕಾಡಿದೆ ನನ್ನನ್ನ ಅಂತ ಗೊತ್ತೇ ಇಲ್ಲ.

ಚಿಕ್ಕಾತಿಚಿಕ್ಕ ಪಾತ್ರಗಳ ವಿಷಯ ಮಾತಾಡ್ತಾ ಉಮೇಶ್ ಅವರ ಪ್ರಸ್ತಾಪ ಮಾಡದೆ ಇದ್ರೆ ಅನ್ಯಾಯ ಆಗುತ್ತೆ. ಅವರ ಅಂತಹ ಪಾತ್ರಗಳು ಅದೆಷ್ಟೋ. ಆದರೆ ಎಲ್ಲಕ್ಕಿಂತ ಇಷ್ಟ ಆಗಿರೋದು ಅಂದರೆ “ಗಣೇಶನ ಮದುವೆ”ಯ ವಟಾರ ನಿವಾಸಿಯ ಪಾತ್ರ. ಪುಕ್ಕಲು ಸ್ವಭಾವ, ಏನಾದರೂ ಅಚಾತುರ್ಯ ಆಗಿ ಹೋದ್ರೆ ಅನ್ನೋ ಹಿಂಜರಿಕೆ – “ಅಲ್ಲಾ, ನಾವು ಹೀಗೆ ಹೇಳಿದ್ವಿ ಅಂತ ಅವ್ರಿಗೆ ಗೊತ್ತಾದ್ರೆ, ಆಮೇಲೆ ಅವ್ರು ಅದನ್ನ ಅವ್ರು ಮನಸ್ಸಿಗೆ ಹಚ್ಕೊಂಡುಬಿಟ್ರೆ, ಆದ್ರಿಂದ ನಂ ಮೇಲೆ ವಿನಾಕಾರಣ ಬೇಜಾರ್ ಮಾಡ್ಕೊಂಡ್ ಬಿಟ್ರೆ, ಆಮೇಲೆ ನಮ್ಮನ್ನ ಮನೆಯಿಂದ ಹೊರಗೆ ಹಾಕ್ಬಿಟ್ರೆ…” – ಹೀಗೆ ಸಾಗುತ್ತೆ ಅವರ ಲಹರಿ. ತಲೆ ಮೇಲೆ ಮೊಟಕುವ ಹೆಂಡತಿ ಇರ್ಲಿಲ್ಲ ಅಂದ್ರೆ ಪಾಪ ಇನ್ನೆಷ್ಟು ಉದ್ದ ಇರ್ತಿತ್ತೋ ಅವರ ಮಾತು!

ಕೆಲವು ಸಲ ಯೋಚಿಸ್ತೀನಿ, ಯಾವ ಕಾರಣಕ್ಕೆ ಈ ಚಿಕ್ಕಾತಿಚಿಕ್ಕ ಪಾತ್ರಗಳು ಇಷ್ಟೊಂದು ಆಪ್ಯಾಯಮಾನ ಆಗಿಬಿಡುತ್ವೆ ಅಂತ. ಪಾತ್ರದ ಸೃಷ್ಟಿ ಮೇಲೆ ಅವಲಂಬಿಸಿದ್ಯಾ, ಕ್ಯಾಚಿ ಲೈನ್ ಇಂದನಾ, ಅಥವಾ ಕಲಾವಿದ ತನ್ನತನದಿಂದ ಅದನ್ನ ಇನ್ನೊಂದು ಲೆವೆಲ್ ಗೆ ತಗೊಂಡು ಹೋಗಿರ್ತನಾ ಹೇಳೋಕೇ ಆಗಲ್ಲ. ದೊಡ್ಡ ದೊಡ್ದದ್ದನ್ನೆಲ್ಲಾ ಹೊಗಳುವ ನಾವು ಈ ಚಿಕ್ಕಾತಿಚಿಕ್ಕ ವಿಷಯಗಳನ್ನ ಎಷ್ಟೊಂದು ಕಡೆಗಣಿಸಿಬಿಟ್ಟಿರ್ತೀವಿ ಆಲ್ವಾ? ನಮ್ಮ ಸಿನಿಮಾ ಜಗತ್ತನ್ನು ಇನ್ನಷ್ಟು ವರ್ಣಮಯ ಮಾಡಿದ ಇಂತಹ ನೂರಾರು “ಚಿಕ್ಕವರಿಗೆ” ಒಂದು ದೊಡ್ಡ ಥ್ಯಾಂಕ್ಸ್ ಹೇಳಣ! ಅದ್ಸರಿ, ನಿಮಗೆ ಇಂತಹ ಯಾವ ಪಾತ್ರಗಳು ತುಂಬಾ ಇಷ್ಟ?

 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

8 Comments
Oldest
Newest Most Voted
Inline Feedbacks
View all comments
prashasti
10 years ago

ಚೆನ್ನಾಗಿದೆ ವಾಸುಕಿ ರಾಘವನ್ ಅವ್ರೆ 🙂
ಕೆಲವು ಗೊತ್ತಿಲ್ಲದ, ಗಮನಿಸಿಲ್ಲದ ಪ್ರಸಂಗಗಳನ್ನು ತಿಳಿಸಿದ್ದೀರಿ.. ನನಗೆ ಇಷ್ಟವಾದ ಪಾತ್ರ ಉಮೇಶ್ ಮತ್ತು ಅನೇಕ ಚಿತ್ರಗಳಲ್ಲಿ ಅಲ್ಲಲ್ಲಿ ಬಂದುಹೋಗೋ ಟೆನಿಸ್ ಕೃಷ್ಣ

Vasuki
10 years ago
Reply to  prashasti

ಧನ್ಯವಾದಗಳು! ಒಂದೆರಡು ಸೀನ್ ಅಲ್ಲಿ ಬಂದು ಹೋಗೋ ಟೆನ್ನಿಸ್ ಕೃಷ್ಣ ತರಹದ ಕಾಮೆಡೀ ಪಾತ್ರಗಳನ್ನ ನಾನು ಪರಿಗಣಿಸಿಲ್ಲ 🙂

gaviswamy
10 years ago

ಚೆನ್ನಾಗಿದೆ ಸಾರ್.
ನನಗೆ ಇನ್ನಷ್ಟು ಪಾತ್ರಗಳು ನೆನಪಿಗೆ ಬರುತ್ತಿವೆ.

ಶರಪಂಜರದ ಅಡುಗೆ ಭಟ್ಟ ಶಿವರಾಮಣ್ಣ .
ಭೂತಯ್ಯನ ಮಗ ಅಯ್ಯು ಚಿತ್ರದ ಉಪ್ಪಿನಕಾಯಿ ಜರಡಿ ಖ್ಯಾತಿಯ ಲೋಕನಾಥರ ಪಾತ್ರ .
ಶ್! ಮೂವಿಯಲ್ಲಿ ಒದೆ ತಿನ್ನುವ ಇನ್ಸಪೆಕ್ಟರ್ ಉಪ್ಪಿ!
ಯಾ.ನೀ.ಚೆಲುವೆಯಲ್ಲಿ ಹೀಗೆ ಬಂದು ಹಾಗೆ ಹೋಗುವ ರಮೇಶ್.
ಸತ್ಯ ಹರಿಶ್ಚಂದ್ರದ ವೀರಬಾಹು.
ಪುಷ್ಪಕ ವಿಮಾನದ ಮನದೀಪ್ ರಾಯ್.
ಉಂಡು ಹೋದ ಕೊಂಡು ಹೋದ ಚಿತ್ರದ ಕರಿಮೇಳೆ.
ನೆನಪಿಸಿಕೊಳ್ಳುತ್ತಾ ಹೋದರೆ ಇನ್ನೂ ಹೆಚ್ಚು ಪಾತ್ರಗಳು ಸಿಗುತ್ತವೆ ಅನ್ನಿಸುತ್ತದೆ .

Vasuki
10 years ago
Reply to  gaviswamy

ಅಡುಗೆ ಭಟ್ಟ ಶಿವರಾಮಣ್ಣ, ವೀರಬಾಹು ಸ್ವಲ್ಪ ದೊಡ್ಡ ಪಾತ್ರಗಳೇ! ಆದರೆ ಬೇರೆ ಪಾತ್ರಗಳನ್ನ ನೆನಪಿಸಿದ್ದಕ್ಕೆ ಧನ್ಯವಾದಗಳು. ನಾನು ಇವತ್ತು ಬೆಳಿಗ್ಗೆ ತಾನೇ ಲೋಕನಾಥ್ ಅವರ ಉಪ್ಪಿನಕಾಯಿ ಪಾತ್ರ ಮತ್ತು ಕರಿಬಸವಯ್ಯ ಅವರ "ಸಾಮಿ, ಆಸಾ" ಪಾತ್ರಗಳನ್ನ ಬಿಟ್ಟುಬಿಟ್ಟೆನಲ್ಲಾ ಅಂತ ಪೇಚಾಡಿಕೊಳ್ತಾ ಇದ್ದೇ!

gaviswamy
10 years ago

ofcourse ,u r right sir.
ಅವೆರಡೂ ದೊಡ್ಡ ಪಾತ್ರಗಳೇ. ಆ ಪಾತ್ರಗಳ ಬಗ್ಗೆ ನನಗೆ ಸ್ವಲ್ಪ ಪ್ರೀತಿ partiality ಜಾಸ್ತಿ ! ಅದಕ್ಕೆ mention ಮಾಡಿಬಿಟ್ಟೆ!

Nandu
Nandu
10 years ago

ಚೆನ್ನಾಗಿ ಹೇಳಿದ್ರಿ 🙂
 
ಈ ಪಾತ್ರ ಮಾಡಿದೋರು ಕುಣಿಗಲ್ ನಾಗಭೂಷಣ ಅವರ ಮಡದಿ. 

Vasuki
10 years ago
Reply to  Nandu

ಹೌದಾ? ಅವರ ಹೆಸರು ಏನು ಅಂತ ಗೊತ್ತಾ ನಿಮಗೆ?

ಪ್ರಮೋದ್
10 years ago

ಗೌರಿ ಗಣೇಶದಲ್ಲಿ ಹೋಟಲ್ ವೈಟರ್ ಆಗಿ ಬರುವ ಉಮೇಶ್ ಸೂಪರ್. ಮೂರು ಬಾರಿ ಚೆನ್ನಾಗಿ ತಿ೦ದು ತೇಗುವ ಗಣೇಶನನ್ನು ನೋಡಿ ಆಶ್ಚರ್ಯಗೊಳ್ಳುವ ಸೀನ್ ಸೂಪರ್. ಕಪಿಲ್ ದೇವ್ ಅಭಿಮಾನಿಯಾಗಿ ಕಾಸರವಳ್ಳಿಯವ್ರೂ ಸೂಪರ್. ಸಣ್ಣ ಸಣ್ಣ ಪಾತ್ರಗಳೇ ಚಿತ್ರವನ್ನು ಹಿಡಿದಿಡುತ್ತವೆ. ಕಚಗುಳಿ ಕೊಡುತ್ತವೆ.  ಒಳ್ಳೆಯ ಲೇಖನ. ಇನ್ನೂ ಜಾಸ್ತಿ ಇ೦ತಹದ್ದನ್ನು ಹುಡುಕಿ ಬರೆಯಿರಿ

8
0
Would love your thoughts, please comment.x
()
x